Wednesday, July 23, 2014

ಸಂಸದ ದುಂಡಾವರ್ತನೆ : ರೊಟ್ಟಿ ತುರುಕಬೇಕಾದ ಬಾಯಿಗಳು ಬೇಕಾದಷ್ಟಿವೆವಾರ್ತಾಭಾರತಿ ಸಂಪಾದಕೀಯ


ನನ್ನನ್ನು ಹಿಡಿದು ಬಾಯಿಗೆ ಚಪಾತಿ ತುರುಕಿದರು

ಮಹಾರಾಷ್ಟ್ರ ಸದನದಲ್ಲಿ ಶಿವಸೇನೆಯ ಸಂಸದ ನೊಬ್ಬ ಮುಸ್ಲಿಮ್ ಯುವಕನ ಉಪವಾಸ ಭಂಗ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಒಬ್ಬ ಮುಸ್ಲಿಮನ ಧಾರ್ಮಿಕ ಭಾವನೆಗಳಿಗೆ ಶಿವಸೇನೆಯ ಸಂಸದ ಧಕ್ಕೆ ತಂದಿದ್ದಾರೆ ಎಂದು ವಿರೋಧ ಪಕ್ಷಗಳು ಸಂಸತ್‌ನಲ್ಲಿ ತೀವ್ರ ಗದ್ದಲವನ್ನು ಎಬ್ಬಿಸಿವೆ. ಮುಖ್ಯವಾಗಿ ಈ ಕೃತ್ಯ ಎಸಗಿರುವುದು ಶಿವಸೇನೆಯ ಸಂಸದನಾಗಿರುವುದರಿಂದ ಪ್ರಕರಣ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಕೋಮುವಾದಿ ಸಂಸದನೊಬ್ಬ ಮುಸ್ಲಿಮ್ ಯುವಕನ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾನೆ ಎನ್ನುವುದು ವಿವಾದ ಕಾವು ಪಡೆಯಲು ಕಾರಣವಾಗಿದೆ. ಹಾಗೆ ನೋಡಿದರೆ ಒಬ್ಬ ಉಪವಾಸಿಗನ ಬಾಯಿಗೆ ಒಬ್ಬ ಬಲವಂತವಾಗಿ ರೊಟ್ಟಿ ತುರುಕಿಸಿದರೆ ಉಪವಾಸ ಭಂಗವಾಗುವುದಿಲ್ಲ. 
 

ಉಪವಾಸವೆನ್ನುವುದು ಕೇವಲ ಆಹಾರಕ್ಕೆ ಸಂಬಂಧಿಸಿದ ಕ್ರಿಯೆಯಷ್ಟೇ ಅಲ್ಲ. ರಮಝಾನ್ ಉಪವಾಸವೆಂದರೆ ಆಹಾರ ತೆಗೆದುಕೊಳ್ಳದೇ ಇರುವುದಷ್ಟೇ ಅಲ್ಲ. ಒಬ್ಬ ಮರೆತು ಪಕ್ಕನೆ ನೀರು ಸೇವಿಸಿದರೆ, ಅಥವಾ ಬಲವಂತವಾಗಿ ದುರುದ್ದೇಶದಿಂದ ಉಪವಾಸಿಗನ ಬಾಯಿಗೆ ಆಹಾರ ತುರುಕಿದರೆ ಉಪವಾಸ ಭಂಗವಾಗುವುದಿಲ್ಲ. ಒಬ್ಬ ದಿನವಿಡೀ ಆಹಾರ ಸೇವಿಸದೇ ಇದ್ದಾಕ್ಷಣವೂ ಆತನ ಉಪವಾಸ ಪೂರ್ತಿಯಾಯಿತೆಂದರ್ಥವಲ್ಲ. ಯಾವುದೇ ಆಹಾರ ಸೇವಿಸದೆ ಇದ್ದು, ಕೆಡುಕುಗಳನ್ನು ಮಾಡುತ್ತಾ, ಅವಾಚ್ಯವಾಗಿ ಮಾತನಾಡುತ್ತಾ ಇದ್ದರೆ ಆತನ ಉಪವಾಸ ಭಂಗವಾದಂತೆ ಎನ್ನುವುದು ಮುಸ್ಲಿಮರ ನಂಬಿಕೆ. ಕೆಡುಕುಗಳನ್ನು ಮಾಡುತ್ತಾ ನೀವು ನನಗೆ ಬರಿದೇ ಹಸಿದು ಕೂರುವ ಅಗತ್ಯವಿಲ್ಲ ಎನ್ನುತ್ತದೆ ಕುರ್‌ಆನ್. ಆದುದರಿಂದ, ಶಿವಸೇನೆಯ ಸಂಸದ ತಾನು ಬಲವಂತವಾಗಿ ಒಬ್ಬ ಉಪವಾಸಿಗನ ಬಾಯಿಗೆ ರೊಟ್ಟಿ ತುರುಕಿ ಆತನ ಉಪವಾಸವನ್ನು ಭಂಗಪಡಿಸಬಲ್ಲೆ ಎಂದು ಭಾವಿಸುವುದು ಆತನ ಮೂರ್ಖತನ ಮಾತ್ರ. ಆದರೆ ಇಲ್ಲಿ ನಾವು ಚರ್ಚೆ ನಡೆಸಬೇಕಾಗಿರು ವುದು ಜನಪ್ರತಿನಿಧಿಯೊಬ್ಬನ ಮನಸ್ಥಿತಿಯ ಬಗ್ಗೆ. ಈ ದೇಶವನ್ನು ಮುನ್ನಡೆಸಬೇಕಾದ ಸಂಸದನೊಬ್ಬ ಸಾರ್ವಜನಿಕವಾಗಿ ನಡೆದುಕೊಂಡ ರೀತಿ ನಿಜಕ್ಕೂ ದೇಶ ತಲೆತಗ್ಗಿಸುವಂತಹದು. ತನ್ನ ಕೃತ್ಯಕ್ಕೆ ಸಂಸದ ಯಾವುದೇ ಸಮರ್ಥನೆಯನ್ನು ನೀಡಿ ಜಾರಿಕೊಳ್ಳಬಹುದು ಆದರೆ, ಆತನ ಗೂಂಡಾಗಿರಿ ಸಂಸತ್‌ಗೆ, ಸಂವಿಧಾನಕ್ಕೆ ತೋರಿಸಿದ ಅಗೌರವವಾಗಿದೆ. ಇನ್ನೊಂದು ಧರ್ಮದ ನಂಬಿಕೆಯನ್ನು ಅವಮಾನಿಸುವ ಪ್ರಯತ್ನದಲ್ಲಿ ಆತ ಸ್ವತಃ ತನ್ನ ಧರ್ಮವನ್ನೇ ಅವಮಾನಿಸಿದಂತಾಗಿದೆ.

  ಮಹಾರಾಷ್ಟ್ರ ಸದನದಲ್ಲಿ ಮರಾಠಿ ಶೈಲಿಯ ಆಹಾರ ದೊರಕುವುದಿಲ್ಲ ಅಥವಾ, ಕ್ಯಾಂಟೀನ್ ಕಳಪೆ ಆಹಾರ ಒದಗಿಸುತ್ತಿದೆ ಎನ್ನುವ ಸಂಸದರ ದೂರು ಯಾವ ಕಾರಣಕ್ಕೂ ಅವರ ಕೃತ್ಯವನ್ನು ಸಮರ್ಥಿಸುವುದಿಲ್ಲ. ಸಾಮಾನ್ಯ ನೌಕರನ ದಬ್ಬಾಳಿಕೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವೂದೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರ ನಿಜವಾದ ಕಾಳಜಿ ಆಹಾರದ ಕುರಿತಂತೆಯೇ ಇದ್ದಿದ್ದರೆ, ಸಂಸದರು ವ್ಯವಹರಿಸಬೇಕಾಗಿರುವುದು ಸಾಮಾನ್ಯ ನೌಕರನ ಜೊತೆಗಲ್ಲ. ಆಹಾರದ ಗುಣಮಟ್ಟ ಇತ್ಯಾದಿಗಳನ್ನು ನಿರ್ಧರಿಸುವ ವಿಭಾಗವೇ ಬೇರೆ ಇದೆ. ಅದನ್ನು ಮುನ್ನಡೆಸುವುದಕ್ಕೆ ಸಂಬಂಧ ಪಟ್ಟ ಆಯುಕ್ತರಿದ್ದಾರೆ. ಒಬ್ಬ ಸಂಸದ ಆಯುಕ್ತರೊಂದಿಗೆ ಮಾತನಾಡಿ ಆಹಾರದ ಬದಲಾವಣೆಯ ಕುರಿತಂತೆ ಚರ್ಚಿಸಬೇಕೇ ಹೊರತು ಒಬ್ಬ ಸಾಮಾನ್ಯ ನೌಕರನ ಬಾಯಿಗೆ ಚಪಾತಿ ತುರುಕಿಸುವ ಮೂಲಕ ಅಲ್ಲಿ ಬದಲಾವಣೆ ಮಾಡಲು ಹೊರಡುವುದಲ್ಲ. ಇಲ್ಲಿ ಸಂಸದನೊಬ್ಬನ ವಿಕೃತ ಮನಸ್ಥಿತಿಯಷ್ಟೇ ಬಯಲಾಗಿದೆ. ‘‘ತನಗೆ ಆತ ಮುಸ್ಲಿಮನೆಂದು ಗೊತ್ತಿರಲಿಲ್ಲ’’ ಎಂದು ಸಂಸದ ಹೇಳುತ್ತಿದ್ದಾರೆ. ಆದರೆ ಸಂಸದ ಮಹಾರಾಷ್ಟ್ರ ಸದನಕ್ಕೆ ಹೊಸಬರೇನೂ ಅಲ್ಲ. ಜೊತೆಗೆ ಸೂಪರ್ ವೈಸರ್‌ನ ಅಂಗಿಯ ಮೇಲೆ ಆತನ ಹೆಸರನ್ನು ಬರೆಯಲಾಗಿತ್ತು. ಸಂಸದರ ಆಕ್ರೋಶಕ್ಕೆ ಆ ಹೆಸರಿನ ಹಿನ್ನೆಲೆಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಮುಸ್ಲಿಮನಾಗಿರಲಿ, ಆಗದೇ ಇರಲಿ. ಇನ್ನೊಬ್ಬ ನೌಕರನೊಂದಿಗೆ ಸಂಸದ ವರ್ತಿಸುವ ರೀತಿ ಅದು ಅಲ್ಲವೇ ಅಲ್ಲ. ಆಹಾರವನ್ನು ಇನ್ನೊಬ್ಬನ ಬಾಯಿಗೆ ಬಲವಂತವಾಗಿ ತುರುಕಲು ಯತ್ನಿಸು ವುದು ಆತನ ಗೂಂಡಾವರ್ತನೆಗೆ ಸಾಕ್ಷಿಯಾಗಿದೆ. ಒಂದು ವ್ಯವಸ್ಥೆಯನ್ನು ಒಬ್ಬ ಸಂಸದ ಆ ಮಾರ್ಗದಲ್ಲಿ ಸರಿಪಡಿಸಲು ಹೊರಡುವುದು ಕಾನೂನಿನ ಅಣಕವಾಗಿದೆ. ಸಂಸದನ ವರ್ತನೆಯ ಬಗ್ಗೆ ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಆತನ ವರ್ತನೆ ಸರಿಯಾದುದಲ್ಲ ಎಂದಿದ್ದಾರೆ. ಇಡೀ ಪ್ರಕರಣ ಪೂರ್ವನಿಯೋಜಿತ ಎನ್ನುವುದಕ್ಕೆ ಸದನದಲ್ಲಿ ಬಿಜೆಪಿ ಸದಸ್ಯರು ನಡೆಸಿದ ನಡೆದ ಗದ್ದಲವೂ ಸಾಕ್ಷಿ ನುಡಿಯುತ್ತದೆ. ವಿಷಯ ವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ, ಗಲಾಟೆ ಎಬ್ಬಿಸಿದ ಕೆಲವು ಬಿಜೆಪಿ ನಾಯಕರು ‘‘ಇದು ಹಿಂದೂಸ್ತಾನ. ಪಾಕಿಸ್ತಾನವಲ್ಲ’’ ಎಂದು ಅರಚಿದ್ದಾರೆ. ಅಂದರೆ ಇದು ಹಿಂದೂಸ್ತಾನ ಎನ್ನುವುದನ್ನು ನೆನಪಿಸುವುದಕ್ಕೋಸ್ಕರ ನೌಕರನ ಬಾಯಿಗೆ ರೊಟ್ಟಿಯನ್ನು ತುರುಕಿಸುವ ಯತ್ನ ನಡೆಯಿತೆ? ಎಂಬ ಪ್ರಶ್ನೆ ತಲೆಯೆತ್ತುತ್ತದೆ. ಬಿಜೆಪಿಗರ ಈ ನಡವಳಿಕೆಯನ್ನು ಸಚಿವ ವೆಂಕಯ್ಯ ನಾಯ್ಡು ಬಳಿಕ ಖಂಡಿಸಿದರು. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಸಂಸದನ ನಡವಳಿಕೆಯ ಬಗ್ಗೆ ಸರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ವಿಫಲವಾಯಿತು. ಸರಿಯಾದ ಸಾಕ್ಷಾಧಾರಗಳಿಲ್ಲ ಎಂಬ ನೆಪವೊಡ್ಡಿ ಈ ಸೂಕ್ಷ್ಮ ಪ್ರಕರಣದಿಂದ ಜಾರಿಕೊಂಡಿತು.

 ತನ್ನ ವರ್ತನೆಯಿಂದ ಶಿವಸೇನೆಯ ಸಂಸದ, ತನ್ನ ಸ್ಥಾನದ ಘನತೆಯನ್ನು ಪಾತಾಳಕ್ಕಿಳಿಸಿದ್ದಾರೆ ಎನ್ನುವುದನ್ನು ಸರಕಾರ ಗಮನದಲ್ಲಿಟ್ಟುಕೊಂಡು, ಶಿವಸೇನೆಯ ಸಂಸದರ ಗೂಂಡಾಗಿರಿ ವರ್ತನೆಗೆ ಕಡಿವಾಣ ಹಾಕಬೇಕಾಗಿದೆ. ಇಂದು ನಾವು ರೊಟ್ಟಿಯನ್ನು ತುರುಕಬೇಕಾಗಿರುವ ಜನರು ಬೇರೆಯೇ ಇದ್ದಾರೆ. ಈ ದೇಶದಲ್ಲಿ ಅಪೌಷ್ಟಿಕತೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಈ ದೇಶದಲ್ಲಿ ತುಂಡು ಚಪಾತಿಗಾಗಿ ಹಪಹಪಿಸುವ ಕೋಟ್ಯಂತರಬಾಯಿಗಳಿವೆ. ತಮ್ಮ ಬಾಯಿಗೆ ಯಾರಾದರೂ ರೊಟ್ಟಿ, ಚಪಾತಿಗಳನ್ನು ತುರುಕಿ ಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ಅಂತಹ ಬಾಯಿಗಳನ್ನು ಗುರುತಿಸಿ, ಅವರ ಬಾಯಿಗೆ ಚಪಾತಿಗಳನ್ನು ತುರುಕಿಸುವ ಕೆಲಸದ ಕಡೆಗೆ ಸಂಸದರು ಗಮನಕೊಡಬೇಕು. ಅದರಿಂದ ಸಂಸದನ ಘನತೆಯೂ ಹೆಚ್ಚುತ್ತದೆ, ದೇಶಕ್ಕೂ ಒಳಿತಾಗುತ್ತದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...