Monday, June 30, 2014

ಹಳೆಯ ಕಡತಗಳ ನಾಶಕ್ಕೆ ಮೋದಿ ಆದೇಶ;ಭಾರತದ ಇತಿಹಾಸದ ತುಣುಕುಗಳು ಶಾಶ್ವತವಾಗಿ ಮರೆಯಾಗಲಿವೆಯೇ?
ಮಹೇಶ್ ವಿಜಾಪುರ್‌ಕರ್

 

ಹಳೆಯ ಕಡತಗಳ ನಾಶಕ್ಕೆ ಮೋದಿ ಆದೇಶ;ಭಾರತದ ಇತಿಹಾಸದ ತುಣುಕುಗಳು ಶಾಶ್ವತವಾಗಿ ಮರೆಯಾಗಲಿವೆಯೇ?


ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರದ ವಿವಿಧ ಇಲಾಖೆಗಳು ತಮ್ಮಲ್ಲಿರುವ ಹಳೆಯ ಫೈಲ್‌ಗಳನ್ನು ನಾಶಪಡಿಸುವಂತೆ ಸೂಚಿಸಿದ್ದರು.ಕಡತಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯ ವೇಳೆ ದೊರೆತ ಫೈಲ್‌ಗಳು ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದೆ. ಭಾರತದ ಪ್ರಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಪಿಂಚಣಿಯನ್ನು ಹಾಗೂ ಪ್ರಧಾನಿ ಲಾಲ್‌ಬಹಾದೂರ್ ಶಾಸ್ತ್ರಿ ವೇತನವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಈ ಹಣವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗೆ ನೀಡಬೇಕೆಂದು ಇವರಿಬ್ಬರೂ ಬಯಸಿದ್ದರೆಂದು ಹಳೆಯ ಕಡತಗಳಲ್ಲಿ ದೊರೆತ ಮಾಹಿತಿಗಳು ಬಹಿರಂಗಪಡಿಸಿವೆ.

ಈ ಎರಡು ನಿದರ್ಶನಗಳು, ಈ ಎರಡು ರಾಜಕಾರಣಿ ಗಳ ಉದಾತ್ತ ಹಾಗೂ ಆದರ್ಶಮಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಗಳಾಗಿವೆ. ರಾಜಕಾರಣಿಗಳ ದುಡ್ಡಿನ ದಾಹವನ್ನೇ ಕಂಡು ಬೇಸತ್ತಿದ್ದ ದೇಶದ ಜನತೆಗೆ ಅವು ನೈತಿಕಬಲವನ್ನು ನೀಡುತ್ತದೆ.

ಲಾಲ್‌ಬಹಾದೂರ್ ಶಾಸ್ತ್ರಿ ರ್ವೆಲ್ವೇ ಸಚಿವರಾಗಿದ್ದಾಗ, ರೈಲು ಅವಘಡವೊಂದು ಸಂಭವಿಸಿದ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆಯು ಈಗಲೂ ದೇಶದ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ವೌಂಟ್ ಬ್ಯಾಟನ್, ತನ್ನ ತಾಯ್ನಾಡಾದ ಇಂಗ್ಲೆಂಡ್‌ಗೆ ವಾಪಾಸಾಗಲು 66 ಸಾವಿರ ರೂ.ಗಳನ್ನು ಭಾರತ ಸರಕಾರದ ಬೊಕ್ಕಸದಿಂದ ಪಡೆದುಕೊಂಡಿದ್ದರು.

 ಕಡತಗಳ ವಿಲೇವಾರಿಯ ಬಗ್ಗೆ ಇತ್ತೀಚೆಗೆ ಸುದೀರ್ಘ ವರದಿಯೊಂದನ್ನು ಪ್ರಕಟಿಸಿರುವ ಸುದ್ದಿಸಂಸ್ಥೆಯೊಂದು, ಹಳೆಯ ಫೈಲ್‌ಗಳಲ್ಲಿ ಹುದುಗಿಹೋಗಿರುವ ಇಂತಹ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಬೆಳಕಿಗೆ ತಂದಿದೆ. ದೇಶದ ಪ್ರಮುಖ ಸ್ಥಾನಗಳನ್ನು ಆಲಂಕರಿಸಿದ್ದವರ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲುವ ಇಂತಹ ನೂರಾರು ಆಸಕ್ತಿ ಪೂರ್ಣ ವಿಷಯಗಳು ಈ ಕಡತಗಳಲ್ಲಿವೆ.

 ಪಿಟಿಐ ಸುದ್ದಿಸಂಸ್ಥೆಯು ಪ್ರಸಾರ ಮಾಡಿರುವ ಈ ವರದಿಯಲ್ಲಿ, ಹಳೆಯ ಕಡತಗಳಲ್ಲಿರುವ ಇಂತಹ ಕುತೂಹಲಕಾರಿ ಮಾಹಿತಿ ಗಳು ಎಷ್ಟಿವೆಯೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗೆಯೇ ಸರಕಾರಿ ಇಲಾಖೆಗಳು ಯಾವ್ಯಾವ ಫೈಲ್‌ಗಳ ನಾಶಕ್ಕೆ ಹೊರಟಿವೆಯೆಂಬ ಬಗ್ಗೆಯೂ ಸ್ಪಷ್ಟ ವಿವರಗಳು ಲಭ್ಯವಿಲ್ಲ. ಐತಿಹಾಸಿಕ ವೌಲ್ಯವನ್ನು ಹೊಂದಿರುವ ಕಡತ ಗಳನ್ನು ಉಳಿಸಲಾಗುವುದೇ ಅಥವಾ ತ್ಯಜಿಸಲಾಗುವುದೇ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ತಮಗೆ ಈ ಬಗ್ಗೆ ಏನೂ ತಿಳಿಯದೆಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಗೃಹ ಸಚಿವಾಲಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬರೋಬ್ಬರಿ 1.5 ಲಕ್ಷದಷ್ಟು ಹಳೆಯ ಫೈಲ್‌ಗಳು ಹಾಗೂ ದಾಖಲೆಗಳ ದಾಸ್ತಾನಿದೆ. ಮಾನವಸಂಪನ್ಮೂಲ ಸಚಿವಾಲಯವು ಹಲವು ವರ್ಷಗಳಿಂದ ಧೂಳು ಹಿಡಿದಿರುವ 5 ಸಾವಿರ ಫೈಲ್‌ಗಳನ್ನು ನಾಶಪಡಿಸಲು ಸಿದ್ಧಮಾಡಿಟ್ಟಿದೆ.ಆದರೆ ಈ ಫೈಲ್‌ಗಳಲ್ಲಿರುವ ಮಾಹಿತಿಗಳನ್ನು ಮುಂಬರುವ ದಿನಗಳಲ್ಲಿ ಪರಿಶೀಲನೆಗಾಗಿ ಸಂಗ್ರಹಿಸಿಡುವ ಗೋಜಿಗೆ ಅದು ಹೋಗಿಲ್ಲ.
 
ಗೃಹ ಸಚಿವಾಲಯವು ದೇಶದ ಅತ್ಯಂತ ಮಹತ್ವದ ಹಾಗೂ ಸಂವೇದನಕಾರಿಯಾದ ಇಲಾಖೆಯಾಗಿದೆ ಆದರೆ ಈಗ ಅದು ಒಂದೇ ಏಟಿಗೆ 1.5 ಲಕ್ಷ ಫೈಲ್‌ಗಳ ನಾಶಕ್ಕೆ ಹೊರಟಿದೆ. ಹಲವಾರು ಐತಿಹಾಸಿಕ ಮಾಹಿತಿಗಳನ್ನು ಹೊಂದಿರುವ ಈ ಕಡತಗಳನ್ನು ನಿಷ್ಪ್ರಯೋಜಕವೆಂದು ರಾಶಿಹಾಕುವುದು ಕೂಡಾ ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೀಗೆ ಮಾಡಿದ್ದೇ ಆದಲ್ಲಿ, ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ನಿಭಾಯಿಸಿದ ಬಗ್ಗೆ ಸ್ಪಷ್ಟ ತಿಳುವಳಿಕೆ ದೊರೆಯಲು ಸಾಧ್ಯವಿಲ್ಲ. ಸರ್ದಾರ್‌ಪಟೇಲ್ ಅವಧಿಯಿಂದ ಹಿಡಿದು ಈವರೆಗೂ ಗೃಹ ಸಚಿವಾಲಯವು ಭಾರತದ ಅತ್ಯಂತ ಮಹತ್ವದ ಹಾಗೂ ನಿರ್ಣಾಯಕವಾದ ಇಲಾಖೆ ಯಾಗಿದೆ. ಈ ಫೈಲ್‌ಗಳನ್ನು ನಾಶ ಪಡಿಸುವಾಗ, ಅವುಗಳನ್ನು ಯಾವ ರೀತಿಯ ಪರಿಶೀಲನೆಗೊಳಪಡಿಸಲಾಗುತ್ತದೆಯೆಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಕಡತಗಳ ನಾಶಕ್ಕೆ ತಾವು ಬಳಸುವ ವಿಧಾನಗಳ ಬಗ್ಗೆಯೂ ಇದುವರೆಗೆ ಯಾವುದೇ ಸಚಿವಾಲಯವೂ ಬಾಯ್ಬಿಟ್ಟಿಲ್ಲ.

 ಸರಕಾರದ ಪುರಾತನ ದಾಖಲೆಗಳನ್ನು ಸಂಗ್ರಹಿಸಿಡುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಪತ್ರಾಗಾರ (ನ್ಯಾಶನಲ್ ಅರ್ಚಿವ್ಸ್)ದ ಸುಪರ್ದಿಗೆ ಈ ಹಳೆಯ ಫೈಲ್‌ಗಳನ್ನು ಹಸ್ತಾಂತರಿಸಲಾಗುವುದೇ ಎಂಬುದೂ ತಿಳಿದುಬಂದಿಲ್ಲ.

     1911ರಿಂದ ಕಾರ್ಯಾಚರಿಸು ತ್ತಿರುವ ರಾಷ್ಟ್ರೀಯ ಪತ್ರಾಗಾರದ ಬಳಿ ಸ್ವಾತಂತ್ರ ಪೂರ್ವದ ಹಾಗೂ ಆನಂತರದ ಹಲವಾರು ಮಹತ್ತರವಾದ ದಾಖಲೆಗಳಿವೆ. ಭವಿಷ್ಯದಲ್ಲಿ ಖಂಡಿತ ವಾಗಿಯೂ ಆಡಳಿತಗಾರರಿಗೆ ಹಾಗೂ ವಿದ್ವಾಂಸರಿಗೆ ಉಪಯೋಗ ವಾಗಬಲ್ಲ ಸ್ವಾತಂತ್ರ ಪೂರ್ವದ ಹಾಗೂ ಸ್ವಾತಂತ್ರಾನಂತರದ ಹಲವಾರು ದಾಖಲೆಗಳು ಅದರ ಸುಪರ್ದಿಯಲ್ಲಿವೆ.

ಸರಕಾರಿ ಕಚೇರಿ ಗಳಲ್ಲಿರುವ ಹಳೆಯ ಫೈಲ್‌ಗಳು ದಪ್ಪವಾದ ರಟ್ಟಿನ ಹೊದಿಕೆ ಹೊಂದಿದ್ದು, ಅದರಲ್ಲಿರುವ ದಾಖಲೆಪತ್ರಗಳನ್ನು ಎರಡು ರಂಧ್ರಗಳಲ್ಲಿ ತೂರಿಸಿದ ತೆಳ್ಳಗಿನ ಹಗ್ಗದ ಮೂಲಕ ಕಟ್ಟಿಹಾಕಲಾಗುತ್ತದೆ. ಈ ಫೈಲ್‌ಗಳಲ್ಲಿ ಟೈಪ್ ಮಾಡಿದ ಪತ್ರಗಳಲ್ಲದೆ, ಕೈಯಲ್ಲಿ ಬರೆದ ಟಿಪ್ಪಣಿಗಳಿದ್ದು, ಆಯಾ ದಿನಾಂಕಗಳನ್ನು ನಮೂದಿಸಲಾಗುತ್ತದೆ. ಯಾವುದೇ ವಿಷಯದ ಬಗ್ಗೆ ಕೈಗೊಂಡ ನಿರ್ಧಾರಗಳು, ಅದರಲ್ಲಾದ ಪ್ರಗತಿ ಇಲ್ಲವೇ ಅವನತಿ ಅಥವಾ ಅವುಗಳ ಉದ್ದೇಶ ಇತ್ಯಾದಿ ವಿವರಗಳು ಈ ಕಡತಗಳಲ್ಲಿ ಅಡಕವಾಗಿರುತ್ತವೆ.

ಇದರ ಜೊತೆಗೆ ಈ ಫೈಲ್‌ಗಳು ತಾವು ಯಾರ್ಯಾರ ಕೈಸೇರಿದ್ದವೆ ಯೆಂಬ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಫೈಲೊಂದು ಕಳೆದುಹೋದಲ್ಲಿ, ಆಡಳಿತ ಪ್ರಕ್ರಿಯೆಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಕಡತಗಳು ಸರಕಾರದ ಜೀವನಾಡಿಯಾಗಿವೆ. ಅಧಿಕಾರಿಗಳು ಹಾಗೂ ಸಚಿವರು ಬದಲಾಗಬಹುದು ಆದರೆ ಫೈಲ್‌ಗಳು, ಅವುಗಳನ್ನು ಕಪಾಟಿನಲ್ಲಿದ್ದರೂ ಅವು ಚಲನಶೀಲತೆಯಿಂದ ಕೂಡಿರುತ್ತವೆ. ಯಾವುದೇ ಒಂದು ಕಡತದಲ್ಲಿ ಧೂಳು ತುಂಬಿದ್ದಲ್ಲಿ, ಆ ಕಡತವು ಎಷ್ಟು ಸಮಯದಿಂದ ನಿಲುಗಡೆ ಗೊಂಡಿತ್ತೆಂಬುದರ ಸೂಚನೆಯಾಗಿದೆ. ಆದರೆ ಅದೊಂದು ಶಾಶ್ವತವಾದ ನಿಲುಗಡೆಯೂ ಆಗಿರಲು ಸಾಧ್ಯವಿದೆ. ಫೈಲೊಂದು ಪರಿಪೂರ್ಣವಾಗಿ ರೂಪುಗೊಳ್ಳಲು ಸುದೀರ್ಘ ಸಮಯವೇ ಬೇಕಾಗುತ್ತದೆ. ಕಲ್ಲಿನಿಂದ ಮನೆ ಯನ್ನು ಹಂತಹಂತವಾಗಿ ಕಟ್ಟುವಂತೆಯೇ, ಫೈಲೂ ಕೂಡ ಹಂತಹಂತವಾಗಿ ರೂಪುಪಡೆಯುತ್ತದೆ. ಒಂದು ಫೈಲ್‌ಗೆ ಅಂತಿಮವಾಗಿ ಅನುಮೋದನೆ ದೊರೆತಾಗಲೇ ಅದು ಪರಿಪೂರ್ಣತೆಯನ್ನು ಪಡೆಯುತ್ತದೆ.

 ಆದರೆ ಸರಕಾರಿ ಕಚೇರಿಗಳನ್ನು ‘ಶುಚೀಕರಣ’ಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದೇ ತಡ, ಈ ಬಡಪಾಯಿ ಹಳೆಯ ಫೈಲ್‌ಗಳನ್ನು ಹೊರಗೆಳೆದು ನಾಶಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆ.

 ವಿವಿಧ ಸರಕಾರಿ ಇಲಾಖೆಗಳ ಪೈಕಿ ಎಷ್ಟು ಇಲಾಖೆಗಳು ಯಾವ ಫೈಲ್‌ಗಳನ್ನು ನಿಷ್ಪ್ರಯೋಜಕವೆಂದು ಗುರುತಿಸಿ ಅವುಗಳನ್ನು ನಾಶಪಡಿಸಲು ಹೊರಟಿವೆಯೆಂಬುದು ಯಾರಿಗೂ ತಿಳಿದಿಲ್ಲ. ಮಳೆಗಾಲಕ್ಕೆ ಮುನ್ನ ನಿಷ್ಪ್ರಯೋಜಕ ವಸ್ತುಗಳನ್ನು ಹೊರಗೆ ಬಿಸಾಡಿ, ಮನೆಯನ್ನು ಸ್ವಚ್ಛಗೊಳಿಸುವ ಸಂಪ್ರದಾಯವಿದೆ. ಆದರೆ ಬೇಸಿಗೆಯಲ್ಲಿ ಮನೆಯನ್ನು ಸ್ವಚ್ಛ ಮಾಡಿದಂತೆ ಹಳೆಯ ಫೈಲ್‌ಗಳನ್ನು ಯಾವುದೇ ವಿವೇಚನೆಯಿಲ್ಲದೆ ನಾಶಪಡಿಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯೇ ಸರಿ.

ಈ ಘೋರ ವೌನದ ನಡುವೆ ಭರವಸೆಯ ದನಿ
ಸನತಕುಮಾರ ಬೆಳಗಲಿ


ಕೇಂದ್ರದಲ್ಲಿ ಸಂಘಪರಿವಾರದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಗತಿಪರ ವಲಯಗಳಲ್ಲಿ ಅಸಹನೀಯವಾದ ಘೋರ ವೌನವೊಂದು ಕವಿದಿದೆ. ಈ ವೌನವನ್ನೇ ಅಸಹಾಯಕತೆ ಅಂದುಕೊಂಡು ನಮೋ- ಗೋಡ್ಸೆ ಗ್ಯಾಂಗಿನ ಅಬ್ಬರ ತೀವ್ರಗೊಂಡಿದೆ. ಹಿರಿಯರಾದ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮತ್ತು ಡಾ.ಎಂ.ಎಂ. ಕಲಬುರ್ಗಿಯವರನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುವ ಯತ್ನ ನಡೆದಿದೆ. ಇವರ ಕಿರಿಕಿರಿಗೆ ಖ್ಯಾತ ಕಲಾವಿದ ಎಂ.ಎಫ್.ಹುಸೈನ್ ದೇಶವನ್ನೇ ತೊರೆದು ಹೋದರು. ಇಂಥ ಸನ್ನಿವೇಶದಲ್ಲಿ ಈ ಕರಾಳ ವೌನವನ್ನು ಭೇದಿಸುವ ಯತ್ನವೊಂದು ಕಳೆದ ವಾರ ಮೈಸೂರಿನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂಥ ಅವಕಾಶವೊಂದನ್ನು ಕಲ್ಪಿಸಿತ್ತು.

 ಈ ಅಸಹನೀಯ ವೌನದ ತಿಂಗಳ ನಂತರ ಮೈಸೂರಿನಲ್ಲಿ ನಡೆದ ಅಧ್ಯಯನ ಶಿಬಿರದ ಹತ್ತು ಗೋಷ್ಠಿಗಳಿಗೆ ನಾನು ಸಾಕ್ಷಿ ಯಾಗಿದ್ದೆ. ಎರಡರಲ್ಲಿ ಪಾಲ್ಗೊಂಡಿದ್ದೆ. ಡಾ.ಸಿದ್ದಲಿಂಗಯ್ಯ, ಇಂದಿರಾ ಕೃಷ್ಣಪ್ಪ, ಜನಾರ್ದನ (ಜನ್ನಿ), ಡಾ.ಎಸ್. ತುಕಾರಾಮ್, ಟಿ.ಎನ್.ಪ್ರಕಾಶ್ ಕಮ್ಮರಡಿ, ಪ್ರೊ.ಕೆ.ಎಸ್.ಭಗವಾನ್, ಅನುಸೂಯಾ ಕಾಂಬಳೆ, ಡಾ.ಮುಝಾಫರ್ ಅಸ್ಸಾದಿ, ಡಾ.ಕಾಳೆಗೌಡ ನಾಗವಾರ್, ಡಾ.ಹಿ.ಶಿ.ರಾಮಚಂದ್ರೇಗೌಡ, ಜಿ.ಕೆ.ಗೋವಿಂದ ರಾವ್ ಹೀಗೆ ನಾಡಿನ ಚಿಂತಕರೆಲ್ಲ ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಮಾತಾಡಿದರು.

ಸಾಹಿತಿಗಳು, ಚಿಂತಕರು ಮಾತ್ರವಲ್ಲ ಸಚಿವರಾದ ಎಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಸಂಸದ ಧ್ರುವನಾರಾಯಣ ಕೂಡ ಶಿಬಿರದಲ್ಲಿ ಪಾಲ್ಗೊಂಡು ಮಾತಾಡಿದರು. ದೇವನೂರು ಮಹಾದೇವ ಕೂಡ ಕೊನೆಯ ದಿನ ಬಂದು ಹೋದರು. ಶಿಬಿರದಲ್ಲಿ ಮಾತಾಡಿದ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನರೇಂದ್ರ ಮೋದಿ ಕೈಯಲ್ಲಿ ಸಿಲುಕಿದ ಭಾರತದ ಬಗ್ಗೆ ಆತಂಕದಿಂದಲೇ ತಮ್ಮ ಅನಿಸಿಕೆ ವ್ಯಕ್ತಪಡಿಸಿ ದರು. ಲಕ್ಷ್ಮೀನಾರಾಯಣ ನಾಗವಾರರಂತೂ ಪ್ರತೀ ಗೋಷ್ಠಿಯ ಆರಂಭದಲ್ಲೂ ಮೋದಿ ಅಪಾಯದ ಬಗ್ಗೆ ಎಚ್ಚರಿಸುತ್ತಿದ್ದರು.

ದಲಿತ, ಪ್ರಗತಿಪರ ಸಂಘಟನೆಗಳ ಒಡಕು ಕೋಮುವಾದಿ ಶಕ್ತಿಗಳ ಗೆಲುವಿಗೆ ಕಾರಣ. ನಾವು ಈಗ ಒಂದಾಗಬೇಕು ಎಂಬ ಕಳಕಳಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಲ್ಲೂ ಕಂಡು ಬಂತು. ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಪ್ರೊ.ಕೃಷ್ಣಪ್ಪ ಕಟ್ಟಿದ ದಲಿತ ಸಂಘರ್ಷ ಸಮಿತಿ ಮುಖ್ಯವಾಗಿ ಮೂರು ಬಣಗಳಾಗಿ ಒಡೆದಿದೆ. ಈ ಬಣಗಳೆಲ್ಲ ಒಂದುಗೂಡಬೇಕಿದೆ. ದೇವನೂರುರಂಥವರು ಮುಂದೆ ನಿಂತು ಈ ಬಣಗಳನ್ನು ಒಂದುಗೂಡಿಸಬೇಕಿದೆ ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀನಾರಾಯಣ ನಾಗವಾರ ಹೇಳಿದರು.

‘‘ದೇವನೂರು ಮಹಾದೇವ ಒಂದು ಗುಂಪಿಗೆ ಸೀಮಿತರಾಗದೆ ದಲಿತ ಚಳವಳಿಯನ್ನು ಒಗ್ಗೂಡಿಸಲು ಸಕ್ರಿಯವಾಗಿ ತೊಡಗಿಕೊಂಡರೆ ಹೆಗಲಿಗೆ ಹೆಗಲು ಕೊಡಲು ಸಿದ್ಧ’’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು. ‘‘ದಲಿತ ಸಂಘಟನೆಗಳು ಕೇವಲ ದಲಿತರ ದನಿಯಾಗಬಾರದು. ಎಲ್ಲ ಜಾತಿಗಳ ಬಡವರ ದನಿಯಾಗಬೇಕಾಗಿದೆ. ದಲಿತೇತರಲ್ಲೂ ಶೋಷಣೆ, ಅಸಮಾನತೆ ಇದೆ. ಅವರ ನೋವಿಗೆ ಸ್ಪಂದಿಸಬೇಕಾಗಿದೆ’’ ಎಂದು ಸಿದ್ದಲಿಂಗಯ್ಯ ಹೇಳಿದರು.

ಸಿದ್ದಲಿಂಗಯ್ಯ ಮಾತನಾಡಲು ನಿಂತರೆ ನಗುವಿನ ಹೊನಲು ಹರಿಯದೇ ಇರುವು ದಿಲ್ಲ. ತಮ್ಮ ಭಾಷಣದಲ್ಲಿ ಅವರು ನಾಯಿ, ಹಸುವಿನ ಕತೆಯೊಂದನ್ನು ಹೇಳಿದರು. ತಮಿಳುನಾಡಿನಲ್ಲಿ ದಲಿತರು ಗಂಡು ನಾಯಿಗಳನ್ನು ಸಾಕುವ ಹಾಗಿಲ್ಲ ಎನ್ನುವ ಕಟ್ಟುಪಾಡು ಈ ಹಿಂದೆ ಇತ್ತು. ಗಂಡು ನಾಯಿ ಇತರರ ಹೆಣ್ಣು ನಾಯಿಯೊಂದಿಗೆ ಮಿಲನವಾಗಿ ಮರಿ ಹುಟ್ಟಿದರೆ ಅದು ಅಸ್ಪಶ್ಯವಾಗುತ್ತದೆ ಎಂಬುದು ಸವರ್ಣೀಯರ ಜಾತಿಗ್ರಸ್ಥ ಮನಸ್ಸು ಯೋಚಿಸಿತ್ತು ಎಂದರು.

ಅದೇ ರೀತಿ ಹಸುವೊಂದನ್ನು ತಂದ ದಲಿತ ಯುವಕನೊಬ್ಬನಿಗೆ ಅರ್ಚಕನೊಬ್ಬ ಸಿಕ್ಕು ದೇವರ ಹೆಸರಿನಲ್ಲಿ ಆತನ ತಲೆ ಕೆಡಿಸಿದ. ಹಸುವಿನ ಮುಂಭಾಗ ನಿನ್ನದು, ಹಿಂಭಾಗ ನನ್ನದು ಎನ್ನುವುದು ಅರ್ಚಕನ ಸಲಹೆ ಯಾಗಿತ್ತು. ದಲಿತ ಯುವಕ ಅದನ್ನು ಒಪ್ಪಿಕೊಂಡ. ಮುಂಭಾಗದ ಹಕ್ಕು ಹೊಂದಿದ ದಲಿತ ಯುವಕ ನಿತ್ಯವೂ ಹಸುವಿಗೆ ಆಹಾರ ನೀಡುತ್ತಿದ್ದ. ಆದರೆ ಹಾಲು ಪಡೆಯುವ ಹಕ್ಕು ಮಾತ್ರ ಹಿಂಭಾಗದ ಒಡೆತನ ಹೊಂದಿದ ಅರ್ಚಕನದು. ಹೀಗಿರುವಾಗ ಪ್ರಜ್ಞಾವಂತ ನೊಬ್ಬ ಹಳ್ಳಿಯ ದಲಿತ ಯುವಕನ ಬಳಿ ಬಂದು ಮುಂಭಾಗಕ್ಕೆ ಹೊಡೆಯುವಂತೆ ಸಲಹೆಕೊಟ್ಟ. ಅದರಂತೆ ದಲಿತ ಯುವಕ ಹಸುವಿನ ಮುಂಭಾಗಕ್ಕೆ ಹೊಡೆದಾಗ ಹಾಲು ಹಿಂಡಬೇಕಾದ ಹಸು ಅರ್ಚಕನ ಮುಖಕ್ಕೆ ಒಡೆಯಿತು’ ಎಂದು ಸಿದ್ದಲಿಂಗಯ್ಯ ಹೇಳಿ ಎಲ್ಲರನ್ನು ನಗಿಸಿದರು. ಕೊನೆಗೆ ಇಡಿ ಹಸುವನ್ನೇ ದಲಿತ ಯುವಕನಿಗೆ ಅರ್ಚಕ ಬಿಟ್ಟು ಕೊಟ್ಟನಂತೆ. ಇದು ತಮಾಷೆಯಾಗಿದ್ದರೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ವಿರೂಪಕ್ಕೆ ಉದಾಹರಣೆಯಾಗಿದೆ.

ಈ ಅಧ್ಯಯನ ಶಿಬಿರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತು ಕೇಳಿ ಅಚ್ಚರಿಗೊಂಡೆ. ಮೂಢನಂಬಿಕೆ, ಕಂದಾಚಾರಗಳನ್ನು ಕೈಬಿಡಬೇಕೆಂದು ಕರೆ ನೀಡಿದ ಜಾರಕಿಹೊಳಿ, ಟಿವಿಗಳಲ್ಲಿ ಮುಂಜಾನೆ ಪ್ರಸಾರವಾಗುವ ‘ಜ್ಯೋತಿಷ್ಯ, ವಾಸ್ತು ಕಾರ್ಯಕ್ರಮ ನೋಡ ಬೇಡಿ. ಅಂಬೇಡ್ಕರ ಹೆಸರು ಹೇಳುವ ನೀವು (ದಲಿತ ಅಧಿಕಾರಿಗಳು) ನಿಮ್ಮ ಮನೆ ಗೃಹ ಪ್ರವೇಶ ಮಾಡುವಾಗ ಸತ್ಯನಾರಾಯಣ ಪೂಜೆಯನ್ನು ಏಕೆ ಮಾಡಿಸುತ್ತೀರಿ? ಪುರೋಹಿತ ರಿಗೆ ಯಾಕೆ ದಕ್ಷಿಣೆ ನೀಡುತ್ತೀರಿ’’ ಎಂದು ಪ್ರಶ್ನಿಸಿದರು. ನಮ್ಮ ಉತ್ತರ ಕರ್ನಾಟಕದ ನನ್ನ ಪಕ್ಕದ ಗೋಕಾಕ ತಾಲೂಕಿನ ಸತೀಶ್ ಜಾರಕಿಹೊಳಿ ಅವರ ಮಾತು ಕೇಳುವ ಮುನ್ನ ಅವರ ಬಗ್ಗೆ ನನ್ನ ಅಭಿಪ್ರಾಯ ಬೇರೆ ಆಗಿತ್ತು. ಆದರೆ ಡಿಎಸ್‌ಎಸ್ ಶಿಬಿರದಲ್ಲಿ ಅವರ ಮಾತುಗಳನ್ನು ಕೇಳಿದಾಗ ನನಗೆ ಎಪ್ಪತ್ತರ ದಶಕದ ಬಸವಲಿಂಗಪ್ಪನವರ ನೆನಪಾಯಿತು. ರಾಜಕೀಯದಲ್ಲಿ ಇಂಥವರು ಬೆಳೆದು ಬಂದರೆ ಪುರೋಹಿತಶಾಹಿ, ಕೋಮು ವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬಹುದು.

 ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ಹಳೆ ಮುಖಗಳ ಜೊತೆ ಮೂವತ್ತರೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ 300 ಕಾರ್ಯಕರ್ತರು ಬಂದಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಪ್ರತಿವರ್ಷ ಇಂಥ ಶಿಬಿರಗಳನ್ನು ಅತ್ಯಂತ ವ್ಯವಸ್ಥಿವಾಗಿ ಏರ್ಪಡಿಸುತ್ತಾರೆ. ನಾನು ಈ ಹಿಂದೆ ಬಾಗಲಕೋಟೆ ಬಳಿ ಚಿಕ್ಕಸಂಗಮ ಶಿಬಿರದಲ್ಲೂ ಪಾಲ್ಗೊಂಡಿದ್ದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಯಾವುದೇ ಕಾರ್ಯಕ್ರಮ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಪ್ರತಿ ವರ್ಷ ತಮ್ಮ ಕಾರ್ಯಕರ್ತರಿಗಾಗಿ ಅವರು ನಡೆಸುವ ಅಧ್ಯಯನ ಶಿಬಿರ ಉಳಿದವರಿಗೆ ಮಾದರಿಯಾಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡ ಕಾರ್ಯಕರ್ತರ ಶಿಸ್ತು, ಆಸಕ್ತಿ, ಕುತೂಹಲಗಳು ಸಾಮಾಜಿಕ ಬದಲಾವಣೆಯಲ್ಲಿ ನಂಬಿಕೆ ಇರಿಸಿದವರಲ್ಲಿ ಹೆಮ್ಮೆಯನ್ನುಂಟು ಮಾಡುತ್ತವೆ. ಶಿಬಿರ ನಡೆದ ಮೂರು ದಿನ ಕಾರ್ಯಕರ್ತರು ಮುಂಜಾನೆ 9ಕ್ಕೆ ಸಭಾಂಗಣಕ್ಕೆ ಬಂದರೆ ಮುಗಿಯಿತು. ಮಧ್ಯಾಹ್ನ ಊಟಕ್ಕೆ ಅಷ್ಟು ಗಮನ ಕೊಡುವುದಿಲ್ಲ. ಶಿಬಿರ ಮುಗಿಯುವುದು ರಾತ್ರಿ 11 ಗಂಟೆಗೆ. ನಂತರ ಊಟ, ನಿದ್ರೆ.

ಪ್ರಗತಿಪರ ಸಂಘಟನೆಗಳು ಇಂಥ ಶಿಬಿರ ಗಳನ್ನು ನಡೆಸಿ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳ ಸವಾಲಿಗೆ ಜವಾಬು ನೀಡಬೇಕಾಗಿದೆ. ಯುವಕರೇ ಈ ದೇಶದ ಭವಿಷ್ಯ, ಅವರೇ ಈ ದೇಶವನ್ನು ಮುನ್ನಡೆಸಬೇಕಾಗಿದೆ. ಎಲ್ಲ ಪ್ರಗತಿಪರ ಸಂಘಟನೆಗಳು ಈ ದಿಕ್ಕಿನತ್ತ ಯೋಚಿಸ ಬೇಕಾಗಿದೆ.

Saturday, June 28, 2014

ಭಾರತದ ಮರೆತು ಹೋಗಿರುವ ನರಮೇಧ!; 1943-44ರ ಬಂಗಾಳ ಬರಗಾಲಕ್ಕೆ ಸುಮಾರು 40ಲಕ್ಷ ಜನರನ್ನು ಬಲಿನೀಡಿದ್ದ ಬ್ರಿಟಿಶ್ ನೀತಿ
ಭಾರತದ ಮರೆತು ಹೋಗಿರುವ ನರಮೇಧ!; 1943-44ರ ಬಂಗಾಳ ಬರಗಾಲಕ್ಕೆ ಸುಮಾರು 40ಲಕ್ಷ ಜನರನ್ನು ಬಲಿನೀಡಿದ್ದ ಬ್ರಿಟಿಶ್ ನೀತಿ

- ಆರ್. ಕೆ. ಸಿಂಹ

ಕಳೆದ 1943-44ರ ಬಂಗಾಳದ ಬರಗಾಲವನ್ನು 20 ನೇ ಶತಮಾನದ ಉಪಖಂಡದ ಅತಿಘೋರ ಮಾರಣ ಹೋಮವೆಂದು ವರ್ಗೀಕರಿಸಲೇ ಬೇಕು. ಬ್ರಿಟಿಶ್ ಸರಕಾರ ಸೃಷ್ಟಿಸಿದ ಕೃತಕ ಬರಗಾಲದಿಂದಾಗಿ ಸುಮಾರು 40ಲಕ್ಷ ಭಾರತೀಯರು ಮರಣ ಹೊಂದಿದ್ದಾರೆ. ಆದರೆ, ಇದು ಭಾರತೀಯ ಚರಿತ್ರೆಯಲ್ಲಿ ಮುಂದು ವರಿಕೆಯ ಹೇಳಿಕೆಗಿಂತ ಸ್ವಲ್ಪ ಹೆಚ್ಚು ಸ್ಥಾನ ಪಡೆದಿದೆಯಷ್ಟೆ !.

ಈ ವಿನಾಶದ ಸಮಯ ವಿಸ್ತಾರವು ಅದರ ಪ್ರಮಾಣದ ಗಮನೀಯ ಅಂಶ ವಾಗಿದೆ. ಎರಡನೆ ವಿಶ್ವ ಯುದ್ಧವು ತುರೀಯಾವಸ್ಥೆಯಲ್ಲಿತ್ತು. ಜರ್ಮನ್ನರು ಯಹೂದ್ಯರು, ಸ್ಲಾವ್‌ಗಳು ಹಾಗೂ ರೋಮ್‌ಗಳನ್ನು ಗುರಿಯಾಗಿಸಿ ಅವರ ಹುಟ್ಟಡಗಿಸುವುದಕ್ಕಾಗಿ ಯೂರೋಪಿ ನಾದ್ಯಂತ ದಾಂಧಲೆ ನಡೆಸುತ್ತಿದ್ದರು. ಅಡೋಲ್ಫ್ ಹಿಟ್ಲರ್ ಹಾಗೂ ಆತನ ನಾಝಿ ಪಡೆಗಳಿಗೆ 60 ಲಕ್ಷ ಯಹೂದ್ಯರನ್ನು ಸುತ್ತು ವರಿದು ಕೊಲ್ಲಲು 12 ವರ್ಷಗಳು ಬೇಕಾದವು. ಆದರೆ ಅವರ ಟಿಟಾನಿಕ್ ಸೋದರ ಸಂಬಂಧಿಗಳಾದ ಬ್ರಿಟಿಷರು ಸುಮಾರು 40 ಲಕ್ಷ ಭಾರತೀಯರನ್ನು ಕೇವಲ ಒಂದೇ ವರ್ಷದೊಳಗೆ ಮುಗಿಸಿದಾಗ ಪ್ರ್ರಧಾನಿ ವಿನ್ಸೆಂಟ್ ಚರ್ಚಿಲ್ ನೇಪಥ್ಯದಲ್ಲಿ ಸಂತೋಷಪಟ್ಟಿದ್ದರು.


 ಚರ್ಚಿಲ್‌ರ ನೀತಿಗಳು ಈಮಾರಣ ಹೋಮಕ್ಕೆ ನೇರ ಹೊಣೆಯಾಗಿದ್ದವು. ಆದುದರಿಂದ ಬಂಗಾಳದ ಕ್ಷಾಮವನ್ನು ಆಸ್ಟ್ರೇಲಿಯಾದಂತಹ ಜೀವ ರಸಾಯನ ತಜ್ಞ ಡಾ.ಗಿಡಿಯಸ್ ಪೊಲ್ಯ ‘ಮನುಷ್ಯಕೃತ ಮಾರಣಹೋಮ’ ಎಂದು ಕರೆದರು. ಬಂಗಾಳದಲ್ಲಿ 1942ರಲ್ಲಿ ಉತ್ತಮ ಬೆಳೆೆಯಾಗಿತ್ತು. ಆದರೆ ಬ್ರಿಟಿಷರು ಅಪಾರ ಪ್ರಮಾಣದ ಆಹಾರ ಧಾನ್ಯಗಳನ್ನು ಭಾರತದಿಂದ ಬ್ರಿಟನ್‌ಗೆ ಸಾಗಿಸಿ ದರು. ಇದರಿಂದಾಗಿ, ಈಗಿನ ಪಶ್ಚಿಮ ಬಂಗಾಳ, ಒಡಿಸ್ಸಾ ಬಿಹಾರ ಹಾಗೂ ಬಾಂಗ್ಲಾ ದೇಶಗಳೊನ್ನೊಳಗೊಂಡ ಈ ಪ್ರೆದೇಶದಲ್ಲಿ ಭಾರಿ ಪ್ರಮಾಣದ ಆಹಾರದ ಕೊರತೆ ಉಂಟಾಗಿತ್ತು.


    ಲೇಖಕಿ ಮಧುಶ್ರೀ ಮುಖರ್ಜಿ ಕ್ಷಾಮದಿಂದ ಬದು ಕುಳಿದ ಕೆಲವರನ್ನು ಪತ್ತೆ ಹಚ್ಚಿ, ಹಸಿವೆ ಹಾಗೂ ವಿನಾಶದ ಮೈ ನಡುಗಿಸುವ ಚಿತ್ರ ನೀಡಿದ್ದಾರೆ. ಚರ್ಚಿಲ್‌ರ ಗುಪ್ತ ಯುದ್ಧದಲ್ಲಿ, ‘ಹೆತ್ತವರು ತಮ್ಮ ಹಸಿದ ಮಕ್ಕಳನ್ನು ಹೊಳೆ ಹಾಗೂ ಬಾವಿಗೆಸೆದರು. ಅನೇಕರು ರೈಲುಗಳ ಅದಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡರು. ಹಸಿದ ಜನರು ಅಕ್ಕಿ ಬೇಯಿಸಿದ ಗಂಜಿ ತೆಳಿಗಾಗಿ ಬೇಡುತ್ತಿದ್ದರು. ಮಕ್ಕಳು ಎಲೆ, ದ್ರಾಕ್ಷಿ ಬಳ್ಳಿ ಗೆಣಸಿನಕಾಂಡ ಹಾಗೂ ಹುಲ್ಲು ತಿನ್ನುತ್ತಿದ್ದರು. ಜನರು ತಮ್ಮ ಪ್ರೀತಿಪಾತ್ರರ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗದಷ್ಟು ದುರ್ಬಲರಾಗಿದ್ದರು, ಎಂದು ಅವರು ವಿವರಿಸಿದ್ದಾರೆ.
 
  ಯಾರೊಬ್ಬರಿಗೂ ಉತ್ತರಕ್ರಿಯೆ ನಡೆಸುವಷ್ಟು ಬಲವಿರಲಿಲ್ಲ. ಬಂಗಾಳದ ಗ್ರಾಮಗಳಲ್ಲಿ ಶವಗಳ ರಾಶಿಗಳಲ್ಲಿ ನಾಯಿ ನರಿಗಳು ಹಬ್ಬ ನಡೆಸುತ್ತಿದ್ದವು ಎಂದು ಬದುಕುಳಿದವರಲ್ಲಿ ಒಬ್ಬಾತ ಮುಖರ್ಜಿಯವರಿಗೆ ತಿಳಿಸಿ ದ್ದಾನೆ. ಕೆಲಸಕ್ಕಾಗಿ ಕಲ್ಕತ್ತಾಕ್ಕೆ ವಲಸೆ ಹೋಗಿದ್ದವರು ಹಾಗೂ ತಮ್ಮ ಕುಟುಂಬದ ತುತ್ತಿನ ಚೀಲ ತುಂಬಿಸಲು ಮೈಮಾರಾ ಟಕ್ಕೆ ಇಳಿದಿದ್ದ ಹೆಂಗಸರು ಮಾತ್ರ ಬದುಕುಳಿದಿದ್ದರು. ಐಐಟಿಗಳಿಂದ ಮೊದಲ ಪಿ ಹೆಚ್‌ಡಿ ಗಳಿಸಿದ ಹಾಗೂ ತನ್ನ ಎಕ್ಸೈಮರ್ ಸರ್ಜರಿಯ ಮೂಲಕ ಲಾಸಿಕ್ ಕಣ್ಣು ಶಸ್ತ್ರಚಿಕಿತ್ಸೆಗೆ ಸಾಧ್ಯವಾಗಲು ಕಾರಣರಾದ ಮಣಿ ಭೌಮಿಕ್‌ರ ನೆನೆಪಿನಂಗಳದಲ್ಲಿ ಬರಗಾಲದ ಚಿತ್ರವಿದೆ. ಅವರ ಅಜ್ಜಿ ತನ್ನ ಪಾಲಿನ ಆಹಾರದಲ್ಲಿ ಒಂದು ಪಾಲನ್ನು ಭೌಮಿಕ್‌ಗೆ ನೀಡುವ ಮೂಲಕ ತಾನು ಹಸಿವಿನಿಂದಲೆ ಮೃತರಾದರು. 1943ರೊಳಗೆ ಹಸಿದ ಜನರು ತಂಡೋಪ ತಂಡವಾಗಿ ಕಲ್ಕತ್ತಾಗೆ ವಲಸೆ ಹೋದರು. ಹೆಚ್ಚಿನವರು ರಸ್ತೆ ಗಳಲ್ಲಿ ಬಿದ್ದು ಸತ್ತರು. ಈ ಸುಜ್ಞಾನದ ನೆಲದಲ್ಲಿ ತಿಂದುಂಡು ಕೊಬ್ಬಿದ್ದ ಬಿಳಿಯ ಬ್ರಿಟಿಶ್ ಸೈನಿಕರ ನೋಟವು ‘‘ಭಾರತ ದಲ್ಲಿ ಬ್ರಿಟಿಷ್ ಆಡಳಿತದ ಕುರಿತಾದ ಅಂತಿಮ ತೀರ್ಪಾ ಗಿತ್ತು.’’ಎಂದು ಜವಹರಲಾಲ್ ನೆಹರು ಹೇಳಿದ್ದರು.


 ಚರ್ಚಿಲರಿಗೆ ಈ ಬರಗಾಲವನ್ನು ಸುಲಭವಾಗಿ ತಡೆಯುವುದು ಸಾದ್ಯವಿತ್ತು. ಕೆಲವೆ ಕೆಲವು ಹೇರು ಆಹಾರ ಧಾನ್ಯಗಳು ಇದಕ್ಕೆ ಸಾಕಿತ್ತು. ಆದರೆ ಬ್ರಿಟಿಷ್ ಪ್ರಧಾನಿ, ತನ್ನದೇ ಇಬ್ಬರು ವೈಸರಾಯ್‌ಗಳು ಭಾರತಕ್ಕಾಗಿ ಅವರದೇ ರಾಜ್ಯಾಂಗ ಕಾರ್ಯದರ್ಶಿ, ಅಷ್ಟೇ ಏಕೆ ಅಮೆರಿಕಾದ ಅಧ್ಯಕ್ಷರ ಮನವಿಗಳನ್ನು ಅವರು ನಿಷ್ಠುರವಾಗಿ ತಳ್ಳಿ ಹಾಕಿದ್ದರು. ಅಕ್ವಿಸ್ ಸೇನೆಗಳ ಪರ ಆಗ ಹೋರಾಡುತ್ತಿದ್ದ ಸುಭಾಶ್ಚಂದ್ರ ಬೋಸರು ಮ್ಯಾನ್ಮಾರ್‌ನಿಂದ ಅಕ್ಕಿ ಕಳುಹಿಸುವ ಕೊಡುಗೆ ಮುಂದಿಟ್ಟರು. ಆದರೆ ಬ್ರಿಟಿಷರು ಅವರ ಈ ಕೊಡುಗೆ ಜನರಿಗೆ ವರದಿಯಾಗುವುದಕ್ಕೂ ಅವಕಾಶ ನೀಡಲಿಲ್ಲ .


ಚರ್ಚಿಲ್, ಆಹಾರ ಧಾನ್ಯಗಳನ್ನು ಬ್ರಿಟಿಶ್ ಸೇನೆಗೆ ಹಾಗೂ ಗ್ರೀಕ್ ನಾಗರಿಕರಿಗೆ ದಿಕ್ಚುತಿಗೊಳಿಸುವಲ್ಲಿ ಎಳ್ಳಷ್ಟೂ ಪಶ್ಚಾತ್ತಾಪ ಪಡಲಿಲ್ಲ. ಅವರಿಗೆ, ‘ಹೇಗಿದ್ದರೂ ಅರೆ ಹೊಟ್ಟೆ ಉಣ್ಣುವ ಬಂಗಾಲಿಗಳ ಹಸಿವು’ ಬಲಿಷ್ಠ ಮೈಕಟ್ಟಿನ ಗ್ರೀಕರಿಗಿಂತ ಕಡಿಮೆ ಗಂಭೀರ ವಿಚಾರವಾಗಿತ್ತು. ಈ ಹೇಳಿಕೆಗೆ ಭಾರತ ಹಾಗೂ ಬರ್ಮಾಗಳಿಗೆ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಲಿಯೋಪೋಲ್ಡ್ ಅಮೆರಿ ಸಹಮತ ವ್ಯಕ್ತಪಡಿಸಿದ್ದರು. ಅಮೆರಿಕ ಕಟ್ಟಾ ವಸಾಹತುಶಾಹಿಯಾಗಿದ್ದರೂ, ಚರ್ಚಿಲ ರ ‘ಹಿಟ್ಲರನಂತಹ ನಡವಳಿಕೆ’ಯನ್ನು ಖಂಡಿಸಿದ್ದರು.


ಭಾರತಕ್ಕೆ ಆಹಾರ ದಾಸ್ತಾನು ಬಿಡುಗಡೆ ಮಾಡುವಂತೆ ಅಮೆರಿ ಹಾಗೂ ಆಗಿನ ವೈಸರಾಯ್ ಆರ್ಚಿಬಾಲ್ಡ್ ವವೆಲ್ ಮಾಡಿದ್ದ ತುರ್ತು ಮನವಿಗೆ ಟೆಲಿಗ್ರಾಂ ಮೂಲಕ ಉತ್ತರಿಸಿದ್ದ ಚರ್ಚಿಲ್, ‘‘ಗಾಂಧಿ ಇನ್ನೂ ಏಕೆ ಸತ್ತಿಲ್ಲ’’ ಎಂದು ಕೇಳಿದ್ದರು.
ಬ್ರಿಟಿಶ್ ಆಡಳಿತದ ಅಡಿಯಲ್ಲಿರುವ ಯಾವನೇ ವ್ಯಕ್ತಿಗೆ ಈ ಬರಗಾಲವು ಅತ್ಯಂತ ವಿನಾಶಕಾರಿಯಾಗಿದೆಯೆಂದು ವವೆಲ್ ಲಂಡನ್‌ಗೆ ಮಾಹಿತಿ ನೀಡಿದ್ದರು. ಹಾಲೆಂಡ್ ಆಹಾರ ಧಾನ್ಯ ಬಯಸಿದಾಗ ಹಡಗುಗಳು ಲಭ್ಯವಾಗು ತ್ತದೆ. ಆದರೆ, ಭಾರತಕ್ಕೆ ಹಡಗುಗಳಲ್ಲಿ ಆಹಾರ ಧಾನ್ಯ ಕಳಹಿಸುವಂತೆ ಕೇಳಿದಾಗಲೆಲ್ಲ ತಮಗೆ ಬೇರೆಯೇ ಉತ್ತರ ನೀಡಲಾಗುತ್ತದೆಂದು ಅವರು ಹೇಳಿದ್ದರು.

ತುರ್ತು ಪೂರೈಕೆಗೆ ಬ್ರಿಟನ್‌ನ ಬಳಿ ಹಡಗುಗಳಿರಲಿಲ್ಲ ಎಂಬುದು ಈಗ ಚರ್ಚಿಲರ ಕುಟುಂಬ ಹಾಗೂ ಮಿತ್ರರು ಹುಟ್ಟು ಹಾಕಿರುವ ಚರ್ಚಿಲರ ಪರವಾದ ಕಾರಣವಾಗಿದೆ. ಆದರೆ, ಮುಖರ್ಜಿ, ಅವರ ಪ್ರತಿಪಾದನೆಯನ್ನು ಪ್ರಶ್ನಿಸುವ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಆಸ್ಟ್ರೇಲಿಯದಿಂದ ಆಹಾರ ಧಾನ್ಯಗಳನ್ನು ಹೊತ್ತು ತಂದ ಹಡಗುಗಳು ಭಾರತವನ್ನು ದಾಟಿ ಮೆಡಿಟರೇನಿಯನ್ ಕಡೆಗೆ ಹೋಗಿವೆ ಎಂಬ ಅಧಿಕೃತ ದಾಖಲೆಯನ್ನು ಅವರು ಉಲ್ಲೇಖಿಸಿದ್ದಾರೆ.

ಭಾರತದ ಕುರಿತು ಚರ್ಚಿಲರ ವಿರೋಧ ಬಹಳ ಹಿಂದೆಯೇ ದಾಖಲಾಗಿದೆ. ಯುದ್ಧ ಸಂಬಂಧಿ ಸಂಪುಟ ಸಭೆಯೊಂದರಲ್ಲಿ ಅವರು, ಬರಗಾಲಕ್ಕೆ ಸ್ವತಃ ಭಾರತೀಯ ರೇ ಕಾರಣವೆಂದು ಆರೋಪಿಸಿದ್ದರು. ಭಾರತೀಯರು ‘‘ಮೊಲಗಳಂತೆ ಸಂತಾನೋತ್ಪತ್ತಿ ಮಾಡುತ್ತಿದ್ದಾರೆಂದು’’ ಚರ್ಚಿಲ್ ಹೀಯಾಳಿಸಿದ್ದರು. ಭಾರತೀಯರ ಕುರಿತಾದ ಅವರ ಅನಿಸಿಕೆಯನ್ನು ಚರ್ಚಿಲ್, ಅಮೆರಿಗೆ ಹೇಳಿದ್ದ ಮಾತುಗಳಿಂದ ತಿಳಿಯಬಹುದು. ‘‘ನಾನು ಭಾರತೀಯರನ್ನು ದ್ವೇಷಿಸು ತ್ತೇನೆ. ಅವರು ಪ್ರಾಣಿಗಳಂತಹ ಧರ್ಮ ಹೊಂದಿರುವ ಪ್ರಾಣಿ ಗಳಂತಹ ಜನರು’’ ಎಂದವರು ಹೇಳಿದ್ದರು.

ಇನ್ನೊಂದು ಸಂದರ್ಭದಲ್ಲಿ ಚರ್ಚಿಲ್, ‘‘ಅವರು ಜರ್ಮನರ ನಂತರ ಪ್ರಪಂಚದಲ್ಲೇ ಪ್ರಾಣಿ ಗಳಂತಹ ಜನರು’’ ಎಂದು ಟೀಕಿಸಿ ದ್ದರು.ಭಾರತದ ಕುರಿತು ಚರ್ಚಿಲರ ನಡವಳಿಕೆ ತೀರಾ ಅತಿಯಾದುದು. ಅವರು ಭಾರತೀಯರನ್ನು ದ್ವೇಷಿಸುತ್ತಿ ದ್ದರು. ಭಾರತವನ್ನು ದೀರ್ಘ ಕಾಲ ವಶದಲ್ಲಿಟ್ಟುಕೊಳ್ಳುವುದು ಸಾಧ್ಯವಿಲ್ಲ ವೆಂದು ಅವರು ತಿಳಿದಿದ್ದುದೇ ಇದಕ್ಕೆ ಮುಖ್ಯ ಕಾರಣವಾಗಿತ್ತು ಎಂದು ಮುಖರ್ಜಿ ಬರೆದಿದ್ದಾರೆ. ಗೋದಿಯು ಬಿಳಿಯರ ಹೊರತಾಗಿ ಇತರರಿಗೆ ಖರ್ಚು ಮಾಡಲಾಗದಷ್ಟು ಅಮೂಲ್ಯ ಆಹಾರವಾಗಿದೆ. ಬ್ರಿಟಿಶ್ ಸಾಮ್ರಾಜ್ಯದಿಂದ ಸ್ವಾತಂತ್ರವನ್ನು ಕೇಳುತ್ತಿರುವ ಅವಿಧೇ ಯ ಪ್ರಜೆಗಳಿಗೆ ಅದನ್ನು ತನ್ನಿಸುವುದುಂಟೇ? ಎಂದು ಚರ್ಚಿಲ್ ಭಾವಿಸಿದ್ದರೆಂದು ಅವರು ‘ಹಫಿಂಗ್ಟನ್ ಪೋಸ್ಟ್’ನಲ್ಲಿ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ. ಯುದ್ಧ ಮುಗಿದ ಬಳಿಕ ಯುರೋಪಿಯನ್ನರಿಗೆ ತಿನ್ನುವು ದಕ್ಕಾಗಿ ಆಹಾರ ಧಾನ್ಯ ರಾಶಿ ಹಾಕುವುದನ್ನು ಚರ್ಚಿಲ್ ಬಯಸಿದ್ದರು.

  1943ರ ಅಕ್ಟೋಬರ್‌ನಲ್ಲಿ ಕ್ಷಾಮವು ತುರೀಯಾವಸ್ಥೆ ಯಲ್ಲಿದ್ದಾಗ, ವವೆಲ್‌ರ ನೇಮಕಾತಿಯ ಅಂಗವಾಗಿ ನಡೆದಿದ್ದ ಅದ್ದೂರಿಯ ಭೋಜನಕೂಟವೊಂದರಲ್ಲಿ ಚರ್ಚಿಲ್, ‘‘ನಾವು ಗತ ವರ್ಷಗಳನ್ನು ಮರಳಿ ನೋಡಿ ದಾಗ, ಮೂರು ತಲೆಮಾರುಗಳಲ್ಲಿ ಯುದ್ಧವೇ ನಡೆಯದ ಪ್ರಪಂಚದ ಒಂದು ಭಾಗವನ್ನು ನೋಡುತ್ತಿದ್ದೇವೆ. ಯುದ್ಧದ ಭೀಕರತೆ ಹಾಗೂ ಯುದ್ಧದಿಂದಾದ ಸ್ಥಳಾಂತರಗಳು ನಮಗೆ ಅವುಗಳ ರುಚಿಯನ್ನು ಮತ್ತೆ ನೀಡುವಷ್ಟರವರೆಗೆ ಬರಗಾಲಗಳು ದೂರ ಹೋಗಿವೆ ಹಾಗೂ ಸಾಂಕ್ರಾಮಿಕ ರೋಗಗಳು ದೂರ ಹೋಗಿವೆ. ಕಾಲ ಕಳೆದಂತೆ ಬ್ರಿಟಿಶರು ಅವರಿಗೆ ಶಾಂತಿ ಹಾಗೂ ಶಿಸ್ತನ್ನು ನೀಡಿದಾಗ ಹಾಗೂ ಬಡವರಿಗೆ ನ್ಯಾಯ ದೊರೆತಾಗ ಹಾಗೂ ಎಲ್ಲ ಜನರು ಬಾಹ್ಯ ಅಪಾಯಗಳಿಂದ ರಕ್ಷಣೆ ಪಡೆದಾಗ, ಭಾರತದ ಚರಿತ್ರೆಯಲ್ಲಿ ಈ ಅಧ್ಯಾಯವು ಖಂಡಿತವಾಗಿ ಸುವರ್ಣಯುಗವಾಗುವುದು’’ ಎಂದಿದ್ದರು.
ಚರ್ಚಿಲ್ ಕೇವಲ ಜನಾಂಗೀಯವಾದಿಯಾಗಿ ರದೆ ಸುಳ್ಳುಗಾರನೂ ಆಗಿದ್ದರು.


ಮಾರಣ ಹೋಮಗಳ ಚರಿತ್ರೆ
 
ಸತ್ಯ ಹೇಳುವುದಾದರೆ, ಬರಗಾಲ ಪೀಡಿತ ಬಂಗಾಳದ ಕುರಿತು ಚರ್ಚಿಲರ ನೀತಿ, ಭಾರತದಲ್ಲಿ ಈ ಮೊದಲ ಬ್ರಿಟಿಶ್ ನಡವಳಿಕೆಗಿಂತ ಯಾವುದೇ ರೀತಿ ಭಿನ್ನವಾಗಿರಲಿಲ್ಲ. ವಿಕ್ಟೋರಿಯಾ ಯುಗದ ಕೊನೆಯ ಕಾಲದ ಮಾರಣ ಹೋಮಗಳಲ್ಲಿ, ಬ್ರಿಟಿಶರ ಆಡಳಿತಕ್ಕೆ ಮೊದಲಿನ 2 ಸಾವಿರ ವರ್ಷಗಳಲ್ಲಿ ಸಂಭವಿಸಿದ 17 ಕ್ಷಾಮಗಳಿಗೆ ಹೋಲಿಸಿದರೆ, 120 ವರ್ಷಗಳ ಬ್ರಿಟಿಶ್ ಆಡಳಿತದಲ್ಲಿ 31 ಗಂಭೀರ ಬರಗಾಲ ಗಳು ಇಲ್ಲಿ ಸಂಭವಿಸಿವೆಯೆಂದು ಮೈಕ್ ಡೇವಿಸ್ ಬೆಟ್ಟು ಮಾಡಿದ್ದಾರೆ.

ತನ್ನ ಪುಸ್ತಕದಲ್ಲಿ ಡೇವಿಸ್, 2.9 ಕೋಟಿ ಭಾರತೀಯ ರನ್ನು ಕೊಂದಿರುವ ಬರಗಾಲಗಳ ಕತೆಯನ್ನು ಹೇಳುತ್ತಾರೆ. ಈ ಜನರೆಲ್ಲ ಬ್ರಿಟಿಶ್ ಆಡಳಿತದ ನೀತಿಯಿಂದ ಕೊಲೆ ಮಾಡಲ್ಪಟ್ಟವರೆಂದು ಅವರು ತಿಳಿಸುತ್ತಾರೆ. 1876ರಲ್ಲಿ ದಕ್ಷಿಣದ ಪ್ರಸ್ಥಭೂಮಿಯಲ್ಲಿ ಅನಾವೃಷ್ಟಿಯು ರೈತರನ್ನು ದಿಕ್ಕಿಲ್ಲದಂತೆ ಮಾಡಿದ್ದಾಗ ಭಾರತದಲ್ಲಿ ಅಕ್ಕಿ ಹಾಗೂ ಗೋಧಿ ಮಿಗತೆಯಿದ್ದವು. ಆದರೆ, ವೈಸರಾಯ್ ರಾಬರ್ಟ್ ಬುಲ್ವರ್-ಲಿಟ್ಟನ್, ಅವುಗಳು ಬ್ರಿಟನ್‌ಗೆ ರಫ್ತಾಗುವುದನ್ನು ಯಾವುದೂ ತಡೆಯಬಾರದೆಂದು ಒತ್ತಿ ಹೇಳಿದ್ದರು.

1877 ಹಾಗೂ 78ರಲ್ಲಿ ಬರಗಾಲ ಭೀಕರವಿದ್ದಾಗ ಧಾನ್ಯ ವ್ಯಾಪಾರಿಗಳು ದಾಖಲೆ ಪ್ರಮಾಣದ ಆಹಾರ ಧಾನ್ಯಗಳನ್ನು ರಫ್ತು ಮಾಡಿದ್ದರು. ರೈತರು ಹಸಿವಿನಿಂದಿರಲು ಆರಂಭಿಸಿ ದಾಗ, ಸರಕಾರಿ ಅಧಿಕಾರಿಗಳಿಗೆ, ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪರಿಹಾರ ಕಾರ್ಯಗಳನ್ನು ನಿರುತ್ತೇಜಿಸುವಂತೆ ಆದೇಶ ನೀಡಲಾಗಿತ್ತು. ಹೆಚ್ಚಿನ ಜಿಲ್ಲೆಗಳಲ್ಲಿ ಅನುಮತಿಯಿದ್ದ ಏಕೈಕ ಪರಿಹಾರವೆಂದರೆ ಕಠಿಣ ದುಡಿಮೆ. ಹಸಿವೆಂದು ದಯನೀಯ ಸ್ಥಿತಿಯಲ್ಲಿ ಯಾರಾದರೂ ಅದರಿಂದ ದೂರವೇ ಓಡಬೇಕಿತ್ತು.
ಈ ಕಾರ್ಮಿಕರ ಶಿಬಿರಗಳಲ್ಲಿ ಕೆಲಸಗಾರರಿಗೆ, ಎರಡನೆ ವಿಶ್ವಯುದ್ಧದ ನಾಝಿ ಯುದ್ಧ ಕೈದಿಗಳ ಶಿಬಿರ ಬುಚೆನ್ ವಾಲ್ಡ್‌ನಲ್ಲಿ ಯಹೂದ್ಯ ಕೈದಿಗಳಿಗೆ ಕೊಡುತ್ತಿದ್ದುದಕ್ಕಿಂತಲೂ ಕಡಿಮೆ ಆಹಾರ ಕೊಡಲಾಗುತ್ತಿತ್ತು.

ಲಕ್ಷಾಂತರ ಜನರು ಸತ್ತಿದ್ದರೂ, ಲಿಟ್ಟನ್, ಮದ್ರಾಸ್ ಪ್ರಾಂತ್ಯದಲ್ಲಿ ಲಕ್ಷಾಂತರ ರೈತರ ಬವಣೆಯನ್ನು ನೀಗುವ ಎಲ್ಲ ಪ್ರಯತ್ನವನ್ನು ನಿರ್ಲಕ್ಷಿಸಿದ್ದನು. ರಾಣಿ ವಿಕ್ಟೋರಿಯಾ ಳನ್ನು ಭಾರತದ ಚಕ್ರವರ್ತಿನಿಯಾಗಿ ಪ್ರತಿಷ್ಠಾಪಿಸುವ ಸಮಾರಂಭದ ಸಿದ್ಧತೆಯಲ್ಲಿ ಅವನು ವ್ಯಸ್ತನಾಗಿದ್ದನು. ಸಮಾರಂಭದ ಮುಖ್ಯ ಅಂಗವಾದ ವಾರದು ದ್ದದ ಔತಣಕೂಟಗಳಲ್ಲಿ 68 ಸಾವಿರ ಗಣ್ಯರು ಪಾಲ್ಗೊಂಡು, ವಿಕ್ಟೋರಿಯಾ ರಾಣಿ ದೇಶಕ್ಕೆ ನೀಡಿದ್ದ ‘ಸಂತೋಷ, ಸಂಪತ್ತು ಹಾಗೂ ಕಲ್ಯಾಣ’’ದ ವಾಗ್ದಾನವನ್ನು ಆಲಿಸಿದ್ದರು.

1890ರ ಬರಗಾಲದಲ್ಲಿ ಪಶ್ಚಿಮ ಭಾರತದಲ್ಲಿ ಕನಿಷ್ಠ 1.9 ಕೋಟಿ ಭಾರತೀಯರು ಸತ್ತಿದ್ದಾರೆಂದು 1901 ರಲ್ಲಿ ಲ್ಯಾನ್ಸೆಟ್ ಅಂದಾಜಿಸಿದ್ದನು. ಬ್ರಿಟಿಶರು ಬರಗಾಲ ಪರಿಹಾರ ಅನುಷ್ಠಾನಿಸಲು ನಿರಾಕರಿಸಿದ್ದುದೇ ಇಷ್ಟೊಂದು ಸಂಖ್ಯೆಯ ಸಾವುಗಳಿಗೆ ಕಾರಣ. 1872ರಿಂದ 1921ರ ವರೆಗೆ ಭಾರತದ ಜನರ ಆಯುರ್ಮಾನ ಶೇ.20ರಷ್ಟು ಕುಸಿದಿತ್ತೆಂದು ಡೇವಿಸ್ ಹೇಳಿದ್ದಾರೆ.
ಆದುದರಿಂದ ಬೆರಳೆಣಿಕೆಯಷ್ಟು ಬ್ರಿಟಿಶರು ಖಂಡವೊಂದನ್ನು ಗುಲಾಮಗಿರಿಗೆ ಒಳಪಡಿಸುವುದನ್ನು ತೋರಿಸುವ ‘‘ದಿ ಲೈವ್ಸ್ ಆಫ್ ಎ ಬೆಂಗಾಲ್ ಲ್ಯಾನ್ಸರ್’’ ಹಿಟ್ಲರನ ಪ್ರೀತಿಯ ಚಲನಚಿತ್ರವಾಗಿದ್ದುದರಲ್ಲಿ ಆಶ್ಚರ್ಯ ವೇನೂ ಇಲ್ಲ. ‘‘ಇದು ಶ್ರೇಷ್ಠ ಜನಾಂಗವೊಂದು ವರ್ತಿಸ ಬೇಕಾದ ರೀತಿ. ಎಸ್‌ಎಸ್ (ನಾಜಿ ರಕ್ಷಣಾ ಪಡೆ-ಶಟ್ಜ್-ಸ್ಯಾಫೆಲ್) ಕಡ್ಡಾಯವಾಗಿ ನೋಡಬೇಕಾದ ಚಿತ್ರವಾಗಿದೆ’’ ಎಂದು ನಾಝಿ ನಾಯಕ ಅಂದಿನ ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್‌ವುಡ್‌ಗೆ (ಅರ್ಲ್ ಅಫ್ ಹಾಲಿಫಾಕ್ಸ್) ಹೇಳಿದ್ದನು.


ಅಪರಾಧ ಮತ್ತು ಪರಿಣಾಮ

ಮಾವು ಮಾವು ನರಮೇಧಕ್ಕಾಗಿ ಬ್ರಿಟನ್ ಕೆನ್ಯಾದಂತಹ ಇತರ ರಾಷ್ಟ್ರಗಳ ಕ್ಷಮೆಯನ್ನು ಯಾಚಿಸಿದ್ದರೆ, ಭಾರತದಲ್ಲಿ ಚಾಪೆಯ ಕೆಳಗೆ ಅಂತಹ ಮಾನವ ಹತ್ಯೆಗಳು ಮುಂದು ವರಿದಿದ್ದವು. ಇತರ ರಾಷ್ಟ್ರೀಯತೆಗಳು ನಮಗೆ ಉತ್ತಮ ಉದಾಹರಣೆಯೊಂದನ್ನು ಹಾಕಿಕೊಟ್ಟಿವೆ. ಉದಾಹರಣೆಗೆ, ಇಸ್ರೇಲ್‌ಗೆ ನರಮೇಧವನ್ನು ಮರೆಯಲು ಸಾಧ್ಯವಿಲ್ಲ. ಇತರರಿಗೂ ಮರೆಯ ಬಿಡುವುದಿಲ್ಲ. ಕನಿಷ್ಠ ಎಲ್ಲ ಜರ್ಮನ್ನರಿಗೆ. ಜರ್ಮನಿಯು ಇಸ್ರೇಲ್‌ಗೆ ನೂರಾರು ಕೋಟಿಗಳಷ್ಟು ನಗದು ಹಾಗೂ ಶಸ್ತ್ರಾಸ್ತ್ರ ಸಹಾಯ ನೀಡುವುದನ್ನು ಮುಂದುವರಿಸಿದೆ.

ಒಂದನೆ ವಿಶ್ವ ಯುದ್ಧದ ವೇಳೆ ಟರ್ಕನ್ನರು ನಡೆಸಿದ 18 ಲಕ್ಷ ಅರ್ಮೆನಿಯನ್ನರ ವ್ಯವಸ್ಥಿತ ಮಾರಣ ಹೋಮವನ್ನು (ಗ್ರೇಟ್ ಕ್ರೈಂ) ಅರ್ಮೆನಿಯನ್ನರು ಮರೆಯಲಾರರು. ಪೋಲ್ಯಾಂಡ್‌ನವರು ಜೋಸೆಫ್ ಸ್ಟಾಲಿನ್‌ನ ಕೆಟಿನ್ ನರಮೇಧವನ್ನು ಮರೆಯಲಾರರು.

ಎರಡನೆ ವಿಶ್ವ ಯುದ್ಧದ ವೇಳೆ ನಾಂಕಿಂಗ್‌ನಲ್ಲಿ ಕನಿಷ್ಠ 40 ಸಾವಿರ ಜನರ ಹತ್ಯೆ ಹಾಗೂ ಅತ್ಯಾಚಾರಗಳಿಗಾಗಿ ಜಪಾನೀಯರಿಂದ ಚೀನೀಯರು ಸ್ಪಷ್ಟ ಕ್ಷಮಾಯಾಚನೆ ಹಾಗೂ ಪರಿಹಾರವನ್ನು ಬಯಸಿದ್ದಾರೆ. ಯುಕ್ರೇನಿಯನ್ನರ ವಿಚಿತ್ರ ಪ್ರಕರಣವೊಂದಿದೆ. ಅವರು ಸ್ಟಾಲಿನ್‌ನ ಆರ್ಥಿಕ ನೀತಿಯಿಂದಾಗಿ ಸಂಭವಿಸಿದ ಬರಗಾಲವನ್ನು ಜನಾಂಗೀಯ ಹತ್ಯೆ ಎಂದು ಕರೆಯಲಿಚ್ಛಿಸಿದ್ದಾರೆ. ಆದರೆ, ಸ್ಪಷ್ಟವಾಗಿ ಅದಲ್ಲ. ಅವರು ಅದಕ್ಕೆ-ಹಾಲೊಡೋಮರ್- ಎಂಬ ಶಬ್ದವನ್ನೂ ಪ್ರಯೋಗಿಸಿದ್ದರು.
ಆದರೆ ಭಾರತ ಮಾತ್ರ ಪರಿಹಾರ, ಕನಿಷ್ಠ ಕ್ಷಮಾ ಯಾಚನೆ ಮಾಡುವಂತೆ ಒತ್ತಾಯಿಸಲು ನಿರಾಕರಿಸುತ್ತಿದೆ. ಆಕ್ರಮಣಕಾರರ ಸುದೀರ್ಘ ಪಟ್ಟಿಯಲ್ಲಿ ಬ್ರಿಟಿಶರು ಕೊನೆಯವರಾಗಿದ್ದುದು ಇದಕ್ಕೆ ಕಾರಣವಿರಬಹುದು. ಆದುದರಿಂದ ಇಂಗ್ಲೆಂಡ್ ಮಾತ್ರ ಸಾಮ್ರಾಜ್ಯೋತ್ತರ ಮಾನಸಿಕ ಒತ್ತಡ ಅನುಭವಿಸುವಂತೆ ಏಕೆ ಮಾಡಬೇಕು? ಅಥವಾ ಭಾರತದ ಇಂಗ್ಲಿಷ್ ಮಾತನಾಡುವ ಮೇಲ್ವರ್ಗ ದವರು ಬ್ರಿಟಿಶರ ಹಿಡಿತದಲ್ಲಿದ್ದೇವೆಂದೇ ಭಾವಿಸುತ್ತಿರು ವುದು ಕಾರಣವೇ? ಅಥವಾ ನಮ್ಮ ಚಾರಿತ್ರಿಕ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿರುವುದಕ್ಕಾಗಿ ಖಂಡನೆಗೊಳಗಾದ ರಾಷ್ಟ್ರ ನಮ್ಮದೆಂದೇ? ಬಹುಶಃ ನಾವು ಸುಲಭವಾಗಿ ಎಲ್ಲವನ್ನೂ ಕ್ಷಮಿಸುತ್ತೇವೆ.

ಆದರೆ, ಕ್ಷಮಾಗುಣವು ಮರೆವಿಗಿಂತ ಭಿನ್ನವಾದುದು. ಭಾರತೀಯರು ಆ ಬಗ್ಗೆ ಅಪರಾಧ ಪ್ರಜ್ಞೆಯುಳ್ಳವ ರಾಗಿದ್ದಾರೆ. ಕೃತಕ ಬರಗಾಲ ದಿಂದ ಪ್ರಾಣ ತೊರೆದಿರುವ ಲಕ್ಷಾಂತರ ಭಾರತೀಯರ ನೆನಪಿಗೆ ಇದೊಂದು ಅವಮಾನವಾಗಿದೆ.
ಭಾರತೀಯರ ಕುರಿತು ಬ್ರಿಟಿಶರ ಮನೋಧರ್ಮ ವನ್ನು ಮಿತ್ರರಾಷ್ಟ್ರಗಳ ಯುದ್ಧಾಭಿಯಾನಕ್ಕೆ ಭಾರತೀಯರ ಕೊಡುಗೆಯ ಹಿನ್ನೆಲೆಯಲ್ಲಿ ನೋಡಬೇಕು. 1943ರ ವೇಳೆ 25 ಲಕ್ಷಕ್ಕೂ ಹೆಚ್ಚು ಭಾರತೀಯ ಸೈನಿಕರು ಯುರೋಪ್, ಆಫ್ರಿಕಾ ಹಾಗೂ ಆಗ್ನೇಯ ಏಶ್ಯಾಗಳಲ್ಲಿ ಮಿತ್ರರಾಷ್ಟ್ರಗಳ ಪರವಾಗಿ ಹೋರಾಡುತ್ತಿದ್ದರು. ದೇಶಾ ದ್ಯಂತದಿಂದ ಆಪಾರ ಪ್ರಮಾಣದ ಆಯುಧ, ಮದ್ದುಗುಂಡು ಹಾಗೂ ಕಚ್ಚಾ ವಸ್ತುಗಳು ಬ್ರಿಟಿಶರಿಗೆ ಚಿಕ್ಕಾಸೂ ಖರ್ಚಾಗದೆ ಯುರೋಪ್‌ಗೆ ರವಾನಿಸಲ್ಪಟ್ಟಿದ್ದವು.
ಬ್ರಿಟಿಶರಿಗೆ ಭಾರತದ ಋಣ ಯಾವುದೇ ರಾಷ್ಟ್ರ ಮರೆಯಲಾಗದಷ್ಟು ದೊಡ್ಡದಿದೆ. ‘‘1945ರಲ್ಲಿ ವಿಜಯ ಸಾಧ್ಯವಾಗುವಂತೆ ಮಾಡಿದ್ದವರು ಭಾರತದ ಸೈನಿಕರು, ನಾಗರಿಕ ಕಾರ್ಮಿಕರು ಹಾಗೂ ವ್ಯಾಪಾರಿಗಳು. ಭಾರತಕ್ಕೆ ತ್ವರಿತ ಸ್ವಾತಂತ್ರ ಅವರಿಗೆ ನೀಡಿದ ಬೆಲೆಯಾಗಿತ್ತು’’ ಎಂದು ಕೇಂಬ್ರಿಜ್ ವಿವಿಯ ಚರಿತ್ರೆಕಾರರಾದ ಟಿಮ್ ಹಾರ್ಪರ್ ಹಾಗೂ ಕ್ರಿಸ್ತೋಫರ್ ಬೇಲಿ ಹೇಳಿದ್ದಾರೆ.

250 ವರ್ಷಗಳ ಕಾಲ ವಸಾಹತುಶಾಹಿಗಳಿಂದ ನಡೆದ ಭಾರತದ ಲೂಟಿಗೆ ಪರಿಹಾರ ಕೊಡುವಷ್ಟು ಸಂಪತ್ತು ಇಡೀ ಯುರೋಪ್‌ನಲ್ಲಿಲ್ಲ. ಹಣಕ್ಕೆ ಮಣ್ಣು ಹಾಕಲಿ, ಕನಿಷ್ಠ ಪಕ್ಷ ಕ್ಷಮೆಯನ್ನಾದರೂ ಕೇಳುವಷ್ಟು ಸೌಜನ್ಯ ಬ್ರಿಟಿಶರಿಗಿದೆಯೇ? ಅಥವಾ ಚರ್ಚಿಲ್‌ರಂತೆಯೇ ಅವರೂ ‘ಬ್ರಿಟಿಶರ ಆಡಳಿತವು ಭಾರತದ ಸ್ವರ್ಣ ಯುಗ’ ಎಂದು ಮೋಸ ಪಡಿಸುವುದನ್ನೇ ಮುಂದುವರಿಸಲಿದ್ದಾರೆಯೇ?

Thursday, June 26, 2014

ಎಚ್.ಎಸ್. ಶಿವಪ್ರಕಾಶರ ಗೊಂದಲ ಚಿಂತನೆ
ರಂಜಾನ್ ದರ್ಗಾ

 ವಿವಿಧ ಧರ್ಮೀಯರ ಪ್ರಾರ್ಥನಾ ಮತ್ತು ಪೂಜಾ ಸ್ಥಳಗಳನ್ನು ಹಾಳು ಮಾಡಿ ತಮ್ಮ ಧಾರ್ಮಿಕ ಆಧಿಪತ್ಯ ಸ್ಥಾಪಿಸುತ್ತ ಬಂದಿರುವುದಕ್ಕೆ ದೇಶ ಮತ್ತು ವಿದೇಶಗಳಲ್ಲಿ ಸಾಕಷ್ಟು ಉದಾಹರಣೆಗಳಿವೆ. ಧರ್ಮಗಳು ಅತ್ಯುತ್ಸಾಹ, ಅಸಹನೆ ಮತ್ತು ದುರಹಂಕಾರದ ಅನುಯಾಯಿಗಳನ್ನೂ ಹೊಂದಿರುವ ಕಾರಣ, ಅವರು ಆ ಧರ್ಮಗಳ ಸಂಸ್ಥಾಪಕರು ಹೇಳಿರುವ ಮಾತಿನ ಧ್ವನ್ಯರ್ಥವನ್ನು ಅರಗಿಸಿಕೊಳ್ಳದೆ ದುಂಡಾವರ್ತನೆ ಮಾಡುವುದರಿಂದ ಅನಾಹುತಗಳು ಸಂಭವಿಸುತ್ತಲೇ ಬಂದಿವೆ. ಯಾವುದೇ ಧರ್ಮದವರು ಬೇರೆ ಧರ್ಮದವರ ಆಚರಣೆಗಳ ವಿಚಾರದಲ್ಲಿ ಮೂಗು ತೂರಿಸಬಾರದು ಎಂಬುದೇ ನಾಗರಿಕಪ್ರಜ್ಞೆ.
 ಈ ಹಿನ್ನೆಲೆಯಲ್ಲಿ ಪ್ರಜಾವಾಣಿಯ ಜೂನ್ ೨೦ರ ’ಪ್ರತಿಸ್ಪಂದನ’ ಅಂಕಣದಲ್ಲಿ ಎಚ್.ಎಸ್. ಶಿವಪ್ರಕಾಶ ಅವರು ಬರೆದ ’ಮೂರ್ತಿ ಮತ್ತು ಅಮೂರ್ತತೆಗಳ ನಡುವೆ’ ಲೇಖನ ಮೌಲಿಕವಾಗಿದೆ. ಆದರೆ ಅವರು ಇನ್ನಾದರೂ ಮೂರ್ತಿಗಳ ಮೇಲೆ ಉಚ್ಚೆ ಹೊಯ್ದು ಹುಡುಗಾಟದ ಪರಾಕ್ರಮಗಳನ್ನು ವಿಜೃಂಭಿಸುವ ಬೇಜವಾಬ್ದಾರಿ ತೀಟೆಗಳನ್ನು ನಮ್ಮ ಬುದ್ಧಿಜೀವಿಗಳು ಕೈ ಬಿಡಲಿ ಎಂದು ಪರೋಕ್ಷವಾಗಿ ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಸಲಹೆ ನೀಡಿದ್ದಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಡಿದ ಭಾಷಣದಲ್ಲಿ ಅನಂತಮೂರ್ತಿ ಅವರ ಲೇಖನದ ಸಾಲೊಂದನ್ನು ತಪ್ಪಾಗಿ ಉದ್ಧರಿಸಿದ ಕಾರಣ ಇಂಥ ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ.

 ಬೆತ್ತಲೆ ಪೂಜೆ ಯಾಕೆ ಕೂಡದು? ಎಂಬ ದೀರ್ಘ ಲೇಖನ ಅನಂತಮೂರ್ತಿ ಅವರ ಸ್ವೋಪಜ್ಞ ಮನಸ್ಸಿನ ಮಾನವೀಯ ಸೂಕ್ಷ್ಮತೆಗಳನ್ನು ಒಳಗೊಂಡಿದೆ. ಸುಮಾರು ಮೂರು ದಶಕಗಳ ಹಿಂದೆ ಚಂದ್ರಗುತ್ತಿಯಲ್ಲಿ ಬೆತ್ತಲೆಸೇವೆ ವಿರೋಧಿಸಿ ನಡೆದ ಸಂಘರ್ಷದ ಘಟನೆಯ ಹಿನ್ನೆಲೆಯಲ್ಲಿ ಬರೆದ ಲೇಖನವಿದು. ’ಬೆತ್ತಲೆಪೂಜೆ’ ಎಂಬುದು ನಿಷ್ಕಾಮ ದೃಷ್ಟಿಕೋನದ ವಾತಾವರಣದಲ್ಲಿ ಜನಿಸಿದ ಉತ್ಕಟ ನಂಬಿಕೆಯಾಗಿದೆ. (ನನ್ನ ದೃಷ್ಟಿಯಲ್ಲಿ ಅದು ಮೂಢನಂಬಿಕೆ) ಅದನ್ನು ಆಚರಿಸುವವರಲ್ಲಿ ಇಂದಿಗೂ ಅದೇ ಉತ್ಕಟ ನಂಬಿಕೆ ಇದ್ದರೂ ಪಸ್ತುತ ವಾತಾವರಣ ಅದಕ್ಕೆ ಪೂರಕವಾಗಿರುವಂಥದ್ದಾಗಿಲ್ಲ. ವಸ್ತುಮೋಹದ ನಗರೀಕರಣ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿನ ನಗ್ನಪ್ರಚಾರದಿಂದ ಉಂಟಾದ ಐಹಿಕ ದೃಷ್ಟಿಕೋನದಿಂದಾಗಿ ಈ ’ಬೆತ್ತಲೆ ಪೂಜೆ’ ಎಂಬುದು ತನಗೆ ಬೇಕಾದ ದೈವೀಕ ಮತ್ತು ಮಾನಸಿಕ ವಾತಾವರಣದಿಂದ ವಂಚಿತವಾಗಿದೆ ಎಂಬುದನ್ನು ತಿಳಿಸುವುದರ ಮೂಲಕ ’ಅದು ಸಲ್ಲದು’ ಎಂಬ ಭಾವನೆಯನ್ನೇ ಅನಂತಮೂರ್ತಿ ಅವರು ತಾಳಿದ್ದಾರೆ.

 ಇಂಥ ಸಮ್ಮಿಶ್ರ ಚಿಂತನೆಗಳ ಜೊತೆಗೆ ಬೆಳೆಯುವ ಈ ಲೇಖನದಲ್ಲಿ ಅನಂತಮೂರ್ತಿ ಅವರು ಆನುಷಂಗಿಕವಾಗಿ ನನ್ನ ಬಾಲ್ಯದ ಪೌರಾಣಿಕ ಪ್ರಪಂಚವನ್ನು ಸೀಳಿಕೊಂಡು ಬೆಳೆದವನು ನಾನು. ನನ್ನನ್ನೂ ಮೀರಿದ ಅಜ್ಞಾತಶಕ್ತಿಗಳು ಇಲ್ಲ ಎಂದು ನನಗೆ ನಾನು ದೃಢಪಡಿಸಿಕೊಳ್ಳುವುದಕ್ಕಾಗಿ ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೆವ್ವದ ಕಲ್ಲುಗಳ ಮೇಲೆ ನಾನು ಮೂತ್ರವಿಸರ್ಜನೆ ಮಾಡಿದ್ದಿದೆ. ಭಯದಿಂದ ನಿದ್ದೆಗೆಟ್ಟ ಆ ದಿನದ ರಾತ್ರಿಗಳು ನೆನಪಾಗುತ್ತವೆ. ಎಂದು ಬರೆದಿದ್ದಾರೆ. ಅವರು ದೇವತಾ ಆರಾಧನೆ ಮತ್ತು ಭೂತಾರಾಧನೆಯನ್ನು ಮೀರಿದ ಚಿಂತನೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

 ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ... ಎಂಬ ವಚನದಲ್ಲಿ ಬಸವಣ್ಣನವರು ವೈದಿಕರ ಅಗ್ನಿದೇವನನ್ನು ಕಿಚ್ಚಿಗೆ ಇಳಿಸುವುದರ ಮೂಲಕ ಅದರ ನಿಜಸ್ವರೂಪವನ್ನು ತೋರಿಸಿಕೊಟ್ಟಿದ್ದಾರೆ. ಬಸವಣ್ಣನವರು ಎಲ್ಲ ಮಿಥ್‌ಗಳನ್ನು ಒಡೆಯುತ್ತ ನಿಜದ ನಿಲವನ್ನು ತಾಳುತ್ತ ಬಂದಿದ್ದಾರೆ. ಅವರು ಜಲದೇವತೆ ಎಂಬ ಮಿಥ್ ಅನ್ನು ತಿರಸ್ಕರಿಸುತ್ತಾರೆ. ಜಲವೊಂದೇ ಶೌಚಾಚಮನಕ್ಕೆ ಎಂದು ಸಾರುತ್ತ ನೀರಿನ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ಅವರು ಭೂದೇವಿಯ ಮಿಥ್ ಅನ್ನು ಒಡೆಯುತ್ತಾರೆ. ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ ಎಂದು ಸಾರುತ್ತ ಭೂಮಿಯ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ಹಾಗೆಯೆ ಅನಂತಮೂರ್ತಿಯವರು ದೆವ್ವದ ಕಲ್ಲುಗಳ ಮಿಥ್ ಅನ್ನು ಒಡೆದು ಅವುಗಳ ಹಿಂದಿರುವ ದೆವ್ವದ ಭಯದ ಟೊಳ್ಳುತನವನ್ನು ಕುರಿತು ತಿಳಿಸಿದ್ದಾರೆ.

 ಇಂಥ ಭಯವನ್ನು ಮೀರದೆ ಬಸವಣ್ಣನವರು ತಿಳಿಸುವ ಭಕ್ತಿ ಮತ್ತು ಅನಂತಮೂರ್ತಿ ಅವರು ಪ್ರತಿಪಾದಿಸುವ ಚಲನಶೀಲತೆ ಸಾಧಿಸಲು ಸಾಧ್ಯವಿಲ್ಲ. ಹೀಗೆ ಅವರು ಬಾಲಕರಿದ್ದಾಗ ತಮ್ಮನ್ನು ತಾವು ಭಯದ ಸಂಕಟದಿಂದ ಬಿಡುಗಡೆಗೊಳ್ಳುವುದಕ್ಕಾಗಿ ಮಾಡಿದ ಕ್ರಿಯೆ ಇದು. ಇದು ಬಾಲಕನೊಬ್ಬ ದೆವ್ವದ ಕಲ್ಲುಗಳ ಮೇಲೆ ಹೊಯ್ದ ಉಚ್ಚೆಯೆ? ಅಥವಾ ಅಜ್ಞಾನದ ಮೇಲೆ ಹೊಯ್ದ ಉಚ್ಚೆಯೆ? ಬಾಲಕ ಅನಂತಮೂರ್ತಿ ಮತ್ತು ಪ್ರಬುದ್ಧ ಅನಂತಮೂರ್ತಿ ಅವರ ಮಧ್ಯೆ ವ್ಯತ್ಯಾಸ ಇಲ್ಲವೆ?
 ಕಲ್ಯಾಣದಲ್ಲಿ ಬಸವಣ್ಣ ಇರುವಾಗ ಕಲ್ಲಿಗ್ಯಾಕ ಕೈಯ ಮುಗಿಯೂತಿ ಎಂದು ಜನಪದ ಕವಿಯೊಬ್ಬ ಹಾಡಿದ್ದಾನೆ. ಬಸವಾದಿ ಶರಣರು ಮೂರ್ತಿಗಳನ್ನು ಕಲ್ಲಾಗಿಸಿದರು. ಆದರೆ ಮೂರ್ತಿಗಳ ಮೇಲೆ ಉಚ್ಚೆ ಹೊಯ್ದು.... ಎಂದು ಬರೆಯುತ್ತ ಶಿವಪ್ರಕಾಶರೇಕೆ ಕಲ್ಲನ್ನು ಮೂರ್ತಿಯಾಗಿಸುತ್ತಿದ್ದಾರೆ? ಇದನ್ನೆಲ್ಲ ಬರೆಯುವ ಮೊದಲು ಶಿವಪ್ರಕಾಶ ಅವರು ಕಲಬುರ್ಗಿ ಅವರ ಹೇಳಿಕೆಗೆ ಅಂಟಿಕೊಳ್ಳದೆ ಅನಂತಮೂರ್ತಿ ಅವರ ಲೇಖನ ಓದಬೇಕಾಗಿತ್ತು.

 ಎಚ್.ಎಸ್. ಶಿವಪ್ರಕಾಶ ಅವರು ಪವಾಡಗಳಲ್ಲಿ ಕೂಡ ನಂಬಿಕೆಯುಳ್ಳವರಾಗಿದ್ದಾರೆ. ಅವರಿಗೆ ನಾಗಲಿಂಗ ಅಜ್ಜನ ಪವಾಡಗಳೆಂದರೆ ಬಲು ಇಷ್ಟ. ನಾಗಲಿಂಗ ಅಜ್ಜನವರು ಮಾಡಿದ ಪವಾಡವೊಂದು ಹೀಗಿದೆ: ನಾಗಲಿಂಗ ಅಜ್ಜನವರು ಶರೀಫ ಶಿವಯೋಗಿಗಳ ಜೊತೆ ಮಳೆಯಲ್ಲಿ ನೆನೆದುಕೊಂಡು ಕುರ್ತಕೋಟಿಗೆ ಹೋಗುತ್ತಾರೆ. ಅಲ್ಲಿನ ದ್ಯಾಮವ್ವ ದೇವಿಯ ಮಂದಿರವನ್ನು ಪ್ರವೇಶಿಸಿದಾಗ,  ಹಸಿವಾಗಿದ್ದ ಅವರು ಪ್ರಸಾದಕ್ಕಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಆಗ ದ್ಯಾಮವ್ವ ದೇವಿಯು ಪ್ರತ್ಯಕ್ಷಳಾಗಿ ಇಬ್ಬರಿಗೂ ಪ್ರಸಾದ ನೀಡುವಳು. ಪ್ರಸಾದವಾದ ಮೇಲೆ ಚಳಿ ಕಾಯಿಸಲು ನಾಗಲಿಂಗ ಅಜ್ಜನವರು ದೇವಿಯ ಕಟ್ಟಿಗೆಯ ಮೂರ್ತಿಯನ್ನೇ ಒಡೆದು ತುಂಡು ತುಂಡು ಮಾಡಿ ಬೆಂಕಿ ಹಚ್ಚುವರು. ದೇವಿ ಮೂರ್ತಿಯನ್ನು ಸುಟ್ಟಿದ್ದು ಮರುದಿನ ಬೆಳಿಗ್ಗೆ ಗೊತ್ತಾದ ತಕ್ಷಣ ಪಂಚರು ಸಿಟ್ಟಿಗೆದ್ದು ನಾಗಲಿಂಗ ಅಜ್ಜನವರಿಗೆ ಬಾರಕೋಲಿನಿಂದ ಹೊಡೆಯುವರು. ಆ ಹೊಡೆತ ಪೂಜಾರಿಗೆ ಬೀಳುವುದು!

 ಹೀಗೆ ಅವಧೂತರಿಗೆ ಸಂಬಂಧಿಸಿದ ಅನೇಕ ಪವಾಡಗಳು ನಮ್ಮ ಸಮಾಜದಲ್ಲಿ ಪ್ರಚಲಿತ ಇವೆ. ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ದೇವರ ಅಸ್ತಿತ್ವವನ್ನು ಪ್ರತಿಪಾದಿಸುವ ಶರಣರಾಗಲಿ, ಸಂತರಾಗಲಿ, ಅವಧೂತರಾಗಲಿ ಮೂರ್ತಿಪೂಜೆಯನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಅವಧೂತ ಪರಂಪರೆಯನ್ನು ನಂಬುವ ಶಿವಪ್ರಕಾಶ ಅವರು ಭಾರತೀಯ ದಾರ್ಶನಿಕ ತುಮುಲಗಳನ್ನು ಗಣನೆಗೆ ತೆಗೆದುಕೊಳ್ಳದೆ ಅನುಕೂಲಸಿಂಧುವಾಗಿ ಯಾರನ್ನು ಸಂಪ್ರೀತಗೊಳಸಲು ಬಯಸುತ್ತಿದ್ದಾರೆ?

 ಜಪಾನಿನಲ್ಲಿ ಖ್ಯಾತ ಬೌದ್ಧಭಿಕುವೊಬ್ಬ ರಾತ್ರಿ ಚಳಯಿಂದ ನಡಗುತ್ತ ಬುದ್ಧವಿಹಾರವೊಂದನ್ನು ಪ್ರವೇಶಿಸಿದ. ವಿಹಾರದ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿ ಅವನಿಗೆ ಗೌರವ ಸೂಚಿಸಿ ಅಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟ. ನಂತರ ಚಳಿಯಿಂದ ನಡಗುತ್ತಿದ್ದ ಆ ಬೌದ್ಧಭಿಕು ಅಲ್ಲಿದ್ದ ಬುದ್ಧನ ಕಟ್ಟಿಗೆ ಮೂರ್ತಿಯನ್ನು ಅಂಗಳಕ್ಕೆ ತಂದು ಬೆಂಕಿಹಚ್ಚಿ ಕಾಸಿಕೊಳ್ಳತೊಡಗಿದ. ಆಶ್ರಯ ಕೊಟ್ಟ ವ್ಯಕ್ತಿ ಸಿಟ್ಟಿಗೆದ್ದು ಆ ಭಿಕುವನ್ನು ಹೊರಗೆ ಹಾಕಿದ. ಬೆಳಿಗ್ಗೆ ಎದ್ದು ನೋಡಿದಾಗ, ಆ ಭಿಕು ರಸ್ತೆ ಬದಿಯ ಮೈಲಿಗಲ್ಲೊಂದರ ಮೇಲೆ ಹೂ ಇಟ್ಟು ಧ್ಯಾನಮಗ್ನನಾಗಿದ್ದ!

  ಮನೆ ಬಿಟ್ಟು ಬಂದ ಅವಧೂತ ಮಾಣಿಕಪ್ರಭು ಅವರು ಹನುಮಂತ ದೇವರ ಗುಡಿಯಲ್ಲಿ ರಾತ್ರಿ ಮಲಗುವ ಮುಂಚೆ ತಮ್ಮ ಚಪ್ಪಲಿಗಳು ಕಳುವಾಗಬಾರದೆಂಬ ಕಾರಣಕ್ಕೆ ಬಟ್ಟೆಯಲ್ಲಿ ಸುತ್ತಿ ಮೂರ್ತಿಯ ಮೇಲೆ ಇಟ್ಟಿದ್ದರು. ಬೆಳಿಗ್ಗೆ ಬಂದ ಪೂಜಾರಿ ಇದ ಕಂಡು ಕೋಪಾವೇಶದಿಂದ ಮಾಣಿಕಪ್ರಭುಗಳಿಗೆ ಹೊಡೆಯುವ ವೇಳೆ ಮೂರ್ತಿಗೆ ಪೆಟ್ಟಾಗುತ್ತಿತ್ತು!

 ರಾಮಕೃಷ್ಣರು ಕಾಳಿಯನ್ನು ಧ್ಯಾನಿಸುತ್ತಿದ್ದರು. ಅವರು ಕಣ್ಣು ಮುಚ್ಚಿದೊಡನೆ ಕಾಳಿಯ ಸಾಕ್ಷಾತ್ಕಾರವಾಗುತ್ತಿತ್ತು. ಆಗ ಅವರು ಆನಂದಪರವಶರಾಗುತ್ತಿದ್ದರು. ಇದು ಎಲ್ಲೆಡೆ ಪ್ರಚಾರವಾಯಿತು. ಆಗ ಒಬ್ಬ ಸನ್ಯಾಸಿ ಅವರ ಬಳಿ ಬಂದು ’ಇದು ಸತ್ಯವಲ್ಲ, ನಿಮ್ಮ ಕಲ್ಪನೆ’ ಎಂದು ರಾಮಕೃಷ್ಣರಿಗೆ ತಿಳಿಸಿದರು. ’ಪರಮಾತ್ಮನಿಗೆ ಯಾವುದೇ ರೂಪವಿಲ್ಲ. ಯಾವ ಕ್ಷಣದಲ್ಲಿ ಚೇತನವು ನಿರಾಕಾರ ಸ್ಥಿತಿಯನ್ನು ತಲಪುತ್ತದೆಯೊ ಆ ಕ್ಷಣವೇ ಪರಮಾತ್ಮನಲ್ಲಿ ಮಿಲನವಾಗುವ ಅನುಭೂತಿಯ ಕ್ಷಣ. ಈ ಸತ್ಯವನ್ನು ಮರೆತು, ಸಾಕ್ಷಾತ್ಕಾರ ಮತ್ತು ದರ್ಶನ ಎಂಬುದು ಭ್ರಮಾತ್ಮಕವಾದುದು’ ಎಂದರು.

 ’ನೀವು ನಿಮ್ಮ ಮನಸ್ಸಿನಲ್ಲಿ ಮೂರ್ತಿಯನ್ನು ಕಲ್ಪಿಸಿಕೊಂಡಿರುವಿರಿ. ಅದೇ ರೀತಿ ಖಡ್ಗವೊಂದನ್ನು ಕಲ್ಪಿಸಿಕೊಂಡು ಆ ಮೂರ್ತಿಯನ್ನು ತುಂಡರಿಸಿರಿ’ ಎಂದು ಆ ಸನ್ಯಾಸಿ ರಾಮಕೃಷ್ಣರಿಗೆ ಹೇಳಿದಾಗ ರಾಮಕೃಷ್ಣ ಪರಮಹಂಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜೀವಮಾನವಿಡಿ ಆಸಕ್ತಿಯಿಂದ ಸಾಧಿಸಿ ಮನದೊಳಗೆ ನಿಲ್ಲಿಸಿದ ಆ ಕಲ್ಪನೆಯ ಮೂರ್ತಿಯನ್ನು ತುಂಡುರಿಸುವುದು ಅವರಿಗೆ ಅಸಾಧ್ಯವಾಗಿತ್ತು. ಆಗ ಆ ಸನ್ಯಾಸಿ ’ಪರಮಾತ್ಮನಿಗಾಗಿ ನೀವು ಒಂದು ಮೂರ್ತಿಯನ್ನು ತೆಗೆದುಹಾಕಲು ಸಿದ್ಧರಿಲ್ಲ ಎಂದರು.’ ಆದರೂ ಛಲ ಬಿಡದ ಆ ಸನ್ಯಾಸಿ ’ನೀವು ಧ್ಯಾನದಲ್ಲಿ ಕುಳಿತುಕೊಳ್ಳಿರಿ. ಆಗ ನಾನು ಗಾಜಿನ ಚೂರಿನಿಂದ ನಿಮ್ಮ ಹಣೆಯನ್ನು ಸೀಳುವೆ. ನಾನು ಹಾಗೆ ಮಾಡುವಾಗ ನೀವು ನಿಮ್ಮೊಳಗೆ ಧೈರ್ಯ ತೆಗೆದುಕೊಂಡು ಆ ಕಾಳಿಯ ಕಲ್ಪನಾಮೂರ್ತಿಯನ್ನು ಎರಡು ತುಂಡುಗಳಾಗಿ ಕತ್ತರಿಸಿ ಬಿಡಿ’ ಎಂದು ಪರಮಹಂಸರಿಗೆ ತಿಳಿಸಿದರು. ಪರಮಹಂಸರು ಈ ಸಾಹಸ ಮಾಡಿದರು. ’ಮೊದಲ ಸಲ ಸಮಾಧಿಯ ಪ್ರಾಪ್ತಿಯಾಯಿತು. ಇಂದು ಸತ್ಯ ಯಾವುದು ಎಂಬುದರ ಅರಿವಾಯಿತು’ ಎಂದು ರಾಮಕೃಷ್ಣ ಪರಮಹಂಸರು ಎಂದು ಸಂತಸ ವ್ಯಕ್ತಪಡಿಸಿದರು.

 ಇಂಥ ದಾರ್ಶನಿಕ ತುಮುಲಗಳ ಮಧ್ಯೆ ಬಾಲಕ ಅನಂತಮೂರ್ತಿಯವರ ಪ್ರಯೋಗ ಮತ್ತು ಪ್ರಬುದ್ಧ ಅನಂತಮೂರ್ತಿಯವರ ವಿಜನ್ (ಕಾಣ್ಕೆ) ಅನ್ನು ಅರ್ಥೈಸಿಕೊಳ್ಳಲಿಕ್ಕಾಗದವರು ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ಧಾರವಾಡ                                            ರಂಜಾನ್ ದರ್ಗಾ
೨೦.೦೬.೨೦೧೪
***

ಮೈತೆರೆದುಕೊಂಡೇ ಉಳಿದ ಬದಲಾಗದ ಭಾರತ


 

 

ಡಾ. ಜಯಪ್ರಕಾಶ್ ಶೆಟ್ಟಿ ಎಚ್.
ಮೈತೆರೆದುಕೊಂಡೇ ಉಳಿದ         ಬದಲಾಗದ ಭಾರತ ಭಾರತ ಇತ್ತೀಚೆಗೆ ಹಾದುಬಂದ ಮಹಾಚುನಾವಣೆಯ ಕಂಪನವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈಗ ಅದರ ಫಲಿತಾಂಶವೂ ಬಂದಿದೆ. ಇಡಿಯ ದೇಶ ಬಯಸಿದ ಬದಲಾವಣೆಯನ್ನು ಕುರಿತ ವ್ಯಾಖ್ಯಾನಗಳೂ ನಡೆಯುತ್ತಿವೆ. ಜನ ಬಯಸುವ ಬದಲಾವಣೆ ಸಂಭವಿಸಿಯೇ ತೀರುತ್ತದೆ ಎಂಬಂತೆ ಮಾಧ್ಯಮಗಳೂ ದಿನಕ್ಕೊಂದರಂತೆ ಕನಸಿನ ಮಾಲೆಯ ಬಿಕರಿಯಲ್ಲಿ ತೊಡಗಿವೆ. ಸರಕು ಮಾರುಕಟ್ಟೆಯನ್ನು ಉತ್ತೇಜಿಸುತ್ತಿರುವ ಜಾಗತೀಕರಣದ ಆರ್ಥಿಕ ನೀತಿಯನ್ನೇ ಕೇಂದ್ರೀಕರಿಸಿ ತರಾವರಿ ಚರ್ಚೆಗಳು ನಡೆಯುತ್ತಿವೆ. ಆದರೆ ಆರ್ಥಿಕ ಸಂರಚನೆಯ ಪುರಾತನ ಮಾದರಿಯನ್ನಾಧರಿಸಿ ನಿರ್ಮಿತವಾದ ದೇಶವೊಂದರ ಸಾಮಾಜಿಕ ಸಂರಚನೆಯನ್ನು ಬದಲಾಯಿಸದೆ, ಸಮಷ್ಟಿಹಿತದ ಬದಲಾವಣೆಯ ಮಾತುಗಳು ಅರ್ಥಹೀನವಾದುವುಗಳೇ ಆಗುತ್ತವೆ. ಅದನ್ನೇ ಋಜುಗೊಳಿಸುವಂತೆ ‘ದೇಶಕ್ಕೆ ಒಳ್ಳೆಯ ದಿನ ಬಂದೇ ಬಿಟ್ಟಿದೆ’ ಎಂದು ಹೇಳುತ್ತಿರುವ ಹೊತ್ತಲ್ಲಿಯೇ, ದಲಿತ, ಅಪ್ರಾಪ್ತ, ಅಶಕ್ತ ಹೆಣ್ಣುಮಕ್ಕಳ ಅತ್ಯಾಚಾರದ ಸುದ್ದಿಯಿಂದ ದೇಶ ಬೆವರಿಕೊಳ್ಳುತ್ತಲೇ ಇದೆ. ಮರ್ಯಾದಾ ಹತ್ಯೆಗಳು ಸಾಮಾನ್ಯ ಸುದ್ದಿಗಳಾಗಿವೆ. ನಿತ್ಯದ ಈ ಘಟನೆಗಳ ವಿವರಗಳಿಗೆ ಹೋಗದೆ, ಇವುಗಳಿಗಿಂತ ಭಿನ್ನವಾದ ಆದರೆ ಬದಲಾಗದ ಭಾರತದ ವಾಸ್ತವವನ್ನು ಇನ್ನಷ್ಟು ಖಚಿತಪಡಿಸುವ ಕರ್ನಾಟಕದ ಎರಡು ಘಟನೆಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಹಾಚುನಾವಣೆಯ ಕುರಿತ ಚರ್ಚೆಯ ನಡುವೆ ಮತ್ತು ಅದರ ಫಲಿತಾಂಶದ ಆಜೂಬಾಜು ಕರ್ನಾಟಕದ ಕರಾವಳಿ ಹಾಗೂ ಉತ್ತರಕರ್ನಾಟಕದ ವಿಜಾಪುರದಲ್ಲಿ ನಡೆದ ಪ್ರತ್ಯೇಕ ಘಟನೆಗಳಿವು. ಒಂದು ಯಾರ ಒತ್ತಾಯವಿಲ್ಲದೆ ನಡೆದ ವ್ಯಕ್ತಿಗತ ನಡಾವಳಿ. ಇನ್ನೊಂದು ಬಲಾತ್ಕಾರಪೂರ್ವಕವಾದುದು. ಆದರೆ ಎರಡೂ ಘಟನೆಗಳು ಈ ದೇಶಕ್ಕೆ ‘ಒಳ್ಳೇ ದಿನ ಬಂದಿಲ್ಲ ಮತ್ತು ಬರುವುದಕ್ಕೂ ಬಿಡಲಾಗುವುದಿಲ್ಲ’ ಎಂಬುದನ್ನೇ ಸಾರಿ ಹೇಳುತ್ತಿವೆ. ಈ ಎರಡೂ ಘಟನೆಗಳು ಅತ್ಯಂತ ದುರ್ಬಲರಿಗೆ ಸಂಬಂಧಿಸಿದವುಗಳಲ್ಲ. ಆದರೆ ಅವೆರಡರ ಹೂರಣವಾಗಿ ಗುಡಿ, ಗದ್ದುಗೆ, ಮಡಿ-ಮೈಲಿಗೆಗಳಿಂದ ಸುತ್ತಿಕೊಂಡ ಈ ದೇಶದ ಸಾಮಾಜಿಕ ಸತ್ಯವಾದ ‘ಜಾತಿ’ ಎನ್ನುವ ಮಹಾಮಾಲಿನ್ಯವೇ ಇದೆ.

ಸಂವಿಧಾನದ ಕಾವಲುಗಾರನ ವಿಪರೀತ ಸಜ್ಜನಿೆ

ದಿನಾಂಕ 26-05-14ರ ದಿನಪತ್ರಿಕೆಯಲ್ಲಿ ವರದಿಯಾದಂತೆ ಬಿಜಾಪುರದ ಸಂಸದರು ಗುಡಿಯೊಂದರ ಒಳಪ್ರವೇಶ ಮಾಡದೆ ಹೊರನಿಂತು ಕೈಮುಗಿದು ಸಜ್ಜನಿಕೆ ಮೆರೆದಿದ್ದರು. ಅಷ್ಟೇ ಅಲ್ಲ ಹಿಂದೆ ಶಾಸಕ, ಸಚಿವ, ಸಂಸದನಾಗಿದ್ದ ದಿನದಿಂದಲೂ ಹೀಗೆಯೇ ಮಾಡುತ್ತಿರುವುದಾಗಿಯೂ, ಅದಕ್ಕೆ ತನ್ನ ತಾಯಿ ‘ದಲಿತರಾದ ತಾವುಗಳು ಗುಡಿ ಪ್ರವೇಶಮಾಡಿ ಮೇಲ್ಜಾತಿಯ ಮನಸ್ಸಿಗೆ ನೋವುಂಟುಮಾಡಬಾರದು’ ಎಂದಿದ್ದ ಸೂಚನೆಯೆ ಕಾರಣವೆಂದೂ ಸ್ಪಷ್ಟೀಕರಣ ನೀಡಿದ್ದರು. ಇದು ಸಂವಿಧಾನಬದ್ಧವಾದ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರೊಬ್ಬರು, ಅಸಮಾನತೆಯ ಸಾಮಾಜಿಕ ಚರಿತ್ರೆಗೆ ಬದಲಾವಣೆ ತರುವ ದಿಸೆಯಲ್ಲಿ ಚಿಂತಿಸಬೇಕಾದವರೊಬ್ಬರು, ಸಂವಿಧಾನದ ವೈಜ್ಞಾನಿಕ ಮನೋಧರ್ಮದ ಆಶಯಕ್ಕೆ ಬದ್ಧವಾಗಿರಬೇಕಾದವರೊಬ್ಬರು ನಡೆದುಕೊಂಡ ಬಗೆ. ‘‘ಗುಡಿ ಪ್ರವೇಶ ಮಾಡಿ ಸವರ್ಣಿಯರ ಮನಸ್ಸು ನೋಯಿಸಬೇಡ’’ ಎಂದು ತಾಯಿ ಬೋಧಿಸಿದ ಭೂತಸಂವಿಧಾನವನ್ನು ಪಾಲಿಸಿ, ದೇಶದ ಸಂವಿಧಾನ ಮತ್ತು ಪ್ರಜಾತಂತ್ರವನ್ನು ಅವರು ಧಿಕ್ಕರಿಸಿದ್ದರು. ಮಂತ್ರಿಯಾಗಿದ್ದ ದಿನದಿಂದಲೂ ಇದೇ ಸಂಭಾವಿತತನದಲ್ಲಿ ನಡೆದುಕೊಂಡುದಾಗಿ ಹೇಳಿಕೊಂಡ ಅವರ ನಡತೆ, ಊಳಿಗಮಾನ್ಯ ಮತ್ತು ಪುರೋಹಿತಶಾಹಿ ಜಂಟಿ ಒಡೆತನಕ್ಕೆ ಪ್ರಿಯವಾದ ಸನ್ನಡತೆಯೇ. ಅದರಲ್ಲಿ ಅನುಮಾನವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳವರ್ಗಕ್ಕೆ ಸೇರಿದ ಸಂಸದನೊಬ್ಬ ತನ್ನದೇ ವರ್ಗದ ಮಿಕ್ಕವರಿಗೂ ಹಾಕಿಕೊಡುವ ಈ ಸಂಭಾವಿಕೆಯ ಮೇಲ್ಪಂಕ್ತಿ ಅಪಾಯಕಾರಿಯಾದುದು. ಇದು ಸಂವಿಧಾನವನ್ನು ಕಾಯಬೇಕಾದವನ ಸಜ್ಜನಿಕೆ ಅಲ್ಲವೇ ಅಲ್ಲ. ಇದು ಜನತಂತ್ರದ ಸಮಬಾಳಿನ ಆಶಯವನ್ನೇ ಮಣ್ಣುಪಾಲಾಗಿಸುವಂಥದ್ದು.

ಇನ್ನೊಂದು ನೆಲೆಯಲ್ಲಿ ಇದು ಗೋಡೆಯೊಡೆದು ಗರ್ಭಗುಡಿಯ ಒಳಗಿನಿಂದಲೇ ಕನಕನಿಗೆ ಮುಖತೋರಿದ ಉಡುಪಿ ಕೃಷ್ಣನ ಮಿಥ್‌ಗೆ ಸಮೀಪವೂ ಇದೆ. ಕೃಷ್ಣ ಗೋಡೆಗೆ ಆಧಾರವಾದ ನೆಲಗಟ್ಟಿನ ಆಯ(ಒಳಾಂಗಣ)ದಿಂದ ಕೆಳಕ್ಕಿಳಿಯದೆ, ಯಾವುದನ್ನೂ ಉಲ್ಲಂಘಿಸದೆ (ಧರ್ಮಗ್ಲಾನಿಯಾಗದಂತೆ) ಕನಕನಿಗೆ ದರ್ಶನದ ಅವಕಾಶ ಮಾಡಿಕೊಟ್ಟ. ಕನಕನೂ ಒಳಹೋಗಿಲ್ಲ. ಮಾನ್ಯ ಸಂಸದರು ಮಾಡಿದ್ದೂ ಇದನ್ನೇ. ಸಂಸದ ರಮೇಶ ಜಿಗಜಿಣಗಿ ತನಗೆ ಓಟು ಹಾಕಿದ ಮೇಲ್ಜಾತಿಯ ಜನ ಏನೂ ಅಂದುಕೊಳ್ಳಲು ಅವಕಾಶವಿರದಂತೆ ದೇಗುಲದ ಹೊರಗೇ ನಿಂತು ದೇವರು ಮತ್ತು ದೇವಸಂಜಾತರಿಬ್ಬರನ್ನೂ ಖುಷಿಪಡಿಸಿದರು. ಹೀಗೆ ದೇವರ ಸ್ಥಾನದಲ್ಲಿದ್ದ ಕೃಷ್ಣ, ಜನಪ್ರತಿನಿಧಿಯ ಸ್ಥಾನದಲ್ಲಿದ್ದ ಜಿಗಜಿಣಗಿ, ಈ ಇಬ್ಬರೂ ಒಂದೇ ರೀತಿ ನಡೆದುಕೊಳ್ಳುವಂತೆ ನಿಯಂತ್ರಿಸಿದ ಶಕ್ತಿ ಮಾತ್ರ ಎರಡೂ ಕಾಲಕ್ಕೆ ಒಂದೇ ಎಂಬುದು ಮುಖ್ಯ. ಅದಕ್ಕೆ ದೇವರು ಮತ್ತು ಜನಪ್ರತಿನಿಧಿ ಇಬ್ಬರನ್ನೂ ಧರ್ಮಸಂಸ್ಥಾಪನೆಗಾಗಿ ಹೇಗೆ ದುಡಿಸಿಕೊಳ್ಳಬೇಕೆಂಬುದು ಚನ್ನಾಗಿಯೇ ಗೊತ್ತು.


ಯಮನ ಮನುಷ್ಯರೇ ಮೇಲು

ಕಾಕತಾಳೀಯವಾಗಿ ಈ ಘಟನೆಗೆ ಸ್ವಲ್ಪಮೊದಲು ಉಡುಪಿಯ ಕೃಷ್ಣದೇಗುಲದಲ್ಲಿ ಯಾವಾಗಲೂ ಆಗುತ್ತಿರುವಂತೆಯೇ ಪಂಕ್ತಿಭೇದದ ಇನ್ನೊಂದು ಘಟನೆ ಸುದ್ದಿಯಾಯಿತು. ಅದು ಊಟಕ್ಕೆ ಕುಳಿತ ಹೆಣ್ಣುಮಗಳೊಬ್ಬಳನ್ನು ಹೊರಹಾಕಿದ ಸುದ್ದಿ. ನಮ್ಮ ನಡುವಿನ ನಂಬಿಕೆಯಂತೆ ‘ಊಟಕ್ಕೆ ಕುಳಿತವರನ್ನು ಯಮನ ಮನುಷ್ಯರೂ ಊಟಮಾಡಿ ಏಳುವ ತನಕ ಕಾಯ್ತೆರಂತೆ’. ಹಾಗೆಯೇ ಹೆಣ್ಣು ಮಕ್ಕಳಿಗೆ ಸಾರ್ವಜನಿಕವಾಗಿ ಅಪಮಾನ ಮಾಡುವುದನ್ನು ಬಹುಜನರ ನಂಬಿಕೆ ಸರಿ ಎನ್ನಲಾರದು. ಆದರೆ ಆ ನಂಬಿಕೆಗಳನ್ನೇ ಸುಳ್ಳು ಮಾಡುವಂತೆ ಕೃಷಮಠದ ಬ್ರಾಹ್ಮಣರಪಂಕ್ತಿಯಲ್ಲಿ ಊಟಕ್ಕೆ ಕುಳಿತಳೆನ್ನುವ ಕಾರಣಕ್ಕೆ ಶೂದ್ರ ಹೆಣ್ಣುಮಗಳೊಬ್ಬಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಯಿತು.

ಅಚ್ಚರಿ ಎಂದರೆ ಹಾಗೆ ಹೊರಹಾಕಿಸಿ ಕೊಂಡಾಕೆ ಶೂದ್ರಳಾಗಿದ್ದರೂ, ತೀರಾ ತಳವರ್ಗದವಳಲ್ಲ. ಆಕೆಯದು ಮಠವಿಲ್ಲವಾಗಿಯೂ ಮತಿಕಳೆದುಕೊಳ್ಳದ ಪ್ರಭಾವೀ ಸಮಾಜವೇ. ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲೆಗಳಲ್ಲಿ ಸ್ಥಳೀಯವಾಗಿ ಬಲಾಢ್ಯ ಎನಿಸಿಕೊಂಡ ಜಾತಿಯೂ ಹೌದು. ಉಡುಪಿಯ ಕೃಷ್ಣದೇವಸ್ಥಾನವನ್ನೂ ಒಳಗೊಂಡು ಕರಾವಳಿಯ ಹೆದ್ದಾರಿಯುದ್ದಕ್ಕೂ ಇರುವ ಬಹುಸಂಖ್ಯೆಯ ಸ್ವಾಗತಗೋಪುರ ಹಾಗೂ ದೇಗುಲ ಕಟ್ಟಡಗಳ ಮೇಲಿರುವ ದಾನಿಗಳ ಹೆಸರು ಯಾವ ಜಾತಿಗೆ ಸೇರಿದೆಯೋ, ಅದೇ ಜಾತಿಗೆ ಆಕೆಯೂ ಸೇರಿದ್ದಳು! ಆಕೆ ಓದಿಕೊಂಡ ಸುಶಿಕ್ಷಿತ ಅಧ್ಯಾಪಕಿ ಬೇರೆ. ಇಷ್ಟಿದ್ದರೂ ಎಲೆ ಇಟ್ಟುಕೊಂಡು ಊಟಕ್ಕೆ ಕುಳಿತವಳನ್ನು ಏಕಾಏಕಿ ಎಬ್ಬಿಸಿ ಹೊರಕಳಿಸಲಾಗಿತ್ತು. ಪ್ರವೇಶ ನಿರಾಕರಿಸಲ್ಪಟ್ಟ ಕನಕನ ಸಂದರ್ಭದಲ್ಲಾದಂತೆ ಇಲ್ಲಿ ಕೃಷ್ಣ ಗೋಡೆಯೊಡೆಯಲಿಲ್ಲ. ಆದರೆ ಸಾರ್ವಜನಿಕವಾಗಿ ಈ ಕುರಿತು ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದವು. ಊಟದ ಪಂಕ್ತಿಯಿಂದ ಹೊರಹಾಕಲ್ಪಟ್ಟ ಹೆಣ್ಣುಮಗಳ ಜಾತಿಸಂಘಟನೆಯ ನೆಲೆಯಿಂದಲೂ ಒಂದಿಷ್ಟು ಪ್ರತಿಕ್ರಿಯೆಗಳು ಬಂದುವು. ಇದೆಲ್ಲವನ್ನೂ ಮೀರಿದ ಇನ್ನೊಂದು ವಿಚಿತ್ರವೂ ನಡೆಯಿತು. ಕುಟುಂಬದ ಹಿರೀಕರಾದ ‘ಅಜ್ಜಮಾವಂದಿ’ರನ್ನೇ ತಮ್ಮ ಪಾಲಿನ ದೈವಗಳೆಂದು ಭಾವಿಸಿ, ಪಾದಪೂಜೆಯಂತಹ ಅನಿಷ್ಠ ಸಂಪ್ರದಾಯದಿಂದ ಮುಕ್ತವಾಗಿ, ಗುರುವಿಲ್ಲದೆಯೂ ಗುರಿತಪ್ಪದ ‘ಅಳಿಯಕಟ್ಟಿನ’ ಆ ಸಮುದಾಯದಿಂದ ಮಠಧ್ವನಿಯೊಂದು ಮೂಡಿಬಂತು!?
ವಿಚಿತ್ರವೆಂದರೆ ಆ ಧ್ವನಿ ಅಪಮಾನಿತಳಾದ ಹೆಣ್ಣಿನ ಪರ ನಿಲ್ಲುವುದಕ್ಕಿಂತ ಎಬ್ಬಿಸಿ ಕಳುಹಿಸಿದವರ ಅಮಾನವೀಯ ನಡೆಯನ್ನು ಕುರಿತ ಸಾರ್ವಜನಿಕ ಚರ್ಚೆಯನ್ನು ತಡೆಯುವ ಆಸಕ್ತಿ ತೋರಿತು! ಜೊತೆಗೆ ‘ಶೆಟ್ಟಿ ಸಮುದ್ರ’ ಎಂಬ ಹೆಮ್ಮೆಯ ಇತಿಹಾಸ ತಮ್ಮದೆಂದು ಇಂದಿಗೂ ಅಭಿಮಾನ ಪಡುತ್ತಿರುವವರ ‘ಅಭಿಮಾನದ ಸಮುದ್ರ’ವನ್ನು ಮಾಯಕಮಾಡಿ ‘ಕೆರೆ’ಯಾಗಿಸಿತ್ತು. ಹೀಗೆ ಈ ಸಂದರ್ಭದಲ್ಲಿ ಆ ಅಪಮಾನಕ್ಕೆ ಸಾಂವಿಧಾನಿಕ ಪರಿಹಾರವೂ ಸಿಗಲಿಲ್ಲ. ಸಮುದಾಯದ ಧಾರ್ಮಿಕ ಮುಖವೆಂದು ಹೇಳಿಕೊಂಡು ತನ್ನ ಹುಟ್ಟಿಗೆ ಯತ್ನಿಸುತ್ತಿರುವ ಶಕ್ತಿಯೂ ತನ್ನದೇ ಮಾತೃಮೂಲೀಯ ಪರಂಪರೆಯ ಹೆಣ್ಣುಮಗಳ ಘನತೆಗೆ ಉಂಟಾದ ಕುಂದನ್ನು ಯೋಚಿಸದಂತೆ ತಡೆಯುವ ವಿಪರೀತ ಯತ್ನವನ್ನೇ ಮಾಡಿತು. ಸಮುದಾಯ ಹಿತಚಿಂತಕನೆಂದು ಘೋಷಿಸಿಕೊಳ್ಳುತ್ತಿರುವ ಈ ಮುಖ ಸಮುದಾಯದಲ್ಲಿ ಇಲ್ಲಿಯವರೆಗೆ ಇರದ ಪಾದಪೂಜೆಯ ಅನಾಗರಿಕತೆಯನ್ನು ರೂಢಿಸುತ್ತಿರುವ ಹೊತ್ತಿನಲ್ಲೇ, ಜಾತಿಶ್ರೇಷ್ಠರ ಪಂಕ್ತಿಭೇದದ ಕಾವಲಿಗೂ ಬಳಕೆಯಾಗುತ್ತಿದೆ! ಇದು ಯಾರ ಪಾಲಿನ ಒಳ್ಳೆಯ ದಿನಗಳ ಸೂಚನೆ? (ತನ್ನ ಸ್ವಾಭಾವಿಕ ಇರುವಿಕೆಯನ್ನೇ ಕಳೆದುಕೊಳ್ಳುವಂತೆ ಬಲಾತ್ಕರಿಸುತ್ತಿರುವ ಈ ಬೆಳವಣಿಗೆಯನ್ನು ಸಮುದಾಯ ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಿದೆ.)


ಹಳೆಯ ಹುಣ್ಣೂ ಹೊಸ ಪೈಲ್ವಾನರೂ

ಇವೇನೂ ಹೊಸ ಗಾಯಗಳಲ್ಲ. ಈ ಸಮಾಜದ ಹಳೆಯ ಹುಣ್ಣುಗಳೇ. ಗುಣಕಾಣದ ಈ ಹುಣ್ಣುಗಳಿಂದಾಗಿಯೇ ಸಮಾಜವು ಆಧುನಿಕಗೊಳ್ಳುತ್ತಿರುವ ಭ್ರಮೆಯ ನಡುವೆ ಗುಡಿಯ ಹೊರಗೆ ನಿಲ್ಲಬೇಕಾದವರು ಹೊರಗೇ ನಿಂತು ವಿಧೇಯತೆ ತೋರುತ್ತಿದ್ದಾರೆ. ಹೊರನಿಲ್ಲಿಸಿದ ಗುಡಿಯೊಡೆಯರಿಂದ ಸಜ್ಜನಿಕೆಯ ಶಿಪಾರಸುಪತ್ರ ಪಡೆಯುತ್ತಿದ್ದಾರೆ! ಇದಕ್ಕೆ ಬದಲಾಗಿ ಹಳೆಯದನ್ನು ಧಿಕ್ಕರಿಸಿ ಒಳಹೋದವರು ಹೊರದಬ್ಬಿಸಿಕೊಂಡು ಸಾರ್ವಜನಿಕ ಅಪಮಾನ ಅನುಭವಿಸುತ್ತಿದ್ದಾರೆ. ಈ ಹುಣ್ಣಿಗೆ ಮುಲಾಮು ಹಚ್ಚುತ್ತಾ ಆಗಾಗ ಮತ್ತೆ ಮತ್ತೆ ಗೆಬರಿ ಗುಣವಾಗದಂತೆ ಉಳಿಸುವ ತಂತ್ರಗಾರಿಕೆ ಮಾಡುವವರು ದಲಿತರ ಕೇರಿಗೆ ಭೇಟಿಕೊಡುತ್ತಾರೆ. ಕೆಳಜಾತಿಗಳಿಗೆ ದೀಕ್ಷೆಕೊಡುವ ಮಾತಾಡುತ್ತಾರೆ. ಮಾಂಸತಿನ್ನುವವರೊಂದಿಗೆ ಸಮವಾಗಿ ಕೂತು ಉಣ್ಣಲಾಗದೆಂಬುದನ್ನೂ ದ್ವಂದ್ವವಿಲ್ಲದೆ ಸಾರಿಕೊಂಡು ಬರುತ್ತಾರೆ. ನಾವೆಲ್ಲರೂ ಒಂದೇ ಎನ್ನುತ್ತಲೇ ಶಿಷ್ಟಾಚಾರದ ಪರಂಪರೆಯನ್ನು ಮೀರಲಾಗದೆಂದೂ ಅದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ. ಅಷ್ಟೇ ಅಲ್ಲ, ಅದೇ ಮಾತನ್ನು ಹೊರನಿಲ್ಲಬೇಕಾದವರ ಬಾಯಿಂದಲೂ ಅವರು ಉತ್ಪಾದಿಸಬಲ್ಲರು. ವಿಧೇಯ ಸಿಪಾಯಿಗಳನ್ನು ಬೇರೆ ಬೇರೆ ರೂಪದಲ್ಲಿ ಬಿತ್ತನೆ ಮಾಡಿ ಬೆಳೆಸಿಡಬಲ್ಲರು. ಹಾಗಾಗಿಯೇ ಸಾಂವಿಧಾನಿಕ ಧ್ವನಿಯಾಗುವ ಸಂಸದನಿರಲಿ, ತಳಮೂಲ ಸಮುದಾಯದ ಮಠೀಯ ಆವೃತ್ತಿಗಳಿರಲಿ, ಎರಡೂ ಹೇಳಿಕೊಟ್ಟ ಪಾಠವನ್ನೇ ಬೇರೆ ಬೇರೆ ರೀತಿಯಲ್ಲಿ ಒಪ್ಪಿಸಿ ಯಥಾಸ್ಥಿತಿಯ ಕಾವಲಿಗೆ ನಿಲ್ಲುತ್ತಿವೆ. ಗಣತಂತ್ರವ್ಯವಸ್ಥೆಯ ಸರ್ವಮಾನ್ಯವಾದ ಸಂವಿಧಾನದ ಸಮಕ್ಷಮದಲ್ಲೇ ಎಲ್ಲವೂ ಸಾಧ್ಯವಾಗುತ್ತಿವೆ!

ಇವು ಒಂದೋ ಎರಡೋ ಜಾತಿಗಷ್ಟೇ ಸಂಭವಿಸುವ ಅಪಮಾನದ ಬಿಡಿಘಟನೆಗಳಲ್ಲ. ಇದೊಂದು ಹರಿಗಡಿಯದ ಸರಪಣಿ. ವಿರೋಧಿಸಬೇಕಾದುದು ಈ ಸರಪಣಿಯನ್ನೇ ಅಲ್ಲದೆ ಬಿಡಿತುಂಡುಗಳನ್ನಲ್ಲ. ಹಾಗಾಗಿ ಪಟ್ಟಭದ್ರರ ಹಿಡಿತಕ್ಕೆ ಪ್ರತಿಯಾಗಿ ಬಂಟರೋ, ಇನ್ನಾರೋ ತಮಗಾದ ಅನ್ಯಾಯವನ್ನು ಪ್ರತಿಭಟಿಸುವ ವೇಳೆ ತಮ್ಮಿಂದಾಗುತ್ತಿರುವ ಅನ್ಯಾಯದ ಪ್ರಾಯಶ್ಚಿತ್ತಕ್ಕೂ ತಯಾರಿರಬೇಕು. ತಮಗಿಂತ ಕನಿಷ್ಠರೆಂದು ನೀರು, ನೆಲದಿಂದ ದೂರ ಇರಿಸಿಕೊಂಡು ಬಂದವರೊಂದಿಗೆ ಒಡನಾಡುವ ಸಹತ್ವಕ್ಕೆ ತಯಾರಾಗಬೇಕು. ಉದಾಹರಣೆಗೆ ಶತಮಾನಗಳ ಕಾಲದಿಂದ ದೈವದ ಮನೆಯ ಹೊರಗೆ ನಿಂತು ದೋಲು ಹೊಡೆಯುತ್ತಾ ಇನ್ನೂ ಅಲ್ಲೇ ಕುಳಿತಿರುವ ಕೊರಗರಂತಹ ಮುಗ್ದರನ್ನು ಅವರು ಆಗ್ರಹಿಸುತ್ತಿರುವಂತೆಯೇ, ದೈವದಮನೆಯ ಆವರಣದೊಳಗೆ ಕೈಪ್ರಸಾದಕೊಟ್ಟು ಕರೆದುಕೊಳ್ಳುವ ಔದಾರ್ಯ ಸಾಧ್ಯವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕವಾದ ಪಿತ್ರಾರ್ಜಿತ ಹಕ್ಕಿನ ಯಥಾಸ್ಥಿತಿಯಲ್ಲಿ ಪಲ್ಲಟ ಸಾಧ್ಯವಾಗಬೇಕು. ಇದೆಲ್ಲವನ್ನೂ ಮರೆತು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡಿಸಬಲ್ಲ ಕಾರುಗಳಿಗಾಗಿ ಹಾಸಿಬಿದ್ದ ರಸ್ತೆಯನ್ನೋ, ಎತ್ತರಕ್ಕೇರಿ ಮತ್ತೆಂದೋ ಮುರಿದು ಬೀಳುವ ಕಟ್ಟಡಗಳ ಸಂದಣಿಯನ್ನೋ ಬದಲಾದ ಭಾರತವೆಂದುಕೊಳ್ಳಲಾಗದು. ಯಾಕೆಂದರೆ ಸಾಮಾಜಿಕ ಹೊಲಸು ಮತ್ತು ಆರ್ಥಿಕ ಅಸಮಾನತೆಯಿಂದ ಪಾರಾಗುವುದಷ್ಟೇ ಬದಲಾದ ಭಾರತವನ್ನು ಕಾಣಿಸಬಲ್ಲದು.

 ಆದರೆ ಮಠೀಯತೆ ಮತ್ತು ಜಢಸಾಂಪ್ರದಾಯಿಕತೆಯಲ್ಲಿ ಇಂತಹ ಕ್ರಿಯಾಗತಿಯನ್ನು ತಡೆಯುವ ಹುನ್ನಾರಗಳೇ ಇವೆ. ಅದಕ್ಕೆಂದೇ ಮಹಾಸಂಸ್ಥಾನಗಳು, ಪುನರುತ್ಥಾನ, ಜೀರ್ಣೋದ್ಧಾರಗಳೆಂಬ ಹೊಸಪೈಲ್ವಾನರುಗಳ ಪಡೆಯನ್ನು ಅವು ಅಣಿಗೊಳಿಸಿಕೊಳ್ಳುತ್ತಾ ಬರುತ್ತಿವೆ. ಮೂಲಭೂತವಾಗಿ ಯಾವುದೇ ಧರ್ಮ, ಜಾತಿಯ ಸಾಂಸ್ಥಿಕಸ್ವರೂಪವು ಪ್ರತಿಷ್ಠೆಯ ಮೇಲಾಟವನ್ನು ನಡೆಸಬಹುದಲ್ಲದೆ, ಜೀವಪರತೆ, ಸಮಬಾಳಿನ ಪರವಾದ ಹೋರಾಟವನ್ನಲ್ಲ. ಅದಕ್ಕೆಂದೇ ಕುವೆಂಪು ಱಗುಡಿ ಚರ್ಚು ಮಸೀದಿಯನ್ನು ಬಿಟ್ಟು ಹೊರಬನ್ನಿೞಎಂದು ಕೂಗಿ ಹೇಳಿದರು. ಯಾಕೆಂದರೆ ಯಥಾಸ್ಥಿತಿಯ ಪರವಾದ ವಿಧೇಯತೆ, ಅದರ ವಕಾಲತ್ತಿನ ಪೀಠಗಳನ್ನು ಭದ್ರಪಡಿಸುವ ಯಾವತ್ತೂ ಚಟುವಟಿಕೆಗಳು ಈ ದೇಶವನ್ನು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಜ್ಯೋತಿಭಾಪುಲೆ ಕನಸಿನ ಸಮಷ್ಟಿಹಿತದ ಭಾರತವಾಗಿಸಲಾರವು ಎಂಬ ಖಚಿತ ಅರಿವು ಅವರಿಗಿತ್ತು. ಅಂತೆಯೇ ಮೇಲಿನ ಎರಡೂ ಘಟನೆಗಳಲ್ಲೂ ಪಟ್ಟಭದ್ರರ ಹಿತಾಸಕ್ತಿಯ ಅಚ್ಚುಕಟ್ಟಾದ ಕಾವಲುಗಾರಿಕೆ ಇದೆ. ಎರಡರಲ್ಲೂ ಅಂಟೋನಿಯೋ ಗ್ರಾಮ್ಷಿ ಹೇಳುವ ಸಬಾಲ್ಟ್ರನ್(ಕಾಲಾಳುಪಡೆ)ಗಳಿವೆ. ಈ ಕಾಲಾಳು ಪಡೆಗಳ ಗಡಿಕಾವಲಿನಲ್ಲಿ ಹಾಯಾಗಿ ಮಲಗಿರುವ ಪುರೋಹಿತಶಾಹಿಯ ಪಾವಿತ್ರ್ಯದ ನಿರಾತಂಕ ನಿದ್ರೆ ಇದೆ.


ಪಾವಿತ್ರ್ಯಕ್ಕೆ ಪರಾಶಕ್ತಿ ಇಲ್ಲ

    ಪಾವಿತ್ರ್ಯವಾದರೋ ಅತ್ಯಂತ ದುರ್ಬಲವಾದುದು. ದೇವರು, ದೇಗುಲ, ನೆಲ, ನೀರು ಇವೆಲ್ಲವನ್ನೂ ಮನುಷ್ಯ ಪ್ರವೇಶದಿಂದ ಕಾಯುತ್ತಾ ತಮ್ಮ ಪಾವಿತ್ರ್ಯವನ್ನು ರಕ್ಷಿಸಿಕೊಂಡಿದ್ದೇವೆ ಎಂದು ಬೀಗುವವರು ಗಮನಿಸಲೇಬೇಕಾದ ಪುಟ್ಟ ಪ್ರಕರಣವೊಂದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಱಯೇಗ್ದಾಗೆಲ್ಲಾ ಐತೆೞಕೃತಿಯಲ್ಲಿದೆ. ಪಾವಿತ್ರ್ಯದ ದುರ್ಬಲತೆಯ ಜೊತೆಗೆ ಅದರ ಕ್ರೌರ್ಯವನ್ನೂ ಮನಮುಟ್ಟುವಂತೆ ಹೇಳುವ ಆ ಭಾಗದಲ್ಲಿ, ಸಾಧಕ ಮುಕುಂದೂರು ಸ್ವಾಮಿಗಳಲ್ಲಿಗೆ ಬಂದ ಸಾಮಾನ್ಯನೊಬ್ಬ ಅಸ್ಪೃಶ್ಯ ಹುಡುಗ ಮಾಡಿದ ಗುಡಿಪ್ರವೇಶ, ಅದರಿಂದ ದೇವರಿಗಾದ ಮಾಲಿನ್ಯ, ಅದಕ್ಕೆ ಪರಿಹಾರವಾಗಿ ಆ ದಲಿತನಿಗೆ ಮಾಡಿದ ಶಿಕ್ಷೆ ಮತ್ತು ದೇವರಿಗೆ ಮಾಡಿದ ಶುದ್ಧೀಕರಣಗಳನ್ನು ಸಂಭ್ರಮದಿಂದಲೇ ಹೇಳಿಕೊಳ್ಳುತ್ತಾನೆ. ಹೀಗೆ ತಮ್ಮಲ್ಲಿ ಸಮಾಚಾರ ನಿವೇದಿಸಿಕೊಂಡ ಆತನಿಗೆ ಕೃಷ್ಣಶಾಸ್ತ್ರಿಗಳ ಎದುರಲ್ಲೇ, ಱಱ್.ಅರಿಜನ ಈಶ್ವರನ ಗುಡಿಯಾಕೆ ಓದ್ಮಾಲೆ ದೇವರಿಗೆ ಸೂತ್ಕ ಆಗೈತೆ ಬಿಡು. ಅಂತೂ ಅವಂಗೆ ದಂಡ ಹಾಕಿ, ಕತ್ತೆ ಮ್ಯಾಲೆ ಮೆರವಣಿಗೆ ಮಾಡಿ, ರುದ್ರಾಭಿಷೇಕ- ಅದೂ ಇದೂ ಮಾಡಿದ ಮ್ಯಾಲೆ ದೇವರು ಸುದ್ದಾಯ್ತು ಬಿಡುೞೞಎಂದೆನ್ನುತ್ತಲೇ ಬಂದವನು ಸ್ವಾಮಿಗಳ ಮಾತಿಗೆ ಸಂತೋಷಪಟ್ಟು ಹೌದೆನ್ನುವಂತೆ ಸಮ್ಮತಿಸುತ್ತಾನೆ. ಆದರೆ ಅಷ್ಟಕ್ಕೇ ಮಾತು ನಿಲ್ಲಿಸದ ಸ್ವಾಮಿಗಳು ಮತ್ತೆ ಕೃಷ್ಣಶಾಸ್ತ್ರಿಗಳ ಕಡೆಗೆ ತಿರುಗಿ ನಗುತ್ತಾ, ಱಱನೋಡಪ್ಪಾ ಒಬ್ಬ ಅರಿಜನರ ಹುಡುಗ ದೇವರ್ ಗುಡಿಯಾಕೋದ್ರೆ ಆ ದೇವರಿಗೆ ಮೈಲಿಗೆ ಬಂದು ಸೂತ್ಕ ಆಯ್ತು ಅಂದ್ಮೇಲೆ ಆ ಇಂದುಳಿದೊನ ಪೌರು ಯಂತಾದ್ದಿರಬೇಕು! ದೇವರ ಪವರಿನಿಂದ ಅವನು ಸುದ್ದ ಆಗಿ ಚೊಕ್ಕವಾಗ್ಬೇಕಪ್ಪ. ಅದು ಬಿಟ್ಟು ಅವನ ಸಕ್ತೀನೇ ದೊಡ್ಡದಾಗಿ ದೇವರೇ ಕೆಟ್ಟೋಯ್ತು ಅಂದ್ರೆ ಅದೆಂತ ದೇವ್ರ?! ಸೋಜ್ಗ ನೋಡಪ್ಪ. ಇದಕ್ಕೇನೆನ್ನಬೇಕು!ೞೞಎಂದು ಮತ್ತೆ ಮತ್ತೆ ನಕ್ಕರಂತೆ.(ಯೇಗ್ದಾಗೆಲ್ಲಾ ಐತೆೞಅಭಿನವ ಪ್ರಕಾಶನ, 2010, ಪು.100). ಶುದ್ಧಾಶುದ್ಧಗಳು ಎಂತಹ ಅಪಕಲ್ಪನೆಗಳು ಎಂಬುದನ್ನು ಇದಕ್ಕಿಂತ ಸೊಗಸಾಗಿ ಬೇರೆ ಹೇಳಬೇಕಿಲ್ಲ.

  ಹೀಗೆ ಪರಿಶುದ್ಧರು ತಾವೆಂದುಕೊಳ್ಳುವವರು ಮೈಲಿಗೆಯವರನ್ನು ಶುದ್ಧಮಾಡುವ ಬದಲು ತಾವೇ ಮಲಿನವಾಗುತ್ತೇವೆ ಎಂದು ಬೆಚ್ಚಿಬೀಳುತ್ತಾರೆ. ಅಷ್ಟಕ್ಕೇ ನಿಲ್ಲದೆ ತಾವು ಮಲಿನವಾದರೆ ಲೋಕ ಕೆಡುತ್ತದೆ ಎಂದೂ ಬೆದರಿಸುತ್ತಾರೆ. ಈ ನೀಚತನ ಕೊಳೆತು ನಾರುವ ಗಂಗೆಯ ಮಾಲಿನ್ಯಕ್ಕಿಂತಲೂ ಅಪಾಯಕಾರಿ. ಈ ಕಠೋರ ಮಾಲಿನ್ಯದ ಹೂರಣ ದುರ್ಬಲವಾದ ಮಡಿಯ ಕೆಸರೇ. ಮೌಢ್ಯ ಮತ್ತು ಹಿತಾಸಕ್ತಿಗಳ ಮುಷ್ಟಿಯಲ್ಲಿ ಸಿಕ್ಕು ಕಿಲುಬುಗೊಂಡ ಪುರಾಣದ ಪರಿಶುದ್ಧ ಗಂಗೆಯಂತೆ, ಸಮಾಜಗಂಗೆಯೂ ಈ ಪಾವಿತ್ರ್ಯದಿಂದಲೇ ಪರಿತಪಿಸುತ್ತಿದೆ. ಹಾಗಾಗಿ ಗಂಗೆಯ ಪಾತ್ರವನ್ನು ತುಂಬಿಕೊಂಡ ಹೂಳೆತ್ತಿದಂತೆ ಸಮಾಜಗಂಗೆಯ ಒಡಲಿಗಂಟಿದ ಱಮಡಿೞಎಂಬ ಹೊಲಸನ್ನು ಮೊದಲು ತೆರವು ಮಾಡಬೇಕಿದೆ. ಮೈಲಿಗೆಯ ಪವರಿಗೆ ಕೆಡುವ ದೇವರನ್ನೆಸೆದು ಮಡಿಯಿಲ್ಲದ ದೇವರನ್ನು ಸಾಧ್ಯವಾಗಿಸಿಕೊಳ್ಳಬೇಕಿದೆ. ಅಲ್ಲಿಯ ತನಕ ಮಡಿಯ ಕಾವಲಿಗೆ ನಿಂತ ಪಡೆಯ ಪಹರೆಯಲ್ಲಿ ಊಟದ ಪಂಕ್ತಿಯಿಂದ ಉಚ್ಛಾಟಿಸಿಕೊಳ್ಳುವ ಹಣೆಬರಹ, ಪಾರ್ಲಿಮೆಂಟ್ ಭವನವನ್ನು ಹೊಕ್ಕೂ ಗುಡಿಯಿಂದ ಹೊರಗುಳಿಯುವ ಸಜ್ಜನಿಕೆಗಳ ಱಗತಭಾರತೞಹೀಗೆ ನಿರ್ಲಜ್ಜವಾಗಿ ಮೈತೆರೆದುಕೊಂಡಿರುತ್ತದೆ.

Wednesday, June 25, 2014

ಬುದ್ಧಿಜೀವಿಗಳ ಅವಹೇಳನ ನಿಲ್ಲಲಿ

     ’ಬುದ್ಧಿಜೀವಿಗಳು’, ’ವಿಚಾರವಾದಿಗಳು’, ’ಚಿಂತಕರು’ ಮೊದಲಾದ ಪರಿಭಾಷೆಗಳನ್ನು ಅಪಮಾನಿಸುವ, ತುಚ್ಛೀಕರಿಸುವ, ಲೇವಡಿ ಮಾಡುವ ಹಾಗೂ ಬುದ್ಧಿಜೀವಿಗಳನ್ನು ಬೆದರಿಸುವ, ಸದೆಬಡೆವ ಹಾಗೂ ಅಪ್ರಸ್ತುತಗೊಳಿಸುವ ಸಾಂಸ್ಕೃತಿಕ ರಾಜಕಾರಣ ಹಿಂದೆಂದಿಗಿಂತಲೂ ಇಂದು ತೀವ್ರವಾಗಿ ಕ್ರಿಯಾಶೀಲವಾಗಿದೆ. ಈ ಬಗೆಯ ಮನೋಧರ್ಮವನ್ನು ಸಾಮಾಜಿಕ ವಿವೇಕವಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ನವಬಂಡವಾಳವಾದ ಹಾಗೂ ಕೋಮುವಾದಗಳು ಸಮಾಜವನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಡೆಸುತ್ತಿರುವ ಸಾಂಸ್ಕೃತಿಕ ಕಾರ್ಯಾಚರಣೆಗಳಲ್ಲಿ ಇದೂ ಒಂದು. ಕಠೋರ ಸತ್ಯವನ್ನು ನುಡಿವ ಚಿಂತಕರನ್ನು ಹತ್ತಿಕ್ಕುವ ಕೊಲ್ಲುವ ಚರಿತ್ರೆ ಇಂದು ನಿನ್ನೆಯದಲ್ಲ. ಚಾರ್ವಾಕರನ್ನು ಹತ್ತಿಕ್ಕಲಾಯಿತು. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಬುದ್ಧಿಜೀವಿಗಳನ್ನು ಹತ್ತಿಕ್ಕಲಾಯಿತು. ಮಧ್ಯಕಾಲೀನ ಯುರೋಪಿನಲ್ಲಿ ಚರ್ಚು ಈ ಕೆಲಸ ಮಾಡಿತು. ಕರ್ನಾಟಕದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಮತ್ತು ಹಿಂದೂ ಪುರೋಹಿತಶಾಹಿಗಳು ಲೇಖಕರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಯತ್ನವೂ ಹೊಸದಲ್ಲ. ಈ ಪಟ್ಟಿಗೆ ಕಳೆದ ಮೂರು ದಶಕಗಳಿಂದ ಬಲಿಷ್ಠ ಜಾತಿಗಳಲ್ಲಿರುವ ಕೆಲವೇ ಸಂಖ್ಯೆಯ ಪ್ರತಿಗಾಮಿಗಳೂ ಸೇರಿದ್ದಾರೆ. ಅಸಮಾನತೆ ಮತ್ತು ಮೌಢ್ಯಗಳ ವಿರುದ್ಧ ದನಿ ಎತ್ತುವ ಬುದ್ಧಿಜೀವಿಗಳ ನಿಲುವುಗಳು ಪಟ್ಟಭದ್ರರ ವರ್ಗಹಿತಾಸಕ್ತಿಗೆ ಅಪ್ರಿಯವಾಗುವುದರಿಂದ ಅವರನ್ನು ಪರೋಕ್ಷವಾಗಿ ಬಡಿಯಲು ನೆಪಗಳನ್ನು ಹುಡುಕಲಾಗುತ್ತದೆ. ಡಾ. ಯು.ಆರ್. ಅನಂತಮೂರ್ತಿಯವರ ವಿಷಯದಲ್ಲಿಯೂ ಅದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗೆಯ ಸ್ನೇಹಿತರ (೧೭ ನೇ ಜೂನ್, ಪ್ರ.ವಾ. ವಾ.ವಾ)ಅಭಿಪ್ರಾಯಗಳನ್ನು ನಾವು ಬೆಂಬಲಿಸುತ್ತೇವೆ. ಹಾಗೆಯೇ ಡಾ. ಟಿ.ಎನ್. ವಾಸುದೇವಮೂರ್ತಿಯವg (೧೮ನೇ ಜೂನ್, ಪ್ರ.ವಾ. ವಾ.ವಾ) ’ಕೆಟ್ಟಕಾಲದಲ್ಲಿಯೇ ಬುದ್ಧಿಜೀವಿಗಳೆನಿಸಿಕೊಂಡವರ ವಿಚಾರಗಳ ಚರ್ಚೆ ಸಾರ್ವಜನಿಕ ವೇದಿಕೆಯಲ್ಲಿ ನಡೆಯಬೇಕೆಂಬ’ ದಿಟ್ಟತನವನ್ನು ನಾವು ಬೆಂಬಲಿಸುತ್ತೇವೆ. 


    ಸಮುದಾಯಗಳು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದವೆಂದು ಪ್ರತಿಭಟಿಸುವುದಕ್ಕೆ ಒಂದು ಸಹಜ ಭಿನ್ನಮತದ ಆಯಾಮವಿದೆ. ಆದರೆ ಜನರನ್ನು ನಿಮ್ಮ ಭಾವನೆಗಳಿಗೆ ಲೇಖಕರು, ಚಿಂತಕರು, ಧಕ್ಕೆ ಮಾಡುತ್ತಿದ್ದಾರೆಂದು ಪ್ರಚೋದಿಸಿ ಕೆರಳಿಸುವ ಕಾರ್ಯಾಚರಣೆಗೆ ಇನ್ನೊಂದು ಆಯಾಮವಿದೆ. ಈಗ ನಡೆಯುತ್ತಿರುವುದು ಎರಡನೆಯ ಆಯಾಮ. ದುರಂತವೆಂದರೆ ಡಾ. ಎಂ.ಎಂ. ಕಲಬುರ್ಗಿಯವರಂಥ ಹಿರಿಯ ವಿದ್ವಾಂಸರು ಇದಕ್ಕೆ ಚಾಲನೆ ನೀಡಿದರು. ಬಸವ ಪ್ರಶಸ್ತಿ ವಿವಾದ ಹಾಗೂ ವಿಚಾರ ಸಂಕಿರಣವೊಂದರ ಭಾಷಣದಲ್ಲಿ ಅನಂತಮೂರ್ತಿಯವರನ್ನು ಕುರಿತಂತೆ ಮತೀಯ ನೆಲೆಯಲ್ಲಿ ಸಮುದಾಯಗಳು ಕೆರಳುವಂಥ ಅಪವ್ಯಾಖ್ಯಾನ ಮಾಡಿದರು. ತನ್ನ ಸಹ ಲೇಖಕರೊಬ್ಬರನ್ನು ಕುರಿತಂತೆ ಲೇಖಕರೊಬ್ಬರ ಇಂಥ ಅಸಹನೆಯ ವರ್ತನೆಯನ್ನು ನಾವು ಖಂಡಿಸುತ್ತೇವೆ. ಲೇಖಕ, ಬುದ್ಧಿಜೀವಿಗಳ ವೈಯಕ್ತಿಕ ಭಿನ್ನಮತಕ್ಕೆ ಸೈದ್ಧಾಂತಿಕ ಆಯಾಮವಿದ್ದರೆ ಸರಿ. ಆದರೆ ಅದು ದ್ವೇಷ, ಅಸೂಯೆ, ಸಣ್ಣತನದ ರೂಪದಲ್ಲಿದ್ದರೆ ಅದರ ಪ್ರಯೋಜನವನ್ನು ಬ್ರಾಹ್ಮಣವಾದ, ಪುರೋಹಿತಶಾಹಿ ಪಡೆದುಕೊಳ್ಳುತ್ತದೆ. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಅವಕಾಶವನ್ನು ಸಂಘ ಪರಿವಾರ ಹಾಗೂ ಪುರೋಹಿತಶಾಹಿ ಬಿಟ್ಟುಕೊಟ್ಟೀತೇ? ಇವುಗಳ ಹಿಡಿತದಲ್ಲಿರುವ ಕೆಲವು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಜನರನ್ನು ಕೆರಳಿಸುವ ವ್ಯವಸ್ಥಿತ ಕೆಲಸವನ್ನು ಮಾಡಿದವು. ಬುದ್ಧಿಜೀವಿಗಳ ಅಭಿಪ್ರಾಯಗಳು  ಪ್ರಶ್ನಾತೀತವೇನಲ್ಲ. ಆದರೆ  ಅವುಗಳ ಪರವಹಿಸುವ , ವಿರೋಧಿಸುವ ಪ್ರಕ್ರಿಯೆಗಳು ಪ್ರಜಾಸತ್ತಾತ್ಮಕವಾಗಿರಬೇಕು. ಆದರೆ ಇಬ್ಬರೂ ಲೇಖಕರ ಮೇಲೆ ಏಕಕಾಲದಲ್ಲಿ ದಾಳಿ ನಡೆಯಿತು ಮತ್ತು  ಇನ್ನೂ ಮುಂದುವರೆದಿದೆ. ಈ ನಾಡಿನ ಹಿರಿಯ ಲೇಖಕರಿಬ್ಬರ ಮನೆಯ ಸುತ್ತ ಪೊಲೀಸು ಕಾವಲು ನಿಯೋಜಿಸುವಂಥ ಸಂದರ್ಭ ನಿರ್ಮಾಣವಾದದ್ದು ಸಮಾಜ ಫ್ಯಾಸಿಸಂ ಕಡೆಗೆ ಚಲಿಸುತ್ತಿರುವದರ ಸಂಕೇತವಾಗಿದೆ. ಲೇಖಕರ ಭಿನ್ನಾಭಿಪ್ರಾಯ, ಅಸಹನೆಗಳನ್ನೇ ನೆಪ ಮಾಡಿಕೊಂಡು ಅವರ ಮೇಲೆ ಹಲ್ಲೆ ನಡೆಸಲು ಮುಂದಾಗುವ ಮೂಲಕ ಯಾವ ಸಂದರ್ಭಗಳಲ್ಲಿಯೂ ಬುದ್ಧಿಜೀವಿಗಳು ದನಿ ಎತ್ತಬಾರದು ಎಂಬ ಸಂದೇಶವನ್ನು ರವಾನಿಸುತ್ತಿರುವ ಕೋಮುವಾದಿ, ಮೂಲಭೂತವಾದಿ ಸಂಘಟನೆಗಳ, ಬಂಡವಾಳಶಾಹಿ ಹುನ್ನಾರಗಳ ಹಾಗೂ ಅವುಗಳ ಮುಖವಾಣಿಯಾಗಿ ಕೆಲಸ ಮಾಡುತ್ತಿರುವ ಕೆಲವು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಕಾರ್ಯಾಚರಣೆ ಹಾಗೂ ಫ್ಯಾಸಿಸ್ಟ್ ನಿಲುವುಗಳನ್ನು ನಾವು ಖಂಡಿಸುತ್ತೇವೆ. 


ಬಂಡವಾಳವಾದ, ಕೋಮುವಾದ, ಮೂಲಭೂತವಾದ ಹಾಗೂ ಬ್ರಾಹ್ಮಣವಾದಗಳಿಗೆ ನಾಸ್ತಿಕವಾದ, ವಿಚಾರವಾದ, ವೈಜ್ಞಾನಿಕತೆ, ದೇವರ ವಿರೋಧ ,ಪುರೋಹಿತಶಾಹಿ ವಿರೋಧಗಳು ತಮ್ಮ ಅಸ್ತಿತ್ವವನ್ನು ಅಲ್ಲಾಡಿಸುವ ಸಂಗತಿಗಳಾಗಿ ಕಾಣುತ್ತವೆ. ಇದು ಸಾಧ್ಯವಾದರೆ ಅವುಗಳ ಎಕಾನಮಿ ಹಾಗೂ ಸಾಂಸ್ಕೃತಿಕ ನಾಯಕತ್ವಗಳಿಗೆ ಹೊಡೆತ ಬೀಳುತ್ತದೆ. ಶೂದ್ರ, ದಲಿತ, ಮಹಿಳೆ ಹಾಗೂ ಶೋಷಿತ ಸಮುದಾಯಗಳ ಮೇಲಿನ ಯಜಮಾನಿಕೆ ಕೊನೆಗೊಳ್ಳುತ್ತದೆ. ಆ ಆತಂಕದಿಂದ ಬುದ್ಧಿಜೀವಿಗಳನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಯತ್ನಗಳು ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನ ಪ್ರಣೀತ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಆಶಯವನ್ನು ಹಿಂಪಡೆಯುವ ನವಬ್ರಾಹ್ಮಣವಾದದ ಹುನ್ನಾರವಾಗಿವೆ. ಅದಕ್ಕೆ ಅನಂತಮೂರ್ತಿಯವರು ನೆಪ ಮಾತ್ರ. ನಾಳೆ ಮತ್ತೊಬ್ಬರೂ ಹಲ್ಲೆಗೆ ಗುರಿಯಾಗಬಹುದು. ಆದ್ದರಿಂದ ಸಹಲೇಖಕರು ಇದು ವೈಯಕ್ತಿಕ ವಿಚಾರವೆಂದು ಸುಮ್ಮನಿರದೇ ಬುದ್ಧಿಜೀವಿಗಳನ್ನು ಕುರಿತಾಗಿ ನಡೆಯುತ್ತಿರುವ ಕೀಳುಮಟ್ಟದ ಚರ್ಚೆಗಳನ್ನು ವಿರೋಧಿಸಬೇಕಾಗಿದೆ. ಚಿಂತಕರಾದವರು ನಾಡಿನ ಹಿತದ ದೃಷ್ಟಿಯಿಂದ ಸಾಮಾಜಿಕ ಸಮಸ್ಯೆಗಳ ಮೇಲೆ ಚರ್ಚೆಯನ್ನು ಎತ್ತುವಾಗ, ಆ ಚರ್ಚೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡದಂತೆ ಎಚ್ಚರವಹಿಸುವ ಹೊಸಭಾಷೆ ಮತ್ತು ವಿಧಾನಗಳನ್ನು ಸಹ ಶೋಧಿಸಿಕೊಳ್ಳಬೇಕಾಗಿದೆ.

         - ಡಾ. ಕೆ.ಆರ್. ದುರ್ಗಾದಾಸ್, ಪ್ರೊ. ಅಶೋಕ ಶೆಟ್ಟರ್, ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಡಾ.ಎಂ.ಡಿ.ಒಕ್ಕುಂದ, ಡಾ. ವಿನಯಾ, ಸುನಂದಾ ಹಾಗೂ ಪ್ರಕಾಶ್ ಕಡಮೆ, ಬಸವರಾಜ ಸೂಳಿಭಾವಿ, ಮಹಾಂತೇಶ್ ನವಲ್ಕಲ್, ಬಿ. ಪೀರ್ ಬಾಷಾ, ಅರುಣ ಜೋಳದಕೂಡಲಗಿ,


ಅರಸು ಮುನಿದರೆ ನಾಡೊಳಗಿರಬಾರದು

ಜಿ.ಪಿ.ಬಸವರಾಜು
ಲೋಕಸಭಾ ಚುನಾವಣೆಗೆ ಮುನ್ನ ಚಿಂತಕ ಯು.ಆರ್.ಅನಂತಮೂರ್ತಿ ಅವರು ಆಡಿದ ಒಂದು ಮಾತು ತೀವ್ರ ಟೀಕೆಗೆ ಕಾರಣವಾಯಿತು. ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿರುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದರು. ಒಬ್ಬ ಲೇಖಕ ಇಂಥ ಮಾತುಗಳನ್ನು ಏಕಾಏಕಿ ಆಡುವುದಿಲ್ಲ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಿಂತು, ಆ ಸನ್ನಿವೇವನ್ನು ವಿಶ್ಲೇಷಿಸುತ್ತ ಆಡುವ ಮಾತುಗಳಲ್ಲಿ ಒಂದನ್ನು ಎತ್ತಿ ತಗೆದು ಲೇಖಕನನ್ನು ಟೀಕೆಗೆ ಒಳಪಡಿಸುವುದು ಸರಿಯಾದ ಕ್ರಮ ಅಲ್ಲ. ಅನಂತಮೂರ್ತಿ ಅವರು ಆಡಿದ ಮಾತಿನಲ್ಲಿ ಎಷ್ಟೆಲ್ಲ ಧ್ವನಿಗಳಿವೆ, ಅದರ ಅರ್ಥ ಛಾಯೆಗಳೇನು ಎಂಬುದನ್ನು ಗ್ರಹಿಸದೆ, ಅದೊಂದೇ ಮಾತನ್ನು ಎತ್ತಿಕೊಂಡು, ಎಲ್ಲಿ ಹಾಗಾದರೆ ದೇಶಬಿಡಿ ಎನ್ನುವುದು, ಟಿಕೆಟ್ ಕೊಡಿಸುತ್ತೇವೆ ಎನ್ನುವುದು ಆಡುವವರ ಅಭಿರುಚಿಯನ್ನು ಮತ್ತು ಸಂಕುಚಿತ ಮನೋಭಾವವನ್ನು ತೋರಿಸುತ್ತದೆ.

ಅನಂತಮೂರ್ತಿ ಒಬ್ಬ ಸಮಾಜವಾದಿ; ಕನ್ನಡದ ಬಹುಮುಖ್ಯ ಚಿಂತಕ; ಅವರ ಬರಹ, ವಿಮರ್ಶೆಗಳು ಸೂಕ್ಷ್ಮ ಒಳ ನೋಟಗಳನ್ನು ಪಡೆದುಕೊಂಡಿರುತ್ತವೆ. ಅತ್ಯಂತ ಸಂಕೀರ್ಣವಾಗಿದ್ದ ಮತ್ತು ನಮ್ಮ ಪ್ರಜಾಪ್ರಭುತ್ವದ ಬಹುದೊಡ್ಡ ಸವಾಲಿನಂತಿದ್ದ ಚುನಾವಣೆ ಅದು. ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗಿದ್ದ ಸಂದರ್ಭ ಅದು. ಬಲ ಮತ್ತು ಎಡ ಪಕ್ಷಗಳು ಮತ್ತು ಉದಾರವಾದೀ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಹೀಗೆ ವಿಭಿನ್ನ ನೋಟಗಳ, ಪ್ರಣಾಳಿಕೆಗಳ, ಆಶಯಗಳ ಪಕ್ಷಗಳು ಎದುರಾಬದರಾಗಿ ನಿಂತು ತಮ್ಮ ಅಸ್ತಿತ್ವಕ್ಕೆ ಸೆಣಸಾಡುವ ಸನ್ನಿವೇಶ ಅದು. ಈ ಸನ್ನಿವೇಶವನ್ನು ವಿಶ್ಲೇಷಿಸುವುದು, ಯಾವ ಪಕ್ಷದಿಂದ, ಯಾವ ಗುಂಪಿನ ಪಕ್ಷಗಳಿಂದ ದೇಶಕ್ಕೆ, ಜನಕ್ಕೆ ಹಿತವಾಗಬಹುದು ಎಂದು ವಿಶ್ಲೇಷಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಲೇ ಇರುತ್ತದೆ. ಯಾವುದನ್ನೂ ನಿಖರವಾಗಿ ಯಾರೂ ಹೇಳಲಾಗದಷ್ಟು ಸಂಕೀರ್ಣವಾಗಿದ್ದ ಚುನಾವಣೆಯಲ್ಲಿ ನೂರಾರು ಅಭಿಪ್ರಾಯಗಳು ಮೂಡುತ್ತವೆ. ಅನೇಕ ವಿಶ್ಲೇಷಣೆಗಳು ನಡೆಯುತ್ತವೆ. ಚುನಾವಣೆಯ ಹುರಿಯಾಳುಗಳ ಬಗ್ಗೆ, ಪಕ್ಷಗಳ ಪ್ರಣಾಳಿಕೆಗಳ ಬಗ್ಗೆ, ಚುನಾವಣೆಯಲ್ಲಿ ಪ್ರಮುಖವಾಗುವ ಸಂಗತಿಗಳ ಬಗ್ಗೆ ವಿಚಾರ ಮಂಡನೆ ಅಸಹಜವೇನೂ ಅಲ್ಲ. ಇಂಥ ಸನ್ನಿವೇಶದಲ್ಲಿಯೇ ಅನಂತಮೂರ್ತಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇದನ್ನು ಒಪ್ಪದ ಅನೇಕರು ತಮ್ಮ ಅಭಿಪ್ರಾಯಗಳನ್ನೂ ಹೇಳಬಹುದು. ಯಾವುದು ಸರಿ, ಯಾವುದು ತಪ್ಪು ಎಂಬ ಸಾಮೂಹಿಕ ಚರ್ಚೆಯೂ ನಡೆಯಬಹುದು; ನಡೆಯುತ್ತದೆ; ಅದೇ ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೊಗಸು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಒಂದೇ ಅಭಿಪ್ರಾಯ, ಒಂದೇ ನಿಲುವು, ಒಂದೇ ಪಕ್ಷ ಇರುವುದು ಸಾಧ್ಯವೇ ಇಲ್ಲ. ಇದ್ದರೆ ಅದು ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಿಲ್ಲ.

ಹಿಟ್ಲರ್ ಭಿನ್ನ ಮತವನ್ನು ಮಾನ್ಯ ಮಾಡುತ್ತಿರಲಿಲ್ಲ. ತನ್ನ ಹಿತಚಿಂತಕರ ಹೊರತಾಗಿ ಬೇರೆಯವರು ಆಡುತ್ತಿದ್ದ ಮಾತುಗಳು, ನಡೆಸುತ್ತಿದ್ದ ಚಿಂತನೆಗಳು ಹಿಟ್ಲರ್‌ನ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅಂಥವರನ್ನೆಲ್ಲ ತನ್ನ ವೈರಿಗಳು, ದೇಶದ್ರೋಹಿಗಳು ಎಂದು ಅವನು ಪರಿಗಣಿಸುತ್ತಿದ್ದ. ಅಂಥವರಿಗೆ ಜೈಲೋ, ಮರಣದಂಡನೆಯೋ ಕಾದಿರುತ್ತಿತ್ತು. ಹಿಟ್ಲರ್ ಮಾತ್ರವಲ್ಲ, ಎಲ್ಲ ಸರ್ವಾಧಿಕಾರಿಗಳೂ ಹೀಗೆಯೇ. ಸರ್ವಾಧಿಕಾರದ ಅರ್ಥವೇ ಇದು. ಅಲ್ಲಿ ಬಹುಜನರ ಮಾತುಗಳಿಗೆ ಬೆಲೆ ಇರುವುದಿಲ್ಲ. ಬಹುಸಂಸ್ಕೃತಿಗಳು ಸಹಬಾಳ್ವೆ ನಡೆಸದಂತೆ, ವಿಭಿನ್ನ ವಿಚಾರಧಾರೆ ತಲೆಎತ್ತದಂತೆ ಸರ್ವಾಧಿಕಾರಿಗಳು ನೋಡಿಕೊಳ್ಳುತ್ತಾರೆ.

ಅನಂತಮೂರ್ತಿಯವರ ಈ ಮಾತನ್ನು ಕುರಿತು ಚಿಂತಿಸುವ ಸಂದರ್ಭದಲ್ಲಿ ನನಗೆ ಹನ್ನೆರಡನೇ ಶತಮಾನದ ರಾಜಕೀಯ ನೆನಪಿಗೆ ಬಂತು. ಕಲ್ಯಾಣವನ್ನು ಬಿಜ್ಜಳ ಆಳುತ್ತಿದ್ದ ಸಂದರ್ಭ ಅದು. ಬಿಜ್ಜಳ ರಾಜ. ಅವನ ಸಚಿವ ಸಂಪುಟದಲ್ಲಿ ಬಸವಣ್ಣ ಭಂಡಾರಿ; ಅಂದರೆ ಅರ್ಥಮಂತ್ರಿ. ಈ ವ್ಯವಸ್ಥೆಯೇ ಸೋಜಿಗಕ್ಕೆ ಕಾರಣವಾಗುತ್ತದೆ. ರಾಜ ವ್ಯವಸ್ಥೆ ಎಂದರೆ ಅದು ಇರುವ ವ್ಯವಸ್ಥೆಯನ್ನು ಸುರಕ್ಷಿತವಾಗಿ ಮುನ್ನಡೆಸಲು ನೋಡುತ್ತದೆ. ವ್ಯವಸ್ಥೆಯನ್ನು ಬದಲಾಯಿಸಬೇಕೆನ್ನುವ ಧ್ವನಿಗೆ ಅಲ್ಲಿ ಬೆಂಬಲವೇ ಸಿಕ್ಕುವುದಿಲ್ಲ. ಹೊಸ ವ್ಯವಸ್ಥೆ, ಹೊಸ ವಿಚಾರಗಳು, ಹೊಸ ಚಿಂತನೆ, ಕ್ರಾಂತಿಕಾರಕ ಬದಲಾವಣೆ ಇಂಥ ಯಾವುದನ್ನೂ ರಾಜ ವ್ಯವಸ್ಥೆ ಒಪ್ಪುವುದೇ ಇಲ್ಲ. ಅದೆಲ್ಲ ತನಗೆ ಕಂಟಕವಾಗಬಲ್ಲದೆಂದು ರಾಜವ್ಯವಸ್ಥೆ ಬಲವಾಗಿ ನಂಬಿರುತ್ತದೆ. ಬಿಜ್ಜಳನೂ ಇದಕ್ಕೆ ಭಿನ್ನವಾದ ರಾಜನಾಗುವುದು ಸಾಧ್ಯವಿರಲಿಲ್ಲ. ಆದರೆ ಬಸವಣ್ಣ? ವ್ಯವಸ್ಥೆಯ ವಿರುದ್ಧ ಬಂಡೆದ್ದ ಮಹಾನ್ ಬಂಡುಕೋರ. ಜಾತಿ, ಧರ್ಮ, ದೇವರು, ಸಮಾಜ, ರಾಜಕೀಯ ಹೀಗೆ ಎಲ್ಲವನ್ನೂ ಬುಡಮೇಲು ಮಾಡಲು ಹೊರಟ ಈ ಬಂಡಾಯಗಾರನನ್ನು ಬಿಜ್ಜಳ ಒಪ್ಪಿಕೊಳ್ಳುವುದು ಎಂದರೆ? ಇವನನ್ನೇ ತನ್ನ ಭಂಡಾರದ ಮಂತ್ರಿಯಾಗಿ ಮಾಡಿಕೊಂಡ ಬಿಜ್ಜಳ ಎಂಥ ರಾಜನಿರಬೇಕು; ಇವನ ವಿಚಾರಗಳು ಎಂಥವಿರಬೇಕು?

’ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಬಸವಣ್ಣ. ’ಗಂಡ ಮುನಿದರೆ ಹೆಂಡತಿಯಾಗಿರಬಾರದು’ ಎನ್ನುತ್ತಾನೆ. ’ಜಂಗಮ ಮುನಿದರೆ ನಾನೆಂತು ಬದುಕಲಯ್ಯ?’ ಎಂದು ಆತಂಕಗೊಳ್ಳುತ್ತಾನೆ.

’ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಮಾತಿಗೂ ಅನಂತಮೂರ್ತಿ ಅವರು ಆಡಿದ ಮಾತಿಗೂ ಎಷ್ಟು ಹತ್ತಿರದ ಸಂಬಂಧವಿದೆ ಎನ್ನುವುದನ್ನು ಗಮನಿಸಬೇಕು. ಬಸವಣ್ಣ ತಾನು ಮಂತ್ರಿ ಪದವಿಯನ್ನು ಒಪ್ಪಿಕೊಳ್ಳುವ ಮೊದಲು ಆಡಿದ ಮಾತಲ್ಲ ಇದು. ಒಪ್ಪಿಕೊಂಡ ನಂತರ, ಅಂದರೆ ಅರಸನೊಂದಿಗೆ ಸಂಬಂಧವನ್ನು ಕಟ್ಟಿಕೊಂಡ ನಂತರ ಆಡಿದ ಈ ಮಾತಿಗೆ ಅನೇಕ ಧ್ವನಿಗಳಿವೆ. ಬಸವಣ್ಣ ಸಂಬಂಧಗಳಲ್ಲಿ ಗಾಢ ನಂಬಿಕೆಯನ್ನು ಇಟ್ಟುಕೊಂಡವನು; ಅವನ ನಿಷ್ಠೆ ಪ್ರಶ್ನಾತೀತ. ಮೊದಲು ಈ ನಂಬಿಕೆ ಸಂಸಾರದಲ್ಲಿರಬೇಕು. ಗಂಡ ಮುನಿದರೆ ಅಥವಾ ಹೆಂಡತಿ ಮುನಿದರೆ ಸಂಸಾರ ಒಡೆಯುತ್ತದೆ. ಹೊಂದಾಣಿಕೆ ಸಾಧ್ಯವಾಗದ ಸಂಸಾರದಲ್ಲಿ ಗಂಡು ಹೆಣ್ಣು ಒಟ್ಟಾಗಿ ಇರುವುದರಲ್ಲಿ ಅರ್ಥವೇನಿದೆ? ಸಂಸಾರದ ಈ ತತ್ವವನ್ನು ಬಸವಣ್ಣ ರಾಜಕೀಯಕ್ಕೂ ಹಬ್ಬಿಸಿ ನೋಡುತ್ತಾನೆ. ಅರಸನೊಂದಿಗೆ ಸಾಮರಸ್ಯ ಸಾಧ್ಯವಾಗದಿದ್ದರೆ ಅಲ್ಲಿ ಬದುಕು ದುಸ್ತರವಾಗುತ್ತದೆ. ಅದಕ್ಕಾಗಿಯೇ ಮುನಿದ ಅರಸನ ನಾಡಿನಲ್ಲಿ ಇರಬಾರದು. ಇದು ಕೇವಲ ಮುನಿಸಿನ ಪ್ರಶ್ನೆಯಲ್ಲ. ಸಂಬಂಧದ ಪ್ರಶ್ನೆ. ಅರಸ ಮತ್ತು ಪ್ರಜೆಯ ನಡುವಿನ ಸಂಬಂಧ. ಈ ಸಂಬಂಧ ಸಾಧ್ಯವಾಗದಿದ್ದರೆ ಅಂಥ ಕಡೆ ಬದುಕು ದುರ್ಭರವಾಗುತ್ತದೆ. ವ್ಯಕ್ತಿಯ ಒಟ್ಟು ನಂಬಿಕೆ, ನಿಷ್ಠೆ, ಸಾಮರಸ್ಯಗಳು ಕುಟುಂಬದಿಂದ ಆರಂಭವಾಗಿ ನಾಡಿಗೂ ಹಬ್ಬುತ್ತವೆ; ಹಬ್ಬಬೇಕು. ಇಲ್ಲವಾದರೆ ಬದುಕು ಸಾರ್ಥಕವಾಗುವುದಿಲ್ಲ. ಬಸವಣ್ಣನಂಥ ಸಮಗ್ರ ವ್ಯಕ್ತಿತ್ವಕ್ಕಂತೂ ಇದು ಸಾಧ್ಯವಾಗದ ಮಾತು. ಬಸವಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಅಧ್ಯಾತ್ಮಕ್ಕೂ ವಿಸ್ತರಿಸುತ್ತಾನೆ. ’ಜಂಗಮ ಮುನಿದರೆ ನಾನೆಂತು ಬದುಕಲಯ್ಯಾ?’ ಎಂದು ಕೇಳುತ್ತಾನೆ. ಬಸವಣ್ಣನ ಅಧ್ಯಾತ್ಮದಲ್ಲಿ ’ಗುರು, ಲಿಂಗ, ಜಂಗಮ’ ಬಹಳ ಮುಖ್ಯವಾದ ತತ್ವ. ಗುರು ಮತ್ತು ಜಂಗಮನಲ್ಲಿ ಅಂಥ ವ್ಯತ್ಯಾಸವಿಲ್ಲ. ವ್ಯಕ್ತಿ ಸ್ವಯಂ ಲಿಂಗವಾಗುವುದೇ ಬಸವಣ್ಣನ ಆಧ್ಯಾತ್ಮಿಕ ನಡೆಯ ಅಂತಿಮ ಗುರಿ.

ಬಸವನ ಈ ಮಾರ್ಗದಲ್ಲಿ ನಂಬಿಕೆಯಿಟ್ಟ ಸಾವಿರಾರು ಜನ ಕಲ್ಯಾಣವನ್ನು ಕೇಂದ್ರ ಮಾಡಿಕೊಂಡದ್ದು, ಬಿಜ್ಜಳ, ತನ್ನ ರಾಜವ್ಯವಸ್ಥೆಯಲ್ಲಿಯೂ, ಈ ಶರಣರನ್ನು ಸಹಿಸಿದ್ದು ಬಹುದೊಡ್ಡ ನಡೆ. ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟದ್ದು ಬಸವ ಚಳವಳಿ. ವ್ಯವಸ್ಥೆ ಎಂದರೆ ಸ್ಥಾಪಿತ ಮೌಲ್ಯಗಳು; ಜಾತಿ, ಲಿಂಗ ತಾರತಮ್ಯದ, ಅಸಮಾನತೆಯನ್ನು ಬೆಂಬಲಿಸುವ ಶಕ್ತಿಗಳನ್ನು ಪೋಷಿಸುವ ವ್ಯವಸ್ಥೆ. ಸನಾತನಿಗಳು, ಪುರೋಹಿತರು, ಜಾತಿ-ಧರ್ಮಗಳ ಮೇಲೆ ಜನರನ್ನು ಆಳಲು, ನಿಯಂತ್ರಿಸಲು ನೋಡುವವರು. ಬಿಜ್ಜಳ ಇಂಥ ಶಕ್ತಿಗಳ ನಡುವೆ ಇದ್ದೂ ಬಸವಣ್ಣನನ್ನು ಒಪ್ಪಿಕೊಂಡ; ಅವನ ವಿಚಾರಗಳನ್ನು, ಮೌಲ್ಯಗಳನ್ನು ಬೆಂಬಲಿಸಿದ. ಕೊನೆಗೆ ಬಸವನಂತೆ, ಶರಣರಂತೆ, ತಾನೂ ಹಳೆಯ ವ್ಯವಸ್ಥೆಗೆ ಬಲಿಯಾದ. ಇಂಥ ಉದಾಹರಣೆಗಳು ಕರ್ನಾಟಕದ ಚರಿತ್ರೆಯಲ್ಲಿ, ಅಷ್ಟೇ ಏಕೆ, ಇಡೀ ಭಾರತದ ಚರಿತ್ರೆಯಲ್ಲಿ ತೀರ ಅಪರೂಪ.
ಬಸವಣ್ಣ ರಾಜ-ಪ್ರಜೆ, ಗಂಡ-ಹೆಂಡತಿ, ಗುರು-ಜಂಗಮ ಈ ಸಂಬಂಧಗಳನ್ನು ಅರಿತವನಾಗಿದ್ದ. ಈ ಸಂಬಂಧಗಳಲ್ಲಿ ಅವನು ತೋರುತ್ತಿದ್ದ ನಿಷ್ಠೆ ಇಡಿಯಾದದ್ದು. ಅಲ್ಲಿ ಸಂದೇಹಕ್ಕೆ ಎಡೆಯೇ ಇಲ್ಲ. ಹೀಗಾಗಿಯೇ ಅವನು ಅರಸು ಮುನಿದರೆ ನಾಡೊಳಗಿರಬಾರದು ಎಂಬ ಕಠೋರ ನಿಲುವನ್ನು ತಳೆಯುತ್ತಾನೆ. ಸಂಬಂಧವನ್ನು ಕಟ್ಟಿದವನಿಗೆ ಮುರಿಯುವ ಹಕ್ಕೂ ಇರುತ್ತದೆ. ಅನಂತಮೂರ್ತಿ ಅವರ ನಿಷ್ಠೆ ಇರುವುದು ಪ್ರಜಾಪ್ರಭುತ್ವದಲ್ಲಿ; ಅವರು ಕಟ್ಟಿಕೊಂಡಿರುವ ಸಂಬಂಧವೂ ಈ ವ್ಯವಸ್ಥೆಯಲ್ಲಿಯೇ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಮಗಿರುವ ನಿಷ್ಠೆಯನ್ನು ತೋರಿಸುವ ಅನೇಕ ಲೇಖನಗಳನ್ನು ಅವರು ಬರೆದಿದ್ದಾರೆ; ಅವರ ಮಾತುಗಳೂ ಈ ಚಿಂತನೆಯನ್ನು, ಈ ನಿಷ್ಠೆಯನ್ನು ಹೇಳುತ್ತಲೇ ಬಂದಿವೆ. ಇಂಥವರು, ಸಂಬಂಧವನ್ನು ಕಟ್ಟಿದವರು, ಈ ಸಂಬಂಧದ ಬಗ್ಗೆ ನಿಷ್ಠುರವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅದನ್ನು ಸಹಿಸುವ ಸಂಸ್ಕೃತಿ ನಮಗೆ ಬರಬೇಕು. ಅನಂತಮೂರ್ತಿ ಚಿಂತನೆಯಲ್ಲಿ ಕೊರತೆಗಳಿದ್ದರೆ, ಅದನ್ನು ಚರ್ಚೆಗೊಡ್ಡಬಹುದು; ಸಂವಾದದಲ್ಲಿ ಹೊಸ ಬೆಳಕನ್ನು, ಹೊಸ ಅರ್ಥವನ್ನು ಕಂಡುಕೊಳ್ಳಬಹುದು. ಹಾಗೆ ಮಾಡಲು ಸಾಧ್ಯವಾದಾಗಲೇ ನಾವು ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಸಾಧ್ಯ. ಈ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ಸಾಧ್ಯ.

(ಸೌಜನ್ಯ: ಸಂಯುಕ್ತ ಕರ್ನಾಟಕ)

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

Tuesday, June 24, 2014

ದಲಿತರ ದೇವಾಲಯ ಪ್ರವೇಶ: ಮೇಲುಗೈ ಸಾಧಿಸಿದ ದೈವತ್ವದ ಆಜ್ಞೆ!
ರಘೋತ್ತಮ ಹೊ.ಬ.


ದಲಿತರ ದೇವಾಲಯ ಪ್ರವೇಶ: ಮೇಲುಗೈ ಸಾಧಿಸಿದ ದೈವತ್ವದ ಆಜ್ಞೆ!


ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ದಲಿತ ಸಂಸದ ರಮೇಶ್ ಜಿಗಜಿಣಗಿ ಯವರಿಂದ ‘‘ಯಾವುದೇ ದೇವಾಲಯ ಪ್ರವೇಶಿಸಲ್ಲ’’ ಎಂಬ ಹೇಳಿಕೆ ಪ್ರಕಟವಾಗಿತ್ತು. ಹಾಗೆಯೇ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮೋಹನ್ ಕುಮಾರ್ ಎಂಬ ದಲಿತ ಯುವಕ ದೇವಸ್ಥಾನ ಪ್ರವೇಶಿಸಿ ಅದು ಕೂಡ ವಿವಾದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ರಮೇಶ್ ಜಿಗಜಿಣಗಿಯವರ ಆ ಮಾತು, ಹಾಗೆಯೇ ಹಾಸನ ಜಿಲ್ಲೆಯ ಆ ಘಟನೆ, ಎಂತಹದ್ದು? ಮತ್ತೆ ಮತ್ತೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಹೃದಯ ಚುಚ್ಚುವಂಥದ್ದು! ಹಾಗೆಯೇ ಅಸ್ಪಶ್ಯತೆಯ ನೋವಿನಲ್ಲಿ ಬೇಯುತ್ತಿರುವ ದಲಿತರ ಅಸಹಾಯಕ ಮನಸ್ಥಿತಿಯ ಪ್ರತಿರೂಪದ್ದು. ಖಂಡಿತ ಇಂತಹದ್ದರ ಬಗ್ಗೆ ಬರೆಯಲು ನೋವೆನಿಸುತ್ತದೆ. ಅದರೂ ಬರೆಯದೆ ವಿಧಿಯಿಲ್ಲ. ಯಾಕೆಂದರೆ ನೋವು ಎಂದಿದ್ದರೂ, ಹೇಗಿದ್ದರೂ ಅದು ನೋವೆ.

 ಹಾಗೆ ಹೇಳುವುದಾದರೆ ಭಾರತೀಯ ಸಮಾಜ, ಇದರಲ್ಲಿ ಯಾರು ಹೀಗೆ ಮೇಲು- ಕೀಳು ಎಂದು ತಾರತಮ್ಯ ಎಂದು ಸೃಷ್ಟಿಸಿದರೋ ಗೊತ್ತಿಲ್ಲ. ಬಹುಶಃ ಅದರ ಮೂಲ ಹುಡು ಕುವುದು ಗೊಂದಲಕಾರಿ ಹಾಗೆಯೇ ಅಪಾಯಕಾರಿ ಕೂಡ, ಆದರೆ ಅಸ್ತಿತ್ವ ಮಾತ್ರ ಸತ್ಯ. ಅಕ್ಷರದಲ್ಲಿ ಕೆಲ ವರ್ಷಗಳಿಂದೀಚೆಗೆ ಅದು ದಾಖಲೀಕರಣವಾಗುತ್ತಿದೆಯೇ ಹೊರತು ಬಹುಪಾಲು ಅದು ಸಮಾಜದಲ್ಲಿ ಬೇಕೆಂತಲೇ ಉಪೇಕ್ಷೆಗೊಳಪಟ್ಟಿದೆ ಅಥವಾ ಉಪೇಕ್ಷೆಗೊಳಪಡಿಸಲಾಗಿದೆ. ಅದರಲ್ಲೂ ಹಿಂದೂ ದೇವಾಲಯ ಪ್ರವೇಶ? ಈ ದಿಸೆಯಲ್ಲಿ ಇತಿಹಾಸದಲ್ಲಿ ದಾಖಲಾಗಿರುವ ಅಂತಹ ಹಿಂದೂ ದೇವಾಲಯ ಪ್ರವೇಶದ ಒಂದು ದಾಖಲೀಕರಣವನ್ನು (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.9, ಪು.317, 318) ಉಲ್ಲೇಖಿಸುವುದಾದರೆ 1936 ನವೆಂಬರ್ 26ರಂದು ಕೇರಳದ ತಿರುವಾಂಕೂರಿನ ಅಂದಿನ ಅರಸ, ಅಲ್ಲಿನ ಈಳವ ಸಮಾಜದ ಹೋರಾಟಕ್ಕೆ ಮಣಿದು ‘‘ಇನ್ನು ಮುಂದೆ ನಮ್ಮ ಹಿಂದೂ ಧರ್ಮದ ಯಾವುದೇ ಪ್ರಜೆಗಳನ್ನು ಅವರ ಜನ್ಮ, ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಅವರು ಹಿಂದೂ ತತ್ವದಲ್ಲಿ ನೆಮ್ಮದಿ ಕಾಣುವಂತಾಗಲು, ಪರಿಹಾರ ಕಂಡುಕೊಳ್ಳುವಂತಾಗಲು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದಕ್ಕಾಗಿ ಇಂದಿನಿಂದ ಹೊರಡಿಸುವ ಆದೇಶವೆಂದರೆ ಜನ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ಹಿಂದೂವು ಯಾವುದೇ ದೇವಸ್ಥಾನವನ್ನು ಪ್ರವೇಶಿಸುವ ಅಥವಾ ಪೂಜಿಸಲ್ಪಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ’’ ಎಂದು ಆಜ್ಞೆ ಹೊರಡಿಸಿದರು. ಅಂದಹಾಗೆ ತಿರುವಾಂಕೂರು ಅರಸರ ಅಂದಿನ ಆ ಆದೇಶಕ್ಕೆ ಕಾರಣ 1932ರಲ್ಲಿ ಅದೇ ತಿರುವಾಂಕೂರು ಪ್ರಾಂತದ ಗುರುವಾಯೂರು ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿಯವರು ವಿವಾದ ಹುಟ್ಟುಹಾಕಿದ್ದು. ಪರಿಣಾಮ ದೇವಾಲಯದ ಪ್ರವೇಶಕ್ಕೆ ಸಂಬಂಧಿಸಿದಂತೆ ಆಗ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡು, ಈಳವರಿಗೆ ದೇವಸ್ಥಾನ ಪ್ರವೇಶದ ನಿಲುವಿನ ವಿರುದ್ಧವಿದ್ದ ಅಂದಿನ ತಿರುವಾಂಕೂರು ಪ್ರಾಂತದ ಪ್ರಧಾನಮಂತ್ರಿ ಸಿ.ಪಿ.ರಾಮಸ್ವಾಮಿ ಅಯ್ಯರ್‌ಅವರು ಆ ಸಂದರ್ಭದಲ್ಲಿ ಹೇಳಿದ್ದೇನೆಂದರೆ ‘‘ವೈಯಕ್ತಿಕವಾಗಿ ನಾನು ಜಾತಿ ನಿಯಮಗಳನ್ನು ಆಚರಿಸುವುದಿಲ್ಲ. ಆದರೆ ನನಗೆ ತಿಳಿದಿರುವಂತೆ ದೇವಸ್ಥಾನ ಪೂಜೆಗೆ ಸಂಬಂಧಿಸಿದ ಪ್ರಸ್ತುತದ ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಅಂಶಗಳೆಲ್ಲವೂ ದೈವತ್ವದ ಆಜ್ಞೆಯ ಆಧಾರದ ಮೇಲೆ ರೂಪಿತಗೊಂಡಿವೆ ಎಂಬುದು ಮತ್ತು ಇದು ನನ್ನೊಬ್ಬನದೇ ಅಲ್ಲ ಬಹುತೇಕರ ಮನಸ್ಸಿನ ಪ್ರಬಲ ಭಾವನೆ ಮತ್ತು ನಂಬಿಕೆ ಕೂಡ ಆಗಿದೆ’’ ಎಂದು! ತನ್ಮೂಲಕ ರಾಮಸ್ವಾಮಿ ಅಯ್ಯರ್‌ರವರು ದೇವಸ್ಥಾನ ಪ್ರವೇಶದ ಈ ಪ್ರಕ್ರಿಯೆಯನ್ನು ದೈವತ್ವದ ಆಜ್ಞೆಗೆ ಹೋಲಿಸಿದ್ದರು. ಅಂದಹಾಗೆ ಇದು 1936ರ ಪ್ರಕ್ರಿಯೆ. ಆದರೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೂತನ ಸಂವಿಧಾನ ರಚಿಸುವ ಪ್ರಕ್ರಿಯೆ ಜರಗುತ್ತದೆ. ಅದರಲ್ಲೂ ಸಂವಿಧಾನದ ಡ್ರಾಫ್ಟ್ ರಚಿಸುವ ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‌ರವರು ತಮ್ಮ ಅಧ್ಯಕ್ಷತೆಯಲ್ಲಿ ಸಲ್ಲಿಸಿದ ಆ ಡ್ರಾಫ್ಟ್‌ನಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಮೂಲಭೂತ ಹಕ್ಕನ್ನು ರೂಪಿಸುತ್ತಾರೆ. ಅದೆಂದರೆ ‘‘ಹಿಂದೂ ಧರ್ಮದ ಯಾವುದೇ ಧಾರ್ಮಿಕ ಸಂಸ್ಥೆಯನ್ನು ಪ್ರವೇಶಿಸಲು ಹಿಂದೂ ಧರ್ಮದ ಯಾವುದೇ ಜನಾಂಗವನ್ನಾಗಲಿ, ಜಾತಿಯನ್ನಾಗಲಿ ಜಾತಿ ಮತ್ತು ಜನ್ಮದ ಆಧಾರದ ಮೇಲೆ ನಿರ್ಬಂಧಿಸುವಂತಿಲ್ಲ’’ ಎಂದು (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.13, ಪು.113). ಹಾಗೆಯೇ 1950 ಜನವರಿ 26ರಂದು ಜಾರಿಯಾದ ಭಾರತದ ಸಂವಿಧಾನ ಕೂಡ ಅನುಚ್ಛೇದ 15ರ ಮೂಲಕ ‘‘ಧರ್ಮ, ಜನಾಂಗ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ಮೇಲೆ ವ್ಯಕ್ತಿಯೋರ್ವನ ಮೇಲೆ ಯಾವುದೇ ಕಾರಣಕ್ಕೂ ರಾಜ್ಯವು ತಾರತಮ್ಯ ಮಾಡುವಂತಿಲ್ಲ’’ ಎಂದು ಘೋಷಿಸಿತು. ಅಂತೆಯೇ ಅನುಚ್ಛೇದ 17ರ ಮೂಲಕ ಅದೇ ಭಾರತದ ಸಂವಿಧಾನ ಅಸ್ಪಶ್ಯತಾಚರಣೆಯನ್ನು ಕೂಡ ನಿಷೇಧಿಸಿತು.

ದುರಂತವೆಂದರೆ ಇದೆಲ್ಲ ಘಟಿಸಿ ಈಗ 64 ವರ್ಷಗಳು ಉರುಳುತ್ತಾ ಬಂದಿವೆ. ಆದರೆ ದಲಿತರಿಗೆ ದೇವಸ್ಥಾನ ಪ್ರವೇಶ ಎಲ್ಲಿ ಸಾಧ್ಯವಾಗಿದೆ? ಯಾಕೆಂದರೆ ಇಲ್ಲಿ ಅಂದರೆ ಪ್ರಸ್ತುತದ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿಯವರು ‘‘ನಾನು ದೇವಸ್ಥಾನದ ಹತ್ತಿರಕ್ಕೇ ಹೋಗುವುದಿಲ್ಲ, ನಾನು ಹಿಂದೂ ಧರ್ಮದತ್ತ ತಿರುಗಿಯೇ ನೋಡುವುದಿಲ್ಲ’’ ಎಂದವರಲ್ಲ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೂ ಕೂಡ. ಬದಲಿಗೆ ಜಿಗಜಿಣಗಿಯವರೇ ಹೇಳಿರುವಂತೆ ಅವರು ಎಲ್ಲಾ ದೇವಸ್ಥಾನಗಳಿಗೂ ಹೋಗುತ್ತಾರೆ. ಆದರೆ ಹೊರಗಡೆ ನಿಂತು ಪೂಜೆ ಸಲ್ಲಿಸುತ್ತಾರೆ! ಹಾಗಿದ್ದರೆ ಇಂತಹ ಸ್ಥಿತಿಗೆ ಕಾರಣವೇನು? ಹಾಗೆಯೇ ಇಲ್ಲಿ ಮೇಲುಗೈಯಾಗಿರುವುದಾದರೂ ಯಾವುದು? ಅಂಬೇಡ್ಕರರು ರಚಿಸಿದ, ಭಾರತದ ಸಂವಿಧಾನ ರೂಪಿಸಿದ ಅನುಚ್ಛೇದ ನಿಯಮಗಳೋ ಅಥವಾ ಇಲ್ಲಿ ಉಲ್ಲೇಖಿಸಿರುವ ಸಿ.ಪಿ.ರಾಮಸ್ವಾಮಿ ಅಯ್ಯರ್‌ರವರ ಹೇಳಿಕೆಯಾದ ದೈವತ್ವದ ಆಜ್ಞೆಯೋ ಎಂಬುದು? ಖಂಡಿತ, ದೈವತ್ವದ ಆಜ್ಞೆಯೇ ಮೇಲುಗೈ ಸಾಧಿಸಿದೆ ಹಾಗೆಯೇ ಮುಂದೆಯೂ ಕೂಡ ಸಾಧಿಸುತ್ತದೆ! ಯಾಕೆಂದರೆ ಇದು ಸಂಸದ ರಮೇಶ ಜಿಗಜಿಣಗಿಯವರೊಬ್ಬರ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೊಬ್ಬನ ಸಮಸ್ಯೆಯಲ್ಲ, ಈ ದೇಶದ ಮೂಲೆ ಮೂಲೆಯಲ್ಲಿರುವ ದಲಿತನ ಸಮಸ್ಯೆ.

    ಅನುಭವದಂತೆ ಹಾಗೆಯೇ ನೋಡಿ ತಿಳಿದಿರುವಂತೆ ಯಾವುದೇ ದಲಿತ ಆತ ವೈಯಕ್ತಿಕವಾಗಿ ದೇವಸ್ಥಾನ ಪ್ರವೇಶಿಸುವ ಆಸೆ ಹೊಂದಿರದೆ ಇರಲಾರ. ಯಾಕೆಂದರೆ ಭಾರತ ದೈವತ್ವದ ನಾಡು. ಇಲ್ಲಿ ದೇವಾಲಯಗಳು ಯಥೇಚ್ಛವಾಗಿವೆ. ಹಳ್ಳಿಗೊಂದು, ಎರಡರಂತೆ ದೇವಸ್ಥಾನಗಳು ಇದ್ದೇ ಇವೆ. ಹಾಗೆ ಆ ಹಳ್ಳಿಯ ಭಾಗವಾಗಿರುವ ದಲಿತರು? ದಲಿತ ಬಾಲಕರು? (ಬಾಲಕ ರಮೇಶ ಜಿಗಜಿಣಗಿ ಮಾಡಿದಂತೆ) ದೇವಸ್ಥಾನವನ್ನು ಪ್ರವೇಶಿಸದೆ ಇರುತ್ತಾರೆಯೇ? ಖಂಡಿತ, ಬಹುತೇಕರು ಜಿಗಜಿಣಗಿ ಯವರಂತೆ ದೇವಸ್ಥಾನ ಪ್ರವೇಶಿಸಿರುತ್ತಾರೆ. ಯಾಕೆಂದರೆ ಎಲ್ಲರೂ ಪ್ರವೇಶಿಸುತ್ತಾರೆ ಎಂಬ ಸಾಮಾನ್ಯ ನೋಟದಿಂದ. ಆದರೆ ‘ತಾವು ಕೀಳು ಜಾತಿಯವರು’ ಎಂದು ಗೊತ್ತಾಗುವುದು ‘‘ಏಯ್! ದೂರ ಹೋಗು’’ ಎಂದಾಗ! ಅಂದಹಾಗೆ ಇಂತಹ ‘‘ದೂರ ಹೋಗು’’ ಎಂಬ ಆಜ್ಞೆಗಳನ್ನು ಮೀರಿ ದೇವಸ್ಥಾನ ಪ್ರವೇಶಿಸಿದ ಬಾಲಕರಿದ್ದಾರೆ (ಹಾಸನದ ಆ ಯುವಕ ಮಾಡಿದಂತೆ). ಅಂತಹ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ಅಲ್ಲಿ ಕೋಮುಗಲಭೆಗಳಾಗಿವೆ ಅಥವಾ ‘‘ತುಂಡುಡುಗ ಅವನಿಗೇನು ಗೊತ್ತು’’ ಎಂದು ಬಿಟ್ಟು ಕಳುಹಿಸಿರುವ ಪ್ರಸಂಗಗಳೂ ಇವೆ. ಪ್ರಶ್ನೆ ಏನೆಂದರೆ ಇಂತಹ ದೇವಸ್ಥಾನ ಪ್ರವೇಶ ನಿರಾಕರಿಸುವ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ದಲಿತ ಬಾಲಕ/ಬಾಲಕಿಯರ ಮೇಲೆ, ಒಟ್ಟಾರೆ ಆ ಸಮಾಜದ ಮೇಲೆ ಬೀರುವ ಪರಿಣಾಮ? ಖಂಡಿತ, ಈ ಕಾರಣಕ್ಕೆ ದಲಿತರು ಅನ್ಯ ಧರ್ಮ ದೆಡೆ ಆಕರ್ಷಿತರಾಗುವುದು. ಸ್ವತಃ ಅಂಬೇಡ್ಕರರ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ 1930 ಮಾರ್ಚ್ 2ರಂದು ‘‘ಹಿಂದೂಗಳ ಹೃದಯ ಪರಿವರ್ತನೆ ಮಾಡಲು ನಾವು ಕಾಳಾರಾಮ್ ದೇವಸ್ಥಾನ ಪ್ರವೇಶ ಸತ್ಯಾಗ್ರಹ ಮಾಡುತ್ತಿದ್ದೇವೆ’’ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ 1. ಪು.182) ಎಂದವರು ಅದರಲ್ಲಿ ವಿಫಲಗೊಳ್ಳುತ್ತಲೇ ಮುಂದೆ 1934 ನವೆಂಬರ್ 19 ರಂದು ಆ ದೇವಾಲಯ ಪ್ರವೇಶ ಚಳುವಳಿಯನ್ನು ಕೈಬಿಡುತ್ತಾ ‘‘ಹಿಂದೂ ಸಮಾಜದಲ್ಲಿ ನಮ್ಮ ನೈಜ ಸ್ಥಿತಿ ಏನು ಎಂಬುದು ಈ ಮೂಲಕ ತಿಳಿಯಿತು’’ (ಅದೇ ಕೃತಿ. ಪು.203) ಎಂದರು! ಮುಂದೆ 1935 ಅಕ್ಟೋಬರ್ 13ರಂದು ಅದೇ ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ ‘‘ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’’ (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ 3. ಪು.94) ಎಂದು ಘೋಷಿಸಿದ ಅವರು ಅಂತೆಯೇ 1956 ಅಕ್ಟೋಬರ್ 14 ರಂದು ತಮ್ಮ ಐದು ಲಕ್ಷ ಅನುಯಾಯಿಗಳೊಡನೆ ಹಿಂದೂಧರ್ಮ ತ್ಯಜಿಸಿ ಬೌದ್ಧಧರ್ಮ ಸೇರುತ್ತಾರೆ, ತನ್ಮೂಲಕ ಅಂಬೇಡ್ಕರ್ ಹಿಂದೂ ದೇವಸ್ಥಾನ ಪ್ರವೇಶಿಸುವ ಸಂದರ್ಭವನ್ನೇ ತಪ್ಪಿಸಿಕೊಳ್ಳುತ್ತಾರೆ. ಪ್ರಶ್ನೆ ಏನೆಂದರೆ ಎಷ್ಟು ದಲಿತರು ಅಂಬೇಡ್ಕರರ ಈ ಕ್ರಾಂತಿಕಾರಿ ಮಾರ್ಗದಲ್ಲಿ ಸಾಗುವುದು ಸಾಧ್ಯ? ಎಂಬುದು. ಹಾಗಿದ್ದರೆ ದಲಿತರಿಗೆ ಹಿಂದೂ ದೇವಾಲಯಗಳನ್ನು ಮುಕ್ತವಾಗಿ ತೆರೆಯಬೇಕಲ್ಲವೆ? ಎಲ್ಲಾ ಹಿಂದೂಗಳು ಎಲ್ಲಾ ದಲಿತರನ್ನು ‘‘ಬನ್ನಿ, ನಮ್ಮ ದೇವಸ್ಥಾನಕ್ಕೆ’’ ಎಂದು ಪ್ರೀತಿಯಿಂದ ಅಥವಾ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯಾದರೂ ಕರೆದುಕೊಂಡು ಹೋಗಬೇಕಲ್ಲವೆ? ದುರಂತವೆಂದರೆ ಐದು ಬಾರಿ ಸಂಸದ, ನಾಲ್ಕು ಬಾರಿ ವಿಧಾನಸಭಾ ಸದಸ್ಯ, ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ ಗೌರವಾನ್ವಿತ ಶೋಷಿತ ಸಮುದಾಯದ ಸದಸ್ಯರಾದ ರಮೇಶ ಜಿಗಜಿಣಗಿಯವರಿಗೇ ಇಂತಹ ಹೀನ ಪರಿಸ್ಥಿತಿ. ಇನ್ನು ಹಳ್ಳಿಗಳಲ್ಲಿ, ಪಟ್ಟಣಗಳ ಕೊಳಗೇರಿಗಳಲ್ಲಿ ಬದುಕುವ ಸಾಮಾನ್ಯ ದಲಿತರ ಪಾಡು ಹೇಗಿರಬೇಡ? ನಿಜ ಹೇಳಬೇಕೆಂದರೆ ಇಂದಿಗೂ ಕೂಡ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಬಹುತೇಕ ದಲಿತರ ಸ್ಥಿತಿ ಅಸಹಾಯಕ, ಹಾಗೆಯೇ ಅತಂತ್ರ.


'ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು' ಪುಸ್ತಕದ ಮುಖಪುಟ
ಕೋರ್ಟಿಗೆ ಹೆದರಿ ಕಂಗಾಲಾದ ಅಧಿಕಾರಿಗಳು: ಅಧಿಕಾರ ಕಳೆದುಕೊಂಡ ಅಕಾಡೆಮಿ ಅಧ್ಯಕ್ಷರುShashikant Yadahalli
                             -ಶಶಿಕಾಂತ ಯಡಹಳ್ಳಿ

                                           
ನ್ಯಾಯಾಂಗ ನಿಂದನೆಗೆ ಹೆದರಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. 2014 ಫೆಬ್ರುವರಿ 26 ರಂದು ತಾನೇ ಆಯ್ಕೆ ಮಾಡಿದ ಮೂರು ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನಾಲ್ಕೇ ತಿಂಗಳಲ್ಲಿ ಅನೂರ್ಜಿತಗೊಳಿಸಿ ಮನೆಗೆ ಕಳುಹಿಸಿದೆ. ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಹಾಗೂ ಸಂಸ್ಕೃತಿ ಮಂತ್ರಿಣಿಯ ಆತುರದ ನಿರ್ಧಾರಕ್ಕೆ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಬಲಿಪಶುವಾಗಿದ್ದಾರೆ. ಜೊತೆಗೆ ಮಿಕ್ಕ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳೂ ಸಹ ಆತಂಕಗೊಂಡಿದ್ದಾರೆ
ಇದು ಮೂಲತಃ ಸರಕಾರಗಳು ಮಾಡುವ ಅತಿರೇಕ ಹಾಗೂ ಅಧಿಕಾರಿಗಳ ಅವಿವೇಕತನದ ಫಲವಾಗಿದೆ. ಕಾಂಗ್ರೆಸ್ ಸರಕಾರ 2013 ಮೇ ನಲ್ಲಿ ಅಸ್ತಿತ್ವಕ್ಕೆ ಬಂತು. ಜೂನ್ ತಿಂಗಳಲ್ಲಿ ಎಲ್ಲಾ ಅಕಾಡೆಮಿ ಅಧ್ಯಕ್ಷರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆಯಲಾಯಿತು. ಅಲ್ಲಿಂದ ಸರಿಯಾಗಿ ಒಂಬತ್ತು ತಿಂಗಳ ನಂತರ ಅಕಾಡೆಮಿ ಪ್ರಾಧಿಕಾರಗಳಿಗೆ ಸರಕಾರಿ ನೇಮಕಾತಿ ನಡೆಯಿತು. ಅದೂ ಚುನಾವಣೆ ಇನ್ನೇನು ಡಿಕ್ಲೇರ್ ಆಗುತ್ತೆ ಅನ್ನುವಾಗ ಅವಸರವಸರದಲ್ಲಿ ಆದೇಶ ಹೊರಡಿಸಲಾಯಿತು. ಬಹುತೇಕ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರುಗಳು ಫೆಬ್ರವರಿ 27ರಂದೇ ತಮ್ಮ ಹುದ್ದೆ ಅಲಂಕರಿಸಿದರು.
ಸರಕಾರೀ ಆದೇಶ (ಜಿಓ)
ಆದರೆ... ಬಿಜೆಪಿ ಸರಕಾರವಿದ್ದಾಗ ಆಯ್ಕೆಗೊಂಡ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರದ ಅವಧಿ ಇನ್ನೂ ಎರಡು ವರ್ಷಗಳಷ್ಟಿತ್ತು. ಆದರೂ ಸಹ ಸರಕಾರ ಬದಲಾಗುತ್ತಿದ್ದಂತೆ ಅಕಾಡೆಮಿಗಳ ಪದಾಧಿಕಾರಿಗಳನ್ನೂ ಬದಲಾಯಿಸಿದ್ದು ಅಕ್ಷಮ್ಯ. ಯಾಕೆಂದರೆ ಅಕಾಡೆಮಿ ಪ್ರಾಧಿಕಾರಗಳು ಒಂದೊಂದು ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಅದಕ್ಕೆ ಸರಕಾರ ಅನುದಾನವನ್ನು ಒದಗಿಸುತ್ತದೆ. ಯಾವುದೇ ಕಾರಣಕ್ಕೂ ಸರಕಾರಗಳು ಅಕಾಡೆಮಿಗಳಲ್ಲಿ ರಾಜಕೀಯ ಮಾಡಬಾರದು. ಆದರೆ ತಮ್ಮ ಪಕ್ಷದ ಪರವಾಗಿರುವವರಿಗೆ ಅಧಿಕಾರಗಳನ್ನೊದಿಗಿಸಲು ಸರಕಾರಗಳು ಅಕಾಡೆಮಿಗಳನ್ನು ಬಳಸಿಕೊಳ್ಳತೊಡದ್ದೇ ಅನೈತಿಕ. ಇದರಿಂದಾಗಿ ಸರಕಾರ ಬದಲಾದ ಕೂಡಲೇ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರ ರಾಜೀನಾಮೆ ಕೇಳಲಾಗುತ್ತದೆ. ಅದರಂತೆ ಕಾಂಗ್ರೆಸ್ ಸರಕಾರ ಬಂದಾಗಲೂ ಅದನ್ನೇ ಮಾಡಲಾಯಿತು. ಸರಕಾರಿ ಇಲಾಖೆಯ ಒತ್ತಡಕ್ಕೆ ಮಣಿದು ಕೆಲವು ಅಕಾಡೆಮಿಗಳ ಅಧ್ಯಕ್ಷರುಗಳು ರಾಜೀನಾಮೆ ಕೊಟ್ಟರು. ಆದರೆ ಸರಕಾರದ ಮೌಖಿಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಿಖಿತ ಆದೇಶವನ್ನು ಪ್ರಶ್ನಿಸಿ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ .ಸು.ಕೃಷ್ಣಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ರಹೀಂ ಉಚ್ಚಿಲ್ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಲ್.ಸಾಮಗ ರವರುಗಳು ತಮ್ಮ ಅಧ್ಯಕ್ಷಗಿರಿಗೆ ರಾಜೀನಾಮೆಯನ್ನು ಕೊಡಲು ನಿರಾಕರಿಸಿದರು. ಸರಕಾರ ತನ್ನ ಪರಮಾಧಿಕಾರವನ್ನು ಬಳಸಿ ಆಯಾ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಅನೂರ್ಜಿತಗೊಳಿಸಿತು. ಆಗ ಸರಕಾರದ ಸರ್ವಾಧಿಕಾರಿತನವನ್ನು ಆಕ್ಷೇಪಿಸಿ ಮೂರು ಜನ ಅಧ್ಯಕ್ಷರುಗಳು ನ್ಯಾಯಕ್ಕಾಗಿ ಆಗ್ರಹಿಸಿ ಕೋರ್ಟ ಮೆಟ್ಟಿಲು ಏರಿದರು. " ಹಿಂದೆ ಬಂದ ಯಾವುದೇ ಸರಕಾರಗಳು ಸ್ವಂತ ಬೈಲಾ ಹೊಂದಿರುವ ಯಾವುದೇ ಅಕಾಡೆಮಿಗಳನ್ನು ಅವಧಿಪೂರ್ವ ಬದಲಾಯಿಸಿಲ್ಲ. ಹೀಗಾಗಿ ಸರಕಾರವು ಅಧ್ಯಕ್ಷರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದೆ" ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.
 
ಮೂವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಸರಕಾರಕ್ಕೆ ವಿವರಣೆ ಕೊಡಲು ಸೂಚಿಸಿದರೂ ಸರಕಾರದ ಕಡೆಯಿಂದ ಯಾವುದೇ ವಿವರಣೆ ದೊರೆಯಲಿಲ್ಲ. ಕೊನೆಗೆ ನ್ಯಾಯಾಲಯವು   ಮೂರೂ ಅಕಾಡೆಮಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಸರಕಾರಕ್ಕೆ ಆದೇಶಿಸಿ ಮಧ್ಯಂತರ ತೀರ್ಪನ್ನು ನೀಡಿತ್ತು. ಹಾಗೂ ವಿಚಾರಣೆ ಈಗಲೂ ಮುಂದುವರೆದಿದೆ. ಹೀಗೆ ಮದ್ಯಂತರ ಆದೇಶ ನೀಡಿದ್ದಾಗ ಇನ್ನೂ ಅಕಾಡೆಮಿಗಳಿಗೆ ಯಾವುದೇ ನೇಮಕಾತಿ ಮಾಡಿರಲಿಲ್ಲ. ನ್ಯಾಯಾಲಯದ ಆದೇಶವನ್ನು ಕಾಪಾಡುವುದು ಸರಕಾರದ ಹಾಗೂ ಅಕಾಡೆಮಿಗಳನ್ನು ನೋಡಿಕೊಳ್ಳುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಆದರೆ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ 2014 ಫೆಬ್ರುವರಿ 26 ರಂದು ಬೇರೆಲ್ಲಾ ಅಕಾಡೆಮಿ ಪ್ರಾಧಿಕಾರಗಳ ಜೊತೆಗೆ ವಿವಾದಿತ ಮೂರು ಅಕಾಡೆಮಿಗಳಿಗೂ ಸಹ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಿ ಸರಕಾರ ಆದೇಶ ಹೊರಡಿಸಿತು. ಅದಕ್ಕೆ ಮುಖ್ಯ ಮಂತ್ರಿಗಳ ಸಹಿಯನ್ನೂ ಪಡೆಯಲಾಗಿತ್ತು. ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀ ಒತ್ತಾಸೆಯಾಗಿ ನಿಂತಿದ್ದರು. ಹೀಗಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಲಲಿತ ಕಲಾ ಅಕಾಡೆಮಿಗೆ ಡಾ.ಎಂ.ಎಸ್.ಮೂರ್ತಿಯವರನ್ನು, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಮಹಮದ್ದ ಹನೀಪ್ ರವರನ್ನು ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿಗೆ ಡಾ.ಬೆಳಗಲ್ ವೀರಣ್ಣನವರನ್ನು ಆಯ್ಕೆಮಾಡಿ ಅವರ ಜೊತೆಜೊತೆಗೆ ಸದಸ್ಯರುಗಳನ್ನೂ ಆಯ್ಕೆ ಮಾಡಿ ಸರಕಾರ ಅಧೀಕೃತವಾಗಿ ಆದೇಶವನ್ನು ಹೊರಡಿಸಿತು. ಆಯಾ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಅಧಿಕಾರವನ್ನೂ ವಹಿಸಿಕೊಂಡು ಅಕಾಡೆಮಿಯ ಸಭೆಗಳನ್ನೂ ನಡೆಸಿಕೊಂಡು ಸಕ್ರೀಯರಾದರು.
ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ  ಎಂ.ಎಸ್.ಮೂರ್ತಿ
ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿದ್ದ .ನು.ಬಳಿಗಾರ ಹಾಗೂ ಇನ್ನೊಬ್ಬ ಅಧಿಕಾರಿ ಕಾ..ಚಿಕ್ಕಣ್ಣ ನಿವೃತ್ತರಾದರು. ಇಲಾಖೆಯ ಮೇಲೆ ಲೋಕಾಯುಕ್ತ ದಾಳಿಯೂ ನಡೆದು ಎಲ್ಲಾ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಲೋಕಾಯುಕ್ತ ದಾಳಿಯಿಂದಾಗಿ ಇಲಾಖೆಯ ಆಂತರಿಕರಂಗ ಅಲ್ಲೋಲ ಕಲ್ಲೋಲ ಆಯಿತು. ಪ್ರಕ್ಷುಬ್ದ ಸನ್ನಿವೇಶದಲ್ಲಿ ನ್ಯಾಯಾಲಯದ ಮದ್ಯಂತರ ಆದೇಶ ಎಲ್ಲಾ ಅಧಿಕಾರಿಗಳಿಗೂ ಮರೆತೇ ಹೋಯಿತು. ಗೊತ್ತಿದ್ದ ಕೆಳಹಂತದ ಅಧಿಕಾರಿಗಳೂ ಸಹ ಮೌನಕ್ಕೆ ಶರಣಾದರು. ಇಲಾಖೆಯ ಒತ್ತಡ ಇಲ್ಲದ್ದರಿಂದ ಇಲಾಖೆಯ ವಕೀಲರು ನ್ಯಾಯಾಲಯದಲ್ಲಿ ಕಾಲಹರಣ ಮಾಡತೊಡಗಿದರು. ಇಲಾಖೆಯ ಮಂತ್ರಿಣಿಗೆ ಯಾವುದರ ಬಗ್ಗೆ ಅರಿವಿರಲಿಲ್ಲ. ಸಿಎಂ ಸಾಹೇಬರಂತೂ ತಮ್ಮದೇ ಚುನಾವಣಾ ರಾಜಕೀಯದಲ್ಲಿ ಒತ್ತಡದಲ್ಲಿದ್ದರು. ಹೀಗೆ ಇದ್ದರೆ ಎಲ್ಲವೂ ಸುಸೂತ್ರವಾಗಿರುತ್ತಿತ್ತು. ಆದರೆ ಯಾವಾಗ ಕೋರ್ಟಿಗೆ ಹೋದ ಮಾಜಿ ಅಧ್ಯಕ್ಷರುಗಳ ವಕೀಲರುಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ, ಇದು ಕಂಡಮ್ಟ ಆಪ್ ಕೋರ್ಟ ಎಂದು ನ್ಯಾಯಾಧೀಶರಿಗೆ ಸರಕಾರದ ವಿರುದ್ಧ ಮನವಿ ಮಾಡಿದರೋ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬೆಚ್ಚಿಬಿದ್ದರು. ಮುಂದಿನ ವಾರ ನ್ಯಾಯಾಲಯ ನಿಂದನೆ ಕುರಿತು ವಿಚಾರಣೆ ಇದೆ. ಹೀಗಾಗಿ ಇನ್ನು ಸುಮ್ಮನಿದ್ದರೆ ಆರೆಸ್ಟ್ ವಾರೆಂಟ್ ಗ್ಯಾರಂಟಿ ಎಂದು ಗೊತ್ತಾಗಿದ್ದೇ ತಡ ಇಲಾಖೆಯ ಅಧಿಕಾರಿಗಳು ವಿಧಾನಸೌಧದಲ್ಲಿರುವ ಇಲಾಖೆ ಕಾರ್ಯದರ್ಶಿಗಳ ಚೇಂಬರಿಗೆ ದೌಡಾಯಿಸಿದರು. ಮಂತ್ರಿಣಿ ಉಮಾಶ್ರೀ ಕಂಗಾಲಾದರು. ರಾತ್ರೋ ರಾತ್ರೀ ಜಿಓ ಅಂದರೆ ಗೌವರ್ನಮೆಂಟ್ ಆರ್ಡರ್ ತಯಾರಿಸಿ ನ್ಯಾಯಾಲಯದ ಮೆಟ್ಟಲೇರಿದ ಮೂರು ಅಕಾಡೆಮಿಗಳ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯನ್ನು ಅಧೀಕೃತವಾಗಿ ರದ್ದು ಪಡಿಸಿದ ಆದೇಶವನ್ನು ಜೂನ್ 19ರಂದು ಹೊರಡಿಸಿದರು. ಅಂಡಿಗೆ ಬೆಂಕಿ ಹತ್ತಿದಾಗ ಭಾವಿ ತೋಡಲು ಶುರು ಮಾಡಿದರು.
ಕೇವಲ ಮೂರೇ ಅಕಾಡೆಮಿಗಳಲ್ಲ, ಉಳಿದೆಲ್ಲಾ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೂ ಈಗ ದಿಗಿಲು ಶುರುವಾಗಿದೆ. ಯಾಕೆಂದರೆ ಮೊದಲೇ ಅಧಿಕಾರಾವಧಿ ಮುಗಿದಿದ್ದ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಅಕಾಡೆಮಿಗಳ ಹೊಸ ಆಯ್ಕೆ ಈಗ ಪ್ರಶ್ನಾರ್ಹವಾಗಿದೆ. ಮಿಕ್ಕೆಲ್ಲಾ ಅಕಾಡೆಮಿಗಳ ಅಧಿಕಾರವಧಿ ಇನ್ನೂ ಎರಡು ವರ್ಷಗಳಷ್ಟು ಇರುವಾಗಲೇ ಇಲಾಖೆ ಅಧಿಕೃತ ಮೆಮೋ ಕೊಟ್ಟು ಬಲವಂತವಾಗಿ ರಾಜೀನಾಮೆ ಪಡೆದಿದೆ. ಈಗ ಆಯಾ ಅಕಾಡೆಮಿಯ ಅಧ್ಯಕ್ಷರುಗಳು ನಮಗೆ ಉತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಮಿಕ್ಕೆಲ್ಲಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಆಯ್ಕೆಯೂ ಸಹ ರದ್ದು ಮಾಡ ಬೇಕಾಗುತ್ತದೆ. ಈಗಾಗಲೇ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಮಾಲತಿ ಸುಧೀರರು ಲಾಯರ್ ಜೊತೆಗೆ   ಕುರಿತು ಮಾತುಕತೆ ನಡೆಸಿದ್ದಾರೆ. ಅವರು ತಮ್ಮ ಅಧಿಕಾರದ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಹೋರಾಟಕ್ಕೆ ಇಳಿದರೆ ರಾಜಕೀಯ ಲಾಭಿಮಾಡಿ ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರ್ ಅಧ್ಯಕ್ಷಗಿರಿ ಶೇಕ್ ಆಗುವುದರಲ್ಲಿ ಸಂದೇಹವಿಲ್ಲ. ಲಾಬಿಗಳ ಮೂಲಕ ಹಾಗೂ ಜಾತಿರಾಜಕಾರಣದ ಮೂಲಕ ನಾಟಕ ಅಕಾಡೆಮಿಯ ಸದಸ್ಯರಾದ ಬಹುತೇಕರು ಮನೆಗೆ ಹೋಗುವುದನ್ನು ತಪ್ಪಿಸಲು ಅವರವರ ರಂಗರಾಜಕೀಯ ಪಿತಾಮಹರಿಂದಲೂ ಸಾಧ್ಯವಿಲ್ಲ.

ಡಾ.ಬೆಳಗಲ್ ವೀರಣ್ಣ  
ಸರಕಾರ ಹಾಗೂ ಸರಕಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಮೊದಲಿದ್ದ ಅಧ್ಯಕ್ಷರುಗಳಿಗೂ ಅನ್ಯಾಯವಾಯಿತು. ಹಾಗೂ ಈಗ ಆಯ್ಕೆಗೊಂಡ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಕಾರಣಗಳಿಲ್ಲದೇ ಮನೆಗೆ ಕಳುಹಿಸಿ ಅವಮಾನಿಸಲಾಯಿತು. ಈಗ ತಾನೆ ನಾಲ್ಕು ತಿಂಗಳ ಹಿಂದೆ ಅಧ್ಯಕ್ಷರಾಗಿ ಹಾಗೂ ಸದಸ್ಯರುಗಳಾಗಿ ಆಯ್ಕೆಗೊಂಡು ತಮ್ಮ ಕ್ಷೇತ್ರಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಹಾಕಿಕೊಳ್ಳಬೇಕು ಎನ್ನುವ ಕುರಿತು ನೀಲಿನಕ್ಷೆಗಳನ್ನು ತಯಾರಿಸಿಕೊಂಡು ಕಾರ್ಯಪ್ರವೃತ್ತರಾಗುತ್ತಿದ್ದ ಮೂರು ಅಕಾಡೆಮಿಗಳ ಅಧ್ಯಕ್ಷರುಗಳಿಗಂತೂ ತುಂಬಾ ನಿರಾಸೆಯಾಗಿದೆ. ಅವರುಗಳ ಅಧಿಕಾರ ಸಮಾಪ್ತಿಯಾಗಿದೆ. ಇನ್ನು ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಅಕಾಡೆಮಿಗಳು ವಾರಸುದಾರರಿಲ್ಲದೇ ಸರಕಾರಿ ಅಧಿಕಾರಿಗಳ ಸಂಕುಚಿತ ವ್ಯಾಪ್ತಿಗೆ ಒಳಪಡಬೇಕಾಗಿದೆ. ನ್ಯಾಯಾಲಯದ ತೀರ್ಪು ಮಾಜಿ ಅಧ್ಯಕ್ಷರುಗಳ ಪರವಾಗಿ ಬಂದರೆ ಅನಿವಾರ್ಯವಾಗಿ ಅವರ ಉಳಿದ ಎರಡು ವರ್ಷಗಳಿಗೆ ಅವರನ್ನೇ ನಿಯಮಿಸಬೇಕಾಗುತ್ತದೆ. ಇದು ಆಗುವುದು ಉತ್ತಮ. ಯಾಕೆಂದರೆ ವಿವೇಚನಾ ರಹಿತವಾಗಿ ಅಕಾಡೆಮಿಗಳಲ್ಲಿ ರಾಜಕಾರಣ ಮಾಡುವ ಸರಕಾರಗಳಿಗೆ ಹಾಗೂ ಸರಕಾರಿ ಇಲಾಖೆಗೆ ಇದೊಂದು ಪಾಠವಾಗಬೇಕಿದೆ. ಮುಂದೆ ಬರುವ ಸರಕಾರಗಳು ಇಷ್ಟ ಬಂದ ಹಾಗೆ ಅಕಾಡೆಮಿ ಪ್ರಾಧಿಕಾರಗಳನ್ನು ತಮ್ಮ ಅಂಕೆಯಲ್ಲಿಟ್ಟು ಆಳುವುದನ್ನು ತಪ್ಪಿಸಬೇಕಿದೆ.
ವಿವಾದಿತ ಮೂರು ಅಕಾಡೆಮಿಗಳ ಮಾಜಿ ಅಧ್ಯಕ್ಷರುಗಳು ಬೆಳವಣಿಗೆಯಿಂದ ಒಂದಿಷ್ಟು ಗೆಲುವನ್ನು ಪಡೆದಿದ್ದಾರೆ. ಹಾಲಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಅಧಿಕಾರ ಕೈತಪ್ಪಿದ್ದಕ್ಕೆ ಅಪಾರ ನಿರಾಶೆಯನ್ನು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೆ ಎಲ್ಲಾ ಅವಗಡಗಳಿಗೆ ಕಾರಣೀಕರ್ತರಾದ ದಪ್ಪ ಚರ್ಮದ ಅಧಿಕಾರಶಾಹಿ ಮಾತ್ರ ಇದೆಲ್ಲಾ ಮಾಮೂಲು ಎನ್ನುವಂತೆ ನಿರ್ಲಕ್ಷದೋರಣೆ ತೋರುತ್ತಲೆ ಇದೆ. ಒಂದು ಮಾತ್ರ ಸತ್ಯ, ಸರಕಾರ ಬದಲಾಗುತ್ತದೆ. ಅಕಾಡೆಮಿಗಳ ಅಧ್ಯಕ್ಷ ಸದಸ್ಯರುಗಳು ಬದಲಾಗುತ್ತಾರೆ ಆದರೆ ಬ್ಯೂರೋಕ್ರಾಟ್ಸ್ಗಳು ಮಾತ್ರ ಒಂದಿಲ್ಲಾ ಒಂದು ಇಲಾಖೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತು ನಿವೃತ್ತರಾಗುವವರೆಗೂ ಖಾಯಂ ಆಗಿ ವಿಜ್ರಂಬಿಸುತ್ತವೆ. ಇದು ದೇಶದ ದೌರ್ಬಾಗ್ಯವಾಗಿದೆ. ಜನರನ್ನು ಆಳುವವರು ಯೋಜನೆಗಳನ್ನು ರೂಪಿಸುವವರು ಸರಕಾರದವರು ಹಾಗೂ ರಾಜಕಾರಣಿಗಳು ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ನಿಜಕ್ಕೂ ಇಡೀ ರಾಜ್ಯವನ್ನು ಅಷ್ಟೇ ಯಾಕೆ ಇಡೀ ದೇಶವನ್ನೇ ನಿಯಂತ್ರಿಸುವವರು ಅಧಿಕಾರಶಾಹಿಗಳೇ ಎಂಬುದು ನಿರ್ವಿವಾದ.
ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಎಂ.ಎಲ್.ಸಾಮಗ
  ಸರಕಾರಕ್ಕೆ ವಿವೇಚನೆ ಎನ್ನುವುದು ಇದ್ದಲ್ಲಿ ಮೊದಲು ನ್ಯಾಯಾಲಯದ ಆದೇಶವನ್ನು ಮಂತ್ರಿಗಳ ಗಮನಕ್ಕೆ ತರದೇ ಹೊಸ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲು ಕಾರಣೀಕರ್ತರಾದ ಎಲ್ಲಾ ಅಧಿಕಾರಿಗಳನ್ನು ಮೊದಲು ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಖಾಯಂ ಆಗಿ ಮನೆಗೆ ಕಳುಹಿಸಬೇಕು. ಹಾಗೆಯೇ ಯಾವುದೇ ಪಕ್ಷ ಇರಲಿ, ಯಾವುದೇ ಸರಕಾರ ಬರಲಿ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧಿಕಾರ ವ್ಯಾಪ್ತಿ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ  ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲೇ ಬಾರದು. ಹೀಗೊಂದು ಪಾಠವನ್ನು ನ್ಯಾಯಾಲಯದ ಅಂತಿಮ ಆದೇಶ ಕಲಿಸಬೇಕಿದೆ. ಈಗಾಗಲೇ ರಾಜಕೀಯ ಪ್ರೇರಿತ, ಲಾಭಿ ಆಧಾರಿತ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆಯಿಂದಾಗಿ ಬಹುತೇಕ ಅಕಾಡೆಮಿಗಳು ನಿಷ್ಕ್ರೀಯಗೊಂಡಿವೆಕಲೆ ಸಾಹಿತ್ಯ ಸಂಸ್ಕೃತಿಯ ಅಭಿವೃದ್ದಿಗಾಗಿ ಅಸ್ತಿತ್ವಕ್ಕೆ ಬಂದ ಅಕಾಡೆಮಿಗಳಿಂದ ನಿರೀಕ್ಷಿಸಿದಷ್ಟು ಕೆಲಸಗಳು ಆಗುತ್ತಿಲ್ಲ. ಬರುಬರುತ್ತಾ ಜನರಿಗೇ ಅಕಾಡೆಮಿಗಳು ಭಾರವಾಗುತ್ತಿವೆ. ಅನಗತ್ಯವಾಗಿ ಜನರ ಹಣವನ್ನು ಕಬಳಿಸುತ್ತಿವೆ. ಸರಕಾರ ಸಾಕುವ ಬಿಳಿಯಾನೆಗಳಾಗಿ ಬದಲಾಗುತ್ತಿವೆ. ಇಂತಹ ಅಕಾಡೆಮಿಗಳು ಬೇಕಾ? ರಾಜಕೀಯ ಪ್ರೇರಿತ ಅಧ್ಯಕ್ಷರುಗಳು ಹಾಗೂ ಸದಸರುಗಳು ಅಗತ್ಯವಿದೆಯಾ? ಅಕಾಡೆಮಿಗಳನ್ನು ನಿಷ್ಕ್ರೀಯಗೊಳಿಸುವ ಅಧಿಕಾರಿಶಾಹಿಗಳ ಹಿಡಿತದಿಂದ ಅಕಾಡೆಮಿಗಳಿಗೆ ಮುಕ್ತಿಇಲ್ಲವಾ? ಅಕಾಡೆಮಿಗಳನ್ನು ಯಾಕೆ ಸ್ವಾಯತ್ತಗೊಳಿಸಬಾರದು? ಎನ್ನುವ ಪ್ರಶ್ನೆಗಳನ್ನು ಕನ್ನಡದ ಪ್ರಜ್ಞಾವಂತರು ಕೇಳುತ್ತಿದ್ದಾರೆ. ಉತ್ತರಿಸಬೇಕಾದವರು  ಪಂಚೇಂದ್ರಿಯಗಳನ್ನು  ನಿಷ್ಕ್ರೀಯ ಗೊಳಿಸಿಕೊಂಡಿದ್ದಾರೆ.

                             -ಶಶಿಕಾಂತ ಯಡಹಳ್ಳಿ
"ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಒಂದರ ನಂತರ ಒಂದು ತಪ್ಪು ಮಾಡುತ್ತಲೇ ಇದೆಮೊದಲು ನಮ್ಮನ್ನು  ಅಕಾರಣವಾಗಿ ಅಧ್ಯಕ್ಷತೆಯಿಂದ  ಪದಚ್ಯುತಿಗೊಳಿಸಿ ತಪ್ಪುಮಾಡಿತು. ವಿವಾದ ನ್ಯಾಯಾಲಯದಲ್ಲಿದ್ದರೂ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿ ಇನ್ನೊಂದು ತಪ್ಪು ಮಾಡಿತು. ಈಗ ಮತ್ತೆ ಆಯ್ಕೆ ಮಾಡಿದ ಹೊಸ ಅಧ್ಯಕ್ಷರುಗಳ ನೇಮಕ ರದ್ದುಗೊಳಿಸಿ ಮತ್ತೊಂದು ತಪ್ಪು ಮಾಡಿದೆ."
-ಲಲಿತ ಕಲಾ ಅಕಾಡೆಮಿಯ ಪದಚ್ಯುತ ಅಧ್ಯಕ್ಷ  ಚಿ.ಸು.ಕೃಷ್ಣಶೆಟ್ಟಿ.        

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...