Monday, September 29, 2014

ಕಾರ್ನಾಡ ಗಂಭೀರ ಸಾಹಿತಿಯೇ ಅಲ್ಲ -ಲೇಖಕ ಶೂದ್ರ ಶ್ರೀನಿವಾಸ್ ಟೀಕೆ


ಪ್ರಜಾವಾಣಿ    ವರದಿ

ಬೆಂಗಳೂರು: ‘ಯಾವುದೇ ಒಂದು ವಿಷಯ ಕುರಿತು ಐದು ನಿಮಿಷ ಗಂಭೀರವಾಗಿ ಮಾತನಾಡಲು ಬಾರದ ಗಿರೀಶ ಕಾರ್ನಾಡರು, ಅನಂತಮೂರ್ತಿ ಅವರ ನಿಧನದ ನಂತರ ಅಸಹನೆಯಿಂದ ಬಾಲಿಶವಾಗಿ ಮಾತನಾಡುವ ಮೂಲಕ ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ’ ಎಂದು ಲೇಖಕ ಶೂದ್ರ ಶ್ರೀನಿವಾಸ್ ಟೀಕಿಸಿದರು.

ನಗರದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾ­ಲಯ ಇಲಾಖೆ ಆಯೋಜಿಸಿದ್ದ ‘ಡಾ.ಯು.ಆರ್. ಅನಂತಮೂರ್ತಿ: ಒಂದು ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನಂತಮೂರ್ತಿ ಅವರು ಬದುಕಿರುವವರೆಗೆ ಅವರನ್ನು ಮತ್ತು ಅವರ ಸಾಹಿತ್ಯ ಕುರಿತು ಒಂದೇ ಒಂದು ವಾಕ್ಯ ಮಾತನಾಡದೇ ಇದ್ದ ಕಾರ್ನಾಡರು ಇದೀಗ ಇದ್ದಕ್ಕಿದ್ದಂತೆ ಸ್ಫೋಟಗೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈ ಹಿಂದೆ ತಮ್ಮನ್ನು ಬೆಳೆಸಿದ ಸಂತ ಮನೋಭಾವದ ಪಟ್ಟಾಭಿರಾಮ ರೆಡ್ಡಿ ಅವರು ನಿಧನರಾದಾಗ ಕೂಡ ಇದೇ ರೀತಿ ಕೀಳಾಗಿ ಹೇಳಿಕೆಗಳನ್ನು ನೀಡಿದ್ದರು. ಮರಾಠಿ ರಂಗಭೂಮಿಯ ಖ್ಯಾತ ನಾಟಕಕಾರ ತೆಂಡೂಲ್ಕರ್‌ ಅವರ ನಿಧನದ ತರುವಾಯ  ಇದೇ ಚಾಳಿ ತೋರಿದ್ದರು. ಆದರೆ, ಮಿತ್ರರು ಹಾಗೂ ಶತ್ರುಗಳ ಕುರಿತು ಮಾತನಾಡು­ವಾಗ ವಸ್ತುಸ್ಥಿತಿ, ಆಲೋಚನೆ ಮತ್ತು ಬೌದ್ಧಿಕವಾಗಿ ನಾವು ವಂಚಿಸಿಕೊಳ್ಳಬಾರದು. ಕಾರ್ನಾಡರು ಆ ರೀತಿಯ ವಂಚನೆಗೆ ಒಳಗಾಗಿದ್ದಾರೆ’ ಎಂದು ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.

‘ಅನಂತಮೂರ್ತಿ ಅವರ ಮುಂದೆ ಕುಳಿತಾಗ ಅವರು ನಮ್ಮ ಮುಂದೆ ಯಾವುದೇ ಒಂದು ಬೌದ್ಧಿಕ ಕೃತಿ, ಒಬ್ಬ ಲೇಖಕನನ್ನು ಕುರಿತಂತೆ ತೆರೆದಿಡುತ್ತಿದ್ದ ಮನಸ್ಸು, ಕಾರ್ನಾಡರಲ್ಲಿ ಕಂಡುಬರಲೇ ಇಲ್ಲ. ಕಾರ್ನಾ­ಡರು ಮೂರ್ತಿ ಅವರ ನಿಧನದ ನಂತರ ಈ ರೀತಿ ಮಾತನಾಡುವುದು ದೊಡ್ಡ ಸಾಮಾಜಿಕ ಅಪರಾಧ’ ಎಂದರು.

‘ಕುವೆಂಪು, ತೇಜಸ್ವಿ ಮತ್ತು ಲಂಕೇಶ ಅವರ ತರು­ವಾಯ ಒಂದು ಸಂಸ್ಕೃತಿ ಪರಂಪರೆ ಬೆಳೆಸಿದ ಮಹಾನ್ ಚೇತನವಾದ ಅನಂತಮೂರ್ತಿ ಅವರು ಅನೇಕ ಮಾದ­ರಿಗಳನ್ನು ನಮ್ಮ ಮುಂದಿಟ್ಟು ಹೋಗಿದ್ದಾರೆ. ಅವುಗ­ಳನ್ನು ಅರಿಯುವ ಸಮಯದಲ್ಲಿ ನಮ್ಮ ವ್ಯಕ್ತಿತ್ವ­ವನ್ನು ಕಾರ್ನಾಡರ ರೀತಿಯಲ್ಲಿ ಕಳೆದುಕೊಳ್ಳಬಾರದು’ ಎಂದು ಹೇಳಿದರು.

ಹಿರಿಯ ವಿಮರ್ಶಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ,‘ಕನ್ನಡ ಸಾಹಿತ್ಯ ಲೋಕದಲ್ಲಿ ಜಗಳವಾಡಿಯೂ ಸ್ನೇಹ ಹೇಗೆ ಉಳಿಸಿಕೊಳ್ಳಬಹುದು ಎನ್ನುವುದಕ್ಕೆ ಅನಂತಮೂರ್ತಿ ಅವರ ವ್ಯಕ್ತಿತ್ವ ಒಂದು ದೊಡ್ಡ ಉದಾಹರಣೆ. ಅವರು ತಮ್ಮ ಕೊನೆಯ ಮೂರ್ನಾಲ್ಕು ವರ್ಷಗಳಲ್ಲಿ ರಾಜಕೀಯ ಸಂಗತಿಗಳ ಸಂದರ್ಭದಲ್ಲಿ ಎಷ್ಟೇ ನಿಷ್ಠುರವಾಗಿ ಮಾತನಾಡಿ­ದರೂ, ಮನುಷ್ಯ ಸಂಬಂಧದ ನೆಲೆಯಲ್ಲಿ ಹೆಚ್ಚು ಆರ್ದ್ರವಾಗಿದ್ದರು’ ಎಂದು ಅಭಿಪ್ರಾಯಪಟ್ಟರು.

‘ಅನಂತಮೂರ್ತಿ ಅವರು ತುಂಬಾ ಹಚ್ಚಿಕೊಂಡಿದ್ದ ಸಾಹಿತ್ಯದ ಗುಂಪು ಅವರ ಸಂಕಟದ ವೇಳೆಯಲ್ಲಿ ಅವರ ಹತ್ತಿರ ಇರಲಿಲ್ಲ. ಆ ಗುಂಪು  ತನ್ನ ಹಿತಾ­ಸಕ್ತಿ­ಗಾಗಿ ತೀವ್ರ ಅನಾರೋಗ್ಯದಲ್ಲಿದ್ದ ಮೂರ್ತಿ ಅವರನ್ನು ಧಾರವಾಡದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಆಯೋ­ಜಿಸಿದ್ದ ಸಾಹಿತ್ಯ ಸಂಭ್ರಮ ಉತ್ಸವಕ್ಕೆ ಕರೆದು­ಕೊಂಡು ಹೋಯಿತು. ಆದರೆ, ಮುಂದೆ ಒಂದೇ ವಾರದಲ್ಲಿ ರಾಜ್ಯಪಾಲರು ಅನಂತಮೂರ್ತಿಗಳ ಕುರಿತು ಕೀಳು ಹೇಳಿಕೆ ನೀಡಿದಾಗ ಅನೇಕರು ಬೀದಿಗಿಳಿದು ಪ್ರತಿಭಟಿಸಿ, ಅನಂತಮೂರ್ತಿ ಅವರಿಗೆ ನೈತಿಕ ಬೆಂಬಲ ಸೂಚಿಸಿದರೆ, ಆ ಗುಂಪಿನ  ಯಾವೊಬ್ಬ ಸಾಹಿತಿ ಈ ಕುರಿತು ಚಕಾರ ಎತ್ತಲಿಲ್ಲ’ ಎಂದು ವಿಷಾದಿಸಿದರು.
‘ಅನಂತಮೂರ್ತಿ ಅವರ ಕೃತಿಗಳ ಕುರಿತು ಕಾರ್ನಾಡರು ಮಾತನಾಡಿದ್ದು ಹೊಸದೇನಲ್ಲ. ಕನ್ನಡ­ದಲ್ಲಿ ಮೂರ್ತಿ ಅವರ ಸಾಹಿತ್ಯವನ್ನು ಕಟುವಾಗಿ ವಿಮರ್ಶೆ ಮಾಡಿದ ಪರಂಪರೆಯೇ ಇದೆ. ಸ್ವಜಾತಿ ಮತ್ತು ಸ್ವವಿಮರ್ಶೆಯನ್ನು ನಿಷ್ಠುರವಾಗಿ ಮಾಡಿ­ಕೊಂಡ ರೀತಿಯಲ್ಲಿ ಸೃಜನಶೀಲವಾಗಿ ‘ಸಂಸ್ಕಾರ’  ಕೃತಿ ಮೂಡಿಬಂದಿದೆ’ ಎಂದು ಹೇಳಿದರು.

‘ಅನಂತಮೂರ್ತಿ ಅವರ ಇನ್ನುಳಿದ ಕೃತಿಗಳನ್ನು ಗಮನಿಸಿದಾಗ ಎಲ್ಲೊ ಒಂದು ಕಡೆ ಲೇಖಕ ತನಗೆ ತಾನೇ ಮೋಸ ಮಾಡಿಕೊಂಡ ರೀತಿಯಲ್ಲಿ ಪಕ್ಷಪಾತಿ ನೆಲೆಯೊಳಗೆ ಕೃತಿ ಕಟ್ಟುತ್ತ ಹೋಗಿರುವುದು ಕಾಣು­ತ್ತದೆ. ‘ಅವಸ್ಥೆ’ ಕಾದಂಬರಿ ಇದಕ್ಕೊಂದು ಉದಾಹ­ರಣೆ. ಇದರಲ್ಲಿ ಪ್ರಾಮಾಣಿಕ ರಾಜಕಾರಣಿ ಗೋಪಾಲ­ಗೌಡರ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಗೌರವ ಬರುವ ರೀತಿಯಲ್ಲಿ ಆ ಪಾತ್ರ ಚಿತ್ರಣವಾಗಿಲ್ಲದೆ ಇರುವುದು ಕಾಣುತ್ತದೆ. ಈ ರೀತಿಯ ಲೋಪಗಳು ಮೂರ್ತಿ ಅವರಲ್ಲಿದ್ದವು. ಇವುಗಳನ್ನು ಆರೋಗ್ಯಕರ­ವಾಗಿ ನಾವು ವಿಮರ್ಶಿಸುವ ಅಗತ್ಯವಿದೆ’ ಎಂದು ಸಿದ್ದರಾಮಯ್ಯ ಅವರು ಅನಿಸಿಕೆ ವ್ಯಕ್ತಪಡಿಸಿದರು.

1 comment:

  1. ಎಲ್ಲರೂ ಹತ್ತಿದ ಏಣಿಯನ್ನು ಒದೆಯುವುದರಲ್ಲಿ ನಿಸ್ಸೀಮರು...!

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...