Friday, September 12, 2014

ಉ.ಪ್ರ.: ವಿಜೃಂಭಿಸುತ್ತಿರುವ ‘ಗುಜರಾತ್ ಮಾದರಿ’; ಕೋಮು ರಾಜಕೀಯ
-ಹರ್ಷ ಮಂದರ್


‘ಅಲ್ಲಿ ಏನೂ ಇಲ್ಲ... ನಮ್ಮ ಹಳ್ಳಿಗಳಿಗೆ ಹಿಂದಿರುಗಬೇಕೆಂದು ನಮಗೆ ಅನಿಸುವಂತೆ ಮಾಡುವ ಯಾವುದೂ ಅಲ್ಲಿಲ್ಲ. ಅವರು ನಮ್ಮ ಹಳ್ಳಿಗಳನ್ನು ಸುಟ್ಟರು ಹಾಗೂ ನಮ್ಮ ಸೊತ್ತುಗಳನ್ನು ಲೂಟಿ ಮಾಡಿದರು. ನಾವು ಅಲ್ಲಿಂದ ಜೀವ ಉಳಿಸಿಕೊಂಡು ಬಂದದ್ದೇ ಹೆಚ್ಚು. ಕಂಕುಳಲ್ಲಿ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ಓಡಿಬಂದಿದ್ದೆವು. ಅಲ್ಲಿಗೆ ಹಿಂದಿರುಗಲು ನಮಗೆ ಅಲ್ಲಿ ಏನಿದೆ?’’

ಇದು ಮುಝಫ್ಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಪ್ರಯಾಣಿಸಿದಾಗ ಪದೇ ಪದೇ ಕೇಳಿ ಬಂದ ಮಾತುಗಳು. ದ್ವೇಷದ ಬಿರುಗಾಳಿಯೊಂದು ರಾತೋರಾತ್ರಿ ಈ ಪ್ರಶಾಂತ ಗ್ರಾಮೀಣ ಪ್ರದೇಶವನ್ನು ಛಿದ್ರಗೈದು ಸರಿಯಾಗಿ ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದಾಗಿನ ನನ್ನ ಅನುಭವ ತೃಪ್ತಿದಾಯಕವಾಗಿರಲಿಲ್ಲ.

ನಾನು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಪ್ರಯಾಣಿಸಿದೆ. ಎಲ್ಲಿ ನೋಡಿದರೂ ಕೋಮು ದಳ್ಳುರಿಯಿಂದ ನಾಶಗೊಂಡ ಸಾಮಾಜಿಕ ಹಂದರವೇ ಕಾಣಿಸುತ್ತಿತ್ತು. ಈ ಕೋಮು ದಳ್ಳುರಿ ನಡೆದು ಈಗ ಒಂದು ವರ್ಷ ಆಗಿದೆಯಷ್ಟೆ. ಆದರೆ, ಆಗಲೇ ತಲೆಮಾರುಗಳಿಂದ ಇಂಥ ಪರಿಸ್ಥಿತಿ ನೆಲೆಸಿದೆ ಎಂಬಂಥ ಸ್ಥಿತಿ ಅಲ್ಲಿದೆ.

‘‘ಈ ಒಂದು ವರ್ಷದ ಅವಧಿಯಲ್ಲಿ ಹಳ್ಳಿಗೆ ಮರಳಿ ಎಂದು ನಮ್ಮನ್ನು ಕರೆಯಲು ಯಾರೂ ಬಂದಿಲ್ಲ. ಹಳ್ಳಿಯ ಹಿರಿಯರೂ ಬಂದಿಲ್ಲ, ನಮ್ಮ ಜೊತೆಗೆ ಬೆಳೆದ ನಮ್ಮ ಜೊತೆಗೆ ಕೆಲಸ ಮಾಡಿದ ಜನರೂ ಬಂದಿಲ್ಲ’’ ಎಂದು ಹಿರಿಯರೋರ್ವರು ಬೇಸರದಿಂದ ಹೇಳಿದರು.

‘‘ಒಬ್ಬ ಅಥವಾ ಇಬ್ಬರು ಮುಸ್ಲಿಂ ಹುಡುಗರು ಇಲ್ಲದಿದ್ದರೆ ಯಾವ ಕ್ರಿಕೆಟ್ ತಂಡವೂ ಪೂರ್ಣವಾಗುತ್ತಿರಲಿಲ್ಲ’’ ಎಂದು ಇನ್ನೊಬ್ಬರು ತಿಳಿಸಿದರು. ‘‘ಆದರೆ, ಈಗ ನಾವು ಬದುಕಿದ್ದೇವೋ, ಸತ್ತಿದ್ದೇವೋ ಎಂಬುದೂ ಅವರಿಗೆ ಬೇಕಿಲ್ಲ’’. ‘‘ಈಗ ನಾವು ಬದುಕುತ್ತಿರುವ ಈ ಶಿಬಿರವನ್ನು ನೋಡಿ’’ ಎಂದು ಸೋರುತ್ತಿರುವ ತಮ್ಮ ಗುಡಿಸಲುಗಳತ್ತ ಕೈ ತೋರಿಸಿ ಇನ್ನೊಬ್ಬರು ಹೇಳಿದರು. ಬಿದಿರಿನ ಕಂಬಗಳನ್ನು ನೆಟ್ಟು ಅವುಗಳ ಮೇಲೆ ಹಳೆಯ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿದ ಗುಡಿಸಲುಗಳವು. ಕುಟುಂಬ ಸದಸ್ಯರಿಗೆ ಅಲ್ಲಿ ಸಿಗುವುದು ಕೆಲವು ಚದರ ಅಡಿ ಜಾಗ ಮಾತ್ರ. ಗುಡಿಸಲುಗಳ ಪಕ್ಕದಲ್ಲೇ ಕಪ್ಪು ಚರಂಡಿ ಮತ್ತು ಹಾರಾಡುತ್ತಿರುವ ಸೊಳ್ಳೆಗಳು.

‘‘ನಾವು ಇಲ್ಲಿ ಸಾಯಲೂ ಬಹುದು ಎನ್ನುವುದುದ ನಮಗೆ ಗೊತ್ತಿದೆ. ಆದರೆ, ಇಲ್ಲಿ ಸತ್ತರೆ ನಮ್ಮ ಪ್ರೀತಿ ಪಾತ್ರರು ನಮ್ಮನ್ನು ಮಣ್ಣು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ಹಳ್ಳಿಗಳಲ್ಲಿ ಈ ಪರಿಸ್ಥಿತಿಯಿಲ್ಲ. ಅಲ್ಲಿ ನಮ್ಮ ಜನರನ್ನು ಕೊಲ್ಲಲಾಗಿದೆ ಹಾಗೂ ಸುಡಲಾಗಿದೆ.’’ ಎಂದರು.

ಎಲ್ಲ ಶಿಬಿರಗಳು ಖಾಲಿಯಾಗಿವೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ, ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಸುಮಾರು 25 ಹಳ್ಳಿಗಳಲ್ಲಿರುವ ಶಿಬಿರಗಳಲ್ಲಿ ಈಗಲೂ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸೇರಿದಂತೆ 10,000ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಗಲಭೆ ನಡೆದ ಬಳಿಕದ ತಿಂಗಳುಗಳಲ್ಲಿ ಕೂಡ ಸರಕಾರದ ಬೆಂಬಲ ಅಲ್ಪವಾಗಿತ್ತು. ಹೆಚ್ಚಿನ ಶಿಬಿರಗಳಲ್ಲಿ ಅದು ಆಹಾರ ಪೂರೈಕೆ ಹಾಗೂ ಕೆಲವು ಹೊದಿಕೆಗಳ ವಿತರಣೆಗೆ ಸೀಮಿತವಾಗಿತ್ತು. ಚಳಿಗಾಲದಲ್ಲಿ ತೀವ್ರ ಚಳಿಯಿಂದಾಗಿ ಹಲವು ಮಕ್ಕಳು ಮೃತಪಟ್ಟ ಬಳಿಕ ವ್ಯಕ್ತವಾದ ರಾಷ್ಟ್ರೀಯ ಆಕ್ರೋಶದ ಬಳಿಕ ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ತಂಡಗಳು ಶಿಬಿರಗಳಿಗೆ ಭೇಟಿ ನೀಡಿದವು. ಈಗ ಅದೂ ದೂರದ ನೆನಪಾಗಿದೆ. ದತ್ತಿ ಸಂಘಟನೆಗಳು, ಮುಖ್ಯವಾಗಿ ಧರ್ಮಾಧಾರಿತ ಮುಸ್ಲಿಂ ಸಂಘಟನೆಗಳು ಕೂಡ ತಮ್ಮ ಕಚೇರಿಗಳನ್ನು ನಿಲ್ಲಿಸಿವೆ. ಅನುಕಂಪವೂ ಕಡಿಮೆಯಾಗುತ್ತಿದೆ. ತಮ್ಮ ಹಳ್ಳಿಗಳಿಂದ ನಿರಾಶ್ರಿತರಾಗಿ ಓಡಿ ಬಂದಿರುವ ಸಂತ್ರಸ್ತರನ್ನು ಅವರ ಪಾಡಿಗೆ ಬಿಡಲಾಗಿದೆ. ಮಳೆಗಾಲವನ್ನು ಎದುರಿಸಿ ಅವರು ಹೇಗೋ ಬದುಕಿ ಬಂದಿದ್ದಾರೆ. ಈಗ ಇನ್ನೊಂದು ದೀರ್ಘ ಚಳಿಗಾಲವನ್ನು ಎದುರಿಸಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಲುತ್ತಿದ್ದಾರೆ.

ಈ ಶಿಬಿರಗಳಲ್ಲಿರುವ ಜನರು ಸಮೀಪದ ಗದ್ದೆಗಳಲ್ಲಿ ಆಗಾಗ ಸಿಗುವ ಕೂಲಿ ಕೆಲಸ ಮಾಡಿ ಹಾಗೂ ಇಲ್ಲಿ ಅಲ್ಲಲ್ಲಿ ಸ್ಥಾಪನೆಯಾಗಿರುವ ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಆದರೆ, ಅವರಿಗೆ ಪ್ರಚಲಿತದಲ್ಲಿರುವ ದರಕ್ಕಿಂತ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಯಾಕೆಂದರೆ, ಈ ಜನರ ದುರವಸ್ಥೆ ಬಗ್ಗೆ ಹಾಗೂ ಅವರಿಗೆ ಕೆಲಸದ ಆವಶ್ಯಕತೆ ಇರುವ ಬಗ್ಗೆ ಈ ಕಾರ್ಖಾನೆಗಳ ಮಾಲಕರಿಗೆ ಚೆನ್ನಾಗಿ ಗೊತ್ತಿದೆ. ಅದೂ ಅಲ್ಲದೆ, ಅವರು ಸ್ಥಳೀಯ ಕಾರ್ಮಿಕರ ಜೊತೆಗೂ ಸ್ಪರ್ಧಿಸಬೇಕಾಗುತ್ತದೆ. ಕಾಯಿಲೆ ಮತ್ತು ಹಸಿವು ನೀಗಿಸಲು ಸಾಲದ ಅಗತ್ಯವಿದ್ದರೆ ಅವರು ಈಗಲೂ ಭೂಮಾಲಕರಲ್ಲಿ ಬೇಡಬೇಕಾಗುತ್ತದೆ. ಅವರ ಅದೃಷ್ಟ ಚೆನ್ನಾಗಿದ್ದರೆ ಕೆಲವು ಸಾವಿರ ರೂಪಾಯಿ ಸಾಲ ಸಿಗುತ್ತದೆ. ಹಾಗೂ ಅದಕ್ಕೆ ದುಪ್ಪಟ್ಟು ಬಡ್ಡಿ ವಿಧಿಸಲಾಗುತ್ತದೆ. ಅವರಿಂದ ಸಾಮಾನ್ಯವಾಗಿ ತಿಂಗಳಿಗೆ 10 ಶೇ. ಚಕ್ರಬಡ್ಡಿಯನ್ನು ವಸೂಲು ಮಾಡಲಾಗುತ್ತದೆ.

‘‘ನೀವು ನಮ್ಮ ಹಣದೊಂದಿಗೆ ಯಾವಾಗ ಓಡಿ ಹೋಗುತ್ತೀರಿ ಎಂದು ಯಾರಿಗೆ ಗೊತ್ತು?’’ ಎಂಬ ಕಾರಣವನ್ನು ಭೂಮಾಲೀಕರು ನೀಡುತ್ತಾರೆ. ಹೆಚ್ಚಿನ ಮಕ್ಕಳು ಶಾಲೆಗಳನ್ನು ತೊರೆದಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶಿಕ್ಷಕರು ಈ ಮಕ್ಕಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ ಅಥವಾ ಮಕ್ಕಳನ್ನು ಹೀಯಾಳಿಸುತ್ತಾರೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ, ಒಲೆಗಳಲ್ಲಿ ಹೊಗೆಯೇಳಬೇಕಾದರೆ ಮಕ್ಕಳೂ ದುಡಿಯುವ ಅನಿವಾರ್ಯತೆಯಿದೆ.

20ಕ್ಕೂ ಹೆಚ್ಚಿನ ನೂತನ ಕಾಲನಿಗಳಲ್ಲಿ 10,000ಕ್ಕೂ ಅಧಿಕ ಮಂದಿ ಶಾಶ್ವತವಾಗಿ ಪುನರ್ವಸತಿ ಪಡೆದಿರುವುದನ್ನು ನಾವು ಪತ್ತೆಹಚ್ಚಿದ್ದೇವೆ. ಸುರಿಯ ಮಳೆಯಲ್ಲೂ ಜನರು ಸಣ್ಣ ಇಟ್ಟಿಗೆ ಮನೆಗಳನ್ನು ಕಟ್ಟುವಲ್ಲಿ ನಿರತರಾಗಿದ್ದರು. ಇನ್ನೊಂದು ಚಳಿಗಾಲವನ್ನು ಪ್ಲಾಸ್ಟಿಕ್ ಹಾಳೆಗಳ ಗುಡಿಸಲುಗಳಲ್ಲಿ ಕಳೆಯಬಾರದು ಎನ್ನುವುದು ಅವರ ಉದ್ದೇಶ.

 ತಮ್ಮ ಹಳ್ಳಿಗಳಿಗೆ ಯಾವತ್ತೂ ಹಿಂದಿರುಗಬಾರದು ಎಂಬ ನಿರ್ಧಾರ ತೆಗೆದುಕೊಂಡಿರುವಂತೆ ಕಂಡುಬಂದ ಶಿಬಿರ ವಾಸಿಗಳು ಅವಸರವಸರವಾಗಿ ರೂಪಿಸಲಾದ ಕಾಲನಿಗಳಲ್ಲಿ ಜಾಗಗಳನ್ನು ಖರೀದಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಈ ಕಾಲನಿಗಳು ಇರುವ ಪ್ರದೇಶ ಕೃಷಿ ಗದ್ದೆಗಳಾಗಿದ್ದವು. ಈ ಕಾಲನಿಗಳು ಮುಸ್ಲಿಮ್ ಬಾಹುಳ್ಯದ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿವೆ.

ಮುಝಫ್ಫರ್‌ನಗರದ ದುರಂತವೆಂದರೆ, ಧರ್ಮದ ಆಧಾರದಲ್ಲಿ ಜನರ ವಿಭಜನೆಗೆ ರಾಜ್ಯ ಸರಕಾರವೇ ಅವಕಾಶ ಕಲ್ಪಿಸಿಕೊಟ್ಟಿದೆ. ಭದ್ರತೆ ಮತ್ತು ಸೌಹಾರ್ದತೆಗೆ ಒತ್ತು ಕೊಡುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಂತ್ರಸ್ತರು ಘನತೆಯಿಂದ ತಮ್ಮ ಹಳ್ಳಿಗಳಿಗೆ ಹಿಂದಿರುಗಲು ಸಾಧ್ಯವಾಗುವಂತೆ ಸರಕಾರ ಏರ್ಪಾಡು ಮಾಡಬೇಕಾಗಿತ್ತು. ಆದರೆ, ತಮ್ಮ ಹಳ್ಳಿಗಳಿಗೆ ಹಿಂದಿರುಗುವುದಿಲ್ಲ ಎಂಬುದನ್ನು ಲಿಖಿತವಾಗಿ ಬರೆದುಕೊಡುವ ಪ್ರತಿ ಕುಟುಂಬಗಳಿಗೆ 5 ಲಕ್ಷ ರೂ. ಕೊಡುವ ದುರದೃಷ್ಟಕರ ನೀತಿಯೊಂದನ್ನು ರಾಜ್ಯ ಸರಕಾರ ರೂಪಿಸಿತು.

ಈ ಪರಿಸ್ಥಿತಿಯನ್ನು ತಮ್ಮ ಲಾಭ ಬಡುಕ ಉದ್ದೇಶಗಳಿಗೆ ಚೆನ್ನಾಗಿ ಬಳಸಿಕೊಂಡ ಸ್ಥಳೀಯ ದೊಡ್ಡ ರೈತರು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಈ ಜಾಗಗಳನ್ನು ಅಸಹಾಯಕ ಸಂತ್ರಸ್ತರಿಗೆ ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರಕಾರದಿಂದ ಸಿಕ್ಕಿರುವ 5 ಲಕ್ಷ ರೂ.ಯನ್ನು ಈ ಮಂದಿ ಜಾಗ ಖರೀದಿಗೇ ವ್ಯಯಿಸಿದ್ದಾರೆ ಹಾಗೂ ಮನೆ ನಿರ್ಮಾಣಕ್ಕೆ ದುಬಾರಿ ಬಡ್ಡಿ ದರದಲ್ಲಿ ಲೇವಾದೇವಿಗಾರರಿಂದ ಸಾಲ ಪಡೆಯುತ್ತಿದ್ದಾರೆ. ಇದೇ ಸಂತ್ರಸ್ತರು ತಮ್ಮ ಹಳ್ಳಿಗಳಲ್ಲಿದ್ದ ಆಸ್ತಿಗಳನ್ನು ಮಾರಾಟ ಮಾಡಿದಾಗ ಅವರಿಗೆ ಸಿಕ್ಕಿದ್ದು ಅವುಗಳ ನೈಜ ಬೆಲೆಯ ಒಂದು ಭಾಗ ಮಾತ್ರ.

  ಇಲ್ಲಿನ ಕಾಲನಿಗಳ ಪೈಕಿ ಅರ್ಧದಷ್ಟಕ್ಕೆ ಮುಸ್ಲಿಂ ದತ್ತಿ ಸಂಸ್ಥೆಗಳು ವಿದೇಶಗಳಲ್ಲಿರುವ ಭಾರತೀಯ ಮುಸ್ಲಿಮರಿಂದ ದೇಣಿಗೆಗಳನ್ನು ಪಡೆದುಕೊಂಡಿವೆ. ಆದಾಗ್ಯೂ, ಈ ಸಂಸ್ಥೆಗಳೂ ಜಾಗ ಮತ್ತು ಮನೆಗಳಿಗೆ ಸಂತ್ರಸ್ತರಿಂದ ಹಣ ಪಡೆದುಕೊಳ್ಳುತ್ತಿವೆ. ಕಾಲನಿಗಳನ್ನು ನಿರ್ಮಿ ಸಿದವರು ಕುಡಿಯುವ ನೀರು, ಚರಂಡಿ ಮತ್ತು ವಿದ್ಯುತ್ ಪೂರೈಕೆಗೆ ಗಮನವನ್ನೇ ಹರಿಸಿಲ್ಲ. ಜಿಲ್ಲಾಡಳಿತ ಹೆಚ್ಚೆಂದರೆ ಒಂದು ಕೈಪಂಪ್ ಹಾಕಿದೆ. ಈ ನರಕ ಸದೃಶ ಕೊಳೆಗೇರಿಯಂಥ ಕಾಲನಿಗಳಲ್ಲಿ ಈ ಆಂತರಿಕ ನಿರ್ವಸಿತರು ತಮ್ಮ ಹೊಸ ಬದುಕನ್ನು ನಿರ್ಮಿಸಲು ಅಣಿಯಾಗುತ್ತಿದ್ದಾರೆ.

ಒಂದು ವರ್ಷದ ಹಿಂದೆ ನಡೆದ ಕೋಮು ಗಲಭೆಯ ವೇಳೆ ಮುಸ್ಲಿಂ ಹಳ್ಳಿಗಳ ಮೇಲೆ ದಾಳಿ ನಡೆದಾಗ ಸುಮಾರು 50,000 ಮಂದಿ ಭಯದಿಂದ ಜೀವ ಉಳಿಸಿಕೊಳ್ಳಲು ಓಡಿದ್ದರು. ಅವರ ಪೈಕಿ ಸುಮಾರು ಅರ್ಧದಷ್ಟು ಮಂದಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ಉಳಿದವರು ಈಗಲೂ ಶಿಬಿರಗಳಲ್ಲೇ ಅಥವಾ ಮುಸ್ಲಿಂ ಪ್ರಾಬಲ್ಯದ ಸ್ಥಳಗಳಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಲನಿಗಳಲ್ಲಿ ಇದ್ದಾರೆ.

   ಅದೇ ವೇಳೆ, ತಮ್ಮ ಮನೆಗಳಿಗೆ ಹಿಂದಿರುಗಿದವರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅವರು ಈಗ ಸ್ನೇಹಿತರಾಗಿಯೂ ಉಳಿದಿಲ್ಲ, ನೆರೆಕರೆಯವರಾಗಿಯೂ ಉಳಿದಿಲ್ಲ. ಅವರು ಈಗ ದ್ವೇಷಿಸಲ್ಪಡುವ ‘ಇತರರು’ ಅಷ್ಟೆ. ಉತ್ಸವಗಳು ಮತ್ತು ಮದುವೆಗಳಿಗೆ ಅವರು ಈಗ ಆಹ್ವಾನಿತರಲ್ಲ. ಹೀಯಾಳಿಕೆ ಮತ್ತು ಚುಚ್ಚು ಮಾತುಗಳು ಈಗ ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಬಸ್ಸುಗಳಲ್ಲಿ ಮತ್ತು ರಸ್ತೆಗಳಲ್ಲಿ ಅವರ ಗಡ್ಡ ಎಳೆಯಲಾಗುತ್ತಿದೆ ಹಾಗೂ ಬುರ್ಖಾ ಧರಿಸಿರುವ ಮಹಿಳೆಯರಿಗೆ ಕೀಟಲೆ ಮಾಡಲಾಗುತ್ತಿದೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಹ ಬಾಳ್ವೆಯ ಸ್ಥಾನವನ್ನು ಈಗ ಸಾಮಾಜಿಕ ದ್ವೇಷ ಆಕ್ರಮಿಸಿಕೊಂಡಿದೆ. ಹಾಗಾಗಿ, ಈಗ ಹಿಂದಿರುಗಿರುವ ಹೆಚ್ಚಿನವರು ಮುಸ್ಲಿಂ ಗ್ರಾಮಗಳಲ್ಲಿ ಜಾಗ ಖರೀದಿಸಿ ತಳವೂರುವುದಕ್ಕಾಗಿ ಈಗ ಹಣ ಕೂಡಿಡುತ್ತಿದ್ದಾರೆ.

ಈ ವಿಭಜಿತ ಮನಗಳು ಕೋಮು ರಾಜಕೀಯದ ವಿಜಯವನ್ನು ಸೂಚಿಸುತ್ತಿವೆ. ಕೋಮು ರಾಜಕೀಯ ಶತಮಾನಗಳ ಹಿಂದೂ-ಮುಸ್ಲಿಂ ಸಹಬಾಳ್ವೆಯ ಪರಂಪರೆಯನ್ನು ಒಂದೇ ವರ್ಷದ ಅವಧಿಯಲ್ಲಿ ಧ್ವಂಸಗೊಳಿಸಿದೆ.

ಇದು ಉತ್ತರಪ್ರದೇಶದಲ್ಲಿ ಜಾರಿಗೆ ತರಲಾದ ‘ಗುಜರಾತ್‌ಮಾದರಿ’. ಇಲ್ಲಿನ ಹಳ್ಳಿಗಳಲ್ಲಿ ಮುಸ್ಲಿಂ ನಿವಾಸಿಗಳನ್ನು ಓಡಿಸಲು ಹಾಗೂ ಹಳ್ಳಿಗಳನ್ನು ಅವರಿಂದ ಮುಕ್ತವಾಗಿಡಲು ಹಿಂಸೆ ಮತ್ತು ದ್ವೇಷವನ್ನು ಬಳಸಲಾಗುತ್ತದೆ.

ಸಾಮಾಜಿಕ ದ್ವೇಷ ನಿರ್ಮಾಣದ ಈ ತಂತ್ರಗಾರಿಕೆಗಳು ಧ್ರುವೀಕೃತಗೊಂಡ ಜನರ ಮತಗಳ ಸುಗ್ಗಿಯನ್ನೇ ಹರಿಸಿದೆ.
ಆದರೆ, ಹೊಸ ಹಿಂದೂ ಮತ್ತು ಮುಸ್ಲಿಂ ತಲೆಮಾರುಗಳು ‘ಇತರ’ ಸಮುದಾಯದ ಸ್ನೇಹಿತರು ಮತ್ತು ನೆರೆಕರೆಯವರಿಲ್ಲದೇ ಬೆಳೆಯುತ್ತವೆ. ಇಂಥವರು ಬಹುಬೇಗನೆ ಕೋಮು ರಾಜಕೀಯಕ್ಕೆ ಬಲಿಯಾಗುತ್ತಾರೆ. ಅಂತಿಮವಾಗಿ ‘ಭಾರತ’ದ ಕಲ್ಪನೆಯೇ ನಶಿಸಿಹೋಗಬಹುದು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...