Friday, April 25, 2014

ಪರ್ಯಾಯ ಸಂಸ್ಕೃತಿಯ ತಹತಹ

ಶೂದ್ರ ಶ್ರೀನಿವಾಸ್


ನಿನ್ನೆ ಎಂಬುದರ ಬೆನ್ನ ಹಿಂದೆ ಎಷ್ಟೊಂದು ನಿನ್ನೆಗಳು. ಅವುಗಳಿಗೆ ಅಂಟಿಕೊಂಡ ಅವಘಡಗಳು ಎಂಥ ಹೀನಾಯ ಪಳೆ ಯುಳಿಕೆಗಳನ್ನು ಬಿಟ್ಟು ಹೋಗಿವೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ನಮ್ಮ ಕಣ್ಣ ಮುಂದೆ ಓಡಾಡುತ್ತಿರುವ ಕೆಲವು ಮೂಲಭೂತವಾದಿಗಳನ್ನು ನೋಡಿದಾಗ; ಇವರೆಲ್ಲ ನಿನ್ನೆಯ ಶನಿಸಂತಾನದ ಮುಂದು ವರಿದ ಭಾಗವೇನೋ ಎಂಬ ಭಾವನೆ ದಟ್ಟವಾಗತೊಡಗುತ್ತದೆ. ಆಗ ಇಂಥದ್ದಕ್ಕೆಲ್ಲ ‘ಪರ್ಯಾಯ’ವಾಗಲು ಪ್ರಯತ್ನಿಸಿದ ಮನಸ್ಸು ಎಂತೆಂಥ ತಹತಹವನ್ನು ಅನುಭವಿಸಿರುವುದು. ಯಾವ ಕಾಲಘಟ್ಟದಲ್ಲೂ ಎಲ್ಲ ಕ್ಷೇತ್ರಗಳ ಸೃಜನಶೀಲ ವ್ಯಕ್ತಿತ್ವಗಳು ಪ್ರತಿ ರೋಧದ ವಿಷಯದಲ್ಲಿ ಹಿಂದೆ ಮುಂದೆ ಯೋಚಿಸಲು ಹೋಗಲಿಲ್ಲ. 

ಸಂಘಟನಾತ್ಮಕವಾಗಿಯೋ ಅಥವಾ ಏಕಾಂಗಿಯಾಗಿಯೋ ಮುಖಾ ಮುಖಿಯಾಗುತ್ತ ಬಂದಿದ್ದಾರೆ. ಆದ್ದರಿಂದಲೇ ಈ ಸಮಾಜ ಪೂರ್ತಿ ಸವಕಲಾಗದೆ ಜೀವಂತಿಕೆಯನ್ನುಳಿಸಿ ಕೊಂಡಿರುವುದು. ಈ ದೃಷ್ಟಿ ಯಿಂದ ಜಗತ್ತಿನಾದ್ಯಂತ ಪುಟ್ಟಪುಟ್ಟ ಸಮು ದಾಯಗಳಲ್ಲಿಯೂ ನಡೆದಿರುವ ಮತ್ತು ನಡೆಯುತ್ತ ಬಂದಿರುವ ಹೋರಾಟಗಳು ಮಾರ್ಮಿಕವಾದಂಥವು. ಕಷ್ಟಸುಖಗಳನ್ನು ಗುಣಿಗುಣಿಸಿ ಭಾಗಿಯಾದವರಲ್ಲ. ಇದು ನಮ್ಮ ಮೂಲಭೂತ ಕರ್ತವ್ಯ ಎಂದು ತಿಳಿದವರು. ಆದ್ದರಿಂದಲೇ ಇತಿಹಾಸವನ್ನು ಗಂಭೀರವಾಗಿ ಓದಲು ಅಥವಾ ತಿಳಿಯಲು ಪ್ರಯತ್ನಿಸಿದಂತೆಲ್ಲ; ವಿಸ್ಮಯಕಾರಿಯಾದ ಸಂಗತಿಗಳು ಒಟ್ಟು ನಮ್ಮ ಚಿಂತನೆಯ ಕ್ರಮವನ್ನೇ ಲವಲವಿಕೆಯಿಂದಿಡಲು ಸಾಧ್ಯ.

ಈ ರೀತಿಯ ಹಿನ್ನೆಲೆಯನ್ನು ಹೊಂದಿರುವ ಸಾಮಾಜಿಕ ಸಂದರ್ಭಗಳನ್ನರಿಯುವ ಯಾವ ಕ್ರಿಯಾಶೀಲ ಮನಸ್ಸಿಗೂ ಆಯಾಸವೆಂಬುದು ಆಗಿಲ್ಲ. ಕುತೂಹಲ ದುಪ್ಪಟ್ಟುಗೊಳ್ಳುತ್ತಲೇ ಹೋಗುತ್ತಿರುವುದು. ಆದ್ದರಿಂದಲೇ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಕೃತಿಗಳು ಬಂದರೂ; ಅವುಗಳನ್ನು ಓದುವ ಪ್ರಕ್ರಿಯೆಗೆ ತೊಡಗಿರುತ್ತಾರೆ. ಈ ಕಾರಣಕ್ಕಾಗಿಯೇ ಇರಬಹುದು ಜ್ಞಾನದ, ಅರಿವಿನ ಆಯಾಮಗಳು ವಿಸ್ತಾರಗೊಳ್ಳುತ್ತಲೇ ಇರುವುದು. 

ಇದೇ ಮಾನದಂಡವನ್ನು ಅತ್ಯುತ್ತಮ ಉಪನ್ಯಾಸಗಳಿಗೂ ಅನ್ವಯಿಸಿ ಮಾತಾಡಬಹುದು. ಒಬ್ಬ ಸೂಕ್ಷ್ಮ ಸಂವೇ ದನೆಯ ಚಿಂತಕ ಎರಡು ಮೂರು ಗಂಟೆ ಒಂದೇ ಸಮನೆ ಮಾತಾಡಿದರೂ; ಸಭಿಕರು ಗಲಿಬಿಲಿಗೊಳ್ಳದೇ ಕೇಳಿಸಿಕೊಳ್ಳುವರು. ಕೊನೆಗೆ ಕೃತಜ್ಞತೆಯ ನೆಪದಲ್ಲಿ ನಾಲ್ಕು ಚಪ್ಪಾಳೆಯನ್ನು ಅರ್ಪಿಸಿ ನಮ್ರತೆಯಿಂದ ಮನನ ಮಾಡುತ್ತ ಹೋಗುವರು. ಅದೇ ಸಮಯಕ್ಕೆ ಅನಾರೋಗ್ಯ ಪೂರ್ಣ, ವಿಚಾರಹೀನ ಮಾತುಗಳನ್ನು ಕೇಳಿಸಿಕೊಂಡಾಗ ಮಾನಸಿಕವಾಗಿ ಎಷ್ಟು ಘಾಸಿಗೊಳ್ಳುವರು. ಇಂಥದ್ದು ಬಹಳಷ್ಟು ಬಾರಿ ಏಕಕಾಲದಲ್ಲಿ ಆಗಲು ಸಾಧ್ಯ. 

ಅದರಲ್ಲೂ ಒಬ್ಬ ಉಪನ್ಯಾಸಕಾರ ಒಂದೇ ಸಮನೇ ತನ್ನ ದಡ್ಡತನವನ್ನು ಪ್ರದರ್ಶಿಸಲು ಹುಂಬತನದಿಂದ; ಅಗತ್ಯವೋ ಅನಗತ್ಯವೋ ಎಂಬುದನ್ನು ಅರಿಯದೇ ಕೊಟೆಷನ್ನುಗಳ ಮೊರೆ ಹೋದಾಗ ಗಾಬರಿಯಾಗಿ ಬಿಟ್ಟಿರುತ್ತದೆ. ಸಭೆಯಲ್ಲಿ ಕೆಲವೊಮ್ಮೆ ಸೌಜನ್ಯಕ್ಕಾಗಿ ಕೂರಬೇಕಾಗುತ್ತದೆ. ಇಂಥದ್ದನ್ನೆಲ್ಲ ನಾವು ಎಷ್ಟು ಅನುಭವಿಸಿ ಬಂದಿರುತ್ತೇವೆ. ಒಂದು ದೊಡ್ಡ ಸಮಾಜದಲ್ಲಿ ಇದೆಲ್ಲ ಸ್ವಾಭಾವಿಕ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತ ಭಾಗಿಯಾಗ ಬೇಕಾಗಿರುತ್ತದೆ. ವೈಯಕ್ತಿಕ ನಿಂದನೆಗಳ ಉತ್ತುಂಗತೆಯಂತೂ ಒಮ್ಮಿಮ್ಮೆ ನಮ್ಮನ್ನು ಅಧೀರಗೊಳಿಸಲು ಸಾಧ್ಯವಿರುತ್ತದೆ.

ಕೆಲವರು ವ್ಯಕ್ತಿ ನಿಂದನೆಯೆಂಬುದನ್ನು ತೆವಲಾಗಿಯೂ ರೂಢಿಸಿಕೊಂಡಿರುತ್ತಾರೆ. ಅಂಥವರ ಬಳಿ ಬೌದ್ಧಿಕ ಮಾತುಗಳನ್ನು ‘ಬಯಸುವುದು ಕೂಡ ತಪ್ಪು’ ಎಂಬು ದನ್ನು ನಮಗೆ ನಾವೇ ಮಿತಿಗಳನ್ನು ಹಾಕಿ ಕೊಳ್ಳಬೇಕಾಗುತ್ತದೆ. ಒಂದಷ್ಟು ಹಿರಿಯರ ಬಗ್ಗೆ, ಚಿಂತಕರ ಬಗ್ಗೆ ತುಂಬ ಹಗುರವಾಗಿ ಮಾತಾಡಿದಾಗ ಮಾನಸಿಕವಾಗಿ ಸುಸ್ತಾಗಿ ಬಿಟ್ಟಿರುತ್ತೇವೆ. ಹೀಗೆ ಆಗಿಬಿಡುವ ಎಂತೆಂಥ ಹೇಳಿಕೆಗಳನ್ನು ಪ್ರತಿಹೇಳಿಕೆಗಳನ್ನು ಕೇಳುತ್ತಲೇ ಬಂದಿದ್ದೇವೆ.

ಅದರಲ್ಲೂ ಈ ಚುನಾವಣೆಯ ಸಂದರ್ಭದಲ್ಲಿ ಹಾಗೂ ಚುನಾವಣೆಯ ಹಿಂದಿನ ದಿನಗಳಿಂದಲೂ ನರೇಂದ್ರಮೋದಿಯವರಿಂದ ಏನೇನೋ ಮಾತಾಡಿಸುತ್ತಿದ್ದಾರೆ. ಅದನ್ನು ರಾಜಕೀಯ ವಾಗಿ ಹಾಗೂ ಸಾಮಾಜಿಕವಾಗಿ ಹೇಗೆ ಸ್ವೀಕರಿಸಬೇಕೋ ಗೊತ್ತಿಲ್ಲ. ಆದರೂ ಕಷ್ಟಪಟ್ಟು ಕೇಳಿಸಿಕೊಂಡಿದ್ದೇವೆ. ವಾಜಪೇಯಿಯಂಥವರು ಮತ್ತು ಅಡ್ವಾನಿ ಯಂಥವರೂ ಈ ವಿಧದಲ್ಲಿ ಪಂಪ್ ಹೊಡೆ ಸಿಕೊಂಡು ನಾಯಕರಾದವರಲ್ಲ. ನಮಗೆ ನಾವು ಕೇಳಿಕೊಳ್ಳಬೇಕಾಗಿದೆ: ಇಂಥದ್ದೆಲ್ಲ ಯಾವ ಹಂತದವರೆವಿಗೂ ಹೋಗಿ ನಿಲ್ಲಬಹುದೆಂದು. ಅದೇ ರೀತಿಯಲ್ಲಿ ಯಾವ ಸಂದರ್ಭವನ್ನು ಅನಗತ್ಯವಾಗಿ ‘ಗ್ಲೋರಿಪೈ’ಮಾಡಿ ಮಾತಾಡಿದಾಗ; ಅದರ ನಿಜವಾದ ಹೆಚ್ಚುಗಾರಿಕೆಯನ್ನು ದುರ್ಬಲಗೊಳಿಸಿದಂತೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಮೂರು ದಿವಸ ‘ವಚನ ಸಾಹಿತ್ಯ’ ಹಾಗೂ ಆ ಕಾಲಘಟ್ಟದ ‘ಪರ್ಯಾಯ ಸಂಸ್ಕೃತಿ’ ಕುರಿತ ಚಿಂತನಾ ಸಮಾವೇಶ ಏರ್ಪಡಿಸಿತ್ತು. ಕರ್ನಾಟಕದ ಉದ್ದಗಲದಿಂದ ಸಾಕಷ್ಟು ಮಂದಿ ಬಂದು ಭಾಗವಹಿಸಿದ್ದರು. ಅವರೆಲ್ಲ ಸಂಸ್ಕೃತಿಯ ಏಳುಬೀಳುಗಳ ಬಗ್ಗೆ ಯೋಚಿಸುತ್ತ ಬಂದವರು. ಆದರೆ ನಾನು ಎರಡು ದಿನ ಭಾಗಿಯಾಗಲು ಆಗಲಿಲ್ಲ. 

ಪಕ್ಕದ ತಮಿಳು ನಾಡಿನ ಮೂರು ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆಯ ಕಾವು ಹೇಗಿದೆಯೆಂದು ನೋಡಲು ಹೋಗಿದ್ದೆ. ಅಣ್ಣಾ ಡಿಎಂಕೆ ಮತ್ತು ಡಿಎಂಕೆಯ ಚುನಾವಣೆಯ ಭರಾಟೆಯ ಆವೇಶವನ್ನು ಅರಿಯುವ ಕುತೂಹಲವಿತ್ತು. ಒಂದು ಕಾಲದಲ್ಲಿ ಈ ಪ್ರದೇಶದಲ್ಲೆಲ್ಲ ತೆಲುಗು ಮತ್ತು ಕನ್ನಡದ ಘೋಷಣೆ ಗಳಿದ್ದವು. ಅಂದರೆ ಈ ಎರಡೂ ಭಾಷೆಗಳು ಪ್ರಾಬಲ್ಯವನ್ನು ಹೊಂದಿದ್ದವು. ಈಗ ಇವುಗಳನ್ನು ತಮಿಳು ತುಳಿದು ಬಿಟ್ಟಿದೆ. ಭಾಷಾ ದ್ವೇಷದಿಂದ ಇದನ್ನು ಹೇಳುತ್ತಿಲ್ಲ.

ಗಡಿ ಪ್ರದೇಶದಲ್ಲಿ ಎರಡು ಭಾಷೆಗಳು ಸಾಯುವುದರ ಜೊತೆಗೆ; ಅದರ ಜೊತೆ ಅಂಟಿಕೊಂಡು ಬಂದ ಸಂಸ್ಕೃತಿಯು ಸಾಯುತ್ತ ಬರುವುದಲ್ಲ ಎಂಬ ವಿಷಾದ ತುಂಬಿಕೊಂಡಿತ್ತು. ಈ ವಿಷಾದದಿಂದಲೇ ಕೆಲವು ಮನೆಗಳಿಗೆ ಹೋದಾಗ; ಅಣ್ಣಾ ಡಿಎಂಕೆಯವರು ಕೊಡಿಸಿದ ಬಿಳಿಯ ಟೇಬಲ್ ಫ್ಯಾನುಗಳಲ್ಲಿ ಜಯಲಲಿತ ಅವರ ಭಾವಚಿತ್ರ. ಈ ಬೇಸಿಗೆಯ ಬಿಸಿಯಲ್ಲಿ ಫ್ಯಾನು ಜೋರಾಗಿ ತಿರುಗುತ್ತಿದ್ದರೆ; ಜಯಲಲಿತ ಅವರ ಭಾವಚಿತ್ರವೂ ತಿರುಗುತ್ತಿತ್ತು.

ಇರಲಿ, ಪ್ರಜಾಪ್ರಭುತ್ವದಲ್ಲಿ ಏನೇನೋ ತಿರುಗುತ್ತಿರುತ್ತದೆ. ನಾಲಿಗೆಯನ್ನು ಎಷ್ಟು ಉದ್ದ ಬೇಕಾದರೂ ಬಾಚಿ ಮಾತಾಡಬಹುದಾದ ಮನಸ್ಥಿತಿಯನ್ನು ಬೆಳೆಸಿಕೊಂಡಿರು ತ್ತಾರೆ. ಅವರು ಬಳಸುವ ಶಬ್ದಗಳು ಪ್ರತಿಭಟಿಸುವುದಿಲ್ಲವಲ್ಲ; ನಮ್ಮನ್ನು ಯಾಕೆ ಹೀಗೆ ‘ಹಿಗ್ಗಾಮುಗ್ಗಾ ಜಗ್ಗಾಡುತ್ತೀರಿ’ ಎಂದು. ಇದೇ ರೀತಿಯಲ್ಲಿ ಬಹುಪಾಲು ಸುಸಂಸ್ಕೃತರೆನ್ನಿಸಿಕೊಂಡವರು ಬಾಯಿತುಂಬ ಕೊಟೇಷನ್‌ಗಳನ್ನಿಟ್ಟುಕೊಂಡೇ ಮಾತಾಡುತ್ತಿರುತ್ತಾರೆ. ಅವು ಅಸ್ತ್ರಗಳಂತೆ ಉದು ರುತ್ತಿರುತ್ತವೆ. ಆ ಅಮೂಲ್ಯ ಕೊಟೇಷನ್‌ಗಳು ಅರ್ಥಪೂರ್ಣವಾಗಿದ್ದರೂ; ಅರ್ಥಹೀನವಾಗಿ ಉದುರುತ್ತಿರುತ್ತವೆ.

ಈ ಅಪೂರ್ವ ಸಮಾವೇಶದಲ್ಲಿ ಮೂರನೆಯ ದಿನದ ಗೋಷ್ಠಿಯಲ್ಲಿ ಗೆಳೆಯ ರಮಝಾನ್ ದರ್ಗಾ ಅವರ ಮಾತನ್ನು ಕೇಳಿಸಿಕೊಳ್ಳುವ ಕುತೂಹಲವಿತ್ತು. ಹಾಗೆಯೇ ನಾನು ಇಷ್ಟಪಡುವ ಚಿಂತಕ ಮತ್ತು ಇತಿಹಾಸತಜ್ಞ ಪ್ರೊ. ಷ. ಶೆಟ್ಟರ್ ಅವರು ಸಮಾರೋಪದಲ್ಲಿ ಏನು ಮಾತಾಡಬಹುದು ಎಂಬ ತವಕ ತೀವ್ರವಾಗಿತ್ತು. ಯಾಕೆಂದರೆ ವೀರಶೈವ ಸಮಾಜದಿಂದ ಬಂದು; ಒಬ್ಬ ದೊಡ್ಡ ಇತಿಹಾಸಕಾರರಾಗಿ; ಯಾವ ರೀತಿಯ ಅಂತರವನ್ನು ಇಟ್ಟುಕೊಂಡು ಆ ಸಾಂಸ್ಕೃತಿಕ ಸಂದರ್ಭವನ್ನು ಗ್ರಹಿಸಿ ಅವಲೋಕನಕ್ಕೊಳಪಡಿಸಬಲ್ಲರು ಎಂದು.

ಇನ್ನು ರಮಝಾನ್ ದರ್ಗಾ ಗಂಭೀರ ಸಾಹಿತ್ಯದ ವಿದ್ಯಾರ್ಥಿಯಾಗಿ ಎಡಪಂಥೀಯ ಚಿಂತನೆಗಳಿಂದ ಬೆಳೆದಿರುವಂಥವನು. ಹಿರಿಯ ಪತ್ರಕರ್ತನಾಗಿ ಪ್ರಾಮಾಣಿಕವಾಗಿ ದುಡಿದು ನಿವೃತ್ತಿಯಾದವನು. ಈಗ ಪೂರ್ಣ ಪ್ರಮಾಣದಲ್ಲಿ ಕೆಲವು ವರ್ಷಗಳಿಂದ ವಚನ ಸಾಹಿತ್ಯ ಮತ್ತು ಅದರ ಚಳವಳಿಯ ಅಧ್ಯಯನದ ಗಂಭೀರ ವಿದ್ಯಾರ್ಥಿ. ಇದರ ಮೂಲಕ ವೀರಶೈವ ಮಠಗಳಿಗೆ ಹತ್ತಿರದವನೂ ಆಗಿದ್ದಾನೆ. ಇದರ ಬಗ್ಗೆ ಬಹಳಷ್ಟು ಗೆಳೆಯರು ‘ದರ್ಗಾ ಒಂದು ರೀತಿಯ ಅಂತರವನ್ನು ಮಠಗಳ ಜೊತೆ ಕಾಪಾಡಿಕೊಂಡು; ವಚನಾಧ್ಯಯನದಲ್ಲಿ ತೊಡಗಬೇಕಾಗಿತ್ತು’ಎಂದು ಹೇಳಿದವರೂ ಇದ್ದಾರೆ.

ಅವರ್ಯಾರು ವಿಕೃತಿಯಿಂದ ಹೇಳಿದ ವರಲ್ಲ. ಈ ಮಧ್ಯೆ ದರ್ಗಾ ಬರೆದಿರುವ ‘ವಚನ ಸಾಹಿತ್ಯ’ ಕುರಿತ ಕೃತಿಗಳನ್ನು ಓದಿದಾಗ; ಕೆಲವು ಪ್ರಶ್ನೆಗಳು ಉದ್ಭವಿಸಿದ್ದವು. ಆ ಪ್ರಶ್ನೆಗಳು ಮತ್ತಷ್ಟು ದಟ್ಟವಾಗತೊಡಗಿದ್ದವು: ಗೋಷ್ಠಿಯಲ್ಲಿ ದರ್ಗಾನ ಮಾತುಗಳನ್ನು ಕೇಳಿದ್ದರಿಂದ ಅತ್ಯಂತ ಗಂಭೀರವಾಗಿ ಓದಿಕೊಂಡಿದ್ದಾನೆಂಬುದರಲ್ಲಿ ಎರಡನೆಯ ಮಾತಿಲ್ಲ. ಆದರೆ ಓದಿ ಪಂಡಿತ ನಾಗಿಬಿಟ್ಟಿದ್ದಾನೆ; ಚಿಂತಕನಾಗಿಲ್ಲ. ನಾವು ಚಿಂತಕರಾಗದಿದ್ದಾಗ ಭಟ್ಟಂಗಿಗಳಾಗುವ ಸಾಧ್ಯತೆ ಇರುತ್ತದೆ. ನಮಗೆ ಗೊತ್ತಿಲ್ಲದೆಯೇ ‘ಪ್ರವಾದಿತನ’ದ ಧೋರಣೆ ಆವರಿಸಿಕೊಂಡು ಬಿಟ್ಟಿರುತ್ತದೆ.

ಚಾರಿತ್ರಿಕವಾಗಿ ಯಾವುದೇ ಚಳವಳಿಯನ್ನಾಗಲೀ, ಅದರಜೊತೆ ಬಂದ ಸಾಹಿತ್ಯವನ್ನಾಗಲಿ ಅಧ್ಯಯನ ಮಾಡುವಾಗ ಗಂಭೀರ ತಾಳ್ಮೆ ಇರಬೇಕಾಗುತ್ತದೆ. ಅದು ಯಾಕೆ ಹುಟ್ಟಿತು. ಯಾವ ಪ್ರಭಾವವನ್ನು ಬೀರಿತು ಮತ್ತು ಅದು ಅವನತಿಯನ್ನು ಕಾಣಲು ಕಾರಣವೇನು? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಾಗಭಾವುಕರಾಗುವ ಕಾರಣವಿಲ್ಲ. ಭಾವುಕರಾದ ತಕ್ಷಣ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಂಥ ಸಮತೋಲನವನ್ನು ದರ್ಗಾ ನಿಜವಾಗಿಯೂ ಕಳೆದುಕೊಂಡಿದ್ದ. ಒಮ್ಮೆಮ್ಮೆ ಎಷ್ಟು ಚೆನ್ನಾಗಿ ಓದಿಕೊಂಡಿದ್ದಾನೆಂದು ಹೊಟ್ಟೆಕಿಚ್ಚು ಬಂದರೂ; ಅದನ್ನು ಮರೆಮಾಚುವ ರೀತಿಯಲ್ಲಿ ‘ಭಟ್ಟಂಗಿ’ಯಾಗಿಬಿಟ್ಟಿದ್ದಾನೆ ಅನ್ನಿಸಿತು. 

ಅವನ ಮಾತಿನ ವೈಖರಿ ಹೇಗಿತ್ತು ಎಂದರೆ ಹನ್ನೆರಡನೆಯ ಶತಮಾನದ ಚಳವಳಿ ಜಗತ್ತಿನ ಯಾವುದೇ ಚಳವಳಿಗೆ ಪ್ರೇರಕವಾಗಿದೆಯೆನ್ನುವ ಧೋರಣೆಯನ್ನು ತಾಳಿದ್ದ. ಯು.ಎನ್.ಒ ಸಂಸ್ಥೆಯ ಸಿದ್ಧಾಂತಗಳ ಮೇಲು ಆಗಿರುವ ಪ್ರಭಾವವನ್ನು ಪ್ರಸ್ತಾಪಿಸುತ್ತ ಹೋದ. ಹೌದು ಜಗತ್ತಿನ ಎಲ್ಲ ಚಳವಳಿಗಳಲ್ಲೂ ಹಾಗೂ ಕ್ರಾಂತಿಗಳಲ್ಲೂ ಕೆಲವು ಸಮಾನವಾದ ಅಂಶಗಳು ಇರುತ್ತವೆ. ಬಡತನ, ಮೇಲುಕೀಳು, ಭ್ರಷ್ಟಾಚಾರ ಹಿಂಸೆಯ ಅತಿರೇಕತೆ ಮುಂತಾದವುಗಳೇ ಕಾರಣವಾಗಿರುತ್ತವೆ. ಆದ್ದರಿಂದ ಎಂಟುನೂರು ವರ್ಷಗಳ ಹಿಂದೆ ಆಯಿತು ಎಂಬ ಕಾರಣಕ್ಕಾಗಿ ಕುರುಡು ಮೋಹದಿಂದ ವಾಸ್ತವವನ್ನು ಬದಿಗೊತ್ತುವ ಪ್ರಯತ್ನವನ್ನು ಮಾಡಬಾರದು. 

ರಮಝಾನ್ ದರ್ಗಾ ಹೇಳಿದ ಎಂದು ಕೆಲವರು ಸಭೆ ಸಮಾರಂಭಗಳಲ್ಲಿ ಮುಂದುವರಿಸುವಂತೆ ಆಗಬಾರದು. ಯಾವುದನ್ನು ‘ಡೈಲೆಕ್ಟಿಕಲ್ ಮೆಟೀರಿಯಲಿಸಂ’ ಪ್ರಸ್ತಾಪಿಸಿ. ಅದನ್ನು ನಾನು ಓದಿಕೊಂಡಿರುವನು ಎಂದು ಹೇಳುವಾಗ ನಮ್ಮ ಮಾತಿನಲ್ಲಿ ಸಮತೋಲನವಿರಬೇಕಾಗುತ್ತದೆ. ಬಹಳ ತಮಾಷೆಯ ವಿಷಯವೆಂದರೆ ಡಾ.ಆಶಾದೇವಿಯವರು ಲಿಂಗ ತಾರತಮ್ಯ ಕುರಿತು ಗಂಭೀರವಾಗಿ ಮಾತಾಡಿದ ಮೇಲೆ ಕೆಲವರು ಪ್ರಶ್ನೆಗಳು ಕೇಳಿದ್ದಕ್ಕೆ.ನಾನು ಹೇಳುತ್ತೇನೆ ಘಂಟಾಘೋಷವಾಗಿ, ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀವಾದಿ ಚಳವಳಿಯಿಂದ ಇವತ್ತಿನ ಸ್ತ್ರೀವಾದಿಗಳು ಸಾಕಷ್ಟು ಕಲಿಯಬೇಕಾಗಿದೆ ಎಂದು ಹೇಳುವಾಗ ಆಶಾ ಅವರು ಮುಸಿಮುಸಿ ನಕ್ಕು ಸುಮ್ಮನಾಗಿದ್ದರು.

ಹಾಗೆಯೇ ಕೆಲವು ವಿದ್ವಾಂಸರು ‘ಕಲ್ಯಾಣ ನಾಡಿನ ಕ್ರಾಂತಿ’ಎಂದು ಕರೆದುದರ ಬಗ್ಗೆ ಆಕ್ಷೇಪಣೆಯನ್ನು ಎತ್ತಿದ; ಹಾಗೆ ಕರೆಯಬಾರದಾಗಿತ್ತೆಂದು. ಯಾಕೆಂದರೆ ಕ್ರಾಂತಿಯಾದ ಮೇಲೆ ಎಲ್ಲವೂ ಸರಿಹೋಗಿ ಬಿಡುತ್ತದೆಂದು, ಯಾವ ಕ್ರಾಂತಿಯೂ ಶಾಶ್ವತ ಪರಿವರ್ತನೆಯನ್ನು ತಂದಿರುವುದಿಲ್ಲ ಎಂಬುದು ದರ್ಗನಂಥ ಗಂಭೀರ ಮಾರ್ಕ್ಸ್‌ವಾದಿ ಚಿಂತಕನಿಗೆ ಗೊತ್ತಿಲ್ಲದ ವಿಷಯವಲ್ಲ. ಒಂದು ವೇಳೆ ‘ಕಲ್ಯಾಣ ನಾಡಿನ ಕ್ರಾಂತಿ’ ಎಂದು ಕರೆದದ್ದರಲ್ಲಿ ತಪ್ಪೇನು? ಅದನ್ನು ಕ್ರಾಂತಿಯ ಆಶಯದಿಂದ ಹೇಳಿರಬಹುದೆಂದು ಸ್ವೀಕರಿಸಬೇಕು. ಇದರ ಬಗ್ಗೆ ಚಂಪಾ ಅವರು ಎದ್ದು ನಿಂತು ಸ್ಪಷ್ಟೀಕರಣ ನೀಡಿದರು.

ದರ್ಗಾ ಚರ್ಚೆಯ ಸಂದರ್ಭದಲ್ಲಿ ಎಷ್ಟು ಭಾವುಕನಾದನೆಂದರೆ: ವೀರಶೈವರು ಇಂದು ತಮ್ಮ ಮಕ್ಕಳಿಗೆ ವಚನ ಚಳವಳಿಗೆ ಕಾರಣರಾದ ಮಹನೀಯರ ಮತ್ತು ಮಹಿಳೆಯರ ಹೆಸರು ಇಡುತ್ತಿಲ್ಲ ಎಂದು ದುಃಖದಿಂದ ಮಾತೇ ಹೊರಡಲಿಲ್ಲ ಸ್ವಲ್ಪ ಸಮಯ.ಮತ್ತೊಂದು ಮುಖ್ಯ ವಿಷಯ: ದರ್ಗಾ ಮಾತಾಡುವಾಗ ‘ನಾನು’ ಎಂಬ ಶಬ್ದವನ್ನು ತುಂಬ ಬಳಸುವನು. ಹಾಗೆಯೇ ‘ನೀವು’ ಎಂದು. ಇವರೆಡೂ ಆಜ್ಞಾರೂಪಕ ಶಬ್ದಗಳು. ಭಾಷಣದಲ್ಲಿ ಮತ್ತು ಸಂವಾದದಲ್ಲಿ ಇದನ್ನು ಬಳಸಬಾರದು. ‘ನಾವು ’ಎಂಬುದು ಆರೋಗ್ಯಪೂರ್ಣವಾದದ್ದು.

ದರ್ಗಾನಂತಹ ಪ್ರಜ್ಞಾವಂತ ಲೇಖಕ ಮತ್ತು ಚಿಂತಕ ಈ ನನ್ನ ಮೇಲಿನ ವಾಕ್ಯಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಯಾಕೆಂದರೆ: ಬಸವಣ್ಣ ಮತ್ತು ವಚನ ಚಳವಳಿ ನಮ್ಮ ಒಳನೋಟಗಳನ್ನು ವಿಸ್ತರಿಸುವ ಹಂತದಲ್ಲಿ ತೊಡಕಾಗಬಾರದು.ಹೀಗೆ ಆಗುವಾಗ ಬಸವಣ್ಣನವರಂಥ ಮಹಾನ್ ಸಂತನನ್ನು ಜಗತ್ತಿನ ಯಾರ್ಯಾರಿಗೋ ಹೋಲಿಸಿ ಮಾರ್ಕ್ಸ್ ಕೊಡಲು ಪ್ರಯತ್ನಿಸಬಾರದು. 

ಹಾಗೆಯೇ ‘ನಾವೂ’ ಯಾವಾಗಲೂ ‘ನಾವಾಗಿಯೇ’ ಉಳಿಯಬೇಕು. ಎಲ್ಲೆಲ್ಲೂ ಕರಗಿ ಹೋಗಬಾರದು. ಇಲ್ಲದಿದ್ದರೆ ನಮ್ಮ ಅಸ್ತಿತ್ವಕ್ಕೆ ಬೆಲೆ ಇರುವುದಿಲ್ಲ. ಅದರಲ್ಲೂ ಈ ಕಾಲಘಟ್ಟದಲ್ಲಿ ‘ಆತಂಕ’ಮತ್ತು ‘ತಲ್ಲಣ’ಗಳು ತೀವ್ರವಾಗುವ ರೂಪದಲ್ಲಿ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ; ಬಸವಣ್ಣನವರ ಹೋರಾಟದ ಸೂಕ್ಷ್ಮತೆ ಮತ್ತು ಕೊನೆಗೆ ಅವರ ಒಂಟಿತನ ನಮ್ಮನ್ನು ಸದಾ ಕಾಡುವಂತಾಗಬೇಕು. ನಿಜವಾದ ಅರ್ಥದಲ್ಲಿ ‘ಸಾಂಸ್ಕೃತಿಕ ಪರ್ಯಾಯ’ವೆಂದರೆ ಅದೇ ಆಗಿರುತ್ತದೆ.

1 comment:

  1. ಶ್ರೀನಿವಾಸ ಸರ್ ನೀವು ಬರೆದ ಲೇಖನ ಸಮರ್ಪಕವಾಗಿದೆ. ಬಸವಣ್ಣನನ್ನು ಇಂದು ಎಲ್ಲರೂ ಯಾವುದಾವುದೋ ಕಾರಣಗಳಿಗೆ ಬಳಸುವಂತಾಗಿದೆ. ಎಲ್ಲ ಪ್ರಗತಿಪರ ಚಳುವಳಿಗೂ ಬಸವಣ್ಣನವರ ವಚನ ಚಳುವಳಿಗಳೇ ಆಧಾರ ಎಂದು ಹೇಳುವಂತಾಗಿದೆ. ಯಾವುದೇ ಭಾವಾವೇಶಕ್ಕೆ ಒಳಗಾಗದೇ ಎಲ್ಲವನ್ನು ವಿಮರ್ಶಿಸಬೇಕಾದ ತುರ್ತು ಇವತ್ತಿನದಾಗಿದೆ.

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...