Tuesday, September 30, 2014

ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ : ಡಾ.ಎಚ್. ಗಣಪತಿಯಪ್ಪವಾರ್ತಾಭಾರತಿನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ ಡಾ.ಎಚ್. ಗಣಪತಿಯಪ್ಪ

ನಿನ್ನೆ ನಿಧನರಾದ ಡಾ. ಎಚ್ . ಗಣಪತಿಯಪ್ಪನವರ ನೆನಪಿಗೆ ಅವರೊಂದಿಗೆ 2011ರಲ್ಲಿ ನಡೆಸಿದ್ದ ಸಂದರ್ಶನದ ಭಾಗ

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿ, ಆನಂತರ 50ರ ದಶಕದಲ್ಲಿ ಭೂಮಾಲಕರಿಂದ ರೈತಾಪಿಯ ಸ್ವಾತಂತ್ರ್ಯಕ್ಕಾಗಿ ಟೊಂಕ ಕಟ್ಟಿ ನಿಂತು ಚಾರಿತ್ರಿಕ ‘ಕಾಗೋಡು ರೈತ ಚಳವಳಿ’ಯ ಮುಂದಾಳತ್ವ ವಹಿಸಿದ್ದವರು ಹಿರಿಯ ಗಾಂಧೀವಾದಿ ಡಾ.ಎಚ್. ಗಣಪತಿಯಪ್ಪನವರು. ಅವರು ತಮ್ಮ ಈ 88ನೆಯ ವಯಸ್ಸಿನಲ್ಲೂ ವೈಚಾರಿಕ ಎಚ್ಚರಿಕೆಯಲ್ಲಿ ಬದುಕಿದ್ದವರು.

* ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಿಮಗೆ ಇಂದು ನಮ್ಮ ದೇಶ ಪ್ರಗತಿಯ ಹಂತದಲ್ಲಿದೆ ಅನ್ನಿಸಿದೆಯೇ?
-ಎಲ್ಲಿಯ ಪ್ರಗತಿ? ಒಂದರಲ್ಲಿ ಪ್ರಗತಿ ಇದ್ದರೆ ಮತ್ತೊಂದು ಊನಗೊಂಡಿರುವ ಸ್ಥಿತಿ ನಮ್ಮದು. ನಾವು ಅಂದು ಹೊಂದಿದ್ದ ನಿರೀಕ್ಷೆಯ ಮಟ್ಟದಲ್ಲಿ ಯಾವುದೂ ಇಲ್ಲ. ದೇಶದ ತಳಹದಿಯಾಗಿರುವ ಹಳ್ಳಿಗಳೇ ಸೊರಗಿ ಹೋಗ್ತಾ ಇವೆ. ಇಂದು ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ. ಹಳ್ಳಿಗಳ ಪ್ರಗತಿಯನ್ನು ಬಿಟ್ಟು ದೇಶದ ಪ್ರಗತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಮಹಾತ ಗಾಂಧೀಜೀಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಅರ್ಥ ಮಾಡಿಕೊಂಡು ಅದನ್ನು ಜಾರಿಗೆ ತರಲು ತುಂಬಾ ಹಿಂದೆ ಬಿದ್ದಿದೆ ಅನ್ನಿಸಿದೆ. ಭಾರತದ ಅಭಿವೃದ್ಧಿ ಮಾಡುವಾಗ ದೇಶದ ಮೂಲ ಉದ್ಯೋಗಗಳಾದ ವ್ಯವಸಾಯ, ನೇಕಾರಿಕೆ, ಗೃಹ ಕೈಗಾರಿಕೆಗಳನ್ನು ಅಲುಗಾಡಿಸಬಾರದಿತ್ತು. ಅವನ್ನು ಅಲ್ಲಲ್ಲೇ ಗಟ್ಟಿಗೊಳಿಸಬೇಕಿತ್ತು. ಎಲ್ಲಾ ಉದ್ಯೋಗ ಪಟ್ಟಣಗಳಿಗೆ ಹೋಗಿಟ್ಟಿತು. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು. ಅಂದು ಯಾವ ಪ್ರಮಾಣದಲ್ಲಿ ಬಡತನವಿತ್ತೋ ಇಂದೂ ಅದೇ ಪ್ರಮಾಣದಲ್ಲಿದೆ. ಯಾಕೆ ಅಂತ ಕೇಳಿಕೊಂಡಿಲ್ಲ. ಮೊದಲು ಹಳ್ಳಿಗಳನ್ನು ಕಟ್ಟುವ ಬದಲು ದಿಲ್ಲಿ ಕಟ್ಟಲು ಹೋಗಿದ್ದಕ್ಕಲ್ಲವಾ?

*ನೀವು ಚಾರಿತ್ರಿಕ ಕಾಗೋಡು ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದಿರಿ. ಇದಕ್ಕೆ ನಿಮಗೆ ಅಂದು ಸಿಕ್ಕಿದ ಪ್ರೇರಣೆ ಏನಾಗಿತ್ತು?
ಸ್ವಾತಂತ್ರ್ಯ ಎಂದರೆ ಅದು ಈ ದೇಶದ ರೈತರ ಸ್ವಾತಂತ್ರ್ಯ ಅನ್ನುವು ದು ನನ್ನ ಬಲವಾದ ನಂಬಿಕೆ. ಆದರೆ ಸ್ವಾತಂತ್ರ್ಯ ಪಡೆದು ದಶಕವಾದ ಮೇಲೂ ನಮ್ಮ ಭಾಗದಲ್ಲಿ ಭೂಮಾಲಕತ್ವ ಹಾಗೇ ಇತ್ತು. ಮುಖ್ಯವಾಗಿ ಉಳುವವನೇ ಹೊಲದೊಡೆಯನಾಗಬೇಕು ಎಂಬುದು ನನ್ನ ತಿಳಿವಳಿಕೆಯಲ್ಲಿ ಮೊದಲಿಂದಲೂ ಇತ್ತು. ನಾನೂ ರೈತಾಪಿ ಕುಟುಂಬದಿಂದಲೇ ಬಂದು ಗೇಣಿದಾರ ಕುಟುಂಬದಲ್ಲಿದ್ದವನು. ಅಂದು ಧ್ವನಿಯಿಲ್ಲದೆ ಇದ್ದ ನಮ್ಮ ಹಳ್ಳಿಗಳ ರೈತರಿಗೆ ನಮ್ಮಂತ ವಿದ್ಯಾವಂತರೇ ಜಾಗೃತಿ ಮೂಡಿಸಿ ಹೋರಾಟಕ್ಕೆ ಹುರಿದುಂಬಿಸಿವುದು ನಮ್ಮ ಕರ್ತವ್ಯವೆಂಬ ಅರಿವೂ ಇತ್ತು. ಹೇಗೂ ಗಾಂಧೀಜೀಯವರ ಆದರ್ಶಗಳು ಇದ್ದುದ್ದರಿಂದ ಆ ಹೋರಾಟ ನಡೆಯಿತು.

* ಭೂಸುಧಾರಣೆ ತೃಪ್ತಿಕರವಾಗಿ ನಡೆದಿದೆಯೇ?
ನಾವು ಚಳವಳಿ ನಡೆಸಿ ಮೂರು ದಶಕಗಳು ಕಾಯಬೇಕಾಯ್ತು ಅದರ ಪ್ರತಿಫಲವನ್ನು ನಮ್ಮ ಜನತೆ ನೋಡಲು. ಆದರೆ ಭೂಮಿ ಸಮಸ್ಯೆ ಇಂದು ಬೇರೆಯದೇ ರೀತಿಯಲ್ಲಿ ನಮ್ಮ ರೈತರಿಗೆ ಎದುರಾಗಿರುವುದನ್ನೂ ನಾವು ಗಮನಿಸಬೇಕು. ಈ ಹಿಂದೆ ಒಂದು ಕುಟುಂಬದಲ್ಲಿ ಐದು ಜನರಿದ್ದರೆ ಇಂದು ಆ ಸಂಖ್ಯೆ 25 ಆಗಿದೆ. ಭೂಹಿಡುವಳಿಗಳು ಸಂಕುಚಿತವಾ ಗುತ್ತಿವೆ. ಆ ಭೂಮಿ ಇಂದು ಸಾಕಾಗುವುದಿಲ್ಲ. ಆಗ ಪಕ್ಕದ ಭೂಮಿಯನ್ನು ಉಳುಮೆ ಮಾಡುತ್ತಾರೆ. ಹೀಗೆ ಕಾನೂನನ್ನು ಮೀರಿಯಾದರೂ ಬಗರ್‌ಹುಕುಂ ಸಾಗುವಳಿ ಮಾಡುವುದು ಜನರಿಗೆ ಅನಿವಾರ್ಯವಾಗಿದೆ. ಆದರೆ ಸರಕಾರ, ಹಾಗೂ ಕುರ್ಚಿಯ ಮೇಲೆ ಕುಳಿತ ಅಧಿಕಾರಿಗಳು ಕಾಗದದ ಮೇಲೆ ಗರೆ ಎಳೆದು,ಒತ್ತುವರಿ ಮಾಡಿದ ಜನರನ್ನು ಅವರನ್ನು ಅಪರಾಧಿಗಳಾಗಿ ನೋಡುತ್ತಿದ್ದಾರೆ. ಅವರು ಹೇಗೆ ಅಪರಾಧಿಗಳಾಗುತ್ತಾರೆ? ಕುರ್ಚಿ ಮೇಲೆ ಕುಳಿತುಕೊಂಡು ಜನರಿಗೆ ನೋಟೀಸು ಕೊಡುತ್ತಾರಲ್ಲಾ ಅಧಿಕಾರಿಗಳು ಅವರು ಇದಕ್ಕೆ ಜವಾಬು ಕೊಡಲಿ.

* ಈ ಸಮಸ್ಯೆಗಳನ್ನೆಲ್ಲಾ ಗ್ರಹಿಸಲು ನಮ್ಮ ಸರಕಾರಗಳಿಗೆ ಏಕೆ ಆಗುತ್ತಿಲ್ಲ?
ಏಕೆಂದರೆ ಆಳುತ್ತಿರುವವರಿಗೆ ಸೇವಾ ಮನೋಭಾವನೆ ಇಲ್ಲ. ಅವರು ತಂತಮ್ಮ ಸೇವೆಯಲ್ಲೇ ಮುಂದಾಗಿದ್ದಾರೆಯೇ ವಿನಃ ತ್ಯಾಗ ಮನೋಭಾ ವನೆಯಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದಲೇ ನಮ್ಮ ಜನರನ್ನು ಕಾಡುತ್ತಿರುವ ಯಾವ ಸಮಸ್ಯೆಗಳೂ ವಿಧಾನಸೌಧದಲ್ಲಿ ಕುಳಿತವರಿಗಾಗಲೀ, ಕಛೇರಿಗಳಲ್ಲಿ ಕುಳಿತವರಿಗಾಗಲೀ ಕಾಣಿಸದಂತಾ ಗಿರುವುದು. ಐಎಎಸ್ ಪಾಸು ಮಾಡಿದವರು ನಾವು ಜನರನ್ನು ಆಳೋಕೆ ಹುಟ್ಟಿರುವುದು ಎಂದು ಬಂದು ಆಳುವುದೇ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ನಾವು ಆಳುವ ಪರೀಕ್ಷೆ ಪಾಸು ಮಾಡಿಕೊಂಡು ಬಂದೇ ಸೀಟಿನಲ್ಲಿ ಕೂತಿದೀವಿ ಎಂದು ಬಂದು ಆಳುತ್ತಾರಲ್ಲಾ... ಈ ಐಎಎಸ್‌ನವರ ಕಾಲದಲ್ಲೇ ದೇಶ ಹಾಳಾಗಿ ಹೋಯ್ತು ಎನ್ನುವುದು ನನ್ನ ಸ್ಪಷ್ಟ ಭಾವನೆ. ಇದು ಜನಸಾಮಾನ್ಯರ, ರೈತರ ಅಧಿಕಾರವಾಗಬೇಕೇ ಹೊರತು ಐಎಎಸ್ ಅಧಿಕಾರ ಆಗಬಾರದು.

* ಸ್ವತಂತ್ರ ಭಾರತದಲ್ಲಿ ಜನರನ್ನು ಕಾಡುತ್ತಿರುವ ಪ್ರಧಾನ ಸಮಸ್ಯೆ ಯಾವುದು ಎಂದು ನಿಮ್ಮ ಭಾವನೆ?
ಜನರನ್ನು ಆವರಿಸಿಕೊಂಡಿರುವ ಅಜ್ಞಾನ ಮೂಢನಂಬಿಕೆಗಳೇ ಪ್ರಧಾನ ಸಮಸ್ಯೆ ಎನ್ನುವವವನು ನಾನು. ಈ ಜನರಿಗೆ ವಿಚಾರವಂತಿಕೆಯೇ ಇಲ್ಲವೇನೋ. ಈ ದೇಶದಲ್ಲಿ ಕಂಡಿದ್ದನ್ನೆಲ್ಲಾ ದೇವರು ಎಂದು ಪೂಜೆ ಮಾಡುತ್ತಾರೆ. ಒಂದು ಕಲ್ಲಿನ ಮೇಲೆ ಕುಂಕುಮ ಸುರಿದರೂ ಅದಕ್ಕೆ ಪೂಜೆ ಮಾಡುತ್ತಾರೆ, ಮರದಲ್ಲಿ ದೇವರಿದೆ ಎಂದರೂ ಅದಕ್ಕೆ ಪೂಜೆ ಊದುಬತ್ತಿ ಹಚ್ಚಿ ಹರಕೆ ಕಟ್ಟುತ್ತಾರೆ. ಯಾವುದನ್ನೂ ವಿಚಾರ ಮಾಡದೇ ಒಪ್ಪಿಕೊಂಡು ಬಿಡುತ್ತಾರಲ್ಲ. ಇದು ನಮ್ಮ ದೇಶದಲ್ಲಿ ಬಹುಸಂಖ್ಯಾತರ ಮೇಲೆ ಬ್ರಾಹ್ಮಣತ್ವ ಸವಾರಿ ಮಾಡುತ್ತಿರುವ ರೀತಿ. ಜನರಲ್ಲಿ ವೈಜ್ಞಾನಿಕ ಚಿಂತನೆ ಎನ್ನುವುದೇ ಇಲ್ಲ. ಈ ಮೂಢನಂಬಿಕೆಯನ್ನು ಹೊಗಲಾಡಿಸುವ ಸಂಸ್ಥೆಗಳೂ ನನಗೆ ಕಾಣುವುದಿಲ್ಲ.

* ನಮ್ಮ ದೇಶದಲ್ಲಿ ಸಾಮಾಜಿಕ ಪ್ರಗತಿಯೇ ಆಗಿಲ್ಲವೇ?
ಯಾವ ಸಾಮಾಜಿಕ ಪ್ರಗತಿ? ಈ ಕಾಲದಲ್ಲೂ ಜನರು ಜಾತಿ ಪದ್ಧತಿಯ ಅಡಿಗೇ ನರಳುತ್ತಿದ್ದಾರೆ. ಇದರಲ್ಲಿ ಚಾತುರ್ವರ್ಣ ವ್ಯವಸ್ಥೆ ಎನ್ನುವುದು ಗಡ್ಡೆ ರೂಪದಲ್ಲಿ ಕೆಲಸ ಮಾಡುತ್ತಾ ಬಂದಿದೆ. ಮೇಲಿನ ಎಲ್ಲದನ್ನೂ ಅದೇ ನಿರ್ಧಾರ ಮಾಡುತ್ತೆ. ಏನೂ ಬರದಿರುವ ದಡ್ಡನನ್ನು ಕೂಡಾ ಜನಿವಾರ ಹಾಕಿ ಅವನನ್ನು ಮುಂದಾಳಾಗಿ ಮಾಡಿಬಿಟ್ಟರು ದೇಶದಲ್ಲಿ. ಇದನ್ನು ಹೋಗಲಾಡಿಸೋಕೇ ಆಗಿಲ್ಲ. ಎಂತೆಂಥವರೋ ಪ್ರಯತ್ನಿಸದರಾದರೂ ಆ ಕೆಲಸ ಇನ್ನೂ ಆಗಿಲ್ಲ. ದೇಶವನ್ನು ಆಳಿದ ಪ್ರತಿಯೊಬ್ಬ ರಾಜ, ಮಹಾರಾಜನೂ ಈ ಚಾತುರ್ವರ್ಣದಿಂದಲೇ ತಮಗೆ ಲಾಭ ಇರುವುದನ್ನು ಕಂಡುಕೊಂಡು ಅದರ ಪ್ರಕಾರವೇ ಆಳ್ವಿಕೆ ನಡೆಸಿದಾರೆ. ಇವತ್ತಿಗೂ ಶಾಸನಗಳನ್ನು ರಚಿಸುತ್ತಿರುವುದು ಜಾತಿಯಿಂದ ಮೇಲಿರುವ ಬುದ್ಧಿಜೀವಿಗಳೇ.

* ಹಾಗಾದರೆ ಇದಕ್ಕೆ ಪರಿಹಾರ ಎಲ್ಲಿದೆ ಎಂದು ನಿಮ್ಮ ಭಾವನೆ?
ಶೂದ್ರ ಎಂದು ಕರೆದು ನೀನು ಕೀಳು ಎಂದಾಗ ಅದನ್ನು ಒಪ್ಪಿಕೊಳ್ಳ ದಿರುವ ಮನೋಭಾವನೆ ದುಡಿಯುವ ಜನರಲ್ಲಿ ಬಂದುಬಿಟ್ಟರೆ ಸಾಕು. ಇಂದು ಮನುಸ್ಮೃತಿಯೇ ನಮ್ಮ ಧಾರ್ಮಿಕ ಕಾನೂನಾಗಿದೆ. ಅಧಿಕಾರಕ್ಕೆ ಹೋದವರೂ ಅದರ ಆಧಾರದಲ್ಲಿಯೇ ಕಾನೂನು ರಚಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸಂಧಾನದಲ್ಲಿರುವ ಜಾತ್ಯಾತೀತ ಪರಿಕಲ್ಪನೆಗಳಿಗೆ ತಕ್ಕಂತೆ ಕಾನೂನು ರಚಿಸುತ್ತಲೇ ಇಲ್ಲ. ಮೊದಲು ಆ ಕೆಲಸವಾಗಬೇಕಾಗಿದೆ. ತುಳಿತಕ್ಕೊಳಗಾದ ಸಮುದಾಯದ ವಿದ್ಯಾವಂತರಾದವರು ತಮ್ಮ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಜವಾಬ್ದಾರಿ ಹೊರಬೇಕು. ಬಸವಣ್ಣನವರು ಹೇಳಿದ್ದರಲ್ಲ ಕಾಯಕವೇ ಕೈಲಾಸ ಎಂದು. ಹೀಗೆ ಇಂದು ಕಾಯಕದಲ್ಲಿರುವ ಶ್ರಮ ಜೀವಿಗಳಿರುವುದೇ ಕೈಲಾಸ. ನಾವು ದುಡಿದಿದ್ದನ್ನು ತಿಂದು ಸುಳ್ಳು ಬೋಧನೆ ಮಾಡುವ ಜನರೇನಿದ್ದಾರೆ ಅವರಿರುವುದು ನರಕ. ದೇಶಕ್ಕೆ ಬೇಕಾದ್ದನ್ನು ಉತ್ಪಾದನೆ ಮಾಡುವ ಶೇಕಡಾ 80 ಶ್ರಮ ಜೀವಿಗಳಲ್ಲಿ ಜಾಗೃತಿ ಹುಟ್ಟಿಸುವವರೇ ನನಗೆ ಕಾಣಿಸುತ್ತಿಲ್ಲ. ಹಿಂದೆ ಬಹಳ ಮಹಾನುಭಾವರಿದ್ದರು. ಇಂದು ಎಲ್ಲೋ ಕೆಲವರಿರಬಹುದಷ್ಟೆ.

*ನಮ್ಮ ಸಮಾಜದ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುತ್ತೀರಿ?
ಮೊದಲನೆಯದಾಗಿ ನಮ್ಮ ರೈತರು ವರ್ಗ ಸರಕಾರದ ಅಧೀನದಲ್ಲಿರಬಾರದು. ಎಲ್ಲಿಯವರೆಗೆ ರೈತರು ಹಾಗೆ ಮತ್ತೊಂದು ಶಕ್ತಿಯ ಅಧೀನದಲ್ಲಿರುತ್ತಾರೋ ಅಲ್ಲಿಯವರೆಗೂ ಅವರಿಗೆ ಸ್ವಾತಂತ್ರ್ಯ ಇಲ್ಲ. ನಗರ ಕೇಂದ್ರಿತವಾಗಿರುವವರು ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಹಾರ ಉತ್ಪಾದಕ ಶಕ್ತಿಗೆ ಧಕ್ಕೆ ಕೊಡದ ರೀತಿ ಬದುಕಬೇಕು. ರಾಜ್ಯದ ಜನರೆಲ್ಲಾ ವಿದ್ಯಾವಂತರಾಗಲು ಎಲ್ಲಿ ಹಿಂದೆ ಬೀಳುತ್ತಿದ್ದರೆ ನೋಡಿ ಅವರಿಗೆ ಜ್ಞಾನೋದಯವಾಗುವಂತೆ ಮಾಡಬೇಕೇ ವಿನಃ, ಇವರನ್ನು ಆಳುತ್ತೇವೆ ಎಂದು ಹೋಗಬಾರದು. ನಾಗರೀಕತೆ ಎಂದರೆ ಕೆಲವರ ಅಭಿವೃದ್ಧಿ ಅಲ್ಲ. ಎಲ್ಲರ ಸುಧಾರಣೆ ಆಗಬೇಕು. ನಗರವಾಸಿ ಆದವನು ಶೋಷಕ ವ್ಯವಸ್ಥೆಯೊಳಗೆ ತಾನೂ ಒಬ್ಬ ತಿನ್ನುವವನಾಗಿಬಿಟ್ಟರೆ ಹೇಗೆ ಸಮಾಜ ಬದಲಾವಣೆ ಆಗುತ್ತದೆ?.

* ಇಂದಿನ ಜಾಗತೀಕರಣದಿಂದ ಅಭಿವೃದ್ಧಿ ಸಾಕಷ್ಟು ಆಗಿದೆ ಎಂಬ ತಿಳಿವಳಿಕೆ ನಮ್ಮಲ್ಲಿದೆಯಲ್ಲ?
ದೇಶದ ನಿಜವಾದ ಅಭಿವೃದ್ಧಿ ಆಗಬೇಕೆಂದರೆ ಅದು ಗಾಂಧಿ ಕಲ್ಪನೆಯ ಗ್ರಾಮ ಸ್ವರಾಜ್ಯದಿಂದ ಮಾತ್ರ ಸಾಧ್ಯ. ಈ ಜಾಗತೀಕರಣದಿಂದ ಅಲ್ಲ. ಈ ಜಾಗತೀಕರಣ ಎಂದರೆ ಅದೇನೂ ವಿಶ್ವ ಸರಕಾರವಲ್ಲ. ಲೋಯಾರವರು ಕೊಟ್ಟ ಅಂತಹ ವಿಶ್ವ ಸರಕಾರದಲ್ಲಿ ಗ್ರಾಮಾಡಳಿತ ಇರಬೇಕು. ಸರ್ಕಾರಗಳೇ ಇರಬಾರದು. ಗಡಿಗಳೂ ಇರಬಾರದು ಇಂದಿನ ಜಾಗತೀಕರಣ ಅದನ್ನು ಮಾಡುತ್ತಿದೆಯೇ? ಎಲ್ಲರನ್ನೂ ಸ್ವತಂತ್ರರನ್ನಾಗಿ ಮಾಡೋದಿಕ್ಕೆ, ಎಲ್ಲರೂ ಮನಸಸ್ಸಿನಲ್ಲೂ ದುಗುಡ ಇಲ್ಲದೆ ಉಂಡು, ತಿಂದು ದೇಶದ ಉತ್ಪಾದನೆ ಜಾಸ್ತಿ ಮಾಡಿ, ಆ ಉತ್ಪಾದನೆ ದೇಶದ ಎಲ್ಲರಿಗೂ ಸಿಗುವ ರೀತಿ, ಬಡತನ ಎನ್ನುವುದು ಕಲ್ಪನೆಗೇ ಬರದಿರುವ ರೀತಿ ಸಮೃದ್ಧ ದೇಶ ನಿರ್ಮಾಣಕ್ಕೆ ಗಾಂಧಿ ಮಾರ್ಗವೇ ಇಂದಿಗೂ ಸೂಕ್ತವೇ ಹೊರತು ಇನ್ನಾವ ಮಾರ್ಗವೂ ಸರಿ ಇಲ್ಲ.

* ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇದಕ್ಕೆಲ್ಲಾ ಅವಕಾಶ ಇದೆಯೆಂದು ನಿಮಗನ್ನಿಸಿದೆಯಾ?
ನಮ್ಮ ಜನಪ್ರತಿನಿಧಿಗಳಾದವರಿಗೆ ಎಲ್ಲಿವರೆಗೂ ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಸೇವಾ ಮನೋಭಾವನೆ ಬರೋದಿಲ್ಲವೋ ಅಲ್ಲಿವರೆಗೂ ಹೀಗೇ ಇದು ಕೆಡುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ತ್ಯಾಗ ಮನೋಭಾವನೆ ಹೊಂದಿರುವವರನ್ನು ನಾವು ಕಳಿಸುವುದಿಲ್ಲ ಅಥವಾ ಆರಿಸಿ ಹೋದವರಿಗೆ ಆ ಭಾವನೆ ಇರುವುದಿಲ್ಲ ಇದು ಹೀಗೇ ನಡೆಯುತ್ತಿದೆ. ನಾನೂ ಚುನಾವಣೆಗೆ ನಿಂತಿದ್ದೆ. ನಾನು ಆರಿಸಿ ಬಂದರೆ ಏನೋ ಸಾಧನೆ ಆಗುತ್ತೆ ಎನ್ನುವ ಭಾವನೆಯಿಂದ ನಾನು ಸ್ಪರ್ಧೆ ಮಾಡಿದೆ. ಜನರು ಅದಕ್ಕೆ ಅವಕಾಶ ಕೊಡಲಿಲ್ಲ. ತನಗೇ ಬಸ್ ಚಾರ್ಜಿಗೆ ದುಡ್ಡಿಲ್ಲದವನು ಅಲ್ಲಿ ಹೋಗಿ ಏನು ಮಾಡುತ್ತಾನೆ ಎಂಬ ಭಾವನೆ ಜನಕ್ಕೆ. ಇವತ್ತಿನ ರಾಜಕೀಯ ನೋಡಿ ಎಷ್ಟು ಹೊಲಸಾಗಿದೆ ಅಂತ. ಅಲ್ಲಾ ಈ ಮುಖ್ಯಮಂತ್ರಿ ಇಷ್ಟೆಲ್ಲಾ ಆದಮೇಲೆ ಬಿಟ್ಟು ಬಂದು ಬಿಡಬೇಕಿತ್ತು. ಅವರೂ ನನ್ನ ಹಾಗೆ ಒಬ್ಬ ಹೋರಾಟಗಾರನಾಗಿ ಮೇಲೆ ಹೋಗಿ ಈಗ ಇಷ್ಟೆಲ್ಲಾ ಅವಮಾನವಾದ ಮೇಲೂ ಅದೇ ಸೀಟಲ್ಲಿ ಕುಳಿತುಕೊಳ್ಳಬೇಕಿತ್ತಾ? ಅವರೇನು ಆಳೋಕಾಗೇ ಹುಟ್ಟಿದ್ದಾರಾ?. ಇಂದು ಸರ್ಕಾರದಲ್ಲಿ ನಡೆಯುತ್ತಿರುವ ಭಾನಗಡಿಗಳನ್ನೆಲ್ಲಾ ನೋಡುತ್ತಿದ್ದರೆ ನಾನು ಸ್ವಾತಂತ್ರ್ಯ ಹೋರಾಟಗಾರನಾಗಿ ಇನ್ನೂ ಯಾಕೆ ಬದುಕಿದ್ದೇನೋ ಅನ್ನಿಸುತ್ತಿದೆ. ಇಷ್ಟರಲ್ಲೇ ಸತ್ತು ಹೋಗಿಬಿಡಬೇಕಿತ್ತು.

* ಜನಸಾಮಾನ್ಯರಿಗೆ ಇದರಿಂದೆಲ್ಲಾ ಹೊರಬರಲು ದಾರಿ ಇದೆಯೇ?
ಇಲ್ಲಿ ಆಳಲು ಹೋದವರಂತೆಯೇ ಜನರಲ್ಲೂ ಸಮಸ್ಯೆ ಇದೆ. ಆಳಲು ಹೋದವರು ಒಮ್ಮೆ ಅಧಿಕಾರ ಹಿಡಿದರೆ ಮುಗಿಯಿತು. ಅದನ್ನು ಉಳಿಸಿಕೊಳ್ಳೋದೇ ಅವರ ಮುಖ್ಯ ಕರ್ತವ್ಯವಾಗಿಬಿಡುತ್ತದೆ. ಅದೇನೂ ಜನಸೇವೆ ಎಂದ ಅಲ್ಲ ಮತ್ತೆ. ಜನರಲ್ಲಿ ಸಹ ಗುಲಾಮಗಿರಿ ಭಾವನೆ ಹೋಗಿಲ್ಲ. ನಾವು ಆಳಿಸಿಕೊಳ್ಳೋಕೇ ಇರುವವರು ಎಂಬ ಮನಸ್ಥಿತಿಯಲ್ಲಿಯೇ ಅವರಿರುತ್ತಾರೆ. ಏನೇ ಅನ್ಯಾಯ ನಡೆದರೂ ಅದನ್ನು ಪ್ರಶ್ನಿಸುವ ಮನೋಭಾವವೇ ಇಂದು ಜನರಲ್ಲಿ ಇಲ್ಲವಲ್ಲ. ಆದರೂ ಚಳವಳಿಗಳ ಮೂಲಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ನನ್ನಲ್ಲಿ ಇದೆ. ಏಕೆಂದರೆ ಚಳವಳಿಯ ಶಕ್ತಿ ಏನೆಂದು ನನಗೆ ತಿಳಿದಿದೆ. ಅದು ಜನರ ಇಂತಹ ಕೀಳು ಮನೋಭಾವನೆಯನ್ನೂ ದೂರಮಾಡಿಬಿಡುತ್ತದೆ.

* ನೀವು ಅಂದು ನಡೆಸಿದ ಬಗೆಯಲ್ಲಿ ಇಂದು ಚಳವಳಿಗಳು ನಡೆಯಲು ಸಾಧ್ಯವೇ?
ಇವತ್ತಿಗೂ ಆ ಸಮಾಜವಾದಿ ಚಳವಳಿಯ ಮಟ್ಟದಲ್ಲಿ ಬೇರೆ ಯಾವ ಚಳುವಳಿಯೂ ಬೆಳೆದಿಲ್ಲ. ಜಯಪ್ರಕಾಶ್ ನಾರಯಣ್, ಲೋಯಾರಂತವರೂ ಭಾಗವಹಿಸಿ ಜೈಲಿಗೆ ಹೋಗಿರುವಂತಹ ಆ ಚಳುವಳಿಗಿದ್ದ ಹೆಸರು ಬೇರ್ಯಾವ ಚಳವಳಿಗೂ ಇಲ್ಲ. ಇಂದೂ ಸಹ ಏನೇ ಬದಲಾವಣೆ ಬಂದರೂ ಚಳವಳಿಗಳಿಂದಲೇ ಬರುತ್ತದೆ. ಚಳವಳಿ ಎಂದರೆ ಇಂದು ನಡೆಯುತ್ತಿರುವ ಅನೇಕ ಸ್ವಾರ್ಥ ಹಿತಾಸಕ್ತಿಗಳ ಚಳವಳಿಯಲ್ಲ. ಅವು ನಾಮಕಾವಸ್ಥೆ ಚಳವಳಿಯಾಗಿರಬಾರದು. ಅದು ಈ ಸರಕಾರಗಳನ್ನೇ ನಡುಗಿಸುವ ಮಟ್ಟಿಗೆ ಇರಬೇಕು.

* ಇಂದಿನ ಯುವಜನರಿಗೆ ಯಾವ ಸಂದೇಶ ನೀಡಲು ಇಚ್ಚಿಸುತ್ತೀರಿ?
ಯುವಕರು ಯಾವ ಉದ್ಯೋಗದಲ್ಲೇ ಇರಲಿ ನನ್ನ ದೇಶದ ಜನ ಯಾವ ಕಡೆ ಹೋಗಬೇಕು ಎಂಬುದನ್ನು ನಿರ್ಧರಿಸಿ ಇವರು ಕೆಲಸ ಮಾಡಬೇಕು. ನಮ್ಮ ಜನರು ಇಂದು ಹಣ ತಕೊಂಡು ಓಟು ಕೊಡುವ ಪರಿಸ್ಥಿತಿಯಲ್ಲಿದ್ದಾರೆಂದರೆ ಅದಕ್ಕಿಂತಾ ಹೀನಾಯವಾದುದು ಬೇರೆ ಇಲ್ಲ. ಓಟಿನ ಹಕ್ಕನ್ನು ನಮಗೆ ಕೊಟ್ಟ ಸ್ವಾತಂತ್ರ್ಯಕಾಗಿ ಅಮದು ಏನೇನೆಲ್ಲಾ ನಡೆಯಿತು? ಎಷ್ಟು ಜನ ಪ್ರಾಣ ಕಳೆದುಕೊಂಡರು? ಎಷ್ಟು ಜನ ಏನೇನು ಅನಾಹುತಕ್ಕೆ ಗುರಿಯಾಗಿ, ಎಷ್ಟು ಜನ ನೇಣಿಗೆ ಬಿದ್ದು, ಎಷ್ಟು ಜನ ಜೈಲಿಗೆ ಸೇರಿದ್ದರು? ನಾನೂ ಸಹ ನಾಲ್ಕು ವರ್ಷ ಜೈಲುವಾಸ ಅನುಭಸಿದವನೇ. ಹೀಗೆ ತಂದಂತಹ ಸ್ವಾತಂತ್ರ್ಯದಲ್ಲಿ ಇಂದು ಹತ್ತು ರೂಪಾಯಿಗೆ ಓಟು ಮಾರಿಕೊಳ್ಳುವ ಪರಿಸ್ಥಿತಿ ಇದೆ ಎಂದರೆ ಏನು ಹೇಳುವುದು. ಇದನ್ನೆಲ್ಲಾ ಇಂದಿನ ಯುವಕರು ಗಂಭೀರವಾಗಿ ಆಲೋಚಿಸಿ ಕೆಲವರಾದರೂ ಅದನ್ನೆಲ್ಲಾ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಹಾಕಿದರೂ ಅಷ್ಟು ಉಪಕಾರವಾಗುತ್ತದೆ.

ಬೆಂಗಳೂರೆಂಬ ಆತ್ಮಹತ್ಯೆ ನಗರ...!
-ಡಾ.ಎಸ್.ಬಿ. ಜೋಗುರ

ವಾರ್ತಾಭಾರತಿ   ಬೆಂಗಳೂರೆಂಬ ಆತ್ಮಹತ್ಯೆ ನಗರ...!

 

 

ಬದುಕನ್ನು ಗ್ರಹಿಸುವ, ಸ್ವೀಕರಿಸುವ ರೀತಿಯಲ್ಲಿಯೇ ಬಾಳಿನ ಸಾರ್ಥಕತೆ ಮತ್ತು ನಿರರ್ಥಕತೆಗಳು ನಿರ್ಣಯವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ ತಂದೊಡ್ಡುವ ಅನೇಕ ಬಗೆಯ ಧಾವಂತಗಳ ನಡುವೆಯೂ ನಾವು ನೆಮ್ಮದಿಯಿಂದ ಬದುಕಿ ಉಳಿಯಬೇಕು ಎಂತಾದರೆ ಭೌತಿಕತೆಯ ಮೋಹವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಭೌತಿಕತೆಯ ಸಹವಾಸದ ದಟ್ಟ ನೆರಳು ನಿಮ್ಮನ್ನು ಅಷ್ಟು ಸರಳವಾಗಿ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ನೀವು ಓಡಿದರೆ ಹಿಂಬಾಲಿಸುವ, ಹಿಂಬಾಲಿಸಿದರೆ ಓಡುವ ಮೂಲಕ ಅದು ಸದಾ ನೀವು ಮೋಹದಲ್ಲಿ ಮಥಿಸುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಬುದ್ಧನ ‘ಆಸೆಯೇ ದು:ಖಕ್ಕೆ ಮೂಲ’ ಎನ್ನುವ ಮಾತು ಹೆಚ್ಚು ಇಷ್ಟವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಮನುಷ್ಯ ಅನೇಕ ಬಗೆಯ ಒತ್ತಡ ಮತ್ತು ಸಂವೇದನಾ ಶೂನ್ಯವಾದ, ಹೀನವಾದ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಅವನು ಇಲ್ಲವೇ ಅವಳು ಬಾಲ್ಯವನ್ನು ಅನುಭವಿಸದೇ ಬೆಳೆದು, ಭಯಂಕರವಾಗಿ ಓದಿ ಅಂಕ ಗಳಿಸಿ, ಉದ್ಯೋಗ ಗಿಟ್ಟಿಸಿಕೊಂಡರೂ ನೆಮ್ಮದಿಯ ಜೀವನ ಸಾಧ್ಯವಾಗುತ್ತಿಲ್ಲ. ಅವರ ಅರ್ಧ ಬದುಕು ಕೇವಲ ಅಂಕಗಳಿಸುವುದರಲ್ಲಿಯೇ ಕಳೆದು ಹೋದರೆ ಇನ್ನರ್ಧ ಅವರು ಕೆಲಸ ಮಾಡುವ ಕಚೇರಿಯ ನಿರೀಕ್ಷೆಗೆ ತಕ್ಕಂತೆ ನೌಕರಿ ನಿರ್ವಹಿಸುವುದರಲ್ಲಿ ಕಳೆದುಹೋಗುತ್ತದೆ. ಜಾಬ್ ಸ್ಯಾಟಿಸ್ ಫ್ಯಾಕ್ಷನ್‌ಗಿಂತಲೂ ನಮ್ಮಲ್ಲಿ ಈಗೀಗ ಜೋಬು ಸ್ಯಾಟಿಸ್‌ಫ್ಯಾಕ್ಷನ್ ಮುಖ್ಯವಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿಯೆ ಅತ್ಯಂತ ಮಹತ್ವಾಕಾಂಕ್ಷಿ ಸಂತಾನ ವನ್ನು ರೂಪಿಸುವ ನಾವು ಮುಂದು ವರಿದ ರಾಷ್ಟ್ರಗಳಿಗಿಂತಲೂ ವಿಭಿನ್ನ ವಾಗಿ ಮಕ್ಕಳನ್ನು ಪರಿಗಣಿಸುತ್ತಿಲ್ಲ. ಇದರ ಪರಿಣಾಮವಾಗಿ ಹೈಸ್ಕೂಲ್ ಮುಗಿಯುತ್ತಿರುವಂತೆ ಜೀವನ ನೀರಸವೆನಿಸುತ್ತಿದೆ. ಈ ಮುಂಚೆ ನಾವು ಎಂದೂ ಆರು ಮತ್ತು ಏಳನೆ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕೇಳಿರಲಿಲ್ಲ. ಆದರೆ ಈಗ ತೀರಾ ಚಿಲ್ಲರೆ ಕಾರಣಗಳಿಗಾಗಿಯೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅಷ್ಟಕ್ಕೂ ಒಬ್ಬ ವ್ಯಕ್ತಿ ತನ್ನನ್ನು ತಾನು ಕೊಂದುಕೊಳ್ಳುವ ಕ್ರಿಯೆ ಸ್ವಾಭಾವಿಕವಾದುದಂತೂ ಅಲ್ಲ. ನಿಸರ್ಗದ ಯಾವ ಜೀವಿಗಳು ಕೂಡಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ. ಆದರೆ ತಾನಾಗಿಯೇ ತನ್ನನ್ನು ಕೊಂದುಕೊಳ್ಳುವ ಕ್ರಿಯೆ ಮಾತ್ರ ಅತ್ಯಂತ ಅಸಹಜವಾದುದು. ಎಲ್ಲ ಜೀವಿಗಳು ಬದುಕಿ ಉಳಿಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತವೆ. ತೀರಾ ವಯಸ್ಸಾಗಿ ಹಣ್ಣು ಹಣ್ಣಾಗಿ ಜೀವಜಾಲದ ದೇಟು ಕಳಚುವುದರಲ್ಲಿದ್ದ ಮುಪ್ಪಾನು ಮುಪ್ಪುಮುದುಕರು ಕೂಡಾ ತಮ್ಮನ್ನು ‘‘ದೊಡ್ಡಾಸ್ಪತ್ರೆಗೆ ಕರೆದೊಯ್ಯಿರಿ’’ ಎಂದು ಹಲುಬುವವರ ನಡುವೆ ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಕಾರಣವೇ ಅಲ್ಲದ ಕಾರಣವನ್ನು ಮುಂದೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯ ಜೀವಗಳನ್ನು ಕಂಡಾಗ ತೀರಾ ಬೇಸರವೆನಿಸುತ್ತದೆ.

ಯಾವುದೇ ಜೀವಿ ತನ್ನಷ್ಟಕ್ಕೆ ತಾನೇ ಸಾಯಲು ಬಯಸುವುದಿಲ್ಲ. ಒಂದೊಮ್ಮೆ ತನ್ನ ಜೀವಕ್ಕೆ ಇತರ ಜೀವಿಗಳಿಂದ ಗಂಡಾಂತರವಿದೆ ಎನಿಸಿದಾಗ ಮಾತ್ರ ಆಕ್ರಮಣ ಮಾಡುತ್ತವೆ. ಮನುಷ್ಯ ಜೀವಿ ಮಾತ್ರ ಎದುರಾದ ಸಂದಿಗ್ಧ್ದಗಳಿಗೆ ಪರಿಹಾರ ಕಾಣದೇ ಸೋತೆ ಎನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಗೀಗ ಮನುಷ್ಯ ಪ್ರತಿಯೊಂದನ್ನೂ ಹೋಲಿಕೆ ಮಾಡುವ ಮೂಲಕವೇ ಸಮಾಧಾನ ಪಡುವುದು ಇಲ್ಲವೇ ಕಷ್ಟಪಡುವ ಮಾನಸಿಕ ಸ್ಥಿತಿಯನ್ನು ಅನುಭವಿಸುತ್ತಾನೆ. ಹಾಗೆ ಹೋಲಿಕೆ ಮಾಡುವಾಗಲೂ ಇತ್ಯಾತ್ಮಕವಾಗಿರುವದನ್ನು ಗಮನಿಸದೇ ನೇತ್ಯಾತ್ಮಕವಾಗಿರುವ ಸಂಗತಿಗಳನ್ನೇ ಹೆಚ್ಚಾಗಿ ಪರಿಗಣಿಸುವುದರ ಪರಿಣಾಮವಾಗಿ ಮನಸ್ಸು ಹುತ್ತಗಟ್ಟತೊಡುತ್ತದೆ. ನಿರಾಸೆಯೇ ಸುತ್ತಲೂ ಆವರಿಸಿಕೊಂಡು ಬಿಡುತ್ತದೆ. ಯಾವುದರಲ್ಲಿಯೂ ಮನಸ್ಸು ಖುಷಿ ಪಡುವ ಸ್ಥಿತಿಯಲ್ಲಿರುವುದಿಲ್ಲ. ಅದು ಒಂದು ಸೀಮಿತ ಗಳಿಗೆಯವರೆಗೆ ಉಳಿದರೆ ಸರಿ. ಆದರೆ ಹಾಗಾಗುವುದಿಲ್ಲ. ಗಾಢವಾದ ಕರಾಳ ಛಾಯೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಅದೇ ಧ್ಯಾನ, ಅದೇ ಗುಂಗು ತೀವ್ರವಾಗಿ ಕಾಡಿದಾಗ ವ್ಯಕ್ತಿಯಲ್ಲಿ ಬೇರು ಕಿತ್ತಿದ ಭಾವನೆ ಬಲಿಯತೊಡಗುತ್ತದೆ. ಆತ್ಮಹತ್ಯೆ ಎನ್ನುವುದು ಆ ಒಂದು ಗಳಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಆ ಗಳಿಗೆಯನ್ನು ದಾಟಿದರೆ ಆ ವ್ಯಕ್ತಿ ಮತ್ತೆಂದೂ ಆತ್ಮಹತ್ಯೆ ಮಾಡಿಕೊಳ್ಳಲಾರ. ಇನ್ನು ಅವನು ಮತ್ತೆ ಮತ್ತೆ ಆ ಯತ್ನ ಮಾಡಿರುವನೆಂದಾದರೆ ಅದೊಂಥರಾ ವಿಕ್ಷಿಪ್ತ ಖಯಾಲಿ.

 ಮಹಾನಗರಗಳಲ್ಲಿ ವ್ಯಾಪಕವಾಗಿರುವ ಈ ಪೀಡೆ ಈಗೀಗ ಗ್ರಾಮೀಣ ಪರಿಸರವನ್ನು ಬಾಧಿಸತೊಡಗಿದೆ. ಇನ್ನು ನಗರಗಳಂತೂ ಅಕ್ಷರಶ: ನೆಮ್ಮದಿಯ ಬದುಕಿನ ಹರಣಕ್ಕೆ ಕಾರಣವಾಗುತ್ತಿವೆ. ಆ ಬಗೆಗೆ ಅನೇಕ ಅಧ್ಯಯನಗಳೂ ನಡೆದಿವೆ. ಚೆನ್ನೈನಂತಹ ನಗರಗಳಲ್ಲಿ 27 ಪ್ರತಿಶತದಷ್ಟು ಜನರು ಮಾನಸಿಕ ಕಿರಿಕಿರಿಗೆ ಒಳಗಾಗಿ ಬದುಕುತ್ತಿದ್ದಾರೆ. ಭೌತಿಕ ಪ್ರಧಾನ ಬದುಕಿನ ನಡುವೆ ಮನುಷ್ಯನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕುರುಡು ಕಾಂಚಾಣದ ಕಾಲಿಗೆ ಸಿಲುಕಿ ಜಜ್ಜಿ ಹೋಗುತ್ತಿರುವ ಮನುಷ್ಯ ಭಾವಶೂನ್ಯ ಮನ:ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆಪ್ತವಾಗಿ ಮಾತನಾಡಿಸುವ, ಸಮಸ್ಯೆಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡತೊಡಗಿದೆ. ಇಂದು ಮಹಾನಗರಗಳಲ್ಲಿ ಆತ್ಮಹತ್ಯೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಪೂನಾ, ಬೆಂಗಳೂರಿನಂತಹ ನಗರಗಳು ಆತ್ಮಹತ್ಯಾ ನಗರಗಳಾಗಿ ಗುರುತಿಸಿಕೊಳ್ಳುತ್ತಿವೆ.

 ಬೆಂಗಳೂರಿನಲ್ಲಿರುವ ‘ಸಹಾಯಿ’ ಎನ್ನುವ ಸ್ವಯಂ ಸೇವಾ ಸಂಸ್ಥೆಯೊಂದು ಸೆಪ್ಟಂಬರ್ 2012ರಿಂದ ಫೆಬ್ರವರಿ 2014 ರವರೆಗೆ 1100 ಆತ್ಮಹತ್ಯೆ ಪ್ರಕರಣಗಳು ಜರಗಿದ ಬಗ್ಗೆ ವರದಿ ಮಾಡಿದೆ. ಇದ ರಲ್ಲಿ 580ರಷ್ಟು ಮಹಿಳೆಯರಿದ್ದರೆ 475 ಪುರುಷರಿದ್ದಾರೆ. ಅತ್ಯಂತ ವಿಷಾದದ ಸಂಗತಿ ಎಂದರೆ ಇದರಲ್ಲಿ 55 ಜನರು 18 ವರ್ಷ ವಯೋಮಿತಿಯಲ್ಲಿದ್ದವರಿದ್ದಾರೆ. ಅನೇಕ ಯುವಕರು ಅದೇ ದೈನಂದಿನ ಏಕತಾನತೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಕಲಿಯುವಾಗಲೇ ಅಪಾರವಾದ ಒತ್ತಡ ಮತ್ತು ಬರೀ ಓದು ಓದು ಎನ್ನುವ ಪಾಲಕರ ಒತ್ತಾಸೆಯ ನಡುವೆ ಜೀವನವೇ ನೀರಸವೆನಿಸಿ ಪೂರ್ಣವಿರಾಮ ಇಟ್ಟವರೂ ಇದ್ದಾರೆ.

 ಜೂನ್ 2014 ಬೆಂಗಳೂರು ಆತ್ಮಾಹತ್ಯಾ ನಗರ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುವಂತಿತ್ತು. ಜೂನ್ 13 ಮತ್ತು 14 ಎರಡೇ ದಿನದಲ್ಲಿ ಸುಮಾರು 10 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಲ್ಲಿ ಕಳೆದ 2005ರ ನಂತರ ಆತ್ಮಹತ್ಯಾ ಪ್ರಮಾಣ ಏರುತ್ತಲೇ ನಡೆದಿದೆ. ರಾಷ್ಟ್ರೀಯ ಅಪರಾಧಿ ದಾಖಲೆ ವಿಭಾಗದ ಪ್ರಕಾರ 2013ರಲ್ಲಿ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ನಂ 1 ಸ್ಥಾನದಲ್ಲಿದೆ. ಬೆಂಗಳೂರಲ್ಲಿ ಆ ವರ್ಷ ಅತ್ಮಹತ್ಯೆಯ ಪ್ರಮಾಣ 23.9 ಪ್ರತಿಶತದಷ್ಟಿದ್ದರೆ, ದೆಹಲಿಯಲ್ಲಿ ಆ ಪ್ರಮಾಣ ಕೇವಲ 10.7 ಪ್ರತಿಶತವಿದೆ. ಮುಂಬೈ ನಗರದಲ್ಲಿ 7.2 ಪ್ರತಿಶತವಿದ್ದರೆ, ಕೋಲ್ಕತ್ತಾದಲ್ಲಿ ಆ ಪ್ರಮಾಣ ತಿರುವು ಮುರುವಾಗಿದೆ ಅಂದರೆ 2.7 ಪ್ರತಿಶತ. 2008ರ ಸಂದರ್ಭದಲ್ಲಂತೂ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ಶಿಖರವನ್ನೇ ತಲುಪಿದೆ. ಆ ವರ್ಷ 42.8 ಪ್ರತಿಶತ ಆತ್ಮಹತ್ಯೆ ದಾಖಲಾಗಿದೆ. ಕಳೆದ ವರ್ಷ ಬೆಂಗಳೂರಲ್ಲಿ 2033 ಆತ್ಮಹತ್ಯೆಗಳು ಜರಗಿದರೆ, ಚೆನ್ನೈನಲ್ಲಿ ಆ ಪ್ರಮಾಣ 2183ರಷ್ಟಿತ್ತು. ಬಹುಷ: ಬೆಂಗಳೂರಲ್ಲಿ ಆ ಪ್ರಮಾಣದಲ್ಲಿ ಆತ್ಮಹತ್ಯೆ ಜರಗಲು ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಹೆಚ್ಚು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದೇ ಕಾರಣ ಎನ್ನಲಾಗಿದೆ. ಇನ್ನು ಈ ಮಾಹಿತಿ ತಂತ್ರಜ್ಞಾನದ ವಲಯದಲ್ಲಿರುವ ಉದ್ಯೋಗಗಳಿಗೆ ಮನುಷ್ಯರಂತಿರುವ ರೋಬೋಗಳು ಬೇಕಿದೆ. ಅಪ್ಪಟ ಯಾಂತ್ರಿಕವಾಗಿ, ಭಾವಶೂನ್ಯರಾಗಿ ದುಡಿಯುವವರಿರಬೇಕು. ಇಲ್ಲಿ ಸಂವೇದನೆ ಗಳಿಗೆ ಜಾಗವೇ ಇಲ್ಲ. ಪರಸ್ಪರ ಸುಖ ದು:ಖ ಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರು ಸಿಗುವುದೇ ಅಪರೂಪ. ಎಲ್ಲರೂ ಅವರವರ ಒತ್ತಡಗಳಲ್ಲಿ ಸಿಲುಕಿ ನಲುಗುವಂತಾದಾಗ ಮನಸಿನ ನೆಮ್ಮದಿ ಸಾಧ್ಯವಾಗುವುದಾದರೂ ಹೇಗೆ?

 ಡರ್ಖಹೀಂ ಎನ್ನುವ ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ 1897ರ ಸಂದರ್ಭದಲ್ಲಿ ಆತ್ಮಹತ್ಯೆಯನ್ನು ಅಧ್ಯಯನ ಮಾಡಿ ಅದನ್ನು ಇಡಿಯಾಗಿ ಮೂರು ಪ್ರಕಾರಗಳಲ್ಲಿ ವಿಂಗಡಣೆ ಮಾಡಿದ್ದಾನೆ. ಒಂದನೆಯದು ಸಮೂಹಪ್ರೇರಿತ ಆತ್ಮಹತ್ಯೆ, ಎರಡನೆಯದು ಸ್ವಯಂ ಪ್ರೇರಿತ ಆತ್ಮಹತ್ಯೆ, ಮೂರನೆಯದು ನಿಯಮರಾಹಿತ್ಯತೆಯ ಆತ್ಮಹತ್ಯೆ. ಮೊದಲ ಮತ್ತು ಮೂರನೆಯ ಪ್ರಕಾರಗಳಲ್ಲಿ ವ್ಯಕ್ತಿಗಿಂತಲೂ ಸಾಮೂಹಿಕ ಸಂಗತಿಗಳು ಮುಖ್ಯವಾಗಿರುತ್ತವೆ. ಎರಡನೆಯದರಲ್ಲಿ ಮಾತ್ರ ವ್ಯಕ್ತಿಯ ಅಹಂ ಭಾವ ಕೆಲಸ ಮಾಡುತ್ತದೆ. ಆ ಅಹಂಗೆ ತೀವ್ರವಾದ ಪೆಟ್ಟು ಬಿದ್ದದ್ದೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೂರನೆಯ ಪ್ರಕಾರದ ಆತ್ಮಹತ್ಯೆಯಲ್ಲಿ ಸಾಮಾಜಿಕ ಅವ್ಯವಸ್ಥೆ ಇಲ್ಲವೇ ನಿಯಮರಾಹಿತ್ಯತೆಯ ಸ್ಥಿತಿ ಆತ್ಮಹತ್ಯೆಗೆ ಕಾರಣವಾಗುತ್ತದೆ. ಡರ್ಖಹೀಮ್ ರಂಥಾ ಚಿಂತಕರು ಆತ್ಮಹತ್ಯೆಗೆ ವ್ಯಕ್ತಿಗತ ಕಾರಣಗಳಿಗಿಂತಲೂ ಸಾಮಾಜಿಕ ಕಾರಣಗಳೇ ನಿರ್ಣಾಯಕ ಎಂದಿದ್ದಾರೆ.

ಹೊಸಪುಸ್ತಕ : ಮುಖಪುಟ ಈ ಎರಡರಲ್ಲಿ ಯಾವುದಿರಲಿಮುಖಪುಟ ಈ ಎರಡರಲ್ಲಿ ಯಾವುದಿರಲಿ ? ನಮ್ಮ ನಡುವಿನ ಅದ್ಭುತ ಕಲಾವಿದ ಗೆಳೆಯ ಜಿ.ಅರುಣಕುಮಾರ ಮುಖಪುಟ ಮಾಡಿದ್ದಾರೆ. ಈ ಪುಸ್ತಕವನ್ನು ವಿದ್ಯಾರ್ಥಿ ಸಂಘಟನೆಯೊಂದು ನಡೆಸುವ ಅತ್ಯಾಚಾರ ವಿರೋಧಿ ಅಭಿಯಾನಕ್ಕೆ ಪೂರಕವಾಗಿ ಪ್ರಕಟಿಸುತ್ತಿದ್ದೇವೆ.


ಈ ಯಮ್.ಯಸ್ ನಮ್ಮ ದೇವರಾಗಿದ್ದ


Pradeep Kumar Shetty Kenchanuru


 ಪ್ರದೀಪಕುಮಾರ ಶೆಟ್ಟಿ ಕೆ


ಈ, ಈ.ಯಮ್.ಯಸ್ ನಮ್ಮ ದೇವರಾಗಿದ್ದ,
ಭೂಸುಧಾರಣೆ ಬಂದಾಗ ಈತ ಬ್ರಾಹ್ಮಣನಾದ
ನಮಗೀಗ ತೊಂದರೆಯಿಲ್ಲ ಈ ದೇವರೂ-ಬ್ರಾಹ್ಮಣರೂ ಒಂದೇ ಮುಖದ ಎರಡು ನಾಣ್ಯಗಳು
ದೇವರಾದವ ಯಾವಾಗಲೂ ದೇವರೇ
ತೂಗಾಡಲಿ ಆತನ ಫೋಟೋ ಗೋಡೆಗೆ, ತೂಗಿ ತೂಗಿ ಗಾಳಿಯನ್ನಾದರೂ   ಹಾಯಿಸಲಿ.
ನಾವು ಹೋರಾಟ ಮಾಡೋಣ
ಟಿ.ವಿ, ಪತ್ರಿಕೆ, ಪುಡಾರಿಯ ಛತ್ರಛ್ಛಾಯೆ ಬೇಡ ನಮಗೆ,
ಅವರ್ಯಾರೂ ನಮಗೋಸ್ಕರ ಹುಟ್ಟಿ, ಇರುವವರಲ್ಲ,
ನಮ್ಮ ದಾರಿ ಗಾಂಧಿಯಲ್ಲ, ಹೋರಾಟ.
ನಾವೀಗ ಹೋರಾಡ ಬೇಕಿದೆ,
ಹೋರಾಡಿ ಸಾಯಲೂಬೇಕಿದೆ,
ಯಾಕೆಂದರೆ ಹಿಂದಿನ ಹೋರಾಟದಲ್ಲೂ ನಾವು ಸತ್ತಿದ್ದೇವೆ.
ಪೋಲೀಸರು ಕುಂಡಿಯ ಮೇಲೆ ನಮ್ಮನ್ನು ಒದೆದು ಸುಡುತ್ತಾರೆ,
ಸಮಾಧಿ ಮಾಡುತ್ತಾರೆ,
ನಾವು ಹೋರಾಟ ಮಾಡುವುದು ಸುಮ್ಮನೆಯಲ್ಲ ಬದಲು ಸಹಜ ಸಮಾಧಿಗೆ,
ನಮ್ಮ ಹೋರಾಟ ಚರಿತ್ರೆಯ ಅನುವರ್ತನೆಗೆ,
ಯಾಕೆಂದರೆ ವರ್ತಮಾನದ ರಾಜಕೀಯ ನಮಗೆ ಜಾಗ ಕೊಟ್ಟಿಲ್ಲ.
ಅಂಬೇಡ್ಕರ್ ಕುರ್ಚಿಗೇನೇ ಧೂಳು ಸುರಿಸಿ ಜೇಡರ ಬಲೆ ಕಟ್ಟಿಸಿದ್ದಾರೆ,
ನಮಗೆ ಆಯ್ಕೆ ಬೇರಾವುದೂ ಇಲ್ಲ ಮಿತ್ರರೇ
ಕೊಸರಾಡದೇ ಹೋರಾಡುವುದ ಬಿಟ್ಟು.
ಮಾತನಾಡುವುದೇ ನಮ್ಮ ಮೂಲಭೂತ ಹಕ್ಕು ,
ಹೋರಾಟವೇ ನಮ್ಮ ಮೂಲಭೂತ ಹಕ್ಕು,
ಗಾಂಧಿ ನಮಗೆ ಕರ್ತವ್ಯ,
ಅಂಬೇಡ್ಕರ್ ನಮ್ಮ ಮೂಲಭೂತ ಹಕ್ಕು,
ನಾವಿದನ್ನು ನಂಬುತ್ತೇವೆ ,ಅಂಬೇಡ್ಕರ್ ಕೂಡಾ ಇದ ನಂಬಿದ್ದರು
ನಾವಿರುವ ಹಸಿರು ಗಿಡ ,ಮರ,ಬಳ್ಳಿ ,ಕಾಡು,ಬೆಟ್ಟ ಕೂಡಾ ಇದನ್ನೇ ಕಲಿಸಿದೆ.
ಪೋಳೀಸರು ಕುಂಡಿಯ ಮೇಲೆ ಒದೆಯುತ್ತಾರೆ ,
ಹಸಿಹಸಿಯಾಗಿ ಸುಡುತ್ತಾರೆ,
ಸುಡುವುದೇ ವ್ಯವಸ್ಥೆಯ ಹಕ್ಕು.
ನಮ್ಮೆಲ್ಲರನ್ನೂ ನಮ್ಮ ನೆಲದಲ್ಲೇ ಸುಡಿ,
ಆಗಲಾದರೂ ನಮ್ಮ ನೆಲ ನಮಗೇ ದಕ್ಕುವುದು.
ನಾವು ಸಮಾಧಿಯಲ್ಲೇ ಧ್ವನಿರಹಿತ ಧ್ವನಿಯಲ್ಲಿ ಮಾತನಾಡುತ್ತೇವೆ.
ಈ ,ಈ.ಯಮ್.ಯಸ್ ನಮ್ಮ ದೇವರಾಗಿದ್ದ.

ಒಂದು ಕ್ರಾಂತಿ ಕವಿತೆ


ನಳಿನ ಡಿ.

ಕ್ರಾಂತಿ ಯಾಗದೇ ಹೋದರೆ,
ಸರ್ವಾಧಿಕಾರಿಗಳು ಮಾತ್ರವೇ ಮೆರೆಯುತ್ತಾರೆ,
ಆದರೆ ಕ್ರಾಂತಿಗೆ ಸಿಕ್ಕಿ ರಕ್ತಸಿಕ್ತ ಚರಿತ್ರೆಯಾದ
ನನ್ನ ಜನ
ಉಳುವ ನೇಗಿಲ ಹೊತ್ತು.
ಬಡಎತ್ತುಗಳ ಹಿಂದೆ ತಲೆಬಾಗಿಸಿಕೊಂಡು
ಹೊಲದೆಡೆಗೆ ನಡೆಯುತ್ತಾರೆ. 

ಉಣ್ಣುವ ಕೈ ತೇಗಿ
ಅನ್ನವ ಬೀದಿಗೆ ಎರಚುವ ಮೊದಲೇ
ಇಲ್ಲಿ ಕ್ರಾಂತಿಯಾಗಬೇಕು..
ಗಾಂಧಿ ಕೊಂದು ಬೆಳೆ ತೆಗೆದ
ಭಾರತದ ನೆಲದಲ್ಲಿ
ಮತ್ತೆ ಭೂಷಣವಾಗಿ
ನಿಲ್ಲುವ ಸಾಕುನಾಯಿಗಳ
ಕೊರಳಿನ ಗಂಟೆಗಳು ಸದ್ದು ನಿಲ್ಲಿಸಬೇಕು.

ಬಡವರ ಬೆವರಿನಲಿ ಬೆಳೆ ತೆಗೆದು
ಹೊಟ್ಟೆ ಹೊರೆಯುವ
ಹೊಟ್ಟೆಹೊತ್ತ ಗಂಧಪೂಸಿತ ದೇಹಗಳೊಳಗಿನ
ಆತ್ಮದಿ ಪಾಪಪ್ರಜ್ನೆ
ಬುಗಿಲೇಳಬೇಕು.

ಕ್ರಾಂತಿಯಾಗಬೇಕು.  ಇಲ್ಲಿ ಮತ್ತು ಈಗಲೇ.

ಅಳುವ ಹೆಣ್ಣುಮಕ್ಕಳು
ಸಾಯುವ ಆಲೋಚನೆಯನ್ನು
ಕಾಲಿನಲ್ಲಿ ಒದ್ದು ಹೊರಡಬೇಕು.

ನಗುವ ಹೆಣ್ಣುಮಕ್ಕಳನ್ನು
ಅಂಡಡಿ ಮೇಯಬೇಕೆನ್ನುವ
ಸೂಳೆಮಕ್ಕಳ ಕತ್ತಿಗೆ ಕೈಹಾಕಲು.

ಎಲ್ಲಿಂದ ಹುಟ್ಟಿಬರುತಾಳೆ,
ಕಾಳಿ?
ಅವಳಂತೆಯೇ ಎಲ್ಲಾ ಹೆಣ್ಣುಗಳೂ ರೂಪತಾಳಿರುವಾಗ,
ಕ್ರಾಂತಿಯಾಗಬೇಕು. ಇಲ್ಲಿ ಮತ್ತು ಈಗಲೇ.

Monday, September 29, 2014

ಅಕ್ಟೋಬರ್ 2 ಕುಂದಾಪುರ ;ಆರ್ ಯೂ ಲಿಸಿನಿಂಗ್ ಸಿನೆಮಾ ಪ್ರದರ್ಶನ ಮತ್ತು ಚರ್ಚೆ


ಸರ್ವಾಧಿಕಾರಿಯ ಶ್ರದ್ಧಾಂಜಲಿಶಶಿಧರ ಹೆಮ್ಮಾಡಿ
ಚಿತ್ರ: ಅಂತರ್ಜಾಲ


ದೇಶದಲ್ಲಿ
ನರಮೇಧದ ನಾಯಕನಾಗಿದ್ದ
ಸರ್ವಾಧಿಕಾರಿಯೊಬ್ಬ
ಪರದೇಶದ ಶೂನ್ಯ ನೆಲದಲ್ಲಿ
ಹೂ ಇಟ್ಟು ತಲೆಬಾಗಿದ.
ಆ ಕೆಂಪು ಗುಲಾಬಿಗೆ
ಅಂಟಿಕೊಂಡಿದ್ದ
ಕೌಸರ್ ಬಾನೊಳ
ಹೊಟ್ಟೆ ಸೀಳಿ ಬಂದ
ಪಿಂಡದ ನೆತ್ತರ ನಾತ
ಮೂಗಿಗೆ ಬಡಿಯಿತು.
ತಲೆ ಎತ್ತಿ ನೋಡಿದರೆ
ಅವಳಿ ಗೋಪುರಗಳು
ಮತ್ತೆ ಎದ್ದು ನಿಂತಂತೆ
ಭಾಸವಾಯ್ತು.
ಎಲ್ಲ ಕಿಟಕಿಗಳಿಂದ
ಗುಜರಾತ್‌ನ ಹೆಣಗಳು
ಕೈ ಬೀಸುತ್ತಿದ್ದುದು ಕಂಡಿತು.
ತಾನು ಸರ್ವಾಧಿಕಾರಿ
ಎಂಬುದು ಮತ್ತೆ ನೆನಪಾಗಿ
ಸಾವರಿಸಿಕೊಂಡು
ಐವತ್ತಾರಿಂಚಿನ ಎದೆ ಉಬ್ಬಿಸಿ
'ಹಮ್ ಸರ್ ನಹಿ ಜುಕಾಯೇಂಗೆ'
ಎಂದು ಮತ್ತೆ ಬೊಬ್ಬೆ ಹೊಡೆಯುತ್ತಾ
ರಕ್ತ ಮೆತ್ತಿದ ಕೈಗಳನ್ನು
ಶ್ವೇತ ಭವನದ ನೀರಿನಲ್ಲೇ
ತೊಳೆಯಬೇಕೆಂದು
ಅತ್ತ ಕಡೆ ಧಾವಿಸಿದ.

***

ಶೂನ್ಯ ನೆಲ=ಗ್ರೌಂಡ್ ಝೀರೊ
ಹಮ್ ಸರ್ ನಹಿ ಜುಕಾಯೇಂಗೆ = ನಾವು ತಲೆ ಬಾಗುವುದಿಲ್ಲ

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತರಘೋತ್ತಮ ಹೊ.ಬ
9164634375
ಒಂದೆರಡು ವರ್ಷಗಳ ಹಿಂದೆ ಒಂದು ಬೇಡಿಕೆ ಸಹಜವೆಂಬಂತೆ ಎದ್ದಿತ್ತು. ಅದು ಸಚಿನ್‍ತೆಂಡೂಲ್ಕರ್‍ಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ. ತೆಂಡೂಲ್ಕರ್‍ಗೆ ಭಾರತ ರತ್ನ ನೀಡಲಾಯಿತು. ಸದ್ಯ ಅದು ಬೇರೆಯದೇ ವಿಷಯ. ಆದರೆ ಅದೇ “ರತ್ನ”ವನ್ನು ಅಂಬೇಡ್ಕರ್‍ರವರಿಗೆ ಅವರು ಬದುಕಿದ್ದಾಗ ನೀಡಬಹುದಿತ್ತಲ್ಲ!


ಹೌದು, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶ ಹಿಂದೆ ಬಿದ್ದಿದೆ. ಯಾವ ಉನ್ನತ ಪ್ರಶಸ್ತಿಯನ್ನು, ಪದವಿಯನ್ನು ಈಗ ಎಲ್ಲೆಂದರಲ್ಲಿ, ಯಾರಿಗೆಂದರವರಿಗೆ ನೀಡಲಾಗುತ್ತಿದೆಯೋ ಅಂತಹದ್ದೆ ಪದವಿಯನ್ನು, ಪ್ರಶಸ್ತಿಯನ್ನು ಆ ಕಾಲದಲ್ಲಿ ಅಂಬೇಡ್ಕರರಿಗೆ ನಿರಾಕರಿಸಲಾಗಿದೆ ಆಥವಾ ನೀಡದೆ ವಂಚಿಸಲಾಗಿದೆ. ಹಾಗಂತ ಅಂಬೇಡ್ಕರರನ್ನು ಆ ಎಲ್ಲಾ ಪ್ರಶಸ್ತಿಗಳು ಒಮ್ಮೆಲೇ ಪ್ರಪ್ರಥಮವಾಗಿಯೇ ಹಿಂಬಾಲಿಸಬೇಕಾಗಿತ್ತು ಎಂದಲ್ಲ. ಆದರೆ ಅವರ ಹೋರಾಟವನ್ನು, ಸಂವಿಧಾನದ ಮೂಲಕ ಅವರು ಈ ದೇಶಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಅಂತಹ ಪದವಿ ಪ್ರಶಸ್ತಿ ನೀಡಬಹುದಿತ್ತಲ್ಲ! ಅದೂ ಅವರಿಗಿಂತಲೂ ಅತ್ಯಂತ ತಳಮಟ್ಟದ ಅವರ ಮುಂದೆ ಏನೇನು ಅಲ್ಲದವರಿಗೆ ಅಂತಹ ಉನ್ನತ ಪ್ರಶಸ್ತಿ ನೀಡಿರುವಾಗ? ಯಾಕೆಂದರೆ ಉದಾಹರಣೆಗೆ ವಿಶ್ವೇಶ್ವರಯ್ಯನವರಿಗೆ ಈ ದೇಶದ ಪ್ರಪ್ರಥಮ ಭಾರತರತ್ನ ಪ್ರಶಸ್ತಿ ನೀಡಲಾಯಿತು. ಆಶ್ಚರ್ಯಕರವೆಂದರೆ ಅಂಬೇಡ್ಕರರು ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ನೀರಾವರಿ ಸಚಿವರಾಗಿದ್ದಾಗ ಒರಿಸ್ಸಾದ ದಾಮೋದರ ನದಿಯ ಪ್ರವಾಹಕ್ಕೆ ಸಂಬಂಧಿಸಿದಂತೆ ಅದೇ ವಿಶ್ವೇಶ್ವರಯ್ಯನವರು ನೀಡಿದ್ದ ವರದಿಯನ್ನು ಅಂಬೇಡ್ಕರರು ತಿರಸ್ಕರಿಸಿದ್ದರು! ಯಾಕೆಂದರೆ ಪ್ರವಾಹವನ್ನು ತಡೆಯಲು ಸೂಕ್ತ ಅಣೆಕಟ್ಟು ನಿರ್ಮಿಸಿ ಆ ನೀರನ್ನು ಕೃಷಿಗೆ, ಜನರ ಕುಡಿಯುವ ನೀರಿಗೆ, ಕೈಗಾರಿಕೆಗೆ ಬಳಸಬಹುದು ಎಂದು ಸಲಹೆ ನೀಡಬೇಕಾಗಿದ್ದ ವಿಶ್ವೇಶ್ವರಯ್ಯನವರು ಪ್ರವಾಹವನ್ನು ತಡೆಯಲು ನದಿಯ ಆ ನೀರನ್ನು ಸಂಪೂರ್ಣವಾಗಿ ಸಮುದ್ರಕ್ಕೆ ಹರಿಯಲು ಬಿಡಬೇಕು ಎಂದು ವರದಿ ನೀಡಿದ್ದರು! ಜನೋಪಯೋಗಿ ಅಲ್ಲದ ವಿಶ್ವೇಶ್ವರಯ್ಯನವರ ಆ ವರದಿಯನ್ನು ಅಂಬೇಡ್ಕರರು ಅಷ್ಟೆ ಸ್ಪೀಡಾಗಿ ಕಸದ ಬುಟ್ಟಿಗೆ ಎಸೆದಿದ್ದರು! ಬದಲಿಗೆ ಆ ನದಿಗೆ ಹಿರಾಕುಡ್ ಬಳಿ ಅಣೇಕಟ್ಟು ನಿರ್ಮಿಸಲು ಬ್ರ್ರಿಟಿಷ್ ಸರ್ಕಾರಕ್ಕೆ ಸ್ವತಃ ಸಲಹೆ ನೀಡಿದ ಅಂಬೇಡ್ಕರರು ಆ ಮೂಲಕ ಲಕ್ಷಾಂತರ ರೈತರಿಗೆ ಅನ್ನದಾತರಾದರು. ದುರಂತವೆಂದರೆ ಜನರಿಗೆ ಉಪಯೋಗವಲ್ಲದ ವರದಿ ನೀಡಿದ ವಿಶ್ವೇಶ್ವರಯ್ಯನವರಿಗೆ ಭಾರತರತ್ನ! ಆದರೆ ಜನೋಪಯೋಗಿ ಕಾರ್ಯ ಮಾಡಿದ ಅಂಬೇಡ್ಕರರಿಗೆ ಅಂತಹ ಯಾವುದೇ’ರತ್ನ’ವಿಲ್ಲ! ಕಡೇ ಪಕ್ಷ ‘ಪದ್ಮ’ ಪ್ರಶಸ್ತಿಯೂ ಇಲ್ಲ! ಜಾತಿವಾದಿ ಭಾರತ ಅಂಬೇಡ್ಕರರನ್ನು ಪ್ರಶಸ್ತಿಗಳಿಂದ, ಪದವಿಗಳಿಂದ ಹೇಗೆ ವಂಚಿಸಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

 

ಇನ್ನು ಸಂವಿಧಾನದ ಕಥೆಗೆ ಬರೋಣ. ನವೆಂಬರ್ 26, 1949 ರಂದು ಅಂಬೇಡ್ಕರರು ಈ ದೇಶಕ್ಕೆ ಸಂವಿಧಾನ ಅರ್ಪಿಸಿ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು. ಹಾಗೆಯೇ ಇಡೀ ದೇಶ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಗುರುತಿಸಿತು. ದುರಂತವೆಂದರೆ ಅಂತಹ ಸಂವಿಧಾನ ಶಿಲ್ಪಿಗೆ ಯಾವುದಾದರೊಂದು ಭಾರತದ ವಿವಿ ತಕ್ಷಣ ಕರೆದು ಡಾಕ್ಟರೇಟೋ ಮತ್ತೊಂದೋ ನೀಡಿ ಗೌರಸಬೇಕಿತ್ತಲ್ಲವೇ? ಊಹ್ಞೂಂ! ಈ ದೇಶದ ಯಾವುಧೇ ವಿವಿಗಳು ಅದಕ್ಕೆ ಮುಂದೆ ಬರಲಿಲ್ಲ. ಆಶ್ಚರ್ಯಕರವೆಂದರೆ ಅಂಬೇಡ್ಕರರನ್ನು ಗೌರವಿಸುವ ಅಂತಹ ಕೆಲಸವನ್ನು ಪ್ರಪ್ರಥಮವಾಗಿ ಮಾಡಿದ್ದು ಒಂದು ವಿದೇಶಿ ವಿ.ವಿ.! ಅಮೆರಿಕಾದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾನಿಲಯವೇ ಆ ವಿ.ವಿ! ಏಕೆಂದರೆ ಅಮೆರಿಕಾದ ಕೊಲಂಬಿಯಾ ವಿ.ವಿ ಅಂಬೇೀಡ್ಕರರನ್ನು ಡಾಕ್ಟರೇಟ್ ಮೂಲಕ ಗೌರವಿಸಿದ ನಂತರವಷ್ಟೆ ಭಾರತದ ಏಕೈಕ ವಿವಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರರನ್ನು doctor of literature ಮೂಲಕ ಗೌರವಿಸಿದ್ದು!
1952 ಜೂನ್ 1 ರಂದು ಅಂಬೇಡ್ಕರರಿಗೆ doctor of laws ನೀಡಿ ಗೌರವಿಸುತ್ತಾ ಅಮೆರಿಕಾದ ಕೊಲಂಬಿಯಾ ವಿವಿ ಭಾರತದ ಸಂವಿಧಾನ ರಚನೆಗೆ ಸಂಬಧಿಸಿದಂತೆ ಅಂಬೇಡ್ಕರರ ಪರಿಶ್ರಮ, ಸಮಾಜ ಸುಧಾರಣೆ, ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಅವರು ನಡೆಸಿದ ಹೋರಾಟ ಇವುಗಳನ್ನು ಗುರುತಿಸಿ, ತನ್ನ ಆ ಅತ್ಯಮೂಲ್ಯ ಪದವಿಯ ಮೂಲಕ ಅವರನ್ನು ಗೌರವಿಸಿತು. ಒಂದರ್ಥದಲಿ ತನ್ನಲ್ಲಿಯೇ ಪಿ.ಎಚ್.ಡಿ. ಪಡೆದ(1917) “ಆ ವಿದ್ಯಾರ್ಥಿ”ಗೆ ತಾನೇ ‘ಡಾಕ್ಟರ್ ಆಫ್ ಲಾ’ ನೀಡುವ ಮೂಲಕ ಅಮೆರಿಕಾದ ಆ ವಿವಿ ತನಗೆ ತಾನೇ ಗೌರವಿಸಿಕೊಂಡಿತು! ಆ ಮೂಲಕ ಈ ದೇಶದ ಬಹುಕೋಟಿ ದಲಿತರ ಭಾವನೆಗಳನ್ನು, ಮಾನವ ಹಕ್ಕುಗಳನ್ನು ಅಮೆರಿಕಾದ ಆ ವಿ.ವಿ ಎತ್ತಿಹಿಡಿಯಿತು. ಪ್ರಶ್ನೆ ಏನೆಂದರೆ ಭಾರತದ ವಿಶ್ವವಿದ್ಯಾನಿಲಯಗಳು? ಅದು ಬನಾರಸ್‍ನ ಹಿಂದೂ ವಿವಿ ಇರಬಹುದು, ನವದೆಹಲಿಯ JNU ಇರಬಹುದು, ನಮ್ಮ ವಿಶ್ವವಿಖ್ಯಾತ ಮೈಸೂರು ವಿವಿ ಇರಬಹುದು, ಇವೆಲ್ಲಾ? ಅಂದಹಾಗೆ ಇತ್ತೀಚೆಗೆ ಈ ವಿವಿಗಳಲ್ಲೆಲ್ಲಾ ಅಂಬೇಡ್ಕರ್ ಪೀಠಗಳು, ಸಂಶೋಧನಾ ಕೇದ್ರಗಳು ತಲೆ ಎತ್ತಿವೆ. ಆದರೆ ಅದು ಬಾಬಾಸಾಹೇಬರ ಮೇಲಿನ ಗೌರವದಿಂದಲ್ಲ! ಬದಲಿಗೆ ಯು.ಜಿ.ಸಿ ನೀಡುವ ಗ್ರ್ಯಾಂಟ್‍ನ ವ್ಯಾಮೋಹದಿಂದ ಎಂಬುದು ಸರ್ವವಿಧಿತ.

ಇನ್ನು ಅಂಬೇಡ್ಕರರ ಹೆಸರನ್ನು ಈ ದೇಶದ ಪ್ರತಿಷ್ಠಿತ ವಿವಿಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಇಡುವುದು ಇನ್ನೊಂದು ದೊಡ್ಡ ಕಥೆ. ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅಲ್ಲಿಯ ಹಲವು ಯೂನಿವರ್ಸಿಟಿಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಅಂಬೇಡ್ಕರರ ಹೆಸರನ್ನು ಇಟ್ಟಿದ್ದಾರೆ. ಬರೀ ಅಂಬೇಡ್ಕರರಷ್ಟೆ ಅಲ್ಲ ಅವರ ಧರ್ಮಪತ್ನಿ ರಮಾಬಾಯಿ ಅಂಬೇಡ್ಕರ್, ಮಾರ್ಗದರ್ಶಕರಾದ ಜ್ಯೋತಿಬಾಫುಲೆ, ಶಾಹುಮಹಾರಾಜ್, ಪೆರಿಯಾರ್ ಇತ್ಯಾದಿ ದಾರ್ಶನಿಕರ ಹೆಸರನ್ನು ಮಾಯಾವತಿಯವರು ಒಂದಲ್ಲ ಎರಡಲ್ಲ ಹಲವು ವಿವಿಗಳಿಗೆ ಇಟ್ಟಿದ್ದಾರೆ. ದುರಂತವೆಂದರೆ ವಿವಿಯೊಂದಕ್ಕೆ ಹೆಸರಿಡುವ ಇದೇ ಕೆಲಸಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ತೆಗೆದುಕೊಡಿತೆಂದರೆ, ಬರೋಬ್ಬರಿ 20 ವರ್ಷಗಳು! ಅದೂ ಸುಮ್ಮನೇ ಅಲ್ಲ! 1978ರ ಜುಲೈನಲ್ಲಿ ಮಹಾರಾಷ್ಟ್ರದ ಔರಂಗಾಬಾದ್‍ನ ಮರಾಟವಾಡ ಎಂಬ ವಿವಿಗೆ “ಡಾ.ಬಿ.ಆರ್.ಅಂಬೇಡ್ಕರ್ ವಿವಿ” ಎಂದು ಹೆಸರಿಡುತ್ತೇವೆ ಎಂದು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದು ಜಾರಿಯಾದದ್ದೂ 1994 ಜನವರಿ 14 ರಂದು! ಅಂದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡುವ ತನ್ನ ನಿರ್ಣಯ ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬರೊಬ್ಬರಿ 16 ವರ್ಷ ಬೇಕಾಯಿತು! ಅದೂ ಸುಮ್ಮನೇ ಅಲ್ಲ. ಅದರದೊಂದು ದುರಂತ ಕಥೆ. ರಕ್ತ, ಹತ್ಯೆ, ಆತ್ಮಹತ್ಯೆ, ಆತ್ಮಾಹುತಿ, ಪ್ರತಿಭಟನೆ ಎಂದು ಮುಗ್ಧ ದಲಿತರು ಅದರಲ್ಲೂ ದಲಿತ ಹೆಣ್ಣು ಮಕ್ಕಳು ತಮ್ಮ ಪ್ರಾಣವನ್ನೇ ಬಲಿಕೊಟ್ಟು ನಡೆಸಿದ ಹೋರಾಟವದು.

ಒಂದಷ್ಟು ಘಟನೆಗಳನ್ನು ಹೇಳುವುದಾದರೆ, 1993 ನವೆಂಬರ್ ತಿಂಗಳಿನಲ್ಲಿ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತ ಗೌತಮ್ ವಾಗ್ಮೇರ್ ಎಂಬ ಯುವಕ ನಾಂದೇಡ್ ಎಂಬಲ್ಲಿ ಮರಾಠವಾಡ ವಿವಿಗೆ ಅಂಬೇಡ್ಕರ್ ಹೆಸರಿಡಬೇಕೆಂದು ಹಾಡುಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ. ಅದೇ ಡಿಸೆಂಬರ್‍ನಲ್ಲಿ ಶ್ರೀಮತಿ ಸುಹಾಸಿನಿ ಭನ್ಸೋದ್ ಎಂಬುವವರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡರು! ಇನ್ನು ಇದಕ್ಕಿಂತಲೂ ಹೃದಯ ವಿದ್ರಾವಕ ಘಟನೆ ಎಂದರೆ ಪ್ರತಿಭಾ ಎಂಬ 18 ರ ಬಾಲೆಯೋಬ್ಬಳು “ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂದು ಹೆಸರಿಡಬೇಕು. ಅದನ್ನು ಜಾರಿಗೋಳಿಸದ ಸರ್ಕಾರದ ನಿರ್ಧಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು death note ಬರೆದು ವಿಷ ಕುಡಿದು ಪ್ರಾಣ ಕಳೆದು ಕೊಂಡಳು! ಒಟ್ಟಾರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಮಹಾರಾಷ್ಟ್ರದ ಆ ಕಾಂಗ್ರೆಸ್ ಸಕಾರಕ್ಕೆ ಮುಗ್ಧ ಹೆಣ್ಣು ಮಗಳೊಬ್ಬಳ ಜೀವವೇ ಬೇಕಾಯಿತು! ಇದಕ್ಕಿಂತಲೂ ವಿಚಿತ್ರವಾದ ಘಟನೆ 1994ರಲ್ಲಿ ನಡೆದುದು! ಅದೇನೆಂದರೆ ಕರ್ನಾಟಕದ ಧಾರವಾಡ ವಿವಿಯ ಅಂತಿಮ ರಾಜ್ಯಶಾಸ್ತ್ರ ಎಂ.ಎ. ವಿದ್ಯಾರ್ಥಿ ಅನಂತ್ ಕುಮಾರ್ ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂಬ ಹೆಸರಿಡಬೇಕು ಹೋರಾಟದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್‍ಗೆ ಸೇರಿದ ಮದ್ರಾಸಿನಿಂದ ಕ್ಯಾಲಿಕಟ್‍ಗೆ ಹೊರಟಿದ್ದ ವಿಮಾನ (ಸಂಖ್ಯೆ K995)ನ್ನು ಅಪಹರಿಸಿದ! ಹಾಗೆಯೇ ಮರಾಠವಾಡ ಆ ವಿವಿಗೆ ಅಂಬೇಡ್ಕರ್ ವಿವಿ ಎಂದು ತಕ್ಷಣವೇ ನಾಮಕರಣ ಮಾಡದಿದ್ದರೆ 55 ಜನರಿದ್ದ ಆ ವಿಮಾನವನ್ನು ‘ಪ್ಲಾಸ್ಟಿಕ್ ಬಾಂಬ್’ನಿಂದ ಉಡಾಯಿಸುವುದಾಗಿ ಬೆದರಿಕೆಯನ್ನೂ ಒಡ್ಡಿದ! ಅಂತಿಮವಾಗಿ ಇಂತಹ ಆತ್ಮಹತ್ಯೆ, ಆತ್ಮಾಹುತಿ, ವಿಮಾನ ಹೈಜಾಕ್ ಇತ್ಯಾದಿ ಪ್ರಕರಣಗಳ ನಂತರ 1994 ಜನವರಿ 14 ರಂದು ಮರಾಠವಾಡ ವಿವಿಗೆ “ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ’ ಎಂಬ ಅರ್ಥವಿಲ್ಲದ ಹೆಸರನ್ನು ಇಟ್ಟಿತು ಮಹಾರಾಷ್ಟ್ರದ ಆ ಕಾಂಗ್ರೆಸ್ ಸರ್ಕಾರ. ಅರ್ಥವಿಲ್ಲದ್ದು, ಏಕೆಂದರೆ ‘ಮರಾಠವಾಢ’ ಎಂಬ ವಿವಿಯ ಆ ಹಳೆಯ ಹೆಸರಿನ ಜೊತೆ “ಬಾಬಾಸಾಹೇಬ್ ಅಂಬೇಡ್ಕರ್” ಹೆಸರನ್ನು ಸೇರಿಸಿದ್ದು! ಈ ನಿಟ್ಟಿನಲಿ ಆ ವಿವಿಗೆ ಬರೀ ಅಂಬೇಡ್ಕರ್ ಹೆಸರಿಡಲು ಮಹಾರಾಷ್ಟ್ರದ ಆ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ!

ಈ ದೇಶ ಅಂಬೇಡ್ಕರರನ್ನು ಗೌರವಿಸುವಲ್ಲಿ ಹೇಗೆ ಸೋತಿದೆ ಅಥವಾ ದಲಿತರನ್ನು ಹೇಗೆಲ್ಲಾ ನೋಯಿಸಿದೆ ಎಂಬುದಕ್ಕೆ “ಮರಾಠವಾಡ ವಿವಿ”ಯ ಆ ದುರಂತ ಕಥೆಯೇ ಸಾಕ್ಷಿ. ದುರಂತ ಏಕೆಂದರೆ ಇನ್ನೆಂದೂ ಕೂಡ ಯಾವುದೇ ದಲಿತನು ಸರ್ಕಾರಕ್ಕೆ ವಿವಿಗಳಿಗೆ ಅಂಬೇಡ್ಕರ್ ಹೆಸರನ್ನು ಇಡಿ ಎಂದು ಎಂದಿಗೂ ಒತ್ತಾಯ ಮಾಡಲಾರರು ಅಷ್ಟೊಂದು ಭಯಾನಕ ದುರಂತ ಅದು! ಅಂದಹಾಗೆ ಈ ಕತೆಯಲ್ಲಿ ಪದೇಪದೇ ಕಾಂಗ್ರೆಸ್ ಹೆಸರನ್ನೇ ಪ್ರಸ್ತಾಪಿಸಬೇಕಾಯಿತು ಯಾಕೆಂದರೆ ಈ ದೇಶವನ್ನು, ಈ ದೇಶದ ರಾಜ್ಯಗಳನ್ನು ಬಹುತೇಕ ಆಳಿರುವುದು ಕಾಂಗ್ರೆಸ್ ಪಕ್ಷ ತಾನೇ? ಈ ನಿಟ್ಟಿನಲಿ ಅಂಬೇಡ್ಕರರನ್ನು ಈ ದೇಶ ಗೌರವಿಸಿಲ್ಲವೆಂದರೆ ಅದಕ್ಕೆ ಆ ಪಕ್ಷವೇ ನೇರ ಕಾರಣ.

ಕಾಂಗ್ರೆಸ್‍ನ ಈ ವಂಚನೆಗೆ ಮತ್ತೊಂದು ಉದಾಹರಣೆ ಪಾರ್ಲಿಮೆಂಟ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವ ಪ್ರಕರಣ. ಅದೂ ಅಂದರೆ ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟದ್ದು ಯಾರ ಕಾಲದಲ್ಲಿ ಎಂದಿರಿ? ವಿ.ಪಿ.ಸಿಂಗ್‍ರ ಕಾಲದಲ್ಲಿ. ವಿ.ಪಿ.ಸಿಂಗ್‍ರವರು 1990 ಏಪ್ರಿಲ್ 12 ರಂದು ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಪ್ರಶ್ನೆ ಏನೆಂದರೆ ಕಾಂಗ್ರೆಸ್‍ನ ನೆಹರೂ, ಅವರ ಪುತ್ರಿ ಇಂದಿರಾ, ರಾಜೀವ್ ಇವರೆಲ್ಲರೂ ಅಲ್ಲಿಯವರೆಗೆ ಈ ದೇಶವನ್ನು ಬರೋಬ್ಬರಿ 43 ವರ್ಷ ಆಳಿದ್ದರೂ, ಪ್ರತಿವಷರ್ ಅಂಬೇಡ್ಕರ್ ಜಯಂತಿ, ಅಂಬೇಡ್ಕರರ ಪರಿನಿರ್ವಾಣ ದಿನಾಚರಣೆ ಇತ್ಯಾದಿ ಬರುತ್ತಲೇ ಇದ್ದರೂ ಕಾಂಗ್ರೆಸ್‍ನ ಆ ಪ್ರಧಾನಿಗಳಿಗೆ ಅಂಬೇಡ್ಕರರನ್ನು ಸೂಕ್ತವಾಗಿ ಗೌರವಿಸಬೇಕು ಎಂದೆನಿಸಲೇ ಇಲ್ಲ! ಅಂದಹಾಗೆ ಅಂಬೇಡ್ಕರರಿಗೆ ಭಾರತರತ್ನ ನೀಡಿದ್ದು ಯಾರ ಕಾಲದಲ್ಲಿ ಎಂದಿರಿ? ಅದೂ ಕೂಡ ವಿ.ಪಿ. ಸಿಂಗ್‍ರ ಕಾಲದಲ್ಲೇ!

ಅದೇನೆ ಇರಲಿ, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶದ ಸರ್ಕಾರಗಳು ಸೋತಿವೆ. ಕಾಂಗ್ರೆಸ್ಸಂತೂ ದಲಿತರ ಓಟುಗಳನ್ನು ಇಡಿಯಾಗಿ ನುಂಗಿದೆ. ಆದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಪ್ರಾಣಗಳನ್ನು, ಅದರಲ್ಲೂ ಮುಗ್ಧ ಹೆಣ್ಣು ಮಕ್ಕಳ ಜೀವಗಳನ್ನು ಅದು ಬಲಿ ತೆಗದುಕೊಂಡಿದೆ.

ಆಶ್ಚರ್ಯಕರವೆಂದರೆ ವಿದೇಶಿ ರಾಷ್ಟ್ರಗಳಿಗೆ ಅಂಬೇಡ್ಕರ್ ಬಗ್ಗೆ ಇರುವ ಗೌರವ ಈ ದೇಶದ ಜಾತೀಯ ಮನಸ್ಸುಗಳಿಗೆ ಇಲ್ಲದಿರುವುದು. ಉದಾಹರಣೆಗೆ ಡಿಸೆಂಬರ್ 6, 1991 ರಂದು ಇಂಗ್ಲೆಂಡ್‍ನ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಮಿತಿಯು ಲಂಡನ್ನಿನಲ್ಲಿ ಅಂಬೇಡ್ಕರರು ವಾಸಿಸಿದ್ದ “ಲಂಡನ್ನಿನ ಹ್ಯಾಂಪ್‍ಸ್ಟಡ್‍ನ ಕಿಂಗ್ ಹೆನ್ರಿ ರಸ್ತೆಯ 10 ನೇ ನಂಬರಿನ ಗೃಹ”ವೊಂದರಲ್ಲಿ ಅಂಬೇಡ್ಕರ್ ಸ್ಮರಣ ಫಲಕವೊಂದನ್ನು ನಿರ್ಮಿಸಿ ಆ ಫಲಕದ ಮೇಲೆ ಹೀಗೆ ಬರೆಸಿದೆ “DR.BHIMRAO RAMJI AMBEDKAR, INDIAN CRUSADER FOR SOCIAL JUSTICE LIVED HERE 1921-1922”.
ಅಂಬೇಡ್ಕರರನ್ನು ಗೌರವಿಸುವುದೆಂದರೆ ಹೀಗೆ! ಬರೀ ಲಂಡನ್ ಒಂದೇ ಅಲ್ಲಾ, ಜಪಾನ್, ಅಮೆರಿಕಾ, ಹಂಗೇರಿ, ಅದಷ್ಟೆ ಅಲ್ಲ ಸ್ವತಃ ಪಾಕಿಸ್ತಾನ ಕೂಡ ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಭಾರತ?

ಈ ದೇಶದ ಜಾತೀಯ ಮನಸ್ಸುಗಳು, ಹಿಂದುತ್ವದ ಕೊಂಪೆಯಲಿ ಒದ್ದಾಡುತ್ತಿರುವ ಹುಳಗಳು ಅಸ್ಪøಶ್ಯ ಕುಲದಲ್ಲಿ ಹುಟ್ಟಿದ ಈ ದೇಶದ ಸಂವಿಧಾನ ಶಿಲ್ಪಿಗೆ, ಸಾಮಾಜಿಕ ನ್ಯಾಯದ ಧೃವತಾರೆಗೆ ಯಾವ ಪರಿಯ ಗೌರವ, ಘನತೆ ನೀಡಿದೆ, ನೀಡುತ್ತಿದೆ ಎಂಬುದಕ್ಕೆ “ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ” ಎಂಬ ಈ ಕಥೆ ಹೇಳಬೇಕಾಯಿತಷ್ಟೆ.

ಪುರಾಣದೊಳಗೆ ಚರಿತ್ರೆಯ ಹೂರಣ
ವಸು ಮಳಲಿ

ಸೌಜನ್ಯ: ಪ್ರಜಾವಾಣಿ  

ದಸರಾ ಹಬ್ಬ, ಚಾಮುಂಡಿ ಬೆಟ್ಟಕ್ಕೆ ಹೋದ­ವ­ರೆಲ್ಲಾ ಮಹಿಷಾಸುರನ ಆಳೆತ್ತರದ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆಸಿ­ಕೊಳ್ಳುವ ಸಂಭ್ರಮ. ಕಣ್ಣಿಗೆ ರಾಚುವ ಬಣ್ಣಗಳು. ಕೋರೆ ಹಲ್ಲುಗಳು, ಕೆದರಿದ ಜಟೆ, ದೈತ್ಯಾಕಾರ, ಒಂದು ಕೈಯಲ್ಲಿ ಅಗಲವಾದ ಖಡ್ಗ ಮತ್ತೊಂದ­ರಲ್ಲಿ ಹಾವು. ಇಪ್ಪತ್ತನೇ ಶತಮಾನದ ಕಲಾವಿದ­ನೊಬ್ಬನ  ಕಲ್ಪನೆಯ ದುಷ್ಟ ರಾಕ್ಷಸನ ಗಾರೆಶಿಲ್ಪ. ಮಹಿಷನ ಕಾರಣಕ್ಕೆ ಈ ನಾಡನ್ನು ಮೈಸೂರು ಎಂದು ಕರೆಯಲಾಗಿದೆ ಎಂದು ಹೇಳುವುದು ವಾಡಿಕೆ. ಆ ರಾಕ್ಷಸನನ್ನು ಸಂಹರಿಸಿದ ದೇವಿ ಮಹಿಷಾಸುರ ಮರ್ದಿನಿ.

ಹುಲಿಯನ್ನೇರಿದ ಅವಳ ಕಲ್ಪನೆ ಬೀಭತ್ಸವಾದುದು. ಚಾಮುಂಡಿ ಬೆಟ್ಟ­ದಲ್ಲಿ ಮಹಿಷಾಸುರ ಮರ್ದಿನಿಯನ್ನೇ ಚಾಮುಂ­ಡೇ­ಶ್ವರಿ ಎಂದು ಕರೆಯಲಾಗುತ್ತದೆ. ತಮಿಳು­ನಾಡು ಮತ್ತಿತರ ಪ್ರದೇಶಗಳಲ್ಲಿ ಆರಾಧಿಸುವ ಚಾಮುಂಡೇಶ್ವರಿ, ಕೋಣನ ಸ್ವರೂಪದ ರಾಕ್ಷಸ-­ನನ್ನು ಕೊಲ್ಲುವುದಿಲ್ಲ. ಬದ­ಲಾಗಿ ಚಂಡ–ಮುಂಡ ಅಥವಾ ನಿಶುಂಬರೆಂಬ ಬೇರೆ ರಾಕ್ಷಸರನ್ನು ಸಂಹ­ರಿ­ಸುತ್ತಾಳೆ. ಮಹಿಷಾ­ಸುರ ಮರ್ದಿನಿಗಿಂತ ಚಾಮುಂ­ಡೇಶ್ವರಿಯ ಶಿಲ್ಪ ಇನ್ನೂ  ಹೆಚ್ಚು ವ್ಯಗ್ರ­ವಾಗಿ ಕೆತ್ತಲಾಗುತ್ತದೆ. ಗುಳಿ ಬಿದ್ದ ಕಣ್ಣು, ಒಳ­ಹೋದ ಹೊಟ್ಟೆ ಹಾಗೂ ರುಂಡ­ಗಳನ್ನು ಧರಿಸಿ­ರುತ್ತಾಳೆ.  ಇರಲಿ ಭಾರತದ ಶಕ್ತಿ­ದೇವತೆ­ಯರಲ್ಲಿ ಇವರಿಬ್ಬರಿಗೂ ಮಹತ್ವದ ಸ್ಥಾನ. ಕೆಲವೊಮ್ಮೆ ಹೀಗೆ ಒಬ್ಬರನ್ನು ಮತ್ತೊಬ್ಬರಲ್ಲಿ ಸಮೀಕರಿಸಿ ನೋಡುವುದು ಸಾಮಾನ್ಯವಾದ ವಿಚಾ­ರವೇ ಹೌದು. ಸದ್ಯದಲ್ಲಿ ಇವರನ್ನೆಲ್ಲಾ ಶೈವ­ಪಂಥದ ಹಿನ್ನೆಲೆಯ ಶಕ್ತಿ ದೇವತೆಗಳಾಗಿ ನೋಡ­ಲಾಗುತ್ತದೆ.

ನಮ್ಮ ನಾಡಿನ ಚರಿತ್ರೆ ಪುರಾಣಗಳಲ್ಲಿ ಹುದು­ಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿ.ಡಿ. ಕೊಸಾಂಬಿ, ರೊಮಿಲಾ ಥಾಪರ್, ದೇವಿಪ್ರಸಾದ್ ಚಟ್ಟೋ­ಪಾ­ಧ್ಯಾಯ, ವಾಶ್‌ ಎಡ್ವರ್ಡ್‌ ಹೇಲ್ ಮುಂತಾದ ವಿದ್ವಾಂಸರು ಅವುಗಳನ್ನು ಅರ್ಥ­ಮಾಡಿ­ಕೊಡುವ ವಿಧಾನ­ಗ­ಳನ್ನು ಕಂಡು­ಕೊಂಡಿ­ದ್ದಾರೆ. ಪುರಾಣಗಳ ಸಂಕೇತ­ಗಳನ್ನು ಅರ್ಥಮಾಡಿ­ಕೊಳ್ಳುತ್ತಾ ಸಮು­ದಾ­ಯ­ಗಳ ಅಳಿವು ಉಳಿವನ್ನು ಬಿಡಿಸಿ ನೋಡುವ ಪ್ರಯತ್ನ ಮಾಡುತ್ತಾ ಬಂದಿ-­ದ್ದಾರೆ. ವೇದಗಳು, ಮಹಾಭಾರತ, ರಾಮಾ­ಯಣ, ಪುರಾಣಗಳು ಇವೆಲ್ಲಾ ಸಮುದಾಯದ ನೆನಪುಗಳಾಗಿ ಉಳಿದು ಬಂದಿವೆ.

ವೇದಗಳ ಕಾಲಕ್ಕೆ ವೈದಿಕ ಹಿನ್ನೆಲೆಯ ಬುಡಕಟ್ಟುಗಳಲ್ಲದೆ ಹಲವಾರು ಇತರ ಬುಡ­ಕಟ್ಟು­­ಗಳ ಹೆಸರುಗಳೂ ವೇದ ಸಾಹಿತ್ಯದಲ್ಲಿ ಕಂಡು­ಬರುತ್ತವೆ. ಅವುಗಳಲ್ಲಿ ರಾಕ್ಷಸ, ಅಸುರ, ಪಾಣಿ, ನಿಷಾದ, ಕಿರಾತ, ಪಿಶಾಚ, ದಾನವ, ದೈತ್ಯ, ನಾಗ ಹೀಗೆ ದೀರ್ಘ­ವಾದ  ಪಟ್ಟಿಯೇ ನಮಗೆ ಸಿಗುತ್ತದೆ. ಇವರೆಲ್ಲಾ ದುಷ್ಟರೂ, ಕ್ರೂರಿ­ಗಳೂ, ಕುರೂಪಿಗಳೂ, ಶತ್ರು­ಗಳೂ ಆಗಿ ಚಿತ್ರಿತ­ರಾಗಿದ್ದಾರೆ. ಅದರಲ್ಲೂ ದೇವರು ಇವರನ್ನು ಸಂಹರಿಸಿ ಋಷಿಗಳು ಯಜ್ಞ, ಯಾಗಾದಿಗಳನ್ನು ಮಾಡಲು ರಕ್ಷಣೆ ನೀಡು­ತ್ತಾರೆ. ಆ ದೇವರು­ಗ­ಳನ್ನು ಒಲಿಸಿಕೊಳ್ಳುವುದು  ಅವರ ನಿತ್ಯ ಪ್ರಯತ್ನ­ವಾ­ಗಿರುತ್ತದೆ. ಹೇಲ್ ಎಂಬ ವಿದ್ವಾಂಸನ ಇತ್ತೀ­ಚಿನ ಸಂಶೋಧನೆಯಿಂದ ತಿಳಿಯುವುದೇನೆಂದರೆ ದೇವರು ಎಂಬುವರೂ ಸಹ ಶಕ್ತಿಶಾಲಿಗಳಾದ ಒಂದು ಬುಡಕಟ್ಟೇ ಆಗಿ­ರ­ಬೇಕು. ವೈದಿಕರೊಂದಿಗೆ ಹೊಂದಿಕೊಂಡ ಕೆಲವು ಬುಡ­ಕಟ್ಟುಗಳೆಂದರೆ ಗಂಧರ್ವ, ಕಿನ್ನರ, ಕಿಂ ಪುರುಷ, ವಸು, ಯಕ್ಷ, ರುದ್ರ, ಮಾರುತ ಇತ್ಯಾದಿ.

ಮೈಸೂರಿನ ಹಿನ್ನೆಲೆಯಲ್ಲಿ ಹೆಸರಿಸುವ ಮಹಿ­ಷಾಸುರ ಅಸುರ ಕುಲಕ್ಕೆ ಸೇರಿದವನಾಗಿರಬೇಕು. ಸುರ (ದೇವರು) ಅಲ್ಲದವರು ಎನ್ನುವ ಅರ್ಥವೂ ಅದಕ್ಕೆ ಬರುತ್ತದೆ. ಅಸುರ ಎಂಬ ಬುಡಕಟ್ಟು ಇಂದಿಗೂ ಜಾರ್ಖಂಡ್ ಹಾಗೂ ಮಧ್ಯ ಪ್ರದೇಶ­ದಲ್ಲಿ ಕಂಡುಬರುತ್ತದೆ. ಉಳಿದ ಯಾವುದೇ ದ್ರಾವಿಡ ಬುಡಕಟ್ಟುಗಳ ಹಾಗೆಯೇ ಗುಂಡನೆಯ ಮುಖಚರ್ಯೆ, ದಪ್ಪ ಮೂಗು, ಕಪ್ಪು ಮೈಬಣ್ಣ ಸಾಮಾನ್ಯವಾಗಿದೆ. ಇವರ ವಿಶೇಷವೆಂದರೆ ಕಬ್ಬಿಣ­­ವನ್ನು ಗಣಿಯಿಂದ ತೆಗೆದು ಕುಲುಮೆಯಲ್ಲಿ ಕರ­ಗಿ­ಸುವ ಸಾಂಪ್ರದಾಯಿಕ ಕಲೆಗಾರಿಕೆಯನ್ನು ಬಲ್ಲವರು.

ಅಶೋಕನ ಶಾಸನಗಳಲ್ಲಿ ಮೈಸೂರನ್ನು ಎರ್ಮೈ­ನಾಡು (ಎಮ್ಮೆ ನಾಡು) ಎಂದು ಕರೆದಿ­ದ್ದಾರೆ. ಈ ಪ್ರದೇಶದಲ್ಲಿ  ಎಮ್ಮೆಗಳು ಹೆಚ್ಚಾ­ಗಿದ್ದು ಹಾಗೆ ಕರೆಯುತ್ತಿದ್ದಿರಬಹುದು. ಎಮ್ಮೆ­ಗಳು ಅಲ್ಲಿನ ಜನರ ಬದುಕನ್ನು ಆವರಿಸಿ­ಕೊಂಡಿ­ರಬಹುದು. ಈ ಕುರುಹುಗಳು ನಮಗೀಗಲೂ ಸಿಗುತ್ತವೆ. ನೀಲಗಿರಿಯ ತೋಡರು ಎಮ್ಮೆಗಳನ್ನು ಸಾಕುವ ಬುಡಕಟ್ಟಾಗಿದ್ದರು. ಅವರು ಪೂಜಿಸುವ ಗುಡಿಯ ಮುಂಭಾಗದಲ್ಲಿ ಕೋಣನ ಕೊಂಬು­ಗ­ಳನ್ನು ಸಿಕ್ಕಿಸಿರುತ್ತಾರೆ. ಮಲೆನಾಡಿನ ಕೆಲವು ಕಡೆ­ಗ­ಳಲ್ಲಿ ಕೋಣಗಳನ್ನು ಕಟ್ಟಿ ಉಳುವ ಪದ್ಧತಿ ಈಗಲೂ ಉಳಿ­ದುಬಂದಿದೆ.

ಭಾರತದ ಬಹು ಭಾಗ­ಗಳಲ್ಲಿ ಎಮ್ಮೆ ಮತ್ತು ಕೋಣ ಸಾಕುವುದು ಸಾಮಾ­ನ್ಯ­ವಾಗಿದೆ. ಭಾರತದ ಕಾಡುಗಳಲ್ಲಿ ಕಾಡೆಮ್ಮೆ­­ಗಳೂ ಹೇರಳವಾಗಿವೆ. ಆದ್ದರಿಂದ ಸ್ಥಳೀ­ಯವಾದ ಬುಡಕಟ್ಟೊಂದನ್ನು ಕೋಣನ ಹೆಸರಿ­ನಿಂದ ಕರೆ­ದಿ­ದ್ದರೆ ಅಥವಾ ಸಾಂಕೇತಿಕವಾಗಿ ಸೂಚಿ­ಸಿ­ದ್ದರೆ ಅದು ಸಹಜವಾಗಿಯೇ ಇರುತ್ತದೆ. ಭಾರ­ತದ ಹಲವು ಕಡೆ ಶಿಲಾಯುಗದ ಚಿತ್ರಗಳಲ್ಲೂ ಕೋಣನ ಚಿತ್ರ­ಗಳನ್ನು ಬಿಡಿಸಲಾಗಿದೆ. ಕೋಣನ ಕಾರಣಕ್ಕೆ ಬುಡ­ಕಟ್ಟೊಂದನ್ನು ಅಥವಾ ಬುಡ­ಕಟ್ಟಿನ ಮುಖಂಡ­ನನ್ನು ಸಂಸ್ಕೃತದಲ್ಲಿ ಮಹಿಷಾ­ಸುರ ಎಂದಿರುವ ಸಾಧ್ಯತೆಯನ್ನು ತಳ್ಳಿಹಾಕ­ಲಾಗು­ವುದಿಲ್ಲ. ಅಂತಹ ಅಸುರನನ್ನು ಕೊಂದ ದೇವಿ­ಯನ್ನು ಹಲವು ಹೆಸ­ರು­ಗಳಲ್ಲಿ ಕರೆಯಲಾಗು­ತ್ತದೆ.

ದುರ್ಗಾ, ಕಾಳಿ,  ಮಾರಿ, ಅಂಬಾ ಪರಮೇ­ಶ್ವರಿ, ಹೀಗೆ ಇಂದಿಗೂ ಪೂಜೆಗೊಳ್ಳುತ್ತಿರುವ ಜಾಗ­ಗಳನ್ನು ಹುಡುಕುತ್ತಾ ಹೋದರೆ ಮೈಸೂ­ರನ್ನು ದಾಟಿ ಭಾರತದಾದ್ಯಂತ ಹರಡಿರುವುದು ಗೊತ್ತಾಗುತ್ತದೆ. ಅಸುರರು ಭಾರ­ತದಾದ್ಯಂತ ಹರಡಿದ ಜನರಾಗಿರಬೇಕು. ಅಸುರ, ದೈತ್ಯ, ರಾಕ್ಷಸ, ದಾನವ ಇವರೆಲ್ಲರೂ ಬೇರೆಬೇರೆ ಸಮು­ದಾಯಗಳೇ ಆಗಿದ್ದರೂ ಕಾಲಾನುಕ್ರಮದಲ್ಲಿ ಅವ­ರೆಲ್ಲರನ್ನೂ ಪ್ರತ್ಯೇಕವಾಗಿ ಗುರುತಿಸದೆ ಸೇರಿಸಿ ಹೇಳಲಾಗಿ ಅವರ ನಡುವೆ ಭೇದ ಕಾಣ­ದಾಗಿದೆ. ರಾವಣನು ರಾಕ್ಷಸರ ನಾಯಕ. ರಾಮಾ­ಯಣದ ವಾನರರು ಕಪಿಗಳಾಗಿ­ರದೆ ವನಗಳಲ್ಲಿ ವಾಸ ಮಾಡುವವರಾಗಿರಬೇಕು. ಮೂಲ ಭಾರತ ಮತ್ತು ರಾಮಾಯಣಗಳನ್ನು ಅಧ್ಯಯನ ಮಾಡು­ವಾ­ಗಲೂ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.

ಭಾರತದಲ್ಲಿ ಮಾತೃದೇವತೆಯ ಆರಾಧನೆ ಬಹು ಪ್ರಾಚೀನವಾದುದು. ಸಿಂಧೂ ನಾಗರಿಕತೆ­ಯಲ್ಲೇ ನಮಗೆ ಸಪ್ತಮಾತೃಕೆಯರ ಮಣ್ಣಿನ ಶಿಲ್ಪಗಳು ಸಿಗುತ್ತವೆ. ಹಾಗೂ ವೈದಿಕವಲ್ಲದ ಹಲವು ಬುಡಕಟ್ಟುಗಳು ಹಲವು ರೂಪದಲ್ಲಿ ಹೆಣ್ಣನ್ನು ಪೂಜಿಸುವುದು ಕಂಡುಬರುತ್ತದೆ. ಅದ­ರಲ್ಲೂ ಈಶಾನ್ಯ ಭಾಗದ ಜನ ವಿಶೇಷವಾಗಿ ಶಕ್ತಿ ದೇವತೆಯ ಪೂಜಕರು. ಶಾಕ್ತ ಪರಂಪರೆ ಶೈವ ಪರಂಪರೆಯೊಂದಿಗೆ ಬೆರೆತು ಪುರಾಣಗಳ ರಚನೆ­ಯಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ಶಾಕ್ತ ಪರಂ­ಪರೆ ತನ್ನೊಳಗೆ ತಂತ್ರದ ವಿಧಿವಿಧಾನಗಳನ್ನು ಬೆಸೆ­ದುಕೊಂಡು ಅದಕ್ಕೆ ಮತ್ತಷ್ಟು ಮನ್ನಣೆ, ರೋಚ­ಕತೆ ಸಿಕ್ಕಿರಬಹುದು.

ಶಾಕ್ತ ಪರಂಪರೆ ಶೈವ, ವೈಷ್ಣವ ಮಾತ್ರವಲ್ಲದೆ, ಬೌದ್ಧ, ಜೈನ ಪಂಥ­ಗ­ಳನ್ನೂ ಒಳಹೊಕ್ಕಿತು. ವಜ್ರಾಯನ ಬೌದ್ಧ­ಪಂಥದ ವಿಶೇಷತೆಯೇ ಅದರಲ್ಲಿ ಕಾಣಿಸಿಕೊಂಡ ಶಕ್ತಿ ದೇವತೆಯರು. ಹಾಗಾಗಿ ಕಾಳಿ, ಸರಸ್ವತಿ, ತಾರಾ­ಭಗವತಿ ಇವು ಬೌದ್ಧ ಹಿನ್ನೆ­ಲೆಯಲ್ಲೂ ಪ್ರತಿ­ಧ್ವನಿ­ಸುತ್ತವೆ. ಬೌದ್ಧ ಪಂಥದ ಶಾಖೆಗಳು ಶೈವ­ರೊಳಗೆ ಸೇರಿಹೋದಂತೆ ಅದರ ಮೂಲ ಕುರು­ಹು­ಗಳನ್ನು ಕಳೆದು­ಕೊಂಡಿವೆ. ಈ ವಿವರ­ಣೆ­ಗಳ ಹರವು ಸುಮಾರು ಮೂರು ಸಾವಿರ ವರ್ಷ­ಗ­ಳದ್ದು. ನಮ್ಮ ಕುತೂ­ಹಲ ಇರುವುದು ಈ ಅಸು­ರ­ರನ್ನು ಕೊಂದ ಕಥೆಗಳನ್ನು ಪುರಾಣಗಳಲ್ಲಿ ಮೇಲಿಂದ ಮೇಲೆ ಏಕೆ ಹೇಳಲಾಗಿದೆ ಎಂಬುದರತ್ತ.

ಸುಲಭ­ವಾದ ವಿವರಣೆ ಎಂದರೆ, ಶಕ್ತಿ ದೇವತೆಗಳನ್ನು ಆರಾಧಿಸುವ ಸಮುದಾಯಗಳು ಅಸುರರ ಸಂಹಾರ ಮಾಡಿವೆ. ಅದು ನಿರಂತರವಾಗಿ ನಡೆ­ದಿತ್ತೇ ಅಥವಾ ಎಲ್ಲೋ ನಡೆದ ಕೆಲವು ಘಟನೆ­ಗಳು ಉತ್ಪ್ರೇಕ್ಷಿತವಾಗಿವೆಯೋ ಎಂಬುದಕ್ಕೆ  ಅಧ್ಯ­ಯನದ ಅಗತ್ಯವಿದೆ. ಯಾವುದೇ ಊರಿನ ದೇವಿ­ಯನ್ನು ಆ ಊರಿನ ಸಂಕೇತವಾಗಿ ಸಂಬೋಧಿ­ಸು­ತ್ತಿದ್ದರು ಎಂಬುದನ್ನು ಒಂದು ಸರಳ ಉದಾಹ­ರಣೆಯ ಮೂಲಕ ವಿವರಿಸಬಹುದು. ಪಿರಿಯಾ­ಪಟ್ಟಣದ ಕಾಳಗವನ್ನು ವಿವರಿಸುವ ಜನ­ಪದ ಕಾವ್ಯದಲ್ಲಿ ಪಿರಿಯಾಪಟ್ಟಣದಮ್ಮ ಹಾಗೂ ಚಾಮುಂಡಿಯ ನಡುವೆ ನಡೆಯುವ ಕಾಳಗ­ವೆಂದು ವರ್ಣಿಸುವ ಕ್ರಮವು ಪುರಾಣ ಶೈಲಿಯ­ದೆಂದು ತಿಳಿಯುತ್ತದೆ.  ಇವು ರಾಜರು ನಡೆಸುವ ಹೋರಾಟಗಳಾಗದೆ ಆ ಊರ ದೇವತೆಗಳು ನಡೆಸುವ ಹೋರಾಟವೆಂದು ಹಾಡಲಾಗುತ್ತದೆ.

ದುರ್ಗೆಯನ್ನು ಆರಾಧಿಸುವ ಜನರು ಕೋಣ­ನನ್ನು ಸಾಕುತ್ತಿದ್ದ ಇಲ್ಲವೇ ಕೋಣನನ್ನೇ ಸಂಕೇತ­ವಾಗಿ ಹೊಂದಿದ್ದ ಬುಡಕಟ್ಟು ಜನರನ್ನು ಹತ್ಯೆಗೈದ ಈ ಕಥೆ ಇಂದಿಗೂ ಪೂಜೆಗೊಳ್ಳುತ್ತಿದೆ. ಆ ಬುಡ­ಕಟ್ಟಿನ ಜನ ಅವರೇ ಆಗಿದ್ದರೂ ಆಶ್ಚರ್ಯವಿಲ್ಲ. ಭಾರತದ ದೇಗುಲಗಳ ಶಿಲ್ಪಗಳು ಈ ಕಥೆಗೆ ಮತ್ತಷ್ಟು ಚಾರಿತ್ರಿಕ ದಾಖಲೆಗಳಾಗಿ ಒದಗುತ್ತವೆ. ನನ್ನ ಅಧ್ಯಯನಕ್ಕೆ ಸಿಕ್ಕ ಮಾಹಿತಿಯಂತೆ ಕರ್ನಾ­ಟಕದಲ್ಲಿ ದೇಗುಲಶಿಲ್ಪಗಳ ಆರಂಭವನ್ನು ಬಾದಾಮಿ ಗುಹಾಲಯಗಳಲ್ಲಿ ಗುರುತಿಸಲಾ­ಗು­ತ್ತದೆ. ಇಲ್ಲಿ ಮಹಿಷಾಸುರ ಮರ್ದಿನಿಯ ಶಿಲ್ಪ­ವಿದೆ.

ಕೋಣನನ್ನು ಈಟಿಯಿಂದ ತಿವಿಯುತ್ತಿರುವ ಈ ಶಿಲ್ಪದಲ್ಲಿ ಮಹಿಷಾಸುರ ಮರ್ದಿನಿಯ ದೇಹದ ಮೈಮಾಟ, ಅವಳು ಬೇಟೆಯನ್ನು ಹಿಡಿದು ಸಂಭ್ರಮಿಸುವಂತೆ ಮೂಡಿಬಂದಿದೆ.  ಕೋಣನ ಬಾಲವನ್ನು ಎತ್ತಿಹಿಡಿದು ಅದರ ಕೊರಳಿಗೆ ಭರ್ಜಿಯನ್ನು ನಾಟಿ ನಿಂತಿರುವುದು ಬಹಳ ನೈಜವಾಗಿದೆ. ಏಳನೇ ಶತಮಾನಕ್ಕೆ ಸೇರಿದ ಪಾಲರ ಶಿಲ್ಪವನ್ನು ನೋಡಿದರೆ ಕೋಣನ ಮುಖ­ವುಳ್ಳ ವ್ಯಕ್ತಿ ನಿಂತು ಹೋರಾಡುತ್ತಿರುವಂತೆ ಕೆತ್ತ­ಲಾ­ಗಿದೆ. ಅದೇ ಸಮಕಾಲೀನವಾದ ಪಲ್ಲವರ ಕಾಲದ ಮಹಾಬಲಿಪುರಂನ ಶಿಲ್ಪದಲ್ಲಿ ಛೇದ­ವಾದ ಕೋಣನ ತಲೆಯಿಂದ ರಾಕ್ಷಸನ ಮುಖ ಹೊರಬಂದು ಹೋರಾಡುವಂತೆ ಕಾಣುತ್ತದೆ. ಇಲ್ಲಿ ಪುರಾಣದ ಕಥೆ ಶಿಲ್ಪಿಯ ಕಲ್ಪನೆಗೆ ಸಿಕ್ಕು ರೋಚಕತೆ ಪಡೆದುಕೊಂಡಿದೆ.

ರಕ್ಕಸನನ್ನು ಕೊಲ್ಲುವ ದುರ್ಗಿಯನ್ನಾಗಲೀ ಕಾಳಿಯನ್ನಾಗಲೀ ಅದೆಷ್ಟು ಸಮರ್ಥವಾಗಿ ತೋರಿಸಿದರೂ ಶಿಲ್ಪಿಗೆ ತೃಪ್ತಿ ಇಲ್ಲವೇನೋ ಎನ್ನಿಸುತ್ತದೆ. ಅದಕ್ಕಾಗಿ ನಾಲ್ಕು, ಆರು, ಎಂಟು ಅಷ್ಟೇ ಅಲ್ಲ ಹನ್ನೆರಡು ಕೈ­ಗಳನ್ನೂ ನೀಡಲಾಗಿದೆ. ಅಂದರೆ ಬಹು ಭುಜಗ­ಳನ್ನು ಹೊಂದುವಷ್ಟು ಸಮರ್ಥಳು ಅವಳೆಂ­ಬುದೇ ಅವರ ಶಿಲ್ಪದ ಮೂಲಕ ಹೇಳಿರುವ ಸಂದೇಶ. ಕೋಣನ ಶಿಲ್ಪದಲ್ಲೂ ಹಲವು ಮಾರ್ಪಾ­­­ಡುಗಳು ಬರತೊಡಗಿದವು. ಕೋಣ­ನನ್ನು ತೋರಿಸುವ ಬದಲು ಕೋಣನ ದೇಹ ಹಾಗೂ ಮಾನವ ತಲೆಯ ಅಸುರ  ಅಥವಾ ಮಾನವ ದೇಹದ ಹಾಗೂ ಕೋಣನ ತಲೆಯ ಅಸುರ– ಹೀಗೆ ಶಿಲ್ಪಿಯು ಕಾಲಕಾಲಕ್ಕೆ ರೌದ್ರಾವ­ತಾರವನ್ನು ಸೃಷ್ಟಿಸುವಲ್ಲಿ ತನ್ನ ಸೃಜನಶೀಲತೆ­ಯನ್ನು ಮೆರೆಯತೊಡಗಿದ. ಆರಂಭದ ಶಿಲ್ಪದಲ್ಲಿ ಇಲ್ಲದ ಅಸುರನ ಕಲ್ಪನೆ ನಂತರ ಬೆಳೆಯುತ್ತಾ ಹೋಗಿದೆ. ಬಂಗಾಳದ ವೈವಿಧ್ಯಮಯವಾದ ಕಾಳಿಯ ಮಣ್ಣಿನ ಮೂರ್ತಿಗಳನ್ನು ನೋಡಿದರೆ ಇದು ಬಹುಶಃ ಇನ್ನೂ ಮುಂದುವರಿದಿದೆ ಎನ್ನಿ­ಸು­ತ್ತದೆ.

ಕೋಣನ ಬಲಿ ಈ ಹಬ್ಬದ ಹಿಂದಿನ ಮತ್ತೊಂದು ಪ್ರಮುಖ ಅಂಶ. ಇವತ್ತು ಕೋಣನ ಬಲಿ ನಿಷೇಧಗೊಂಡಿದೆ ಎಂಬುದು ನಿಜವೇ ಆದರೂ ಅದರ ಹಿಂದಿನ ಕಥೆ ಹಲವು ಪ್ರಶ್ನೆಗಳಿಗೆ ದಾರಿಮಾಡಿಕೊಡುತ್ತದೆ. ಮಾರಮ್ಮನಿಗೆ ಮುಖ್ಯ­ವಾಗಿ ಕೋಣನ ಬಲಿಯನ್ನು ನೀಡಲಾಗುತ್ತದೆ. ಒಂದು ಕಾಲಕ್ಕೆ ಕೋಣನ ಬಲಿಗೆ ಹೆಸರು ವಾಸಿ­ಯಾ­ದದ್ದು ಶಿರಸಿಯ ಮಾರಿಕಾಂಬಾ ದೇವ­ಸ್ಥಾನ. ಭಾರತದಲ್ಲಿ ಮಾತ್ರವಲ್ಲ ನೇಪಾಳದಲ್ಲೂ ಈ ಆಚರಣೆ ಹೆಚ್ಚಾಗಿಯೇ ಕಂಡುಬರುತ್ತದೆ. ಹಳ್ಳಿಹಳ್ಳಿಗಳಲ್ಲಿ ಆಚರಿಸುವ ಈ ಹಬ್ಬದ ಹಿಂದೆ ಅಸಾದಿಗಳು ಹಾಡುವ ಕಥೆ ಎಲ್ಲಾ ಕಡೆಯೂ ಕೇಳಿ ಬರುತ್ತದೆ.

ಮಾರಮ್ಮ ಬ್ರಾಹ್ಮಣ ಸಮು­ದಾಯದ ಸುಂದರ ಕನ್ಯೆ. ಅವಳನ್ನು ಬಯಸಿ ತನ್ನ ಹುಟ್ಟಿನ ಮೂಲವನ್ನು ಮುಚ್ಚಿಟ್ಟ ತಳಸಮುದಾ­ಯದ ಹುಡುಗ, ಸುಂದರವಾದ ಸಂಸಾರ ನಡೆ­ಸು­ತ್ತಿದ್ದ. ಮಗನನ್ನು ನೋಡಲು ಬಂದ ತಾಯಿ ಬಾಯಿತಪ್ಪಿ ಆಡಿದ ಮಾತಿನಿಂದ ಅವನ ಕುಲ­ಮೂಲ ತಿಳಿದು ಮಾರಮ್ಮ ಅವನನ್ನು ಕೊಲ್ಲಲು ಹೋದಾಗ ಅವನು ಕೋಣನ ದೇಹವನ್ನು ಹೊಕ್ಕು­ಬಿಡುತ್ತಾನೆ. ವ್ಯಗ್ರಳಾದ ಮಾರಮ್ಮ ಕೋಣ­ವನ್ನು ಬಲಿತೆಗೆದುಕೊಳ್ಳುತ್ತಾಳೆ. ಆ ಬಲಿ­ಯನ್ನು ಕೊಟ್ಟನಂತರ ಕೋಣನ ಕಾಲನ್ನು ಅದರ ಬಾಯಿಗೆ ಸಿಕ್ಕಿಸಿ ಅದರ ತಲೆಯ ಮೇಲೆ ಅದರ ದೇಹದಿಂದ ತೆಗೆದ ತುಪ್ಪದಲ್ಲಿ ದೀಪಹಚ್ಚ­ಲಾಗು­ತ್ತದೆ. ಇದು ವರ್ಣಸಂಕರಕ್ಕೆ ನೀಡುವ ಎಚ್ಚರ­ವಾ­ಗಿದೆ. ಅವಳಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬ ತನ್ನ  ಕಥೆ­ಯನ್ನು ಹೇಳಿಕೊಂಡು ಬದುಕಲು ಬಿಡುತ್ತಾಳೆ. ಮುಂದೆ ಅವನ ವಂಶ ಬೆಳೆದು ಅವರು ಅಸಾದಿ­ಗ­ಳಾಗುತ್ತಾರೆ.

ಇಂದಿಗೂ ಅಸಾದಿಗಳು ಮಾರಿಕಥೆ­ಯನ್ನು ಹಾಡುತ್ತಾರೆ. ಇದೇ ಕಥೆ ಕರಿಯಮ್ಮ, ಮಸಣಿಯಮ್ಮ ಹೀಗೆ ಹಲವು ದೇವತೆಗಳ ಹೆಸ­ರಿನಲ್ಲಿ ಕೇಳಿಬರುತ್ತದೆ. ತಮ್ಮ ಅವಸಾನದ ಕಥೆ­ಯನ್ನು ತಾವೇ ಹಾಡುವ ದುರ್ದೈವ. ಬಹುಶಃ ಭಾರತದ ಹಬ್ಬಗಳಲ್ಲಿ ದುಷ್ಟರ ಹರಣವೆಂದಾಗ ಅದೊಂದು ಜನಾಂಗದ ಹರ­ಣವೇ ಇರಬಹುದು. ಬಡತನಕ್ಕೆ ಕುಸಿದ ಬುಡ­ಕಟ್ಟಿನ ಜನರನ್ನು ಬ್ರಿಟಿ­ಷರು ‘ಕ್ರಿಮಿನಲ್ ಟ್ರೈಬ್’ ಎಂದು ಕರೆದಂತೆ, ತಮ್ಮ ಸಂಸ್ಕೃತಿಯ ಆಚೆಗೆ ಉಳಿದ ಸಮುದಾ­ಯ­ಗಳನ್ನು ದುಷ್ಟರೆಂದು ಹೀಗ­ಳೆ­­ಯುತ್ತಾ ಅವರ ಬಲಿದಾನವನ್ನು ಸಂಭ್ರಮಿಸುವ ಆಚರಣೆಗಳೂ ಆಗ­ಬಹುದು. ನಮ್ಮ ಮೂಲ ನಮಗೆ ತಿಳಿಯದಿ­ದ್ದರೆ ಎಷ್ಟು ಚೆನ್ನಾಗಿತ್ತು. ಪುರಾ­ಣ­ದೊಳಗೆ ಸೇರಿದ ಚರಿತ್ರೆಯ ಹೂರಣ ಸಿಹಿ­ಯಾಗಿ­ರುತ್ತಿತ್ತು.

ಕಾರ್ನಾಡ ಗಂಭೀರ ಸಾಹಿತಿಯೇ ಅಲ್ಲ -ಲೇಖಕ ಶೂದ್ರ ಶ್ರೀನಿವಾಸ್ ಟೀಕೆ


ಪ್ರಜಾವಾಣಿ    ವರದಿ

ಬೆಂಗಳೂರು: ‘ಯಾವುದೇ ಒಂದು ವಿಷಯ ಕುರಿತು ಐದು ನಿಮಿಷ ಗಂಭೀರವಾಗಿ ಮಾತನಾಡಲು ಬಾರದ ಗಿರೀಶ ಕಾರ್ನಾಡರು, ಅನಂತಮೂರ್ತಿ ಅವರ ನಿಧನದ ನಂತರ ಅಸಹನೆಯಿಂದ ಬಾಲಿಶವಾಗಿ ಮಾತನಾಡುವ ಮೂಲಕ ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ’ ಎಂದು ಲೇಖಕ ಶೂದ್ರ ಶ್ರೀನಿವಾಸ್ ಟೀಕಿಸಿದರು.

ನಗರದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾ­ಲಯ ಇಲಾಖೆ ಆಯೋಜಿಸಿದ್ದ ‘ಡಾ.ಯು.ಆರ್. ಅನಂತಮೂರ್ತಿ: ಒಂದು ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನಂತಮೂರ್ತಿ ಅವರು ಬದುಕಿರುವವರೆಗೆ ಅವರನ್ನು ಮತ್ತು ಅವರ ಸಾಹಿತ್ಯ ಕುರಿತು ಒಂದೇ ಒಂದು ವಾಕ್ಯ ಮಾತನಾಡದೇ ಇದ್ದ ಕಾರ್ನಾಡರು ಇದೀಗ ಇದ್ದಕ್ಕಿದ್ದಂತೆ ಸ್ಫೋಟಗೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈ ಹಿಂದೆ ತಮ್ಮನ್ನು ಬೆಳೆಸಿದ ಸಂತ ಮನೋಭಾವದ ಪಟ್ಟಾಭಿರಾಮ ರೆಡ್ಡಿ ಅವರು ನಿಧನರಾದಾಗ ಕೂಡ ಇದೇ ರೀತಿ ಕೀಳಾಗಿ ಹೇಳಿಕೆಗಳನ್ನು ನೀಡಿದ್ದರು. ಮರಾಠಿ ರಂಗಭೂಮಿಯ ಖ್ಯಾತ ನಾಟಕಕಾರ ತೆಂಡೂಲ್ಕರ್‌ ಅವರ ನಿಧನದ ತರುವಾಯ  ಇದೇ ಚಾಳಿ ತೋರಿದ್ದರು. ಆದರೆ, ಮಿತ್ರರು ಹಾಗೂ ಶತ್ರುಗಳ ಕುರಿತು ಮಾತನಾಡು­ವಾಗ ವಸ್ತುಸ್ಥಿತಿ, ಆಲೋಚನೆ ಮತ್ತು ಬೌದ್ಧಿಕವಾಗಿ ನಾವು ವಂಚಿಸಿಕೊಳ್ಳಬಾರದು. ಕಾರ್ನಾಡರು ಆ ರೀತಿಯ ವಂಚನೆಗೆ ಒಳಗಾಗಿದ್ದಾರೆ’ ಎಂದು ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.

‘ಅನಂತಮೂರ್ತಿ ಅವರ ಮುಂದೆ ಕುಳಿತಾಗ ಅವರು ನಮ್ಮ ಮುಂದೆ ಯಾವುದೇ ಒಂದು ಬೌದ್ಧಿಕ ಕೃತಿ, ಒಬ್ಬ ಲೇಖಕನನ್ನು ಕುರಿತಂತೆ ತೆರೆದಿಡುತ್ತಿದ್ದ ಮನಸ್ಸು, ಕಾರ್ನಾಡರಲ್ಲಿ ಕಂಡುಬರಲೇ ಇಲ್ಲ. ಕಾರ್ನಾ­ಡರು ಮೂರ್ತಿ ಅವರ ನಿಧನದ ನಂತರ ಈ ರೀತಿ ಮಾತನಾಡುವುದು ದೊಡ್ಡ ಸಾಮಾಜಿಕ ಅಪರಾಧ’ ಎಂದರು.

‘ಕುವೆಂಪು, ತೇಜಸ್ವಿ ಮತ್ತು ಲಂಕೇಶ ಅವರ ತರು­ವಾಯ ಒಂದು ಸಂಸ್ಕೃತಿ ಪರಂಪರೆ ಬೆಳೆಸಿದ ಮಹಾನ್ ಚೇತನವಾದ ಅನಂತಮೂರ್ತಿ ಅವರು ಅನೇಕ ಮಾದ­ರಿಗಳನ್ನು ನಮ್ಮ ಮುಂದಿಟ್ಟು ಹೋಗಿದ್ದಾರೆ. ಅವುಗ­ಳನ್ನು ಅರಿಯುವ ಸಮಯದಲ್ಲಿ ನಮ್ಮ ವ್ಯಕ್ತಿತ್ವ­ವನ್ನು ಕಾರ್ನಾಡರ ರೀತಿಯಲ್ಲಿ ಕಳೆದುಕೊಳ್ಳಬಾರದು’ ಎಂದು ಹೇಳಿದರು.

ಹಿರಿಯ ವಿಮರ್ಶಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ,‘ಕನ್ನಡ ಸಾಹಿತ್ಯ ಲೋಕದಲ್ಲಿ ಜಗಳವಾಡಿಯೂ ಸ್ನೇಹ ಹೇಗೆ ಉಳಿಸಿಕೊಳ್ಳಬಹುದು ಎನ್ನುವುದಕ್ಕೆ ಅನಂತಮೂರ್ತಿ ಅವರ ವ್ಯಕ್ತಿತ್ವ ಒಂದು ದೊಡ್ಡ ಉದಾಹರಣೆ. ಅವರು ತಮ್ಮ ಕೊನೆಯ ಮೂರ್ನಾಲ್ಕು ವರ್ಷಗಳಲ್ಲಿ ರಾಜಕೀಯ ಸಂಗತಿಗಳ ಸಂದರ್ಭದಲ್ಲಿ ಎಷ್ಟೇ ನಿಷ್ಠುರವಾಗಿ ಮಾತನಾಡಿ­ದರೂ, ಮನುಷ್ಯ ಸಂಬಂಧದ ನೆಲೆಯಲ್ಲಿ ಹೆಚ್ಚು ಆರ್ದ್ರವಾಗಿದ್ದರು’ ಎಂದು ಅಭಿಪ್ರಾಯಪಟ್ಟರು.

‘ಅನಂತಮೂರ್ತಿ ಅವರು ತುಂಬಾ ಹಚ್ಚಿಕೊಂಡಿದ್ದ ಸಾಹಿತ್ಯದ ಗುಂಪು ಅವರ ಸಂಕಟದ ವೇಳೆಯಲ್ಲಿ ಅವರ ಹತ್ತಿರ ಇರಲಿಲ್ಲ. ಆ ಗುಂಪು  ತನ್ನ ಹಿತಾ­ಸಕ್ತಿ­ಗಾಗಿ ತೀವ್ರ ಅನಾರೋಗ್ಯದಲ್ಲಿದ್ದ ಮೂರ್ತಿ ಅವರನ್ನು ಧಾರವಾಡದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಆಯೋ­ಜಿಸಿದ್ದ ಸಾಹಿತ್ಯ ಸಂಭ್ರಮ ಉತ್ಸವಕ್ಕೆ ಕರೆದು­ಕೊಂಡು ಹೋಯಿತು. ಆದರೆ, ಮುಂದೆ ಒಂದೇ ವಾರದಲ್ಲಿ ರಾಜ್ಯಪಾಲರು ಅನಂತಮೂರ್ತಿಗಳ ಕುರಿತು ಕೀಳು ಹೇಳಿಕೆ ನೀಡಿದಾಗ ಅನೇಕರು ಬೀದಿಗಿಳಿದು ಪ್ರತಿಭಟಿಸಿ, ಅನಂತಮೂರ್ತಿ ಅವರಿಗೆ ನೈತಿಕ ಬೆಂಬಲ ಸೂಚಿಸಿದರೆ, ಆ ಗುಂಪಿನ  ಯಾವೊಬ್ಬ ಸಾಹಿತಿ ಈ ಕುರಿತು ಚಕಾರ ಎತ್ತಲಿಲ್ಲ’ ಎಂದು ವಿಷಾದಿಸಿದರು.
‘ಅನಂತಮೂರ್ತಿ ಅವರ ಕೃತಿಗಳ ಕುರಿತು ಕಾರ್ನಾಡರು ಮಾತನಾಡಿದ್ದು ಹೊಸದೇನಲ್ಲ. ಕನ್ನಡ­ದಲ್ಲಿ ಮೂರ್ತಿ ಅವರ ಸಾಹಿತ್ಯವನ್ನು ಕಟುವಾಗಿ ವಿಮರ್ಶೆ ಮಾಡಿದ ಪರಂಪರೆಯೇ ಇದೆ. ಸ್ವಜಾತಿ ಮತ್ತು ಸ್ವವಿಮರ್ಶೆಯನ್ನು ನಿಷ್ಠುರವಾಗಿ ಮಾಡಿ­ಕೊಂಡ ರೀತಿಯಲ್ಲಿ ಸೃಜನಶೀಲವಾಗಿ ‘ಸಂಸ್ಕಾರ’  ಕೃತಿ ಮೂಡಿಬಂದಿದೆ’ ಎಂದು ಹೇಳಿದರು.

‘ಅನಂತಮೂರ್ತಿ ಅವರ ಇನ್ನುಳಿದ ಕೃತಿಗಳನ್ನು ಗಮನಿಸಿದಾಗ ಎಲ್ಲೊ ಒಂದು ಕಡೆ ಲೇಖಕ ತನಗೆ ತಾನೇ ಮೋಸ ಮಾಡಿಕೊಂಡ ರೀತಿಯಲ್ಲಿ ಪಕ್ಷಪಾತಿ ನೆಲೆಯೊಳಗೆ ಕೃತಿ ಕಟ್ಟುತ್ತ ಹೋಗಿರುವುದು ಕಾಣು­ತ್ತದೆ. ‘ಅವಸ್ಥೆ’ ಕಾದಂಬರಿ ಇದಕ್ಕೊಂದು ಉದಾಹ­ರಣೆ. ಇದರಲ್ಲಿ ಪ್ರಾಮಾಣಿಕ ರಾಜಕಾರಣಿ ಗೋಪಾಲ­ಗೌಡರ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಗೌರವ ಬರುವ ರೀತಿಯಲ್ಲಿ ಆ ಪಾತ್ರ ಚಿತ್ರಣವಾಗಿಲ್ಲದೆ ಇರುವುದು ಕಾಣುತ್ತದೆ. ಈ ರೀತಿಯ ಲೋಪಗಳು ಮೂರ್ತಿ ಅವರಲ್ಲಿದ್ದವು. ಇವುಗಳನ್ನು ಆರೋಗ್ಯಕರ­ವಾಗಿ ನಾವು ವಿಮರ್ಶಿಸುವ ಅಗತ್ಯವಿದೆ’ ಎಂದು ಸಿದ್ದರಾಮಯ್ಯ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಸೆಪ್ಟೆಂಬರ್ 30 ಬೆಂಗಳೂರು : ಯುವಾಭಿವ್ಯಕ್ತಿ ಹಬ್ಬ


ಅಕ್ಟೋಬರ್ 1 ಇಂಡಿ : ಕಾವ್ಯ ರಸಗ್ರಹಣ

ಅಕ್ಟೋಬರ್ 11 ಬೆಂಗಳೂರು : ಜಗದೀಶ್ ಕೊಪ್ಪರವರ ಪುಸ್ತಕ ಬಿಡುಗಡೆಹರಾಜಿಗಿಟ್ಟಿದ್ದೇವೆಹಾರೋಹಳ್ಳಿ ರವೀಂದ್ರ


ತಲೆಗೆ ಹಣದ ಗೆದ್ದಿಲತ್ತಿ
ಗುದ್ದುತ್ತಿದೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ


ಕನ್ನಡಕವನ್ನೊಬ್ಬರು ಕಳಚಿ
ಶರ್ಟ‌ನ್ನೊಬ್ಬರು ಕಳಚಿ
ಟೈಯನ್ನೊಬ್ಬರು ಕಳಚಿ
ಶೂಟನ್ನೊಬ್ಬರು ಕಳಚಿ
ಬೂಟನ್ನೊಬ್ಬರು ಕಳಚಿ
ಹೊಸ ಬಟ್ಟೆಯ ಕೊಡಿಸುತ್ತೇವೆಂದು
ಬೆತ್ತಲು ಮಾಡಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ಅನುಯಾಯಿಗಳಾಗಬೇಕಿತ್ತು
ಆರಾಧಕರಾಗಿದ್ದೇವೆ
ಮನೆಯ ಹಜಾರದಲ್ಲಿ ಹಣೆಗೆ ಮೊಳೆಯೊಡೆದು
ಊರ ಭಾಗಿಲ ಮುಂದೆ ಬೆನ್ನಿಗೆ ಮೊಳೆಯೊಡೆದು
ಕಛೇರಿಗಳ ಮುಂದೆ ಮಂಡಿಗೆ ಮೊಳೆಯೊಡೆದು
ಕೂರಿಸಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ಗಲ್ಲಿಗೊಂದು ಪೇಟಕಟ್ಟಿ
ಪೇಟಕೊಂದು ಗೂಟಕಟ್ಟಿ
ಗೂಟವನ್ನೆ ಮೇಟಿ ಮಾಡಿ
ಮೇಟಿ ಹೇಳಿದಂತೆ ನಾವು ಕೂಗುತಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ಹೋರಾಟಗಾರರು ಒಂದು ಧಿಕ್ಕಾಗಿ
ಕಾರ್ಯಕರ್ತರು ಮತ್ತೊಂದು ಧಿಕ್ಕಾಗಿ
ಬುದ್ದಿಜೀವಿಗಳು ಇನ್ನೊಂದು ಧಿಕ್ಕಾಗಿ
ತತ್ವ ಸಿದ್ದಾಂತಗಳು
ಬರಹ ಭಾಷಣಗಳನ್ನು ಮುದ್ರಿಸಿ
ಪುಸ್ತಕ ಮಳಿಗೆಯಲ್ಲಿಟ್ಟಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ರಾಜಕಾರಣಿಗಳಾಗಿ ಜನರ ಮುಂದೆ
ಅಧಿಕಾರಿಗಳಾಗಿ ಸಂಘಟನೆಗಳ ಮುಂದೆ
ನಮಗೆ ಹೇಗೆ ಬೇಕೊ ಹಾಗೆ
ನಿಮ್ಮ ಪ್ರತಿಮೆಯನ್ನು ತಿರುಗಿಸಿಕೊಳ್ಳುತಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ನಮಗೆ ಅನ್ಯಾಯವಾದಾಗ
ರಂಪಾಡಿ ಚೀರಾಡಿ ಗುಲ್ಲೆಬ್ಬಿಸಿ
ನ್ಯಾಯ ದೊರಕುವಷ್ಟರಲ್ಲಿ
ಕೈಯೊಡ್ಡಿ ಕಿಸೆತುಂಬಿಸಿಕೊಂಡು
ಮನೆ ಸೇರುತಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ನಿಮ್ಮ
ಸ್ವಾಭಿಮಾನ
ಆತ್ಮ ಗೌರವ
ಎಲ್ಲವನ್ನು ಮಾರಿಕೊಂಡು
ಬದುಕುತಿದ್ದೇವೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ಇನ್ನೊಂದು ಸಲ ಕೇಳುತಿದ್ದೇನೆ
ಕ್ಷಮಿಸಿ
ನಿಮ್ಮನ್ನು ಹರಾಜಿಟ್ಟಿದ್ದೇವೆ

ಕೆಂಡಗಣ್ಣಿನ ಹೆಣ್ಣೊಂದು ತಣ್ಣಗಾದಾಗ......ಹಾರೋಹಳ್ಳಿ ರವೀಂದ್ರ
 ಹೆಚ್ಚು ಸಿನಿಮಾಗಳಲ್ಲಿ ನಟಿಸಿ ೧೯೬೫ರಲ್ಲಿ ತೆರೆಕಂಡ ಮನುಷಲು ಮಮತಾಲು ಚಿತ್ರದಿಂದ ಖ್ಯಾತಿಯ ಉತ್ತುಂಗಕ್ಕೆ ಏರಿದ ಈಕೆ, ೧೯೭೩ರಲ್ಲಿ ನಟನೆಗಾಗಿ ಫಿಲ್ಮ್ ಫೇರ್‍ ಪ್ರಶಸ್ತಿಯನ್ನು ಧಕ್ಕಿಸಿಕೊಂಡಳು. ಆದರೆ ಅಲ್ಲಿಂದ ಮಾಜಿ ಮುಖ್ಯ ಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ೧೯೮೧ರಲ್ಲಿ ರಾಜಕೀಯಕ್ಕೆ ಕರೆತಂದರು. ಅಲ್ಲಿಂದ ತಮಿಳುನಾಡಿನಲ್ಲಿ ಬಹುದೊಡ್ಡ ರಾಜಕಾರನಿಯಾಗಿ ಬೆಳೆದುಬಿಟ್ಟಳು. ಎಂಜಿಆರ್‍ ಮರಣದ ನಂತರಪಕ್ಷದ ಹೊಣೆ ಈಕೆಯ ಮೇಲೆ ಬಿದ್ದು ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವನ್ನು ಸಲೀಸಾಗಿ ಅಧಿಕಾರಕ್ಕೆ ತಮದು ಕೂರಿಸಿದ ಹೆಗ್ಗಳಿಕೆ ಈಕೆಗಿದೆ. ಹೆಣ್ಣಾದರೇನಂತೆ ಘರ್ಜಿಸಿದರೆ ಕೇಂದ್ರವೆ ಗಡಗಡ ಎನ್ನುತ್ತಿತ್ತು. ಹೆಣ್ಣಾಗಿಯು ಗಂಡಾಗಬಹುದು ಎಂಬುದನ್ನು ಆಕೆಯನ್ನು ನೋಡಿ ಕಲಿಯಬೇಕು.
ಈ ದ್ರಾವಿಡ ಪಕ್ಷವನ್ನು ಬಲಗೊಳಿಸಿ ೧೯೯೧ರಲ್ಲಿ ಅಧಿಕಾರಕ್ಕೆ ಬಂದ ಈಕೆ, ಸತತವಾಗಿ ೪ ಭಾರಿ ಮುಖ್ಯಮಂತ್ರಿಯಾದಳು. ಅಧಿಕಾರದ ಲಾಭಿ ಏನೆ ಇರಲಿ ಒಂದಷ್ಟು ಜನಪರ ಕೆಲಸಗಳನ್ನು ಮಾಡಿದ್ದಾಳೆ. ಅಮ್ಮ ಸಿಮೆಂಟ್, ಅಮ್ಮ ನೀರು, ಅಮ್ಮ ಉಪ್ಪು,ಅಮ್ಮ ಫಾರ್ಮಸಿ, ಅಮ್ಮ ಕ್ಯಾಂಟಿನ್ ಮುಂತಾದವು ಸೇರಿದಂತೆ ರೈತರಿಗೆ ಅತಿ ಹೆಚ್ಚು ಸವಲತ್ತುಗಳು ಹಾಗೂ ರೈತಪರ ಕೆಲಸಗಳನ್ನು ಮಾಡಿರುವ ಕೀರ್ತಿಗೆ ತಮಿಳುನಾಡಿನಲ್ಲಿ ಈಕೆಗೆ ಸಲ್ಲಬೇಕು.
ತಮಿಳುನಾಡಿನಲ್ಲಿ ಸಾಮಾನ್ಯ ಜನರು ಬಳಸುವ ವಸ್ತುಗಳು, ಜನ ಸಾಮಾನ್ಯರ ಆದಾಯಕ್ಕೆ ನಿಲುಕುವಂತೆ, ಅತಿ ಹೆಚ್ಚು ದುಬಾರಿಯಾಗದಂತೆ ಅತಿ ಕಡಿಮೆ ದರದಲ್ಲಿ ಸಿಗುವ  ಹಾಗೆ ಯಾವ ಮುಖ್ಯಮಮತ್ರಿ ಮಾಡಿದ್ದಾರೆ ಹೇಳಿ? ಅಂತಹ ಹೆನ್ಣು ಮಗಳನ್ನು ಜೈಲಿಗೆ ತಳ್ಳಿ ತಮಿಳುನಾಡು ಅದೇಗೆ ತಡೆದುಕೊಂಡಿದೆಯೊ? ಅತ್ತ ಕರುಣಾನಿಧಿ ಪಕ್ದವರು ಹಾಗೂ ಆತನ ಮಗ ಸಿಹಿ ಹಂಚುತ್ತಿದ್ದಾರೆ ಇತ್ತ ಜಯಲಲಿತಾರ ಅಬಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ನಾವು ಮನೆಯಲ್ಲಿ ಕುಳಿತು ನಮ್ಮದೆ ಮೈಂಡ್ ಸೆಟಪ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದೇವೆ. ಒಂದಷ್ಟು ಜನ ಚಪ್ಪಾಳೆಯನ್ನು ತಟ್ಟುತ್ತಿದ್ದಾರೆ. ಇದನ್ನು ಪ್ರತಿರೋಧ ಎಂದು ಕರೆಯಲೇ? ಅಥವಾ ಅಸಹ್ಯ ಎಂದು ಕರೆಯಲೇ?
 
ಜಯಲಲಿತಾ ವಿರುದ್ದ ಅಕ್ರಮ ಆಸ್ಥಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುವುದು ೧೯೯೬ ರಲ್ಲಿ, ಅಂದು ಪ್ರಕರಣ ದಾಖಲು ಮಾಡುವವರು ಜನತಾ ಪಕ್ಷದ ಅಂದಿನ ನಾಯಕ ಸುಬ್ರಹ್ಮಣಿಯನ್ ಸ್ವಾಮಿ. ೧೯೯೧ ರಿಂದ ೧೯೯೬ರವರೆಗೆ ಮುಕ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಯಲಲಿತಾ ಅವರು ಅಕ್ರಮವಾಗಿ ೬೬.೬೫ ಕೋಟಿ ಆಸ್ಥಿಗಳಿಸಿದ್ದಾರೆ ಎಂದು ಆರೋಪ. ಪ್ರತಿಯೊಂದು ರಾಜ್ಯಕ್ಕೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ನಿಮ್ಮ ಎದೆಯನ್ನು ಪ್ರಾಮಾಣಿಕವಾಗಿ ಮುಟ್ಟಿಕೊಂಡು ಹೇಳಿ, ನೀವ್ಯಾರು ಇಕೆಗಿಂತ ಅತಿ ಹೆಚ್ಚು ಹಣ ಗಳಿಸಿಲ್ಲವೆ? ನಿಮ್ಮೆಲ್ಲರ ಪಾಪವನ್ನು ಆಕೆ ಒಬ್ಬಳೆ ಹೊರುವಂತಾಗಿದೆ. ಜಯಲಲಿತಾ ಅವರ ಮನೆಯನ್ನು ತನಿಖೆಗೆ ಗುರಿಪಡಿಸಿದಾಗ ೧೦.೫೦೦ ಸೀರೆಗಳು.೭೫೦ ಜೊತೆ ಪಾದರಕ್ಷೆಗಳು.೯೧ ಕಯ ಗಡಿಯಾರ, ೪೧ ಹವಾ ನಿಯಂತ್ರಕ ಸಾಧಕಗಳು, ೨೮ ಕೆ ,ಜಿ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿವೆ. ನೀವು ಬ್ರಷ್ಟಾಚಾರ ವಿರೋಧಿಗಳಾಗಿದ್ದರೆ, ಕಾನೂನು ಪಾಲಕರಾಗಿದ್ದರೆ, ಈ ದೇಶದ ಸಚಿವರ ಬಳಿ, ಎಂಪಿ, ಎಂಎಲ್ ಎ, ಗಳ ಬಳಿಯೂ ಕೂಡ ಇಷ್ಟು ವಸ್ತುಗಳು ಸಿಗುತ್ತವೆ ಗೊತ್ತೆ, ಆದರೆ ಇವಳೊಬ್ಬಳ ಮೇಲೆಕೆ? 
ಅಕ್ರಮ ಆಸ್ಥಿಯು ಕಡಾಕಂಡಿತವಾಗಿಯು ಅದು ಅಪರಾಧವೆ, ನ್ಯಾಯಾಲಯದ ಮುಂದೆ ಯಾರು ಸಮಾನರಲ್ಲ ತಪ್ಪು ಯಾರದೆ ಆಗಲಿ ಅದು ತಪ್ಪೆ. ಆದರೆ ಪಾರದರ್ಶಕವಾಗಿರಬೇಕು. ಯಾವುದೇ ವ್ಯಯಕ್ತಿಕ ಹಿತಾಶಕ್ತಿಯ ಲಾಭಿ ಇರಭಾರದು ಅಲ್ಲವೆ. ದಲಿತರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿ ಅಂಗಲಾಚಿದಾಗ ನಿಮ್ಮ ನ್ಯಾಯಾಲಯ ಅವರ ಕಣ್ಣೀರನ್ನು ಹೊರೆಸಿತೆ? ಉತ್ತರ ಪ್ರದೇಶದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿರುವುದನ್ನು ತನಿಖೆಯಲ್ಲಿ ಅತ್ಯಾಚಾರ ನಡೆದಿಲ್ಲ ಆತ್ಮಾಹತ್ಯೆ ಎಂದು ಹೇಳುತ್ತೀರಿ ಇದ್ಯಾವ ಸೀಮೆ ನ್ಯಾಯ ನಿಮ್ಮದು. ಸುಬ್ರಹ್ಮಣಿಯನ್ ಸ್ವಾಮಿ ಅವರು ಒಂದು ದ್ರಾವಿಡ ಪಕ್ಷವನ್ನು ಮುಗಿಸುವ ಸಂಚುಮಾಡಿರುಹುದೇ ವಿನಹಃ ನ್ಯಾಯಕ್ಕಾಗಿ ಅಲ್ಲ ಎಂಬುದನ್ನು ಸ್ವಲ್ಪ ಅನುಮಾನಿಸಲೇ ಬೇಕು. ಆತ ಹೇಳಿದ್ದಾನೆ ನನ್ನ ಮುಂದಿನ ಗುರಿ ಸೋನಿಯಾ ಮತ್ತು ರಾಹುಲ್ ಎಂದು , ಇದರರ್ಥ ಬಿಜೆಪಿ ಬಿಟ್ಟು ಕಾಂಗ್ರೇಸ್ ಮತ್ತು ಇತರ ಪ್ರಾದೇಶಿಕ ದ್ರಾವಿಡ ಪಕ್ಷಗಳನ್ನು ಮುಗಿಸುತ್ತೇನೆ ಎಂದು ಪರೋಕ್ಷ ಮಾರ್ಗದಲ್ಲಿ ಸೂಚಿಸುತ್ತಿದ್ದಾರೆ. ಹಾಗಾದರೆ ಬಿಜೆಪಿಯಲ್ಲಿ ಯಾರು ಅಕ್ರಮ ಆಸ್ಥಿ ಮಾಡಿಲ್ಲವೆ? ಅಲ್ಲಿರುವವರೆಲ್ಲ ಸಾಚಗಳೆ? ಹಿಂದಿನ ಹತ್ತು ವರ್ಷಗಳ ಕಾಂಗ್ರೇಸ್ ನ ನಿರಂತರ ಆಳ್ವಿಕೆಗೆ ಜಯಲಲಿತಾಳೂ ಕೂಡ ಕಾರಣಳೆ. ಅಂದು ಎನ್ ಡಿಎ ಗೆ ಜಯಲಲಿತ ಕೈ ಜೋಡಿಸಿದ್ದರೆ ಅದು ಅಧಿಕಾರದಲ್ಲಿರುತ್ತಿತ್ತು. ಅಂದು ನೀನು ಸಾತ್ ಕೊಟ್ಟಿದ್ದರೆ ನಿನಗೆ ಈ ಗತಿ ಬಂದೊದಗುತ್ತಿರಲಿಲ್ಲ. ಇದು ಒಂದು ರೀತಿಯಲ್ಲಿ ಷಡ್ಯಂತ್ರವೆ ಇರಬೇಕು.
ಭಾರತದ ಹಲವಾರು ಪ್ರಾದೇಶಿಕ ಪಕ್ಷಗಳಲ್ಲಿ ತಮಿಳು ನಾಡಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಬಹುದೊಡ್ಡ ಪ್ರಭಾವವುಳ್ಳ ಪಕ್ಷ. ಇದು ದ್ರಾವಡರ ಪರವಾಗಿ ನಿಂತುಕೊಂಡಿರುವ ಪಕ್ಷ ಎಂದು ಹೇಳಿದರೆ ತಪ್ಪಾಗಲಾರದು. ಬ್ರಾಹ್ಮಣವಾದ ಹೇಗಿರುತ್ತದೆ ಎಂದರೆ, ಬ್ರಾಹ್ಮಣವಾದವನ್ನು ಬ್ರಾಹ್ಮಣನೊಬ್ಬನೆ ಧಿಕ್ಕರಿಸಿದರೆ, ಅವರವರೆ ಪರಸ್ಪರ ಹೆಗಲನ್ನು ಕತ್ತರಿಸಿಕೊಳ್ಳುತ್ತಾರೆ. ಇದು ಕೂಡ ಮುಂದಿನ ತಲೆಮಾರಿಗೆ ಒಂದು ಮುನ್ಸೂಚನೆಯಾಗಿ ಪರಿಣಮಿಸಲಿದೆ. ಹಾಗಾಗಿ ಬ್ರಾಹ್ಮಣವಾದವನ್ನು ಧಿಕ್ಕರಿಸಿದ ಹಾಗೂ ಪೆರಿಯಾರ್‍ ಚಳವಳಿ ಮಾಡಿದ ತಮಿಳುನಾಡಲ್ಲಿ ದ್ರಾವಿಡ ಪಕ್ಷ ಕಂಟಕಕ್ಕೆ ಸಿಲುಕಿದೆ ಇದು ಜಯಲಲಿತಳ ಸೋಲಲ್ಲ ಮುಂದೆ ಪೆರಿಯಾರ್‍ ವಾದಗಲಿಗು ಪೆಟ್ಟು ಬೀಳುವ ಸಾಧ್ಯತೆಗಳಿವೆ.
 
ಜಯಲಲಿತ ಸಾಮಾನ್ಯ ಹೆಣ್ಣಲ್ಲ, ಅಸಮಾನ್ಯಳು. ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಜನಪರ ಕೆಲಸ ಮಾಡಿರುವವರ ಪೈಕಿ ಮಾಯಾವತಿಯನ್ನು ಬಿಟ್ಟರೆ ಈಕೆಯೆ ಎರಡನೆಯವಳು. ತಮಿಳುನಾಡನ್ನು ಹಿಡಿದು ತಿರುಗಿಸಿದ ಗಟ್ಟಿಗಿತ್ತಿ ಈಕೆ. ಇಂದು ಎದೆ ನಡುಗಿಸಿಕೊಂಡು ನಿಂತಿದ್ದಾಳೆ. ಇವರ ಹಿಂಬಾಲಕರು ತಮಿಳುನಾಡಿನಾದ್ಯಂತ ರೋಧಿಸುತ್ತಿರುವುದನ್ನು ಮೋಡಿದರೆ ಕರುಳು ಎಲ್ಲೊ ಕಡೆ ಕಿತ್ತೆದಂತಾಗುತ್ತದೆ. ಆದರೇನು ಮಾಡುವುದು ನ್ಯಾಯಾಲಯದ ಮುಂದೆ ನಾವೆಷ್ಟು ಕುಬ್ಜರು ಅಲ್ಲವೆ? ಇಂದು ನಮ್ಮೊಡನೆ ಬುದ್ದನಿದ್ದರೆ ನಿಮ್ಮನ್ನು ಕ್ಷಮಿಸಿ ತನ್ನೊಟ್ಟೆಯೊಳಗೆ ಹಾಕಿಕೊಳ್ಳುತ್ತಿದ್ದ. ಆದರೆ ಅವರ ಕಾಲಘಟ್ಟ ಹೀಗಿಲ್ಲ. ನಿಮ್ಮನ್ನು ಯಾರು ಕ್ಷಮಿಸಲಾರರು ಅಂತಹ ಕಾಲಗಟ್ಟದಲ್ಲಿ ಕುಳಿತಿದ್ದೀರಿ, ನಿಮ್ಮನ್ನು ಯಾರು ಕ್ಷಮಿಸಲಾರರು. ನಿಮ್ಮ ಕಣ್ಣ ಹನಿಗಳಲ್ಲಿ ಆತನಿದ್ದಾನೆ. ನೆನಪಿಸಿಕೊಳ್ಳಿ ಇಡೀ ಪ್ರಪಂಚಕ್ಕೆ ಧೈರ್ಯ ತುಂಬಿದ ಬುದ್ದ ನಿಮಗೆ ಇಲ್ಲ ಎನ್ನುತ್ತಾನೆಯೆ? ತುಂಬೆ ತುಂಬುತ್ತಾನೆ.
 ದ್ರಾವಿಡ ಪಕ್ಷದ ಕೆಂಡಗನ್ಣಿನ ಹೆಣ್ಣೊಂದು ತಣ್ಣಗಾಗಿದೆ. ತಮಿಳುನಾಡು ನೆಮ್ಮದಿಯನ್ನೆ ಕಳೆದುಕೊಂಡು ರೋಧನ ಮೌನ ಗುದ್ದಾಟ ಮುಂತಾದವು ತುಂಬಿಕೊಂಡು ಝರಿಯಾಗಿ ತೊರೆಯಾಗಿ ಹರಿಯುತ್ತಿದೆ, ಮುಂದೆ ಅಲ್ಲಿಯ ರಾಜಕೀಯ ಎಲ್ಲಾ ರೀತಿಯಲ್ಲು ಕಷ್ಟವೆ ಯಾಕೆಂದರೆ ಅಲ್ಲಿಯ ಕೇಂದ್ರ ಬಿಂಸುವಿನ ಸದ್ದಡಗಿದೆ. ತಣ್ಣಗಾದ ನಿಮ್ಮ ಬದುಕಿಗೆ ಹೊಸ ಚೇತನವನ್ನು ತುಂಬಿ ಕೊಡುವ ಬುದ್ದ, ಅವರ ಹಾಗೆ ಮೌನವಾಗಿ ಹಿದ್ದು ಬಿಡಿ, ತಣ್ಣಗಾದ ಬದುಕು ತನ್ಮಯವಾಗಿ ಬಿಡುತ್ತದೆ. ಗಟ್ಟಿಗಿತ್ತಿ ಹೆಣ್ಣು ನೀನು ಕುಸಿಯಬೇಡ. ದ್ರಾವಿಡ ಕಾಳಗದಲ್ಲಿ ಕುದಿಯಬೇಕು ಮತ್ತೆ ಅರಳಬೇಕು.

ದಲಿತ ಸಾಹಿತಿಗಳು ಮತ್ತು ಹೋರಾಟಗಾರರು ಪರಸ್ಪರ ಈರ್ಷೆ ಮತ್ತು ಪ್ರತಿಷ್ಠೆ ಬಿಟ್ಟು ಒಂದಾಗಬೇಕು
ನಾಗರಾಜು ತಲಕಾಡು
ಮೈಸೂರು

ದಲಿತ ಚಳವಳಿಯ ಹಿಂದಣ ವೈಭವವನ್ನು ಮೆಲುಕು ಹಾಕುವುದಷ್ಟೆ ನಿಲ್ಲದೆ ಪ್ರಸ್ತುತ ಹೋರಾಟದ ಹಿಂದಿನ ಸಮಸ್ಯೆಯನ್ನು ನೇರವಾಗಿ ಅರ್ಥೈಸುವ ಮತ್ತು ಪರಿಹರಿಸುವ ತಿಳುವಳಿಕೆಯೊಂದಿಗೆ ಚಳಚಳಿಯನ್ನು ನಾವು ಮುನ್ನಡೆಸಬೇಕಾಗಿದೆ.

ಹಿಂದೆ ಕರ್ನಾಟಕದ ಯಾವುದೇ ಸಣ್ಣ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದರೂ ಅದರ ವಿರುದ್ದ ರಾಜ್ಯದ ತುಂಬಾ ಹೋರಾಟದ ನೊಳಗು ಧ್ವನಿಸುತ್ತಿತ್ತು, ನಿಜ ಚಳವಳಿಯ ಆ ಪ್ರಖರತೆ, ವ್ಯಾಪಕತೆ ಕಡಿಮೆಯಾಗಲು ಪ್ರಧಾನ ಕಾರಣ ದಲಿತರ ಒಗ್ಗಟ್ಟಿನ ನಾಶ. (ಎಡ-ಬಲ ಇತ್ಯಾದಿ) ದಲಿತರ ಹೋರಾಟಗಳು ದಲಿತ ಸಮಸ್ಯೆಗಷ್ಟೆ ಸೀಮಿತವಾಗಿ ಬಿಟ್ಟಿವೆ, ಎಡಗೈ -ಬಲಗೈ ಪಂಗಡಗಳೆರಡೂ ಕಡೆಯ ಪ್ರಮುಖ ಸಾಹಿತಿಗಳ ನಡುವಿನ ಈರ್ಷೆ, ಅಸಮಧಾನ ಮತ್ತು ಮುಖಂಡರ ಮುಸುಕಿನ ಗುದ್ದಾಟಗಳು ಚಳವಳಿಯನ್ನು ಹಿಂಬೀಳಿಸಿವೆ. ಜೀರ್ಣಿಸಿಕೊಳ್ಳಲು ಕಷ್ಟವಾದರು ಇವು ವಾಸ್ತವ ಸಂಗತಿಗಳು.

ಆರಂಭದ ದಲಿತ ಬಂಡಾಯ ಸಂಘಟನೆ ಬರಬರುತ್ತಾ ಭಾಗ ಭಾಗವಾಗಿ ದಲಿತರೇ ಬೇರೆ, ಬಂಡಾಯ ಚಳವಳಿಯೆ ಬೇರೆ, ರೈತ ಚಳವಳಿಯೆ ಬೇರೆ ಎಂಬ ಪರಿಪಾಠ ರೂಡಿಯಾಯಿತು. ದ.ಸಂ.ಸಗಳ ಪರಸ್ಪರ ಪ್ರತಿಷ್ಠೆ ಮತ್ತು ಸ್ವಾರ್ಥತನದಿಂದಾಗಿ ದಲಿತ ಹೋರಾಟ ಪ್ರಖರತೆ ಮತ್ತು ವ್ಯಾಪಕತೆಯನ್ನು ಕಳೆದುಕೊಂಡು ಬಿಟ್ಟಿತು. ಮೂಲ ದ,ಸಂ,ಸ ನಾಲ್ಕಾರು ಬಣಗಳಾಗಿ ವಿಭಜನೆಯಾದದ್ದು ಮಾತ್ರ ಅದಕ್ಕೊದಗಿದ ಬಹುದೊಡ್ಡ ಪೆಟ್ಟೆ.

ಒಗ್ಗಟ್ಟಿನ ವಿಷಯದಲ್ಲಿ ಎಡ ಬಲ ಸಮಸ್ಯೆ ಇಂದು ದೊಡ್ಡ ಕಗ್ಗಂಟಠಾಗಿದೆ. ಬಲಗೈ ಪಂಗಡದವರ ಮೇಲಿನ ಎಡಗೈ ಪಂಗಡದವರಿಗಿರುವ ದೊಡ್ಡ ಅಸಮಾಧಾನಕ್ಕೆ ಮೂಲ ಅಧಿಕಾರ ಲಾಭಿಯಲ್ಲಿದೆ. ಈ ಆರಂಭದ ಲಾಭಿ ಮುಸುಕಿನ ಗುದ್ದಾಟಕ್ಕೆ ತಿರುಗಿ ಇರ್ವರ ನಡುವೆ ಕಂದಕ ಹೆಚ್ಚಾಗಿ ಪ್ರಸ್ತುತದಲ್ಲಿ ಅದು ಒಳ ಮೀಸಲಾತಿ ಹೋರಾಟವಾಗಿ ಪರಿವರ್ತನೆಗೊಂಡಿದೆ.

ದಲಿತ ಚಳವಳಿಯ ಶಕ್ತಿಯನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಕುಂದಿಸಿದ್ದು ಬಹುಜನ ವಿದ್ಯಾರ್ಥಿ ಮೂಮೆಂಟ್(ಬಿವಿಸ್). ಅದು ಒಂದು ದಶಕದ ಹಿಂದೆಯೆ ಸಾಮಾಜಿಕ ಹೋರಾಟಗಳನ್ನು ಮಾಡಕೂಡದೆಂಬ ಅಜೆಂಡಾ ಹೊಂದಿದ್ದರ ಫಲವಾಗಿ ಮತ್ತು ಬಹುಪಾಲು ದಲಿತ ವಿದ್ಯಾರ್ಥಿಗಳು ದ,ಸಂ,ಸ ಹೋರಾಟದಿಂದ ದೂರ ಉಳಿದದ್ದು ದಲಿತ ಸಂಘರ್ಷ ಸಮಿತಿಗೆ ದೊಡ್ಡ ಹಿನ್ನಡೆಯಾಯಿತು. (ಸದ್ಯ ಇತ್ತೀಚೆಗೆ ಬಿ.ಎಸ್.ಪಿ/ಬಿ,ವಿಸ್ ತನ್ನ ಅಜೆಂಡಾವನ್ನು ಬದಲಾಯಿಸಿಕೊಂಡು ಹೋರಾಟಗಳನ್ನು ಕೈಗೆತ್ತಿಕೊಲ್ಳುತ್ತಿದೆ)


೨೦೧೦ರಲ್ಲಿ ಎಲ್ಲಾ ಬಣಗಳು ಒಂದಾಗುವ ಪ್ರಯತ್ನ ಮಾಡಿತ್ತಾದರು ಒಂದಾಗದೇ ಉಳಿದಿದ್ದು ವ್ಯವಸ್ಥಿತವಾದ ಆಯೋಜನೆ ಹಾಗೂ ನಾಯಕತ್ವದ ಮೇಲಿನ ಅನುಮಾನ ಅಸಮದಾನಗಳ ಹೊಳೆ ಹರಿಯುತ್ತಿದೆ. ರಾಜ್ಯದಲ್ಲಿ ಬಿ,ಜೆ,ಪಿ ಸರ್ಕಾರವಿದ್ದಾಗ ಸಣ್ಣ ಸಮಸ್ಯೆಗೂ ದೊಡ್ಡ ಹೋರಾಟ ರೂಪಿಸಿ ಸರ್ಕಾರಕ್ಕೆ ನೆರ ಹೊಣೆಗಾರ ಪಟ್ಟಿ ಕಟ್ಟುತ್ತಿದ್ದ ನಾವೆಲ್ಲ ಇಂದು ಕಾಂಗ್ರೆಸ್ ಸರ್ಕಾರದ ಮೇಲೆ ವೊಪರೀತ ಬರವಸೆ ಇಟ್ಟುಕೊಂಡಿದ್ದರ ಫಲವಾಗಿ ಯಾವುದನ್ನು ಪ್ರಶ್ನಿಸದ ಸ್ಥಿತಿಗೆ ತಲುಪಿದ್ದೇವೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದಲಿತ ಸಚಿವರುಗಳ ಆಪ್ತವಲಯದಲ್ಲಿ ಒಂದಲ್ಲಾ ಒಂದು ಸಂಘಟನೆ ಇದ್ದು ಕೈಬಾಯಿ ಕಟ್ಟಿಕೊಂಡು ಬಿಟ್ಟಿದ್ದೇವೆ, ನನ್ನನ್ನೂ ಒಳಗೊಂಡಂತೆ.

ದಲಿತ ಸಿ,ಎಂ/ಡಿ,ಸಿ,ಎಂ ವಿಷಯವಾಗಿ ಬೃಹತ್ ಪ್ರಮಾಣದಲ್ಲಿ ಹೋರಾಟ ಆಯೋಜಿಸಬೇಕಿದ್ದ ನಾವೆಲ್ಲ ತಟಸ್ಥವಾಗಿರಲು ಕಾರಣ ಹಿರಿಯ ದಲಿತ ಮುಖಂಡರು ಅನೇಕರು ರಾಜಕೀಯ ಹಿತಾಶಕ್ತಿ ಈಡೇರಿಸಿಕೊಳ್ಳಲು ಮುಂದಾಗಿರುವುದು. ಈ ಎಲ್ಲದರ ಪ್ರಜ್ಞೆಯೊಂದಿಗೆ ಎಡ-ಬಲ ಭೇದವಿಲ್ಲದೆ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಿದೆ. ದೌರ್ಜನ್ಯ ನಡೆದಿರುವುದು ಎಡಗೈ ಕೋಮಿನ ಮೇಲೋ? ಬಲಗೈ ಕೋಮಿನ ಮೇಲೋ? ಎಂದು ಮೀನಾಮೇಷ ಎಣಿಸಿದರೆ ಪರಸ್ಪರ ಪರವಾಗಿ ಹೋರಾಟ ಮೊಳಗ ಬೇಕಿದೆ.

ಎಲ್ಲಾ ಬಣಗಳು ಒಂದಾಗಿ ಒಂದೇ ಸಂಘಟನೆಯಾಗುವುದು ಸದ್ಯದಲ್ಲಿ ದೂರದ ಮಾತೆ. ಆದರೆ ಕಡೆ ಪಕ್ಷ ತಮ್ಮ ತಮ್ಮ ಪ್ರತ್ಯೇಕ ಅಸ್ಥಿತ್ವ ಉಳಿಸಿಕೊಂಡು ಎಲ್ಲಾ ಬಣಗಳು ಸೇರಿ ದೊಡ್ಡ ಚಳವಳಿ ರೂಪಿಸಬಹುದಲ್ಲ? ವಾರ್ಷಿಕ ಅಧ್ಯಯನ ಶಿಬಿರಗಳನ್ನು ಒಂದೊಂದೆ ಬಣ ನಡೆಸುವ ಬದಲು ಎರಡೆರಡು ಬಣಗಳಾದರು ಸೇರಿ ಒಟ್ಟಿಗೆ ಆಯೋಜೊಸಿದರೆ ದಲಿತ ಒಗ್ಗಟ್ಟಿನ ಸಕಾರಾತ್ಮಕ ಬೆಳವಣಿಗೆ ಕಾಣಬಹುದು.

ಎಡಗೈ -ಬಲಗೈ ಈ ಎರಡು ಕೋಮಿನ ಸಾಹಿತಿಗಳು ಬುದ್ದಿಜೀವಿಗಳು ಪರಸ್ಪರ ಈರ್ಸೆ ಅಸಮಾಧಾನ ಬಿಟ್ಟು ಒಂದಾಗಿಚೂರಾಗಿರುವ ಸಂಘಟನೆಯನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಅವರೂ ನಂಬಿಕೆ ವಿಶ್ವಾಸಗಳನ್ನು ಕಾಪಾಡಿಕೊಳ್ಳ ಬೇಕಾಗುತ್ತದೆ. ಎರಡು ಕೋಮಿನ ನಡುವೆ ಬಿರುಕು ಮುಗಿಲು ಮುಟ್ಟುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಎಡಬಲ ಸಮಸ್ಯೆಗೆ ಒಳಮೀಸಲಾತಿ ಒಳಿತಾಗುವುದೆ ಎಂಬುದನ್ನು ಒಟ್ಟಾಗಿ ವಿವೇಚಿಸಬೇಕಿದೆ.

ನಾಗರಾಜು ತಲಕಾಡು
ಮೈಸೂರು

Sunday, September 28, 2014

ದ್ರಾವಿಡ ಚಳವಳಿಯ ದುರಂತ


ಸನತಕುಮಾರ ಬೆಳಗಲಿ

 

 

ಮನುಷ್ಯನಲ್ಲಿ ಹೊಸ ಕನಸುಗಳನ್ನು ಬಿತ್ತುವ ಪ್ರಯೋಗಗಳು ಯಾಕೆ ಹೀಗೆ ವಿಫಲಗೊಳ್ಳುತ್ತವೆ? ಸಹಜೀವಿಗಳೊಂದಿಗೆ ಸೌಹಾರ್ದದ ಬದುಕು ಯಾಕೆ ಸಾಧ್ಯವಾಗುವುದಿಲ್ಲ? ಮನುಷ್ಯನಲ್ಲಿರುವ ಸ್ವಾರ್ಥ, ದ್ವೇಷ ತೊಲಗಿ ಪ್ರೀತಿಯ ಬಳ್ಳಿ ಏಕೆ ಅರಳುವುದಿಲ್ಲ? ಈ ಪ್ರಶ್ನೆಗೆ ಸಂತರು, ಅನುಭವಿಗಳು, ಅವಧೂತರು, ಕ್ರಾಂತಿಕಾರಿಗಳು ಉತ್ತರ ಹುಡುಕಲು ಶತಮಾನದಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಉತ್ತರವಿನ್ನು ದೊರಕಿಲ್ಲ. ಐದು ಸಾವಿರ ವರ್ಷದಿಂದ ಮನುಷ್ಯ ಹೀಗೇ ಇದ್ದಾನೆ ಎಂಬುದು ಮಾತ್ರ ಸತ್ಯ.

 

ತಮಿಳುನಾಡು ಮುಖ್ಯಮಂತ್ರಿ, ಅಣ್ಣಾ ಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ ಭ್ರಷ್ಟಾಚಾರದ ಆರೋಪ ಸಾಬೀತಾಗಿ ಜೈಲಿಗೆ ಹೋದಾಗ ಮನುಷ್ಯ ಅಂದರೆ ಹೀಗೇ ಎಂದು ಸಹಜವಾಗಿ ಅನಿಸಿತು. ಲಂಚ ತಿಂದವರು ಜೈಲಿಗೆ ಹೋಗಿದ್ದು ಇದೇ ಮೊದಲ ಸಲವಲ್ಲ. ಉಮಾಭಾರತಿ, ಶಿಬು ಸೊರೆನ್, ಲಾಲು ಪ್ರಸಾದ್ ಯಾದವ್, ಬಿ.ಎಸ್. ಯಡಿಯೂರಪ್ಪ, ಚೌತಾಲಾ ಹೀಗೆ ಕೆಲವರು ಕತ್ತಲು ಕೋಣೆ ಕಂಡು ಬಂದಿದ್ದಾರೆ. ಮುಖಕ್ಕೆ ಅಂಟಿಕೊಂಡ ಹೊಲಸನ್ನು ಒರೆಸಿಕೊಂಡು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸಿಕ್ಕ ಅಧಿಕಾರವನ್ನು ನಾಚಿಕೆಯಿಲ್ಲದೆ ಅನುಭವಿಸಿದ್ದಾರೆ.

ಆದರೆ, ಜಯಲಲಿತಾ ಬಗ್ಗೆ ಅಷ್ಟು ಹಗುರವಾಗಿ ವ್ಯಾಖ್ಯಾನಿಸಲು ಆಗುವುದಿಲ್ಲ. ಈಕೆ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂಗೆ ಸೇರಿದ ಮುಖ್ಯಮಂತ್ರಿ. ಈ ಪಕ್ಷದ ಮೂಲ ದ್ರಾವಿಡ ಚಳವಳಿ ಪುರೋಹಿತಶಾಹಿ ಶೋಷಿತ ವರ್ಗಗಳ ವಿರುದ್ಧ ಬಂಡಾಯವೆದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಈ ದ್ರಾವಿಡ ಪಕ್ಷಗಳಿಗೆಲ್ಲ ಮೂಲ ಪುರುಷ. ಅವರು ಐವತ್ತರ ದಶಕದಲ್ಲಿ ಸ್ಥಾಪಿಸಿದ ದ್ರಾವಿಡ ಕಳಗ ಮುಂದೆ ಟಿಸಿಲುಗಳಾಗಿ ಒಡೆದು ಡಿಎಂಕೆ, ಅಣ್ಣಾ ಡಿಎಂಕೆ, ಎಂಡಿಎಂಕೆ ಪಕ್ಷಗಳೆಲ್ಲ ಹುಟ್ಟಿಕೊಂಡವು. ಕರ್ನಾಟಕ ಮೂಲದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಆರಂಭಿಸಿದ ದ್ರಾವಿಡ ಆಂದೋಲನ ದೇಶದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಉತ್ತರ ಭಾರತದ ಆರ್ಯ ಮೂಲಕ ಶಕ್ತಿಗಳ ವಿರುದ್ಧ ದಕ್ಷಿಣ ಭಾರತದ ದ್ರಾವಿಡ ಸಮುದಾಯ ಒಂದಾಗಬೇಕು. ಮೂಢನಂಬಿಕೆ, ಕಂದಾಚಾರಗಳನ್ನು ತೊರೆಯಬೇಕು. ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ಪೆರಿಯಾರರನ್ನು ತಮಿಳುನಾಡಿನ ಜನ ತಂದೆ ಪೆರಿಯಾರ್ ಎಂದು ಕರೆದರು. ಹಿಂದೂ ದೇವಾಲಯಗಳಲ್ಲಿ ಕಾಣುತ್ತಿದ್ದ ಅಸ್ಪಶ್ಯತೆ, ಅಂಧಶ್ರದ್ಧೆ, ಪುರೋಹಿತರ ವಂಚನೆ ಇವುಗಳಿಂದ ರೋಸಿ ಹೋಗಿದ್ದ ಪೆರಿಯಾರ್‌ರ ಮೇಲೆ ರಶ್ಯದಲ್ಲಿ 1917ರಲ್ಲಿ ನಡೆದ ಸಮಾಜವಾದಿ ಕ್ರಾಂತಿಯೂ ಪರಿಣಾಮ ಬೀರಿತ್ತು. ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಸಾಹಿತ್ಯವನ್ನು ವಿದೇಶದಿಂದ ತರಿಸಿ ಓದಿದ್ದರು. ಹೀಗೆ ಜನರಲ್ಲಿ ವೈಚಾರಿಕ ಪ್ರಶ್ನೆ ಮೂಡಿಸಲು ಬಿರುಗಾಳಿಯಾದ ಪೆರಿಯಾರ್‌ರನ್ನು ಕಾಣಲು ಡಾ. ಅಂಬೇಡ್ಕರ್ ಆಗ ಮದ್ರಾಸಿಗೆ ಬಂದಿದ್ದರು. ಪೆರಿಯಾರ್‌ರ ಕಂದಾಚಾರ ವಿರೋಧಿ ಹೋರಾಟ ಯಾವ ತೀವ್ರತೆ ಪಡೆಯಿತೆಂದರೆ ಜನರನ್ನು ಕಂದಾಚಾರಕ್ಕೆ ತಳ್ಳಿದ ವೌಢ್ಯದ ಸಂಕೇತಗಳಿಗೆ ಚಪ್ಪಲಿಯಿಂದ ಹೊಡೆಯುವ ಕಾರ್ಯಕ್ರಮಗಳನ್ನು ಅವರು ರಾಜ್ಯಾದ್ಯಂತ ನಡೆಸಿದರು. ಬ್ರಾಹ್ಮಣದ ಕೊರಳಲ್ಲಿದ್ದ ಜನಿವಾರವನ್ನು ಹರಿದು ಬಿಸಾಡುವ ಆಂದೋಲನವನ್ನು ಹಮ್ಮಿಕೊಂಡರು. ‘ಇದೆಲ್ಲ ಅತಿರೇಕ ಎಂದು ಗೊತ್ತಿದ್ದರೂ ಅಮಾಯಕ ಜನರಲ್ಲಿ ದೇವರ ಬಗೆಗಿರುವ ಭಯವನ್ನು ತೊಲಗಿಸಲು ಅನಿವಾರ್ಯ ಎಂದು ಸಾರಿದರು. ಎಪ್ಪತ್ತರ ದಶಕದಲ್ಲಿ ಪ್ರೊ. ನಂಜುಂಡಸ್ವಾಮಿ ಅವರು ಕರ್ನಾಟಕ ವಿಚಾರವಾದಿ ಚಳವಳಿ ಆರಂಭಿಸಿ ಪೆರಿಯಾರ್‌ರನ್ನು ಬೆಂಗಳೂರಿಗೆ ಕರೆತಂದಾಗ ನಾನು ಅವರನ್ನು ನೋಡಲು ಬಿಜಾಪುರದಿಂದ ಬೆಂಗಳೂರಿಗೆ ಬಂದಿದ್ದೆ. ಪೆರಿಯಾರ್‌ರಿಗೆ ಆಗ ತೊಂಬತ್ತರ ಪ್ರಾಯ. ಆದರೆ, ಅವರ ಮಾತಿನಲ್ಲಿ ಅದೇ ಸ್ಪಷ್ಟತೆ, ಛಲವಂತಿಕೆ ಇತ್ತು. ಕನ್ನಡದಲ್ಲೇ ಅವರ ತಮ್ಮ ವಿಚಾರ ಮಂಡಿಸಿದ್ದರು. ಇಂಥ ಪೆರಿಯಾರ್ ಕಟ್ಟಿದ ದ್ರಾವಿಡ ಚಳವಳಿ ಅರವತ್ತರ ದಶಕದಲ್ಲಿ ಇಬ್ಭಾಗವಾಯಿತು. 

ಪೆರಿಯಾರ್ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ ಅಣ್ಣಾ ದೊರೈ ದ್ರಾವಿಡ ಕಳಗಂನಿಂದ ಹೊರಗೆ ಬಂದರು. ‘ದ್ರಾವಿಡ ಮುನ್ನೆತ್ರ ಕಳಗಂ’ ಎಂಬ ಪ್ರತ್ಯೇಕ ಪಕ್ಷ ಕಟ್ಟಿದರು. ಚುನಾವಣಾ ರಾಜಕೀಯಕ್ಕೆ ಇಳಿದು ಲೋಕಸಭೆಗೆ ಗೆದ್ದು ಬಂದರು. ನಂತರ ರಾಜ್ಯದ ಮುಖ್ಯಮಂತ್ರಿಯಾದರು. ಕರುಣಾನಿಧಿ ಅಣ್ಣಾ ದೊರೈ ಅವರ ಖಾಸಾ ಶಿಷ್ಯ. ಅಣ್ಣಾದೊರೈ ನಂತರ ಕರುಣಾನಿಧಿ ಡಿಎಂಕೆ ಸಾರಥ್ಯ ವಹಿಸಿದರು. ಆಗ ದ್ರಾವಿಡ ಚಳವಳಿಯಿಂದ ಆಕರ್ಷಿತರಾಗಿ ತಮಿಳು ಚಿತ್ರರಂಗದ ಹೆಸರಾಂತ ನಟರು, ನಿರ್ದೇಶಕರು, ಗೀತೆ ರಚನೆಕಾರರು ಡಿಎಂಕೆ ಸೇರಿದರು. ಮುಂದೆ ಮುಖ್ಯಮಂತ್ರಿಯಾದ ಕರುಣಾನಿಧಿ ಕೂಡ ಕಥಾ ರಚನಕಾರರಾಗಿದ್ದರು. ವೈಚಾರಿಕವಾಗಿ ಪೆರಿಯಾರ್‌ರಿಗೆ ನಿಷ್ಠರಾಗಿದ್ದ ಕರುಣಾನಿಧಿ ರಾಜ್ಯದ ಮುಖ್ಯಮಂತ್ರಿಯಾದರು. ಆಗ ಅವರೊಂದಿಗೆ ಭಿನ್ನಾಭಿಪ್ರಾಯ ತಾಳಿದ ತಮಿಳು ಚಿತ್ರರಂಗದ ನಾಯಕ ನಟ ಎಂ.ಜಿ.ರಾಮಚಂದ್ರನ್ ಪಕ್ಷದಿಂದ ಸಿಡಿದು ಹೋಗಿ ತಮ್ಮದೆ ಅಣ್ಣಾ ಡಿಎಂಕೆ ಪಕ್ಷವನ್ನು ಸ್ಥಾಪಿಸಿದರು. ಆಗ ಸಿನೆಮಾಗಳಲ್ಲಿ ಎಂಜಿಆರ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಿದ್ದ ಮೈಸೂರಿನ ಮೇಲುಕೋಟೆಯ ಅಯ್ಯಂಗಾರಿ ಯುವತಿ ಜಯಲಲಿತಾ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪೆರಿಯಾರ್‌ರ ವೈಚಾರಿಕ ಪ್ರತಿಭೆಯಿಂದ ಬೆಳಗುತ್ತಿದ್ದ ದ್ರಾವಿಡ ಚಳವಳಿಗೆ ಬಣ್ಣದ ಗ್ಲಾಮರ್ ಜಗತ್ತಿನ ಪ್ರವೇಶವಾಯಿತು. ಕರುಣಾನಿಧಿಯಂತೆ ಎಂಜಿಆರ್‌ಗೆ ವೈಚಾರಿಕ ಬದ್ಧತೆ ಇರಲಿಲ್ಲ. ಅಂತಲೆ ಅವರು ತನ್ನ ನಾಯಕ ನಟಿ ಜಯಲಲಿತಾರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ವೈಚಾರಿಕ ಜಾಗೃತಿ ಮೂಡಿಸಿದ್ದ ದ್ರಾವಿಡ ಚಳವಳಿ ಅಂದರೆ ಅಣ್ಣಾಡಿಎಂಕೆಯನ್ನು ಜಯಲಲಿತಾ ತನ್ನ ಸೆರಗಿಗೆ ಕಟ್ಟಿಕೊಂಡರು. ಸಿದ್ಧಾಂತ, ಆದರ್ಶಗಳೆಲ್ಲ ಮಣ್ಣು ಪಾಲಾದವು. ರಾಜಕೀಯ ಅಧಿಕಾರ ಪಡೆದು ಆಸ್ತಿ, ಐಶ್ವರ್ಯ ಸಂಪಾದಿಸಿಕೊಳ್ಳುವುದೇ ಈಕೆಯ ಆದ್ಯತೆ ಆಯಿತು. 
 

ಕರುಣಾನಿಧಿ ತನ್ನ ಮೂವರು ಹೆಂಡಂದಿರ ಮಕ್ಕಳನ್ನು ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡಿದರೆ ಈ ಜಯಲಲಿತಾ ತನ್ನ ಆತ್ಮೀಯ ಗೆಳತಿ ಶಶಿಕಲಾ ಪರಿವಾರವನ್ನು ಬೆಳೆಸಿದರು. ದ್ರಾವಿಡ ಪಕ್ಷಗಳ ಈ ವೈಷಮ್ಯದಿಂದ ತಮಿಳುನಾಡಿನಲ್ಲಿ ಈಗ ಸಂಘಪರಿವಾರ ಪ್ರವೇಶವಾಗಿದೆ. ಒಂದು ಕಾಲದಲ್ಲಿ ಮೂಢನಂಬಿಕೆ, ಕಂದಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ರಾಜ್ಯದಲ್ಲಿ ದೇವಾಲಯಗಳ ಸುತ್ತ ಪುರೋಹಿತಶಾಹಿ ಹುತ್ತ ನಿರ್ಮಾಣವಾಗಿದೆ. ಅದಷ್ಟೇ ಅಲ್ಲ ಹಿಂದೂ ಕೋಮುವಾದ ಹಳ್ಳಿ ಹಳ್ಳಿಗೆ ಪ್ರವೇಶಿಸಿದೆ. ಎಪ್ಪತ್ತರ ದಶಕದವರೆಗೆ ಇಲ್ಲಿ ಆರೆಸ್ಸೆಸ್ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಪೆರಿಯಾರ್ ಈಗ ಬದುಕಿದ್ದರೆ ತಾನು ನೀರು ಹಾಕಿ ಬೆಳೆಸಿದ ಸ್ವಾಭಿಮಾನಿ, ವಿಚಾರವಾದಿ ಚಳವಳಿಯ ಈ ದುರಂತ ಕಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಜಯಲಲಿತಾ ಜೈಲು ಪಾಲಾಗಿದ್ದಾರೆ. ಕರುಣಾನಿಧಿ ತನ್ನ ಮಕ್ಕಳ ಅಧಿಕಾರ ದಾಹ, ಹಣದ ದಾಹ ತೃಪ್ತಿ ಪಡಿಸಲು ಹೆಣಗಾಡುತ್ತಿದ್ದಾರೆ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಕಮ್ಯೂನಿಸ್ಟ್ ಚಳವಳಿ ಈಗ ಮುಂಚಿನ ಪ್ರಖರತೆ ಉಳಿಸಿಕೊಂಡಿಲ್ಲ. ದಾರಿ ತಪ್ಪಿದ ಜಯಲಲಿತಾ ಜೊತೆಗೆ ಒಂದೆರೆಡು ಸೀಟಿಗಾಗಿ ಮೈತ್ರಿ ಮಾಡಿಕೊಳ್ಳಲು ಬರ್ದನ್, ಕಾರಟ್, ರಾಜಾ ಆಕೆಯ ಬಾಗಿಲಲ್ಲಿ ನಿಂತಿದ್ದು ಚರಿತ್ರೆಯ ವ್ಯಂಗ್ಯ.

ಅಂತಲೇ ಮನುಷ್ಯನನ್ನು ಸರಿದಾರಿಗೆ ತರಲು, ಸಂತರು, ಪ್ರವಾದಿಗಳು, ಶರಣರು, ಕ್ರಾಂತಿಕಾರಿಗಳು ಎಷ್ಟೇ ಪ್ರಯಾಸ ಪಟ್ಟರೂ ಪ್ರಯೋಜನವಾಗುವುದಿಲ್ಲ. ಮನುಷ್ಯ ತನ್ನ ಚಾಳಿ ಬಿಡುವುದಿಲ್ಲ ಎಂದು ಅನೇಕ ಬಾರಿ ಅನಿಸುತ್ತದೆ. ಆದರೆ, ಹಾಗೆಂದು ಕಂದಾಚಾರವನ್ನು, ಶೋಷಣೆಯನ್ನು ಕೋಮುವಾದವನ್ನು ಒಪ್ಪಿಕೊಳ್ಳಬೇಕೇ? ಸಾಧ್ಯವೇ ಇಲ್ಲ. ಈ ವ್ಯಾಧಿಗಳ ವಿರುದ್ಧ ಹೋರಾಡಿ ಮದ್ದು ನೀಡುತ್ತಲೇ ಇರಬೇಕು; ಎಂದಿಗೂ ಮೈಮರೆಯಬಾರದು. ಯಾವುದೇ ವ್ಯವಸ್ಥೆ ಬರಲಿ ಅಧಿಕಾರದಲ್ಲಿರುವವರಿಗೆ ಮದ ಏರುವುದು ಸಹಜ. ಈ ಅಧಿಕಾರ ಮದಕ್ಕೆ ತಿವಿಯಲು ಜನ ಸದಾ ಅಂಕುಶವಾಗಿ ನಿಲ್ಲುವದೊಂದೇ ಉಳಿದ ದಾರಿ.

`ಕಿವುಡನೂ ಕೇಳಿಸಿಕೊಳ್ಳುವಂತೆ ಮಾತನಾಡಿದ' ಕ್ರಾಂತಿಕಾರಿ ಭಗತ್

ಡಾ ಎಚ್ ಎಸ್ ಅನುಪಮಾ

ಭಗತ್ ಸಿಂಗ್ ಜೀವನಚರಿತ್ರೆಯ ಕೆಲ ಪುಟಗಳು:

ಬ್ರಿಟಿಷ್ ಸರ್ಕಾರ ಪಬ್ಲಿಕ್ ಸೇಫ್ಟಿ ಬಿಲ್ ಹಾಗೂ ಟ್ರೇಡ್ ಡಿಸ್ಪ್ಯೂಟ್ ಬಿಲ್ ಎಂಬ ಎರಡು ಮಸೂದೆಗಳನ್ನು ಕೇಂದ್ರದಲ್ಲಿ ಮಂಡಿಸಲು ತಯಾರಿ ನಡೆಸಿತ್ತು. ಅವೆರೆಡೂ ಭಾರತೀಯರ ಹಕ್ಕುಗಳನ್ನು ಮೊಟಕುಗೊಳಿಸುವ ಜನವಿರೋಧಿ ಮಸೂದೆ ಎನ್ನುವುದು ಕ್ರಾಂತಿಕಾರಿಗಳ ಅಭಿಪ್ರಾಯವಾಗಿತ್ತು. ಹಲವು ರಾಜಕೀಯ ವ್ಯಕ್ತಿಗಳೂ ಅದನ್ನು ವಿರೋಧಿಸಿದ್ದರು. ವೈಸರಾಯ್ ಅದನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಂಡಿಸುವ ದಿನ ಯಾವುದೆಂದು ತಿಳಿದ ಎಚ್‌ಎಸ್‌ಆರ್‌ಎ (ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್) ಸದಸ್ಯರು ಅವತ್ತು ಗಮನ ಸೆಳೆಯುವ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಕೊನೆಗೆ ಅಸೆಂಬ್ಲಿಯೊಳಗೆ ಪ್ರವೇಶ ಪಡೆಯುವುದು; ಗ್ಯಾಲರಿಯಲ್ಲಿ ಕುಳಿತು ಜನರಿಲ್ಲದ ಜಾಗ ಯಾವುದೆಂದು ನೋಡಿ ಅಲ್ಲಿಗೆ ಬಾಂಬು ಒಗೆಯುವುದು; ಯಾರೂ ಸಾಯಬಾರದು ಹಾಗೂ ಯಾರನ್ನೂ ಗಾಯಗೊಳಿಸಬಾರದು; ಸ್ಫೋಟ ಸಂಭವಿಸಿ ಗಮನ ಸೆಳೆದು ನಂತರ ಬಂಧನಕ್ಕೊಳಗಾಗಬೇಕು; ವಿಚಾರಣೆಯ ಸಮಯವನ್ನು ಹಾಗೂ ತಮ್ಮ ಮೇಲೆ ಮಾಧ್ಯಮಗಳು ನೀಡುವ ಗಮನವನ್ನು ತಮ್ಮ ವಿಚಾರವನ್ನು ಪ್ರಚಾರಪಡಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

ಭಗತ್ ಸಿಂಗ್ ಮತ್ತು ಬಿ. ಕೆ. ದತ್ತ ಇಬ್ಬರೂ ಏಪ್ರಿಲ್ ೮, ೧೯೨೯ರಂದು ನಿರಪಾಯಕಾರಿಯಾದ ಬಾಂಬ್ ಹಿಡಿದು ಸೆಂಟ್ರಲ್ ಅಸೆಂಬ್ಲಿ (ಇಂದಿನ ಪಾರ್ಲಿಮೆಂಟ್) ಒಳ ಹೋದರು. ಅಸೆಂಬ್ಲಿ ನೆರೆದಾಗ ಜನರಿಲ್ಲದ ಕಡೆಗೆ ಬಾಂಬ್ ಬಿಸಾಡಿ ಸ್ಫೋಟಿಸಿದರು. ಅದರ ಜೊತೆಗೆ ‘ಕಿವುಡನು ಕೇಳಿಸುವಂತೆ ಮಾಡಲು’ ಎಂಬ ಕರಪತ್ರ ಬಿಸಾಡಿದರು. ‘ಸಾಮ್ಯಾಜ್ಯಶಾಹಿಗೆ ಧಿಕ್ಕಾರ’, ‘ಕ್ರಾಂತಿಗೆ ಜಯವಾಗಲಿ’ ಎಂದು ಕೂಗಿದರು.

ಆಗ ಎದ್ದ ಗದ್ದಲದಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಪ್ರತಿನಿಧಿಗಳು ಓಡತೊಡಗಿದರು. ಕೆಲವರು ಟೇಬಲ್ಲಿನ ಅಡಿ ಅವಿತರು. ಮೋತಿಲಾಲ್ ನೆಹರೂ, ಮಹಮದ್ ಅಲಿ ಜಿನ್ನಾ, ಮದನ ಮೋಹನ ಮಾಳವೀಯ ಅವರಂಥ ಕೆಲವರಷ್ಟೇ ಶಾಂತವಾಗಿ ವರ್ತಿಸಿದರು. ಭಗತ್ ಹಾಗೂ ದತ್ತಾ ಕೈಯಲ್ಲಿ ಪಿಸ್ತೂಲುಗಳಿದ್ದವು. ಎಂದೇ ಅವರ ಬಳಿ ಹೋಗಿ ಬಂಧಿಸಲು ಪೊಲೀಸರೂ ಹೆದರಿದರು. ಅವರು ತಮ್ಮ ಪಿಸ್ತೂಲು ಆಚೆಯಿಟ್ಟ ಮೇಲೆ ಪೊಲೀಸರು ಬಂಧಿಸಿದರು. ದೆಹಲಿಯಲ್ಲಿ ಒಂದಾದ ಮೇಲೆ ಮತ್ತೊಂದು ಜೈಲಿಗೆ ಅವರನ್ನು ಸ್ಥಳಾಂತರಿಸಲಾಯ್ತು. ಮೇ ತಿಂಗಳಲ್ಲಿ ಆರಂಭಿಕ ವಿಚಾರಣೆ ನಡೆದು ಜೂನ್‌ನಲ್ಲಿ ತೀರ್ಪು ಬಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯ್ತು.

ದತ್ತಾ ಪರವಾಗಿ ಅಸಫ್ ಅಲಿ ವಾದಿಸಿದರೆ ಭಗತ್ ತನ್ನ ಕೇಸನ್ನು ತಾನೇ ವಾದಿಸಿದ. ವಿಚಾರಣೆಯನ್ನು ತಮ್ಮ ತತ್ವ, ಸಂದೇಶವನ್ನು ಸಮಾಜಕ್ಕೆ ಸಾರಲು ಬಳಸಿಕೊಳ್ಳಬೇಕು ಎಂದುಕೊಂಡ. ರಾಷ್ಟ್ರವಾದಿ ವಕೀಲರ ಸಲಹೆಗಳನ್ನು ತೆಗೆದುಕೊಂಡರೂ ತನ್ನ ಪರ ವಾದಿಸಲು ಯಾರೂ ವಕೀಲರು ಬೇಡವೆಂದು ಹೇಳಿದ. ಅವರ ವಕೀಲರು ಅವರೇ.ವಿಚಾರಣೆ ಸಮಯದಲ್ಲಿ ಹೇಳಿದರು:

‘ನಾವು ಇತಿಹಾಸ ಮತ್ತು ವರ್ತಮಾನವನ್ನು ಗಂಭೀರವಾಗಿ ಅಭ್ಯಸಿಸುವ ನಮ್ರ ವಿದ್ಯಾರ್ಥಿಗಳಲ್ಲದೇ ಬೇರೆಯಲ್ಲ. ಆಷಾಡಭೂತಿತನವನ್ನು ನಾವು ವಿರೋಧಿಸುತ್ತೇವೆ. ನಮ್ಮ ಪ್ರತಿಭಟನೆ ಈ ವ್ಯವಸ್ಥೆಯ ವಿರುದ್ಧ. ಯಾವ ವ್ಯವಸ್ಥೆ ತನ್ನ ಅಯೋಗ್ಯತೆಯನ್ನು, ಕೇಡಿಗತನವನ್ನೂ ಮೊದಲಿನಿಂದ ತೋರಿಸುತ್ತ ಬಂದಿದೆಯೋ; ಭಾರತವನ್ನು ಅವಮಾನಿಸುತ್ತ, ಅಸಹಾಯಕಗೊಳಿಸುತ್ತ ಬಂದಿದೆಯೋ; ಬೇಜವಾಬ್ದಾರಿಯ ನಿರಂಕುಶಪ್ರಭುತ್ವವನ್ನು ಭಾರತದ ಮೇಲೆ ಹೇರಿದೆಯೋ ಅದರ ವಿರುದ್ಧ. ಕಾಲಕಾಲಕ್ಕೆ ಜನಪ್ರತಿನಿಧಿಗಳು ತಮ್ಮ ಬೇಡಿಕೆಗಳ ಸಲ್ಲಿಸುತ್ತಲೇ ಬಂದರೂ ಅವೆಲ್ಲ ಕೇವಲ ಕಸದ ಬುಟ್ಟಿಯಲ್ಲಷ್ಟೇ ಜಾಗ ಪಡೆಯಲು ಸಾಧ್ಯವಾಯಿತು. ಎಂದೇ ಯಾವ ಬೆಲೆ ತೆತ್ತಾದರೂ ಸರಿ ನಾವು ಹೀಗೆ ಮಾಡುವುದೆಂದು ನಿರ್ಧರಿಸಿದೆವು ಹಾಗೂ ಆ ಮೂಲಕ ಸಾಮ್ರಾಜ್ಯಶಾಹಿ ಶೋಷಕರಿಗೆ ವ್ಯಕ್ತಿಯನ್ನು ಕೊಲ್ಲಬಹುದು ಆದರೆ ಆದರ್ಶಗಳನ್ನಲ್ಲ ಎಂದು ಹೇಳಬಯಸಿದೆವು..’

ಹೀಗೆ ಬಾಂಬ್ ಸ್ಫೋಟದಂತಹ ಪ್ರಯೋಗವನ್ನು ತಾವು ಏಕೆ ಆಯ್ದುಕೊಂಡೆವು ಎಂದು ಹೇಳುತ್ತಾ, ಕೊನೆಗೆ ಕ್ರಾಂತಿ ಎಂದರೇನು ಎಂದೂ ಹೇಳುತ್ತಾರೆ. ಅವರ ಪ್ರಕಾರ,

‘ಈ ಇಡೀ ನಾಗರಿಕತೆ ಸೂಕ್ತ ಸಮಯದಲ್ಲಿ ರಕ್ಷಿಸಲ್ಪಡದಿದ್ದರೆ ಪತನಗೊಳ್ಳುತ್ತದೆ. ಒಂದು ತೀವ್ರವಾದ, ತತ್‌ಕ್ಷಣದ ಬದಲಾವಣೆ ಅತ್ಯಂತ ಅವಶ್ಯವಿದೆ. ಇದನ್ನು ಅರಿತವರು ಸಮಾಜವನ್ನು ಸಮಾಜವಾದದ ತತ್ವಗಳ ಆಧಾರದ ಮೇಲೆ ಪುನರ್ ಸಂಘಟಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಆಗದಿದ್ದರೆ, ಮನುಷ್ಯ ಮನುಷ್ಯನನ್ನು, ದೇಶ ದೇಶವನ್ನು ಶೋಷಿಸುವುದು ನಿಲ್ಲದಿದ್ದರೆ, ಮಾನವಕುಲವನ್ನು ಅಪಾಯದಲ್ಲಿ ನಿಲ್ಲಿಸಿರುವ ಕಷ್ಟವನ್ನು ತಡೆಯಲಾಗುವುದಿಲ್ಲ. ಇಲ್ಲದಿದ್ದರೆ ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ನೆಲೆಸುವಂತೆ ಮಾಡುವ ಎಲ್ಲ ಮಾತುಗಳೂ ಹುಸಿಯಾಗುತ್ತವೆ.

ಕ್ರಾಂತಿಯೆಂದರೆ ಕುಸಿಯಲಾರದಂತಹ ಒಂದು ಸಮಾಜ ಸೃಷ್ಟಿಸಲು ಅವಶ್ಯ ಬದಲಾವಣೆ ತರುವ ವ್ಯವಸ್ಥೆ. ಅಲ್ಲಿ ಶ್ರಮಿಕನ ಸಾರ್ವಭೌಮತ್ವವಿರುತ್ತದೆ. ಬಂಡವಾಳ ಮತ್ತು ಸಾಮ್ರಾಜ್ಯಶಾಹಿ ಯುದ್ಧದ ಹಿಂಸೆಯಿಂದ ಅದು ಮನುಷ್ಯಕುಲವನ್ನು ಮುಕ್ತಗೊಳಿಸುತ್ತದೆ.

ಇದು ನಮ್ಮ ಆದರ್ಶ. ಈ ಆದರ್ಶವನ್ನು ಸ್ಫೂರ್ತಿಯಾಗಿಟ್ಟುಕೊಂಡು ಒಂದು ದೊಡ್ಡ ಎಚ್ಚರಿಕೆಯನ್ನು ನೀಡಿದ್ದೇವೆ.’

ಮಲಿನ ಗಂಗೆಯೂ ಮತ್ತು ಮೋದಿಯೆಂಬ ಆಧುನಿಕ ಭಗೀರಥನೂ..


-ಡಾ.ಎನ್. ಜಗದೀಶ್ ಕೊಪ್ಪ


 

ಮಲಿನ ಗಂಗೆಯೂ ಮತ್ತು ಮೋದಿಯೆಂಬ ಆಧುನಿಕ ಭಗೀರಥನೂ..

ಇದೇ ಸೆಪ್ಟಂಬರ್ ಮೂರರಂದು ಗಂಗಾ ನದಿಯ ಶುದ್ಧೀ ಕರಣ ಯೋಜನೆಯ ನೀಲನಕ್ಷೆ ಮತ್ತು ರೂಪುರೇಷೆಗಳ ಕುರಿತಂತೆ 29 ಪುಟಗಳ ವರದಿ ರೂಪದ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿತು. ಸರಕಾರದ ಪರವಾಗಿ ಅಭಿಯೋಜಕರು ಪ್ರಮಾಣ ಪತ್ರ ಸಲ್ಲಿಸಿದ ಸಂದರ್ಭದಲ್ಲಿ, 1986ರಿಂದ ಇಲ್ಲಿಯವರೆಗೆ ವ್ಯಯವಾಗಿರುವ ಹಾಗೂ ಗಂಗಾ ನದಿಯಲ್ಲಿ ಕೊಳೆಯಂತೆ ಕೊಚ್ಚಿ ಹೋಗಿರುವ 20 ಸಾವಿರ ಕೋಟಿ ರೂಪಾಯಿ ಬಗ್ಗೆ ಆತಂಕ ಮತ್ತು ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಥಾಕೂರ್ ಮತ್ತು ಭಾನುಂ ಅವರು, ‘‘ನಿಮ್ಮ ಈ ನೀಲ ನಕ್ಷೆ ಕಲಾವಿದನೊಬ್ಬನ ಕಲ್ಪನೆಯಂತಿದೆ, ವಾಸ್ತವಿಕ ಚಿತ್ರಣವಿಲ್ಲ’’ ಎಂದು ಟೀಕಿಸಿದರಲ್ಲದೆ, ‘‘ಇನ್ನೂ ಎರಡು ಶತಮಾನ ಕಳೆದರೂ ಗಂಗಾ ನದಿಯನ್ನು ಶುದ್ಧೀಕರಿಸಲು ನಿಮ್ಮಿಂದ ಸಾಧ್ಯವಿಲ್ಲ’’ ಎಂದು ಕೇಂದ್ರ ಸರಕಾರಕ್ಕೆ ಚಾಟಿ ಏಟು ಬೀಸಿದರು. ನ್ಯಾಯಮೂರ್ತಿಗಳ ಈ ಕಟು ಟೀಕೆಯ ಹಿಂದೆ, ದೇಶದ ಜಲಮೂಲಗಳು ಮತ್ತು ನದಿಗಳು ಕಲುಷಿತಗೊಂಡ ಬಗ್ಗೆ ಆತಂಕದ ಮತ್ತು ನೋವಿನ ಭಾವನೆಗಳಿದ್ದುದನ್ನು ನಾವು ತಳ್ಳಿಹಾಕುವಂತಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ನದಿಯ ಪಾಪದ ಕೊಳೆ ತೊಳೆಯಲು ಮುಂದಾಗಿದ್ದಾರೆ. ಅವರ ಈ ಸಾಹಸ ನಿಜಕ್ಕೂ ಮೆಚ್ಚುವಂತಹದ್ದು. ಆದರೆ ಪ್ರಧಾನಿಯವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ‘ಅಭಿವೃದ್ಧಿ’ ಎಂಬ ಪದದ ವ್ಯಾಖ್ಯಾನ ಬದಲಾಗಿ ವಿಕೃತಗೊಂಡಿರುವ ಈ ಸಂದರ್ಭದಲ್ಲಿ ಪರಿಸರ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಿನಿಕತನವೆಂಬಂತೆ ತೋರುತ್ತಿರುವ ಈ ದಿನಗಳಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುವುದು ಅಥವಾ ಬರೆಯುವುದೂ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ.

 ಇಪ್ಪತ್ತೊಂದನೆಯ ಶತಮಾನದ ಅತ್ಯಾಧುನಿಕ ಬದುಕಿನ ಈ ದಿನಗಳಲ್ಲಿ ಉಪಭೋಗದಲ್ಲಿ ಮುಳುಗಿ ಏಳುತ್ತಿರುವವರ ದೃಷ್ಟಿಕೋನದಲ್ಲಿ ನಿಸರ್ಗದ ಕೊಡುಗೆಗಳು ಇರುವುದು ನಮ್ಮ ವೈಯಕ್ತಿಕ ಉಪಭೋಗಕ್ಕೆ ಎಂಬಂತಾಗಿದೆ. ಅಭಿವೃದ್ಧಿಯ ಪರಿಕಲ್ಪನೆಯೇ ವಿಕಾರದ ಸ್ವರೂಪ ಪಡೆದಿರುವ ಈ ದಿನಗಳಲ್ಲಿ ವರ್ತಮಾನದ ಜಗತ್ತನ್ನು ನೋಡಲು ನಮಗಿರುವ ಎರಡು ಕಣ್ಣುಗಳಷ್ಟೇ ಸಾಲದು, ಹೃದಯದ ಒಳಗಣ್ಣನ್ನು ಸಹ ತೆರೆದು ನೋಡಬೇಕಾಗಿದೆ. ಅಕಸ್ಮಾತ್ ನಮ್ಮ ನಡುವಿನ ಈ ಜೀವನದಿಗಳಿಗೆ ಮಾತು ಅಥವಾ ಅಕ್ಷರ ಬಂದಿದ್ದರೆ, ಲಿಖಿತ ಇಲ್ಲವೆ ಮೌಖಿಕ ಪಠ್ಯದ ರೂಪದಲ್ಲಿ ಮನುಕುಲದ ಬೃಹತ್ ಹೀನ ಚರಿತ್ರೆಯೊಂದು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿತ್ತು.

(Ganga Action Plan)   ಮನುಷ್ಯನ ಏಳುಬೀಳುಗಳಿಗೆ, ಸಾಮ್ರಾಜ್ಯದ ಉದಯ ಮತ್ತು ಪತನಗಳಿಗೆ, ಅರಮನೆ ಮತ್ತು ಗುಡಿಸಲುಗಳ ದುಃಖ ದುಮ್ಮಾನಗಳಿಗೆ, ಜನಸಾಮಾನ್ಯರ ನಿಟ್ಟುಸಿರುಗಳಿಗೆ ಮೌನ ಸಾಕ್ಷಿಯಾಗಿ, ಶತಮಾನಗಳುದ್ದಕ್ಕೂ ತಣ್ಣಗೆ ಹರಿದ ನದಿಗಳ ಒಡಲೊಳಗೆ ಎಂತಹ ಚರಿತ್ರೆಗಳಿರಬಹುದು? ಒಮ್ಮೆ ಯೋಚಿಸಿನೋಡಿ. ಇಂತಹ ಬೃಹತ್ ಚರಿತ್ರೆಯನ್ನು ತನ್ನೊಡಲೊಳಗೆ ಪೋಷಿಸಿಕೊಂಡು ಬಂದಿರುವ ನಮ್ಮ ಗಂಗಾ ನದಿಯ ದುರಂತ ಕಥನ ಅಕ್ಷರ ಮತ್ತು ಮಾತಿಗೆ ಮೀರುವಂತಹದ್ದು. ಜಗತ್ತಿನ ಮಹಾ ನದಿಗಳಾದ ನೈಲ್ ಮತ್ತು ಅಮೆಜಾನ್ ನದಿಗಳ ಜೊತೆ ಪ್ರಖ್ಯಾತಿ ಹೊಂದಿರುವ ಗಂಗಾ ನದಿಗೆ ಅಂಟಿಕೊಂಡ ಪುರಾಣ ಕಥೆಗಳು, ಐತಿಹ್ಯಗಳು, ಧಾರ್ಮಿಕ ನಂಬಿಕೆಗಳು, ಅದರ ಆಳ, ಉದ್ದ, ವಿಸ್ತಾರ ಇವೆಲ್ಲವೂ ಶಾಪವಾಗಿ ಪರಿಣಮಿಸಿದವು.ಇತ್ತೀಚೆಗಿನ ದಿನಗಳಲ್ಲಿ ತನ್ನದಲ್ಲದ ತಪ್ಪಿಗೆ, ಧರ್ಮದ ಹೆಸರಿನಲ್ಲಿ, ನಂಬಿಕೆ ಮತ್ತು ಆಚರಣೆಗಳ ನೆಪದಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಮೂಕ ಹೆಣ್ಣಿನಂತೆ, ಕಲುಷಿತಗೊಂಡಿರುವ ಗಂಗೆ ಮತ್ತೆ ಸುದ್ದಿಯಲ್ಲಿದ್ದಾಳೆ. ವಾರಾಣಾಸಿ ಕ್ಷೇತ್ರದಿಂದ ಲೋಕ ಸಭೆಗೆ ಚುನಾಯಿತರಾಗಿ ಪ್ರಧಾನಿ ಗದ್ದುಗೆ ಏರಿರುವ ನರೇಂದ್ರ ಮೋದಿ, ಗಂಗೆಯನ್ನು ಶುದ್ಧೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡು, ಹೊಸ ಹುರುಪಿನಿಂದ ಹೊರಟಿದ್ದಾರೆ. ಒಂದು ಕಾಲದಲ್ಲಿ ಪಾಪವಿನಾಶಿನಿ ಎಂದು ಹೆಸರಾಗಿದ್ದ ಗಂಗೆ ಇಂದು ತನ್ನ ಮೋಕ್ಷಕ್ಕಾಗಿ ಕಾಯುತ್ತಿದ್ದಾಳೆ. 1986ರಲ್ಲಿ ಅಂದಿನ ಪ್ರಧಾನಿ ರಾಜೀವಗಾಂಧಿಯವರ ಕಾಲದಲ್ಲಿ ಗಂಗಾ ನದಿಯ ಶುದ್ಧೀಕರಣ ಯೋಜನೆಯಾದ ‘ಗಂಗಾ ಕ್ರಿಯಾ ಯೋಜನೆ’ ಕಳೆದ 38 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಇದೊಂದು ಆಳುವ ಸರ್ಕಾರಗಳ ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳ ಪಾಲಿಗೆ ಲಾಭದಾಯಕ ಉದ್ಯಮವಾದಂತಿದೆ. ಆಧುನಿಕ ಭಗೀರಥನಂತೆ ಗಂಗೆಯನ್ನು ಶುದ್ಧೀಕರಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಮೆಚ್ಚಬಹುದಾದರೂ, ವಾಸ್ತವವಾಗಿ ಇದು ಸಾಧ್ಯವೆ? ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ಕಡೆ ಅಭಿ ವೃದ್ಧಿಯ ಮಂತ್ರ ಜಪಿಸುತ್ತಾ, ಮತ್ತೊಂದೆಡೆ ಬಂಡವಾಳಶಾಹಿ ಜಗತ್ತಿಗೆ ಕೆಂಪುಗಂಬಳಿಯನ್ನು ಹಾಸುತ್ತಾ, ಪರಿಸರ ರಕ್ಷಣೆಯ ಮಾತನಾಡುತ್ತಿರುವುದು ದ್ವಂದ್ವ ನೀತಿಯಂತೆ ಕಾಣುತ್ತಿದೆ. ಏಕೆಂದರೆ, ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ನಂತರ ಪರಿಸರ ಸ್ನೇಹಿ ಚಿಂತನೆಗಳು ಅಥವಾ ನಿಸರ್ಗಕ್ಕೆ ಎರವಾಗದಂತಹ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಸಣ್ಣ ಕೈಗಾರಿಕೆಯ ಆಶಯಗಳು ಗಾಂಧೀಜಿ ಹಾಗೂ ಅವರ ಹಿಂಬಾಲಕರಾದ ಶೂ ಮಾಕರ್ ಮತ್ತು ಜೆ.ಸಿ. ಕುಮಾರಪ್ಪನವರ ಜೊತೆ ಮಣ್ಣಾಗಿವೆ. ಹಾಗಾಗಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ, ಸ್ಮಾರ್ಟ್ ಸಿಟಿಗಳೆಂಬ (ಅತ್ಯಾಧುನಿಕ ಸುಂದರ ನಗರ) ಕನಸು ಬಿತ್ತುತ್ತಾ, ‘‘ನೈಸರ್ಗಿಕ ಪರಿಸರವನ್ನು, ಜಲಮೂಲ ತಾಣಗಳನ್ನು ನನ್ನ ಸರಕಾರ ರಕ್ಷಿಸಲು ಸಿದ್ಧ’’ ಎನ್ನುವ ನರೇಂದ್ರ ಮೋದಿಯವರ ಮಾತುಗಳನ್ನು ನಾವು ಗುಮಾನಿಯಿಂದಲೇ ನೋಡಬೇಕಾಗುತ್ತದೆ.

ಸಮುದ್ರ ಮಟ್ಟದಿಂದ 12 ಸಾವಿರ ಎತ್ತರದ ಹಿಮಾಲಯ ತಪ್ಪಲಲ್ಲಿ ಹುಟ್ಟುವ ಈ ರಾಷ್ಟ್ರೀಯ ನದಿ, 255 ಕಿಲೋಮೀಟರ್ ಉದ್ದ ಕೆಳಭಾಗಕ್ಕೆ ದಕ್ಷಿಣಾಮುಖವಾಗಿ ಭಾಗೀರಥಿ ನದಿಯಾಗಿ ಹರಿದು, ಉತ್ತರಾಖಂಡದ ರುದ್ರಪ್ರಯಾಗದ ಸಮೀಪ ಅಲಕಾನಂದಾ ಮತ್ತೆ ಮಂದಾಕಿನಿ ನದಿಗಳನ್ನು ಕೂಡಿಕೊಂಡು ಗಂಗಾನದಿಯಾಗಿ ಹರಿಯುತ್ತದೆ. ನಂತರ ಅಲಹಾಬಾದ್ ನಗರದಲ್ಲಿ ಮತ್ತೊಂದು ಪ್ರಮುಖ ನದಿಯಾದ ಯಮುನೆಯನ್ನು ಸೇರಿಕೊಂಡು, 2500 ಕಿಲೋ ಮೀಟರ್ ಉದ್ದ ಹರಿಯುತ್ತಾ ಈ ದೇಶದ 42 ಕೋಟಿ ಜನರ ಪಾಲಿಗೆ ಜೀವನಾಡಿಯಾಗಿದೆ. ಪ್ರತಿ ದಿನ ಈ ನದಿಯಲ್ಲಿ ಒಂದು ಕೋಟಿ ಹಿಂದೂ ಭಕ್ತರು ಪವಿತ್ರ ಸ್ನಾನದ ಹೆಸರಿನಲ್ಲಿ ಮುಳುಗಿ ಏಳುತ್ತಿದ್ದಾರೆ. ತಾನು ಹರಿಯುವ ಐದು ರಾಜ್ಯಗಳಾದ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಜನರ ನೀರಿನ ದಾಹ ತೀರಿಸಿ, ಅವರ ಕೃಷಿ ಭೂಮಿಗೆ ನೀರುಣಿಸಿ, ಅವರು ವಿಸರ್ಜಿಸಿದ ಮಲ, ಮೂತ್ರ ಮತ್ತು ಅಪಾಯಕಾರಿ ವಿಷಯುಕ್ತ ತ್ಯಾಜ್ಯಗಳನ್ನು ಹೊತ್ತು ಕೊಲ್ಕತ್ತ ನಗರದ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಕಡಲು ಸೇರುವ ಗಂಗಾ ನದಿಯು ಈಗ ಭಾರತದ ಜನತೆಯ ಪಾಲಿಗೆ ಜೀವನದಿಯಾಗುವ ಬದಲು ವಿಷಕನ್ಯೆಯಾಗಿ ಪರಿವರ್ತನೆ ಹೊಂದಿದೆ.

 ಕಳೆದ 25 ವರ್ಷಗಳಲ್ಲಿ ನದಿಗೆ ಸೇರುತ್ತಿರುವ ತ್ಯಾಜ್ಯದ ಪ್ರಮಾಣ ಮೂರು ಸಾವಿರ ಪಟ್ಟು ಹೆಚ್ಚಾಗಿದೆ. ಈ ಕೆಳಗಿನ ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪ್ರತಿ ದಿನ ಉತ್ತರಾಖಂಡದ 14 ಮಹಾನ್ ನಗರಗಳ ಚರಂಡಿ ಅಥವಾ ಗಟಾರಗಳಿಂದ 440 ದಶಲಕ್ಷ ಲೀಟರ್ ಕೊಳಚೆ ನೀರು, 42 ಟನ್ ಕಸ ಹಾಗೂ ಉತ್ತರ ಪ್ರದೇಶದ 45 ನಗರಗಳ ಗಟಾರಗಳಿಂದ 3289 ದಶಲಕ್ಷ ಲೀಟರ್ ಕೊಳಚೆ ಮತ್ತು 761 ಟನ್ ಕಸ ಗಂಗೆಯ ಒಡಲು ಸೇರುತ್ತಿದೆ. ಅದೇ ರೀತಿ ಬಿಹಾರದಲ್ಲಿ 25 ಗಟಾರಗಳಿಂದ 579 ದಶಲಕ್ಷ ಲೀಟರ್ ಕೊಳಚೆ ಮತ್ತು 99 ಟನ್ ಕಸ ಮತ್ತು ಪಶ್ಚಿಮ ಬಂಗಾಳ ರಾಜ್ಯದ 54 ಗಟಾರಗಳಿಂದ 1779 ದಶಲಕ್ಷ ಲೀಟರ್ ಕೊಳಚೆ, 97 ಟನ್ ಕಸ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನಲ್ಲಿ ಆಮ್ಲಜನಕದ ಬಿಡು ಗಡೆಯ ಪ್ರಮಾಣ ಮೈನಸ್ ಆರಕ್ಕೆ ಕುಸಿದಿದೆ. ಗಂಗಾ ನದಿಯ ಒಡಲು ಸೇರುತ್ತಿರುವ ಕೊಳಚೆ ನೀರು ಮತ್ತು ವಿಷಯುಕ್ತ ವಸ್ತುಗಳಲ್ಲಿ ಜವಳಿ ಉದ್ಯಮದಿಂದ ಶೇಕಡ 2, ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಶೇಕಡ 5, ಸಕ್ಕರೆ ಕಾರ್ಖಾನೆಗಳಿಂದ ಶೇಕಡ 19, ರಸಾಯನಿಕ ಕಾರ್ಖಾನೆಗಳಿಂದ ಶೇಕಡ 20, ಮದ್ಯಸಾರ ತಯಾರಿಸುವ ಡಿಸ್ಟಲರಿಗಳಿಂದ ಶೇಕಡ 7ರಷ್ಟು, ಕಾಗದ ಕಾರ್ಖಾನೆಗಳಿಂದ ಶೇಕಡ 40ರಷ್ಟು, ಆಹಾರ ಮತ್ತು ತಂಪು ಪಾನಿಯ ಘಟಕಗಳಿಂದ ಶೇಕಡ 1ರಷ್ಟು ಮತ್ತು ಇತರೆ ಘಟಕಗಳ ಶೇಕಡ 6ರಷ್ಟು ಪಾಲು ಇದೆ ಎಂದು ವಿಜ್ಞಾನಿಗಳು ಅಧ್ಯಯನದಿಂದ ದೃಢಪಡಿಸಿದ್ದಾರೆ. ಹೀಗಾಗಿ ದಿನವೊಂದಕ್ಕೆ 138 ಮಹಾನ್ ಚರಂಡಿಯ ಕಾಲುವೆಗಳಿಂದ 6087 ದಶಲಕ್ಷ ಲೀಟರ್ ಕೊಳಚೆ ಮತ್ತು 999 ಟನ್ ಕಸ ಗಂಗಾ ನದಿಯ ಪಾಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ನಮ್ಮನ್ನಾಳುವ ಸರಕಾರಗಳಿಗೆ ಕೈಗಾರಿಕಾ ನೀತಿಯಲ್ಲಿ ಕಡಿವಾಣವಿಲ್ಲದ ಅವಿವೇಕತನ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಗಂಗಾನದಿಯ ಪಾಲಿಗೆ ಶತ್ರುಗಳಾಗಿವೆ. ಅಕ್ರಮ ಸಂತಾನದಿಂದ ಹುಟ್ಟಿದ ಹಸುಗೂಸುಗಳು, ಸತ್ತು ಹೋದ ದನಕರುಗಳ ಕಳೇಬರಗಳು ಹಾಗೂ ಗಂಗಾ ನದಿಗೆ ಎಸೆದರೆ, ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಮೂಡ ನಂಬಿಕೆಗಳಿಂದ ನದಿಗೆ ಬಿಸಾಡಿದ ಹೆಣಗಳು ಇವೆಲ್ಲವನ್ನೂ ನೋಡಿದರೆ, ಪುಣ್ಯ ನದಿ ಎನಿಸಿಕೊಳ್ಳುವ, ಪಾಪನಾಶಿನಿ ಎನ್ನುವ ಗಂಗೆಯ ನೀರನ್ನು ಕೊಲ್ಕತ್ತ ನಗರದ ಬಳಿ ಕೈಯಿಂದ ಮುಟ್ಟಲು ಅಸಹ್ಯವಾಗುತ್ತದೆ. ರುದ್ರಪ್ರಯಾಗದ ಬಳಿ ಸ್ಫಟಿಕದ ನೀರಿನಂತೆ ಹರಿಯುವ ಗಂಗಾನದಿ, ಕೊಲ್ಕತ್ತ ನಗರದ ತಟದಲ್ಲಿ ಹೂಗ್ಲಿ ನದಿ ಹೆಸರಿನಲ್ಲಿ ಕಪ್ಪಗೆ ಹರಿಯುತ್ತದೆ. ಕೊಲ್ಕತ್ತದ ಹೌರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಬೇಲೂರು ಮಠದ ರಾಮಕೃಷ್ಣ ಆಶ್ರಮದ ಹಿಂದೆ ಹರಿಯುವ ಗಂಗಾ ನದಿಯ ನೀರು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ.

ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, 1378 ಕಿಲೋಮೀಟರ್ ಉದ್ದ ಹರಿಯುವ ಯಮುನಾ ನದಿ, ದೆಹಲಿ ಮತ್ತು ಆಗ್ರಾ ನದಿಯ ಸಮಸ್ತ ಕೊಳಚೆ ಯನ್ನು ತಂದು ಅಲಹಾಬಾದಿನ ಸಂಗಮದ ಬಳಿ ಗಂಗೆಯೊಂದಿಗೆ ವಿಲೀನಗೊಳ್ಳುವುದರ ಮೂಲಕ ತನ್ನ ಪಾಲಿನ ವಿಷವನ್ನು ಗಂಗೆಗೆ ಧಾರೆಯೆರೆಯುತ್ತಿದೆ. ಉತ್ತರ ಪ್ರದೇಶದ ಪಿಬಿಟ್ ಬಳಿಯ ಗೋಮತಿ ತಾಲ್ (ಸರೋವರ) ನಲ್ಲಿ ಹುಟ್ಟುವ ಗೋಮತಿ ನದಿ 600 ಕಿ.ಮೀ.ದೂರ ಹರಿದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರ ಸೇರಿದಂತೆ, ಸುಲ್ತಾನ್ ಪುರ್, ಭಾನುಪುರ್ ಪಟ್ಟಣಗಳ ಕೊಳಚೆಯನ್ನು ತಂದು ಗಾಜಿಪುರ್ ಬಳಿ ಗಂಗೆಯನ್ನು ಸೇರುತ್ತದೆ.

ಜಾರ್ಖಂಡ್ ರಾಜ್ಯದ ಪಾಲಮು ಎಂಬಲ್ಲಿ ಹುಟ್ಟುವ ದಾಮೋದರ್ ನದಿ 600 ಕಿ.ಮೀ. ಹರಿದು, ಜಾರ್ಖಾಂಡ್ ರಾಜ್ಯದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಹೊರ ಹಾಕಿದ ಕೊಳಚೆಯನ್ನು ತಂದು ಪಶ್ಚಿಮ ಬಂಗಾಳದ ಹೂಗ್ಲಿ ಬಳಿ ಗಂಗೆಯೊಂದಿಗೆ ಕೂಡಿಕೊಳ್ಳುತ್ತದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಜನ್ಮ ತಾಳುವ ಮಹಾನಂದ ನದಿ 360 ಕಿ.ಮೀ. ಹರಿದು ಸಿಲು ಗುರಿ ನಗರ ಕೊಳಚೆ ಹೊತ್ತು ಬಾಂಗ್ಲಾದೇಶದ ಗಡಗಿರಿ ಎಂಬಲ್ಲಿ ಗಂಗಾನದಿಯನ್ನು ಸೇರಿಕೊಳ್ಳತ್ತದೆ. ಹಿಮಾಲಯದ ಕಾಲಾಪಾನಿ ಎಂಬಲ್ಲಿ ಹುಟ್ಟುವ ಗಾಗಾರ ನದಿ 323 ಕಿ.ಮೀ. ಹರಿದು ಬಿಹಾರದ ಡೋರಿಗಂಜ್ ಬಳಿ ಗಂಗಾ ನದಿಯನ್ನು ಸೇರಿದರೆ, ಬಿಹಾರದ ‘ದುಃಖದ ನದಿ’ ಎಂದು ಕರೆಯಲ್ಪಡುವ ಕೋಶಿ ನದಿ, ನೇಪಾಳ ಮತ್ತು ಭಾರತದ ಗಡಿಭಾಗದಲ್ಲಿ ಜನಿಸಿ, 729 ಕಿ.ಮೀ. ಹರಿದು ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ಎರಡು ನದಿಗಳಿಂದ ಗಂಗಾ ನದಿಗೆ ಕೊಳಚೆ ಮತ್ತು ಕಸ ಸೇರುತ್ತಿ ರುವ ಪ್ರಮಾಣದಲ್ಲಿ ಶೇಕಡ 16 ರಷ್ಟು ಕೊಡುಗೆ ಇದೆ. ಹೀಗೆ ಉಪ ನದಿಗಳ ಕೊಡುಗೆಯ ಜೊತೆಗೆ ವಿಷಕನ್ಯೆಯಾಗಿ ಹರಿ ಯುತ್ತಿರುವ ಗಂಗಾ ನದಿಯ ಶುದ್ಧೀಕರಣ ಕಾರ್ಯಯೋಜನೆ ನಿನ್ನೆ ಮೊನ್ನೆಯ ದಲ್ಲ. ಇದಕ್ಕೆ 27 ವರ್ಷಗಳ ಸುಧೀರ್ಘ ಇತಿಹಾಸವಿದೆ. 1985 ರಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಗಂಗಾ ಕ್ರಿಯಾ ಯೋಜನೆ
(Ganga Action Plan) ಎಂಬ ಯೋಜನೆಯಡಿ ನದಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು 450 ಕೋಟಿ ರೂ. ಹಣ ನೀಡಿ ಹಸಿರು ನಿಶಾನೆ ತೋರಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಗಂಗಾ ನದಿಯ ಶುದ್ಧೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಿಸಿ, ಸಲಹೆ ನೀಡುವ ಕಂಪನಿಗಳಿಗೆ 1,100 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆ.

ಗಂಗಾ ನದಿಯ ತಟದಲ್ಲಿರುವ ನಗರ ಮತ್ತು ಪಟ್ಟಣ ಗಳ ಕೊಳಚೆ ನೀರನ್ನು ಸಂಸ್ಕರಿಸಿ ನದಿಗೆ ಬಿಡುವುದು, ಕಾರ್ಖಾನೆಗಳ ತ್ಯಾಜ್ಯವನ್ನು ತಡೆಗಟ್ಟುವುದು, ಮತ್ತು ಎಲ್ಲಾ ಪಟ್ಟಣಗಳ, ನಗರಗಳ ಒಳಚರಂಡಿಗಳನ್ನು ದುರಸ್ತಿ ಪಡಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಂದ ಸೃಷ್ಟಿಯಾಗುವ ಕಸ ಮತ್ತು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಗ್ರಹಿಸಿ ಸಂಸ್ಕರಿಸುವುದು ಹೀಗೆ ನೂರಾರು ಯೋಜನೆಗಳ ಕನಸುಗಳನ್ನು ಯೋಜನೆಯ ಸಂದರ್ಭದಲ್ಲಿ ಹರಿಯ ಬಿಡಲಾಯಿತು. ಆದರೆ, ಸರಕಾರಗಳ ನಿರ್ಲಕ್ಷ ಮತ್ತು ವಿದ್ಯುತ್ ಅಭಾವದಿಂದ ಬಹುತೇಕ ಸಂಸ್ಕರಣಾ ಘಟಕಗಳು ಸ್ಥಗಿತಗೊಂಡಿವೆ.

   ಹಿಂದೂ ಧರ್ಮದ ಭಕ್ತರ ಪಾಲಿಗೆ ಸ್ವರ್ಗಕ್ಕೆ ಇರುವ ಏಕೈಕ ಹೆಬ್ಬಾಗಿಲು ಎಂದು ನಂಬಿಕೆ ಪಾತ್ರವಾಗಿರುವ ವಾರಾಣಾಸಿಯಲ್ಲಿ ದಿನವೊಂದಕ್ಕೆ 350 ದಶಲಕ್ಷ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಸಂಸ್ಕರಿಸುವ ಸಾಮರ್ಥ್ಯ ಕೇವಲ 122 ದಶಲಕ್ಷ ಲೀಟರ್ ಮಾತ್ರ. ಉಳಿದ ನೀರು ನೇರವಾಗಿ ನದಿಯ ಒಡಲು ಸೇರು ತ್ತಿದೆ. ಎರಡನೆಯ ಗಂಗಾ ನದಿಯ ಶುದ್ಧೀಕರಣ ಯೋಜನೆ ಕುಂಟುತ್ತಾ ಸಾಗಿದ ಪರಿಣಾಮ, 2009ರಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ರವರು ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿ, ರಾಷ್ಟ್ರೀಯ ನದಿ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದ್ದರು. ಈ ಮಂಡಳಿಯಲ್ಲಿ 24 ಮಂದಿ ತಜ್ಞರು ಸೇರಿದಂತೆ ಗಂಗಾ ನದಿ ಹರಿಯುವ ಐದು ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ನೀರಾವರಿ ಸಚಿವ ಮತ್ತು ಪರಿಸರ ಖಾತೆಯ ಸಚಿವರು ಸಹ ಸದಸ್ಯರಾಗಿರುತ್ತಾರೆ. 2011ರಲ್ಲಿ ನದಿ ಶುದ್ಧೀಕರಣಕ್ಕಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ವಿಶ್ವ ಬ್ಯಾಂಕ್ ನಿಂದ ಗಂಗಾ ನದಿಯ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಸಾಲದ ಒಡಂಬಡಿಕೆ ಏರ್ಪಟ್ಟಿದೆ. ಆದರೆ ನದಿಯ ಚಹರೆಯಾಗಲಿ, ಲಕ್ಷಣವಾಗಲಿ ಬದಲಾಗಲಿಲ್ಲ. ಬದಲಾಗುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಏಕೆಂದರೆ, ಜಗತ್ತಿನ ಪ್ರಮುಖ ಐದು ಮಲಿನ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಸದಾ ಹಣದ ಹಾಲು ಕರೆಯುವ ಹಸು. ಭಾರತದ ನದಿಗಳಲ್ಲಿ ಹರಿಯುವ ಕೊಳಚೆ ಮತ್ತು ಕಸ ಕೂಡ ನಮ್ಮ ರಾಜಕಾರಣಿಗಳು, ಪಕ್ಷಗಳಿಗೆ ಲಾಭದಾಯಕ ದಂಧೆಯಾಗಿದೆ. ಒಂದು ಕ್ವಾರ್ಟರ್ ಅಗ್ಗದ ಸಾರಾಯಿಗೆ, ಒಂದು ದೊನ್ನೆ ಮಾಂಸಕ್ಕೆ, ಮೂರು ಕಾಸಿನ ಕಳಪೆ ಸೀರೆಗೆ, ಮತ್ತು ಐದು ನೂರು ಆರತಿ ತಟ್ಟೆಯ ಕಾಸಿಗೆ ನಮ್ಮ ಜನ ಚುನಾವಣೆಗಳಲ್ಲಿ ಮಾರಾಟವಾಗುತ್ತಿರುವಾಗ, ರಾಜಕಾರಣಿಗಳು ಚುನಾವಣೆಗೆ ಹಾಕಿದ ಬಂಡವಾಳವನ್ನು ಯೋಜನೆ ಮುಖಾಂತರ ಬಡ್ಡಿ ಸಮೇತ ಹಿಂದಕ್ಕೆ ಪಡೆಯುತ್ತಿದ್ದಾರೆ. ಗಂಗೆ ಮಾತ್ರ ಮೌನವಾಗಿ ಮಲಿನಗೊಂಡು ಹರಿಯುತ್ತಿದ್ದಾಳೆ., ಮುಂದೆಯೂ ಹರಿಯುತ್ತಾಳೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...