Sunday, June 08, 2014

ಅಪೂರ್ವ ಸಮಾವೇಶದಲ್ಲಿ: ಕಾವ್ಯ, ಚಿಂತನೆ ಇತ್ಯಾದಿ...ಶೂದ್ರ ಶ್ರೀನಿವಾಸ್

ಭಾಗ-2

 ಅವನು ನನ್ನ ಕಂಬನಿ ಒರೆಸಿ ಸಮಾಧಾನದಿಂದ ಹೇಳಿದ, ‘‘ಬದಲಾವಣೆಗಾಗಿ ದುಡಿಯುತ್ತಿರುವವರು ಆ ಬದಲಾವಣೆ ತಮ್ಮ ಜೀವಮಾನದಲ್ಲಿ ಸಾಧ್ಯವಾಗದೆ ಇರಬಹುದೆಂಬ ನೀರಿಕ್ಷೆಯನ್ನು ಇಟ್ಟುಕೊಳ್ಳಬೇಕು. ಆದರೂ ಬದಲಾವಣೆಗಾಗಿ ನಡೆಸುವ ಕ್ರಿಯೆ ನಿರಂತರವಾಗಿ ಮುಂದುವರಿಸುತ್ತಲೇ ಹೋಗಬೇಕು’’ ಎಂದು ಕೈಫಿಯವರು ಪ್ರೀತಿಯಿಂದ ಮಗಳಿಗೆ ಹೇಳಿದ ಮಾತಿಗೆ ಸಂಬಂಧಿಸಿ ಒಂದು ಮಾತನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುವೆ. ಅದು ನ್ಯಾಯಮೂರ್ತಿ ಕೃಷ್ಣಯ್ಯರ್ ಅವರು ಹೇಳಿದ ಮಾತು, ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಕುಲದೀಪ ನಾಯರ್, ನ್ಯಾಯಮೂರ್ತಿ ಎನ್.ಡಿ.ವೆಂಕಟೇಶ್ ಮತ್ತು ನಾನು ಕೃಷ್ಣಯ್ಯರ್ ಅವರ ಜೊತೆ ಚರ್ಚಿಸುತ್ತಿದ್ದ ಸಮಯದಲ್ಲಿ; ನನ್ನ ಖಿನ್ನತೆಯನ್ನು ನೋಡಿ ಹೇಳಿದ ಮಾತು, ‘‘ನೋಡಿ, ಚರಿತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮ್ಮಂಥವರು ನಿಷ್ಕ್ರೀಯರಾಗಬಾರದು, ನಾವು ಬೆಳಗ್ಗೆ ಎದ್ದಾಕ್ಷಣ ಕನ್ನಡಿಯ ಧೂಳನ್ನು ಕೊಡವಿ ಮುಖ ನೋಡಿಕೊಂಡು ಹೇಗೆ ಹೊರಗೆ ಬರುತ್ತೇವೆಯೋ ಅದೇ ರೀತಿಯಲ್ಲಿ ಸಮಾಜ ಎಂಬ ಕನ್ನಡಿಯ ಧೂಳನ್ನು ಕೊಡವಲು ನಾವು ಯಾವಾಗಲೂ ಕ್ರಿಯಾಶೀಲರಾಗಿಯೇ ಇರಬೇಕಾಗುತ್ತದೆ’’ಎಂಬುದು. ಎಲ್ಲ ವಿಶಾಲ ಮನಸ್ಸಿನವರು ಹೀಗೆಯೇ ಯೋಚಿಸುವುದು ಮತ್ತು ಬದುಕುವುದು ಅನ್ನಿಸುತ್ತದೆ. ಲಡಾಯಿ ಪ್ರಕಾಶನದ ಬಸೂ ಅವರು ಮತ್ತು ಅವರ ಗೆಳೆಯರು ಈ ನೆಲೆಯಲ್ಲಿಯೇ ಯೋಚಿಸಿ ‘ಮೇ ಸಾಹಿತ್ಯ ಮೇಳ’ವನ್ನು ನಡೆಸುತ್ತಾ ಬಂದಿದ್ದಾರೆ. ನಾನು ಬಸೂ ಹಾಗೂ ವಿಭಾ ಅವರ ಕಾರಣಕ್ಕಾಗಿ ಮೊದಲನೆಯ ದಿವಸವೂ ಭಾಗಿಯಾಗಿದ್ದು ತುಂಬ ಉಪಯುಕ್ತ ಅನ್ನಿಸಿತು. ನನ್ನ ಜೊತೆಯಲ್ಲಿ ಕವಿ ಮಿತ್ರರಾದ ರುದ್ರೇಶ್ವರ ಸ್ವಾಮಿಯವರೂ ಇದ್ದರು. ಎಷ್ಟೊಂದು ಮಂದಿ ಲೇಖಕರನ್ನು ಸೇರಿಸಿದ್ದರು. ಅವರೆಲ್ಲ ಕಾವ್ಯದ ತಹತಹದಿಂದ ಬಂದವರು.


ಉದ್ಘಾಟನೆಯಲ್ಲಿ ತೆಲುಗಿನ ಖ್ಯಾತ ಕವಿ ಕೆ.ಶಿವಾರೆಡ್ಡಿಯವರು ಏನು ಮಾತಾಡುತ್ತಾರೆಂಬುದನ್ನು ಕೇಳಿಸಿಕೊಳ್ಳುವ ಆಶಯವಿತ್ತು.
ಶಿವಾರೆಡ್ಡಿಯವರು ಎಡಪಂಥೀಯ ಚಿಂತನಾ ಕ್ರಮದ ಹಿನ್ನೆಲೆಯಿಂದ ಬಂದಿದ್ದರೂ; ಕಾವ್ಯವನ್ನು ದಿಗಂಬರ ಕವಿಗಳ ರೀತಿಯಲ್ಲಿ ಘೋಷಣೆಯನ್ನು ಮಾಡಿದವರಲ್ಲ. ‘ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ’ವಿನಲ್ಲಿ ಕಾವ್ಯವನ್ನು ಹುಡುಕುವಂಥವರು. ಆದ್ದರಿಂದಲೇ ಗ್ರಾಮೀಣ ಬದುಕಿನ ಸಂಕಷ್ಟಗಳನ್ನು ವಾಚ್ಯವಾಗಿ ನೋಡದೆ; ಧ್ವನಿಪೂರ್ಣತೆಯ ಕಡೆಗೆ ಒಟ್ಟು ತಮ್ಮ ಚಿಂತನಾ ಕ್ರಮವನ್ನು ವಿಸ್ತರಿಸಿ ನೋಡಲು ಪ್ರಯತ್ನಿಸಿದವರು. ಈ ಚೌಕಟ್ಟಿನಲ್ಲಿ ಯಾರೋ ದಾನಿಗಳು ತಮ್ಮೂರಿನ ಸ್ಮಶಾನಕ್ಕೆ ಒಂದಷ್ಟು ಜಮೀನನ್ನು ಕೊಟ್ಟಿದ್ದನ್ನು ಕೂಡಾ ತಾದಾತ್ಮತೆಯಿಂದ ನೋಡಿದವರು. ಜಾಗತೀಕರಣದ ಕಾರಣಕ್ಕಾಗಿ ನಾವು ಎಲ್ಲಿ ಕಳೆದು ಹೋಗುತ್ತಿದ್ದೇವೆ ಮತ್ತು ಅದಕ್ಕೆ ಮುಖಾಮುಖಿಯಾಗಬೇಕಾದರೆ; ಕವಿಯೊಬ್ಬನ ದೃಷ್ಟಿ ಯಾವ ದಿಕ್ಕಿನಲ್ಲಿರುತ್ತದೆ ಎಂಬುದಕ್ಕೆ ಶಿವಾರೆಡ್ಡಿಯವರ ಮಾತು ಸಾಕ್ಷಿಯಾಗಿತ್ತು. ಅಷ್ಟೇ ಏಕೆ ‘ತೆಲಂಗಾಣ’ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡಿದ್ದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಇದರ ಮುಂದುವರಿದ ಭಾಗವಾಗಿ ಎಸ್.ಜಿ. ಸಿದ್ದರಾಮಯ್ಯ, ಟಿ .ಆರ್. ಚಂದ್ರಶೇಖರ್, ಬಿ ಗಂಗಾಧರ್ ಮೂರ್ತಿ ಮತ್ತು ಡಾ. ಎಚ್. ಎಸ್. ಅನುಪಮಾ ಅವರ ಮಾತು ಕಳಕಳಿಯಿಂದ ಕೂಡಿತ್ತು. ಎಲ್ಲರೂ ಗಂಭೀರ ಸಾಹಿತ್ಯಾಸಕ್ತರಾಗಿದ್ದುದರಿಂದ; ಒಟ್ಟು ಮಾತು ಲಯ ತಪ್ಪಲಿಲ್ಲ. ಕೆಲವರು ಎಲ್ಲದಕ್ಕೂ ಹನ್ನೆರಡನೆಯ ಶತಮಾನದ ವಚನಕಾರರನ್ನು ಹೊರಗೆಳೆದುಕೊಂಡು ಬಂದು ಚರ್ಚಿಸುತ್ತ ಹೋಗುತ್ತಾರೆ ಮತ್ತು ಅದಕ್ಕಾಗಿ ಅವರ ಎಷ್ಟೊಂದು ಕೊಟೇಷನ್ನುಗಳು. ಹೀಗೆ ಹೋಗುವುದರಿಂದ ಅವರ ವೈಯಕ್ತಿಕ ಅನುಭವದಿಂದ ಹೊರಬಂದ ಗ್ರಹಿಕೆಗಳು ನಾಪತ್ತೆಯಾಗಿ ಬಿಡುತ್ತದೆ. ಮತ್ತೊಂದು ವಿಪರ್ಯಾಸವೆಂದರೆ: ಕೆಲವರು ಎಲ್ಲದಕ್ಕೂ ಅಂಬೇಡ್ಕರ್ ಸಿದ್ಧಾಂತಗಳು ಪರಿಹಾರ ಎಂದು ಗಟ್ಟಿಧ್ವನಿಯಲ್ಲಿ ಕೂಗುವುದೂ ಕೂಡ ಅನುಚಿತ ಅನ್ನಿಸುತ್ತದೆ. ಹಾಗೆಯೇ ಒಬ್ಬರಿಗೊಬ್ಬರನ್ನು ಹೋಲಿಸಿ ಯಾಕೆ ನೋಡಬೇಕು. ಚಾರಿತ್ರಿಕವಾಗಿ ಅವರವರ ಕೊಡುಗೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ಲೇಖಕರಾದ ನಾ.ಡಿಸೋಜಾ ಅವರು ‘‘ಗಾಂಧೀಜಿಯವರು ಹಿಂದೂಗಳನ್ನು ಮೆಚ್ಚಿಸುವುದಕ್ಕೆ ಕೆಲವು ತಪ್ಪುಗಳನ್ನು ಮಾಡಿದರು. ಈ ದೃಷ್ಟಿಯಿಂದ ನನಗೆ ಅಂಬೇಡ್ಕರ್ ಅವರ ಅಭಿಪ್ರಾಯಗಳು ಇಷ್ಟ ’’ ಎಂದು ಹೇಳಿದಾಗ ನಗು ಬಂತು. ಒಂದು ಅರ್ಥದಲ್ಲಿ ಡಿಸೋಜಾ ಅಂಥವರು ಗಾಂಧೀಜಿಯವರನ್ನು ಗ್ರಹಿಸಿರುವುದಿಲ್ಲ ಮತ್ತು ಅಂಬೇಡ್ಕರ್ ಅವರನ್ನೂ ಸಹ. ಪ್ರತಿಯೊಬ್ಬ ಲೇಖಕನಾದವನು ತನ್ನ ಸಮಾಜ ಮತ್ತು ಚಾರಿತ್ರಿಕ ಘಟನೆಗಳ ಬಗ್ಗೆ ‘ನನ್ನ ಮಾನಸಿಕ ಸಿದ್ಧತೆ ಎಷ್ಟು?’ ಎಂಬುದನ್ನು ಪ್ರತಿ ಹಂತದಲ್ಲಿ ಕೇಳಿಕೊಳ್ಳಬೇಕಾಗುತ್ತದೆ. ಆಯಾಕಾಲದ ಅನುಭವವೇ ಮಾನದಂಡವಾಗಬಾರದು. ದೃಷ್ಟಿಯ ಸೂಕ್ಷ್ಮತೆಯೂ ಮುಖ್ಯ. ಇದಕ್ಕೆಲ್ಲ ಪುಟ್ಟ ಪ್ರಮಾಣದಲ್ಲಿಯಾದರೂ ‘ಸಂತ’ ನ ಗುಣವಿರಬೇಕು. ಒಂದು ದೃಷ್ಟಿಯಿಂದ ಮೇಲಿನ ಮಾತನ್ನು ಅರಿಯುವುದಕ್ಕಾಗಿಯೇ ‘ಮೇ ಸಾಹಿತ್ಯಮೇಳ’ವನ್ನು ಆಯೋಜಿಸಲಾಗಿತ್ತು ಅನ್ನಿಸುತ್ತದೆ. ಈ ಉದ್ದೇಶವಿಲ್ಲದಿದ್ದರೂ ಅದಕ್ಕೆ ಪೂರಕವಾಗಿಯೇ ಇತ್ತು. ‘ಅಸಮಾನ ಕರ್ನಾಟಕ’ ಪ್ರತಿರೋಧದ ನೆಲೆಗಳು, ನನ್ನ ಬದುಕು ನನ್ನ ಕವಿತೆ, ಕವಿಯೊಂದಿಗೆ ಸಂವಾದ, ವರ್ತಮಾನದ ಸವಾಲುಗಳು :ಭವಿಷ್ಯದ ಕರ್ನಾಟಕ, ಜನಸಾಹಿತ್ಯದ ಹೊಳಹು ಗಳು’ ಈ ರೀತಿಯ ಪ್ರಧಾನ ವಿಷಯಗಳ ಸುತ್ತ ಎಂತೆಂಥ ಗಂಭೀರ ಸಂವಾದ ಏರ್ಪಟ್ಟಿತ್ತು. ಇದರಲ್ಲಿ ಭಾಗವಹಿಸಿದವರೆಲ್ಲ ರಾತ್ರೋರಾತ್ರಿ ಒಂದಷ್ಟು ಓದಿಕೊಂಡು ಧುತ್ತನೆ ವೇದಿಕೆಯ ಮೇಲೆ ಆಸೀನರಾದವರಲ್ಲ. ನಾನಾ ರೀತಿಯ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು ಮತ್ತು ಕಾಲಕಾಲಕ್ಕೆ ಸಿಂಹಾವಲೋಕನಕ್ಕೆ ಪಕ್ಕಾದವರು. ಭವಿಷ್ಯದ ಆಶಯಗಳಿಗೆ ಬೆನ್ನು ತೋರಿಸಿದವರಲ್ಲ. ಈ ಚೌಕಟ್ಟಿನಲ್ಲಿ ಕೆ.ಶಿವಾರೆಡ್ಡಿ, ರಹಮತ್ ತರೀಕೆರೆ, ಟಿ.ಆರ್.ಚಂದ್ರಶೇಖರ್, ಜ.ಹೊ.ನಾರಾಯಣಸ್ವಾಮಿ, ಬಿ.ಗಂಗಾಧರಮೂರ್ತಿ, ವಿ.ಎಸ್.ಶ್ರೀಧರ್, ದಿನೇಶ್‌ಅಮೀನ್‌ಮಟ್ಟು, ಸನತ್‌ಕುಮಾರ್ ಬೆಳಗಲಿ, ಬಿ.ಎನ್.ಸುಮಿತ್ರಾಬಾಯಿ, ವಿ.ಲಕ್ಷ್ಮೀನಾರಾಯಣ, ಬಂಜಗೆರೆ ಜಯಪ್ರಕಾಶ್, ದು.ಸರಸ್ವತಿ, ಸತೀಶ್ ಕುಲಕರ್ಣಿ, ಮೀನಾಕ್ಷಿಬಾಳಿ, ಆರ್.ಕೆ.ಹುಡುಗಿ, ಅಶೋಕಶೆಟ್ಟರ್, ಕೆ.ಪಿ.ಸುರೇಶ್, ಮುಝಾಫ್ಫರ್ ಅಸಾದಿ ಮುಂತಾದವರು ಬಹುಮುಖಿ ಸಂಸ್ಕೃತಿಯ ನೆಲೆಯಲ್ಲಿ ಎಷ್ಟೊಂದು ಚಿಂತನೆಗಳನ್ನು ಹಂಚಿಕೊಂಡರು. ಇವರ ಜೊತೆಯಲ್ಲಿ ವೇದಿಕೆಯ ಮೇಲೆಯೆ ಮಾತು ಹಂಚಿಕೊಂಡವರ ಪಟ್ಟಿಯೇ ದೊಡ್ಡದಾಗಬಹುದು. ಇದಕ್ಕೆ ಪೂರಕವೆಂಬಂತೆ ಕೆಲವು ಅಪೂರ್ವ ಕೃತಿಗಳು ಬಿಡುಗಡೆಯಾದವು. ಲಡಾಯಿ ಪ್ರಕಾಶನದವರು ಎಂತೆಂಥ ಮಾರ್ಮಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇವಲ ಪ್ರಕಟನೆ ಮಾತ್ರ ಅಲ್ಲ. ಅದರ ವಸ್ತು ಹಾಗೂ ವಿನ್ಯಾಸದ ದೃಷ್ಟಿಯಿಂದಲೂ ಮೂಲಭೂತ ಸೊಗಸನ್ನು ಕಾಪಾಡಿಕೊಂಡಿದ್ದಾರೆಂಬುದೇ ಸಂತೋಷದ ವಿಷಯ. ಬಸೂ ಅವರು ‘‘ವಿಭಾ’’ ನನ್ನ ಪಾಲಿಗವಳು ಸಾವಿಲ್ಲದ ಬೆಳಕು. ‘ಕನಸು’ ನನ್ನ ಜತೆಗಿರುವ ಮುಗಿಯದರಿವಿನ ಹಾದಿ’’ ಎಂದು ಹೇಳುತ್ತಲೇ ಏಕಕಾಲಕ್ಕೆ ಒಂಟಿತನವನ್ನು ಆರಾಧಿಸುತ್ತಲೇ; ಸಾರ್ವಜನಿಕ ಬದುಕಿನ ವೈವಿಧ್ಯಮಯತೆಯನ್ನು ಒಳಗೆ ಬಿಟ್ಟುಕೊಳ್ಳುತ್ತಿರುವಂಥವರು. ಇಲ್ಲದಿದ್ದರೆ ‘ಬಟ್ಟೆಯೆಂಬುದು ಬೆಂಕಿಯ ಹಾಗೆ ಮತ್ತು ದೀಪದ ಗಿಡ’ ರೀತಿಯ ಕಾವ್ಯ ಕೃತಿಗಳಲ್ಲಿ ತಮ್ಮನ್ನು ತೆರೆದುಕೊಳ್ಳಲು ಆಗುತ್ತಿರಲಿಲ್ಲ. ‘‘ಹರಿವ ನದಿಗೆ ರಾತ್ರಿ ಬದುಕಿನ ಕೈ ತಾಗಿತೇನೋ/ಬೆಳಗ್ಗೆ ರಂಗೋಲಿ ಅಂಗಳದಲಿ ಕಪ್ಪು ಕೊಳದ ತಾವರೆಯ ನಗು/... ಅನಾಮಿಕ ಹಗಲಿನ ಸಮಯ ಮುಗಿದು ಹೇಗೊ ಸಂಜೆಯಾಗಿದೆ/ಮಾಯದ ಗಾಯವೇ ನಿನ್ನೆಯ ಹಾಗೆ ಸರದಿ ನಿಲ್ಲಲು ಹೊರಟಿದೆ’’ಈ ರೀತಿಯ ಆಪ್ತ ದ್ವಿಪದಿಗಳು ‘ದೀಪದ ಗಿಡ’ ಸಂಕಲನದಲ್ಲಿ ತುಂಬಿಕೊಂಡಿವೆ. ಅವೆಲ್ಲ ನನ್ನನ್ನು ಓದಿ ಎನ್ನುವ ರೀತಿಯಲ್ಲಿ ಧ್ವನಿಸುತ್ತಿವೆ. ಇಷ್ಟೆಲ್ಲ ಅಪೂರ್ವ ಸಮಾವೇಶವನ್ನು ಸಂಘಟಿಸಿದ್ದ ಬಸೂ ಅವರು ಒಮ್ಮೆಯಾದರೂ ವೇದಿಕೆಯ ಮೇಲೆ ಕೂರಲು ಬರಲಿಲ್ಲ. ನಾವೆಲ್ಲ ಒತ್ತಾಯ ತಂದರೂ ಸಂಕೋಚದಿಂದ ದೂರ ಉಳಿದರು. 

ನಾನು ಸಮಾರೋಪ ಕಾರ್ಯಕ್ರಮದಲ್ಲಿಯೇ ಇಂಥ ಸಂಕೋಚ ಸ್ವಭಾವದವರು; ನಮ್ಮ ಸಾರ್ವಜನಿಕ ವೇದಿಕೆಗಳಲ್ಲಿ ಸಕ್ರಿಯರಾಗಬೇಕೆಂದು ಹೇಳಿದ್ದೆ. ಅವರ ಶ್ರೀಮತಿಯವರ ಹೆಸರಿನ ಕಾವ್ಯ ಪ್ರಶಸ್ತಿಯನ್ನು ಕೆ.ಪಿ.ಮೃತ್ಯುಂಜಯ ಅವರಿಗೆ ಕೊಡುವಾಗಲೂ ಬರಲಿಲ್ಲ. ತುಂಬಾ ಒತ್ತಾಯ ಮಾಡಿದ್ದಕ್ಕೆ ಮಗಳು ಕನಸು ಎಂಬ ಪುಟ್ಟ ಹುಡುಗಿಯನ್ನು ನಮ್ಮ ಜೊತೆ ವೇದಿಕೆ ಹಂಚಿಕೊಳ್ಳಲು ಬಿಟ್ಟಿದ್ದರು. ನಮ್ಮಲ್ಲಿಯ ಬಹುಪಾಲು ಮಂದಿ ಪ್ರಚಾರದ ಗೀಳಿನಲ್ಲಿ ನರಳುತ್ತಿರುವ ಸಮಯದಲ್ಲಿ ಈ ರೀತಿಯ ಅಂತರವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾದದ್ದು. ಇಲ್ಲದಿದ್ದರೆ ಮೂರನೆ ದರ್ಜೆಯ ಪುಡಾರಿಗಳಾಗಿ ಕಳೆದು ಹೋಗಿಬಿಡಬಹುದು. 


ಕೆ.ಪಿ.ಮೃತ್ಯುಂಜಯ ಅವರ ‘ನನ್ನ ಶಬ್ದ ನಿನ್ನಲಿ ಬಂದು’ ಎಂಬ ಕವನ ಸಂಕಲನಕ್ಕೆ ವಿಭಾ ಅವರ ಹೆಸರಿನ ಪ್ರಶಸ್ತಿಯನ್ನು ಕೊಡುವಾಗ ಅವರ ನಾನಾ ರೀತಿಯ ಮುಗ್ಧ ಮುಖ ಎದುರಾಯಿತು. ಅವರು ಮಂಡ್ಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಎಚ್.ಎಲ್.ಕೇಶವಮೂರ್ತಿ ಅಂಥವರ ಮೂಲಕ ಕಾವ್ಯಕ್ಕೆ ಮತ್ತು ಸಾಹಿತ್ಯಕ್ಕೆ ತೆರೆದುಕೊಂಡವರು. ಅವರ ಪ್ರಾರಂಭದ ಕೆಲವು ಕವಿತೆಗಳನ್ನು ‘ಶೂದ್ರ’ದಲ್ಲಿ ಪ್ರಕಟಿಸಿರುವೆ. ಅತ್ಯಂತ ಸಂಕೋಚದ ವ್ಯಕ್ತಿ. ಎಂಜಿನಿಯರಿಂಗ್ ಪದವಿ ಪಡೆದರೂ ಕೆಲಸಕ್ಕೆ ಹೋಗದೆ ಪತ್ರಕರ್ತರಾದವರು. ಕ್ರಿಯಾಶೀಲ ಪತ್ರಕರ್ತರಾಗಿ ಮೈಸೂರಿನ ಆಂದೋಲನದಲ್ಲಿ ದುಡಿದವರು. ನಂತರ ಗುಟ್ಟಾಗಿ ಕನ್ನಡ ಎಂ.ಎ ಮಾಡಿ ಕೆ.ಪಿ.ಎಸ್.ಸಿ ಮೂಲಕ ಆಯ್ಕೆಯಾಗಿ ಕನ್ನಡ ಅಧ್ಯಾಪಕರಾದವರು. ಈ ಎಲ್ಲ ಹೋರಾಟದ ಮೂಲಕ ಕಾವ್ಯದ ಕೃಷಿಯನ್ನು ಮರೆತವರಲ್ಲ. ಅವರಿಗೆ ಕಾವ್ಯ ಎನ್ನುವುದು ಒಂದು ಧ್ಯಾನ. ಆದ್ದರಿಂದಲೇ ಅತ್ಯುತ್ತಮ ಕಾವ್ಯವನ್ನು ನಮಗೆ ಕೊಡುತ್ತಿರುವುದು. ಹತ್ತು ವರ್ಷಗಳ ಹಿಂದೆ ಅವರ ‘ಎಲೆ ಎಸೆದ ಮರ’ ಕೃತಿಯನ್ನು ಮಂಡ್ಯದಲ್ಲಿ ಬಿಡುಗಡೆ ಮಾಡಿದ್ದೆ. ಆಗ ಬಿ.ಕೆ.ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮೇಲಿನ ಕವನ ಸಂಕಲನವು ಮುಖ್ಯವಾಗಿ ನಾವು ವಿಷಯವನ್ನು ಕೇಂದ್ರವಾಗಿರಿಸಿಕೊಂಡಿರುವಂಥದ್ದು. ಅದ್ಭುತ ಕೃತಿ. ಎರಡು ವರ್ಷಗಳ ಹಿಂದೆ ‘ದೊಡ್ಡಮ್ಮ ದೇವತೆಗೆ ಕಿರೀಟ ಧರಿಸದ ಹೊತ್ತು’ ಕೃತಿಗೆ ಪ್ರತಿವರ್ಷ ಶೂದ್ರ ಸಾಹಿತ್ಯಕ್ಕೆ ಪತ್ರಿಕೆ ಕೊಡುವ ‘ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿಯನ್ನು ಕೊಟ್ಟಿದ್ದೆವು. ವಿಭಾ ಪ್ರಶಸ್ತಿಯ ಕವನ ಸಂಕಲನದ ಬಹುಪಾಲು ಕವಿತೆಗಳನ್ನು ನನ್ನ ಮೊಬೈಲ್‌ನ ಪರದೆಯ ಮೇಲೆ ಓದಿದ್ದೆ. ‘ನಿನ್ನ ಹೃದಯಕೆ ಮಾತೇ ಕಲಿಸಿಲ್ಲವೆನಿಸುತ್ತದೆ ’ ಕವಿತೆಯ ಕೆಲವು ಸಾಲುಗಳು ಹೀಗಿವೆ. ‘‘ವೌನವಿರುವುದೇ ನಿನಗಾಗಿ ಎನುವಂತಿದೆ/ಕಣ್ಣಲಿ ಬ್ರಹ್ಮಾಂಡ ಹೊತ್ತವಳೆ/ ಒರಬಾಗೆನು ಒಗಬಾಗೆನು ಹೊಂದುವೆ ನಿನಗೆ/ ಸೋಕಿದ ಹಸ್ತ ಬಿಡಿಸಿ ಹೇಳಲಿಲ್ಲವೆ/ ಜೋಡಿಯಾಗುವುದೇ ವ್ಯಾಕರಣ ಜೀವಮಂಡಲದಿ ಕಾಲಾಧೀನವೆ ನೀನೂ ನನ್ನ ತೆರದಿ ’’ ಹೀಗೆಯೇ ಈ ಸಂಕಲನದಲ್ಲಿ ವಿಭಾ ಮತ್ತು ಬಸೂ ಅವರ ಕವಿತೆಗಳಿಗೆ ಹತ್ತಿರವಾಗುವಂಥ ಸುಮಾರು ನೂರ ಮೂವತ್ತು ಬಿಡಿ ಕವನಗಳಿವೆ. ಅವೆಲ್ಲ ಕಾವ್ಯದ ಧ್ಯಾನವನ್ನು ಗುನುಗುನಿಸುತ್ತಿರುವಂಥವು. ಇಂಥ ಕವಿಮಿತ್ರನ ಜೊತೆಯಲ್ಲಿ ಮೂರು ದಿನ ಕಾರ್ಕಳದಲ್ಲಿದ್ದುದು ಒಂದು ಸ್ಮರಣೀಯ ಅನುಭವ. ದಕ್ಷಿಣ ಕನ್ನಡದ ಮಳೆಯನ್ನು ಅನುಭವಿಸುವ ಮತ್ತು ಜ್ಯೋತಿ ಗುರುಪ್ರಸಾದ್ ಅವರಂಥ ಪ್ರತಿಭಾವಂತ ಕವಯಿತ್ರಿಯ ಕಿಲಕಿಲ ನಗುವನ್ನು ಸವಿಯುವ ಅವಕಾಶ ನಮಗೆ ದೊರಕಿತ್ತು. ಜಿನುಗು ಮಳೆಯಲ್ಲಿಯೇ ಕಾರ್ಕಳದ ಬಾಹುಬಲಿಯನ್ನು ನೋಡಲು ಹೋಗಿದ್ದೆವು.   

ಸುಮಾರು ನಾನೂರಕ್ಕೂ ಮೇಲಟ್ಟು ವರ್ಷಗಳಿಂದ ಚಳಿ, ಮಳೆ, ಗಾಳಿ, ಬಿಸಿಲೆನ್ನದೆ ಮನುಷ್ಯರ ನೀಚತನಗಳನ್ನು ನೋಡುವುದಕ್ಕಾಗಿಯೇ ನಿಂತಂತೆ ಇರುವ ಆ ಅದ್ಭುತ ಪ್ರತಿಮೆ ನನ್ನಲ್ಲಿ ಏನೋನೋ ಭಾವನೆಗಳನ್ನು ವಿಸ್ತರಿಸಿಬಿಟ್ಟಿತ್ತು. ಹಾಗೆ ನೋಡಿದರೆ ಆ ಪ್ರತಿಮೆಯ ಅಥವಾ ದಿವ್ಯದೃಷ್ಟಿಯ ಮುಂದೆಯೇ ಎಂತೆಂಥ ಏಳುಬೀಳುಗಳು ನಡೆದು ಹೋಗಿವೆ. ಒಂದು ದೃಷ್ಟಿಯಿಂದ ನಾನು ಮತ್ತು ಮೃತ್ಯುಂಜಯ ಅವರು ಆ ಪ್ರತಿಮೆಯ ಮುಂದೆ ಒಂದಷ್ಟು ಭಾವುಕ ಕ್ಷಣಗಳನ್ನು ಕಳೆದೆವು. ಇದರ ನಡುವೆಯೇ ಮನುಷ್ಯ ಸಮಾಜದ ನಾನಾ ರೀತಿಯ ವೈಪರೀತ್ಯಗಳನ್ನು ಆರೋಗ್ಯ ಮನಸ್ಸಿನಿಂದ ನೋಡದಿದ್ದರೆ ಯಾರೂ ಕವಿಯಾಗಲಾರರು. ಹಾಗೆಯೇ ಪ್ರತಿಕ್ಷಣದಲ್ಲಿಯೂ ನಮ್ಮ ಮುಂದೆ ಏನೇನೋ ನಡೆದು ಹೋಗಿರುತ್ತದೆ. 

ನನ್ನ ಜೊತೆಯಲ್ಲಿ ಕೂತಿದ್ದ ಬಿ.ಶ್ರೀನಿವಾಸ ಅವರು ಪ್ರಶಸ್ತಿ ಪಡೆದ ಕೃತಿಯನ್ನು ಕುರಿತು ಎಷ್ಟು ಚೆನ್ನಾಗಿ ಮಾತಾಡಿದರು. ಒಂದಷ್ಟು ಯುವ ಕವಿಗಳ ಲವಲವಿಕೆಯ ಕವಿತೆಗಳನ್ನು ಕೇಳಿಸಿಕೊಳ್ಳುವುದಕ್ಕೂ ಖುಷಿಯಾಗುತ್ತಿತ್ತು. ಇದರ ಮಧ್ಯೆ ನಮ್ಮ ನಡುವಿನ ಗಂಭೀರ ಕವಿ ರುದ್ರೇಶ್ವರ ಸ್ವಾಮಿಯವರ ಯು.ಆರ್.ಅನಂತಮೂರ್ತಿಯವರನ್ನು ಕುರಿತ ಕವಿತೆಯೂ ಅರ್ಥಪೂರ್ಣವಾಗಿತ್ತು. ಈ ಅಪೂರ್ವ ಸಮಾವೇಶ ಏನೇನೋ ಸ್ಮರಣೀಯ ಅನುಭವವನ್ನು ಕೊಟ್ಟಿತು. ಅದರಲ್ಲಿ ಬಹಳ ದಿವಸಗಳಿಂದ ಭೇಟಿಯಾಗಬೇಕು ಎಂದುಕೊಂಡಿದ್ದ ಡಾ. ಮುಝಫ್ಫರ್ ಅಸಾದಿಯವರು ಪರಿಚಯವಾಗಿದ್ದು. ಅವರು ನಾನಿದ್ದ ಕೊಠಡಿಯಲ್ಲಿ ಉಳಕೊಂಡಿದ್ದರಿಂದ ಒಂದಷ್ಟು ಆತ್ಮೀಯವಾಗಿ ಮಾತನಾಡಲು ಸಾಧ್ಯವಾಯಿತು. ಕೆಲವು ಗಂಟೆಗಳ ನಮ್ಮ ಮಾತುಕತೆಯಲ್ಲಿ ಲಂಕೇಶ್, ಅನಂತಮೂರ್ತಿ, ಡಿ.ಆರ್.ನಾಗರಾಜ್, ದೇವರಾಜ್ ಅರಸ್,ಭಾರತದ ರಾಜಕಾರಣ ಮತ್ತು ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತದ ಸ್ವರೂಪವನ್ನು ಚರ್ಚೆ ಮಾಡತೊಡಗಿದ್ದೆವು. ಹಾಗೆ ನೋಡಿದರೆ ಸಮಾವೇಶದಲ್ಲಿ ಅವರ ಉಪನ್ಯಾಸ ಅತ್ಯಂತ ಗಂಭೀರವಾಗಿತ್ತು. ನಮ್ಮ ಮಾತುಕತೆಯಲ್ಲಿ ಕರ್ನಾಟಕದಲ್ಲಿ ದಲಿತ ಚಳವಳಿಗಳ ಗಂಭೀರ ಏಳು ಬೀಳುಗಳನ್ನು ಕುರಿತು ಚರ್ಚೆ ಮಾಡಿದೆವು. ಅವರು ಈ ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ದಲಿತರು ತನ್ನ ಗುರುತಿಸಿಕೊಳ್ಳುವುದಕ್ಕೆ ಒಂದು ಮಾರ್ಮಿಕ ಪ್ರಮೇಯವನ್ನು ಮುಂದಿಟ್ಟರು. ಈಗಾಗಲೇ ಕೆಲವು ದಲಿತ ಮುಖಂಡರ ಸಭೆಗಳಲ್ಲಿ ಇದನ್ನು ಪ್ರಸ್ತಾಪಿಸಿರುವೆ ಎಂದರು. ಅದೇನೆಂದರೆ ಪ್ರತಿಯೊಬ್ಬ ದಲಿತ ಕೂಡ ತಮ್ಮ ಹೆಸರಿನ ಮುಂದೆ ಜೈಭೀಮ್ ಎಂದು ಸೇರಿಸಿಕೊಳ್ಳುವುದು. ನಮ್ಮಲ್ಲಿ ಗೌಡ, ರೆಡ್ಡಿ, ಶಾಸ್ತ್ರೀ, ರಾವ್, ಆರಾಧ್ಯ ಇತ್ಯಾದಿ ಇರುವಂತೆ. ಮೇಲ್ನೋಟಕ್ಕೆ ಇದು ರೊಮ್ಯಾಂಟಿಕ್ ಅನ್ನಿಸಿದರೂ, ಎಷ್ಟೋ ಸೂಕ್ತ ಅನ್ನಿಸಿತು. ಇದರ ಕಾನೂನು ಬದ್ಧತೆಯ ಬಗ್ಗೆಯೇ ದಲಿತರು ಹೋರಾಡುವುದು ಹೆಚ್ಚು ಉಪಯುಕ್ತವಾದೀತು. ಜೈ ಭೀಮ್ ಮೂಲಕ ಸ್ವಾಭಿಮಾನದಿಂದಲೇ ನಾನು ದಲಿತ ಎಂದು ಹೇಳಿಕೊಳ್ಳುವ ಸಾಮಾಜಿಕ ಎಚ್ಚರಿಕೆಯು ರಿಜಿಸ್ಟರ್ ಆಗಬಹುದು. ಹೀಗೆ ಅರ್ಥಪೂರ್ಣ ಕೆಲವು ಪ್ರಮೇಯಗಳನ್ನು ಅಸಾದಿಯವರು ಭಿನ್ನ ರೂಪದಲ್ಲಿ ನನ್ನ ಮುಂದಿಟ್ಟರು. ಕೊನೆಗೆ ಒಮ್ಮೆ ಮೈಸೂರಿಗೆ ಬರುವೆ ಎಂದು ಹೇಳಿ ಬಂದೆ. 

ಮೊದಲನೆಯ ದಿವಸದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈಗಾಗಲೇ ಹೆಚ್ಚು ಚರ್ಚೆಯಾಗಿರುವ ಹಿಜ್ರಾ ಒಬ್ಬಳ ಆತ್ಮಕತೆ ಆಧಾರಿತ ‘ಬದುಕು ಬಯಲು’ ನಾಟಕವನ್ನು ನೋಡುವ ಅವಕಾಶ ಸಿಕ್ಕಿತು. ಇದು ಎ.ರೇವತಿಯವರ ಕೃತಿ. ಅನುವಾದ ದು. ಸರಸ್ವತಿಯವರದ್ದು. ಇದನ್ನು ರಂಗರೂಪದಲ್ಲಿ ಸಾದರಪಡಿಸಿದವರು:ಜನಮನದಾಟ ಹೆಗ್ಗೋಡು. ಅತ್ಯಂತ ಮಾರ್ಮಿಕ ಮತ್ತು ಮಾನವೀಯ ನೆಲೆಗಳನ್ನು ವಿಸ್ತರಿಸುವ ರಂಗಪ್ರಯೋಗ. ಹಿಜಾಗಳ ಬಗ್ಗೆ ಗೌರವವನ್ನು ಬೆಳೆಸಲು ಈ ನಾಟಕ ನಿಜವಾಗಿಯೂ ಅದ್ಭುತ ಕೆಲಸವನ್ನು ಮಾಡಬಲ್ಲುದು. ಹೀಗೆ ಏನೇನೋ ಬರೆಯುತ್ತ ಹೋಗಬಹುದು. ಆದರೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಸುನಂದಾ ಪ್ರಕಾಶ ಕಡಮೆಯವರು ಇದ್ದರು. ಅವರ ‘ಕಂಬಗಳ ಮರೆಯಲ್ಲಿ ’ಎಂಬ ಕಥಾಸಂಕಲನವನ್ನು ಕೊಟ್ಟರು. ಎಂಥ ಮಾರ್ಮಿಕವಾದ ಕಥೆಗಳನ್ನು ಬರೆಯುತ್ತಾರೆ ಅನಿಸಿತು. ಈ ಮಧ್ಯೆ ಬಸೂ ಕನಸು ಮತ್ತು ಡಾ. ಅನುಪಮ ದಂಪತಿಯನ್ನು ಹೇಗೆ ಮರೆಯಲು ಸಾಧ್ಯ? ಸಮಾವೇಶಕ್ಕೆ ಎಲ್ಲರ ಜೊತೆ ಅಪೂರ್ವತೆಯನ್ನು ತುಂಬಿದವರು. ಮೊನ್ನೆ ಗೆಳೆಯ ಜಯಶಂಕರ್ ಮನೆಗೆ ಬಂದಿದ್ದರು. ಅವರು ಫೇಸ್‌ಬುಕ್‌ನಿಂದ ತಮ್ಮ ಮೊಬೈಲ್‌ಗೆ ದಾಖಲಿಸಿಕೊಂಡ ‘ನಾನು ಮತ್ತು ಕನಸು’ ಎಂಬ ಮುಗ್ಧ ಹುಡುಗಿ ಇರುವ ಚಿತ್ರ ತೋರಿಸಿದರು. ‘ವಿಭಾ’ ಅವರ ಕವಿತೆಗಳನ್ನು ಮತ್ತೆ ಓದುವಂತೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...