Monday, June 02, 2014

ಅಪೂರ್ವ ಸಮಾವೇಶದಲ್ಲಿ: ಕಾವ್ಯ, ಚಿಂತನೆ ಇತ್ಯಾದಿ...

ಶೂದ್ರ ಶ್ರೀನಿವಾಸ್

ಭಾಗ 1

‘‘ದೇವರು ಸಿಗುತ್ತಿಲ್ಲವೆಂಬುದೇನು ಮಹಾದುರಂತವಲ್ಲ
ನನಗೆ ನನ್ನದೇ ಹೆಜ್ಜೆಗಳ ಗುರುತು ಸಿಗುತ್ತಿಲ್ಲ
ಅನಂತ ಕಾಲದಿಂದ ಜನಜಂಗುಳಿಯಲ್ಲಿ ನಿಂತಿದ್ದೇನೆ
ಎಲ್ಲೂ ನಿನ್ನ ಚಹರೆಯ ಗುರುತು ಸಿಗುತ್ತಿಲ್ಲ!’’
-ಕೈಫಿ ಆಜ್ಮಿ
ಮೇಲಿನ ಸಾಲುಗಳು ಕೈಫಿ ಆಜ್ಮಿಯವರ ಒಂದು ಗಝಲ್‌ನ ಕೆಲವು ಸಾಲುಗಳು. ಇವು ನನ್ನನ್ನು ಡಿಸ್ಟರ್ಬ್ ಮಾಡಿದ ಸಾಲುಗಳು. ‘ಇಷ್ಟು ದೀರ್ಘ ಕಾಲ’ ಎಂಬ ಚೌಕಟ್ಟಿನಲ್ಲಿ ನಾವು ಬದುಕುತ್ತ ಬಂದಿದ್ದೇವೆ. ಆದರೆ ಶಾಶ್ವತವಾಗಿ ಆಪ್ತವಾದ ಮನುಷ್ಯರು ನಮಗೆ ದೊರಕಿರುವುದೇ ಇಲ್ಲ. ಆಪ್ತರಾದವರು ಎಂಬುವವರ ಮುಂದೆಯೂ ಪ್ರತಿ ಬಾರಿ ಹೊಸದಾಗಿಯೇ ವ್ಯವಹರಿಸ ಬೇಕಾಗುತ್ತದೆ. ಆದ್ದರಿಂದಲೇ ಇರಬಹುದು ಪ್ರತಿಯೊಂದು ಸಮಾಜವೂ ಎಲ್ಲ ಕಾಲದಲ್ಲೂ; ವಿವರಿಸಲಾಗದ ಅಥವಾ ಬಿಡಿಸಲಾಗದ ಒತ್ತಡಗಳಿಂದಲೇ ಬದುಕುತ್ತಿರುತ್ತದೆ. ಆತಂಕ ಮತ್ತು ತಲ್ಲಣಗಳು ತಿಪ್ಪರಲಾಗ ಹಾಕುತ್ತಲೇ ಮುಖಾಮುಖಿಯಾಗುತ್ತಿರುತ್ತವೆ. ಪ್ರತಿ ಕಾಲಘಟ್ಟಗಳಲ್ಲಿ ನಾವು ಹೊಸದಾಗಿಯೇ ಬದುಕಬೇಕಾಗಿರುತ್ತದೆ. ಅಷ್ಟೆ ಏಕೆ ರಾತ್ರಿ ನಮ್ಮ ಮನೆಯ ಮಗುವನ್ನು ಪ್ರೀತಿ ಯಿಂದ ಮುದ್ದಾಡಿ ಮಲಗಿಸುತ್ತೇವೆ. ಆದರೆ ಮತ್ತೆ ಬೆಳಗ್ಗೆ ಆ ಮಗುವನ್ನು ಪ್ರೀತಿಯಿಂದ ಕರೆಯುವವರೆಗೂ ಮಗು ನಮ್ಮ ಬಳಿ ಸುಳಿಯುವುದಿಲ್ಲ. ಈ ರೀತಿಯ ಸಂಬಂಧಗಳನ್ನು ನಾವು ಬಹುದೂರದವರೆಗೂ ವಿಸ್ತರಿಸುತ್ತ ಹೋಗಬಹುದು. ಈ ವಿಸ್ತಾರದಲ್ಲಿಯೇ ಚೇತೋಹಾರಿ ಸಂಗತಿಗಳು ವೈವಿ ಧ್ಯಮಯತೆಯನ್ನು ಪಡೆಯುತ್ತ ರೂಪಕ ಗಳಾಗಿ ಉಳಿಯುವುದು. ಈ ದೃಷ್ಟಿಯಿಂದ ಕೈಫಿ ಆಜ್ಮಿಯವರ ‘ಇಬ್ಬ ಎ ಮರಿಯಮ್’ ಎಂಬ ಕವಿತೆ ನನಗೆ ತುಂಬ ಪ್ರಿಯವಾದದ್ದು. ಆ ಕವಿತೆಯ ಕೊನೆಯ ಸಾಲುಗಳು ಹೀಗಿವೆ: ‘‘ದಯವಿಟ್ಟು ನೀನಿಲ್ಲಿಂದ ಹೊರಡು/ವಿಯಟ್ನಾಮಿನ ಕಾಡುಗಳತ್ತ ಹೋಗು/ ಆ ಗಲ್ಲಿಗೇರಲ್ಪಟ್ಟ ನಗರ, ಗಾಯಗೊಂಡ ಹಳ್ಳಿಗಳ/ ಬೈಬಲ್ ಓದುವವರೆ ನಾಶಗೊಳಿಸಿದ್ದಾರೆ/ಸುಟ್ಟು ಹಾಕಿದ್ದಾರೆ! ಹೋಗು/ ಎಂದಿನಿಂದ ಕಾಯುತ್ತಿದ್ದಾರೆ ಅವರು ನಿನ್ನ/... ಹೋಗು ನಮಗೋಸ್ಕರ ಇನ್ನೊಮ್ಮೆ /ಶಿಲುಬೆಗೇರಬೇಕಿದೆ ನೀನು’’ ಈ ಸಾಲುಗಳನ್ನು ದಾಖಲಿಸುವ; ಅದರೊಟ್ಟಿಗೆ ಕೈಫಿಯವರನ್ನು ಆಪ್ತವಾಗಿ ಅರಿಯುವ ಒಂದು ಅವಕಾಶ ದೊರಕಿತ್ತು.


ದೂರದ ಊರಾದ ಗದಗ್‌ನ ಲಡಾಯಿ ಪ್ರಕಾಶನದ ಬಸೂ ಅವರು ಹಾವೇರಿಯಲ್ಲಿ ನಡೆಯುವ ‘ಮೇ ಸಾಹಿತ್ಯ ಮೇಳ’ಕ್ಕೆ ಆಹ್ವಾನಿಸಿದ್ದರು. ಅಲ್ಲಿ ಅವರು ಇತ್ತೀಚಿನ ಕೆಲವು ವರ್ಷಗಳಿಂದ ‘ವಿಭಾ’ ಅವರ ಹೆಸರಿನಲ್ಲಿ ಕಾವ್ಯ ಪ್ರಶಸ್ತಿಯನ್ನು ನೀಡುತ್ತ ಬಂದಿದ್ದಾರೆ. ನಂತರ ವಿಭಾ ಅವರು ಮತ್ತು ರಾಹು ಅವರು ಸೇರಿ ಶಬನಾ ಆಜ್ಮಿಯವರ ‘ನನ್ನ ಪ್ರೀತಿಯ ಅಪ್ಪ’ ಎಂಬ ಪುಟ್ಟ ಕೃತಿಯನ್ನು ಬರೆದಿದ್ದಾರೆ. ಇದನ್ನು ಮತ್ತು ಕೈಫಿಯವರ ಕೆಲವು ಕವಿತೆಗಳನ್ನು ಅನುವಾದಿಸಿ ‘ನನ್ನ ಪ್ರೀತಿಯ ಅಪ್ಪ ಮತ್ತು ಕೈಫಿ ಆಜ್ಮಿ ಕವಿತೆಗಳು’ ಎಂಬ ಶೀರ್ಷಿಕೆಯಲ್ಲಿ ಬಸೂ ಪ್ರಕಟಿಸಿದ್ದಾರೆ. ಇದರ ಜೊತೆಗೆ ನನ್ನ ಪ್ರೀತಿಯ ಕವಿ ಕೆ.ಫಿ. ಮೃತ್ಯುಂಜಯ ಅವರ ‘ನನ್ನ ಶಬ್ದ ನಿನ್ನಲಿ ಬಂದು’ ಎಂಬ ಕವನ ಸಂಕಲನಕ್ಕೆ ವಿಭಾ ಅವರ ಹೆಸರಿನ ಪ್ರಶಸ್ತಿ ಯನ್ನು ಕೊಟ್ಟಿದ್ದಾರೆ. ಮತ್ತು ಲಡಾಯಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ‘ಮೇ ಸಾಹಿತ್ಯ ಮೇಳ’ದ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ನೀಡಿ ಕೃತಿಗಳನ್ನು ಬಿಡುಗಡೆ ಮಾಡುವ ಸದಾವಕಾಶವನ್ನು ಕಲ್ಪಿಸಿದ್ದರು. 

ಹಾಗೆ ನೋಡಿದರೆ ಕೆಲವು ತಿಂಗಳುಗಳ ಹಿಂದೆ ‘ತೇವ ಕಾಯುವ ಬೀಜ’ ಮತ್ತು ‘ದೀಪದ ಗಿಡ’ ಹಾಗೂ ‘ಬಟ್ಟೆಯೆಂಬುದು ಬೆಂಕಿಯ ಹಾಗೆ’ ಎಂಬ ಕವನ ಸಂಕಲನಗಳನ್ನು ಕಳಿಸಿಕೊಟ್ಟಿದ್ದರು. ಅವುಗಳನ್ನು ಓದಿ ಎಷ್ಟೊಂದು ‘ಫ್ರೆಷ್’ಆಗಿ ಬರೆಯುತ್ತಾರೆ ಎಂದು ಖುಷಿಪಟ್ಟಿದ್ದೆ. ಮನೆಗೆ ಬಂದ ಕೆಲವು ಗೆಳೆಯರ ಮುಂದೆ ‘ಬಸೂ’ ಅವರ ಕವಿತೆಗಳನ್ನು ಓದಿದ್ದೆ. ಈ ದೃಷ್ಟಿಯಿಂದ ಅವರ ‘ಕೋರಿಕೆ’ ಕವನದ ಸಾಲುಗಳು ಹೀಗಿವೆ: ‘‘ಪೊರೆವ ತಾಯ್ನೆಲವೇ ನಿನಗೆ ಮಾತ್ರ ಗೊತ್ತು/ ಯಾರೆದುರೂ ತಲೆ ಭಾಗದ ನನ್ನಾತ್ಮ/ ನಿನ್ನೆದುರು ಪ್ರಾರ್ಥಿಸಲು ಕೂತಿದೆ/ ಕೊನೆಯ ಬಾರಿ ನಿನ್ನಲ್ಲಿ ಕೇಳಿ ಕೊಳ್ಳುವೆ / ಜಗದ ಎಲ್ಲ ಆಪಾದನೆಗಳ ಪಟ್ಟಿಯನ್ನೂ ನನ್ನ ಬೆನ್ನ ಮೇಲಿರಿಸು/ ಸಕಲ ಜೀವಿಗಳ ಪ್ರೀತಿಸುವ / ಅವಳೇಕೆ ಘಾಸಿಗೊಳ್ಳಬೇಕು?/ ಸ್ಫೂರ್ತಿಯುಕ್ಕಿಸುವ ಅವಳೆದೆಯ ಬಗೆಗೆ/ ಏನೆಲ್ಲ ಹೇಳುವುದಿದೆ/ ಅವಳ ಕಾವ್ಯ ಮತ್ತು ಭಾವಲೋಕದ/ ತುಂಟ ಎದೆಯಂಗಳದಲ್ಲಿ/ ಬಣ್ಣದ ಕನಸುಗಳ ಮಾಯಾ ಪೆಟ್ಟಿಗೆಯನ್ನಿಡು/ ಸಹಜ ಸೊಗಸಿನ ಸ್ವಪ್ನಲೋಕ ತೆರೆಯಲಿ’’ ಒಂದು ದೃಷ್ಟಿಯಿಂದ ಅವರೊಳಗೆ ಪ್ರವೇಶ ಮಾಡಲು ಇಂಥ ಸಾಲುಗಳು ಬಾಗಿಲನ್ನು ತೆರೆದವು. ಹಾಗೆಯೇ ಮುಂದೆ ‘ಇಲ್ಲೀಗ ಹಕ್ಕಿಗಳಿಲ್ಲ ಬಾಣಗಳಿಲ್ಲ’ಎಂಬ ಕವಿತೆಯ ‘‘ಎದುರು ಕುಳಿತು /ಮುಲಾಮು ಹಚ್ಚಲು ಸಿದ್ಧವಾದ/ ನಿನ್ನ ಕೈಗಳಲಿ /ನನ್ನ ಗಾಯಗಳನ್ನೆಲ್ಲ ಹೂತು ಬಿಡಬಹುದಿತ್ತು/ ಗಾಯ ಅಂತರಾಳಕೂ ಚಾಚಿಕೊಂಡಿದೆ/ ಬಸವನ ಹುಳದ ಕೊಂಬು ಕತ್ತರಿಸುವುದು/ ಕ್ರೌರ್ಯವೆನಿಸದ ಕಾಲದಲ್ಲಿ/ ಮನುಷ್ಯರು ಗಾಯಗೊಳ್ಳುವುದು/ ಅಸಹಜವೇನು?/ ಗಾಯಗೊಳ್ಳುವುದೆಂದರೆ/ ನಮ್ಮೌಳಗೆ ಸಮಾಧಿ ಹುಟ್ಟುವುದು/ ನೋವಿನ ನದಿಯಲಿ/ ನೆನಪಿನ ಶವ ಕಾಣುವುದು’’ ಇಂಥ ಧ್ವನಿಪೂರ್ಣಗಳ ಚಿತ್ರಗಳ ಮಧ್ಯೆ ಬಸೂ ಅವರ ಪತ್ನಿ ‘ವಿಭಾ’ ಅವರು ಇದ್ದಕ್ಕಿದ್ದಂತೆ ನನ್ನ ಮನೋಲೋಕದಲ್ಲಿ ಕಾವ್ಯ ದೇವತೆಯಾಗಿ ಗೋಚರಿಸತೊಡಗಿದರು.
 

  ಬಸೂ ಅವರು ವಿಭಾ ಅವರ ‘ಜೀವ ಮಿಡಿತದ ಸದ್ದು’ ಮತ್ತು ‘ಹರಿವ ನೀರೊಳಗಿನ ಉರಿ’ಎರಡು ಕಾವ್ಯ ಸಂಕಲನಗಳನ್ನು ಕಳಿಸಿದ್ದರು. ಮೊದಲನೆಯದು ಸ್ವಂತ ಕವಿತೆಗಳು. ಅಲ್ಲಿಯ ನಲವತ್ತು ಕವಿತೆಗಳು ನನ್ನ ಮನಸ್ಸಿನ ತುಂಬ ಆವರಿಸಿಕೊಂಡು ಬಿಟ್ಟಿದ್ದವು. ಐದಾರು ಬಾರಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಕಾವ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಹುಡುಗಿ. ಮೊದಲ ಸಂಕಲನವಾಗಿ ಅಲ್ಲಿಂದಲೇ ಪ್ರಕಟವಾದದ್ದು. ಆ ಕವಿತೆಗಳಿಗೆ ವಿಕ್ರಮ ವಿಸಾಜಿ ಯವರು ಎಂಥ ಅದ್ಭುತ ಪ್ರವೇಶಿಕೆಯನ್ನು ಕೊಟ್ಟಿದ್ದಾರೆ. ಹಾಗೆ ನೋಡಿದರೆ ಬಿ.ಎ. ಸನದಿಯವರು ಮತ್ತು ಸವಿತಾ ನಾಗಭೂಷಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಪಾದಿಸಿಕೊಟ್ಟಿರುವ ‘ಸುವರ್ಣ ಕಾವ್ಯ’ದ ಬೃಹತ್ ಸಂಪುಟದಲ್ಲಿ ವಿಭಾ ಅವರ ‘ನಾಚಿಕೆಯ ಕ್ಷಣ’ ಕವಿತೆಯನ್ನು ಓದಿ ಖುಷಿ ಪಟ್ಟಿದ್ದೆ. ಅತ್ಯಂತ ಪುಟ್ಟ ವಯಸ್ಸಿಗೆ ಕಾವ್ಯ ಲೋಕದ ಬಗ್ಗೆ ಎಷ್ಟೊಂದು ಕನಸುಗಳನ್ನು ವಿಸ್ತರಿಸಿಕೊಂಡಿದ್ದರು. ಇದರ ದ್ಯೋತಕವಾಗಿಯೇ ಅನುವಾದಿತ ಕವಿತೆಗಳ ಸಂಕಲನವಾದ ‘ಹರಿವ ನೀರೊಳಗಿನ ಉರಿ’ಯು ವಿಭಾ ಅವರ ಪ್ರತಿಭೆ ಮತ್ತು ಅಭಿರುಚಿಯ ನೆಲೆಗಳನ್ನು ಪರಿಚಯಿಸುವಂಥ ಕೃತಿ. ಹರಿವಂಶರಾಯ್ ಬಚ್ಚನ್, ಗುಲ್ಜಾರ್, ಅಲಿ ಸರ್ದಾರ್ ಜಾಫ್ರಿ, ಅನಿತಾ ನಾಯರ್ ಮತ್ತು ರಾಮಸಿಂಗ್ ಚಹಾಲ್ ಅವರ ಕವಿತೆಗಳಿವೆ. ಡಾ. ಜಿ.ರಾಮಕೃಷ್ಣ ಅವರ ಉಪಯುಕ್ತ ಮುನ್ನುಡಿಯಿಂದ ಹೊರಬಂದಿರುವಂಥದ್ದು, ಬೇರೆ ಭಾಷೆಗಳ ಕವಿತೆಗಳ ನಾಡಿಯನ್ನು ಕ್ರಮಬದ್ಧವಾಗಿ ಹಿಡಿದು ಕನ್ನಡಕ್ಕೆ ತಂದುಕೊಟ್ಟಿರುವಲ್ಲಿ ಆಕೆಯ ಕಾವ್ಯದ ಸೂಕ್ಷ್ಮತೆಯನ್ನು ಗ್ರಹಿಸಬಹುದು. ಬದುಕಿದ ಕೇವಲ ಇಪ್ಪತ್ತೇಳು ವರ್ಷಗಳಲ್ಲಿ ನಾವು ಮತ್ತೆ ಮತ್ತೆ ಓದುತ್ತ ಗುನುಗುನಿಸಬಹುದಾದ ಕಾವ್ಯವನ್ನು ವಿಭಾ ಅವರು ಕೊಟ್ಟು ಹೋಗಿದ್ದಾರೆ.
ಅಂದು ಹಾವೇರಿಯಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ವಿಭಾ ಅವರ ಕಾರಣಕ್ಕಾಗಿ ಕಿ.ರಂ. ಅವರನ್ನು ಸ್ಮರಿಸಿಕೊಂಡೆ. ಯಾಕೆಂದರೆ ನನ್ನಂಥವರಿಗೆ ಕಾವ್ಯದ ಹುಚ್ಚನ್ನು ಜೀವಂತವಾಗಿಟ್ಟವರು ಲಂಕೇಶ್ ಅವರು ಮತ್ತು ಕಿ.ರಂ. ನಾಗರಾಜ್ ಅವರು. ಸುಮಾರು ನಲವತ್ತು ವರ್ಷಗಳ ಹಿಂದೆ ಕಿ.ರಂ. ಅವರು ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ವರ್ಲ್ಡ್ ಕಲ್ಚರ್’ ಗ್ರಂಥಾಲಯಕ್ಕೆ ಕರೆದುಕೊಂಡು ಹೋದರು. ಸದಸ್ಯರನ್ನಾಗಿ ನೋಂದಾಯಿಸುವುದರ ಜೊತೆಗೆ ‘ನಿನಗೊಂದು ಅದ್ಭುತ ಪುಸ್ತಕವನ್ನು ಕೊಡುವೆ: ಸಿಮನ್‌ವೇಲ್ ಬರೆದಿರುವ ಕೃತಿ ಅದು. ಬದುಕಿದ್ದು ಕೇವಲ ಮೂವತ್ನಾಲ್ಕು ವರ್ಷ. ಆದರೆ ಜಗತ್ತಿನ ಎಲ್ಲ ಪ್ರತಿಭಾವಂತ ಲೇಖಕರು ಗಮನಿಸುವ ರೀತಿಯಲ್ಲಿ ಬರೆದಳು’ ಎಂದು ಹೇಳಿದ್ದನ್ನು ನೆನಪಿಸಿಕೊಂಡೆ. ಹಾಗೆಯೇ ಕೇವಲ ಇಪ್ಪತ್ಮೂರು ವರ್ಷ ಬದುಕಿದ್ದ ಯುರ್ಮುಂಜ ರಾಮಚಂದ್ರ ಅವರು ಮನಸ್ಸಿನ ತುಂಬ ಆವರಿಸಿಕೊಂಡಿದ್ದರು. ‘ರೋಗಿಯ ಚಿಂತೆ’ ಮತ್ತು ‘ಯಾರಿಲ್ಲಿಗೆ ಬಂದರು ಕಳೆದಿರುಳು’ ಅಂಥ ಕವಿತೆಗಳನ್ನು ಕಿ.ರಂ. ಅವರು ನಮ್ಮಿಂದ ಎಷ್ಟು ಬಾರಿಗಟ್ಟಿಯಾಗಿ ಓದಿಸಿದ್ದಾರೆ.  ""If I have killed one man, I have killed two— /The vampire who said he was you /And drank my blood for a year, /Seven years, if you want to know./ Daddy, you can lie back now.''
  ‘‘ರೋಗಿಯ ಚಿಂತೆ’ ಕವಿತೆಯ ‘ಅಯ್ಯೋ ಇದೇನು!/ನಾಳೆ ಎಂತೋ ಏನೋ.../ ಏರಾಟ ಹೋರಾಟ ಸಾಗುತ್ತಲೇ ಇತ್ತು/ಇತ್ತ ಬೆಳಗಿನ ಕೋಳಿ ಕೂಗೊಡ ತೊಡಗಿತ್ತು!/ಇರುಳ ಮಡಿಲಲಿ ಸೂರ್ಯ ಕ್ಷೇಮದಿಂದಲೇ ಇದ್ದ!/ಎಂದಿನೊಲು ಮೂಡಲಲೆ ಕಣ್ಣು ತೆರೆದ!/ಆ ಜೀವಕೊ ನಾಳೆ ಬೆಳಗಾಗಲೇ ಇಲ್ಲ!/ಸೂರ್ಯನಿಗೂ ಎಬ್ಬಿಸುವುದಾಗಲಿಲ್ಲ!/ಅಲ್ಲಿ ಇನ್ನೂ ಇರುಳು ಕಪ್ಪಾಗಿ ಮುಸುಕುತಿದೆ/ನಾಡಿ? ಎದೆಬಡಿತ? ಉಹುಂ, ಇಲ್ಲ ಇಲ್ಲ’’ ಮತ್ತು ‘ಯಾರಿಲ್ಲಿಗೆ ಬಂದರು ಕಳೆದಿರುಳು’ ಕವಿತೆಯ ಕೆಲವು ಸಾಲುಗಳು ಹೀಗಿವೆ: ‘‘ಯಾರಿಲ್ಲಿಗೆ ಬಂದರು ಕಳೆದಿರುಳು/ಏ ಗಾಳಿ/ಆ ಕಥೆಯನೊರೆದು ಮುಂದಕೆ ತೆರಳು/..ನೆನೆದು ನೆನೆದು ತಾನು ಪುಳಕಗೊಳ್ಳುತ್ತಿದೆ/ ದುಡಿವೆನೆ ದಿನ ನಡುಗುತಿದೆ/ ಸ್ಮತಿ ವಿಸ್ಮತಿಗಳ ಕಂಬನಿ ಮಾಲೆ/ಎಲ್ಲೆಲ್ಲೂ ತೂಗುತಿದೆ/ಕಳೆದಿರುಳಿನ ಬೆಳದಿಂಗಳ ಮರೆಯಲಿ/ಏನೂ ಅರಿಯದ ಮುಗ್ಧೆಯ ಕಿವಿಯಲಿ/ಯಾರೇನನು ಪಿಸು ನುಡಿದರು ಹೇಳು/ಏ ಗಾಳಿ’’ ಇಂಥ ಸಾಲುಗಳ ಅಥವಾ ಕವಿತೆಗಳ ಮುಂದುವರಿದ ಭಾಗವಾಗಿ ಕೇವಲ ಮೂವತ್ತೊಂದು ವರ್ಷ ಬದುಕಿದ ಸಿಲ್ವಿಯ ಪ್ಲಾಥ್‌ಗಳ ‘ಡ್ಯಾಡಿ’ ಕವಿತೆಯನ್ನು ಎಷ್ಟೋ ಬಾರಿ ಓದಿಕೊಂಡಿದ್ದರೂ; ಅವಳ ನೆನಪು ಬಂದಾಗಲೆಲ್ಲ ಮತ್ತೊಮ್ಮೆ ಓದಬೇಕೆನ್ನಿಸುತ್ತದೆ. ಆ ಕವಿತೆಯ ಕೆಲವು ಸಾಲು ಹೀಗಿವೆ: ಕಾವ್ಯಕ್ಕೆ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವ ಮತ್ತು ಮತ್ತೆ ಮತ್ತೆ ಆತ್ಮೀಯವಾದ ಚಡಪಡಿಕೆಗೆ ಸಿಕ್ಕಿಸುವ ಅಗಾಧವಾದ ಶಕ್ತಿ ಇರುತ್ತದೆ. ಆದ್ದರಿಂದಲೇ ಕಾವ್ಯದ ಸಾಲುಗಳಷ್ಟು ಗದ್ಯದ ಸಾಲುಗಳು ನಮ್ಮನ್ನು ಅಷ್ಟೊಂದು ಯಾವಾಗಲೂ ಬಾಧಿಸುವುದಿಲ್ಲ. 

ಈ ದೃಷ್ಟಿಯಿಂದ ಹಾವೇರಿಯಲ್ಲಿ ವಿಭಾ ನೆನಪಿನಲ್ಲಿ ಮಾತಾಡುವಾಗ ವಿಲಿಯಂ ಬ್ಲೇಕ್‌ನ ‘ಮ್ಯಾರೇಜ್ ಬಿಟ್ವೀನ್ ಹೆವನ್ ಅಂಡ್ ಹೆಲ್’ ದೀರ್ಘ ಕವಿತೆಯನ್ನು ಪ್ರಸ್ತಾಪಿಸಿದ್ದಾರೆ. ಒಂದು ದೃಷ್ಟಿಯಿಂದ ನನ್ನ ಮಟ್ಟಿಗೆ ಅದು ಮಹಾಕಾವ್ಯ. ಹಾಗೆಯೇ ‘ಜೆರುಸಲೇಂ’ ಕವಿತೆಯೂ ಕೂಡ ಎಂತೆಂಥ ತಲ್ಲಣಗಳ ಕಡೆಗೆ ಸೆಳೆದೊಯ್ಯುತ್ತದೆ. ‘‘ಈ ಬದುಕು ನಗುವಿನಲ್ಲೆ ಕಳೆದು ಹೋಗಿದ್ದರೆ ಒಳ್ಳೆಯದಿತ್ತು/ ಪರವಾಗಿಲ್ಲ ನಗುವಿಲ್ಲವಾದರೆ ನೋವೇ ಸರಿ/ಮುರಿದ ಪ್ರೇಮದ ಬೂದಿ, ಇನ್ನೂ ಉಳಿದುಕೊಂಡಿದೆ/ಮತ್ತೆ ಕೆದಕಬೇಡ, ಹರಡೀತು ಈ ಬೂದಿ ಎಲ್ಲೆಡೆ/ಏನು ಹುಡುಕುತ್ತಿವೆ ಈ ಕಂಗಳು ನನ್ನೊಳಗೆ’’ ಎಂದು ಹೇಳುವ ಕೈಫಿ ಆಜ್ಮಿಯವರು ಬದುಕಿನ ಕ್ರಮವೇ ಸ್ಮರಣೀಯವಾದದ್ದು. ಕಾವ್ಯ, ಹೋರಾಟ, ಜೀವನ ಪ್ರೇಮ ಮತ್ತು ತಮ್ಮ ಕಾಲಘಟ್ಟದ ಮತೀಯ ಘರ್ಷಣೆಗಳಿಗೆ ತತ್ತರಿಸಿ ಹೋದರೂ; ಆಶಾವಾದವನ್ನು ಕಳೆದುಕೊಂಡವರಲ್ಲ. ಅತ್ಯಂತ ಸರಳತೆಯಿಂದ ಬದುಕುತ್ತಲೇ ಮನುಷ್ಯ ಸಂಬಂಧಗಳ ಅನನ್ಯತೆಯ ಹುಡುಕಾಟವನ್ನು ನಡೆಸಿದವರು. ಈ ಎಲ್ಲ ಏಳುಬೀಳುಗಳ ನುಡಿಚಿತ್ರವನ್ನು ಶಬನಾ ಆಜ್ಮಿಯವರು ಅತ್ಯಂತ ಸ್ಮರಣೀಯ ಎನ್ನುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಕೇವಲ ಇಪ್ಪತ್ಮೂರು ಪುಟಗಳಲ್ಲಿ ಕೈಫಿಯವರ ಸೂಕ್ಷ್ಮ ನೆಲೆಗಳನ್ನೆಲ್ಲ ಪರಿಚಯಿಸಿದ್ದಾರೆ. ‘‘ಒಮ್ಮೆ ಅವ್ವನ ಜೊತೆಗೆ ಪೃಥ್ವಿ ಥೇಟರ್‌ಗೆ ಹೋದಲ್ಲೆಲ್ಲ ಹೆಜ್ಜೆ ಹಾಕಿದರೆ ಮತ್ತೊಮ್ಮೆ ಅಪ್ಪನ ಜೊತೆ ಮದನ್‌ಪುರದ ಕಿಸಾನ್ ಸಭೆಗಳು ನಡೆಯುತ್ತಿದ್ದಲ್ಲಿ ಹಾಜರಾಗುತ್ತಿದ್ದೆ. ಇಂತಹ ಸಭೆ ಸಮಾರಂಭಗಳಲ್ಲಿ ಎಲ್ಲೆಲ್ಲೂ ಕೆಂಪು ಬ್ಯಾನರ್‌ಗಳು ಕಾಣಿಸುತ್ತಿದ್ದವು. ಘೋಷಣೆಗಳು ಕೇಳಿ ಬರುತ್ತಿದ್ದವು. ಮೇಲಾಗಿ ಪ್ರತಿಭಟನೆಯ ಕಾವ್ಯದ ಹೊನಲೇ ಹರಿಯುತ್ತಿತ್ತು. ಮಗುವಾಗಿದ್ದಾಗ ಇಂಥ ರ್ಯಾಲಿಗಳಲ್ಲಿ ಮಾತ್ರ ಆಸಕ್ತಿ ತೋರುತ್ತಿದ್ದೆ. ಯಾಕೆಂದರೆ, ಅಲ್ಲಿ ಕಾರ್ಮಿಕರು ನನಗೆ ಅತಿಯಾಗಿ ಮುದ್ದು ಮಾಡುತ್ತಿದ್ದರು. ಇದು ನನಗರಿವಿಲ್ಲದೆ ನನ್ನ ಬೇರುಗಳು ನೆಲದಾಳಕ್ಕೆ ಇಳಿಯುತ್ತಿದ್ದವು. ಇಂದು ನಾನು ಪ್ರತಿಭಟನೆ, ಪ್ರದರ್ಶನದಲ್ಲಿ ಭಾಗಿಯಾದರೆ, ಪಾದಯಾತ್ರೆಯಲ್ಲಿ ಪಾಲ್ಗೊಂಡರೆ, ಉಪವಾಸ ಸತ್ಯಾಗ್ರಹ ಹೂಡಿದರೆ, ನಾನು ಮಗುವಾಗಿದ್ದಾಗ ಕಂಡುಂಡ ಘಟನೆಗಳ ಅನುಭವದ ಮುಂದುವರಿಕೆ ಮಾತ್ರ.’’ ಇಂಥ ಸಾಕಷ್ಟು ಅದ್ಭುತ ಚಿತ್ರಗಳು ಧುತ್ತನೆ ನಮಗೆ ಮತ್ತೆ ಮತ್ತೆ ನೆನಪಿನಲ್ಲಿ ಎದುರಾಗುವಂತೆ ದಾಖಲಿಸಿದ್ದಾರೆ. ಎಷ್ಟಾದರೂ ಪ್ರತಿಭಾನ್ವಿತ ನಟಿ ಮತ್ತು ಸೂಕ್ಷ್ಮ ಸಂವೇದನೆಯ ಚಿಂತಕಿ ಅಲ್ಲವೇ?


ಈ ನುಡಿ ಚಿತ್ರವನ್ನು ಓದುತ್ತಿದ್ದ ಸಮಯದಲ್ಲಿ; ಸುಮಾರು ವರ್ಷಗಳ ಹಿಂದೆ ಆಕೆ ಬೆಂಗಳೂರಿನಲ್ಲಿ ನಾಟಕವೊಂದರಲ್ಲಿ ನಟಿಸುತ್ತಿದ್ದ ಘಟನೆಗಳು ನೆನಪಿಗೆ ಬರುತ್ತಿದೆ. ಎಂ.ಎಸ್.ಸತ್ಯು ಅವರು ‘ಕಕೇಷಿಯನ್ ಚಾಕ್ ಸರ್ಕಲ್’ ನಾಟಕವನ್ನು ಸಮುದಾಯ ನಾಟಕ ತಂಡಕ್ಕೆ ನಿರ್ದೇಶಿಸುತ್ತಿದ್ದರು. ಆಗ ಆಕೆಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿ ಲಂಕೇಶ್ ಅವರ ಜೊತೆ ಭೇಟಿಯಾದ ನೆನಪು ಇಂದಿಗೂ ಶ್ರೀಮಂತವಾಗಿಯೇ ಉಳಿದಿದೆ. ಲಂಕೇಶ್ ಅವರು ಶಬನಾ ಅವರ ನಟನೆಯ ಬಗ್ಗೆ ಅಗಾಧವಾದ ಒಲವನ್ನು ಹೊಂದಿದ್ದವರು. ಆಗ ಲಂಕೇಶ್ ಅವರು ತಮ್ಮ ಚಲನಚಿತ್ರದಲ್ಲಿ ಆಕೆಯನ್ನು ನಾಯಕಿಯಾಗಿ ನಟಿಸಲು ಕೇಳಿಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಆಕೆ ತಮ್ಮ ಬದುಕಿನ ಕೆಲವು ಘಟನೆಗಳನ್ನು ಸಾದರಪಡಿಸಿದ್ದ ಕ್ರಮವೇ ರೋಚಕವಾಗಿತ್ತು. ಲಂಕೇಶ್ ಅವರು ಬಹುದೊಡ್ಡ ಲೇಖಕರು ಮತ್ತು ನಾಟಕಕಾರರು ಎಂಬುದನ್ನು ಬಿ.ವಿ.ಕಾರಂತರಿಂದ ತಿಳಿದಿದ್ದರು. ಮತ್ತು ‘ಪಲ್ಲವಿ’ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಸಂದರ್ಭವದು. ಶಬನಾ ಅವರು ಸಮಯ ನೋಡಿಕೊಂಡು ನಟಿಸುವೆ ಎಂದರು. ಲಂಕೇಶ್ ಅವರು ಮುಂದುವರಿದು ಕಾರ್ಯಪ್ರವೃತ್ತರಾಗಿಲಿಲ್ಲ. ಆದರೆ ಸಮಯ ಸಿಕ್ಕಿದಾಗಲೆಲ್ಲ ಶಬನಾ ಅವರಿಂದ ಆ್ಯಕ್ಟ್ ಮಾಡಿಸಲಾಗಲಿಲ್ಲವಲ್ಲ ಎಂಬ ಪಿಸುಗುಡುವಿಕೆ ಮುಂದುವರಿದಿತ್ತು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...