Thursday, October 30, 2014

ಸ್ವಚ್ಛ ಭಾರತ ಅಭಿಯಾನ ಎತ್ತ ಸಾಗಲಿದೆ ಮಹಾಯಾನಮೂಲ: ನಿತ್ಯಾನಂದ ಜಯರಾಮನ್ 

ಅನು: ನಾ. ದಿವಾಕರ

ವಾರ್ತಾಭಾರತಿ ಸ್ವಚ್ಛ ಭಾರತ ಅಭಿಯಾನ ಎತ್ತ ಸಾಗಲಿದೆ ಮಹಾಯಾನ

ಭಾರತವನ್ನು ಸ್ವಚ್ಛಗೊಳಿಸಿ ಸ್ವಚ್ಛವಾಗಿರಿ ಸುವ ಪ್ರಧಾನಿ ನರೇಂದ್ರ ಮೋದಿಯ ಆಂದೋಲನ ಮೇಲ್ನೋಟಕ್ಕೆ ಸರಳತೆಯ ಸಾಕಾರವಾಗಿ ಕಂಡರೂ ಆಂದೋಲನ ಅಷ್ಟೇ ಸಮಸ್ಯಾತ್ಮಕವೂ ಆಗಿದೆ. ನರೇಂದ್ರ ಮೋದಿಯ ಅಭಿವೃದ್ಧಿಯ ಕಾರ್ಯಸೂಚಿಗೂ ಮತ್ತು ಸ್ವಚ್ಛ ಭಾರತದ ಆಶಯಗಳಿಗೂ ನಡುವೆ ಇರುವ ವೈರುಧ್ಯಗಳು ಹಲವು ಪ್ರಶ್ನೆಗಳನ್ನು ಸೃಷ್ಟಿಸುತ್ತವೆ. ಭಾರತದ ಯಾವ ಭಾಗವನ್ನು ಸ್ವಚ್ಛಗೊಳಿಸಲಾಗುತ್ತದೆ, ಯಾವುದನ್ನು ಸ್ವಚ್ಛಗೊಳಿಸಲಾಗುವುದಿಲ್ಲ, ಏಕೆ ಸ್ವಚ್ಚಗೊಳಿಸಲಾಗುವುದಿಲ್ಲ, ತ್ಯಾಜ್ಯವನ್ನು ಕೊನೆಗೊಳಿಸುವ ಬಗೆ ಹೇಗೆ, ತ್ಯಾಜ್ಯವನ್ನು ಎಲ್ಲಿಗೆ ರವಾನಿಸಲಾಗುತ್ತದೆ ಹೀಗೆ ಹತ್ತುಹಲವು ಪ್ರಶ್ನೆಗಳು ಮೂಡುತ್ತವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸ್ವಚ್ಛತೆಯ ಪರಿಕಲ್ಪನೆ ಶುದ್ಧ ಮತ್ತು ಅಶುದ್ಧ ಅಥವಾ ಪವಿತ್ರ ಮತ್ತು ಅಪವಿತ್ರದ ಪರಿಕಲ್ಪನೆಯ ಸುತ್ತ ಹೆಣೆಯಲಾಗಿದೆ. ಈ ಸನ್ನಿವೇಶದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳಲು ಶುದ್ಧ ಮತ್ತು ಅಶುದ್ಧವನ್ನು ಪ್ರತ್ಯೇಕವಾಗಿರಿಸುವುದು ಸಾಮಾಜಿಕ ಅನಿವಾರ್ಯತೆಯಾಗಿ ಪರಿಣಮಿಸುತ್ತದೆ.

 ಸ್ವಚ್ಛ ಭಾರತ ಅಭಿಯಾನದ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ದೇಶದ ಸಮಸ್ತ ಜನತೆ ಸ್ವೀಕರಿಸಿದ ಪ್ರಮಾಣ ವಚನ ಇಂತಿದೆ ‘‘ಈಗ ಭಾರತ ಮಾತೆಯ ಸೇವೆಯಲ್ಲಿ ನಾವು ತ್ಯಾಜ್ಯವನ್ನು ಹೊಡೆದೋಡಿಸಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ’’. ನಿಜ. ತ್ಯಾಜ್ಯವನ್ನು ತೆಗೆದುಹಾಕುತ್ತೇವೆ. ಆದರೆ ಎಲ್ಲಿಗೆ ಸಾಗಿಸುತ್ತೇವೆ? ಎಲ್ಲ ಆಧುನಿಕ ಸಂಸ್ಕೃತಿಗಳಲ್ಲೂ ತ್ಯಾಜ್ಯವನ್ನು ತೆಗೆದುಹಾಕುವುದೆಂದರೆ ಕಸವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸುವುದೇ ಆಗಿದೆ. ಕೆಲವು ದಶಕಗಳ ಹಿಂದೆ ತ್ಯಾಜ್ಯ ವಿಲೇವಾರಿ ಅಥವಾ ಸ್ವಚ್ಛತಾ ಕಾರ್ಯ ಸುಲಭವಾಗಿತ್ತು. ಎಲ್ಲ ಜೈವಿಕ ಮತ್ತು ಗೊಬ್ಬರ ಮಾಡುವಂತಹ ತ್ಯಾಜ್ಯವನ್ನು ಮಣ್ಣಿನಲ್ಲಿ ಹಾಕಲಾಗುತ್ತಿತ್ತು. ಅದು ಕ್ರಮೇಣ ಗೊಬ್ಬರವಾಗಿ ಮಾರ್ಪಾಡಾಗುತ್ತಿತ್ತು. ಕಳೆದ ಎರಡು ದಶಕಗಳಲ್ಲಿ ಭಾರತ ಒಂದು ಗ್ರಾಮೀಣ ದೇಶದ ಪ್ರಭಾವಳಿಯಿಂದ ಹೊರಬಂದು ನಗರೀಕೃತ ದೇಶವಾಗಿ ಬೆಳೆದಿದೆ. ನಾವು ಇಂದಿಗೂ ಸಹ ನಿಸರ್ಗವನ್ನು ಪೂಜಿಸುತ್ತೇವೆ, ನಿಸರ್ಗದೊಡನೆ ನಮಗೆ ಅವಿನಾಭಾವ ದೈವಿಕ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದಂತೆ ಎದೆ ತಟ್ಟಿ ಹೇಳಬಹುದು. ಆದರೆ ಭಾರತೀಯರಾಗಲಿ, ಅಮೆರಿಕನ್ನರಾಗಲಿ, ಹಿಂದೂ ಅಥವಾ ಮುಸ್ಲಿಮರಾಗಲಿ ನಾವೆಲ್ಲರೂ ಗ್ರಾಹಕ ಸಂಸ್ಕೃತಿಯ ಆರಾಧಕರಾಗಿರುವುದು ಸುಸ್ಪಷ್ಟ.

ಹೊಲಸು- ಒಂದು ರೂಪಕವಾಗಿ
ಚೆನ್ನೈ ನಗರದಿಂದ ಪ್ರತಿದಿನವೂ 6000 ಟನ್‌ಗಳಷ್ಟು ಮಿಶ್ರಿತ ತ್ಯಾಜ್ಯ ಕೊಡುಂಗೈಯ್ಯೂರನ್ನು ತಲುಪುತ್ತದೆ. ಈ ತ್ಯಾಜ್ಯ ಸಂಗ್ರಹಾಲಯದಿಂದ ಹೊರಸೂಸುವ ದುರ್ಗಂಧ ಮನುಕುಲದ ತಾಳ್ಮೆ, ಸೈರಣೆಗೆ ಒಂದು ಸವಾಲೇ ಸರಿ. ತ್ಯಾಜ್ಯದ ಗುಡ್ಡಗಳು ಸುತ್ತಲಿನ ಗಗನ ಚುಂಬಿ ಕಟ್ಟಡಗಳಿಗಿಂತಲೂ ಎತ್ತರ ಬೆಳೆದಿವೆ. ಈ ಪ್ರದೇಶವನ್ನು ತ್ಯಜಿಸಿ ಬೇರೆಡೆ ನೆಮ್ಮದಿಯಿಂದ ಜೀವಿಸುವ ಅವಕಾಶ ಮತ್ತು ಅನುಕೂಲತೆ ಇರುವವರೆಲ್ಲರೂ ಇಲ್ಲಿಂದ ಕಾಲು ಕಿತ್ತಿದ್ದಾರೆ. ಅನ್ಯ ಮಾರ್ಗ ಇಲ್ಲದ ಅಮಾಯಕರು ಇಲ್ಲಿಯೇ ಜೀವನ ಸವೆಸುತ್ತಿದ್ದಾರೆ. ಒಂದು ಕಾಲದಲ್ಲಿ ಕ್ಯಾಪ್ಟನ್ ಕಾಟನ್ ಕೆನಾಲ್ ಎಂದು ಕರೆಯಲ್ಪಡುತ್ತಿದ್ದ ಕಾಲುವೆ ಇಂದು ತ್ಯಾಜ್ಯ ಸಂಗ್ರಹಾಲಯವಾಗಿದೆ. ಕಸ ಆಯುವವರು ಮತ್ತು ಸ್ಥಳೀಯ ನಿವಾಸಿಗಳು ಈ ಕಾಲುವೆಯ ಮೇಲೆ ಹಾದು ಹೋಗುವ ಸೇತುವೆಯ ಮೂಲಕವೇ ತಮ್ಮ ಮನೆಗಳಿಗೆ ತೆರಳಬೇಕು. ಈ ಕಸದ ಗುಡ್ಡದ ನಡುವೆಯೇ ಅನೇಕರು ತಮ್ಮ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಗುಡಿಸಲುಗಳ ನಿರ್ಮಾಣಕ್ಕೆ ಬಳಸಿರುವ ವಸ್ತುಗಳೆಲ್ಲವೂ ಕಸದ ಗುಡ್ಡಗಳಿಂದಲೇ ಆಯ್ದುಕೊಂಡಿದ್ದಾಗಿರುತ್ತವೆ. ಈ ಮನೆಗಳ ಇಪ್ಪತ್ತು ಅಡಿ ಎದುರಿನಲ್ಲೇ ದುರ್ವಾಸನೆ ಬೀರುವ ಕೆಂಪು-ಆರೆಂಜ್ ಬಣ್ಣದ ದ್ರವ್ಯ ನದಿಯಂತೆ ಹರಿಯುತ್ತದೆ. ಈ ನದಿಯ ತೀರದಲ್ಲೇ ಅತ್ತ ಕಡೆಯಲ್ಲಿ ಮುರುಗನ ದೇವಾಲಯವೂ ಇದೆ.

ಬೀಸುವ ಗಾಳಿಯ ದಿಕ್ಕು ಏನೇ ಇರಲಿ ಇಲ್ಲಿರುವ ಹತ್ತು ಹದಿನೈದು ಗುಡಿಸಲುಗಳಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಕಸದ ಬೆಟ್ಟದಿಂದ ಬೀಸುವ ದುರ್ವಾಸನೆಯನ್ನು ಅನುಭವಿಸುವುದು ಅನಿವಾರ್ಯ. ವಿಡಂಬನೆ ಎಂದರೆ ಈ ಬಡಾವಣೆಗೆ ‘ಪಣಕ್ಕಾರ ನಗರ’ ಎಂದು ಹೆಸರಿಸಲಾಗಿದೆ, ಅಂದರೆ ಶ್ರೀಮಂತರ ಬಡಾವಣೆ ಎಂದರ್ಥ ???? ಕಸ ಆಯುವವರನ್ನೂ ಸೇರಿದಂತೆ ಸಾವಿರಾರು ಜನರು ಈ ಕಸದ ಪರ್ವತಗಳಿಂದ ಶೇಖರಿಸಿದ ತ್ಯಾಜ್ಯಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರತ್ಯೇಕಿಸಿ ಹೊಟ್ಟೆ ಹೊರೆಯುತ್ತಿದ್ದಾರೆ. ಕಸದ ಪರ್ವತದ ಮತ್ತೊಂದು ಬದಿಯಲ್ಲಿ 1500 ಕುಟುಂಬಗಳು ವಾಸಿಸುವ ಬಡಾವಣೆಯೊಂದಿದೆ. 1990ರಲ್ಲಿ ತಮಿಳುನಾಡು ಕೊಳೆಗೇರಿ ನಿರ್ಮೂಲನಾ ಮಂಡಲಿಯ ವತಿಯಿಂದ ಆರ್‌ಆರ್ ನಗರದಲ್ಲಿ ಈ ಮನೆಗಳನ್ನು ಸಫಾಯಿ ಕರ್ಮಚಾರಿಗಳಿಗಾಗಿಯೇ ನಿರ್ಮಿಸಲಾಗಿತ್ತು. ಆರಂಭದಲ್ಲಿ ಕರ್ಮಚಾರಿಗಳು ಈ ಕಸದ ಗುಡ್ಡೆಯ ಎದುರಿನಲ್ಲಿ ವಾಸಿಸಲು ನಿರಾಕರಿಸಿದ್ದರು ಆದರೆ ನಗರ ಬೆಳೆಯು ತ್ತಿದ್ದಂತೆ ಈ ಕುಟುಂಬಗಳನ್ನು ಕಸ ರವಾನೆ ಮಾಡುವಂತೆಯೇ ಆರ್‌ಆರ್ ನಗರಕ್ಕೆ ರವಾನೆ ಮಾಡಲಾಯಿತು. ಈ ಎರಡೂ ಬಡಾವಣೆಗಳಲ್ಲಿ ವಾಸಿಸುವ ಬಹುತೇಕ ಜನರು ಪರಿಶಿಷ್ಟ ಜಾತಿಗೆ ಸೇರಿದವ ರಾಗಿದ್ದು, ಕೊಡುಂಗೈಯ್ಯೂರ್ ಮೀಸಲು ಕ್ಷೇತ್ರವಾಗಿದೆ. ಈ ತ್ಯಾಜ್ಯ ನಿರ್ವಹಣೆಯನ್ನು ಆಧುನಿಕೀಕರಣಗೊಳಿಸುವ ಪ್ರಸ್ತಾಪ ಮಾಡಿ ದಾಗ ಚೆನ್ನೈನ ಮೇಯರ್, ಮನೆಗೊಂದು ಶೌಚಾಲಯ ಇರುವಂತೆಯೇ ನಗರಕ್ಕೂ ಒಂದು ಶೌಚಾಲಯ ಅಗತ್ಯ, ಹಾಗಾಗಿ ಈ ಕಸದ ಪರ್ವತವೂ ಅನಿವಾರ್ಯ ಎಂದು ಹೇಳಿದ್ದರು !!!!

ಹೆಚ್ಚುತ್ತಿರುವ ತ್ಯಾಜ್ಯ ಮತ್ತು ಸಮಸ್ಯೆಗಳು
ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಅನುಸರಿಸಲಾಗು ತ್ತಿರುವ ಪದ್ಧತಿ ಒಂದು ಸಾಮಾಜಿಕ ಸಮಸ್ಯೆಯಾಗಿ ತೋರುತ್ತದೆ. ಈ ಸಮಸ್ಯೆಗೆ ಯಾವುದೇ ಪರಿಹಾರ ಸೂಚಿಸಿದರೂ ಅದು ಸ್ಥಾಪಿತ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ. ಹಾಗಾಗಿಯೇ ಸ್ಥಳೀಯ ಸಂಸ್ಥೆಗಳು, ರಾಜಕಾರಣಿಗಳು ಸಾಮಾಜಿಕ ಸಮಸ್ಯೆಯನ್ನು ಬದಿಗಿಟ್ಟು ಕಾರ್ಯ ನಿರ್ವಹಿಸುತ್ತವೆ. ತ್ಯಾಜ್ಯ ನಿರ್ವಹಣಾ ಸೌಕರ್ಯಗಳನ್ನು ಆಧುನಿಕ ರೀತಿಯಲ್ಲಿ ಕಲ್ಪಿಸಲು ಗಣ್ಯ ಇಂಜಿನಿಯರುಗಳನ್ನು ಆಹ್ವಾನಿಸಲಾಗುತ್ತದೆ. ಇವರ ಸಲಹೆಗಳು ಕಸವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿ ನೆಲದಲ್ಲಿ ಹೂತುಹಾಕುವುದೋ ಅಥವಾ ಸುಟ್ಟು ಹಾಕುವುದೋ ಪರಿಹಾರ ಎಂದು ಸೂಚಿಸುತ್ತಾರೆ. ಪರಿಹಾರ ಮಾರ್ಗ ಯಾವುದೇ ಆಗಿರಲಿ ಒಂದು ಮಾತಂತೂ ಸತ್ಯ. ಜಾತಿ ಪೀಡಿತ, ಜನಾಂಗೀಯತೆ ಪೀಡಿತ ಭಾರತ, ಅಮೆರಿಕದಂತಹ ದೇಶಗಳಲ್ಲಿ ಈ ಪರಿಹಾರ ಮಾರ್ಗದಲ್ಲಿ ಸೂಚಿಸಲಾಗುವ ಸ್ಥಳಗಳು ಮೇಲ್ವರ್ಗದ ಜನರು ವಾಸಿಸುವ ಪ್ರದೇಶಗಳಿಂದ ದೂರವೇ ಇರುತ್ತವೆ. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಜನರ ನಡುವೆಯೇ ತ್ಯಾಜ್ಯವೂ ರಾರಾಜಿಸುತ್ತಿರುತ್ತದೆ.

ಅಮೆರಿಕದ ಸಮಾಜಶಾಸ್ತ್ರಜ್ಞ ಮರ್ರೇ ಮಿಲ್ನರ್ ಹೇಳುವಂತೆ ಭಾರತದಂತಹ ಸಮಾಜಗಳಲ್ಲಿ ಒಂದು ಹಂತದವರೆಗೆ ತ್ಯಾಜ್ಯ, ಹೊಲಸು ಮತ್ತು ಅಶುದ್ಧತೆ ಅನಿವಾರ್ಯ ಎಂದೇ ನಂಬಲಾಗುತ್ತದೆ. ಇಲ್ಲಿ ತ್ಯಾಜ್ಯವನ್ನು ಮರುವಿತರಣೆ ಮಾಡಲಾಗುವುದೇ ಹೊರತು ನಾಶ ಮಾಡಲಾಗುವುದಿಲ್ಲ. ಜಾತಿ ಪೀಡಿತವಲ್ಲದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತ್ಯಾಜ್ಯವನ್ನು ನಾಶಪಡಿಸಬಹುದು ಎಂಬ ವಿಶ್ವಾಸ ವ್ಯಕ್ತವಾಗುತ್ತದೆ ಎನ್ನುತ್ತಾರೆ ಮಿಲ್ನರ್. ಆರ್ಥಿಕ ಅಭಿವೃದ್ಧಿ ಎಂದರೆ ಉತ್ಪಾದನೆ ಮತ್ತು ಬಳಕೆಯಲ್ಲಿನ ಹೆಚ್ಚಳ ಮತ್ತು ಸೇವಾಕ್ಷೇತ್ರದ ವಿಸ್ತರಣೆ ಎಂದರ್ಥ. ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆದು, ಗ್ರಾಹಕ ವಸ್ತುಗಳನ್ನಾಗಿ ಪರಿವರ್ತಿಸಿ, ಅದನ್ನು ಬಳಸಿ ಬಿಸಾಡುವ ಪ್ರಕ್ರಿಯೆಯೇ ಆರ್ಥಿಕತೆ ಪ್ರಗತಿಯ ಸೂಚಕವಾಗಿರುತ್ತದೆ. ಅಭಿವೃದ್ಧಿ ಹೆಚ್ಚಾದಂತೆಲ್ಲಾ ತ್ಯಾಜ್ಯವೂ ಹೆಚ್ಚಾಗುತ್ತದೆ. ಇಂದು ಸ್ವಚ್ಛತಾ ಅಭಿಯಾನದ ನೆಪದಲ್ಲಿ ಪೊರಕೆ ಹಿಡಿದು ಬೀದಿ ಗುಡಿಸುತ್ತಿರುವ ಬೂರ್ಷ್ವಾಗಳು ಬಳಸಿ ಬಿಸಾಡುವ ತ್ಯಾಜ್ಯ ವಸ್ತುಗಳು ಹಿಮಗಡ್ಡೆಯ ತುದಿಯಷ್ಟೆ. ಆದರೆ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಭೂಮಿಯೊಳಗೆ, ಜಲ ಸಂಪನ್ಮೂಲಗಳೊಳಗೆ ಮತ್ತು ಗಾಳಿಯಲ್ಲಿ ಬೆರೆಯುವ ತ್ಯಾಜ್ಯ ವಸ್ತುಗಳನ್ನು ಪರಿಗಣಿಸುವವರಾರು ?
ಇದು ಸ್ವಚ್ಛ ಭಾರತ ಅಭಿಯಾನದ ಮುಂದಿರುವ ಬೃಹತ್ ಸಮಸ್ಯೆ.

ನವೆಂಬರ್ 2 ಬೆಂಗಳೂರು : ನಮ್ಮ ಪುಸ್ತಕಗಳ ಬಿಡುಗಡೆಬನ್ನಿ.. ನಿಮಗಿದು ಪ್ರೀತಿಯ ಆಹ್ವಾನ
ಕೃತಿ ಚೌರ್ಯ ಮತ್ತು ಬೂಸಾ ಸಾಹಿತ್ಯ


 ಡಾ ಎಸ್ ಬಿ ಜೋಗುರ

 

 

ಮನುಷ್ಯ ತನ್ನ ಕ್ರಿಯಾಶೀಲತೆ ಬತ್ತತೊಡಗಿದೊಡನೆ ತನ್ನ ತಂಗಳ ವಿಚಾರ ಮತ್ತು ಸಾಧನೆಗಳನ್ನೇ ಮೆಲುಕು ಹಾಕಿ ಸುಖ ಅನುಭವಿಸತೊಡಗುತ್ತಾನೆ. ನಿಜವಾಗಿಯೂ ಕ್ರಿಯಾಶೀಲ ಸಾಮರ್ಥ್ಯ ಇರುವವನು ಎಂದೂ ಅವಕಾಶಗಳಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡುವುದಿಲ್ಲ. ಖುದ್ದಾಗಿ ತಾನೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಕೆಲವರಂತೂ ತಮ್ಮಲ್ಲಿಲ್ಲದ ಕ್ರಿಯಾಶೀಲತೆಯನ್ನು ಇದೆ ಎಂದು ತೋರಿಸುವ ಯತ್ನದಲ್ಲಿ ಅನೇಕ ಬಗೆಯ ಛದ್ಮವೇಷಗಳನ್ನು ಧರಿಸುತ್ತಾರೆ. ಅವಕಾಶಗಳಿಗಾಗಿ ಪೀಡಿಸುತ್ತಾರೆ, ಬೇರೆಯವರ ಅವಕಾಶಗಳನ್ನು ಕಸಿಯುತ್ತಾರೆ, ನನಗೆ ದಕ್ಕದ್ದು ಅವರಿಗೂ ದಕ್ಕುವುದು ಬೇಡ ಎನ್ನುವ ನಿಟ್ಟಿನಲ್ಲಿ ಹಿತ್ತಾಳೆ ಕಿವಿಗಳಿಗೆ ಹತ್ತಿರವಾಗಿ ತೂತು ಕೊರೆಯುವ ಯತ್ನ ಮಾಡುತ್ತಾರೆ. ಕೊನೆಗೂ ಹಾಗೂ ಹೀಗೂ ಮಾಡಿ ತಾನೂ ಒಬ್ಬ ಕವಿ, ನಾಟಕಕಾರ, ಕತೆಗಾರ, ಪ್ರಬಂಧಕಾರ ಎಂದು ಸ್ವಘೋಷಿಸಿಕೊಂಡು ಬಿಡುತ್ತಾನೆ. ಅಲ್ಲಿಗೆ ಸಮ್ಮೇಳನದ ಗೋಷ್ಠಿಗಳಲ್ಲಿ, ದಸರಾ ಸಮ್ಮೇಳನದಲ್ಲಿ ತನಗೂ ಒಂದು ಕುರ್ಚಿ ಇರುವಂತೆ ಮಾಡಬಾರದ ಕಟಿಬಿಟಿ ಮಾಡುತ್ತಾನೆ. ಕೊನೆಗೂ ಅವನು ಓದಿದ ಪದ್ಯ ಅರ್ಧ ಗಂಡು ಅರ್ಧ ಹೆಣ್ಣು. ಕೆಲ ಬಾರಿ ಅದು ನೀವೆಂದೂ ಕೇಳಿರದ ಒಂದು ಅಜ್ಞಾತ ಲಿಂಗವೂ ಆಗಿಬಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದನ್ನೆಲ್ಲಾ ಬರೆಯಲು ಕಾರಣವಿಷ್ಟೆ. ಈಗೀಗ ಸಾಹಿತ್ಯ ಮತ್ತು ಮಾಧ್ಯಮಗಳ ವಲಯದಲ್ಲಿ ಚಿತ್ರ ವಿಚಿತ್ರವಾದ ಓರೆ ಕೋರೆಗಳು ತೋರತೊಡಗಿವೆ. ಕೆಲವು ಪತ್ರಿಕೆಗಳಂತೂ ಅವನು ತಮ್ಮ ಪ್ರಾದೇಶಿಕತೆಯವನು, ಜಾತಿಯವನು, ಊರವನು, ಬೇಕಾದವರು, ಆತ್ಮೀಯರು ಇಲ್ಲವೇ ಯಾರೋ ಒಬ್ಬ ಉದ್ದಾಮ ಸಾಹಿತಿ ಮುದ್ದಾಮ್ ಶಿಫಾರಸು ಮಾಡಿದ ಕಾರಣಕ್ಕೆ ಪ್ರಕಟಿಸಲಾಗುವ ಭಯಂಕರ ಬರಹಗಳಿಗೂ ಬರವಿಲ್ಲ.

ಈಗೀಗ ಸಾಹಿತ್ಯಕ ವಲಯದಲ್ಲಿ ಪಕ್ಕಾ ರಾಜಕೀಯ ಪರಿಸರ ನಿರ್ಮಾಣವಾಗಿದೆ. ಇಲ್ಲಿರುವ ಗುಂಪುಗಾರಿಕೆಯಂತೂ ಹೇಸಿಕೆ ಹುಟ್ಟಿಸುತ್ತದೆ. ಬೆಂಗಳೂರಲ್ಲಿಯ ಕೆಲ ಪ್ರಚಂಡ ಪಂಡಿತರು ಆಯಕಟ್ಟಿನ ಸ್ಥಾನದಲ್ಲಿ ಕುಳಿತು ಯಾರು ಬರೆಯುತ್ತಿದ್ದಾರೆ ಏನು ಬರೆಯುತ್ತಿದ್ದಾರೆ ಎನ್ನುವುದನ್ನು ಓದದೇ, ಪ್ರತಿಕ್ರಿಯಿಸದೇ ಅವರ ಬರಹಗಳು ಪ್ರಕಟವಾಗದ ಹಾಗೆ ತಾಮ್ರದ ಕಿವಿಗಳಿಗೆ ತೂತು ಕೊರೆಯುವುದೇ ಅವರ ಕ್ರಿಯಾಶೀಲತೆಯಾಗಿದೆ. ಪ್ರಶಸ್ತಿಗಾಗಿ ಲಾಬಿ ಮಾಡುವುದು, ತಮ್ಮ ಪ್ರದೇಶ, ಜಿಲ್ಲೆ, ತಾಲೂಕಿನ ಪರಿಸರದ ವಾಸನೆಯ ಮೂಲಕವೇ ಅವರನ್ನು ಮೇಲೆತ್ತುವುದು ಇನ್ನೊಬ್ಬನನ್ನು ಉದ್ದೇಶಪೂರ್ವಕವಾಗಿಯೇ ತುಳಿಯುವುದು ಇಂಥಾ ಅರಿಷ್ಟ ಗುಣಗಳನ್ನು ಬಿಟ್ಟು ಗಟ್ಟಿಯಾಗಿ ಕುಳಿತು ಓದು ಬರಹ ಮಾಡಿದ್ದರೆ ಅವನಿಂದ ನಾಡು-ನುಡಿಗೆ ಒಂದಷ್ಟು ಉತ್ತಮ ಸಾಹಿತ್ಯವಾದರೂ ದಕ್ಕುತ್ತಿತ್ತು. ಇಂದು ಪ್ರಶಸ್ತಿಯ ಮೊತ್ತ ನಿಮಗೇ ನೀಡುತ್ತೇವೆ ಆದರೆ ಪ್ರಶಸ್ತಿ ಮಾತ್ರ ನನ್ನ ಮಗಳಿಗೆ ಕೊಡಿ, ಮಗನಿಗೆ ಕೊಡಿ ಇಲ್ಲವೇ ನನಗೇ ಕೊಡಿ ಎಂದು ದುಂಬಾಲು ಬೀಳುವ ಮೂಲಕ ಹಿಂಬಾಗಿಲಿನಿಂದ ಪ್ರಶಸ್ತಿ ಪಡೆದು ಸಾಹಿತ್ಯಕ ವಲಯದಲ್ಲಿ ಅನೇಕ ಸಮರ್ಥರ ಸಮಾಧಿ ಮೇಲೆ ವಿರಾಜಮಾನರಾಗುವ ಇಂತಹ ಖಳರಿಂದಾಗಿಯೇ ಸಾಹಿತ್ಯದಲ್ಲಿ ಖೂಳ ಸಂಸ್ಕೃತಿ ಆರಂಭವಾಗಿದೆ. ಈಚೆಗೆ ಒಂದು ಸಣ್ಣ ಪ್ರಶಸ್ತಿಗಾಗಿ ಆ ಸ್ಪರ್ಧೆಯ ನಿರ್ಣಾಯಕರು ಯಾರು ಎನ್ನುವುದನ್ನು ಅದು ಹೇಗೋ ತಿಳಿದುಕೊಂಡು ಅವರ ಬೆನ್ನಿಗೆ ಬಿದ್ದದ್ದು ಕೂಡಾ ಫೇಸ್‌ಬುಕ್‌ಲ್ಲಿ ಬಯಲಾಗಿತ್ತು. ಹೀಗೆ ಮಾಡಿ ಪ್ರಶಸ್ತಿ ಪಡೆಯುವ ಆವಶ್ಯಕತೆ ಇದೆಯೇ? ಹೀಗೆ ಮಾಡುವುದರಿಂದ ಗಟ್ಟಿ-ಪೊಳ್ಳುಗಳ ಅಂತರ ಸ್ಪಷ್ಟವಾಗದೇ ಮತ್ತೆ ಬೂಸಾ ಸಾಹಿತ್ಯ ಮೆರೆಯುವ ಸಾಧ್ಯತೆಯೂ ಇದೆ.

ಈಚೆಗೆ ಕವಿಗೋಷ್ಠಿಯ ಸಂಘಟಕರೊಬ್ಬರು ಅಕಾಡಮಿಯಿಂದ ನಡೆಯುವ ಕವಿಗೋಷ್ಠಿಗೆ ನಿಮ್ಮ ಹೆಸರನ್ನು ಸೂಚಿಸಲಾಗಿದೆ ಪಾಲ್ಗೊಳ್ಳುತ್ತೀರಾ ಎಂದು ನನ್ನನ್ನು ಕೇಳಿದರು. ಆಗ ನಾನು ಸಂಘಟಕರಿಗೆ ಧನ್ಯವಾದಗಳನ್ನು ಹೇಳುತ್ತಾ ತಪ್ಪು ತಿಳಿಯಬೇಡಿ. ನನಗಿಂತಲೂ ಅದೆಷ್ಟೋ ಉತ್ತಮವಾಗಿ ಪದ್ಯ ಬರೆಯುವ ಕವಿಗಳಿದ್ದಾರೆ. ಅವರ ಅವಕಾಶವನ್ನು ನಾನು ಕಸಿಯಲು ತಯಾರಿಲ್ಲ. ನಾನು ಕಾವ್ಯ ಕೃಷಿ ಅಷ್ಟಾಗಿ ಮಾಡಿದವನಲ್ಲ. ಹೀಗಾಗಿ ನಿಜವಾದ ಕವಿಗಳಿಗೆ ಅವಕಾಶ ಕೊಡಿ ಅಂದೆ. ಅವರಿಗೂ ತುಂಬಾ ಖುಷಿಯಾಯಿತು. ಆದರೆ ನನ್ನ ಸ್ನೇಹಿತನೊಬ್ಬ ನನ್ನನ್ನು ಉಡಾಫೆ ಮಾಡಿ ಈ ಬಗೆಯ ಔದಾರ್ಯ ಈಗಿನ ಸಂದರ್ಭದಲ್ಲಿ ಸರಿಯಲ್ಲ. ಮಹತ್ತರವಾದ ಕವಿತೆಗಳನ್ನು ಬರೆಯದಿದ್ದರೂ ದುಂಬಾಲು ಬಿದ್ದು ಟಿ.ಎ., ಡಿ.ಎ.ಗಾಗಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅಸಹ್ಯ ಪದ್ಯ ಓದಿ ಬರುತ್ತಾರೆ. ನಿಮಗಿನ್ನೂ ವಾಸ್ತವ ತಿಳಿದಿಲ್ಲ ಎಂದು ನಕ್ಕ. ಇರಬಹುದು ಆದರೆ ನನ್ನ ಮನಸು ಸ್ಪಷ್ಟವಾಗಿ ನೀನು ಉತ್ತಮ ಕವಿಯಲ್ಲ ಎಂದು ಹೇಳುತ್ತಿರುವಾಗಲೂ ಮನಸಿಗೆ ವಿರುದ್ಧವಾಗಿ ನಾಲ್ಕು ಸಾಲುಗಳನ್ನು ಗೀಚಿ, ಓದಿ ನಾನೂ ಕವಿ ಎಂದು ಕರೆದುಕೊಳ್ಳಲು ಮನಸು ಒಪ್ಪುವುದಿಲ್ಲ ಎಂದೆ. ಯಾವುದೇ ಬಗೆಯ ವಾಮಮಾರ್ಗಗಳನ್ನು ಅನುಸರಿಸಿ ಬೆಳೆದರೂ ಒಂದು ಹಂತದಲ್ಲಿ ಬೂಸಾ ಎನ್ನುವುದು ಬೆತ್ತಲಾಗುವುದು ಗ್ಯಾರಂಟಿ. ನನಗಿಂತಲೂ ಇಲ್ಲವೇ ನನ್ನಷ್ಟೇ ಸಮರ್ಥನಾಗಿರುವವನ ಹಕ್ಕು ಕಸಿಯುವುದೇ ಜಾಣತನ ಎಂದು ಬಗೆದರೆ ಅಂತ ಜಾಣತನ ನನಗೆ ಬೇಕಿಲ್ಲ ಎಂದು ಖಂಡಿತವಾಗಿ ಹೇಳಿದೆ.

 ಸಾಹಿತ್ಯಕ ವಲಯದಲ್ಲಿ ಒಬ್ಬ ಕತೆಗಾರನನ್ನು ಇನ್ನೊಬ್ಬ ಕತೆಗಾರ ಸಹಿಸುವುದಿಲ್ಲ. ಒಬ್ಬ ಕವಿ ಇನ್ನೊಬ್ಬ ಕವಿಯನ್ನು ಸಹಿಸುವುದಿಲ್ಲ. ಒಬ್ಬರನ್ನೊಬ್ಬರು ಪ್ರೇರಣೆಯನ್ನಾಗಿ ಸ್ವೀಕರಿಸುವ ಮೂಲಕ ಕೃಷಿ ಮಾಡುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ. ವಿಮರ್ಶೆಗಳಿರಲಿ, ಆದರೆ ಅನಾರೋಗ್ಯಕರ ವಾದ ಸ್ಪರ್ಧೆಯ ಮನ:ಸ್ಥಿತಿ ಬೇಡ. ಹತ್ತು ಕತೆಗಳು ಒಂದು ಪತ್ರಿಕೆಗೆ ಬಂದಾಗ ಅವುಗಳಲ್ಲಿ ಯಾವುದು ತುಂಬಾ ಗಟ್ಟಿಯಾಗಿದೆಯೋ ಅದು ಪ್ರಕಟವಾಗಲಿ. ಅದನ್ನು ಬಿಟ್ಟು ಅವರು ತನ್ನ ಜಿಲ್ಲೆಯವರು, ಜಾತಿಯವರು, ಪರಿಚಯದವರು ಎನ್ನುವ ಕಾರಣಗಳೇ ಮುಂದಾಗಿ ನೀವು ಆ ಕತೆಯನ್ನು ಎತ್ತಿಕೊಳ್ಳುವಿರಾದರೆ ನಿಮಗೆ ಗೊತ್ತಿದ್ದೂ ಗೊತ್ತಿದ್ದೂ ಮಿಕ್ಕ ಒಂಬತ್ತು ಜನರಿಗೆ ನೀವು ಅನ್ಯಾಯ ಮಾಡಿದಂತೆ. ಹಾಗಾಗಬಾರದು. ಅದು ಮುಂಬರುವ ತಲೆಮಾರುಗಳಿಗೆ ಬೂಸಾ ಸಾಹಿತ್ಯವನ್ನೇ ಗಟ್ಟಿ ಎಂದು ಹೇಳಿಕೊಟ್ಟಂತಾಗುತ್ತದೆ. ಫ್ರಾನ್ಸ್ ರಾಷ್ಟ್ರ ಗಾತ್ರದಲ್ಲಿ ತೀರಾ ಚಿಕ್ಕದು. ಅದು ಸುಮಾರು ಇಲ್ಲಿಯವರೆಗೆ ಹದಿನೈದು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದೆ. ನೊಬೆಲ್ ಪ್ರಶಸ್ತಿ ಆರಂಭವಾದ ವರ್ಷ 1901. ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದ ದೇಶ ಫ್ರಾನ್ಸ್. ಮೊದಲ ನೊಬೆಲ್ ಪಡೆದವನ ಹೆಸರು ಸಲ್ಲಿ ಪ್ರಧೋಮ್. ಇನ್ನು ಈ ನೊಬೆಲ್ ಪ್ರಶಸ್ತಿಯ ಮೊತ್ತ ಈಗ ಬರೊಬ್ಬರಿ 6 ಕೋಟಿ 60 ಲಕ್ಷ ರೂಪಾಯಿ. ಈಚೆಗೆ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಫೆಟ್ರಿಕ್ ಮೋದಿಲಿನೊ ಅತ್ಯಂತ ಯತಾರ್ಥವಾಗಿ ಸಾಹಿತ್ಯ ಕೃಷಿ ಮಾಡಿದವನು. ಆತ ಬರೆದ ಯಾವ ಕೃತಿಯೂ 170 ಪುಟಗಳನ್ನು ದಾಟುವುದಿಲ್ಲ. ಫ್ರಾನ್ಸ್ ಮಹಿಳಾ ವಿಮೋಚನೆಯಲ್ಲಿ, ರೋಮ್ಯಾಂಟಿಸಿಜಂ ಕಾವ್ಯದಲ್ಲಿ ಕೂಡಾ ಅಗಾಧವಾದ ಕೊಡುಗೆಯನ್ನು ನೀಡಿದೆ. ನಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ನಿರ್ಣಯಿಸುವ ಸಂಗತಿಗಳು ಮಾತ್ರ ಇವತ್ತಿಗೂ ಜಾತಿ, ಪ್ರಾದೇಶಿಕತೆ, ಧರ್ಮ, ಸ್ವಜನಪಕ್ಷಪಾತಗಳಾಗಿರುವುದರಿಂದ ತೀರಾ ಅಪರೂಪಕ್ಕೆ ಯೋಗ್ಯರಾದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ.

ಬಂಡವಾಳಶಾಹಿಗಳಿಂದ ಬಂಡಾಯಗಾರರಿಗೆ ಪ್ರಶಸ್ತಿ!
-ಶಶಿಕಾಂತ ಯಡಹಳ್ಳಿ


ಡಿಎಸ್ ಮ್ಯಾಕ್ಸ್ ಎನ್ನುವುದೊಂದು ರಿಯಲ್ ಎಸ್ಟೇಟ್ ಸಂಸ್ಥೆ. ಬಡ ಕೂಲಿಕಾರರ ಬೆವರು ರಕ್ತವನ್ನು ಹೀರಿ ಹಣ ಮಾಡಿ ಬೆಳೆದ ಸಂಸ್ಥೆ. ಬೆಂಗಳೂರಿನ ಭೂಮಿಯನ್ನು ಆಸೆ ಆಮಿಷ ಒಡ್ಡಿಯೋ, ಇಲ್ಲವೇ ಅಕ್ರಮವಾಗಿ ಪಡೆದೋ ಕಾನೂನು ವಿರೋಧವಾಗಿ ಕಟ್ಟಡಗಳನ್ನು ಕಟ್ಟಿ ಮಾರಾಟ ಮಾಡುವ ಸಂಸ್ಥೆ. ಇಂತಹ ಬಂಡವಾಳಶಾಹಿಗಳು ಕೊಡಮಾಡುವ ಪ್ರಶಸ್ತಿಯನ್ನು ಸಂಭ್ರಮದಿಂದ ಸ್ವೀಕರಿಸುವುದು ಅದೆಷ್ಟು ಸರಿ ಎನ್ನುವುದನ್ನು ಬಂಡಾಯ ಸಂಘಟನೆಯ ನೀವುಗಳು ನಿರ್ಧರಿಸಬೇಕೆಂಬುದು ನನ್ನ ಮನವಿ. ಪ್ರಶಸ್ತಿ ಪುರಸ್ಕಾರಗಳು ಜನಸಂಘಟನೆಗಳಿಂದ ಬಂದರೆ ಸ್ವೀಕರಿಸಬಹುದಾಗಿದೆ. ಆದರೆ ಆಳ್ವಾರಂತವರು ಕೊಡಮಾಡುವ ಸನ್ಮಾನಗಳು, ಜನವಿರೋಧಿ ಬಂಡವಾಳಶಾಹಿಗಳು ಕೊಡುವ ಪ್ರಶಸ್ತಿಗಳ ಹಿಂದೆ ಬಲು ದೊಡ್ಡ ಶಡ್ಯಂತ್ರ ಇರುತ್ತದೆ. ಪ್ರತಿಭಟನೆಯ ತೀವ್ರತೆಯನ್ನು ಡೈಲ್ಯೂಟ್ ಮಾಡುವ ಹುನ್ನಾರಗಳಿರುತ್ತವೆ. ಇಂತಹುದಕ್ಕೆ ಬೇರೆಯವರು ಆಕರ್ಷಿತರಾದರೆ ಆಗಲಿ. ಆದರೆ ಪ್ರಗತಿಪರರು, ಬಂಡಾಯ ಬರಹಗಾರರು ಎನ್ನಿಸಿಕೊಂಡವರು ಸಹ ಪ್ರಶಸ್ತಿ ಕೊಡುವವರ ಹಿನ್ನೆಲೆ, ಆಶಯ, ಉದ್ದೇಶಗಳನ್ನರಿಯದೇ ಸ್ವೀಕರಿಸುವುದು ಪ್ರಶ್ನಾರ್ಹವಾಗಿದೆ. ಬಂಡವಾಳಶಾಹಿಗಳ ನಂಬಿಕೆಗೆ ಅರ್ಹರಾಗಿರುವುದಕ್ಕಿಂತ ಜನರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ. ಅಳಿದುಳಿದ ಬದ್ದತೆಯನ್ನು ತೋರುವುದು ಮುಖ್ಯ. ಮುಂದಿನದು ಅವರವರ ರಾಜೀತನಕ್ಕೆ ಬಿಟ್ಟ ವಿಷಯ.

Wednesday, October 29, 2014

8 ನವೆಂಬರ್ ಯಾದಗಿರಿ : ಜಿಲ್ಲಾ ಕವಿಗೋಷ್ಟಿಕಂಬಾಲಪಲ್ಲಿ ನರಮೇಧ : ಪತ್ರ ಚಳುವಳಿಗೆ ಮನವಿ


ಬಿಜೆಪಿಯ ಕಾಂಗ್ರೆಸ್ಸೀಕರಣ


 
 
 
 

 
ಸೌಜನ್ಯ : ಪ್ರಜಾವಾಣಿ


ಬಿಜೆಪಿಯು ತನ್ನ ಚುನಾವಣಾ ಯಶಸ್ಸಿಗಾಗಿ ಕಾಂಗ್ರೆಸ್‌ನ ಹಾದಿಯನ್ನೇ ತುಳಿಯಬೇಕೇ? ಕಾಂಗ್ರೆಸ್‌ ಪಕ್ಷ ತನ್ನ ರಾಜಕೀಯ ಉಳಿವಿಗೆ  ಬಿಜೆಪಿಯೊಂದಿಗೆ ನೇರವಾಗಿ ಮುಖಾ­ಮುಖಿ ಆಗುವುದನ್ನೇ ಅವಲಂಬಿಸಬೇಕೇ? ಹರಿಯಾಣ ಮತ್ತು ಮಹಾರಾಷ್ಟ್ರ­ದಲ್ಲಿನ ಬಿಜೆಪಿ ಗೆಲುವು ರಾಜಕೀಯ ನಿರ್ವಾತ­ವನ್ನು ತುಂಬು­ವುದೇ ಅಥವಾ ಇಂತಹ ನಿರ್ವಾತವನ್ನು ಇನ್ನಷ್ಟು ಆಳವಾಗಿಸುವುದೇ? ಉಭಯ ರಾಜ್ಯಗಳ ಫಲಿತಾಂಶ ನಂತರದ ಸದ್ದುಗದ್ದಲಗಳು ಮುಗಿದ ತರುವಾಯ ಇಂತಹ ಪ್ರಶ್ನೆಗಳನ್ನೆಲ್ಲ ನಾವು ಕೇಳಿಕೊಳ್ಳಬೇಕಾಗಿದೆ.

ಮೊದಲಿಗೆ ಈ ತೀರ್ಪಿನ ಮಹತ್ವವನ್ನು ನಾವೆಲ್ಲರೂ ಒಪ್ಪಿ­ಕೊಳ್ಳಲೇಬೇಕು. ಹರಿಯಾಣದಲ್ಲಿ ಬಿಜೆಪಿಗೆ ಸರಳ ಬಹು­ಮತ­ವಷ್ಟೇ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಸ್ಪಷ್ಟ ಬಹು­ಮತದ ನಿರೀಕ್ಷೆ ಹುಸಿಗೊಂಡಿದ್ದು, ಶೇ 28ಕ್ಕಿಂತ ಕಡಿಮೆ ಮತ­ಗಳನ್ನು ಅದು ಗಳಿಸಿದೆ. ಈ ಅಂಕಿಸಂಖ್ಯೆಯು ಟಿ.ವಿ. ವಾಹಿನಿಗಳ ಪ್ರಚಾರದ ಭರಾಟೆಯನ್ನು ಒರೆಗೆ ಹಚ್ಚುವಂತೆ ಮಾಡಿದೆ.

ಇಷ್ಟಾದರೂ ರಾಜಕೀಯ ವಾಸ್ತವ ಮಾತ್ರ ಇಂತಹ ಅಂಕಿಸಂಖ್ಯೆಗಳನ್ನೆಲ್ಲ ಮೀರಿಸುವಂತಿದೆ. ಹರಿಯಾಣದಲ್ಲಿ ‘ಜಿ.ಟಿ. ರೋಡ್‌ ಪಾರ್ಟಿ’ ಎಂದು ಕರೆಸಿಕೊಳ್ಳುತ್ತಾ ಆಟಕ್ಕುಂಟು ಲೆಕ್ಕ­ಕ್ಕಿಲ್ಲ ಎಂಬಂತಿದ್ದ ಬಿಜೆಪಿಯು, ರಾಜ್ಯ ಮಟ್ಟದ ಪಕ್ಷವಾಗಿ ಬೆಳೆದು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಂತೆ ಆಗಿದ್ದು ನಿಜಕ್ಕೂ ಅಸಾಧಾರಣವಾದ ಐತಿಹಾಸಿಕ ಸಾಧನೆಯೇ ಸರಿ. (ಜಿ.ಟಿ.ರೋಡ್‌: ಗ್ರ್ಯಾಂಡ್‌ ಟ್ರಂಕ್‌ ರೋಡ್- ಇದು ದೆಹಲಿಯಿಂದ ಹರಿಯಾಣದ ಪೂರ್ವ ಗಡಿ ಮೂಲಕ ಸೋನೆ­ಪತ್‌, ಪಾಣಿಪತ್‌, ಅಂಬಾಲದಂತಹ ನಗರಗಳಿಗೆ ಸಂಪರ್ಕ ಕಲ್ಪಿ­ಸುವ ರಸ್ತೆಯ ಹೆಸರು. ಅಂದರೆ, ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಪಕ್ಷ ಎಂದು ಅದು ವ್ಯಂಗ್ಯವಾಗಿ ಕರೆಸಿ­ಕೊಳ್ಳು­ತ್ತಿತ್ತು) ಮಹಾರಾಷ್ಟ್ರದಲ್ಲೂ ಬಿಜೆಪಿಯು ಮೂರು ಅಂಕಿಗಳ ಗೆಲುವು ಸಾಧಿಸುವ ಮೂಲಕ ಮೊದಲನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಎರಡು ದಶಕಗಳಲ್ಲಿ ಯಾವ ಪಕ್ಷಕ್ಕೂ ಈ ಮಟ್ಟಿನ ಗೆಲುವು ಸಾಧ್ಯವಾಗಿರಲಿಲ್ಲ. ತನ್ನ ಸುದೀರ್ಘಾವಧಿಯ ಮಿತ್ರ ಪಕ್ಷ­ದೊಂದಿಗೆ ಮೈತ್ರಿ ಕಡಿದುಕೊಳ್ಳುವಂತಹ  ಕಠಿಣ ರಾಜಕೀಯ ನಿರ್ಧಾರ ಕೈಗೊಂಡು, ಈ ಪರಿಯ ಗೆಲುವು ಸಾಧಿಸುವುದು ಸಣ್ಣ ಸಾಧನೆಯೇನೂ ಅಲ್ಲ.

ಲೋಕಸಭಾ ಚುನಾವಣೆಗೆ ಕೆಲವು ತಿಂಗಳ ಹಿಂದೆ ಆರಂಭ­ವಾದ ಅಧಿಕಾರ ಬದಲಾವಣೆ ಪ್ರಕ್ರಿಯೆ­ಯನ್ನು ಈ ಫಲಿತಾಂಶ ಪೂರ್ಣಗೊಳಿಸಿದೆ. ಮೊದಲಿಗೆ ತನ್ನ ರಾಷ್ಟ್ರೀಯ ಎದುರಾಳಿಗಳಿಗಿಂತ ಬಿಜೆಪಿಯ ಅಧಿಕಾರ ಹೆಚ್ಚು ಬಲಗೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಎರಡನೆ­ಯ­ದಾಗಿ, ಮಿತ್ರಕೂಟದ ಒಳಗೇ ಪಕ್ಷ ಬಲಗೊಂಡಿದೆ. ಅದರ ಹಿಂದಿನ ಮಿತ್ರನಾದ ಜನಹಿತ ಕಾಂಗ್ರೆಸ್‌ ಪಕ್ಷವನ್ನು ಅದು ಸದೆ­ಬಡಿದಿದೆ. ಶಿವಸೇನಾ ಇಂತಹದ್ದೊಂದು ಸಂಕಟದಿಂದ ಪಾರಾಗಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ಮಟ್ಟಕ್ಕೇನೋ ಬೆಳೆದಿದೆ. ಆದರೂ ಅಧಿಕಾರ ಸಮತೋಲನ ಬದಲಾಗಿರು-­ವು­ದಕ್ಕೆ ಶಿವಸೇನಾಗಿಂತ ಹೆಚ್ಚೂಕಡಿಮೆ ದುಪ್ಪಟ್ಟು ಸ್ಥಾನಗಳನ್ನು ಬಿಜೆಪಿ ಪಡೆದಿರುವುದೇ ಸಾಕ್ಷಿ. ಇಂತಹ ಬೆಳವಣಿಗೆಯಿಂದ ಮಿತ್ರ­ಪಕ್ಷಗಳು ಇನ್ನು ಮುಂದೆ  ಚುನಾ­ವಣೆ ಎದುರಿಸಲು, ಸಂಸತ್ತಿನ ಒಳಗೆ ಅಥವಾ ಸರ್ಕಾರದೊಳಗೆ ಬಿಜೆಪಿ ವಿರುದ್ಧ ನಿರ್ಧಾರ ಕೈಗೊಳ್ಳುವ ಮುನ್ನ ಒಮ್ಮೆ ಯೋಚನೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯ ಒಳಗೇ ಲೆಕ್ಕಾ­ಚಾ­ರದ ತಕ್ಕಡಿಯು ಮೋದಿ– ಷಾ ಉಭಯತ್ರರ ಪರವಾಗಿ ವಾಲಿದೆ.

ಇದು ಸಮರ್ಥ ನೀತಿ ನಿರೂಪಣೆ ಮತ್ತು ಕುಶಲ ರಾಜಕೀಯ ಕಾರ್ಯಾಚರಣೆಗೆ ಸರ್ಕಾರಕ್ಕೆ ಅವಕಾಶ ಕಲ್ಪಿಸಿದೆ. ಇದನ್ನು ಸರ್ಕಾರ ದೀರ್ಘಕಾಲೀನ ಮತ್ತು ಕಠಿಣವಾದ ನಿಲುವು­ಗಳನ್ನು ತೆಗೆದುಕೊಳ್ಳಲು ಬಳಸಿಕೊಳ್ಳುತ್ತದೋ ಅಥವಾ ತನ್ನ ಮಿತ್ರರು ಮತ್ತು ಪ್ರಭಾವಿಗಳಿಗೆ ಅನುಕೂಲ ಮಾಡಿ­ಕೊಡುವ ನೀತಿಗಳನ್ನು ರೂಪಿಸುತ್ತದೋ ತಿಳಿಯದು. ಜೊತೆಗೆ ಅದರ ರಾಜಕೀಯ ನಡೆಯನ್ನು ವಿಶ್ಲೇಷಣೆಗೆ ಒಳಪಡಿಸುವು­ದಾ­ದರೆ, ದೆಹಲಿಯಲ್ಲಿ ಚುನಾವಣೆ ಎದುರಿಸುವ ಧೈರ್ಯ ತೋರು­ತ್ತದೋ ಅಥವಾ ತನ್ನ ನೇತೃತ್ವದ ಸರ್ಕಾರಕ್ಕೆ ಹಿಂಬಾಗಿಲಿನಿಂದ ರಕ್ಷಣೆ ಒದಗಿಸಲು ನೋಡುತ್ತದೋ ಎಂಬುದನ್ನೂ ಕಾದು ನೋಡಬೇಕಿದೆ.

ಇತ್ತೀಚಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ನಿರಾಳ ಸಿಕ್ಕಿತ್ತು. ಆದರೆ ಅದು ತಾತ್ಕಾಲಿಕವಾದುದು. ಅಲ್ಲದೆ ಅದು, ಕಠಿಣ ಭವಿಷ್ಯದ ಮುನ್ಸೂಚನೆಯಂತೆ ಇತ್ತು.  ಆ ಪಕ್ಷದ ಒಳಗೇ ಗಾಂಧಿ ಕುಟುಂಬ ವಹಿಸುವ ಪಾತ್ರದ ವಿರೋ­ಧಾ­ಭಾಸವನ್ನು ಈ ಫಲಿತಾಂಶಗಳು ಒತ್ತಿ ಹೇಳಿದ್ದವು. ಪ್ರತಿ ಬಾರಿ ವ್ಯಕ್ತವಾದ ನಿರ್ಣಯವೂ ಪಕ್ಷದ ಉನ್ನತ ಮಟ್ಟದಲ್ಲಿ ಇರುವ ನಾಯಕತ್ವ ಶೂನ್ಯತೆಯನ್ನು ಮತ್ತು ಅಂತಹದ್ದೊಂದು ನಿರ್ವಾ­ತ­ವನ್ನು  ತುಂಬಬಲ್ಲವರು ಅಥವಾ ಅಂತಹವರಿಗೆ ಸ್ಪರ್ಧೆ ಒಡ್ಡ­ಬಲ್ಲ ಸಮರ್ಥರನ್ನು ಉಪೇಕ್ಷಿಸುವ ಪ್ರವೃತ್ತಿಯನ್ನು ಸಹ ಎತ್ತಿ ಹಿಡಿದಿತ್ತು. ಹೀಗೆ ಬದಲಾವಣೆಯ ಅಗತ್ಯ ಮತ್ತು ಅಸಾಧ್ಯ ಎರಡೂ ಕಾಂಗ್ರೆಸ್‌ಗೆ ಮಾರಕವಾಗಿವೆ.

ಹರಿಯಾಣದಲ್ಲಿ ಸಾಮಾಜಿಕ ನೆಲೆ ಕಳೆದು­ಕೊಂಡಿರುವ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕನಾಗಿ ಉಳಿಯುವುದು ಸಹ ಕಷ್ಟ. ಮಹಾರಾಷ್ಟ್ರದಲ್ಲಿ ಶಿವಸೇನೆಯು ತನ್ನ ನೆಲೆ ನವೀಕರಿಸಿಕೊಂಡಿರುವುದರಿಂದ ಕಾಂಗ್ರೆಸ್‌­­ಗಾಗಲೀ ಅಥವಾ ಎನ್‌ಸಿಪಿಗಾಗಲೀ ರಾಜಕೀಯ ಸಾಧನೆ ಸದ್ಯಕ್ಕಂತೂ ಕಾರ್ಯ­ಸಾಧ್ಯವಲ್ಲ.

ಹೀಗೆ ಅಸ್ತಿತ್ವದ ಪ್ರಶ್ನೆ ಕಾಂಗ್ರೆಸ್‌ಗೆ ಕೇವಲ ಈ ಎರಡು ರಾಜ್ಯಗಳಲ್ಲಷ್ಟೇ ಎದುರಾಗಿಲ್ಲ. ಎಲ್ಲೆಲ್ಲಿ ಅದು ಶೇ 20ಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತದೋ ಅಲ್ಲೆಲ್ಲ ಅದು ಚೇತರಿಸಿ­ಕೊಂಡಿಲ್ಲ ಎಂಬುದನ್ನು ಈಚಿನ ಚುನಾವಣಾ ಇತಿಹಾಸ ತೆರೆ­ದಿಟ್ಟಿದೆ. ಒಂದರ ನಂತರ  ಒಂದರಂತೆ ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶದಲ್ಲೆಲ್ಲ ಕಾಂಗ್ರೆಸ್‌ ಕ್ರಿಯಾ­ತ್ಮಕ ಪರಿಣಾಮ ಬೀರುವ ಮಟ್ಟಕ್ಕಿಂತ ಕೆಳಗೇ ಇದೆ. ಹರಿಯಾ­ಣದಲ್ಲಿ ಶೇ 20ಕ್ಕಿಂತ ಕೊಂಚ ಹೆಚ್ಚು ಮತಗಳನ್ನು ಗಳಿಸಿದ್ದರೂ ಮಹಾರಾಷ್ಟ್ರದೊಟ್ಟಿಗೆ ಆ ರಾಜ್ಯವನ್ನೂ ಈಗ  ಇದೇ ಪಟ್ಟಿಗೆ ಸೇರಿಸಬಹುದು. ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಡ­ದಂತಹ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್‌ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನಕ್ಕೆ ಇಳಿದಿದೆ. ಈಗ ಬಂದಿರುವ ಫಲಿತಾಂಶ, ವಿರೋಧ ಪಕ್ಷದಲ್ಲಿದ್ದ ಶೂನ್ಯ ಭಾವವನ್ನು ಇನ್ನಷ್ಟು ಹೆಚ್ಚಿಸಿದೆ. ಬಿಹಾರದಲ್ಲಿ ಮಾಡಿ­ದಂತೆ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಬಳಸಿಕೊಂಡು ಈ ನಿರ್ವಾತವನ್ನು ತುಂಬಲು ಹೊರಟಿದ್ದೇ ಆದರೆ, ಅದು ದೀರ್ಘಾವಧಿಯಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತದೆ ಅಷ್ಟೆ.

ಇಲ್ಲಿ ನಿರ್ವಾತ ಎಂಬುದು ವಿರೋಧ ಪಕ್ಷದಲ್ಲಿದೆ ಎಂದು ಹೇಳುವುದಕ್ಕಿಂತ ಇದೊಂದು ‘ರಾಜಕೀಯ ನಿರ್ವಾತ’ ಎಂದು ಹೇಳುವುದೇ ಸೂಕ್ತ. ಏಕೆಂದರೆ ಈಗ ಬಿಜೆಪಿಗೆ ಸಿಕ್ಕಿ­ರುವ ಅದ್ಭುತ ಯಶಸ್ಸು ಅದಕ್ಕಾಗಿ ಅದು ತೆತ್ತಿರುವ ಬೆಲೆ­ಯನ್ನು ಮರೆಮಾಚುತ್ತಿದೆ. ಬಿಜೆಪಿ ಹೆಚ್ಚು ಹೆಚ್ಚು ಯಶಸ್ಸು ಗಳಿಸಿದಷ್ಟೂ ಅದು ಕಾಂಗ್ರೆಸ್‌ನ ಹಾದಿಯನ್ನೇ ತುಳಿಯ­ತೊಡ­ಗು­ತ್ತದೆ ಎಂಬುದು ಸಹ ಸ್ಪಷ್ಟ. ಬಿಜೆಪಿಯ ಕಾಂಗ್ರೆಸ್ಸೀಕರಣ ಹರಿಯಾಣದಲ್ಲಿ ಸ್ಫುಟವಾಗಿಯೇ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕರನ್ನು ಸಾರಾಸಗಟಾಗಿ ಅದು ಆಮದು ಮಾಡಿ­ಕೊಂಡಿದೆ. ಕಾಂಗ್ರೆಸ್‌ನ ಹಳೆಯ ಚಾಳಿಯಾದ ಜಾತಿ ಮತ್ತು ಸಮುದಾಯ ಆಧಾರಿತ ಮತ ಬ್ಯಾಂಕ್‌ ಆಟಗಳನ್ನು ಬಿಜೆಪಿ ಸಹ ನಿಸ್ಸಂಕೋಚವಾಗಿ ಆಡಿದೆ. ಮುಖ್ಯಮಂತ್ರಿ ಘೋಷಣೆ ವಿಚಾರದಲ್ಲಿ ಎಚ್ಚರಿಕೆಯಿಂದ ಅನಿಶ್ಚಿತತೆ ಕಾಯ್ದುಕೊಂಡಿದೆ. ತನ್ನ ಪ್ರಣಾಳಿಕೆಯಲ್ಲಿ ಯಾವುದೇ ಮಹತ್ವದ ಸಂಗತಿಗಳನ್ನೂ ಒಳಗೊಳ್ಳದೆ ಸೂಕ್ಷ್ಮವಾಗಿ ವರ್ತಿಸಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಳಿ ಮತ್ತು ಕಪ್ಪು ಹಣ ಎರಡರ ಬಳಕೆಯಲ್ಲೂ ಕಾಂಗ್ರೆಸ್‌ಗಿಂತ ತಾನೇನೂ ಕಡಿಮೆಯಿಲ್ಲ  ಎಂಬುದನ್ನು ಸಾಬೀತು ಮಾಡಿದೆ. ಮತದಾನದ ದಿನವಂತೂ ದೈಹಿಕ ಶಕ್ತಿ ಬಳಕೆ­ಯಲ್ಲಿ ಐಎನ್‌ಎಲ್‌ಡಿ ಮತ್ತು ಕಾಂಗ್ರೆಸ್‌ನ್ನೂ ಅದು ಮೀರಿಸಿದೆ ಎಂಬ ವರದಿಗಳಿವೆ. ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಚುನಾವಣಾ ಯಶಸ್ಸಿಗೆ ಬೇರೆ ಯಾವು­ದಾದರೂ ಮಾರ್ಗ ಇರಲು ಸಾಧ್ಯವೇ ಎಂದು ಅಚ್ಚರಿಪಡು­ವಂತೆ ಅಲ್ಲಿನ ವಾತಾವರಣ ಇತ್ತು. ಪ್ರಜಾಪ್ರಭುತ್ವದ ಬಗ್ಗೆ ಭ್ರಮನಿರಸನವನ್ನು ಉಂಟು ಮಾಡಲು ಇಷ್ಟರ ಮಟ್ಟಿನ ರಾಜಕೀಯ ನಿರ್ವಾತ ಸಾಕು. ಜೊತೆಗೆ ಪರ್ಯಾಯ ರಾಜಕೀಯದತ್ತ ಚಿಂತಿಸುವ ಸಾಧ್ಯತೆ­ಗಳಿಗೂ ಈ ಫಲಿತಾಂಶ ದಾರಿ ಮಾಡಿಕೊಟ್ಟಿದೆ.


(ಲೇಖಕರು ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರು)

9 ನವೆಂಬರ್ ಮೈಸೂರು : ದಿ ತಾವೋ ಆಫ್ ಫಿಸಿಕ್ಸ್ -ಉಪನ್ಯಾಸ ಮತ್ತು ಚರ್ಚೆ9 ನವೆಂಬರ್ ಗದಗ : ಗದಗ ಜಿಲ್ಲಾ ಕವಿಗೋಷ್ಟಿಅಪಾಯದಲ್ಲಿ ಶಾಲಾ ಶಿಕ್ಷಣ...
 ರೋಹಿತ್ ಧನ್‌ಕರ್, ಬೆಂಗಳೂರು


ತೀರಾ ಇತ್ತೀಚೆಗೆ ರಾಜಸ್ಥಾನ ಸರಕಾರವು 17 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚುಗಡೆಗೊಳಿಸಲು ನಿರ್ಧರಿಸಿತು. ಅದೇ ರೀತಿ ಮಹಾರಾಷ್ಟ್ರ ಸರಕಾರವು 14 ಸಾವಿರ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿತು. ಇತ್ತ ಒಡಿಶಾ ಸರಕಾರ ಸಹ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದೆಯೆಂಬ ನೆಪ ಹೇಳಿಕೊಂಡು 195 ಶಾಲೆಗಳಿಗೆ ಬೀಗಜಡಿಯುವುದಾಗಿ ಘೋಷಿಸಿತು. ಇವೆಲ್ಲವೂ ಅಪರೂಪದ ಪ್ರಕರಣಗಳೆಂದು ನಿರ್ಲಕ್ಷಿಸುವ ಹಾಗಿಲ್ಲ. ನಮ್ಮ ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಅಧಃಪತನದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಇವು ಸ್ಪಷ್ಟವಾಗಿ ಸೂಚಿಸುತ್ತವೆ.


      ಇದೇ ವೇಳೆ ಖಾಸಗಿ ಶಾಲಾ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಸೋದಾಹರಣ ಸಹಿತವಾಗಿ ವಿವರಿಸಬಹುದಾಗಿದೆ. ಮೊನ್ನೆ ತಾನೇ, ಪೋಷಕರೊಬ್ಬರು ನನ್ನೊಂದಿಗೆ ಮಾತನಾಡುತ್ತಾ, ಅವರ ಮಗ ಕಲಿಯುತ್ತಿರುವ ಶಾಲೆಯ ಶಿಕ್ಷಕರು, ಕಲಿಕೆಯಲ್ಲಿ ಆ ಮಗುವಿನ ಕಳಪೆ ನಿರ್ವಹಣೆಯ ಬಗ್ಗೆ ತನ್ನ ಬಳಿ ದೂರಿದರೆಂದು ತಿಳಿಸಿದರು. ಆ ಶಾಲೆಯ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ಪಠ್ಯಗಳ ಶಿಕ್ಷಕರು, ಆ ಹುಡುಗನ ತಂದೆಗೆ, ಪಾಠದ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು!. ಶಾಲಾ ತರಗತಿಯ ಸಮಯದಲ್ಲಿ ವಿದ್ಯಾರ್ಥಿಯು ನೋಟ್ಸ್ ಅಪೂರ್ಣಗೊಳಿಸಿದರೆ ಅಥವಾ ದುರ್ನಡತೆಯನ್ನು ಪ್ರದರ್ಶಿಸಿದರೆ, ಅದನ್ನು ನಿಭಾಯಿಸುವುದು ಶಿಕ್ಷಕರ ಹೊಣೆಗಾರಿಕೆಯಲ್ಲವೇ ? ಎಂದು ಆ ಪೋಷಕ ಬೇಸರದಿಂದಲೇ ನನ್ನಲ್ಲಿ ಪ್ರಶ್ನಿಸಿದರು. ‘‘ ಒಂದು ವೇಳೆ ನನ್ನ ಪುತ್ರ ಮನೆಯಲ್ಲಿ ದುರ್ವರ್ತನೆ ತೋರಿದಲ್ಲಿ ಅಥವಾ ಓದದಿದ್ದಲ್ಲಿ ಇಲ್ಲವೇ ಬರೆಯದಿದ್ದಲ್ಲಿ,ಪೋಷಕರಾದ ನಾವು ಆತನನ್ನು ನಿಭಾಯಿಸುತ್ತೇವೆ. ಈ ವಿಷಯವನ್ನು ಆತನ ಅಧ್ಯಾಪಕರ ಬಳಿ ತೆಗೆದುಕೊಂಡು ಬರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಯಾಕೆ ಎಲ್ಲವನ್ನೂ ಮಗುವಿನ ಪೋಷಕರ ಮೇಲೆ ಹೇರುತ್ತಾರೆ’’ ಎಂದು ಆತ ಪ್ರಶ್ನಿಸುತ್ತಾರೆ. ‘‘ಮಗುವಿನ ಓದುವಿಕೆ ಹಾಗೂ ಬರವಣಿಗೆಯ ಕುರಿತಾದ ಪೂರ್ಣ ಹೊಣೆಗಾರಿಕೆಯನ್ನು ಶಿಕ್ಷಕರು ವಹಿಸಿಕೊಳ್ಳಬೇಕು. ಪೋಷಕರು ಕೇವಲ ತಮ್ಮ ಮಗುವಿಗೆ ಪುಸ್ತಕ, ಪೆನ್ ಹಾಗೂ ಪೆನ್ಸಿಲ್ ಇತ್ಯಾದಿ ಕಲಿಕಾ ಸೌಲಭ್ಯಗಳನ್ನು ಒದಗಿಸುವವರು ಮಾತ್ರವೇ ಆಗಿರುತ್ತಾರೆ’’ ಎಂದವರು ಅಭಿಪ್ರಾಯಿಸುತ್ತಾರೆ.


  ವಿದ್ಯಾರ್ಥಿಯ ಕಲಿಕೆಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನೂ ಆತನ ಪೋಷಕರಿಗೆ ಹೇರುವ ಪ್ರವೃತ್ತಿಯು ಈ ಹಿಂದೆ ಮೇಲ್ದರ್ಜೆಯ ಖಾಸಗಿ ವಲಯದ ಶಾಲೆಗಳಲ್ಲಿ ವ್ಯಾಪಕವಾಗಿತ್ತು. ಇದೀಗ ಅದು ನಿಧಾನವಾಗಿ ಕೆಳಮಟ್ಟದ ಖಾಸಗಿ ಶಾಲೆಗಳಿಗೂ ವ್ಯಾಪಿಸುತ್ತಿದೆ.

ಶಾಲಾ ವ್ಯವಸ್ಥೆಯ ಪರಿಕಲ್ಪನೆ
   ಈ ಕಾರ್ಯಕ್ರಮಗಳ ಒಂದು ಮೂಲಭೂತ ಸಮಸ್ಯೆ ಯೇನೆಂದರೆ ಅವೆಲ್ಲವೂ ಶಾಲಾ ವ್ಯವಸ್ಥೆಯ ನೈಜ ಪರಿಕಲ್ಪ ನೆಯನ್ನು ಕಡೆಗಣಿಸುತ್ತದೆ. ಎಲ್ಲಾ ಶಾಲೆಗಳು ಕಲಿಕೆಯೆಂಬ ಒಂದು ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಬ್ಬರೂ ಪಾಲ್ಗೊಳ್ಳಬೇಕಾಗುತ್ತದೆ. ಬೌದ್ಧಿಕ ಬೆಳವಣಿಗೆಗೆ ಹಾಗೂ ಮಾನಸಿಕ ಶಿಸ್ತನ್ನು ಅಭಿವೃದ್ಧಿಪಡಿಸಲು ನಿರಂತರವಾದ ಹಾಗೂ ಸಮಂಜಸವಾದ ರೀತಿಯಲ್ಲಿ ಚಿಂತನೆಗಳ ಆವಿಷ್ಕಾ ರವನ್ನು ನಡೆಸುತ್ತಲೇ ಇರಬೇಕಾಗುತ್ತದೆ. ಯಾವುದನ್ನು ಕಲಿಸಬೇಕು ಹಾಗೂ ಹೇಗೆ ಬೋಧಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳದೆ ಇವೆಲ್ಲವೂ ಸಾಧ್ಯವಾಗಲಾರದು. ಹೀಗಾಗಿ ಶಾಲೆಯೆಂಬುದು ಮಕ್ಕಳ ಬೌದ್ಧಿಕ ಹಾಗೂ ಭಾವನಾತ್ಮಕ ಆವಶ್ಯಕತೆಗಳ ಬಗ್ಗೆ ವೃತ್ತಿಪರ ಜ್ಞಾನ ಹಾಗೂ ಅಳವಾದ ಸಂವೇದನೆಯನ್ನು ಪ್ರದರ್ಶಿಸಬೇಕಾದ ಸುಸಂಘಟಿತ ಸ್ಥಳವಾಗಿದೆ.ಆದರೆ ಆ ರೀತಿ ಆಗದೆ ಹೋದಾಗ, ಶಾಲೆಯ ಕುರಿತಾದ ಪರಿಕಲ್ಪನೆಯೇ ವಿರೂಪಗೊಳ್ಳುತ್ತದೆ. ಕಳೆದ ಐದು ದಶಕಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ತಾಳತಪ್ಪಿರುವುದು ಇದರಿಂದಾಗಿಯೇ.


   ಉದಾಹರಣೆಗೆ, ಅನೌಪಚಾರಿಕ ಶಿಕ್ಷಣ ಯೋಜನೆಗಾಗಿ ಸರಕಾರವು ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಕಾರ್ಯಕ್ರಮವನ್ನು 1960ರ ದಶಕದ ಕೊನೆಯಿಂದ ಹಿಡಿದು 1990ರ ದಶಕದ ಆರಂಭದ ತನಕ ದೇಶಾದ್ಯಂತ ಅನುಷ್ಠಾನಗೊಳಿಸಲಾಯಿತು. ಈ ಕಾರ್ಯಕ್ರಮವು ಸಂಪೂರ್ಣವಾಗಿ ಬೋಧನೆ ಹಾಗೂ ಶಿಕ್ಷಣ ಯೋಜನೆಯಲ್ಲಿರಬೇಕಾದ ವೃತ್ತಿಪರ ಜ್ಞಾನದ ಕುರಿತಾದ ಚಿಂತನೆಗಳನ್ನು ಸಂಪೂರ್ಣವಾಗಿ ಕೈಬಿಟ್ಟಿತು. ಯಾರೂ ಕೂಡಾ ಬೋಧಕರಾಗಬೇಕೆಂಬ ಸಂಕೇತವನ್ನು ಅದು ರವಾನಿಸಿತು. ಶಾಲೆಗಳಿಗೆ ಸುಸಜ್ಜಿತವಾದ ಪ್ರತ್ಯೇಕ ಸೌಕರ್ಯಗಳಿರಬೇಕೆಂಬ ಚಿಂತನೆಯನ್ನೂ ಅದು ಗಾಳಿಗೆ ತೂರಿತು. ಹೀಗೆ ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ದಿಗೆ ಅದು ಕನಿಷ್ಠ ಗಮನವನ್ನು ನೀಡಿತು.ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಷ್ಟೇ ಅದು ಗಮನ ನೀಡಿತು. ಅಲ್ಲದೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಆವಶ್ಯಕತೆಗಳನ್ನೂ ಅದು ಕಡೆಗಣಿಸಿತು. ಒಟ್ಟಾರೆಯಾಗಿ ಶಿಕ್ಷಣ, ಶಿಕ್ಷಕ ಹಾಗೂ ಶಾಲೆಯ ಕುರಿತಾದ ಚಿಂತನೆಗಳನ್ನು ಅದು ಅಪವೌಲ್ಯಗೊಳಿಸಿತು.


  ಲೋಪದೋಷಭರಿತವಾದ ಈ ಕಾರ್ಯಕ್ರಮದ ವೈಫಲ್ಯವು ಅರಿವಿಗೆ ಬಂದ ಬಳಿಕ, ಹಲವು ತಜ್ಞರು ರಾಜಸ್ಥಾನದಲ್ಲಿ ಶಿಕ್ಷಾ ಕರ್ಮಿಯಂತಹ ಇತರ ಉಪಕ್ರ ಮಗಳನ್ನು ಜಾರಿಗೊಳಿಸಿದರು. ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ಕೂಡಾ ಅನುಷ್ಠಾನಗೊಂಡಿತು. ವೃತ್ತಿಪರ ಜ್ಞಾನ, ಬೌದ್ಧಿಕ ನಿಷ್ಠುರತೆ, ಮಗುವಿನ ಹಾಗೂ ಮೂಲಸೌಕರ್ಯದ ಆವಶ್ಯಕತೆಗಳ ಬಗ್ಗೆ ಸಂವೇದನಾಶೀಲತೆ ಇವ್ಯಾವುದನ್ನೂ, ಈ ಕಾರ್ಯಕ್ರಮಗಳ ಮೂಲಕ ಮರುಸ್ಥಾಪಿಸಲು ಸಾಧ್ಯವಾಗಲಿಲ್ಲ. ಉತ್ತಮ ಶಿಕ್ಷಣದ ಕೋರಿಕೆಗಳನ್ನು ತಿಳಿದುಕೊಳ್ಳುವಲ್ಲಿ ವಿಫಲತೆ ಹಾಗೂ ಹಿಂದಿನ ತಪ್ಪು ಶಿಕ್ಷಣ ನೀತಿಗಳ ಫಲವಾಗಿ ಇಂದು ಅನೇಕ ಸರಕಾರಿ ಶಾಲೆಗಳು ಬಾಗಿಲುಮುಚ್ಚುತ್ತಿವೆ.


ಸರಕಾರಿ ಶಾಲೆಗಳ ಅಧಃಪತನ
  ಸರಕಾರಿ ಶಾಲೆಗಳು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆಯೆಂಬ ಏಕೈಕ ಕಾರಣದಿಂದ ಅವು ಕೊನೆಯುಸಿರೆಳೆಯುತ್ತಿವೆ. 1950 ಹಾಗೂ 1960ರ ದಶಕದ ಕೊನೆಯಲ್ಲಿ, ಶಾಲೆಗಳ ಸಂಖ್ಯೆಯಲ್ಲಿ ಏರಿಕೆಯಾದಾಗ, ಅವುಗಳ ಮೂಲಸೌಕರ್ಯಗಳ ಕುರಿತಾಗಲಿ ಹಾಗೂ ಶಿಕ್ಷಕರ ಲಭ್ಯತೆಯ ಕುರಿತಾಗಲಿ ಸಾಕಷ್ಟು ಗಮನವನ್ನು ನೀಡಿರಲಿಲ್ಲ. ಬಹುತೇಕ ರಾಜ್ಯಗಳಲ್ಲಿ ಈಗಲೂ ಶಿಕ್ಷಕರಿಗೆ ಅತ್ಯಂತ ನಿಕೃಷ್ಟವಾದ ವೇತನವನ್ನು ನೀಡಲಾಗುತ್ತಿದೆ ಹಾಗೂ ಶಿಕ್ಷಣದ ಆಡಳಿತವು ಅದಕ್ಷತೆಯಿಂದ ಕೂಡಿದೆ. ರಾಜಸ್ಥಾನದಂತಹ ರಾಜ್ಯಗಳಲ್ಲಿ ಬಹು ದೊಡ್ಡ ಸಂಖ್ಯೆಯ ಶಿಕ್ಷಕರು ತರಬೇತಿಯನ್ನೇ ಪಡೆದುಕೊಂಡಿಲ್ಲ. ಇವೆಲ್ಲವೂ ಸಾರ್ವಜನಿಕ ಶಿಕ್ಷಣದ ಗುಣಮಟ್ಟದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಕರಾಗುವ ಹುಮ್ಮಸ್ಸನ್ನು ಕಳೆದುಕೊಂಡಿದ್ದಾರೆ ಹಾಗೂ ಅಸಮಾಧಾನ ಅವರಲ್ಲಿ ಮನೆ ಮಾಡಿದೆ.


  ಕೆಲವು ಸರಕಾರಗಳು 1950ರ ದಶಕದ ಅಂತ್ಯದಲ್ಲಿ ಶಿಕ್ಷಣದ ಆಡಳಿತದ ಹೊಣೆಯನ್ನು ಪಂಚಾಯತ್ ರಾಜ್ ವ್ಯವಸ್ಥೆಗೆ ವಹಿಸಿದವು. ಇದರಿಂದಾಗಿ ಸ್ಥಳೀಯ ರಾಜಕಾರಣಿಗಳಿಗೆ ಶಿಕ್ಷಕರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ದೊರೆಯಿತು. ಶಾಲೆಗಳಲ್ಲಿ ಸೌಕರ್ಯಗಳ ಕೊರತೆ, ಶಿಕ್ಷಕರಿಗೆ ಕಡಿಮೆ ವೇತನ ಹಾಗೂ ಅನಿಯಮಿತವಾಗಿ ವೇತನ ನೀಡಿಕೆ ಮತ್ತಿತರ ಸಮಸ್ಯೆಗಳಿಂದಾಗಿ ರಾಜಸ್ಥಾನದಂತಹ ರಾಜ್ಯಗಳ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಿಯ ಪ್ರಮಾಣ ಹೆಚ್ಚತೊಡಗಿತು. ಇದರಿಂದಾಗಿ ಹೊಸತಾಗಿ ತಲೆಯೆತ್ತ ತೊಡಗಿದ ಶಿಕ್ಷಕರ ಒಕ್ಕೂಟಗಳಲ್ಲಿ ಸ್ವಾರ್ಥಪರತೆ ಬೆಳೆಯತೊಡಗಿತು. ಶಿಕ್ಷಕರು ಮೊದಲಿಗೆ ತಮ್ಮ ಹಿತದ ಬಗ್ಗೆೆ ಚಿಂತಿಸಲಾರಂಭಿಸಿದರೇ ಹೊರತು, ಶಾಲೆಯ ಕಾರ್ಯನಿರ್ವಹಣೆಯ ಬಗೆಗಾಗಲಿ ಅಥವಾ ಶಿಕ್ಷಣದ ಗುಣಮಟ್ಟದ ಕುರಿತಾಗಲಿ ಯೋಚಿಸುವುದಕ್ಕೆ ಹೆಚ್ಚು ಗಮನ ನೀಡಲಿಲ್ಲ.


ಈ ಕಾಲಘಟ್ಟದಲ್ಲಿ ಶಿಕ್ಷಣ ನೀತಿ ನಿರೂಪಕರು, ಸಾರ್ವಜನಿಕ ಶಿಕ್ಷಣ ರಂಗವು ಎದುರಿಸುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಹೆಚ್ಚುತ್ತಿರುವ ಶಿಕ್ಷಣದ ಬೇಡಿಕೆಯನ್ನು ಪೂರೈಸಲು ತುರ್ತು ಹಾಗೂ ವೆಚ್ಚದಾಯಕವಲ್ಲದ ಪರಿಹಾರೋಪಾಯಗಳನ್ನು ಮುಂದಿಟ್ಟರು.


 ಅಧಿಕ ಶಾಲೆಗಳಿಗಾಗಿ ಬೇಡಿಕೆ, ಹಣಕಾಸು ಮತ್ತಿತರ ಸಂಪನ್ಮೂಲಗಳ ಕೊರತೆ, ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯ ಒತ್ತಡ ಇವೆಲ್ಲವೂ ಶಿಕ್ಷಕರಲ್ಲಿ ಸ್ವಹಿತದ ಬಗ್ಗೆ ಹೆಚ್ಚು ಗಮನವನ್ನು ನೀಡುವಂತೆ ಪ್ರೇರೇಪಿಸಿದವು. 1960ರ ದಶಕದ ಬಳಿಕ ಸರಕಾರವು ರೂಪಿಸಿದ ಶಿಕ್ಷಣ ಕಾರ್ಯಕ್ರಮಗಳಲ್ಲಿ ಈ ಮನಃಸ್ಥಿತಿಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅನೌಪಚಾರಿಕ ಶಿಕ್ಷಣ, ಶಿಕ್ಷಾ ಕರ್ಮಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ), ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಇತ್ಯಾದಿ ಕಾರ್ಯಕ್ರಮಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ.


ಕಲಿಕಾ ವಿಧಾನಗಳು


ಶಿಕ್ಷಣದ ಗುಣಮಟ್ಟದ ಬಗ್ಗೆ ಪೋಷಕರಲ್ಲಿರುವ ಆತಂಕವನ್ನೇ ನಗದು ಮಾಡಿಕೊಂಡು, ಖಾಸಗಿ ಶಿಕ್ಷಣ ರಂಗವು ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಖಾಸಗಿ ಶಾಲೆಗಳು ಈಗ ಅಸಾಧಾರಣವಾದ ರೀತಿಯ ಬೆಳವಣಿಗೆಯನ್ನು ಕಾಣುತ್ತಿವೆ. ಒಂದೆಡೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಹದಗೆಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಶಿಕ್ಷಣ ವ್ಯವಸ್ಥೆಯು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆಯೆಂದು ಕೆಲವು ವಿಶ್ಲೇಷಕರು ಯೋಚಿಸುತ್ತಿದ್ದಾರೆ.  ಈ ತಪ್ಪುಗ್ರಹಿಕೆಯನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಗಿದೆ. ಖಾಸಗಿ ಶಾಲೆಗಳು ಲಾಭದ ದೃಷ್ಟಿಯಿಂದ ನಡೆಯುತ್ತವೆ. ಎಲ್ಲಿ ಜ್ಞಾನವು ಪೋಷಿಸಲ್ಪಡುತ್ತದೆಯೋ, ಎಲ್ಲಿ ಬೌದ್ಧಿಕತೆಯು ಬೆಳವಣಿಗೆ ಹೊಂದುವುದೋ, ಎಲ್ಲಿ ಮಕ್ಕಳ ಬಗ್ಗೆ ಸಂವೇದನಾ ಶೀಲತೆ ಹಾಗೂ ಸಮರ್ಪಕವಾದ ಸಂಪನ್ಮೂಲಗಳು ಇರುವುದೋ ಅದುವೇ ಉತ್ತಮವಾದ ಶಾಲೆಯೆನಿಸುತ್ತದೆ. ಗರಿಷ್ಠಮಟ್ಟದ ಲಾಭವನ್ನು ಪಡೆದುಕೊಳ್ಳುವ ಪ್ರವೃತ್ತಿಯು ಶಿಕ್ಷಣ ಸಂಸ್ಥೆಗಳ ಮಾಲಕರನ್ನು ಭಾವಾನಾತ್ಮಕ ಕಲಿಕೆಗೆ ಒತ್ತು ನೀಡುವ ಬದಲು ಸ್ಪರ್ಧಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕಂಠಪಾಠದ ಮೂಲಕ ಕಲಿಕೆಗೆ ಬಲವಂತ ಪಡಿಸಲಾಗುತ್ತದೆ. ಇದರಿಂದಾಗಿ ಅರಿಯುವಿಕೆಯ ವೌಲ್ಯವು ಕುಂಠಿತವಾಗುತ್ತದೆ. ನೈಜ ಸ್ವರೂಪದ ಕಲಿಕೆಯಲ್ಲಿ ಸ್ಪಷ್ಟ ತಿಳುವಳಿಕೆಗೆ ಪ್ರಾಮುಖ್ಯ ನೀಡಲಾಗುತ್ತಿದೆ.ಇದು ಅತ್ಯಂತ ತ್ರಾಸದಾಯಕವಾಗಿದೆ ಹಾಗೂ ಇದಕ್ಕಾಗಿ ಅಧಿಕ ಸಮಯವೂ ಬೇಕಾಗುತ್ತದೆ. ಹೀಗಾಗಿ ಖಾಸಗಿ ಶಾಲೆಗಳು ಸಹಜವಾಗಿಯೇ ಮೊದಲನೆ ರೀತಿಯ ಕಲಿಕಾ ವಿಧಾನವನ್ನು ಪ್ರೋತ್ಸಾಹಿಸುತ್ತವೆ. ಇಂತಹ ಚಿಂತನೆಗಳು ಒಂದು ಉತ್ತಮ ಶಾಲೆಗಿರಬೇಕಾದ ಆವಶ್ಯಕತೆಗಳನ್ನು ನಿರ್ಲಕ್ಷಿಸುತ್ತವೆ.

     ಖಾಸಗಿ ಶಾಲಾ ಶಿಕ್ಷಣ ವ್ಯವಸ್ಥೆಯ ಅತ್ಯಂತ ಹಾನಿ ಕಾರಕವಾದ ಅಂಶವೆಂದರೆ, ಖಾಸಗಿ ಶಾಲೆಗಳು ಮಗುವಿನ ನೈತಿಕ ಬೆಳವಣಿಗೆ ಹಾಗೂ ನಡತೆಯ ಬಗ್ಗೆ ಜವಾಬ್ದಾರಿಯ ನ್ನು ತೆಗೆದುಕೊಳ್ಳದಿರುವುದು. ಸಮಾಲೋಚಕ (ಕನ್ಸಲ್ಟೆಂಟ್) ಏಜೆನ್ಸಿಗಳಾಗಿ ಕಾರ್ಯ ನಿರ್ವ ಹಿಸುವುದನ್ನೇ ಅವು ಮಾದರಿ ಯಾಗಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಮಗುವಿಗೆ ನೈತಿಕತೆಗೆ ಹಾಗೂ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವನ್ನು ಬಗೆಹರಿಸಲು ಈ ಶಾಲೆಗಳು ನೇರವಾಗಿ ಪೋಷಕರನ್ನು ಕರೆಸಿಕೊಳ್ಳುತ್ತವೆ. ಮಗುವು ಶೈಕ್ಷಣಿಕವಾಗಿ ದುರ್ಬಲವಾಗಿದ್ದಲ್ಲಿ, ಖಾಸಗಿ ಟ್ಯೂಶನ್ ನೀಡುವಂತೆ ಪೋಷಕರಿಗೆ ಸಲಹೆ ನೀಡುತ್ತವೆ. ಹೀಗೆ ಈ ಎರಡೂ ರೀತಿಯ ಪ್ರಕರಣಗಳಲ್ಲಿಯೂ ಬೋಧಕನಾಗಿ ಅವು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ. ಹೀಗೆ ಅವರು ತಮ್ಮ ಹೊಣೆಗಾರಿಕೆಯನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ಕಡಿಮೆಗೊಳಿಸಬಯಸುತ್ತಾರೆ. ಉತ್ತಮ ಮಟ್ಟದ ಲಾಭವನ್ನು ಬಯಸುವವರಿಗೆ ಇಂತಹ ಪ್ರವೃತ್ತಿಯು ಸೂಕ್ತವಾಗಿ ಒಪ್ಪಿಗೆಯಾಗುತ್ತದೆ.


 ಸರಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿರುವುದು ಹಾಗೂ ಖಾಸಗಿ ವಲಯವು ಶಾಲೆಯ ಪರಿಕಲ್ಪನೆಯನ್ನು ಸಂಕುಚಿತಗೊಳಿಸುವುದು ಇವೆರಡೂ, ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಅಪಾಯದಂಚಿಗೆ ತಳ್ಳುತ್ತವೆ.ನಾಗರಿಕತೆಯು ಶಿಕ್ಷಣ ಹಾಗೂ ಶಾಲೆಗಳನ್ನು ಅವಲಂಭಿಸಿವೆಯೆಂಬುದನ್ನು ಸಮಾಜವಾಗಿ ನಾವು ಮರೆತಿರುವ ಹಾಗೆ ಕಾಣುತ್ತದೆ. ಒಂದು ವೇಳೆ ಶಾಲೆಗಳು ನಶಿಸಿದಲ್ಲಿ, ನಾಗರಿಕತೆಯೂ ಹದಗೆಡುವುದು. ಶಿಕ್ಷಣದ ಅನುಷ್ಠಾನ, ಯೋಜನೆ ಹಾಗೂ ತಿಳುವಳಿಕೆಗೆ ಸಂಬಂಧಿಸಿ ಕಟ್ಟುನಿಟ್ಟಾದ ನಿಲುವನ್ನು ತಾಳುವ ಅಗತ್ಯವನ್ನು ನಾವು ಮಾನ್ಯ ಮಾಡದೆ ಹೋದಲ್ಲಿ ನಮ್ಮ ಶಾಲೆಗಳು ಬಾಗಿಲು ಮುಚ್ಚುವ ಇಲ್ಲವೇ ಸಮಾಲೋಚಕ ಸೇವಾ ಸಂಸ್ಥೆಗಳಾಗಿ ಮಾರ್ಪಾಡುವಾಗುವಂತಹ ಪರಿಸ್ಥಿತಿಯೆಡೆಗೆ ಜಾರುವುದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ.

ಕೃಪೆ-ದಿ ಹಿಂದೂ

ಪ್ರೇಮಲತಾ ಅತ್ಯಾಚಾರ ಪ್ರಕರಣ: ಕೆಲವು ಜಿಜ್ಞಾಸೆಗಳು

ಸುರೇಶ್ ಭಟ್ ಬಾಕ್ರಬೈಲ್
ವಾರ್ತಾಭಾರತಿ


 ಅಕ್ಟೋಬರ್ 21ರಂದು ಬೆಂಗಳೂರಿನ ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೀಡಾದ ವಿಚಾರ ತಿಳಿಯದವರು ಬಹುಶಃ ಯಾರೂ ಇಲ್ಲ. ಅಲ್ಲಿ ಕ್ಷಿಪ್ರವಾಗಿ ಕಾರ್ಯಾಚರಿಸಿದ ಪೊಲೀಸರು ಆರೋಪಿ ಗುಂಡಪ್ಪನನ್ನು ಎರಡು, ಮೂರು ದಿನಗಳೊಳಗಾಗಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡರು. ಇದೀಗ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆಯೆಂದು ವರದಿಯಾಗಿದೆ. 

ಜನ ಈಗ ಈ ಪ್ರಕರಣವನ್ನು ಪ್ರೇಮಲತಾ ಅತ್ಯಾಚಾರ ಪ್ರಕರಣದೊಂದಿಗೆ ಹೋಲಿಸುತ್ತಿದ್ದಾರೆ. ತಾತ್ವಿಕ ನೆಲೆಯಲ್ಲಿ ಇವೆರಡು ಪ್ರಕರಣಗಳ ನಡುವೆ ವಿಶೇಷ ವ್ಯತ್ಯಾಸ ವೇನೂ ಇರದಾಗ ವಾರದೊಳಗಾಗಿ ಗುಂಡಪ್ಪನನ್ನು ಬಂಧಿಸುವ ವ್ಯವಸ್ಥೆ ಪ್ರೇಮಲತಾ ಪ್ರಕರಣದಲ್ಲಿ ಯಾಕಿಷ್ಟು ಮೀನಾಮೇಷ ಎಣಿಸುತ್ತಿದೆಯೆಂದು ತಲೆ ಕೆರೆದುಕೊಳ್ಳುತ್ತಿದ್ದಾರೆ. ಪ್ರೇಮಲತಾ ಪ್ರಕರಣದಲ್ಲಿ ನಡೆಯುತ್ತಿರುವ ನಾನಾ ವಿದ್ಯಮಾನಗಳನ್ನು ಗಮನಿಸುತ್ತಿರುವ ಸಾಮಾನ್ಯ ಜನರನ್ನು ಆರಂಭದಿಂದಲೂ ಹಲವೊಂದು ಬಗೆಯ ಗೊಂದಲಗಳು, ಸಂಶಯಗಳು, ಪ್ರಶ್ನೆಗಳು ಕಾಡುತ್ತಲೇ ಬಂದಿವೆ

 ರಾಘವೇಶ್ವರ ಸ್ವಾಮಿ ಬ್ಲ್ಯಾಕ್‌ಮೇಲ್ ದೂರು ದಾಖಲಿಸುವುದೇ ತಡ ಪ್ರೇಮಲತಾ ದಂಪತಿಯನ್ನು ಕೂಡಲೆ ಬಂಧಿಸಿ ಸುಮಾರು 25 ದಿನಗಳ ಕಾಲ ಬಂದಿಖಾನೆಯೊಳಗೆ ಇರಿಸಲಾಗುತ್ತದೆ! ಅದೇ ವೇಳೆ ಪ್ರೇಮಲತಾ ನೀಡುವ ಅತ್ಯಾಚಾರದ ದೂರು ತಿಜೋರಿಯೊಳಗೆ ಸೇರುತ್ತದೆ! ‘‘ಸತ್ಯ ಹೊರಬರಲಿ, ನ್ಯಾಯಕ್ಕೆ ಜಯವಾಗಲಿ’’ ಎಂದು ಹೇಳುವ ಸ್ವಾಮಿ ಮತ್ತೊಂದು ಕಡೆ ಹೆಜ್ಜೆಹೆಜ್ಜೆಗೂ ತನ್ನ ವಿಚಾರಣೆಗೆ, ಬಂಧನಕ್ಕೆ ತಡೆಯಾಜ್ಞೆ ತರುತ್ತಾರೆ! ಅದೂ ಚಿಟಿಕೆ ಹೊಡೆಯುವಷ್ಟರಲ್ಲಿ!! ತನ್ನಲ್ಲಿ ಅತ್ಯಾಚಾರದ ಪುರಾವೆಯಾಗಿ ಬಟ್ಟೆಗಳಿವೆ ಎಂದು ಪ್ರೇಮಲತಾ ಹೇಳುತ್ತಿದ್ದರೆ ಅತ್ತ ಸ್ವಾಮಿ ವೈದ್ಯಕೀಯ ಪರೀಕ್ಷೆಗೂ ತಡೆಯಾಜ್ಞೆ ಪಡೆದುಕೊಳ್ಳುತ್ತಾರೆ. ಸ್ವಾಮಿ ಪರ ವಕೀಲರ ವಾದ, ನ್ಯಾಯಮೂರ್ತಿಗಳ ಟಿಪ್ಪಣಿ, ಸ್ವಾಮಿ ಹೇಳಿಕೆ ಎಲ್ಲವೂ ವಿಚಿತ್ರವಾಗಿದೆ ಮತ್ತು ಅವೈಜ್ಞಾನಿಕ ಅನಿಸುತ್ತಿದೆ. ಸ್ವಾಮಿ ಪರ ವಕೀಲರು ‘‘......2010ರಷ್ಟು ಹಿಂದೆ ನಡೆದ ಘಟನೆಗೆ ಸಂಬಂಧಪಟ್ಟ ವೈದ್ಯಕೀಯ ಪರೀಕ್ಷೆಯನ್ನು ಈಗ ಇಷ್ಟೊಂದು ಸುದೀರ್ಘ ವಿಳಂಬದ ನಂತರ ನಡೆಸುವುದು ಸೂಕ್ತವಲ್ಲ ......ತನಿಖಾ ಸಂಸ್ಥೆ ಯಾವ ವಿಧದ ಪರೀಕ್ಷೆಗೊಳಪಡಬೇಕೆಂದು ಸೂಚಿಸಿಲ್ಲ......ಉದ್ದೇಶಿತ ಪರೀಕ್ಷೆ ಸ್ವಾಮಿ ಹೆಸರಿಗೆ ಕಳಂಕ ಹಚ್ಚುವ ಯತ್ನ’’ ಎಂದೆಲ್ಲ ಹುರುಳಿಲ್ಲದ ವಾದ ಮಾಡಿದ್ದಾರೆ. ಗೌರವಾನ್ವಿತ ಹೈಕೋರ್ಟ್‌ನ ನ್ಯಾಯಮೂರ್ತಿಯವರು ಆರೋಪಿಯನ್ನು ಬಂಧಿಸಿ ತಕ್ಷಣ ಪರೀಕ್ಷೆ ಮಾಡಿದ್ದರೆ ತನಿಖೆಗೆ ಸಹಕಾರಿಯಾಗುತ್ತಿತ್ತು. ಈಗ ಪರೀಕ್ಷೆಗೆ ಒಳಪಡಿಸುವುದರಿಂದ ಪ್ರಯೋಜನವಿಲ್ಲ; ಪರೀಕ್ಷೆ ನಡೆಸಲು ಸೂಕ್ತ ಕಾರಣಗಳಿಲ್ಲ ಎಂದಿರುವುದು ವಿಸ್ಮಯಕರವಾಗಿದೆ.

ವೈದ್ಯಕೀಯ ಪರೀಕ್ಷೆ ಮತ್ತು ಸಿಐಡಿ ವಿಚಾರಣೆಗಳ ಬಗ್ಗೆ ರಾಘವೇಶ್ವರರು ಇತ್ತೀಚೆಗೆ ನೀಡಿರುವ ಪ್ರತಿಕ್ರಿಯೆಗಳು ಉನ್ನತ ಸ್ಥಾನದಲ್ಲಿ ಇರುವವರೆನ್ನಲಾದ ಪೀಠಾಧಿಪತಿಯೊಬ್ಬನ ಬಾಯಲ್ಲಿ ಬರತಕ್ಕಂಥ ಮಾತುಗಳಲ್ಲ. ‘‘ತಾನು ಸಾಮಾನ್ಯ ಮನುಷ್ಯ, ಲೈಂಗಿಕ ಕ್ರಿಯೆ ನಡೆಸಲು ಸಾಮರ್ಥ್ಯ ಉಳ್ಳವನಾಗಿ ದ್ದೇನೆ ......ಪ್ರಸ್ತಾಪಿತ ವೈದ್ಯಕೀಯ ಪರೀಕ್ಷೆಯಿಂದ ತನ್ನ ಇಮೇಜು ಹಾಳಾಗಲಿದೆ’’ ಮತ್ತು ‘‘ಈಗಾಗಲೇ ಆರು ದಿನ ತನಿಖೆ ನಡೆಸಿದ್ದೀರಾ. ಇನ್ನೂ ಎಷ್ಟು ದಿನ ನಡೆಸುತ್ತೀರಾ ........ಮತ್ತೆ ಮತ್ತೆ ವಿಚಾರಣೆಗೆ ಹಾಜರಾಗೋದ್ರಿಂದ ಸಮಾಜಕ್ಕೆ ತಪ್ಪುಸಂದೇಶ ರವಾನೆಯಾಗುತ್ತಿದೆ...... ಪ್ರೇಮಲತಾ ದಂಪತಿಯ ವಿಚಾರಣೆ ಎಷ್ಟು ಬಾರಿ ನಡೆಸಿದ್ದೀರಾ?’’ ಎಂಬಿತ್ಯಾದಿ ಹೇಳಿಕೆಗಳು ಅವರ ವೈಯಕ್ತಿಕ ಘನತೆಯನ್ನು ಕುಗ್ಗಿಸುವುದರೊಂದಿಗೆ ಬಹಳಷ್ಟು ಅನುಮಾನಗಳಿಗೂ ಎಡೆಮಾಡುತ್ತಿವೆ. 

ಈ ರೀತಿ ವೈದ್ಯಕೀಯ ಪರೀಕ್ಷೆಗೆ, ತನಿಖೆಗೆ ಆಕ್ಷೇಪಿಸುತ್ತಿರುವುದು ಅತ್ಯಾಶ್ಚರ್ಯಕರವಷ್ಟೇ ಅಲ್ಲ, ಅಭೂತಪೂರ್ವ ಎನ್ನಬಹುದು. ಆರೋಪಿ ಸ್ಥಾನದಲ್ಲಿ ರುವ ಸಾಮಾನ್ಯ ವ್ಯಕ್ತಿಯೊಬ್ಬ ಹೀಗೆ ಕೇಳುವ ಧೈರ್ಯ ಮಾಡಿಯಾನೇ? ಒಂದು ವೇಳೆ ಮಾಡಿದನೆಂದೇ ಇಟ್ಟುಕೊಳ್ಳಿ. ಅವನಿಗೆ ಏನು ಗತಿ ಕಾದಿದೆಯೆಂದು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಪೀಠಾಧಿಪತಿ ಆದ ಮಾತ್ರಕ್ಕೆ ಯಾರೂ ಸಂವಿಧಾನ, ಕಾನೂನು ಕಟ್ಟಳೆಗಳಿಗೆ ಅತೀತರಾಗುವುದಿಲ್ಲ. ಪೀಠಾಧಿಪತಿ, ಮಠಾಧಿಪತಿ, ಮುಲ್ಲಾ, ಪಾದ್ರಿ, ರಾಜಕಾರಣಿ ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ನೆಲದ ಕಾನೂನಿಗೆ ತಲೆಬಾಗಲೇಬೇಕು. ಕಾನೂನು ಮೇಲು ಕೀಳು, ಬಡವ ಬಲ್ಲಿದ, ಸ್ವಾಮಿ ಸಾಮಾನ್ಯ ಎನ್ನದೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಅನ್ವಯಿಸಬೇಕು. ಕಾನೂನಿನ ಪ್ರಕ್ರಿಯೆಯಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಇರಕೂಡದು. ವ್ಯಕ್ತಿ ತಾನು ಅಮಾಯಕ, ತಾನೇನೂ ತಪ್ಪು ಮಾಡಿ ಲ್ಲವೆಂದು ಬರಿದೆ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ತನ್ನನ್ನು ತಾನು ವಿವಿಧ ತನಿಖಾ ಪ್ರಕ್ರಿಯೆಗಳಿಗೆ ಒಡ್ಡಿಕೊಳ್ಳಲೇಬೇಕು. ತಾನು ನಿರ್ದೋಷಿ ಎನ್ನುವ ರಾಘವೇಶ್ವರ ಸ್ವಾಮಿಗೆ ಪರೀಕ್ಷೆ, ವಿಚಾರಣೆಗಳನ್ನು ಎದುರಿಸಲು ಇರುವ ಸಮಸ್ಯೆಯಾದರೂ ಏನು? ಇದರಿಂದ ಲಾಭವೇ ಹೊರತು ನಷ್ಟವೇನಿದೆ?

 ವೈದ್ಯಕೀಯ ಪರೀಕ್ಷೆಗೆ ಒಳಪಡುವುದರಿಂದ ಮಠದ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎನ್ನಲಾಗಿದೆ. ಆದರೆ ಇದು ಜನರ ದಿಕ್ಕು ತಪ್ಪಿಸುವ ಯತ್ನದಂತೆ ಭಾಸವಾಗುತ್ತಿದೆ. ಏಕೆಂದರೆ ಸದ್ಯ ಪರೀಕ್ಷೆ ಆಗಬೇಕಿರುವುದು ಸ್ವಾಮಿಯ ಪುರುಷತ್ವದ್ದಲ್ಲ. ತಾನು ಪುರುಷನಲ್ಲವೆಂದು ಸಾಧಿಸಲೆತ್ನಿಸಿದ ಬಿಡದಿಯ ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಾದರೆ ಪುರುಷತ್ವ ಪರೀಕ್ಷೆ ಅಗತ್ಯವಿತ್ತು. ಪ್ರಸಕ್ತ ಪ್ರೇಮಲತಾ ಪ್ರಕರಣದಲ್ಲಿ ಮುಖ್ಯವಾಗಿ ಬೇಕಾಗಿರುವುದು ಸ್ವಾಮಿಯ ರಕ್ತ ಮತ್ತು ವೀರ್ಯದ ಸ್ಯಾಂಪಲ್. ಡಿಎನ್‌ಎ ಪರೀಕ್ಷೆಗಾಗಿ. ಪ್ರೇಮಲತಾ ಬಳಿ ಇದೆಯೆನ್ನಲಾದ ಬಟ್ಟೆಯಲ್ಲಿರುವ ವೀರ್ಯದ ಕಲೆ ಸ್ವಾಮಿಯ ವೀರ್ಯದೊಂದಿಗೆ ಮ್ಯಾಚ್ ಆಗುತ್ತದೆಯೇ ಎಂದು ನೋಡಲು. ಈ ಅಗ್ನಿಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಿ ಇಮೇಜು ವೃದ್ಧಿಸಿಕೊಳ್ಳುವ ಬದಲು ತಡೆಯಾಜ್ಞೆ ತರುತ್ತಾರೆಂದರೆ ಏನರ್ಥ?

ವಿವಿ ಲೋಕ : ಲೇಖಕರನ್ನು ಕಡೆಗಣಿಸುತ್ತಿರುವ ಪರಿಪಾಠ
ಜಿ.ಪಿ.ಬಸವರಾಜುಮೊನ್ನೆ ನನ್ನ ಮಿತ್ರರೊಬ್ಬರು ಫೋನ್ ಮಾಡಿ ವಿಶ್ವವಿದ್ಯಾನಿಲಯವೊಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ವಿಚಾರವನ್ನು ಹೇಳಿ, ಇದನ್ನು ಪರಿಹರಿಸುವಲ್ಲಿ ನೆರವಾಗಲು ಸಾಧ್ಯವೇ ಎಂದು ಕೇಳಿದರು. ಖ್ಯಾತ ಲೇಖಕರೊಬ್ಬರ ಆರು ಪ್ರಬಂಧಗಳನ್ನು ಸೇರಿಸಿ ಆ ವಿಶ್ವವಿದ್ಯಾನಿಲಯ ಪುಸ್ತಕವನ್ನು ಪ್ರಕಟಿಸಿತ್ತು. ಈ ಪುಸ್ತಕ ಡಿಗ್ರಿ ತರಗತಿಗೆ ಪಠ್ಯವಾಗಿತ್ತು. ಇಬ್ಬರು ಪ್ರಾಧ್ಯಾಪಕರು ಈ ಪ್ರಬಂಧಗಳನ್ನು ಆಯ್ದು ಸಂಕಲಿಸಿದ್ದರು. ಹೀಗಾಗಿ ಇವರು ಈ ಪುಸ್ತಕದ ಸಂಪಾದಕರು. ಅದೇ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಈ ಕೃತಿಯನ್ನು ಪ್ರಕಟಿಸಿತ್ತು. ಈ ಕೃತಿಗಾಗಿ ಲೇಖಕರ ಅನುಮತಿಯನ್ನು ಪಡೆದಿರಲಿಲ್ಲ. ಕೃತಿಯ ಸಂಪಾದಕರು ಅನುಮತಿ ಪಡೆದಿರುತ್ತಾರೆಂದು ವಿಶ್ವವಿದ್ಯಾನಿಲಯ ಭಾವಿಸಿತ್ತೊ, ಸಂಪಾದಕರು ಈ ಅಂಶವನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿರಲಿಲ್ಲವೋ, ಅಂತೂ ಲೇಖಕರ ಅನುಮತಿ ಇಲ್ಲದೇ ಕೃತಿ ಪ್ರಕಟವಾಗಿತ್ತು. ಪ್ರಕಾಶನದ ಹೊಣೆಹೊತ್ತಿದ್ದ ಪ್ರಸಾರಾಂಗವೂ ಈ ಬಗ್ಗೆ ಹೊಣೆಯರಿತು ನಡೆದಿರಲಿಲ್ಲವೋ ತಿಳಿಯದು. 
ಈ ಸಂಗತಿ ಯಾವುದೂ ಬೆಳಕಿಗೆ ಬರುತ್ತಿರಲಿಲ್ಲವೇನೋ. ಆದರೆ ನೂರಾರು ವಿದ್ಯಾರ್ಥಿಗಳು ಓದುವ ಈ ಪಠ್ಯ ಲೇಖಕರ ಗಮನಕ್ಕೆ ಬಾರದೆ ಹೋಗುವುದು ಹೇಗೆ ಸಾಧ್ಯ? ಹೇಗೋ ಗಮನಕ್ಕೆ ಬಂದಿದೆ. ಹಕ್ಕುದಾರರಿಗೆ ಸಹಜವಾಗಿಯೇ ಸಿಟ್ಟು ಬಂದಿದೆ. ಕೂಡಲೇ ಅವರು ವಿಶ್ವವಿದ್ಯಾನಿಲಯಕ್ಕೆ ಒಂದು ನೋಟಿಸ್ ನೀಡಿದ್ದಾರೆ; ಈ ತಪ್ಪಿಗಾಗಿ ಕ್ಷಮಾಪಣೆ ಮತ್ತು ಒಂದು ಲಕ್ಷ ರೂಪಾಯಿ ಪರಿಹಾರ ಕೋರಿದ್ದಾರೆ. ತಕ್ಷಣ ಸಂಬಂಧಿಸಿದವರೆಲ್ಲ ಎಚ್ಚೆತ್ತುಕೊಂಡಿದ್ದಾರೆ. ಯಾರದು ತಪ್ಪು ಎಂದು ಹುಡುಕುವ ಯತ್ನವೂ ನಡೆದಿದೆ. ಒಂದು ಲಕ್ಷ ರೂಪಾಯಿ ಪರಿಹಾರ ಕೊಡುವ ಪ್ರಸಂಗ ಅಗತ್ಯ ಚುರುಕು ಮುಟ್ಟಿಸಿದೆ.


ಇದು ಕೇವಲ ಒಂದು ವಿಶ್ವವಿದ್ಯಾಲಯ ಮಾಡಿರುವ ಒಂದೇ ಒಂದು ತಪ್ಪಲ್ಲ. ಅನೇಕ ವಿಶ್ವವಿದ್ಯಾಲಯಗಳು ಇಂಥ ತಪ್ಪುಗಳನ್ನು ಮಾಡಿವೆ; ಮಾಡುತ್ತಲೂ ಇವೆ. ಇದೊಂದು ಮಾಮೂಲು ಸಂಗತಿ ಎನ್ನವಷ್ಟು ತಪ್ಪುಗಳು ನಡೆದು ಹೋಗುತ್ತಿವೆ. ಇವು ಬೆಳಕಿಗೂ ಬರುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮುಚ್ಚಿ ಹೋಗುತ್ತವೆ. ತಮ್ಮನ್ನು ಕೇಳದೆ ತಮ್ಮ ಲೇಖನ, ಕಥೆ, ಕವಿತೆ, ವಿಮರ್ಶೆ, ಬರಹ ಇತ್ಯಾದಿಗಳನ್ನು ಪಠ್ಯದಲ್ಲಿ ಸೇರಿಸಿರುವುದು ಅನೇಕ ಲೇಖಕರ ಗಮನಕ್ಕೆ ಬರುತ್ತದೆ. ಆದರೂ ಅವರು ಹೋರಾಟಕ್ಕೆ ಇಳಿಯುವುದಿಲ್ಲ. ಹೋರಾಟ ಎಂದರೆ ನ್ಯಾಯಾಲಯದ ಕಟ್ಟೆ ಹತ್ತಬೇಕು; ವಕೀಲರನ್ನು ಹಿಡಿದು ನ್ಯಾಯಾಲಯಕ್ಕೆ ಅಲೆಯಬೇಕು. ಹಣ, ಕಾಲ, ಶ್ರಮ ಎಲ್ಲವನ್ನು ವಿನಿಯೋಗಿಸಲು ಸಿದ್ಧರಿರಬೇಕು. ಶಿವರಾಮ ಕಾರಂತರಾದರೆ ಅಂಥ ಹೋರಾಟಕ್ಕೂ ಸಿದ್ಧ. ಅವರು ಈ ಬಗೆಯ ಹೋರಾಟಗಳನ್ನೂ ಮಾಡಿ ಹಲವರಿಗೆ ’ಬುದ್ಧಿ’ಯನ್ನೂ ಕಲಿಸಿದ್ದಾರೆ. ಆದರೂ ಮತ್ತೆ ಮತ್ತೆ ಇಂಥ ತಪ್ಪುಗಳು ಯಾಕೆ ಆಗುತ್ತಿವೆ. ’ಬುದ್ಧಿ’ ಕಲಿತವರು ಹಳೆಯ ಮಂದಿ; ತಪ್ಪು ಮಾಡುವವರು ಹೊಸ ಮಂದಿ. ಕಾರಂತರು ಮುಟ್ಟಿಸಿದ ಬಿಸಿ ಎಂದೋ ಆರಿಹೋಗಿದೆಯೇ ಅಥವಾ ನಮ್ಮ ಜನರೇ ದಡ್ಡುಗಟ್ಟಿಹೋಗಿದ್ದಾರೆಯೇ? ಅನೇಕ ಲೇಖಕರು, ’ಹೋಗಲಿ ಬಿಡಿ, ವಿದ್ಯಾರ್ಥಿಗಳು ನಮ್ಮ ಬರಹವನ್ನು ಓದುತ್ತಾರೆ; ಅಷ್ಟಾದರೆ ಸಾಕಲ್ಲ!’ ಎಂದು ತೃಪ್ತಿಪಟ್ಟುಕೊಳ್ಳುತ್ತಾರೆ. ಇದೇನು ತೃಪ್ತಿಯೋ, ಅಸಹಾಯಕತೆಯೋ ಗೊತ್ತಾಗುವುದಿಲ್ಲ.

ವಿಶ್ವವಿದ್ಯಾಲಯವೆಂದರೆ, ಪ್ರಾಧ್ಯಾಪಕರೆಂದರೆ ಲೇಖಕರ ಮಹತ್ವವನ್ನು ತಿಳಿದವರು; ಓದುವುದು, ಬರೆಯುವುದು, ಪಾಠಮಾಡುವುದು ಅವರ ನಿತ್ಯದ ಕಾಯಕವಾಗಿರುವ ಕಾರಣ, ಪಠ್ಯಗಳ ಬೆಲೆ ಅವರಿಗೆ ತಿಳಿದಿರುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿರುತ್ತದೆ. ಈ ಪ್ರಾಧ್ಯಾಪಕರಲ್ಲಿಯೂ ಬಹುಪಾಲು ಮಂದಿ ಲೇಖಕರೇ ಆಗಿರುತ್ತಾರೆ. ಅಂದಮೇಲೆ ಅವರಿಗೆ ಲೇಖಕರ ಮಹತ್ವ ತಿಳಿದಿರುವುದಿಲ್ಲವೇ? ಕೃತಿ ಸ್ವಾಮ್ಯದ ವಿಚಾರ ಬಂದಾಗ ಇವರೇಕೆ ಹೀಗೆ ವರ್ತಿಸುತ್ತಾರೆ? ಇದು ಉಡಾಫೆಯ ಮನೋಭಾವವೇ? ಅಥವಾ ಉಪೇಕ್ಷೆಯೇ?

ನನ್ನ ಪದ್ಯವೊಂದು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿರುವ ವಿಚಾರ ನನಗೆ ತಿಳಿದೇ ಇರಲಿಲ್ಲ. ಯಾರೋ ನನ್ನ ಗಮನಕ್ಕೆ ತಂದಾಗ, ಆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಮಿತ್ರರಿಗೆ ಫೋನ್ ಮಾಡಿದೆ. ’ಇರಲಿ ಬಿಡಿ; ವಿಶ್ವವಿದ್ಯಾನಿಲಯ ಲೇಖಕರಿಗೆ ತಿಳಿಸುವುದೂ ಇಲ್ಲ, ಅವರ ಅನುಮತಿಯನ್ನು ಪಡೆಯುವುದೂ ಇಲ್ಲ. ಹೇಗೋ ಪಠ್ಯದಲ್ಲಿ ಸೇರಿದೆ, ವಿದ್ಯಾರ್ಥಿಗಳು ಓದುತ್ತಾರೆ, ಅದೇ ಮುಖ್ಯವಲ್ಲವೇ’ ಎಂಬ  ಸಮಜಾಯಿಷಿಯನ್ನು ನೀಡಿ ಅವರು ನನ್ನನ್ನು ಸಮಾಧಾನಪಡಿಸಲು ನೋಡಿದರು. ಇದು ನನ್ನೊಬ್ಬನ ಅನುಭವವಲ್ಲ, ಅನೇಕ ಬರಹಗಾರರ ಅನುಭವ. ಅವರಿಗೂ ಇಂಥವೇ ಸಮಜಾಯಿಷಿಗಳು ಸಿಕ್ಕಿರಬಹುದು. ಪಠ್ಯದಲ್ಲಿ ತಮ್ಮ ಬರಹ ಸೇರಿರುವುದೇ ತಿಳಿಯದ ಲೇಖಕರೂ ಇರಬಹುದು. ಇದು ಇವತ್ತಿನ ಪರಿಸ್ಥಿತಿ.ಬಹುಪಾಲು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಪ್ರಾಧ್ಯಾಪಕರಲ್ಲಿ ಇಂಥ ಅನಾದರದ ಭಾವ ಅದು ಹೇಗೆ ಹುಟ್ಟಿಕೊಂಡಿತು? ಈ ಪ್ರಶ್ನೆಯೆ ನನ್ನನ್ನು ಕಾಡುತ್ತಿದೆ.ನಿಜ; ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಈ ದಿನಗಳಲ್ಲಿ ಲೇಖಕರ ಹಕ್ಕುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅಂತರ್ಜಾಲ ತಾಣಗಳಲ್ಲಿ ಜಾಲಾಡಿ, ತೆಗೆದ ಮಾಹಿತಿ ಯಾರದೆಂಬುದನ್ನೂ ತಿಳಿಸುವ ಗೋಜಿಗೆ ಹೋಗದೆ, ಅದನ್ನು ತಮ್ಮದೇ ಎನ್ನುವ ರೀತಿಯಲ್ಲಿ ಲೇಖಕರು ಬಳಸುತ್ತಿರುವ ಈ ಸಂದರ್ಭದಲ್ಲಿ ಬರಹದ ಹಕ್ಕು ಎಂಬುದಕ್ಕೆ ಎಷ್ಟು ಬೆಲೆ? ಕೃತಿಗೆ ಕೃತಿಯನ್ನೇ ಹಾರಿಸಿಕೊಂಡು ಹೋಗುವ ಚಾಣಾಕ್ಷರೂ ಇದ್ದಾರೆಂದು ನನ್ನ ಮಿತ್ರರೊಬ್ಬರು ವಿವರಿಸಿದರು. ಒಟ್ಟಾರೆಯ ಸನ್ನಿವೇಶವೇ ಹೀಗೆ ಬದಲಾದರೆ ಯಾವ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸುವುದು ಸಾಧ್ಯ? ಹಕ್ಕಿನ ಪ್ರಶ್ನೆಯ ಆಚೆಗೆ ನೈತಿಕ ಪ್ರಶ್ನೆಯೂ ಇದೆಯಲ್ಲವೇ?

ಗಾಂಧೀಜಿಯವರ ಬರಹಗಳ ಹಕ್ಕುಗಳು ಇದ್ದದ್ದು ’ನವಜೀವನ ಟ್ರಸ್ಟ್’ಗೆ. ಗಾಂಧೀಜಿಯವರು ತೀರಿಹೋದ ನಂತರ ಈ ಹಕ್ಕುಗಳನ್ನು ’ನವ ಜೀವನ ಟ್ರಸ್ಟ್’ ಪಡೆದುಕೊಂಡಿತ್ತು. ಗ್ರಂಥಸ್ವಾಮ್ಯದ ಕಾಯಿದೆ (೧೯೫೭) ಸೆಕ್ಷನ್ ೨೨ರ ಪ್ರಕಾರ ಈ ಹಕ್ಕುಗಳು ಲೇಖಕ ತೀರಿಕೊಂಡ ನಂತರ ೬೦ ವರ್ಷಗಳ ವರೆಗೆ ಇರುತ್ತವೆ. ಈ ಅವಧಿ ಮುಗಿದ ಮೇಲೆ ಹಕ್ಕುಗಳು ಸಾರ್ವಜನಿಕರ ಸ್ವತ್ತು. ’ನವ ಜೀವನ ಟ್ರಸ್ಟ್’ ಈ ಕಾಯ್ದೆಯಂತೆ ೨೦೦೮ರವರೆಗೆ ಈ ಹಕ್ಕನ್ನು ತನ್ನದಾಗಿ ಮಾಡಿಕೊಂಡಿತ್ತು. ಮುಂದೆ ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟಿತು. ವಾಸ್ತವವಾಗಿ ಗಾಂಧೀಜಿ ಅವರಿಗೇ ಗ್ರಂಥಸ್ವಾಮ್ಯ ಹಕ್ಕುಗಳ ಬಗ್ಗೆ ಮಾತ್ರವಲ್ಲ, ಆಸ್ತಿ ಹಕ್ಕಿನ ಬಗ್ಗೆಯೂ ಮೋಹವಿರಲಿಲ್ಲ. ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ಅವರು ತಮ್ಮ ’ಹರಿಜನ’ ಪತ್ರಿಕೆಯಲ್ಲಿ ಬರೆದೂ ಇದ್ದರು. ೧೯೦೬ರಲ್ಲಿಯೇ ಅವರು ತಮ್ಮ ಪಿತ್ರಾರ್ಜಿತ ಆಸ್ತಿ ಹಕ್ಕನ್ನೇ ಬಿಟ್ಟುಕೊಟ್ಟಿದ್ದರು. ತಮ್ಮ ಅಣ್ಣನಿಗೆ ಬರೆದ ಕಾಗದದಲ್ಲಿ ಅವರು, ’ನಾನಾಗಲೀ ಅಥವಾ ನನ್ನ ಮಕ್ಕಳಾಗಲೀ, ಪೋರ್‌ಬಂದರಿನ ನಮ್ಮ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕನ್ನು ಪ್ರತಿಪಾದಿಸುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ತಮ್ಮ ಜೀವಿತ ಅವಧಿಯಲ್ಲಿಯೇ ಅವರು ತಮ್ಮ ಬರಹಗಳ ಮೇಲಿನ ಹಕ್ಕನ್ನು ಇಟ್ಟುಕೊಳ್ಳಲು ಬಯಸಿರಲಿಲ್ಲ. ಅದು ಸಾರ್ವಜನಿಕರಿಗೆ ಸೇರಿದ್ದು ಎಂದೇ ಭಾವಿಸಿದ್ದರು. ಆದರೆ ಮಿತ್ರರ ಒತ್ತಾಯಕ್ಕೆ ಕಟ್ಟುಬಿದ್ದು ಹಾಗೆ ಘೋಷಿಸಿರಲಿಲ್ಲ.


ಮಾರ್ಕ್ಸ್ ಕೂಡಾ ಖಾಸಗೀ ಆಸ್ತಿ ಹಕ್ಕಿನ ವಿರೋಧಿಯಾಗಿದ್ದ. ಖಾಸಗೀ ಒಡೆತನವನ್ನು ಅವನು ಒಪ್ಪಿರಲಿಲ್ಲ. ಸಮುದಾಯದ ಒಡೆತನವನ್ನೇ ಅವನು ಪ್ರತಿಪಾದಿಸಿದ್ದ. ಗಾಂಧಿ ಚಿಂತನೆಯಿಂದ ಪ್ರಭಾವಿತರಾಗಿದ್ದ ಲೋಹಿಯಾ ಕೂಡಾ ಈ ಆಸ್ತಿ ಹಕ್ಕಿನ ವಿರೋಧಿಯಾಗಿಯೇ ಇದ್ದರು.


ಇವತ್ತಿನ ಲೇಖಕರು ಖಾಸಗೀ ಆಸ್ತಿಗಾಗಲಿ ಅಥವಾ ಆಸ್ತಿಹಕ್ಕಿನ ಬಗೆಗಾಗಲೀ ವಿರೋಧಿಗಳಲ್ಲ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಾಗಲಿ, ಅಲ್ಲಿನ ಅಧ್ಯಾಪಕರಾಗಲೀ ಆಸ್ತಿಹಕ್ಕನ್ನು ಬಿಟ್ಟುಕೊಡುವ ಮನೋಭಾವದವರೇನೂ ಅಲ್ಲ. ಗಾಂಧೀ, ಲೋಹಿಯಾ, ಮಾರ್ಕ್ಸ್, ಅಂಬೇಡ್ಕರ್, ಬುದ್ಧ ಹೀಗೆ ಹಲವರ ಬದುಕು ಮತ್ತು ಸಾಧನೆಯ ಬಗ್ಗೆ, ಅವರ ವೈಚಾರಿಕ ಶ್ರೀಮಂತಿಕೆಯ ಬಗ್ಗೆ ಗಂಟೆ ಗಟ್ಟಲೆ ಪಾಠ ಹೇಳಿದರೂ, ಆಸ್ತಿ ಹಕ್ಕಿನ ಮೋಹವನ್ನು ಅವರೇನೂ ಬಿಟ್ಟಿರುವುದಿಲ್ಲ. ಹೀಗಿರುವಾಗ ಪಠ್ಯಪುಸ್ತಕಗಳ ವಿಚಾರ ಬಂದಾಗ ಅಲ್ಲಿಯ ಲೇಖಕರನ್ನು, ಅವರ ಬರಹಗಳ ಹಕ್ಕನ್ನು ಕಡೆಗಣಿಸುವುದರ ಹಿಂದೆ ಯಾವ ತರ್ಕವಿದೆ? ಈ ಪಠ್ಯಗಳಲ್ಲಿ ಅವರ ಬರಹಗಳೂ ಸೇರಿದಾಗ ಅವರ ನಿಲುವು ಏನಾಗಿರುತ್ತದೆ? ಆಗಲೂ ಅವರು ಲೇಖಕರ ಹಕ್ಕುಗಳ ಬಗ್ಗೆ ನಿರಾಸಕ್ತರಾಗಿಯೇ ಇರುತ್ತಾರಾ? ಅಷ್ಟಕ್ಕೂ ಲೇಖಕರನ್ನು ಸೌಜನ್ಯದಿಂದ, ಗೌರವದಿಂದ ನಡೆಸಿಕೊಳ್ಳಬೇಕಾದ ಒಂದು ವಿಧಾನವನ್ನು ಯಾಕಾಗಿ ಕಡೆಗಣಿಸಬೇಕು? ಇಂಥ ಪ್ರಶ್ನೆಗಳನ್ನು ವಿಶ್ವವಿದ್ಯಾನಿಲಯಗಳು ಕೇಳಿಕೊಳ್ಳಬೇಕು; ಲೇಖಕರ ಹಕ್ಕುಗಳನ್ನು ಉದಾಸೀನದಿಂದ ನೋಡುವ ಪ್ರಾಧ್ಯಾಪಕರು ಕೇಳಿಕೊಳ್ಳಬೇಕು.


ಇವತ್ತು ಯಾವುದೇ ವಿಶ್ವವಿದ್ಯಾನಿಲಯಕ್ಕೂ ಹಣದ ವಿಚಾರದಲ್ಲಿ ಬಡತನವಿಲ್ಲ. ಕೋಟ್ಯಂತರ ರೂಪಾಯಿಯ ಸಹಾಯ ಧನ ಬರುತ್ತಲೇ ಇರುತ್ತದೆ. ಪಠ್ಯಪುಸ್ತಕವನ್ನು ವಿಶ್ವವಿದ್ಯಾನಿಲಯವೇ ಪ್ರಕಟಿಸಿದರೆ, ಆ ಪಠ್ಯದಲ್ಲಿರುವ ಲೇಖಕರಿಗೆ ಗೌರವಧನವನ್ನು ಕೊಡಲಾಗದ ಸ್ಥಿತಿಯಂತೂ ಯಾವ ವಿಶ್ವವಿದ್ಯಾನಿಲಯಕ್ಕೂ ಇಲ್ಲ. ಪಠ್ಯವನ್ನು ಬೇರೆಯ ಪ್ರಕಾಶಕರು ಪ್ರಕಟಿಸಿದರೆ, ಗೌರವಧನವನ್ನು ಕೊಡುವ ಹೊಣೆಗಾರಿಕೆ ಪ್ರಕಾಶಕರ ಮೇಲಿರುತ್ತದೆ. ಪುಸ್ತಕವನ್ನು ಪ್ರಕಟಿಸುವ ಪ್ರಕಾಶಕ ಅದನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ಹಂಚುವುದಿಲ್ಲ; ಹಣಕ್ಕೆ ಮಾರುವ ಪ್ರಕಾಶಕ ಲೇಖಕರಿಗೆ ಗೌರವಧನ ಕೊಡದೆ ನುಣುಚಿಕೊಳ್ಳಲು ಹೇಗೆ ಸಾಧ್ಯ? ಹಾಗೆ ಮಾಡಿದರೆ ವಿಶ್ವವಿದ್ಯಾನಿಲಯಗಳು ಅದನ್ನು ಸಹಿಸುತ್ತವೆಯೇ?
ಲೇಖಕರಾಗಲೀ, ಕಲಾವಿದರಾಗಲೀ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದು ಅವರಿಗೆ ಸೇರಿದ ವಿಚಾರ. ಅದನ್ನು ಕಿತ್ತುಕೊಳ್ಳುವ ಹಕ್ಕು ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದುದಲ್ಲ.(ಸೌಜನ್ಯ: ಸಂಯುಕ್ತ ಕರ್ನಾಟಕ)


-ಜಿ.ಪಿ.ಬಸವರಾಜು

೯೪೮೦೦ ೫೭೫೮೦

5 ನವೆಂಬರ್ ಬೆಳಗಾವಿ : ಬೆಳಗಾವಿ ಜಿಲ್ಲಾ ಕವಿಗೋಷ್ಟಿTuesday, October 28, 2014

ಬೇಲ್ ಮೇಲೆ ಜ್ಞಾನಪೀಠ ; ಏನ ಏನಿದು ಎಂಥಾ ಬೆರಗ
ಶಶಿಕಾಂತ ಯಡಹಳ್ಳಿ
ರಂಗಭೂಮಿ ವಿಶ್ಲೇಷಣೆಕಟಕಟೆಯಲ್ಲಿ ಕಾರ್ನಾಡ್ ಗಿರೀಶ ; ಶ್ರೇಷ್ಠತೆಯ ವ್ಯಸನದಿಂದ ವ್ಯಕ್ತಿತ್ವ ನಾಶ :


            ಮಾಯಾದೋ ಮನದ ಭಾರ
          ತೆಗೆದಾಂಗ ಎಲ್ಲ ದ್ವಾರ
          ಏನ ಏನಿದು ಎಂಥಾ ಬೆರಗ..

ಇದು ಗಿರೀಶ ಕಾರ್ನಾಡ್ ವಿರಚಿತ ನಾಗಮಂಡಲ ದಲ್ಲಿ ಬಳಕೆಯಾದ ಗೀತೆ. ನಾಟಕ ಹಾಗೂ ಸಿನೆಮಾ ನೋಡಿದ ಪ್ರೇಕ್ಷಕರಿಗೆ ಮೋಡಿ ಮಾಡಿದ ಹಾಡಿದು. ತನ್ನ ಜಾನಪದೀಯ ಲಯಗಾರಿಕೆಯಿಂದಾಗಿ ಜನಪ್ರೀಯತೆಯನ್ನು ಪಡೆದ ಇದೇ ಹಾಡು ಈಗ ನಮ್ಮ ಜ್ಞಾನಪೀಠಿ ಕಾರ್ನಾಡರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಕೋರ್ಟಿನ ಕಟಕಟೆಯಲ್ಲಿ ಓಡಿ ಬಂದು ನಿಲ್ಲುವಂತೆ ಮಾಡಿದೆ. ಬಂಧನವನ್ನು ತಪ್ಪಿಸಿಕೊಳ್ಳಲು ಜಾಮೀನು ಪಡೆದು ಹೊರಬರುವಂತಹ ಪರಿಸ್ಥಿತಿಯನ್ನುಂಟುಮಾಡಿದೆ

ಎಲ್ಲರೂ ಮೆಚ್ಚಿಕೊಂಡಾಡಿದ ಒಂದು ಹಾಡಿಗೆ ಇಂತಹ ಶಕ್ತಿಯಿದೆಯಾ? ನಾಟಕದಲ್ಲಿ ಬಳಸಲಾದ ಹಾಡೊಂದು  ನಾಟಕ ಬರೆದವರನ್ನೇ ಸುತ್ತಿ ಬಳಸಿ ಬಲೆಯಲ್ಲಿ ಸಿಲುಕಿಸಿ ನಿದ್ದೆ ಕೆಡಿಸುತ್ತಿದೆಯಾ? ತನಗಿಂತ ಮೇಧಾವಿಗಳ ಕುರಿತು ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸದಾ ಚಾಲ್ತಿಯಲ್ಲಿರಬಯಸುವ ಕಾರ್ನಾಡರನ್ನು ಹಾಡೊಂದು ಹಣಿದು ಹಾಕಿದೆಯಾಹೌದು! ಕಾರ್ನಾಡರೊಳಗಿರುವ ಅಸಾಧ್ಯವಾದ ದುರಹಂಕಾರವನ್ನು ಎಳೆತಂದು ಕಟಕಟೆಗೆಳೆದು ನಿಲ್ಲಿಸಿದ್ದು ಇದೇ ಹಾಡು. ನೆಲದ ಕಾನೂನಿಗೂ ಬೆಲೆಕೊಡದ ಕಾರ್ನಾಡರನ್ನು ಕೋರ್ಟಿಗೆ ಎಳೆತಂದಿದ್ದು ಇದೇ ಹಾಡು. ಇನ್ನೊಂಚೂರು ನಿರ್ಲಕ್ಷ ಮಾಡಿದ್ದರೆ ಜೈಲಿಗೆ ಕಳುಹಿಸಲು ಸಿದ್ದವಾಗಿದ್ದೂ ಇದೇ ಹಾಡು. ಅಂದಹಾಗೆ ಏನಿದೆ ಹಾಡಲ್ಲಿ ಅಂತಾ ಬೆರಗು? ಗುಟ್ಟನ್ನು ಅರಿಯಬೇಕೆಂದರೆ ಒಂದಿಷ್ಟು ಹಿನ್ನಲೆಯನ್ನು ತಿಳಿಯಲೇ ಬೇಕು.

ಅದು 1989 ಇಸ್ವಿ. ಅದೇ ತಾನೆ ಗಿರೀಶ ಕಾರ್ನಾಡರು ನಾಗಮಂಡಲ ನಾಟಕ ಬರೆದಿದ್ದರು. ಶಂಕರನಾಗ್ರವರು ತಮ್ಮ ಸಂಕೇತ ರಂಗತಂಡಕ್ಕೆ ನಾಟಕವನ್ನು ಆಡಿಸಲು ಮುಂದಾದರು. ಇಡೀ ನಾಟಕ ಜಾನಪದೀಯ ಅಂಶಗಳುಳ್ಳ ಪ್ಯಾಂಟಸಿ ಕಥಾನಕವಾಗಿತ್ತು. ಹೆಣ್ಣಿನ ಲೈಗಿಕ ಪ್ರತಿನಿಧೀಕರಣ ನಾಟಕದ ವಸ್ತುವಾಗಿತ್ತು. ಆದರೆ ಇಡೀ ನಾಟಕದಲ್ಲಿ ಕಾರ್ನಾಡರು ಬರೆದಿದ್ದು ಒಂದೇ ಹಾಡು. ಅದೂ ಸಹ ನಾಟಕಕ್ಕೆ ಸೂಕ್ತವೆನ್ನಿಸುತ್ತಿರಲಿಲ್ಲ. ಶಂಕರನಾಗರವರಿಗೂ ಹಾಡು ಇಷ್ಟವಾಗಲಿಲ್ಲ. ಶಂಕರನಾಗರವರಿಗೆ ನಾಟಕವನ್ನು ಮ್ಯೂಸಿಕಲ್ ಪ್ಲೇ ಮಾಡಬೇಕು ಎಂಬ ಬಯಕೆಯಾಗಿತ್ತು. ಸರಿ ನಾಟಕಕ್ಕೆ ಸೂಕ್ತವೆನ್ನಿಸಬಹುದಾದ ಜಾನಪದ ಶೈಲಿಯ ಹಾಡುಗಳಿಗಾಗಿ ಕರ್ನಾಟಕದಾದ್ಯಂತ ಶಂಕರನಾಗ್ ಹುಡುಕಾಡಿದರು. ಬೀದರ್ ಗುಲಬರ್ಗಾ ಎಂದೆಲ್ಲಾ ಓಡಾಡಿದರು. ಜಾನಪದ ತಜ್ಞ ಮುದೇನೂರು ಸಂಗಣ್ಣನವರನ್ನೂ ಬೇಟಿಯಾಗಿ ಚರ್ಚಿಸಿದರು. ಆದರೆ ಯಾವ ಹಾಡುಗಳು ನಾಟಕಕ್ಕೆ ಸೂಕ್ತವೆನ್ನಿಸಲೇ ಇಲ್ಲ. ಯಾವುದಕ್ಕೂ ರಾಜಿಆಗದ ಮನೋಭಾವದ ಶಂಕರನಾಗ್ರವರು ನಾಟಕಕ್ಕೆ ಹೊಂದಾಣಿಕೆಯಾಗುವ ಸೂಕ್ತ ಹಾಡಿಗಾಗಿ ಹುಡುಕಾಟದ ಪ್ರಯತ್ನ ಬಿಡಲಿಲ್ಲ. ಜೊತೆಗೆ ಚಿತ್ರಕಲಾ ಪರಿಷತ್ತಿನಲ್ಲಿ ನಾಗಮಂಡಲ ನಾಟಕದ ತಾಲಿಂ ಶುರುಮಾಡಿದರು. ನಾಟಕಕ್ಕೆ ಅಗತ್ಯವಾದ ಹಾಡನ್ನು ಬರೆಸಬೇಕು ಎಂದುಕೊಂಡಾಗ ಸಿ.ಅಶ್ವತ್ರವರು ಸೂಚಿಸಿದ್ದೇ ಗೋಪಾಲ್ ವಾಜಪೇಯಿರವರ ಹೆಸರನ್ನು

ಗೋಪಾಲ್ ವಾಜಪೇಯಿ

ಆಗ ತಾನೇ ಬೆಂಗಳೂರಿನ ಸಂಯುಕ್ತ ಕರ್ನಾಟಕದ ಕಸ್ತೂರಿ ಮ್ಯಾಗಜಿನ್ ವಿಭಾಗಕ್ಕೆ ಪತ್ರಕರ್ತರಾಗಿ ಬೆಂಗಳೂರಿಗೆ ವರ್ಗವಾಗಿ ಬಂದಿದ್ದ ವಾಜಪೇಯಿರವರಿಗೆ ಕರೆ ಕಳುಹಿಸಿದ ಶಂಕರನಾಗ್ ನಾಟಕದ ಸನ್ನಿವೇಶಗಳನ್ನು ವಿವರಿಸಿ ಹಾಡುಗಳನ್ನು ಬರೆಯಲು ಕೇಳಿಕೊಂಡರು. ಶಂಕರನಾಗರವರ ಕೋರಿಕೆಯಂತೆ ಒಟ್ಟು ಹತ್ತು ಹಾಡುಗಳನ್ನು ವಾಜಪೇಯಿರವರು ಬರೆದುಕೊಟ್ಟರು. ಎಲ್ಲಾ ಹಾಡುಗಳೂ ಶಂಕರನಾಗರವರಿಗೆ ತುಂಬಾ ಇಷ್ಟವಾದವು ಹಾಗೂ ನಾಟಕದ ಸನ್ನಿವೇಶಗಳಿಗೆ ಸರಿಯಾಗಿ ಹೊಂದಾಣಿಕೆಯಾದವು. ಶಂಕರನಾಗ್ ಹಾಗೂ ಸುರೇಂದ್ರನಾಥ ಇಬ್ಬರೂ ಸೇರಿ ಮೊಟ್ಟಮೊದಲಬಾರಿಗೆ ನಾಗಮಂಡಲ ನಾಟಕವನ್ನು ಜಂಟಿಯಾಗಿ ನಿರ್ದೇಶಿಸಿದರು. ಎಲ್ಲಾ ಹಾಡುಗಳಿಗೆ ಸಿ.ಅಶ್ವತ್ ಸೊಗಸಾಗಿ ಸಂಗೀತ ನಿರ್ದೇಶನ ಮಾಡಿದರು. ನಾಟಕ ಸುಪರ್ ಹಿಟ್ ಆಗಿಹೋಯಿತು. ನಾಟಕ ನೋಡಿ ಹೊರಬಂದವರು ಅದರೊಳಗಿನ ಹಾಡುಗಳನ್ನು ಗುಣಿಗುಣಿಸುತ್ತಾ ಹೊರಬಂದರು. ಎಲ್ಲಾ ಹಾಡೂಗಳೂ ಪ್ರೇಕ್ಷಕರ ಮನಸೂರೆಗೊಂಡವು. ಅದರಲ್ಲೂ ಮಾಯಾದ ಮನದ ಭಾರ... ಹಾಡು ಅದ್ಬುತವೆನಿಸಿತು. ಹಾಡುಗಳಿಂದಾಗಿ ಗೋಪಾಲ್ ವಾಜಪೇಯರವ ಕಾವ್ಯ ಪ್ರತಿಭೆ ಬೆಂಗಳೂರಿನ ರಂಗಕರ್ಮಿಗಳಿಗೆ ಅರಿವಾಯ್ತು. ಶಂಕರನಾಗರವರಂತೂ ಅತ್ಯಂತ ಆನಂದ ತುಲಿತರಾದರು. ಹಾದರದ ನಾಟಕಕ್ಕೆ ಹಾಡಿನ ಮೆರಗು ರಮ್ಯತೆಯನ್ನು ತಂದುಕೊಟ್ಟಿತ್ತು. ಎಂದೂ ಯಾರನ್ನೂ ಅನಗತ್ಯವಾಗಿ ಹೊಗಳದ ಗಿರೀಶ್ ಕಾರ್ನಾಡರೂ ಸಹ ವಾಜಪೇಯಿಯವರನ್ನು ಅವರ ಹಾಡುಗಳಿಗಾಗಿ ಶ್ಲಾಘಿಸಿದರು.

ನಾಗಮಂಡಲ ನಾಟಕದ ಹಾಡುಗಳು ಅದೆಷ್ಟು ಪ್ರಸಿದ್ಧಿಯಾದವೆಂದರೆ 1992ರಲ್ಲಿ ನಾಟಕದ ಎಲ್ಲಾ ಹಾಡುಗಳನ್ನೂ ಸೇರಿಸಿ ಆಕಾಶ್ ಆಡಿಯೋದವರು ಆಡಿಯೋ ಕ್ಯಾಸಟ್ಟನ್ನು ಹೊರತಂದರು. ಕ್ಯಾಸೆಟ್ಗಳೂ ಸಹ ಭರದಿಂದ ಬಿಕರಿಯಾದವು. ಹಾಡುಗಳು ಅದೆಷ್ಟು ಜನಪ್ರೀಯವಾಗಿದ್ದವೆಂದರೆ ಮೂರು-ನಾಲ್ಕು ಆವೃತ್ತಿಗಳನ್ನು ಕ್ಯಾಸೆಟ್ ಕಂಡಿತು. ನಾಟಕದ ಯಶಸ್ಸು ಹಾಗೂ ನಾಟಕದೊಳಗಿನ ಹಾಡುಗಳು ಮಾಡಿದ ಮೋಡಿಯಿಂದ ಆಕರ್ಷಿತರಾದ ನಾಗಾಭರಣರು 1997ರಲ್ಲಿ ನಾಗಮಂಡಲ ಹೆಸರಿನಲ್ಲಿ ಸಿನೆಮಾ ಮಾಡಿದರು. ಸಿನೆಮಾದಲ್ಲೂ ಸಹ ವಾಜಪೇಯಿಯವರ ಅನುಮತಿ ಪಡೆದು ಅವರ ಹಾಡುಗಳನ್ನು ಬಳಸಿಕೊಂಡರು. ಹಾಗೂ ಇನ್ನೂ ಕೆಲವು ಹಾಡುಗಳನ್ನು ಅವರಿಂದಲೇ ಬರೆಸಿದರು. ಮತ್ತದೇ ಮಾಯಾದೋ ಮನದ ಭಾರ... ಹಾಡು ನಾಗಮಂಡಲ ಸಿನೆಮಾದ ಹೈಲೈಟ್ ಹಾಡಾಯಿತು. ಚಿತ್ರರಸಿಕರಿಗೆ ಹುಚ್ಚೆಬ್ಬಿಸಿತು. ಈಗಲೂ ಸಹ ಹಾಡನ್ನು ಕೇಳಿದರೆ ಮೈಮನ ಮರೆಯುವಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ.

2004ರಲ್ಲಿ ಅದೊಂದು ದಿನ ಹೈದರಾಬಾದ್ನಲ್ಲಿ ಟಿವಿ ಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ವಾಜಪೇಯಿಯವರಿಗೆ ಗಿರೀಶ್ ಕಾರ್ನಾಡರು ಪೋನ್ ಮಾಡಿದರು. ನಿಮ್ಮ ಮಾಯಾದೋ... ಹಾಡನ್ನು ನಾಟಕ ಪುಸ್ತಕದ 2005 ಆವೃತ್ತಿಯಲ್ಲಿ  ಬಳಸಿಕೊಳ್ಳಲು ಅನುಮತಿ ಬೇಕೆಂದು ಕೇಳಿಕೊಂಡರು. ಗಿರೀಶ್ ಕಾರ್ನಾಡರಂತಹ ಲೇಖಕರೆ ಕೇಳುತ್ತಿದ್ದಾರೆಂದ ಮೇಲೆ ಇಲ್ಲಾ ಎನ್ನಲು ವಾಜಪೇಯಿಯವರಿಗೆ ಮನಸ್ಸಾಗಲಿಲ್ಲ. ಸರಿ ಆಯ್ತು ನನ್ನದೇನೂ ಅಭ್ಯಂತರ ಇಲ್ಲಾ ಎಂದು ವಾಜಪೇಯಿರವರು ಹೇಳಿದಾಗ, ನಾಟಕ ಪುಸ್ತಕದ ಎಲ್ಲಾ ಎಡಿಶನ್ಗಳಲ್ಲೂ ಇದನ್ನು ಬಳಸಿಕೊಳ್ಳುತ್ತೇನೆ ಅದಕ್ಕಾಗಿ 1500 ರೂಪಾಯಿ ರಾಯಲ್ಟಿ ಹಣ ಕೊಡುತ್ತೇನೆ ಅನುಮತಿಸಬೇಕು ಎಂದು ಕಾರ್ನಾಡರು ಮತ್ತೆ ಕೇಳಿಕೊಂಡರು. ಅನುಮತಿಗಾಗಿ ಒಂದು ಪತ್ರವನ್ನೂ ಬರೆದ ಕಾರ್ನಾಡರು ಪುಸ್ತಕದಲ್ಲಿ ನಿಮ್ಮ ಹೆಸರನ್ನು ನಮೂದಿಸಲಾಗುವುದು ಎಂದೂ ಮಾತುಕೊಟ್ಟಿದ್ದರು. ಮೊದಲೇ ಕೊಂಕಣಿ ಸಾರಸ್ವತ ಬ್ರಾಹ್ಮಣರಾದ ಕಾರ್ನಾಡರಿಗೆ ವ್ಯವಹಾರ ಹೇಗೆ ಮಾಡಬೇಕು ಎಂದು ಚೆನ್ನಾಗಿಯೇ ಗೊತ್ತಿತ್ತು. ಅಮಾಯಕರಾದ ಗೋಪಾಲ ವಾಜಪೇಯಿರವರು ಲಿಖಿತವಾಗಿಯೇ ಅನುಮತಿ ಪತ್ರ ಬರೆದು ಕಳುಹಿಸಿಕೊಟ್ಟರು. ಸರಿ, ಎಲ್ಲವೂ ಸುಸೂತ್ರವಾಯಿತು. ನಾಗಮಂಡಲ ನಾಟಕವೂ ಸಹ ಧಾರವಾಡದ ಮನೋಹರ ಗ್ರಂಥ ಮಾಲಾ ದಿಂದ ಪುಸ್ತಕ ರೂಪದಲ್ಲಿ ಮರುಮುದ್ರಣಗೊಂಡು ಪ್ರಕಟಗೊಂಡಿತು. ಗೋಪಾಲ್ ವಾಜಪೇಯಿಯವರು ಬರೆದ ಹಾಡು ಎಂದೂ 2005 5ನೇ ಆವೃತ್ತಿಯ ಪುಸ್ತಕದಲ್ಲಿ ನಮೂದಾಯಿತು. ಮೊದಲ ನಾಲ್ಕು ಆವೃತ್ತಿಯವರೆಗೂ ಕಾರ್ನಾಡರೇ ಬರೆದ ಹಾಡು ಪ್ರಕಟಗೊಂಡಿತ್ತು. ಆದರೆ ಅದು ನಾಟಕಕ್ಕೆ ಹೊಂದಾಣಿಕೆ ಆಗದ್ದರಿಂದ ವಾಜಪೇಯಯವರ ಜನಪ್ರೀಯತೆ ಗಳಿಸಿದ ಹಾಡೇ ಸೂಕ್ತವೆಂದು ಕಾರ್ನಾಡರು ತಮ್ಮ ಹಾಡನ್ನು ತೆಗೆದು ಹಾಕಿ ಮಾಯಾದ.. ಹಾಡನ್ನು ನಾಟಕ ಪುಸ್ತಕದಲ್ಲಿ ಬಳಸಿಕೊಂಡರು.

ಆದರೆ.. ನಂತರ ಗಿರೀಶ್ ಕಾರ್ನಾಡರಿಗೆ ಅಂದದ ಹಾಡಿನ ಮೇಲೆ ಮೋಹ ಬೆಳೆಯಿತಾ? ಚೆಂದದ ಹಾಡನ್ನು ತನ್ನದನ್ನಾಗಿಸಿಕೊಳ್ಳಬೇಕೆಂಬ ದುರಾಸೆ ಬಂದಿತಾ? ಗೊತ್ತಿಲ್ಲ. ತದನಂತರ ನಾಗಮಂಡಲ ನಾಟಕದ ರೀಪ್ರಿಂಟ್ ಆವೃತ್ತಿಯಲ್ಲಿ ಗೋಪಾಲ ವಾಜಪೇಯಿರವರ ಹಾಡು ಇತ್ತು ಆದರೆ ಅವರ ಹೆಸರು ಕಾಣೆಯಾಗಿತ್ತು. ಹೈದರಾಬಾದನಲ್ಲಿರುವ ಹಾಡು ಬರೆದವನಿಗೆ ಇದೆಲ್ಲಾ ಹೇಗೆ ಗೊತ್ತಾಗಬೇಕು ಎನ್ನುವ ನಿರ್ಲಕ್ಷವೋ ಅಥವಾ ತಾನು ಬರೆದ ನಾಟಕದ ಪುಸ್ತಕದಲ್ಲಿ ಕೇವಲ ಒಂದು ಹಾಡು ಬರೆದವನ ಹೆಸರೇಕೆ ಎನ್ನುವ ನಿರಾಸಕ್ತಿಯೋ, ಒಟ್ಟಾರೆ ಹಾಡಿನ ರಚನೆಕಾರನ ಹೆಸರನ್ನೇ ಕಾರ್ನಾಡರು ನುಂಗಿ ನೀರುಕುಡಿದುಬಿಟ್ಟಿದ್ದರುನಿಮ್ಮ ಹೆಸರನ್ನು ನಾಟಕದ ಪುಸ್ತಕದಲ್ಲಿ ಸ್ಮರಿಸಲಾಗುವುದು ಎಂದು ಲಿಖಿತವಾಗಿ ಪತ್ರದ ಮೂಲಕ ಕೊಟ್ಟ ಮಾತನ್ನು ಕಾರ್ನಾಡರು ಮುರಿದಿದ್ದರು. ಯಾರೋ ಹೆತ್ತ ಮಗುವಿಗೆ ಅವರೇ ತಂದೆಯಾಗಿಬಿಟ್ಟಿದ್ದರು. ಮರುಮುದ್ರಣಗೊಂಡ ಆವೃತ್ತಿ ಅದು ಹೇಗೋ ವಾಜಪೇಯಿಯವರಿಗೆ ದೊರಕಿತು. ತೆರೆದು ನೋಡಿದಾಗ ಆಘಾತವೆನಿಸಿತು. ಅರೇ ನಾನು ಬರೆದ ಹಾಡಿದೆ ಆದರೆ ನನ್ನ ಹೆಸರೇ ಇಲ್ಲವಲ್ಲಾ ಎಂದು ಗೋಪಾಲರವರಿಗೆ ಕಳವಳವಾಯಿತು. ಆಕಸ್ಮಿಕವಾಗಿ ಹೆಸರು ಕೈಬಿಟ್ಟಿರಬಹುದು ಮುಂದಿನ ಆವೃತ್ತಿಯಲ್ಲಿ ಸರಿಮಾಡಬಹುದೇನೋ ಎಂದು ವಾಜಪೇಯಿಯವರು ನಜರ್ ಅಂದಾಜ್ ಮಾಡಿ ಸುಮ್ಮನಾದರು.


ನಾಗಮಂಡಲ ನಾಟಕದ ದೃಶ್ಯ

 ತದನಂತರ 2008 ರಲ್ಲಿ ಬಂದ ಕಾರ್ನಾಡರ ಸಮಗ್ರ ನಾಟಕಗಳ ಸಂಪುಟದಲ್ಲಿದ್ದ ನಾಗಮಂಡಲ ನಾಟಕದಲ್ಲೂ ಸಹ ಗೋಪಾಲ ವಾಜಪೇಯಿಯವರ ಹೆಸರು ಇರಲೇ ಇಲ್ಲ. ವಾಜಪೇಯಿಯವರಿಗೆ ಆತಂಕ ಶುರುವಾಯಿತುಹೀಗೆ ಸುಮ್ಮನಿದ್ದರೆ ಮುಂದಿನ ತಲೆಮಾರಿನವರು ಹಾಡು ಬರೆದಿದ್ದು ಕಾರ್ನಾಡರೇ ಎಂದು ಕೊಳ್ಳುವ ಸಾಧ್ಯತೆಗಳ ಅರಿವಾಯಿತು. ಕೊಟ್ಟ ಮಾತನ್ನು ಮುರಿದ ಕಾರ್ನಾಡರ ಮೇಲೆ ಬೇಸರವೂ ಆಯಿತು. ಕಾರ್ನಾಡರಿಗೆ ಒಂದು ಪತ್ರವನ್ನು ಬರೆದ ವಾಜಪೇಯಿರವರು ನೀವು ಕೊಟ್ಟ ಮಾತನ್ನು ಮುರಿದಿದ್ದೀರಿ, ನನ್ನ ಹೆಸರನ್ನೇ ಕೈಬಿಟ್ಟಿದ್ದೀರಿ ಆದ್ದರಿಂದ ಹಾಡನ್ನು ಬಳಸಿಕೊಳ್ಳಲು ನಿಮಗೆ ಕೊಟ್ಟ ಅನುಮತಿಯನ್ನು ನಾನು ಹಿಂಪಡೆಯುತ್ತೇನೆ ಎಂದು ಲಿಖಿತವಾಗಿಯೇ ತಮ್ಮ ಅಸಹನೆಯನ್ನು ತೋರಿಸಿದರು. ಅದಕ್ಕೆ ಕಾರ್ನಾಡರು ‘‘ಹಾಗೇನಿಲ್ಲಾ, ಬೇಸರ ಮಾಡ್ಕೋಬೇಡಿ, ಕಣ್ತಪ್ಪಿನಿಂದ ಆಗಿದೆ, ನೀವು ಅನುಮತಿ ಹಿಂಪಡೆದಿದ್ದರಿಂದ ನಾಟಕದ ಮುಂದಿನ ಆವೃತ್ತಿಯಿಂದ ನಾನು ನಿಮ್ಮ ಹಾಡನ್ನು ಬಳಸುವುದಿಲ್ಲ ಎಂದು ಪ್ರಾಮಿಸ್ ಮಾಡ್ತೇನೆ’’ ಎಂದು ಉತ್ತರಿಸಿ ಪತ್ರ ಬರೆದರು. ಆಯ್ತು ಎಂದು ವಾಜಪೇಯಿಯವರೂ ಸುಮ್ಮನಾದರು. ಟಿವಿ ಬಿಡುವಿಲ್ಲದ ಕೆಲಸಗಳಲ್ಲಿ ಹೈದರಾಬಾದನಲ್ಲಿಯೇ ಉಳಿದರು.
         
ಆದರೆ ಯಾವಾಗ ಬೆಂಗಳೂರಿಗೆ ವಾಜಪೇಯಿಯವರು ಬಂದರೋ ಆಗ ಅವರ ಅರಿವಿಗೆ ಬಂದಿತು ನಾಗಮಂಡಲ ನಾಟಕದ ಮುಂದಿನ ಎಲ್ಲಾ ಮೂರು ಆವೃತ್ತಿಗಳಲ್ಲೂ ಸಹ ಅವರ ಹಾಡು ಪ್ರಿಂಟ್ ಆಗಿತ್ತು ಹಾಗೂ ಯಥಾಪ್ರಕಾರ ಗೀತರಚನೆಕಾರನ ಹೆಸರು ನಾಪತ್ತೆಯಾಗಿತ್ತುಎರಡನೇ ಬಾರಿಗೆ ಜ್ಞಾನಪೀಠಿಗಳು ತಾವು ಕೊಟ್ಟ ಮಾತನ್ನು ಮುರಿದಿದ್ದರು. ಬಳಸಿಕೊಂಡ ಹಾಡಿಗೆ ನೀವೇ ವಾರಸದಾರರು ಎಂದು ಕೊಟ್ಟ ಮಾತನ್ನು ಮರೆತು, ಗೀತರಚನೆಕಾರನ ಹೆಸರನ್ನೇ ತೆಗೆದು ಹಾಕಿ ತಾವೇ ಹಾಡಿಗೆ ವಾರಸುದಾರಾಗಿದ್ದರು. ಈಗ ಮತ್ತೆ ಹಾಡನ್ನೇ ಬಳಸುವುದಿಲ್ಲ ಎಂದು ಮಾತುಕೊಟ್ಟು ಹಾಡನ್ನು ಉಳಿಸಿಕೊಂಡೇ ಮರುಮುದ್ರಣ ಮಾಡಲಾಗಿತ್ತು. ಇದು ಗೊತ್ತಾಗಿದ್ದೇ ವಾಜಪೇಯಿರವರ ಎದೆ ದಸಕ್ಕ ಎಂದಿತು. ಉತ್ತರ ಕರ್ನಾಟಕದ ಲಕ್ಷ್ಮೇಶ್ವರದ ವಾಜಪೇಯಿರವರಿಗೆ ಸಿಟ್ಟು ನೆತ್ತಿಗೇರಿತು. ಕೊಟ್ಟ ಮಾತನ್ನು ಮುರಿದ ಜ್ಞಾನಪೀಠಕ್ಕೆ ಪಾಠ ಕಲಿಸಬೇಕೆಂದು ನಿರ್ಧರಿಸಿದರು

ವಾಜಪೇಯಿರವರಿಗೆ ಬೇರೆ ದಾರಿ ಕಾಣದೇ ಹಾಡಿನ ಮೇಲಿನ ತಮ್ಮ ಹಕ್ಕನ್ನು ಪಡೆಯಲು ನಿರ್ಧರಿಸಿದರು. ಲಾಯರ್ ಮೂಲಕ ಕಾರ್ನಾಡರಿಗೆ ಹಾಗೂ ಮನೋಹರ ಗ್ರಂಥ ಮಾಲಾದ ಪ್ರಕಾಶಕರಾದ ರಮಾಕಾಂತ ಜ್ಯೋಷಿರವರಿಗೆ ನೋಟಿಸ್ ಜಾರಿ ಮಾಡಿದರು. ಆಗಲೂ ಸಹ ಕಾರ್ನಾಡರು ನಿರ್ಲಕ್ಷ ದೋರಣೆ ತಾಳಿದರು. ಕನಿಷ್ಟ ಪಕ್ಷ ನೋಟೀಸಿಗೆ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಅವರ ದಿವ್ಯ ಮೌನ ಏನು ಬೇಕಾದರೂ ಮಾಡಿಕೋ ಹೋಗು ಎನ್ನುವ ಸಂದೇಶವನ್ನು ಕೊಟ್ಟಿತು. ವಾಜಪೇಯಿಯವರ ಸಹನೆ ಮಿತಿ ಮೀರಿತು. ಸಿವಿಲ್ ಕೋರ್ಟನಲ್ಲಿ ಕಾಫಿ ರೈಟ್ ಉಲ್ಲಂಘನೆ ಕೇಸ್ ದಾಖಲಿಸಿದರು. ಹಾಡನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಕೊಡಿಸಿಕೊಡಬೇಕು ಎಂದೂ ಕೋರ್ಟಲ್ಲಿ ದಾವೆ ಹೂಡಿದರು. ಅದಕ್ಕೂ ಗಿರೀಶ್ ಕಾರ್ನಾಡರು ಕ್ಯಾರೇ ಎನ್ನದಿರುವಾಗ ವಾಜಪೇಯಿರವರು ಕ್ರಿಮಿನಲ್ ಕೋರ್ಟಲ್ಲಿ ದೂರನ್ನು ದಾಖಲಿಸಿ ಮೊಕದ್ದಮೆ ಶುರುಮಾಡಿದರು. ಜ್ಞಾನದ ಪೀಠವನ್ನೇ ಹತ್ತಿ ಕುಳಿತ ಕಾರ್ನಾಡರಿಗೆ ಕಾನೂನಿಗೆ ಗೌರವ ಕೊಡಬೇಕು ಎನ್ನುವುದು ಅದ್ಯಾಕೆ ಗೊತ್ತಾಗಲಿಲ್ಲವೋ ಏನೋ? ನ್ಯಾಯಪೀಠಕ್ಕಿಂತ ಜ್ಞಾನಪೀಠ ದೊಡ್ಡದೆಂದು ತಿಳಿದುಕೊಂಡಿದ್ದರೋ ಎನೋ? ಕೋರ್ಟಿನ ನೊಟೀಸಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಲಾಯರ್ ಮೂಲಕವಾದರೂ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ಮೂರು ಬಾರಿ ಕೋರ್ಟಗೆ ಬರಲು ನ್ಯಾಯಾಧೀಶರು ಸೂಚಿಸಿದರೂ ಕಾರ್ನಾಡರು ನಿರ್ಲಕ್ಷಿಸಿದರು. ಇದರಿಂದ ಕೆರಳಿದ ನ್ಯಾಯಾಧೀಶರು ಕಾರ್ನಾಡರಿಗೆ ಪೈನಲ್ ಸಮನ್ಸ್ ಜಾರಿ ಮಾಡಿದರು. ಆಗ ಕಾರ್ನಾಡರಿಗೆ ಬಿಸಿ ಮುಟ್ಟಿತು. ಪೀಠ ಅಲ್ಲಾಡತೊಡಗಿತು. ಇನ್ನೇನು ಆರೆಸ್ಟ್ ವಾರೆಂಟ್ ಬಂದುಬಿಡುತ್ತದೆ ಎಂಬುದು ಖಾತ್ರಿಯಾಯಿತು. ಸೆಪ್ಟೆಂಬರ್ ೨೨ ರಂದು ಓಡಿ ಬಂದ ಕಾರ್ನಾಡರು, ಮನೋಹರ ಗ್ರಂಥ ಮಾಲಾದ ರಮಾಕಾಂತ್ ಜ್ಯೋಷಿ ಹಾಗೂ ಅವರ ಮಗ ಸಮೀರ್ ಜ್ಯೋಷಿಯವರೊಂದಿಗೆ ಕಟಕಟೆಯಲ್ಲಿ ನಿಂತರು. ಜಾಮೀನು ಪಡೆಯದಿದ್ದರೆ ಬಂಧಿಸಬೇಕಾಗುತ್ತದೆಂದು ನ್ಯಾಯಾಧೀಶರು ಹೇಳಿದಾಗಲೇ ಕಾನೂನಿನ ಗಂಭೀರತೆ ಅರಿವಿಗೆ ಬಂದಿತು. ಯಾರಾದರೂ ಗಣ್ಯವ್ಯಕ್ತಿಗಳು ಜಾಮೀನು ಕೊಟ್ಟರೆ ಮಾತ್ರ ಬೇಲ್ ಕೊಡಲಾಗುವುದೆಂದು ಕೋರ್ಟು ಆದೇಶಿಸಿತುಆಗ ಜಾಮೀನುದಾರರಾಗಿ ಬಂದವರು ಕಾರ್ನಾಡರ ಹಿತೈಷಿಗಳಾದ ಡಾ.ಕೆ.ಮರುಳಸಿದ್ದಪ್ಪನವರು


ನಾಗಮಂಡಲ ಸಿನೆಮಾದ ದೃಶ್ಯ

ನಮ್ಮ ಪುಸ್ತಕವನ್ನು ನಮ್ಮ ಪ್ರಕಾಶನದಿಂದ ಪ್ರಕಟಿಸುತ್ತೇವೆ, ಆದ ಲೋಪಕ್ಕೆ ಐದತ್ತು ಸಾವಿರ ಹಣವನ್ನೂ ಕೊಡುತ್ತೇವೆ, ದಯವಿಟ್ಟು ಕೇಸ್ ವಾಪಸ್ ತೆಗೆದುಕೊಳ್ಳಿ, ಆದ ತಪ್ಪನ್ನು ತಿದ್ದಿಕೊಳ್ಳುತ್ತೇವೆ.. ಎಂದು ರಮಾಕಾಂತ ಜ್ಯೋಷಿಯವರು ಗೋಪಾಲ ವಾಜಪೇಯಿರವರಿಗೆ ಕೇಳಿಕೊಂಡರು, ಬೇಡಿಕೊಂಡರು, ಆಸೆ ಆಮಿಷ ತೋರಿದರು. ಆದರೆ ವಾಜಪೇಯಿ ಜಪ್ಪಯ್ಯಾ ಅಂದರೂ ಜಗ್ಗಲಿಲ್ಲ. ಆಮಿಷಗಳಿಗೆ ಬಲಿಯಾಗಲಿಲ್ಲ, ನಯಗಾರಿಕೆಯ ಮಾತಿಗೆ ಮರುಳಾಗಲಿಲ್ಲ. ಅವರದು ಒಂದೇ ಮಾತು... ಇದೇ ಮಾತನ್ನು ಗಿರೀಶ್ ಕಾರ್ನಾಡರ ಬಾಯಲ್ಲಿ ಹೇಳಿಸಿ, ಅವರು ಮಾಡಿಕೊಂಡ ಪ್ರಮಾದಕ್ಕೆ ಪ್ರತಿಯಾಗಿ ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯುತ್ತೇನೆ ಎಂಬುದು. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಜಿಗುಟು ಸ್ವಾಭಾವದ ಕಾರ್ನಾಡರು ಇಂತಹುದಕ್ಕೆಲ್ಲಾ ಒಪ್ಪಲು ಸಾಧ್ಯವಾ? ಸಾಧ್ಯವೇ ಇಲ್ಲ ಎನ್ನುವುದನ್ನು ಕಾರ್ನಾಡರ ದುರಭಿಮಾನ ಸಾಬೀತು ಪಡಿಸಿತು. ವಾಜಪೇಯಿಯವರ ಸ್ವಾಭಿಮಾನ ಕೆರಳಿನಿಂತಿತು. ಕೇಸು ಕೋರ್ಟಲ್ಲಿ ನಿರಂತರವಾಗಿ ಸಾಗಿತು.

ಮುಂದೆ ಕೋರ್ಟಿನ ತೀರ್ಪು ಏನಾದರೂ ಬರಲಿ. ಆದರೆ ಕಾರ್ನಾಡರು ಮಾಡಿದ್ದು ಮಾತ್ರ ಅಕ್ಷಮ್ಯ. ಜ್ಞಾನಪೀಠವೇರಿ ಕುಳಿತವರಿಂದ ಜನತೆ ನೈತಿಕತೆಯನ್ನು ಅಪೇಕ್ಷಿಸುತ್ತಾರೆ. ಮಾತು ಕೊಟ್ಟು ಮುರಿದವರನ್ನು ದ್ರೋಹಿಗಳು ಎನ್ನುತ್ತಾರೆ. ಮತ್ತೊಬ್ಬರ ಸ್ವತ್ತಿಗೆ ತಾವೇ ಒಡೆಯರಾಗುವವರಿಗೆ ವಂಚಕರು, ಕಳ್ಳರು ಎನ್ನುತ್ತಾರೆ. ಸಮಾಜಕ್ಕೆ ಮಾರ್ಗದರ್ಶಕರಾಗಬೇಕಾದವರೇ ಅಡ್ಡದಾರಿ ಹಿಡಿದಾಗ ಬುದ್ದಿಜೀವಿಗಳ ಬಗ್ಗೆ ಜನರಿಗೆ ವಾಕರಿಕೆ ಬರಲು ಶುರುವಾಗುತ್ತದೆ. ಅಕಸ್ಮಾತ್ ತಪ್ಪಾಗಿದ್ದರೆ ಕ್ಷಮೆ ಕೇಳುವುದು ದೊಡ್ಡ ಗುಣ. ಪರರ ಸೊತ್ತನ್ನು ತನ್ನದಾಗಿಸಿಕೊಂಡೂ ದುರಹಂಕಾರದಿಂದ ಬೀಗುವುದು ಕಾರ್ನಾಡರಂತವರಿಗೆ ಶೋಭೆ ತರುವಂತಹುದಲ್ಲ. ಮತ್ತೊಬ್ಬರ ಭೌದ್ದಿಕ ಹಕ್ಕನ್ನು ಹರಣಮಾಡುವ ಹಪಾಹಪಿಯುಳ್ಳವರು ಜ್ಞಾನಪೀಠಕ್ಕೆ ಯೋಗ್ಯರೆನಿಸುವುದಿಲ್ಲ. ರಾಷ್ಟ್ರಕವಿ ರವೀಂದ್ರ ಠಾಗೋರರನ್ನು ಎರಡನೇ ದರ್ಜೆ ನಾಟಕಕಾರ ಎಂದು ಮೂದಲಿಸಿದ, ನೊಬೆಲ್ ಪ್ರಶಸ್ತಿ ಪುರಸ್ಕೃತ ನೈಪಾಲರನ್ನು ಅವಮಾನಿಸಿದ ಇದೇ ಗಿರೀಶ್ ಕಾರ್ನಾಡರನ್ನು ಈಗ ಹಾಡು ಕದ್ದಿದ್ದಕ್ಕೆ, ಕೊಟ್ಟ ವಚನ ಮುರಿದಿದ್ದಕ್ಕೆ ಯಾವ ದರ್ಜೆಕೊಡಬೇಕು ಎನ್ನುವುದನ್ನು ಜನರೇ ನಿರ್ಧರಿಸಬೇಕಾಗಿದೆ. ಸ್ವಾರ್ಥಸಾಧನೆಗೆ  ಕಾರ್ಪೊರೇಟ್ ಕುಳ ನೀಲಕೇಣಿಯನ್ನು ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಓಟಿಗಾಗಿ ಬೀದಿ ಬೀದಿ ಸುತ್ತಿದ ಕಾರ್ನಾಡರ ಸಮಯಸಾಧಕತನವನ್ನು  ಜನತೆ ಅರಿಯಬೇಕಿದೆ. ನೈತಿಕ ಪ್ರಜ್ಞೆಯನ್ನು ಕಳೆದುಕೊಂಡು ದುರಹಂಕಾರದಿಂದ ಬಾಯಿಗೆ ಬಂದಂತೆ ಮಾತಾಡುತ್ತಿರುವ ಕಾರ್ನಾಡರನ್ನು ಕನ್ನಡಿಗರೇ ಒಂದಿಲ್ಲೊಂದು ದಿನ ಜ್ಞಾನಪೀಠದಿಂದ ಕೆಳಗಿಳಿಯಲು ಒತ್ತಾಯಿಸಬಹುದಾಗಿದೆ. ಏನೇ ಆಗಲಿ ಗೋಪಾಲ ವಾಜಪೇಯಿರವರಿಗೆ ನ್ಯಾಯಸಿಗುವಂತಾಗಲಿ ಹಾಗೂ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದು ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿರುವ ಕಾರ್ನಾಡರು ಆದಷ್ಟು ಬೇಗ ವ್ಯಸನದಿಂದ ಮುಕ್ತರಾಗಿ ಮನುಷ್ಯರಾಗಲಿ ಎಂದು ಕನ್ನಡ ರಂಗಭೂಮಿ ಹಾರೈಸುತ್ತದೆ.  

                             ಮಾಯಾದೋ ಶ್ರೇಷ್ಠತೆಯ ಭಾರ
                             ತೆರೆದಾಗ ಕಟಕಟೆಯ ದ್ವಾರ
                             ಏನ ಏನಿದು ಕಾರ್ನಾಡರ ದುರಹಂಕಾರ.....
                             ಕಟ್ಟೊಡೆದು ಹರಿದ ಸ್ವಾರ್ಥಾ
                             ಜ್ಞಾನಪೀಠ ಕೊಚ್ಚಿ ಪೂರ್ತಾ
                             ಏನ ಏನಿದು ಎಂತಾ ಬೆರಗ....
ಗಿರೀಶ್ ಕರ್ನಾಡರು ಗೋಪಾಲ ವಾಜಪೇಯಿರವರಿಗೆ ಬರೆದ ಪತ್ರಗಳು ಇಲ್ಲಿವೆ
                
ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...