Monday, September 29, 2014

ದಲಿತ ಸಾಹಿತಿಗಳು ಮತ್ತು ಹೋರಾಟಗಾರರು ಪರಸ್ಪರ ಈರ್ಷೆ ಮತ್ತು ಪ್ರತಿಷ್ಠೆ ಬಿಟ್ಟು ಒಂದಾಗಬೇಕು
ನಾಗರಾಜು ತಲಕಾಡು
ಮೈಸೂರು

ದಲಿತ ಚಳವಳಿಯ ಹಿಂದಣ ವೈಭವವನ್ನು ಮೆಲುಕು ಹಾಕುವುದಷ್ಟೆ ನಿಲ್ಲದೆ ಪ್ರಸ್ತುತ ಹೋರಾಟದ ಹಿಂದಿನ ಸಮಸ್ಯೆಯನ್ನು ನೇರವಾಗಿ ಅರ್ಥೈಸುವ ಮತ್ತು ಪರಿಹರಿಸುವ ತಿಳುವಳಿಕೆಯೊಂದಿಗೆ ಚಳಚಳಿಯನ್ನು ನಾವು ಮುನ್ನಡೆಸಬೇಕಾಗಿದೆ.

ಹಿಂದೆ ಕರ್ನಾಟಕದ ಯಾವುದೇ ಸಣ್ಣ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದರೂ ಅದರ ವಿರುದ್ದ ರಾಜ್ಯದ ತುಂಬಾ ಹೋರಾಟದ ನೊಳಗು ಧ್ವನಿಸುತ್ತಿತ್ತು, ನಿಜ ಚಳವಳಿಯ ಆ ಪ್ರಖರತೆ, ವ್ಯಾಪಕತೆ ಕಡಿಮೆಯಾಗಲು ಪ್ರಧಾನ ಕಾರಣ ದಲಿತರ ಒಗ್ಗಟ್ಟಿನ ನಾಶ. (ಎಡ-ಬಲ ಇತ್ಯಾದಿ) ದಲಿತರ ಹೋರಾಟಗಳು ದಲಿತ ಸಮಸ್ಯೆಗಷ್ಟೆ ಸೀಮಿತವಾಗಿ ಬಿಟ್ಟಿವೆ, ಎಡಗೈ -ಬಲಗೈ ಪಂಗಡಗಳೆರಡೂ ಕಡೆಯ ಪ್ರಮುಖ ಸಾಹಿತಿಗಳ ನಡುವಿನ ಈರ್ಷೆ, ಅಸಮಧಾನ ಮತ್ತು ಮುಖಂಡರ ಮುಸುಕಿನ ಗುದ್ದಾಟಗಳು ಚಳವಳಿಯನ್ನು ಹಿಂಬೀಳಿಸಿವೆ. ಜೀರ್ಣಿಸಿಕೊಳ್ಳಲು ಕಷ್ಟವಾದರು ಇವು ವಾಸ್ತವ ಸಂಗತಿಗಳು.

ಆರಂಭದ ದಲಿತ ಬಂಡಾಯ ಸಂಘಟನೆ ಬರಬರುತ್ತಾ ಭಾಗ ಭಾಗವಾಗಿ ದಲಿತರೇ ಬೇರೆ, ಬಂಡಾಯ ಚಳವಳಿಯೆ ಬೇರೆ, ರೈತ ಚಳವಳಿಯೆ ಬೇರೆ ಎಂಬ ಪರಿಪಾಠ ರೂಡಿಯಾಯಿತು. ದ.ಸಂ.ಸಗಳ ಪರಸ್ಪರ ಪ್ರತಿಷ್ಠೆ ಮತ್ತು ಸ್ವಾರ್ಥತನದಿಂದಾಗಿ ದಲಿತ ಹೋರಾಟ ಪ್ರಖರತೆ ಮತ್ತು ವ್ಯಾಪಕತೆಯನ್ನು ಕಳೆದುಕೊಂಡು ಬಿಟ್ಟಿತು. ಮೂಲ ದ,ಸಂ,ಸ ನಾಲ್ಕಾರು ಬಣಗಳಾಗಿ ವಿಭಜನೆಯಾದದ್ದು ಮಾತ್ರ ಅದಕ್ಕೊದಗಿದ ಬಹುದೊಡ್ಡ ಪೆಟ್ಟೆ.

ಒಗ್ಗಟ್ಟಿನ ವಿಷಯದಲ್ಲಿ ಎಡ ಬಲ ಸಮಸ್ಯೆ ಇಂದು ದೊಡ್ಡ ಕಗ್ಗಂಟಠಾಗಿದೆ. ಬಲಗೈ ಪಂಗಡದವರ ಮೇಲಿನ ಎಡಗೈ ಪಂಗಡದವರಿಗಿರುವ ದೊಡ್ಡ ಅಸಮಾಧಾನಕ್ಕೆ ಮೂಲ ಅಧಿಕಾರ ಲಾಭಿಯಲ್ಲಿದೆ. ಈ ಆರಂಭದ ಲಾಭಿ ಮುಸುಕಿನ ಗುದ್ದಾಟಕ್ಕೆ ತಿರುಗಿ ಇರ್ವರ ನಡುವೆ ಕಂದಕ ಹೆಚ್ಚಾಗಿ ಪ್ರಸ್ತುತದಲ್ಲಿ ಅದು ಒಳ ಮೀಸಲಾತಿ ಹೋರಾಟವಾಗಿ ಪರಿವರ್ತನೆಗೊಂಡಿದೆ.

ದಲಿತ ಚಳವಳಿಯ ಶಕ್ತಿಯನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಕುಂದಿಸಿದ್ದು ಬಹುಜನ ವಿದ್ಯಾರ್ಥಿ ಮೂಮೆಂಟ್(ಬಿವಿಸ್). ಅದು ಒಂದು ದಶಕದ ಹಿಂದೆಯೆ ಸಾಮಾಜಿಕ ಹೋರಾಟಗಳನ್ನು ಮಾಡಕೂಡದೆಂಬ ಅಜೆಂಡಾ ಹೊಂದಿದ್ದರ ಫಲವಾಗಿ ಮತ್ತು ಬಹುಪಾಲು ದಲಿತ ವಿದ್ಯಾರ್ಥಿಗಳು ದ,ಸಂ,ಸ ಹೋರಾಟದಿಂದ ದೂರ ಉಳಿದದ್ದು ದಲಿತ ಸಂಘರ್ಷ ಸಮಿತಿಗೆ ದೊಡ್ಡ ಹಿನ್ನಡೆಯಾಯಿತು. (ಸದ್ಯ ಇತ್ತೀಚೆಗೆ ಬಿ.ಎಸ್.ಪಿ/ಬಿ,ವಿಸ್ ತನ್ನ ಅಜೆಂಡಾವನ್ನು ಬದಲಾಯಿಸಿಕೊಂಡು ಹೋರಾಟಗಳನ್ನು ಕೈಗೆತ್ತಿಕೊಲ್ಳುತ್ತಿದೆ)


೨೦೧೦ರಲ್ಲಿ ಎಲ್ಲಾ ಬಣಗಳು ಒಂದಾಗುವ ಪ್ರಯತ್ನ ಮಾಡಿತ್ತಾದರು ಒಂದಾಗದೇ ಉಳಿದಿದ್ದು ವ್ಯವಸ್ಥಿತವಾದ ಆಯೋಜನೆ ಹಾಗೂ ನಾಯಕತ್ವದ ಮೇಲಿನ ಅನುಮಾನ ಅಸಮದಾನಗಳ ಹೊಳೆ ಹರಿಯುತ್ತಿದೆ. ರಾಜ್ಯದಲ್ಲಿ ಬಿ,ಜೆ,ಪಿ ಸರ್ಕಾರವಿದ್ದಾಗ ಸಣ್ಣ ಸಮಸ್ಯೆಗೂ ದೊಡ್ಡ ಹೋರಾಟ ರೂಪಿಸಿ ಸರ್ಕಾರಕ್ಕೆ ನೆರ ಹೊಣೆಗಾರ ಪಟ್ಟಿ ಕಟ್ಟುತ್ತಿದ್ದ ನಾವೆಲ್ಲ ಇಂದು ಕಾಂಗ್ರೆಸ್ ಸರ್ಕಾರದ ಮೇಲೆ ವೊಪರೀತ ಬರವಸೆ ಇಟ್ಟುಕೊಂಡಿದ್ದರ ಫಲವಾಗಿ ಯಾವುದನ್ನು ಪ್ರಶ್ನಿಸದ ಸ್ಥಿತಿಗೆ ತಲುಪಿದ್ದೇವೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದಲಿತ ಸಚಿವರುಗಳ ಆಪ್ತವಲಯದಲ್ಲಿ ಒಂದಲ್ಲಾ ಒಂದು ಸಂಘಟನೆ ಇದ್ದು ಕೈಬಾಯಿ ಕಟ್ಟಿಕೊಂಡು ಬಿಟ್ಟಿದ್ದೇವೆ, ನನ್ನನ್ನೂ ಒಳಗೊಂಡಂತೆ.

ದಲಿತ ಸಿ,ಎಂ/ಡಿ,ಸಿ,ಎಂ ವಿಷಯವಾಗಿ ಬೃಹತ್ ಪ್ರಮಾಣದಲ್ಲಿ ಹೋರಾಟ ಆಯೋಜಿಸಬೇಕಿದ್ದ ನಾವೆಲ್ಲ ತಟಸ್ಥವಾಗಿರಲು ಕಾರಣ ಹಿರಿಯ ದಲಿತ ಮುಖಂಡರು ಅನೇಕರು ರಾಜಕೀಯ ಹಿತಾಶಕ್ತಿ ಈಡೇರಿಸಿಕೊಳ್ಳಲು ಮುಂದಾಗಿರುವುದು. ಈ ಎಲ್ಲದರ ಪ್ರಜ್ಞೆಯೊಂದಿಗೆ ಎಡ-ಬಲ ಭೇದವಿಲ್ಲದೆ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಿದೆ. ದೌರ್ಜನ್ಯ ನಡೆದಿರುವುದು ಎಡಗೈ ಕೋಮಿನ ಮೇಲೋ? ಬಲಗೈ ಕೋಮಿನ ಮೇಲೋ? ಎಂದು ಮೀನಾಮೇಷ ಎಣಿಸಿದರೆ ಪರಸ್ಪರ ಪರವಾಗಿ ಹೋರಾಟ ಮೊಳಗ ಬೇಕಿದೆ.

ಎಲ್ಲಾ ಬಣಗಳು ಒಂದಾಗಿ ಒಂದೇ ಸಂಘಟನೆಯಾಗುವುದು ಸದ್ಯದಲ್ಲಿ ದೂರದ ಮಾತೆ. ಆದರೆ ಕಡೆ ಪಕ್ಷ ತಮ್ಮ ತಮ್ಮ ಪ್ರತ್ಯೇಕ ಅಸ್ಥಿತ್ವ ಉಳಿಸಿಕೊಂಡು ಎಲ್ಲಾ ಬಣಗಳು ಸೇರಿ ದೊಡ್ಡ ಚಳವಳಿ ರೂಪಿಸಬಹುದಲ್ಲ? ವಾರ್ಷಿಕ ಅಧ್ಯಯನ ಶಿಬಿರಗಳನ್ನು ಒಂದೊಂದೆ ಬಣ ನಡೆಸುವ ಬದಲು ಎರಡೆರಡು ಬಣಗಳಾದರು ಸೇರಿ ಒಟ್ಟಿಗೆ ಆಯೋಜೊಸಿದರೆ ದಲಿತ ಒಗ್ಗಟ್ಟಿನ ಸಕಾರಾತ್ಮಕ ಬೆಳವಣಿಗೆ ಕಾಣಬಹುದು.

ಎಡಗೈ -ಬಲಗೈ ಈ ಎರಡು ಕೋಮಿನ ಸಾಹಿತಿಗಳು ಬುದ್ದಿಜೀವಿಗಳು ಪರಸ್ಪರ ಈರ್ಸೆ ಅಸಮಾಧಾನ ಬಿಟ್ಟು ಒಂದಾಗಿಚೂರಾಗಿರುವ ಸಂಘಟನೆಯನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಅವರೂ ನಂಬಿಕೆ ವಿಶ್ವಾಸಗಳನ್ನು ಕಾಪಾಡಿಕೊಳ್ಳ ಬೇಕಾಗುತ್ತದೆ. ಎರಡು ಕೋಮಿನ ನಡುವೆ ಬಿರುಕು ಮುಗಿಲು ಮುಟ್ಟುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಎಡಬಲ ಸಮಸ್ಯೆಗೆ ಒಳಮೀಸಲಾತಿ ಒಳಿತಾಗುವುದೆ ಎಂಬುದನ್ನು ಒಟ್ಟಾಗಿ ವಿವೇಚಿಸಬೇಕಿದೆ.

ನಾಗರಾಜು ತಲಕಾಡು
ಮೈಸೂರು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...