Sunday, July 13, 2014

ಸಾಹಿತ್ಯಕ ಉದ್ವಿಗ್ನತೆ ಸಾಮಾಜಿಕ ಸ್ಥಿತ್ಯಂತರಶೂದ್ರ ಶ್ರೀನಿವಾಸ್


"every instant brings you new leaves
and its consternation surpasses every other
short-lived joy; lite in sudden waves
comes to this remote garden corner''
-Eugerio montale  (ಇಟಲಿಯ ಪ್ರಸಿದ್ಧ ಕವಿ)

ಪ್ರತಿದಿವಸ ನಮ್ಮ ದಿನಚರಿಯಲ್ಲಿ ಇಂತಿಂಥದ್ದು ಮಾಡಬೇಕೆಂದು ಮನಸ್ಸಿನಲ್ಲಿ ತುಂಬಿಕೊಂಡು ಹೊರಟಿರುತ್ತೇವೆ. ಆದರೆ ಹೀಗೆ ಹೊರಡುವಾಗ; ನಮಗೆ ಎದುರಾಗುವ ತಳಮಳ, ದುಗುಡ, ಆತಂಕ, ಅನಿಶ್ಚಿತತೆ, ಸಂಭ್ರಮ, ಸಂತೋಷ ಇತ್ಯಾದಿಗಳನ್ನು ಕಲ್ಪಿಸಿ ಕೊಂಡಿರುವುದಿಲ್ಲ. ಹಾಗೆಯೇ ‘ಎಷ್ಟು ಚೆನ್ನಾಗಿ ಆಯಿತು’ ‘ಅಯ್ಯೋ ಹೀಗಾಗಬಾರದಿತ್ತು’ ಎಂಬ ಉದ್ಗಾರಗಳೂ ಕೂಡ ಆಕಸ್ಮಿಕವಾಗಿ ಬಂದು ಹೋಗುವಂಥವು. ಒಮ್ಮೊಮ್ಮೆ ಇವೆಲ್ಲ ನಮ್ಮ ದೇಹ ಮತ್ತು ಮನಸ್ಸನ್ನು ನಡುಗಿಸುವಂತೆ ನಡೆದು ಹೋಗಿರುತ್ತದೆ. ಇಂಥದ್ದರ ಬೀಸು ಒಂದು ಸಣ್ಣ ಘಟನೆಯಿಂದ ಮೊದಲ್ಗೊಂಡು ದೊಡ್ಡದರ ವರೆವಿಗೂ ಆವರಿಸಿಕೊಂಡಿರುತ್ತದೆ. ಕೇವಲ ದಾರಿಯಲ್ಲಿ ಮಾತ್ರವಲ್ಲ ಅಥವಾ ಮುಂದೆ ಮಾತ್ರವಲ್ಲ; ಮನೆಯ ಮಾಡಿನ ಮೇಲೆ ಚಕ್ಕಂದವಾಗಿ ಆಡುವ ಅಳಿಲು ಅಥವಾ ಪಾರಿವಾಳಕ್ಕೆ ಆಕಾಶದಲ್ಲಿ ಹಾರಾಡುತ್ತ ಹೊಂಚು ಹಾಕುವ ರಣಹದ್ದನ್ನು ಕಂಡರೂ ಆತಂಕದ ಮೊರೆ ಹೋಗಿರುತ್ತೇವೆ. ಈ ರೀತಿಯದನ್ನು ಪಟ್ಟಿ ಮಾಡುತ್ತ ಹೋಗಬಹುದು. ಅದೇ ಸಮಯಕ್ಕೆ ನಮ್ಮ ಮುಂದೆ ಪುಟ್ಟ ಮಗುವಿನ ಕಿಲಕಿಲ ನಗುವಿಗೆ ಎದುರಾಗುವ ವೃದ್ಧ ದಂಪತಿಗಳ ಮುಗ್ಧ ಹಸನ್ಮುಖತೆಗೂ ಸಂಭ್ರ ಮಿಸಿರುತ್ತೇವೆ. ಹೀಗೆ ಸಂಭ್ರಮದ ಮತ್ತು ಆತಂಕದ ಕ್ಷಣಗಳು ಹೇಗೋ ಎಲ್ಲೆಲ್ಲೂ ಆವರಿಸಿಕೊಂಡಿರುತ್ತವೆ. ಅದು ನಮ್ಮ ಕೆಲಸ ಕಾರ್ಯ ಗಳ ಮಧ್ಯೆ ನುಸುಳಿ ಬಂದು ಹೋಗುವುದನ್ನು ನಾವ್ಯಾರು ನಿರೀಕ್ಷಿಸುವುದೇ ಇಲ್ಲ. ಎಷ್ಟೋ ದಶಕಗಳ ಹಿಂದೆ ಘಟಿಸಿ ಹೋಗದ ಒಂದು ಘಟನೆ ಯು ನೆನಪು ಎಂಬ ವಾಹಕದ ಮೂಲಕ ಮುಖಾಮುಖಿಯಾದಾಗ ತಲ್ಲಣಿಸಿ ಹೋಗಿರುತ್ತೇವೆ. ಇಂಥದ್ದೆಲ್ಲ ‘ಭೂತ, ವರ್ತಮಾನ ಮತ್ತು ಭವಿಷ್ಯ’ ಎಂಬ; ನಾವೇ ಚೌಕಟ್ಟು ಹಾಕಿಕೊಂಡಿರುವ ‘ಕಾಲ’ಕ್ಕೆ ಅಂಟಿಕೊಂಡಿರುವ ಸಂಗತಿಗಳು ಎಂಥ ವ್ಯಾಪಕತೆಯನ್ನು ಪಡೆದಿರುತ್ತವೆ. ಈ ಕಾರಣಕ್ಕಾಗಿಯೇ ಇರಬಹುದು ನಾವು ‘ಸೆನ್ಸಿಟೀವ್’ ಆದ ತಕ್ಷಣ ಎಂತೆಂಥದ್ದಕ್ಕೋ ಸಿಕ್ಕಿಹಾಕಿಕೊಂಡು ಬಿಟ್ಟಿರುತ್ತೇವೆ. ಅದರಲ್ಲೂ ನಾವು ಓದುವ ಪ್ರತಿಯೊಂದು ಅತ್ಯುತ್ತಮ ಕೃತಿಯೂ, ಕೇಳಿದ ಅಮೋಘ ಆಲಾಪನೆ, ಕೇಳಿಸಿಕೊಂಡ ಧ್ವನಿಪೂರ್ಣ ಮಾತು ಹಿಡಿದು ಹಿಡಿದು ಆಲೋಚನೆಗೆ ತೊಡಗಿಸಿರುತ್ತದೆ. ಸಾಹಿತ್ಯ, ಕಲೆ ಮತ್ತು ಮಾತಿಗೆ ಇಂಥ ಅನನ್ಯ ಧ್ವನಿಪೂರ್ಣತೆ ಯಾವ ಕಾಲಕ್ಕೂ ಇದ್ದೇ ಇರುತ್ತದೆ. ಆದ್ದರಿಂದಲೇ ಇವೆಲ್ಲ ಇನ್ನೂ ಜೀವಂತವಾಗಿ ಉಳಿದಿರುವುದು. ‘ತಾಳಪ್ಪ ಇವೆಲ್ಲ ತುಂಬ ಡಿಸ್ಟರ್ಬ್ ಮಾಡುತ್ತವೆ’ ಎಂದು ನಾವು ಪಕ್ಕಕ್ಕೆ ಸರಿಸಲಾಗದಷ್ಟು ಅವು ನಮ್ಮದಾಗಿ ಬಿಟ್ಟಿರುತ್ತವೆ. ಯಾಕೆಂದರೆ ನಮ್ಮ ಅಭಿರುಚಿಯ ಭಾಗಕ್ಕೆ ಅಂಟಿಕೊಂಡಿರುತ್ತವೆ. ಈ ದೃಷ್ಟಿಯಿಂದ ಪ್ರತಿದಿವಸದ ನಮ್ಮ ಓದು, ನೋಟ ಮತ್ತು ಆಲಿಸುವಿಕೆಗೆ ಒಂದು ರೀತಿಯ ಅವಿನಾಭಾವ ಸಂಬಂಧ ಎಂಥ ಅಪೂರ್ವತೆಯಿಂದ ಕೂಡಿರುತ್ತದೆ. ಆಗ ಒಟ್ಟು ಸಂವೇದನೆ ಮತ್ತು ಗ್ರಹಿಕೆಗಳಿಗೆ ಸಿಗುವ ಆಯಾಮ ನೆನಪಿಸಿಕೊಳ್ಳಲು ‘ಹಾಯ್’ ಆಗಿರುತ್ತದೆ. ಅದೇ ಸಮಯಕ್ಕೆ ದುರಂತದ ಘಟನೆಗಳಿಗೆ ತತ್ತರಿಸಿ ಹೋಗುವ ಕ್ಷಣವೂ ಬಂದು ಹೋಗಬಹುದು.

ಒಟ್ಟು ನಾಗರಿಕತೆಯ ಸಾಮಾಜಿಕ ಸ್ಥಿತ್ಯಂತರಗಳ ಉದ್ದಕ್ಕೂ ಘಟಿಸಿದ ಅವಘಡಗಳು; ಈಗಲೂ ನಮ್ಮ ನೆನಪಿನ ಬುತ್ತಿಯಲ್ಲಿ ಆತಂಕಗಳನ್ನು ಮುಂದುವರಿಸುತ್ತಲೇ ಇವೆ. ಅದಕ್ಕೆ ಪೂರಕ ಎಂಬಂತೆ ಪ್ರತಿದಿವಸ ನಡೆಯುತ್ತ ಹೋಗುವ ಅನಾಗರಿಕ ಕೃತ್ಯಗಳು ಆತಂಕದ, ತಲ್ಲಣಗಳ ಮೆಟ್ಟಿಲುಗಳನ್ನೇರಿಸುತ್ತಲೇ ಇರುತ್ತದೆ. ಎಷ್ಟೋ ಬಾರಿ ಕೆಳಕ್ಕಿಳಿದು ಸಮಾಧಾನ ಚಿತ್ತರಾಗಿರಲು ಬಿಡುವುದೇ ಇಲ್ಲ. ಜನಾಂಗ ದ್ವೇಷದ ನೆಪದಲ್ಲಿ ರಾಜಕೀಯ, ಮತೀಯವಾದ ಮತ್ತು ಭಯೋತ್ಪಾದನೆಗೆ ಎಂತೆಂಥ ವಿಕ್ಷಿಪ್ತತೆ ಬಂದು ಅಂಟಿಕೊಂಡು ಕ್ಷುದ್ರಗೊಳ್ಳುತ್ತಿರುತ್ತದೆ. ಯಾವುದನ್ನು ಆರಾಮವಾಗಿ ತೆಗೆದುಕೊಂಡು ಮುಂದುವರಿಯಲು ಆಗಿರುವುದಿಲ್ಲ. ಇಂಥ ಸಮಯದಲ್ಲೆಲ್ಲ; ನಾವು ಈಗಾಗಲೇ ಒಪ್ಪಿಕೊಂಡಿರುವ ಕೆಲವು ಮಹಾನುಭಾವರು ಪಿಸುಗುಡುತ್ತಲೇ ಇರುತ್ತಾರೆ: ಆತಂಕಪಡುವುದು ಏನೂ ಇಲ್ಲ; ಇದು ಯಾವಾಗಲೂ ಮುಂದುವರಿದ ಭಾಗವಾಗಿಯೇ ಇರುವಂಥದ್ದು ಎಂದು. ಇಂಥದ್ದು ಯಾವುದೋ ಒಂದು ರೂಪ ದಲ್ಲಿ ದೊರಕುತ್ತಲೇ ಇರುತ್ತದೆ. ಅದು ಮೋಹಕವಾಗಿಯೂ ಇರಬಹುದು. ಅಥವಾ ಅತ್ಯಂತ ವಿಕೃತವಾಗಿಯೂ ಇರಬಹುದು. ಆದರೆ ಭಾವುಕರಾಗದೆ ಸ್ವೀಕರಿಸುವ ಕ್ರಮದಲ್ಲಿ ನಮ್ಮ ಜಾಣ್ಮೆ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಾವೂ ಕೂಡ ಗೊಂದಲದ ಗೂಡಿನಲ್ಲಿ ಸಿಕ್ಕಿಕೊಂಡು ನರಳಬೇಕಾಗುತ್ತದೆ. ‘ಹೌದು ಇದು ಹೀಗೆಯೇ ಇರುವಂಥದ್ದು; ಇರಲಿ ಬಿಡು ಏನು ಮಹಾ’ ಎಂಬ ಸಮಾಧಾನದ ಧ್ವನಿ ನಮ್ಮನ್ನು ಮುಂದುವರಿಸುತ್ತಿರುತ್ತದೆ. ಯಾಕೆಂದರೆ: ಇಲ್ಲಿ ನೋಡುವುದು, ಕೇಳುವುದು ಮತ್ತು ಓದುವುದು; ಅದರ ಮೂಲಕ ಅನುಭವಿಸುವುದು ಯಾವಾಗಲೂ ಆಪ್ತವಾಗಿರುವಂಥದ್ದು. ಇಷ್ಟು ಹೇಳಿದರೆ ಮುಗಿಯಿತೆ? ಇಲ್ಲ ನಿಜವಾಗಿಯೂ ಮುಗಿದಿಲ್ಲ. ಮುಗಿದಿದೆ ಎಂದಾಕ್ಷಣ; ಇನ್ನು ಹೇಳುವುದು ಏನೂ ಇಲ್ಲ ಎಂದು ನಮ್ಮ ಆಲೋಚನೆ ಕ್ರಮಕ್ಕೆ ಬೀಗ ಜಡಿದುಕೊಂಡಂತೆ.

 ಹೌದು ಸಾಮಾಜಿಕ ಸ್ಥಿತ್ಯಂತರದ ಕಾರಣಕ್ಕಾಗಿ ಉದ್ವಿಗ್ನತೆ ಅಥವಾ ತಳಮಳ ವಿವಿಧ ಆಕಾರಗಳನ್ನು ಪಡೆಯುತ್ತಿರುವುದು. ಇದರ ಮಧ್ಯೆಯೂ ನಮಗೆ ಸಂಭ್ರಮ ಮತ್ತು ಸಂತೋಷ ಬೇಕಾಗಿದೆ. ನನ್ನ ಮುಂದೆ ಇರುವವರು ಎಲ್ಲರೂ ರಾಕ್ಷಸರು, ನೀಚರು ಎಂದು ಗೆರೆ ಎಳೆದುಕೊಂಡಾಕ್ಷಣ; ಗುಮಾನಿಗಳ ಮೊತ್ತ ಬೆಳೆಯುತ್ತ ಹೋಗುತ್ತದೆ. ಅವರನ್ನು ಅರಿತಂತೆ ಆಗುವುದಿಲ್ಲ. ಪ್ರತಿಕ್ಷಣವೂ ಉದ್ವೇಗಕ್ಕೆ ಒಳಗಾಗುತ್ತಿರುತ್ತೇವೆ. ಒಂದು ಅಕ್ಷರವನ್ನು ಬರೆಯಲಾಗುವುದಿಲ್ಲ. ನೇರವಾಗಿ ಹೇಳಬೇಕೆಂದರೆ; ನಾನು ಮಾತ್ರ ಪ್ರಾಮಾಣಿಕ ಎಂದು ನನಗೆ ನಾನೇ ಪ್ರಮಾಣಪತ್ರವನ್ನು ಕೊಟ್ಟುಕೊಂಡಂತೆ. ಈ ಕಾರಣಕ್ಕಾಗಿಯೇ ಕೆಲವು ಸಭೆ ಸಮಾರಂಭಗಳಿಗೆ ಹೋಗುವುದಕ್ಕೆ ಭಯವಾಗುತ್ತದೆ. ಎಲ್ಲದರ ಬಗ್ಗೆ, ಎಲ್ಲರ ಬಗ್ಗೆ ‘ಷರಾ’ ಎಳೆದಂತೆ ಮಾತಾಡುತ್ತಾರೆ. ಅವರು ಹೀಗೆ ಬದುಕಿದರು ಎಂದು ಸರಳವಾಗಿ ನೋಡಲು ಹೋಗುವುದೇ ಇಲ್ಲ. ಇದನ್ನು ಮುಂದುವರಿಸಿ ಹೇಳಬೇಕೆಂದರೆ: ಕಾಡನ್ನು ಕಾಡನ್ನಾಗಿ, ನದಿಯನ್ನು ನದಿಯನ್ನಾಗಿ, ಸಮುದ್ರವನ್ನು ಸಮುದ್ರವನ್ನಾಗಿಯೇ ನೋಡದೆ ವ್ಯಾಖ್ಯಾನಿಸಲು ಹೊರಟಾಗ; ನಿಜವಾದ ಅನುಭೂತಿಯನ್ನು ಕಳೆದು ಕೊಂಡು ಬಿಡುತ್ತೇವೆ ಅನ್ನಿಸು ತ್ತದೆ. ಹಾಗೆಯೇ ಒಟ್ಟು ಪರಿಸರಕ್ಕೆ ಗಾಬರಿಯನ್ನು, ಆತಂಕವನ್ನು ವಿಸ್ತರಿಸುತ್ತ ಹೋಗುತ್ತೇವೆ. ನಮ್ಮ ನಿನ್ನೆಯ ನೋಟಕ್ಕೂ ಇಂದಿನ ನೋಟಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಹಾಗೆಯೇ ನಮ್ಮ ಓದೂ ಕೂಡ. ಇದರ ಮುಂದುವರಿದ ಭಾಗವಾಗಿ ನಮ್ಮ ಗ್ರಹಿಕೆ ನಾನಾ ರೀತಿಯ ಆಯಾ ಮಗಳನ್ನು ಪಡೆದಿರುತ್ತವೆ. ಹಾಗೆಯೇ ಎಲ್ಲರೂ ನಮ್ಮಂತೆಯೇ ಯೋಚಿಸಬೇಕು; ಪ್ರತಿಕ್ರಿಯಿಸಬೇಕು ಎಂದು ತಿಳಿಯುವುದೇ ಅಪರಾಧವಾಗುತ್ತದೆ. ಎಲ್ಲ ಗಂಭೀರ ಚಿಂತಕರು ಮತ್ತು ಹೋರಾಟಗಾರರು ತಮ್ಮ ಸಂದರ್ಭದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಒತ್ತಡಗಳ ನಡುವೆ ಬದುಕಿರುತ್ತಾರೆ. ನಾವು ಆ ಕಾಲಘಟ್ಟವನ್ನು ಅರ್ಥೈಸಿಕೊಂಡೇ ವ್ಯಾಖ್ಯಾನಿಸಬೇಕಾಗುತ್ತದೆ. ಅದು ಬಿಟ್ಟು ನಮ್ಮ ಮಾನಸಿಕ ಪರಿಧಿಯ ಚೌಕಟ್ಟಿನಲ್ಲಿ ಅವರನ್ನು ಅಥವಾ ಆ ಕಾಲಘಟ್ಟವನ್ನು ಬಂಧಿಸಿ ಮೌಲ್ಯ ಮಾಪನ ಮಾಡುವುದು; ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದಂತೆ ಆಗುವುದಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಹಿರಿಯರ ಶತಮಾನೋತ್ಸವ ನಡೆಯುತ್ತಿದೆ. ಆಗ ಎಂತೆಂಥ ವಿಶೇಷಗಳನ್ನು ಧುತ್ತನೆ ಕೇಳಿಸಿಕೊಳ್ಳಬೇಕಾಗುತ್ತದೆ ಎಂದರೆ ಗಾಬರಿಯಾಗಿರುತ್ತದೆ.

 ಕಳೆದ ತಿಂಗಳು ಜೂನ್ ಎರಡನೆಯ ವಾರದಲ್ಲಿ ಉತ್ತರ ಕನ್ನಡದ ಶಿರಸಿ ಮತ್ತು ಸಿದ್ದಾಪುರದಲ್ಲಿ ಗೌರೀಶ ಕಾಯ್ಕಿಣಿ, ಫಕೀರ ಮುಹಮ್ಮದ್ ಕಟ್ಪಾಡಿ ಮತ್ತು ಯಶವಂತ ಚಿತ್ತಾಲರ ಸಾಹಿತ್ಯದ ಕೊಡುಗೆ ಕುರಿತು ಕಾರ್ಯಕ್ರಮವಿತ್ತು. ಕರ್ನಾಟಕ ಸಾಹಿತ್ಯ ಅಕಾಡಮಿಯವರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಇದರಲ್ಲಿ ನಮ್ಮ ಸಾಹಿತ್ಯ ಸಂದರ್ಭದ ಬಹುಮುಖ್ಯ ಕಥೆಗಾರರಾದ ಫಕೀರ ಮುಹಮ್ಮದ್ ಕಟ್ಪಾಡಿಯವರ ಕಥಾಲೋಕದ ಬಗ್ಗೆ ಒಂದು ಸಂವಾದವಿತ್ತು. ಅದನ್ನು ನಾನು ನಿರ್ವಹಣೆ ಮಾಡಬೇಕಾಗಿತ್ತು. ಇದರಿಂದ ಅವರ ಒಟ್ಟು ಕಥೆಗಳ ಶ್ರೀಮಂತಿಕೆಯನ್ನು ಹಾಗೂ ಸೂಫೀ ಚಿಂತನೆಯ ಹೆಚ್ಚುಗಾರಿಕೆಯನ್ನು ಕುರಿತು ಒಂದಷ್ಟು ಅಧ್ಯಯನ ಮಾಡುವಾಗ ಖುಷಿಪಟ್ಟಿದ್ದೆ. ಇರಲಿ, ಇದನ್ನು ಕುರಿತು ಪ್ರತ್ಯೇಕವಾಗಿಯೇ ಬರೆಯುವ ಆಶಯವಿದೆ. ಆದರೆ ಅಂದು ಸಿದ್ದಾಪುರದಲ್ಲಿ ಗೌರೀಶ್ ಕಾಯ್ಕಿಣಿಯವರ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಕೆಲವರು ಗಂಭೀರವಾಗಿ ಮಾತಾಡಿದರು. ಇನ್ನು ಕೆಲವು ಸಭಿಕರು ಜೀರ್ಣಿಸಿಕೊಳ್ಳಲು ಸಾಧ್ಯವಾಗದಷ್ಟು ಉದ್ಗಾರಗಳನ್ನು ಉವಾಚಿಸಿದ್ದರು. ನಿಜವಾಗಿಯೂ ಗೌರೀಶ ಕಾಯ್ಕಿಣಿಯವರು ದೊಡ್ಡ ವಿದ್ವಾಂಸರಾಗಿದ್ದರು, ಉತ್ತಮ ಲೇಖಕರೂ ಆಗಿದ್ದರು. ಅವರು ಉತ್ತರ ಕನ್ನಡದ ಗೋಕರ್ಣದಲ್ಲಿದ್ದುಕೊಂಡು ಅರಿವಿನ ಬಾಗಿಲುಗಳನ್ನು ವಿಸ್ತರಿಸಿಕೊಂಡ ಕ್ರಮವೇ ಅದ್ಭುತವಾದದ್ದು. ಅವರು ಒಬ್ಬ ಅತ್ಯುತ್ತಮ ಓದುಗರಾಗಿದ್ದರು. ಇದರಿಂದ ಓದಿನ ದಾಹದಿಂದ ಉಲ್ಲಸಿತರಾಗಿದ್ದವರು. ಹೀಗಿದ್ದವರು ಸಣ್ಣ ಪತ್ರಿಕೆಗಳಿಂದ ಮೊದಲ್ಗೊಂಡು ದೊಡ್ಡ ಪತ್ರಿಕೆಗಳವರೆಗೆ ಒಂದೇ ಸಮನೆ ಬರೆಯುತ್ತ ಹೋದವರು. ಹೀಗೆ ಬರೆಯುತ್ತ ಹೋದಾಗ ಒಂದಷ್ಟು ಜೊಳ್ಳು ಸ್ವಾಭಾವಿಕವಾಗಿಯೇ ದಾಖಲಾಗಿರುತ್ತದೆ. ಇದು ಒಬ್ಬ ದೊಡ್ಡ ಚಿಂತಕನ ದುರ್ಬಲತೆಯೂ ಅಲ್ಲ; ಅಪರಾಧವೂ ಅಲ್ಲ. ಆದರೆ ನಾವು ಚರ್ಚಿಸುವಾಗ ಭಾವನಾತ್ಮಕತೆಗೆ ಪಕ್ಕಾಗದೆ ವಿವರಿಸಬೇಕಾಗುತ್ತದೆ. ಇಲ್ಲದಿದ್ದರೆ ಗೌರೀಶ ಕಾಯ್ಕಿಣಿಯಂಥ ಹಿರಿಯರನ್ನು ಗೌರವಿಸಿದಂತೆ ಆಗುವುದಿಲ್ಲ. ಮತ್ತೊಂದು ದೊಡ್ಡ ದುರಂತವೆಂದರೆ; ಇಂಥವರು ಮತ್ತು ಯಶವಂತ ಚಿತ್ತಾಲರಂಥವರು ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆಯಲು ವಂಚಿತರಾಗಿದ್ದಾರೆ ಎಂದು ಬೊಬ್ಬೆ ಹಾಕುವರು. ಹೀಗೆ ಬೊಬ್ಬೆ ಹಾಕಿದಾಗ; ತಾವು ಮಾತಾಡಿರಬಹುದಾದ ಗಂಭೀರ ವಾಕ್ಯಗಳೂ ನಾಪತ್ತೆಯಾಗಿ ಬಿಟ್ಟಿರುತ್ತವೆ. ಕೆಲವು ಸಭೆ ಸಮಾರಂಭಗಳಲ್ಲಿ ಈ ಪ್ರಶಸ್ತಿಗಳನ್ನು ಕುರಿತೇ ಹೆಚ್ಚು ಒತ್ತು ಕೊಟ್ಟು ಮಾತಾಡಿರುತ್ತಾರೆ. ಒಮ್ಮೊಮ್ಮೆ ಅವರ ನಾಲಿಗೆಗಳು ಎಷ್ಟು ಉದ್ದ ಬೆಳೆದಿರುತ್ತದೆಂದರೆ; ಅನಂತಮೂರ್ತಿಯವರಂಥ ಶ್ರೇಷ್ಠ ಲೇಖಕರು ಮತ್ತು ಚಿಂತಕರಂಥವರನ್ನು ಎಳೆದು ಜಗ್ಗಾಡಿರುತ್ತಾರೆ. ಒಮ್ಮೊಮ್ಮೆ ಗಿರೀಶ್ ಕಾರ್ನಾಡ್‌ರಂಥವರನ್ನು. ಇಂಥವರಲ್ಲಿ ಬಹುಪಾಲು ಮಂದಿ ಅನಂತಮೂರ್ತಿಯವರ ಒಂದೇ ಒಂದು ಕಥೆಯನ್ನಾಗಲಿ, ಕಾದಂಬರಿಯನ್ನಾಗಲಿ ಓದಿರುವುದಿಲ್ಲ. ಪರೋಕ್ಷವಾಗಿ ಇಂಥವರ ನಾಲಿಗೆಗೆ ಎಸ್.ಎಲ್.ಭೈರಪ್ಪರಂಥವರು, ಪಾಟೀಲ ಪುಟ್ಟಪ್ಪರಂಥವರು ಪ್ರೇರಕರಾಗಿರುತ್ತಾರೆ.

ಒಂದು ದೃಷ್ಟಿಯಿಂದ ಇಂಥವೆಲ್ಲವೂ ನಮ್ಮ ಉದ್ವಿಗ್ನತೆಗಳನ್ನು ಜಾಸ್ತಿ ಮಾಡುತ್ತಲೇ; ಆರೋಗ್ಯಪೂರ್ಣ ಯೋಚನಾ ಕ್ರಮವನ್ನೇ ದಾರಿ ತಪ್ಪಿಸುತ್ತಿರುತ್ತವೆ. ಇದರ ಜೊತೆಗೆ ಲೇಖಕರು ಕಲಾವಿದರೂ ಯಾವ ರಾಜಕಾರಣಿಗಿಂತ ಕಡಿಮೆ ಇಲ್ಲ ಎಂದು ಹೇಳುತ್ತಲೇ; ಅವರನ್ನು ಉತ್ತಮ ಓದಿನತ್ತ ಕರೆದೊಯ್ಯುವುದನ್ನು ತಪ್ಪಿಸಿದಂತಾಗುತ್ತದೆ. ಇದನ್ನೆಲ್ಲ ಯೋಚಿಸಿದಾಗ ಪ್ರತಿಯೊಂದು ಸಮಾಜವೂ ಎಂಥ ಗೊಂದಲಮಯತೆಯ ಮುದ್ದೆಯಾಗಿರುತ್ತದೆ ಅನ್ನಿಸುತ್ತದೆ. ಕೆಲವು ಬಾರಿ ಇಂಥದ್ದನ್ನೆಲ್ಲ ಕಂಡಾಗ ಹೊರಗೆ ಹೋಗುವುದಕ್ಕೆ ಭಯವಾಗುತ್ತದೆ. ಯಾಕೆಂದರೆ ಅಷ್ಟರಮಟ್ಟಿಗೆ ನಮ್ಮ ಸುತ್ತಲೂ ಪ್ರಶಸ್ತಿ, ಸನ್ಮಾನ, ಅಭಿನಂದನೆ ಮತ್ತು ಸಣ್ಣಪುಟ್ಟ ಸದಸ್ಯತ್ವಕ್ಕೂ ಲಾಬಿ ನಡೆಸಿರುತ್ತಾರೆ. ಆಗ ಹೊರಗಿನ ಪ್ರಪಂಚದಿಂದ ದೂರವಿದ್ದು ‘ಸುಮ್ಮನೆ’ ನಮ್ಮ ಸುತ್ತಲೂ ಇರುವ ಕೆಲವು ಅತ್ಯುತ್ತಮ ಕೃತಿಗಳನ್ನು ಓದುತ್ತ ‘ಸುಮ್ಮನೆ’ ಇದ್ದು ಬಿಡೋಣ ಅನ್ನಿಸುತ್ತದೆ. ಹೀಗೆ ಅಂದುಕೊಂಡಾಗಲೂ ತಳಮಳ, ಆತಂಕ ಸುಮ್ಮನಿರುವುದಿಲ್ಲ. ಮನಸ್ಸಿನೊಳಗೆ ಸ್ಫೋಟಗೊಳ್ಳುತ್ತಲೇ ಇರುತ್ತದೆ. ಇದಕ್ಕೆ ಯಾಕೆ ಹೀಗೆಲ್ಲ ನಡೆಯುತ್ತದೆ? ಇದೆಲ್ಲದರ ಅಗತ್ಯವಿದೆಯಾ? ಅಥವಾ ಈ ಸಮಾಜ ಯಾವಾಗಲೂ ಹೀಗೇನಾ ಇರುವುದು? ಎಂದು ವಿಷಾದಪೂರ್ಣವಾಗಿ ಪ್ರಶ್ನೆಗಳ ಮೊತ್ತವನ್ನು ಮುಂದಿಟ್ಟುಕೊಂಡು; ಮೈಮನಸ್ಸುಗಳನ್ನೆಲ್ಲ ಮುದುಡಿಕೊಂಡು ಕೂರುತ್ತೇವೆ. ಸ್ವಲ್ಪ ಇದರಿಂದ ರಿಲ್ಯಾಕ್ಸ್ ಆಗಲು ಬಿ.ಬಿ.ಸಿ.ಯೋ, ಡಿಎನ್‌ಎನ್ ಟಿವಿ ಚಾನೆಲ್‌ಗಳನ್ನು ಆನ್ ಮಾಡಿದಾಗ; ಎಲ್ಲೆಲ್ಲೋ ಬಾಂಬ್ ದಾಳಿ. ಲಕ್ಷಾಂತರ ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳ ಸಮೇತ ಒದ್ದಾಡುವ ಭೀಕರ ಚಿತ್ರ. ಏನಾದರೂ ಬರೆಯಬೇಕೇ?
ಗೊತ್ತಿಲ್ಲ...

ಉದ್ವಿಗ್ನತೆ, ತಳಮಳ, ಆತಂಕ, ಗೊಂದಲ, ಸಂಭ್ರಮ, ಸಂತೋಷ ಎಲ್ಲವೂ ಒಂದೇ ಬಾಂಡಲಿಯಲ್ಲಿ ಕುದಿಯುತ್ತಿವೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...