Saturday, May 31, 2014

ಪ್ರಶಸ್ತಿ ಸ್ವೀಕಾರದ ಸಂದರ್ಭ : ಒಂದು ಅನಿಸಿಕೆ
ಡಾ ಎಚ್ ಎಸ್ ಅನುಪಮಾಮಹಿಳಾ ಸಾಹಿತ್ಯಕ್ಕಾಗಿ ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿಯನ್ನು ‘ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ’ ನೀಡಿದಾಗ ಅನಿಸಿದ್ದು:

ರಮಾಬಾಯಿ ಅವರ ಹೆಸರು ಹಾಗೂ ಮಹಿಳಾ ಸಾಹಿತ್ಯ ಎಂಬ ಕೆಟಗರಿ - ಇವೆರೆಡರ ಬಹುಮಾನಕ್ಕೆ ಆಯ್ಕೆಯಾದ ನನ್ನ ಬರವಣಿಗೆ ಒಂದು ತೆರನ ತಳಮಳವನ್ನು, ಜವಾಬ್ದಾರಿಯನ್ನು ಹುಟ್ಟಿಸಿದೆ ಎಂದು ಹೇಳಬಹುದು. ಅಂಬೇಡ್ಕರರ ಸಹಚರಿಯಾಗಿ ಅವರ ಜೀವನದ ಆರಂಭಿಕ ಹೋರಾಟಗಳನ್ನು, ಬದುಕಿನ ಹೋರಾಟಗಳ ದಾರಿಯನ್ನು ಸವೆಸಿದ್ದ ರಮಾಬಾಯಿ ಅವರ ಕೌಟುಂಬಿಕ ಬದುಕನ್ನು ಪೋಷಿಸಿದವರು. ನೇರವಾಗಿ ಅಂಬೇಡ್ಕರರ ಜೊತೆ ಚಳುವಳಿಯಲ್ಲಿ ಧುಮುಕಿದವರಲ್ಲವಾದರೂ ಅವರ ಕುಟುಂಬದ ಜವಾಬ್ದಾರಿಯನ್ನು ವಿದ್ಯಾರ್ಥಿಯಾಗಿ ಅಂಬೇಡ್ಕರ್ ಅಮೆರಿಕಕ್ಕೆ ಹೋದಾಗಲೂ ನಿಭಾಯಿಸಿದವರು. ಒಂದು ಕುಟುಂಬದ ಇಂಟೆಗ್ರಿಟಿಯನ್ನು ಕಷ್ಟ ಕಾಲದಲ್ಲೂ; ಸಂಗಾತಿಯ ಆಬ್ಸೆನ್ಸ್‌ನಲ್ಲೂ ಕಾಯ್ದುಕೊಂಡು ಹೋಗುವುದು ಮಹಿಳೆಯ ಬದುಕಿನ ಒಂದು ಅಲಿಖಿತ ಜವಾಬ್ದಾರಿಯಾಗಿದೆ. ಅಂಥ ರಮಾಬಾಯಿ ಅಸಂಖ್ಯ ಜನರನ್ನು ತಮ್ಮ ಹೆಸರಿನಿಂದ, ಇರವಿನಿಂದ ಪ್ರಭಾವಿಸಿದ್ದಾರೆ. ಅವರ ಹೆಸರಿನಲ್ಲಿ ಮಹಿಳಾ ಸಾಹಿತ್ಯವನ್ನು ಗುರುತಿಸಿರುವುದು ನನ್ನ ಜವಾಬ್ದಾರಿಯನ್ನು ತುಂಬ ಹೆಚ್ಚಿಸಿದೆ.

ಮುಖ್ಯವಾದ ಇನ್ನೊಂದು ವಿಷಯ - ಮಹಿಳಾ ಸಾಹಿತ್ಯಕ್ಕಾಗಿ ಈ ಬಹುಮಾನ ಬಂದಿರುವುದು. ಮಹಿಳಾ ಸಾಹಿತ್ಯ ಹುಟ್ಟಿದ್ದೇ ತೀರಾ ಇತ್ತೀಚೆಗೆ. ಎಷ್ಟೋ ಸಹಸ್ರಮಾನ ಮಹಿಳಾ ಸಾಹಿತ್ಯ ಅಲಿಖಿತವಾಗೇ ಉಳಿಯಿತು. ವಚನಕಾರ್ತಿಯರಿಗಿಂತ ಮುಂಚೆ ಭಕ್ತಿಸಾಹಿತ್ಯವನ್ನು ಹೊರತುಪಡಿಸಿ ಮಹಿಳೆಯರು ಬರೆದಿದ್ದು, ಅನಿಸಿದ್ದನ್ನು ಆಡಿದ್ದು ಕಡಿಮೆ. ವಚನ ಕಾಲದ ನಂತರವೂ ಎಷ್ಟೋ ವರ್ಷ ಕಾಲ ಮಹಿಳೆಯರು ಅಭಿವ್ಯಕ್ತಿಗೆ ಸಾಹಿತ್ಯ ಪ್ರಕಾರವನ್ನು ನೆಚ್ಚಿಕೊಳ್ಳಲಿಲ್ಲ. ಹಾಗಿರುವಾಗ ಸಾವಿತ್ರಿ ಬಾಯಿ ಫುಲೆ, ತಾರಾಬಾಯಿ ಶಿಂಧೆ, ಮುದ್ದುಪಳನಿ, ಸರಸ್ವತಿಬಾಯಿ ರಾಜವಾಡೆ, ಕಮಲಾದೇವಿ ಅವರಂಥ ಅನೇಕರ ಬದುಕು, ನಿಲುವುಗಳಿಂದ ಸ್ಫೂರ್ತಿ ಪಡೆಯಬೇಕಾಗಿದೆ. ನಮ್ಮ ಅಸಂಖ್ಯ ಸೋದರಿಯರು ಇವತ್ತಿಗೂ ಜ್ಞಾನದಿಂದ ವಂಚಿತರಾಗಿ ದೂರವಿದ್ದಾರೆ. ೬೫% ಹುಡುಗಿಯರಷ್ಟೇ ಶಿಕ್ಷಿತರು. ಅಕ್ಷರ ಜ್ಞಾನ ಪಡೆದವರೂ ಕೂಡಾ ತಮ್ಮ ಬಾಯಿಗೊಂದು ಸೆನ್ಸಾರ್ ಬೋರ್ಡ್ ಅಂಟಿಸಿಕೊಂಡು, ಪೆನ್ನಿಗೊಂದು ಸೈಲೆನ್ಸರ್ ಹಚ್ಚಿಕೊಂಡು ಕುಳಿತಿದ್ದಾರೆ. ಎಳೆಯ ಹುಡುಗಿಯರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲ್ಯವಿವಾಹ, ದೇವದಾಸಿ ಪದ್ಧತಿ, ವರದಕ್ಷಿಣೆ, ಮರ್ಯಾದಾ ಹತ್ಯೆ ಮತ್ತಿತರ ಸಾಮಾಜಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ಷರ ಕಲಿಯಹೋದಂಥ ಸೋದರಿಯರು ಗುರುಗಳಿಂದ, ಮಾರ್ಗದರ್ಶಕರಿಂದ, ರಕ್ಷಕರಿಂದ, ಪರೀಕ್ಷಕರಿಂದ, ಆರಕ್ಷಕರಿಂದ, ವಕೀಲ-ನ್ಯಾಯಾಧೀಶರಿಂದ, ಪತ್ರಕರ್ತರಿಂದ, ಮಂತ್ರಿ ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಎಷ್ಟೋ ಮಹಿಳಾ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾಗಿ ಹುಯಿಲೆಬ್ಬಿಸಿದರೂ ಕೊನೆಗೆ ಬೇರೆ ವಿಷಯಗಳೇ ಮುನ್ನೆಲೆಗೆ ಬಂದು ಮಹಿಳೆಯ ಇಷ್ಯೂ ಹಿಂದೆ ಸರಿಯುತ್ತಿದೆ.

ನಮ್ಮ ನೆಲದಲ್ಲಷ್ಟೇ ಅಲ್ಲ, ದೂರದೂರದ ಆಫ್ಘನಿಸ್ಥಾನ, ನೈಜೀರಿಯಾ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇದೇ ಪರಿಸ್ಥಿತಿಯಿದೆ. ಮಲಾಲಾ ವಿಷಯ ಎಲ್ಲರಿಗೂ ಗೊತ್ತೇ ಇದೆ. ನಿಮಗೆಲ್ಲ ತಿಳಿದಿರಬಹುದು, ನೈಜೀರಿಯಾದಲ್ಲಿ ‘ಬೋಕೋ ಹರಾಂ’ ಎಂಬ ಸಶಸ್ತ್ರ ಪ್ರತ್ಯೇಕತಾವಾದಿ ಸಂಘಟನೆ ಬೋರ್ಡಿಂಗ್ ಸ್ಕೂಲ್ ಒಂದರಿಂದ ೨೭೬ ಹುಡುಗಿಯರನ್ನು - ಬಹುತೇಕರು ೧೪-೧೮ವರ್ಷದೊಳಗಿನವರು - ಅಪಹರಿಸಿ ನೆರೆಯ ದೇಶಗಳಿಗೆ ಮಾರಿಬಿಟ್ಟಿದೆ. ಬೊಕೊ ಹರಾಂ ಎಂದರೆ ಪಾಶ್ಚಾತ್ಯ ಶಿಕ್ಷಣ ನಿಷೇಧ ಎಂದು ಅರ್ಥ. ಆ ಸಂಘಟನೆ ಹೆಣ್ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಕಲಿತರೆ ಸಾಕು, ಅವರಿಗೇಕೆ ಇಂಗ್ಲಿಷ್ ಶಿಕ್ಷಣ ಎಂದು ಕೇಳುತ್ತದೆ. ಹೆಣ್ಣುಮಕ್ಕಳು ವೇಶ್ಯಾವಾಟಿಕೆಗೆ ಮಾರಲ್ಪಟ್ಟರೂ ಅಡ್ಡಿಯಿಲ್ಲ, ಆದರೆ ವಿದ್ಯೆ ಕಲಿಯಬಾರದು. 

ಹೀಗಿರುತ್ತ ನಾ ಕಲಿತ ನಾಲ್ಕಕ್ಷರ ಹಾಗೂ ಅದು ನನಗೆ ಕೊಡಮಾಡಿದ ಭಾಷೆ ನನಗೆ ಅಪರಿಮಿತ ಜವಾಬ್ದಾರಿಯನ್ನು ನೀಡಿದೆ. ಆ ಎಲ್ಲ ಸೋದರಿಯರ ಬಾಯಿದ್ದೂ ಮಾತನಾಡಲಾರದ ಸ್ಥಿತಿಗೆ ನನ್ನ ಪೆನ್ನು ಎಲ್ಲೋ ಲವಲೇಶದಷ್ಟು, ಮರಳು ಕಣದಷ್ಟು ಸ್ಪಂದಿಸಿರಬಹುದಷ್ಟೆ. ಈ ಅಕ್ಷರ ತಿಳಿಯದವರ ನೋವನ್ನು ಅನುಭೂತಿಯಿಂದ ಅರಿತು ಮೂಡಿಸಿದ ಸಾಲುಗಳಿಗೆ ದೊರೆತ ಬಹುಮಾನ ನನ್ನ ಪೂರ್ವಸೂರಿ ಮಹಿಳೆಯರಿಗೇ ಸಲ್ಲುತ್ತದೆ. ಸಾವಿತ್ರಿಬಾಯಿ ಫುಲೆಯವರಿಂದ ಹಿಡಿದು ದು. ಸರಸ್ವತಿ, ಗೌರಿ, ಮಲ್ಲಿಗೆಯ ತನಕ ಎಲ್ಲ ಹೆಣ್ಣುಜೀವಗಳೊಂದಿಗೆ ನಾನು ಈ ಪ್ರಶಸ್ತಿ ನೀಡಿರುವ ಜವಾಬುದಾರಿಯನ್ನು, ಗುರುತಿಸುವಿಕೆಯನ್ನು ಹಂಚಿಕೊಳ್ಳಬಯಸುತ್ತೇನೆ. 

ಅಕ್ಷರ ಕಲಿಕೆಯಿಂದ ಬಂದ ಕಿಂಚಿತ್ ಜ್ಞಾನ, ರೆಕಗ್ನಿಷನ್ ಮತ್ತು ಅಧಿಕಾರ ನನ್ನನ್ನು ಜನಸಾಮಾನ್ಯರಿಂದ ದೂರಮಾಡದೇ ಇರಲಿ; ಎಲ್ಲರ ಎದೆಯೊಳಗೂ ಇರುವುದು ಮಿಡಿವ ಹೃದಯವೇ ಆಗಿರುವಾಗ ಜಾತಿ/ದೇಶ/ಮತಗಳ ಕಾರಣದಿಂದ ಪರಸ್ಪರ ಕಾದಾಟ ನಿಲ್ಲಿಸುವಂತೆ ವಿಶ್ವವನ್ನು ಎಚ್ಚರಿಸುವ ತಾಯಂದಿರು ಹೆಚ್ಚಾಗಲಿ ಎಂದು ಆಶಿಸುತ್ತ;

ಮೊದಲ ನಡೆನುಡಿಗಳನ್ನು ತಿದ್ದಿ ತೀಡಿದ ಅಮ್ಮ, ಅಣ್ಣ; ಕುಟುಂಬ ಜವಾಬ್ದಾರಿಯಿಂದ ಹೊರತಾದ ನನ್ನ ಚಟುವಟಿಕೆಗಳಿಗೆ ಸಹಕರಿಸುವ ಕೃಷ್ಣ, ಪುಟ್ಟಿ, ಪವಿ ಮತ್ತು ಕನಸು; ನನ್ನೆಲ್ಲ ಹೆಜ್ಜೆಗಳ ಸಹಪಯಣಿಗ ಬಸೂ; ೧೭ ಪುಸ್ತಕಗಳು, ಅಪ್ರಕಟಿತ ಬರಹಗಳನ್ನು ಪ್ರೀತಿಯಿಂದ ಓದಿ ಮೌಲಿಕ ಮಾತುಗಳನಾಡಿರುವ ಸಬಿಹಾ ಮೇಡಂ; ಹಾಗೂ ಅಕ್ಕನ ಬಳಗದ ಎಲ್ಲ ಗೆಳತಿಯರನ್ನು ನೆನೆಯುತ್ತಾ ಈ ಖುಷಿ ಹಂಚಿಕೊಂಡಿದ್ದೇನೆ. ಪ್ರಶಸ್ತಿ ಮೊತ್ತವನ್ನು ವಂಚಿತ ಮಕ್ಕಳ ಶಿಕ್ಷಣ/ಸವಲತ್ತು/ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಮಾನತಾ ಮಹಿಳಾ ವೇದಿಕೆಗೆ ನೀಡುತ್ತೇನೆ.

ಪ್ರೊ. ಮಲ್ಲೇಪುರಂ ಪ್ರತಿಷ್ಠಾನದವರಿಗೆ ಧನ್ಯವಾದಗಳು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...