Wednesday, September 10, 2014

ನಾವೆಲ್ಲ ಸೆಕ್ಯುಲರಿಸಂನಲ್ಲಿ ಇನ್ನೂ ಅಪ್ರೆಂಟಿಸ್‌ಗಳು- ಬಿ. ಶ್ರೀಪಾದ ಭಟ್

ವರ್ತಮಾನ

 

ಬಿ.ಎಂ. ಬಶೀರ್ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಆಡಿದ ಭಾಷಣದಲ್ಲಿ “ಬುರ್ಖಾ ಕುರಿತಾದ” ಮಾತುಗಳು ವಿವಾದಕ್ಕೆ ಈಡಾಗಿರುವುದು ನಿಜಕ್ಕೂ ಅನಗತ್ಯವಾಗಿತ್ತು. ಮೊದಲನೇಯದಾಗಿ ಈ “ಮುಸ್ಲಿಂ ಲೇಖಕರು” ಎಂದು ಅಸಂಬದ್ಧ, ಅರ್ಥಹೀನ ಹಣೆಪಟ್ಟಿಯನ್ನು ಒಪ್ಪಿಕೊಂಡಾಕ್ಷಣ ಮಿಕ್ಕವರೆಲ್ಲ “ಹಿಂದೂ ಲೇಖಕರು” ಮತ್ತು “ಇತರೇ ಧರ್ಮದ ಲೇಖಕರು” ಎನ್ನುವ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ ಮತ್ತು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ಇದರ ಕುರಿತಾಗಿ ತುಂಬಾ ಎಚ್ಚರದಿಂದ, ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಏಕೆಂದರೆ ಬಶೀರ್‌ರ ತೊಂದರೆ ಪ್ರಾರಂಭವಾಗುವುದೇ ಆವರು “ಮುಸ್ಲಿಂ ಲೇಖಕ” ಎನ್ನುವ ಹಣೆಪಟ್ಟಿಗೆ ಬಲಿಯಾಗಿದ್ದರಿಂದ. ಒಮ್ಮೆ ಬಲಿಯಾದ ನಂತರ ಇಡೀ ಧರ್ಮದ ಮೌಡ್ಯಕ್ಕೆ ಅವನೇ ಏಕಮಾತ್ರ ವಾರಸುದಾರನಗಿಬಿಡುವ ದುರಂತ ಇದು. ಇದು ಪ್ರತಿಯೊಬ್ಬ ಲೇಖಕನ ವಿಷಯದಲ್ಲೂ ನಿಜ. ಇಲ್ಲಿಯ ದುರಂತ ನೋಡಿ. ಈ “ಹಿಂದೂ ಲೇಖಕ/ಲೇಖಕಿ”ಯರು ಹಿಂದೂ ಧರ್ಮದ ಮೌಢ್ಯ ಆಚರಣೆಗಳನ್ನು ಟೀಕಿಸುತ್ತಲೇ “ಮುಸ್ಲಿಂ ಲೇಖಕ/ಲೇಖಕಿ” ಕಡೆಗೆ ತಿರುಗಿ ’ಕಮಾನ್, ನೀನು ನಿನ್ನ ಧರ್ಮದ ವಿರುದ್ಧ ಶುರು ಮಾಡು’ ಎಂದು ಆಹ್ವಾನ ಕೊಡುವ ಶೈಲಿಯಲ್ಲಿ ಬರೆಯುತ್ತಿರುವುದು, ಟೀಕಿಸುತ್ತಿರುವುದು ನನ್ನನ್ನು ದಂಗಾಗಿಸಿದೆ. ಡಿ.ಆರ್.ನಾಗರಾಜ್ ಹೇಳಿದ ಪಿತೃಹತ್ಯೆಯ ಸಿದ್ಧಾಂತವನ್ನು ಈ ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ನಿಜಕ್ಕೂ ಅರ್ಥ ಮಾಡಿಕೊಂಡಿದ್ದಾರೆಂದು ನನಗೇಕೋ ಅನಿಸುತ್ತ್ತಿಲ್ಲ.

basheer-book-release-dinesh-2

ನಾನು ಪ್ರಜ್ಞಾಪೂರ್ವಕವಾಗಿ ಸೆಕ್ಯುಲರ್ ಆಗುತ್ತಲೇ ನನ್ನೊಳಗೆ ಸಂಪೂರ್ಣ ಇಡೀ ಜಾತ್ಯಾತೀತತೆಯನ್ನು, ಈ ನಿಜದ ಸೆಕ್ಯುಲರ್ ಅನ್ನು ಮೈಗೂಡಿಸಿಕೊಳ್ಳುತ್ತಾ ಒಂದು ಸಹಜವಾದ ಸೆಕ್ಯುಲರ್ ಆದ, ಮಾನವತಾವಾದದ ಸ್ಥಿತಿಗೆ ತೆರಳುವುದು ಮತ್ತು ಅಲ್ಲಿಂದ ಮುಂದೆ ನಮ್ಮ ಸೆಕ್ಯುಲರ್ ನಡುವಳಿಕೆಗಳು ಸಹಜವಾಗಿಯೇ ಅಪ್ರಜ್ಞಾಪೂರ್ವಕವಾಗಿರುತ್ತವೆ ಮತ್ತು ಆಗಲೇ ನಾವು ನಿಜದ ಮಾನವರಾಗುವುದು. ಅಲ್ಲಿಯವರೆಗೆ ನಾವೆಲ್ಲಾ ಈ ಪ್ರಕ್ರಿಯೆಯಲ್ಲಿ ಕೇವಲ ಅಪ್ರೆಂಟಿಸ್‌ಗಳು ಮಾತ್ರ. ಹೌದು ಕೇವಲ ಸೆಕ್ಯುಲರ್ ಅನ್ನು ಪಾಲಿಸುತ್ತಿರುವ ಅಪ್ರೆಂಟಿಸ್‌ಗಳು. ನಾವು ಚಾರ್ವಾಕರಾದಾಗಲೇ ನಮ್ಮ ವ್ಯಕ್ತಿತ್ವ ಸ್ವಲ್ಪ, ಸ್ವಲ್ಪವಾಗಿ ಗೋಚರಿಸುತ್ತದೆ. ಇದನ್ನು ನನ್ನ ಪ್ರಗತಿಪರ ಸ್ನೇಹಿತರು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಬೇಕು. ಸೆಕ್ಯುಲರ್‌ಗಳಾದ ನಾವೆಲ್ಲ ನಾವೆಷ್ಟು ನಿಜದ ಸೆಕ್ಯುಲರ್, ನಾನೆಷ್ಟು ನಿಜದ ಜಾತ್ಯಾತೀತ ಎಂದು ನಮ್ಮೊಳಗೆ ನಮ್ಮನ್ನು ಬಿಚ್ಚುತ್ತಾ, ಬಿಚ್ಚುತ್ತಾ ನಡೆದಾಗ ನಾವು ಶೇಕಡಾ ಇಪ್ಪತ್ತರಷ್ಟು ಮಾತ್ರ ಮುಂದುವರೆದಿರಬಹುದಷ್ಟೆ. ಇನ್ನೂ ಶೇಕಡಾ ಎಂಬತ್ತರಷ್ಟು ನಡೆಯನ್ನು ನಾವು ಕ್ರಮಿಸಬೇಕಾಗಿರುವ ಎಚ್ಚರ ನಮ್ಮಲ್ಲಿ ಇಲ್ಲದೇ ಹೋದರೆ ’ನಾನು ಮಾತ್ರ ಸೆಕ್ಯುಲರ್ ಮಾರಾಯ, ಆ ಬಶೀರ್ ನೋಡು ಅವನಿಗೆ ತನ್ನ ಧರ್ಮದ ಮೂಲಭೂತವಾದಿಗಳನ್ನು ಟೀಕಿಸುವ ದಮ್ಮೆಲ್ಲಿದೆ’ ಎನ್ನುವ ಅಹಂಕಾರಕ್ಕೆ ಬಲು ಸುಲಭವಾಗಿ ಬಲಿಯಾಗುತ್ತೇವೆ. ಏಕೆ ಗೊತ್ತೆ ಸ್ನೇಹಿತರೆ, ಸೆಕ್ಯಲರಿಸಂನಲ್ಲಿ ನಾವೆಲ್ಲ ಇನ್ನೂ ಅಪ್ರೆಂಟಿಸ್‌ಗಳು. ದೇಶವೊಂದರಲ್ಲಿ ಬಹುಸಂಖ್ಯಾತರಾದ, ಸೆಕ್ಯುಲರಿಸಂನಲ್ಲಿ ಅಪ್ರೆಂಟಿಸ್‌ಗಳಾದ ನಾವು,  ’ನಾವು ಮಾತ್ರ ನಿಜದ ಪಾತಳಿಯ ಮೇಲೆ ನಿಂತಿದ್ದೇವೆ’ ಎನ್ನುವ ಭ್ರಮೆಯಲ್ಲಿ ಅಲ್ಪಸಂಖ್ಯಾತ ಲೇಖಕ/ಲೇಖಕಿಯರನ್ನು ’ಇನ್ಯಾವಾಗ ಮಾರಾಯ ನೀನು ನಿನ್ನ ಕಪ್ಪೆಚಿಪ್ಪಿನಿಂದ ಹೊರಬರುವುದು’ ಎಂದು ಕೇಳುವಾಗ (ಹೌದು ಕೇಳಬೇಕು, ಖಂಡಿತ ಕೇಳಬೇಕು) ಮಾನವೀಯತೆಯನ್ನು, ವಿನಯವನ್ನು ಮರೆಯಯಬಾರದು. ಆದರೆ ಬಶೀರ್ ವಿಷಯದಲ್ಲಿ ನನ್ನ ಸ್ನೇಹಿತರು ಆ ಗಡಿಯನ್ನು ದಾಟಿದ್ದು ನನ್ನಲ್ಲಿ ಖೇದವನ್ನು ಉಂಟು ಮಾಡಿದೆ.

 basheer-book-release-dinesh-3

ಅತ್ಯಂತ ಸೂಕ್ಷ್ಮ, ಪ್ರಾಮಾಣಿಕ, ಪ್ರತಿಭಾವಂತರಾದ ಈ ಹೊಸ ತಲೆಮಾರು ಕಾಮ್ರೇಡ್‌ಶಿಪ್‌ಗೆ ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು ತನ್ನ ಸಹಚರರೊಂದಿಗೆ (ಎಷ್ಟೇ ಭಿನ್ನಮತವಿರಲಿ) ಬಹಿರಂಗವಾಗಿ ಜಗಳಕ್ಕೆ ಇಳಿಯುವುದನ್ನು ನಾನು ಒಪ್ಪಿಕೊಳ್ಳಲಾರೆ. ಹಾಗೆಯೇ ಬಶೀರ್‌ನ ಪ್ರತಿಕ್ರಿಯೆನ್ನು ಸಹ ನಾನು ಒಪ್ಪಿಕೊಳ್ಳುವುದಿಲ್ಲ. ಅದು ಅನೇಕ ಕಡೆ ವಾದಕ್ಕಾಗಿ ವಾದ ಹೂಡಿದಂತಿದೆ. ಇದನ್ನು ಬಶೀರ್ ಬರೆದಿದ್ದಾನೆಂಬುದೇ ನನಗೆ ಆಶ್ಚರ್ಯ. “ಬಶೀರ್, ನೀನು ಬರೆದ ನಿನ್ನದೇ ಲೇಖನದ ಕೆಲವು ಭಾಗಗಳನ್ನು ಸ್ವತಃ ನೀನೇ ತಿರಸ್ಕರಿಸು.”

ನಮ್ಮ ಚಿಂತನೆಗಳಲ್ಲಿ ಸ್ಪಷ್ಟತೆ, ವಿನಯ, ಸೌಹಾರ್ದತೆ ಮತ್ತು ಕಾಮ್ರೇಡ್‌ಗಿರಿಯನ್ನು ಒಳಗೊಳ್ಳದಿದ್ದರೆ, ಈ ಕ್ಷಣದ ರೋಚಕತೆಗೆ ಬಲಿಯಾಗದೇ ಬದುಕುವುದೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಕಡೆಗೆ ಎಲ್ಲ ಧರ್ಮದ ಮೂಲಭೂತವಾದದ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ಪ್ರಾಮಾಣಿಕ ನಡೆಗಳಿಂದ ಶುರುವಾಗುವ ನಮ್ಮ ದಾರಿಗಳು ಸುಲುಭವಾಗಿ ಹಾದಿ ತಪ್ಪುವುದಂತೂ ಖಂಡಿತ. ನಾನು ನನ್ನ ಆರಂಭದ ಕಮ್ಯನಿಷ್ಟ್ ಚಳುವಳಿಗಳಲ್ಲಿ ಭಾಗವಹಿಸಿ ಕಲಿತದ್ದು ಈ ಕಾಮ್ರೇಡ್‌ಗಿರಿಯನ್ನು. ಇದು ನಮ್ಮನ್ನು ಮತ್ತಷ್ಟು ಪಕ್ವಗೊಳಿಸುತ್ತದೆ. ಚಾರ್ವಾಕದೆಡೆಗಿನ ನಡೆಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಮತ್ತು ಮುಖ್ಯವಾಗಿ ನಮ್ಮ ಆತ್ಮದ ಸೊಲ್ಲು ಅಚ್ಚರಿ ಎನಿಸುವಷ್ಟು ನಮ್ಮಲ್ಲಿ ಖುಷಿಗೊಳಿಸುತ್ತಿರುತ್ತದೆ. ಹೌದು ಮೊದಲ ಬಾರಿಗೆ. ಈ ಮೊದಲ ಖುಷಿ ಎಂದಿಗೂ ಖುಷಿಯಲ್ಲವೇ?

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...