Tuesday, April 29, 2014

ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು

ಶಶಿ ಪುತ್ತೂರು


ಗೋಮಾತೆಯ ಪರ ಎಂಬಂತೆ ಪೋಸುಕೊಟ್ಟುಕೊಂಡಿದ್ದ ಗುಂಪೊಂದು ಖಾವಿಧಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಬಳಿ ಬಂದಿತ್ತು. ಈ ಸೋಗಲಾಡಿ ಗುಂಪನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರು ‘‘ಮೊದಲು ನಿಮ್ಮ ಸುತ್ತಮುತ್ತಲೇ ಇರುವ ಶೋಷಿತರ, ಉಡಲು ಬಟ್ಟೆ, ಹೊತ್ತು ಊಟಕ್ಕೂ ಗತಿ ಇಲ್ಲದ ದಟ್ಟದರಿದ್ರರ ಬಗ್ಗೆ ಯೋಚಿಸಿ ನಂತರ ಈ ನಿಮ್ಮ ಗೋಮಾತೆ ಬಗ್ಗೆ ಯೋಚಿಸುವಿರಂತೆ ಎಂದು ಉಗಿದು ಅಟ್ಟಿದ್ದರಂತೆ. ಈ ಭೂಮಿ ಮಾನವನೊಬ್ಬನಿಗೇ ಸೇರಿದ್ದಲ್ಲ. ಎಲ್ಲಾ ಪ್ರಾಣಿಗಳಿಗೂ ಇಲ್ಲಿ ಜೀವಿಸುವ ಹಕ್ಕಿದ್ದೇ ಇದೆ. ಗೋವನ್ನು ಸೇರಿ ನಾಯಿ ಬೆಕ್ಕು ಕತ್ತೆ ಗುಬ್ಬಚ್ಚಿಗಳ ನೋವಿಗೂ ಸ್ಪಂದಿಸಬೇಕಾದುದು ಎಲ್ಲರ ಧರ್ಮ. ಆದರೆ ಈ ಭಾವನೆ ಸ್ವಯಂಸ್ಫೂರ್ತಿಯಿಂದ ಬರಬೇಕೇ ವಿನಹ ಯಾವುದೋ ಪೂರ್ವಾಗ್ರಹಪೀಡಿತ ಸಿದ್ಧಾಂತದ ಹಿನ್ನೆಲೆಯಿಂದಲ್ಲ.

ಧರ್ಮವಂತರ ಪ್ರಕಾರ ಕಪ್ಪೆಯಂತಹ ಸಹಜ ಆಹಾರಕ್ಕೇ ರಕ್ಷಣೆ ಕೊಟ್ಟ ದಯಾಮಯಿ ಸರ್ಪವಿರುವ ನಾಡು ಶೃಂಗೇರಿ. ಆದರೀಗ ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲದಂತಾಗಿರುವುದು ವಿಚಿತ್ರ. ಇಲ್ಲೀಗ ಧರ್ಮದ ಅಮಲನ್ನು ಹತ್ತಿಸಿಕೊಂಡ ವ್ಯಕ್ತಿಗಳು ಮನುಷ್ಯನೊಬ್ಬನ ಸಾವನ್ನೇ ಸಂಭ್ರಮದ ವಿಚಾರವನ್ನಾಗಿಸಿಕೊಂಡಿರುವುದು ತಮಾಷೆಯಾಗಿದೆ.
ಮಂಗಳೂರಿನಲ್ಲಿ ಸ್ವಾಮಿಯೊಬ್ಬರು ನ್ಯಾಯಾನ್ಯಾಯವನ್ನು ವಿಶ್ಲೇಷಿಸದೇ ಕೊಂದ ವ್ಯಕ್ತಿಗೆ 1ಲಕ್ಷ ರೂ. ಬಹುಮಾನವನ್ನೂ ಕೂಡ ಘೋಷಿಸುತ್ತ್ತಾರೆಂದರೆ ಮನುಷ್ಯ ಜೀವ ಈ ಮಟ್ಟಿಗೆ ಅಗ್ಗವೆನಿಸಿದ್ದರ ಹಿನ್ನೆಲೆಯಾದರೂ ಏನು? ಶೃಂಗೇರಿಯಲ್ಲಿ ಘಟಿಸಿದ ಅನುಮಾನಾಸ್ಪದ ಕೊಲೆಯ ವಿಚಾರ ಚರ್ಚಿಸುತ್ತಿದ್ದ ಕೋಮು ಸೌಹಾರ್ದ ವೇದಿಕೆಯ ಮುಖಂಡರಾದ ಶ್ರೀಯುತ ಸುರೇಶ್ ಭಟ್ಟರ ಮೇಲೆ ಇಂತಹ ಪೂರ್ವಾಗ್ರಹ ಪೀಡಿತ ಧರ್ಮದ ಅಮಲುಕೋರನೊಬ್ಬ ದಾಳಿ ನಡೆಸಿದ್ದು ಅತ್ಯಂತ ಖಂಡನೀಯ ವಿಚಾರ.

ಇತ್ತೀಚೆಗೆ ಉಡುಪಿಯ ಕೋಡಿಬೆಂಗ್ರೆಯಲ್ಲಿ ಎರಡು ದಿನದ ಕಾರ್ಯಾಗಾರವೊಂದು ನಡೆದಿತ್ತು. ಅಲ್ಲಿ ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ನಗರಿ ಬಾಬಯ್ಯನವರು ಕಾರ್ಯಕ್ರಮದ ಕೊನೆಯಲ್ಲಿ ಶ್ರೀಯುತ ಸುರೇಶ್ ಭಟ್ಟರ ಬಗ್ಗೆ ಮಾತಾಡುತ್ತಾ, ಸುರೇಶ್ ಭಟ್ ಬಾಕ್ರಬೈಲು ಒನ್ ಮ್ಯಾನ್ ಆರ್ಮಿ ಇದ್ದಂತೆ ಎಂದಿದ್ದರು. ಹೌದು ಕರಾವಳಿಯಲ್ಲಿ ಚಿಗಿತು ಇಲ್ಲಿನ ಸಹಜ ಸೌಹಾರ್ದಕ್ಕೆ ಕೊಳ್ಳಿ ಇಡುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಇವರ ಹೋರಾಟ ನಿರಂತರ.

 
ಹೇಳಿ ಕೇಳಿ ಇವರು ಉಗ್ರ ಭಾಷಣಕಾರರಲ್ಲ. ನೋಡಿದರೆ ಎದೆ ಝಲ್ಲೆನಿಸುವ ದೇಹದಾರ್ಢ್ಯವೂ ಇವರದ್ದಲ್ಲ. ಕೃಶ ಶರೀರದ ವಯೋವೃದ್ಧರಾದ ಮೃದುಮಾತಿನ ಸರಳ ಸಜ್ಜನರಷ್ಟೆ. ಮೌಢ್ಯ ಮೂಲದ ಸಾಮಾಜಿಕ ಅನಿಷ್ಟಗಳ, ತಾರತಮ್ಯಗಳ ವಿರುದ್ಧ ಧನಿ ಎತ್ತಿದವರಿಗೆ ಬೆದರಿಕೆಗಳು ಇದ್ದದ್ದೇ. ಅಂಥಾ ಸಜ್ಜನ ದಾಬೋಲ್ಕರರನ್ನೇ ಕೊಲ್ಲಿಸಿ ಸಂಭ್ರಮಿಸಲಾಯ್ತು. ಅದೇ ರೀತಿ ವಯೋವೃದ್ಧರೆಂಬುದನ್ನೂ ಮರೆತು ಸುರೇಶ್ ಭಟ್ಟರ ಮೇಲೆ ಪುಂಡನೊಬ್ಬನನ್ನು ಛೂ ಬಿಟ್ಟು ಹಲ್ಲೆಮಾಡಲಾಗಿದೆ. ಇದೆಲ್ಲ ಯಾವ ಧರ್ಮ ಸಂಸ್ಕೃತಿಗಳು ಹೇಳುತ್ತವೆಯೋ ದೇವರೇ ಹೇಳಬೇಕು. 

ವಿವೇಕಾನಂದರು ಉಗಿದದ್ದು ಇಂಥಾ ಸೋಗಲಾಡಿಗಳಿಗೇ.. ಕರಾವಳಿ ಜಿಲ್ಲೆ ಮತಾಂಧ ಶಕ್ತಿಗಳ ಆಡಂಬೋಲವಾಗು ತ್ತಿದ್ದರೂ ಅವರ ಹುಚ್ಚಾಟಗಳಿಗೆ ತಡೆಯೊಡ್ಡಲು ಇಲ್ಲೇ ಅನೇಕ ವ್ಯಕ್ತಿಗಳು ಅಪಾಯವನ್ನೂ ಲೆಕ್ಕಿಸದೇ ಹೋರಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಬೆತ್ತಲೆ ಪ್ರಕರಣ ನಡೆದಾಗ ಎಂಥದಕ್ಕೂ ರೆಡಿ ಇರುವ ಒರಟು ಮತಾಂಧರ ಕೀಳು ಕೊಳಕು ಬಹಿರಂಗ ಬೈಗುಳಗಳನ್ನು ಎದುರಿಸಿ ಜಿ. ರಾಜಶೇಖರ್‌ರಂಥವರು ಹೋರಾಡಿದ್ದರು.

ದಿವಂಗತ ಕೆ. ಜೆ. ಶೆಟ್ಟಿ ಕಡಂದಲೆ, ದಿವಂಗತ ಬಿ.ವಿ. ಕಕ್ಕಿಲ್ಲಾಯ ರಂತಹ ವೃದ್ಧ ಜೀವಗಳು ಕೊನೆಗಾಲದವರೆಗೂ ಇಂಥವರ ವಿರುದ್ಧ ದನಿ ಎತ್ತಿದ್ದರು. ಇದೇ ಕರಾವಳಿಯಲ್ಲಿ ಸ್ವಲ್ಪಇನ್ನೂ ಹಿಂದಕ್ಕೆ ಹೋದರೆ ಸಮಾಜವನ್ನು ಎದುರು ಹಾಕಿಕೊಂಡು ಶೋಷಿತರ ಪರ ಹೋರಾಟ ನಡೆಸಿದ ಮಂಗಳೂರಿನ ಕುದ್ಮುಲ್ ರಂಗರಾಯರಿಗೂ ಇಂಥದ್ದೇ ಕಾರಣಕ್ಕಾಗಿ ಸಗಣಿ ಸೇವೆಯಾಗಿತ್ತಲ್ಲದೆ ಮಾನವ ಮಲದ ಸಹವಾಸವನ್ನೂ ಕೂಡ ಅವರು ಅನುಭವಿಸಿದ್ದರು (ಅವರ ಕೊರಗರ ಮಕ್ಕಳ ಶಾಲೆಯ ಬೀಗಕ್ಕೆ ಮಲವನ್ನು ಮೆತ್ತಿ ಅವರನ್ನು ವಿಚಲಿತಗೊಳಿಸಲು ನೋಡಿದ್ದರು) ಕೆಲ ಸಮಯದ ಹಿಂದೆ ಪ್ರಗತಿ ಪರ ಚಿಂತಕ ಪಟ್ಟಾಭಿರಾಮ ಸೋಮಯಾಜಿಯವರ ಮೇಲೂ ಇಂಥಾದ್ದೇ ಸಗಣಿ ದಾಳಿ ನಡೆದಿತ್ತು. ಈಗದು ಸುರೇಶ್ ಭಟ್ಟರ ಸರದಿ.

ಮೋದಿ ಮೇನಿಯಾದ ಕಬಂಧ ಬಾಹು ಇದೀಗ ಎಲ್ಲೆಡೆ ಹಬ್ಬಿದೆ. ಮೋದಿಯ ವಿಜೃಂಭಣೆಗಾಗಿ ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದೆ. ಮೋದಿಯನ್ನು ಟೀಕಿಸುವವರ ಮೇಲೆ ದಾಳಿಗಳ ಮೇಲೆ ದಾಳಿಗಳಾಗುತ್ತಿದೆ, ಆಮ್ ಆದ್ಮಿ ನಾಯಕ ಕೇಜ್ರಿವಾಲರಂಥವರ ಮೇಲೆಯೇ ಮೋದಿ ಚೇಲಾಗಳು ಬಹಿರಂಗವಾಗಿ ದೈಹಿಕ ದಾಳಿ ನಡೆಸುತ್ತಿರುವಾಗ ಉಳಿದವರ ಪಾಡೇನು? ಕರ್ನಾಟಕದಲ್ಲಿ ಮೋದಿ ವಿರುದ್ಧ ಬಹಿರಂಗವಾಗಿ ಧನಿ ಎತ್ತಿದವರಲ್ಲಿ ಸುರೇಶ್ ಭಟ್ಟರು ಅತ್ಯಂತ ಪ್ರಮುಖರು.
ದಾವಣಗೆರೆಯಲ್ಲಿ ಇವರ ‘ಮೋದಿ- ಮಂಕು ಬೂದಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಅಲ್ಲಿ ಭಾಗವಹಿಸಿದ್ದ ಯೋಗೇಶ್ ಮಾಸ್ಟರ್ ಮೇಲೆ ಯಾವುದೋ ನೆಪದಲ್ಲಿ (ನಾವೆಲ್ಲವನ್ನೂ ಗಮನಿಸುತ್ತಿದ್ದೇವೆ ಹುಷಾರ್ ಎಂದು ಸೂಚಿಸಲು) ದಾಳಿ ಮಾಡಲಾಗಿತ್ತು. ಕಬೀರ್ ಕೊಲೆ ವಿಚಾರದ ನೆಪದಲ್ಲಿ ಸುರೇಶ್ ಭಟ್ಟರ ಮೇಲೆ ದಾಳಿ ನಡೆದಿದ್ದರೂ ದಾಳಿಗೆ ಅದೊಂದೇ ಕಾರಣ ಇದ್ದಿರಲಾರದು. 

ಈ ಕುಮ್ಮಕ್ಕಿನ ಹಿಂದೆ ಅನೇಕರ ಕೈವಾಡ ಇರುವ ಸಾಧ್ಯತೆಯೇ ಹೆಚ್ಚಿದೆ. ಹಿಂದುತ್ವವಾದಿಗಳ ಮಾನವ ವಿರೋಧಿ ಮಸಲತ್ತುಗಳನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುವ, ಜನಪರ ಹೋರಾಟಕ್ಕೆ ಜೀವತುಂಬುವ ಸುರೇಶ್ ಭಟ್ಟರ ಸ್ಥೈರ್ಯವನ್ನು ಕುಗ್ಗಿಸುವ ಸಲುವಾಗಿ ಇಂತಹ ದಾಳಿಯನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಆದರೆ ಈ ವಯೋವೃದ್ಧರ ಮೇಲೆ ನಡೆಸಲಾದ ದಾಳಿ ಧರ್ಮರಕ್ಷಕ(?)ರ ಅಸಲೀಯತ್ತನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಬೆತ್ತಲುಗೊಳಿಸಿದ್ದನ್ನು ಬಿಟ್ಟರೆ ಬೇರೇನನ್ನು ಮಾಡಲಾಗಿಲ್ಲ ಎಂಬುದು ಹಗಲಿನಷ್ಟೇ ಸತ್ಯ.

Monday, April 28, 2014

ಒಂದಿಲ್ಲೊಂದು ತಗಾದೆಯ ತೊಗಾಡಿಯಾ


ಸುಭಾಷ್ ಹೂಗಾರ
ಸೌಜನ್ಯ : ವಿಜಯ ಕರ್ನಾಟಕ

ಜಾತಿ, ಧರ್ಮ, ದೇಶ, ಬಣ್ಣದ ಆಧಾರದ ಮೇಲೆ ಭೇದ ತೋರದೇ ಎಲ್ಲ ರೋಗಿಗಳನ್ನು ಸಮಾನವಾಗಿ ಪರಿಗಣಿಸಿ ಮಾನವೀಯತೆಯ ಆಧಾರದ ಮೇಲೆ ಚಿಕಿತ್ಸೆ ನೀಡುವ ಪ್ರತಿಜ್ಞೆಗೈದ ವೈದ್ಯರೊಬ್ಬರು, ತನ್ನ ವೃತ್ತಿ ಧರ್ಮವನ್ನು ಕಾಲಡಿ ಹಾಕಿ ತುಳಿದಾಡುತ್ತ ದಿನದ 24 ಗಂಟೆಯೂ ಕೋಮುದ್ವೇಷ ಹರಡುವುದನ್ನೇ ನಿಜವಾದ ಧರ್ಮವೆಂದು ನಂಬಿದರೆ ಹೇಗೆ? ಮುಸ್ಲಿಂ ಸಮುದಾಯದ ಗರ್ಭಿಣಿಯ ಹೆರಿಗೆ ಮಾಡಿಸಿದ ವೈದ್ಯನೊಬ್ಬನಿಗೆ, ಇಂಥ ಘೋರ ತಪ್ಪನ್ನು ಮತ್ತೆ ಮಾಡದಿರುವಂತೆ ಧಮಕಿ ಹಾಕಿದರೆ ಹೇಗೆ? ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆ ಹೊತ್ತ ವೈದ್ಯನೇ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಿದ ಆರೋಪಕ್ಕೆ ಪದೇ ಪದೇ ಗುರಿಯಾದರೆ ಹೇಗೆ?


ಹೀಗೆ ಮಾಡಬಾರದ್ದನ್ನು ಮಾಡಿದ ಆರೋಪಕ್ಕೆ ಗುರಿಯಾಗಿ ಈಗ ಮತ್ತೊಮ್ಮೆ ದೇಶಾದ್ಯಂತ ಸುದ್ದಿಯಾಗಿರುವ ವ್ಯಕ್ತಿ ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ‌್ಯಾಧ್ಯಕ್ಷ ಡಾ.ಪ್ರವೀಣ ತೊಗಾಡಿಯಾ. ಅಲ್ಪಸಂಖ್ಯಾತ ಮುಸಲ್ಮಾನರು, ಕ್ರಿಶ್ಚಿಯನ್ನರ ವಿರುದ್ಧ ಬಹುಸಂಖ್ಯಾತ ಹಿಂದೂಗಳನ್ನು ಪ್ರಚೋದಿಸುವಂಥ ಭಾಷಣಗಳಿಗಾಗಿ ಕುಖ್ಯಾತಿ ಹೊಂದಿರುವ ತೊಗಾಡಿಯಾ, ಕೆಲ ದಿನಗಳ ಹಿಂದೆ ಗುಜರಾತ್‌ನ ಭಾವನಗರದಲ್ಲಿ ಆಡಿರುವ ಪ್ರಚೋದನಕಾರಿ ಮಾತುಗಳು ಹುಟ್ಟಿಸಿರುವ ಆತಂಕದ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆದಿದೆ. ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಸಂಬಂಧ ತೊಗಾಡಿಯಾ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

''ಹಿಂದೂಗಳು ವಾಸಿಸುವ ಪ್ರದೇಶದಲ್ಲಿ ಮುಸ್ಲಿಮರು ಆಸ್ತಿ ಖರೀದಿಸಲು ಅವಕಾಶ ಕೊಡಬೇಡಿ. ಹಾಗೊಂದು ವೇಳೆ ಯಾರಾದರೂ ಖರೀದಿಸಿದ್ದರೆ ಕಲ್ಲು, ಟೈರ್, ಟೊಮೆಟೋಗಳನ್ನು ಎಸೆದು ಅವರನ್ನು ಅಲ್ಲಿಂದ ಓಡಿಸಿ. ಅಂಥ ಆಸ್ತಿಯನ್ನು ನಿಮ್ಮ ವಶಕ್ಕೆ ತೆಗೆದುಕೊಂಡು ಅಲ್ಲಿ ಬಜರಂಗದಳದ ಬೋರ್ಡ್ ಹಾಕಿ. ಆಮೇಲೆ ಕಾನೂನು ಸಮರ ವರ್ಷಗಟ್ಟಲೇ ನಡೆಯುತ್ತದೆ. ಹೆದರಬೇಡಿ, ನಿಮ್ಮನ್ಯಾರೂ ಗಲ್ಲಿಗೇರಿಸುವುದಿಲ್ಲ. ಖುದ್ದು ನಾನೇ ಈ ರೀತಿ ಹಿಂದೆ ಮಾಡಿದ್ದೇನೆ.''

ಭಾವನಗರದಲ್ಲಿ ಮುಸ್ಲಿಂ ಉದ್ಯಮಿಯೊಬ್ಬರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂಘ ಪರಿವಾರದ ಕಾರ‌್ಯಕರ್ತರನ್ನುದ್ದೇಶಿಸಿ ತೊಗಾಡಿಯಾ ಹೇಳಿದ ಈ ಮಾತುಗಳನ್ನು ಎಲ್ಲ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು, ಗಣ್ಯರು, ಸಾಮಾನ್ಯ ನಾಗರಿಕರು ಒಕ್ಕೊರಲಿನಿಂದ ಖಂಡಿಸಿದರೆ, ಭಾರತೀಯ ಜನತಾ ಪಾರ್ಟಿ ಮತ್ತು ಆರೆಸ್ಸೆಸ್ ನಾಯಕರು ತೊಗಾಡಿಯಾ ಬೆನ್ನಿಗೆ ನಿಂತಿದ್ದಾರೆ. ತೊಗಾಡಿಯಾರ ಮಾತುಗಳ ವೀಡಿಯೋ ಟೇಪ್ ಇದ್ದರೂ, ''ನಾವು ತೊಗಾಡಿಯಾ ಅವರ ಜತೆ ಮಾತನಾಡಿದ್ದೇವೆ. ಅವರು ಈ ರೀತಿ ಹೇಳಿಯೇ ಇಲ್ಲವಂತೆ. ತಮ್ಮ ಹೇಳಿಕೆಯನ್ನು ತಿರುಚಿ ಪ್ರಕಟಿಸಿದ್ದಕ್ಕಾಗಿ ತೊಗಾಡಿಯಾ ಅವರು ಈಗಾಗಲೇ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ನಾವು ನಂಬಿದ್ದೇವೆ'' ಎಂದು ಆರೆಸ್ಸೆಸ್‌ನ ರಾಮ್ ಮಾಧವ್ ಹೇಳಿದ್ದಾರೆ.

ತೊಗಾಡಿಯಾ ಪ್ರಚೋದನಕಾರಿ ಭಾಷಣ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷದ ಆಗಸ್ಟ್ ತಿಂಗಳವರೆಗೆ ದೇಶದಲ್ಲಿ ಅತಿ ಹೆಚ್ಚು ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಅಪಕೀರ್ತಿ ತೊಗಾಡಿಯಾರದ್ದು. ಕೇರಳದ ತಿರುವನಂತಪುರಂನಿಂದ ಜಮ್ಮುವರೆಗೆ ದೇಶದ ಉದ್ದಗಲಕ್ಕೂ 19 ಕ್ರಿಮಿನಲ್ ಮೊಕದ್ದಮೆಗಳು ತೊಗಾಡಿಯಾ ಅವರ ಮೇಲೆ ದಾಖಲಾಗಿವೆ.

ಹಿಂದೂ ಯುವಕರಿಗೆ ತ್ರಿಶೂಲ ವಿತರಿಸಿದ ಆರೋಪದ ಮೇಲೆ 2003ರಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ದಾಖಲಾದ ಮೊಕದ್ದಮೆ ಹೊರತುಪಡಿಸಿದರೆ, ಈ ಪೈಕಿ ಯಾವ ಪ್ರಕರಣವೂ ಈವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. ರಾಜಸ್ಥಾನದ ಆಗಿನ ಬಿಜೆಪಿ ಸರಕಾರ ತೊಗಾಡಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಅನುಮತಿ ನಿರಾಕರಿಸಿದ್ದರಿಂದ ಈ ಮೊಕದ್ದಮೆಯಲ್ಲಿ ನ್ಯಾಯಾಲಯ ತೊಗಾಡಿಯಾರನ್ನು ದೋಷಮುಕ್ತಗೊಳಿಸಿತ್ತು. ಪ್ರಚೋದನಕಾರಿ ಭಾಷಣಗಳ ವಿಚಾರದಲ್ಲಿ ತೊಗಾಡಿಯಾ ಅವರಿಗೆ ಪ್ರಬಲ ಪೈಪೋಟಿ ಒಡ್ಡಿರುವ ಮತ್ತೊಬ್ಬ ನಾಯಕರೆಂದರೆ ಎಐಎಂಐಎಂ ನಾಯಕ, ಹೈದರಾಬಾದ್‌ನ ಮಾಜಿ ಶಾಸಕ ಅಕ್ಬರುದ್ದೀನ್ ಓವೈಸಿ. ಹಿಂದೂಗಳು, ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಮುಸಲ್ಮಾನರನ್ನು ಎತ್ತಿಕಟ್ಟುವಂಥ ಪ್ರಚೋದನಕಾರಿ ಭಾಷಣ ಮಾಡಲು ಕುಖ್ಯಾತಿ ಹೊಂದಿರುವ ಅಕ್ಬರುದ್ದೀನ್, ''ಮುಂಬೈನಲ್ಲಿ 200 ಮುಗ್ಧ ಭಾರತೀಯರನ್ನು ಕೊಲೆಗೈದ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ಆಗುವುದಾದರೆ, ಗುಜರಾತ್‌ನಲ್ಲಿ 2000 ಮುಗ್ಧ ಭಾರತೀಯರನ್ನು ಕೊಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಏಕೆ ಗಲ್ಲು ಶಿಕ್ಷೆ ಆಗಬಾರದು,'' ಎಂದು ಇತ್ತೀಚೆಗೆ ಪ್ರಶ್ನಿಸಿ ದೊಡ್ಡ ವಿವಾದ ಸೃಷ್ಟಿಸಿದ್ದ. ಈತನ ವಿರುದ್ಧ ಆಂಧ್ರ ಪ್ರದೇಶದಲ್ಲೇ 11 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.

ಹಿನ್ನೆಲೆ
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಜೈನ್ ಸಮುದಾಯದ ಬಡರೈತ ಕುಟುಂಬದಲ್ಲಿ 1956ರಲ್ಲಿ ಜನಿಸಿದ ಪ್ರವೀಣ್ ತೊಗಾಡಿಯಾ, 8 ವರ್ಷದ ಬಾಲಕನಾಗಿದ್ದಾಗಲೇ ಡಾಕ್ಟರ್ ಆಗಬೇಕೆಂಬ ಅಭಿಲಾಷೆ ಹೊಂದಿದ್ದ ಮಹಾತ್ವಾಕಾಂಕ್ಷಿ. 10ನೇ ವಯಸ್ಸಿನಲ್ಲಿ ತನ್ನ ಹಳ್ಳಿ ಬಿಟ್ಟು ಅಹಮದಾಬಾದ್‌ನಂಥ ದೊಡ್ಡ ಊರಿಗೆ ಬಂದು ಅಲ್ಲಿನ ಸ್ಲಮ್‌ನ ಶೆಡ್‌ನಲ್ಲಿದ್ದು ಓದಲಾರಂಭಿಸಿದ. ಬಡತನದಿಂದ ಅಷ್ಟು ಚಿಕ್ಕ ಬಾಲಕನಾಗಿದ್ದಾಗಲೂ ಆ ಶೆಡ್‌ನಲ್ಲಿ ತಾನೇ ಅಡುಗೆ ಮಾಡಿಕೊಳ್ಳುತ್ತಿದ್ದ ಪ್ರವೀಣ, ಓದಿನಲ್ಲಿ ಮಾತ್ರ ಎಲ್ಲಿಲ್ಲದ ಶ್ರದ್ಧೆ ಹೊಂದಿದ್ದ. ಇತ್ತ ಹಳ್ಳಿಯಲ್ಲಿದ್ದ ತಾಯಿ ತಮ್ಮ ಸಣ್ಣ ಜಮೀನಿನಲ್ಲಿ ಕೃಷಿ ಮಾಡುವುದರ ಜತೆಗೆ ಹಾಲು ಮಾರುತ್ತ ಡಾಕ್ಟರ್ ಆಗಬೇಕೆಂಬ ಮಗನ ಕನಸಿಗೆ ನೀರು ಉಣಿಸುತ್ತಿದ್ದಳು. ಓದಿನಲ್ಲಿ ಪ್ರವೀಣ ತೊಗಾಡಿಯಾ ಹೊಂದಿದ್ದ ಆಸಕ್ತಿ, ಶ್ರದ್ಧೆಯನ್ನು ಗಮನಿಸಿ ಆತನನ್ನು ಪ್ರೋತ್ಸಾಹಿಸುತ್ತಿದ್ದ, ಆತನ ಬೇಕು ಬೇಡುಗಳಿಗೆ ಸ್ಪಂದಿಸುತ್ತಿದ್ದ ಆ ಶಾಲೆಯ ಪ್ರಾಂಶುಪಾಲರು ಆರೆಸ್ಸೆಸ್ ವಿಚಾರಧಾರೆಯ ವ್ಯಕ್ತಿಯಾಗಿದ್ದರು. ಬಾಲಕ ಪ್ರವೀಣನಿಗೆ ಓದಿನ ಜತೆಗೆ ಸಂಘದ ಪಾಠವನ್ನೂ ಬೋಧಿಸಲಾರಂಭಿಸಿದರು. ಪ್ರಾಂಶುಪಾಲರ ಒಡನಾಟದಿಂದ ಆರೆಸ್ಸೆಸ್ ಸಂಪರ್ಕಕ್ಕೆ ಬಂದ ತೊಗಾಡಿಯಾ ನೋಡ ನೋಡುತ್ತಿದ್ದಂತೆಯೇ ಅಹಮದಾಬಾದ್‌ನ ಸಂಘದ ಮುಖಂಡರ ಅಚ್ಚುಮೆಚ್ಚಿನ ಸ್ವಯಂಸೇವಕರಾದರು. ಪ್ರತಿದಿನ ಶಾಲಾ ಸಮಯ ಆರಂಭವಾಗುವ ಮೊದಲು ಮತ್ತು ನಂತರದ ಬಹುತೇಕ ಸಮಯ ಸಂಘದ ಶಾಖೆಗಳಲ್ಲಿ ತಪ್ಪದೇ ಕಾಣಿಸಿಕೊಳ್ಳಲಾರಂಭಿಸಿದ. ಹಂತ ಹಂತವಾಗಿ ಜವಾಬ್ದಾರಿ ನಿರ್ವಹಿಸುತ್ತ 22ನೇ ವಯಸ್ಸಿನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಆರೆಸ್ಸೆಸ್‌ನ ಅಧಿಕಾರಿಗಳ ತರಬೇತಿ ಶಿಬಿರದ (ಒಟಿಸಿ) ಮುಖ್ಯಶಿಕ್ಷಕ ಜವಾಬ್ದಾರಿ ಹೊತ್ತುಕೊಂಡ ತೊಗಾಡಿಯಾ ಅನೇಕ ಸ್ವಯಂಸೇಕರಿಗೆ ತರಬೇತಿ ನೀಡಿದರು. ತೊಗಾಡಿಯಾರಿಂದ ಆಗ ತರಬೇತಿ ಪಡೆದವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಸಮಿತಿಯ ಹಾಲಿ ಅಧ್ಯಕ್ಷ ಶಂಕರಸಿಂಗ್ ವಘೇಲಾ ಸಹ ಒಬ್ಬರು.

ವೈದ್ಯನಾಗಿ
ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ಪ್ರವೀಣ್ ತೊಗಾಡಿಯಾ, ಆರೆಸ್ಸೆಸ್ ಚಟುವಟಿಕೆಗಳ ಮಧ್ಯೆಯೂ ಓದನ್ನು ನಿರ್ಲಕ್ಷಿಸಲಿಲ್ಲ. ಎಂಬಿಬಿಎಸ್ ಡಿಗ್ರಿ ನಂತರ Surgical Oncology (ಕ್ಯಾನ್ಸರ್ ಶಸ್ತ್ರಚಿಕಿತ್ಸೆ)ಯಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (ಖ) ಪಡೆದರು. ಅಹಮದಾಬಾದ್‌ನಲ್ಲಿ ಧನ್ವಂತರಿ ಹೆಸರಿನ ಆಸ್ಪತ್ರೆ ಆರಂಭಿಸಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಸುಮಾರು 14 ವರ್ಷಗಳವರೆಗೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದ ಅವರು, ಅಲ್ಲಿಯೂ ಅತ್ಯಂತ ಜನಪ್ರಿಯ ವೈದ್ಯರೆನಿಸಿಕೊಂಡಿದ್ದರು. ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವೆಂದೇ ಕರೆಸಿಕೊಳ್ಳುತ್ತ ಕ್ಯಾನ್ಸರ್‌ನ ಅತ್ಯಂತ ಕ್ಲಿಷ್ಟ ಕೇಸ್‌ಗಳನ್ನೂ ಗುಣಪಡಿಸಿದ್ದರು ಎಂಬುದು ತೊಗಾಡಿಯಾ ಹೆಗ್ಗಳಿಕೆ. ನಿಧಾನಕ್ಕೆ ಸಂಘದ ಚಟುವಟಿಕೆಗಳತ್ತ ಸೆಳೆತ ಹೆಚ್ಚಿದಾಗ ತಮ್ಮ 'ಧನ್ವಂತರಿ'ಯನ್ನ ಸೇವಾ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟು ಪೂರ್ಣ ಪ್ರಮಾಣದಲ್ಲಿ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗುವ ನಿರ್ಧಾರ ಕೈಗೊಂಡರು.

ಡಾಕ್ಟರ್ ಡಿಗ್ರಿಗೆ ಕುತ್ತು
ವೈದ್ಯನಾಗಿ ಹೆಸರು ಮಾಡಿದ್ದ ತೊಗಾಡಿಯಾ ಆರೆಸ್ಸೆಸ್‌ನಿಂದ ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆಗೆ ಹೋದ ಮೇಲೆ ಹಿಂದುತ್ವದ ಉಗ್ರ ಪ್ರತಿಪಾದಕನಾಗಿ ಇಸ್ಲಾಂ, ಕ್ರೈಸ್ತ ಧರ್ಮೀಯರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಲಾರಂಭಿಸಿದರು. ಹಿಂದೂಗಳನ್ನು 'ಜಾಗೃತ'ಗೊಳಿಸುವುದಕ್ಕಾಗಿ ಅನ್ಯ ಕೋಮಿನ ಜನರ ವಿರುದ್ಧದ ಅವರ ದ್ವೇಷದ ಭಾವನೆ ಎಷ್ಟಿತ್ತೆಂದರೆ, 2002ರ ಗುಜರಾತ್ ಗಲಭೆ ನಂತರ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಕ್ಕಾಗಿ ವೈದ್ಯರೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಲೋಕಲ್ ಕೇಬಲ್ ಚಾನಲ್‌ನಲ್ಲಿ ಜಾಹೀರಾತು ನೀಡಿ ಅಹಮದಾಬಾದ್ ಮತ್ತು ಸುತ್ತಮುತ್ತಲೂ ಪ್ರದೇಶದಲ್ಲಿರುವ ಎಲ್ಲ ವೈದ್ಯರು ಹಾಗೂ ನರ್ಸ್‌ಗಳು ಬಂದು 'ಧನ್ವಂತರಿ'ಗೆ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಕೋರಿದ್ದರು. ಮುಸ್ಲಿಂ ಪ್ರದೇಶ ಮತ್ತು ಮುಸ್ಲಿಂ ಆಡಳಿತದ ಆಸ್ಪತ್ರೆಗಳಲ್ಲಿರುವ ಹಿಂದೂ ವೈದ್ಯರು ಮತ್ತು ನರ್ಸ್‌ಗಳ ಅಲ್ಲಿ ಸೇವೆ ಸಲ್ಲಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಜಾಹೀರಾತು ನೀಡಲಾಗಿತ್ತು ಎಂಬ ದೂರು ಆಗ ಕೇಳಿ ಬಂದಿತ್ತು. ಈ ವೇಳೆ ಗುಜರಾತ್‌ನಲ್ಲಿ ವೈದ್ಯರ ಸಂಘಟನೆ ಮೆಡಿಕೊ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯು ಭಾರತೀಯ ವೈದ್ಯಕೀಯ ಪರಿಷತ್‌ಗೆ ತೊಗಾಡಿಯಾ ವಿರುದ್ಧ ದೂರು ನೀಡಿತ್ತು. ''ನಿರ್ದಿಷ್ಟ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತ ದ್ವೇಷ ಬಿತ್ತುತ್ತಿರುವ ತೊಗಾಡಿಯಾ ವೈದ್ಯನಾಗಲು ಅನರ್ಹ. ವೈದ್ಯನಾಗುವ ವೇಳೆ ಸ್ವೀಕರಿಸಿದ ಪ್ರತಿಜ್ಞೆಯನ್ನು ಅವರು ಉಲ್ಲಂಘಿಸಿದ್ದಾರೆ. ಅವರ ಡಾಕ್ಟರ್ ಡಿಗ್ರಿ ವಾಪಸ್ ಪಡೆಯಬೇಕು,'' ಎಂದು ವೈದ್ಯರು ದೂರಿನಲ್ಲಿ ಆರೋಪಿಸಿದ್ದರು. ಆದರೆ, ಮೆಡಿಕೊ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯ ಈ ದೂರು ಸಹ ತಾರ್ಕಿಕ ಅಂತ್ಯ ಕಾಣಲಿಲ್ಲ. ನಂತರವೂ ಕೋಮು ಪ್ರಚೋದನೆ ಮಾತುಗಳನ್ನಾಡುತ್ತ ಅಂಥ ಮಾತುಗಳಿಂದಾಗಿಯೇ ಸಂಘ ಪರಿವಾರದ ಕಟ್ಟರ್ ಹಿಂದೂವಾದಿಗಳ ದೃಷ್ಟಿಯಲ್ಲಿ ಹಿರೋ ಆಗಿದ್ದಾರೆ.

ಎಂ. ಎಸ್. ರುದ್ರೇಶ್ವರಸ್ವಾಮಿ ಅವರ ನಾಲ್ಕು ಕವಿತೆಗಳು
ಎಂ. ಎಸ್. ರುದ್ರೇಶ್ವರಸ್ವಾಮಿ


ಕಾಫಿ ತಣ್ಣಗಿತ್ತು...

ಇವತ್ತು ಕಾಫಿ ತಣ್ಣಗಿತ್ತು,
ಅಂದೆ. ಹೆಂಡತಿ ಸುಮ್ಮನೆ ಮುಖ ನೋಡಿದಳು.
ಮೆಲ್ಲಗೆ ಮತ್ತೆ ಹೇಳಿದೆ; ಕಾಫಿ ತಣ್ಣಗಿತ್ತು.
ಅವಳು ಏನೂ ಮಾತಾಡಲಿಲ್ಲ
ನನ್ನತ್ತ ನೋಡಲೂ ಇಲ್ಲ.
ಕಾಫಿ ತಣ್ಣಗಿತ್ತು ಹಿಮದಷ್ಟು,
ಎಂದೆ. ಅವಳು ದುರುಗುಟ್ಟಿ ನೋಡಿದಳು.
ಕಾಫಿ ಹಿಮದ ಹಾಗೆ ಇರಲಿಲ್ಲ.
ನಾನೂ ಯೋಚಿಸಿದೆ,
ಕಾಫಿ ತಣ್ಣಗಿತ್ತು ಅಂದರೆ...?
ಕ್ಷಮಿಸಿ, ಇದೆಲ್ಲ ನನಗೆ ಚೆನ್ನಾಗಿ
ಹೇಳಲು ಬರುವುದಿಲ್ಲ.
ಪುನರಾವರ್ತನೆ ಕುರೂಪಿ ಎಂದು
ಗೊತ್ತಿದ್ದರೂ; ನೀರು, ಹಾಲು,
ಸಕ್ಕರೆ, ಕಾಫಿಪುಡಿ ಎಲ್ಲವೂ,
ಅವೆಲ್ಲವೂ ತಣ್ಣಗಿದ್ದವು,
ಬಿಸಿಬಿಸಿ ಹಬೆ, ಘಮ್ಮತ್ತಿನ ಘಮಘಮ
ಒಂದೂ ಇರಲಿಲ್ಲ ಎನ್ನುವುದಷ್ಟೆ ಅದರ ಅರ್ಥ. 
ಹಾಗೆ ಅಂದುಕೊಂಡು, ನೀರು, ಹಾಲು,
ಸಕ್ಕರೆ, ಕಾಫಿಪುಡಿ ತಣ್ಣಗಿತ್ತು,
ಎಂದು, ಎತ್ತರಿಸಿದ ದನಿಯಲ್ಲಿ ಹೇಳಿದೆ.
ಹೆಂಡತಿ ಹುಬ್ಬು ಗಂಟಿಕ್ಕಿದರೂ,
ತಣ್ಣಗೆ ಹೇಳಿದಳು: ‘ಮನಸ್ಸು
ಹೊರಗೆಲ್ಲೊ ಹರಿದಾಡಿದರೆ, ಅದು
ಸಹಜ, ಹೊರಗೆ ಬೀಸುತ್ತಿದೆ
ಕೇಡಿ ಗಾಳಿ.’ ಮೈ ತುಸು ಬೆಚ್ಚಗಾಯಿತು,
ಭಾಷೆ ಮಾತಾದ ಗಳಿಗೆ ಅದು.

***ಕಾಲುಹಾದಿ...

ಇರಲಿ ನಮ್ಮ ಶೈಲಿ ನಮಗೆ
ಬರೆಯುವುದಷ್ಟೆ ಮುಖ್ಯ ಖಾಲಿ ಮನಸಿನ
ಹಾಳೆ ಮೇಲೆ ಹಿಂಡಿಹಿಂಡಿ ಬಸಿದು
ಬರಿದು ಮಾಡಿ ಹೃದಯವನ್ನು.
ಅಲ್ಲಿ ಮೂಡಿ ಬರಲಿ ಕುಸುರಿ ಕಲೆ
ಇರಲಿ ನಮ್ಮದೇ ಛಾಪು ಅಲ್ಲಿ.
ವೃಷಭಾವತಿ ಹರಿಯುವುದಿರಲಿ
ಹುಡುಕಿದರೂ ಅವಳಿದ್ದ ಸುಳುವೂ ಸಿಗುವುದಿಲ್ಲ
ಕಾಲ ಬದಲಾಗಿದೆ, ಎಂಜಿ ರಸ್ತೆಗೆ
ಮೆಟ್ರೋ ಬಂದಿದೆ. ರಂಗೋಲಿ ಮೆಟ್ರೋ
ಆರ್ಟ್ ಸೆಂಟರ್‌ನಲ್ಲಿ
ಕನ್ನಡದ ಕವಿತೆಗಳ ಘಮಘಮ
ಫ಼ಾರಿನ್ ಸೆಂಟ್ ಜೊತೆ ಬೆರೆತು ಹೋಗಿದೆ.
ಪ್ರೇಮ ನಿವೇದನೆಯ ಭಾಷೆಯೇ ಬದಲಾಗಿದೆ,
ಮೋರ್ಸ್ ಕಣ್ಮರೆಯಾಗಿದೆ.
ವಿಕಾಸದ ಹಾದಿಯಲ್ಲಿ ಮರಗಳು
ಹೂಗಳ ಗಾತ್ರ ಆಕಾರ
ಬದಲಿಸಿಕೊಳ್ಳುತ್ತಿವೆ, ಜೇನುಹುಳುಗಳನ್ನೇ
ನಂಬಿ ಕೂತರೆ ಸಂತತಿಗೆ ಕೊನೆ,
ಮರ ಇತರೆ ಕೀಟಗಳನ್ನು ಆಕರ್ಷಿಸುತ್ತಿದೆ.
ಯೇಟ್ಸ್ ಕವಿ ಎಂದೋ ಹೇಳಿದ
ಮಾರ್ಗ ಬದಲಿಸದೆ ಗತಿಯಿಲ್ಲವೆಂದು.
ಗುರಿ ತಲುಪಲು ಹೆದ್ದಾರಿಯೆ
ಆಗಬೇಕಿಲ್ಲ, ನಡೆದು ನಮ್ಮದೇ ಕಾಲುಹಾದಿ
ನಿರ್ಮಿಸಬೇಕಿದೆ. ಕವಿತೆಯಲ್ಲಿ
ಪ್ರೀತಿಯಲ್ಲಿ ಎಲ್ಲದೂ ಸಲ್ಲುತ್ತದೆ.
***
ನೇಯುವುದು...

ನೇಯುವುದು
ಅಂದರೆ; ಒಂದನ್ನು ಎರಡು
ಮಾಡುವುದಲ್ಲ.
ಒಂದು ಮತ್ತೊಂದು ಮಗದೊಂದು
ಕೂಡಿಸಿ, ಎಳೆ ಎಳೆಗಳನ್ನು
ಜೋಡಿಸಿ ಒಪ್ಪವಾಗಿ ಹೆಣೆದು,
ಒಂದನ್ನು ದೊಡ್ಡದು ಮಾಡುವುದು.
ತನ್ನೊಳಗಿನದನ್ನೆ ಹೊರಬಸಿದು
ಮುಚ್ಚುಮರೆ ಮಾಡದೆ
ಎಲ್ಲ ಬಿಚ್ಚಿ ಬಯಲಿಗಿಟ್ಟು
ಬವಣೆ ಪಡುವುದು.
ನೇಯುವುದು ಅಂದರೆ;
ನೋಯುವುದು.
ನೋವು ಮರೆಯುವುದಕ್ಕೆ
ಧ್ಯಾನಿಸುತ್ತ ಕಿತ್ತುಹೋಗದಂತೆ
ಬದುಕೆಲ್ಲವನ್ನು ಪಣಕಿಟ್ಟು
ಕುಚ್ಚು ಕಟ್ಟುವುದು.
ಹಸಿದ ಹೊಟ್ಟೆ, ಕಾಯಿಲೆ, ಕಸಾಲೆ,
ಎಲ್ಲ ಮರೆತು ಹಗಲು ಇರುಳು
ನೇಯ್ದದ್ದು ಬದುಕು.
ಕ್ಷುದ್ರ ನೇಯ್ಗೆಯವನು ನಾನು
ಸೃಷ್ಟಿಸುತ್ತೇನೆ ಸೃಷ್ಟಿಕರ್ತನಿಗೆ
ಸಮ ಸಮನಾಗಿ.
ಮತ್ತೆಲ್ಲಿ ಹುಡುಕುವಿರಿ?
ಇದ್ದಾನೆ ಅವನು, ಅವನೆಂಬ ನಾನು
ನೇಯ್ದ ಕುಸುರಿಯಲ್ಲಿ.
ಒಡೆದು ನೋಡಿದರೆ ಕಾಣುವನೇ
ಅವನು? ಕಾಣುವುದು
ಬರೀ ನೂಲು, ಕಾಣುವುದಿಲ್ಲ
ಹಸಿದ ಹೊಟ್ಟೆ-
ಯ ಸಂಕಟ, ಬಸಿದ ಬೆವರು,
ಸೋತ ಕಣ್ಣ ಹಿಂದೆ ಕಮರಿದ ಕನಸು.
***


ಇಂಬು

ಕಣ್ಮುಚ್ಚಿ ನೆನಪು ಮಾಡಿಕೊಳ್ಳುತ್ತೇನೆ, ಮಂದ ಬೆಳಕಲ್ಲಿ
ನೆನಪುಗಳು ಅದೆಷ್ಟೇ ಹಿಂದಕ್ಕೆ ಚಲಿಸಿದರೂ,
ನಿನ್ನನ್ನು ಮೊದಲು ಕಂಡ ದಿನ ನೆನಪಾಗುವುದಿಲ್ಲ
ಚಿಕ್ಕವನಿರಬೇಕು ನಾನು. ಹರಯಕ್ಕೆ ಕಾಲಿಡುವ
ವಯಸ್ಸಿನಲ್ಲಿ ಇಷ್ಟಪಟ್ಟಿರಬೇಕು ನಿನ್ನನ್ನು. ಕೆದಕಿದರೂ
ನೆನಪು ಅಸ್ಪಷ್ಟ, ಎಷ್ಟೊಂದು ಹಗಲು
ಅದೆಷ್ಟು ಇರುಳು ಕಳೆದುಹೋಗಿವೆ ಬದುಕಿನಲ್ಲಿ.
ನಿನ್ನೆದೆಯಲ್ಲಿ ಮುಖವಿಟ್ಟು ಕನಸುಕಾಣುವ ದಿನ ಮುಗಿದು
ಬಹಳ ದಿನಗಳೇ ಆಗಿಹೋಗಿವೆ. ಬಲ್ಲೆ ನೀನು
ನನ್ನನ್ನು ಅಲ್ಲಿಂದ ಇಲ್ಲಿವರೆಗೆ. ಒಮ್ಮೊಮ್ಮೆ ಅನುಮಾನ
ಕಾಡುತ್ತದೆ, ಯಾವುದೋ ಜನ್ಮದಲ್ಲಿ ನೀನು ಜಲದೇವತೆ
ಆಗಿದ್ದಿರಬೇಕೆಂದು. ಇಲ್ಲವಾದರೆ ಹೇಗೆ ಸಾಧ್ಯ
ಏಗುತ್ತ ನವೆಯುತ್ತ ಹೀಗೆ ಬದುಕು ಸವೆಸಿಸುವುದು.
ನಿನ್ನ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲದ
ಈ ಗಂಡಸಿಗಾಗಿ ಸದಾ ಕಾಯುತ್ತಿರುವುದು.
ನಾನು ಇಷ್ಟಪಟ್ಟೆ ಅನ್ನುವುದಷ್ಟೇ ನಿಜ; ನೀನಿಲ್ಲದೆ
ಇರಲಾಗುವುದಿಲ್ಲವೆನ್ನುವುದೂ ಅಷ್ಟೇ ಸತ್ಯವಾದರೂ
ಪ್ರೀತಿಯಿಂದ ಒಮ್ಮೆಯೂ ನಿನ್ನತ್ತ ನೋಡಲಿಲ್ಲ.
ನಿನ್ನ ಕಣ್ಣೆದುರೇ ಇನ್ನೊಬ್ಬಳ ಜೊತೆ ಸುಖಿಸುತ್ತ
ತುಟಿಗೆತುಟಿ ಬೆಸೆದು ಉಸಿರಲ್ಲಿ ಉಸಿರು ಬೆರೆತಾಗಲೂ
ನಿಟ್ಟುಸಿರಿಡಲಿಲ್ಲ ನೀನು. ಹೀಗೇಕೆ ಎಂದು
ಒಮ್ಮೆಯಾದರೂ ಕೇಳಬೇಕಿತ್ತು, ಹಾಗೆ ಒಮ್ಮೆಯೂ
ಮಾಡಲಿಲ್ಲ. ನನ್ನ ಹಾದಿಗೆ ಅಡ್ಡಬರಲಿಲ್ಲ. ಗೊತ್ತಿತ್ತು
ನಿನಗೆ; ಮೈ-ಕಸುವು ಕಡಿಮೆಯಾಗುತ್ತಿದ್ದಂತೆ
ಮತ್ತೆ ನಿನ್ನಲ್ಲಿಗೆ ನಾನು ಬಂದೇಬರುತ್ತೇನೆಂದು.
ಹಾಸಿಗೆ ಹೇಳಿದ ನೂರು ಕಥೆ ಕೇಳಿಯೂ,
ಕವಡೆ ಕಿಮ್ಮತ್ತು ಕೊಡಲಿಲ್ಲ ನೀನು,
ನಿನ್ನ ಬಳಿ ಬಂದಾಗಲೆಲ್ಲ,  ನನ್ನನ್ನು ಎದೆಗವಚಿ-
ಅಪ್ಪಿಕೊಂಡು ತಲೆಕೂದಲಲ್ಲಿ ಕೈಯಾಡಿಸುತ್ತ, ಹೊರಜಗತ್ತನ್ನೆ
ಮರೆಸಿದೆ. ನನ್ನೆಲ್ಲ ಸಂತೋಷ ತಲ್ಲಣದಲ್ಲಿ
ಜೊತೆಗಿದ್ದು, ಯಾವತ್ತೂ ಕನ್ಯೆಯಾಗಿಯೇಉಳಿದು,
ನನ್ನನ್ನು ನಿನ್ನೊಳಗೆ ಕರೆದೊಯ್ದೆ, ಉಳಿದೆಲ್ಲವೂ
ಭ್ರಾಂತು ಎನ್ನುವಂತೆ. ಈಗ ಕಟ್ಟಕಡೆಗೆ ಮುತ್ತಿಡುವೆ
ನಿನಗೆ. ನಿನ್ನೆದೆಯಲ್ಲಿ ಮುಖವಿಟ್ಟು ಮಲಗುವೆ
ಕೊನೆತನಕ ಮಗುವಿನಂತೆ. ಕೇಳಿಸುತ್ತಿದೆ
ಮೆಲುದನಿಯ ಜೋ ಜೋ ಜೋ...ಜೋಗುಳ.
***ವಿಳಾಸ:
ಎಂ. ಎಸ್. ರುದ್ರೇಶ್ವರಸ್ವಾಮಿ
೮೮, ‘ಪಲ್ಲವಿ’೨ನೇ ಮುಖ್ಯರಸ್ತೆ
ವಸಂತವಲ್ಲಭನಗರ
ಸುಬ್ರಮಣ್ಯಪುರ ಅಂಚೆ
ಬೆಂಗಳೂರು - ೫೬೦ ೦೬೧.

ಸಂಚಾರಿ: ೮೮೬೧೨೫೭೯೩೫
ಇ -ಅಂಚೆ: swamy_dop@yahoo.co.in 

ಮೇ ೧೦, ೧೧ ಹಾವೇರಿ: ಮೇ ಸಾಹಿತ್ಯ ಮೇಳ

ಲಡಾಯಿ ಪ್ರಕಾಶನ, ಗದಗ

ಮೇ ಸಾಹಿತ್ಯ ಮೇಳ
                            ೧೦, ೧೧ ಮೇ, ೨೦೧೪,
          ಗೆಳೆಯರ ಬಳಗ ಮಣಿಭಾಯಿ ಲೋಡಾಯ ಸಭಾ ಭವನ, ಹಾವೇರಿ.
                               
ಸಹಭಾಗಿತ್ವ:

ಕೌರವ ಪತ್ರಿಕೆ
ಚಿತ್ತಾರ ಕಲಾ ಬಳಗ, ಧಾರವಾಡ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ
ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ
ಕರ್ನಾಟಕ ಜನಸಾಹಿತ್ಯ ಸಂಘಟನೆ
ಉದ್ಘಾಟನಾ ಸಮಾರಂಭ: ಬೆ. ೧೦.೩೦-೧೨.೦೦

ಪ್ರಾಸ್ತಾವಿಕ ಮಾತು: ಡಾ. ಎಚ್. ಎಸ್. ಅನುಪಮಾ
ಉದ್ಘಾಟನೆ: ಡಾ. ಕೆ. ಶಿವಾರೆಡ್ಡಿ, ಹೈದ್ರಾಬಾದ.
ಅಧ್ಯಕ್ಷತೆ: ಡಾ. ಎಸ್. ಜಿ. ಸಿದ್ಧರಾಮಯ್ಯ
ನಿರ್ವಹಣೆ: ಡಾ. ಡಿ. ಬಿ. ಗವಾನಿ


ಪುಸ್ತಕ ಬಿಡುಗಡೆ: ೧೨.೦೦-೨.೦೦

ಪುಸ್ತಕ ಬಿಡುಗಡೆ: ಡಾ. ನಾ. ಡಿಸೋಜಾ
ಪುಸ್ತಕಗಳ ಕುರಿತು: ಡಾ. ಶೈಲಜಾ ಹಿರೇಮಠ
              ಡಾ. ಅಪ್ಪಗೆರೆ ಸೋಮಶೇಖರ್
              ಡಾ. ಸುರೇಶ ನಾಗಲಮಡಿಕೆ
ಅಧ್ಯಕ್ಷತೆ: ಜ. ಹೊ. ನಾರಾಯಣ ಸ್ವಾಮಿ
ಉಪಸ್ಥಿತಿ: ನಗ್ನಮುನಿ, ಡಾ. ಟಿ.ಆರ್.ಚಂದ್ರಶೇಖರ್,  ಪ್ರೊ. ಬಿ. ಗಂಗಾಧರಮೂರ್ತಿ,  ರಾಹು,
ಬಸವರಾಜ ಹೂಗಾರ, ಚಂದ್ರಕಾಂತ ಪೋಕಳೆ, ಡಾ. ಸಿದ್ರಾಮ ಕಾರಣಿಕ, ಡಾ. ಜೆ. ಪಿ. ದೊಡಮನಿ, 
ಡಾ. ಐ.ಜೆ. ಮ್ಯಾಗೇರಿ, ಡಾ. ಎಚ್.ಎಸ್.ಅನುಪಮಾ

ಬಿಡುಗಡೆಯಾಗುವ ಪುಸ್ತಕಗಳು:

ದೇವದಾಸಿ ಮತ್ತು ಬೆತ್ತಲೆಸೇವೆ, ಜ್ಯೋತಿಬಾ ಫುಲೆ ಮತ್ತು ರೈತ ಚಳುವಳಿ, ನಾಗವಂಶ: ದಲಿತ ಅಸ್ಮಿತೆ , ಕಷ್ಟಕುಲದ ಕಥೆ: ದಲಿತರ ಸಬಲೀಕರಣ ಅಧ್ಯಯನ, ಭಾರತದ ಬೌದ್ಧಿಕ ದಾರಿದ್ರ್ಯ, ದಲಿತರು: ಭೂತ-ಭವಿಷ್ಯ, ಜಾತಿ ವ್ಯವಸ್ಥೆ: ಸಮಸ್ಯೆ-ಸವಾಲುಗಳು, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಂಬೇಡ್ಕರ್ ಮತ್ತು ಮುಸ್ಲಿಮರು, ಹಿಂಸಾಕಾರಣ, ಹಾದಿ ಜಂಗಮ, ಬೀದಿ ಬೆಳಕಿನ ಕಂದೀಲು,  ಮರಗುದುರೆ, ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ: ವಿವಿಧ ಆಯಾಮಗಳು, ನೆನಪಿನ ಹಕ್ಕಿ, ಅಂಡಮಾನ್: ಕಂಡ ಹಾಗೆ, ಹೆಣ್ಣು: ಸಂಕರ ಕಾಲದ ಆತ್ಮಪ್ರಜ್ಞೆ.

ನಿರ್ವಹಣೆ: ಲಿಂಗರಾಜ ಸೊಟ್ಟಪ್ಪನವರ


ಅಸಮಾನ ಕರ್ನಾಟಕ: ಪ್ರತಿರೋಧದ ನೆಲೆಗಳು ೩.೦೦ - ೬.೦೦

ಆಶಯ: ಡಾ. ಟಿ. ಆರ್. ಚಂದ್ರಶೇಖರ್
ತಳಸಮುದಾಯಗಳ ನೆಲೆ: ಡಾ. ಚಂದ್ರ ಪೂಜಾರಿ
ವರ್ಗಮೂಲ ಚಳುವಳಿ: ಪ್ರೊ. ವಿ. ಎಸ್. ಶ್ರೀಧರ್
ಮಹಿಳಾ ನೆಲೆ: ಡಾ. ಮೀನಾಕ್ಷಿ ಬಾಳಿ
ಪತ್ರಿಕಾ ನೆಲೆ: ದಿನೇಶ್ ಅಮಿನ್‌ಮಟ್ಟು
ಅಧ್ಯಕ್ಷತೆ:  ಸನತಕುಮಾರ್ ಬೆಳಗಲಿ
ಪ್ರತಿಕ್ರಿಯೆ : ಡಾ. ಎಚ್. ವಿ. ವಾಸು, ನಾರಾಯಣ ಬೆಳಕುರ್ಕಿ, ಪದ್ಮಶ್ರೀ.ಟಿ
ನಿರ್ವಹಣೆ: ಡಾ ಸುಭಾಸ ರಾಜಮಾನೆ

ನನ್ನ ಬದುಕು, ನನ್ನ ಕವಿತೆ  ೬.೧೫ - ೭.೩೦
ದು. ಸರಸ್ವತಿ
ಎಚ್. ಎನ್. ಆರತಿ
ಅಧ್ಯಕ್ಷತೆ: ಸತೀಶ್ ಕುಲಕರ್ಣಿ
ನಿರ್ವಹಣೆ: ಪುಷ್ಪಾ ಶಲವಡಿಮಠ


ಸಾಂಸ್ಕೃತಿಕ ಕಾರ್ಯಕ್ರಮ ೭.೩೦ - ೧೦.೦೦

ಚಾಲನೆ: ವಿರುಪಾಕ್ಷಪ್ಪ ಕೊರಗಲ್ಲ
ಮಾತು: ಎ. ರೇವತಿ
ಅಧ್ಯಕ್ಷತೆ: ಶಶಿಕಲಾ ಹುಡೇದ
ನಿರ್ವಹಣೆ: ಹೊನ್ನಪ್ಪ ಮರಿಯಮ್ಮನವರ

ಜನಮನದಾಟ, ಹೆಗ್ಗೋಡು ಅವರಿಂದ
ಹಿಜ್ರಾ ಒಬ್ಬಳ ಆತ್ಮಕತೆ ಆಧಾರಿತ ಕನ್ನಡದ ಪ್ರಥಮ ನಾಟಕ
ಎ. ರೇವತಿ ಯವರ ಬದುಕು ಬಯಲು
ಅನುವಾದ: ದು. ಸರಸ್ವತಿ
ಸಂಗೀತ: ಅರುಣ್ ಕುಮಾರ್. ಎಂ
ಸಂಗೀತ ನಿರ್ವಹಣೆ: ಮಂಜುನಾಥ್ ಎಸ್.ಪಿ, ಶೋಧನ್


ಮೇ ೧೧, ೨೦೧೪

ಕವಿಯೊಂದಿಗೆ ಸಂವಾದ:  ೯.೦೦ - ೧೦.೩೦

ನಗ್ನಮುನಿ, ಹೈದ್ರಾಬಾದ
ಡಾ. ಬಂಜಗೆರೆ ಜಯಪ್ರಕಾಶ್
ಸಂವಾದದಲ್ಲಿ: ಸುಜ್ಞಾನ ಮೂರ್ತಿ, ಡಾ. ದೇವೇಂದ್ರಪ್ಪ ಜಾಜಿ, ಡಾ. ವೆಂಕಟಗಿರಿ ದಳವಾಯಿ, ಎಂ. ಕೆ. ಕಲ್ಲಜ್ಜನವರ, ಶಿವಕುಮಾರ ಕಂಪ್ಲಿ, ಕೆ. ಖಾದರ್ ಭಾಷಾ ಸಿಂಧನೂರು, ಸೃಜನ್. ಡಾ ಜಗನ್ನಾಥ ಗೆನಣ್ಣವರ
ನಿರ್ವಹಣೆ: ಪ್ರೊ. ಸಿ. ಆಂಜಿನಪ್ಪ

ವರ್ತಮಾನದ ಸವಾಲುಗಳು-ಭವಿಷ್ಯದ ಕರ್ನಾಟಕ  ೧೦.೩೦ - ೧೨.೦೦


ಆಶಯ: ಡಾ. ವಿ. ಲಕ್ಷ್ಮೀನಾರಾಯಣ
ಮಾತು: ಡಾ. ಮುಜಾಫ್ಫರ್ ಅಸಾದಿ
ಅಧ್ಯಕ್ಷತೆ: ಪ್ರೊ. ಬಿ. ಗಂಗಾಧರ ಮೂರ್ತಿ
ನಿರ್ವಹಣೆ: ಡಾ ಶೌಕತ್ ಮೇಗಲಮನಿ

ಜನ ಸಾಹಿತ್ಯದ ಹೊಳಹುಗಳು ೧೨.೧೫ - ೨.೧೫

ಆಶಯ: ಡಾ. ರಹಮತ್ ತರೀಕೆರೆ
ಕಾವ್ಯ: ಶಂಕರ ಕಟಗಿ
ಕತೆ-ಕಾದಂಬರಿ: ಸರ್ಜಾಶಂಕರ ಹರಳೀಮಠ
ವಿಚಾರ ಸಾಹಿತ್ಯ: ಡಾ. ರಂಗನಾಥ ಕಂಟನಕುಂಟೆ
ಅಧ್ಯಕ್ಷತೆ: ಡಾ. ಬಿ. ಎನ್. ಸುಮಿತ್ರಾಬಾಯಿ
ನಿರ್ವಹಣೆ: ಡಾ ಅರುಣ ಜೋಳದಕೂಡ್ಲಗಿಕವಿ ಗೋಷ್ಠಿ: ೩.೦೦ - ೫.೦೦
ಚಾಲನೆ: ಪ್ರೊ. ಅಶೋಕ ಶೆಟ್ಟರ
ಅಧ್ಯಕ್ಷತೆ: ಕೆ. ಪಿ. ಸುರೇಶ
ಕವಿಗಳು: ಹುಲಿಕುಂಟೆ ಮೂರ್ತಿ, ಎಂ. ಎಸ್. ರುದ್ರೇಶ್ವರ ಸ್ವಾಮಿ, ಡಾ. ಎಂ. ಡಿ. ಒಕ್ಕುಂದ, ಸತೀಶ್ ಕಾಜೂರು, ಜಾನ್ ಸುಂಟಿಕೊಪ್ಪ, ಸಂಜ್ಯೋತಿ. ವಿ. ಕೆ, ರವಿಕುಮಾರ್ ಕುಂಬಾರ, ಅಕ್ಷತಾ ಕೃಷ್ಣಮೂರ್ತಿ, ಅಲ್ಲಾಗಿರಿರಾಜ, ಡಾ. ನಿಂಗಪ್ಪ ಮುದೇನೂರು, ವಿಜಯಕಾಂತ ಪಾಟೀಲ, ಹಜರೇಸಾಬ ನದಾಫ, ಹಾರೋಹಳ್ಳಿ ರವೀಂದ್ರ, ಅಮರೇಶ ಕುಂಬಾರ, ಜೀವದಾಳ ಛತ್ರದ, ಕಳಕೇಶ ಗುಡ್ಲಾನೂರ, ಚಿನ್ಮಯ ಹೆಗಡೆ, ಹುಚ್ಚಂಗಿ ಪ್ರಸಾದ, ದೀಪ್ತಿ ಭದ್ರಾವತಿ, ನಾಗು ತಳವಾರ, ಮಮತಾ ಅರಸೀಕೆರೆ, ಮೆಹಬೂಬ ನದಾಫ, ಚೇತನ ಸೊಲಗಿ, ದೀಪಕ ಶಿಂಧೆ, ಸತ್ಯಮಂಗಳ ಮಹಾದೇವ, ಸಿದ್ದು ಸತ್ಯಣ್ಣವರ.  
ನಿರ್ವಹಣೆ: ನಾಗರಾಜ ಹರಪನಹಳ್ಳಿ
ಸುಶೀಲೇಂದ್ರ ಕುಂದರಗಿ

ವಿಭಾ ಸಾಹಿತ್ಯ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ  ೫.೧೫ - ೭.೧೫

ಪ್ರಾಸ್ತಾವಿಕ ಮಾತು: ಸುನಂದಾ ಕಡಮೆ
ಪ್ರಶಸ್ತಿ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ: ಶೂದ್ರ ಶ್ರೀನಿವಾಸ್
ಪುಸ್ತಕ ಕುರಿತು: ಬಿ. ಶ್ರೀನಿವಾಸ್
ಕವಿತಾ ವಾಚನ: ಪಂಪಾರಡ್ಡಿ ಅರಳಹಳ್ಳಿ, ಹೇಮಲತಾ ವಸ್ತ್ರದ
ಸಮಾರೋಪ: ಡಾ. ಎಸ್. ನಟರಾಜ್ ಬೂದಾಳು
ಅಧ್ಯಕ್ಷತೆ: ಡಾ. ಹೇಮಾ ಪಟ್ಟಣಶೆಟ್ಟಿ
ಉಪಸ್ಥಿತಿ: ಕೆ ಪಿ ಮೃತ್ಯುಂಜಯ, ಪ್ರಶಸ್ತಿ ಪುರಸ್ಕೃತರು
ಬಿಡುಗಡೆಯಾಗುವ ಪುಸ್ತಕಗಳು:
ನಿನ್ನ ಶಬ್ದ ನನ್ನಲಿ ಬಂದು,
ನನ್ನ ಪ್ರೀತಿಯ ಅಪ್ಪ

ನಿರ್ವಹಣೆ: ವಿರುಪಾಕ್ಷ ಪಡಿಗೋದಿ

ನಾಟಕ ೭.೩೦ - ೯.೩೦                  ಮುಕುಂದರಾವ್ ಅವರ ಬಾಬಾ ಸಾಹೇಬ ಅಂಬೇಡ್ಕರ್
ಅನುವಾದ: ಬಿ.ಆರ್. ವೆಂಕಟರಮಣ ಐತಾಳ್
ಸಂಗೀತ: ಮಂಜುನಾಥ ಎಸ್.ಪಿ, ಶೋಧನ್
ಪರಿಕಲ್ಪನೆ, ವಿನ್ಯಾಸ, ನಿರ್ದೇಶನ: ಎಂ. ಗಣೇಶ, ಹೆಗ್ಗೋಡು

ನಾಮದೇವ ಕಾಗದಗಾರ ಅವರ ಚಿತ್ರಕಲಾ ಪ್ರದರ್ಶನ
ಇಪ್ಟಾ ತಂಡದಿಂದ ಹೋರಾಟದ ಹಾಡುಗಳು.

ನಮ್ಮೊಂದಿಗೆ:

ಲಂಕೇಶ್ ಬಳಗ ಮತ್ತು ಮನುಜ ಮತ ಬಳಗ, ಸಿಂಧನೂರು, ನಾವು ನಮ್ಮಲ್ಲಿ, ಕೊಟ್ಟೂರು, ಪ್ರಕಾಶ ಕಡಮೆ, ಹಸನ್ ನಯೀಂ ಸುರಕೋಡ, ಡಾ. ಕೆ. ಆರ್. ದುರ್ಗಾದಾಸ, ಕೇಸರಿ ಹರವೂ, ಬಿ ಪೀರಭಾಷಾ, ಪಿ. ಎಚ್. ನೀರಲಕೇರಿ, ಡಾ.ಎಚ್.ಟಿ.ಪೋತೆ, ಬಿ. ಕೆ. ಎಸ್. ವರ್ಧನ, ಬಿ.ಮಾರುತಿ, ಚಾಮರಾಜ ಬಾಂಗಿ, ಕೆ.ಮಂಜಪ್ಪ, ಎಸ್.ಬಿ. ಕಿನ್ನಾಳ, ಹೊರಪೇಟಿ ಮಲ್ಲೇಶಪ್ಪ, ಎಸ್.ಬಿ.ತವರದ, ಐ. ಎ. ಲೋಕಾಪುರ, ವೈ. ಬಿ. ಆಲದಕಟ್ಟಿ, ಎಸ್. ವೈ. ಗುಬ್ಬಣ್ಣನವರ, ಹೇಮಂತ ಗಂಟೇರ,  ಜಗದೀಶ ಮಂಗಳೂರಮಠ, ಕೃಷ್ಣ ನಾಯಕ ಹಿಚ್ಕಡ, ಗಂಗಾಧರ ಹರಪನಹಳ್ಳಿ, ಕೆ. ಶರೀಫಾ, ಸೈಫ್ ಜಾನ್ಸೆ, ಡಾ. ಕೃಷ್ಣ, ಕೆ. ಅಕ್ಷತಾ, ಜೆ. ಭಾರದ್ವಾಜ್, ರಾಜಾಬಕ್ಷಿ, ಹನಮಂತ ಹಾಲಿಗೇರಿ, ಭಾರತಿ ದೇವಿ, ಮಲ್ಲೇಶ ಮಾಳವಾಡ, ಶಂಕರ ಹಲಗತ್ತಿ, ಬಸವರಾಜ ಶಿಗ್ಗಾವಿ, ಟಿ. ಎಂ.ಬಾಸ್ಕರ್, ಹಜರೇಸಾಬ ನದಾಫ, ವೀರೇಶ ಬಡಿಗೇರ, ಶಶಿಧರ ತೋಡಕರ,ಡಾ.ಎಸ್.ಬಿ.ಜೋಗುರ, ಬಸವರಾಜ ಹಳ್ಳಿ, ಷರೀಫ ಹಸಮಕಲ್, ಶಶಿಧರ ಹೆಮ್ಮಾಡಿ, ಶ್ರೀಶೈಲ ಹುದ್ದಾರ, ಟಿ.ಬಿ.ಸೊಲಬಕ್ಕನವರ, ಶಂಕರಗೌಡ ಸಾತ್ಮಾರ, ಲಕ್ಷ್ಮೀಕಾಂತ ಮಿರಜಕರ, ಹೇಮಂತ ರಾಮಡಗಿ, ಚನ್ನಪ್ಪ ಅಂಗಡಿ, ಡಾ.ಬಸು ಬೇವಿನಗಿಡ, ಮಹಾದೇವ ಹಡಪದ, ವಿಠ್ಠಪ್ಪ ಗೋರಂಟ್ಲಿ, ಮಂಜುನಾಥ ಡೊಳ್ಳಿನ, ಗಣೇಶ ಹೊಸ್ಮನೆ, ಬಿ. ಎಸ್. ಸೊಪ್ಪಿನ್, ಬಿ. ಐ. ಈಳಗೇರ, ಅಲ್ಲಮಪ್ರಭು ಬೆಟ್ಟದೂರ, ಎಸ್. ಎಚ್. ಪಾಟೀಲ, ಎ. ಬಿ. ಹಿರೇಮಠ, ಹು. ಬಾ. ವಡ್ಡಟ್ಟಿ, ಮುತ್ತು ಹಾಳಕೇರಿ, ಎಂ. ಎಂ. ಹೆಬ್ಬಾಳ, ಮಹಾಲಿಂಗಪ್ಪ ಅಲಬಾಳ, ಸಿ. ಜಿ. ಹಿರೇಮಠ, ಟಿ. ಎಸ್. ಗೊರವರ, ರಾಮಚಂದ್ರ ಹಂಸನೂರ, ಎಂ. ಎನ್. ಕಾಂಬಳೆ, ಶೇಖರ ಲದ್ವಾ, ಗವಿಸಿದ್ದ ಹೊಸಮನಿ, ಬಿ. ಶ್ರೀಪಾದ ಭಟ್, ಬಸವರಾಜ ಕೆಂಚರಡ್ಡಿ, ವೀರಲಿಂಗನಗೌಡ್ರ, ಎಲ್. ಆರ್. ಅಂಗಡಿ, ಎಸ್. ಜಿ. ಚಿಕ್ಕನರಗುಂದ, ಪ್ರಭು ಖಾನಾಪುರೆ, ಎಚ್. ಬಿ. ಕೋಲ್ಕಾರ, ಮೈನುದ್ದೀನ ರೇವಡಿಗಾರ, ಪ್ರಕಾಶ ಖಾಡೆ, ಸತೀಶ್ ಶಿಲೆ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಬಸವರಾಜ ಶೀಲವಂತರ, ಪ್ರಸನ್ನ ದಾವಣಗೆರೆ, ಆವರಗೆರೆ ರುದ್ರಮುನಿ, ಷಣ್ಮುಖಸ್ವಾಮಿ, ಸದಾನಂದ ಮೋದಿ, ಪ್ರಮೋದ ತುರ್ವಿಹಾಳ, ಸಿರಾಜ್ ಬಿಸರಳ್ಳಿ, ಎಸ್. ಆರ್. ಹಿರೇಮಠ, ಎಸ್. ಎಲ್. ಬೆನ್ನೂರ, ಸಿ. ವಿ. ಹಿರೇಮಠ, ಬಸವರಾಜ. ಸಿ. ಕಮತದ, ಜಿ. ಎನ್. ಜಾವೂರ, ಶಂಕರ ಸುತಾರ, ಕೆ. ಆರ್. ಹಿರೇಮಠ, ಚಂದ್ರಶೇಖರ ಕುಳೇನೂರ, ಸಂಕಮ್ಮ ಸಂಕಣ್ಣನವರ, ಪರಿಮಳಾ ಜೈನ, ಎಸ್. ಎನ್. ದೊಡಗೌಡರ, ಹನುಮಂತಗೌಡ ಗೊಲ್ಲರ, ಗಂಗಾಧರ ನಂದಿ, ನಾಗರಾಜ ನಡುವಿನಮಠ, ರೇಣುಕಾ ಗುಡಿಮನಿ, ಬಿ. ಎಂ. ಕಾಡಪ್ಪನವರ, ಎಂ. ಎಚ್. ಹೆಬ್ಬಾಳ, ಕರಿಯಪ್ಪ ಹಂಚಿನಮನಿ, ಎಂ. ಎಸ್. ಮರಿಗೂಳಪ್ಪನವರ, ಎ. ಬಿ. ಗುಡ್ಡಳ್ಳಿ, ಜಿ. ಎಂ. ಓಂಕಾರಣ್ಣನವರ, ರೇಣುಕಾ ಕಹಾರ, ಬಸವರಾಜ ಪೂಜಾರ, ಜಗದೀಶ ಚೌಟಗಿ, ಎನ್. ಎಸ್. ದೇಶಳ್ಳಿ, ಶಿವಕುಮಾರ ಚೆನ್ನಪ್ಪನವರ, ಮಧು ಬಿರಾದಾರ, ಶಂಭಯ್ಯ ಹಿರೇಮಠ ಮತ್ತು ಗೆಳೆಯರು.  

Sunday, April 27, 2014

ವ್ಯಕ್ತಿಪೂಜೆ ವಿರೋಧಿಸಿದ್ದ ಅಂಬೇಡ್ಕರ್
ಸನತಕುಮಾರ ಬೆಳಗಲಿ
ವಾರಣಾಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುವ ಆ ದಿನ ಖಾಸಗಿ ಟಿ.ವಿ. ಚಾನಲ್‌ಗಳು ಆ ದ್ಯಶ್ಯವನ್ನು ಇಡಿಯಾಗಿ ದೇಶಕ್ಕೆ ತೋರಿಸಿದವು. ಉಳಿದ ಕೆಲ ಕಡೆ ಮತದಾನ ನಡೆದಿರುವಾಗ ಈ ದೃಶ್ಯವನ್ನು ತೋರಿಸುವುದು ಅಕ್ರಮ ಎಂದು ಬಿಜೆಪಿ ಯೇತರ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರು ಅರಣ್ಯರೋದನವಾಯಿತು. ಅಂದು ಅಲ್ಲಿ ಸೇರಿದ ಲಕ್ಷಾಂತರ ಜನರ ಮೋದಿ ಉನ್ಮಾದ, ಭಜನೆ, ಸಮೂಹಸನ್ನಿ ಪ್ರಜ್ಞಾವಂತರಲ್ಲಿ ಸಹಜವಾಗಿ ಆತಂಕ ಮೂಡಿಸಿತು. ಸಿಎನ್‌ಎನ್- ಐಬಿಎನ್‌ನಲ್ಲಿ ರಾಜ್‌ದೀಪ್ ಸರ್ದೇಸಾಯಿ ಆ ದೃಶ್ಯ ತೋರಿಸುತ್ತ ಚರ್ಚೆ ನಡೆಸಿದರು. 

ಉಳಿದ ಚಾನಲ್‌ಗಳು ಮೋದಿ ನಾಮಪತ್ರ ಪ್ರಸಾರಕ್ಕೆ ಪೈಪೋಟಿಗೆ ಇಳಿದವು. ರಾಜ್‌ದೀಪ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮರಾಠಿಯ ಹಿರಿಯ ಪತ್ರಕರ್ತ ಕುಮಾರ್ ಕೇತ್ಕರ್ ಕೋಪದಿಂದ ಕುದಿಯುತ್ತಿದ್ದರು. ‘‘ಇದು ಫ್ಯಾಶಿಸಂನ ನಗ್ನ ನರ್ತನ. 1933ರಲ್ಲಿ ನಾಝಿ ಸರ್ವಾಧಿಕಾರಿ ಹಿಟ್ಲರ್ ಬರ್ಲಿನ್‌ನಲ್ಲಿ ಇದೇ ರೀತಿ ಲಕ್ಷಾಂತರ ಜನರನ್ನು ಸೇರಿಸಿ ಮತ್ತೇರಿಸಿ ಅಧಿಕಾರಕ್ಕೆ ಬಂದ. ಆ ದಿನ ಮತ್ತೆ ನೆನಪಾಗುತ್ತಿದೆ ಎಂದು ಕೇತ್ಕರ್ ಹೇಳಿದಾಗ ರಾಜ್‌ದೀಪ್ ಮುಗುಳ್ನಗು ತ್ತಿದ್ದರು. ಈ ಚಾನಲ್‌ನಲ್ಲಿ ಅಂಬಾನಿಯ ಶೇ.95ರಷ್ಟು ಶೇರು ಇರುವುದರಿಂದ ರಾಜ್‌ದೀಪ್ ತಮ್ಮ ಪ್ರತಿಕ್ರಿಯೆಯನ್ನು ಮುಗುಳ್ನಗೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. 

ಕುಮಾರ್ ಕೇತ್ಕರ್ ಮತ್ತೆ ಸಿಟ್ಟಿನಿಂದ ‘‘ಸೆಕ್ಯುಲರ್ ಪಕ್ಷಗಳು ಎಲ್ಲಿವೆ? ಯಾಕೆ ಪರಿಣಾಮಕಾರಿ ಪ್ರತಿರೋಧ ಒಡ್ಡುತ್ತಿಲ್ಲ?’’ ಎಂದು ಚರ್ಚೆಯಲ್ಲಿದ್ದ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವ ಮೂಲಕ ಪ್ರಭುತ್ವದ ಸೂತ್ರ ವಶಪಡಿಸಿಕೊಂಡು ತನ್ನ ಹಿಡನ್ ಅಜೆಂಡಾ ಜಾರಿಗೆ ತರುವ ಷಡ್ಯಂತ್ರ ರೂಪಿಸಿರುವ ಆರೆಸ್ಸೆಸ್ 1977ರ ನಂತರ ಇದೇ ಮೊದಲ ಬಾರಿ ಅತ್ಯಂತ ಆಕ್ರಮಣಕಾರಿ ಪ್ರಚಾರಕ್ಕೆ ಇಳಿದಿದೆ. ಈ ಬಾರಿ ಕೈ ತಪ್ಪಿದರೆ ಇನ್ನೆಂದೂ ಇಂತಹ ಅವಕಾಶ ಸಿಗುವುದಿಲ್ಲ ಎಂದು ಮೋಹನ್ ಭಾಗವತ್ ಸ್ವಯಂ ಸೇವಕರನ್ನು ಹುರಿದುಂಬಿಸಿ ಪ್ರಚಾರದ ಕಣಕ್ಕೆ ಇಳಿಸಿದ್ದಾರೆ. ಐವತ್ತು ಲಕ್ಷ ಕಾರ್ಯಕರ್ತರು ದೇಶವ್ಯಾಪಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಬಾಬಾ ರಾಮ್‌ದೇವ್, ಅಸಾರಾಂ ಬಾಪುರಂಥ ದಲ್ಲಾಳಿ ಸನ್ಯಾಸಿಗಳು ಈ ಸ್ವಯಂ ಸೇವಕರ ಜೊತೆಗಿದ್ದಾರೆ.

ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರು ಇವೆಲ್ಲ ಮಾಧ್ಯಮ ಸೃಷ್ಟಿ ಎಂದು ಅಲ್ಲಗಳೆಯುತ್ತಿದ್ದರೂ ಫ್ಯಾಶಿಸಂ ಭಾರತದ ಬಾಗಿಲಿಗೆ ಬಂದು ನಿಂತಿರುವುದು ಹಗಲಿನಷ್ಟು ಸತ್ಯ. ಪ್ರಜಾಪ್ರಭುತ್ವ, ಸಂವಿಧಾನ, ಸಹಬಾಳ್ವೆಯ ಅರಿವಿಲ್ಲದ ನಮ್ಮ ಮಧ್ಯಮ ವರ್ಗದ ಹೊಣೆಗೇಡಿತನ, ಸೆಕ್ಯುಲರ್ ಪಕ್ಷಗಳ ಒಡಕು, ಫ್ಯಾಶಿಸಂಗೆ ದಾರಿ ಮಾಡಿಕೊಡುತ್ತಿವೆ. ಫ್ಯಾಸಿಸಂ ಬರೀ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿ ಅಲ್ಲ. ಅದು ಬಹುಸಂಖ್ಯಾತ ಹಿಂದುಗಳಿಗೂ ಮಾರಕ ಎಂಬ ಅರಿವು ಅನೇಕರಿಗೆ ಇಲ್ಲ. ವೈವಿಧ್ಯತೆಯನ್ನು ನಾಶ ಮಾಡಿ ಏಕರೂಪಿ ಸಮಾಜಕಟ್ಟುವ ಆರೆಸ್ಸೆಸ್ ಹುನ್ನಾರ ನಾಗರಿಕತೆಯನ್ನು ನಾಶಮಾಡಲಿದೆ.

ಈ ದೇಶದಲ್ಲಿ ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿಗಳಿವೆ. ಪ್ರತಿ ಹತ್ತು ಕಿಲೊ ಮೀಟರ್‌ಗೆ ಭಾಷೆ, ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಸೂಕ್ಷ್ಮ ಬದಲಾವಣೆಯನ್ನು ಕಾಣುತ್ತೇವೆ. ಈ ವೈವಿಧ್ಯತೆ ಭಾರತವನ್ನು ಏಕತ್ರವಾಗಿ ಬೆಸಿದಿದೆ. ಮೋದಿ ಅಧಿಕಾರಕ್ಕೆ ಬಂದರೆ ಈ ವೈವಿಧ್ಯತೆಗೆ ಗಂಡಾಂತರ ಬರುತ್ತದೆ. ಆಗ ಈ ದೇಶದಲ್ಲಿ ಯಾದವೀ ಕಲಹ ಆರಂಭವಾಗುತ್ತದೆ. ಕ್ರಮೇಣ ಪ್ರಜಾಪ್ರಭುತ್ವ ನಿರ್ಣಾಮವಾಗುತ್ತದೆ. ಇದು ಪ್ರಜ್ಞಾವಂತರೆಲ್ಲರ ಸಹಜ ಆತಂಕವಾಗಿದೆ. ಭಯಾನಕ ದಿನಗಳೂ ನಮ್ಮ ಕಣ್ಣು ಮುಂದಿವೆ. ನಮ್ಮ ಪೊಲೀಸರು ಯಾರನ್ನು ರಕ್ಷಿಸುತ್ತಾರೆ, ಯಾರನ್ನು ಕೊಲ್ಲುತ್ತಾರೆ ಎಂಬುದನ್ನು ಕಬೀರ್ ಹತ್ಯೆಯಲ್ಲಿ ನೋಡಿದ್ದೇವೆ. ಬಜರಂಗಿಗಳೊಂದಿಗೆ ಪಾರ್ಟಿ ಮಾಡುವ ನಕ್ಸಲ್ ನಿಗ್ರಹ ದಳಗಳು ನಮ್ಮಲ್ಲಿವೆ. 

ಇದನ್ನು ಖಂಡಿಸಿದರೆ ಸುರೇಶ್ ಭಟ್ಟರಂತೆ ಮುಖಕ್ಕೆ ಸೆಗಣಿ ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಿದೆ. ಕಮ್ಯೂನಿಸ್ಟರ ದಿಕ್ಕು ತಪ್ಪಿದೆ. ಎಲ್ಲೆಡೆ ಕಗ್ಗತ್ತಲು ಕವಿಯುತ್ತಿದೆ. ಈ ಕಗ್ಗತ್ತಲಲ್ಲಿ ಕೊಳ್ಳಿ ದೆವ್ವಗಳ ನಗ್ನ ನರ್ತನ ನಡೆದಿದೆ. ಟಿ.ವಿ.ಯಲ್ಲಿ ಯಾವ ಚಾನಲ್ ಬದಲಿಸಿ ನೋಡಿದರೂ ಅದೇ ಅಸಹ್ಯ ಮುಖ. ಅದೇ ಅರಚಾಟ, ಈ ಚಾನಲ್‌ಗಳನ್ನು ನೋಡಿದರೆ ದೃಶ್ಯ ಮಾಲಿನ್ಯ, ಬುದ್ಧಿ ಮಾಲಿನ್ಯ ಏಕಕಾಲಕ್ಕೆ ಉಂಟಾಗುತ್ತವೆ. 

ಕೊನೆಗೆ ರವಿವಾರ ರಾತ್ರಿ 10 ಗಂಟೆಗೆ ರಾಜ್ಯಸಭಾ ಚಾನಲ್‌ನತ್ತ ರಿಮೋಟ್ ತಿರುಗಿಸಿದಾಗ ಶಾಮ್ ಬೆನಗಲ್ ಅವರ ‘ಸಂವಿಧಾನ’ ಸಾಕ್ಷಚಿತ್ರ ಮೂಡಿ ಬರುತ್ತಿತ್ತು. ಇದು ಕಳೆದ ಕೆಲ ವಾರಗಳಿಂದ ಧಾರಾವಾಹಿ ಯಾಗಿ ಬರುತ್ತಿದೆ. ಈ ‘ಸಂವಿಧಾನ’ ನೋಡಿದ ನಂತರ ಮನಸ್ಸು ಕೊಂಚ ಹಗುರವಾಯಿತು. ಈ ಸಂವಿಧಾನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರುತ್ತಾರೆ. ಪಂಡಿತ್ ನೆಹರೂ ಗೋಚರಿಸುತ್ತಾರೆ, ವೌಲಾನಾ ಆಝಾದ್ ಕಾಣಿಸುತ್ತಾರೆ. ಪಟೇಲ್, ಗೋವಿಂದ ವಲ್ಲಭ ಪಂತ್ ಹೀಗೆ ಸಂವಿಧಾನ ರಚನಾ ಸಭೆಯ ಹಿರಿಯ ಸದಸ್ಯರನ್ನು ನೋಡುತ್ತೇವೆ. 

ನಮ್ಮ ಸಂವಿಧಾನ ರೂಪುಗೊಳ್ಳುವ ಮುನ್ನ ಸಂವಿಧಾನ ರಚನಾ ಸಭೆಯ ಕಲಾಪಗಳನ್ನು ಶಾಮ ಬೆನಗಲ್ ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಕಲಾಪಗಳನ್ನು ಯಥಾವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನು ರವಿವಾರ ರಾತ್ರಿ 10ರಿಂದ 11 ಗಂಟೆ ವರೆಗೆ ತಪ್ಪದೆ ನೋಡಿದರೆ ಈ ಮೋದಿ ಮಾಲಿನ್ಯದಿಂದ ಪಾರಾಗಬಹುದು. ಸಂವಿಧಾನ ರಚನಾ ಸಭೆಯಲ್ಲಿ ನಮ್ಮ ದೇಶದ ವಿವಿಧ ಕಾನೂನುಗಳ ರಚನೆಯ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತದೆ. 

ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದ ಡಾ. ಅಂಬೇಡ್ಕರ್ ಸದಸ್ಯರ ಸಂದೇಹಗಳಿಗೆ ಅತ್ಯಂತ ಅಧ್ಯಯನ ಪೂರ್ಣವಾದ ಸಮಾಧಾನಕರ ಉತ್ತರ ನೀಡುತ್ತಾರೆ. ಮೀಸಲಾತಿ ಪ್ರಶ್ನೆಯಲ್ಲಿ ಎದ್ದ ಅಪಸ್ವರಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಯಶಸ್ವಿಯಾಗುತ್ತಾರೆ. ಅಂಬೇಡ್ಕರ್ ಪಾತ್ರ ನಿರ್ವಹಿಸಿದ ಮರಾಠಿ ರಂಗಭೂಮಿ ನಟನ ಪರಿಣಾಮಕಾರಿ ಅಭಿನಯ ಮನಸೆಳೆಯುತ್ತದೆ.

ಸಂವಿಧಾನಕ್ಕೆ ಎದುರಾಗಿರುವ ಇಂದಿನ ಗಂಡಾಂತರದ ಹಿನ್ನೆಲೆಯಲ್ಲಿ ರಾಜ್ಯಸಭಾ ಚಾನಲ್‌ನಲ್ಲಿ ಮೂಡಿಬರುವ ಸಂವಿಧಾನ ಸಾಕ್ಷಚಿತ್ರವನ್ನು ಪ್ರಜ್ಞಾವಂತರೆಲ್ಲ ತಪ್ಪದೆ ನೋಡಬೇಕಾಗಿದೆ. ಮುಂಚೆ ಸರಕಾರಿ ಚಾನಲ್‌ಗಳೆಂದು ದೂರದರ್ಶನವನ್ನು ನಾನು ನೋಡುತ್ತಿರಲಿಲ್ಲ. ಆದರೆ ಜನರಿಗೆ ಹೊಲಸನ್ನು ಉಣ ಬಡಿಸುತ್ತಿರುವ ಕಾರ್ಪೊರೇಟ್ ಚಾನಲ್‌ಗಿಂತ ಈ ಸರಕಾರಿ ಚಾನಲ್‌ಗಳೇ ಎಷ್ಟೋ ಉತ್ತಮ ಎಂಬ ಅರಿವು ನನಗೆ ಉಂಟಾಗಿದೆ. 

ದೇಶದಲ್ಲಿ ಇಂದು ನಡೆಯುತ್ತಿರುವ ವ್ಯಕ್ತಿ ಪೂಜೆಯ ಅತಿರೇಕ ಅಸಹ್ಯ ಹುಟ್ಟಿಸುತ್ತಿದೆ. ಈ ವ್ಯಕ್ತಿ ಪೂಜೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಡಾ. ಅಂಬೇಡ್ಕರ್ ಎಚ್ಚರಿಸಿದ್ದರು. 1949ರ ನವೆಂಬರ್ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡುತ್ತಿದ್ದ ಅಂಬೇಡ್ಕರ್ ‘‘ಭಕ್ತಿ, ಆರಾಧನೆ ಧರ್ಮಕ್ಕೆ ಸೀಮಿತವಾಗಿರಲಿ. ಅದು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ’’ ಎಂದು ಉತ್ತರಿಸಿದ್ದರು. 

ಇಂದು ದೇಶದಲ್ಲಿ ಅತ್ಯಂತ ಅಸಹ್ಯವಾದ ವ್ಯಕ್ತಿ ಪೂಜೆ ನಡೆದಿದೆ. 125 ಕೋಟಿ ಜನರಲ್ಲಿ ಇಲ್ಲದ ಶಕ್ತಿ ಈ ಒಬ್ಬ ವ್ಯಕ್ತಿಯಲ್ಲಿದೆ ಎಂದು ಉೇ ಉೇ ಎನ್ನಲಾಗುತ್ತಿದೆ. ಈತ ಅಧಿಕಾರಕ್ಕೆ ಬಂದರೆ ಮಳೆಯಾಗದ ಕಡೆ ಮಳೆ ತರಿಸುತ್ತಾನೆ. ಭೂಕಂಪನದಿಂದ ಭೂಮಿಯನ್ನು ರಕ್ಷಿಸುತ್ತಾನೆ ಎಂಬ ಕತೆ ಕಟ್ಟಲಾಗುತ್ತಿದೆ. ಇದು ಇಂದಲ್ಲ ನಾಳೆ ಜನತಂತ್ರವನ್ನು ನಾಶ ಮಾಡುವ ಪ್ರವೃತ್ತಿಯಾಗಿದೆ. ಅಂತಲೇ ಅಂಬೇಡ್ಕರ್ ಅಂದು ನೀಡಿದ ಎಚ್ಚರಿಕೆ ಇಂದಿಗೂ ದಾರಿದೀಪವಾಗಿದೆ.

Saturday, April 26, 2014

’ಮೇದಿನ’ ಕೇವಲ ದಿನಾಚರಣೆಯಲ್ಲ.. ’ಹುತಾತ್ಮರ ಮಹಾನ್‌ಗಾಥೆ’


Mahantesh Kariyappa


ಕೆ. ಮಹಾಂತೇಶಮೇ.೧ ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ. ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ದಿನ.
ಅದು ೧೮೮೬ ರ ಮೇ ೪ ಮಂಗಳವಾರ. ಸಮಯ ರಾತ್ರಿ ಎಂಟೂವರೆ ಗಂಟೆ. ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕಿನ ಬಳಿ ಸುಮಾರು ೨೫೦೦ ಜನರು ನೆರೆದಿದ್ದ ಒಂದು ಸಭೆ. ಆ ಸಭೆಯನ್ನುದ್ದೇಶಿಸಿ ಕಾರ್ಮಿಕ ಪತ್ರಿಕೆಯೊಂದರ ಸಂಪಾದಕ ಆಗಸ್ಟ್ ಸ್ಟೈಜ್ ಆಗಷ್ಟೇ ತನ್ನ ಪ್ರತಿಭಟನಾ ಭಾಷಣ ಆರಂಭಿಸಿದ್ದರು. ಆ ಈ ಸಭೆಯ ಹಿಂದಿನ ದಿನವಷ್ಟೇ, ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ಮುಷ್ಕರನಿರತ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಅದನ್ನು ಖಂಡಿಸಿ ಚಿಕಾಗೋದ ಈ ಹೇ ಮಾರ್ಕೆಟ್ ಚೌಕದಲ್ಲಿ ಈ ಸಭೆ ನಡೆಯುತ್ತಿತ್ತು. ಆಗಸ್ಟ್ ಸ್ಟೈಜ್ ಭಾಷಣದ ಬಳಿಕಾ ಕಾರ್ಮಿಕ ನಾಯಕ ಆಲ್ಬರ್ಟ ಪಾರ್ಸನ್ ಆದಾದ ನಂತರ ಮೆಥಾಡಿಸ್ಟ್ ಚರ್ಚನ ಪಾದ್ರಿಯಾಗಿದ್ದ ಸ್ಯಾಮುಯಲ್ ಮಾತನಾಡಿ ಅಮೇರಿಕನ್ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲು ಮಾಡತೊಡಗಿದರು. ಗಂಟೆ ರಾತ್ರಿ ಹತ್ತುವರೆಯಾದರೂ ಅಲ್ಲಿ ಎರಡೂ ಸಾವಿರಕ್ಕೂ ಹೆಚ್ಚಿನ ಜನರು ಇನ್ನೂ ಇದ್ದರು. ಸ್ಯಾಮುಯಲ್ ಫೀಲ್ಡನ್ ತನ್ನ ಭಾಷಣ ಮುಗಿಸಬೇಕು ಎನ್ನುವಷ್ಟರಲ್ಲೇ...೧೭೬ ಜನರನ್ನು ಒಳಗೊಂಡ ಸಶಸ್ತ್ರ ಪೊಲೀಸರ ತುಕಡಿಯೊಂದು ಡಿಢೀರನೆ ಆ ಸಭೆಯ ಮೇಲೆ ದಾಳಿ ನಡೆಸಿತು. ಅಷ್ಟರಲ್ಲೇ ಪೊಲೀಸರ ಮಧ್ಯೆದಲ್ಲೇ ಒಮ್ಮೇಲೆ ಡೈನಮೈಟ್ ಬಾಂಬ್ ಅಸ್ಪೋಟಿಸಿತು. ಅಮೇರಿಕಾದ ಇತಿಹಾಸದಲ್ಲೇ ಇಂತಹ ಬಾಂಬು ಅಸ್ಪೋಟಗೊಂಡಿದ್ದು ಇದೇ ಮೊದಲು.! ಪರಿಣಾಮ ಒಬ್ಬ ಸತ್ತು ಹತ್ತಾರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇದರಿಂದಾಗಿ ಕೋಪದ್ರೇಕಗೊಂಡ ಪೊಲೀಸರು ವಿವೇಕಹೀನರಾಗಿ ಹಲವು ದಿಕ್ಕುಗಳಿಂದ ಯರ್ರಾ-ಬಿರ್ರಿಯಾಗಿ ಗುಂಡು ಹಾರಿಸಿ ನಾಲ್ಕು ಕಾರ್ಮಿಕರ ದೇಹಗಳನ್ನು ನೆಲಕ್ಕುರುಳಿಸಿದರು. ಮತ್ತೂ ಹತ್ತಾರು ಜನರು iರಣಾಂತಿಕವಾಗಿ ಗಾಯಗೊಂಡರು. ಈ ಬಾಂಬು ಅಸ್ಪೋಟವು ಪೊಲೀಸರನ್ನು ಎಷ್ಟು ಭಯ-ಭೀತರನ್ನಾಗಿಸಿತ್ತೆಂದರೆ...ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಅಲ್ಲಿ ನೆರೆದಿದ್ದ ಕಾರ್ಮಿಕರನ್ನು ಕೊಂದಿದ್ದು ಮಾತ್ರವಲ್ಲ ಅವರ ಆರು ಜನ ಪೊಲೀಸ ಸಹೋದ್ಯೋಗಿಗಳನ್ನೇ ಸ್ವತಃ ಅವರ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದರು.!

ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಅಂದು ನಡೆದ ಈ ದುರ್ಘಟನೆಯ ಪರಿಣಾಮ ನಂತರದ ದಿನಗಳಲ್ಲಿ ಇನ್ನೂ ಭೀಕರವಾಗಿತ್ತು. ಚಿಕಾಗೋ ಮಾತ್ರವಲ್ಲ ಅಮೇರಿಕಾದ ಎಲ್ಲಾ ನಗರಗಳಲ್ಲಿ ವಾಕ್ ಮತ್ತು ಸಂಘಟನಾ ಸ್ವಾತಂತ್ರ್ಯದ ಹಕ್ಕುಗಳು ಮೊಟಕುಗೊಂಡು ಹೇಳಹೆಸರಿಲ್ಲದಂತೆ ಮಾಯವಾದವು. ಅಮೇರಿಕಾದಾದ್ಯಂತ ನೂರಾರು ಕಾರ್ಮಿಕ ನಾಯಕರುಗಳನ್ನು ದಸ್ತಗೀರಿ ಮಾಡಿ ಹಿಂಸೆ ನೀಡಲಾಯಿತು. ಪೊಲೀಸರ ಉದ್ದಟತನದಿಂದ ಉಂಟಾದ ಹೇ ಮಾರ್ಕೆಟ್ ದುರ್ಘಟನೆಯ ಹೊಣೆಯನ್ನು ನೈಟ್ಸ್ ಆಫ್ ಲೇಬರ್(ಏಟಿighಣs oಜಿ ಐಚಿbouಡಿ) ಹೆಗಲಿಗೆರಿಸಿ ಅದರ ಮುಖಂಡರನ್ನು ದೋಷರೋಪಿಗಳನ್ನಾಗಿ ಮಾಡಲಾಯಿತು. ಅಮೇರಿಕಾದ ಪತ್ರಿಕೆಗಳು, ವ್ಯಾಪರಸ್ಥರು ಮತ್ತು ಜನಸಾಮನ್ಯರು ಹೀಗೆ ಎಲ್ಲರೂ ಲೇಬರ್ ಯೂನಿಯನ್ ಮುಖಂಡರನ್ನು ದ್ವೇಷಿಸಲಾರಂಭಿಸಿದರು. ಪರಿಣಾಮ ಕಾರ್ಮಿಕರು ಜನಸಾಮನ್ಯರ ಸಹನೂಭೂತಿ ಕಳೆದುಕೊಂಡರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈಗಾರಿಕಾ ಮಾಲೀಕರು ಸರ್ಕಾರದ ಮೆಲೆ ಒತ್ತಡ ತಂದು ಕಾರ್ಮಿಕ ನಾಯಕರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ಬಂಧಿಸಲಾಗಿದ್ದ ೮ ಜನ ಮುಖಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅದರಲ್ಲಿ ೪ ಜನರನ್ನು ೧೮೮೭ ನವೆಂಬರ್ ೧೧ ರಂದು ಗಲ್ಲಿಗೇರಿಸಲಾಯಿತು. ಉಳಿದ ೪ ಜನರ ಪೈಕಿ ಒಬ್ಬ ಲೂಯಿ ಲಿಂಗ್ ಎಂಬಾತನು ಜೈಲಿನಲ್ಲೇ ಡೈನಾಮೈಟ್ ಸಿಡಿತದಿಂದ ಹಿಂದಿನ ದಿನವಷ್ಟೇ ಸತ್ತು ಹೋದರೆ ಉಳಿದ ೩ ಕೈದಿಗಳಿಗೆ ೧೮೯೩ ಜೂನ್‌ನಲ್ಲಿ ಕ್ಷಮದಾನ ನೀಡಿ ಬಿಡುಗಡೆಗೊಳಿಸಲಾಯಿತು. ’ಹೇ ಮಾರ್ಕೆಟ್‌ನ ಆ ಪ್ರತಿಭಟನಾ ಸಭೆ, ನಂತರ ನಡೆದ ಪೊಲೀಸ್ ದೌರ್ಜನ್ಯ, ನಂತರದ ವಿಚಾರಣೆ, ಗಲ್ಲು ಶಿಕ್ಷೆ ಹೀಗೆ ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಇಂದಿಗೂ ’ಹೇ ಮಾರ್ಕೆಟ್ ಹತ್ಯಾಕಾಂಡ’ವೆಂದೇ ಇಂದಿಗೂ ಕರೆಯಲ್ಪಡುತ್ತದೆ.


ಚಿಕಾಗೋದಲ್ಲೇ ಯಾಕೆ...?


೧೮೮೬ ಈ ಹೇ ಮಾರ್ಕೆಟ್ ಘಟನೆ ಚಿಕಾಗೋ ನಗರಲ್ಲೇ ಯಾಕೆ ಸಂಭವಿಸಿತು..? ಎಂಬ ಪ್ರಶ್ನೆಗೆ ಚಿಕಾಗೋನಗರದ ಲೇಖಕ ನೆಲ್ಸನ್ ಆಲ್‌ಗ್ರೆನ್ ೧೯೫೦ ರಲ್ಲಿ ತನ್ನ ಬರವಣಿಗೆಯಲ್ಲಿ ಹೀಗೆ ಹೇಳುತ್ತಾನೆ.. ಚಿಕಾಗೋ ಎನ್ನುವುದು ಒಂದು ಉರ್ಧ್ವಮುಖಿ ನಗರ ಅಲ್ಲಿನ ಪ್ರತಿಯೊಬ್ಬನು ಅಂತರ್‌ಮುಖಿಯಾಗಿ ಕೇವಲ ತನ್ನ ಏಳಿಗೆಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ. ಅನ್ಯರ ಬಗ್ಗೆ ಕಿಂಚಿತ್ತು ಕಾಳಜಿ ತೋರದೆ ಸ್ವಾರ್ಥಿಗಳನ್ನೊಳಗೊಂಡ ಸಂತೃಪ್ಪ ತಾಣವಾಗಲು ಆ ನಗರ ಸದಾ ಹವಣಿಸುತ್ತಿತ್ತು. ಬಹುಶಃ ಆರಂಭದಿಂದಲೂ ಚಿಕಾಗೋ ಹೀಗೆ ಇತ್ತೆಂದು ಕಾಣುತ್ತದೆ ಅದು ಯಾವ ಕಾಲದಲ್ಲೂ ಸ್ನೇಹ-ಸೌಹಾರ್ಧಯುತ ಮತ್ತು ಸಹಕಾರದ ನಗರವಾಗದೆ ಸದಾ ಪೈಪೋಟಿಯೇಯನ್ನೇ ತನ್ನ ಒಡಲಲ್ಲಿ ಆವರಿಸಿಕೊಂಡಿತ್ತು. ಎಂಬುದಾಗಿ ನೆಲ್ಸನ್ ವಿವರಿಸಿದ್ದಾನೆ. ಅಲ್ಲಿಗೆ ಭೇಟಿ ನೀಡಿದ್ದ ವಿದೇಶಿಯರ ಬಾಯಲ್ಲಿ ಕೂಡ ಚಿಕಾಗೋದ ನಗರವಾಸಿಗಳು ಸದಾ ಸಂಪತ್‌ನ್ನು ಉಳಿಸುವ-ಗಳಿಸುವ ವಿಷಯದಲ್ಲೇ ಸಾಕಷ್ಟು ಆಸಕ್ತರಾಗಿದ್ದರು. ಒಟ್ಟಿನಲ್ಲಿ ’ಡಾಲರ್ ಸಾಮ್ರಾಟ’ನಾಗಿ ಮೆರೆಯುತ್ತಿದ್ದ ನಗರವಾಗಿತ್ತು ಎಂಬ ಖ್ಯಾತಿ ಗಳಿಸಿತ್ತು.


೧೮೮೦ ರ ಸುಮಾರಿನಲ್ಲಿ ಈ ಚಿಕಾಗೋ ನಗರ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ನಗರವಾಗಿತ್ತು. ೧೮೮೭ ರ ಲಂಡನ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ನ್ಯೂಯಾರ್ಕಿಗಿಂತಲೂ ಹೆಚ್ಚು ದುಂದುಗಾರರನ್ನು ಹೊಂದಿದ, ಸಟ್ಟಾ ವ್ಯಾಪಾರವನ್ನು ಕರಗತ ಮಾಡಿಕೊಂಡ ಚತುರ ಉದ್ದಿಮೆಗಾರರನ್ನು, ಧಾಡ್ಸಿ ಸ್ವಾಭಾವದ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದ ಮತ್ತು ಉದಿಮೆದಾರರ ’ಸ್ವರ್ಗ’ವಾಗಿ ಚಿಕಾಗೋ ರೂಪಗೊಂಡಿತ್ತು. ನ್ಯೂ ಇಂಗ್ಲೆಂಡ್ ಮತ್ತು ಪೂರ್ವದ ಕಡೆಯಿಂದ ಬಂದಿದ್ದ ಹಲವು ಆಂಗ್ಲೋ ಸ್ನಾಕ್ಸನ್ ಪ್ರಾಟೆಸ್ಟೆಂಟರೇ ಚಿಕಾಗೋ ನಗರ ಬದುಕಿನ ಪ್ರಭಾವಿ ಪುರುಷರಾಗಿ ಬೆಳೆದಿದ್ದರು. ೧೮೩೦-೪೦ ದಶಕಗಳಲ್ಲಿ ಈ ನಗರಕ್ಕೆ ಐರಿಶರು ಹಾಗೂ ಜರ್ಮನರು ಆಗಮಿಸತೊಡಗಿದರು. ಆರಂಭದಲ್ಲಿ ಬಂದು ತಳವೂರಿಸಿದವರು ನಂತರ ಬಂದವರನನು ಸಹಜವಾಗಿಯೇ ’ಕನಿಷ್ಟರೆಂದು’ ಅವರನ್ನು ಶೋಷಿಸಲಾರಂಭಿಸಿದರು. ಇದರ ವಿರುದ್ದ ಕ್ರಮೇಣ ಐರಿಶ ಹಾಗೂ ಜರ್ಮನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟಕ್ಕಿಳಿದರು. ಆದರೆ ಚಿಕಾಗೋದ ಶೋಷಕ ಪ್ರಭುಗಳು ಝೆಕ್, ಬೋಗೀಮಿಯನ್, ಪೊಲೀಶ್ ಮೊದಲಾದ ಇತರೆ ಜನಾಂಗೀಯ ಕಾರ್ಮಿಕರನ್ನು ತಂದು ಹೋರಾಟಗಾರರ ವಿರುದ್ದ ಛೂ ಬಿಟ್ಟರು. ಪರಿಣಾಮವಾಗಿ ಜನಾಂಗೀಯ ಗಲಭೆಗಳು ಚಿಕಾಗೋ ನಗರದ ದಿನನಿತ್ಯದ ಘಟನೆಗಳಾದವು. ೧೮೮೫ ರ ಹೊತ್ತಿಗೆಲ್ಲಾ ಚಿಕಾಗೋ ನಗರವು ಸ್ಥಳೀಯರಿಗಿಂತ ವಿದೇಶಿಗರಿಂದಲೇ ತುಂಬಿ ಹೋಗಿತ್ತು. ಅಲ್ಲದೆ ತಮ್ಮ ಹಕ್ಕುಗಳಿಗಾಗಿ ಹಾಗೂ ತಮ್ಮ ಮೇಲೆ ನಡೆಯುತ್ತಿದ್ದ ಅಮಾನವೀಯ ಶೋಷಣೆ ವಿರುದ್ದವೂ ಆ ವಲಸೆ ಜನರು ನಿತ್ಯ ಬಂಡಾಯ ನಡೆಸುತ್ತಿದ್ದರು. ಇದರಿಂದಾಗಿ ಹೆದರಿದ ಚಿಕಾಗೋದ ಬೃಹತ್ ಉದ್ದಿಮೆದಾರರು ಹೊರಗಿನವರನ್ನು ಹತ್ತಿಕ್ಕಲು ಜನಾಂಗೀಯ ವಿರೋಧಿ, ವಿದೇಶಿಯರ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ’ನೋ-ನಥಿಂಗ್ಸ್’(ಏಟಿoತಿ- ಓoಣhiಟಿgs) ಎನ್ನುವ ರಾಜಕೀಯ ಪಕ್ಷವೂಂದನ್ನು ಹುಟ್ಟು ಹಾಕಿದರು.
ಸರಣಿ ಹೋರಾಟಗಳ ಪರ್ವ

ಈಗಾಗಲೇ ಪ್ರಸ್ತಾಪಿಸದಂತೆ ೧೮೮೬ ರ ಮೇ ೪ ರ ಆ ’ಹೇ ಮಾರ್ಕೆಟ್’ ಘಟನೆಯು ಆಕಸ್ಮಿಕವಾದುದಲ್ಲ. ಅದಕ್ಕಿಂತ ಪೂರ್ವದಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ಕನಿಷ್ಟವೇತನಕ್ಕಾಗಿ, ಎಂಟು ಗಂಟೆ ಕೆಲಸದ ಬೇಡಿಕೆಗಾಗಿ, ಹಲವು ಸರಣಿ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದರು. ಅದರಲ್ಲಿ ಪ್ರಮುಖವಾದವುಗಳೆಂದರೆ, ಚಿಕಾಗೋದಲ್ಲಿ ವಲಸೆ ಕಾರ್ಮೀಕರು ಪ್ರತಿ ಭಾನುವಾರದ ರಜಾ ಸಮಯದಲ್ಲಿ ಒಂದೆಡೆ ಸೇರುತ್ತಿದ್ದ ಮತ್ತು ತಮ್ಮ ಕಷ್ಟ ಸುಖ ಹಾಗೂ ತಮ್ಮ ಸಂಘಟನೆ ಕುರಿತು ಚರ್ಚಿಸುತ್ತಿದ್ದ ಸ್ಥಳಗಳೆಂದರೆ ’ಮದ್ಯದಂಗಡಿಗಳು’ ಆದರೆ ಬಾರ್ ಲೈಸೆನ್ಸ್ ಶುಲ್ಕಗಳನ್ನು ೩೦ ರಿಂದ ೩೦೦ ಡಾಲರ್‌ಗೆ ಹೆಚ್ಚಿಸಿದ ನಗರಾಡಳಿತ ಕ್ರಮದಿಂದ ಅನೇಕ ಮದ್ಯದಂಗಡಿಗಳು ಮುಚ್ಚಿದವು. ಪರಿಣಾಮವಾಗಿ ಕಾರ್ಮಿಕರು ಒಂದಡೆ ಸೇರುವ ಅವಕಾಶದಿಂದ ವಂಚಿತರಾದರು. ಇದರ ವಿರುದ್ದ ೧೮೮೫ರ ಏಪ್ರಿಲ್ ೨೧ ರಂದು ನಡೆಸಲಾದ ಕಾರ್ಮಿಕರ ಬೃಹತ್ ಮೆರವಣಿಗೆಯನ್ನು ಅಲ್ಲಿಯ ಮೇಯರ್ ಪೊಲೀಸರನ್ನು ಬಳಸಿ ಹತ್ತಿಕ್ಕಿದನು. ಅಂದು ನಡೆದ ಗೋಲಿಬಾರ್‌ಗೆ ಒಬ್ಬ ಕಾರ್ಮಿಕ ಬಲಿಯಾದ. ಮತ್ತೊಂದೆಡೆ ಚಿಕಾಗೋ ನಗರದಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಸಾವಿರಾರು ಕಾರ್ಮಿಕರೇ ವಾಸವಿದ್ದ ಮನೆಗಳೆಲ್ಲಾ ಸುಟ್ಟುಬೂದಿಯಾಗಿ ೨೫೦ ಜನರು ಸಜೀವ ದಹನಗೊಂಡರು. ನಿರಾಶ್ರಿತರಿಗೆ ಸರಿಯಾದ ಪರಿಹಾರ ಪುನರ್‌ವಸತಿ ನೀಡುವಲ್ಲಿ ಭಾರೀ ಸಂಚು ರೂಪಿಸಲಾಯಿತು. ಇನ್ನೂ ಇದಕ್ಕಿಂತ ಮೊದಲೇ ೧೮೭೨ ರ ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿದ್ದ ಜನರು ನಡೆಸದ ಹೋರಾಟ ’ರೊಟ್ಟಿ ದಂಗೆ’ ಎಂದೇ ಚಿಕಾಗೋದ ಚರಿತ್ರೆಯಲ್ಲಿ ದಾಖಲಾಯಿತು. ಹಾಗೆ ೧೮೭೭ ರಲ್ಲಿ ನಡೆದ ರೈಲ್ ರೋಡ್ ಮುಷ್ಕರವು ಪ್ರಮುಖವಾದವುಗಳು.
ತದನಂತರದಲ್ಲಿ ಎದ್ದು ಬಂದ ೧೮೮೪ ರ ’ಬಡವರ ಮಾರ್ಚ’ ೧೮೮೫ ರ ’ಸ್ಟ್ರೀಟ್ ಕಾರ್’ ಮುಷ್ಕರ ಸಂದರ್ಭದಲ್ಲಿ ಪೊಲೀಸರು ಕಾರ್ಮಿಕರ ಮೇಲೆ ನಡೆಸಿದ ಪಾಶವೀ ಕೃತ್ಯಗಳ ವಿರುದ್ದದ ಹೋರಾಟಗಳು ಮುಂದಿನ ಚಳುವಳಿಗೆ ಬರೆದ ದಿಕ್ಸೂಚಿಗಳಾದವು.


 ’ಹೇ ಮಾರ್ಕೆಟ್’ ದುರ್ಘಟನೆಗೆ ಪ್ರೇರಣೇ ಏನು..?

ಇದೆಲ್ಲಕ್ಕಿಂತ ಹೆಚ್ಚಾಗಿ ಹೇ ಮಾರ್ಕೆಟ್ ಘಟನೆಗೆ ಕಾರಣವಾದುದು ಚಿಕಾಗೋದ ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ನಡೆದ ಘಟನಾವಳಿಗಳು. ಚಿಕಾಗೋದಲ್ಲಿ ಸೈರನ್ ಮ್ಯಾಕ್ ಕಾರ್ಮಿಕ್ ಸಹೋದದರು ಆರಂಭಿಸಿದ ಈ ಕಂಪನಿ  ಪ್ರಾರಂಭದಲ್ಲಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉತ್ತಮ ಸಂಬಂಧ ಹೊಂದಿತ್ತು. ೧೮೬೨ ರಲ್ಲಿ ಕಂಪನಿಯಲ್ಲಿ ಕಾರ್ಮಿಕ ಸಂಘವನ್ನು ಮಾನ್ಯ ಕೂಡ ಮಾಡಲಾಗಿತ್ತು. ಆದರೆ ಮಾಲೀಕ ಸೈರನ್ ೧೮೮೪ ರಲ್ಲಿ ತೀರಿ ಹೋದ. ಮತ್ತೊಂದು ಮಾಲೀಕ ಸಹೋದರ ಇಯಾಂಡರ್ ಕಂಪನಿ ತೊರೆದ. ನಂತರ ಸೈರನ್ ಮಗನಾದ ಮಾನ್ಯಾಕ್ ಕಾರ್ಮಿಕ್-೨  ಮಾಲೀಕನಾದ. ಅವನು ಕೇವಲ ೨೫ ವರ್ಷದ ಅನುಭವ ರಹಿತ ಮಾಲೀಕ. ಅವನಿಗೆ ಸೂಪರ್ ಲಾಭದ ಬಗ್ಗೆ ಮಾತ್ರವೇ ಗಮನ ಹೊರತು ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕರುಣೆಯೇ ಇರಲಿಲ್ಲ. ಚಿಕಾಗೋದ ಅಂದಿನ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಎಲ್ಲಾ ಕೈಗಾರಿಕೆಗಳು ಸಿಲುಕಿದ್ದರೂ ಈ ಕಂಪನಿ ಮಾತ್ರ ಕಾರ್ಮಿಕರಿಗೆ ಸರಿಯಾಗಿ ಕೂಲಿ ನೀಡದೆ ,ಎಲ್ಲಾ ಸೌಲತ್ತುಗಳನ್ನು ವಂಚಿಸಿ ಶೇ ೭೧ ರಷ್ಟು ಲಾಭಗಳಿಸುತ್ತಿತ್ತು. ಅಂದಿನ ಕಾಲದ ಪತ್ರಿಕೆಗಳ ವರದಿಗಳ ಪ್ರಕಾರ ಕಾರ್ಮಿಕರ ಶ್ರಮವನ್ನು ಲೂಟಿ ಮಾಡುತ್ತಿದ್ದ ಆ ಮಾಲೀಕ ಆ ಪಾಪದ ಹಣವನ್ನೆಲ್ಲಾ ಚಿಕಾಗೋದ ’ಪ್ರೆಸ್‌ಬಿಟೇರಿಯನ್’ ಎನ್ನುವ ಧಾರ್ಮಿಕ ಮಠಕ್ಕೆ ಧಾರೆ ಎರೆಯುತ್ತಿದ್ದ. ಹಾಗೆ ನೀಡಿದ ಹಣದ ಮೊತ್ತ ೪ ಲಕ್ಷ ೫೦ ಸಾವಿರ ಡಾಲರ್ ಆಗಿತ್ತು. ಈ ಕಂಪನಿಯ ಬಹುಪಾಲು ಕಾರ್ಮಿಕರೆಲ್ಲರೂ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾಗಿದ್ದರು. ತಮಗೆ ಅತ್ಯಲ್ಪ ಕೂಲಿ ನೀಡಿ ಉಳಿದ ಹಣವನ್ನು ಧಾರ್ಮಿಕ ಮಠಕ್ಕೆ ನೀಡುವುದರ ವಿರುದ್ದ ಅವರು ತೀವ್ರ ಪ್ರತಿಭಟನೆಗಿಳಿದರು. ಈ ಕಂಪನಿಯಲ್ಲಿ ೧೮೮೪ ರಿಂದ ೧೮೮೬ ರ ಮೇ ನಡುವಿನ ಅವಧಿಯಲ್ಲಿ ಹಲವು ಮುಷ್ಕರಗಳು ನಡೆದವು. ಅಂತಿಮವಾಗಿ ೧೮೮೬ ಮೇ ೩ ರಂದು ಮುಷ್ಕರ ಮುರುಕ ಪೊಲೀಸರು, ಮಾಲೀಕರ ಅಣತಿಯಂತೆ ಕಾರ್ಮಿಕ ಚಳುವಳಿ ಮೇಲೆ ಗೋಲಿಬಾರ್ ನಡೆಸಿದರು. ಈ ಘಟನೆಯೇ ಮರುದಿನದ ’ಹೇ ಮಾರ್ಕೆಟ್’ ದುರ್ಘಟನೆಗೆ ಕಾರಣವಾಯಿತು ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಬಲ ಕಾರ್ಮಿಕ ಆಂದೋಲವನ್ನೇ ಹುಟ್ಟು ಹಾಕಿತು.

’ಮೇ ದಿನದ ಉದಯ’

ಚಿಕಾಗೋದ ಹೇ ಮಾರ್ಕೆಟ್ ಘಟನೆ ಮತ್ತು ನಂತರದಲ್ಲಿ ಕಾರ್ಮಿಕ ನಾಯಕರ ವಿಚಾರಣೆ ನಾಟಕ ಮತ್ತು ಅದರಲ್ಲಿ ೪ ಜನರನ್ನು ಗಲ್ಲಿಗೇರಿಸಿದ ಪ್ರಕರಣದ ಹಿಂದಿರುವ ಪಿತೂರಿಗಳನ್ನು ಅಮೇರಿಕನ್ ಲೇಬರ್ ಯೂನಿಯನ್ ಮತ್ತು ಲೈಟ್ಸ್ ಆಫ್  ಲೇರ್ ಯೂನಿಯನ್‌ನ ಕಾರ್ಮಿಕ ನಾಯಕರು ಅಳವಾಗಿ ಅರ್ಥೈಸಿಕೊಂಡರು. ಚಿಕಾಗೋದ ಆಳುವ ಪ್ರಭುಗಳು ಇಡೀ ಕಾರ್ಮಿಕ ಚಳುವಳಿಯನ್ನೇ ಈ ಪ್ರಕರಣದ ಮೂಲ ಹೊಸಕಿ ಹಾಕುವ ಯೋಜನೆ ಹೊಂದಿದ್ದರು. ಹಾಗಾಗಿ ಹೇ ಮಾರ್ಕೆಟ್ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಮಿಕ ನಾಯಕರ ಬಿಡುಗಡೆಗೆ ಅಮೇರಿಕಾದ ಉದ್ದಗಲಕ್ಕೂ ಪ್ರತಿಭಟನೆಗಳನ್ನು ಅಯೋಜಿಸಿ ಅವರ ಪರ ನ್ಯಾಯಲಯದ ಹೋರಾಟಕ್ಕೆ ಹಣ ಸಂಗ್ರಹಿಸಲಾಯಿತು. ಬಂಧನಕ್ಕೊಳಗಾದ ಈ ನಾಯಕರ ಬಗ್ಗೆ ದೇಶದೆಲ್ಲೆಡೆ ಅನುಕಂಪದ ಮಹಾಪೂರವೆ ಹರಿದು ಬಂತು. ಅಮೇರಿಕಾದ ಹೆಸರಾಂತ ಕಾದಂಬರಿಕಾರ ವಿಲಿಯಂ ಡೀನ್ ಹೊವೆಲ್ಸ್ ಸೇರಿದಂತೆ ಹಲವು ಮಾಜಿ ಸೆನೆಟ್‌ರಗಳು, ಮಾಜಿ ನ್ಯಾಯಧೀಶರು ಹೀಗೆ ಹಲವರು ಕಾರ್ಮಿಕರ ನ್ಯಾಯಬದ್ದ ಹಕ್ಕನ್ನು ಬೆಂಬಲಿದರು. ಈ ಎಲ್ಲಾ ವಿರೋಧಗಳ ನಡುವೆಯೂ ಬಂಧಿತ ಕಾರ್ಮಿಕ ನಾಯಕರನ್ನು ಗಲ್ಲಿಗೇರಿಸಲು ತಯಾರಿ ನಡೆದಿತ್ತು. ಅವರನ್ನು ಗಲ್ಲಿಗೇರಿಸುವ ಆ ೧೮೮೭ ರ ನವೆಂಬರ ೧೧ ದಿನ ಇಡೀ ಚಿಕಾಗೋ ನಗರವೇ ಕಾರ್ಮೀಕರ ಕ್ರೋಧದಿಂದ ಹೆಪ್ಪುಗಟ್ಟಿದ ಕಾರ್ಮೋಡದಂತಿತ್ತು. ಯಾವಗಾ ಬೇಕಾದರೂ ಆ ಮೋಡಗಳು ಒಡೆದು ಅಬ್ಬರದ ಮಳೆ ಸುರಿಯುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಚಿಕಾಗೋದಲ್ಲಿ ಅಂದು ಒಂದೂಗೂಡಿದ್ದ ಕಾರ್ಮಿಕರ ಸಂಖ್ಯೆಗೆ ಅಂದು ಅಲ್ಲಿ ನಿಯೋಜಿಸಲಾಗಿದ್ದ ಶಸ್ತ್ರಸಜ್ಜಿತ ಪೊಲೀಸರು ಏನೇನೂ ಅಲ್ಲವಾಗಿತ್ತು. ಒಂದರ್ಥದಲ್ಲಿ ಅಲ್ಲಿನ ಜೈಲಿನ ಮೇಲೆ ದಾಳಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ಕಾರ್ಮಿಕರು ನಡೆಸಿದ್ದರು.!  ಆದರೆ ಈ ವಿಷಯ ಜೈಲಿನೊಳಗಿದ್ದ ಸ್ಟೈಜ್ ಎಂಗೆಲ್ ಮತ್ತಿತರ ಗಮನಕ್ಕೆ ಬೀಳುತ್ತಿದ್ದಂತೆ ಮರಣದಂಡನೆಗೆ ಗುರಿಯಾಗಿದ್ದರೂ, ಸಾವಿನ ದಡದಲ್ಲೂ ನಿಂತಿದ್ದರೂ ಅವರು ವಿವೇಕಶಾಲಿಗಳಾಗಿ ವರ್ತಿಸಿದರು. ಕಾರ್ಮಿಕರರೇನಾದರೂ ಅಂತಹ ಕಾರ್ಯಕ್ಕೆ ಕೈ ಹಾಕಿದರೆ ಮುಂದಾಗುವ ಘಟನೆಗಳು ಕಲ್ಲನಾತೀತವಾಗಿದ್ದವು. ಇಡೀ ಚಿಕಾಗೋದಲ್ಲಿ ಕಾರ್ಮಿಕರ ಮಾರಣಹೋಮವೇ ನಡೆಯುತ್ತಿತ್ತು. ಹೀಗಾಗಿ ಆತ್ಮಾರ್ಪಣೆ ಮಾಡಲು ರೆಡಿಯಾಗಿದ್ದ ಆ ನಾಲ್ಕು ಬಂಧಿತ ನಾಯಕರು ಇಂತಹ ಕೆಲಸಕ್ಕೆ ಇಳಿಯದಿರುವಂತೆ ಹೊರಗಿರುವ ಕಾರ್ಮಿಕರಿಂದ ಶಪಥ ಮಾಡಿಸಿದರು. ಇಂತಹ ವಿಶಾಲ ಮನೋಭಾವದ ಆ ಕಾರ್ಮಿಕರ ನಾಯಕರನ್ನು ಅಂತಿಮವಾಗಿ ಭೇಟಿ ಮಾಡಲು ಅವರ ಕುಟುಂಬದವರಿಗೂ ಅವಕಾಶ ನೀಡದೆ ಆಳುವ ಅರಸರು ತಮ್ಮ ಅಮಾನವೀಯತೆಯನ್ನು ಮರೆದರು ಮಾತ್ರವಲ್ಲ ೧೮೮೭ರ ನವೆಂಬರ್ ೧೧ ಮದ್ಯಾನ್ಹದ ಹೊತ್ತಿಗೆಲ್ಲಾ ಆ ನಾಲ್ವರು ಕಾರ್ಮಿಕ ನಾಯಕರ ಕುತ್ತಿಗೆಗೆ ಗಲ್ಲಿನ ಹಗ್ಗ ಬಿಗಿದರು.! ಜಗತ್ತಿನ ಕಾರ್ಮಿಕ ಚಳುವಳಿಯ ಇತಿಹಾಸದಲ್ಲಿ ಆ ಶುಕ್ರವಾರ ’ಬ್ಲಾಕ್ ಪ್ರೈಡೇ’ ಎಂದೇ ದಾಖಲಾಯಿತು. ಇದಾದ ನಂತರ ಅಮೇರಿಕಾ ಮಾತ್ರವಲ್ಲ ಜಗತ್ತಿನಾದ್ಯಂತ ಕಾರ್ಮಿಕರ ಬಲಿದಾನ, ಹಕ್ಕುಗಳ ರಕ್ಷಣೆ ಕುರಿತು ಬಿಸಿಬಸಿ  ಚರ್ಚೆಗಳು ನಡೆದವು. ಕಾರ್ಮಿಕ ನಾಯಕರು ಹುತತ್ಮಾರಾದರೂ ಕಾರ್ಮಿಕರ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಅದರ ಬದಲು ತೀವ್ರ ದುಡಿತ, ಶೋಷಣೆಗಳು ಮತ್ತಷ್ಟು ತೀವ್ರಗೊಂಡವು. ೧೮೮೮ ರ ಡಿಸೆಂಬರ್‌ನಲ್ಲಿ ಕಾರ್ಮಿಕ ಚಳುವಳಿಯನ್ನು ಪುರುಜ್ಜೀವನಗೊಳಿಸುವ ದೃಷ್ಟಿಯಿಂದ ಅಮೇರಿಕನ್ ಫೆಡರೇಷನ್ ಆಫ್ ಲೇಬರ‍್ಸ್ ಸೆಂಟ್ ಲೂಯಿಯದಲ್ಲಿ ಸಮಾವೇಶವೊಂದನ್ನು ಸಂಘಟಿಸಿತು. ಅದರಲ್ಲಿ ’೮ ಗಂಟೆ ದುಡಿಮೆ, ೮ ಗಂಟೆ ವಿಶ್ರಾಂತಿ ಮತ್ತು ೮ ಗಂಟೆ ಖಾಸಗಿ ಇಚ್ಚೆ ಕಾರ್ಯಕ್ಕೆ’ ಎನ್ನುವ ಬೇಡಿಕೆಯನ್ನು ಅಂಗೀಕರಿಸಿ ೧೮೯೦ ಮೇ ೧ರ ದಿನಾಚರಣೆಗೆ ಅಧಿಕೃತವಾಗಿ ಕರೆ ನೀಡಿತು.

 
'ಚಾರಿತ್ರಿಕ ದಿನ’

ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ ಬಂಡವಾಳಶಾಹಿಗಳು ಹೆಣೆಯುತ್ತಿರುವ ಶೋಷಣೆಗಳ ಚಕ್ರವೂಹದ ಅಬೇಧ್ಯ ಕೋಟೆಗಳನ್ನು ಬೇಧಿಸುತ್ತಾ ಹೋರಾಟಕ್ಕಿಳಿಸುವ ಚಾರಿತ್ರಿಕ ದಿನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಶಃ ಜಗತ್ತಿನ ಎಲ್ಲಾ ದೇಶಗಳಲ್ಲೂ ಮೇ ದಿನವನ್ನು  ತಪ್ಪದೆ ಆಚರಿಸಲಾಗುತ್ತಿದೆ. ’ವಿಶ್ವದ ಕಾರ್ಮಿಕರೇ ಒಂದಾಗಿರಿ’ ಎನ್ನುವ ಸ್ಪೂರ್ತಿಯನ್ನು ಕಾರ್ಮಿಕ ವರ್ಗಕ್ಕೆ ನೀಡಿ ಆ ವರ್ಗವನ್ನು ಒಂದುಗೂಡಿಸುವ ಅದರ ಪ್ರಚ್ಛನ್ನ ಶಕ್ತಿ ಆಪಾರ. ಒಂದೇ ಮಾತಿನಲ್ಲಿ ಹೇಳಬೇಕಾದರೆ ’ಎಲ್ಲ ರಾಷ್ಟ್ರಗಳಲ್ಲಿಯೂ ಧನಿಕ ವರ್ಗವು ಕಾರ್ಮಿಕ ವರ್ಗದ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಗುಲಾಮಗಿರಿಯ ಹೊಸ ರೂಪದ ವಿರುದ್ದ ಟೊಂಕಕಟ್ಟಿ ನಿಲ್ಲಲು ಪ್ರೆರೇಪಿಸುತ್ತಿದೆ ಮೇ ದಿನ.’

ಆದರೆ ಇಂತಹ ಚಾರಿತ್ರಿಕ ದಿನವನ್ನು ಇದೀಗ ಎಲ್ಲಾ ಕಡೆಗಳಲ್ಲೂ ಕೇವಲ ಔಪಚಾರಿಕವಾಗಿ ಬೇರೆಯ ದಿನಾಚರಣೆಗಳಂತೆ ಆಚರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಅಪಾಯ ಪ್ರವೃತ್ತಿಗಳ ಬಗ್ಗೆ ಭಾರತದ ಕಾರ್ಮಿಕ ಚಳುವಳಿಯ ಅಗ್ರಗಣ್ಯ ನಾಯಕರಾಗಿದ್ದ ಡಾ: ಎಂ.ಕೆ ಪಂಧೆಯವರು ಅಮೇರಿಕಾದ ಇಲಿನಾಯ್ ಲೇಬರ್ ಹಿಸ್ಟರಿ ಸೊಸೈಟಿ ಪ್ರಕಟಿಸಿರುವ ಡಾ: ವಿಲಿಯಮ್ ಜೆ, ಆಡ್ಯಲ್‌ಮೆನ್ ಅವರು  ಹೇ ಮಾರ್ಕೆಟ್ ಪ್ರಕರಣದ ಚರಿತ್ರೆಯನ್ನು ವಿಸ್ತೃತವಾಗಿ ವಿವರರಿಸಿರುವ ಕೃತಿ ’ಹೇ ಮಾರ್ಕೆಟ್ ರೀ-ವಿಜಿಟೆಡ್’ ಕೃತಿಯ ಭಾರತೀಯ ಆವೃತ್ತಿಗೆ ೨೦೦೯ ರ ಮೇ ೪ ರಂದು ಬರೆದ ಮುನ್ನುಡಿಯಲ್ಲಿ ಹೀಗಿ ಗುರುತಿಸಿದ್ದಾರೆ .ಇಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಫೈವ್ ಸ್ಟಾರ್ ಟ್ರೇಡ್ ಯೂನಿಯನ್ ಸಂಸ್ಕೃತಿ ಆವಿಷ್ಕರಿಸುತ್ತಿದೆ ಇಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಾಯಕರು ಹೇ ಮಾರ್ಕೆಟ್ ಹುತಾತ್ಮರನ್ನು ಕೇವಲ ಮೇ ೧ ರಂದು ವೈಭವೀಕರಿಸಿ ಮೇ ದಿನದ ಜನಪ್ರಿಯತೆಯನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆ ಹುತಾತ್ಮರ ಧೀರ ಧಿಮಂತಿಕೆಯಲ್ಲಿ ಹೆಜ್ಜೆ ಹಾಕದೇ ವರ್ಗ ಸಖ್ಯತೆಯ ಧೋರಣೆಗಳನ್ನು ಅನುಸರಿಸುತ್ತಾ ಶೋಷಕರೊಂದಿಗೆ ಶಾಮೀಲಾಗುತ್ತಿದ್ದಾರೆ. ಇಂತಹ ನಾಯಕರುಗಳು ಹೇ ಮಾರ್ಕೆಟ್ ಹುತಾತ್ಮ ಪರಂಪರೆಗಳನ್ನು ಮುಂದೊಯ್ಯಲಾರರು ಮೇಲಾಗಿ ಅವರಿಗೆ ಆ ಹಕ್ಕೂ ಇರುವುದಿಲ್ಲ

     ಹೇ ಮಾರ್ಕೆಟ್ ಘಟನೆ ನಡೆದು ಇಂದಿಗೆ ೧೨೮ ವರ್ಷಗಳಾದವು. ಜಗತ್ತಿನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ನಡೆದು ಬರುತ್ತಿರುವ ಮೇ ದಿನದ ಆ ಕ್ರಾಂತಿಕಾರಿ ಪರಂಪರೆ ಈಗಲೂ ಜಗದ ಎಲ್ಲಾ ಕಾರ್ಮಿಕ ಚಳುವಳಿಗೆ ಹೊಸ ಸ್ಪೂರ್ತಿ ಹಾಗೂ ಚೈತನ್ಯದ ಕಾವನ್ನು ನೀಡುತ್ತಲೇ ಬಂದಿದೆ. ಹಲವು ಸಮತೆಯ ಹೊಸ ಸಮಾಜದ ಬೀಜಗಳನ್ನು ಬಿತ್ತಿ ಸಮಾನತೆಯ ಹೂಗಳನ್ನು ಅರಳಿಸಿದೆ. ಮುಂದೆಯೂ ಈ ಮೇ ದಿನ ಶೋಷಿತರ ಕನಸನ್ನು ನನಸಾಗಿಸುವ ಹೋರಾಟದ ಪುಷ್ಪವಾಗಿ ಎಲ್ಲರ ಮನಗಳಲ್ಲಿ ಅರಳಲಿ.

ಬೆಳಗುಡಾ ಎಲ್ ಹನುಮಂತಯ್ಯಗುರುಗಳು ಸತ್ತ ಮುಂಜಾನೆಸತೀಶ ಕುಲಕರ್ಣಿ


ಪೇಪರನ್ಯಾಗ ನೋಡಿದೆ
ನನ್ನ ಪ್ರೀತಿಯ ಗುರುಗಳು
ಸತ್ತ ಸುದ್ದಿ ಬಂದಿತ್ತು


ನೂರು ನೋವು
ನೀರಾಗಿ ಹರಿದು ಬಂದವು,
ಹೃದಯ ತುಂಬಿದವು.

ಸೈಕಲ್ ಹತ್ತಿ
ಅಂತಿಮ ದರ್ಶನಕ್ಕೆ ಹೊರಟೆ.
ಒಂದು ಹೂವಿನ ಹಾರ
ತುಗೊಂಡ್ರಾತಂತ
ಬಸ್ಸ್ಟ್ಯಾಂಡ ಕೂಟಿಗೆ ಬಂದೆ.

ಗನೇಶ ಚೌತಿ ಮುನ್ನಾದಿನ
ತುಟ್ಟಿ-ಹೂ ಹಾರ.
ಹೆಂಗಂದೆ,
'ಎಂಟಂತ'-ಅವಾ ಅಂದ
'ಐದಂತ'-ನಾ ಅಂದೆ
ಇವಗ್ಯಾಕಂತ ಮತ್ತೊಬ್ಬಗ
ಆರು ಕೊಟ್ಟು-ಹಾರ ತಗೊಂಡೆ.
ಮತ್ತ ಸೈಕಲ್ ಹತ್ತಿ
ಗುರುಗಳ ಮನಿ$$ ಕಡೆ ಹೊಂಟೆ.

ಮನ್ಯಾಗ, ಕಂಪಂಡಿನ್ಯಾಗ
ಗಿಚ್ಚಂತ ಮಂದಿ ತುಂಬಿತ್ತು.
ಕರಿ ಟೋಪಿ,
ಮಖಾಳ ಚಾಳೀಸು
ಎಣ್ಣಿಗಮಟು-ಕರಿ ಕೋಟು.
ಗುರುಗಳು
ಗ್ವಾಡಿಗೆ ಶಾಂತಾಗಿ ಕುಂತಿ ಕುಂತಿದ್ರು.
ಮೌನಿ ಗೊಮ್ಮಟನಾಂಗ

'ಉರ ತುಂಬ
ಮೆರವಣಿಗೆ ತಗದು
ಹನ್ನೆರಡಕ್ಕ ಮಣ್ಣ ಮಾಡತೇವಿ'
ಅಂದ ಒಬ್ಬ.

'ಪೇಪರನ್ಯಾಗ ತ್ರಾಸ
ತುಗೊಂಡು ಸುದ್ದಿ ಹಾಕಿಸಿದ್ವಿ'
ಅಂದ ಮತ್ತೊಬ್ಬ.

'ಉಂಡಾರ, ನಕ್ಕಾರ,
ಮಾತಾಡಿ ಮಕ್ಕೊಂಡಾರ
ಮುಂಜಾನೆ ಇಲ್ಲ'
ಹಿಂಗಂದ ಮಗದೊಬ್ಬ

ಒಬ್ಬ ಒಂದೊಂದು ಹನ್ನೊಂದು
ಸುದ್ದಿ ಹೇಳಿದ್ರು.
ನನ್ನೊಳಗಿನ ಗುರುಗಳು
ಗಹ ಗಹಾಂತ ನಕ್ಕಾಂಗಾತು.
ಹಾರಾ ಹಾಕದ, ಹಂಗ$$ ಹೊರಗೆ ಬಂದೆ.

ಸೈಕಲ್ ಹತ್ತಿ
ಊರ ಏರಕಿ ಮ್ಯಾಲ ಬಂದೆ
ಧಮ್ಮ ಹತ್ತಿ, ಇಳಿದು ಹೀಂತುರುಗಿ ನೋಡಿದೆ.
ಛಡಿ ಏಟುಕೊಟ್ಟ ಮಾಸ್ತರು,
ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು,
ಸಾಲಿ ಗ್ರೌಂಡಿನ್ಯಾಗ
ಮೂಲಿಗೆ ನಿಂತು
ನಮ್ಮಾಟ ನೋಡಿದ ಮಾಸ್ತರು.
ಅಕ್ಷರ ಏಣಿ ಹತ್ತಿಸಿ
ಜೀವನದ ದೂರ$$ ತೋರಿಸಿದ ಮಾಸ್ತರು.
ಮನಿ ಮರ್ತು, ಮಕ್ಕಳ ಮರತು,
ನಮ್ಮನ್ನ ಮಕ್ಕಳಂತ ತಿಂಕೊಂಡು ಮಾಸ್ತರು
ಎಲ್ಲಾ ನೆನಪಾದವು

ದೂರದಿಂದ ನೋಡಿದೆ.
ಮಾಸ್ತರಮನಿ ಮುಂದ ಮಂದಿ ಭಾಳಿತ್ತು;
ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು.

Friday, April 25, 2014

ಹಿಂದು ಮತಗಳ ಧ್ರುವೀಕರಣದ ತಂತ್ರ : ಮೋದಿ ಕಾಶಿಯಾತ್ರೆಯ ಮರ್ಮ?

 


 ಡಿ ಉಮಾಪತಿ ಹೊಸದಿಲ್ಲಿ

 ಸೌಜನ್ಯ : ವಿಜಯ ಕರ್ನಾಟಕ

 
ಪೂರ್ವಿ ಉತ್ತರಪ್ರದೇಶ ಮತ್ತು ನೆರೆಯ ಪಶ್ಚಿಮಿ ಬಿಹಾರದ ಕೆಲ ಜಿಲ್ಲೆಗಳನ್ನು ಸೇರಿಸಿ ಕರೆಯಲಾಗುವ ಹೆಸರು ಪೂರ್ವಾಂಚಲ. ಮುಂದೊಮ್ಮೆ ಯಾವಾಗಲಾದರೂ ಪೂರ್ವಾಂಚಲ ಎಂಬ ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಿತೆಂದರೆ ನಿಶ್ಚಿತವಾಗಿ ವಾರಾಣಸಿಯೇ ಅದರ ರಾಜಧಾನಿ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ವಾರಾಣಸಿಯಿಂದ ಲೋಕಸಭಾ ಚುನಾವಣೆ ಕದನಕ್ಕೆ ಇಳಿಸಿರುವ ನಿರ್ಧಾರದ ಹಿಂದೆ ಒಂದು ಸುವ್ಯವಸ್ಥಿತ ರಣತಂತ್ರವೇ ಉಂಟು.


ತಮ್ಮ ನೆಚ್ಚಿನ ರಾಜಕಾರಣ ರಣತಂತ್ರಕಾರ ಅಮಿತ್ ಷಾ ಕೈಗೆ ಎಂಬತ್ತು ಲೋಕಸಭಾ ಸ್ಥಾನಗಳಿರುವ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿಯ ಕೀಲಿ ಕೈಗಳನ್ನು ಕೊಡಿಸಿದ್ದು ಖುದ್ದು ಮೋದಿಯವರೇ. ನೆಲಮಟ್ಟದ ಸ್ಥಿತಿಗತಿಗಳ ಅಧ್ಯಯನಕ್ಕೆಂದು ಬಿರುಸಿನ ಪ್ರವಾಸ ನಡೆಸಿದ ಅಮಿತ್ ಷಾ ಪಳಗಿದ ಕಣ್ಣು ಪಶ್ಚಿಮಿ ಉತ್ತರಪ್ರದೇಶ ಕೋಮುವಾದೀ ಧ್ರುವೀಕರಣಕ್ಕೆ ಹಸಿದಿದೆ ಎಂಬುದನ್ನು ತಡವಿಲ್ಲದೆ ಗುರುತಿಸಿತ್ತು.

ಷಾ ರಣತಂತ್ರ
ಬರೇಲಿಯ ಸುತ್ತಮುತ್ತಲ ರೋಹಿಲಖಂಡ ಮತ್ತು ಅವಧ್‌ನ ಆರು ಜಿಲ್ಲೆಗಳು ಪಾರಂಪರಿಕವಾಗಿ ಬಿಜೆಪಿಗೆ ಬೆಂಬಲ ನೀಡುವ ಸೀಮೆ.ಆದರೆ ಉತ್ತರದ ಗೋರಖಪುರದಿಂದ ದಕ್ಷಿಣದ ವಾರಾಣಸಿ ತನಕ ಪೂರ್ವಾಂಚಲದಲ್ಲಿ ಬಿಜೆಪಿಗೆ ದೊರೆಯಬಹುದಾದ ಬೆಂಬಲ ಅಷ್ಟಕ್ಕಷ್ಟೇ. ಪಕ್ಷದ ನಿರೀಕ್ಷೆಯನ್ನು ಮುಟ್ಟುತ್ತಿಲ್ಲ ಎಂಬುದು ಅಮಿತ್ ಷಾ ಅರಿವಿಗೆ ಬಂದ ಸಂಗತಿ. ಮೋದಿಯವರನ್ನು ವಾರಾಣಸಿಯಿಂದ ಕಣಕ್ಕಿಳಿಸುವ ಆಲೋಚನೆ ಷಾ ಅವರದ್ದೇ. ಮೋದಿ ವಾರಾಣಸಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸಂದೇಶವನ್ನು ಹಬ್ಬಿಸಿ ಪ್ರತಿಕ್ರಿಯೆಗಾಗಿ ಕಾಯಲಾಯಿತು. ದೊರೆತ ಪ್ರತಿಕ್ರಿಯೆ ಬಿಜೆಪಿಯ ರೊಟ್ಟಿ ಜಾರಿ ತುಪ್ಪಕ್ಕೆ ಬೀಳಿಸುವಂತಿತ್ತು.

ವಾರಾಣಸಿ ಕಂಪನಕೇಂದ್ರದಿಂದ ಹೊಮ್ಮುವ ಮೋದಿ ತರಂಗಗಳು ಪೂರ್ವಿ ಉತ್ತರಪ್ರದೇಶದ 20 ಸೀಟುಗಳು, ಬಿಹಾರದ 40 ಹಾಗೂ ಝಾರ್ಖಂಡದ 14 ಸೀಟುಗಳನ್ನು ಮುಟ್ಟಲಿವೆ. ಐತಿಹಾಸಿಕವಾಗಿ ಹಿಂದುತ್ವದ ಭದ್ರಕೋಟೆಯೆನಿಸಿದ ವಾರಾಣಸಿಯಿಂದ ನರೇಂದ್ರ ಮೋದಿಯಂತಹ ನರೇಂದ್ರ ಮೋದಿಯವರು ಕಣಕ್ಕೆ ಇಳಿಯುವುದು ತಂತಾನೇ ಹಿಂದು ಮತಗಳ ಧ್ರುವೀಕರಣಕ್ಕೆ ಕಾರಣ ಆಗುತ್ತದೆ ಎಂಬ ಬಿಜೆಪಿ-ಸಂಘಪರಿವಾರದ ಆಲೋಚನೆ ಆಧಾರರಹಿತ ಅಲ್ಲ.

ವಾರಾಣಸಿಯಿಂದ ಮೋದಿ ಸ್ಪರ್ಧೆ ಬಿಹಾರದ ಆರ‌್ರಾ, ಬಕ್ಸರ್.ಸಸಾರಾಮ್ ಮುಂತಾದ ಸೀಟುಗಳ ಮೇಲೂ ಪ್ರಭಾವ ಬೀರಲಿದೆ. ಬಿಜೆಪಿ ಹುರಿಯಾಳುಗಳ ಮೊದಲ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ 36 ಅಭ್ಯರ್ಥಿಗಳನ್ನು ಆರಿಸಲಾಗಿತ್ತು. ಯಾದವರು, ಜಾಟರು, ಲೋಧರು, ಕುಶವಾಹರು, ಮೌರ್ಯರು, ಕುರ್ಮಿ ಜಾತಿಗಳಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಮಿತ್ ಷಾ ಕೈವಾಡವಿತ್ತು.

ಜತೆಗೆ ವಾರಾಣಸಿಯು ಬಿಜೆಪಿ ಪಾಲಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿ ಹೊಮ್ಮಿದೆ. ಮತದಾರರನ್ನು ಹಿಂದು- ಮುಸ್ಲಿಮ್ ಎಂದು ಧ್ರುವೀಕರಿಸಲು ಪೂರ್ವಿ ಉತ್ತರಪ್ರದೇಶದ ನೆಲ ಫಲವತ್ತಾಗಿದೆ ಎಂಬುದು ಅಮಿತ್- ಮೋದಿ ಜೋಡಿಗೆ ಗೊತ್ತಿತ್ತು. ಬನಾರಸ್ ಹಿಂದು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಇಲಾಖೆ ನಡೆಸಿರುವ ಸಮೀಕ್ಷೆಯೊಂದರ ಫಲಿತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ.

ದಿಲ್ಲಿಯ ಗದ್ದುಗೆ ಹಿಡಿಯುವವರು ಯಾರೇ ಆದರೂ 80 ಸೀಟುಗಳನ್ನು ಉಳ್ಳ ಉತ್ತರಪ್ರದೇಶವನ್ನು ಹಾದೇ ಹೋಗಬೇಕೆಂಬುದು ದೇಶದ ರಾಜಕಾರಣದಲ್ಲಿ ದಂತಕಥೆಯ ರೂಪವನ್ನು ತಳೆದುಬಿಟ್ಟಿದೆ. ದೂರದ ಗುಜರಾತಿನ ಮುಖ್ಯಮಂತ್ರಿ ದಿಲ್ಲಿ ರಾಜಕಾರಣಕ್ಕೆ ಅಪರಿಚಿತ. ಹಿಂದಿ ಹೃದಯ ಭಾಗವೆಂದೇ ಕರೆಯಲಾಗುವ ಉತ್ತರಪ್ರದೇಶದ ಸಮ್ಮತಿ ಮುದ್ರೆಯನ್ನು ಒತ್ತಿಸಿಕೊಂಡವರನ್ನು ದಿಲ್ಲಿ ರಾಜಕಾರಣ ಸಲೀಸಾಗಿ ಹತ್ತಿರ ಕರೆದುಕೊಂಡೀತು ಎಂಬ ನಿರೀಕ್ಷೆ. ಜಾತಿ ಆಧಾರಿತ ಮೀಸಲಾತಿ ಕೋರಿಕೆ- ವಿರೋಧದ ಆಂದೋಲನಗಳು, ರಾಮಜನ್ಮಭೂಮಿಯ ಮಂದಿರ ರಾಜಕಾರಣದ ಕಂಪನ ಕೇಂದ್ರ ಉತ್ತರಪ್ರದೇಶ. ಮೋದಿ ಮತ್ತು ಅವರ ಹಿತೈಷಿಗಳು ಹಾಗೂ ಸಂಘಪರಿವಾರ ವಾರಾಣಸಿಯ ಮೇಲೆ ಕಣ್ಣು ಹಾಕಿದ್ದರ ಹಿಂದೆ ಈ ಎಲ್ಲ ಲೆಕ್ಕಾಚಾರಗಳಿದ್ದವು.

ಹಿಂದು ಬಹುಸಂಖ್ಯಾತರ ಪಕ್ಷಪಾತಿ ತಾವು ಎಂಬುದನ್ನು ಮತ್ತು ಅಲ್ಪಸಂಖ್ಯಾತ ಮುಸಲ್ಮಾನರನ್ನು ಹದ್ದುಬಸ್ತಿನಲ್ಲಿ ಇಡುವ ನಾಯಕನೆಂದು ಮೋದಿಯವರು ಹೊಸದಾಗಿ ರುಜವಾತು ಮಾಡಬೇಕಿಲ್ಲ. ಈ ಬಾಬತ್ತಿನಲ್ಲಿ ಬಹುಸಂಖ್ಯಾತರು ಅವರನ್ನು ಅನುಮಾನಿಸುವ ಪರಿಸ್ಥಿತಿ ಇಲ್ಲವೇ ಇಲ್ಲ.

ಹೀಗಾಗಿ ಮೋದಿ ಸದ್ಯದ ಪರಿಸ್ಥಿತಿಯಲ್ಲಿ ಕೋಮು ಧ್ರುವೀಕರಣದ ನಿಚ್ಚಳ ನಿಲುವನ್ನು ತೆಗೆದುಕೊಂಡಿಲ್ಲ. ಅದನ್ನು ನೇರಾ ನೇರ ಪ್ರಯೋಗಿಸುವ ಅಗತ್ಯ ಅವರಿಗೆ ಕಂಡುಬಂದಂತಿಲ್ಲ. ಅಭಿವೃದ್ಧಿಯ ಮಂತ್ರ ಜಪಿಸಿದ್ದಾರೆ. ಆದರೆ ಕೋಮು ಗಲಭೆಗಳನ್ನು ಕಂಡು ಹಿಂದು- ಮುಸ್ಲಿಮ್ ಧ್ರುವೀಕರಣವನ್ನು ಅಡ್ಡಡ್ಡ ಉದ್ದುದ್ದು ಕಂಡಿರುವ ಪಶ್ಚಿಮೀ ಉತ್ತರಪ್ರದೇಶದಲ್ಲಿ ಕೋಮು ಗಲಭೈ ಪ್ರಚೋದಕರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಸುಳ್ಳೇನೂ ಅಲ್ಲ.

ಅಭಿವೃದ್ಧಿಯ ಮಾತು ಚಲಾವಣೆಯಾದರೆ ಅಭಿವೃದ್ಧಿ, ಧ್ರುವೀಕರಣ ಕೆಲಸ ಮಾಡುವೆಡೆಗಳಲ್ಲಿ ಧ್ರುವೀಕರಣವನ್ನು ರಣತಂತ್ರವಾಗಿ ಪ್ರಯೋಗಿಸುವ ತೆರೆದ ಮನಸ್ಸು ಮೋದಿ- ಬಿಜೆಪಿಗೆ ಇದ್ದಂತಿದೆ.

ಪರ್ಯಾಯ ಸಂಸ್ಕೃತಿಯ ತಹತಹ

ಶೂದ್ರ ಶ್ರೀನಿವಾಸ್


ನಿನ್ನೆ ಎಂಬುದರ ಬೆನ್ನ ಹಿಂದೆ ಎಷ್ಟೊಂದು ನಿನ್ನೆಗಳು. ಅವುಗಳಿಗೆ ಅಂಟಿಕೊಂಡ ಅವಘಡಗಳು ಎಂಥ ಹೀನಾಯ ಪಳೆ ಯುಳಿಕೆಗಳನ್ನು ಬಿಟ್ಟು ಹೋಗಿವೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ನಮ್ಮ ಕಣ್ಣ ಮುಂದೆ ಓಡಾಡುತ್ತಿರುವ ಕೆಲವು ಮೂಲಭೂತವಾದಿಗಳನ್ನು ನೋಡಿದಾಗ; ಇವರೆಲ್ಲ ನಿನ್ನೆಯ ಶನಿಸಂತಾನದ ಮುಂದು ವರಿದ ಭಾಗವೇನೋ ಎಂಬ ಭಾವನೆ ದಟ್ಟವಾಗತೊಡಗುತ್ತದೆ. ಆಗ ಇಂಥದ್ದಕ್ಕೆಲ್ಲ ‘ಪರ್ಯಾಯ’ವಾಗಲು ಪ್ರಯತ್ನಿಸಿದ ಮನಸ್ಸು ಎಂತೆಂಥ ತಹತಹವನ್ನು ಅನುಭವಿಸಿರುವುದು. ಯಾವ ಕಾಲಘಟ್ಟದಲ್ಲೂ ಎಲ್ಲ ಕ್ಷೇತ್ರಗಳ ಸೃಜನಶೀಲ ವ್ಯಕ್ತಿತ್ವಗಳು ಪ್ರತಿ ರೋಧದ ವಿಷಯದಲ್ಲಿ ಹಿಂದೆ ಮುಂದೆ ಯೋಚಿಸಲು ಹೋಗಲಿಲ್ಲ. 

ಸಂಘಟನಾತ್ಮಕವಾಗಿಯೋ ಅಥವಾ ಏಕಾಂಗಿಯಾಗಿಯೋ ಮುಖಾ ಮುಖಿಯಾಗುತ್ತ ಬಂದಿದ್ದಾರೆ. ಆದ್ದರಿಂದಲೇ ಈ ಸಮಾಜ ಪೂರ್ತಿ ಸವಕಲಾಗದೆ ಜೀವಂತಿಕೆಯನ್ನುಳಿಸಿ ಕೊಂಡಿರುವುದು. ಈ ದೃಷ್ಟಿ ಯಿಂದ ಜಗತ್ತಿನಾದ್ಯಂತ ಪುಟ್ಟಪುಟ್ಟ ಸಮು ದಾಯಗಳಲ್ಲಿಯೂ ನಡೆದಿರುವ ಮತ್ತು ನಡೆಯುತ್ತ ಬಂದಿರುವ ಹೋರಾಟಗಳು ಮಾರ್ಮಿಕವಾದಂಥವು. ಕಷ್ಟಸುಖಗಳನ್ನು ಗುಣಿಗುಣಿಸಿ ಭಾಗಿಯಾದವರಲ್ಲ. ಇದು ನಮ್ಮ ಮೂಲಭೂತ ಕರ್ತವ್ಯ ಎಂದು ತಿಳಿದವರು. ಆದ್ದರಿಂದಲೇ ಇತಿಹಾಸವನ್ನು ಗಂಭೀರವಾಗಿ ಓದಲು ಅಥವಾ ತಿಳಿಯಲು ಪ್ರಯತ್ನಿಸಿದಂತೆಲ್ಲ; ವಿಸ್ಮಯಕಾರಿಯಾದ ಸಂಗತಿಗಳು ಒಟ್ಟು ನಮ್ಮ ಚಿಂತನೆಯ ಕ್ರಮವನ್ನೇ ಲವಲವಿಕೆಯಿಂದಿಡಲು ಸಾಧ್ಯ.

ಈ ರೀತಿಯ ಹಿನ್ನೆಲೆಯನ್ನು ಹೊಂದಿರುವ ಸಾಮಾಜಿಕ ಸಂದರ್ಭಗಳನ್ನರಿಯುವ ಯಾವ ಕ್ರಿಯಾಶೀಲ ಮನಸ್ಸಿಗೂ ಆಯಾಸವೆಂಬುದು ಆಗಿಲ್ಲ. ಕುತೂಹಲ ದುಪ್ಪಟ್ಟುಗೊಳ್ಳುತ್ತಲೇ ಹೋಗುತ್ತಿರುವುದು. ಆದ್ದರಿಂದಲೇ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಕೃತಿಗಳು ಬಂದರೂ; ಅವುಗಳನ್ನು ಓದುವ ಪ್ರಕ್ರಿಯೆಗೆ ತೊಡಗಿರುತ್ತಾರೆ. ಈ ಕಾರಣಕ್ಕಾಗಿಯೇ ಇರಬಹುದು ಜ್ಞಾನದ, ಅರಿವಿನ ಆಯಾಮಗಳು ವಿಸ್ತಾರಗೊಳ್ಳುತ್ತಲೇ ಇರುವುದು. 

ಇದೇ ಮಾನದಂಡವನ್ನು ಅತ್ಯುತ್ತಮ ಉಪನ್ಯಾಸಗಳಿಗೂ ಅನ್ವಯಿಸಿ ಮಾತಾಡಬಹುದು. ಒಬ್ಬ ಸೂಕ್ಷ್ಮ ಸಂವೇ ದನೆಯ ಚಿಂತಕ ಎರಡು ಮೂರು ಗಂಟೆ ಒಂದೇ ಸಮನೆ ಮಾತಾಡಿದರೂ; ಸಭಿಕರು ಗಲಿಬಿಲಿಗೊಳ್ಳದೇ ಕೇಳಿಸಿಕೊಳ್ಳುವರು. ಕೊನೆಗೆ ಕೃತಜ್ಞತೆಯ ನೆಪದಲ್ಲಿ ನಾಲ್ಕು ಚಪ್ಪಾಳೆಯನ್ನು ಅರ್ಪಿಸಿ ನಮ್ರತೆಯಿಂದ ಮನನ ಮಾಡುತ್ತ ಹೋಗುವರು. ಅದೇ ಸಮಯಕ್ಕೆ ಅನಾರೋಗ್ಯ ಪೂರ್ಣ, ವಿಚಾರಹೀನ ಮಾತುಗಳನ್ನು ಕೇಳಿಸಿಕೊಂಡಾಗ ಮಾನಸಿಕವಾಗಿ ಎಷ್ಟು ಘಾಸಿಗೊಳ್ಳುವರು. ಇಂಥದ್ದು ಬಹಳಷ್ಟು ಬಾರಿ ಏಕಕಾಲದಲ್ಲಿ ಆಗಲು ಸಾಧ್ಯ. 

ಅದರಲ್ಲೂ ಒಬ್ಬ ಉಪನ್ಯಾಸಕಾರ ಒಂದೇ ಸಮನೇ ತನ್ನ ದಡ್ಡತನವನ್ನು ಪ್ರದರ್ಶಿಸಲು ಹುಂಬತನದಿಂದ; ಅಗತ್ಯವೋ ಅನಗತ್ಯವೋ ಎಂಬುದನ್ನು ಅರಿಯದೇ ಕೊಟೆಷನ್ನುಗಳ ಮೊರೆ ಹೋದಾಗ ಗಾಬರಿಯಾಗಿ ಬಿಟ್ಟಿರುತ್ತದೆ. ಸಭೆಯಲ್ಲಿ ಕೆಲವೊಮ್ಮೆ ಸೌಜನ್ಯಕ್ಕಾಗಿ ಕೂರಬೇಕಾಗುತ್ತದೆ. ಇಂಥದ್ದನ್ನೆಲ್ಲ ನಾವು ಎಷ್ಟು ಅನುಭವಿಸಿ ಬಂದಿರುತ್ತೇವೆ. ಒಂದು ದೊಡ್ಡ ಸಮಾಜದಲ್ಲಿ ಇದೆಲ್ಲ ಸ್ವಾಭಾವಿಕ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತ ಭಾಗಿಯಾಗ ಬೇಕಾಗಿರುತ್ತದೆ. ವೈಯಕ್ತಿಕ ನಿಂದನೆಗಳ ಉತ್ತುಂಗತೆಯಂತೂ ಒಮ್ಮಿಮ್ಮೆ ನಮ್ಮನ್ನು ಅಧೀರಗೊಳಿಸಲು ಸಾಧ್ಯವಿರುತ್ತದೆ.

ಕೆಲವರು ವ್ಯಕ್ತಿ ನಿಂದನೆಯೆಂಬುದನ್ನು ತೆವಲಾಗಿಯೂ ರೂಢಿಸಿಕೊಂಡಿರುತ್ತಾರೆ. ಅಂಥವರ ಬಳಿ ಬೌದ್ಧಿಕ ಮಾತುಗಳನ್ನು ‘ಬಯಸುವುದು ಕೂಡ ತಪ್ಪು’ ಎಂಬು ದನ್ನು ನಮಗೆ ನಾವೇ ಮಿತಿಗಳನ್ನು ಹಾಕಿ ಕೊಳ್ಳಬೇಕಾಗುತ್ತದೆ. ಒಂದಷ್ಟು ಹಿರಿಯರ ಬಗ್ಗೆ, ಚಿಂತಕರ ಬಗ್ಗೆ ತುಂಬ ಹಗುರವಾಗಿ ಮಾತಾಡಿದಾಗ ಮಾನಸಿಕವಾಗಿ ಸುಸ್ತಾಗಿ ಬಿಟ್ಟಿರುತ್ತೇವೆ. ಹೀಗೆ ಆಗಿಬಿಡುವ ಎಂತೆಂಥ ಹೇಳಿಕೆಗಳನ್ನು ಪ್ರತಿಹೇಳಿಕೆಗಳನ್ನು ಕೇಳುತ್ತಲೇ ಬಂದಿದ್ದೇವೆ.

ಅದರಲ್ಲೂ ಈ ಚುನಾವಣೆಯ ಸಂದರ್ಭದಲ್ಲಿ ಹಾಗೂ ಚುನಾವಣೆಯ ಹಿಂದಿನ ದಿನಗಳಿಂದಲೂ ನರೇಂದ್ರಮೋದಿಯವರಿಂದ ಏನೇನೋ ಮಾತಾಡಿಸುತ್ತಿದ್ದಾರೆ. ಅದನ್ನು ರಾಜಕೀಯ ವಾಗಿ ಹಾಗೂ ಸಾಮಾಜಿಕವಾಗಿ ಹೇಗೆ ಸ್ವೀಕರಿಸಬೇಕೋ ಗೊತ್ತಿಲ್ಲ. ಆದರೂ ಕಷ್ಟಪಟ್ಟು ಕೇಳಿಸಿಕೊಂಡಿದ್ದೇವೆ. ವಾಜಪೇಯಿಯಂಥವರು ಮತ್ತು ಅಡ್ವಾನಿ ಯಂಥವರೂ ಈ ವಿಧದಲ್ಲಿ ಪಂಪ್ ಹೊಡೆ ಸಿಕೊಂಡು ನಾಯಕರಾದವರಲ್ಲ. ನಮಗೆ ನಾವು ಕೇಳಿಕೊಳ್ಳಬೇಕಾಗಿದೆ: ಇಂಥದ್ದೆಲ್ಲ ಯಾವ ಹಂತದವರೆವಿಗೂ ಹೋಗಿ ನಿಲ್ಲಬಹುದೆಂದು. ಅದೇ ರೀತಿಯಲ್ಲಿ ಯಾವ ಸಂದರ್ಭವನ್ನು ಅನಗತ್ಯವಾಗಿ ‘ಗ್ಲೋರಿಪೈ’ಮಾಡಿ ಮಾತಾಡಿದಾಗ; ಅದರ ನಿಜವಾದ ಹೆಚ್ಚುಗಾರಿಕೆಯನ್ನು ದುರ್ಬಲಗೊಳಿಸಿದಂತೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಮೂರು ದಿವಸ ‘ವಚನ ಸಾಹಿತ್ಯ’ ಹಾಗೂ ಆ ಕಾಲಘಟ್ಟದ ‘ಪರ್ಯಾಯ ಸಂಸ್ಕೃತಿ’ ಕುರಿತ ಚಿಂತನಾ ಸಮಾವೇಶ ಏರ್ಪಡಿಸಿತ್ತು. ಕರ್ನಾಟಕದ ಉದ್ದಗಲದಿಂದ ಸಾಕಷ್ಟು ಮಂದಿ ಬಂದು ಭಾಗವಹಿಸಿದ್ದರು. ಅವರೆಲ್ಲ ಸಂಸ್ಕೃತಿಯ ಏಳುಬೀಳುಗಳ ಬಗ್ಗೆ ಯೋಚಿಸುತ್ತ ಬಂದವರು. ಆದರೆ ನಾನು ಎರಡು ದಿನ ಭಾಗಿಯಾಗಲು ಆಗಲಿಲ್ಲ. 

ಪಕ್ಕದ ತಮಿಳು ನಾಡಿನ ಮೂರು ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆಯ ಕಾವು ಹೇಗಿದೆಯೆಂದು ನೋಡಲು ಹೋಗಿದ್ದೆ. ಅಣ್ಣಾ ಡಿಎಂಕೆ ಮತ್ತು ಡಿಎಂಕೆಯ ಚುನಾವಣೆಯ ಭರಾಟೆಯ ಆವೇಶವನ್ನು ಅರಿಯುವ ಕುತೂಹಲವಿತ್ತು. ಒಂದು ಕಾಲದಲ್ಲಿ ಈ ಪ್ರದೇಶದಲ್ಲೆಲ್ಲ ತೆಲುಗು ಮತ್ತು ಕನ್ನಡದ ಘೋಷಣೆ ಗಳಿದ್ದವು. ಅಂದರೆ ಈ ಎರಡೂ ಭಾಷೆಗಳು ಪ್ರಾಬಲ್ಯವನ್ನು ಹೊಂದಿದ್ದವು. ಈಗ ಇವುಗಳನ್ನು ತಮಿಳು ತುಳಿದು ಬಿಟ್ಟಿದೆ. ಭಾಷಾ ದ್ವೇಷದಿಂದ ಇದನ್ನು ಹೇಳುತ್ತಿಲ್ಲ.

ಗಡಿ ಪ್ರದೇಶದಲ್ಲಿ ಎರಡು ಭಾಷೆಗಳು ಸಾಯುವುದರ ಜೊತೆಗೆ; ಅದರ ಜೊತೆ ಅಂಟಿಕೊಂಡು ಬಂದ ಸಂಸ್ಕೃತಿಯು ಸಾಯುತ್ತ ಬರುವುದಲ್ಲ ಎಂಬ ವಿಷಾದ ತುಂಬಿಕೊಂಡಿತ್ತು. ಈ ವಿಷಾದದಿಂದಲೇ ಕೆಲವು ಮನೆಗಳಿಗೆ ಹೋದಾಗ; ಅಣ್ಣಾ ಡಿಎಂಕೆಯವರು ಕೊಡಿಸಿದ ಬಿಳಿಯ ಟೇಬಲ್ ಫ್ಯಾನುಗಳಲ್ಲಿ ಜಯಲಲಿತ ಅವರ ಭಾವಚಿತ್ರ. ಈ ಬೇಸಿಗೆಯ ಬಿಸಿಯಲ್ಲಿ ಫ್ಯಾನು ಜೋರಾಗಿ ತಿರುಗುತ್ತಿದ್ದರೆ; ಜಯಲಲಿತ ಅವರ ಭಾವಚಿತ್ರವೂ ತಿರುಗುತ್ತಿತ್ತು.

ಇರಲಿ, ಪ್ರಜಾಪ್ರಭುತ್ವದಲ್ಲಿ ಏನೇನೋ ತಿರುಗುತ್ತಿರುತ್ತದೆ. ನಾಲಿಗೆಯನ್ನು ಎಷ್ಟು ಉದ್ದ ಬೇಕಾದರೂ ಬಾಚಿ ಮಾತಾಡಬಹುದಾದ ಮನಸ್ಥಿತಿಯನ್ನು ಬೆಳೆಸಿಕೊಂಡಿರು ತ್ತಾರೆ. ಅವರು ಬಳಸುವ ಶಬ್ದಗಳು ಪ್ರತಿಭಟಿಸುವುದಿಲ್ಲವಲ್ಲ; ನಮ್ಮನ್ನು ಯಾಕೆ ಹೀಗೆ ‘ಹಿಗ್ಗಾಮುಗ್ಗಾ ಜಗ್ಗಾಡುತ್ತೀರಿ’ ಎಂದು. ಇದೇ ರೀತಿಯಲ್ಲಿ ಬಹುಪಾಲು ಸುಸಂಸ್ಕೃತರೆನ್ನಿಸಿಕೊಂಡವರು ಬಾಯಿತುಂಬ ಕೊಟೇಷನ್‌ಗಳನ್ನಿಟ್ಟುಕೊಂಡೇ ಮಾತಾಡುತ್ತಿರುತ್ತಾರೆ. ಅವು ಅಸ್ತ್ರಗಳಂತೆ ಉದು ರುತ್ತಿರುತ್ತವೆ. ಆ ಅಮೂಲ್ಯ ಕೊಟೇಷನ್‌ಗಳು ಅರ್ಥಪೂರ್ಣವಾಗಿದ್ದರೂ; ಅರ್ಥಹೀನವಾಗಿ ಉದುರುತ್ತಿರುತ್ತವೆ.

ಈ ಅಪೂರ್ವ ಸಮಾವೇಶದಲ್ಲಿ ಮೂರನೆಯ ದಿನದ ಗೋಷ್ಠಿಯಲ್ಲಿ ಗೆಳೆಯ ರಮಝಾನ್ ದರ್ಗಾ ಅವರ ಮಾತನ್ನು ಕೇಳಿಸಿಕೊಳ್ಳುವ ಕುತೂಹಲವಿತ್ತು. ಹಾಗೆಯೇ ನಾನು ಇಷ್ಟಪಡುವ ಚಿಂತಕ ಮತ್ತು ಇತಿಹಾಸತಜ್ಞ ಪ್ರೊ. ಷ. ಶೆಟ್ಟರ್ ಅವರು ಸಮಾರೋಪದಲ್ಲಿ ಏನು ಮಾತಾಡಬಹುದು ಎಂಬ ತವಕ ತೀವ್ರವಾಗಿತ್ತು. ಯಾಕೆಂದರೆ ವೀರಶೈವ ಸಮಾಜದಿಂದ ಬಂದು; ಒಬ್ಬ ದೊಡ್ಡ ಇತಿಹಾಸಕಾರರಾಗಿ; ಯಾವ ರೀತಿಯ ಅಂತರವನ್ನು ಇಟ್ಟುಕೊಂಡು ಆ ಸಾಂಸ್ಕೃತಿಕ ಸಂದರ್ಭವನ್ನು ಗ್ರಹಿಸಿ ಅವಲೋಕನಕ್ಕೊಳಪಡಿಸಬಲ್ಲರು ಎಂದು.

ಇನ್ನು ರಮಝಾನ್ ದರ್ಗಾ ಗಂಭೀರ ಸಾಹಿತ್ಯದ ವಿದ್ಯಾರ್ಥಿಯಾಗಿ ಎಡಪಂಥೀಯ ಚಿಂತನೆಗಳಿಂದ ಬೆಳೆದಿರುವಂಥವನು. ಹಿರಿಯ ಪತ್ರಕರ್ತನಾಗಿ ಪ್ರಾಮಾಣಿಕವಾಗಿ ದುಡಿದು ನಿವೃತ್ತಿಯಾದವನು. ಈಗ ಪೂರ್ಣ ಪ್ರಮಾಣದಲ್ಲಿ ಕೆಲವು ವರ್ಷಗಳಿಂದ ವಚನ ಸಾಹಿತ್ಯ ಮತ್ತು ಅದರ ಚಳವಳಿಯ ಅಧ್ಯಯನದ ಗಂಭೀರ ವಿದ್ಯಾರ್ಥಿ. ಇದರ ಮೂಲಕ ವೀರಶೈವ ಮಠಗಳಿಗೆ ಹತ್ತಿರದವನೂ ಆಗಿದ್ದಾನೆ. ಇದರ ಬಗ್ಗೆ ಬಹಳಷ್ಟು ಗೆಳೆಯರು ‘ದರ್ಗಾ ಒಂದು ರೀತಿಯ ಅಂತರವನ್ನು ಮಠಗಳ ಜೊತೆ ಕಾಪಾಡಿಕೊಂಡು; ವಚನಾಧ್ಯಯನದಲ್ಲಿ ತೊಡಗಬೇಕಾಗಿತ್ತು’ಎಂದು ಹೇಳಿದವರೂ ಇದ್ದಾರೆ.

ಅವರ್ಯಾರು ವಿಕೃತಿಯಿಂದ ಹೇಳಿದ ವರಲ್ಲ. ಈ ಮಧ್ಯೆ ದರ್ಗಾ ಬರೆದಿರುವ ‘ವಚನ ಸಾಹಿತ್ಯ’ ಕುರಿತ ಕೃತಿಗಳನ್ನು ಓದಿದಾಗ; ಕೆಲವು ಪ್ರಶ್ನೆಗಳು ಉದ್ಭವಿಸಿದ್ದವು. ಆ ಪ್ರಶ್ನೆಗಳು ಮತ್ತಷ್ಟು ದಟ್ಟವಾಗತೊಡಗಿದ್ದವು: ಗೋಷ್ಠಿಯಲ್ಲಿ ದರ್ಗಾನ ಮಾತುಗಳನ್ನು ಕೇಳಿದ್ದರಿಂದ ಅತ್ಯಂತ ಗಂಭೀರವಾಗಿ ಓದಿಕೊಂಡಿದ್ದಾನೆಂಬುದರಲ್ಲಿ ಎರಡನೆಯ ಮಾತಿಲ್ಲ. ಆದರೆ ಓದಿ ಪಂಡಿತ ನಾಗಿಬಿಟ್ಟಿದ್ದಾನೆ; ಚಿಂತಕನಾಗಿಲ್ಲ. ನಾವು ಚಿಂತಕರಾಗದಿದ್ದಾಗ ಭಟ್ಟಂಗಿಗಳಾಗುವ ಸಾಧ್ಯತೆ ಇರುತ್ತದೆ. ನಮಗೆ ಗೊತ್ತಿಲ್ಲದೆಯೇ ‘ಪ್ರವಾದಿತನ’ದ ಧೋರಣೆ ಆವರಿಸಿಕೊಂಡು ಬಿಟ್ಟಿರುತ್ತದೆ.

ಚಾರಿತ್ರಿಕವಾಗಿ ಯಾವುದೇ ಚಳವಳಿಯನ್ನಾಗಲೀ, ಅದರಜೊತೆ ಬಂದ ಸಾಹಿತ್ಯವನ್ನಾಗಲಿ ಅಧ್ಯಯನ ಮಾಡುವಾಗ ಗಂಭೀರ ತಾಳ್ಮೆ ಇರಬೇಕಾಗುತ್ತದೆ. ಅದು ಯಾಕೆ ಹುಟ್ಟಿತು. ಯಾವ ಪ್ರಭಾವವನ್ನು ಬೀರಿತು ಮತ್ತು ಅದು ಅವನತಿಯನ್ನು ಕಾಣಲು ಕಾರಣವೇನು? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಾಗಭಾವುಕರಾಗುವ ಕಾರಣವಿಲ್ಲ. ಭಾವುಕರಾದ ತಕ್ಷಣ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಂಥ ಸಮತೋಲನವನ್ನು ದರ್ಗಾ ನಿಜವಾಗಿಯೂ ಕಳೆದುಕೊಂಡಿದ್ದ. ಒಮ್ಮೆಮ್ಮೆ ಎಷ್ಟು ಚೆನ್ನಾಗಿ ಓದಿಕೊಂಡಿದ್ದಾನೆಂದು ಹೊಟ್ಟೆಕಿಚ್ಚು ಬಂದರೂ; ಅದನ್ನು ಮರೆಮಾಚುವ ರೀತಿಯಲ್ಲಿ ‘ಭಟ್ಟಂಗಿ’ಯಾಗಿಬಿಟ್ಟಿದ್ದಾನೆ ಅನ್ನಿಸಿತು. 

ಅವನ ಮಾತಿನ ವೈಖರಿ ಹೇಗಿತ್ತು ಎಂದರೆ ಹನ್ನೆರಡನೆಯ ಶತಮಾನದ ಚಳವಳಿ ಜಗತ್ತಿನ ಯಾವುದೇ ಚಳವಳಿಗೆ ಪ್ರೇರಕವಾಗಿದೆಯೆನ್ನುವ ಧೋರಣೆಯನ್ನು ತಾಳಿದ್ದ. ಯು.ಎನ್.ಒ ಸಂಸ್ಥೆಯ ಸಿದ್ಧಾಂತಗಳ ಮೇಲು ಆಗಿರುವ ಪ್ರಭಾವವನ್ನು ಪ್ರಸ್ತಾಪಿಸುತ್ತ ಹೋದ. ಹೌದು ಜಗತ್ತಿನ ಎಲ್ಲ ಚಳವಳಿಗಳಲ್ಲೂ ಹಾಗೂ ಕ್ರಾಂತಿಗಳಲ್ಲೂ ಕೆಲವು ಸಮಾನವಾದ ಅಂಶಗಳು ಇರುತ್ತವೆ. ಬಡತನ, ಮೇಲುಕೀಳು, ಭ್ರಷ್ಟಾಚಾರ ಹಿಂಸೆಯ ಅತಿರೇಕತೆ ಮುಂತಾದವುಗಳೇ ಕಾರಣವಾಗಿರುತ್ತವೆ. ಆದ್ದರಿಂದ ಎಂಟುನೂರು ವರ್ಷಗಳ ಹಿಂದೆ ಆಯಿತು ಎಂಬ ಕಾರಣಕ್ಕಾಗಿ ಕುರುಡು ಮೋಹದಿಂದ ವಾಸ್ತವವನ್ನು ಬದಿಗೊತ್ತುವ ಪ್ರಯತ್ನವನ್ನು ಮಾಡಬಾರದು. 

ರಮಝಾನ್ ದರ್ಗಾ ಹೇಳಿದ ಎಂದು ಕೆಲವರು ಸಭೆ ಸಮಾರಂಭಗಳಲ್ಲಿ ಮುಂದುವರಿಸುವಂತೆ ಆಗಬಾರದು. ಯಾವುದನ್ನು ‘ಡೈಲೆಕ್ಟಿಕಲ್ ಮೆಟೀರಿಯಲಿಸಂ’ ಪ್ರಸ್ತಾಪಿಸಿ. ಅದನ್ನು ನಾನು ಓದಿಕೊಂಡಿರುವನು ಎಂದು ಹೇಳುವಾಗ ನಮ್ಮ ಮಾತಿನಲ್ಲಿ ಸಮತೋಲನವಿರಬೇಕಾಗುತ್ತದೆ. ಬಹಳ ತಮಾಷೆಯ ವಿಷಯವೆಂದರೆ ಡಾ.ಆಶಾದೇವಿಯವರು ಲಿಂಗ ತಾರತಮ್ಯ ಕುರಿತು ಗಂಭೀರವಾಗಿ ಮಾತಾಡಿದ ಮೇಲೆ ಕೆಲವರು ಪ್ರಶ್ನೆಗಳು ಕೇಳಿದ್ದಕ್ಕೆ.ನಾನು ಹೇಳುತ್ತೇನೆ ಘಂಟಾಘೋಷವಾಗಿ, ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀವಾದಿ ಚಳವಳಿಯಿಂದ ಇವತ್ತಿನ ಸ್ತ್ರೀವಾದಿಗಳು ಸಾಕಷ್ಟು ಕಲಿಯಬೇಕಾಗಿದೆ ಎಂದು ಹೇಳುವಾಗ ಆಶಾ ಅವರು ಮುಸಿಮುಸಿ ನಕ್ಕು ಸುಮ್ಮನಾಗಿದ್ದರು.

ಹಾಗೆಯೇ ಕೆಲವು ವಿದ್ವಾಂಸರು ‘ಕಲ್ಯಾಣ ನಾಡಿನ ಕ್ರಾಂತಿ’ಎಂದು ಕರೆದುದರ ಬಗ್ಗೆ ಆಕ್ಷೇಪಣೆಯನ್ನು ಎತ್ತಿದ; ಹಾಗೆ ಕರೆಯಬಾರದಾಗಿತ್ತೆಂದು. ಯಾಕೆಂದರೆ ಕ್ರಾಂತಿಯಾದ ಮೇಲೆ ಎಲ್ಲವೂ ಸರಿಹೋಗಿ ಬಿಡುತ್ತದೆಂದು, ಯಾವ ಕ್ರಾಂತಿಯೂ ಶಾಶ್ವತ ಪರಿವರ್ತನೆಯನ್ನು ತಂದಿರುವುದಿಲ್ಲ ಎಂಬುದು ದರ್ಗನಂಥ ಗಂಭೀರ ಮಾರ್ಕ್ಸ್‌ವಾದಿ ಚಿಂತಕನಿಗೆ ಗೊತ್ತಿಲ್ಲದ ವಿಷಯವಲ್ಲ. ಒಂದು ವೇಳೆ ‘ಕಲ್ಯಾಣ ನಾಡಿನ ಕ್ರಾಂತಿ’ ಎಂದು ಕರೆದದ್ದರಲ್ಲಿ ತಪ್ಪೇನು? ಅದನ್ನು ಕ್ರಾಂತಿಯ ಆಶಯದಿಂದ ಹೇಳಿರಬಹುದೆಂದು ಸ್ವೀಕರಿಸಬೇಕು. ಇದರ ಬಗ್ಗೆ ಚಂಪಾ ಅವರು ಎದ್ದು ನಿಂತು ಸ್ಪಷ್ಟೀಕರಣ ನೀಡಿದರು.

ದರ್ಗಾ ಚರ್ಚೆಯ ಸಂದರ್ಭದಲ್ಲಿ ಎಷ್ಟು ಭಾವುಕನಾದನೆಂದರೆ: ವೀರಶೈವರು ಇಂದು ತಮ್ಮ ಮಕ್ಕಳಿಗೆ ವಚನ ಚಳವಳಿಗೆ ಕಾರಣರಾದ ಮಹನೀಯರ ಮತ್ತು ಮಹಿಳೆಯರ ಹೆಸರು ಇಡುತ್ತಿಲ್ಲ ಎಂದು ದುಃಖದಿಂದ ಮಾತೇ ಹೊರಡಲಿಲ್ಲ ಸ್ವಲ್ಪ ಸಮಯ.ಮತ್ತೊಂದು ಮುಖ್ಯ ವಿಷಯ: ದರ್ಗಾ ಮಾತಾಡುವಾಗ ‘ನಾನು’ ಎಂಬ ಶಬ್ದವನ್ನು ತುಂಬ ಬಳಸುವನು. ಹಾಗೆಯೇ ‘ನೀವು’ ಎಂದು. ಇವರೆಡೂ ಆಜ್ಞಾರೂಪಕ ಶಬ್ದಗಳು. ಭಾಷಣದಲ್ಲಿ ಮತ್ತು ಸಂವಾದದಲ್ಲಿ ಇದನ್ನು ಬಳಸಬಾರದು. ‘ನಾವು ’ಎಂಬುದು ಆರೋಗ್ಯಪೂರ್ಣವಾದದ್ದು.

ದರ್ಗಾನಂತಹ ಪ್ರಜ್ಞಾವಂತ ಲೇಖಕ ಮತ್ತು ಚಿಂತಕ ಈ ನನ್ನ ಮೇಲಿನ ವಾಕ್ಯಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಯಾಕೆಂದರೆ: ಬಸವಣ್ಣ ಮತ್ತು ವಚನ ಚಳವಳಿ ನಮ್ಮ ಒಳನೋಟಗಳನ್ನು ವಿಸ್ತರಿಸುವ ಹಂತದಲ್ಲಿ ತೊಡಕಾಗಬಾರದು.ಹೀಗೆ ಆಗುವಾಗ ಬಸವಣ್ಣನವರಂಥ ಮಹಾನ್ ಸಂತನನ್ನು ಜಗತ್ತಿನ ಯಾರ್ಯಾರಿಗೋ ಹೋಲಿಸಿ ಮಾರ್ಕ್ಸ್ ಕೊಡಲು ಪ್ರಯತ್ನಿಸಬಾರದು. 

ಹಾಗೆಯೇ ‘ನಾವೂ’ ಯಾವಾಗಲೂ ‘ನಾವಾಗಿಯೇ’ ಉಳಿಯಬೇಕು. ಎಲ್ಲೆಲ್ಲೂ ಕರಗಿ ಹೋಗಬಾರದು. ಇಲ್ಲದಿದ್ದರೆ ನಮ್ಮ ಅಸ್ತಿತ್ವಕ್ಕೆ ಬೆಲೆ ಇರುವುದಿಲ್ಲ. ಅದರಲ್ಲೂ ಈ ಕಾಲಘಟ್ಟದಲ್ಲಿ ‘ಆತಂಕ’ಮತ್ತು ‘ತಲ್ಲಣ’ಗಳು ತೀವ್ರವಾಗುವ ರೂಪದಲ್ಲಿ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ; ಬಸವಣ್ಣನವರ ಹೋರಾಟದ ಸೂಕ್ಷ್ಮತೆ ಮತ್ತು ಕೊನೆಗೆ ಅವರ ಒಂಟಿತನ ನಮ್ಮನ್ನು ಸದಾ ಕಾಡುವಂತಾಗಬೇಕು. ನಿಜವಾದ ಅರ್ಥದಲ್ಲಿ ‘ಸಾಂಸ್ಕೃತಿಕ ಪರ್ಯಾಯ’ವೆಂದರೆ ಅದೇ ಆಗಿರುತ್ತದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...