Thursday, March 13, 2014

ಗಿಬ್ರಾನ್ ಕಥೆಗಳು : ಕಪ್ಪೆಗಳು ಮತ್ತು ಕಾನೂನು


 


ಖಲೀಲ ಗಿಬ್ರಾನ್

ಅನು : ಡಾ ಎಚ್ ಎಸ್ ಅನುಪಮಾ
ಕಪ್ಪೆಗಳು

ಒಂದು ಬೇಸಿಗೆಯ ರಾತ್ರಿ, ಕಪ್ಪೆಯೊಂದು ತನ್ನ ಸಂಗಾತಿಗೆ ಹೇಳಿತು: ‘ಆ ಜನ, ತೀರದಲ್ಲಿ ಬದುಕುವವರು, ನಮ್ಮ ಇರುಳ ಹಾಡುಗಳಿಂದ ತೊಂದರೆಗೊಳಗಾಗುತ್ತಾರೇನೋ ಅನಿಸುತ್ತಿದೆ.’

ಸಂಗಾತಿ ಉತ್ತರಿಸಿತು: ‘ಇರಬಹುದು, ಆದರೆ ಹಗಲು ಹೊತ್ತು ತಮ್ಮ ಮಾತುಗಳಿಂದ ಅವರು ನಮ್ಮ ಮೌನ ಹಾಳುಮಾಡುವುದಿಲ್ಲವೆ?’

ಕಪ್ಪೆ ಹೇಳಿತು: ‘ಮರೆಯಬೇಡ, ನಾವು ರಾತ್ರಿ ಅತಿಯೆನಿಸುವಷ್ಟು ಹಾಡುತ್ತೇವೆ.’

ಸಂಗಾತಿ ಉತ್ತರಿಸಿತು, ‘ಹಗಲು ಹೊತ್ತು ಅವರು ಅತಿಯೆನಿಸುವಷ್ಟು ಹರಟೆ ಹೊಡೆಯುತ್ತಾರೆ, ಕಿರುಚುತ್ತಾರೆ ಎನ್ನುವುದನ್ನೂ ನಾವು ಮರೆಯದಿರೋಣ.’

ಕಪ್ಪಯೆಂದಿತು, ‘ಆ ಮಂಡರಗಪ್ಪೆ ಬಗ್ಗೆ ಏನು ಹೇಳುತ್ತೀ, ಸುತ್ತಮುತ್ತಲ ಇಡೀ ಪ್ರದೇಶವನ್ನೇ ತನ್ನ ಗೊಗ್ಗರು ಮಂಡ ದನಿಯಲ್ಲಿ ಕಲಕಿಬಿಡುವುದಲ್ಲ?’

ಅದರ ಸಂಗಾತಿ ಹೇಳಿತು: ‘ಏ, ಸುಮ್ಮನಿರು, ಆ ರಾಜಕಾರಣಿ, ವಿಜ್ಞಾನಿ ಮತ್ತು ಪೂಜಾರಿ ತೀರಕ್ಕೆ ಬಂದು ಗದ್ದಲದ, ಲಯವಿಲ್ಲದ ತಮ್ಮ ಮಾತುಗಳಿಂದ ವಾತಾವರಣವನ್ನೇ ಕೆಡಿಸುವುದಿಲ್ಲವೆ?’

ಕಪ್ಪೆ ಹೇಳಿತು, ‘ಸರಿ, ನಾವು ಈ ಮನುಷ್ಯರಿಗಿಂತ ಉತ್ತಮರಾಗೋಣ. ರಾತ್ರಿ ಹೊತ್ತು ಶಾಂತವಾಗಿರೋಣ. ಚಂದ್ರ ನಮ್ಮ ಲಯಕ್ಕೆ, ತಾರೆಗಳು ನಮ್ಮ ದನಿಯ ಮಾಧುರ್ಯಕ್ಕೆ ಹೆಜ್ಜೆ ಹಾಕಲು ಬಯಸಿದರೂ ಹಾಡುಗಳನ್ನು ನಮ್ಮೆದೆಯಲ್ಲೇ ಇಟ್ಟುಕೊಳ್ಳೋಣ. ಕೊನೆ ಪಕ್ಷ ಒಂದೆರೆಡು, ಅಥವಾ ಮೂರು ರಾತ್ರಿಗಳ ಮಟ್ಟಿಗಾದರೂ ಮೌನವಾಗಿರೋಣ.’

ಅದರ ಸಂಗಾತಿ ಹೇಳಿತು: ‘ಒಳ್ಳೆಯದು, ಒಪ್ಪಿದೆ. ನಿನ್ನ ಉದಾರ ಹೃದಯದ ಆಲೋಚನೆಯು ಏನನ್ನು ಹೊತ್ತು ತರುವುದೋ ನೋಡೇಬಿಡೋಣ.’

ಆ ರಾತ್ರಿ ಕಪ್ಪೆಗಳು ಮೌನವಾಗಿದ್ದವು. ಮರು ರಾತ್ರಿಯೂ ಮೌನವಾಗಿದ್ದವು. ಮೂರನೆಯ ರಾತ್ರಿಯೂ ಮೌನವಾಗಿದ್ದವು. 

ಈ ಸಂಗತಿಗಳನ್ನು ಒಂದಕ್ಕೊಂದು ತಳುಕುಹಾಕುವುದು ಕಷ್ಟ, ಆದರೆ ಆ ಕೊಳದ ತೀರದಲ್ಲಿ ವಾಸಿಸಿದ್ದ ಗಯ್ಯಾಳಿ ಹೆಂಗಸು ಮೂರನೇ ರಾತ್ರಿಯ ನಂತರ ಬೆಳಗಿನ ತಿಂಡಿ ತಿನ್ನುವಾಗ ತನ್ನ ಗಂಡನಿಗೆ ಕೂಗಿ ಹೇಳಿದಳು: ‘ಮೂರು ರಾತ್ರಿಯಾಯಿತು ಗೊತ್ತೆ? ನಾನು ನಿದ್ದೆ ಮಾಡಲಿಲ್ಲ. ಕಪ್ಪೆಗಳ ವಟಗುಡುವಿಕೆ ಕಿವಿ ತುಂಬಿದರೆ ನಾನು ಸುರಕ್ಷಿತ ಎನಿಸುತ್ತಿತ್ತು. ಆದರೆ ಹಾಳಾದವಕ್ಕೆ ಏನಾಯಿತೋ, ಮೂರು ರಾತ್ರಿಯಾಯಿತು, ಸದ್ದೇ ಇಲ್ಲ. ನಿದ್ದೆಯಿಲ್ಲದೆ ಹೆಚ್ಚುಕಮ್ಮಿ ಹುಚ್ಚು ಹಿಡಿದ ಹಾಗಾಗಿದೆ.’

ಕಪ್ಪೆ ತನ್ನ ಸಂಗಾತಿಯೆಡೆಗೆ ತಿರುಗಿ ಕಣ್ಣು ಮಿಟುಕಿಸಿ ಹೇಳಿತು: ‘ನಾವೂ ಮೂರು ರಾತ್ರಿಗಳಿಂದ ಮೌನದಿಂದಿದ್ದು ಹೆಚ್ಚುಕಮ್ಮಿ ಹುಚ್ಚರಾದೆವು, ಅಲ್ಲವೇ?’

ಸಂಗಾತಿಯೆಂದಿತು: ‘ರಾತ್ರಿಯ ಮೌನ ಭಾರವಾಗಿ ಎದೆಮೇಲೆ ಹೇರಿದಂತಿತ್ತು. ನನಗೀಗ ಅನಿಸುತ್ತಿದೆ, ತಮ್ಮ ಖಾಲಿತನವನ್ನು ಸದ್ದುಗಳಿಂದ ತುಂಬಿಕೊಳ್ಳಬೇಕಾದವರ ಸಲುವಾಗಿ ನಾವು ಹಾಡದೇ, ಸದ್ದು ಮಾಡದೇ ಇರುವ ಅವಶ್ಯಕತೆ ಇಲ್ಲ..’

ಅಂದು ರಾತ್ರಿ ಚಂದ್ರ ಬಂದಿದ್ದು ವ್ಯರ್ಥವಾಗಲಿಲ್ಲ, ಕಪ್ಪೆಗಳ ಹಾಡಿನ ಲಯಕ್ಕೆ ಹೆಕ್ಕೆ ಹಾಕಿದ. ತಾರೆ ಮೂಡಿದ್ದು ವ್ಯರ್ಥವಾಗಲಿಲ್ಲ, ದನಿಯ ಮಾಧುರ್ಯಕ್ಕೆ ಮನಸೋತ.

(ದಿ ವಾಂಡರರ್)


ಕಾನೂನು

ಕಾನೂನುಗಳ ಕುರಿತು ನಿನಗೇನನಿಸುತ್ತದೆ? ನ್ಯಾಯವಾದಿ ಕೇಳಿದ.

ಅವ ಉತ್ತರಿಸಿದ,
ಕಾನೂನು ನಿಯಮಗಳ ರೂಪಿಸುವುದರಲ್ಲೇ ನಿನಗೆ ಆನಂದ. 
ರೂಪಿಸಿದ್ದು ಮುರಿಯುವುದು ಮಹದಾನಂದ. 
ಕಡಲದಂಡೆಯಲ್ಲಿ ಮರಳಿನ ಮನೆ ಕಟ್ಟುವ ಮಗುವಿನ ಹಾಗೆ, ನಗುನಗುತ್ತ ನಿರಂತರ ಕಟ್ಟುತ್ತೀ, ಕೆಡವುತ್ತೀ.
ಮರಳಿನಲ್ಲಿ ನೀನು ಮನೆ ಕಟ್ಟತೊಡಗಿದ ಹಾಗೆ ಕಡಲು ಇನ್ನಷ್ಟು ಮರಳರಾಶಿಯ ತೀರದಲ್ಲಿ ಪೇರಿಸುತ್ತದೆ. 
ನಿನ್ನ ಮರಳ ಮನೆ ಕುಸಿದಾಗ ಕಡಲು ಗಹಗಹಿಸಿ ನಗುತ್ತದೆ.
ನೆನಪಿಡು, ಕಡಲು ಎಂದಿಗೂ ಮುಗ್ಧರ ಜೊತೆಗೇ ನಗುತ್ತದೆ.

ಆದರೆ ಬದುಕು ಕಡಲಿನಂತೆ ಇಲ್ಲದವರ ಬಗೆಗೆ, ಮನುಷ್ಯ ನಿರ್ಮಿತ ಕಾನೂನು ಮರಳಿನ ಮನೆ ಅಲ್ಲದವರ ಕುರಿತು ಏನು ಹೇಳುತ್ತೀ?
ಬದುಕು ಕಲ್ಲುಬಂಡೆಯ ಹಾಗಿರುವವರಿಗೆ ಕಾನೂನು ಉಳಿಯಂತೆ ಕೆಲಸ ಮಾಡಬೇಕಾಗುತ್ತದೆ.
ನರ್ತಿಸುವವರ ದ್ವೇಷಿಸುವ ಅಂಗವಿಕಲನ ಕುರಿತು ಏನು ಹೇಳುತ್ತೀ?
ತನ್ನ ನೇಗಿಲ ನೊಗವ ಪ್ರೀತಿಸುವ, ಕಾಡಿನ ಕಡವೆಜಿಂಕೆಗಳು ಅಲೆಮಾರಿ, ದಿಕ್ಕಿಲ್ಲದವರು ಎನ್ನುವ ಎತ್ತಿನ ಕುರಿತು ಏನು ಹೇಳುತ್ತೀ? 
ತನ್ನ ಪೊರೆ ಕಳಚಲಾರದ ಹಳೆಯ ಹಾವು ಉಳಿದವರನ್ನು ನಗ್ನ, ನಾಚಿಕೆಗೆಟ್ಟವರು ಎಂದು ಕರೆಯುವ ಬಗ್ಗೆ ಏನು ಹೇಳುತ್ತೀ?
ಎಲ್ಲರಿಗಿಂತ ಮೊದಲೇ ಮದುವೆಗೆ ಬಂದು, ಹೊಟ್ಟೆಬಿರಿ ಔತಣ ಉಂಡು, ವಾಪಸು ಮರಳುವಾಗ ‘ಎಲ್ಲ ಔತಣಗಳೂ ಅಪರಾಧ; ಔತಣ ಹಾಕಿಸುವವರು ಕಾನೂನು ಭಂಜಕರು’ ಎನ್ನುವವರ ಬಗ್ಗೆ ಏನು ಹೇಳುತ್ತೀ?

ಇಂಥವರ ಬಗೆಗೆ ಏನು ಹೇಳಲಿ, ಅವರೂ ಬಿಸಿಲಿನಲ್ಲಿ ನಿಂತಿದ್ದಾರೆ ಆದರೆ ಸೂರ್ಯನಿಗೆ ಬೆನ್ನು ತಿರುಗಿಸಿದ್ದಾರೆ ಎನ್ನುವುದರ ಹೊರತು?
ಅವರು ನೆರಳನಷ್ಟೇ ನೋಡುತ್ತಾರೆ, ತಮ್ಮ ನೆರಳೇ ತಮ್ಮ ಕಾನೂನುಗಳು ಎನ್ನುತ್ತಾರೆ.
ಅವರಿಗೆ ಸೂರ್ಯನೆಂದರೆ ನೆರಳು ಬೀಳುವಂತೆ ಮಾಡುವವ ಅಷ್ಟೇ, ಹೆಚ್ಚೇನೂ ಅಲ್ಲ. 
ಕಾನೂನುಗಳ ಒಪ್ಪಿ ನಡೆಯುವುದೆಂದರೆ ಬೆನ್ನು ಬಾಗಿಸಿ ನೆಲದ ಮೇಲಿರುವ ತಮ್ಮ ನೆರಳುಗಳ ಹುಡುಕುವುದು ಎಂದೇ ಅಲ್ಲವೆ?
ಆದರೆ ಸೂರ್ಯನಿಗೆದುರಾಗಿ ನಡೆ. ನೆಲದ ಮೇಲಿನ ಯಾವ ಆಕಾರ ನಿನ್ನ ಹಿಡಿದಿಡಬಲ್ಲದು? 
ಗಾಳಿಯ ಜೊತೆ ಪಯಣಿಸುವವನಿಗೆ ಯಾವ ದಿಕ್ಸೂಚಿ ಹಾದಿಯ ದಿಕ್ಕು ಸೂಚಿಸಬಲ್ಲದು?
ನಿನ್ನ ನೊಗ ಕಿತ್ತೆಸೆದು ಹೊರಡು, ಬಾಗಿಲಿಲ್ಲದ ಯಾವ ಸೆರೆಮನೆಯ ಕಾನೂನು ನಿನ್ನ ಕಟ್ಟಿಹಾಕಬಲ್ಲದು?
ಕಾಲು ತೊಡರಿಸುವ ಉಕ್ಕಿನ ಸರಪಳಿಗಳ ಎಡವದೇ ಅದರೊಡನೇ ನರ್ತಿಸು, ಯಾವ ಕಾನೂನು ನಿನ್ನ ಹೆದರಿಸಬಲ್ಲದು?
ಬಟ್ಟೆ ಕಿತ್ತೆಸೆದು ದಾರಿಯಲ್ಲದ ದಾರಿಯಲ್ಲಿ ನಡೆ, ಯಾರು ನಿನ್ನ ನ್ಯಾಯಾಸ್ಥಾನಕ್ಕೆ ಎಳೆದೊಯ್ಯಬಲ್ಲರು?
ನನ್ನ ಜನರೇ, ತಮಟೆಯ ಸದ್ದು ಗೊಗ್ಗರುಗೊಳಿಸಬಹುದು, ವೀಣೆಯ ತಂತಿಗಳ ಸಡಿಲಗೊಳಿಸಬಹುದು. ಆದರೆ ಅಂಬರಗುಬ್ಬಿ ಹಾಡುವುದ ಯಾರು ತಡೆಯಬಹುದು? 

(ಪ್ರವಾದಿ)

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...