Sunday, July 13, 2014

ಬಾನು ಮುಷ್ತಾಕ್ ಅವರ ನಾಲ್ಕು ಕವಿತೆಗಳು


ಉಗುರುಗಳು 

 

ಹಗಲು ಇರುಳು ನನಗದೇ ಕಾಯಕ
ಹೇಗೆ ಬೆಳೆಸಬೇಕು ಉಗುರುಗಳ
ಎಷ್ಟು ಉದ್ದ, ಎಷ್ಟು ಚೂಪು
ಯಾವ ಆಕೃತಿ?

ಅವು ಎಲ್ಲಿ ನಗಬೇಕು ಅರಳ
ಬೇಕೆಲ್ಲಿ, ವಯ್ಯಾರದಲಿ
ನಾಚಿ ಮುದುಡುವಾಗ
ಯಾವ ಭಂಗಿ?

ಯಾವ ಬಣ್ಣ ನಿಮ್ಮ ಮುಂದೆ
ಯಾವುದ ಬಳಿಯಲಿ ನಿಮ್ಮ ಬೆನ್ನ
ಹಿಂದೆ ಸುತ್ತಮುತ್ತ ಸುಳಿವಾಗ
ಯಾವ ಪ್ರಕೃತಿ?

ನಿಮ್ಮನ್ನು ನೇವರಿಸಲೆಂತಹ ಕೋನ
ಆರತಿಯೆತ್ತಲೆಂತಹ ಬೊಗಸೆ,
ನೆಟಿಗೆ ತೆಗೆಯುವಾಗ
ಯಾವ ವಿಸ್ಮøತಿ?

ಕಿಲುಬು ಹಿಡಿದ ನಿಮ್ಮ ಪಾತ್ರೆಗಳ
ಮುಸುರೆ ತಿಕ್ಕಿ, ಮರಿ ಮಾಡುತಿರುವ
ಉಗುರು ಸುತ್ತುಗಳ ನಂಜು
ಎಷ್ಟು ಸರಿ?


ಕೂಡಿ ಕಳೆವ ಲೆಕ್ಕಾಚಾರಗಳ
ನಡುವೆ ಅನಾಥ ಸಂಬಂಧಗಳ
ಬಾಡಿಗೆ ಆಕ್ರಂದನ
ಯಾವ ಪರಿ?


                      

ಕಿನ್ನರಿ 

 

 

 
       

      
        ಬಾಲ್ಯ ಕಾಲದ ಕಿನ್ನರಿಯು ನವಿಲುಗರಿಯ ಬಣ್ಣಗಳನು
        ಎರಚಾಡುತ್ತ , ಬೆಳ್ಳಿಯ ಅಂಚು ಬಂಗಾರದ ಚುಕ್ಕಿಯ
        ನೊರೆಯಂತಹ ಬಿಳಿಯ ಗೌನಿನಲಿ ಅಚಾನಕವಾಗಿ
        ಬಂದು ಎದುರಿಗೆ ಕುಳಿತಾಗಸಂತೋಷವೆನಿಸಿದರೂ

        ಅವಳ ಕಣ್ಣಂಚಿನಲಿ ಮಡುಗಟ್ಟಿದ್ದು ತೊಟ್ಟಿಕ್ಕುವಂತಿತ್ತು
        ಮೊದಲಿನಂತಾಗಿದ್ದರೆ ನಾನೂ ಅಳ ಬಹುದಿತ್ತು.
        ಆದರೆ ಇಂದು. . .. .

        ಕರಿಕೋಟು,ಬಿಳಿ ಬ್ಯಾಂಡು ಮೇಲೆ ಧಿಮಾಕು
        ನೆತ್ತಿಯವರೆಗೇರಿದ್ದ ತಿರುಗು ಕುರ್ಚಿಯ ಸನ್ನದು
         ಪೆನ್ಸಿಲನು ಬೆರಳುಗಳಲಾಡಿಸುತ ಹೇಗೆ
         ಸಂಬೋಧಿಸುವುದೆಂದುಲೆಕ್ಕಚಾರ ಮಾಡುತಾ
         ಕ್ಯಾಷುಯೆಲ್ಲಾಗಿ “ಯೆಸ್ ಮೇಡಮ್’’ ಎಂದೆ

         ನೋಡನೋಡುತ್ತಿದ್ದಂತೆಯೇ ಅವಳು
        ಅಣೆಕಟ್ಟು ಮುರಿದ ಪ್ರವಾಹದಂತೆ ಭೋರ್ಗರೆದಳು
         ನಾನೇನು ಮಾಡಿದೆ ? ಗಾಬರಿಯಾದರೂ ತೋರದೆ
        ಒಂಚೂರು ಆತ್ಮೀಯತೆಯಿಂದ

        ಗಂಡ ತೊರೆದಿರುವನೇ,ಡೈವೋರ್ಸ್
        ಮೇನ್‍ಟೇನೆನ್ಸ್ ,ಡೌರಿ ಕೇಸ್ ?
        ಅವಳಿಗೆ ಪದಗಳನ್ನೊದಗಿಸಿದೆ .
        ತೀರಾ ಸೋತು ಗೌನನ್ನು
         ಕಣ್ಣಿಗೊತ್ತಿಕೊಂಡುಬಿಕ್ಕಳಿಸಿದಳು

        ಈಗ ಮಾತ್ರ ಇಡೀ ಆಫೀಸ್ ಮೌನ ಸಿಪಿಸಿ
        ಸಿಆರ್‍ಪಿಸಿ ಡೌರಿ ಆಕ್ಟ್‍ಗಳೆಲ್ಲಾ ನಿಂತಲ್ಲಿಯೇ
        ಬಣ್ಣ ಕಳೆದು ಮುದುರಿಕೊಂಡವು.ನೀರವತೆಯ
        ಮಧ್ಯೆ ಕ್ಷೀಣ ದನಿಯಲಿ ನುಡಿದೆ `ಫೀ’ಬಗ್ಗೆ
        ಚಿಂತೆ ಬೇಡ. ನಿ ನನ್ನ ಬಾಲ್ಯ ಸಖಿ
        
        ಈ ಪರಿಚಯದಿಂದಾಕೆ ದೀಪದಂತೆ ಮಿನುಗಿದಳು
        `ಹಾಗಿದ್ದರೆ ’ಸಂಕೋಚದಿಂದ ನುಡಿದಳು ‘ನನ್ನೊಡನೆ
         ಆಟವಾಡಲು ಸಾಧ್ಯವೇ’ ನನಗೆ ಶಾಕ್ ಆದಂತಾಯಿತು
         ಅವಳು ಕಾದಳು. . ..ಕಾದಳು

        ತನ್ನ ಗೌನನೆತ್ತಿ ಪುಟ್ಟ ಗುಲಾಬಿ ಪಾದಗಳನು
        ಮಿನುಗಿಸುತಾ ನಿಧಾನವಾಗಿ ಮೆಟ್ಟಲಿಳಿದು
         ಕರಗಿದಳು ಬಹುಶಃ ನನ್ನ ಅಪರಿಚಿತ
        ಕಣ್ಣುಗಳು ಹೆದರಿಸಿರಬೇಕು ಅವಳನುಅಮ್ಮನ ಸೀರೆ

 

            

       ಅಮ್ಮ
        ಆಗ ಹೀಚು ಮೊಗ್ಗಾಗಿದ್ದಳಂತೆ
        ಕುಂಟಬಿಲ್ಲೆ ಆಡಿ ಆಗ ತಾನೇ ಮರಳಿದ್ದಳಂತೆ
        ಬೆವರಿನ್ನೂ ಹಣೆಯ ಮೇಲಿಂದೊಣಗಿರಲಿಲ್ಲ
        ಮಂಡಿಯ ಮೇಲಿನ ಗಾಯವಿನ್ನೂ ಮಾಯ್ದಿರಲಿಲ್ಲವಂತೆ

        ಹಣ್ಣಾದ ಹಾಗಲಕಾಯಿ ಬೀಜದ ಉಜ್ವಲ ಕೆಂಪು
        ಬಣ್ಣದ ಸೀರೆಯಲ್ಲಿ ಸುತ್ತಿ,ಮಾವ ಅವಳನೆತ್ತಿ
        ನೆಹರು ಕಾಲರಿನ ಗುಲಾಬಿಯಂತೆ ಅಪ್ಪನಿಗೆ ಅಂಟಿಸಿದಾಗ
        ಅವಳಿಗಿಂತ ಸೀರೆಯೇ ಭಾರವಾಗಿತ್ತಂತೆ

        ಗುಲ್‍ಮೊಹರಿನ ಕಿಡಿಗಳು ಅರಳಿದಾಗ ವಸಂತ ಕಿರಣಗಳು
        ಕುಲುಕುಲು ನಕ್ಕಾಗ ಅವಳು ಏನೋ ನೆನಪಾದಂತೆ
        ಸೀರೆಯ ಹರವುತ್ತಾ ಹುಡುಕುವಳು ಮರುಭೂಮಿಯಲಿ
        ಒರತೆಯ ;ಉಡಲಿಲ್ಲ ಯಾರೊಬ್ಬರ ಮದುವೆ ಮುಂಜಿಗೂ

        ಒಡಲ ತುಂಬಾ ಅಡ್ಡಡ್ಡ-ಉದ್ದುದ್ದ ಗೆರೆಗಳು
        ಚೌಕುಳಿಯೊಳಗೆ ಬುಟ್ಟಾಗಳು ಅರಳದೇ ಅಲ್ಲಲ್ಲೇ
        ಮುದುಡಿದ ಕನಸುಗಳು ;ಸೆರಗಿನ ಸರಿಗೆಯಲ್ಲಿ
        ನೂರಾರು ವಾರೆ ಬಳ್ಳಿಗಳು ಅಪ್ಪಿ ತೊಡರಿದವೇ ?

        ತಾನು ಕುಡಿಸಿದ ಹಾಲೋ ತನ್ನೆದೆಯ ಬೆಚ್ಚನೆಯ
         ಮಿಡಿತವೋ ಎಂಬಷ್ಟು ಸಹಜ ಪ್ರೀತಿಯಿಂದ ದಾಟಿಸಲು ,
         ತೊಡಿಸಲು ನನಗೆ ಸಿದ್ಧಳಾಗಿಒಂದು ದಿನ ಬಿಡಿಸಿದಾಗ
        ಬರದ ಭೂಮಿಯ ಸೀಳುಗಳು ಅವಳ ಆತ್ಮದಂತೆ

        ಅವಳ ಹೂಮನದ ಸ್ಫಟಿಕತೆಗೆ ಸೋತು ಉಡಲು
        ಒಡ್ಡಿಕೊಂಡರೆ,ಕಣ್ಣಕೊನೆಯ ಶಲಾಕೆಯ ಅವಳು
        ಬೆರಳ ತುದಿಯಲ್ಲಿ ಕೊಸರಿ,ಅದನು ಉಂಡೆ ಮಾಡಿ
        ಚೆಂಡಾಟವಾಡುತ್ತಾ ನಾವಿಬ್ಬರೂ ನಕ್ಕಿದ್ದು ಗೆಳತಿಯರಂತೆ

ನಿರಪೇಕ್ಷ

     ಪಿ ಪಿ ಅಂದರೆ ಪಬ್ಲಿಕ್ ಪ್ರಾಸಿಕ್ಯೂಟರ್ ರವರ
     ಆಫೀಸಿನ ಆರ್ಸಿಸಿ ಮಾಳಿಗೆಯ ಮೇಲೆ
     ಒಂದು ಆಲದ ಮರ ಬಾಹುಗಳನು ಚಾಚಿ
     ಅಮ್ಮನ ಸೆರಗಿನ ಹಿಂದಿನಿಂದ  ತುಸುವೇ ಇಣುಕುವ

     ಪೋರನಂತೆ ಎಳೆ ಎಳೆಯಾದ ನಸುಗೆಂಪಿನ
     ಚಿಗುರನು ಪಲ್ಲವಿಸುತಾ ತುಂಟ ನಗೆಯ
     ಬೀರಿದಾಗ ಪರಿಚಯವಾದದ್ದುನನಗೆ
     ಎಂದಿನಿಂದಲೂ ಅಚ್ಚರಿ !

     ಅಲ್ಲಿ ನೆಟ್ಟವರಾರು ನೀರು ಹನಿಸಿದವರಾರು
    ಬೇರನು ಗಟ್ಟಿಯಾಗಿ ಹಿಡಿದವರಾರು
    ಕಾಲ ಕಾಲಕೆ ಉಣಿಸಿದವರಾರು
   ನಳ ನಳಿಸಿದಾಗ ಮೆಚ್ಚಿದವರಾರು
    
  ಇಂಥ ದುಃಸಾಹಸ ಅದಕಾದರೂ ಯಾಕೆ ಬೇಕಿತ್ತು
  ಉದ್ದಕ್ಕೂ ಚಾಚಿರುವ ನೆಲಕೆ ಕೊಡಬೇಕಿತ್ತೇ
  ಕಿಮ್ಮತು  ್ತಅಲ್ಲಿ ಬಾವಲಿ ನೇತಾಡಲು ಸಾಧ್ಯವೇ
  ಬಿಳಲು ಹರಡುವುದಾದರೂ ಎಲ್ಲಿ  ಜೋಕಾಲಿ ಕಟ್ಟುವೆ

     ಯೋಚಿಸಬೇಕಿತ್ತು ಅಂತಹ ಅನಿವಾರ್ಯವೇನಿತ್ತು
     ಬದುಕುವ ಸಂಭ್ರಮ ಪಲ್ಲವಿಸುವ ರೋಮಾಂಚನ
      ಸೃಷ್ಟಿಯ ನಿಗೂಢತೆಯ ಮೆರೆಸಬೇಕಿತ್ತೇ

     ಅಳಿಯುವ ಭಯ ಅಮರತ್ವದ ಆಕಾಂಕ್ಷೆ
     ಯಾವುದೂ ಇಲ್ಲದ  ಫಲಾಫೇಕ್ಷೆ ಇರದ
     ಬದುಕಿನ ಅದಮ್ಯ ಚೇತನ    

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...