Monday, April 21, 2014

ಗಿಬ್ರಾನ್ ಅವರ ಮತ್ತೆರಡು ಕಥೆಗಳು


 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ
 
 

ದೇವರ ಅರಸುತ್ತ..

ಇಬ್ರು ಕಣಿವೆ ದಾರೀಲಿ ನಡೀತಾ ಇದ್ರು. ಒಬ್ಬ ಒಂದು ಪರ್ವತದ ಕಡೆ ಬೊಟ್ಟು ಮಾಡಿ ತೋರಿಸಿ ಹೇಳಿದ: ‘ಅಲ್ಲೊಂದು ಆಶ್ರಮ ಕಾಣ್ತಾ ಇದೆಯಲ್ಲ ನಿಂಗೆ? ಅಲ್ಲೊಬ್ಬ ಇದಾನೆ. ತುಂಬ ಹಿಂದೆನೇ ಈ ಪ್ರಪಂಚದ ಸಂಬಂಧ ಕಡಕೊಂಡಿದಾನೆ. ಅವನಿಗೆ ಈ ನೆಲದ ಮೇಲಿನ ಯಾವ್ದೂ ಕಾಣಲ್ಲ, ದೇವರನ್ನಷ್ಟೆ ಹುಡುಕ್ತ ಇದಾನೆ.’

ಮತ್ತೊಬ್ಬ ಹೇಳಿದ: ‘ಅವ್ನು ತನ್ನ ಆಶ್ರಮ ಬಿಡೋತಂಕ ದೇವ್ರು ಕಾಣಸಲ್ಲ. ಆ ಆಶ್ರಮದ ಏಕಾಂತ ಬಿಟ್ಟು ಈ ಜಗತ್ತಿಗೆ ಬಂದು ನಮ್ಮ ಸುಖ ದುಃಖ ಹಂಚ್ಕೋಬೇಕು. ಮದುವೆ ಮನೇಲಿ ಕುಣಿಯೋರ ಜೊತೆ ಸೇರಿ ತಾನೂ ಕುಣೀಬೇಕು. ಸತ್ತವರ ಮನೆಯೋರು ಶವಪೆಟ್ಟಿಗೆ ಮುಂದೆ ಅಳೋವಾಗ ಅವ್ರ ಜೊತೆ ತಾನೂ ಅಳಬೇಕು..’

ಮೊದಲನೆಯವನಿಗೆ ಇವ ಹೇಳಿದ್ದು ಸರಿ ಅಂತೇನೋ ಅನಿಸ್ತು. ಆದ್ರೂ ತನ್ನ ಮನಸಲ್ಲಿರೋದನ್ನ ತೋರಿಸದೇ ಹೇಳಿದ: ‘ನೀ ಹೇಳಿದ್ದೆಲ್ಲವನ್ನ ಒಪ್ತಿನಿ ನಾನು. ಆದ್ರೂ ಆ ಋಷಿ ಒಳ್ಳೆಯೋನು ಅಂತ್ಲೇ ಅನಿಸ್ತಿದೆ ನಂಗೆ. ಒಬ್ಬ ಒಳ್ಳೇ ಮನುಷ್ಯ ತನ್ನ ಇಲ್ಲದಿರುವಿಕೆಯಿಂದ ಒಳ್ಳೇದು ಮಾಡೋದು ಇಲ್ಲಿರುವ ಇಷ್ಟೊಂದು ಜನರ ತೋರುಗಾಣಿಕೆಯ ಒಳ್ಳೇತನಕ್ಕಿಂತ ಒಳ್ಳೇದು ಅನಿಸಲ್ವೆ ನಿನಗೆ?’

(ದಿ ವಾಂಡರರ್)


ನದಿ

ಕದಿಶಾ ಕಣಿವೆಯಲ್ಲಿ ಮಹಾನದಿಗಳು ಹರಿಯುತ್ತವೆ. ಅಲ್ಲಿ ಎರಡು ಹಳ್ಳಗಳು ಪರಸ್ಪರ ಭೇಟಿಯಾಗಿ ಮಾತಾಡತೊಡಗಿದವು. 

ಒಂದು ತೊರೆ ಕೇಳಿತು: ‘ಹೇಗೆ ಬಂದೆ? ನಿನ್ನ ಪಯಣ ಹೇಗಿತ್ತು?’

ಮತ್ತೊಂದು ಉತ್ತರಿಸಿತು: ‘ಓಹ್, ಏನು ಹೇಳುವುದು? ನನ್ನ ದಾರಿ ತುಂಬ ಅಡಚಣೆ, ಆತಂಕದಿಂದ ತುಂಬಿತ್ತು. ಏತದ ಗಾಲಿ ಮುರಿದು ಹೋಯಿತು. ಕಾಲುವೆ ತೋಡಿ ನನ್ನನ್ನು ತನ್ನ ತೋಟಕ್ಕೆ ಹರಿಸುತ್ತಿದ್ದ ಆ ದೊಡ್ಡ ರೈತ ತೀರಿಕೊಂಡ. ಸುಮ್ಮನೆ ಬಿಸಿಲಿಗೆ ಮೈ ಕಾಯಿಸುತ್ತ ಕೂತ ಸೋಮಾರಿಗಳು ಗುಡ್ಡೆ ಹಾಕಿದ ಕಸ, ತಿಪ್ಪೆಯನ್ನೆಲ್ಲ ದಾಟಿ ಬಂದೆ. ನನ್ನದಿರಲಿ, ನಿನ್ನ ದಾರಿ ಹೇಗಿತ್ತು?’

ಇನ್ನೊಂದು ತೊರೆ ಉತ್ತರಿಸಿತು: ‘ನನ್ನ ದಾರಿ ಬೇರೆ ರೀತಿಯದಾಗಿತ್ತು. ನಾಜೂಕು ಮರಗಳ, ಪರಿಮಳದ ಹೂವುಗಳ ಪರ್ವತದಿಂದ ಇಳಿದು ಬಂದೆ. ಜನ ಬೆಳ್ಳಿ ಲೋಟಗಳಲ್ಲಿ ನನ್ನ ತುಂಬಿ ತುಂಬಿ ಕುಡಿದರು. ಎಳೆಯ ಕಂದಮ್ಮಗಳು ತಮ್ಮ ನಸುಕೆಂಪು ಅಂಗಾಲುಗಳ ನನ್ನ ದಡದ ನೀರಲ್ಲಿ ಆಡಿಸುತ್ತ ಖುಷಿಪಟ್ಟರು. ಅಲ್ಲಿ ನಗು, ಖುಷಿಯ ಹಾಡು ತುಂಬಿತ್ತು. ನಿನ್ನ ದಾರಿ ಮಾತ್ರ ಹಾಗಿತ್ತು ಎಂದೆ ಅಲ್ಲವೆ? ಛೇ!’

ಅದೇ ಹೊತ್ತಿಗೆ ನದಿಯು ಗಟ್ಟಿದನಿಯಲ್ಲಿ ಕೂಗಿ ಹೇಳಿತು: ‘ಬರ್ರಿ ಬರ್ರಿ. ನಾವೆಲ್ಲ ಕಡಲ ಕಡೆ ಹೋಗುವ ಬನ್ನಿ. ಮಾತಾಡಿದ್ದು ಸಾಕು, ನಂಜೊತೆ ಬನ್ನಿ. ಎಲ್ಲ ಬಂದು ನನ್ನಲ್ಲಿ ಒಂದಾದರೆ ನಿಮ್ಮ ತಿರುಗಾಟದ ಸುಖದುಃಖ ಮರೆತುಬಿಡ್ತೀರಿ. ಬರ್ರಿ ಬರ್ರಿ, ನಾನು-ನೀವು ನಮ್ಮ ಎಲ್ಲ ದಾರಿಗಳ ಮರೆತು ನಮ್ಮಮ್ಮ ಕಡಲಮ್ಮನ ಎದೆಯ ಸೇರೋಣ.’

(ದಿ ವಾಂಡರರ್)

1 comment:

  1. ಚೆನ್ನಾಗಿವೆ ಅನುಪಮಾವರೇ. ಥ್ಯಾಂಕ್ಯೂ ಫಾರ್ ಗಿಬ್ರಾನ್ ಕಥೆ

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...