Sunday, July 20, 2014

ಅತ್ಯಾಚಾರ: ವಿರೋಧಾಭಾಸ ಬೇಡವಾರ್ತಾಭಾರತಿ ಸಂಪಾದಕೀಯ


rape protest

ಭಾರತ ವಿರೋಧಾಭಾಸಗಳ ಗೂಡು. ಈ ದೇಶ ಹೆಣ್ಣನ್ನು ಪೂಜನೀಯಳು ಎಂದು ಒಂದೆಡೆ ಹೇಳುತ್ತದೆ. ಆದರೆ, ಯಾವುದೇ ದೇಶ ನಡೆಸುವುದಕ್ಕಿಂತ ಅತ್ಯಂತ ಕ್ರೂರವಾಗಿ ಮತ್ತು ನಿಕೃಷ್ಟವಾಗಿ ಹೆಣ್ಣನ್ನು ನಡೆಸಿಕೊಂಡಿರುವುದು ಭಾರತವೇ ಆಗಿದೆ. ವಿಧವೆ, ಮುಂಡೆ, ಬಂಜೆ ಮೊದಲಾದ ವಿಕೃತ ಶಬ್ದಗಳು ಹುಟ್ಟಿರುವುದು ಇದೇ ನೆಲದಲ್ಲಿ. ಆಧುನಿಕತೆ ಈ ದೇಶವನ್ನು ಬೆಳಗಬಹುದು, ಹೆಣ್ಣಿಗೆ ಹೊಸ ಬದುಕನ್ನು ನೀಡಬಹುದು ಎನ್ನುವ ಭಾವನೆ ಈ ದೇಶದ ಚಿಂತಕರಲ್ಲಿತ್ತು. ಆದರೆ, ಆಧುನಿಕತೆ ಈ ದೇಶದಲ್ಲಿ ಹೆಣ್ಣಿಗೆ ಇನ್ನಷ್ಟು ಅಭದ್ರತೆಯನ್ನು ಸೃಷ್ಟಿಸುತ್ತಿದೆ. ಹೆಣ್ಣು ಹೆಚ್ಚು ಕಲಿತಷ್ಟು, ಹೆಚ್ಚು ಆಧುನಿಕಳಾದಷ್ಟು ಆಕೆಯನ್ನು ದಮನಿಸಲು ಪುರುಷ ಪ್ರಧಾನ ವ್ಯವಸ್ಥೆ ಬೇರೆ ಬೇರೆ ಅಸ್ತ್ರಗಳನ್ನು ಹುಡುಕುತ್ತಿದೆ. ಅವುಗಳಲ್ಲಿ ಮುಖ್ಯವಾದುದು ಅತ್ಯಾಚಾರ. ವಿಪರ್ಯಾಸವೆಂದರೆ, ಈ ಅತ್ಯಾಚಾರದ ಹೊಣೆಯನ್ನು ಮತ್ತೆ ಮಹಿಳೆಯ ತಲೆಗೇ ಕಟ್ಟಲು ಹೊರಡುತ್ತಿರುವುದು. ದಿಲ್ಲಿಯಲ್ಲಿ ಅತ್ಯಾಚಾರ ಪ್ರಕರಣ ಭಾರೀ ಸುದ್ದಿಯಾದಾಗ, ಆರೆಸ್ಸೆಸ್‌ನ ಮುಖಂಡರು, ವಿವಿಧ ಧಾರ್ಮಿಕ ನಾಯಕರು ಹೇಳಿದ ಮಾತು, ಹೆಣ್ಣಿನ ಕುರಿತಂತೆ ಈ ದೇಶದ ಮನಸ್ಥಿತಿಯನ್ನು ಎತ್ತಿ ಹಿಡಿಯಿತು. ಅಸಾರಾಮ್ ಬಾಪು ಎಂಬ ಎಡಬಿಡಂಗಿಯೊಬ್ಬ ಅತ್ಯಾಚಾರಕ್ಕೆ ಹೆಣ್ಣನ್ನು ಹೊಣೆ ಮಾಡಿದ ಕೆಲವೇ ತಿಂಗಳಲ್ಲಿ ಅತ್ಯಾಚಾರ ಪ್ರಕರಣದಲ್ಲೇ ಜೈಲು ಸೇರಿದುದು ವಿಪರ್ಯಾಸ.

  ಈಗ ಮಾಧ್ಯಮಗಳಲ್ಲಿ ಅತ್ಯಾಚಾರ ಪ್ರಮುಖ ಸುದ್ದಿಯಾಗಿ ಪ್ರಕಟವಾಗುತ್ತಿದೆ. ಹಿಂದೆ ಈ ದೇಶದಲ್ಲಿ ಅತ್ಯಾಚಾರ ಕಡಿಮೆ ಇತ್ತು. ಇತ್ತೀಚೆಗೆ ಜಾಸ್ತಿಯಾಗಿದೆ ಎಂದು ಇದರ ಅರ್ಥವಲ್ಲ. ಇತ್ತೀಚೆಗೆ ಮಾಧ್ಯಮಗಳು ಅತ್ಯಾ ಚಾರ ಪ್ರಕರಣಗಳನ್ನು ಒಂದು ಪ್ರಮುಖ ಅಪರಾಧವಾಗಿ ನೋಡಲು ತೊಡಗಿವೆ. ಯಾವಾಗ, ಅತ್ಯಾಚಾರ ಒಂದು ಪ್ರಮುಖ ಅಪರಾಧ ಎನ್ನುವುದು ಮಾಧ್ಯಮ ಗಳಿಗೆ ಹೊಳೆಯಿತೋ, ಯಾವಾಗ ಅತ್ಯಾಚಾರ ಪ್ರಕರಣಗಳು ಮುಖಪುಟದಲ್ಲಿ ಸ್ಥಾನವನ್ನು ಪಡೆದವೋ ಆ ಬಳಿಕವಷ್ಟೇ ಅತ್ಯಾಚಾರ ಚರ್ಚೆಯ ವಸ್ತುವಾಯಿತು. ಆಡಳಿತ ನಡೆಸು ವವರಿಗೆ ತಲೆನೋವಾಗಿ ಪರಿಣಮಿಸಿತು. ಎಲ್ಲರಿಗೂ ಗೊತ್ತಿರುವಂತೆ ಈ ದೇಶದಲ್ಲಿ ಅತ್ಯಾಚಾರ ಅತಿ ಹೆಚ್ಚು ಸುದ್ದಿಯಾದುದು, ನಿರ್ಭಯಾ ಪ್ರಕರಣದಲ್ಲಿ. ದಿಲ್ಲಿಯ ನಗರದಲ್ಲಿ ವಿದ್ಯಾವಂತೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣ, ಮಾಧ್ಯಮಗಳಿಗೆ ಮುಖ್ಯವಾಗಿ ಕಾಣಿಸಲು ಹಲವು ಕಾರಣಗಳಿದ್ದವು. ಒಂದು ಆಕೆ ವಿದ್ಯಾವಂತೆ, ಮೇಲ್ವರ್ಗಕ್ಕೆ ಸೇರಿದ ತರುಣಿ. ಎರಡನೆಯದು, ದಿಲ್ಲಿಯಲ್ಲಿ ಆಗ ನಿಷ್ಕ್ರಿಯ ಕಾಂಗ್ರೆಸ್ ಸರಕಾರವಿತ್ತು. ಮತ್ತು ಅದರ ವಿರುದ್ಧ ಕೇಜ್ರಿವಾಲ್ ಸೇರಿದಂತೆ ಬೇರೆ ಬೇರೆ ಜನರು ಬೇರೆ ರೀತಿಯಲ್ಲಿ ಹೋರಾಟಕ್ಕಿಳಿದಿದ್ದರು. ಅವರೆಲ್ಲರ ಜೊತೆಗೆ ಮಾಧ್ಯಮಗಳು ನಿಂತಿದ್ದವು. ಈ ಪಕ್ಷಗಳಿಗೆ ಅತ್ಯಾಚಾರವನ್ನು ಅಸ್ತ್ರವಾಗಿ ಕೊಟ್ಟು ದಿಲ್ಲಿಯನ್ನು ಮಾಧ್ಯಮಗಳು ಅಲುಗಾಡಿಸಿದವು. ಇಲ್ಲಿ, ಹೆಣ್ಣಿನ ಸಂಕಟ, ನೋವು ಇತ್ಯಾದಿಗಳು ಎಷ್ಟರ ಮಟ್ಟಿಗೆ ಮುನ್ನೆಲೆಗೆ ಬಂದವು ಎನ್ನುವುದು ಅನಂತರದ ಮಾತು. ಯಾವ ಕಾರಣವೇ ಇರಲಿ, ಒಟ್ಟಿನಲ್ಲಿ ಅತ್ಯಾಚಾರ ಸಮಾಜದ ಒಂದು ಭಯಾನಕ ಪಿಡುಗು ಎನ್ನುವುದು ಮೊತ್ತ ಮೊದಲಾಗಿ ಟಿವಿ ಮಾಧ್ಯಮಗಳಿಗೆ ಮನವರಿಕೆ ಯಾಯಿತಲ್ಲ, ಅದಕ್ಕಾಗಿ ನಾವು ಸಂತೋಷ ಪಡಬೇಕು.


 ಈ ದೇಶದಲ್ಲಿ ಅತ್ಯಾಚಾರ ಮುಖ್ಯ ಸುದ್ದಿಯಾಗಬೇಕಾದರೆ, ಅದಕ್ಕಾಗಿ ಜನ ಬೀದಿಗಿಳಿಯಬೇಕಾದರೆ ಹಲವು ಮಾನದಂಡ ಗಳಿವೆ. ಮುಖ್ಯವಾಗಿ ಅತ್ಯಾಚಾರ ಮಾಡಿದವನು ಮತ್ತು ಅತ್ಯಾಚಾರಕ್ಕೊಳಗಾದವಳು ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರೆ ಅದು ತಕ್ಷಣ ಪ್ರಕೋಪಕ್ಕೆ ತಿರುಗುತ್ತದೆ. ಇಲ್ಲವಾದರೆ ಆ ಸುದ್ದಿಯ ಕುರಿತಂತೆ ಸ್ವಾರಸ್ಯವಿರುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಕರ್ನಾಟಕದ ಕರಾವಳಿಯಲ್ಲಿ ನಡೆದ ‘ಸಯನೈಡ್ ಮೋಹನ ನಡೆಸಿದ ಸರಣಿ ಅತ್ಯಾಚಾರ ಮತ್ತು ಕೊಲೆಗಳು’. ಆರಂಭದಲ್ಲಿ ಈ ಅತ್ಯಾಚಾರ, ಕೊಲೆಗಳ ಬಗ್ಗೆ ಸಂಘಪರಿವಾರಕ್ಕೆ, ಮಾಧ್ಯಮಗಳಿಗೆ ತೀವ್ರ ಆಸಕ್ತಿಯಿತ್ತು. ಸಂಘಪರಿವಾರದ ವಿವಿಧ ಸಂಘಟನೆಗಳು ‘ಲವ್ ಜಿಹಾದ್’ ನಡೆಯುತ್ತಿದೆ, ಹಿಂದೂ ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ, ಅವರ ಕೊಲೆಗಳು ನಡೆಯುತ್ತಿವೆ ಎಂದೆಲ್ಲ ಬೀದಿ ಗಿಳಿದು ಪ್ರತಿಭಟನೆ ನಡೆಸಿದವು. ಬಳಿಕ ಮೋಹನ್ ಎಂಬಾತನ ವಿಕೃತ ಮುಖ ಹೊರಗೆ ಬಿತ್ತು. 20ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿ, ಸಯನೈಡ್ ಮೂಲಕ ಕೊಂದು ಹಾಕಿದ್ದ. ನಿಜವಾದ ಆರೋ ಪಿಯ ಧರ್ಮ ಯಾವುದು ಎನ್ನುವುದು ಗೊತ್ತಾ ದಾಕ್ಷಣ ಸಂಘಟನೆಗಳು ಬಾಯಿ ಮುಚ್ಚಿ ಕೂತವು. ಇನ್ನೊಂದು ಮುಖ್ಯ ಮಾನದಂಡ ಅತ್ಯಾಚಾರ ನಗರದಲ್ಲಿ ನಡೆದಿರಬೇಕು. 


ಗ್ರಾಮೀಣ ಪ್ರದೇಶದಲ್ಲಿ ನಡೆದರೆ ಅದು ಮಾಧ್ಯಮಗಳಿಗೆ ಸುದ್ದಿಯೆನ್ನಿ ಸುವುದೇ ಇಲ್ಲ. ಬೆಂಗಳೂರಿನಲ್ಲಿ ಅತ್ಯಾಚಾರ ನಡೆದಾಕ್ಷಣ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಯುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಈ ವಿಕಾರಗಳ ಕಡೆಗೆ ನಮ್ಮ ಸರಕಾರ ಎಷ್ಟು ಗಮನ ಹರಿಸಿದೆ? ದಲಿತ ವರ್ಗಕ್ಕೆ, ಬಡವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುವುದು ವ್ಯವಸ್ಥೆಯ ಹಕ್ಕು ಎಂದು ತಿಳಿದಿವೆಯೇ ಮೀಡಿಯಾಗಳು? ಇಂದು ಕರ್ನಾಟಕದಲ್ಲಿ ಅತ್ಯಾಚಾರದ ಕುರಿತಂತೆ ಸದನದಲ್ಲಿ ಬಿಜೆಪಿ ನಾಯಕರು ಗದ್ದಲ ಎಬ್ಬಿಸುತ್ತಿದ್ದಾರೆ. ಇದೇ ನಾಯಕರಲ್ಲಿ ‘ಗುಜರಾತ್‌ನಲ್ಲಿ, ಮುಝಫ್ಫರ್‌ನಗರದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರಗಳ’ ಕುರಿತಂತೆ ಒಮ್ಮೆ ಕೇಳಿ ನೋಡಿ. ಅವುಗಳನ್ನು ಅವರು ನೇರವಾಗಿ ಸಮರ್ಥಿಸಿಕೊಳ್ಳುತ್ತಾರೆ. ಅತ್ಯಾಚಾರ ನಡೆಸಿದವರಿಗೆ, ಅದಕ್ಕೆ ಕುಮ್ಮಕ್ಕು ಕೊಟ್ಟವರಿಗೆ ಶಿಕ್ಷೆಯಾಗಬೇಡವೇ? ಎಂದು ಕೇಳಿ ನೋಡಿ. ಅವರು ಏಕಾಏಕಿ ವೌನ ತಾಳುತ್ತಾರೆ. ಇದು ಗುಜರಾತ್, ಮುಝಫ್ಫರ್ ನಗರಕ್ಕೇ ಸೀಮಿತವಾಗಬೇಕಾಗಿಲ್ಲ. ಖೈರ್ಲಾಂಜಿಯಲ್ಲಿ ದಲಿತ ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಾರೆ ಎಂಬ ಒಂದೇ ಆಕ್ರೋಶದಿಂದ ಅವರ ಮೇಲೆ ಎಸಗಿದ ಬರ್ಬರ ಅತ್ಯಾಚಾರದ ಕಳಂಕ ಅದೆಷ್ಟು ಶತಮಾನ ಕಳೆದರು ತೊಳೆದು ಹೋಗುವಂತಹದ್ದಲ್ಲ. ಅತ್ಯಾಚಾರ ಕ್ಕೊಳಗಾದವರು ಯಾವ ವರ್ಗಕ್ಕೆ ಸೇರಿದವರು, ಯಾವ ಧರ್ಮ, ಜಾತಿಗೆ ಸೇರಿದವರು, ಯಾವ ಪ್ರದೇಶಕ್ಕೆ ಸೇರಿದವರು, ಅತ್ಯಾಚಾರ ಎಸಗಿದವನು ಯಾವ ಧರ್ಮ, ವರ್ಗಕ್ಕೆ ಸೇರಿದವನು ಎಂದೆಲ್ಲ ಲೆಕ್ಕ ಹಾಕಿ ನಡೆಸುವ ಪ್ರತಿಭಟನೆ ಆಷಾಢಭೂತಿತನದಿಂದ ಕೂಡಿರುತ್ತದೆ. ಮೊತ್ತ ಮೊದಲು ಈ ವಿರೋಧಾಭಾಸಗಳಿಂದ ವ್ಯವಸ್ಥೆ ಹೊರ ಬರಬೇಕಾಗಿದೆ. 

ಹಾಗೆಯೇ ಹೆಣ್ಣು ಮಕ್ಕಳ ಕುರಿತಂತೆ ನಮ್ಮ ಮನಸ್ಥಿತಿಯನ್ನು, ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕು. ಆಕೆಯನ್ನು ಒಂದು ಸರಕಿನಂತೆ ನೋಡುವ, ಭೋಗದ ವಸ್ತುವಂತೆ ಬಿತ್ತರಿಸುವ ಮಾಧ್ಯಮಗಳ ನಿಲುವೂ ಬದಲಾಗಬೇಕು. ಒಂದು ದೇಶ ಹೇಗಿದೆ ಎನ್ನುವುದನ್ನು ಆ ದೇಶದ ಹೆಣ್ಣು ಮಕ್ಕಳು ತಿಳಿಸುತ್ತಾರೆ. ಅಲ್ಲಿನ ಹೆಣ್ಣು ಮಕ್ಕಳು ಸುಶಿಕ್ಷಿತರಾಗಿ, ಆತ್ಮಾಭಿಮಾನದಿಂದ ಬದುಕುತ್ತಿದ್ದಾರೆ ಎಂದಾದರೆ ಆ ದೇಶವೂ ಆತ್ಮಾಭಿಮಾನದಿಂದ ಬದುಕುತ್ತಿದೆ ಎಂದರ್ಥ. ಈ ನಿಟ್ಟಿನಲ್ಲಿ ನಾವು ಅತ್ಯಾಚಾರದಂತಹ ಪಿಡುಗಿನ ವಿರುದ್ಧ ಹೆಚ್ಚು ಪ್ರಾಮಾಣಿಕರಾಗಿ ಹೋರಾಟ ನಡೆಸುವ ಅಗತ್ಯವಿದೆ.


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...