Tuesday, June 24, 2014

ಅಂಬಾನಿ, ಅದಾನಿ, ಮಿತ್ತಲ್‌ಗಳಿಗೆ ಇದು ಸುಭಿಕ್ಷ ಕಾಲ..ಸನತಕುಮಾರ ಬೆಳಗಲಿ

‘ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಒಳ್ಳೆಯ ದಿನಗಳು ಬಂದವು’ ಎಂದು ಉದ್ಗರಿಸಿದರು. ಹೌದು ನಿಜಕ್ಕೂ ಅವರಿಗೆ ಅಂದರೆ ಅಂಬಾನಿ, ಅದಾನಿ, ಮಿತ್ತಲ್‌ಗಳಿಗೆ ಇದು ಸುಭಿಕ್ಷ ಕಾಲ. ಆದರೆ ಬಹುಸಂಖ್ಯಾ ಭಾರತೀಯರಾದ ಬಡವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಅತ್ಯಂತ ಘೋರ ಕಡುಕಷ್ಟದ ದಿನಗಳು ಸಮೀಪಿಸುತ್ತಿವೆ. ಕಠಿಣ ಆರ್ಥಿಕ ಕ್ರಮಗಳಿಗೆ ಸಿದ್ಧವಾಗಿರಬೇಕೆಂದು ಸರಕಾರ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಿದೆ. ಮುಂದಿನ ಕೇಂದ್ರ ಬಜೆಟ್‌ನಲ್ಲಿ ಈ ಘೋರ ದಿನಗಳ ಶಾಕ್ ತಟ್ಟಲಿದೆ.

ದಲಿತರು, ಅಲ್ಪಸಂಖ್ಯಾತರು, ಹಿಂದುಳಿ ದವರ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ಹೋರಾಡುವವರಂತೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಕಾಲ ಇದು. ಇವರು ಮಾತ್ರವಲ್ಲ, ಪರಿಸರ ರಕ್ಷಣೆಗಾಗಿ, ಕಾಡನ್ನು ಕಾಪಾಡಿಕೊಳ್ಳಲು ಚಳವಳಿಗಿಳಿಯುವವರು ಕೂಡ ಮೈತುಂಬ ಕಣ್ಣಾಗಿರಬೇಕು. ಇನ್ನು ಕಮ್ಯುನಿಸ್ಟರ ಕತೆ. ಈಗಾಗಲೇ ಅದು ಮುಗಿ ದಂತಾಗಿದೆ. ಅವರು ಹೇಗಿ ದ್ದರೂ ಇನ್ನು ಮುಂದೆ ದುಡಿಯುವ ಜನರ ಪರವಾಗಿ ದನಿಯೆತ್ತುವಂತಿಲ್ಲ. ಅವರಿ ಗಾಗಿ ತುರಂಗಗಳು ಸಿದ್ಧವಾ ಗಿವೆ.

ಇನ್ನು ಎನ್‌ಜಿಓಗಳು ಅಂದರೆ ಸರಕಾರೇತರ ಸಂಘಟನೆಗಳಿಗೆ ನರಕ ಕಾದಿದೆ. ಗುಜರಾತ್ ಹತ್ಯಾಕಾಂಡದ ನಂತರ ನಿರಾಶ್ರಿತ ಮುಸಲ್ಮಾನರಿಗೆ ನೆಲೆ ಒದಗಿಸಲು, ಪಾತಕಿಗಳನ್ನು ಶಿಕ್ಷಿಸಲು ಕಾನೂನು ಬದ್ಧವಾಗಿ ಹೋರಾಡಿದ ತಪ್ಪಿಗಾಗಿ ಅವರೀಗ ಬೆಲೆ ತೆರಬೇಕಾ ಗಿದೆ. ಅಂತಿಂಥ ಬೆಲೆಯಲ್ಲ, ತಲೆದಂಡಕ್ಕೆ ತಯಾರಾಗಬೇಕಾಗಿದೆ. ಅದರಲ್ಲೂ ಅಧಿಕಾರದಲ್ಲಿದ್ದವರ ಕೈಗೆ ರಕ್ತ ಮೆತ್ತಿಕೊಂಡಿದೆ ಎಂದು ಹೇಳಿದ ತಪ್ಪಿಗೆ ಟೀಸ್ತಾ ಸೆಟಲ್ವಾಡ್ ಈಗಾಗಲೇ ತಕ್ಕ ಬೆಲೆ ತೆರುತ್ತಿದ್ದಾರೆ. ನರ್ಮದಾ ಅಣೆಕಟ್ಟಿನ ಎತ್ತರ ಹೆಚ್ಚಿಸಿ ಜನರನ್ನು ನಿರಾಶ್ರಿತರನ್ನಾಗಿ ಮಾಡಬಾರದೆಂದು ಹೋರಾಡಿದ ಮೇಧಾ ಪಾಟ್ಕರ್ ಈಗ ಕಟಕಟೆಗೆ ಬಂದಿದ್ದಾರೆ.

ವಿದೇಶಗಳಿಂದ ಅತ್ಯಂತ ಹೆಚ್ಚು ಹಣ ಪಡೆಯುವ ಹಾಗೂ ಈ ವಿದೇಶಿ ಹಣ ವನ್ನು ದೇಶದಲ್ಲಿ ಕೋಮು ವೈಷಮ್ಯ ಉಂಟು ಮಾಡಲು ಖರ್ಚು ಮಾಡುವ ಆರೆಸ್ಸೆಸ್ ಎಂಬ ಅತ್ಯಂತ ದೊಡ್ಡ ಸರಕಾರೇತರ ಸಂಘಟನೆ ಗುಪ್ತಚರ ದಳದ ಪಟ್ಟಿಯಲ್ಲಿಲ್ಲ. ಆದರೆ ಪ್ರಾಕೃತಿಕ ಸಂಪನ್ಮೂಲ ವನ್ನು ದೋಚುವ ಕಾರ್ಪೊರೇಟ್ ಕಂಪೆನಿಗಳನ್ನು ವಿರೋಧಿಸುವ ‘ಗ್ರೀನ್ ಪೀಸ್’ನಂಥ ಸಂಘಟನೆಗಳು ಈ ಪಟ್ಟಿ ಸೇರಿದ್ದರಲ್ಲಿ ಅಚ್ಚರಿಯಿಲ್ಲ. ಇದೊಂದೇ ಅಲ್ಲ ಮಾನವ ಹಕ್ಕು ಸಂಘಟನೆಗಳು ಈ ಪಟ್ಟಿಯಲ್ಲಿವೆ.

ನರೇಂದ್ರ ಮೋದಿ ಪ್ರಧಾನಿಯಾಗಿ ದ್ದಾರೆಂದು ಇಂಥ ಪಟ್ಟಿಯನ್ನು ಗುಪ್ತಚರ ಇಲಾಖೆ ಸಿದ್ಧಪಡಿಸಿದೆ ಎಂಬುದು ಕೇವಲ ಆಕಸ್ಮಿಕ. ದೇಶಕ್ಕೆ ಸ್ವಾತಂತ್ರ ಬಂದಾಗಿ ನಿಂದಲೂ ನಮ್ಮ ದೇಶದ ಕೇಂದ್ರೀಯ ಗುಪ್ತಚರ ಇಲಾಖೆಯಲ್ಲಿ ಕಮ್ಯುನಿಸ್ಟರು, ಅಲ್ಪಸಂಖ್ಯಾತರ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ವಿಭಾಗಗಳಿವೆ. ಆದರೆ ಆರೆಸ್ಸೆಸ್, ವಿಎಚ್‌ಪಿ, ಹಿಂದೂ ಮಹಾಸಭಾದಂಥ ಕೋಮುವಾದಿ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ಇಡುವ ಯಾವ ವ್ಯವಸ್ಥೆಯೂ ಇಲ್ಲ. ಈ ಮಾತನ್ನು ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಎಂ.ಮುಶ್ರಿಫ್ ಆಗಾಗ ಹೇಳುತ್ತಲೇ ಇರುತ್ತಾರೆ. ಆದಿವಾಸಿಗಳ, ಬಡವರ ನೋವಿಗೆ ಸ್ಪಂದಿಸುತ್ತಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಜೈಲು ಸೇರಿ ಮೂರು ತಿಂಗಳು ದಾಟಿತು. ಬಾಲ್ಯದಲ್ಲಿ ಪೋಲಿಯೊ ಪೀಡಿತನಾಗಿ ಕಾಲು ಕಳೆದುಕೊಂಡು ತಳ್ಳುವ ಗಾಲಿ ಕುರ್ಚಿ ಮೇಲೆ ವಿಶ್ವವಿದ್ಯಾಲಯಕ್ಕೆ ಬಂದು ನಿತ್ಯವೂ ಪಾಠ ಮಾಡುತ್ತಿದ್ದ ಈ ಸಾಯಿಬಾಬಾರಿಗೆ ತಲೆ ಎಂಬುದು ಇರುವುದೊಂದೇ ದೊಡ್ಡ ಅಪರಾಧ ವಾಗಿದೆ. ಈ ತಲೆ ಇದ್ದ ತಪ್ಪಿಗಾಗಿ ಹಿಂದಿನ ಗೃಹಸಚಿವ ಪಿ.ಚಿದಂಬರಂ ಜೈಲಿಗೆ ತಳ್ಳಿದರು. ಈಗಿನ ಗೃಹಸಚಿವ ರಾಜನಾಥ ಸಿಂಗ್ ಈ ತಲೆಯನ್ನೆ ತೆಗೆಯುತ್ತಾರೇನೋ?

ಸಾಯಿಬಾಬಾ ಅವರನ್ನು ಬಂಧಿಸುವ ಎಂಟು ತಿಂಗಳ ಹಿಂದೆ ದಿಲ್ಲಿ ವಿವಿ ಕ್ಯಾಂಪ್‌ನಲ್ಲಿರುವ ಅವರ ಮನೆಯ ಮೇಲೆ ದಾಲಿ ಮಾಡಿದ ಪೊಲೀಸರು ಅಲ್ಲಿ ಮಾವೊವಾದಿ ಸಾಹಿತ್ಯವನ್ನು ಪತ್ತೆ ಹಚ್ಚಿದರು. ಈ ಸಾಹಿತ್ಯವೇ ಸಾಕ್ಷಾಧಾರ ವಾಯಿತು. ಹೇಮಮಿಶ್ರ ಮತ್ತು ಪ್ರಶಾಂತ ರಾಹಿ ಎಂಬಿಬ್ಬರನ್ನು ಬಂಧಿಸಿ ಅವರಿಂದ ಪಡೆದ ಹೇಳಿಕೆಗಳನ್ನು ಆಧರಿಸಿ ಗಾಲಿಕುರ್ಚಿ ಯಲ್ಲಿ ತಳ್ಳುತ್ತ ಯುನಿವರ್ಸಿಟಿಗೆ ಬರುತ್ತಿದ್ದ ಈ ಸಾಯಿಬಾಬಾರನ್ನು ಜೈಲಿಗೆ ತಳ್ಳಿದರು.

ನಲವತ್ತೆಂಟು ವರ್ಷದ ಜಿ.ಎನ್.ಸಾಯಿಬಾಬಾ ಛತ್ತೀಸ್‌ಗಡದಲ್ಲಿ ನಕ್ಸಲೀಯರ ದಮನದ ಹೆಸರಿನಲ್ಲಿ ಆದಿವಾಸಿಗಳನ್ನು ನಾಶ ಮಾಡುತ್ತಿರುವ ‘ಗ್ರೀನ್ ಹಂಟ್’ ಕಾರ್ಯಾಚರಣೆಯನ್ನು ಕಟುವಾಗಿ ಟೀಕಿಸುತ್ತಿದ್ದರು. ತನ್ನ ಪಾಡಿಗೆ ತಾನು ಟೀಕೆ ಮಾಡಿಕೊಂಡಿರುತ್ತಿದ್ದ ಈ ವಿಕಲಚೇತನ ಪ್ರಾಧ್ಯಾಪಕನಿಂದ ದೇಶದ ಭದ್ರತೆಗೆ ಎಂಥ ಗಂಡಾಂತರ ಬರಲು ಸಾಧ್ಯ? ಆದರೆ ಪ್ರಭುತ್ವ ಇವರನ್ನು ದೇಶದ ಭದ್ರತೆಗೆ ದೊಡ್ಡ ಗಂಡಾಂತರ ಎಂದು ಪರಿಗಣಿಸಿ ಜೈಲಿಗೆ ತಳ್ಳಿತು.

 ಸಾಯಿಬಾಬಾ ಅವರದು ಈ ಕತೆಯಾದರೆ ಮುಂಬೈನ ದಲಿತ ಹೋರಾಟಗಾರ ಸುಧೀರ್ ಢವಳೆ 2011ರ ಜನವರಿಯಿಂದ ಕೃಷ್ಣ ಜನ್ಮಸ್ಥಾನದಲ್ಲಿದ್ದಾರೆ. ಆದಿವಾಸಿಗಳ ಹಕ್ಕುಗಳಿ ಗಾಗಿ ಹೋರಾಡಿದ ತಪ್ಪಿಗಾಗಿ ಬಂಧಿಸಲಾದ ಇವರನ್ನು ಸೆಷನ್ಸ್ ನ್ಯಾಯಾಲಯ ಆರೋಪ ಮುಕ್ತಗೊಳಿಸಿದರೂ ಪೊಲೀಸರು ಮತ್ತೆ ಬಂಧಿಸಿ ಯುಎಪಿಎ-ಅಂದರೆ ಆಕ್ರಮ ಚಟುವಟಿಕೆಗಳ ತಡೆ ಶಾಸನದನ್ವಯ ಬಂಧಿಸಿ ಕತ್ತಲು ಕೋಣೆಗೆ ತಳ್ಳಿದ್ದಾರೆ.

2011ರ ಜನವರಿ 3ರಂದು ಯುವ ಅಂಬೇಡ್ಕರವಾದಿ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಲು ವರ್ಧಾಕ್ಕೆ ಬಂದಿದ್ದ ಸುಧೀರ್ ಢವಳೆಯನ್ನು ಸಭೆಗೆ ಹೋಗುವ ಮುನ್ನವೇ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು. ಸಾಯಿಬಾಬಾ ಅವರಂತೆ ಢವಳೆ ಕೂಡ ‘ಅರ್ಬನ್ ಮೊವೊಯಿಸ್ಟ್’ ಎಂದು ಬ್ರಾಂಡ್ ಮಾಡಲ್ಪಟ್ಟವರು. ಎಲ್ಲೂ ಜಾಮೀನು ಸಿಗದಂತೆ ಪೊಲೀಸರು ಇವರನ್ನು ಜೈಲಿಗೆ ತಳ್ಳಿದರು.

ತನ್ನನ್ನು ಯಾಕೆ ಜೈಲಿಗೆ ಹಾಕಿದ್ದಾರೆ ಎಂಬುದು ಸಾಯಿಬಾಬಾ ಅವರಂತೆ ಢವಳೆಗೂ ಗೊತ್ತಿಲ್ಲ. ಈ ದೇಶದಲ್ಲಿ ಬಜರಂಗದಳ ಎಂದು ಕರೆಸಿ ಕೊಳ್ಳುವವರು, ಹಿಂದೂ ರಾಷ್ಟ್ರ ಮಂಚ್ ಎಂದು ಹೆಸರಿಟ್ಟುಕೊಂಡು ಮೂಢನಂಬಿಕೆ ವಿರೋಧಿ ಹೋರಾಟ ಗಾರ ನರೇಂದ್ರ ದಾಬೋಳ್ಕರ್‌ರನ್ನು ಕೊಲ್ಲುವುದು, ಸುಫಾರಿ ಕೊಲೆ ಮಾಡುವುದು ಇದ್ಯಾವುದು ಅಪರಾಧ ವಲ್ಲ. ಆದರೆ ಮಾವೊವಾದಿ, ಮಾರ್ಕ್ಸ್‌ವಾದಿ ಎಂದು ಕರೆಸಿ ಕೊಳ್ಳುವುದು ಹಾಗೂ ಮುಸಲ್ಮಾನ ನಾಗಿ ಜನಿಸುವುದು ಮಹಾ ಅಪರಾಧ.
ಸುಧೀರ್ ಢವಳೆ ತನ್ನನ್ನು ಮಾರ್ಕ್ಸ್‌ವಾದಿ ಎಂದು ಕರೆದುಕೊಳ್ಳಲು ಹಿಂಜರಿಯುವುದಿಲ್ಲ. ‘‘ಮಾರ್ಕ್ಸ್-ಲೆನಿನ್, ಮಾವೊ, ಅಂಬೇಡ್ಕರ್ ಸಿದ್ಧಾಂತದಲ್ಲಿ ನನಗೆ ನಂಬಿಕೆ ಇದೆ. ಆದರೆ ಯಾವುದೇ ವಿಧದ ಹಿಂಸೆಯನ್ನು, ಹಿಂಸಾತ್ಮಕ ಹೋರಾಟವನ್ನು ತಾನು ಒಪ್ಪುವುದಿಲ್ಲ ಎಂದು ಢವಳೆ ನ್ಯಾಯಾಲಯದಲ್ಲೇ ಸ್ಪಷ್ಟಪಡಿಸಿದ್ದಾರೆ. ನಾಗಪುರ ವಿಶ್ವವಿದ್ಯಾಲಯ ವಿದ್ಯಾರ್ಥಿ ದಿನಗಳಿಂದ ಸಾಂಸ್ಕೃತಿಕ ಕಾರ್ಯಕರ್ತನಾಗಿ ಆಹ್ವಾನ ನಾಟ್ಯ ಮಂಚ್‌ನ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಢವಳೆ ತನ್ನ ಚಟುವಟಿಕೆ ಗಳಿಂದಾಗಿ ಕೋಮುವಾದಿ ಶಕ್ತಿಗಳ ಆಕ್ರೋಶಕ್ಕೂ ಗುರಿಯಾಗಿದ್ದರು.

ಹೀಗೆ ಜನಪರ ಹೋರಾಟಗಾರರು, ಬುದ್ಧಿಜೀವಿಗಳು ಒಬ್ಬೊಬ್ಬರಾಗಿ ಜೈಲು ಪಾಲಾಗುತ್ತಿದ್ದಾರೆ. ಈಗ ಗುಪ್ತಚರ ಇಲಾಖೆ ಮೋದಿ ಆಣತಿಯಂತೆ ಮತ್ತೊಂದು ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಯಾರ್ಯಾರಿಗೆ ಏನೇನು ಕಾದಿದೆಯೋ ಆ ರಾಜನಾಥನೇ ಬಲ್ಲ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...