Sunday, July 20, 2014

ನೆಲ ಮೂಲ




ಎಸ್ ಜಿ ಸಿದ್ಧರಾಮಯ್ಯ

‘ಬೀದಿ ಅಲ್ಲಮ’ ಕವನ ಸಂಕಲನದಿಂದ

ಮರೆತೆನೆಂದು ಹುಡುಕಿ ಬಂದ
ಊರಿಗೆಂದು ಕರೆದು ತಂದ
ಹುಟ್ಟಿ ಬೆಳೆದ ಊರಾದರು
ತೊಟ್ಟು ಕಳಚಿದ ಗೊಂಚಲು

ಬೀದಿ ತುಂಬ ಮೊರೆವ ಜನ
ಮಾತು ಸತ್ತ ಗದ್ದಲ
ಇರುಳು ಸುರಿದ ಕಾಳಮಳೆ
ಮನೆಯ ಸುತ್ತ ಕೆಂಪುಕೆಸರು

ಒಳಗೆ ಕೂಗಿ ಕರೆವರಿಲ್ಲ
ಹಾರೊಡೆದಾ ಬಾಗಿಲು
ತಿನುವ ಹೊಟ್ಟೆ ತಿನಿಸೆ ಇಲ್ಲ
ಗೂಡು ಮಾಡು ಜೇಡ ಜಾಲ

ಕರುವು ಸತ್ತ ಕೆಂದ ಹಸು
ಕೈ ಇಟ್ಟರೆ ಒದೆಮಾರಿ
ಗರುಡನಿಲ್ಲ ಗೊಂತಿಯೊಳಗೆ
ಗೋಡೆಯಲ್ಲಿ ಪಲ್ಲಿಸಾಲು

ಮೂಲೆಯಲ್ಲಿ ಮುರಿದ ನೊಗ
ಹರಿದ ಕಣ್ಣಿ ಜಂತೆಯಲ್ಲಿ
ಒಡೆದ ಮಡಕೆ ಮುಚ್ಚಳ
ನೇತಾಡುವ ನೆಲುವಿನಲ್ಲಿ

ಕರುಕು ಬೂದಿ ಒಲೆಯ ತುಂಬ
ಮುರಿದ ಸೌಟು ಮೂಲೆಯಲ್ಲಿ
ಉಟ್ಟ ಸೀರೆ ಬಿಟ್ಟ ಅಂಗಿ
ಮುಟ್ಟು ಚಿಟ್ಟು ಮನೆಯ ತುಂಬ

ಕೋಡೊಲೆಯ ಕಾವಿನಲ್ಲಿ
ಬೆಚ್ಚಗಿರುವ ಕಳ್ಳ ಕಾಮಿ
ಅಡ್ಡ ಗೋಡೆ ಮುಡುಕಿನಲ್ಲಿ
ಬಾಯಿತೆರೆದ ನೀರು ಹಂಡೆ

ಕೆಳಗೆ ಬಿದ್ದ ಲೋಟ ಎಡವಿ
ಗುರುವು ಮಂಗಮಾಯ
ಗರುವ ಕರಗಿ ಇಡುವ ಹೆಜ್ಜೆ
ಕವಿದ ಕೋಣೆ ಕತ್ತಲಲ್ಲಿ

ಬಿಸಿಲಕೋಲ ಬೆಳಕ ನಂಬಿ
ಕಾಲಿಗಡ್ಡ ಕಳ್ಳಕಾಮಿ
ಮುತ್ತಿಕೊಲುವ ಕತ್ತಲಲ್ಲಿ
ಕೂಗಿ ಕೂಗಿ ಕರೆಯುತೇನೆ

ಪಾಳು ಮನೆಗೆ ಬಾಳು ತರುವ
ಬೆಳಕಿನೂರ ತಾಯಿ ಬಾರೆ
ಗೋಳು ಕರೆವ ಕೋಣೆಯೊಳಗೆ
ಕಳ್ಳುಬಳ್ಳಿ ಕುಲವ ತೋರೆ

ಬಿಟ್ಟು ಹೋದ ತಪ್ಪಿನಲ್ಲಿ
ಮುದ್ದೆಸ್ವಾರ ದದ್ದವಾತು
ಗೋಡೆಯಲ್ಲಿ ಹುತ್ತ ಬೆಳೆದು
ಜಂತೆ ತುಂಬ ಗೆದ್ದಲು

ಅವ್ವ ಬಾರೆ ಅಕ್ಕ ಬಾರೆ
ಬೆಳಕಿನೂರ ತವರೆ ಬಾರೆ
ನೆಲಮೂಲದ ನಂಬಿಕೆಯಲಿ
ಕುಲಮೂಲದ ಚೆಲುವು ತೋರೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...