Tuesday, May 20, 2014

ಚುನಾವಣೆಗಳು: ಉಳ್ಳವರ ಕೊಬ್ಬಿಗೆ ‘ಓಟ್’ ಎಂಬ ತುಪ್ಪವಿಕಾಸ. ಆರ್. ಮೌರ್ಯ


ಚುನಾವಣೆಗಳು: ಉಳ್ಳವರ ಕೊಬ್ಬಿಗೆ ‘ಓಟ್’ ಎಂಬ ತುಪ್ಪ


ಪ್ರಜಾಪ್ರಭುತ್ವದ ಬಗ್ಗೆ ಹಲವರು ಬಹುದೊಡ್ಡ ಮಾತುಗಳನ್ನು ಆಡಿದ್ದಾರೆ. ಅದರಲ್ಲಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಮಾತಂತು ಪ್ರಜಾಪ್ರಭುತ್ವಕ್ಕೆ ಭದ್ರ ಕೋಟೆಯನ್ನು ಕಟ್ಟಿ ಬೆಳೆಸಿದೆ. ಆದರೆ ಅಂಬೇಡ್ಕರ್‌ರವರು ಸಂವಿಧಾನ ಸಭೆಯಲ್ಲಿ ನೀಡಿದ ಎಚ್ಚರಿಕೆ ಇಂದಿಗೂ ಪ್ರಸ್ತುತವಾಗಿದೆ. ‘‘ರಾಜಕೀಯ ಸಮಾನತೆ ನೀಡಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಬೆಲೆ ಕೊಡದಿದ್ದರೆ ಮುಂದೆ ಅಸಮಾನತೆಯಿಂದ ಬಳಲುವ ಜನರು ಈ ವ್ಯವಸ್ಥೆಯನ್ನು ದ್ವಂಸಗೊಳಿಸಿಬಿಡುತ್ತಾರೆ’’ ಎಂದು ನೀಡಿದ ಎಚ್ಚರಿಕೆಯನ್ನು ನಮ್ಮ ದೇಶದ ಪ್ರಜಾಫ್ರಭುತ್ವ ರಕ್ಷಕರು ಕೇವಲವಾಗಿ ಕಾಣುತ್ತಾ ಬಂದಿದ್ದಾರೆ. ಆದರೆ ಅಸಮಾನತೆಯ ಪ್ರಜಾಪ್ರಭುತ್ವ ಹೀಗೆಯೇ ಮುಂದುವರಿದರೆ ಅಂಬೇಡ್ಕರರ ಮಾತು ನಿಜವಾಗುವುದು ಖಚಿತ.

ADR NEW ವಿವಿಧ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ತಮ್ಮ ಪ್ರಭುತ್ವವನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಬಂದಿವೆ. ತಮ್ಮಲ್ಲಿ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯನ್ನು ಕಾಪಾಡಿಕೊಳ್ಳುತ್ತ ಭಾರತದ ಬಹುಸಂಖ್ಯಾತರಾದ ದೀನದಲಿತರ ಅನ್ನ ಕಿತ್ತುಕೊಂಡು ಉಪ್ಪಿನಕಾಯಿ ನೀಡಿ ಸಮಾಧಾನಿಸುತ್ತಾ ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ದೇಶದ ಬಡವರು ಐದು ವರ್ಷಕ್ಕೊಮ್ಮೆಯಾದರೂ ತಿಂದು ತೇಗಿಬಿಡೋಣವೆಂದು ಆಮಿಷಗಳಿಗೆ ಬಲಿಯಾಗುತ್ತಾರೆ. ಅದೇನೆ ಇರಲಿ ಚುನಾವಣಾವ್ಯವಸ್ಥೆ ದಿನ ಕಳೆದಂತೆ ಭ್ರಷ್ಟವಾಗುತ್ತಾ ಮತದಾರರಿಗೆ ಕಪ್ಪು ಕನ್ನಡಕ ತೊಡಿಸುತ್ತಿದೆ. ಅದಕ್ಕೆ ಇನ್ನೊಂದು ಸೇರ್ಪಡೆ ಈ ಬಾರಿಯ ಲೋಕಸಭೆ ಚುನಾವಣೆ. ಪ್ರಜಾಪ್ರಭುತ್ವವನ್ನು ನಾಚಿಸುವಂತೆ, ಸಂವಿಧಾನಕ್ಕೆ ಅಗೌರವ ತರುವಂತೆ ಪ್ರಧಾನಮಂತ್ರಿಗಳನ್ನು ಘೋಷಿಸಿಕೊಂಡು ‘ಭಾರತ ರಕಾರ’ ಹೆಸರಿನ ಬದಲು ‘ಮೋದಿ ಸರಕಾರ’ ‘ರಾಹುಲ್ ಗಾಂಧಿ ಸರಕಾರ’ ಎಂದು ಘೋಷಣೆ ಕೂಗಿಕೊಂಡು ಅದನ್ನೆ ಜನರ ತಲೆಯಲ್ಲಿ ತುಂಬಿ ಸಮೂಹ ಸನ್ನಿ ಸೃಷ್ಟಿಸಿದ ಚುನಾವಣೆಗೆ ನಾವೆಲ್ಲ ಸಾಕ್ಷಿಗಳಾಗಿರುವುದಕ್ಕೆ ವಿಷಾದವಾಗುತ್ತಿದೆ. ಮತ್ತು ಸಂಸ್ಥೆಗಳ ಚುನಾವಣಾ ವಿಶ್ಲೇಷಣೆಯನ್ನು ಗಮನಿಸಿ ಈ ಸಲ ಚುನಾವಣೆಗೆ ನಿಂತ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಆಸ್ತಿ ಮತ್ತು ನಡತೆ ವಿವರ ಗಮನಿಸಿದರೆ ನಮ್ಮ ಪ್ರಜಾಪ್ರಭುತ್ವ ಯಾರ ಪರವಾಗಿದೆ ಮತ್ತು ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಕಣ್ಣಿಗೆ ರಾಚುತ್ತದೆ.

   ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8163 ಅಭ್ಯರ್ಥಿಗಳಲ್ಲಿ 2,208 ಅಭ್ಯರ್ಥಿಗಳು ಕೋಟ್ಯಧಿಪತಿಗಳು. ಅಂದರೆ ಶೇ. 27 ರಷ್ಟು. ಅದರಲ್ಲು ರಾಜಕೀಯ ಗದ್ದುಗೆಗೆ ಗುದ್ದಾಟ ನಡೆಸುತ್ತಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪ್ರಮಾಣ ಇನ್ನೂ ಹೆಚ್ಚು. ಕಾಂಗ್ರೆಸ್ಸಿನ 365 (79%), ಬಿಜೆಪಿಯ 309 (73%), ಎಎಪಿಯ 192 (45%), ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದರು. ಅಂದರೆ ಐಷಾರಾಮಿ ಕಾರು, ಬಂಗಲೆ, ಉದ್ಯಮ, ಎಕರೆಗಟ್ಟಲೆ ಭೂಮಿ, ವಿವಿಧ ಕಂಪೆನಿಗಳ ಷೇರುಗಳು, ಸಂಸ್ಥೆಗಳು ಇತ್ಯಾದಿಗಳನ್ನಿಟ್ಟುಕೊಂಡು ಮೆರೆಯುತ್ತಿರುವವರು. ಇವರು ಸೇವೆ ಸಲ್ಲಿಸಬೇಕಾಗಿದ್ದುದು ಯಾರಿಗೆ? ಶೇ. 80 ರಷ್ಟು ಹಳ್ಳಿಗಳನ್ನೆ ಹೊಂದಿರುವ ಮೂರು ಹೊತ್ತು ಅನ್ನವಿಲ್ಲದ, ಸರಿಯಾದ ಸೂರಿಲ್ಲದ, ಶೌಚಾಲಯವಿಲ್ಲದ, ಕುಡಿಯಲು ನೀರಿಲ್ಲದ, ಒಳಚರಂಡಿ ವ್ಯವಸ್ಥೆ ಇಲ್ಲದ, ಕೇವಲ ಕೃಷಿ ಬಲ್ಲ, ಜಾತಿ ಕೂಪದಲ್ಲಿ ಬಿದ್ದಿರುವ ಜನರನ್ನು. ನಗರದ ಕೂಲಿ ಕಾರ್ಮಿಕರನ್ನು. ಇದು ಇಂತಹವರಿಂದ ಸಾಧ್ಯವೆ? ನಮ್ಮ ಕರ್ನಾಟಕದ ವಿಚಾರಕ್ಕೆ ಬರೋಣ. ಇಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ಸಿನ 27, ಬಿಜೆಪಿಯ 26, ಎಎಪಿಯ 12, ಜೆಡಿಎಸ್‌ನ 21 ಅಭ್ಯರ್ಥಿಗಳು ಕೋಟ್ಯಧಿಪತಿಗಳು. ಆಯಾ ಪಕ್ಷಗಳ ಅಭ್ಯರ್ಥಿಗಳ ಸರಾಸರಿ ಆಸ್ತಿಯಲ್ಲಿ ಬಿಜೆಪಿಯದ್ದು 14.7 ಕೋಟಿ, ಜೆಡಿಎಸ್‌ನದ್ದು 30.4 ಕೋಟಿ, ಎಎಪಿಯದ್ದು 8.5 ಕೋಟಿ. ಇನ್ನು ಕಾಂಗ್ರೆಸ್ಸಿನ ಆಸ್ತಿ ಎಲ್ಲದನ್ನೂ ಮೀರಿಸಿತ್ತು. ನಂದನ್ ನಿಲೇಕಣಿ ಅದರ ಎಲ್ಲೆಗಳನ್ನೆ ಮೀರಿಸಿಬಿಟ್ಟಿದ್ದರು. ಹೀಗಿರುವಾಗ ಇಂತಹ ಅಭ್ಯರ್ಥಿಗಳು ಸಾಮಾನ್ಯ ಜನರ ಬಗ್ಗೆ ಕಾಳಜಿ ಇಟ್ಟುಕೊಳ್ಳಬಹುದೆ? ಇಲ್ಲವೆ ಇಲ್ಲ. ರಾಜಕಾರಣ ದಿನದಿಂದ ದಿನಕ್ಕೆ ಉದ್ಯಮವಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಬಂಡವಾಳ ಹಾಕಿ ಐದು ವರ್ಷಗಳವರೆಗೆ ಬಿಸಿನೆಸ್ ನಡೆಸಲು ಲೈಸೆನ್ಸ್ ತೆಗೆದುಕೊಳ್ಳುತ್ತಾರೆ ಅಷ್ಟೆ. ಇದಕ್ಕೆ ಸಾಕ್ಷಿ ಸಂಸತ್ ಸದಸ್ಯರ ಆಸ್ತಿಯಲ್ಲಾಗಿರುವ ಗಣನೀಯ ಏರಿಕೆ. ಇದು ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯವೇನೊ?. ಈ ಕೋಟ್ಯಧಿಪತಿಗಳಲ್ಲಿ ಬಹುತೇಕರು ಗೆದ್ದಿದ್ದಾರೆ. ಅಂದರೆ ಹೀಗೆ ಗೆದ್ದ ಕ್ಷಣದಿಂದಲೆೆ ಭಾರತದ ಸೋಲು ಮತ್ತೆ ಖಚಿತವಾಗಿದೆ.

ಇದರ ಜೊತೆಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಅಪರಾಧಿಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರಲ್ಲಿ ಈ ಹಿಂದೆ ಗೆದ್ದಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. 8,163 ಅಭ್ಯರ್ಥಿಗಳಲ್ಲಿ 1398 ಅಂದರೆ ಶೇ.15 ರಷ್ಟು ಅಪರಾಧಿಗಳು ರಾರಾಜಿಸಿದ್ದರು. ಇವರಲ್ಲಿ ಶೇ. 11ರಷ್ಟು ಅಭ್ಯರ್ಥಿಗಳು ರೇಪ್, ಕೊಲೆ, ದರೋಡೆಯಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದವರು. ಇವರೆಲ್ಲರೂ ಹಣವಂತರು ಎಂಬುವುದರಲ್ಲಿ ಎರಡು ಮಾತಿಲ್ಲ. ಕ್ರಿಮಿನಲ್‌ಗಳಾಗಿದ್ದವರು ಜೈಲಿನ ಹೊರಗಡೆಯಿರುವುದೆ ಅದಕ್ಕೆ ಸಾಕ್ಷಿ. ಇವರನ್ನು ನೋಡಿ ಜೈಲಿನಲ್ಲಿ ಕೊಳೆಯುತ್ತಿರುವ ಚಪ್ಪಲಿ, ಪರ್ಸ್, ಬ್ರೆಡ್ ಕಳ್ಳರು ಹೊಟ್ಟೆ ಉರಿಕೊಂಡರೆ ತಪ್ಪಲ್ಲ. ಕ್ರಿಮಿನಲ್‌ಗಳನ್ನು ಪಕ್ಷವಾರು ನೋಡಿದಾಗ ಎನ್‌ಡಿಎ ಆಗಲಿ, ಯುಪಿಎ ಆಗಲಿ ಅವರ ನಿಜ ಬಣ್ಣ ಬಯಲಾಗುತ್ತದೆ. ಕಾಂಗ್ರೆಸ್ಸಿನ ಶೇ. 28, ಬಿಜೆಪಿಯ ಶೇ. 33, ಎಎಪಿಯ ಶೇ. 16ರಷ್ಟು ಅಭ್ಯರ್ಥಿಗಳು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರು. ನಾನಾ ಗಲೇ ಹೇಳಿದಂತೆ ಇವರಲ್ಲಿ ಬಹುತೇಕರು ಗೆದ್ದಿದ್ದಾರೆ. ಆದರೆ ಇದು ಬಹು ಮುಖ್ಯ ಪ್ರಶ್ನೆಗಳನ್ನು ಮುಂದಿಡುತ್ತದೆ. ಅದೆಂದರೆ ಇದುವೆ ಪ್ರಜಾಪ್ರಭುತ್ವವಾ? ಪ್ರಜಾಪ್ರಭುತ್ವದ ಆಶಯ ಇದೆ ಆಗಿದೆಯೆ? ನಮ್ಮ ದೇಶದ ಚುನಾವಣಾ ವ್ಯವಸ್ಥೆ ಸರಿಯಾಗಿದೆಯೆ? ಈ ಮೇಲಿನ ಅಭ್ಯರ್ಥಿಗಳೆಲ್ಲರೂ ನಮ್ಮನ್ನು ಕಾಯುವವರೆ? ಜನ ಸಾಮಾನ್ಯರ ಪರ ಶಾಸನಗಳನ್ನು ರೂಪಿಸುವವರೆ? ಇದಕ್ಕೆಲ್ಲ ಉತ್ತರ ನಮ್ಮ ಕಣ್ಣ ಮುಂದಿದೆ. ಮುಷ್ಕರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರಕಾರಿ ಕೆಲಸಗಳು ಪಾತಾಳಕ್ಕೆ ಹೋಗುತ್ತಿವೆ. ನಿರುದ್ಯೋಗ ಹಸಿವು ಎಲ್ಲೆ ಮೀರುತ್ತಿದೆ. ಬಡತನ ರೇಖೆಯ ಮಾನದಂಡಗಳನ್ನು ಕೆಳಗಿಳಿಸುವುದರ ಮೂಲಕ ಬಡತನ ನಿರ್ಮೂಲನೆ ಮಾಡಲಾ ಗುತ್ತಿದೆ. ಯುವಜನತೆ ಹಾದಿ ತಪ್ಪುತ್ತಿದ್ದಾರೆ. ಜಾತೀಯತೆ ಹೆಚ್ಚಾಗುತ್ತಿದೆ. ಅಸ್ಪಶ್ಯತೆ ಕೇಕೆ ಹಾಕುತ್ತಿದೆ. ಮಹಿಳೆಯರು ಅತ್ಯಾಚಾರಗಳಿಂದಾಗಿ ಮನೆ ಸೇರುತ್ತಿದ್ದಾರೆ. ರೈತ ನೇಣಿಗೇರುತ್ತಿದ್ದಾನೆ. ಆದರೆ ಮತ್ತೊಂದು ಕಡೆ ರಾಜಕಾರಣಿಗಳು ಬಂಡವಾಳಶಾಹಿ-ಬ್ರಾಹ್ಮಣ್ಯವನ್ನು ಮೈಗೂಡಿಸಿ ಕೊಂಡು ಮೆರೆಯುತ್ತಿದ್ದಾರೆ. ಕೋಟಿ ಕೋಟಿ ರೂ.ಗಳನ್ನು ಉದ್ಯಮಪತಿಗಳಿಗೆ ತೆರಿಗೆ ಮನ್ನಾ ಮಾಡುವ ಮೂಲಕ ದಾನ ಮಾಡುತ್ತಿದ್ದಾರೆ. ತಮ್ಮ ಆಸ್ತಿಗಳನ್ನು ಹತ್ತು ಪಟ್ಟು ಹೆಚ್ಚಾಗಿಸಿಕೊಳ್ಳುತ್ತಿದ್ದಾರೆ (ನಮ್ಮ ದೇಶದ ಮೇಲಿನ ಸಾಲ ಹೆಚ್ಚಾಗುತ್ತಲೆ ಇದೆ). ಪಂಕ್ತಿಭೇದ, ಮಡೆಸ್ನಾನ, ಜಾಟ್ ಪಂಚಾಯಿತಿ, ಸಂಪ್ರದಾಯ ಹತ್ಯೆ, ದೇವದಾಸಿ ಪದ್ಧತಿ ಮುಂತಾದುವುಗಳಿಗೂ ತಮಗೂ ಸಂಬಂಧವೇ ಇಲ್ಲದಂತೆ ಕುಳಿತುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೆ ಚುನಾವಣೆಗಳು ಬಂದರೂ ಅವು ಉಳ್ಳವರ ಕೊಬ್ಬಿಗೆ ಓಟೆಂಬ ತುಪ್ಪವನ್ನು ಸುರಿಯುತ್ತವಷ್ಟೆ ವಿನಹ ಇಲ್ಲದವರ ಹೊಟ್ಟೆಗೆ ಅನ್ನ ಸುರಿಯಲಾರವು. ಅದಕ್ಕೆ ಅಂಬೇಡ್ಕರರು ಅಂದು ನೀಡಿದ ಎಚ್ಚರಿಕೆಯನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಶೋಷಿತರೂ ಸಹ ಅವರ ಈ ಕೆಳಗಿನ ಮಾತನ್ನು ಸಾಕಾರಗೊಳಿಸಿಕೊಳ್ಳಬೇಕು ಇಲ್ಲವಾದರೆ ಮುಂದೆೆ ಅನುಭವಿಸುವುದು ಬಹಳಷ್ಟಿದೆ.

‘‘ಬಡವರ ದರಿದ್ರತನ ಸಿರಿವಂತರ ಸಿರಿತನದಲ್ಲಿದೆ. ಆದ್ದರಿಂದ ದುಡಿಯು ವವರೆಲ್ಲರೂ ಜಾತಿ ಮತಗಳನ್ನು ಬಿಟ್ಟು ಸಂಘಟಿತರಾಗಿ’’

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...