Wednesday, April 23, 2014

ಶಿಥಿಲಗೊಂಡಿರುವ ದಲಿತ ರಾಜಕಾರಣ

ಪಿ. ಸಿದ್ದರಾಜು

 ಶಿಥಿಲಗೊಂಡಿರುವ ದಲಿತ ರಾಜಕಾರಣ

 

952ರಿಂದಲೂ ಚುನಾವಣೆಗಳು (ಲೋಕಸಭೆ ಹಾಗೂ ವಿಧಾನಸಭೆ)ನಡೆಯುತ್ತಾ ಬಂದಿದ್ದು ದಲಿತರು ಅನುಭವಿಸುತ್ತಿರುವ ಕಷ್ಟಗಳನ್ನು ಯಾವುದೇ ಸರಕಾರಗಳು ನಿರೀಕ್ಷಿತ ಮಟ್ಟದಲ್ಲಿ ಪರಿಹರಿಸುವುದರಲ್ಲಿ ಕ್ರಿಯಾತ್ಮಕವಾದ ಯೋಜನೆಗಳನ್ನಾಗಲೀ ಅಥವಾ ನಿರ್ಣಯಗಳನ್ನಾಗಲೀ ತೆಗೆದು ಕೊಳ್ಳುತ್ತಿಲ್ಲ. ಯಾವುದೇ ಸರಕಾರದ ಭವಿಷ್ಯ ವನ್ನು ರಾಜಕೀಯವಾಗಿ ನಿರ್ಣಯಿಸುವಲ್ಲಿ ದಲಿತರು ಪ್ರಮುಖ ಪಾತ್ರವನ್ನು ವಹಿಸುತ್ತಾ ಬರುತ್ತಿದ್ದು ಸಂದರ್ಭ ಸಿಕ್ಕಿದಾಗಲೆಲ್ಲಾ ಯಾವುದಾದರೂ ನೆಪವೊಡ್ಡಿ ಮೋಸ ಮಾರ್ಗದಿಂದ ದಿಕ್ಕುತಪ್ಪಿಸಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಪ್ರತಿಯೊಂದು ಪಕ್ಷಗಳು ಮಾಡಿಕೊಂಡು ಬರುತ್ತಿವೆ.

ತಾವೇ ಈ ರಾಜ್ಯದ ಪ್ರತಿನಿಧಿಗಳು ಬೇರೆ ಯಾರೂ ಇಲ್ಲ ಎಂಬಂತೆ ಬಹಿರಂಗವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ದಲಿತರ ಸಲಹೆಗಳಾಗಲಿ ಅಥವಾ ಅಭಿ ಪ್ರಾಯಗಳಿಗಾಗಲೀ ಯಾವುದೇ ಕಿಮ್ಮತ್ತೂ ಸಿಗುತ್ತಿಲ್ಲ. ಒಂದು ರೀತಿಯ ಧಮನಗೊಳಿಸುವ ವಿಚಿತ್ರವಾದ ಸಂದರ್ಭಗಳನ್ನು ಸೃಷ್ಟಿ ಮಾಡಿ ಪ್ರಜಾಪ್ರಭುತ್ವ ಯಥಾಸ್ಥಿತಿವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.

ಈ ಕುಣಿತಕ್ಕೆ ದಲಿತ ರಾಜಕಾರಣಿಗಳು ಸಿಕ್ಕಿ ನಲುಗಿ ಹೋಗಿ ದ್ದಾರೆ. ದಲಿತರು ಯಾವುದೇ ರೀತಿಯ ಹೊಂದಾಣಿಕೆಗಳಿಗೆ ಬದ್ಧರಾಗಿ ಪ್ರತಿರೋಧವನ್ನು ಒಡ್ಡದೆ ಅಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಾ ಇರುವುದರಿಂದ ವರ್ಚಸ್ಸು ಕುಗ್ಗಿ ಆಳುವ ವರ್ಗದವರು ತೆಗೆದುಕೊಳ್ಳುವ ತೀರ್ಮಾನಗಳಿಗೆ ಸಹಿ ಹಾಕಿ ತಲೆ ಬಗ್ಗಿ ಬೆನ್ನನ್ನು ಬಾಗಿಸುತ್ತಾ ಬರುತ್ತಿದ್ದಾರೆ. ಇದ ರಿಂದ ಅಂದಿನಿಂದಲೂ ರಾಜಕಾರಣದಲ್ಲಿ ಕುಬ್ಜರಾಗಿ ಶೋಷಿತ ರಾಜಕಾರಣಿಗಳಾಗಿ ಶೋಷಿತರ ಬೇಡಿಕೆಗಳ ಬಗ್ಗೆ ಚರ್ಚಿಸುವ ಅರ್ಹತೆಗಳನ್ನೇ ಕಳೆದುಕೊಂಡಿದ್ದಾರೆ.

ದಲಿತರು ಸಾಮಾಜಿಕ ಸಮ್ಮೇಳನ ವನ್ನು ನಡೆಸುತ್ತಿದ್ದ ಕಾಲವೊಂದಿತ್ತು. ಇಂತಹ ಸಮ್ಮೇಳನಗಳನ್ನು ದಲಿತ ರಾಜಕಾರಣಿಗಳೇ ಹತ್ತಿಕ್ಕುತ್ತಿರು ವುದರಿಂದ ದಲಿತರ ಸುಧಾರಣೆಯ ಸಂಬಂಧ ಕಾರ್ಯಗಳನ್ನು ಆಳುತ್ತಿರುವ ವರ್ಗದ ಕೈಯಲ್ಲಿಟ್ಟು ನಿದ್ರೆ ಮಾಡುತ್ತಿದ್ದಾರೆ. ವೇದಿಕೆಗಳ ಮೇಲೆ ಸುಳ್ಳು ಘೋಷಣೆಯ ಭಾಷಣಗಳನ್ನು ಮಾಡುತ್ತಾ ಬಜೆಟ್‌ನಲ್ಲಿ ಬಿಡುಗಡೆಯಾಗದ ಅನುದಾನದ ವೆಚ್ಚವನ್ನು ಬರಿಬಾಯಲ್ಲಿ ಮುಕ್ಕಳಿಸಿ ಉಗುಳುತ್ತಿದ್ದಾರೆ. ಇಂತಹ ದಾಖಲೆಯಿಲ್ಲದ ಅದೆಷ್ಟೋ ಸುಳ್ಳು ಆಶ್ವಾಸನೆಗಳು ಚುನಾವಣೆಗಳು ಹತ್ತಿರ ವಾಗುತ್ತಿದ್ದಂತೆಲ್ಲಾ ಹೊಸ ಹೊಸ ರೂಪಗಳನ್ನು ಪಡೆದುಕೊಂಡು ಸತ್ತು ಸತ್ತು ಹುಟ್ಟುತ್ತಿವೆ. 

ಈ ಪೊಳ್ಳು ಭಾಷಣಗಳು ಸಾಮಾಜಿಕ ಪಿಡುಗು ಅಥವಾ ಅನಿವಾರ್ಯವೋ ಅಥವಾ ಈ ರಾಜ್ಯದ ವಾದವೋ ಈಗಲಾದರೂ ಅರ್ಥಮಾಡಿಕೊಳ್ಳಬೇಕಾಗಿದೆ. ದಲಿತರ ಉದ್ಧಾರಕ್ಕಾಗಿ ಸೂಚನೆ ದೊರಕಿಲ್ಲವಾದರೂ ಹಾಗೆಯೇ ಬದಲಾವಣೆಗಳ ಸಾಧ್ಯತೆಯೂ ಮರೀಚಿಕೆಯಾಗಿದೆ. ಈ ವಿಷಯದ ಮೇಲೆ ವಿಧಾನ ಸಭೆ ಮತ್ತು ಮಂತ್ರಿ ಮಂಡಲದಲ್ಲಿ ಯಾವೊಬ್ಬ ದಲಿತ ಜನಪ್ರತಿನಿಧಿಯೂ ಇದುವರೆಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಇದಕ್ಕೆ ದಾಖಲೆಗಳನ್ನು ಹುಡುಕುವುದು ಅಷ್ಟೇ ಕಷ್ಟ ಸಾಧ್ಯವಾದುದು. ಇದೊಂದು ದಲಿತರಿಗೆ ಕಾಡುವ ಶಾಶ್ವತವಾದ ಸಮಸ್ಯೆಯಾಗಿದೆ. 

ಜನಾಂಗದ ಹಿತಾಸಕ್ತಿಯನ್ನು ಪ್ರತಿನಿಧಿಸುವ ಯಾರೊಬ್ಬರನ್ನು ಕಾಣಲಾಗಿಲ್ಲ. ಇದು ಅತ್ಯಂತ ಒತ್ತಾಯಪೂರ್ವಕವಾದ ವಿಚಾರ ವಾಗಿದೆ. ತತ್ಪರಿಣಾಮವಾಗಿ ದಲಿತರು ರಾಜಕೀಯವಾಗಿ ಶಿಥಿಲಗೊಂಡು ನೆಲಸಮವಾಗಿದ್ದಾರೆ. ಶಾಸನ ಸಭೆಗಳಲ್ಲಿ ಬೇಕಾಗಿರುವ ಪ್ರಾತಿನಿಧ್ಯದ ಬಗ್ಗೆ ಸೂಚಿಸುವ ಒಂದು ಹೇಳಿಕೆಯನ್ನು ಸಮಿತಿಗಳಲ್ಲಿಯೂ ಮಂಡಿಸಿಲ್ಲ. ಅಂದಿನಿಂದಲೂ ಈ ವಿಚಾರಗಳನ್ನು ಮಂಡನೆ ಮಾಡುತ್ತಾ ಬಂದಿದ್ದರೆ ಘನತೆ, ಗೌರವಗಳು ಹೆಚ್ಚಾಗುತ್ತಾ ಬಂದು ಜನಾಂಗದ ಏಳಿಗೆ ಮತ್ತು ಹಕ್ಕುಗಳಿಗೆ ಜೀವ ಬರುತ್ತಿತ್ತು. 

ಇಂದು ಇದಿಲ್ಲದೆ ಏದುಸಿರು ಬಿಡುತ್ತಿರುವ ರೋಗಿಯಂತಾಗಿದೆ. ಸಂಧಾನ ಮತ್ತು ಒಳ ಒಪ್ಪಂದಗಳ ಮೂಲಕ ಅಧಿಕಾರವನ್ನು ಪಡೆದು ಬೇಡಿಕೆಗಳನ್ನೂ ಪರಿಶೀಲಿಸದೆ ಅಧಿಕಾರದ ಲಾಲಸೆಯಿಂದ ನಂಬಿರುವ ಜನತೆಗೆ ವಿಷಪ್ರಾಶನ ಮಾಡಿಸುತ್ತಿದ್ದಾರೆ. ಅವರ ಪ್ರಾತಿನಿಧ್ಯ ಏನೇ ಇರಲಿ, ಯಾರು ಯಾರೊಡನೆ ಮಾತುಕತೆ ನಡೆಸುವರೋ ಅವರ ನಿರ್ಣಯಕ್ಕೆ ದಲಿತರು ಬದ್ಧರಾಗಬೇಕಾಗಿದೆ. ದಲಿತರಿಗೆ ರಾಜ್ಯಮಟ್ಟದಲ್ಲಿ ಪ್ರಾಮುಖ್ಯತೆ ಬೇಡವೇ? ಇದು ಅವಶ್ಯ ಮತ್ತು ಸ್ಪಷ್ಟತೆಯಲ್ಲಿವೆ. 

ಇಂತಹ ಒಂದು ಪ್ರಮುಖವಾದ ವಿಷಯಕ್ಕೆ ದಲಿತ ಶಾಸಕರು ಮತ್ತು ಮಂತ್ರಿ ಮಹೋದಯರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಏಕೆ ಧ್ವನಿ ಎತ್ತುತ್ತಿಲ್ಲ.? ಸತತ ಪರಿಶ್ರಮದಿಂದ ತಮ್ಮ ಹಿತರಕ್ಷಣೆ ಮಾಡಿಕೊಳ್ಳುವವರು ಮತ್ತು ಶಕ್ತಿಯನ್ನೂ ಹೊಂದಿರುವ ಇವರು ತಮ್ಮ ನಡುವೆ ಸಾಮರಸ್ಯವನ್ನು ಏಕೆ ತೋರುತ್ತಿಲ್ಲ. 

ಇದು ಸಾಧ್ಯವಿಲ್ಲವೇ? ಹೊಂದಾಣಿಕೆಯಿಲ್ಲವೇ? ವಿಚಾರ ವಿನಿಮಯವಿಲ್ಲವೇ?ಅಥವಾ ಅಗತ್ಯವಿಲ್ಲವೇ? ಒಳ ಒಪ್ಪಂದದಲ್ಲಿ ಬಂಧಿತರಾದವರಿಗೆ ರಾಜ್ಯವನ್ನಾಳುವ ಅರ್ಹತೆ ಇಲ್ಲವೇ? ಇಂತಹ ಒಂದು ಪ್ರಸ್ತಾವನೆಯನ್ನು ಸರಕಾರದ ಮುಂದೆ ಇಡುವಂತಹ ಧೈರ್ಯವಿಲ್ಲವೇ? ಅಂತಹ ಸಭೆಗಳಲ್ಲಿ ಯಾವುದೇ ರೀತಿಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತದೆ ಎಂಬ ಶಂಕೆಯಿಂದ ಮನಸ್ಸುಗಳು ಮಲಿನವಾಗಿವೆಯೇ? ಇದುವರೆವಿಗೂ ನಾವು ಭಾಗವಹಿಸಿರುವ ಮಹತ್ವದ ಸಭೆಗಳೆಲ್ಲಾ ಅನೌಪಚಾರಿಕ ಸಭೆಗಳೆಂದು ಕಾಲಹರಣ ಮಾಡುತ್ತಿದ್ದೀರಲ್ಲವೇ? ನಿಮ್ಮ ಅನುಭವದಲ್ಲಿ ನಿಮ್ಮ ತಿಳುವಳಿಕೆ ಬಂದಾಗಿನಿಂದಲೂ ನಿಮ್ಮ ಸಮುದಾಯಕ್ಕೆ ಏನಾದರೂ ಸಂವಿಧಾನಾತ್ಮಕವಾದ ಯಾವುದಾದರೂ ಕೊಡುಗೆಯನ್ನು ನೀಡಿದ್ದೀರಾ? ಜ್ಞಾಪಿಸಿಕೊಳ್ಳಿ.

ವಿವಿಧ ಸಮೂಹಗಳ ಜನಪ್ರತಿನಿಧಿಗಳೊಡನೆ ಸಮಸ್ಯೆಗಳಿಗೆ ಪರಿಹಾರ ಹುಡು ಕಲು ಮಾತುಕತೆಗಳನ್ನು ನಡೆಸಿದ್ದೀರಾ? ಈ ವಿಚಾರಗಳನ್ನು ಅತ್ಯಂತ ದುಃಖದಿಂದ ಅಪಮಾನಕಾರಿಗಳಾಗಿ ಒತ್ತಾಯಿಸಬೇಕಾದದ್ದು ನಮ್ಮ ದುರದೃಷ್ಟವೆಂದೇ ತಿಳಿದುಕೊಳ್ಳೋಣವೇ? ಇನ್ನು ಕರ್ನಾಟಕದ ಮೊದಲ ವಿಧಾನಸಭೆ 1952ರಲ್ಲಿ ರಚನೆಯಾಯಿತು. ಆಗ ಚುನಾಯಿತ ಸದಸ್ಯರ ಸಂಖ್ಯೆ 99.

ಇಬ್ಬರು ನಾಮ ನಿರ್ದೇಶನ ಸದಸ್ಯರು 1953ರಲ್ಲಿ ಆಂಧ್ರ ರಾಜ್ಯ ರಚನೆಯಾದ್ದರಿಂದ ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳು ಮತ್ತು ಮೈಸೂರು ಜಿಲ್ಲೆಯ ಕೆಲವು ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿ 5 ಜನ ಸದಸ್ಯರ ಸಂಖ್ಯೆ ಹೆಚ್ಚಾಯಿತು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳಾದ್ದರಿಂದ ಜನವರಿ 1ರಂದು ಮೈಸೂರು ರಾಜ್ಯ ಬಂದು 1973ರಲ್ಲಿ ಇದು ಕರ್ನಾಟಕ ರಾಜ್ಯವಾಗಿ ನಾಮಕರಣವಾಯಿತು. 1956ರ ಡಿಸೆಂಬರ್ 19ರಂದು ಮೊದಲ ಅಧಿವೇಶನ ನಡೆಯಿತು. ಆಗ ವಿಧಾನಸಭಾ ಸದಸ್ಯರ ಸಂಖ್ಯೆ 208. 1967ರಲ್ಲಿ 217ಕ್ಕೆ ಏರಿತು.

ನಂತರ 1978ರಲ್ಲಿ 224ಕ್ಕೆ ಏರಿಸಲಾಯಿತು. 1952ರಿಂದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್. ಆರ್. ಕಂಠಿ, ವೀರೇಂದ್ರ ಪಾಟೀಲ್, ಡಿ. ದೇವರಾಜ್ ಅರಸು, ಆರ್ ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್ ಡಿ ದೇವೇಗೌಡ, ಜೆ.ಎಚ್. ಪಟೇಲ್,ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರ ಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

14ನೆ ಮೇ 5 2013ರಂದು ಚುನಾವಣೆ ನಡೆದು ಮೇ 8ರಂದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನರು ಮೇ 15ರಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಆದರೆ ಸ್ವಾತಂತ್ರ ಸಿಕ್ಕಿ ಸುಮಾರು 62 ವರ್ಷಗಳು ಕಳೆದಿದ್ದರೂ ದಲಿತ ರಾಜಕಾರಣಿಗಳು ಕೆಲವು ಅಪವಾದಗಳನ್ನು ಅನುಭವಿಸಿ ಸಮಯಸಾಧಕತನ, ವೈಯಕ್ತಿಕ ಮೂಲಭೂತ ಸೌಕರ್ಯಗಳಿಗೋಸ್ಕರ ಬಲಿಯಾಗಿ ರಾಜ್ಯಾಧಿಕಾರವನ್ನು ಹಿಡಿಯುವ ಕನಸನ್ನು ನುಚ್ಚುನೂರು ಮಾಡಿದರು. 1970ರ ದಶಕದಲ್ಲಿ ದಲಿತ ರಾಜಕೀಯವು ಗುಲಾಮ ಸಂಸ್ಕೃತಿಯಿಂದ ಹೊರಬಂದು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದವು. 

ಇದು ಸಾಂಸ್ಕೃತಿಕ ಮತ್ತು ಜಾತಿ ಸಮಸ್ಯೆ ಬಹುಮುಖ್ಯ ಪ್ರಶ್ನೆಯಾದ್ದರಿಂದ ವಿರೋಧಿ ಕ್ಷೇತ್ರಕ್ಕೆ ಲಗ್ಗೆಯಿಟ್ಟಿತು. ಇದು ಕ್ರಾಂತಿಕಾರಿ ನಿರ್ಮಾಣ ಮಾಡುವ ಸಿದ್ಧಾಂತವನ್ನು ತೀವ್ರ ತರವಾದ ಚಿಂತನೆಗೆ ಸಮಾಜದ ಹಲವಾರು ಪ್ರಗತಿಪರ ಶಕ್ತಿಗಳನ್ನು ಮತ್ತು ಒಲವುಗಳನ್ನು ಹೊಂದಿದ್ದವರನ್ನು ಆಕರ್ಷಣೆ ಮಾಡಿ ಸ್ವಾಭಿಮಾನ, ಭಾವೈಕ್ಯತೆ ಸೋದರತೆಯನ್ನು ಮೆರೆದು ತುಳಿತಕ್ಕೆ ಒಳಗಾದ ಜನ ಸಮುದಾಯದ ವಿಮೋಚನೆಯ ದಿಕ್ಕಿನಲ್ಲಿ ದಲಿತ ಸಂಘಟನೆಗಳು ಹೋರಾಟವನ್ನು ಪ್ರಾರಂಭಿಸಿ ಎಲ್ಲರೂ ಸಮರ್ಪಿಸಿಕೊಂಡು ಚಳವಳಿಗಳನ್ನು ನಡೆಸಿ ಯಶಸ್ವಿಯಾಯಿತು. 

ಆದರೆ ಇಂದು ದಲಿತರ ವೇದನೆ ಮೂಕ ಪ್ರಾಣಿಗಳ ವೇದನೆಯಂತಾಗಿದೆ. ಇವರು ಎಂದಿಗೂ ಯಾರಿಗೂ ಮೋಸ ಮಾಡಿದವರಲ್ಲ. ಕೊಟ್ಟ ಮಾತಿಗೆ ತಪ್ಪಿದವರಲ್ಲ. ಆಳುವ ವರ್ಗಕ್ಕೆ ದಾರಿಯ ಮೆಟ್ಟಿಲಾದವರು. ನಾವೂ ಕೂಡ ಮನುಷ್ಯರು. ನಮಗೂ ಹೃದಯ ಎನ್ನುವುದು ಇದೆ. ನಮಗೂ ನಮ್ಮ ತುಮುಲಗಳನ್ನು ದಾಖಲಿಸಲು ಸ್ಪಷ್ಟಪಡಿಸಲು ಬದುಕಿನ ಕೊನೆಯನ್ನು ಮುಟ್ಟಲು ಎಲ್ಲಾ ಮಹತ್ವಾಕಾಂಕ್ಷೆ ಎಲ್ಲರಿಗೂ ಇರುವಂತೆ ಗುರುತನ್ನು ಉಳಿಸಿಹೋಗುವ ಅದಮ್ಯ ಆಸೆ ಇದೆ. ಗೊಂದಲದ ನಡುವೆ ಚಡಪಡಿಕೆ ಇದೆ. ದುಡಿದು ದಣಿದ ಮನಸ್ಸುಗಳಿಗೆ ವಿಶ್ರಾಂತಿಯೆ ಇಲ್ಲವಾಗಿದೆ. 

ಒಂದು ಕಡೆ ಸ್ವಾತಂತ್ರ ಪೂರ್ವದಲ್ಲಿದ್ದ ಗುಲಾಮ ಸಂಸ್ಕೃತಿಯ ಕರಾಳ ನೆನಪುಗಳನ್ನು ಹಾಗೂ ಆ ಕಲ್ಪನೆಯ ನೆನಪುಗಳನ್ನು ಕೆಣಕುತ್ತಿರುವ ವಾಸ್ತವ ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ಪ್ರತಿ ದಿನ ನಡೆಯುತ್ತಿರುವ ಶೋಷಣೆಗಳು ಕನ್ನಡಿ ಹಿಡಿದಂತಿವೆ. ಅಂದು ದುಡಿಯುತ್ತಿರುವವರು ಇಂದಿಗೂ ದುಡಿಯುತ್ತಿದ್ದಾರೆ. ಅಂದು ಆಳುತ್ತಿರುವವರು ಇಂದಿಗೂ ತಮ್ಮ ಅಧಿಕಾರದ ವ್ಯಾಮೋಹವನ್ನು ಬಿಟ್ಟು ಕೊಟ್ಟಿಲ್ಲ. 

ದಲಿತ ಮತದಾರರು ಸಹ ಅವರ ಕೈ ಬಿಟ್ಟಿಲ್ಲ. ಆದ್ದರಿಂದಲೇ ಇದೊಂದು ಇನ್ನೂ ಬದಲಾಗದ ಮನಸ್ಥಿತಿ. ಅವರ ಹಿತವೇ ನಮ್ಮ ಬದುಕು ಎಂದು ಪರಿಭಾವಿಸುವ ಸ್ಥಿತಿಯಿಂದ ದಲಿತರು ಇನ್ನಾದರೂ ಹೊರಬರಬೇಕಾಗಿದೆ. ಜೊತೆ ಜೊತೆಗೆ ರಾಜಕೀಯದಲ್ಲೂ ಗುಲಾಮ ಸಂಸ್ಕೃತಿಯಿಂದ ಹೊರಬಂದು ಇತಿಹಾಸದ ದಾಖಲೆಯನ್ನು ಮುರಿಯಲು ಪ್ರಯತ್ನಿಸಬೇಕಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...