Friday, April 11, 2014

ಲಂಕೇಶ್ ಮತ್ತು ಪ್ರಗತಿರಂಗ

ನಟರಾಜ್ ಹುಳಿಯಾರ್ಲಂಕೇಶ್ ಮತ್ತು ಪ್ರಗತಿರಂಗ


ಲಂಕೇಶರಂಥ ಸಂಕೋಚದ ವ್ಯಕ್ತಿ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಳ್ಳಲೆತ್ನಿಸಿದ್ದು ಅವರ ಒಳಕಾಮನೆಗಳ ಕುತೂಹಲಕರ ಮುಖ ವೊಂದನ್ನು ಹೇಳುವಂತಿದೆ. ತಮ್ಮ ನಲವತ್ತನೆಯ ವಯಸ್ಸಿನಲ್ಲಿ ನಿರ್ದೇಶಿಸಿದ ‘ಪಲ್ಲವಿ’ ಸಿನಿಮಾ ದಲ್ಲಿ ಲಂಕೇಶ್ ಒಬ್ಬ ಶ್ರೀಮಂತ ಅಥವಾ ‘ಬೂರ್ಜ್ವಾ’ ಎನ್ನಬಹುದಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಅವರ ನಟನೆಯ ಸಂಕ್ಷಿಪ್ತ ಘಟ್ಟದಲ್ಲೂ ಒಂದು ವಿಶೇಷವಿದೆ. ಅದೇನೆಂದರೆ, ‘ಪಲ್ಲವಿ’ಯಲ್ಲಿ ಕೂಡ ಅವರು ‘ನಟಿಸಿ’ದಂತಿಲ್ಲ.

ಕತ್ತು ತಗ್ಗಿಸಿಕೊಂಡು ಎತ್ತಲೋ ನೋಡುತ್ತಾ, ಎದುರಿಗಿದ್ದವನ ಕಣ್ಣಿಗೆ ಕಣ್ಣು ಕೊಡದೆ ಮಾತಾಡುವುದು, ಪೂರ್ಣ ವಾಕ್ಯದಲ್ಲಿ ಮಾತಾಡಿದರೂ ಕೃತಕವಾಗಿ ಬಿಡಬಹುದೇನೋ ಎಂಬ ಅಳುಕಿನಿಂದ ಅರೆ ವಾಕ್ಯಗಳಲ್ಲಿ ಹೇಳಿಬಿಡುವುದು, ತಾನು ಹೇಳುತ್ತಿರುವುದು ಸತ್ಯವೋ ಅಲ್ಲವೋ ಎಂಬ ಖಾತ್ರಿಯಿರದಿದ್ದಾಗ ತಮಗೆ ತಾವೇ ಗೊಣಗಿಕೊಳ್ಳುವುದು.. ಇವೇ ಮುಂತಾದ ಅವರ ವ್ಯಕ್ತಿತ್ವದ ಅಂಶಗಳು ಆ ಪಾತ್ರದಲ್ಲಿದ್ದವು. 

ಅಂದರೆ ‘ತಾನು ಹೇಗಿದ್ದೇನೋ ಹಾಗೇ’ (‘ಜಸ್ಟ್ ಲೈಕ್ ಹಿಮ್’) ಇದ್ದ ರೀತಿಯ ಪಾತ್ರ ಅದು. ಪಟ್ಟಾಭಿರಾಮರೆಡ್ಡಿಯವರು ನಿರ್ದೇಶಿಸಿದ್ದ ‘ಸಂಸ್ಕಾರ’ ಸಿನಿಮಾದಲ್ಲಿ ಲಂಕೇಶರು ಮಾಡಿ ರುವ ನಾರಣಪ್ಪನ ಪಾತ್ರ ನೋಡಿದರೂ ಇದು ಗೊತ್ತಾಗುತ್ತದೆ. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಲಂಕೇಶರು ಕಾಯಿಲೆಯಿಂದ ಚೇತರಿಸಿಕೊಂಡ ಒಂದು ದಿನ ಪೇಜಾವರ ವಿಶ್ವೇಶತೀರ್ಥರು ಲಂಕೇಶರ ಆಫೀಸಿಗೆ ಬಂದು ಹಣ್ಣು ಕೊಟ್ಟು ಹೋದರು. ನಾನು ‘‘ಸಂಸ್ಕಾರ’’ದ ಪ್ರಾಣೇಶಾಚಾರ್ಯರು ನಾರಣಪ್ಪನ ಮನೆಗೆ ಬಂದಂತಾಯಿತಲ್ಲ!’’ ಎಂದು ತಮಾಷೆ ಮಾಡಿದೆ.

‘ಸಂಸ್ಕಾರ’ ಸಿನಿಮಾದಲ್ಲಿ ಹೆಚ್ಚಿನ ನಾಟಕೀಯತೆಯಿಲ್ಲದೆ, ಪ್ರಾಣೇಶಾಚಾರ್ಯರನ್ನು ಕಿಚಾಯಿಸುವ, ಗೇಲಿ ಮಾಡುವ ಬಂಡುಕೋರ ಪಾತ್ರದಲ್ಲಿ ಲಂಕೇಶ್ ತೀರಾ ಸಹಜವಾಗೇ ಇದ್ದರು. ಲಂಕೇಶ್ ತಮ್ಮನ್ನು ತಾವು ‘ವರ್ಸ್ಟ್‌ ಆ್ಯಕ್ಟರ್ ಇನ್ ದಿ ವರ್ಲ್ಡ್’ ಎಂದು ಗೇಲಿ ಮಾಡಿಕೊಳ್ಳುತ್ತಿದ್ದರು! ಆದರೆ ಸಿನಿಮಾ ಒಡನಾಟದಿಂದಾಗಿ ನಟ, ನಟಿಯರ ಕಾತರ, ಪ್ರಚಾರದ ತವಕಗಳ ಲೋಕವನ್ನು ಒಳಗಿನಿಂದ ಕಂಡರು. ಈ ಬಗ್ಗೆ ‘ಟೀಕೆ ಟಿಪ್ಪಣಿ’ ಯಲ್ಲಿ ಹಾಗೂ ‘ಹುಳಿ ಮಾವಿನ ಮರ’ದಲ್ಲಿ ಅವರು ಆಳವಾಗಿ ಬರೆದಿದ್ದಾರೆ. ಸಿನಿಮಾದ ಮೂರ್ತ ಪ್ರತಿಮೆಗಳ ಭಾಷೆಯ ಸಹವಾಸದಿಂದ ಕೂಡ ಅವರ ಬರವಣಿಗೆಗೆ ಹೆಚ್ಚು ಸ್ಪಷ್ಟತೆ ಬಂದಿರಬಹುದು.

ನಿರ್ದೇಶನಕ್ಕಾಗಿ ‘ಸ್ವರ್ಣಕಮಲ’ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ನಿರ್ದೇಶಕರಾದ ಲಂಕೇಶರಿಗೆ ಸಿನಿಮಾ ಒಗ್ಗಿದರೂ ಮೂಲತಃ ನವ್ಯ ಮನೋಭಾವದ ಒಳಮುಖೀ ವ್ಯಕ್ತಿಯಾದ ಅವರಿಗೆ ನಟಿಸುವುದು ಒಗ್ಗಲಿಲ್ಲವೆಂಬುದು ನಿಜ. ತಮ್ಮ ವ್ಯಕ್ತಿತ್ವದಿಂದ ತೀರಾ ಹೊರಗಿರುವ ಪದಗಳನ್ನು ಕೇವಲ ನಾಲಿಗೆಯ ಮೇಲೆ ತಿರುಗಿಸಿ ಆಡುವುದನ್ನು ಅವರು ಅಷ್ಟು ಇಷ್ಟಪಡುತ್ತಿರಲಿಲ್ಲ. 

ಅವರು ಕಾಲೇಜು, ಯೂನಿವರ್ಸಿಟಿಗಳ ಅಧ್ಯಾಪಕರಾಗಿ ಲೋಕದ ಕಣ್ಣಿನಲ್ಲಿ-ಅಂದರೆ, ನಿರರ್ಗಳವಾಗಿ ಮಾತಾಡುವುದನ್ನೇ ಉತ್ತಮ ಅಧ್ಯಾಪನ ಎಂದು ತಿಳಿದವರ ಕಣ್ಣಿನಲ್ಲಿ-ಅಷ್ಟು ಯಶಸ್ವಿಯಾದಂತಿಲ್ಲ. ಇದಕ್ಕೆ ಕಾರಣ, ಒಂದು ಗಂಟೆ ಮಾತಾಡಬೇಕಾದ ಮೇಷ್ಟರೊಬ್ಬರು ತನ್ನ ವ್ಯಕ್ತಿತ್ವವನ್ನು ಮುಟ್ಟದ ಎಷ್ಟೋ ಮಾತುಗಳನ್ನು, ವಾಕ್ಯಗಳನ್ನು, ಅಭಿಪ್ರಾಯಗಳನ್ನು ಬಳಸಬೇಕಾಗುತ್ತದೆ. 

ಅದೆಲ್ಲ ಅವನಿಗೆ ಇಷ್ಟವಿಲ್ಲದಿದ್ದಾಗಲೂ ಕರ್ತವ್ಯವೆಂಬಂತೆ ಮಾತಾಡಬೇಕಾಗುತ್ತದೆ. ಕೆಲವೊಮ್ಮೆ ತನಗೆ ಇಲ್ಲದ ಕಾಳಜಿಗಳನ್ನೂ ಭಾವನೆಗಳನ್ನೂ ಮೈಮೇಲೆ ಹಾಕಿಕೊಂಡು ನಟಿಸಬೇಕಾಗುತ್ತದೆ. ಅದರಲ್ಲೂ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಿಗೆ ಈ ಕಷ್ಟ ಹೆಚ್ಚು. ‘ನನ್ನ ಅತ್ಯುತ್ತಮ ವರ್ಷಗಳು ಅಧ್ಯಾಪಕ ವೃತ್ತಿಯಲ್ಲಿ ಕಳೆದುಹೋದವು’ ಎಂದೊಮ್ಮೆ ಲಂಕೇಶ್ ಹೇಳಿದ್ದರು. ನಾಲಗೆಯೊಂದೇ ಚುರುಕಾಗಿ ಉಳಿದ ಪಂಚೇಂದ್ರಿಯಗಳು ಉಡುಗಿ ಹೋದಂತಾದ್ದರಿಂದ ಅಧ್ಯಾ ಪಕನ ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಎಂಬರ್ಥದ ಮಾತುಗಳನ್ನೂ ಅವರು ಬರೆದಿದ್ದರು. 

ಕ್ಲೀಷೆಗಳನ್ನು ಬಳಸುವುದು ಅವರಲ್ಲಿ ಜಿಗುಪ್ಸೆ ಹುಟ್ಟಿಸುತ್ತಿದ್ದುದರಿಂದ, ಕ್ಲಾಸ್‌ರೂಂ ಮೇಷ್ಟರಾಗಲು ಅಥವಾ ಸಾರ್ವಜನಿಕ ಭಾಷಣ ಮಾಡಲು ಅವರು ಹಿಂಜರಿಯುತ್ತಿದ್ದರೆನಿಸುತ್ತದೆ. ಹಿಂದೊಮ್ಮೆ ದೂರ ದರ್ಶನದ ಮಿತ್ರ ರಘು ಐಡಿಹಳ್ಳಿ ಹೇಳಿದ ಒಂದು ಘಟನೆ ಅವರ ವ್ಯಕ್ತಿತ್ವದ ಈ ತಲ್ಲಣವನ್ನು ಚೆನ್ನಾಗಿ ಬಿಂಬಿಸುತ್ತದೆ: ಒಮ್ಮೆ ಲಂಕೇಶ್ ದೂರದರ್ಶನದ ಭಾಷಣವೊಂದರ ರೆಕಾರ್ಡಿಂಗಿಗೆಂದು ಹೋದರು. ಅದಿನ್ನೂ ಟೆಲಿವಿಷನ್ ಹೊಸ ದಾಗಿ ರೂಢಿಯಾಗುತ್ತಿದ್ದ ಕಾಲ. ಲೈಟುಗಳ ಎದುರು ಲಂಕೇಶರಿಗೆ ಮಾತೇ ಹೊರಡಲಿಲ್ಲ. ಬೆವೆತು ಹೋದರು. 

ಆಗ ರೆಕಾರ್ಡಿಂಗ್ ಸಿಬ್ಬಂದಿ ಕ್ಯಾಮರಾ ಚಾಲೂ ಮಾಡಿ, ‘ನೀವು ಏನು ಮಾತಾಡ್ತೀರೋ ಮಾತಾಡಿ’ ಎಂದು ಅವರನ್ನು ಅವರ ಪಾಡಿಗೆ ಬಿಟ್ಟು ಹೋದರು. ಸಾರ್ವಜನಿಕವಾಗಿ ಮಾತಾಡುವ ಬಗೆಗಿನ ಈ ಹಿಂಜರಿಕೆ ಅವರಲ್ಲಿ ಬಹು ಕಾಲದಿಂದ ಇತ್ತೆಂದು ಅವರ ಮಿತ್ರರು ಹೇಳುತ್ತಾರೆ: ಆದರೆ ಕಾಲ ಕೂಡ ಕೆಲವು ಜವಾಬ್ದಾರಿಗಳನ್ನು ಲೇಖಕ, ಲೇಖಕಿಯರ ಮೇಲೆ ಹೊರಿಸುತ್ತಾ ಹೋಗುತ್ತದೆ.

ಲಂಕೇಶರು ‘ವ್ಯವಸ್ಥೆಯ ಜೊತೆ ರಾಜಿಯಾಗದ’,‘ಯಾರಿಗೂ ಹೆದರದ’, ‘ಭ್ರಷ್ಟಾಚಾರದ ಮೇಲೆ ಯುದ್ಧ ಸಾರಿದ’ ವ್ಯಕ್ತಿ ಎಂಬ ಇಮೇಜನ್ನು ಸಮಾಜ ಸೃಷ್ಟಿಸುತ್ತಾ ಹೋದಂತೆ ಅದನ್ನು ಅವರು ಸ್ವೀಕರಿಸುತ್ತಲೂ ಹೋಗಬೇಕಾದ ಅನಿವಾರ್ಯತೆ ಇತ್ತು. ಲಂಕೇಶ್ ತಾವು ಹೇಳುತ್ತಿದ್ದ ಹೊಸ ರಾಜಕಾರಣವನ್ನು ಪ್ರಯೋಗ ಮಾಡಿ ನೋಡುವ ಗುರಿಯಿಂದ ಅಥವಾ ತಮ್ಮ ನಾಯಕತ್ವವನ್ನು ವಿಸ್ತರಿಸಿಕೊಳ್ಳಲು ರಾಮದಾಸ್, ಕೇಶವಮೂರ್ತಿ ಮತ್ತು ಅನೇಕರ ಜೊತೆ ಸೇರಿ ‘ಕರ್ನಾಟಕ ಪ್ರಗತಿರಂಗ’ ಎಂಬ ರಾಜಕೀಯ ಪಕ್ಷವನ್ನೂ ಹುಟ್ಟು ಹಾಕಿದರು.

ಕರ್ನಾಟಕದ ಹಲವು ಊರುಗಳಲ್ಲಿ ಈ ಹೊಸ ರಾಜಕೀಯವನ್ನು ವಿವರಿಸಿದರು. ಭಾಷಣ ಮಾಡಲು ಹಿಂಜರಿಯುತ್ತಿದ್ದ ಲಂಕೇಶ್, ಜನ ಸಾಮಾನ್ಯರನ್ನು ಉದ್ದೇಶಿಸಿ ಮಾತಾಡುತ್ತಾ, ಪ್ರಾಮಾಣಿಕ ಸಾರ್ವಜನಿಕ ಭಾಷಣದ ನುಡಿಗಟ್ಟಿಗೆ ಹತ್ತಿರ ಬರಲೆತ್ನಿಸಿದರು. ಆ ಕಾಲದಲ್ಲಿ ಅವರ ಜೊತೆಯಲ್ಲಿದ್ದ ಮಿತ್ರ ಬಸವರಾಜ ಅರಸು ಹೇಳುವಂತೆ ‘ಆಗ ಕೂಡ ಲಂಕೇಶ್ ಒಂದು ಊರಿನಲ್ಲಿ ಮಾತಾಡಿದ್ದನ್ನು ಇನ್ನೊಂದು ಊರಿನಲ್ಲಿ ಮಾತಾಡುತ್ತಿರಲಿಲ್ಲ’. 

ಆದರೂ ಹೀಗೆ ನಿರಂತರವಾಗಿ ಸಾರ್ವಜನಿಕವಾಗಿರುವುದು ಲಂಕೇಶರಿಗೆ ಒಗ್ಗಲಿಲ್ಲ. ಹೀಗಾಗಿ ‘ಪ್ರಗತಿರಂಗ’ ಲೇಖಕನೊಬ್ಬ ಕೆಲ ಕಾಲ ನಡೆಸಿದ ಪ್ರಯೋಗದ ಮಟ್ಟ ದಲ್ಲಷ್ಟೇ ಉಳಿಯಿತು. ಪಕ್ಷದ ಪ್ರಣಾಳಿಕೆಯೂ ಸಿದ್ಧವಾಗಿತ್ತು. ಆದರೆ ಲಂಕೇಶ್ ಮುಂದಿನ ಹೆಜ್ಜೆಯಿಡಲು ಹಿಂಜರಿದರು. ಲೇಖಕನೊಬ್ಬನಿಗೆ ತನ್ನ ಅಥೆಂಟಿಕ್ ಹಾಗೂ ಸೂಕ್ಷ್ಮ ವ್ಯಕ್ತಿತ್ವ, ಭಾಷೆಯ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಪ್ರಶ್ನೆ ಕೂಡ ಮುಖ್ಯವಾಗಿರಬಹುದು. ರಾಜಕೀಯಕ್ಕೆ ಬೇಕಾದ ತನ್ನಿಂದ ಹೊರಗಿರುವ ಭಾಷೆಗೆ ಆತ ಸಲೀಸಾಗಿ ಒಗ್ಗಿಕೊಳ್ಳಲಾರ. ಲಂಕೇಶರು ಎದುರಿಸಿದ ಈ ಸೂಕ್ಷ್ಮ ಸಮಸ್ಯೆ ‘ಸರ್ವೋದಯ ಕರ್ನಾಟಕ’ ಪಕ್ಷದ ಅಧ್ಯಕ್ಷರಾದ ದೇವನೂರ ಮಹಾದೇವ ಅವರಿಗೂ ಎದುರಾಗಿರಬಹುದು.

‘ಪ್ರಗತಿರಂಗ’ದ ಈ ಪ್ರಯೋಗದಲ್ಲಿ ಹಲವಾರು ತರುಣ, ತರುಣಿಯರ ಪ್ರಜ್ಞೆ ಮೊನಚಾಗಿದ್ದರಿಂದ ಅದೆಲ್ಲ ಸಮಾಜಕ್ಕೆ ನೆರ ವಾಗಿರುವುದು ನಿಜ. ಅದರ ಜೊತೆಗೇ ಕತೆಗಾರ ಲಂಕೇಶರ ಮರುಹುಟ್ಟು ‘ಪ್ರಗತಿರಂಗ’ದ ಓಡಾಟದಿಂದ ಕೂಡ ಸಾಧ್ಯವಾಯಿತು. ಆದರೆ ‘ಪ್ರಗತಿರಂಗ’ದಂಥ ರಾಜಕೀಯ ಸಂಘ ಟನೆಯನ್ನು ಮುಂದುವರಿಸಲು ಬೇಕಾದ ಆಳದ ಬದ್ಧತೆ, ಜಿಗುಟುತನ ಲಂಕೇಶರಲ್ಲಿರಲಿಲ್ಲ.

ಸೃಜನಶೀಲ ಲೇಖಕರು ಇಂಥ ವೇದಿಕೆಗಳನ್ನು ಬಹುಕಾಲ ಮುಂದು ವರಿಸಿಕೊಂಡು ಹೋಗಲು ಆಗದಿರುವುದಕ್ಕೆ ವ್ಯಕ್ತಿಗತ ಕಾರಣಗಳೂ ಇರ ಬಹುದು. ಸ್ವಪರೀಕ್ಷೆ, ಸಂಕೋಚ, ಒಂದನ್ನು ಬಿಟ್ಟು ಇನ್ನೊಂದನ್ನು ಪ್ರಯೋಗ ಮಾಡುವ ಕಾತರ ಹಾಗೂ ಸಾಮಾಜಿಕ ವೇದಿಕೆಗಳ ಬಗ್ಗೆ ಇಂಥ ಲೇಖಕರ ಆಳದಲ್ಲಿರಬಹುದಾದ ಅಸಡ್ಡೆ ಕೂಡ ಇದಕ್ಕೆ ಕಾರಣ ಇರಬಹುದು. ಕಾತರ ಹಾಗೂ ಸಾಮಾಜಿಕ ವೇದಿಕೆಗಳ ಬಗ್ಗೆ ಇಂಥ ಲೇಖಕರ ಆಳದಲ್ಲಿರಬಹುದಾದ ಅಸಡ್ಡೆ ಕೂಡ ಇದಕ್ಕೆ ಕಾರಣ ಇರಬಹುದು.
ಈ ಹಿನ್ನೆಲೆಯಲ್ಲಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರನ್ನೂ ಲಂಕೇಶರನ್ನೂ ಹೋಲಿಸಿ ನೋಡಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಾಮಾಜಿಕ, ಆರ್ಥಿಕ ಸಂಗತಿಗಳ ಬಗ್ಗೆ ಅಪಾರ ಸ್ಪಷ್ಟತೆ ಹಾಗೂ ಆಳವಾದ ಪಾಂಡಿತ್ಯವಿದ್ದ ಎಂ.ಡಿ.ಎನ್. ರೈತ ಸಂಘಟನೆಗಾಗಿ ಜೀವಮಾನವಿಡೀ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದರು. ಆ ಬದ್ಧತೆ ಲಂಕೇಶರಲ್ಲಿರಲಿಲ್ಲ. ಕೆಲ ವರ್ಷ ರೈತ ಚಳವಳಿಯನ್ನು ಬೆಂಬಲಿಸಿದ ಲಂಕೇಶರು ಆನಂತರ ರೈತ ಸಂಘದ ಬಗ್ಗೆ ಎತ್ತಿದ ಪ್ರಶ್ನೆಗಳಲ್ಲಿ ಕೆಲವು ಅರ್ಥಪೂರ್ಣವಾಗಿದ್ದವೆಂಬುದು ನಿಜ.

ಆದರೆ ಲಂಕೇಶರು ಬರಬರುತ್ತಾ ನಂಜುಂಡಸ್ವಾಮಿಯವರನ್ನು ಗೇಲಿ ಮಾಡತೊಡಗಿದ ರೀತಿ ಸಮಾನ ವ್ಯಕ್ತಿತ್ವದ ಸಮಕಾಲೀನರ ನಡುವಣ ಅಸೂಯೆ, ಅಸಹನೆಗಳಿಂದಲೂ ಹುಟ್ಟಿದಂತಿತ್ತು. ತೊಂಬತ್ತರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಒಮ್ಮೆ ಠೇಂಕಾರದಿಂದ ‘ನಂಜುಂಡಸ್ವಾಮಿಯವರನ್ನು ಟಾಡಾ ಕಾಯ್ಡೆಯಡಿ ಬಂಧಿಸುತ್ತೇನೆ’ ಎಂದು ಚೀರಿದ್ದರು. ಒಂದು ಸಂಜೆ ಲಂಕೇಶರು ದೇವೇಗೌಡರ ಈ ಮಾತನ್ನು ಜಗಿಯುತ್ತಾ ಆನಂದಿಸುತ್ತಿದ್ದರು. ನಂಜುಂಡಸ್ವಾಮಿಯವರ ಬಗ್ಗೆ ಅಪಾರ ಗೌರವವಿದ್ದ ನಾನು ‘ಈ ಕಾಯ್ದೆಯನ್ನು ದುಷ್ಟನೊಬ್ಬ ನಿಮಗೂ ನನಗೂ ಎಲ್ಲರಿಗೂ ಅನ್ವಯಿಸಬಹುದು’ ಎಂದು ವ್ಯಗ್ರವಾಗಿ ಹೇಳಿದಾಗ ಲಂಕೇಶರು ಒಮ್ಮೆ ತೀಕ್ಷ್ಣವಾಗಿ ನನ್ನತ್ತ ದಿಟ್ಟಿಸಿ ಸುಮ್ಮನಾದರು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...