Tuesday, March 11, 2014

ಕೇಜ್ರಿವಾಲ್ ಎತ್ತಿದ ಗುಜರಾತ್ ಕುರಿತ ಪ್ರಶ್ನೆಗಳು

ಅಶೋಕ ರಾಮ್ ಡಿ ಆರ್

ಸೌಜನ್ಯ : ವಿಜಯ ಕರ್ನಾಟಕದಿಲ್ಲಿಯ ರೈಸಿನಾ ಹಿಲ್ಸ್‌ನ ಸೌತ್ ಬ್ಲಾಕ್ ಪ್ರವೇಶಿಸಿ ಪ್ರಧಾನಿ ಕುರ್ಚಿಯಲ್ಲಿ ಕೂರುವುದಷ್ಟೇ ಬಾಕಿ ಎನ್ನುವಂತಾಗಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪ್ರಚಾರ ಹಿಂದೆಂದಿಗಿಂತಲೂ ಗದ್ದಲ ಎಬ್ಬಿಸಿರುವಾಗ ಅವರ ವಿರುದ್ಧ ಎದ್ದ ಅಷ್ಟೇ ದೊಡ್ಡ ದನಿಯೊಂದು ಅಷ್ಟೇ ಬೇಗ ತಣ್ಣಗಾಗಿದೆ.

ದೇಶದ ರಾಜಧಾನಿ ದಿಲ್ಲಿಯಲ್ಲಿ ನಿತ್ಯ ಕಸಪೊರಕೆ ಹಿಡಿದು ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕಿದ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಅವರು 3 ದಿನಗಳ ಕಾಲ ಗುಜರಾತ್ ಉದ್ದಕ್ಕೂ ಸುತ್ತು ಹಾಕಿ ಆ ರಾಜ್ಯದ ಅಭಿವೃ ದ್ಧಿಯ ಮತ್ತೊಂದು ಮುಖವನ್ನು ದೇಶದ ಮುಂದೆ ತೆರೆದಿಟ್ಟಿದ್ದಾರೆ. 2 ದಿನಗಳ ಕಾಲ ಒಂದು ಥ್ರಿಲ್ಲರ್‌ನಂತೆ ತೆರೆದುಕೊಂಡ ಪ್ರವಾಸ ಮತ್ತು ಅದರ ಜತೆ ಜತೆಗೇ ಸುತ್ತಿಕೊಂಡ ಗದ್ದಲಗಳು ಕೊನೆಗೆ ಅಂತ್ಯಗೊಂಡದ್ದು ಮೋದಿ ಅವರ ನೆಲದ ಅಭಿವೃದ್ಧಿಯನ್ನು ಪ್ರಶ್ನಿ ಸುವ ಮೂಲಕ. ಈ ಪ್ರಶ್ನೆ ಗಳನ್ನು ಭರ್ಜರಿಯಾಗಿಯೇ ದೇಶದ ಮತದಾರರ ಮುಂದೆ ಅನಾವರಣಗೊಳಿಸಿದರೂ ಅವುಗಳ ಚರ್ಚೆ ಮಾತ್ರ ಆರಂಭ ದಲ್ಲಿಯೇ ಅಂತ್ಯವಾಗಿ ಬಿಟ್ಟಿವೆ.

ಇದರಲ್ಲಿ ತಪ್ಪು ಏನಿದ್ದರೂ ಖುದ್ದು ಕೇಜ್ರಿವಾಲ್ ಅವರದೇ, ಚುನಾವಣೆ ಘೋಷಣೆಯಾದ ಬಳಿಕ ದೇಶವೆಲ್ಲ ನಿಜವೆಂದು ನಂಬಿರು ವುದನ್ನು ಸುಳ್ಳು ಎಂದು ಹೇಳಲು ಹೊರಟು ಅದನ್ನು ಎಲ್ಲರೂ ಒಪ್ಪುವಂತೆ ಸಾಕ್ಷಾಧಾರಗಳ ಮೂಲಕ ಮಂಡಿಸಲು ವಿಫಲವಾಗಿದ್ದಾರೆ ಅವರು. ಅಷ್ಟಕ್ಕೂ ಕೇಜ್ರಿವಾಲ್ ಹೇಳುತ್ತಿರು ವು ದೆಲ್ಲ ನಿಜವೆ? ಗುಜರಾತ್‌ನಲ್ಲಿ ಎಲ್ಲೂ ಇಲ್ಲದ ಅಭಿವೃದ್ಧಿ ಯಾ ಗಿದೆ, ಆ ಮಾದರಿಯಲ್ಲಿಯೇ ದೇಶವನ್ನೂ ಅಭಿವೃದ್ಧಿ ಪಡಿ ಸು ತ್ತೇನೆ ಎನ್ನುವುದು ಮೋದಿ ಅವರ ಘೋಷಣೆ. ಆದರೆ, ಕೇಜ್ರಿ ವಾಲ್ ಬಿಚ್ಚಿಟ್ಟಿರುವುದು ಬೇರೆಯದೇ ಕತೆ. ''ಆ ರಾಜ್ಯದಲ್ಲಿ ಹೆದ್ದಾರಿ ಗಳನ್ನು ಹೊರತುಪಡಿಸಿದರೆ ಒಳ ರಸ್ತೆಗಳು ದುಸ್ಥಿತಿ ಯ ಲ್ಲಿವೆ, ಶಾಲೆಗಳು ಮತ್ತು ಆಸ್ಪತ್ರೆಗಳ ಸ್ಥಿತಿಯೂ ಚೆನ್ನಾಗಿಲ್ಲ, ಭ್ರಷ್ಟಾ ಚಾರ ಎಲ್ಲೆಡೆ ನೆಲೆಸಿದೆ, ಹಗರಣದ ಆರೋಪಕ್ಕೆ ಒಳಗಾದ ವರು ಮೋದಿ ಅವರ ಸರಕಾರದಲ್ಲಿ ಸಚಿವರಾಗಿದ್ದಾರೆ. ಸರಕಾ ರವು ಖಾಸಗಿ ಯವರಿಂದ ಖರೀದಿಸುವ ಸೌರ ವಿದ್ಯುತ್‌ನ ದರ ಉಳಿದ ರಾಜ್ಯ ಗಳಿಗಿಂತ ಹೆಚ್ಚಾಗಿದೆ, ಕೃಷಿಯ ಪ್ರಗತಿ ದರವು ಮೋದಿ ಅವರು ಹೇಳಿಕೊಂಡಂತಿಲ್ಲ, ಕಳೆದ 10 ವರ್ಷಗಳಲ್ಲಿ ಮೂರ ನೇ ಎರಡರಷ್ಟು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ, ರಾಜ್ಯದೆ ಲ್ಲೆಡೆ 24 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು,'' ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇವರು ಸತ್ಯವನ್ನೇ ಹೇಳು ತ್ತಿ ದ್ದಾರೆ ಸುಳ್ಳನ್ನಲ್ಲ ಎಂದು ತೋರಿಸಲು ಇದುವರೆಗೂ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ.

ಆಮ್ ಆದ್ಮಿ ಪಕ್ಷ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ವನ್ನು ಬಿಜೆಪಿಯ ಯಾವ ಮುಖಂಡರೂ ಈವರೆಗೂ ತೋರಿಲ್ಲ. ಖುದ್ದು ಮೋದಿ ಬಂಟ ಅಮಿತ್ ಶಾ ಎದುರು ಕುಳಿತು ಎಎಪಿಯ ಮತ್ತೊಬ್ಬ ನಾಯಕ ಮನಿಷ್ ಸಿಸೋಡಿಯಾ ಅವರು ಇದೇ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದರೆ, ಶಾ ಕೂಡ ಅದಕ್ಕ್ಕೆ ಉತ್ತರಿ ಸುವ ಪ್ರಯತ್ನ ಮಾಡಿಲ್ಲ. ''ಇದೆಲ್ಲ ಮತದಾರರಿಗೆ ಚೆನ್ನಾಗಿ ತಿಳಿ ದಿದೆ ಆದ್ದರಿಂದಲೇ ಬಿಜೆಪಿ ಮತ್ತೊಮ್ಮೆ ಆ ರಾಜ್ಯದಲ್ಲಿ ಭರ್ಜ ರಿ ಯಾಗಿ ಗೆದ್ದಿದೆ,'' ಎನ್ನುವುದಷ್ಟೇ ಶಾ ಕೊಟ್ಟ ಉತ್ತರ. ಇದ ರರ್ಥ, ಕೇಜ್ರಿವಾಲ್ ಸುಳ್ಳು ಹೇಳುತ್ತಿಲ್ಲ ಎನ್ನುವುದೇ ಆಗಿದೆ. ಇದು ನಿಜ ವಾದರೆ, ಮೋದಿ ಮಾದರಿ ಅಭಿವೃದ್ಧಿಯ ಇಂಥ ಮುಖ ವನ್ನು ಜನರ ಮುಂದಿಡಲು ಕಾಂಗ್ರೆಸ್‌ಗೆ ಎಲ್ಲ ಅವಕಾಶ ಗಳೂ ಇದ್ದವು ಎನ್ನುವುದೇ ಆಗಿದೆ.

ಕೇಜ್ರಿವಾಲ್ ಹೀಗೆ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಅದು ಮೂಡಿಸುತ್ತಿದ್ದ ಉಪ ಪ್ರಶ್ನೆಗಳೇ ಬೇರೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಯೇ ಮುಗಿದೇ ಹೋಗುತ್ತದೆ ಎನ್ನುವ ಹೊತ್ತಲ್ಲಿ ಏಕೆ ಇಂತಹ ಪ್ರಶ್ನೆಗಳು ಹೊರ ಬರುತ್ತಿವೆ ಎನ್ನುವುದು ಮುಖ್ಯ ಪ್ರಶ್ನೆ. ಆದರೆ, ಇದಕ್ಕೆ ಉತ್ತರಿಸಬೇಕಿರುವುದು ಮಾತ್ರ ಕಾಂಗ್ರೆಸ್. ಇದನ್ನೆಲ್ಲ ಮೊದಲೇ ಶೋಧಿಸಲು ಕೇಜ್ರಿವಾಲ್ ಅವರಿಗೆ ಸಮಯ ಇರಲಿಲ್ಲ, ಅವರ ಪಕ್ಷ ಹುಟ್ಟಿದ್ದೇ ತಡವಾಗಿ, ಖುದ್ದು ಕೇಜ್ರಿವಾಲ್ ಅವರು ರಾಜಕೀ ಯವನ್ನು ಅಧಿಕೃತವಾಗಿ ಪ್ರವೇಶಿಸಿದ್ದೇ ತಡವಾಗಿ. ಆದ್ದರಿಂದ ಅವರಿಗೆ ಸಮಯ ಇರಲಿಲ್ಲ ಎಂದೇ ಭಾವಿಸೋಣ, ಆದರೆ, ಪುರಾ ತನ ಕಾಲದಿಂದ ತಳ ಊರಿರುವ ಕಾಂಗ್ರೆಸ್ ಏನು ಮಾಡು ತ್ತಿತ್ತು? ಗುಜರಾತ್‌ನಲ್ಲಿ ಪ್ರತಿಪಕ್ಷದ ಸ್ಥಾನ ಅಲಂಕರಿಸಿರುವ ಆ ಪಕ್ಷ ಇಂತಹ ಸತ್ಯದ ಶೋಧನೆ ನಡೆಸಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಕೊಡುವ ಸ್ಥಿತಿಯಲ್ಲಿ ಆ ಪಕ್ಷದಲ್ಲಿ ಯಾರೂ ಇಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಸುತ್ತಿ ಇದನ್ನೆಲ್ಲ ಮೊದಲೇ ಹೇಳಿದ್ದರು, ಮಾಧ್ಯಮಗಳು ಇದಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗಲೆಂದು ಹೊರಟ ನಾಯಕ ನೊಬ್ಬನನ್ನು ಆತನ ಸಾಮ್ರಾಜ್ಯದಲ್ಲಿಯೇ ಎದುರಿಸಿ ನಿಲ್ಲುವುದು ಕೇವಲ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸವೆ? ಅಷ್ಟಕ್ಕೂ ಮೋದಿ ಅವರಂತಹ ನಾಯಕನನ್ನು ಎದುರಿಸುವ ವ್ಯಕ್ತಿತ್ವ, ಛಾತಿ ಇರುವ ಯುವ ನಾಯಕರು ಅಲ್ಲಿ ಗುಜರಾತ್‌ನಲ್ಲಿ ಯಾರಿ ದ್ದಾರೆ? ದಿಲ್ಲಿಯ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಅಧಿ ಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಘಟಾನುಘಟಿ ನಾಯಕರು ವರ್ಷದ ಹಿಂದೆಯೇ ಅದ್ಯಾಕೆ ಗುಜರಾತ್‌ಗೆ ನುಗ್ಗಿ ಇಂತಹ ಸತ್ಯಗಳನ್ನು ಹೆಕ್ಕಿ ಹೊರ ತೆಗೆಯಲಿಲ್ಲ? ಇಷ್ಟು ವರ್ಷ ಗಳ ವರೆಗೂ ಗುಜರಾತ್‌ನಿಂದ ಹೊರ ಬಂದದ್ದೆಲ್ಲ ಗೋಧ್ರಾ ಹತ್ಯಾ ಕಾಂಡದ ಕತೆಗಳಷ್ಟೇ. ಕೆಲವು ಸಾಮಾಜಿಕ ಕಾರ್ಯಕರ್ತರು, ಗೋಧ್ರಾ ಹತ್ಯಾಕಾಂಡದಿಂದ ಸಂಬಂಧಿಕರನ್ನು ಕಳೆದುಕೊಂಡ ವರು ಮೋದಿ, ಅವರ ಪಕ್ಷ ಮತ್ತು ಸರಕಾರದ ವಿರುದ್ಧ ಆರೋಪ ನಡೆಸಿದ್ದು ಬಿಟ್ಟರೆ, ಖುದ್ದು ಕಾಂಗ್ರೆಸ್ ಒಂದು ಒಳ್ಳೆಯ ಪ್ರತಿ ಪಕ್ಷ ವಾಗಿ ಕಾರ್ಯ ನಿರ್ವಹಿಸಿದ್ದು ಕಡಿಮೆ. ಗುಜರಾತ್‌ನಲ್ಲಿ ಸಾಕಾ ರಾಗೊಂಡಿದೆ ಎನ್ನಲಾದ ಅಭಿವೃದ್ಧಿ ಕಾರ್ಯಕ್ರಮಗಳ ನಿಜ ಸ್ಥಿತಿ ಏನು ಎನ್ನುವುದನ್ನು ಬಹಿರಂಗಪಡಿಸುವ ಪ್ರಯತ್ನ ಮಾಡ ಲಿಲ್ಲ. ಈ ಕಾರಣದಿಂದ ಕೇಜ್ರಿವಾಲ್ ಅವರು ಮೋದಿ ನೆಲದಲ್ಲಿ ನಿಂತು ಗುಜ ರಾತ್‌ನಲ್ಲಿನ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಅದನ್ನು ಆಲಿಸುತ್ತಿದ್ದವರಿಗೆ ಆ ಪ್ರಶ್ನೆಗಳಿಗೆಲ್ಲ ನಿಜಕ್ಕೂ ಉತ್ತರ ಕೊಡ ಬೇಕಿರುವುದು ಕಾಂಗ್ರೆಸ್ ನಾಯಕರು ಎನಿಸುವಂತಿತ್ತು. ಅಧಿ ಕಾರದ ಸುಖದಲ್ಲಿರುವ ಕಾಂಗ್ರೆಸ್ ಎಲ್ಲವನ್ನೂ ಮರೆತು ಮಲ ಗಿದೆ ಎನ್ನುವುದನ್ನು ಚೆನ್ನಾಗಿ ಅರಿತ ಮೋದಿ ಈ ಕಾರಣ ದಿಂದಲೇ ತಮ್ಮ 'ಅಭಿವೃದ್ಧಿ' ಯನ್ನು ತಾವೇ ರೂಪಿಸಿಕೊಂಡರು.

ಗುಜರಾತ್‌ನಲ್ಲಿನ ಅಭಿವೃದ್ಧಿಯ ಮತ್ತೊಂದು ಮುಖವನ್ನು ಅಲ್ಲಿನ ಮತದಾರರ ಮುಂದಿಡಲು ಗುಜರಾತ್‌ನ ಯುವ ಕಾಂಗ್ರೆಸ್, ವಿಕಾಸ್ ಖೋಜ್ ಯಾತ್ರಾ (ವಿಕಾಸ ಶೋಧನೆ ಯಾತ್ರೆ) ಕೈಗೊಂಡಿದ್ದು ನಿಜ. ಆದರೆ, ಇದು ನಡೆದದ್ದು ಯಾವಾಗ? ಈ ವರ್ಷದ ಜನವರಿ 18 ರಂದು ಆರಂಭವಾದ ಈ ಯಾತ್ರೆ 23 ದಿನಗಳ ಕಾಲ ನಡೆದು 500 ಕಿ.ಮೀ. ಕ್ರಮಿಸಿದೆ, 9 ಲೋಕಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಖುದ್ದು ರಾಹುಲ್ ಗಾಂಧಿ ಅವರು ಈ ಯಾತ್ರೆಯಲ್ಲಿ ಸ್ವಲ್ಪ ದೂರ ನಡೆದು, ಬಹಿ ರಂಗ ಸಭೆಯಲ್ಲಿ ಮಾತನಾಡಿದ್ದಾರೆ. ಮಹಾತ್ಮ ಗಾಂಧಿ ಅವ ರನ್ನು ಕೊಂದದ್ದು ಆರೆಸ್ಸೆಸ್ ಎಂದು ಅವರು ಆರೋಪ ಮಾಡಿದ್ದು ಇದೇ ಸಭೆಯಲ್ಲಿ. ಆದರೆ, ಮೋದಿ ಅವರನ್ನು ಗುಜ ರಾತ್‌ನ ಒಳಗೇ ಕಟ್ಟಿ ಹಾಕಲು ಇದು ಸಾಕೆ? ಖಂಡಿತ ಇಲ್ಲ. ಕಾಂಗ್ರೆಸ್ ಮೇಲೆದ್ದು ನಿಲ್ಲುವ ವೇಳೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಸೃಷ್ಟಿಸಿದ ಅಲೆ ದೇಶಾದ್ಯಂತ ವ್ಯಾಪಿಸಿಕೊಂಡಿದೆ. ಕಾಂಗ್ರೆಸ್ ಮತ್ತು ಎಎಪಿ ಪ್ರಯತ್ನಗಳೆಲ್ಲ ಮನೆ ಸುಟ್ಟು ಬೂದಿಯಾದ ಮೇಲೆ ನೀರು ಹುಡು ಕಿ ದಂತಿದೆ. ಕಾಂಗ್ರೆಸ್ ಹೀಗೆ ಕಳೆದ 5 ವರ್ಷಗಳನ್ನು ಕೆಲಸ ಮಾಡದೆ ಕಳೆದಿರುವುದಕ್ಕೆ 2 ಕಾರಣಗಳಿವೆ. ಒಂದು, ಮೋದಿ ವಿರುದ್ಧ ಬಳಸಬಹುದಾದ ಅಸ್ರ್ತಗಳನ್ನು ಕಾಂಗ್ರೆಸ್ ತ್ಯಜಿಸಿದೆ. ಭ್ರಷ್ಟಾಚಾರ ಎನ್ನುವುದು ಇಷ್ಟೆಲ್ಲ ದೊಡ್ಡ ವಿಷಯ ವಾಗಿ ಅದನ್ನು ಹಿಡಿದು ಹೊರಟವರಿಗೆ ಹಿಂದೆಂದೂ ಕಾಣಿಸದ ಫಲ ಕೊಡಲಿದೆ ಎನ್ನುವ ಸತ್ಯ ಅರಿವಾಗಿದ್ದು ತಡವಾಗಿ. ಭ್ರಷ್ಟಾ ಚಾ ರ ಕ್ಕಿಂತ ಜಾತ್ಯ ತೀತೆಯ ಝಂ
ಡಾ ಹಿಡಿದು ಹೊರಟರೆ ಬೆನ್ನ ಹಿಂದೆ ನಿಲ್ಲುವವರ ಸಂಖ್ಯೆ ಹೆಚ್ಚಲಿದೆ ಎನ್ನುವುದು ಅದರ ಮತ್ತೊಂದು ನಂಬಿಕೆ.

ಹೀಗೆ ಕಾಂಗ್ರೆಸ್ ಪಕ್ಷ ಆಯುಧ ಕೆಳಗಿಟ್ಟು ಕುಳಿತರೆ, ಬಿಜೆಪಿ ಯಾಗಲಿ ಇತರ ಪ್ರತಿಪಕ್ಷಗಳಾಗಲಿ ಕೈಗೆ ಸಿಕ್ಕ ಯಾವ ಅಸ್ತ್ರಗಳನ್ನೂ ಬಿಡಲಿಲ್ಲ. ಮತ್ತೊಂದು, ಕಳೆದ 5 ವರ್ಷಗಳಲ್ಲಿ ಯುಪಿಎ ಸರಕಾ ರ ಲ್ಲಿ ನಡೆದಿರುವ ಹಲವು ಬೆಳವಣಿಗೆಗಳು ಬಿಜೆಪಿಯನ್ನು ಪ್ರಶ್ನಿ ಸಲು ಬೇಕಿದ್ದ ನೈತಿಕತೆಯನ್ನೂ ಮತ್ತು ಧೈರ್ಯವನ್ನೂ ನಾಶ ಮಾಡಿವೆ. ಭ್ರಷ್ಟಾಚಾರದ ಪ್ರಶ್ನೆಗಳನ್ನು ಎತ್ತಿದಾಗಲೆಲ್ಲ ಅದಕ್ಕೆ ಉತ್ತರಿ ಸಲಾಗದೆ ಪಲಾಯನಗೈಯುವ ಸ್ಥಿತಿ ಕಾಂಗ್ರೆಸ್ ನಾಯಕ ರದು. ತಮ್ಮ ರಾಜ್ಯದಲ್ಲಿ ಲೋಕಾಯುಕ್ತರನ್ನೇ ನೇಮಿಸದ ಆರೋಪ ನರೇಂದ್ರ ಮೋದಿ ಅವರ ಮೇಲಿದ್ದರೂ ಅದರ ಗಾಂಭೀರ್ಯ 2ಜಿ, ಕಲ್ಲಿದ್ದಲು ಹಗರಣಗಳ ಗದ್ದಲದಲ್ಲಿ ಕಳೆದು ಹೋಯಿತು. ಆದರೆ, ಈಗ ತಾನೇ ಹುಟ್ಟಿಕೊಂಡಿರುವ ಆಮ್ ಆದ್ಮಿ ಪಾರ್ಟಿಗೆ ಇಂತಹ ಆತಂಕಗಳಿಲ್ಲ. ಜಾತ್ಯತೀತೆಗಿಂತ ಭ್ರಷ್ಟಾ ಚಾರ ವಿರೋಧಿ ಹೋರಾಟದ ಬುನಾದಿಯ ಮೇಲೆ ಎದ್ದ ಪಕ್ಷಕ್ಕೆ ಈಗ ಜಾತ್ಯತೀತತೆಯ ಮಹತ್ವವೂ ತಿಳಿಯುತ್ತಿದೆ, ಆದರೆ, ಇವು ಗಳಷ್ಟೇ ಮತ ತರುವ ಸಾಧನಗಳಲ್ಲ ಎನ್ನುವ ಸತ್ಯವೂ ತಿಳಿದಿದೆ. ಇದಕ್ಕಾಗಿ ಕಾಂಗ್ರೆಸ್‌ಗಿಂತ ಎರಡು ಹೆಜ್ಜೆ ಮುಂದೆ ನುಗ್ಗಿ ಮೋದಿ ಅವರನ್ನು ಅವರ ನಾಡಲ್ಲೇ ಎದುರಿಸಿ, ಮೋದಿ ವಿರುದ್ಧ ನಿಂತ ಮತದಾರರನ್ನು ತನ್ನ ಬೆನ್ನಿಗೆ ಎಳೆದುಕೊಳ್ಳುವುದು ಅದರ ತಂತ್ರ. ಕೇಜ್ರಿವಾಲ್ ಅವರ ಈ ತಂತ್ರಕ್ಕೆ ಬಿಜೆಪಿ ಬೆಚ್ಚಿ ಬಿದ್ದರೆ, ಕಾಂಗ್ರೆಸ್ ಬೆಕ್ಕಸ ಬೆರಗಾಗಿದೆ ತನ್ನ ಕೈಯಲ್ಲಾಗದ ಸಾಹಸವನ್ನು ಮತ್ತೊಬ್ಬ ಮಾಡಿದಾಗ ಆಗುವ ಅಸೂಯೆ ಮಿಶ್ರಿತ ಮೆಚ್ಚುಗೆ ಅದರಲ್ಲಿದೆ. ಆದರೆ, ಕೇಜ್ರಿವಾಲ್ ಸಾಹಸಗಳು ಫಲ ಕೊಡುತ್ತ ವೆಯೆ ಎನ್ನುವು ದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಈ ನಡುವೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಗುಜ ರಾತ್ ವಿಶ್ವವಿದ್ಯಾಲ ಯದ ವಿದ್ಯಾರ್ಥಿ ಸಂಘದ ಚುನಾವಣೆ ಯಲ್ಲಿ ಭರ್ಜರಿಯಾಗಿ ಗೆದ್ದಿದೆ. ಇದು ಲೋಕಸಭೆಯಲ್ಲಿನ ಗೆಲುವೇನೋ ಎನ್ನುವಂತೆ ಬೀಗು ತ್ತಿದೆ. ಚುನಾವಣೆಗೆ ಉಳಿದಿರುವ ಅವಧಿಯನ್ನು ಆ ಪಕ್ಷ ಈ ಗೆಲುವಿನ ಭ್ರಮೆಯಲ್ಲಿಯೇ ಕಳೆವ ಸಾಧ್ಯತೆಯೂ ಇದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...