Sunday, March 02, 2014

ಅವಕಾಶ ವಂಚಿತರು ಅದರ ಮುಂದಿನ ಪ್ರಶ್ನೆಗಳುಶೂದ್ರ ಶ್ರೀನಿವಾಸ್ಬಹಳಷ್ಟು ಸಮಯ ಮೇಲಿನ ಶೀರ್ಷಿಕೆ ನಾನಾ ವಿಧದಲ್ಲಿ ಕಾಡುವುದು. ನಾವು ನಾಲ್ಕು ಅಕ್ಷರ ಕಲಿತು ಹಠ ಮಾಡಿಕೊಂಡು ಬೆಂಗಳೂರಿಗೆ ಬರ ದಿದ್ದರೆ; ಏನಾಗುತ್ತಿದ್ದೆವು? ಎಂಬುದು ಬಹು ಪಾಲು ಮಂದಿಯ ಚಿಂತನೆಯ ಮುಂದೆ ಅತ್ಯಂತ ಕ್ಲಿಷ್ಟದಾಯಕ ಪ್ರಶ್ನೆಯಾಗಿ ನಿಲ್ಲಬಹುದು. ಹಾಗೆ ನೋಡಿದರೆ: ನಮ್ಮೆಲ್ಲರ ಬದುಕಿನಲ್ಲಿ ನಾವೇ ಊಹಿ ಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ವೈವಿಧ್ಯ ಮಯವಾದ ‘ಆಕಸ್ಮಿಕ’ಗಳು ಮುಖಾಮುಖಿ ಯಾಗುತ್ತಿರುತ್ತದೆ. ‘ಓ ದೇವರೆ ಅಥವಾ ಅಯ್ಯೋ’ ಎಂಬ ಉದ್ಗಾರಗಳ ನಡುವೆ ಎಂತೆಂಥದೋ ಭಾವನೆಗಳ ಮೊರೆ ಹೋಗುತ್ತಿರುತ್ತೇವೆ. ಆದರೆ ಅಲ್ಲೆಲ್ಲಿಯೂ ಯಾವುದೇ ರೀತಿಯ ಉತ್ತರ ವಾಗಲಿ, ಸಮಜಾಯಿಷಿಯಾಗಲಿ ಸಿಕ್ಕಿರುವುದಿಲ್ಲ. 

ಒಂದು ಗೂಬೆಯ ರೀತಿಯಲ್ಲಿಯೋ, ಭೂತದ ರೀತಿಯಲ್ಲಿಯೊ ಮನಸ್ಸಿನ ಮೇಲೆ ಸವಾರಿ ಮಾಡುತ್ತಲೇ ಇರುತ್ತದೆ. ಇಷ್ಟಾದರೂ ಯಾರ್ಯಾರೂ ಹೇಗೆ ಮೇಲೆ ಬಂದರು ಎಂಬುದೂ ಕೂಡ ಅಂತರಾಳದಲ್ಲಿ ಕೆಲಸ ಮಾಡು ತ್ತಿರುತ್ತದೆ. ಒಂದು ದೃಷ್ಟಿಯಲ್ಲಿ ನಮ್ಮ ನಮ್ಮ ‘ಅಸ್ತಿತ್ವ’ವೆ ಆಶ್ಚರ್ಯದ ರೂಪಕ ವಾಗಿ ನಿಂತು ಬಿಡಬಹುದು. ಇದರ ಮುಂದೆ ನಮಗೆ ಎದುರಾದ ನೋವು, ವಿಷಾದ, ಆತಂಕ ಮುಂತಾದವುಗಳನ್ನು ಕುರಿತು; ತಲೆಬುಡವಿಲ್ಲದಂತೆ ಯೋಚಿಸಬಹುದು. ಆಗಲೂ ಇನ್ನೂ ಯೋಚಿಸುವ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೇನು ಬರಲು ಸಾಧ್ಯವಾಗಿರುವುದಿಲ್ಲ. 

ಆದರೆ ಸ್ವಲ್ಪಮಟ್ಟಿಗೆ ಉತ್ತರ ಕಂಡುಕೊಂಡವರಂತೆ ರಾಜಿ ಮನೋ ಭಾವನೆಯಿಂದ ಮುಂದೆ ಸಾಗಿರುತ್ತೇವೆ. ಹಾಗೆ ನೋಡಿದರೆ ಇದಕ್ಕೆಲ್ಲ ಪೂರಕವಾಗಿ ನಮ್ಮೆಲ್ಲರ ಓದು ಅರ್ಥೈಸಲಾಗದ ಸಮಾಧಾನದ ಕಡೆಗೆ ಕರೆದೊಯ್ಯುತ್ತಲೇ ಇರುತ್ತದೆ. ಹೀಗೆ ಕರೆದೊಯ್ಯುವುದ ರಿಂದಲೇ ನಾವು ನಾಳೆಗೆ ಸ್ವಲ್ಪ ಉಳಿಸಿ ಕೊಂಡು ಬದುಕುತ್ತಿರುತ್ತೇವೆ. ಎಪ್ಪತ್ತರ ದಶಕದಲ್ಲಿ ನಾನು ಜೀನ್‌ಪಾಲ್ ಸಾರ್ತ್ರೆಯವರ ‘ಬೀಯಿಂಗ್ ಆ್ಯಂಡ್ ನಥಿಂಗ್‌ನೆಸ್’ ಓದಲು ಪ್ರಾರಂಭಿಸಿದಾಗ; ಎಷ್ಟು ಅರ್ಥೈಸಿಕೊಂಡೆನೋ ಗೊತ್ತಿಲ್ಲ. ಆದರೆ ಮತ್ತೆ ಮತ್ತೆ ಓದಲು ಪ್ರೇರೇಪಿಸಿದ್ದಂತೂ ನಿಜ.

ಹಾಗೆಯೇ ಬೇರೆ ಬೇರೆ ‘ಓದು’ ಎಂಬುದು ‘ಮೂರ್ತ ಮತ್ತು ಅಮೂರ್ತ’ ಪ್ರಕ್ರಿಯೆಯ ನಡುವೆ ನಮಗೊಂದು ಸಂಧಾನದ ಮಾರ್ಗವನ್ನು ಸೂಚಿಸಿರುತ್ತದೆ. ಇದು ಎಲ್ಲ ಕ್ಲಿಷ್ಟತೆಗಳ ನಡುವೆಯೂ ಬದುಕುವುದನ್ನು ಕಲಿ ಎನ್ನುವುದೂ ಆಗಿರುತ್ತದೆ. ಈ ‘ಬೀಯಿಂಗ್ ಆ್ಯಂಡ್ ನಥಿಂಗ್‌ನೆಸ್’ ಬರೆದ ಮಹಾನ್ ಚಿಂತಕ ಕಥೆ, ಕಾದಂಬರಿ ಮತ್ತು ನಾಟಕವನ್ನು ಬರೆದ. ಅಷ್ಟೇ ಏಕೆ ಒಟ್ಟು ಫ್ರಾನ್ಸ್ ದೇಶಕ್ಕೆ ಬೌದ್ಧಿಕ ಹೋರಾಟದ ಮಾದರಿಗಳನ್ನು ಕೊಟ್ಟ.

ರಚನಾತ್ಮಕ ವಿರೋಧ ಪಕ್ಷದ ಮಾದರಿಗಳನ್ನು ಕೊಟ್ಟ. ಜನರಲ್ ಡಿಗಾಲ್‌ನಂಥ ನಿಷ್ಠುರವಾದಿ ಮತ್ತು ನಿರಂಕುಶಮತಿ ಅಧ್ಯಕ್ಷನಿಗೂ ಸಿಂಹಸ್ವಪ್ನವಾಗಿದ್ದ. ಹಾಗೆಯೇ ಜಗತ್ತಿನಾದ್ಯಂತ ವಿದ್ಯಾವಂತ ಮಹಿಳೆ ಯರಿಗೆ ‘ಸ್ತ್ರೀ ವಾದ’ದ ಬೇರುಗಳ ಸೂಕ್ಷ್ಮತೆಗಳನ್ನು ಅರಿಯಲು ಸಹಕರಿಸಿದ ‘ಸಾರ್ತ್ರೆ’ಯವರು ಬೆಳೆಯುವ ಅವಕಾಶಗಳಿಂದ ಎಂದೂ ವಂಚಿತ ರಾಗಬಾರದೆಂದು; ಒಂದು ಅಮೂಲ್ಯ ಸಂದೇಶವನ್ನು ನೀಡಿದರು. ಅದು ನನ್ನಂಥವನಿಗೆ ನಿಜವಾಗಿಯೂ ವಿಸ್ಮಯಕಾರಿಯಾದದ್ದು. ಮುಂದೆ ಸಾರ್ತ್ರೆಯವರು ಈ ‘ವಿಸ್ಮಯ’ವನ್ನು ಸರಳ ರೀತಿಯಲ್ಲಿ ಬಿಡಿಸಿ ಹೇಳಿದರು.

ಅದೇನೆಂದರೆ: ಅವರಿಗೆ ಜಗತ್ತಿನ ಶ್ರೇಷ್ಠ ಪ್ರಶಸ್ತಿಯಾದ ನೋಬೆಲ್ ಬಹುಮಾನ ಬಂದಾಗ ಅದನ್ನು ತಿರಸ್ಕರಿಸಿದರು. ಆಗ ಎಷ್ಟೊಂದು ವಿಧದಲ್ಲಿ ಸುದ್ದಿಯಾದರು. ಇದಕ್ಕೆ ನಾನಾ ರೀತಿಯ ಮಾಧ್ಯಮದ ಪ್ರತಿನಿಧಿಗಳು ಅವರ ಒಟ್ಟು ‘ಜೀನಿಯಸ್‌ನೆಸ್’ ಬಗ್ಗೆ ಕೇಳಿದಾಗ: ಅವರು ಅತ್ಯಂತ ಸರಳವಾದ ಉತ್ತರವನ್ನು ಕೊಟ್ಟರು. ಆ ಉತ್ತರವು ಸಾಮಾನ್ಯ ಮನುಷ್ಯನಿಗೂ ಅರ್ಥ ವಾಗುವಂಥದ್ದು. ಅದೇನೆಂದರೆ: ಯಾವ ಮನುಷ್ಯನೂ ಹುಟ್ಟಿದಾಕ್ಷಣ ಪ್ರತಿಭಾವಂತನಾಗಿ ಅಥವಾ ಜೀನಿಯಸ್ಸಾಗಿ ಬೆಳೆದಿರುವುದಿಲ್ಲ. 

ಪ್ರತಿ ಯೊಬ್ಬ ಮನುಷ್ಯನಿಗೂ ಅವನವನ ಬದುಕಿನಲ್ಲಿ ದಿನನಿತ್ಯದ ಊಟದ ಸಮಸ್ಯೆಯನ್ನು ಹಾಗೂ ನಿಲ್ಲಲು ನೆಲೆಯ ಸಮಸ್ಯೆಯನ್ನು ತಪ್ಪಿಸಿ ಒಂದಷ್ಟು ಓದಲು, ಬರೆಯಲು ಅವಾಕಶ ಕಲ್ಪಿಸಿದರೆ ಅವನೂ ಅಥವಾ ಅವಳೂ; ಎಲ್ಲ ಪ್ರತಿಭಾ ವಂತರನ್ನು ಮೀರುವ ರೀತಿಯಲ್ಲಿ ಬೆಳೆಯಲು ಸಾಧ್ಯ ಎಂದಾಗ ಮತ್ತೊಮ್ಮೆ ಸುದ್ದಿಯಾದರು. ಇದನ್ನು ಹೇಳಲು ಅವರು ಬೌದ್ಧಿಕ ಕಸರತ್ತನ್ನು ಮಾಡಲಿಲ್ಲ. ಇಂಥ ಪ್ರಾಮಾಣಿಕ ಚಿಂತನೆಯ ಮೂಲಕ ಒಟ್ಟು ಫ್ರಾನ್ಸನ್ನು ‘ಅಲರ್ಟ್’ ಆಗಿ ಇಟ್ಟಿದ್ದರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ.

ಮೇಲಿನ ಮಾತುಗಳನ್ನು ನಾನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಲೇ ಇರುತ್ತೇನೆ. ಯಾಕೆಂದರೆ: ಅವಕಾಶ ವಂಚಿತರು ಮತ್ತು ಅವರ ಮುಂದಿದ್ದ ಅಥವಾ ಮುಂದಿರುವ ಎಷ್ಟೋ ಪ್ರಶ್ನೆಗಳನ್ನು ವಿವಿಧ ರೂಪದಲ್ಲಿ ವ್ಯಾಖ್ಯಾನಿಸಿಕೊಳ್ಳಲು ಸಾಧ್ಯವಾಗುವುದು. ಇದನ್ನು ಪೀಠಿಕೆಯ ಮಾತಾಗಿ ಮುಂದಿನ ಘಟನೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವೆ. ಎರಡು ವಾರಗಳ ಹಿಂದೆ ಸಂಯುಕ್ತ ಕರ್ನಾಟಕದ ‘ಸಾಪ್ತಾಹಿಕ ಸೌರಭ’ದಲ್ಲಿ ಡಾ. ಸಿದ್ಧಲಿಂಗಯ್ಯನವರನ್ನು ಕುರಿತು ನನ್ನದೊಂದು ಲೇಖನ ದಾಖಲಾಗಿತ್ತು. ಅದರ ಶೀರ್ಷಿಕೆ ‘ಹೋರಾಟದ ರೂಪಕ’ ಎಂದು. 

ಅವರಿಗೆ ಅರ ವತ್ತು ವರ್ಷ ಆಗಿದ್ದರ ನೆನಪಿಗೆ ಇದು ಪ್ರಕಟ ವಾಗಿತ್ತು. ಕವಿಮಿತ್ರ ಸತೀಶ್‌ಕುಲಕರ್ಣಿಯ ವರಿಂದ ಮೊದಲ್ಗೊಂಡು ಉತ್ತರ ಕರ್ನಾಟಕದ ನಾನಾ ರೀತಿಯ ವಿವಿಧ ಮನಸ್ಸುಗಳು ಪ್ರತಿಕ್ರಿಯಿಸಿದರು. ಅವರಲ್ಲಿ ಹುಡುಗಿಯೊಬ್ಬಳು ಪ್ರತಿಕ್ರಿಯಿ ಸಿದಾಗ; ಆಕೆಯ ಹಿನ್ನೆಲೆಯನ್ನು ಕೇಳಿದೆ: ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿಗಾಗಿ ಅಧ್ಯಯನ ಮಾಡುತ್ತಿರುವಂಥವಳು. ಸಾಕಷ್ಟು ಚುರುಕಿನಿಂದ ಉತ್ತರಿಸುತ್ತಿದ್ದಳು. ನಾನು ಖುಷಿ ಯಿಂದ ಕುಟುಂಬದ ಹಿನ್ನೆಲೆಯನ್ನು ಕೇಳಿದೆ. ಆಕೆ ಸ್ವಲ್ಪ ವಿಷಾದ ಬೆರೆತ ಮನಸ್ಸಿನಿಂದ ‘‘ಸರ್, ಹತ್ತು ಮಿನಿಟ್ಟು ಒಟ್ಟು ಫೋನಾಯಿಸುವೆ’’ ಎಂದಳು. 

ನಾನು ಆಗಲಿ ಎಂದು ನನ್ನ ಪಾಡಿನ ಕೆಲಸದಲ್ಲಿ ತೊಡಗಿದ್ದೆ. ಒಂದು ದೃಷ್ಟಿಯಿಂದ ಆಕೆ ಮತ್ತೆ ಫೋನ್ ಮಾಡುತ್ತಾಳೆ ಎಂಬುದರ ಬಗ್ಗೆ ಖಾತರಿ ಇರಲಿಲ್ಲ. ಆದರೆ ಫೋನ್ ಕರೆ ಬಂತು. ‘‘ಸರ್, ನನ್ನ ತಾಯಿ ದೇವದಾಸಿ, ನನ್ನ ತಾಯಿ ಯ ತಂಗಿ ಶಾಲಾ ಶಿಕ್ಷಕಿ, ನನ್ನನ್ನು ಸಾಕಿ ಬೆಳೆಸಿದ ವಳು. ಮತ್ತು ನಿಮ್ಮೆಡನೆ ನಾನು ಧೈರ್ಯವಾಗಿ ಮಾತಾಡುತ್ತಿದ್ದರೆ: ಆಕೆ ಕೊಟ್ಟ ಶಿಕ್ಷಣವೇ ಕಾರಣ: ಇಲ್ಲದಿದ್ದರೆ ನಾನೂ ಒಬ್ಬ ದೇವದಾಸಿಯಾಗಿ ಈ ಸಮಾಜದಿಂದ ಕಳೆದು ಹೋಗುತ್ತಿದ್ದೆ.

ಈಗ ನಾನು ಶಿಕ್ಷಣ ಪಡೆದಿರುವು ದರಿಂದ; ಅದರಲ್ಲೂ ಪತ್ರಿಕೋದ್ಯಮ ದಲ್ಲಿ ಶಿಕ್ಷಣ ಪಡೆದಿರುವುದರಿಂದ ಏನೇನೋ ಬರೆಯ ಬೇಕೆನ್ನಿಸುತ್ತಿದೆ. ಬದುಕಿನಲ್ಲಿ ಅಮೂಲ್ಯ ಅವಕಾಶಗಳಿಂದ ವಂಚಿತರಾದ ನನ್ನಂಥ ಹಿನ್ನೆಲೆಯ ನೂರಾರು ಮಂದಿಗೆ ಅರಿವು ಮೂಡಿಸುವ ಚೈತನ್ಯವನ್ನು ಪಡೆದಿದ್ದೇನೆ. ಈ ಶಿಕ್ಷಣವೆಂಬುದು ನನ್ನೊಡನೆ ಸದಾ ಇರುವ ಹತ್ತಾರು ಮಂದಿ ರಕ್ಷಕರಂತೆ ಎಂಬ ಭಾವನೆ ನನ್ನಲ್ಲಿ ದಟ್ಟವಾಗಿದೆ. ಹಾಗೆಯೇ ಇಂದು ಯಾರ ಸಹಾಯಕ್ಕಾದರೂ ಕೈ ಚಾಚಿ ನಿಲ್ಲಬಲ್ಲೆ ಎಂಬ ಚೈತನ್ಯ ದಟ್ಟವಾಗಿದೆ’’ ಎಂದು ಹೇಳುತ್ತಿದ್ದಾಗ; ನಾನು ವಿಸ್ಮಯಗೊಳ್ಳಲಿಲ್ಲ. 

ಆದರೆ ಅರಿವು ಮತ್ತು ಶಿಕ್ಷಣ ವೆಂಬುದು ಎಂಥ ಸರಳದಾರಿಯ ಕಡೆಗೆ ಕರೆದೊಯ್ಯುತ್ತಿದೆ ಎಂದು ಒಂದು ಕ್ಷಣ ಯೋಚಿಸುತ್ತ ಹೋದಾಗ; ಆ ಹುಡುಗಿಗೆ ಭವಿಷ್ಯದ ಮಾರ್ಗ ಸೂಚಕವಾಗಿ ನನ್ನಿಂದ ಎರಡು ನುಡಿಗಳನ್ನು ಹೇಳಲಾಗಲಿಲ್ಲ. ಯಾಕೆಂದರೆ: ನಾನು ಹೇಳುವುದು ಕೃತಕ ಅನ್ನಿಸತೊಡಗಿತ್ತು. ಆ ಹುಡುಗಿಯೇ ಬೆಳವಣಿಗೆಯ ಕೆಲವು ಅಪೂರ್ವ ಮಾದರಿಗಳನ್ನು ಈಗಾಗಲೇ ತನ್ನ ಚಿಂತನೆಯಲ್ಲಿ ಟಿಪ್ಪಣಿ ಮಾಡಿಕೊಂಡಿದ್ದಾಳೆ ಎಂದು ಖುಷಿ ಅನ್ನಿಸಿತು. ಅದೇ ಸಮಯಕ್ಕೆ ಇಷ್ಟೊಂದು ಪ್ರಜ್ಞೆ ಮತ್ತು ಅರಿವನ್ನು ಬೆಳೆಸಿಕೊಂಡಿರುವಂಥವಳು ತನ್ನ ತಾಯಿಯ ಒಟ್ಟು ವೃತ್ತಿಯನ್ನು ಹೇಗೆ ಗ್ರಹಿಸಿಕೊಂಡಿರಲು ಸಾಧ್ಯ ಎಂಬ ಆಲೋಚನೆ ಮನಸ್ಸಿನ ತುಂಬ ಗಿರಕಿ ಹಾಕಲು ತೊಡಗಿತ್ತು.

ಮತ್ತು ಪಾಪ, ಪುಣ್ಯ, ಕಾರ್ಯ, ದಬ್ಬಾಳಿಕೆ ಎಲ್ಲವೂ ಮೊತ್ತವಾಗಿ ಆ ಹುಡುಗಿಗೆ ಹೇಗೆ ಮುಖಾಮುಖಿಯಾಗಿರಲು ಸಾಧ್ಯ ಎಂದು ಯೋಚಿಸಲು ತೊಡಗಿದ್ದೆ. ಆದರೆ ಈ ಯೋಚನೆ ನನಗಿಂತ ಹೆಚ್ಚಾಗಿ ಆ ಹುಡುಗಿಗೆ ವರ್ತುಲ ರೂಪವಾಗಿ ಬಾಧೆ ಕೊಟ್ಟಿರಲು ಸಾಧ್ಯ ಎಂಬುದರ ಬಗ್ಗೆಯೂ ತಲ್ಲಣಗೊಂಡಿದ್ದೆ. ಹಿಂದೆ ಪ್ರಸ್ತಾಪಿಸಿದಂತೆ ಆಕೆಗೆ ಧೈರ್ಯ ತುಂಬುವ ಯಾವ ನುಡಿಯೂ ಜೀವಂತವಾಗಿರಲಿಲ್ಲ. ಸುಮ್ಮನೆ ಯಾವುದೋ ಒಂದು ರೂಪದಲ್ಲಿ ಮಾತು ಕಟ್ಟಾಯಿತು.

ಬಡತನದ ನರಕ ಯಾತನೆ, ನಮ್ಮ ನಡುವಿನ ನೂರಾರು ಸಾಮಾಜಿಕ ವೌಢ್ಯಗಳ ನಡುವೆ; ಆ ಹುಡುಗಿ ನಾಳೆಯ ದಿನಗಳಿಗೆ ಯಾವ ರೀತಿಯ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವಳು ಎಂಬುದು ಕಾಡತೊಡಗಿತ್ತು. ಯಾಕೆಂದರೆ: ನಾವು ಹೊರಗಿದ್ದು ನೋಡುವುದು ಬೇರೆ. ಒಳಗಿದ್ದು ಅನುಭವಿಸುವುದು ಎಂಥ ತಲ್ಲಣಕಾರಿಯಾದದ್ದು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...