Tuesday, February 18, 2014

ಐಕ್ಯತೆ: ಮಹಿಳಾ ಮಾರ್ಗದ ತುರ್ತುಡಾ. ಎಚ್. ಎಸ್. ಅನುಪಮಾ


ಪ್ರೇಮ ಈ ಜಗತ್ತನ್ನು ಸೃಷ್ಟಿಸಿದೆ, ಆದರೆ ಆಳುತ್ತಿರುವುದು ಹಿಂಸೆಯೆ? ಹೀಗೊಂದು ಅನುಮಾನ ಸೂಕ್ಷ್ಮ ಮನಸುಗಳನ್ನು ಕಾಡುವಂತೆ ವರ್ತಮಾನದ ಸನ್ನಿವೇಶವಿದೆ. ಹಿಂಸೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಹಿಂಸೆ ಹಿಂಸೆಯೆಂದೇ ಅನ್ನಿಸದಷ್ಟು ಮಾನವ ಮನಸು ಜಡ್ಡುಗಟ್ಟಿದೆ. ಗೋಚರ-ಅಗೋಚರ ಸ್ವರೂಪಗಳ ಹಿಂಸೆ ನಮ್ಮ ಮಿದುಳನ್ನಾಳುತ್ತಿರುವಾಗ ಜಾತಿ/ಧರ್ಮ/ರಾಷ್ಟ್ರ/ಭಾಷೆಗಳ ಮೇಲಿನ ಸಿಟ್ಟನ್ನು ಪುರುಷ ಜಗತ್ತು ಹೆಣ್ಣಿನ ಮೇಲೆ ತೀರಿಸಿಕೊಳ್ಳುವುದು ದಿನ ಕಳೆದಂತೆ ಹೆಚ್ಚಾಗುತ್ತಿದೆ. ವೈಯಕ್ತಿಕ ದೌರ್ಬಲ್ಯವಿರಲಿ, ಬದಲಾಗುತ್ತಿರುವ ಸಮಾಜದ ಆದ್ಯತೆಗಳಿರಲಿ, ಮಾರುಕಟ್ಟೆಯ ಬೆಳವಣಿಗೆಯಿರಲಿ, ವಿಜ್ಞಾನ-ತಂತ್ರಜ್ಞಾನದ ಓಟವಿರಲಿ - ಎಲ್ಲವೂ ಮಹಿಳಾ ಘನತೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಸ್ವಾತಂತ್ರ್ಯಹರಣದ ಉಪಕರಣಗಳಾಗಿರುವ ವಿಪರ್ಯಾಸ ಆಧುನಿಕ ಸಮಾಜದ್ದಾಗಿದೆ. 
 
ಮಹಿಳೆಯ ಮೇಲೆ ದೌರ್ಜನ್ಯ ಎಸಗುವುದರಲ್ಲಿ ಕೇವಲ ವ್ಯಕ್ತಿಗಳಷ್ಟೇ ಅಲ್ಲ, ವ್ಯವಸ್ಥೆಯೂ ಶಾಮೀಲಾಗಿದೆ. ಲಿಂಗತಾರತಮ್ಯದ ಆತ್ಯಂತಿಕ ದುಷ್ಟತನವಾದ ಹೆಣ್ಣು ಭ್ರೂಣಹತ್ಯೆ ಮತ್ತು ಅದು ಸೃಷ್ಟಿಸಿರುವ ಲಿಂಗಾನುಪಾತ ಇಳಿಕೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಏರುತ್ತಿರುವ ಲೈಂಗಿಕ ದೌರ್ಜನ್ಯದ ಪ್ರಮಾಣ ಮತ್ತದರ ಸ್ವರೂಪ ದಿಗಿಲುಗೊಳಿಸುವಂತಿದೆ. ಅಧಿಕಾರ ವಂಚನೆ; ಕುಲಗೌರವ-ಪರಂಪರೆ-ಸಂಸ್ಕೃತಿಯ ಹೆಸರಿನ ದೌರ್ಜನ್ಯಗಳು; ಕುಟುಂಬಯೋಜನೆ ಹಕ್ಕುಗಳ ನಿರಾಕರಣೆ; ಬಲವಂತದ ವೇಶ್ಯಾವಾಟಿಕೆಗೆ ದೂಡುವುದು; ಮಾನವ ಕಳ್ಳಸಾಗಾಣಿಕೆ ಮತ್ತು ಲೈಂಗಿಕ ಗುಲಾಮರಂತೆ ನಡೆಸಿಕೊಳ್ಳುವುದು; ಮಾಟಗಾತಿ, ವ್ಯಭಿಚಾರಿಯ ಪಟ್ಟ ಕಟ್ಟಿ ಕೊಲ್ಲುವುದು - ಇವೆಲ್ಲ ಸಮಾಜದ ಲಿಂಗ ನಿರ್ಮಿತಿಯಿಂದಲೇ ಹುಟ್ಟಿಕೊಂಡ ದೌರ್ಜನ್ಯಗಳು. ಇದು ಇಲ್ಲಿಗೇ ನಿಲ್ಲುವುದಿಲ್ಲ; ಚಕಮಕಿ ನಡೆಯುವ ಗಡಿಭಾಗಗಳು, ನಾಗರಿಕ ಅಶಾಂತಿಯಿರುವ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಅಧಿಕಾರವೂ ಸೇರಿದಂತೆ ನಾಗರಿಕರನ್ನು ಕಾಯುವ ವ್ಯವಸ್ಥೆಯೂ ಮಹಿಳಾ ದೌರ್ಜನ್ಯದ ಪಾಲುದಾರನಾಗಿದೆ. 

ಹೀಗಿರುತ್ತ ಮತ್ತೊಂದು ಮಹಿಳಾ ದಿನಾಚರಣೆ ಬರುತ್ತಿದೆ. ಯಾಕಾದರೂ ಈ ಮಾನವಕುಲ ಇಂಥ ಲಿಂಗತಾರತಮ್ಯ ರೂಢಿಸಿಕೊಂಡಿತು? ಕೇವಲ ಮಾನವರಂತೆ ಗಂಡುಹೆಣ್ಣು ಜೊತೆ ಸಾಗಬೇಕಾದರೆ ಏನು ಮಾಡಬೇಕು? ಎಂಬ ಪ್ರಶ್ನೆಗಳು ಸುಳಿದುಹೋಗುತ್ತವೆ.

ಮಹಿಳಾ ದೌರ್ಜನ್ಯ: ಅಂತರರಾಷ್ಟ್ರೀಯ ಪಿಡುಗು

ವಿಶ್ವಾದ್ಯಂತ ಕ್ಯಾನ್ಸರಿಗಿಂತ ಹೆಚ್ಚು ಮಹಿಳೆಯರ ಮರಣ ದೌರ್ಜನ್ಯದಿಂದ ಸಂಭವಿಸುತ್ತಿದೆ. ಅದಕ್ಕೆ ಚಾರಿತ್ರಿಕ ಕಾರಣ ಎಂದಿನಿಂದಲೂ ಇರುವ ಲಿಂಗತಾರತಮ್ಯವೇ. ಪುರುಷಪ್ರಧಾನ ಸಮಾಜ ಸೃಷ್ಟಿಸಿದ ಅಸಮಾನ ಬಯಲಿನಲ್ಲಿ ನಿರಂತರ ಅಧಿಕಾರ ಹಂಚಿಕೆಯ ಮೋಸಕ್ಕೊಳಗಾದವಳು ಹೆಣ್ಣು. ದೌರ್ಜನ್ಯದ ಉದ್ದೇಶ ಹೆಣ್ಣನ್ನು ಸದಾ ಶರಣಾಗತ ಮನಸ್ಥಿತಿಯಲ್ಲಿಡುವುದಾಗಿದೆ. ಅವಳನ್ನು ಆಸ್ತಿಯೆಂದು ಪರಿಗಣಿಸಿ ಹಾಗೂ ಒಂದು ನಿರ್ದಿಷ್ಟ ಪಾತ್ರವನ್ನು ಆರೋಪಿಸಿ ವಿಧಿಸಲಾದ ನೀತಿ ನಿಯಮಾವಳಿಗಳೂ ದೌರ್ಜನ್ಯದ ಕಾರಣವಾಗಿವೆ. 
 
ಪ್ರಪಂಚದ ಯಾವುದೇ ಭಾಗ, ಯಾವುದೇ ದೇಶ, ಯಾವುದೇ ಸಂಸ್ಕೃತಿಯೂ ಹೆಣ್ಣನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಸನಾತನ ಭಾರತದ ಮಾತು ಬಿಡಿ, ೧೯ನೇ ಶತಮಾನದ ಕೊನೆ ಭಾಗದ ತನಕ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಬಹುತೇಕ ದೇಶಗಳು ಹೆಂಗಸು ಕರ್ತವ್ಯದ ಗೆರೆ ದಾಟದಂತೆ ಅವಳಿಗೆ ‘ಸ್ವಲ್ಪ’ ಶಿಕ್ಷೆ ಕೊಡುವ ಹಕ್ಕು ಗಂಡಸಿಗಿದೆ ಎಂಬ ಕಾನೂನನ್ನು ಎತ್ತಿ ಹಿಡಿದಿದ್ದವು. ರಾಜಕೀಯ ಅಧಿಕಾರ ಮತ್ತು ಹೆಣ್ಣು ವಿರುದ್ಧ ಪದಗಳಾಗಿದ್ದವು. 

ಇವಕ್ಕೆಲ್ಲ ಮಹಿಳೆಯ ಪ್ರತಿರೋಧ ಇರಲಿಲ್ಲವೇ? ಇದ್ದರೆ ಯಾವ ಸ್ವರೂಪದ್ದಾಗಿತ್ತು? 
 
ವೈಯಕ್ತಿಕ ನೆಲೆಯ ಹಾಗೂ ಧಾರ್ಮಿಕ ನೆಲೆಯ ಸುಧಾರಣಾ ಪ್ರಯತ್ನಗಳು ಅಲ್ಲಿಲ್ಲಿ ಸಂಭವಿಸಿದರೂ ಸಂಘಟಿತ ಹೋರಾಟ ಕಂಡುಕೊಳ್ಳಲು ಮಹಿಳಾ ಸಮೂಹ ೧೯ನೇ ಶತಮಾನದ ತನಕ ಕಾಯಬೇಕಾಯಿತು. ೧೯ನೇ ಶತಮಾನದ ಉತ್ತರಾರ್ಧ ಹಾಗೂ ೨೦ನೇ ಶತಮಾನದ ಮೊದಲ ಭಾಗದಲ್ಲಿ ಮಹಿಳೆಯರ ಸಂಘಟಿತ ದನಿ ಕೇಳಿಬಂತು. ಆದರೂ ಮೊದಲ ಮಹಿಳಾ ಚಳುವಳಿಯು ಸಮಾನ ಅವಕಾಶ, ಸಮಾನ ವೇತನ, ಸಮಾನ ನಾಗರಿಕ ಹಕ್ಕುಗಳಿಗಾಗಿಯೇ ಹೋರಾಟ ನಡೆಸಿತು. ಮೊದಲಿಗೆ ಮಹಿಳೆಯರ ಮೇಲಿನ ಹಿಂಸೆಯನ್ನು ಆರೋಗ್ಯ ಸಮಸ್ಯೆ ಎಂಬಂತೆ ನೋಡಲಾಗುತ್ತಿತ್ತು. ಎರಡು ಮಹಾಯುದ್ಧಗಳ ನಂತರ ೧೯೬೦-೭೦ರ ದಶಕದ ಮಹಿಳಾ ಬರಹ-ಚಳುವಳಿಗಳು ಕೊಂಚ ತೀವ್ರಗಾಮಿ ಸ್ವರೂಪ ಪಡೆದುಕೊಂಡವು. ಅವು ಆ ಕಾಲದಲ್ಲಿ ನಡೆದ ಉಳಿದ ಪ್ರಗತಿಪರ ಚಳುವಳಿಗಳ ಪ್ರಭಾವ ಮತ್ತು ಒತ್ತಾಸೆ ಪಡೆದಿದ್ದವು. ಮನೆಯ ಒಳಗೆ ಮತ್ತು ಹೊರಗೆ ಸಮಾನ ಗೌರವ; ಪ್ರಜನನ ಮತ್ತಿತರೆ ಹಕ್ಕುಗಳಿಗಾಗಿ ಪ್ರತಿಪಾದಿಸಿ ಹೋರಾಡುತ್ತ ವಿಮೋಚನೆಯ ಮಾತುಗಳನ್ನಾಡಿದವು. ೧೯೯೦ರಿಂದೀಚೆಗೆ ಮಹಿಳಾ ದೌರ್ಜನ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಗುರುತಿಸಲಾಯಿತು. ತಾಂತ್ರಿಕ ಪರಿಣತಿಯ ಹಾಗೂ ಜಾಗತೀಕರಣಗೊಂಡ ವಿಶ್ವದಲ್ಲಿ ಮೂರನೇ ಅಲೆಯ ಮಹಿಳಾ ಚಳುವಳಿ ಲಿಂಗ ಅಸ್ಮಿತೆಯ ರಾಜಕಾರಣ, ದೇಹ ರಾಜಕಾರಣ ಹಾಗೂ ದೌರ್ಜನ್ಯವನ್ನು ಗುರುತಿಸಿತು. ಜೊತೆಗೆ ವರ್ಗ, ಲಿಂಗ, ಜನಾಂಗ ಹಾಗೂ ವಯೋಮಾನ ಆಧಾರಿತ ದೌರ್ಜನ್ಯಗಳನ್ನು, ಹೆಣ್ಣಿನ ವಿರುದ್ಧ ಚಾಲ್ತಿಯಲ್ಲಿರುವ ಹೊಸಬಗೆಯ ಯುದ್ಧನೀತಿಗಳನ್ನು ಗುರುತಿಸಿ ಗಡಿಗೆರೆಗಳಿಂದ ಮಹಿಳೆಯನ್ನು ಕಟ್ಟಿಹಾಕದಂತೆ ಮಹಿಳಾ ಸಮಸ್ಯೆಗಳನ್ನು ಅಂತರರಾಷ್ಟ್ರೀಕರಣಗೊಳಿಸುತ್ತ ಬಂತು. ಸೋದರಿತ್ವದ ಮಾತನಾಡತೊಡಗಿತು. ಜೊತೆಜೊತೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಪ್ರಭುತ್ವ ಮತ್ತು ಸಾಮಾಜಿಕ ಹಿಂಸೆಯ ಬದಲಾದ ಸ್ವರೂಪಗಳನ್ನೂ ಅದು ಪ್ರಶ್ನಿಸುತ್ತಿದೆ. ನಂಬಿಕೆ-ಆಚರಣೆಗಳನ್ನು, ಮೂಲ ಕುಟುಂಬ ವ್ಯವಸ್ಥೆಯಲ್ಲೇ ಅಡಗಿರುವ ಲಿಂಗತಾರತಮ್ಯವನ್ನು ಗುರುತಿಸಿ ಪ್ರಶ್ನಿಸುತ್ತದೆ. 
 
ರಾಜಕೀಯ ಪಕ್ಷಗಳು ಹಾಗೂ ಮುಖ್ಯವಾಹಿನಿ ರಾಜಕಾರಣವು ಮಹಿಳೆಯ ಸ್ಥಾನಮಾನ ಹೆಚ್ಚಿಸುವುದನ್ನು ತಮ್ಮ ಆದ್ಯತೆಯನ್ನಾಗಿ ಎಂದೂ ಮಾಡಿಕೊಳ್ಳಲಿಲ್ಲ. ರಾಜಕಾರಣದ ಬಯಲು ಪುರುಷ ಪ್ರಧಾನವಾಗಿರುವ ಕಾರಣದಿಂದ ಸರ್ಕಾರೇತರ ಸಂಘ-ಸಂಸ್ಥೆಗಳಾಗಿ ಮಹಿಳಾ ಸಂಘಟನೆಗಳು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಹೀಗೆ ಸ್ವಾಯತ್ತ ಸಂಘಟನೆಗಳು ಪ್ರತಿ ಅಲೆಯ ಮಹಿಳಾ ಚಳುವಳಿಯ ಹೊತ್ತಿನಲ್ಲೂ ಹುಟ್ಟಿಕೊಂಡವು. ತಮ್ಮ ಆದ್ಯತೆಗಳನ್ನು ಗುರುತಿಸಿಕೊಂಡು ಕೆಲಸ ಮಾಡತೊಡಗಿದವು. ಸ್ಥಳೀಯವಾಗಿ ಮಹಿಳಾ ಜಾಗೃತಿ/ಸಂಘಟನೆಗೆ ಯತ್ನಿಸುವುದು ಹಾಗೂ ತನ್ಮೂಲಕ ಸಮಾಜ ಮಹಿಳಾ ಸ್ನೇಹಿಯಾಗುವಂತಹ ಸಾಂಸ್ಥಿಕ ಬದಲಾವಣೆಗೆ ಒತ್ತಡ ತರುವುದು ಅಂಥ ಸಂಘಟನೆಗಳ ಉದ್ದೇಶ. ಸ್ಪಷ್ಟವಾದ ಆದರೆ ನೇರ ಮತ್ತು ಗಟ್ಟಿಯಾದ ಧ್ವನಿಯಲ್ಲಿ ಅವು ಹಕ್ಕೊತ್ತಾಯ ತರತೊಡಗಿದವು. ಗಡಿಯ ಹಂಗು ತೊರೆದ ಸಂಘಟನೆಗಳಿರುವಂತೆಯೇ ಒಂದೊಂದು ಪ್ರದೇಶಕ್ಕೆ, ಒಂದೊಂದು ಗುರಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡ ಅಸಂಖ್ಯ ಸಂಘಟನೆಗಳೂ ಹುಟ್ಟಿದವು. 

ಎಲ್ಲರ ಉದ್ದೇಶ ಒಂದೇ: ಮಹಿಳಾ ಸಮಾನತೆ, ಸಮಾನ ಗೌರವ ಹಾಗೂ ದೌರ್ಜನ್ಯ ತಡೆ.

ಕರ್ನಾಟಕದಲ್ಲಿ ನಡೆದ ಎಲ್ಲ ಚಳುವಳಿಗಳಲ್ಲಿ ಮಹಿಳೆಯರೂ ಮುನ್ನೆಲೆಗೆ ಬಂದರು. ಮಹಿಳಾ ಚಳುವಳಿ ಸ್ಪಷ್ಟವಾಗಿ, ವಿಸ್ತೃತ ನೆಲೆಯಲ್ಲಿ ಬಹುಕಾಲ ನಿಲ್ಲಲಾಗಲಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿದ್ದರೂ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಬಂಡಾಯ ಸಂಘಟನೆ, ಎಡಪಂಥೀಯ ಸಂಘಟನೆಗಳ ಮಹಿಳಾ ಘಟಕಗಳಲ್ಲಿ ಆಯಾ ಸೈದ್ಧಾಂತಿಕ-ವಲಯ ಚೌಕಟ್ಟಿನಲ್ಲೇ ಹಲವು ಮಹಿಳೆಯರು ಕ್ರಿಯಾಶೀಲವಾಗಿ ತೊಡಗಿಕೊಂಡರು.  ಉತ್ತರ ಕರ್ನಾಟಕದ ಗುಲ್ಬರ್ಗಾದಲ್ಲಿ ಕೆ. ನೀಲಾ ಮತ್ತು ಮೀನಾಕ್ಷಿ ಬಾಳಿ ತಂಡವು ಅಸಂಘಟಿತ ಮಹಿಳಾ ಕಾರ್ಮಿಕರೂ ಸೇರಿದಂತೆ ಹಲವು ಮಹಿಳಾ ವಿಷಯಗಳನ್ನು ಮುಂಚೂಣಿಯಲ್ಲಿಟ್ಟುಕೊಂಡು ದಶಕಗಳಿಂದ ಹೋರಾಡುತ್ತಿದೆ. ಹೊಸಪೇಟೆಯ ಭಾಗ್ಯ, ಮಂಜುಳಾ ಮತ್ತಿತರರು ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಮಂಗಳೂರಿನ ಡೀಡ್ಸ್, ಮಹಿಳಾ ಸಂಪರ್ಕ ಜಾಲ, ಕೆಕೆಎಸ್ವಿ ಮತ್ತಿತರ ಸಂಘಟನೆಗಳು ಮಹಿಳೆಯರ ಮೇಲಿನ ವಿವಿಧ ತೆರನ ಹಿಂಸೆಗಳನ್ನು ದಿಟ್ಟವಾಗಿ ಎದುರಿಸುತ್ತಿವೆ. ಬೆಂಗಳೂರಿನ ವಿಮೋಚನಾ ಸಂಸ್ಥೆ ಕೌಟುಂಬಿಕ ದೌರ್ಜನ್ಯ ಕುರಿತು ಕೆಲಸ ಮಾಡುತ್ತಿದೆ. ಮೈಸೂರಿನ ಒಡನಾಡಿ, ಶಕ್ತಿಧಾಮಗಳು ಪರಿತ್ಯಕ್ತೆಯರ ಪರವಾಗಿ ಕೆಲಸ ಮಾಡುತ್ತಿವೆ. ಮಾನಸ ಬಳಗ, ಸಮಾನತಾ ಮಹಿಳಾ ವೇದಿಕೆ, ಸಮತಾ ವೇದಿಕೆ, ಭಾರತೀಯ ಮಹಿಳಾ ಒಕ್ಕೂಟ, ಕರ್ನಾಟಕ ಮಹಿಳಾ ಒಕ್ಕೂಟ ಇತ್ಯಾದಿಯಾಗಿ ಹಲವಾರು ಸಂಘಟನೆಗಳು ಮಹಿಳಾ ಪರ ಉದ್ದೇಶವಿಟ್ಟುಕೊಂಡು ಸ್ವಾಯತ್ತ ಸಂಘಟನೆಯಾಗಿಯೋ, ಸರ್ಕಾರೇತರ ಸಂಸ್ಥೆಯಾಗಿಯೋ, ವೇದಿಕೆಗಳಾಗಿಯೋ ಕೆಲಸ ಮಾಡುತ್ತಿವೆ. ಜೊತೆಗೆ ಕಾರ್ಮಿಕ ವಲಯದ ಮಹಿಳೆಯರಿಗಾಗಿಯೂ ಸಂಘಟನೆಗಳಿವೆ. ಇವು ಕೆಲವು ಉದಾಹರಣೆಗಳಷ್ಟೇ. ಇವೆಲ್ಲವೂ ಸ್ಥಳೀಯವಾಗಿ ಹೋರಾಡುತ್ತಿವೆ; ಒಂದು ನಿರ್ದಿಷ್ಟ ತಾತ್ವಿಕತೆ/ಗುರಿಯನ್ನಿಟ್ಟುಕೊಂಡು ಹೋರಾಡುತ್ತಿವೆ ಹಾಗೂ ಜನಜಾಗೃತಿಗೂ ಶ್ರಮಿಸುತ್ತಿವೆ. ಸಾಮಾಜಿಕವಾಗಿ, ಸ್ಥಳೀಯವಾಗಿ ಮಹಿಳೆಯನ್ನು ಗ್ರಹಿಸುವ ಹಾಗೂ ದೌರ್ಜನ್ಯ ತಡೆಗೆ ಸಮಾಜ ಮುಂದಾಗಲೆಂಬ ಆಶಯವನ್ನಿಟ್ಟುಕೊಂಡೇ ಎಲ್ಲವೂ ಕೆಲಸ ಮಾಡುತ್ತಿವೆ. 
 
ಆದರೆ ಮಹಿಳೆಯರ ಸಂಘಟನೆ-ಹೋರಾಟಗಳನ್ನು, ಸಂಘಟಿತ ಪ್ರಯತ್ನಗಳನ್ನು ಸಮಾಜ ಗುರುತಿಸಲಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕು. ಸಂಘಟಿತ ಪ್ರಯತ್ನಗಳು ಅಗೋಚರವಾಗುಳಿದರೇನು, ಅದರ ಪ್ರತಿಫಲವನ್ನು ದೌರ್ಜನ್ಯ ವಿರೋಧಿ ಕಾನೂನು, ಮೀಸಲಾತಿ, ಪ್ರಾತಿನಿಧ್ಯ, ಬದಲಾದ ನ್ಯಾಯದ ಪರಿಕಲ್ಪನೆಗಳಲ್ಲಿ ಕಾಣಬಹುದಾಗಿದೆ. ಇವತ್ತು ಮಹಿಳಾ ಸಂಘಟನೆಗಳಷ್ಟೇ ಅಲ್ಲ, ಮಾನವ ಪರ ಮನಸುಗಳೆಲ್ಲ ಮಹಿಳಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ; ಮಹಿಳಾ ಹಕ್ಕುಗಳ ಮಾತು ಕೇಳಿಬರುತ್ತಿದ್ದು, ಮಹಿಳಾ ದೌರ್ಜನ್ಯವು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತಿದ್ದರೆ ಅದರ ಹಿಂದೆ ಸಮಾಜ ಗುರುತಿಸದ ಮಹಿಳಾ ಹೋರಾಟದ ಹೆಜ್ಜೆಗಳಿವೆ. 


ಐಕ್ಯತೆಯತ್ತ..

ಜಾಗೃತಗೊಂಡ ಮಹಿಳೆ ತನ್ನನ್ನು ತಾನು ಸಮಸ್ಯೆಯಾಗಿ ಗ್ರಹಿಸಿಕೊಳ್ಳದೇ ಇಡೀ ವಿಶ್ವದ ವಿದ್ಯಮಾನಗಳ ಭಾಗವಾಗಿ ತನ್ನತನವನ್ನು ಗುರುತಿಸಿಕೊಳ್ಳಬೇಕು.  ಪ್ರಭುತ್ವದ ಮೇಲೆ ಒತ್ತಡ ಹಾಕುವ ನೈತಿಕ ಶಕ್ತಿಯಾಗಬೇಕು. ಧಾರ್ಮಿಕ ಮೂಲಭೂತವಾದ, ಮಾರುಕಟ್ಟೆ ಮತ್ತು ಕೋಮುವಾದಿ ರಾಜಕಾರಣದ ದಾಳವಾಗದಂತೆ ಎಚ್ಚರ ಕಾಯ್ದುಕೊಳ್ಳಬೇಕು. ವಿಫಲಗೊಂಡ ನ್ಯಾಯವ್ಯವಸ್ಥೆಯನ್ನು ಹಾಗೂ ಮಲಿನಗೊಂಡ ರಾಜಕಾರಣವನ್ನು ಸರಿಪಡಿಸಬೇಕಲ್ಲದೆ, ನಿಷ್ಪಕ್ಷಪಾತ ನ್ಯಾಯ ಹಾಗೂ ಶಿಕ್ಷಾ ವ್ಯವಸ್ಥೆಗೆ ನಾಂದಿ ಹಾಡಬೇಕು. ಹೆಣ್ಣನ್ನು ಕುರಿತ ಆರೋಗ್ಯಕರ ಮನೋಭಾವನೆ ಬೆಳೆಸುವುದು, ಮಾನವಜೀವಿಯಾಗಿ ಆಕೆಯನ್ನು ಹಾಗೂ ಆಕೆಯ ದುಡಿಮೆಯನ್ನು ಗೌರವಿಸುವುದು; ಮಹಿಳೆಯರನ್ನು ಶೋಷಿಸುವ, ಹಿಂಸಿಸುವ, ಕೀಳಾಗಿ ಕಾಣುವ ಎಲ್ಲಾ ಮೂಢಾಚರಣೆಗಳನ್ನು ನಿಷೇಧಿಸುವುದು; ಇವೆಲ್ಲವೂ ಆದ್ಯತೆಯ ಮೇಲೆ ಸಾಧ್ಯವಾಗುವುದು ಮಹಿಳಾ ಸಂಘಟನೆಗಳ ಐಕ್ಯತೆಯಿಂದ ಮಾತ್ರ. ನಾಗರಿಕ ಸಮಾಜ, ಮಾರುಕಟ್ಟೆ, ಮಾಧ್ಯಮ, ಸಂಘಟನೆಗಳು, ಸರ್ಕಾರ, ಯುವ ಸಮೂಹ ಎಲ್ಲರೂ ಲಿಂಗಸೂಕ್ಷ್ಮತೆ ಹೊಂದುವಂತೆ, ದೌರ್ಜನ್ಯದ ವಿರುದ್ಧ ದನಿಯೆತ್ತುವಂತೆ ಮಾಡಬೇಕಾದರೆ ಎಲ್ಲ ಮಹಿಳಾ ಸಂಘಟನೆಗಳು ಒಂದುಗೂಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

ಈ ಕಾರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡು ಹಂಚಿಹೋಗಿರುವ ಮಹಿಳೆಯರು, ಮಹಿಳಾಪರ ಮನಸುಗಳು ಒಂದೆಡೆ ಕಲೆಯಬೇಕು; ಪರಸ್ಪರ ಸಂಪರ್ಕ ಜಾಲ ಏರ್ಪಡಬೇಕು; ಅವಶ್ಯ ಬಿದ್ದರೆ ದೊಡ್ಡ ಸಂಖ್ಯೆಯಲ್ಲಿ ಹಾಗೂ ವಿಸ್ತೃತ ಮಟ್ಟದಲ್ಲಿ ಮಹಿಳೆಯರು ಒಟ್ಟುಗೂಡಬಲ್ಲರೆಂಬ ಸಂದೇಶ ರಾಜಕೀಯ ಪಕ್ಷಗಳಿಗೂ ಹಾಗೂ ಪುರುಷ ಪ್ರಧಾನ ಮನಸ್ಸುಗಳಿಗೂ ರವಾನೆಯಾಗಬೇಕು ಎಂಬ ಉದ್ದೇಶದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಮಾರ್ಚ್ ೮ರಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅಸ್ತಿತ್ವಕ್ಕೆ ಬಂದಿತು. ವಿವಿಧ ಸಂಘಟನೆಗಳ ಜಾಲವಾಗಿ ರೂಪುಗೊಂಡು ಕಳೆದ ವರ್ಷ ಮಂಗಳೂರಿನಲ್ಲಿ ಸಮಾವೇಶ, ಹಕ್ಕೊತ್ತಾಯ ಜಾಥಾ ನಡೆಸಿತು. ಅದೇರೀತಿ ಈ ವರ್ಷ ಮೈಸೂರಿನಲ್ಲಿ ಅಲ್ಲಿನ ಸಂಘಟನೆಗಳ ನೇತೃತ್ವದಲ್ಲಿ ಎರಡು ದಿನಗಳ ಸಮಾವೇಶವನ್ನು ಸಂಘಟಿಸಲಾಗಿದೆ. ನಾಡಿನ ಹಲವಾರು ಪ್ರಗತಿಪರ ಮತ್ತು ಮಹಿಳಾ ಸಂಘಟನೆಗಳು ಮೈಸೂರಿನಲ್ಲಿ ಒಟ್ಟಿಗೆ ಆಚರಿಸುತ್ತಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸೋದರಿತ್ವ/ಮಾನವತೆಯ ಐಕ್ಯ ಸಂಕೇತವಾಗಿದೆ. ಬರುವ ದಿನಗಳಲ್ಲಿ ಒಕ್ಕೂಟವನ್ನು ಸಂಘಟನೆಗಳ ಜಾಲವಾಗಿ ಅರ್ಥಪೂರ್ಣವಾಗಿ ಕಟ್ಟಲು ಎಲ್ಲ ಆರೋಗ್ಯಕರ ಮನಸುಗಳ ಸಹಭಾಗಿತ್ವವನ್ನು ಒಕ್ಕೂಟವು ಬಯಸುತ್ತದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...