Thursday, September 18, 2014

ಕಾಗದದ ದೋಣಿಗಳು




ರವೀಂದ್ರನಾಥ ಟ್ಯಾಗೋರ

ಕನ್ನಡಕ್ಕೆ : ಹೃದಯಶಿವ


ತೇಲಿ ಬಿಡುವೆನು ನಾನು ಕಾಗದದ ದೋಣಿಗಳ
ದಿನದಿಂದ ದಿನಕೆ ಕಿರುನದಿಯ ಮೇಲೆ
ಬರೆವೆನವುಗಳ ತುಂಬ ಕಪ್ಪಕ್ಷರಗಳಲ್ಲಿ
ನಾನಿರುವ ಈ ಊರು, ನನ್ನ ಹೆಸರು
ಇಹುದೆನಗೆ ನಂಬುಗೆಯು ಮುಂದೆ ನನ್ನರಿಯುವನು
ಗುರುತಿರದ ನೆಲದ ಗುರುತಿರದ ವ್ಯಕ್ತಿ
ತುಂಬುವೆನಿವುಗಳಲಿ ನಾ ನನ್ನ ತೋಟದ ಮೊಗ್ಗ
ನಂಬುವೆನು ಅರಳುವಿವು ಜಾವದಲ್ಲಿ

ತೇಲಿಬಿಡುವ ಕ್ಷಣ ನಾ ಕಾಗದದ ದೋಣಿಗಳ
ತಲೆಯೆತ್ತಿ ದಿಟ್ಟಿಸುವೆ ಆಗಸವನು
ಅಗೋ ಅಲ್ಲಿ ಕಿರುಮೋಡಗಳು ಸಜ್ಜುಗೊಳಿಸಿಹವು
ಉಬ್ಬೇರುವಂಥ ಬಿಳಿದೋಣಿಗಳನು
ದೋಣಿಯಾಟಕೆ ನನ್ನ ಜೊತೆಗೂಡಲೆಂದು ತಾ
ಯಾರಿಹನೊ ಬಾನಿನಲಿ ಕಾಣೆ ನಾನು
ತೇಲಿ ಬಿಡುವನು ಅಗೋ ಗಾಳಿಯಲಿ ದೋಣಿಗಳ
ಇಲ್ಲೀಗ ಸ್ಪರ್ಧೆ ಅವು ಇವುಗಳ ನಡುವೆ
ಮುಚ್ಚಿಕೊಳ್ಳುವೆ ಮುಖವ ನನ್ನವೇ ಕೈಗಳಲಿ
ರಾತ್ರಿ ಎರಗಿರಲೀಗ ಕತ್ತಲೊಡನೆ
ಕಾಣುವೆನು ಕನಸೀಗ, ಸಾಗುತ್ತಲಿಹವಲ್ಲಿ
ನಡುರಾತ್ರಿ ತಾರೆಗಳಡಿಯಲಿ ದೋಣಿ
ಯಕ್ಷಯಕ್ಷಿಣಿಯರೂ ನಿದ್ರಿಸಿಹರವುಗಳಲಿ
ತುಂಬಿ ತುಳುಕಿಹವಲ್ಲಿ ಕನಸಬುಟ್ಟಿ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...