Sunday, August 31, 2014

ದಾಬೋಲ್ಕರ್ ನೀಡಿದ ಬೆಳಕುಸನತಕುಮಾರ ಬೆಳಗಲಿ
ವಾರ್ತಾಭಾರತಿ

ಈ ದೇಶದ ಪೊಲೀಸ್ ಬೇಹುಗಾರಿಕೆ ವ್ಯವಸ್ಥೆಯ ಬಗ್ಗೆ ಒಮ್ಮೆಮ್ಮೆ ಅಚ್ಚರಿಯಾಗು ತ್ತದೆ. ಅದು ಯಾರನ್ನು ಮುಗಿಸಬೇಕೆಂದು ಗುರಿಯಿಟ್ಟು ಕೆಲಸ ಮಾಡುತ್ತದೋ ಅವರನ್ನು ಮುಗಿಸುತ್ತದೆ. ಉಗ್ರಗಾಮಿಗಳೆಂದು ಯಾರ್ಯಾರನ್ನೋ ಕತ್ತಲು ಕೋಣೆಗೆ ತಳ್ಳುತ್ತದೆ. ಕೋರ್ಟಿನಲ್ಲಿ ಆರೋಪ ಮುಕ್ತರಾಗಿ ಬರುತ್ತಾರೆಂಬ ಶಂಕೆಯ ಮೇಲೆ ಕೆಲವರನ್ನು ಎನ್‌ಕೌಂಟರ್ ಮಾಡಿ ಕೊಲ್ಲುತ್ತದೆ. ಸೆರಮನೆಗೆ ತಳ್ಳಬೇಕಾದವರನ್ನು ಸುಮ್ಮನೇ ಬಿಡುತ್ತದೆ. ಅಪರೂಪಕ್ಕೆ ಒಮ್ಮೆ ಹೇಮಂತ ಕರ್ಕರೆ ಅವರಂಥ ದಕ್ಷ ಸೆಕ್ಯುಲರ್ ಪೊಲೀಸ್ ಅಧಿಕಾರಿಗಳಿಂದಾಗಿ ಮಾಲೆಗಾಂವ್ ಬಾಂಬ್ ಸ್ಫೋಟದ ದೇಶದ್ರೋಹಿ ಪಾತಕಿಗಳು ಜೈಲು ಕಂಬಿ ಎಣಿಸುತ್ತಾರೆ.

 ಇಂಥ ಪೊಲೀಸ್ ವ್ಯವಸ್ಥೆ ಅನೇಕ ಬಾರಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಂಶಯಾಸ್ಪದವಾಗಿ ವಿಫಲವಾಗುತ್ತದೆ. ಛತ್ತೀಸ್‌ಗಡದ ಕಾರ್ಮಿಕ ನಾಯಕರಾಗಿದ್ದ ಶಂಕರ ಗುಹಾ ನಿಯೋಗಿ ಹಂತಕರನ್ನು ಪತ್ತೆ ಹಚ್ಚಲು ಪರದಾಡಿದ ಕತೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರ ನರೇಂದ್ರ ದಾಬೋಲ್ಕರ್ ಅವರನ್ನು ಕೋಮುವಾದಿ ಫ್ಯಾಸಿಸ್ಟ್ ಹಂತಕರು ಕೊಲೆ ಮಾಡಿ ಒಂದು ವರ್ಷ ಗತಿಸಿದರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸು ವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ. ಬರೀ ಪೊಲೀಸ್ ವೈಫಲ್ಯ ಮಾತ್ರವಲ್ಲ ಮಹಾರಾಷ್ಟ್ರ ಸರಕಾರದ ಲೋಪವೂ ಇದರಿಂದ ಬಟ್ಟ ಬಯಲಾಗಿದೆ. ಪುಣೆಯ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ದಾಬೋಲ್ಕರ್ ಅಭಿಮಾನಿಗಳು, ರಂಗಭೂಮಿ ಕಾರ್ಯಕರ್ತರು, ಕಲಾವಿದರು, ಕವಿಗಳು ಕಳೆದ ಆಗಸ್ಟ್ 20ರಂದು ಸಂಜೆ ಸ್ಥಳೀಯ ಓಂಕಾರೇಶ್ವರ್ ದೇವಾಲಯದ ಬಳಿ ಸಭೆ ಸೇರಿ ಕಂದಾಚಾರದ ವಿರುದ್ಧ ಹೋರಾಟ ನಡೆಸಿ ಇದೇ ಜಾಗದಲ್ಲಿ ಬಲಿದಾನ ಮಾಡಿದ ದಾಬೋಲ್ಕರ್ ಅವರಿಗೆ ಗೌರವ ಸಲ್ಲಿಸಿದರು. ‘‘ಫುಲೆ, ಶಾಹು, ಅಂಬೇಡ್ಕರ್ ಹಮ್ ಸಬ್ ಹೈ ದಾಬೋಲ್ಕರ್’’ ಎಂದು ಘೋಷಣೆ ಕೂಗು ತ್ತಿದ್ದ ಸಾವಿರಾರು ಯುವಕರು ದಾಬೋಲ್ಕರ್ ಹಂತಕರನ್ನು ಪತ್ತೆ ಹಚ್ಚುವಲ್ಲಿ ವಿಫಲಗೊಂಡ ಸರಕಾರವನ್ನು, ಪೊಲೀಸರನ್ನು ಖಂಡಿಸಿದರು. ಒಂದು ವರ್ಷದ ತನಿಖೆ ನಂತರವೂ ಅಪರಾಧಿಗಳು ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು. ದಾಬೋಲ್ಕರ್ ಹಂತಕರನ್ನು ಪತ್ತೆ ಹಚ್ಚಲು ವಿಫಲಗೊಂಡ ಮಹಾರಾಷ್ಟ್ರದ ಕಾಂಗ್ರೆಸ್- ಎನ್‌ಸಿಪಿ ಮೈತ್ರಿಕೂಟದ ಸರಕಾರ ತನಿಖೆ ಯನ್ನು ಸಿಬಿಐಗೆ ಒಪ್ಪಿಸಿತು. ಸಿಬಿಐ ತನಿಖೆ ಮುಂದುವರಿಸಿದರೂ ಪ್ರಯೋಜನ ವಾಗಲಿಲ್ಲ. ಒಬ್ಬ ಪ್ರಗತಿಪರ ಚಿಂತಕನನ್ನು , ವಿಚಾರವಾದಿ ಹೋರಾಟಗಾರನನ್ನು ಕೊಂದು ದಕ್ಕಿಸಿಕೊಂಡ ಶಕ್ತಿಗಳು ಯಾರೆಂದು ಎಲ್ಲರಿಗೂ ಗೊತ್ತಿದೆ. ಆದರೆ ಈ ಪಾತಕಿಗಳನ್ನು ಹಿಡಿದು ದಂಡಿಸುವ ಸಾಮರ್ಥ್ಯ ತನಿಖಾ ತಂಡಕ್ಕಿರ ಲಿಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ. ನರೇಂದ್ರ ದಾಬೋಲ್ಕರ್ ಅವರನ್ನು ಹತ್ಯೆ ಮಾಡಿದ ಕರಾಳಶಕ್ತಿಗಳ ಬೇರು ಅತ್ಯಂತ ಆಳವಾಗಿದೆ. ಮಂತ್ರ ತಂತ್ರಗಳ ಮೂಲಕ ಕೋಟ್ಯಂತರ ರೂ. ಕೊಳ್ಳೆ ಹೊಡೆಯುವ ಈ ಫಟಿಂಗರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ. ಕೋಮುವಾದಿ ಶಕ್ತಿಗಳ ಬೆಂಗಾವಲಿದೆ. ‘‘ಇದನ್ನು ತನಿಖೆಯ ವೈಫಲ್ಯ ಎನ್ನುವ ಬದಲಾಗಿ ಯಾರನ್ನೋ ರಕ್ಷಿಸಲು ಪೊಲೀಸರು ಯತ್ನಿಸುತ್ತಿದ್ದಾರೆ’’ ಎಂದು ದಾಬೋಲ್ಕರ್ ಪುತ್ರ ಹಮೀದ್ ದಾಬೋಲ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಹಮೀದ್ ಹೆಸರು ಕೇಳಿ ಅಚ್ಚರಿಯಾಗ ಬಹುದು. ಆದರೆ ಮಹಾರಾಷ್ಟ್ರದ ವಿಚಾರವಾದಿ ಹಮೀದ್ ದಲವಾಯಿ ಅವರ ಹೆಸರನ್ನು ದಾಬೋಲ್ಕರ್ ತಮ್ಮ ಮಗನಿಗೆ ಇಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಜ್ಯೋತಿಷ್ಯ, ಮಾಟಮಂತ್ರ, ವಾಸ್ತುಶಾಸ್ತ್ರ ಸೇರಿದಂತೆ ಅಮಾಯಕರನ್ನು ವಂಚಿಸುವ ಎಲ್ಲ ಕಂದಾಚಾರಗಳನ್ನು ವಿರೋಧಿಸಿ ದಾಬೋಲ್ಕರ್ ಏಕಾಂಗಿಯಾಗಿ ಹೋರಾ ಡುತ್ತ ಬಂದರು. ತಾನೇ ‘‘ಮಹಾರಾಷ್ಟ್ರ ಅಂಧಃಶ್ರದ್ಧೆ ನಿರ್ಮೂಲನಾ ಸಮಿತಿ’’ ಎಂಬ ಸಂಘಟನೆಯೊಂದನ್ನು 1989ರಲ್ಲಿ ಕಟ್ಟಿ ಬೆಳೆಸಿದರು. ಈಗ ಈ ಸಂಘಟನೆ ಮಹಾರಾಷ್ಟ್ರದ ಹಳ್ಳಿ ಹಳ್ಳಿಗಳಿಗೆ ವಿಸ್ತರಿ ಸುತ್ತಿದೆ. ಇವರಿಂದ ಜನರನ್ನು ವಂಚಿಸುವ ಮಂತ್ರವಾದಿಗಳ ದಂಧೆಗೆ ದೊಡ್ಡ ಏಟು ಬಿದ್ದಿತ್ತು. ಅವರೆಲ್ಲ ಒಂದುಗೂಡಿ ದಾಬೋಲ್ಕರ್‌ರನ್ನು ಮುಗಿಸಲು ಸಂಚು ರೂಪಿಸಿದ್ದರು. ಆರೆಸ್ಸೆಸ್, ಶಿವಸೇನೆ, ವಿಶ್ವಹಿಂದೂ ಪರಿಷತ್ತು, ಹಿಂದು ಜನ ಜಾಗೃತಿ ಸಮಿತಿ ಸನಾತನದಂಥ ಕೋಮುವಾದಿ ಸಂಘಟನೆಗಳಿಗೆ ದಾಬೋಲ್ಕರ್‌ರನ್ನು ಕಂಡರೆ ಆಗುತ್ತಿರಲಿಲ್ಲ. ಅಜ್ಞಾನದ ಮೇಲೆ ಹಿಂದುತ್ವದ ಸಾಮ್ರಾಜ್ಯ ಕಟ್ಟಲು ಹೊರಟಿರುವ ಈ ಶಕ್ತಿಗಳು ನೇರವಾಗಿ ಹಂತಕರೊಂದಿಗೆ ಗುರುತಿಸಿಕೊಂಡಿಲ್ಲ ವಾದರೂ ಗಾಂಧೀಜಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಗೆ ಮರೆಯಲ್ಲಿ ನಿಂತು ಕಣ್ಸನ್ನೆ ಮಾಡಿದಂತೆ ಮಾಡಿ ರಬಹುದೆಂದು ಪುಣೆಯ ಜನ ಮಾತಾಡಿಕೊಳ್ಳುತ್ತಾರೆ. ನಕಲಿ ದೇವಮಾನವರು, ಫಟಿಂಗ ಸನ್ಯಾಸಿಗಳ ಪವಾಡಗಳನ್ನು ಬಯಲಿ ಗೆಳೆಯುತ್ತಲೇ ಬಂದ ದಾಬೋಲ್ಕರ್ 1990ರಲ್ಲಿ ರತ್ನಾಗಿರಿಯಲ್ಲಿ ನರೇಂದ್ರ ಮಹಾರಾಜ್ ಎಂಬ ‘‘ದೇವ ಮಾನವ’’ನ ಆಶ್ರಮದ ಮೇಲೆ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ದಾಳಿ ಮಾಡಿ ಮಂತ್ರ ತಂತ್ರದಿಂದ ಕಾಯಿಲೆಯನ್ನು ವಾಸಿ ಮಾಡುವುದಾಗಿ ವಂಚಿಸುತ್ತಿದ್ದ ಆತನ ಮುಖವಾಡ ಕಳಚಿದರು. ಆ ದಿನ ನರೇಂದ್ರ ಮಹಾರಾಜ ತಮ್ಮ ಕಾಯಿಲೆ ಗುಣಪಡಿಸುತ್ತಾನೆ ಎಂದು ನಂಬಿ ಸುಮಾರು 20 ಸಾವಿರ ಮಂದಿ ಅಲ್ಲಿ ಸೇರಿದ್ದರು. ಆದರೆ ನರೇಂದ್ರ ದಾಬೋಲ್ಕರ್ ಕೇವಲ ತಮ್ಮ 15 ಮಂದಿ ಬೆಂಬಲಿಗ ರೊಂದಿಗೆ ಆಶ್ರಮಕ್ಕೆ ನುಗ್ಗಿ ಆತನನ್ನು ಚರ್ಚೆಗೆ ಕರೆದು ಸವಾಲು ಹಾಕಿದರು. ಕೊನೆಗೆ ನರೇಂದ್ರ ಮಹಾರಾಜ್ ಸೋತು ದಾಬೋಲ್ಕರ್‌ರಿಗೆ ಶರಣಾಗತನಾದ. ಕರ್ನಾಟಕದಲ್ಲಿ ಎಂಬತ್ತರ ದಶಕದಲ್ಲಿ ಡಾ.ಎಚ್.ನರಸಿಂಹಯ್ಯನವರು ಪುಟ್ಟಪರ್ತಿ ಸಾಯಿಬಾಬಾಗೆ ಈ ರೀತಿ ಬೆವರಿಳಿಸಿದ್ದರು. 2000ನೆ ಇಸವಿಯಲ್ಲಿ ಅಹ್ಮದ್‌ನಗರ ಜಿಲ್ಲೆಯ ಶನಿಸಿಂಗಣಾಪುರ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಆಗ್ರಹಿಸಿ ಇಂಥದೇ ಬೃಹತ್ ಆಂದೋಲನ ಆರಂಭಿಸಿ, ಕೊನೆಗೆ ನ್ಯಾಯಾಲಯಕ್ಕೆ ಹೋಗಿ ದಾಬೋಲ್ಕರ್ ಜಯಶಾಲಿಯಾದರು. ಇದರಿಂದ ರೊಚ್ಚಿಗೆದ್ದ ಹಿಂದು ಜನಜಾಗೃತಿ ಸಮಿತಿ, ಸನಾತನ ಸಂಸ್ಥಾ ದಂಥ ಸಂಘಟನೆಗಳು ದಾಬೋಲ್ಕರ್ ವಿರುದ್ಧ ಅಪಪ್ರಚಾರ ನಡೆಸಿದವು. ಸನಾತನ ಸಂಸ್ಥಾ ಪತ್ರಿಕೆಯ ಸಂಪಾದಕೀಯದಲ್ಲಿ ‘‘ದೇವರ ಇಚ್ಛೆಯಂತೆ ದಾಬೋಲ್ಕರ್ ಹತ್ಯೆ ನಡೆದಿದೆ’’ ಎಂದು ಬರೆಯಲಾಯಿತು. ಮೂಢನಂಬಿಕೆಗಳನ್ನು ನಿಷೇಧಿಸ ಬೇಕೆಂದು ದಾಬೋಲ್ಕರ್ ಹೋರಾಡು ತ್ತಲೇ ಬಂದರು. ಕೊನೆಗೆ ಅವರ ಹತ್ಯೆಯ ನಂತರ ಮಹಾರಾಷ್ಟ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಬ್ಲಾಕ್ ಮ್ಯಾಜಿಕ್‌ನಂಥ ಮೂಢನಂಬಿಕೆಗಳನ್ನು ನಿಷೇಧಿಸಿತು. ಈ ಕಾನೂನು ಜಾರಿಗೊಂಡ ನಂತರ ರಾಜ್ಯದಲ್ಲಿ ನರಬಲಿ, ಮಹಿಳೆಯರ ಲೈಂಗಿಕ ಶೋಷಣೆಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ದಾಬೋಲ್ಕರ್‌ರ 20 ವರ್ಷಗಳ ಹೋರಾಟಕ್ಕೆ ದೊರೆತ ಜಯವಾಗಿದೆ. ಇದರಿಂದ ಹತಾಶಗೊಂಡ ವಂಚಕ ಕಂದಾಚಾರಿ ಶಕ್ತಿಗಳು ದಾಬೋಲ್ಕರ್‌ರನ್ನು ಕೊಂದು ಹಾಕಿದವು. ಕೊಲೆ ರಾಜಕೀಯ ಮಹಾರಾಷ್ಟ್ರಕ್ಕೆ ಹೊಸದಲ್ಲ. ಶಿವಸೇನೆ ಕಣ್ಣು ಬಿಟ್ಟಾಗಲೇ ಮಹಾರಾಷ್ಟ್ರಕ್ಕೆ ಅದು ಕಾಲಿರಿ ಸಿತು. 1970ರಲ್ಲಿ ಮುಂಬೈ ಕಮ್ಯುನಿಸ್ಟ್ ಶಾಸಕ ಕೃಷ್ಣ ದೇಸಾಯಿ ಅವರನ್ನು ಕರಾಳ ಶಕ್ತಿಗಳು ಕೊಂದು ಹಾಕಿದವು. ದಾಬೋಲ್ಕರ್‌ರನ್ನು ಹತ್ಯೆ ಮಾಡಿದ ನಂತರ ಅವರ ವಿಚಾರವಾದಿ ಸಂಘಟನೆ ರಾಜ್ಯದ ತುಂಬ ಪ್ರಭಾವಶಾಲಿಯಾಗಿ ಬೆಳೆದಿದೆ. ರಾಜ್ಯದಲ್ಲಿ ಸುಮಾರು 250 ಶಾಖೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಐದು ಸಾವಿರ ಸ್ವಯಂ ಸೇವಕರು ಕಂದಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ತಮ್ಮ ನಾಯಕನನ್ನು ಕೊಂದ ಹಂತಕರನ್ನು ಸರಕಾರ ಇನ್ನು ಬಂಧಿಸಿಲ್ಲವಲ್ಲ ಎಂಬ ನೋವು ಅವರನ್ನು ಕಾಡುತ್ತಲೇ ಇದೆ. ದಾಬೋಲ್ಕರ್ ಅವರು ತಮ್ಮನ್ನು ತಾವು ಸುಟ್ಟುಕೊಂಡು ಅಂಧಕಾರದಲ್ಲಿ ಬೆಳಕಿನ ಕಿರಣ ಚೆಲ್ಲಿದರು. ಇಂಥ ಬಲಿದಾನದ ನೆತ್ತರೆಣ್ಣೆಯ ಬೆಳಕೇ ಮಾನವ ಕೋಟಿಯನ್ನು ಶತಮಾನಗಳಿಂದ ನಡೆಸಿಕೊಂಡು ಬಂದಿದೆ.

ನನ್ನ ಪ್ರೀತಿಯ ಅಮೃತಾಸೌಜನ್ಯ : ವಿಜಯ ಕರ್ನಾಟಕ

ಅಚ್ಚರಿಯಂತೆ ಬದುಕಿದ ಪಂಜಾಬಿನ ಪ್ರಸಿದ್ಧ ಕವಯತ್ರಿ ಅಮೃತಾ ಮತ್ತು ಕಲಾವಿದ ಇಮ್ರೋಜ್‌ರ ಸ್ನೇಹ -ಸಾಂಗತ್ಯದ ಬಗ್ಗೆ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ಗೊತ್ತು. ತೀವ್ರವಾಗಿ ಬದುಕಿದ, ಅಷ್ಟೇ ತೀವ್ರವಾಗಿ ಬರೆದ ಅಮೃತಾ ಅವರನ್ನು ಕಂಡ, ಅವರೊಂದಿಗೆ ಬದುಕಿನ ನಾಲ್ಕು ದಶಕಗಳನ್ನು ಕಳೆದ ಇಮ್ರೋಜ್ ಇಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಅಮೃತಾ ಇದ್ದಿದ್ದರೆ 95ನೇ ಹುಟ್ಟು ಆಚರಿಸಿಕೊಳ್ಳುತ್ತಿದ್ದರು. ಈ ನೆಪದಲ್ಲಿ ಇಮ್ರೋಜ್ ಜೊತೆಗೆ ನಡೆಸಿದ ಮಾತುಕತೆಯನ್ನು ಅವರದೇ ಮಾತುಗಳಲ್ಲಿ ದೆಹಲಿಯಲ್ಲಿರುವ ಕನ್ನಡತಿ ರೇಣುಕಾ ನಿಡಗುಂಡಿ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
1of 3


ಅಮೃತಾ ಜಿಸ್ಮ್ ಛೋಡಿ ಹೈ, ಮೇರಾ ಸಾಥ್ ನಹೀ...

ನಾನು ಮತ್ತು ಅಮೃತಾ ಒಂದಿಲ್ಲಾ ಒಂದಿನ ಭೇಟಿಯಾಗೇ ಆಗುತ್ತಿದ್ದೆವು ಈ ಜನ್ಮದಲ್ಲಿ. ನಾನಂತೂ ಚಿಕ್ಕಂದಿನಿಂದಲೂ ಅವಳನ್ನು ಭೇಟಿಯಾಗುವ ಕನಸಿನ ಬೆನ್ನೇರಿಯೇ ದೊಡ್ಡವನಾಗಿದ್ದೆ. ಅವಳು ದೇಹ ತ್ಯಜಿಸಿದ್ದಾಳೆಯೇ ಹೊರತು ನನ್ನ ಸಾಂಗತ್ಯವನ್ನಲ್ಲ . ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಆಕೆಯ ಬಗ್ಗೆ ಕೇಳುತ್ತಿದ್ದೆ. ಲಾಹೋರಿನಲ್ಲಿದ್ದಾಗ ಒಮ್ಮೆ ಅವಳ ವಿಳಾಸ ಹುಡುಕಿಕೊಂಡು ಹೊರಟಿದ್ದೆ. ಅರ್ಧ ದಾರಿ ನಡೆದು ಯೋಚಿಸಿದೆ, ಅವಳನ್ನು ಭೇಟಿಯಾಗುವುದೇ ಆದರೆ ಏನಾದರೂ ಆಗಿ ಮತ್ತೆ ಅವಳನ್ನು ಕಾಣುತ್ತೇನೆ. ಈಗ ಅವಳು ನೀನು ಯಾರು, ಯಾಕೆ ಬಂದೆ, ಏನಾಗಬೇಕಿತ್ತು ಎಂದು ಕೇಳಿದರೆ ಏನುತ್ತರ ಕೊಡಲಿ? ಎಂದು ಸುಮ್ಮನೆ ವಾಪಸ್ ಬಂದೆ. ಮುಂಬಯಿಯ ಆರ್ಟ್ಸ್ ಸ್ಕೂಲಿನಲ್ಲಿ ಚಿತ್ರಕಲೆಯನ್ನು ಕಲಿಯುವಾಗಲೂ ಆಕೆಯ ಬಗ್ಗೆಯೇ ಯೋಚಿಸುತ್ತಿದ್ದೆ. ಅವಳನ್ನು ಕಾಣುವ ಯೋಗ ತಾನೇ ಕೂಡಿಬಂತು.


ನಾನು ಮೊಟ್ಟಮೊದಲಬಾರಿಗೆ ಅಮೃತಾಳನ್ನು ಭೇಟಿಯಾಗಿದ್ದು 1957ರಲ್ಲಿ. ಆಗ ಅಮೃತಾ ತನ್ನ ಪುಸ್ತಕವೊಂದರ ಮುಖಪುಟ ವಿನ್ಯಾಸಕ್ಕೆ ಕಲಾವಿದರನ್ನು ಹುಡುಕುತ್ತಿದ್ದಳು. ಆಗಲೇ ಅವಳ ಪರಿಚಯದ ನನ್ನ ಗೆಳೆಯನೊಬ್ಬ ನನ್ನ ಹೆಸರನ್ನು ಸೂಚಿಸಿದನಂತೆ. 'ಫಿರ್ ಇಸೀ ಬಹಾನೆ ಹಮ್ ದೋನೊಂಕಾ ಮುಲಾಕಾತ್ ಹೋ ಗಯೀ...ಭೇಟಿ ಗೆಳೆತನದಲ್ಲಿ, ಗೆಳೆತನ ಗಾಢವಾದ ಸ್ನೇಹದಲ್ಲಿ, ಸ್ನೇಹ ಪ್ರೇಮದಲ್ಲಿ ಪರಿವರ್ತನೆಯಾಯಿತು. ಹಾಗಂತ ನಾವು ಯಾವತ್ತೂ ಒಬ್ಬರಿಗೊಬ್ಬರು 'ಐ ಲವ್ ಯೂ' ಹೇಳಲಿಲ್ಲ. ಹೇಳುವ ಅಗತ್ಯವೂ ಇಲ್ಲ. ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೆವು.

ಆಧೀ ರೋಟಿ, ಆಧಾ ಚಾಂದ್..
ನನಗೆ ಅಮೃತಾ ಸಿಕ್ಕಾಗ ಆಕೆ ಒಬ್ಬರ ಪತ್ನಿ, ಇಬ್ಬರು ಮಕ್ಕಳ ತಾಯಿ ಹಾಗೂ ಸಾಹಿರ್‌ನ ಪ್ರೇಯಸಿಯಾಗಿದ್ದಳು. ಆದರೆ ನನಗೆ ಇದ್ಯಾವುದೂ ಕಣ್ಣಿಗೆ ಕಾಣಿಸಲೇ ಇಲ್ಲ. ಕೇವಲ ಅಮೃತಾ ಮಾತ್ರ ಗೋಚರಿಸಿದ್ದಳು. ನನಗಾಗಿಯೇ, ನನಗೋಸ್ಕರವೇ ಅಮೃತಾ ಇದ್ದಾಳೆನ್ನುವ ಭಾಸ... ಆಗ ನಾನೂ ಪಟೇಲ್ ನಗರದಲ್ಲಿ ಅವಳ ಮನೆಯ ಹತ್ತಿರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಮಕ್ಕಳು ಕಾಂಡ್ಲಾ ಹಾಗೂ ನವರಾಜ್ ಮಾಡರ್ನ್ ಸ್ಕೂಲಿಗೆ ಹೋಗುತ್ತಿದ್ದರು. ನಾನು ಒಂದು ಉರ್ದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ಸ್ಕೂಲ್ ಬಸ್ ಬರುವುದು ತಡವಾಗುತ್ತಿತ್ತು. ಆಗ ನನ್ನ ಹತ್ತಿರ ಸ್ಕೂಟರ್ ಇತ್ತು. ನಾನು ಊಟದ ವೇಳೆಗೆ ಕಚೇರಿ ಬಿಟ್ಟು, ಶಾಲೆಗೆ ಹೋಗಿ ಮಕ್ಕಳನ್ನು ಪಿಕ್ ಮಾಡಿ ನನ್ನ ಸ್ಕೂಟರಿನಲ್ಲಿ ಕರೆದೊಯ್ದು ಮನೆಗೆ ಬಿಡುತ್ತಿದ್ದೆ. ಇದನ್ನು ಮಾಡು ಅಂತಾ ನನಗೆ ಯಾರೂ ಹೇಳಲಿಲ್ಲ, ಮಾಡಬೇಕೆನಿಸಿತು ಅಷ್ಟೆ , ಮಾಡತೊಡಗಿದೆ. ನಾನೇ ಸ್ವತಃ ಮಾಡತೊಡಗಿದ್ದೆ. 

 ಆಗೆಲ್ಲ ಅಮೃತಾಳ ಮನೆಯಲ್ಲಿ ಅಡುಗೆಗೆ ನೌಕರರಿದ್ದರು. ಆಕೆ ಯಾವತ್ತೂ ಅಡುಗೆ ಮಾಡಿದ್ದಿಲ್ಲ. ನಾನು ಮಕ್ಕಳನ್ನು ಕರೆತರತೊಡಗಿದಾಗ ಅಮೃತಾ ಸ್ವತಃ ತಾನೇ ಅಡುಗೆ ಮಾಡತೊಡಗಿದಳು. ಬಿಸಿಬಿಸಿ ರೋಟಿಯನ್ನು ಮಾಡಿ, ಮುಡಾದ ಮೇಲೆ ಕೂರಿಸಿ ತಿನ್ನು ಎಂದು ಉಪಚರಿಸುತ್ತಿದ್ದಳು. ಕೆಲವೊಮ್ಮೆ ಅವಳ ಪತಿ ಪ್ರೀತಂ ಸಿಂಗ್ ಕೂಡ, 'ನಿನ್ನಿಂದಾಗಿ ಅಮೃತಾಳ ಕೈಯಡುಗೆ ಸಿಗುತ್ತಿದೆ, ನೀನೂ ಊಟ ಮಾಡು' ಎಂದು ನಿಲ್ಲಿಸಿಕೊಳ್ಳುತ್ತಿದ್ದರು..

ಅಮೃತಾ ಆ ದಿನಗಳಲ್ಲಿ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅವಳನ್ನೂ ಸ್ಕೂಟರ್ ಮೇಲೆ ಹೋಗಿ ನಾನೇ ಬಿಟ್ಟುಬರುತ್ತಿದ್ದೆ. ಅವಳೊಂದಿಗೆ ಕೆಲಕ್ಷಣಗಳನ್ನು ಕಳೆದರೂ ನನಗೆ ಖುಷಿಯಾಗುತ್ತಿತ್ತು. ರಾತ್ರಿಯಾದರೆ ಆಕಾಶವಾಣಿಯ ವಾಹನ ಅವಳನ್ನು ಮನೆಗೆ ಬಿಡುತ್ತಿತ್ತು. ವಾಹನವಿದ್ದಾಗಲೂ ನಾನು ದಿನಾ ಸಂಜೆ ಕಚೇರಿ ಮುಗಿಸಿಕೊಂಡು, ಆಕಾಶವಾಣಿಗೆ ಅಮೃತಾಳನ್ನು ಕಾಣಲು ಹೋಗುತ್ತಿದ್ದೆ. ಒಮ್ಮೆ ಅವಳ ವಾಹನ ರಾತ್ರಿ ಹತ್ತಾದರೂ ಬರಲಿಲ್ಲ. ಕಾದು ಕಾದು ಕೊನೆಗೆ ನಾನೇ 'ಚಲೋ ಚಲತೇ.ಹೈ'.ಅಂದೆ. ಅಮೃತಾ ಎಲ್ಲಿ? ಯಾಕೆ? ಎಂಬ ಒಂದು ಪ್ರಶ್ನೆಯನ್ನೂ ಕೇಳದೇ ನನ್ನೊಂದಿಗೆ ಹೆಜ್ಜೆ ಹಾಕತೊಡಗಿದಳು. ಅವತ್ತು ಬೆಳದಿಂಗಳ ರಾತ್ರಿಯಾಗಿತ್ತು. ಹಾಗೇ ಇಬ್ಬರೂ ಆಕಾಶವಾಣಿಯಿಂದ ಪಟೇಲ್ ನಗರದವರೆಗೂ ಕಾಲ್ನಡಿಗೆಯಲ್ಲೇ ಬಂದೆವು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಮನೆ ತಲುಪಿದಾಗ ಮಧ್ಯರಾತ್ರಿ. ಎಲ್ಲರೂ ಮಲಗಿಯಾಗಿತ್ತು. ಉಣ್ಣಲು ಉಳಿದದ್ದು ಒಂದೇ ರೊಟ್ಟಿ. ಆಗ ಅಮೃತಾ ಇದ್ದುದರಲ್ಲೇ ಹಂಚಿ ತಿನ್ನೋಣವೆಂದು ಇಬ್ಬರೂ ಅರ್ಧರ್ಧ ರೋಟಿ ತಿಂದೆವು, ಅವತ್ತು ಮೇಲೆ ಆಗಸದಲ್ಲಿ ಚಂದ್ರನೂ ಅರ್ಧದಷ್ಟೇ ಇದ್ದ -


ಪಟೇಲ್ ನಗರದಲ್ಲಿದ್ದಾಗ ಒಮ್ಮೆ ಅಮೃತಾ ನನ್ನ ಟೆರೇಸಿನ ಕೋಣೆಗೆ ಬಂದು ಬಾಗಿಲು ಬಡಿದಳು.... ಬಾಗಿಲು ತೆರೆಯುವುದು ಸ್ವಲ್ಪ ತಡವಾಯಿತು. ಆಗ ಅಮೃತಾ, 'ಅಬ್ ತುಮ್ಹಾರಾ ಭೀ ದರವಾಜಾ ಖಟಖಟಾನಾ ಪಡೇಗಾ?' ಎಂದಳು. ತಕ್ಷಣವೇ ನಾನು ಕೋಣೆಯ ಚಾವಿಯನ್ನು ಅಮೃತಾ ಕೈಯಲ್ಲಿ ಇಟ್ಟುಬಿಟ್ಟೆ . 'ಇದು ನಿಂದೇ ಮನೆ, ಯಾವಾಗ ಬೇಕಾದರೂ ಬಾ' ಎನ್ನುವಂತೆ.

ಆಕೆ ಬಾಗಿಲು ಬಡಿದಳು
ನಾನು
ಚಾವಿಯ ಗೊಂಚಲನ್ನೇ ಕೊಟ್ಟೆ ಆಕೆಗೆ
ಕೋಣೆ
ಮನೆಯಾಗುವುದನ್ನು
ನೋಡುತ್ತಿತ್ತು.....
ಮತ್ತು ನಾನು ಆ ಕಣ್ಣ ಹೊಳಪಿನಲ್ಲಿ
ಪ್ರೀತಿ ಉದಿಸುವುದನ್ನು
ನೋಡುತ್ತಿದ್ದೆ!

ಬೆನ್ನ ಮೇಲೆ ಸಾಹಿರ್...ಸಾಹಿರ್!
ಸ್ಕೂಟರಿನಲ್ಲಿ ನನ್ನ ಹಿಂದೆ ಕೂತಾಗ ಬೆನ್ನ ಮೇಲೆ 'ಸಾಹಿರ್ ಸಾಹಿರ್' ಎಂದು ಬರೆಯುತ್ತಿದ್ದಳು. ಪೀಠ್ ಮೇರಾ, ಪೀಛೆ ಮೇರೇ ದೋಸ್ತ್, ವೋಹ್ ದೋಸ್ತ್ ಕಾ ದೋಸ್ತ್... ನಾನ್ಯಾಕೆ ಬೇಸರ ಪಡಲಿ ? ಸಾಹಿರ್ ಯಾವತ್ತೂ ಮದುವೆಯಾಗುತ್ತಿದ್ದಿಲ್ಲ. ಸಾಹಿರ್ ಕೇವಲ ಒಂದು ಭ್ರಮೆಯಾಗಿದ್ದ. ಅಮೃತಾ ಅವನನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಅವಳಿಗೆ ಸಾಹಿರ್ ಗೀಳು ಎಷ್ಟಿತ್ತೆಂದರೆ ನಿಂತಲ್ಲಿ, ಕೂತಲ್ಲಿ, ಟೇಬಲ್, ಕುರ್ಚಿ, ಕಾಗದ ಎಲ್ಲೆಂದರಲ್ಲಿ ಬೆರಳಿನಿಂದ 'ಸಾಹಿರ್....ಸಾಹಿರ್....' ಎಂದು ಗೀಚತೊಡಗುತ್ತಿದ್ದಳು. ಅದೇ ಒಂದು ಚಟವಾಗಿ ಹೋಗಿತ್ತು. ನಾನು ಯಾವತ್ತೂ ಅವಳ ಖಾಸಗಿ ವಿಷಯಗಳನ್ನು ಕೇಳುತ್ತಿರಲಿಲ್ಲ. ಅವಳೂ ನನ್ನನ್ನು ನನ್ನ ಪೇಂಟಿಂಗ್...ಕ್ಯಾನ್ವಾಸ್..ಬಣ್ಣಕ್ಕೆ ಯಾಕೆ ದುಡ್ಡು ಸುರೀತೀಯ ಅಂತಾ ಯಾವತ್ತೂ ಪ್ರಶ್ನಿಸುತ್ತಿರಲಿಲ್ಲ. ನಾವು ಯಾವತ್ತೂ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯತ್ನಿಸಲಿಲ್ಲ. ಎಲ್ಲಿ ಹೋದೆ ? ಯಾರ ಹತ್ತಿರ ಮಾತಾಡಿದೆ ? ಈ ತರಾ ಯಾವತ್ತೂ ಪ್ರಶ್ನಿಸಲೂ ಇಲ್ಲ. ನಾನೇನು ಚೌಕಿದಾರನಾ ಇವನ್ನೆಲ್ಲ ಕೇಳಲು!

ಮತ್ತೆ ಸಾಹಿರ್, ಅವನೆಂದೂ ಅಮೃತಾಳನ್ನು ಮದುವೆಯಾಗುತ್ತಿರಲಿಲ್ಲ. ಕೇವಲ ಅಮೃತಾಳ ಭ್ರಮೆ, ಅವಳ ಹದ್ದುಮೀರಿದ ಪ್ರೇಮದ ಹುಚ್ಚು! ಅಷ್ಟೆ.

ಒಮ್ಮೆ ದಿಲ್ಲಿಗೆ ಬಂದಿದ್ದ ಸಾಹಿರ್. ಅಮೃತಾ ಬದುಕಿನಲ್ಲಿ ನಾನಿದ್ದೇನೆ ಅಂತಾ ಗೊತ್ತಾಗಿ ಬೇರೆ ಹೋಟೇಲಿನಲ್ಲಿ ತಂಗಿದ್ದು ಹೊರಟುಹೋದ. ಮತ್ತೆ ಅವರೆಂದೂ ಭೇಟಿಯಾಗಲಿಲ್ಲ.
***

ಸಾಹಿರ್ ಕಡಿಮೆ ಮಾತಾಡುತ್ತಿದ್ದ. ಅಮೃತಾ ದಿಲ್ಲಿಗೆ ವಲಸೆ ಬಂದ ಮೇಲೆ ಹೆಚ್ಚು ಭೇಟಿಯಾಗಿಲ್ಲ. ಲಾಹೋರಿನಲ್ಲಿ ಸಿಕ್ಕಿದ್ದು ಅಷ್ಟೆ. ಸಿಕ್ಕಾಗೆಲ್ಲ ಅಮೃತಾ ಸಾಹಿರ್‌ನನ್ನು 'ಮಾತಾಡು, ಮಾತಾಡು....' ಎಂದು ಗೋಗರೆಯುತ್ತಿದ್ದಳು. ಅವನು 'ಮೈ ರೋಶನಿ ಮೇ ಬಾತ್ ನಹೀ ಕರ್ ಸಕ್ತಾ' ಅಂತಿದ್ದನಂತೆ. ಅದಕ್ಕೇ ಒಮ್ಮೆ ಅಮೃತಾ ರೋಸಿಹೋಗಿ 'ಆ ಸೂರ್ಯನನ್ನೇ ಅಡಗಿಸಿಡಬೇಕು... ಆಗ ನೀನು ಮಾತನಾಡುತ್ತೀ' ಅನ್ನೋ ಕವಿತೆ ಬರೆದಿದ್ದಳು. ಸಾಹಿರ್ ಕಭೀ ನಹೀ ಮಿಲತಾ!

ಅವಳಿಗೆ ಸಿಗರೇಟ್ ಸೇದುವ ಚಟವಿತ್ತು. ಬರೆಯುವ ಹುಕಿ ಬಂದಾಗೆಲ್ಲ ಸಿಗರೇಟ್ ಸೇದುತ್ತಿದ್ದಳು. ನಾನೇ ಸ್ವತಃ ಮಾರ್ಕೆಟ್ಟಿಗೆ ಹೋದಾಗ ಅಮೃತಾಳಿಗೆ ಸಿಗರೇಟ್ ಖರಿದೀಸಿ ತಂದು ಕೊಡುತ್ತಿದ್ದೆ. ಅವಳಿಗೆ ಚಹಾ ಅಂದರೆ ತುಂಬಾ ಪ್ರೀತಿ. ದಿನಕ್ಕೆ 8-10 ಸಲ ಚಹಾ ಕುಡಿಯುತ್ತಿದ್ದಳು. ಮೈ ಸಿಗರೇಟ್ ನಹೀ ಪೀತಾ.....ಚಾಯ್ ಭೀ ಜ್ಯಾದಾ ನಹೀ ಪೀತಾ.....ಆದರೆ ಅವಳಿಗೆ ಯಾವತ್ತೂ ಅಡ್ದಿ ಮಾಡಲಿಲ್ಲ.

ಹೌಜ್ ಖಾಸಿನ ಮನೆ ಕಟ್ಟುವ ಜಾಗವನ್ನು ಭಾರತ ಸರಕಾರ ದೇಶ ವಿಭಜನೆ ಕಾಲಕ್ಕೆ ಪಂಜಾಬ್, ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತರಿಗಾಗಿ ನೂರು ಗಜ ಜಮೀನನ್ನು ಹಂಚಿಕೆ ಮಾಡುತ್ತಿತ್ತು. ಹಾಗೇ ಆ ಜಾಗ ಅಮೃತಾಗೂ ಸಿಕ್ಕಿತ್ತು. 1960ರಲ್ಲಿ ಪತಿ ಪ್ರೀತಂ ಸಿಂಗ್‌ರಿಂದ ದೂರವಾಗಿ ನನ್ನ ಜೊತೆಗೆ ಇರತೊಡಗಿದಳು. ಆಗಿನ್ನೂ ಅಮೃತಾ ವಿಚ್ಛೇದನ ಪಡೆದಿರಲಿಲ್ಲ. ಮುಂದೆ ಹತ್ತು ವರ್ಷದ ಮೇಲೆ ವಿಚ್ಛೇದನ ಪಡೆದಳು. ಆದರೆ ಕೊನೆಯವರೆಗೂ ಪತಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಇರಿಸಿಕೊಂಡಳು. ಹೌಜ್ ಖಾಸಿನ ಓ-25 ನಮ್ಮಿಬ್ಬರ ಕನಸಿನ ಮನೆ; ಅದು 1961ರಲ್ಲಿ ನಾನು ಹಾಗೂ ಅಮೃತಾ ಕೂಡಿ ಕಟ್ಟಿದ್ದು. ಕೆಳಗೆ ಅಮೃತಾಳ ಮಕ್ಕಳು ಇರುತ್ತಿದ್ದರು. ಮೇಲಿನ ಮಹಡಿಯಲ್ಲಿ ನಮ್ಮಿಬ್ಬರಿಗೂ ಪ್ರತ್ಯೇಕ ಕೋಣೆಗಳಿದ್ದವು. ನಮ್ಮ ಕೆಲಸಕ್ಕೆ ಅಡ್ದಿಯಾಗದಂತೆ ಕಾಳಜಿ ವಹಿಸುತ್ತಿದ್ದೆವು. ಇಬ್ಬರೂ ಭಿನ್ನ ಭಿನ್ನ ವ್ಯಕ್ತಿತ್ವದವರಾಗಿದ್ದರೂ ಅಭಿರುಚಿ, ಅಭಿವ್ಯಕ್ತಿ ಒಂದೇ ಆಗಿತ್ತು.

ಆ ಓ-25 ಮನೆ ಈಗಿಲ್ಲ. ಆ ಮನೆಯ ಗೋಡೆಗಳು ಉದುರತೊಡಗಿದ್ದವು. ಆ ಮನೆ ಮಾರಿಯೇ ಇದನ್ನು ಕೊಂಡೆವು. ಇದೂ ಚೆನ್ನಾಗಿದೆ. ನೋಡಿ ಆ ಮನೆಯ ಹೆಸರಿನ ಪ್ಲೇಟ, ಕಿತ್ತು ಇಲ್ಲಿ ಅಂಟಿಸಿದ್ದೇನೆ. ಮನೆಯ ಹೆಸರೂ ನಾನೇ ಬರೆದದ್ದು, ಯಹ್ ಮೈ...ಯಹ್ ತೂ...ಬೀಚ್ ಮೇ ಸಪನಾ.....ನಾವಿಬ್ಬರೂ ತುಂಬಾ ಖುಷಿಯಾಗಿದ್ದೆವು- ನಮ್ಮ ಪುಟ್ಟ ಪ್ರಪಂಚದಲ್ಲಿ.

ನಾನು ಮತ್ತು ಅಮೃತಾ ಬದುಕನ್ನು ತುಂಬಾ ಮಜವಾಗಿ ಕಳೆದೆವು. ಮಕ್ಕಳು ಮೊದಮೊದಲು ತಕರಾರು ತೆಗೆದರು. ಆದರೆ ನಮ್ಮ ಜೊತೆಗೆ ಇರತೊಡಗಿದ ನಂತರ ಅವರಿಗೆ ಯಾವ ಕೊರತೆಯೂ ಕಾಣಲಿಲ್ಲ. ನಿಧಾನಕ್ಕೆ ಈ ಬದಲಾವಣೆಯನ್ನೂ ಒಪ್ಪಿಕೊಂಡರು. ಕಭೀ ಹಮನೇ ಬಚ್ಚೋಂ ಕೋ ಕುಛ್ ಕೆಹನೆ ಕಾ ಮೌಕಾ ಹೀ ನಹೀ ದಿಯಾ....

ನಾಗಮಣಿ ಪತ್ರಿಕೆ
ಅಮೃತಾಗೆ ಪತ್ರಿಕೆ ಮಾಡುವ ಕನಸಿತ್ತು. ಸ್ವತಃ ಕವಿಯಾಗಿದ್ದ ಅವಳ ತಂದೆ ನಂದ್ ಸಾಧು ( ಕರ್ತಾರ್ ಸಿಂಗ್) ಕೂಡ ಪತ್ರಿಕೆಯನ್ನು ನಡೆಸಿದ್ದರು. ನಾವಿಬ್ಬರೂ ಪಂಜಾಬಿ ಸಾಹಿತ್ಯಿಕ ಪತ್ರಿಕೆ 'ನಾಗಮಣಿ'ಯನ್ನು ನಲವತ್ತು ವರ್ಷಗಳ ಕಾಲ ನಡೆಸಿದೆವು. 1966ರಿಂದ 2004ರ ವರೆಗೂ ಪಂಜಾಬಿ ಭಾಷೆಯ ಸಾಹಿತ್ಯಿಕ ಪತ್ರಿಕೆಯಾಗಿ ಅದು ತುಂಬಾ ಜನಪ್ರಿಯವಾಗಿತ್ತು. ಆಮೇಲಾಮೇಲೆ ಅಮೃತಾಳ ಅನಾರೋಗ್ಯದ ಕಾರಣ ನಡೆಸಲಾಗಲಿಲ್ಲ. ಅಮೃತಾ ಅದರ ಎಲ್ಲಾ ಬರವಣಿಗೆ, ಲೇಖನಗಳನ್ನು ನೋಡಿಕೊಳ್ಳುತ್ತಿದ್ದಳು. ನಾನು ಚಿತ್ರವನ್ನೋ, ಗೆರೆಗಳನ್ನೋ ಬರೆಯುತ್ತಿದ್ದೆ. 'ನಾಗಮಣಿ'ಯ ವಿಶೇಷವೆಂದರೆ ಪತ್ರಿಕೆಯ ಮುಖಪುಟದಲ್ಲಿ, ಹಿಂಭಾಗದಲ್ಲಿ ಒಂದು ಕವಿತೆ ಇದ್ದೇ ಇರುತ್ತಿತ್ತು. ಅದು ಇಲ್ಲೇ ಇರಬೇಕೆಂಬ ನಿಯಮವೇನೂ ಇರಲಿಲ್ಲ. ಎಲ್ಲಾದರೂ ಸರಿ...ಅದಕ್ಕೆ ಹೊಂದುವಂತೆ ಒಂದು ಹೂಬಳ್ಳಿ, ಮುಖ ಇತ್ಯಾದಿಗಳ ಚಿತ್ರ. 'ನಾಗಮಣಿ'ಯ ಪ್ರಿಂಟ್ ಹಾಕುವವರೆಗಿನ ಕೆಲಸ, ಅದನ್ನು ಪೋಸ್ಟ್ ಆಫೀಸಿಗೆ ಹೋಗಿ ಪೋಸ್ಟ್ ಮಾಡುವ ಕೆಲಸ ಎಲ್ಲಾ ನಾನೇ ಮಾಡುತ್ತಿದ್ದೆ. ಪೋಸ್ಟ್ ಆಫೀಸಿನವರು 'ಅಯ್ಯಾ..ನೀನೇ ಒಂದು ಸ್ಟ್ಯಾಂಪ್ ಒತ್ತಿ ಹೋಗು' ಎಂದರೂ ಅದನ್ನೂ ಕೂತು ನಾನೇ ಮಾಡಿಕೊಟ್ಟು ಬರುತ್ತಿದ್ದೆ.

ಹೀಗೆ ನಮ್ಮ ಮನೆಯಲ್ಲೂ ಯಾವ ನಿಯಮಗಳೂ ಇಲ್ಲ. ಯಾರು ಹೇಗೆ ಬೇಕಾದರೂ ಇರಬಹುದು, ಯಾವ ಜಾತಿಯನ್ನು ಬೇಕಾದರೂ ಅನುಸರಿಸಬಹುದು, ಯಾವ ಧರ್ಮವನ್ನು ಬೇಕಾದರೂ ನಂಬಬಹುದು, ಇಲ್ಲಾ ಬಿಡಬಹುದು. ಇಲ್ಲಿ ಯಾರೂ ಯಾರಿಗೂ ನಿಯಮಗಳನ್ನು ಹೇರುವುದಿಲ್ಲ. ಊಟಕ್ಕೂ ಅಷ್ಟೆ. ಯಾರು ಎಷ್ಟು ಹೊತ್ತಿಗೆ ಬೇಕಾದರೂ ಉಣ್ಣಬಹುದು. ಒಟ್ಟಿಗೆ ಉಣ್ಣಬೇಕು ಅನ್ನೋ ನಿಯಮವಿಲ್ಲ. ನಾನು ಬೇಗ ಉಣ್ಣುತ್ತೇನೆ. ಮಕ್ಕಳು, ಸೊಸೆ ಅಲಕಾ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮ್ಮ ನಿಯಮಗಳನ್ನು ಪಾಲಿಸುತ್ತಾರೆ. ಮೊಮ್ಮಗ ಅಮನ್ ಮಹಾರಾಷ್ಟ್ರದ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆಯೂ ಕಲಾವಿದೆ. ಮೊಮ್ಮಗಳು ಶಿಲ್ಪಿ ಮುಂಬಯಿಯಲ್ಲಿದ್ದಾಳೆ. ಸೊಸೆ ಅಲಕಾ ನನಗೆ ಒಂದು ಚಹದ ಕಪ್ಪನ್ನೂ ತೊಳೆಯಲು ಬಿಡುವುದಿಲ್ಲ.

ನಾನು ಮತ್ತು ಅಮೃತಾ ಒಟ್ಟಿಗೆ ಮನೆಗೆಲಸವನ್ನೂ ಮಾಡುತ್ತಿದ್ದೆವು. ಮೊದಲು ಒಬ್ಬ ಕೆಲಸದವನನ್ನು ಗೊತ್ತುಮಾಡಿಕೊಂಡಿದ್ದೆವು. ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ಡಾಗ ಅವನಿಗೇನೂ ಹೆಚ್ಚು ಕೆಲಸವಿರುತ್ತಿರಲಿಲ್ಲ. ಸುಮ್ಮನೆ ಸಂಬಳ ಕೊಡಬೇಕು. ಅದಕ್ಕೇ ನಾನೇ ಅಮೃತಾಗೆ ಕೆಲಸದವನನ್ನು ಬಿಡಿಸಿ, ನಮ್ಮ ಕೆಲಸವನ್ನು ನಾವೇ ಮಾಡೋಣ ಎಂದು ಸಲಹೆ ಕೊಟ್ಟೆ. ಅವಳೂ ಒಪ್ಪಿದಳು. ನಾನು ಸಂತೆಯಿಂದ ಮನೆಗೆ ಸಾಮಾನು ತರುತ್ತಿದ್ದೆ. ತರಕಾರಿ ಹೆಚ್ಚುವುದು, ಅವಳು ಪಲ್ಯಕ್ಕೆ ಒಗ್ಗರಣೆ ಹಾಕಿದರೆ ನಾನು ಬೇಯುವವರೆಗೂ ನೋಡುತ್ತಿದ್ದೆ. ಪಾತ್ರೆ ತೊಳೆದು ಒರೆಸಿ ಇಡುವುದನ್ನೂ ಒಟ್ಟಿಗೇ ಮಾಡಿ ಮುಗಿಸುತ್ತಿದ್ದೆವು. ಅಡುಗೆ ಮನೆಯಲ್ಲಿ ಒಂದು ಜಿರಲೆಯೂ ಇರಲಿಲ್ಲ ಗೊತ್ತೇ? ಎಲ್ಲ ದಿನಸಿ ಸಾಮಾನುಗಳನ್ನು ತಂದು ನಾನು ಗಾಜಿನ ಡಬ್ಬಗಳಲ್ಲಿ ತುಂಬಿಸುತ್ತಿದ್ದೆ, ಅವು ಖಾಲಿಯಾಗುವ ಮೊದಲೇ ಮತ್ತೆ ತುಂಬಿಸಲು ನನಗೆ ಅನುಕೂಲವಾಗಲಿ ಎಂದು. ಸ್ಟೀಲ್ ಜಾರ್‌ಗಳಲ್ಲಿ ಹಾಕಿದರೆ ಮುಗಿದದ್ದು ಹೇಗೆ ಗೊತ್ತಾಗಬೇಕು?

ಒಟ್ಟಿಗೇ ಇದ್ದ ದಿನಗಳು..
ನನ್ನ ಮನೆಯವರು ಇದನ್ನೆಲ್ಲ ತೀವ್ರವಾಗಿ ವಿರೋಧಿಸಿದರು. ಅಮೃತಾ ನನಗಿಂತ ಏಳು ವರ್ಷ ದೊಡ್ಡವಳು; ಇಬ್ಬರು ಮಕ್ಕಳ ತಾಯಿ. ಆದರೆ ನಾವಿಬ್ಬರೂ ನಿರ್ಧರಿಸಿಯಾಗಿತ್ತು- ನಾವಿಬ್ಬರೂ ಯಾವತ್ತೂ ಮದುವೆಯಾಗುವುದಿಲ್ಲ , ಹಾಗೇ ಸ್ನೇಹಿತರಂತೆ ಇರುತ್ತೇವೆ ಎಂದು. ನನ್ನ ಅಕ್ಕ ಒಬ್ಬಳೇ ನನ್ನನು ಸಮರ್ಥಿಸಿಕೊಂಡಳು. ಇಬ್ಬರೂ ಒಟ್ಟಿಗೆ ಇರುತ್ತಾರಾದರೆ ಇದ್ದುಕೊಳ್ಳಲಿ. ಅವರಿಗೆ ಪ್ರೀತಿಯಿದ್ದಲ್ಲಿ, ಯಾರಿಗೂ ಅನ್ಯಾಯವಾಗದಿದ್ದಲ್ಲಿ ಇದ್ದುಕೊಳ್ಳಲಿ ಎಂದಳು. ಇನ್ನು ಸಮಾಜದ ವಿಷಯ. ಅಮೃತಾಗೆ ನಾನು ಹೇಳಿದ್ದೆ- ನನ್ನ ಸಮಾಜ ನೀನು, ನಿನ್ನ ಸಮಾಜ ನಾನು. ಆಯಿತಲ್ಲ , ಬೇರೆ ಯಾವ ಸಮಾಜ ಬಂದು ನಮಗೇನು ಅನ್ನ ಹಾಕುತ್ತದೆಯಾ? ಬಟ್ಟೆ ಕೊಡುತ್ತದೆಯಾ ? ಪ್ರೀತಿ ಮುಖ್ಯ. ಪ್ರೀತಿ, ಅನುರಾಗವಿರುವಲ್ಲಿ ಯಾವ ಕಾನೂನೂ ಯಾಕೆ ಬೇಕು? ನಮಗೆ ಯಾವ ಕಾನೂನೂ ಬೇಡ, ಪ್ರೇಮ ಸಾಕು.

ಅಮೃತಾ ಒಟ್ಟಿಗಿರುವ ನಿರ್ಧಾರವನ್ನು ಒಮ್ಮೆಲೇ ತೆಗೆದುಕೊಳಲಿಲ್ಲ. ಸಾಕಷ್ಟು ಆತ್ಮವಿಮರ್ಶೆ ಮಾಡಿಕೊಂಡೇ ಈ ನಿರ್ಧಾರ ತೆಗೆದುಕೊಂಡಳು. ಒಮ್ಮೆ ಇಬ್ಬರೂ ಕುಳಿತುಕೊಂಡಾಗ 'ನೀನಿನ್ನೂ ಚಿಕ್ಕವ, ಹೋಗಿ ಲೋಕ ಕಂಡು ಬಾ, ಆಮೇಲೆ ಯೋಚಿಸೋಣ' ಅಂದಳು. ಆಗ ನಾನು ಎದ್ದು ಅವಳ ಸುತ್ತ ಏಳು ಬಾರಿ ಸುತ್ತಿಬಂದು, 'ಆಯಿತು, ಲೋಕ ಸುತ್ತಿಬಂದೆ, ಇನ್ನು ಜೊತೆಗಿರಬಹುದಾ?' ಅಂತಾ ಕೇಳಿದೆ. ಅಮೃತಾ ಮುಂದೆ ಮಾತಾಡಲಿಲ್ಲ. ವಿಚ್ಛೇದನವನ್ನು ಪಡೆಯದೇ ದಶಕಗಳ ಕಾಲ ಜೊತೆಯಲ್ಲೇ ಇದ್ದೆವು. ನಂತರ ಪತಿಯಿಂದ ವಿಚ್ಛೇದನ ಪಡೆದಳು. ಪತಿಯಿಂದ ಏನನ್ನೂ ಬೇಡಲಿಲ್ಲ.

ಹಾಗೇ ಸುಮಾರು ವರ್ಷಗಳ ನಂತರ ಮಕ್ಕಳು ತಾಯಿಗೆ ಸುದ್ದಿ ತಲುಪಿಸಿದರು- 'ಮಮ್ಮಾ... ಪಪ್ಪನಿಗೆ ಹುಷಾರಿಲ್ಲವಂತೆ' ಅಂತ. ತಕ್ಷಣ ನಾನು ಮತ್ತು ಅಮೃತಾ ಪಟೇಲ್ ನಗರಕ್ಕೆ ಹೋಗಿ ಪ್ರೀತಂ ಸಿಂಗರನ್ನು ಮನೆಗೆ ಕರೆತಂದು ಒಳ್ಳೆ ವೈದ್ಯರಲ್ಲಿ ತೋರಿಸಿ ಆರೈಕೆ ಮಾಡಿದೆವು. ಬದುಕಿರುವವರೆಗೂ ಅವರು ನಮ್ಮಲ್ಲೇ ಇದ್ದರು. ಇದೇ ಹೌಜ್ ಖಾಸ್ ಮನೆಯಲ್ಲೇ ಕೊನೆಯುಸಿರೆಳೆದರು. ಕಿಸಿಕೇ ದಿಲ್ ಮೇ ಕೋಯೀ ರಂಜಿಶ್ ನಹೀ ಥಿ ! ಕೋಯೀ ಶಿಕಾಯತ್ ನಹೀ ರಹಾ! ಯಾವ ಕೆಟ್ಟ ಭಾವನೆ ಕೂಡ ಮನದಲ್ಲುಳಿಯಲಿಲ್ಲ.
***

ಹೀಗೆ ಅಮೃತಾ ಯಾವತ್ತೂ ತನ್ನ ಮಾತಿನಲ್ಲಿ, ನಿಲುವಿನಲ್ಲಿ ಅತ್ಯಂತ ಪ್ರಾಮಾಣಿಕರಾಗಿದ್ದಳು. ಸಾಹಿರ್ ಜತೆಗಿನ ಪ್ರೇಮವನ್ನೂ ಬಚ್ಚಿಡಲಿಲ್ಲ. ತನ್ನ ಮಗು ಗರ್ಭದಲ್ಲಿದಾಗಲೂ ಕೂಡ ಅದು ಸಾಹಿರ್‌ನನ್ನೇ ಹೋಲಲಿ ಎಂದು ಬಯಸಿದ್ದನ್ನು ಯಾವ ಮುಲಾಜಿಲ್ಲದೇ ಹೇಳಿಕೊಂಡಿದ್ದಳು. ಯಾವತ್ತೂ ಆಕೆ ಸುಳ್ಳನ್ನು ಬದುಕಲಿಲ್ಲ. ಅದಮ್ಯವಾದ ಜೀವನಪ್ರೀತಿ ಹಾಗೂ ಸತ್ಯವನ್ನೇ ಬದುಕಿನುದ್ದಕ್ಕೂ ಬಾಳಿದಳು. ಸಾಹಿರ್‌ಗಾಗಿ ಬಹಳಷ್ಟು ಪದ್ಯಗಳನ್ನು ಬರೆದಳು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು.

ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಸೇದುತ್ತಿದ್ದೆ
ಕೊಡವಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು !
**

ಆಯುಷ್ಯದ ಸಿಗರೇಟು ಉರಿದುಹೋಯಿತು
ನನ್ನ ಪ್ರೇಮದ ಗಂಧ
ಒಂದಿಷ್ಟು ನಿನ್ನುಸಿರಲ್ಲಿ
ಒಂದಿಷ್ಟು ಗಾಳಿಯಲ್ಲಿ ಬೆರೆಯಿತು !

ಅಮೃತಾಗೆ ಸಾಹಿರ್ ಪ್ರೀತಿ ಸಿಗಲಿಲ್ಲ ! ಕಾಲಕ್ರಮೇಣ ಸಾಹಿರ್ ಬಗೆಗಿನ ಮೋಹವೇನೋ ಬಿಟ್ಟಿತು. ಆದರೆ ಸಿಗರೇಟ್ ಸೇದುವ ಚಟ ಅಮೃತಾಳನ್ನು ಕಚ್ಚಿಹಿಡಿಯಿತು.

ನಾನು ಇಬ್ಬರು ಮಕ್ಕಳನ್ನು ಪಿಲಿಯನ್ ಮೇಲೆ ಕೂರಿಸಿ ಓಡಿಸಿದ್ದಕ್ಕೆ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದೆ. ಅದಕ್ಕೆ ಯೋಚಿಸಿ ನಾನು ಐದು ಸಾವಿರ, ಅಮೃತಾ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡೆವು. ಯಾವ ಆಸ್ತಿಪಾಸ್ತಿಯನ್ನೂ ನಾವಿಬ್ಬರೂ ಮನೆಯಿಂದ ತರಲಿಲ್ಲ. ಇದ್ದುದನ್ನು ಸಮವಾಗಿ ಹಂಚಿಕೊಂಡು ಬಾಳಿದೆವು.

ಕೊನೆಗಾಲದಲ್ಲಿ ಅಮೃತಾ 'ಮತ್ತೆ ನಾನು ನಿನಗೆ ಸಿಗುತ್ತೇನೆ' (ಮೈ ತುಮ್ಹೆ ಫಿರ್ ಮಿಲೂಂಗಿ) ಪದ್ಯ ಬರೆದಳು-

ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ,
ನಿನ್ನ ಕ್ಯಾನವಾಸಿಗೆ ಇಳಿಯುವೆ
ಅಥವಾ ಬಹುಶಃ ನಿನ್ನ ಕ್ಯಾನ್‌ವಾಸಿನ ಮೇಲೆ
ಒಂದು ರಹಸ್ಯಮಯ ಗೆರೆಯಾಗಿ,
ಮೌನವಾಗಿ ನಿನ್ನನ್ನು ನೋಡ್ತಾ ಇರುವೆ
*

ಮತ್ತೇನೂ ನಾನರಿಯೆ
ಆದರೆಇಷ್ಟು ಮಾತ್ರ ಗೊತ್ತು
ಕಾಲ ಏನೇ ಮಾಡಿದರೂ
ಈ ಜನ್ಮ ನನ್ನೊಂದಿಗೇ ನಡೆಯುತ್ತದೆ..

ನಾನೂ ಅವಳಿಗಾಗಿ ಕವಿತೆ ಬರೆದೆ. ನಾನೇನೂ ಮೊದಲು ಕವಿತೆ ಬರೆಯುತ್ತಿದ್ದಿಲ್ಲ, ಈಗ ಬರೆದದ್ದೆಲ್ಲವೂ ಬದುಕಿನ ಘಟನೆಗಳನ್ನೇ ಕುರಿತಾಗಿದೆ.
ಅಮೃತಾ ತೀರಾ ಅನಾರೋಗ್ಯದಾಲ್ಲಿದ್ದಾಗಿನ ಪದ್ಯ-
ಈ ಗೂಡು ಈಗ ನಲವತ್ತು ವರ್ಷದ್ದಾಯಿತು,
ನೀನೂ ಈಗ ಹಾರುವ ತಯಾರಿಯಲ್ಲಿದ್ದೀಯಾ
ಈ ಮನೆಯ ಕಡ್ಡಿ ಕಡ್ದಿಯೂ
ಹೇಗೆ ಸದಾ ನಿನ್ನನ್ನು ಸ್ವಾಗತಿಸುತ್ತಿತ್ತು
ನೀನು ಬರುವಾಗ!
ಹಾಗೆಯೇ ಈ ಹಾರುವಿಕೆಗೂ
ಈ ಹೋಗುವಿಕೆಗೂ
ಈ ಮನೆಯ ಕಡ್ಡಿ ಕಡ್ಡಿಯೂ
ನಿನಗೆ ವಿದಾಯ ಹೇಳುತ್ತಿದೆ.

ಹಿಂದುತ್ವ ಅಥವಾ ಹಿಂದ್ ಸ್ವರಾಜ್


( ಡಾ. ಯು.ಆರ್. ಅನಂತಮೂರ್ತಿ ಅವರ ಅಪ್ರಕಟಿತ ಕೊನೆಯ ಮತ್ತು ಅನನ್ಯ ಲೇಖನದ ಸಾರ --ರಂಜಾನ್ ದರ್ಗಾ)

 ಅನಂತ ಮೂರ್ತಿ ಅವರು ನಿಧನರಾಗುವುದಕ್ಕೆ ಒಂದು ವಾರ ಮುಂಚೆ ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಎಂಬ ಲೇಖನವನ್ನು ಇ-ಮೇಲ್ ಮಾಡಿ ಅಭಿಪ್ರಾಯ ಕೇಳಿದರು. ೧೨೫೦೦ ರಷ್ಟು ಶಬ್ದಗಳಿಂದ ಕೂಡಿದ ೧೦ ಅಧ್ಯಾಯಗಳ ದೀರ್ಘ ಲೇಖನ ಅದು. ಮೊದಲನೇ ಅಧ್ಯಾಯದಲ್ಲಿ ೨೯ ಸೂತ್ರಗಳಿವೆ. ಅದನ್ನು ಅಂದೇ ಓದಿ ಭಾರತದ ಭವಿಷ್ಯದ ದೃಷ್ಟಿಯಲ್ಲಿ ಬಹಳ ಮಹತ್ವಪೂರ್ಣ ಲೇಖನ ಎಂದು ತಿಳಿಸಿದೆ. ಇದು ದೇಶ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು ಎಂದೆ. ಆದರೆ ಪರಿಸರದ ಕುರಿತು ತಾವು ಮಾರ್ಕ್ಸ್‌ವಾದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಸರಿಯಾದುದಲ್ಲ ಎಂದು ಹೇಳಿದೆ.

ಬಂಡವಾಳಶಾಹಿಗಳಿಂದ ನಡೆಯುವ ಸಂಪನ್ಮೂಲಗಳ ಮತ್ತು ಮಾನವಸಂಪನ್ಮೂಲಗಳ ಶೋಷಣೆ ಕುರಿತು ಮಾರ್ಕ್ಸ್ ೧೯ನೇ ಶತಮಾನದಲ್ಲೇ ವ್ಯಕ್ತಪಡಿಸಿದ ಕಾಳಜಿ ಕುರಿತು ವಿವರಿಸಿದೆ. ಜೀವಜಾಲಸಮತೋಲನದ ಕುರಿತು ನಿಮಗಿರುವ ಕಾಳಜಿ ಮತ್ತು ಮಾರ್ಕ್ಸ್‌ಗೆ ಇದ್ದ ಕಾಳಜಿಗೂ ಯಾವ ವ್ಯತ್ಯಾಸವಿದೆ ಎಂದು ಕೇಳಿದೆ. ನನ್ನ ವಿವರಣೆ ಅವರಿಗೆ ಬಹಳ ಖುಷಿಯಾಯಿತು. ಸಂಪನ್ಮೂಲಗಳ ಶೋಷಣೆ ಕುರಿತು ಮಾರ್ಕ್ಸ್ ಹೇಳಿದ್ದನ್ನು ಸಂಗ್ರಹಿಸಿ ತಮಗೆ ಇ-ಮೇಲ್ ಮಾಡುವೆ ತಮ್ಮ ದೀರ್ಘ ಲೇಖನಕ್ಕೆ ಬಳಸಿಕೊಳ್ಳಬಹುದು ಎಂದೆ. ಆಗ ಆ ದೊಡ್ಡ ಮನುಷ್ಯ ಹೇಳಿದರು: ಹಾಗೆ ಬೇಡ, ನೀನು ನನ್ನ ಲೇಖನ ಕುರಿತು ವಿಮರ್ಶಾತ್ಮಕವಾಗಿ ಬರೆದು ಕಳಿಸು ನಾನು ಲೇಖನದ ಜೊತೆ ಪ್ರಕಟಿಸುವೆ ಎಂದರು. ಆದರೆ ನಾನು ಬರೆಯುವದರೊಳಗೆ ಅವರು ಹೊರಟು ಹೋದರು!

 ಮೋದಿಯವರು ಬಹುಮತದಿಂದ ಚುನಾಯಿತರಾದ ನಂತರ ಅವರ ಬಗ್ಗೆ ಮೀಡಿಯಾದಲ್ಲೂ ಜನಮನದಲ್ಲೂ ಮೂಡಿದಂತೆ ತೋರುತ್ತಿರುವ ಆಶಾವಾದಕ್ಕೂ, ಈ ಬಗ್ಗೆ ನನ್ನಲ್ಲಿ ಇರುವ ಅನುಮಾನಗಳಿಗೂ ಸ್ಪಂದಿಸುವ ಈ ಬರವಣಿಗೆಯನ್ನು ಹೇಗೆ ಶುರುಮಾಡಲಿ? ಎಂದು ಪ್ರಶ್ನೆ ಹಾಕಿಕೊಳ್ಳುತ್ತಲೇ ಅನಂತಮೂರ್ತಿ ಅವರು ಲೇಖನವನ್ನು ಆರಂಭಿಸಿದ್ದಾರೆ.
 ನೆಹರೂ ಮನೆತನವೇ ಈ ದೇಶವನ್ನು ಆಳಲು ಅರ್ಹವೆಂದು ತಿಳಿದ ಭಟರಿಂದ ನೆಹರೂ ಮನೆತನದವರೂ ಬಿಡುಗಡೆಯಾದರು. ನಾವೂ ಬಿಡುಗಡೆಯಾದೆವು ಎಂದು ಹೇಳುತ್ತಲೆ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರು ದುಷ್ಟರಿಂದ ಕೊಲೆಗೀಡಾದುದನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಮನೆತನದಿಂದ ಬಿಡುಗಡೆಯಾದ ದೇಶ ಅಧ್ಯಕ್ಷೀಯ ಮಾದರಿಯ ಸರ್ಕಾರದ ವ್ಯವಸ್ಥೆಯ ಕಡೆಗೆ ಒಯ್ಯುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಬಹುಮತ ಪಡೆದವರೊಬ್ಬರು ಅಧಿಕಾರಕ್ಕೆ ಬಂದಾಕ್ಷಣ ಒಪ್ಪಿಕೊಳ್ಳಬೇಕೆಂಬುದು ಪ್ರಜಾತಂತ್ರದ ನಿಯಮವೆಂದು ಹೇಳುವುದನ್ನು ನಾನು ಒಪ್ಪಲಾರೆ. ಬಹುಮತವಿಲ್ಲದ್ದಕ್ಕೆ ಅವಕಾಶ ಇರುವುದೇ ಪ್ರಜಾತಂತ್ರದ ಅಡಿಪಾಯ ನನ್ನ ಪಾಲಿಗೆ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಬಹುಮತವಿಲ್ಲದ್ದಕ್ಕೆ ಅವಕಾಶ ಇರುವುದೇ ಪ್ರಜಾತಂತ್ರದ ಅಡಿಪಾಯ ನನ್ನ ಪಾಲಿಗೆ. ಆದ್ದರಿಂದ ಮೋದಿಯವರನ್ನು ಅನುಮಾನದಿಂದ ನೋಡುವ ನನ್ನನ್ನು ದೇಶಾದ್ಯಂತ ಹೊಲಸು ಮಾತುಗಳಲ್ಲಿ ಜರಿದವರನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮೊಡನೆ ಮಾತನಾಡುವೆ ಎಂದು ಅವರು ಓದುಗರ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.
  ...ಭಿನ್ನವಾಗಿ ಯೋಚಿಸುವಾತ ಗೋಡ್ಸೆ. ಅವನ ಭಾರತ ಪ್ರೀತಿಯಲ್ಲಿ ಅಹಿಂಸಾವಾದಿ ಗಾಂಧಿ ಒಂದು ಕಾಲ್ತೊಡಕು ಎಂದು ಸಾವರ್ಕರರನ್ನು ಓದಿದ್ದ ಗೋಡ್ಸೆ ಪ್ರಾಮಾಣಿಕವಾಗಿಯೇ ತಿಳಿದಿದ್ದ. ಮೋದಿಯವರ ಆವೇಶಪೂರಿತವಾದ ದೇಶಪ್ರೇಮದ ಮಾತುಗಳನ್ನು ಗೋಡ್ಸೆಯ ಕೊನೆಯ ಭಾಷಣದ ಜೊತೆ ಹೋಲಿಸಬೇಕು. ಒಂದು ವ್ಯತ್ಯಾಸ ಇದೆ ಗಾಂಧಿ ದೇಶದಲ್ಲಿ ಬಲಿಷ್ಟ ಶಕ್ತಿಯಾಗಿದ್ದಾಗ ಅದನ್ನು ಕೊನೆಗಾಣಿಸಲೆಂದು ಬೇರಾವ ಮಾರ್ಗವೂ ಕಾಣದೆ ಅವನು ಗಾಂಧಿಯನ್ನು ಕೊಂದ.

 ಕಾರ್ಪೊರೇಟ್ ಮಾಲೀಕರು ಮಾಡುವ ಬೇಟೆಯನ್ನು ನಾವೀಗ ಗ್ಲೋಬಲೈಸೇಶನ್ ಎಂದು ಕರೆಯುತ್ತೇವೆ. ಸಹಾಯಕರಿಗೆ ಬೇಟೆಯಲ್ಲಿ ಅಷ್ಟಿಷ್ಟು ಮಾಂಸ ಸಿಗುವಂತೆ ನಮಗೂ ಸಿಗುತ್ತ ಇದೆ. ಬಡದೇಶಗಳಿಂದ ಐಟಿ ಬಿಟಿ ಕೂಲಿಗೆ ಹೋಗುವವರು, ಹೊರದೇಶದವರಿಗೆ ಚೀಪಾದ ವೇತನ ಪಡೆದು ತಮ್ಮ ಲಾಭ ಹೆಚ್ಚಿಸುವವರಾಗಿ ಕಾಣುತ್ತಾರೆ.

 ಫಲವತ್ತಾದ ಮಣ್ಣು ನೀರನ್ನು ಉಣ್ಣುವಂತೆ ಮಾಡುವ ಬಡವರ ಉಳುವ ಹಕ್ಕನ್ನು ಕಸಿದುಕೊಳ್ಳಬಾರದು. ಕೃಷಿಕಜೀವಿಗಳ ನೆಲವನ್ನು ವಿದ್ಯುತ್ ಸ್ಥಾವರಗಳಿಗಾಗಿ, ಐಟಿ ಬಿಟಿಗಳನ್ನು ವಿಸ್ತರಿಸುವುದಕ್ಕಾಗಿ, ಗಣಿಗಾರಿಕೆಗಾಗಿ ಪಂಚತಾರಾ ಹೋಟೆಲುಗಳ ಏಕತಾನತೆಗಾಗಿ ಬಳಸಕೂಡದು.

 ವಿಮಾನ ಸಂಚಾರಿಗಳಾಗಿ ಬಿಟ್ಟ ಪಾಶ್ಚಾತ್ಯರು ಈಗ ಯಾವ ಪಾವಿತ್ರ್ಯದ ಭಾವನೆಯೂ ಇಲ್ಲದ ಕೇವಲ ವ್ಯಾಪಾರಿಗಳಾದ ನಿರ್ದಯಿ ಬೇಟೆಗಾರರಾಗಿಬಿಟ್ಟಿದ್ದಾರೆ.

 ನಮ್ಮ ಒಳಗೂ ನಮ್ಮ ಸುತ್ತಲೂ ಇರುವ ಈವಿಲ್‌ನ ಶತಾವತಾರಗಳನ್ನು ಕಾಣಲು ಪ್ರಯತ್ನಿಸುವೆ. ಈವಿಲ್ ನಮ್ಮ ಕಾಲದಲ್ಲಿ ಗಣಿಗಳು, ಡ್ಯಾಮ್‌ಗಳು, ವಿದ್ಯುತ್ ಸ್ಥಾವರಗಳು. ನೂರಾರು ಸ್ಮಾರ್ಟ್ ಸಿಟಿಗಳು. ಮರಗಳನ್ನು ನಾಶಮಾಡಿ ಅಗಲ ಮಾಡಿದ ನೆರಳಿಲ್ಲದ ರಸ್ತೆಗಳು. ದಿಕ್ಕು ತಪ್ಪಿ ಹರಿದು ಪಂಚತಾರಾ ಹೋಟೆಲುಗಳ ಕಕ್ಕಸ್ಸುಗಳನ್ನು ತೊಳೆಯುವ ನೀರಾಗಿ ಸಲ್ಲುವ ನದಿಗಳು. ಗಣಿಗಾರಿಕೆಯಿಂದ ಬೋಳಾದ ಗಿರಿಜನರ ದೇವಾಲಯಗಳಾಗಿದ್ದ ಗುಡ್ಡಗಳು. ಗುಬ್ಬಚ್ಚಿಗಳು ಇಲ್ಲದ ಪೇಟೆಗಳು. ಹಕ್ಕಿ ಕೂರದ ಹಸಿರು ಮರಗಳು. ನಮ್ಮ ಒಳಗೇ ಪವರ್‌ನ ರುಚಿಕಂಡ ಈವಿಲ್ ಇದೆಯೆಂದು ಕಂಡು ಸತತ ಶೋಧದಲ್ಲಿ ಅದನ್ನು ಮೀರುವುದು ಗಾಂಧಿ ಮಾರ್ಗ. ಈ ಈವಿಲ್ ನಮ್ಮ ಹೊರಗೆ ಇದೆ ಎಂದು ತಿಳಿಯುವುದು ಗೋಡ್ಸೆ ಮಾರ್ಗ. ಗಾಂಧಿ ಪಾರ್ಥನೆಗೆ ಸಿದ್ಧವಾಗುತ್ತ ಇದ್ದಾರೆಂಬುದು ಇವನನ್ನು ಬಾಧಿಸಲಿಲ್ಲ.   ಕ್ಷಾತ್ರ ಧರ್ಮಗಳು ಆಳುವ ಲೋಕದಲ್ಲಿ (ಅಮೆರಿಕ, ಇಂಗ್ಲೆಂಡ್, ಚೀನಾ, ರಷ್ಯಾ ಇತ್ಯಾದಿ) ಗಾಂಧಿ ಮತ್ತು ಟಾಗೋರರು ಅನುಮಾನಿಸಿದ ರಾಷ್ಟ್ರಕಲ್ಪನೆ ಇನ್ನೂ ಕಾರ್ಪೊರೇಟ್ ರೂಪಗಳಲ್ಲಿ ಮುಂದುವರಿದಿವೆ. ಅಂತಾರಾಷ್ಟ್ರೀಯ ಮುಖವಾಡ ತೊಟ್ಟಿವೆ.

 ಈ ಭೂಮಿಯನ್ನು ರಸಹೀನವಾಗಿಯೂ, ಹರಿಯುವ ನದಿಗಳನ್ನು ವಿಷಪೂರಿತವಾಗಿಯೂ ಮಾಡುವ, ಉಸಿರಾಡಲಾರದ, ಯಾರದೂ ಅಲ್ಲದ, ನಿನ್ನೆಗಳನ್ನು ಮರೆತ ನಾಡಾಗಿ ಮಾಡುವ ಡೆವಲಪ್‌ಮೆಂಟ್ ಎಂಬುದು ಎಲ್ಲರಲ್ಲೂ ಇರಬಹುದಾದ ಆಕರ್ಷಕವಾದ ಆಸೆಗಳ ಉಲ್ಬಣ ಸ್ಥಿತಿ. ಈ ಉಲ್ಬಣಗೊಂಡ ಮಾನವಕೇಂದ್ರಿತ ದುರಹಂಕಾರಕ್ಕೆ ತುಂಡು ತೋಳಿನ ಜುಬ್ಬದಲ್ಲೂ, ಎತ್ತಿಮಾತಾಡುವ ಗದ್ದದಲ್ಲೂ ಭಾರತವನ್ನು ತಳ್ಳುವವರಲ್ಲಿ ಮೋದಿಯವರೂ ಒಬ್ಬರಾಗಿ ಕಾರ್ಪೊರೇಟರ್‌ಗಳಿಗೆ ೨೪ ಗಂಟೆಗಳೂ ವಿದ್ಯುತ್ ಹರಿಸುವ ನಾಯಕಮಣಿಯಾಗಿ ಕಂಡಾರೆಂಬುದನ್ನು ಊಹಿಸುವೆ. ಮೋದಿ ಕರಪ್ಟ್ ಅಲ್ಲ ಎಂದು ಹೇಳಲು ಯಾರೂ ಮರೆಯುವುದಿಲ್ಲ. ಇದೊಂದು ಹೊಗಳುವ ಮಾತಾಗಿರುವುದೇ ದುರಂತ.
 ಸಾವರ್ಕರ್ ಬರೆದ ಹಿಂದುತ್ವ ವಿಶ್ಲೇಷಣೆಯನ್ನು ಸುಮಾರು ಆ ಕಾಲದಲ್ಲೇ ಹುಟ್ಟಿದ ಗಾಂಧಿಯವರ ಹಿಂದ್ ಸ್ವರಾಜ್ ಪುಸ್ತಕದ ಜೊತೆ ಹೋಲಿಸುತ್ತೇನೆ.

 ಗಾಂಧಿ ತನ್ನ ಒಳಗಿನ ದೇವರನ್ನು ಮುಟ್ಟುವುದು, ಮುಟ್ಟಿ ಅವನ ಮಾತು ಕೇಳಿಸಿಕೊಳ್ಳುವುದು ಒಂಟಿಯಾಗಿ, ಉಪವಾಸದಲ್ಲಿ, ಮೌನದಲ್ಲಿ. ತಾನು ಹೋರಾಡಿ ಗಳಿಸಿದ ಸ್ವತಂತ್ರ ಭಾರತದ ಲೌಕಿಕ ಹಿತವನ್ನು ಕಡೆಗಣಿಸುವ ಅವರ ಕೊನೆಯ ಉಪವಾಸ, ತನಗೆ ಪ್ರಿಯರಾದ ನೆಹರೂ ಪಟೇಲರ ವಿರೋಧವಾಗಿಯೂ ಮಾಡಿದ ಉಪವಾಸ, ಆತ್ಮಸಾಕ್ಷಿಯದು. ಈ ಸಾಕ್ಷಿತ್ವ ಸಾಧ್ಯವಾದ್ದು ದೇವರ ಕೃಪೆಯಿಂದ.

 ಒಳ್ಳೆಯತನದಷ್ಟೇ ದುರಾಸೆಯೂ ಆತ್ಮರತನಾದ ಮನುಷ್ಯನ ಗುಣಗಳಲ್ಲಿ ಒಂದು; ಆದ್ದರಿಂದ ಅವನನ್ನು ಹಿಡಿತದಲ್ಲಿ ಇಡುವ ಹದ್ದುಬಸ್ತುಗಳ ಅಗತ್ಯಕ್ಕಾಗಿಯೆ ಸ್ಟೇಟ್ ಎಂಬುದು ಹುಟ್ಟಿಕೊಂಡಿತು ಎಂಬುದಕ್ಕೆ ಒಂದು ಗಾಢವಾದ ಬೌದ್ಧ ಕಥೆಯಿದೆ.
 ಸೃಷ್ಟಿಯ ಆದಿಯಲ್ಲಿ ಭೂಮಿಯ ಮೇಲೆಲ್ಲ ಮಾನವನಿಗೆ ಬೇಕಾದ ಆಹಾರ ಹಾಲಿನ ಕೆನೆಯಂತೆ ಹರಡಿಕೊಂಡಿರುತ್ತಿತ್ತು. ಪ್ರತಿ ಮುಂಜಾನೆ, ಪ್ರತಿ ಮನುಷ್ಯ ಪ್ರತಿ ದಿನವು ತನಗೆ ಬೇಕಾದಷ್ಟು ಆಹಾರವನ್ನು ನೇರವಾಗಿ ಭೂಮಿಯಿಂದ ಪಡೆದುಕೊಳ್ಳುತ್ತಿದ್ದ. ಹಸಿವನ್ನು ಹಿಂಗಿಸಿಕೊಳ್ಳಲು ದೈಹಿಕ ಶ್ರಮದ ದುಡಿಮೆ ಅಗತ್ಯ ಇರದ ಕಾಲ ಅದು. ಒಮ್ಮೆ ಒಬ್ಬನಿಗೆ ಆಸೆ ಹುಟ್ಟಿತು. ಪ್ರತಿದಿನ ಯಾಕೆ ನಾನು ಆಹಾರವನ್ನು ಪಡೆದುಕೊಳ್ಳುವ ಶ್ರಮ ಪಡಬೇಕು? ಎರಡು-ಮೂರು ದಿನಗಳಿಗೆ ಸಾಕಾಗುವಷ್ಟನ್ನು ಒಟ್ಟಿಗೆ ಸಂಗ್ರಹಿಸಬಹುದಲ್ಲವೆ? ಹೀಗೆ ಇವನು ಸಂಗ್ರಹಿಸಿದ್ದನ್ನು ನೋಡಿ ನೆರೆಮನೆಯವನಿಗೂ ಆಸೆಯಾಗಿ ಅವನು ಒಂದು ವಾರಕ್ಕೆ ಬೇಕಾದಷ್ಟನ್ನು ಸಂಗ್ರಹಿಸಿ ಇಟ್ಟುಕೊಂಡ. ಇದು ಹೀಗೆ ಬೆಳೆದುನ ಪೈಪೋಟಿಯಲ್ಲಿ ಜನ ಭೂಮಿಯ ಮೇಲಿನ ಆಹಾರದ ಕೆನೆಯನ್ನು ಸಂಗ್ರಹಿಸತೊಡಗಿದರು. ಆಗ ಪ್ರತಿನಿತ್ಯ ಬೇಕಾದಷ್ಟು ಆಹಾರದ ದಯೆಯನ್ನು ತೋರುತ್ತಿದ್ದ ಭೂತಾಯಿ ಬರಿದಾದಳು. ಇದರಿಂದ ಭೀತರಾದ ಜನರು ಒಟ್ಟಾಗಿ ಸೇರಿ ಪರಿಹಾರ ಹುಡುಕಿದರು. ಮಹಾಸಮ್ಮತ ಒಬ್ಬನನ್ನು ಎಲ್ಲರೂ ಸೇರಿ ಆಯ್ಕೆ ಮಾಡಿದರು. ಅವನು ಹಾಕುವ ಕಟ್ಟುನಿಟ್ಟಿನ ನಿಯಮದಲ್ಲಿ ತಾವು ಬಾಳುವುದೆಂದು ನಿರ್ಧರಿಸಿದರು. ಸರ್ವಸಮ್ಮತ ನಿಯಮಗಳ ಸ್ಟೇಟ್ ಮನುಷ್ಯನಿಗೆ ಯಾಕೆ ಅಗತ್ಯವೆಂಬ ಅದ್ಭುತ ಕಥೆ ಇದು. ಈ ಕಾಲಕ್ಕೂ ಸಲ್ಲುವ ಕಥೆ ಎನ್ನಬಹುದು.
 ಈ ಭೂಮಿಯೊಂದು ಅಕ್ಷಯಪಾತ್ರೆ ಎಂದು ತಿಳಿಯುವುದರಿಂದಲೇ ಈ ಎಲ್ಲಾ ಗೊಂದಲಗಳು ಹುಟ್ಟಿಕೊಳ್ಳುತ್ತವೆ. (ಡೆವೆಲಪ್‌ಮೆಂಟ್ ದುರಾಸೆಗಳು) ಅಕ್ಷಯಪಾತ್ರೆಯಿಂದ ಬಾಚಿ ಬಾಚಿ ಉಣ್ಣುವುದಕ್ಕೆ ಪೈಪೋಟಿ ಶುರುವಾಗುತ್ತದೆ. ಆತ್ಮನಿರೀಕ್ಷಣೆ ಮಾಡಿಕೊಳ್ಳುವಾತ ಅಕ್ಷಯಪಾತ್ರೆಯಿಂದ ಆಕರ್ಷಿತನೂ ಆಗುತ್ತಾನೆ. ಅಂತೆಯೆ ಇದು ಅಕ್ಷಯ ಎಂದು ತಿಳಿಯುವುದು ಭ್ರಾಂತಿ ಇರಬಹುದು ಎನ್ನುವ ವಿಚಾರ ಅವನನ್ನು ಬಾಧಿಸುತ್ತದೆ. (ಮಾರ್ಕ್ಸ್ ಕಲ್ಪನೆಯಲ್ಲಿ ಸ್ಟೇಟ್ ಉದುರಿಹೋಗುವಷ್ಟು ಉತ್ಪಾದನಾ ಪ್ರಗತಿ ಸಾಧ್ಯ. ಯಾಕೆಂದರೆ ಈ ಭೂಮಿ ಅಕ್ಷಯಪಾತ್ರೆ)
 ಮನುಷ್ಯ ಒಳ್ಳೆಯವನು ಅಲ್ಲ. ಕೆಟ್ಟವನು ಅಲ್ಲ ಎಂದು ತಿಳಿಯುವುದು ನಮ್ಮ ಹೊರಗಿರುವ ಮನುಷ್ಯರನ್ನು ನೋಡುವುದರಿಂದ ಮಾತ್ರವಲ್ಲ, ನಮ್ಮಲ್ಲೂ ಒಳಿತು/ಕೆಡುಕುಗಳು ಘರ್ಷಣೆಯಲ್ಲಿ ಇರುತ್ತವೆ ಎಂದು ತಿಳಿಯುವುದರಲ್ಲಿ. ಹೀಗೆ ಆತ್ಮಪರೀಕ್ಷೆಯಲ್ಲಿ ಹೊರಗಿನ ಲೋಕವನ್ನು ನೋಡಿದಾಗ ಒಂದು ಸ್ಟೇಟ್ ಎಷ್ಟು ಸ್ಪಂದನಶೀಲವಾಗಿ ಉಳಿದಿರಬೇಕೆಂಬ ಪ್ರಜ್ಞೆ ನಮ್ಮಲ್ಲಿ ಮೂಡುತ್ತದೆ. ಮತೀಯತೆಯನ್ನೋ (ಹಿಂದು ಅಥವಾ ಇಸ್ಲಾಮಿಕ್ ರೇಸನ್ನೋ ಆಧಾರವಾಗಿಟ್ಟುಕೊಂಡು ಬಿಟ್ಟಾಗ ಮನುಷ್ಯ ವರ್ತನೆಯ ನೈತಿಕ ಬಿಕ್ಕಟ್ಟುಗಳು ಮಾಯವಾಗುತ್ತವೆ.

 ಸ್ಥಳೀಯರಾದವರನ್ನು ಹೊರಗಟ್ಟಿ ಯಹೂದ್ಯರಿಗೆಂದು ಇಸ್ರೇಲನ್ನು ಪಾಶ್ವಾತ್ತರು ಸೃಷ್ಟಿಸಿದಾಗ ಗಾಂಧಿ ವಿರೋಧಿಸಿದರು. ಚರಿತ್ರೆಯಲ್ಲಿ ಹಿಮ್ಮುಕ ನಡೆ (ರಿವೈವಲಿಸಂ) ಸಲ್ಲದು. ಯಹೂದಿಗಳು ತಾವು ಇರುವ ಊರೇ ತಮ್ಮದು ಎಂದು ತಿಳಿದು ಬದುಕುವುದೇ ತಮ್ಮ ಪಾಡೆಂದು ಅರಿತು ಎಂದಿನಂತೆ ತಾವು ಬಾಳುವ ಲೋಕವನ್ನು ಬೆಳೆಸಬೇಕು. ಗಾಂಧಿ ಹೀಗೆ ಹೇಳಿ ಹಲವು ಯಹೂದ್ಯ ಚಿಂತಕರಿಗೆ ಸಲ್ಲದವರಾಗಿದ್ದಾರೆ. ಸಾವರ್ಕರ್‌ಗೂ ನೇಷನ್ ಸ್ಟೇಟ್ ಬಗ್ಗೆ ಗಾಂಧಿ ಉದಾಸೀನರೆಂದು ದೇಶದ್ರೋಹಿಯಾಗಿ ಕಂಡಿರಬಹುದು.

 ತಮ್ಮ ನೆಲಕ್ಕಾಗಿ ಹೋರಾಡುವ ಪ್ಯಾಲೆಸ್ತೀನಿಯರನ್ನು ಅಮೆರಿಕದ ನೆರವಿನಿಂದ ಹತ್ತಿಕ್ಕುವ ಇಸ್ರೇಲ್ ಈ ನಮ್ಮ ಕಾಲದ ಆತಂಕಕ್ಕೆ ಕಾರಣವಾಗಿದೆ. ಇಸ್ಲಾಮಿಕ್ ಆತಂಕವಾದಿಗಳೂ ಮುಸ್ಲಿಮರಿಗಾದ ಅನ್ಯಾಯದಿಂದ ಕ್ರುದ್ಧರಾಗಿ ಯಾವ ಪ್ರತಿಹಿಂಸೆಗೂ ಅಂಜದವರಾಗಿದ್ದಾರೆ. ಇಸ್ರೇಲಿನ ರೀತಿಯಲ್ಲೇ ಸಾವರ್ಕರ್ ಪ್ರೇರಿತ ಹಿಂದುತ್ವದ ರಾಷ್ಟ್ರವನ್ನು ಕಟ್ಟುವ ಪ್ರೇರಣೆಯ ಮೋದಿ ಸರ್ಕಾರ ಈಗ ಇಸ್ರೇಲ್ ಪರ ನಿಂತಿರುವುದು ಸ್ಪಷ್ಟವಾಗಿದೆ. ವಾಜಪೇಯಿ ಸರ್ಕಾರಕ್ಕಿಂತ ಭಿನ್ನವಾದ ನಿಲವು ಗುಜರಾತ್ ಯಜ್ಞದಲ್ಲಿ ಬ್ರಹ್ಮ ಕೂತಿದ್ದ ಮೋದಿಯವರದು.

 ಇಸ್ರೇಲ್ ಭೂಪಟದಲ್ಲಿ ನೋಡುವುದಕ್ಕೂ ಏಷ್ಯಾದ ಹೃದಯದಲ್ಲಿ ಇರಿದ ಚೂರಿಯ ಆಕಾರದಲ್ಲಿದೆ.
 ಆರ್ಥೊಡಕ್ಸ್ ಎಂದರೆ ಮಡಿವಂತ ಜನ- ವೈದಿಕರಿರಲಿ, ಕೋಶರ್ ಆಚರಿಸುವ ಯಹೂದ್ಯರಿರಲಿ, ಇಸ್ಲಾಮಿಕ್ ಭಕ್ತರಿರಲಿ ಸ್ಟೇಟ್ ಅನ್ನು ಸ್ವತಃ ಕಟ್ಟುವವರಲ್ಲ. ಕಟ್ಟುವ ಲೌಕಿಕ ಧೀರರಿಗೆ ಇವರು ಎಂಬ್ಲೆಮ್ ಆಗಿ ಅಗತ್ಯ. ವೈದಿಕರಂತೂ ಈಚೆಗೆ ರಾಜಕಾರಣಿಗಳ ಜಾತಕ ನೋಡುವ ಶ್ರೀಮಂತ ಜೋತಿಷಿಗಳಾಗಿ ಬಿಟ್ಟಿದ್ದಾರೆ.

 ಅಪರಾಧಕ್ಕೆ ಕ್ರೈಸ್ತಧರ್ಮದಲ್ಲಿ ಅಪರಾಧಿ ಒಂದು ನಿರ್ದಿಷ್ಟ ಜೀವಿಯಾಗಿ ಹೊಣೆಯಾಗುತ್ತಾನೆ. ಹಿಂದು ದರ್ಶನ ಎಕಾಲಾಜಿಕಲ್. ಅಪರಾಧಿ ಒಬ್ಬನಾದರೂ ನಾವೆಲ್ಲರೂ ಅಪರಾಧಿಗಳೇ. ಗುಜರಾತಿನಲ್ಲಿ ನಡೆದ ಹತ್ಯಾಕಾಂಡಕ್ಕೆ ತಾನೇ ಹೊಣೆಯೋ ಎಂಬಂತೆ ಟೀಸ್ಟಾ ಕೊನೆತನಕ ಹೋರಾಡಿದಳು.

 ಎಲ್ಲೋ ಪ್ರಕೃತಿಗೆ ಮಾಡಿದ ಹಿಂಸೆ ಇನ್ನೆಲ್ಲೋ ಪರಿಣಾಮ ಮಾಡುತ್ತದೆ. ಆದ್ದರಿಂದ ಡೆವೆಲಪ್‌ಮೆಂಟ್ ರಾಜಕೀಯದ ಈವಿಲ್ ಸಹಿಸಲಾರದ ಸೆಖೆಯಾಗಿ, ಛಳಿಯಾಗಿ, ಪ್ರವಾಹವಾಗಿ ಅಲ್ಲಿ ಇಲ್ಲಿ ಎಲ್ಲಿ ಅನ್ನಗೊಡದಂತೆ ವಿಶ್ವಕ್ಕೇ ಮಾರಕವಾಗಬಲ್ಲುದು. ಒಂದು ದೇಶದ ಅಪರಾಧವನ್ನು ಇನ್ನೊಂದು ದೇಶಕ್ಕೆ ಸಾಂಕ್ರಾಮಿಕವೆನ್ನುವಂತೆ ಹರಡಬಲ್ಲ ವ್ಯವಸ್ಥೆ ಕಾರ್ಪೊರೇಟ್‌ಗಳಿಗೆ ಇವೆ. ಇರಾಕ್‌ನಲ್ಲಿ ನಿಷ್ಕಾರಣವಾಗಿ ಅಮೆರಿಕ ನಡೆಸಿದ ಹತ್ಯೆ ನಮ್ಮನ್ನೂ ಈಗ ಪೀಡಿಸತೊಡಗಿದೆ.

 ಗುಜರಾತಿನಲ್ಲಿ ಒಬ್ಬ ಭಾರತದ ಹೀರೊ ತಯಾರಾಗಿದ್ದಾರೆ. ಹೇಗೆ? ಗುಜರಾತಿನ ಹತ್ಯಾಕಾಂಡ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಯಿತು. ಅದನ್ನು ತಡೆಯಲು ಪ್ರಯತ್ನಪಟ್ಟು ಸೋತರು ಎಂದರೆ ಅವರು ನಿರ್ಬಲರಾಗುತ್ತಾರೆ. ಇಂತಹ ಮಾತನ್ನು ಯಾರೂ ಹೇಳುವುದಿಲ್ಲ. ಅಡಿಗರು ಬಳಸಿದ ಇಮೇಜೊಂದು ನೆನಪಾಗುತ್ತದೆ. ಯಜ್ಞಗಳು ನಡೆಯುವಾಗ ಹಲವಾರು ಜನ ಪ್ರವೃತ್ತರಾಗಿರುತ್ತಾರೆ. ಏನಾದರೊಂದು ಕಾರ್ಯದಲ್ಲಿ ತೊಡಗಿರುತ್ತಾರೆ. ಆದರೆ ಯಾವ ಕೆಲಸವನ್ನೂ ಮಾಡದೆ ಸುಮ್ಮನೆ ಇರುವ ಒಬ್ಬ ಬಹಳ ಮುಖ್ಯ ಮಂತ್ರಜ್ಞ ಇರುತ್ತಾನೆ. ಇವನನ್ನು ಯಜ್ಞದಲ್ಲಿ ಬ್ರಹ್ಮ ಎಂದು ಕರೆಯುತ್ತಾರೆ. ಏನನ್ನೂ ಮಾಡದವ ಈ ಬ್ರಹ್ಮ. ಮೋದಿಯೂ ಬ್ರಹ್ಮ ಕೂತಿದ್ದ. ಆದದ್ದು ಆಯಿತು. ರಾಸ್ ಕಾಲ್ನಿಕೋವ್ ಒಂದು ಕೊಲೆ ಮಾಡಿ ಇದು ಮಾಡತಕ್ಕದ್ದಲ್ಲ ಎಂಬ ಜ್ಞಾನದಲ್ಲಿ ನರಳುತ್ತಾನೆ. ಒಬ್ಬ ಹತಾಶ ಸೂಳೆ ಅವನ ಪ್ರೇಮದ ಗುರುವಾಗುತ್ತಾಳೆ. ಮೋದಿಯವರಿಗೂ ಬೇಸರವಿದೆ. ಅದು ಎಂತಹ ಬೇಸರವೆಂದರೆ ಓಡುತ್ತಿರುವ ಕಾರಿನಡಿ ಒಂದು ನಾಯಿಮರಿ ಸಿಕ್ಕಿಬಿದ್ದರೆ ಏನು ಮಾಡಲು ಸಾಧ್ಯ? ಅಯ್ಯೋ ಪಾಪ ಎನ್ನಬಹುದು. ಓಡುತ್ತ ಇರುವ ಕಾರು ನಿಂತರೆ ಕುನ್ನಿ ಬದುಕೀತೆ?

 ಇಲ್ಲಿ ನಾನೊಂದು ವಿಚಾರವನ್ನು ಮಾಡುವ ಧೈರ್ಯ ಮಾಡುತ್ತೇನೆ. ಭಾರತ ಇದಕ್ಕಾಗಿಯೇ ಮೋದಿಯನ್ನು ಮೆಚ್ಚಿರುವುದು. ಹೇಗೆ ತರಳೆ ಮಾಡುವ ಅಲ್ಪಸಂಖ್ಯಾತರ ಬಾಯಿಯನ್ನು ಈತ ಮುಚ್ಚಿಸಿದ? ಬರ್ಖಾ ದತ್ತರು ೨೪ ಇಂಟು ೭ ಎನ್‌ಡಿ ಟಿವಿಯಲ್ಲಿ ಒಬ್ಬ ಪ್ರಸಿದ್ಧ ಮುಸ್ಲಿಮನನ್ನು ಕರೆಸಿ ಮೋದಿಯನ್ನು ಹೊಗಳಿಸುತ್ತಾರೆ. ಈಗ ನಾವು ಕಾಣುವುದು ನಿಷ್ಠುರ ಮಾತಿನ ಮೋದಿಯವರ ಮುಖವನ್ನಲ್ಲ. ಎಲ್ಲರಿಗೂ ಇಷ್ಟವಾಗುವ ಒಬ್ಬ ಮೋದಿಯನ್ನು. ಎಲ್ಲರೂ ಸೇರಿ ಮೀಡಿಯಾವೂ ಸೇರಿ ಸೃಷ್ಟಿ ಮಾಡುವ ಈ ಮೋದಿ ಯಾರು? ಮೋದಿ ತನ್ನ ಮನೆಯಲ್ಲಿರುವ ಗಾಂಧಿಯ ಪುಟ್ಟ ಚಿತ್ರಕ್ಕೆ ಹೂವು ಮುಡಿಸುವುದನ್ನು, ಕೈಮುಗಿಯುವುದನ್ನು ಮತ್ತೆ ಮತ್ತೆ ನಾವು ಟಿವಿಯಲ್ಲಿ ನೋಡುತ್ತೇವೆ. ಅವರ ಬಗೆಗಿದ್ದ ಸಂಶಯಗಳೆಲ್ಲಾ ನಿವಾರಣೆಯಾಗಿ ಅವರೊಂದು ಶುದ್ಧರೂಪದ ಹೊಸ ಕಾಲದ, ಮುನ್ನೋಟದ ನಿದ್ದೆಗೆಟ್ಟು ಕೆಲಸ ಮಾಡುವ, ಆಕರ್ಷಕ ಬಟ್ಟೆ ತೊಡುವ, ಪೇಟ ಸುತ್ತುವ, ಕೈಯಲ್ಲಿ ಗದೆ ಹಿಡಿದ ನಾಯಕನಾಗಿ ಒಳಗೆ ಬದಲಾಗದೆ ಹೊರನೋಟಕ್ಕೆ ಬದಲಾಗುತ್ತಾನೆ.
 ನೋಡಿ ಹೇಗೆ ಅಂಬೇಡ್ಕರ್‌ವಾದಿಗಳ ಬಾಯಿಯನ್ನು ಮೋದಿ ಮಧ್ಯಪ್ರದೇಶದಲ್ಲಿ ಮುಚ್ಚಿಸಿದ? ಆಮೇಲೆ ಅಂಬೇಡ್ಕರರ ಪ್ರತಿಮೆಗೆ ಕೈಮುಗಿದ?

 ಇದಕ್ಕೂ ಮಿಗಿಲಾಗಿ ಇನ್ನೊಂದು ಸತ್ಯವನ್ನು ನಾವು ಗಮನಿಸಬೇಕು. ಮಧ್ಯಮ ವರ್ಗಿಗಳಾದ ಶೂದ್ರರು, ದಲಿತರು, ಮುಸ್ಲಿಮರು, ಮೋದಿ ಮಾತುಗಾರಿಕೆಗೆ ಮನಸೋತವರು. ಇವರೆಲ್ಲರೂ ಎಡಪಂಥೀಯ ರಾಜಕಾರಣವನ್ನು ಬಿಟ್ಟವರಂತೆ ಸದ್ಯದ ಮೋಡಿ ಹನಿಮೂನಿನಲ್ಲಿ ಕಾಣುತ್ತಾರಲ್ಲವೆ? ಇನ್ನುಮುಂದೆ ಎಡದ ಮಾತುಗಳನ್ನು ಮೋದಿಯವರ ಡೆವೆಲಪ್‌ಮೆಂಟಿನಿಂದ ಕೊರಗಿ ಕ್ರುದ್ಧಳಾಗುವ ಭೂಮಿಯೇ ಆಡಬೇಕೇನೋ? ಮಳೆ ಗುಡುಗು ಮಿಂಚು ಪ್ರವಾಹ ಭೂಕಂಪಗಳ ಅಸ್ತ್ರವನ್ನು ಭೂಮಿ ಹೇಗೆ ಬಳಸಿಯಾಳು ಎಂಬುದನ್ನು ಲೋಕ ಅನುಭವಿಸಿ ಬಲ್ಲುದು.  ಈಗ ಅನಾದರಕ್ಕೆ ಒಳಗಾದ ಲಿಬರಲ್ ಪ್ರಜ್ಞೆಗೆ ರಾಷ್ಟ್ರ ಎಂಬ ಕಲ್ಪನೆಯೇ ಅದರ ಅತಿಯಲ್ಲಿ ಫ್ಯಾಸಿಸ್ಟ್ ಆಗುತ್ತದೆ ಎಂಬ ಭಯ ಇದೆ.

 ಕನಸನ್ನು ಕಾಣಲಾರದವನು ಮನುಷ್ಯನೇ ಅಲ್ಲ. ಬಹುಜನ ಹಿತದ ನೆಮ್ಮದಿಯ, ಹಸಿರಾದ ನೆಲದ, ತಿಳಿಯಾದ ಆಕಾಶದ ಒಂದು ಕನಸಿದೆ. ಅದು ಗಾಂಧಿಯ ಅಹಿಂಸೆಯ ಕನಸು. ಮನುಷ್ಯ ಕಾಯಕಜೀವಿಯಾಗಿ ಬದುಕುತ್ತಾ ವೈಜ್ಞಾನಿಕವಾಗಿ ಪಡೆದ ಸವಲತ್ತುಗಳನ್ನು ವಿವೇಕದಲ್ಲಿ ಬಳಸಿಕೊಳ್ಳುತ್ತಾ ವಾತಾವರಣದ ಹಿತವನ್ನು ಕೆಡಿಸದಂತೆ ಬಾಳುವ ಕನಸು. ಅಂತಹ ಕನಸಿಗೆ ಭಾರತ ಪರ್ಯಾಯವಾಗಬೇಕೆಂಬ ಗಾಂಧಿಯವರ ಹಿಂದ್ ಸ್ವರಾಜ್‌ಗೆ ಮೋದಿಯ ಜಯ, ವಿರೋಧವಾದ ವ್ಯಾಖ್ಯೆಯಾಗಿದೆ. ಸಾವರ್ಕರ್ ಹಿಂದುತ್ವ ಕಲ್ಪನೆಗೆ (ಹಾಗೆಂದು ಸಾರದೆ) ಹತ್ತಿರವಾಗಿದೆ.  ಸಾವರ್ಕರ್ ಹೀಗೂ ತಮ್ಮ ಭಾವಲಹರಿಯನ್ನು ಹರಿಬಿಡಬಲ್ಲರು. ಭಾರತ ದೇಶದ ಗುರಿ ಹಿಂದುತ್ವವಾಗುವುದಾದರೆ, ದೇಶದ ಪ್ರಜೆಗಳೆಲ್ಲರನ್ನು ನಾವು ಹಿಂದು ಎಂದು ಭಾವಿಸಬಹುದಾದರೆ ಒಬ್ಬ ಮಹ್ಮದಿಯನನ್ನೂ ಹಿಂದೂ ಎಂದು ಕರೆಯುವುದು ನಿಜವಾಗುವುದು ಯಾವಾಗ? ಯಾವುದೋ ಮುಂದಿನ ಭವಿಷ್ಯ ಕಾಲದಲ್ಲಿ. ಸದ್ಯದಲ್ಲಿ ಅಲ್ಲ.... ಬದಲಾಗಿ ಗಾಂಧಿಯ ಮಾತು: ಯಾವ ರಿಲಿಜನ್ನೂ ಪರಿಪೂರ್ಣವಲ್ಲ. ಆದ್ದರಿಂದ ಪ್ರಪಂಚದ ಎಲ್ಲ ರಿಲಿಜನ್‌ಗಳೂ ಉಳಿದಿರಬೇಕು; ಸಮಾನ ಮರ್ಯಾದೆಯಲ್ಲಿ.

 ಭಾರತದ ಭೂತಕಾಲದ ಚರಿತ್ರೆಯನ್ನು ಕೊಂಡಾಡುತ್ತಾ ಪ್ರಸ್ತುತವಾದುದನ್ನು ಬರೆಯುವುದು ಮತ್ತು ಪ್ರಸ್ತುತ ಕಾಲದಲ್ಲಿ ಎಲ್ಲಾ ಮತಗಳ, ಜಾತಿಯ ಜನರು ಭಾರತಕ್ಕೆ ಮಾಡಿದ ಕೊಡುಗೆಯನ್ನು ಮರೆಯುವುದು ಇವೆಲ್ಲವೂ ಸಾವರ್ಕರ್ ವಾದದಿಂದ ಸುಲಭವಾಗುತ್ತದೆ.
                              ****


ಮಾನವ, ನಿಸರ್ಗ, ಬಸವಣ್ಣ ಮತ್ತು ಮಾರ್ಕ್ಸ್

 ಮಾರ್ಕ್ಸ್‌ವಾದದ ಬಹುಮುಖ್ಯ ಗುರಿ ಮಾನವ ಮತ್ತು ನಿಸರ್ಗದ ಮಧ್ಯೆ ಘನ ಸಂಬಂಧವನ್ನುಂಟು ಮಾಡುವುದೇ ಆಗಿದೆ. ಬಂಡವಾಳಶಾಹಿ ವ್ಯವಸ್ಥೆ ಏಕಕಾಲಕ್ಕೇ ಮಾನವನನ್ನು ಮತ್ತು ನಿಸರ್ಗವನ್ನು ಶೋಷಣೆ ಮಾಡುವಂಥದ್ದು ಎಂಬುದನ್ನು ಕಾರ್ಲ್ ಮಾರ್ಕ್ಸ್ ಅವರು ೧೯ ಶತಮಾನದಲ್ಲೇ ಅರಿತುಕೊಂಡಿದ್ದರು.

 ಎಲ್ಲ ತೆರನಾದ ಶೋಷಣೆಗೆ ಖಾಸಗಿ ಆಸ್ತಿಯೇ ಮೂಲ ಎಂಬುದು ಮಾರ್ಕ್ಸ್‌ವಾದದ ತಿರುಳಾಗಿದೆ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಒಂದೇ ಸಾಲಿನಲ್ಲಿ ಹಿಡಿದಿಡಬಹುದು. ಅದೇನೆಂದರೆ ಖಾಸಗಿ ಆಸ್ತಿಯನ್ನು ರದ್ದುಗೊಳಿಸುವುದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ.

 ಬುದ್ಧ ಹೇಳಿದ ಆಸೆಯೆ ದುಃಖಕ್ಕೆ ಮೂಲ ಎಂಬುದರ ಒಳಗಿನ ಅರ್ಥ, ಖಾಸಗಿ ಆಸ್ತಿಯೆ ದುಃಖಕ್ಕೆ ಮೂಲ ಎಂಬುದಾಗಿದೆ.
 ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ, ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಬಸವಣ್ಣನವರು ಹೇಳುತ್ತಾರೆ. ಮಿಗುತಾಯ ಮೌಲ್ಯವನ್ನು ಅಂದರೆ ಹೆಚ್ಚಿಗೆ ಗಳಿಸಿದ್ದನ್ನು ಶಿವನ ಸೊಮ್ಮು ಎಂಬ ಶರಣಸಂಕುಲದಲ್ಲಿನ ಸಾಮಾಜಿಕನಿಧಿಗೆ ಶರಣರೆಲ್ಲ ಅರ್ಪಿಸುತ್ತಿದ್ದರು. ಕಾಯಕಜೀವಿಗಳನ್ನು ಒಂದುಮಾಡಿ ಖಾಸಿಗಿ ಆಸ್ತಿ ಇಲ್ಲದ ಆದರೆ ಸಾಮೂಹಿಕ ಭದ್ರತೆಯನ್ನು ಒದಗಿಸಿದ ಸಮಾಜವನ್ನು ಕಟ್ಟಿದ ಮೊದಲ ಮಹಾನುಭಾವಿ ಎಂದರೆ ಬಸವಣ್ಣನವರು. ಇಂಥ ಒಂದು ಸಮಾಜವನ್ನು ವಿಶ್ವವ್ಯಾಪಿಯಾಗಿ ಕಟ್ಟಲು ಪಣ ತೊಟ್ಟವರೆಂದರೆ ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮುಂತಾದವರು.

 ಬಸವಣ್ಣನವರು ಕೂಡ ಮಾನವ ಮತ್ತು ನಿಸರ್ಗದ ಸಂಬಂಧದ ಕುರಿತು ಆಳವಾದ ಚಿಂತನೆ ಮಾಡಿದ್ದಾರೆ. ಸಕಲಜೀವಾತ್ಮರಿಗೆ ಲೇಸನೆ ಬಯಸಿದ್ದಾರೆ. ಮನುಷ್ಯ ಈ ವಿಶ್ವದ ಕೇಂದ್ರಬಿಂದು ಅಲ್ಲ, ಸಕಲ ಜೀವಿಗಳೆಲ್ಲ ಈ ವಿಶ್ವದ ಕೇಂದ್ರಬಿಂದು ಎಂದು ಸೂಚಿಸುವ ಮೂಲಕ ಜೀವಜಾಲ ಸಮತೋಲನದ ಅರಿವು ಮೂಡಿಸಿದ್ದಾರೆ. ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಹೇಳುವ ಮೂಲಕ ಮಾನವ, ಪ್ರಾಣಿ, ಪಕ್ಷಿ, ಭೂಮಿ ಮತ್ತು ಒಟ್ಟಾರೆ ನಿಸರ್ಗವೆಲ್ಲ ಜೀವಜಾಲಿದಲ್ಲಿದೆ ಎಂಬ ಅತ್ಯಾಧುನಿಕವಾದ ವೈಜ್ಞಾನಿಕ ಸತ್ಯವನ್ನು ೧೨ನೇ ಶತಮಾನದಲ್ಲೇ ಹೇಳಿದ್ದಾರೆ.

 ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ. ಒಮ್ಮನವಾದಡೆ ಒಡನೆ ನುಡಿವನು, ಇಮ್ಮನವಾದಡೆ ನುಡಿಯನು. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ, ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ ಎಂದು ತಿಳಿಸುವ ಮೂಲಕ ಬಸವಣ್ಣನವರು ಜೀವಜಾಲಸಮತೋಲನದ ಮಹತ್ವವನ್ನು ಸಾರುತ್ತಾರೆ. ನಿಸರ್ಗ ವ್ಯವಹಾರದಲ್ಲಿ ಮಾನವರು ಜಾಗರೂಕರಾಗಿರಬೇಕು. ಕನಿಷ್ಠ ಅವಶ್ಯಕತೆಗೆ ತಕ್ಕಷ್ಟು ಮಾತ್ರ ನಿಸರ್ಗದಿಂದ ಪಡೆಯಬೇಕು. ನಿಸರ್ಗವನ್ನು ಸುಲಿಯುವ ಸ್ವಾರ್ಥಿಗಳ ಜೊತೆ ಕೂಡಲಸಂಗಮದೇವ ಮಾತನಾಡುವುದಿಲ್ಲ. ಈ ದೇವರು ಹೇಗೆಂದರೆ ಆತ ಒಂದು ಚಿಕ್ಕ ನಾಣ್ಯದಷ್ಟೂ ಸೋಲುವುದಿಲ್ಲ ಮತ್ತು ಆ ಚಿಕ್ಕ ನಾಣ್ಯದ ಅರ್ಧದಷ್ಟೂ ಗೆಲ್ಲುವುದಿಲ್ಲ. ಆತನ ಉದ್ದೇಶ ನಿಸರ್ಗದಲ್ಲಿ ಸಮತೋಲನ ಕಾಯ್ದುಕೊಳ್ಳುವುದೇ ಆಗಿದೆ ಎಂದು ಬಸವಣ್ಣನವರು ನಿಸರ್ಗದ ಮಹತ್ವವನ್ನು ಮತ್ತು ಮಾನವರ ಜವಾಬದ್ದಾರಿಯನ್ನು ಸೂಚಿಸಿದ್ದಾರೆ.

 ದುಡಿಮೆ ಎನ್ನುವುದೊಂದು ಪ್ರಕ್ರಿಯೆ ಅದರಲ್ಲಿ ಮಾನವ ಮತ್ತು ನಿಸರ್ಗದ ಸಹಭಾಗಿತ್ವವಿರುತ್ತದೆ ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಬಂಡವಾಳಶಾಹಿ ಕೃಷಿಯಲ್ಲಿನ ಎಲ್ಲ ತೆರನಾದ ಅಭಿವೃದ್ಧಿ ಚಾಲಾಕಿತನದ ಅಭಿವೃದ್ಧಿಯಾಗಿದೆ. ಅದು ಕೂಲಿಕಾರರ ಶೋಷಣೆ (ದರೋಡೆ) ಮಾಡುವುದಲ್ಲದೆ ಭೂಮಿಯ ಶೋಷಣೆಯನ್ನೂ ಮಾಡುತ್ತದೆ ಎಂಬುದನ್ನು ಅವರು ೧೯ನೇ ಶತಮಾನದಲ್ಲೇ ಕಂಡುಹಿಡಿದಿದ್ದಾರೆ. ಲಂಗುಲಗಾಮಿಲ್ಲದ ಕೃಷಿ ಅಭಿವೃದ್ಧಿಯನ್ನು ಪ್ರಜ್ಞಾಪೂರ್ಣವಾಗಿ ಹತೋಟಿಯಲ್ಲಿಡದಿದ್ದರೆ ಭೂಮಿಯೆಲ್ಲ ಬಂಜರಾಗುವುದು ಎಂದು ಎಚ್ಚರಿಸಿದ್ದಾರೆ. ನಿಸರ್ಗ ವಿಕಾಸದಲ್ಲಿ ಅವ್ಯವಸ್ಥಿತ ಹಸ್ತಕ್ಷೇಪ ಮಾಡಿದಾಗ ನೈಸರ್ಗಿಕ ಸಮತೋಲನದಲ್ಲಿ ವ್ಯತ್ಯಾಸವಾಗುವುದು. ಅದರಿಂದ ಸಮಾಜದ ಮೇಲೆ ದುಷ್ಪರಿಣಾಮವಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

 ಇಡೀ ಸಮಾಜವಾಗಲಿ, ದೇಶವಾಗಲಿ ಅಥವಾ ವಿಶ್ವದ ಯಾವುದೇ ಸಮುದಾಯದವರಾಗಲಿ ಈ ಪೃಥ್ವಿಯ ಒಡೆಯರಲ್ಲ... ಅವರು ಭೂಮಿಯನ್ನು ಹೆಚ್ಚು ಯೋಗ್ಯವಾಗಿಸಿ ಮುಂಬರುವ ಜನಾಂಗಕ್ಕೆ ಕೊಡಲೇಬೇಕು ಎಂದು ಕಾರ್ಲ್‌ಮಾರ್ಕ್ಸ್ ಹೇಳಿದ್ದು ಅರ್ಥಪೂರ್ಣವಾಗಿದೆ.

 ಯು.ಆರ್. ಅನಂತಮೂರ್ತಿ ಅವರು ತಮ್ಮ ದೀರ್ಘ ಲೇಖನದುದ್ದಕ್ಕೂ ಇಂಥ ವಿಚಾರಗಳನ್ನೇ ಪ್ರತಿಪಾದಿಸಿದ್ದಾರೆ.
                                       
 -ದರ್ಗಾThursday, August 28, 2014

ಕನವರಿಕೆ

Balakrishna Shibarla


ಬಾಲಕೃಷ್ಣ ಶಿಬಾರ್ಲ
ಕಲ್ಪನೆಗಳಿಗೆ ರಸತುಂಬಿ
ಕನಸುಗಳಿಗೆ ಜೀವ ತುಂಬಿ
ಎನ್ನೆದೆ ಗೂಡಿನಲಿ ಪುಟ್ಟ ಕನಸುಗಳ
ಅರಳಿಸಿದ ನೀನು ಯಾರು?
ಮರಳುಗಾಡಿನ ಓಯಸಿಸೇ ?
ಹುಚ್ಚು ಭ್ರಮೆಯ ಮರೀಚಿಕೆಯೇ ?

        ಒಂಟಿಯಾಗಿ ಕುಂತಾಗ ನೀ ಆವರಿಸಿದೆ
       ಬಳಿ ಬಂದು ನಿಂತಂತೆ ನಾ ಕನವರಿಸಿದೆ
       ನೀ ಬರಲಿಲ್ಲ ಎದುರು ನಿಲ್ಲಲಿಲ್ಲ
       ಕಾಯುವ ಮನಸು ಕಾಯುತಿದೆ
       ಕನಸು ಮಾತ್ರ ಓಡುತ್ತಿದೆ

ಒಂದು ಬಾರಿ ಒಂದೇ ಒಂದು ಬಾರಿ
ಕುಳಿತುಕೋ ನನ್ನ ಮುಂದೆ
ನನ್ನೊಳಗೆ ಹುದುಗಿರುವ
ನೂರು ಮಾತು ಸಾವಿರ ಭಾವ
ಹೊರ ಚೆಲ್ಲುವೆ ನಿನ್ನ ಮುಂದೆ
ನೋವು ನಲಿವು ವಿಷಾದ
ಬುದ್ಧಿವಂತಿಕೆ ಪೆದ್ದುತನ
ಇನ್ನೇನೇನೋ ಹೇಳಿಕೊಳ್ಳುವೆ ನಿನ್ನ ಮುಂದೆ

       ತುಟಿಬಿಚ್ಚದೆ ಕುಹಕವಾಡದೆ
       ಮುಗುಳುನಗೆಯ ಸೂಸಿ
       ನನ್ನ ಮಾತಿಗೆ ಕಿವಿಯಾಣಿಸಬೇಕು
       ಭಾವಕ್ಕೆ ನಿನ್ನೆದೆ ಪಿಸುಗುಟ್ಟಬೇಕು

 ಬೇಡ...
ನೀನು ಕನಸಲ್ಲೆ ಕನಸಾಗಿಯೇ ಇರು
ಎಷ್ಟೆಂದರೂ ನಾನು ಹೆಣ್ಣು ನೀನು ಗಂಡು
ನನ್ನ ಬಡಬಡಿಕೆಗೆ ಕಿವಿಗೊಟ್ಟು
ಸುಮ್ಮನಿರಲು ನಿನ್ನಿಂದಾಗುವುದೇನು
ಸ್ಪರ್ಶಕ್ಕಾಗಿ ಹಾತೊರೆಯದೆ
ನೀ ಇರುವೆ ಏನು

       ನನ್ನ ಹೃದಯದ ಪಿಸುಮಾತು
       ನನ್ನಲ್ಲೇ ಉಳಿಯಲಿ ಬಿಡು
       ನೀನು ನಿನ್ನಂತೆಯೆ
       ಕಾಲಿಗೆ ಚಕ್ರಕಟ್ಟಿ ತಿರುಗಾಡುತ್ತಿರು
       ನಾನು ನನ್ನಂತೆಯೆ
       ಮೂಲೆಯಲಿ ಕುಳಿತು ಕನವರಿಸುವೆ


ಹೂವೇ..

ಡಾ ಎಚ್ ಎಸ್ ಅನುಪಮಾ

 
ಎರಡೂ ಹೆಗಲ ಮೇಲರಳಿವೆ ಕಪ್ಪು ಹೂವು
ಮುಟ್ಟಿದರೆ ನಗುತ್ತವೆ, ನೋವು..
ನೊಗವಿಳುಹುವ ಸೂಚನೆಯೋ
ಹೇರಿದ ಭಾರ ಅತಿಯಾದ ಕುರುಹೋ?! 

ಎರಡೂ ಕೆನ್ನೆ ಮೇಲರಳಿವೆ ಕಪ್ಪು ಹೂವು
ನಾ ನಗುವಾಗೆಲ್ಲ ನಗುತ್ತವೆ, ನೋವು..
ಬಿಗಿದ ನರಗಳು ಸಡಿಲವಾದ ಸೂಚನೆಯೋ
ಸುಕ್ಕೊಂದು ಒಳಗಿಳಿದ ಕುರುಹೋ?!

ಮೊಲೆಯ ಮೇಲರಳಿವೆ ಅಸಂಖ್ಯ ಕಪ್ಪು ಹೂವು
ನೆನಪಿಗೇ ಮುಸಿಮುಸಿ ನಗುತ್ತವೆ, ಪುಳಕ ನೋವು..
ಕೂಸಿನ ಹಲ್ಲು ಬಲಿತಿರುವ ಸೂಚನೆಯೋ
ಹಾಲು ಇಂಗಿ ಹಸಿವೆ ಹಿಂಗದ ಕುರುಹೋ?!

ಹೂವೇ, ಕಪ್ಪು ಹೂವೇ..
ಯುಗಯುಗಾಂತರದಿಂದ ಕಾದವಳಂತೆ ಕುಳಿತಿದ್ದೆ 
ನಿನ್ನ ಅರಳುವಿಕೆಗೆ
ಬೀಜ ಮೊಳೆತು ಸಸಿ ಚಿಗುರಿ
ಗೆಲ್ಲುಗೆಲ್ಲಿಗು ಮಿಟ್ಟೆ ಕಟ್ಟಿದ್ದು ಎಂದೋ?
ಕಂಪಿಸುವುದು ದೇಹ ಇಂದೂ
ಆ ವಸಂತ ಸಂಭ್ರಮ ನೆನೆದು.

ಚಿಂತೆಯಿಲ್ಲ, ತೃಪ್ತೆ ನಾನು 
ಮಣ್ಣಲಿ ಮಣ್ಣಾಗಲಿ ಈ ದೇಹವಿನ್ನು..

‘ಸ್ವಚ್ಛ ಭಾರತ್’: ಸ್ವಚ್ಛಗೊಳಿಸುವವರು ಯಾರು?ರಘೋತ್ತಮ ಹೂ. ಬ.


‘ಸ್ವಚ್ಛ ವಿದ್ಯಾಲಯ್, ಸ್ವಚ್ಛ ಭಾರತ್’ ಇದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಶಿಕ್ಷಣ) ಸಚಿವಾಲಯದ ಈಚಿನ ಘೋಷಣೆ. ಸಚಿವೆ ಸ್ಮತಿ ಇರಾನಿಯವರ ಪ್ರಕಾರ ‘‘2019ಕ್ಕೆ ಮಹಾತ್ಮ ಗಾಂಧಿಯವರ 150ನೆ ಜನ್ಮ ದಿನಾಚರಣೆ ನಡೆಯಲಿದ್ದು, ಈ ವೇಳೆಗೆ ದೇಶವನ್ನು ಬಯಲು ಶೌಚಮುಕ್ತಗೊಳಿಸಬೇಕು, ಈ ಮೂಲಕ ರಾಷ್ಟ್ರಪಿತನಿಗೆ ಗೌರವ ಸಮರ್ಪಿಸಬೇಕು ಎಂಬ ಪ್ರಧಾನಿ ನರೇಂದ್ರಮೋದಿಯವರ ಸ್ವಾತಂತ್ರ ದಿನಾಚರಣೆಯ ಕೆಂಪು ಕೋಟೆಯ ಭಾಷಣದ ಅಭಿಲಾಷೆಯಂತೆ’’ ಈ ಆಂದೋಲನ ಹಮ್ಮಿಕೊಳ್ಳಲಾಗಿದೆಯಂತೆ. ಹಾಗೆಯೇ ನರೇಂದ್ರಮೋದಿಯವರ ಇಂತಹ ಟಾಯ್ಲೆಟ್ ನಿರ್ಮಾಣ ಯೋಜನೆಗೆ ಪ್ರಮುಖ ಸಾಫ್ಟ್‌ವೇರ್ ಕಂಪೆನಿ ಟಿಸಿಎಸ್(ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) ಹಾಗೂ ಭಾರ್ತಿ ಪ್ರತಿಷ್ಠಾನ(ಏರ್‌ಟೆಲ್ ಮೊಬೈಲ್ ಕಂಪೆನಿ) ತಲಾ 100 ಕೋಟಿ ರೂ. ಡೊನೇಷನ್ ನೀಡಲು ಕೂಡ ಮುಂದೆ ಬಂದಿವೆ. 
 

ಖಂಡಿತ, ಈ ಯೋಜನೆ ಮೆಚ್ಚತಕ್ಕದ್ದೆ. ಆ ಮೂಲಕ ‘‘ಹೆಣ್ಣುಮಕ್ಕಳ ಶಿಕ್ಷಣ, ಪ್ರಮುಖವಾಗಿ ಶೋಷಿತ ಸಮುದಾಯಗಳ ಹೆಣ್ಣುಮಕ್ಕಳ ಶಿಕ್ಷಣ, ಅವರ ಆರೋಗ್ಯ ಸುಧಾರಣೆ, ತೂಕಕೊರತೆ ತಪ್ಪಿಸುವುದು, ಅಪೌಷ್ಟಿಕತೆ ತಪ್ಪಿಸುವುದು, ಒಟ್ಟಾರೆ ದೇಶದ ಜನರ ಪೌಷ್ಟಿಕತೆ ಹೆಚ್ಚಿಸುವುದು’’ ಈ ಯೋಜನೆಯ ಇತರ ಆಯಾಮಗಳಂತೆ! ಈ ದಿಸೆಯಲ್ಲಿ ಹೇಳುವುದಾದರೆ ಇದೆಲ್ಲ ಸರಿ. ಗಾಂಧೀಜಿಯವರಿಗೆ ನಾವು ಗೌರವ ಕೊಡಬೇಕು, ಜನರ ಪೌಷ್ಟಿಕತೆ ಹೆಚ್ಚಿಸಬೇಕು, ಈ ದೇಶವನ್ನು ಬಯಲು ಶೌಚಮಕ್ತಗೊಳಿಸಬೇಕು, ಶೌಚಾಲಯ ಕ್ರಾಂತಿಯನ್ನೇ ಮಾಡಬೇಕು! ಆದರೆ...? ಹಾಗೆ ‘ಕ್ರಾಂತಿ’ಯಿಂದ ನಿರ್ಮಾಣ ಗೊಳ್ಳುವ ಶೌಚಾಲಯಗಳನ್ನು ಶುಚಿಗೊಳಿಸುವವರು ಅರ್ಥಾತ್ ‘ಭಾರತವನ್ನು ಸ್ವಚ್ಛಗೊಳಿಸುವವರು’ ಯಾರು? ಈ ದೇಶದ ದಲಿತರು! ಉದಾಹರಣೆಗೆ ಶಾಲೆಯೊಂದನ್ನೇ ತೆಗೆದುಕೊಳ್ಳುವುದಾದರೆ, ವೈಯಕ್ತಿಕವಾಗಿ ನನಗೆ ಪರಿಚಿತ ಊರಿನ ಶಾಲೆಯೊಂದರಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಶೌಚಾಲಯ ಕಟ್ಟಿ ಐದು ವರ್ಷಗಳೇ ಕಳೆದಿವೆ. ಆದರೆ ಉಪಯೋಗ? ತಮಾಷೆಯೆಂದರೆ ಆ ಐದು ವರ್ಷಗಳಲ್ಲಿ ಒಮ್ಮೆಯೂ ಕೂಡ ಮಕ್ಕಳು ಆ ಶೌಚಾಲಯಗಳತ್ತ ಕಣ್ಣೆತ್ತಿಯೂ ನೋಡಿಲ್ಲ! ಕಾರಣವೇನೆಂದರೆ ಮಕ್ಕಳು ಆ ಶೌಚಾಲಯಕ್ಕೆ ಹೋದರೆ ಗಲೀಜು ಮಾಡುತ್ತಾರೆ, ಶುಚಿ ಮಾಡುವವರು ಯಾರು ಎಂಬ ಕಾರಣಕ್ಕೆ! ಈ ಕಾರಣದಿಂದ ಬರೇ ಶಿಕ್ಷಕಿಯರಷ್ಟೆ ಅದನ್ನು ಬಳಸುತ್ತಾರೆ. ಶಿಕ್ಷಕರೂ ಸೇರಿ ಉಳಿದ ಎಲ್ಲ ಮಕ್ಕಳಿಗೂ ಬಯಲೇ ಶೌಚಾಲಯ! 

ಅಂದ ಹಾಗೆ ಇಲ್ಲಿ ಆ ಶಾಲೆಯ ಕತೆ ಹೇಳುತ್ತಿಲ್ಲ, ಆದರೆ ‘ಶುಚಿಗೊಳಿಸುವವರು ಯಾರು?’ ಎಂಬ ಸಾಮಾನ್ಯ ಪ್ರಶ್ನೆ ಕೇಳುತ್ತಿದ್ದೇನೆ ಅಷ್ಟೆ. ಯಾಕೆಂದರೆ ಶುಚಿಗೊಳಿಸುವವರು ಜಾಡಮಾಲಿಗಳು, ಅರ್ಥಾತ್ ದಲಿತರು ಮತ್ತು ಸೋ ಕಾಲ್ಡ್ ಶುಚಿಗೊಳಿಸುವ ದಲಿತರು ನಾನು ಹೇಳಿದ ಸಂಬಂಧಪಟ್ಟ ಆ ಶಾಲೆಯ ಆ ಊರಿನಲ್ಲಿಲ್ಲ, ಆ ಕಾರಣದಿಂದ ಆ ಶೌಚಾ ಲಯಗಳನ್ನು ಶುಚಿಗೊಳಿಸಲಾಗುತ್ತಿಲ್ಲ ಅಥವಾ ಆಗುವುದಿಲ್ಲ. ಪರಿಣಾಮ ಆ ಶೌಚಾಲಯಗಳ ಬಳಕೆಯೇ ಇಲ್ಲ! ಖಂಡಿತ, ಈ ನಿದರ್ಶನವನ್ನು ಒಂದು ಶಾಲೆಯ ಶೌಚಾಲಯಕ್ಕಷ್ಟೆ ಹೇಳುತ್ತಿಲ್ಲ. ಈ ದೇಶದ ಶೌಚ ವ್ಯವಸ್ಥೆಯ ಒಟ್ಟಾರೆ ಕಥೆ ಇದು. ನಿಜ ಹೇಳಬೇಕೆಂದರೆ ಈ ದೇಶದ ಸಾಮಾಜಿಕ ವ್ಯವಸ್ಥೆ ಎರಡು ವಿಶಾಲ ‘ಆಲಯ’ಗಳಲ್ಲಿ ಹಂಚಿಹೋಗಿದೆ. ಆ ಎರಡು ಆಲಯಗಳೆಂದರೆ ಒಂದು ಶೌಚಾಲಯ, ಮತ್ತೊಂದು ದೇವಾಲಯ! ಅಂದಹಾಗೆ ಈ ‘ಆಲಯಗಳ ವ್ಯವಸ್ಥೆ’ ಅದಲು ಬದಲಾಗಲಿ ಎಂದು ಅಪೇಕ್ಷಿಸುತ್ತಿಲ್ಲ ಮತ್ತು ಹಾಗೆ ಅಪೇಕ್ಷಿಸುವುದು ಫ್ಯೂಡಲ್ ಮನಸ್ಥಿತಿ. ಆದರೆ ಕಾಲಕ್ಕೆ ತಕ್ಕಂತೆ ಅಲ್ಪಸ್ವಲ್ಪಬದಲಾವಣೆ ಬಯಸುವುದು? ಪರಿವರ್ತನೆಯಾಗಲಿ ಎಂದು ಆಶಿಸುವುದು? ಖಂಡಿತ ಅದು ಮಾನವೀಯ ಕಳಕಳಿಯಾಗುತ್ತದೆ. 

ಈ ನಿಟ್ಟಿನಲ್ಲಿ ದಾಖಲಿಸಬೇಕಾದ ಸಹಜ ವಾಸ್ತವವೆಂದರೆ ಈ ದೇಶದ 100ಕ್ಕೆ 100 ಶೌಚಾಲಯಗಳನ್ನು ಶುಚಿಗೊಳಿಸುವವರು ಈ ದೇಶದ ದಲಿತರು. ಕೈಗೆ ಗವಸು ಹಾಕಿಕೊಳ್ಳದೆ, ಹೊಟ್ಟೆ ತುಂಬಾ ಸಾರಾಯಿ ಕುಡಿದು, (ವಯಕ್ತಿಕವಾಗಿ ನಾನೂ ದಲಿತನಾದ್ದರಿಂದ) ದಲಿತ ನನ್ನಣ್ಣ, ಅಕ್ಕಂದಿರು ಶೌಚಾಲಯ ಶುಚಿಗೊಳಿಸುತ್ತಾರೆ. ಆರು ಕಾಸೋ ಮೂರು ಕಾಸೋ ಗಳಿಸುತ್ತಾರೆ. ಹಾಗೆ ಸಂಜೆ ಮತ್ತೆ ಕುಡಿದು (ವಾಸನೆ ಗಮನಕ್ಕೆ ಬರದಿರಲೆಂದು) ತಮ್ಮ ಜೀವನವನ್ನು ಅನಾರೋಗ್ಯಕ್ಕೆ ದೂಡಿ ಬೇರೆಯವರಿಗಾಗಿ, ಬೇರೆಯವರ ಶೌಚಾಲಯಗಳ ಶುಚಿಗಾಗಿ ತಾವು ಬಲಿಯಾಗುತ್ತಾರೆ. ‘ಸ್ವಚ್ಛ ಭಾರತ್’ ಎಂದು ಉಳ್ಳವರು ಕೆಂಪುಕೋಟೆಯಿಂದ ಜೋರಾಗಿ ಗರ್ಜಿಸಿ ಈ ದೇಶವಾಸಿಗಳ ಚಪ್ಪಾಳೆಯನ್ನು ಜೋರಾಗಿ ಗಿಟ್ಟಿಸಿದರೆ, ನೀಟಾಗಿ ಈ ದೇಶವನ್ನು ನಿಜಕ್ಕೂ ಸ್ವಚ್ಛ ಗೊಳಿಸುವವರು ಉದ್ಯೋಗಾಧರಿತ ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಶೌಚ ಶುಚಿಗೊಳಿಸುವ ಉದ್ಯೋಗ ಪಡೆದ ಈ ಭಾರತದ ನಿಷ್ಪಾಪಿ ದಲಿತರು! ಇದನ್ನು ತಮಾಷೆಗೆ ಹೇಳುತ್ತಿಲ್ಲ. ವಾಸ್ತವಾಂಶವನ್ನೇ ಇಲ್ಲಿ ಪ್ರಸ್ತಾಪಿಸುವುದಾದರೆ, ಭಾರತದಲ್ಲಿ ಈ ಪರಿಯ ಮೊಬೈಲ್‌ಗಳು, ಟಿವಿಗಳು, ಸಾಫ್ಟ್‌ವೇರ್ ಕ್ರಾಂತಿ ಗಳು ನಡೆದರೂ ಶೌಚಾಲಯಗಳ ನಡೆದಿಲ್ಲ! ಯಾಕೆ ಎಂಬುದು? ಉತ್ತರ ಮತ್ತೆ ಸ್ಪಷ್ಟ, ಉದ್ಯೋಗಾಧರಿತ ಜಾತಿ ವ್ಯವಸ್ಥೆ. ತಳಮಟ್ಟದ ದಲಿತರು ಮಾತ್ರ ಶೌಚಾಲಯ ಶುಚಿಗೊಳಿಸಬೇಕು ಎಂಬ ಅಘೋಷಿತ ಕಾನೂನು ಈ ದೇಶದಲ್ಲಿ ಈ ಸಮಾಜದಲ್ಲಿ ಶತಮಾನಗಳಿಂದ ಜಾರಿಯಲ್ಲಿದೆ.

 ‘‘ಶೌಚಾಲಯಗಳನ್ನು ಎಲ್ಲರೂ ಶುಚಿಗೊಳಿಸಬೇಕು, ಅದು ಕೀಳು ಕೆಲಸವಲ್ಲ, ಕಡೇ ಪಕ್ಷ ನಿಮ್ಮ ನಿಮ್ಮ ಮನೆಯ ಶೌಚವನ್ನು ನೀವೇ ಶುಚಿಗೊಳಿಸಿಕೊಳ್ಳಿ’’ ಎಂದು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅಧಿಕಾರಸ್ಥರು ಪರಿಜ್ಞಾನ ತುಂಬಿದ್ದರೆ, ಮನಸ್ಸಿನಲ್ಲಿರುವ ವರ್ಣಾಶ್ರಮ ಧರ್ಮದ, ಜಾತಿ ಆಧಾರಿತ ಉದ್ಯೋಗದ ಕೊಳಕು ಮನಸ್ಥಿತಿಯನ್ನು ತೊಡೆದು ಹಾಕಿದ್ದರೆ ಖಂಡಿತ ಈ ದೇಶದಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಪರಿಣಾಮ ಭಾರತದಲ್ಲಿ ಶೌಚಾಲಯ ಕ್ರಾಂತಿ ನಡೆದು ಶತಕಗಳೇ ಕಳೆದಿರುತ್ತಿತ್ತು! ಆದರೆ? ವರ್ಣಾಶ್ರಮ ಧರ್ಮದ ಅಂತಹ ಅಘೋಷಿತ ನೀತಿ ನಿಯಮಗಳನ್ನು ತೊಲಗಿಸುವ ಪ್ರಕ್ರಿಯೆಯೇ, ಆಂದೋಲನವೇ ಭಾರತದಲ್ಲಿ ನಡೆದಿಲ್ಲವೆ! ಆದರೆ ‘ಸ್ವಚ್ಛ ಭಾರತ್ ಆಂದೋಲನ’ ನಡೆಯುತ್ತಿದೆ! ಅಂದರೆ ಕೋಟಿ ಕೋಟಿ ಶೌಚಾಲಯಗಳನ್ನು ಕಟ್ಟಿಸುವುದು... ಅದಕ್ಕೆ ಬಂಡವಾಳಶಾಹಿ ಗಳೂ ತಮ್ಮ ಸಾಮಾಜಿಕ ಕಳಕಳಿ(?) ತೋರಿಸಲು ಕೋಟಿ ಕೋಟಿ ಸುರಿಯುವುದು... ಜಗತ್ತಿನ ಮುಂದೆ ನಾವು ಮುಂದುವರಿಯುತ್ತಿದ್ದೇವೆ ಎಂದು ತೋರಿಸಿಕೊಳ್ಳುವುದು... ಹಾಗೆಯೇ ನಮ್ಮ ಮನೆಯ (ಈ ದೇಶದ) ಕೋಟಿ ಕೋಟಿ ದಲಿತರನ್ನು ಆ ಕೋಟಿ ಕೋಟಿ ಶೌಚಾಲಯಗಳನ್ನು ಶುಚಿಗೊಳಿಸಲಿಕ್ಕೆ ತಳ್ಳುವುದು.... ಅಬ್ಬಾ! ‘ಮೆಚ್ಚಬೇಕಾದ್ದೆ’ ಇಂತಹ ವರ್ಣಾಶ್ರಮ ಧರ್ಮದ, ಜಾತಿ ಆಧಾರಿತ ಉದ್ಯೋಗದ ಗುಪ್ತಗಾಮಿನಿ ಹೇರಿಕೆಯನ್ನ! ಹಾಗಿದ್ದರೆ ಭಾರತ ಬಯಲು ಶೌಚದ ದೇಶವಾಗಿಯೇ ಉಳಿಯಬೇಕೆ? 

ಈ ದೇಶದಲ್ಲಿ ಶೌಚಾಲಯಗಳು ನಿರ್ಮಾಣಗೊಳ್ಳುವುದು ಬೇಡವೇ? ದೇಶದ ಕಂದಮ್ಮಗಳು ಪೌಷ್ಟಿಕತೆ ತುಂಬಿಕೊಳ್ಳುವುದು ಬೇಡವೆ? ಎಂಬ ಪ್ರಶ್ನೆಗಳು? ಖಂಡಿತ, ಎಲ್ಲಾ ಸಾಧ್ಯವಾಗಬೇಕು. ಆದರೆ ಅದಕ್ಕಿಂತ ಮೊದಲು ಮನುಸ್ಮತಿ ಆಧಾರಿತ ವರ್ಣಾಶ್ರಮ ಧರ್ಮದ, ಇಂತಹ ಜಾತಿಗೆ ಇಂತಹ ಉದ್ಯೋಗ ಎಂಬ ನೀತಿ ನಾಶವಾಗಬೇಕು. ತೊಲಗಬೇಕು. ಶೌಚ ಶುಚಿಗೊಳಿಸುವ ಕೆಲಸವನ್ನು ಬರೇ ದಲಿತರು ಮಾಡುವುದನ್ನು ಅಥವಾ ಅವರ ಕೈಯಲ್ಲಿ ಮಾಡಿಸುವುದನ್ನು ಕಠಿಣ ಕಾನೂನುಗಳ ಮೂಲಕ ನಿಷೇಧಿಸಬೇಕು. ಶಿಕ್ಷಾರ್ಹ ಎಂದು ಘೋಷಿಸಬೇಕು. ಹಾಗೆಯೇ ದಲಿತರಿಂದ, ದಲಿತ ಜಾಡಮಾಲಿಗಳಿಂದ ಶೌಚ ಶುಚಿಗೊಳಿಸುವುದನ್ನು ಅಸ್ಪಶ್ಯತಾಚರಣೆ ಎಂದು ಪರಿಗಣಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು. ಅಂತೆಯೇ ನಗರಪಾಲಿಕೆ, ನಗರಸಭೆ, ಪುರಸಭೆ ಇತ್ಯಾದಿ ಪೌರಸಂಸ್ಥೆಗಳು ದಲಿತರನ್ನು ಶುಚಿಗೊಳಿಸುವ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸರಕಾರ ನಿಲ್ಲಿಸಬೇಕು (ಸರಕಾರದ ಇಂತಹ ನೀತಿಯಿಂದ ಪೌರಕಾರ್ಮಿಕ ಎಂಬ ಹೊಸ ಜಾತಿಯೇ ಸೃಷ್ಟಿಯಾಗಿದೆ!). ಜೊತೆಗೆ ಎಲ್ಲಾ ಕೋಮುಗಳು, ವರ್ಗಗಳು, ಜಾತಿಗಳ ಜನರನ್ನು ಶೌಚಾಲಯ ಶುಚಿಗೊಳಿಸುವ ಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸರಕಾರ ಪ್ರೇರೇಪಿಸಿ ತಿಳುವಳಿಕೆ ತುಂಬಬೇಕು. ಜಾಗೃತಿ ಮೂಡಿಸಬೇಕು. ಆಗ ಮಾತ್ರ ‘ಸ್ವಚ್ಛ ವಿದ್ಯಾಲಯ್, ಸ್ವಚ್ಛ ಭಾರತ್’ ಘೋಷಣೆಗೆ ಅರ್ಥಬರುತ್ತದೆ. ಅದು ಬಿಟ್ಟು ಕೋಟಿ ಕೋಟಿ ಶೌಚಾಲಯಗಳನ್ನು ಕಟ್ಟಿಸಿ ಅವುಗಳನ್ನು ಸ್ವಚ್ಛಗೊಳಿಸಲು ಈ ದೇಶದ ಕೋಟಿ ಕೋಟಿ ದಲಿತರನ್ನು ಕ್ಯೂ ನಿಲ್ಲಿಸಿದರೆ ಅರ್ಥ ಎಲ್ಲಿರುತ್ತದೆ? ಖಂಡಿತ ಅದು ಈ ಆಧುನಿಕ ಯುಗದಲ್ಲೂ ದಲಿತರ ಮೇಲೆ ವರ್ಣಾಶ್ರಮ ಧರ್ಮದ ಕಾನೂನುಗಳ ಬಲವಂದ ಹೇರಿಕೆಯಾಗುತ್ತದಷ್ಟೆ.

ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ


ಡಾ ಜಗದೀಶ ಕೊಪ್ಪಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು.ಆರ್. ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ಕನ್ನಡದ ಸಾಂಸ್ಕøತಿಕ ಜಗತ್ತು ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು. ಮಾತಿಗೆ ಮಾಂತ್ರಿಕತೆಯನ್ನು ಮತ್ತು ಕನ್ನಡ ಭಾಷೆಗೆ ಬೆರಗು ಮತ್ತು ಭವ್ಯತೆಯನ್ನು ತಂದುಕೊಟ್ಟ ಯು.ಆರ್.ಅನಂತಮೂರ್ತಿಯವರ ಹೆಸರು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹದ್ದು. ತಮ್ಮ ಬದುಕಿನುದ್ದಕ್ಕೂ ಚರ್ಚೆ ಮತ್ತು ವಾಗ್ವಾದಗಳ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದ ಸರಹದ್ದನ್ನು ವಿಸ್ತರಿಸಿದ ಅನಂತಮೂರ್ತಿಯವರು ಇದಕ್ಕಾಗಿ  ಹಲವಾರು ವಿವಾದ ಗುರಿಯಾಗಬೇಕಾಯಿತು.
 
ಬೇಂದ್ರೆ, ಕುವೆಂಪು, ಶಿವರಾಮ ಕಾರಂತ ಮತ್ತು ಮಾಸ್ತಿ ಮುಂತಾದವರು ಇಪ್ಪತ್ತನೆಯ  ಶತಮಾನದ ಆದಿಭಾಗದಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರೆ, ನಂತರ ಬಂದ ಎರಡನೆಯ ತಲೆಮಾರಿನ  ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಡಿ.ಆರ್. ನಾಗರಾಜ್, ಕೀರಂ ರಂತಹ ಪ್ರತಿಭೆಗಳು ಅದಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವುದರ ಮೂಲಕ  ಭಾರತೀಯ  ಇತರೆ ಭಾಷೆಗಳಲ್ಲದೆ, ಜಗತ್ತು ಕನ್ನಡದತ್ತ ತಿರುಗಿ ನೋಡಿವಂತೆ ಮಾಡಿದರು. ಇದೀಗ ಇವರೆನ್ನೆಲ್ಲಾ ಕಳೆದು ಕೊಂಡಿರುವ ಕನ್ನಡ ಸಾಹಿತ್ಯ ಬಡವಾಯಿತು ಎಂಬ ಮಾತು ಕ್ಲೀಷೆಯಾಗಿ ತೋರುತ್ತದೆ. ಆದರೆ ಮಹಾನಿಯರಿಂದ ಪ್ರಭಾವಿತಗೊಂಡಿದ್ದ ನನ್ನ ತಲೆಮಾರು ಈಗ ಅಕ್ಷರಶಃ ಅನಾಥ ಪ್ರಜ್ಞೆಯನ್ನ, ತಬ್ಬಲಿತನವನ್ನು ಅನುಭವಿಸುತ್ತಿದೆ. ನಮ್ಮ ತಲೆಯೊಳಗಿನ ಕಸ ಮತ್ತು ಎದೆಯೊಳಗಿನ ವಿಷವನ್ನು ತೆಗೆದು ಹಾಕಿದ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರಿಲ್ಲದ ಕನ್ನಡದ ಸಾಂಸ್ಕತಿಕ ಜಗತುದಿನ್ನು ಮುಂದೆ ಲಂಗು ಲಗಾಮಿಲ್ಲದ ಕುದುರೆಯಾಗಬಹುದು ಎಂಬ ಆತಂಕ ಮನದೊಳಗೆ ಮಡುವುಗಟ್ಟುತ್ತಿದೆ.
 
ಲಂಕೇಶ್ ಮತ್ತು ತೇಜಸ್ವಿಯವರಿಗೆ ಹೋಲಿಕೆ ಮಾಡಿದಾಗ ಅನಂತಮೂರ್ತಿಯವರು ಅವರಿಗಿಂತ ಭಿನ್ನವಾಗಿ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡವರಾಗಿದ್ದರು. ಲಂಕೇಶ್ ಮತ್ತು ತೇಜಸ್ವಿಯವರು ಅದ್ಭುತ ಬರಹಗಾರರಾಗಿದ್ದರೆ ಹೊರತು, ಮಾತುಗಾರರಾಗಿರಲ್ಲ. ಆದರೆ ಅನಂತಮೂರ್ತಿಯವರು ಅದು ಖಾಸಾಗಿ ಚರ್ಚೆಯಾಗಿರಲಿ, ಉಪನ್ಯಾಸವಾಗಿರಲಿ ಅಥವಾ ಸಾರ್ವಜನಿಕ ಭಾಷಣವಾಗಿರಲಿ ಅಲ್ಲಿ ತಮ್ಮ ಮಾತು ಮತ್ತು ವಿಚಾರಧಾರೆಗಳ ಮೂಲಕ ಮಾಂತ್ರಿಕಲೋಕವನ್ನು ಸೃಷ್ಟಿಸಿಬಿಡುತ್ತಿದ್ದರು. ಎಂದೂ ಖಾಸಾಗಿತನವನ್ನಾಗಲಿ ಅಥವಾ ಏಕಾಂಗಿತನವನ್ನಾಗಲಿ ಬಯಸದ ಅನಂತಮೂರ್ತಿಯವರು ಸದಾ ದೇಶ ವಿದೇಶಗಳನ್ನು ಸುತ್ತುತ್ತಾ ಸುದ್ಧಿಯಲ್ಲಿರುತ್ತಿದ್ದರು.
 
ಕಳೆದ ಮೂರು ದಶಕಗಳಲ್ಲಿ ಅಂದರೆ ನವ್ಯದ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲದಿಂದ ಅದರ ಉಗ್ರ ಪ್ರತಿಪಾದಕರಾಗಿದ್ದ ಅನಂತಮೂರ್ತಿಯವರ ಜೊತೆ  ಜಗಳವಾಡದೆ ಇರುವವರನ್ನು ಕರ್ನಾಟಕದಲ್ಲಿ ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ. ಏಕೆಂದರೆ, ಅದು ಸಾಹಿತ್ಯಕವಾಗಿರಲಿ, ಸಾಮಾಜಿಕ ಸಂಗತಿಯಾಗಿರಲಿ ಅಥವಾ ರಾಜಕೀಯವಾಗಿರಲಿ ಹೊಸ ವಾಗ್ವದಗಳನ್ನು ಹುಟ್ಟು ಹಾಕುತ್ತಿದ್ದ ಅನಂತಮೂರ್ತಿಯವರು, ತಮ್ಮ ಕೃತಿಗಳು ಅಥವಾ ತಾವು ಮಂಡಿಸಿದ ವಿಷಯಗಳ ಕುರಿತು ಯಾರು ಎಷ್ಟೇ ಕಟುವಾಗಿ ಟೀಕಿಸಲಿ ಅಥವಾ ವಿರೋಧಿಸಲಿ ಅವರ ಜೊತೆ ತಾತ್ವಿಕವಾಗಿ ಜಗಳವಾಡುತ್ತಿದ್ದರೆ ಹೊರತು, ಎಂದೂ ತಮನ್ನ್ಮು ವಿರೋಧಿಸಿದವರ ಬಗ್ಗೆ ಮತ್ಸರವನ್ನಾಗಲಿ, ವಿಷವನ್ನಾಗಲಿ ತಮ್ಮ ಎದೆಯಲ್ಲಿ ಬಚ್ಚಿಟ್ಟುಕೊಂಡವರಲ್ಲ. ಅವರನ್ನು ಕಳೆದುಕೊಂಡ ಸಮಯದಲ್ಲಿ ಹಲವಾರು ನೆನಪುಗಳು ನನ್ನನ್ನು ನಿರಂತರವಾಗಿ ಕಾಡುತ್ತಿವೆ.
 
ಅದು 1980 ಇಸವಿ. ನಾನಾಗ ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿ ಓದುತ್ತಿದ್ದೆ. ಆಗಿನ ಮಲ್ಲಿಗೆ ಎಂಬ ಮಾಸಪತ್ರಿಕೆ ಸಂಪಾದಕರಾಗಿದ್ದ ಎಸ್.ದಿವಾಕರ್ ಮೂಲಕ ಬೆಂಗಳೂರಿನ ಬಹುತೇಕ ಲೇಖಕರ ಸಂಪರ್ಕಕ್ಕೆ ಬಂದಿದ್ದೆ. ಇದೇ ವೇಳೆಯಲ್ಲಿ ಗಿರಿ ಎಂಬುವವರ ಗತಿಸ್ಥಿತಿ ಎಂಬ ಕೆಟ್ಟ ಕಾದಂಬರಿಯೊಂದು ಬಿಡುಗಡೆಯಾಗಿತ್ತು. ನವ್ಯ ಸಾಹಿತ್ಯ ಕನ್ನಡವನ್ನು ಆವರಿಸಿಕೊಂಡಿದ್ದಾಗ ಅನಂತಮೂತಿಯವರು ಒಳಗೊಂಡಂತೆ ಕಾದಂಬರಿಯನ್ನು ಶತಮಾನದ ಕಾದಂಬರಿಯಂತೆ ಎಲ್ಲರೂ ಇನ್ನಿಲ್ಲದಂತೆ ಬಣ್ಣಿಸುತ್ತಿದ್ದರು. ಕಾದಂಬರಿಯನ್ನು ಓದಿದ್ದ ನನಗೆ  ತಲೆ ಕೆಟ್ಟು ಕೆರಹಿಡಿದು ಹೋಗಿತ್ತುಯಾವುದೇ ರೀತಿಯ ಪ್ರಬುದ್ಧತೆಯಲ್ಲದೆ ಹುಂಬನಂತಿದ್ದ ನಾನು ಒಂದು ದಿನ ಸೆಂಟ್ರಿಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕುರಿತಾದ ಕಾರ್ಯಕ್ರಮದ ನಂತರ ಅನಂತಮೂತಿಯವರನ್ನು ಅಡ್ಡ ಹಾಕಿಕೊಂಡು ಗತಿಸ್ಥಿತಿ ಕಾದಂಬರಿಯ ಬಗ್ಗೆ ಜಗಳವಾಡಿದ್ದೆ. ಸುಮಾರು ಹತ್ತು ನಿಮಿಷಗಳ ಕಾಲ ನನ್ನ ಹೆಗಲ ಮೇಲೆ ಕೈ ಹಾಕಿ ಕಾಲೇಜಿನ ಕಾರಿಡಾರ್ ಬಳಿ ತಿರುಗಾಡುತ್ತಾ ಉಪನ್ಯಾಸ ಮಾಡಿದ ಅವರುಕಾಮು ಮತ್ತು ಕಾಪ್ಕ ಇವರನ್ನು ಓದುವ ಕುರಿತಂತೆ ಹಾಗೂ ಒಳ್ಳೆಯ ಕಾದಂಬರಿಗಳನ್ನು ಹೇಗೆ ಗ್ರಹಿಸಬೇಕು ಎಂಬುದರ ಕುರಿತು ನನಗೆ ಮನನ ಮಾಡಿಕೊಟ್ಟಿದ್ದರು. ಆದರೆ, ಆಲ್ಬರ್ಟ್ಕಾಮೂವಿನ ಕಾದಂಬರಿಗಳು ನನ್ನ ಎದೆಯನ್ನು ತಟ್ಟಿದ ಹಾಗೆ ಕಾಪ್ಕ ಮತ್ತು ಗಿರಿಯವರ ಕಾದಂಬರಿಗಳು ಕಥೆಗಳು ಯಾವ ಕಾಲಕ್ಕೂ ನನ್ನದೆಗೆ ತಾಕಲಿಲ್ಲ.
 
ಇನ್ನೊಂದು ಘಟನೆ 1992 ಅಕ್ಟೋಬರ್ ತಿಂಗಳಿನಲ್ಲಿ ನಡೆದದ್ದು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಮತ್ತು ನನ್ನ ನಡುವಿನ ಸಂಬಂಧ  ಒಂದು ರೀತಿಯಲ್ಲಿ ತಂದೆ-ಮಗನ ಸಂಬಂಧ. 1980 ದಶಕದಲ್ಲಿ ಮುದ್ರಣರಂಗಕ್ಕೆ ಕಾಲಿಟ್ಟ ಡಿ.ಟಿ.ಪಿ. ಮತ್ತು ಆಫ್ ಸೆಟ್ ಮುದ್ರಣ ಇವುಗಳ ಆಗಮನದಿಂದಾಗಿ ಪುಸ್ತಕಗಳ ಮುದ್ರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಆದರೆ ಸುಬ್ಬಣ್ಣನವರು ಮಾತ್ರ ಇವುಗಳಿಗೆ ತೆರೆದುಕೊಳ್ಳದೆ ತಮ್ಮ ಅಕ್ಷರ ಪ್ರಕಾಶನದ ಎಲ್ಲಾ ಕೃತಿಗಳನ್ನು ಹೆಗ್ಗೋಡಿನಲ್ಲಿದ್ದ ತಮ್ಮ ಮುದ್ರಾಣಾಲಯದಲ್ಲಿ ಅಕ್ಷರದ ಮೊಳೆಗಳನ್ನು ಜೋಡಿಸಿ, ಕಾಲದ ಪ್ರಿಂಟಿಂಗ್ ಪ್ರೆಸ್ ಮೆಷಿನ್ ನಲ್ಲಿ ಮುದ್ರಿಸಿ ಪ್ರಕಟಿಸುತ್ತಿದ್ದರು. ನಾನು ಹೊಸ ತಂತ್ರ ಜ್ಞಾನ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವಾಗಲೆಲ್ಲಾ ಅವರು ನಿರಾಕರಿಸುತ್ತಿದ್ದರು. ಅವರ ಮುದ್ರಣಾಲಯದಲ್ಲಿ ಮಹಿಳೆಯರೂ ಒಳಗೊಂಡಂತೆ ಹತ್ತು ಅಥವಾ ಹನ್ನೆರೆಡು ಮಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ತಾನು ಆಫ್ ಸೆಟ್ ಮುದ್ರಣಕ್ಕೆ ಹೋದರೆ ಕೆಲಸಗಾರರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂಬ ಸಂಕಟ ಅವರನ್ನು ಬಾಧಿಸುತ್ತಿತ್ತು, ಒಮ್ಮೆ ನನ್ನ ಒತ್ತಾಯದ ಮೇರೆಗೆ ಬೆಂಗಳೂರಿಗೆ ಬಂದು ಆಫ್ ಸೆಟ್ ಮುದ್ರಣದಲ್ಲಿ ತ್ವರಿತ ಗತಿಯಲ್ಲಿ ಪುಸ್ತಕಗಳು ಪ್ರಿಂಟಾಗುವುದು, ಬಹು ವರ್ಣಗಳಲ್ಲಿ ಮುಖಪುಟಗಳು ಸಿದ್ಧವಾಗುವುದು ಇವುಗಳನ್ನು ನೋಡಿ ನಂತರದ ದಿನಗಳಲ್ಲಿ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಿದ್ದರು. ಆನಂತರ 1993 ಅಥವಾ 94 ರಲ್ಲಿ ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಮುದ್ರಿಸಿ, ನನ್ನೂರಾದ ಕೊಪ್ಪದಲ್ಲಿ ವಾಸವಾಗಿದ್ದ ನನಗೂ ಒಂದು ಪ್ರತಿಯನ್ನು ರವಾನಿಸಿದ್ದರು.
 
ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೆಗ್ಗೋಡಿನಲ್ಲಿ ನಡೆಯುತ್ತಿದ್ದ ನಿನಾಸಂ ಸಂಸ್ಕøತಿ ಶಿಬಿರಕ್ಕೆ ಪಾಲ್ಗೊಂಡಿದ್ದೆ. ಒಂದು ದಿನ ಬೆಳಿಗ್ಗೆ ಹೆಗ್ಗೋಡಿನ ಅವರ ಕಚೇರಿಯ ಮುಂದಿದ್ದ ಮೂರು ಅಡಿ ಎತ್ತರದ ಮೋಟು ಗೋಡೆಯ ಮೇಲೆ  ಗೋಡೆಗೆ ಒರಗಿ ಎಲೆ ಅಡಿಕೆ ಹಾಕಿಕೊಂಡು ಕುಳಿತಿದ್ದ  ಸುಬ್ಬಣ್ಣನವರು ನನ್ನನ್ನು ಕರೆದು ಭವ ಕಾದಂಬರಿಯನ್ನು ಓದಿದೆಯಾ ಕೊಪ್ಪ? ಎಂದರುಓದಿದೆ ಎಂದು ನಾನು ಉತ್ತರಿಸಿದೆ. ಏನನಿಸಿತು? ಎಂದು ಕುತೂಹಲದಿಂದ ಕೇಳಿದರು. ಸುತ್ತ ಮುತ್ತ ಶಿಬಿರಾರ್ಥಿಗಳು ಚಹಾ ಮತ್ತು ಕಾಫಿ ಕುಡಿಯುತ್ತಾ ನಿಂತಿದ್ದರಿಂದ ಮೆಲ್ಲನೆ ಅವರ ಕಿವಿಯ ಬಳಿ  ತೆರಳಿ, “ನಾನು ಓದಿದ ಕೆಟ್ಟ ಕಾದಂಬರಿಗಳಲ್ಲಿ ಅದು ಕೂಡ ಒಂದುಎಂದು ಉತ್ತರಿಸಿದೆ. ನನ್ನ ಮಾತು ಕೇಳಿ ಸ್ವಲ್ಪ ಕಾಲ ಮೌನಕ್ಕೆ ಶರಣಾದ ಅವರು, ಸ್ವಗತದ ಧ್ವನಿಯಲ್ಲಿ ಸಂಸ್ಕಾರ, ಭಾರತೀಪುರ ಮತ್ತು ಅವಸ್ಥೆ ಇವುಗಳು ಮಾತ್ರ ಅನಂತಮೂರ್ತಿಯ ಹೆಸರನ್ನು ಶಾಸ್ವತಗೊಳಿಸುವ ಕಾದಂಬರಿಗಳು ಎಂದರು. ಮಧ್ಯಾಹ್ನ ಊಟದ ಸಮಯದ ವೇಳೆಗೆ ಸರಿಯಾಗಿ ನಾನು ಹೇಳಿದ್ದ ಮಾತನ್ನು ಸುಬ್ಬಣ್ಣನವರು ಅನಂತಮೂರ್ತಿಗೆ ದಾಟಿಸಿಬಿಟ್ಟಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ  ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡ ಅನಂತಮೂರ್ತಿಯವರು,  “ಏನಯ್ಯಾ ಕೊಪ್ಪ? ನೇಪಾಳಕ್ಕೆ ಹೋಗಿ ತಿಂಗಳು ಕಾಲ ಧ್ಯಾನಸ್ಥ ಮನಸ್ಸಿನಲ್ಲಿ ಕುಳಿತು ಬರೆದ  ಕಾದಂಬರಿಯನ್ನು ನೀನು ರೀತಿನಾ  ಟೀಕಿಸೋದು?” ಎಂದು ಪ್ರೀತಿಯಿಂದ ಗದರುತ್ತಾ ಕಾದಂಬರಿ ಕುರಿತು ಮಾತನಾಡಿದರು. ಹಿರಿಯ ಅಥವಾ ಕಿರಿಯ ಎನ್ನುವ ಬೇಧ ಭಾವವಿಲ್ಲದೆ ತಮ್ಮ ಮನಸ್ಸಿನ ಅನಿಸಿಕೆಗಳನ್ನು ಇನ್ನೊಬ್ಬರಿಗೆ ಮುಟ್ಟಿಸುವ ತವಕ ಅನಂತ ಮೂರ್ತಿಯವರಿಗೆ ಇದ್ದ ಹಾಗೆ ಬೇರೊಬ್ಬ ಲೇಖಕರಿಗೆ ಇದ್ದುದನ್ನು ನಾನು ಕಾಣಲೇ ಇಲ್ಲ. ಅದು ಪ್ರೀತಿಯಿರಲಿ, ಸಿಟ್ಟಿರಲಿ ಅವುಗಳನ್ನು ಹೊರ ಹಾಕಿದರೆ ಮಾತ್ರ ಅವರ ಆತ್ಮ ತೃಪ್ತಿಗೊಳ್ಳುತ್ತಿತ್ತು.
 
 
ಅನಂತಮೂತಿಯವರ ಬಹು ದೊಡ್ಡಗುಣವೆಂದರೆ, ಅವರೆಂದೂ ತಮ್ಮ ಜೀವಿತದಲ್ಲಿ ತಮ್ಮ ಕಟು ವಿರೋಧಗಳ ಬಗ್ಗೆಯಾಗಲಿ, ಟೀಕಿಸುವವರ ವಿರುದ್ಧ ಎಂದು ವೈರತ್ವವನ್ನು ಸಾಧಿಸಲಿಲ್ಲ. ಕಾರಣಕ್ಕಾಗಿ ಅವರಿಗೆ ತಮ್ಮ ಜೀವೀತಾವಧಿಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕದಿದ್ದರೂ ಸಹ ಅವರಿಗೆ ಪ್ರಶಸ್ತಿ ತಪ್ಪಿಸಿದವರ ಬಗ್ಗೆ ಎಂದೂ ಬೇಸರಗೊಳ್ಳಲಿಲ್ಲ. ನನಗಿನ್ನೂ ನೆನಪಿದೆಹತ್ತು ವರ್ಷಗಳ ಹಿಂದೆ ಇದೇ ಅಗ್ನಿ ವಾರಪತ್ರಿಕೆಯಲ್ಲಿ ಅನಂತಮೂರ್ತಿಯವರ ನಡೆ ನುಡಿ ಕುರಿತಾದ ಒಂದು ಲೇಖನ ಪ್ರಕಟವಾಯಿತು. ಲೇಖನದಿಂದ ಘಾಸಿಗೊಂಡ ಅವರು ಮರುದಿನ ತಮ್ಮ ಪತ್ನಿ, ಪುತ್ರ, ಸೊಸೆ ಸಮೇತರಾಗಿ ಅಗ್ನಿ ವಾರಪತ್ರಿಕೆ ಕಛೇರಿ ಎದುರು ಧರಣಿ ಕೂತು ಸಂಪಾದಕರಾಗಿದ್ದ ಶ್ರೀಧರ್, ಮತ್ತು ಅವರ ಬಳಗಕ್ಕೆ ಮುಜುಗರವನ್ನುವನ್ನುಂಟು ಮಾಡಿ, ತಾವೂ ಸಹ ಮಾಧ್ಯಮಗಳ ಎದುರು ಮುಜುಗರಕ್ಕೆ ಒಳಗಾದರು. ಘಟನೆ ನಡೆದ ಕೆಲವೇ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಅಗ್ನಿ ಶ್ರೀಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು. ಕ್ಷಣಕ್ಕೆ ತಮ್ಮ ಎದೆಯೊಳಗೆ ಹುಟ್ಟುವ  ಸಿಟ್ಟು ಅಥವಾ ಪ್ರೀತಿಯನ್ನು ಅವರು ಎಂದೂ ಕಾಪಿಟ್ಟುಕೊಂಡವರಲ್ಲ, ಹಾಗಾಗಿ ಅವರು ತಮ್ಮ ಹೇಳಿಕೆಗಳಿಂದ ನಿರಂತರವಾಗಿ ವಿವಾದಗಳಿಗೆ ಬಲಿಯಾದರು. ನಿರಂತರವಾಗಿ ಚಲನಶೀಲ ಸಮಾಜದಲ್ಲಿ  ಚಾಲ್ತಿಯಲ್ಲಿರುವುದು ಅವರ ಪಾಲಿಗೆ ಒಂದು ರೀತಿಯಲ್ಲಿ ವ್ಯಸನವಾಗಿ ಮಾರ್ಪಟ್ಟಿತ್ತು.
 
ನಿಜ ಹೇಳಬೇಕೆಂದರೆ, ಅನಂತಮೂರ್ತಿಯವರ ಬರೆವಣಿಗೆಯ ಕಸುವು 1990 ವೇಳೆಗೆ ತೀರಿಹೋಗಿತ್ತು, ಸಮಯದಲ್ಲಿ ಬಂದ ಅವರ ಭವ ಮತ್ತು ದಿವ್ಯ ಎಂಬ ಎರಡು ಕಾದಂಬರಿಗಳನ್ನು ಕನ್ನಡ ಸಾರಸ್ವತಲೋಕ ಸಾರಾಸಗಟಾಗಿ ತಿರಸ್ಕರಿಸಿತ್ತು. ಹಾಗಾಗಿ ನಂತರದ ದಿನಗಳಲ್ಲಿ ಅವರು ತಮ್ಮ ಸೃಜನಶೀಲ ಬರೆವಣಿಗೆಗೆ ಕೈ ಹಾಕದೆ ಹೆಚ್ಚು ಹೆಚ್ಚು ಮಾತನಾಡತೊಡಗಿದರು. ಅವರ ಪಾಲಿಗೆ ಮಾತೆಂಬುದು ಮಂತ್ರವಾಯಿತು. 1990 ನಂತರ ಕೆಲವು ವಿಷಯಗಳ ಕುರಿತಾಗಿ ಬರೆದ ಲೇಖನಗಳು ಮತ್ತು ಹಲವು ಕೃತಿಗಳಿಗೆ ಬರೆದ ಮುನ್ನುಡಿ ಇಲ್ಲವೆ ಬೆನ್ನುಡಿ ಅವರ ಪಾಲಿನ ಸಾಹಿತ್ಯದ ಕೃಷಿಯಾಯಿತು. ಕನ್ನಡದ ಅತ್ಯಂತ ಪ್ರಸಿದ್ಧ ಪಡೆದ ಹಾಗೂ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದ ಅನಂತಮೂರ್ತಿಯವರು ಓರ್ವ ಪ್ರಸಿದ್ಧ ಲೇಖಕನಾಗಿ ತಾನು ಬದುಕುತ್ತಿದ್ದ ಸಮಾಜದೊಡನೆ ಕಾಯ್ದುಕೊಳ್ಳಬೇಕಾದ ಅಂತರವನ್ನು ಕಾಯ್ದುಕೊಳ್ಳಲಾರದೆ ಒಮ್ಮೊಮ್ಮೆ ತಮ್ಮ ಪ್ರತಿಷ್ಟೆ ಮತ್ತು ಘನತೆಯನ್ನು ಎಲ್ಲರದೆರು ಪಣಕ್ಕೊಡ್ಡಿ ಘಾಸಿಗೊಂಡರು ಜೊತೆಗೆ ಅಪಮಾನಿತರಾದರು
 
ತನ್ನ ಸುತ್ತ ಮುತ್ತಲಿನ ಜನ ಮತ್ತು ತಾನು ಬದುಕುತ್ತಿದ್ದ ವರ್ತಮಾನ ಜಗತ್ತಿನ  ಕ್ಷುದ್ರ ಸಮಾಜವನ್ನು ಕಂಡು ವ್ಯಗ್ರರಾಗುತ್ತಿದ್ದ ಲಂಕೇಶರ ಗುಣವಾಗಲಿ ಅಥವಾ ದಿವ್ಯ ನಿರ್ಲಕ್ಷ್ಯತೆಯಿಂದ ಇದೇ ಸಮಾಜವನ್ನು ನೋಡುತ್ತಿದ್ದ ತೇಜಸ್ವಿಯವರ ನಿರ್ಭಾವುಕತನವಾಗಲಿ ಅನಂತಮೂರ್ತಿಯವರಿಗೆ ದಕ್ಕಲಿಲ್ಲ. ಹಾಗಾಗಿ  ಕುಮಾರಸ್ವಾಮಿಯಂತಹ ಒಬ್ಬ ಆಕಸ್ಮಿಕ ಮುಖ್ಯಮಂತ್ರಿಯೊಬ್ಬ ಅಪ್ರಬುದ್ದವಾಗಿ  “ ಯಾರ್ರೀ ಅವನು ಅನಂತ ಮೂರ್ತಿಎಂದು ಸಾರ್ವಜನಿಕವಾಗಿ ಪ್ರಶ್ನಿಸಿದಾಗ, “ಕರ್ನಾಟಕದ ಮೂಲೆ ಮೂಲೆಗೆ ಹೋಗಿ ಬೀದಿಯಲ್ಲಿ ನಿಂತು ಪ್ರಶ್ನೆಯನ್ನು ಕೇಳುಎಂದು ನಾಡಿನ ಮುಖ್ಯಮಂತ್ರಿಯೊಬ್ಬನಿಗೆ ಉತ್ತರ ಹೇಳುವ ಸಾತ್ವಿಕ ಸಿಟ್ಟನ್ನು ಅವರು ಬೆಳಸಿಕೊಳ್ಳಲಿಲ್ಲ. ಅದೇ ಕುಮಾರಸ್ವಾಮಿ ಯಾವುದೋ ಒಂದು ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ವ್ಯಕ್ತಿಗೆ ನಿಂಬೆ ರಸ ಕುಡಿಸಲು ಇವರು ಮುಂದಾದರು. ಸಿನಿಮಾ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳ ಚಟುವಟಿಕೆಗಳು  ಅವರ ಪಾಲಿಗೆ ಅನುಸಂಧಾನದ ಪ್ರಕ್ರಿಯೆಗಳಾದವು. ಹಾಗಾಗಿ ರಾಜಕೀಯವ್ಯಕ್ತಿಗಳಾಗಲಿ, ಪಕ್ಷಗಳಾಗಲಿ ಅವರ ಪಾಲಿಗೆ ಎಂದೂ ಮೈಲಿಗೆ ಅನಿಸಲಿಲ್ಲ. ಕಾರಣಕ್ಕಾಗಿ ಅವರು ನನ್ನ ತಲೆಮಾರಿನ ಬಹುತೇಕ ಜನರ ಸಿಟ್ಟು ಮತ್ತು ಪ್ರೀತಿ ಎರಡಕ್ಕೂ ಕಾರಣರಾದ ಅಪರೂಪದ ವ್ಯಕ್ತಿಯಾದರು.
 
ಅನಂತಮೂರ್ತಿಯವರ ಕುರಿತು ನಮ್ಮ ತಕರಾರುಗಳು ಏನೇ ಇರಲಿ, ಕನ್ನಡದ ಜಗತ್ತನ್ನು ಜಗತ್ತಿಗೆ ವಿಸ್ತರಿಸಿದವರಲ್ಲಿ ಅವರು ಅಗ್ರಗಣ್ಯರು. ಭಾರತೀಯ ಕಾದಂಬರಿಗಳೆಂದರೆ, ಮುಲ್ಕ್ ರಾಜ್ ಆನಂದ್   ಕೂಲಿಅನ್ ಟಚ್ ಬಲ್, ಹಾಸನದ ರಾಜಾರಾವ್ ಅವರ ಕಾಂತಾಪುರ, ಆರ್.ಕೆ. ನಾರಾಯಣ್ ಅವರ ಗೈಡ್ ಇವುಗಳಷ್ಟೇ ಎಂದು ಜಗತ್ತು ನಂಬಿಕೊಂಡು ನಿರ್ವಚಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಂಸ್ಕಾರ ಕಾದಂಬರಿಯತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದರು
( ಸಂಸ್ಕಾರ ಕಾದಂಬರಿಯನ್ನು .ಕೆ. ರಾಮಾನುಜಂ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ
 
ಕೊನೆಯ ಮಾತು. ಕಳೆದ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅನಂತಮೂರ್ತಿಯವರ ಅಂತ್ಯಕ್ರಿಯೆ ಮುಗಿಸಿಕೊಂಡು ತಿಪಟೂರಿಗೆ ಹೊರಟಿದ್ದ ನಮ್ಮ ನಡುವಿನ ಕತೆಗಾರ, ಅನುವಾದಕ ಹಾಗೂ ಗೆಳಯ ಗಂಗಾಧರಯ್ಯನವರಿಗೆ ಪುನಃ ಯಾವಾಗ ಬೇಟಿಯಾಗೊಣ ಎಂದೆ. ಕ್ಷಣಕ್ಕೆ ಭಾವುಕರಾದ ಗಂಗಾಧರಯ್ಯ, ಇವೊತ್ತಿನಿಂದ ಬೆಂಗಳೂರು ನನ್ನದಲ್ಲ ಅನಿಸಿದೆ ಕೊಪ್ಪ, ಲಂಕೇಶರಿಲ್ಲದ, ಅನಂತಮೂರ್ತಿಯಿಲ್ಲದ, ಕೀರಂ ಇಲ್ಲದ, ಡಿ.ಆರ್ ನಾಗರಾಜ್ ಇಲ್ಲದ ಬೆಂಗಳೂರು ನಗರ ಯಾರಿಗೆ ಬೇಕು? ಇಲ್ಲಿಗೆ ಬಂದು ಯಾರ ಮಾತನ್ನು ಕೇಳೊಣ? ಎನ್ನುತ್ತಿದ್ದಂತೆ ಅವರ ಕೊರಳು ಕಟ್ಟಿಕೊಂಡಿತು. ಅವರ   ಮಾತುಗಳನ್ನು ಕೇಳಿಸಿಕೊಂಡ ನನ್ನ ಕಣ್ಣುಗಳು ಒದ್ದೆಯಾದವು. ಇವು ಕೇವಲ ಗಂಗಾಧರಯ್ಯನವರೊಬ್ಬರÀ ಹತಾಶೆಯ ಮಾತುಗಳಂತೆ ನನಗೆ ಕೇಳಿಸದೆಕನ್ನಡದ ಜಗತ್ತಿಗೆ ಶೂನ್ಯ ತುಂಬಿಕೊಂಡಿರುವಾಗ ಆಡಬಹುದಾದ ನನ್ನ ತಲೆಮಾರಿನ ಒಕ್ಕೊರಲಿನ ನೋವಿನ ದನಿಯಾಗಿ ಕೇಳಿಸಿತು.

                                                            (ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...