Wednesday, May 21, 2014

ಮೋದಿ ಅಲೆ ಅಲ್ಲ, ಸುನಾಮಿ!
  • ನೀರದ
  • ಸೌಜನ್ಯ : ಅಭಿಮನ್ಯು ಬ್ಲಾಗ್ 

ಈ ಚುನಾವಣೆಯಲ್ಲಿ ಬೀಸಿದ್ದು ಮೋದಿ ಅಲೆಯಲ್ಲ, ಸುನಾಮಿಯೇ. ಅಲೆಯಾದರೆ ಆಗಾಗ ಏಳುತ್ತಿರುತ್ತದೆ, ನಂತರ ತಾನಾಗಿಯೇ, ಹೆಚ್ಚು ಅನಾಹುತ ಮಾಡದೆ ತಣ್ಣಗಾಗಿಬಿಡುತ್ತದೆ. ಆದರೆ ಸುನಾಮಿ...? ಎದ್ದರೆ ವ್ಯವಸ್ಥೆಯನ್ನೇ ಅಲ್ಲೋಲ -ಕಲ್ಲೋಲ ಮಾಡುತ್ತದೆ, ಇದ್ದುದ್ದನ್ನೆಲ್ಲಾ ನಾಶ ಮಾಡುತ್ತದೆ, ಇಲ್ಲವೇ ಒಂದಿಷ್ಟು ಹಾನಿ ಮಾಡಿ ಹೋಗಿಬಿಡುತ್ತದೆ. ಸುನಾಮಿಯಿಂದಾದ ಅನಾಹುತವನ್ನು ಸರಿಪಡಿಸಲು ಹಲವಾರು ವರ್ಷಗಳೇ ಬೇಕು. ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಮೇಲೆ ಎರಗಿದ ಸುನಾಮಿಯ ನೆನಪು ಹಸಿರಾಗಿಯೇ ಇರುವವರಿಗೆ ಇದೆಲ್ಲಾ ಅರ್ಥವಾಗುತ್ತದೆ. 


ಶುಕ್ರವಾರ ಬೆಳಗ್ಗೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿತ್ತು. ಟೀವಿಯೊಂದರ ಚರ್ಚಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಮಾಜಿ ಸಚಿವ ಸುರೇಶ್ ಕುಮಾರ್, ’ನಾವೆಲ್ಲಾ ಮೋದಿ ಅಲೆ ಎನ್ನುತ್ತಿದ್ದೆವು, ಇದು ಅಲೆಯಲ್ಲ ಸುನಾಮಿ’ ಎಂದರು. ಅವರು ಮೋದಿ ಗೆಲುವಿನ ಅಬ್ಬರವನ್ನು ಹೀಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಿರಬಹುದು. ಆದರೆ, ಅದೇ ಸತ್ಯ ಕೂಡ.
ಹೌದು, ಈ ಚುನಾವಣೆಯಲ್ಲಿ ಬೀಸಿದ್ದು ಮೋದಿ ಅಲೆಯಲ್ಲ, ಸುನಾಮಿಯೇ. ಅಲೆಯಾದರೆ ಆಗಾಗ ಏಳುತ್ತಿರುತ್ತದೆ, ನಂತರ ತಾನಾಗಿಯೇ, ಹೆಚ್ಚು ಅನಾಹುತ ಮಾಡದೆ ತಣ್ಣಗಾಗಿಬಿಡುತ್ತದೆ. ಆದರೆ ಸುನಾಮಿ...? ಎದ್ದರೆ ವ್ಯವಸ್ಥೆಯನ್ನೇ ಅಲ್ಲೋಲ -ಕಲ್ಲೋಲ ಮಾಡುತ್ತದೆ, ಇದ್ದುದ್ದನ್ನೆಲ್ಲಾ ನಾಶ ಮಾಡುತ್ತದೆ, ಇಲ್ಲವೇ ಒಂದಿಷ್ಟು ಹಾನಿ ಮಾಡಿ ಹೋಗಿಬಿಡುತ್ತದೆ. ಸುನಾಮಿಯಿಂದಾದ ಅನಾಹುತವನ್ನು ಸರಿಪಡಿಸಲು ಹಲವಾರು ವರ್ಷಗಳೇ ಬೇಕು. ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಮೇಲೆ ಎರಗಿದ ಸುನಾಮಿಯ ನೆನಪು ಹಸಿರಾಗಿಯೇ ಇರುವವರಿಗೆ ಇದೆಲ್ಲಾ ಅರ್ಥವಾಗುತ್ತದೆ.

ಸುರೇಶ್ ಕುಮಾರ್ ಹೇಳಿದ ಹಾಗೆ ಮೋದಿ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಯುಪಿಎ ಮಾತ್ರವಲ್ಲ, ಡಿಎಂಕೆ, ಬಿಎಸ್‌ಪಿಯಂತಹ ಪ್ರಾದೇಶಿಕ ಪಕ್ಷಗಳೂ ಕೊಚ್ಚಿಕೊಂಡು ಹೋಗಿವೆ. ಸರಕಾರಿ ಹವಮಾನ ಇಲಾಖೆಯ (!) ವರದಿಯನ್ನೇ ನಂಬಿಕೊಂಡಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರದ ನಿತೀಶ್ ಕುಮಾರ್ ಸುನಾಮಿಯ ತೀವ್ರತೆ ಅರ್ಥವಾಗದೆ ಧಂಗುಬಡಿದು ಹೋಗಿದ್ದಾರೆ. ಬೇರೇನೂ ಬೇಡ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಲೂ ಸಾಮರ್ಥ್ಯವಿಲ್ಲದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ.

ಈ ಸುನಾಮಿ ಚುನಾವಣೆಯ ಗೆಲುವಿಗಷ್ಟೇ ಸೀಮಿತವಾಗಿರುತ್ತದೆಯೇ...? ಹಾಗೆನಿಸದು. ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ, ತಣ್ಣಗೆ ಆಡಳಿತ ನಡೆಸುವ ಮೂಡ್‌ನಲ್ಲಿಯಂತೂ ಇಲ್ಲ. ಮುಂದಿನ ಪ್ರಧಾನಿಯ ಮಾತುಗಳನ್ನು ಕೇಳುತ್ತಿದ್ದರೆ ಆಡಳಿತದಲ್ಲಿಯೂ ಸುನಾಮಿ ಏಳುವ ಲಕ್ಷಣಗಳಿವೆ. ಈ ಸುನಾಮಿ ದೇಶದ ವೈವಿಧ್ಯತೆಗೆ, ಸಮಗ್ರತೆಗೆ, ಜಾತ್ಯತೀತ ವ್ಯವಸ್ಥೆಗೆ ನೀರು ನುಗ್ಗಿಸದಿದ್ದರೆ, ಸಂವಿಧಾನವನ್ನು ಕೊಚ್ಚಿಕೊಂಡು ಹೋಗಿ, ಸರಿಪಡಿಸಲಾಗದಷ್ಟು ಹಾನಿಪಡಿಸದಿದ್ದರೆ ಸಾಕು.
ಇಲ್ಲಿ ಆತಂಕಕ್ಕೂ ಕಾರಣಗಳಿವೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇರವಾಗಿ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದಿಲ್ಲ. ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಗೆದ್ದ ಸಂಸದರು ನಾಯಕನನ್ನು ಆರಿಸುತ್ತಾರೆ. ಬಹುಮತ ಪಡೆದ ಪಕ್ಷದ ನಾಯಕ ಪ್ರಧಾನಿಯಾಗುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಈ ಬಾರಿ ಬಿಜೆಪಿಯಲ್ಲಿ ನಡೆದಿದ್ದೇನು? ಪಕ್ಷ ಪಕ್ಕಕ್ಕೆ ಸರಿದಿತ್ತು, ’ಆಪ್ ಕಿ ಬಾದ್ ಮೋದಿ ಸರ್ಕಾರ್ ಎಂಬ ಘೋಷಣೆ ಮೊಳಗಿತ್ತು. ಅಂದರೆ ಏಕ ವ್ಯಕ್ತಿಯ ನೇತೃತ್ವದಲ್ಲಿ ಇಡೀ ಚುನಾವಣೆ ನಡೆದಿತ್ತು. ಈಗ ಬಹುಮತವನ್ನೂ ಪಡೆಯುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹೊಂದಿದ ಪಕ್ಷವನ್ನೇ ಮೀರಿ ನಿಂತ ವ್ಯಕ್ತಿಗೆ ಹೀಗೆ ಬಹುಮತ ಸಿಕ್ಕರೆ ಏನಾಗಬಹುದು? ಯೋಚಿಸುವುದು ಬೇಡವೇ? ಈ ರೀತಿಯ ಯೋಚನೆಗಳೇ ಸುನಾಮಿಯ ಆತಂಕ ಸೃಷ್ಟಿಸುತ್ತಿವೆ.
ಜನ ನಾಯಕ ಅಲ್ಲ, ಮಾಲೀಕ!

ನರೇಂದ್ರ ಮೋದಿಗೆ ಪ್ರಚಂಡ ಜನ ಬೆಂಬಲ ದೊರೆತಿರಬಹುದು. ಆದರೂ ಅವರನ್ನು ಆತಂಕದಿಂದಲೇ ನೋಡುವಂತೆ ಮಾಡಿರುವುದು ಗುಜರಾತ್ ಮುಖ್ಯಮಂತ್ರಿಯಾಗಿ ಅವರು ನಡೆದುಕೊಂಡ ರೀತಿ. ಇದೆಲ್ಲವೂ ಗೊತ್ತಿದ್ದೇ ಜನ ಅವರಿಗೆ ಬೆಂಬಲ ನೀಡಿದ್ದಾರೆಯೇ, ಈ ಪ್ರಶ್ನೆಗೆ ’ಹೌದು’ ಎಂದು ಬಿಜೆಪಿಯ ನಾಯಕರು ಕೂಡ ಉತ್ತರಿಸಲಾರರು. ಕೇವಲ ಮೋದಿಯ ’ಅಭಿವೃದ್ಧಿ’ ಮಂತ್ರಕ್ಕೆ ಮರುಳಾಗಿ ಅವರ ಬೆನ್ನು ಬಿದ್ದವರೇ ಹೆಚ್ಚು ಮಂದಿ. ಇದು ಗೊತ್ತಿದ್ದೇ ಪ್ರಧಾನಿಯಾಗಿ ಆಯ್ಕೆಯಾದ ಮೇಲೂ ಮೋದಿ ಈ ಮಂತ್ರವನ್ನು ಬಿಡದೆ ಜಪಿಸುತ್ತಿರುವುದು. ಈ ಮಂತ್ರದಂಡವನ್ನೇ ಬಳಸಿಕೊಂಡು ಇಡೀ ಜಗತ್ತಿನ ಗಮನ ಸೆಳೆಯುತ್ತಿರುವುದು.

ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ಮೋದಿ ಜನನಾಯಕರೆನಿಸಿ ಕೊಂಡಿರಲಿಲ್ಲ. ಅವರೇನು ನಮ್ಮ ಯಡಿಯೂರಪ್ಪರಂತೆ ಚಳವಳಿ, ಹೋರಾಟ ಮಾಡಿ ಪಕ್ಷ ಕಟ್ಟಿದವರೂ ಅಲ್ಲ. ಆರ್‌ಎಸ್‌ಎಸ್‌ನ ಅಣತಿಯಂತೆಯೇ ನಡೆದುಕೊಂಡು ಯಾರೋ ಕಟ್ಟಿದ ಬಿಜೆಪಿ ಹುತ್ತ ಸೇರಿದವರು. ಮುಖ್ಯಮಂತ್ರಿಯಾದ ಮೇಲೆ ಪಕ್ಷದ ಮತ್ತು ಗುಜರಾತ್ ಸರಕಾರದ ಮಾಲೀಕರಂತೆ ವರ್ತಿಸಿದರೇ ಹೊರತು, ಜನ ನಾಯಕರೆನಿಸಿಕೊಂಡವರಲ್ಲ.

’ಮಾಲೀಕರಾಗಲು ದುಡ್ಡಿರಬೇಕಲ್ಲ. ಚಾ ಮಾರುವವನಿಗೆ ಈ ಶಕ್ತಿ ಬಂದಿದ್ದಾದರೂ ಹೇಗೆ’ ಎಂದು ನೀವು ಪ್ರಶ್ನಿಸಬಹುದು. ಈ ಶಕ್ತಿಯನ್ನು ನೀಡಿದ್ದು, ಜನರೇನೂ ಅಲ್ಲ. ಅಂಬಾನಿ, ಅದಾನಿಯಂತಹ ಉದ್ಯಮಿಗಳು. ಈ ಉದ್ಯಮಪತಿಗಳನ್ನು ಮುಂದಿಟ್ಟುಕೊಂಡು ಉದ್ಯೋಗ ಸೃಷ್ಟಿಸುತ್ತಾ, ಜನರು ಅನಿವಾರ್ಯವಾಗಿ ಬೆಂಬಲಿಸುವಂತೆ ಮಾಡಿದ ಮೋದಿ ತಮ್ಮ ಈ ಚಾಣಕ್ಷತನಕ್ಕೆ ’ಅಭಿವೃದ್ಧಿ’ ಎಂದು ನಾಮಕರಣ ಮಾಡಿದರು. ಈ ಉದ್ಯಮಿಗಳು ನೀಡಿದ ’ಶಕ್ತಿ’ಯಿಂದಾಗಿಯೇ ಗುಜರಾತ್ ಸರಕಾರಕ್ಕೆ, ಅಲ್ಲಿಯ ಬಿಜೆಪಿಗೆ ಮಾಲೀಕರಾಗಿ ಮೆರೆದ ಮೋದಿ, ಎಲ್ಲವೂ ತಮ್ಮ ಅಣತಿಯಂತೆಯೇ ನಡೆಯುವಂತೆ ನೋಡಿಕೊಳ್ಳುತ್ತಲೇ ಬಂದಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾಗಿರುವ ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಬೆಲೆಯೇ ಇಲ್ಲ.

ಇತ್ತಿಚೆಗೆ ಮೋದಿ ತಮ್ಮ ಈ ವ್ಯಾಪಾರ ವಿಸ್ತರಿಸುವ ಭಾಗವಾಗಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದರು. ಆರ್‌ಎಸ್‌ಎಸ್ ಮಧ್ಯಸ್ತಿಕೆಯಲ್ಲಿ ವ್ಯವಹಾರ ಕುದುರಿಸಿದ ಮೋದಿ ಬಿಜೆಪಿಯ ರಾಷ್ಟ್ರಘಟಕವನ್ನೂ ಅಕ್ಷರಶಃ ಕೊಂಡರು. ಪಾಪಾ! ಇದರಿಂದಾಗಿ ಪಕ್ಷದ ಅಧ್ಯಕ್ಷ ರಾಜನಾಥಸಿಂಗ್ ಮಾಲೀಕ ಮೋದಿಯ ಹಿಂದೆ-ಮುಂದೆ ಅಲೆಯಬೇಕಾಯಿತು. ಕೊನೆಗೆ ಪರಿಣಾಮವೇನೆಂದರೆ ’ಆಪ್ ಕಿ ಬಾದ್ ಬಿಜೆಪಿ ಸರ್ಕಾರ್ ಬದಲಿಗೆ, ’ಆಪ್ ಕಿ ಬಾದ್ ಮೋದಿ ಸರ್ಕಾರ್ ಎಂಬ ಘೋಷಣೆ ಬಂತು. ಸೋಷಿಯಲ್ ಮೀಡಿಯಾ, ಇನ್ನಿತರ ಮೀಡಿಯಾಗಳನ್ನು ಬಳಸಿಕೊಂಡು ಬಿಜೆಪಿಗೆ ಹೊಸ ಬ್ರಾಂಡ್ ಇಮೇಜ್ ನೀಡಿ, ಸೂಪರ್ ಸಿಇಒ ಎನಿಸಿಕೊಂಡ ಮೋದಿ, ನೆಲೆಯೇ ಇಲ್ಲದ ಪಕ್ಷಕ್ಕೆ ಮೀಡಿಯಾಗಳ ಮೂಲಕವೇ ನೆಲೆಯೊದಗಿಸಿದರು.

ಒಟ್ಟಾರೆ ಮೋದಿಯ ಜಾಹೀರಾತು ಮೋಡಿಗೆ ಮರುಳಾಗಿ ಇಡೀ ದೇಶವೇ ಈಗ ಜೈ ಜೈ ಎಂದಿದೆ. ಪರಿಣಾಮ ದೇಶದ ಸಿಇಒ ಆಗಿ ಕಾರ್ಯನಿರ್ವಹಿಸಲು ಅವರೀಗ ಹೊರಟಿದ್ದಾರೆ. ನಷ್ಟದಲ್ಲಿರುವ ಯಾವ ಯಾವ ಘಟಕ, ಯಾವ ಯಾವ ಯೋಜನೆಯನ್ನು ಮುಚ್ಚುತ್ತಾರೋ, ಯಾರ ಹಿಂದೆ ಯಾವ ಗೂಢಚಾರರನ್ನು ಅಟ್ಟುತ್ತಾರೋ, ತಮ್ಮ ಲಾಭಕ್ಕಾಗಿ, ಮಲ್ಟಿನ್ಯಾಷನಲ್ ಕಂಪನಿಯ ಸಿಇಒನಂತೆ ಏನೇನು ಮಾಡುತ್ತಾರೋ ಗೊತ್ತಿಲ್ಲ. ಸಿಇಒಗೆ ಸುಮ್ಮನೆ ಕೂರಲು ಬಂಡವಾಳ ಹೂಡಿದವರು ಮಾತ್ರ ಬಿಡುವುದಿಲ್ಲ ಎಂಬುದಷ್ಟನ್ನೇ ಈಗ ಹೇಳಬಹುದು.
ಇದೇನು ಸುಲಭದ ಮಾತಲ್ಲ
ಹೀಗೆ ಸೂಪರ್ ಸಿಇಒನಂತೆ ವರ್ತಿಸುವುದು ಸುಲಭದ ಕೆಲಸವೇನೂ ಅಲ್ಲ. ಮೋದಿಯಲ್ಲಿ ಇದಕ್ಕೆ ಬೇಕಾದ ಗುಣಗಳಿವೆ (ವಿರೋಧಿಗಳು ಇದನ್ನೇ ಹಿಟ್ಲರ್‌ನ ಗುಣ ಎನ್ನುವುದು). ತಮ್ಮ ಮಾತು ಮೀರಿದವರನ್ನು, ತಮ್ಮ ವಿರುದ್ಧ ಮಾತನಾಡುವವರನ್ನು ಹೇಗಾದರೂ ಮಾಡಿ ಮಟ್ಟ ಹಾಕುತ್ತಾರೆ. ಇದಕ್ಕಾಗಿ ಯಾವುದೇ ರೀತಿಯ ಮಂತ್ರ-ತಂತ್ರ-ದಂಢಗಳನ್ನು ಬಳಸಲೂ ಹೇಸರು. ಬಿಜೆಪಿಯ ಗುಜರಾತ್‌ನ ನಾಯಕರಾದ ವಘೇಲಾ, ಸಂಜಯ್ ಜೋಷಿ, ವಿಎಚ್‌ಪಿಯ ಪವೀಣ್ ತೊಗಾಡಿಯ... ಹೀಗೆ ಅನೇಕರು ಮೋದಿಯ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಇತ್ತೀಚೆಗೆ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಮುರುಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತಿತರರು ಮೋದಿಯ ಶಾಕ್ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದಾರೆ. ಸರಕಾರ ಪೂರ್ಣವಾಗಿ ರಚನೆಯಾಗುವ ಹೊತ್ತಿಗೆ ಇನ್ನೆಷ್ಟು ಮಂದಿಗೆ ಪ್ರಜ್ಞೆ ತಪ್ಪುತ್ತದೆಯೋ ಗೊತ್ತಿಲ್ಲ!

ಮೋದಿ ಹೀಗೆ ತಮ್ಮ ಪಕ್ಷದಲ್ಲಿನ ’ಅಡೆ-ತಡೆ’ಗಳನ್ನು ನಿವಾರಿಸಿಕೊಂಡು ಬೆಳೆಯುತ್ತಿದ್ದಾರೆಂದರೆ ಹೊರಗಿನವರೇನೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಅವರು ಸಾರ್ವಜನಿಕವಾಗಿಯೂ ಇದೇ ರೀತಿಯ ವರ್ತನೆ ತೋರಿದ್ದಾರೆ. ಇದಕ್ಕೆ ಗುಜರಾತ್‌ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಬೆಳವಣಿಗೆಗಳೇ ಸಾಕ್ಷಿ.  ಆ ರಾಜ್ಯದ ಹಿರಿಯ ಅಧಿಕಾರಿಗಳು, ಪೊಲೀಸರು ಅವರ ವಿರುದ್ಧ ತಿರುಗಿ ಬಿದ್ದಿರುವುದೂ ಇದೇ ಕಾರಣಕ್ಕೆ.  ಇದು ನಿಜವಾಗಿಯೂ ಪ್ರಜ್ಞಾವಂತರೆಲ್ಲಾ ಆತಂಕ ಪಡುವ ವಿಷಯ. ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ’ನಾನು ಎಲ್ಲರನ್ನೂ ಒಳಗೊಂಡು ದೇಶ ಕಟ್ಟುತ್ತೇನೆ’ ಎಂಬ ಮಾತನ್ನು ಮೋದಿ ಪದೇ ಪದೇ ಹೇಳುತ್ತಿರುವುದರ ಹಿಂದೆ, ತಮ್ಮೊಂದಿಗೆ ಭಿನ್ನಮತ ಹೊಂದಿರುವ ಎಲ್ಲರನ್ನೂ ಹೊಸಕಿ ಹಾಕುತ್ತೇನೆ ಎಂಬ ದನಿ ಅಡಗಿದೆಯೇ ಎಂಬ ಅನುಮಾನ ಮೂಡದಿರದು.

ಬಿಜೆಪಿಗೆ ಈಗ ಸ್ಪಷ್ಟ ಬಹುಮತ ದೊರೆತಿರುವುದರಿಂದ ಮೋದಿಯ ಮೇಲೆ ಯಾವ ನಿಯಂತ್ರಣವೂ ಇಲ್ಲವಾಗಿದೆ. ಗುಜರಾತ್‌ನ ಆರ್‌ಎಸ್‌ಎಸ್ ನಾಯಕರೇ ಬಹಿರಂಗವಾಗಿ ಹೇಳಿರುವಂತೆ ಮೋದಿ ತಮ್ಮ ತಂಡದ ಮಾತು ಬಿಟ್ಟರೆ ಬೇರೆಯವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವವರೇ ಅಲ್ಲ. ಹೀಗಾಗಿ ಮೋದಿ ದೇಶದ ಪ್ರಧಾನಿಯಾಗಿ ಹೇಗೆ ವರ್ತಿಸುತ್ತಾರೆ ಎಂಬುದು ತೀವ್ರ ಕುತೂಹಲಕಾರಿಯಾಗಿ ಪರಿಣಮಿಸಿದೆ.

ಪಕ್ಷದ ಪ್ರಣಾಳಿಕೆಯಲ್ಲಿ ’ವಿಕಾಸ್ (ಅಭಿವೃದ್ಧಿ)ಯ ಮಂತ್ರ ಜಪಿಸಿರಬಹುದು. ಆದರೆ ಆರ್‌ಎಸ್‌ಎಸ್ ನಾಯಕರು ಈಗಾಗಲೇ ತಮ್ಮ ಬೇಡಿಕೆ ಏನೆಂಬುದನ್ನು (ಮೇ ೧೫ರ ದಿ ಹಿಂದೂ ಪತ್ರಿಕೆ) ಸ್ಪಷ್ಟಪಡಿಸಿದ್ದಾರೆ. ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತಡ ಆರಂಭಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಂತೆ ಇಂತಹ ಒತ್ತಡಗಳು ಸೃಷ್ಟಿಯಾದಾಗ ಜಾಣತನದಿಂದ ಜಾರಿಕೊಳ್ಳುವ, ಸಂವಿಧಾನದ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಲು ಯತ್ನಿಸುವ ವ್ಯಕ್ತಿತ್ವ ಮೋದಿಯದ್ದಲ್ಲ. ತಮ್ಮ ಬೆಂಬಲಕ್ಕೆ ನಿಂತ ಬಲಪಂಥೀಯರ ಮನ ತಣಿಸಲು ಅವರು ಮುಂದಾಗಿಯೇ ತೀರುತ್ತಾರೆ. ಇದು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದು ಎಂಬುದನ್ನು ಈಗ ಊಹಿಸುವುದೂ ಕಷ್ಟ. ಹೀಗಾಗಿ ಮೋದಿಯ ಪ್ರಚಂಡ ವಿಜಯ ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿರುವುದಂತು ನಿಜ. ಸದ್ಯಕ್ಕಂತೂ, ಪ್ರಧಾನಿ ಮೋದಿ ವಿಕಾಸದತ್ತವೇ ತಮ್ಮ ಚಿತ್ತವಿಟ್ಟಿರಲಿ ಎಂದು ಹಾರೈಸಬಹುದು.

ಪೆಪ್ಸಿ ಗೆಲುವು!
ನಮ್ಮಲ್ಲಿ ಬಹುತೇಕರಿಗೆ ಪೆಪ್ಸಿ, ಕೋಕೋ ಕೋಲಾ ಎಷ್ಟು ಅಪಾಯಕಾರಿ ತಂಪು ಪಾನಿಯಗಳು ಎಂಬುದು ಗೊತ್ತು. ಇದನ್ನು ’ಟಾಯ್ಲೆಟ್ ಕ್ಲೀನರ್ ಎಂದೂ ಹಂಗಿಸುವುದೂ ಉಂಟು! ಈ ಕಂಪನಿಯವರೇ ಆಗಾಗ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿರುವುದಾಗಿ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರುತ್ತಾರೆ. ಆದರೆ ತಪ್ಪು ಸರಿಪಡಿಸಿಕೊಳ್ಳಲೇನೂ ಹೋಗಿರುವುದಿಲ್ಲ. ಬದಲಾಗಿ, ಇನ್ನಷ್ಟು ಕ್ರಿಕೆಟಿಗರನ್ನು, ಸಿನಿಮಾ ತಾರೆಯರನ್ನು ಬಳಸಿಕೊಂಡು ಹೊಸ ಜಾಹೀರಾತು ಸಿದ್ಧಪಡಿಸಿ, ಟೀವಿಯಲ್ಲಿ ಮೂರು ಹೊತ್ತು ಪ್ರಸಾರ ಮಾಡುತ್ತಾರೆ. ಇದು ಕೆಟ್ಟದ್ದು ಎಂದು ಗೊತ್ತಿದ್ದರೂ, ನಮ್ಮಲ್ಲೇನೋ ಒಂದು ರೀತಿಯ ಮಂಪರು ಆವರಿಸಿದಂತಾಗಿ ನಾವು ಇವುಗಳನ್ನು ಕೊಂಡು ಕುಡಿಯುತ್ತಲೇ ಇರುತ್ತೇವೆ.
 
ಕೆಲವೊಮ್ಮೆ ಏನೂ ಅರಿಯದ ಮಕ್ಕಳು ಕಾರಣವಾಗಿರುತ್ತಾರೆ, ಇನ್ನು ಕೆಲವೊಮ್ಮೆ ತೀರದ ದಾಹ ’ಎಹಿಯೇ ರೈಟ್ ಚಾಯ್ಸ್ ಬೇಬಿ’ ಎನ್ನುತ್ತಾ ನಮ್ಮಿಂದ ಪೆಪ್ಸಿಗೆ ಹಣ ಸಂದಾಯವಾಗುವಂತೆ ಮಾಡಿರುತ್ತದೆ. ನಮ್ಮಲ್ಲಿನ ಕೊಳಕು ನೀರಿಗೆ ಒಂದಿಷ್ಟು ಅಪಾಯಕಾರಿ ರಾಸಾಯನಿಕ ಸುರಿದು, ನಮಗೇ ಮಾರಿ ದುಡ್ಡು ಮಾಡಿಕೊಳ್ಳುವ ಪೆಪ್ಸಿ, ಕೋಕೋ ಕೋಲಾದ ಮಾಲೀಕರು ವಿದೇಶದಲ್ಲಿ ’ಉಬ್ಬುತ್ತಲೇ ಇರುತ್ತಾರೆ.

ಏಕೆ ಹೀಗೆ? ಜಾಹೀರಾತು ನಮ್ಮ ಮೇಲೆ ಮಾಡಿರೊ ಮೋಡಿಯಾದರೂ ಎಂತಹದ್ದು? ಬಾಯಾರಿಕೆಯಾದಾಗ ಈ ಕಂಪನಿಗಳ ಡ್ರಿಂಕ್ಸೇ ಏಕೆ ನೆನಪಾಗುತ್ತದೆ? ಒಂದೆರಡು ನಿಮಿಷಗಳ ಕಾಲ ಯೋಚಿಸಿ, ಮೋದಿ ಗೆಲುವಿನ ರಹಸ್ಯವೂ ಬಯಲಾಗುತ್ತದೆ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...