Thursday, April 03, 2014

ಮಾಧ್ಯಮಗಳು ಮತ್ತು ಅಸ್ಪಶ್ಯತಾಚರಣೆ
ರಘೋತ್ತಮ ಹೋ.ಬ


ಕಳೆದ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಒಂದು ಬೃಹತ್ ಶೋಷಿತ ವರ್ಗಗಳ ವಿದ್ಯಾರ್ಥಿ ಸಮ್ಮೇಳನವಿತ್ತು. ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 'ಬಹುಜನ ವಿದ್ಯಾರ್ಥಿಸಂಘ'ದ ಬ್ಯಾನರ್‌ನ ಅಡಿಯಲ್ಲಿ ಆ ಸಮ್ಮೇಳನದಲ್ಲಿ ಸೇರಿದ್ದರು. ಯುಜಿಸಿಯ ಮಾಜಿ ಚೇರ್ಮನ್ ಹಾಗೂ ಖ್ಯಾತ ಇಂಗ್ಲೀಷ್ ಸಾಹಿತಿಯೂ ಆದಂತಹ ಪ್ರೊ.ಸುಖ್‌ದೇವ್ ಥೋರಟ್, ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯ ಅಶೋಕ್ ಸಿದ್ದಾರ್ಥ, ಚಿಂತಕರಾದ ಡಾ.ಮೀನಾಕ್ಷಿ ಬಾಳಿ, ಅಂಕಣಕಾರ್ತಿ ವಸು ಮಳಲಿ, ಡಿಎಸ್‌ಎಸ್(ಅಂಬೇಡ್ಕರ್‌ವಾದ)ದ ಆರ್.ಮೋಹನ್‌ರಾಜ್ ಹೀಗೆ ಘಟಾನುಘಟಿಗಳು ಆ ಸಮ್ಮೇಳನದಲ್ಲಿ ಸೇರಿದ್ದರು. ಖಾಸಗಿ ವಲಯದ ಮೀಸಲಾತಿಯಲ್ಲಿನ ಪ್ರಮುಖ ಬೇಡಿಕೆ ಇಟ್ಟುಕೊಂಡು ಮಹತ್ವದ ಆ ಸಮ್ಮೇಳನ ಅಲ್ಲಿ ಸೇರಿತ್ತು. ಇದರ ಜೊತೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಎಸ್ಸಿ/ಎಸ್ಟಿ/ಓಬಿಸಿ ವಿದ್ಯಾರ್ಥಿಗಳ ಸ್ಕಾಲರ್‌ಷಿಪ್ 3000ಕ್ಕೆ ಹೆಚ್ಚಿಸಬೇಕು, ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ಎಸ್ಸಿ/ಎಸ್ಟಿಗಳ ಉದ್ಯೋಗ ಕಿತ್ತುಕೊಂಡಿರುವವರನ್ನು ವಜಾಗೊಳಿಸಬೇಕು, ಸಿಇಟಿ ಸೀಟು ಹಂಚಿಕೆ ಸರಕಾರಿ ನಿಯಂತ್ರಣದಲ್ಲಿರಬೇಕು ಹೀಗೆ ಮಹತ್ವದ ಬೇಡಿಕೆಗಳೊಡನೆ ಎಸ್ಸಿ/ಎಸ್ಟಿ/ಓಬಿಸಿ/ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆ ಸಮ್ಮೇಳನ ಅಲ್ಲಿ ಸೇರಿತ್ತು. 

ಹಾಗೆಯೇ ಶಿಸ್ತುಬದ್ಧವಾಗಿ ರಾಜ್ಯದ ನಾನಾ ಕಡೆಗಳಿಂದ ಅಂದರೆ ಬೆಳಗಾಂ, ಗುಲ್ಬರ್ಗ, ಬಿಜಾಪುರ, ಬೀದರ್, ದಾವಣಗೆರೆ, ಮಂಗಳೂರು, ಮೈಸೂರು, ಚಾಮರಾಜನಗರ, ಕೋಲಾರ ಹೀಗೆ ಪ್ರತಿಯೊಂದು ಜಿಲ್ಲೆಗಳಿಂದ ಬಿವಿಎಸ್ ಪ್ರತಿನಿಧಿಗಳು ಮೆರವಣಿಗೆ ಮೂಲಕ ಅಂದು ಸಮ್ಮೇಳನದ ಸ್ಥಳಕ್ಕೆ ತಲುಪಿ, ತಮ್ಮ ಶಿಸ್ತು ಸಂಯಮದ ನಡೆಯ ಮೂಲಕ ಇಡೀ ಬೆಂಗಳೂರನ್ನೇ ಬೆರಗುಗೊಳಿಸಿದ್ದರು. ದುರಂತವೆಂದರೆ ಘಟಾನುಘಟಿಗಳೇ ಭಾಗ ವಹಿಸಿದ್ದರೂ, ಅಭೂತಪೂರ್ವ ಶಿಸ್ತು ಸಂಯಮ ತುಂಬಿದ್ದರೂ ರಾಜ್ಯದ ಯಾವುದೇ ಪತ್ರಿಕೆಯಾಗಲಿ ('ವಾರ್ತಾಭಾರತಿ'ಯೊಂದ ನ್ನೊರತುಪಡಿಸಿ), ಟಿವಿ ಮಾಧ್ಯಮವಾಗಲೀ ಶೋಷಿತ ವಿದ್ಯಾರ್ಥಿಗಳ ಈ ಬೃಹತ್ ಸಮಾವೇಶದ ಬಗ್ಗೆ ಒಂದು ಎಳ್ಳಷ್ಟೂ ಸುದ್ದಿ ಮಾಡಲೇ ಇಲ್ಲ! ಬೇಕಂತಲೇ ಆ ಸಮ್ಮೇಳನ ನಡೆದೇ ಇಲ್ಲವೇನೋ ಎಂಬಂತೆ ಮಾಧ್ಯಮಗಳು ಅಂದು ವರ್ತಿಸಿದ್ದವು! ನಿಜಕ್ಕೂ ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಮಾಧ್ಯಮಗಳ ಈ ನಡೆ ಅಂದು ಅಚ್ಚರಿಯುಂಟುಮಾಡಿತ್ತು. 

ಯಾಕೆಂದರೆ ರಾಜ್ಯ ಮಟ್ಟದ ಆ ಸಮ್ಮೇಳನಕ್ಕೆ ತಯಾರಿ ಭರ್ಜರಿಯಾಗೇ ನಡೆದಿತ್ತು! ಪ್ರತಿ ಯೊಂದು ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ, ವಿಚಾರ ಸಭೆಗಳ ಮೂಲಕ ವಿದ್ಯಾರ್ಥಿಗಳು ಸಮ್ಮೇಳನದ ಬಗ್ಗೆ ಅತ್ಯಮೋಘವಾಗಿಯೇ ಜಾಗೃತಿಯುಂಟುಮಾಡಿದ್ದರು. ಊರೂರು ಗಳಲ್ಲೂ ಬಹುಜನ ವಿದ್ಯಾರ್ಥಿ ಸಂಘದ ಗೋಡೆ ಬರಹಗಳು, ಬೇಡಿಕೆಗಳ ಪಟ್ಟಿಗಳು, ಕರಪತ್ರಗಳು, ಬ್ಯಾನರ್‌ಗಳು ಕಣ್ಕುಕುಕ್ಕುವಷ್ಟು ರಾರಾಜಿಸಿದ್ದವು! ಹೀಗಿದ್ದರೂ, ಇಷ್ಟೆಲ್ಲಾ ಶ್ರಮವಹಿಸಿದ್ದರೂ ರಾಜ್ಯದ ಮಾಧ್ಯಮಗಳು ಅಂದು ಶೋಷಿತ ವರ್ಗಗಳ ವಿದ್ಯಾರ್ಥಿಗಳ ಆ ಬೃಹತ್ ಸಮ್ಮೇಳನವನ್ನು ಕಡೆಗಣಿಸಿದ್ದವು. ಬೇಕಂತಲೇ ಮುಚ್ಚಿಹಾಕಿದ್ದವು! ಯಾಕೆ? ಹ್ಞಾಂ, ಇದು ಬಹುಜನ ವಿದ್ಯಾರ್ಥಿ ಸಂಘದವರೊಬ್ಬರಿಗೆ ಆದಂತಹ ಪ್ರಚಾರದ ಮೋಸವಲ್ಲ. ಶೋಷಿತ ಸಮುದಾಯಗಳ ಜ್ಚಿಟ್ಞಗಳಿಗೆ ಅಂದರೆ ಬಾಬಾಸಾಹೇಬ್ ಅಂಬೇಡ್ಕರ್, ಕಾನ್ಶೀರಾಮ್ ಹೀಗೆ ಎಲ್ಲರಿಗೂ ಅದರ ಅನುಭವವಾಗಿದೆ.

ಯಾಕೆಂದರೆ ಸ್ವತಃ ಅಂಬೇಡ್ಕರರೇ ಇದನ್ನು ಉಲ್ಲೇಖಿಸುತ್ತಾ 1951 ಅಕ್ಟೋಬರ್ 28ರಂದು ಪಂಜಾಬ್‌ನ ಲುಧಿಯಾನಾದಲ್ಲಿ ಮಾತನಾಡುತ್ತಾ, ತಾವು ಅದೇ ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದಿನ ದಿನ ಅಂದರೆ ಅಕ್ಟೋಬರ್ 27ರಂದು ಭಾಗವಹಿಸಿದ್ದ ಸಮ್ಮೇಳನದಲ್ಲಿ ಶೋಷಿತ ಸಮುದಾಯದ 2ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರೂ ಮಾರನೆ ದಿನ ಮಾಧ್ಯಮಗಳು ಬರೇ 30 ಸಾವಿರ ಜನ ಭಾಗವಹಿಸಿದ್ದರು ಎಂದು ಬರೆದಿದ್ದನ್ನು ಪ್ರಸ್ತಾಪಿಸುತ್ತಾರೆ! ಹಾಗೆಯೇ ಕೆಲ ದಿನಗಳ ಹಿಂದೆ ಅದೇ ಲುಧಿಯಾನಾದಲ್ಲಿ ಜವಹರಲಾಲ್ ನೆಹರೂರವರು ಬಂದಿದ್ದಾಗ ಸುಮಾರು ಎರಡೂವರೆ ಲಕ್ಷ ಜನ ಸೇರಿದ್ದರು ಎಂದು ಅದೇ ಮಾಧ್ಯಮದವರು ಸುಳ್ಳು ಬರೆದಿದ್ದನ್ನು ಅಂಬೇಡ್ಕರರು ಉಲ್ಲೇಖಿಸುತ್ತಾರೆ! ಆ ಮೂಲಕ ಮಾಧ್ಯಮಗಳ ತಾರತಮ್ಯ ಧೋರಣೆಯನ್ನು ಅಂಬೇಡ್ಕರರು ಎತ್ತಿತೋರಿಸುತ್ತಾರೆ.

ಅಂದಹಾಗೆ ಆ ಸಭೆಯಲ್ಲಿ ಮಾತನಾಡುತ್ತಾ ಅಂಬೇಡ್ಕರರು ''ಕಾಂಗ್ರೆಸ್‌ನ ಯಾವುದೇ ಸಮ್ಮೇಳನವಿರಲಿ ಪ್ರೇಕ್ಷಕರು ಕೆಲವೇ ಮಂದಿಯಿದ್ದರೂ ಕೂಡ ಮಾಧ್ಯಮದವರು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು ಎಂದು ವರದಿ ಮಾಡುತ್ತಾರೆ. ಐದು ಜನರಿದ್ದರೆ ಐವತ್ತು ಎನ್ನುತ್ತಾರೆ, ಐವತ್ತು ಜನರಿದ್ದರೆ ಐನೂರು ಎನ್ನುತ್ತಾರೆ, ಐನೂರು ಇದ್ದರೆ ಐದು ಸಾವಿರ, ಐದು ಸಾವಿರವಿದ್ದರೆ ಐದು ಲಕ್ಷ ಎಂದು ವರದಿ ಮಾಡುತ್ತಾರೆ. ಈ ನಿಟ್ಟಿನಲಿ ಇದನ್ನು ನೀವು(ಮಾಧ್ಯಮದವರು) ಮಾಧ್ಯಮಗಳ ವಿರುದ್ಧ ನನ್ನ ಟೀಕೆ ಎಂದುಕೊಂಡರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಕಳೆದ ಹಲವು ವರ್ಷಗಳಿಂದ ಅವರು ನನ್ನನ್ನು ಟೀಕಿಸುತ್ತಲೇ ಬಂದಿದ್ದಾರೆ ಮತ್ತು ಹಾಗೆ ಟೀಕಿಸಿದಷ್ಟೂ ಕೂಡ ನಾನು ದೈಹಿಕವಾಗಿ, ಮಾನಸಿಕವಾಗಿ ಬಲಗೊಳ್ಳುತ್ತಲೇ ಇದ್ದೇನೆ'' ಎನ್ನುತ್ತಾ ಅಂಬೇಡ್ಕರರು ಮಾಧ್ಯಮಗಳ ವಿರುದ್ಧದ ತಮ್ಮ ಅಸಹನೆಯನ್ನು ಹೊರಗೆಡಹುತ್ತಾರೆ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ2, ಪು.435). ಒಟ್ಟಾರೆ ಇದರಿಂದ ತಿಳಿದುಬರುವುದಿಷ್ಟೆ ಮೇಲ್ವರ್ಗ ಗಳ ಹಿಡಿತದಲ್ಲಿರುವ ಮಾಧ್ಯಮಗಳು ದಲಿತರ ವಿರುದ್ಧ ಅದು ಅಂಬೇಡ್ಕರ್ ಕಾಲದಿಂದ ಹಿಡಿದು ಇಂದಿನವರೆಗೂ ಅಸ್ಪಶ್ಯತಾಚರಣೆಯನ್ನು ಮಾಡುತ್ತಾ ಬರುತ್ತಿವೆ ಎಂಬುದು!

ಖಂಡಿತ, ಇದು ಅಸ್ಪಶ್ಯತಾಚರಣೆಯೇ. ಯಾಕೆಂದರೆ ಕೇಜ್ರಿವಾಲ್ ಎಂಬ ಮಾರ್ವಾಡಿ ವ್ಯಾಪಾರಸ್ಥ ಜಾತಿಗೆ ಸೇರಿದ, ಮೀಸಲಾತಿ ವಿರೋಧಿ ಹೋರಾಟದ ಹಿನ್ನೆಲೆಯಿಂದ ಬಂದ ವ್ಯಕ್ತಿಗೆ 'ಆತ ಮೀಸಲಾತಿ ವಿರೋಧಿ' ಎಂಬ ಒಂದೇ ಕಾರಣಕ್ಕೆ ಕ್ಷಣಕ್ಷಣಕ್ಕೂ ಆತನಿಗೆ ಭರಪೂರ ಪ್ರಚಾರ ನೀಡಿ ಪೋಷಿಸುತ್ತಿವೆ. ಶ್ರೀಮಂತ ಸಮುದಾಯದ ಹಿನ್ನೆಲೆಯ ಮಾಜಿ ರೆವಿನ್ಯೂ ಅಧಿಕಾರಿ ಕೇಜ್ರಿವಾಲ್ ದಿಲ್ಲಿಯಂತಹ ಚಿಕ್ಕ ರಾಜ್ಯದಲ್ಲಿ ಅರೆಬರೆ ಅಧಿಕಾರ ಹಿಡಿಯುತ್ತಲೇ ಮಾಧ್ಯಮಗಳು ಅವನನ್ನು ಇಂದ್ರ, ಚಂದ್ರ ಎನ್ನುತ್ತವೆ ಮತ್ತು ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತವೆ! ಆದರೆ? ದಲಿತ ಕುಟುಂಬದ ಹಿನ್ನೆಲೆಯ, ತಮ್ಮ ಬದುಕು, ಉದ್ಯೋಗ ಎಲ್ಲವನ್ನೂ ತ್ಯಾಗ ಮಾಡಿ ಕೇಜ್ರಿವಾಲ್‌ಗಿಂತಲೂ ಬಹಳ ಹಿಂದೆಯೇ, ಶ್ರೀಮಂತರ ದುಡ್ಡಿನ ಹಂಗಿಲ್ಲದೆ ಕೇವಲ ಕೆಲ ತನ್ನ ಸಹೋದ್ಯೋಗಿ ದಲಿತ ಸರಕಾರಿ ನೌಕರರ ನೆರವಿನಿಂದ 'ಬಹುಜನ ಸಮಾಜ ಪಕ್ಷ' ಎಂಬ ಬೃಹತ್ ರಾಷ್ಟ್ರೀಯ ಪಕ್ಷ ಕಟ್ಟಿ ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಧಿಕಾರ ಹಿಡಿದರೂ ಕಾನ್ಶೀರಾಮ್‌ರಂತಹ ಸಾಧನೆ ಮಾಡಿದ ಮಾಜಿ ದಲಿತ ರಕ್ಷಣಾ ಇಲಾಖೆಯ ಅಧಿಕಾರಿಗೆ ಮಾಧ್ಯಮಗಳು ಅಂತಹ ಪ್ರಚಾರ ನೀಡಲಿಲ್ಲ! ಬದಲಿಗೆ ಕಡೆಗಣಿಸುತ್ತಲೇ, ಅಲ್ಲಗಳೆಯುತ್ತಲೇ, ಅವರ ವಿರುದ್ಧ ನೆಗೆಟಿವ್ ಆಗಿ ಬರೆಯುತ್ತಲೇ ಮಾಧ್ಯಮಗಳು ತಮ್ಮ ಸಿನಿಕತನವನ್ನು ತೋರಿಸಿಕೊಂಡವು. ಒಟ್ಟಾರೆ ನೆಹರೂ, ಕೇಜ್ರಿವಾಲ್‌ಗೆ ಒಂದು ನ್ಯಾಯ. ಅದೇ ಅಂಬೇಡ್ಕರ್ ಮತ್ತು ಕಾನ್ಶೀರಾಮ್‌ಗೆ? ಈ ನಿಟ್ಟಿನಲ್ಲಿ ಇದು ಅಸ್ಪಶ್ಯತಾಚರಣೆಯಲ್ಲದೆ ಮತ್ತೇನು?

ಹಾಗೆ ಹೇಳುವುದಾದರೆ ಅಸ್ಪಶ್ಯರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮಾಧ್ಯಮಗಳು ಅತೀ ಪ್ರಚಾರ ನೀಡುತ್ತವೆ! ಯಾವಾಗ ಗೊತ್ತಾ? ಅವರುಗಳು ಸಣ್ಣ ಪುಟ್ಟ ತಪ್ಪು ಮಾಡಿದಾಗ! ಅಸ್ಪಶ್ಯ, ಹಿಂದುಳಿದವರು ಸಣ್ಣ ಪುಟ್ಟ ತಪ್ಪು ಮಾಡಲಿ ಅಥವಾ ಸಿಕ್ಕಿಬೀಳಲಿ ಮಾಧ್ಯಮಗಳು ಅವನ್ನು ಬಹು ದೊಡ್ಡ ಕರ್ಮಕಾಂಡವೆಂಬಂತೆ ಬಿಂಬಿಸುತ್ತವೆ!

ಅಂದಹಾಗೆ ಈ ನೀತಿ ಅಂದರೆ 'ಸುದ್ದಿ ಅಸ್ಪಶ್ಯತಾಚರಣೆ'ಯ ಇಂತಹ ನಡವಳಿಕೆಯ ವಿರುದ್ಧ ರೊಚ್ಚಿಗೆದ್ದು ಹಿಂದೆ ಬಿಎಸ್‌ಪಿ ಸಂಸ್ಥಾಪಕ ಕಾನ್ಶೀರಾಮ್ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರನೊಬ್ಬನಿಗೆ ಕಪಾಳಮೋಕ್ಷ ಕೂಡ ಮಾಡಿದ್ದರು! ಯಾಕೆಂದರೆ ದಲಿತ ನಾಯಕರುಗಳಿಗೆ ಪ್ರಚಾರ ಒತ್ತಟ್ಟಿಗಿರಲಿ ಆದರೆ ಅಪಪ್ರಚಾರ ಮಾಡಹೊರಟರೆ? ಇಲ್ಲದ್ದನ್ನು ನಿಜವೆಂದು ಸಾಧಿಸಹೊರಟರೆ? ಖಂಡಿತ ಇಂತಹ ಸಾಧಿಸುವಿಕೆ ಜಾತಿಪೀಡಿತ ಭಾರತದಲ್ಲಿ ಮೇರೆ ಮೀರಿದೆ. ಹಾಗಲ್ಲದಿದ್ದರೆ ಇಂದು ಭಯೋತ್ಪಾದಕರೆಂಬ ಪಟ್ಟ ಹೊತ್ತು ಬಹುತೇಕ ಮುಸ್ಲಿಂ ಯುವಕರು ಜೈಲುಗಳ ಕಂಬಿ ಎಣಿಸಲು ಸಾಧ್ಯವೇ ಇರುತ್ತಿರಲಿಲ್ಲ.
ಆದರೆ ಮಾಧ್ಯಮಗಳ ಇಂತಹ ಅಸ್ಪಶ್ಯತಾಚರಣ ಧೋರಣೆಯಿಂದಾಗಿ ಅಮಾಯಕ ಮುಸ್ಲಿಮರೆಲ್ಲ ಭಯೋತ್ಪಾದಕರಾಗಿ, ವಿಚಾರವಾದಿ ದಲಿತ ನಾಯಕರುಗಳು ಗೂಂಡಾಗಳಾಗಿ, ಕೊಲೆಗಡುಕರಾಗಿ 'ಪರಿವರ್ತಿತರಾಗುತ್ತಿದ್ದಾರೆ'. ತತ್ಪರಿಣಾಮ ಮಾಧ್ಯಮಗಳ ಇಂತಹ 'ತೀರ್ಪು ಕೊಡುವ' ಗುಣದಿಂದಾಗಿ ಪೊಲೀಸರು ಮತ್ತು ನ್ಯಾಯಾಲಯ ಅವುಗಳ ತಾಳಕ್ಕೆ ತಕ್ಕಂತೆ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುತ್ತವೆ, ತೀರ್ಪು ನೀಡುತ್ತವೆ!

ಹೀಗಿರುವಾಗ ಮನುವಾದಿ ಮಾಧ್ಯಮಗಳ ಇಂತಹ ಅಸ್ಪಶ್ಯತಾಚರಣೆಯ ವಿರುದ್ಧ ನಮ್ಮದೇ ಆದಂತಹ ಸ್ವಂತ ಮಾಧ್ಯಮ ಕಟ್ಟುವ ಆವಶ್ಯಕತೆ ಈ ಸಂದರ್ಭದಲ್ಲಿ ಖಂಡಿತ ಕಂಡುಬರುತ್ತದೆ. ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‌ರು ಕೂಡ ಈ ದಿಸೆಯಲ್ಲಿ ಆ ಕಾಲದಲ್ಲೇ 'ಮೂಕನಾಯಕ', 'ಜನತಾ' ಮತ್ತು 'ಪ್ರಬುಧ್ಧ ಭಾರತ' ಎಂಬ ಮೂರು ಪತ್ರಿಕೆಗಳನ್ನು ಸ್ಥಾಪಿಸಿದ್ದರು. ಹಾಗೆಯೇ ತಮ್ಮ ಚಳವಳಿಯ ನಡೆಗಳನ್ನು ಅಂಬೇಡ್ಕರರು ಅವುಗಳಲ್ಲಿ ವರದಿ ಮಾಡಿ ಸಾಕ್ಷಿಗಳನ್ನು ಕೂಡ ಇಟ್ಟುಹೋದರು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಸದ್ಯ ಶೋಷಿತ ಸಮುದಾಯಗಳ ನಡುವೆ ಅಂಬೇಡ್ಕರರು ತೋರಿದ ಇಂತಹ ಪರ್ಯಾಯ ಮಾಧ್ಯಮದ ಸಾಧ್ಯತೆ ಮುಕ್ತವಾಗಿದೆ ಮತ್ತು ಅಂತಹ ಪರ್ಯಾಯದ ಕಡೆ ಶೋಷಿತ ಸಮುದಾಯಗಳು ಸಂಘಟಿತ ಚಿಂತನೆ ನಡೆಸುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಇದೆ. ಈ ದಿಕ್ಕಿನಲ್ಲಿ ಶೋಷಿತ ಸಮುದಾಯಗಳು ಹೆಚ್ಚು ಯೋಚಿಸಲಿ. ನಮ್ಮಿಡಲೊಳಗೆ ಹೆಚ್ಚು ಹೆಚ್ಚು 'ಮೂಕನಾಯಕ'ರುಗಳು ಅರಳಲಿ. ಮನುವಾದಿ ಮಾಧ್ಯಮಗಳ ಇಂತಹ ಅಸ್ಪಶ್ಯತಾಚರಣೆಯ ವಿರುದ್ಧ ಪರ್ಯಾಯ ದಲಿತ ಮಾಧ್ಯಮ ಲೋಕ ಬೆಳೆಯಲಿ ಎಂಬುದೇ ಸದ್ಯದ ಕಳಕಳಿ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...