Wednesday, October 15, 2014

ಉಳುವವನೇ ಹೊಲ ಬಿಟ್ಟು ಓಡಯ್ಯ...
-ಬಿ.ರಾಜಶೇಖರಮೂರ್ತಿ, ಬೆಂಗಳೂರು


ವಾರ್ತಾಭಾರತಿ


ಉಳುವವನೇ ಹೊಲ ಬಿಟ್ಟು ಓಡಯ್ಯ...

ಸ್ವಾಂತ್ರ ಚಳವಳಿಯ ಜೊತೆ ಜೊತೆ ಯಲ್ಲಿಯೇ ಆರಂಭವಾದ ‘ಉಳುವವನೇ ಹೊಲದೊಡೆಯ’ ಎಂಬ ಬೇಡಿಕೆಯೂ ಸ್ವಾತಂತ್ರಾನಂತರದಲ್ಲಿ ಈಡೇರಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿಯೇ 1950ರಿಂದ ದೇಶದ ಅನ್ನದಾತರಿಗೆ ಭೂಮಿಯನ್ನು ನೀಡುವುದು ಕೂಡ ಸರಕಾರಗಳ ಜವಾಬ್ದಾರಿಯಾಗಿತ್ತು. ನಮ್ಮ ರಾಜ್ಯದಲ್ಲಿ 1970-80ರಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಸರಕಾರಿ ಭೂಮಿಯನ್ನು ನೀಡುವ ರಾಜಕೀಯ ಇಚ್ಛಾಶಕ್ತಿಯೂ ಇತ್ತು. ಆದರೆ ಈಗ ಆಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಗಳು ಭೂಹೀನರಿಗೆ ಭೂಮಿಯನ್ನು ನೀಡುವ ಬದಲಿಗೆ ಬಗರ್‌ಹುಕುಂ, ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿದೆ.

ಈ ಹಿಂದೆ ಅಧಿಕಾರ ದಲ್ಲಿದ್ದ ಬಿಜೆಪಿ ರಾಜ್ಯ ಸರಕಾರ ಸರಕಾರಿ ಭೂಮಿಯನ್ನು ಪತ್ತೆ ಮಾಡಿ ಭೂ ಬ್ಯಾಂಕ್ ಸ್ಥಾಪಿಸಿ ಖಾಸಗಿ ಕಂಪೆನಿಗಳಿಗೆ, ರಿಯಲ್ ಎಸ್ಟೇಟ್‌ದಾರರಿಗೆ ಹರಾಜಿನಲ್ಲಿ ಮಾರಾಟ ಮಾಡಲು ಮುಂದಾಗಿತ್ತು. ಹೀಗಾಗಿ ಸರಕಾರಿ ಭೂ ಅಕ್ರಮಣಕಾರರನ್ನು ಪತ್ತೆಮಾಡಲು ಡಾ.ಬಾಲಸುಬ್ರಮಣ್ಯಂ ಸಮಿತಿಯನ್ನು ರಚಿಸಿತ್ತು. ಡಾ.ಬಾಲಸುಬ್ರಮಣ್ಯಂ ಸಮಿತಿ ಹಲವಾರು ಆಕ್ರಮಣಕಾರರನ್ನು ಗುರುತಿಸುವ ಜೊತೆಗೆ 12 ಲಕ್ಷ ಜನ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆಂದು ವರದಿ ನೀಡಿತು. ಈ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಭೂಮಿ, ಬಂಜರು ಭೂಮಿ, ಗೋಮಾಳ, ಅಮೃತ್ ಮಹಲ್ ಕಾವಲು, ಗುಂಡು ತೋಪು, ಇತ್ಯಾದಿ ಹೆಸರಿನಲ್ಲಿ ಬಡ ರೈತರು, ದಲಿತ- ಹಿಂದುಳಿದ ವರು, ಸಣ್ಣ ರೈತರು ಮತ್ತು ಕೃಷಿ ಕೂಲಿಕಾರ ಸಾಗುವಳಿದಾರರು ಸೇರಿದಂತೆ ಈ ಎಲ್ಲ 12 ಲಕ್ಷ ಜನರಲ್ಲಿ ಸೇರಿದ್ದಾರೆ. ಈ ಇವರೆಲ್ಲರಿಂದ ಭೂಮಿಯನ್ನು ಸ್ವಾಧೀನಪಡಿಸಬೇಕೆಂದು, ರಿಟ್ ಫಿಟೀಷನ್ ಸಂಖ್ಯೆ 11500ರ ಅಡಿಯಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ರಿಟ್ ಪಿಟೀಷನ್ ಸಂಖ್ಯೆ 11511ರ ಅಡಿಯಲ್ಲಿ ಸಾಮಾಜಿಕ ಪರಿವರ್ತನಾ ಸಮಿತಿಯ ಎಸ್.ಆರ್.ಹೀರೇಮಠ್‌ರವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಈಗಿನ ಕಾಂಗ್ರೆಸ್ ರಾಜ್ಯ ಸರಕಾರಕ್ಕೆ ಆದೇಶ ನೀಡಿ ಎಲ್ಲ ಭೂ ಆಕ್ರಮಣಕಾರರಿಂದ ಭೂಸ್ವಾಧೀನಪಡಿಸಿ ಕೊಳ್ಳಬೇಕೆಂದು ತಾಕೀತು ಮಾಡಿದೆ. ಹೀಗಾಗಿ ರಾಜ್ಯ ಸರಕಾರ ರಾಜ್ಯದಲ್ಲಿರುವ ಎಲ್ಲ ಒತ್ತುವರಿದಾರರನ್ನು ತೆರವುಗೊಳಿಸುತ್ತೇವೆಂದು ಹೈಕೋರ್ಟ್‌ಗೆ ಅಫಿದಾವಿಟ್ ಸಲ್ಲಿಸಿದೆ. ಜೊತೆಗೆ ರಾಜ್ಯದೆಲ್ಲೆಡೆ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ.

ಇದೇ ಸಂದರ್ಭದಲ್ಲಿ ಕಳೆದ ಮೂರು- ನಾಲ್ಕು ವಾರಗಳಿಂದ ಬೆಂಗಳೂರಿನ ಟೌನ್‌ಹಾಲ್ ಬಳಿ ಎಚ್.ಎಸ್.ದೊರೆಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿಯವರ ನೇತೃತ್ವ ದಲ್ಲಿ ಬೆರಳೆಣಿಕೆಯಷ್ಟು ಜನರು ಸೇರಿ ಭೂ ಆಕ್ರಮಣಕಾರರಿಂದ ಭೂಮಿಯನ್ನು ತೆರವುಗೊಳಿಸಬೇಕೆಂದು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ತಿಂಗಳಿ ನಿಂದಲ್ಲೂ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ಗಮನ ಹರಿಸುತ್ತಿಲ್ಲವೆಂದು ಕೆಲ ಹಿರಿಯ ರಾಜಕಾರಣಿಗಳು ಮತ್ತು ಮಾಧ್ಯಮ ಗಳು ಕೂಗಿಕೊಂಡಿವೆ. ಕೆಲ ಪ್ರಗತಿಪರರು ಮತ್ತು ಕಾಳಜಿಯುಳ್ಳ ಕೆಲವರು ಧರಣಿಯಲ್ಲಿ ಕೂತು ಬಂದಿರುವವರೂ ಇದ್ದಾರೆ. ಹೀಗಾಗಿ ರಾಜ್ಯ ಸರಕಾರ ಭೂಸ್ವಾಧೀನವನ್ನು ತ್ವರಿತ ಗೊಳಿಸುತ್ತೇವೆಂದು ಹೇಳುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಭೂಗಳ್ಳರು ಯಾರು? ಬಗರ್ ಹುಕುಂ ಸಾಗುವಳಿದಾರರು ಯಾರು? ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಭೂಮಿಯನ್ನು ಲಪಾಟಯಿಸಿರುವವರು ಯಾರು? ರಾಜಕೀಯ ಆಧಿಕಾರ ಮತ್ತು ರಾಜಕೀಯ ಪ್ರಭಾವವಿರುವ ವ್ಯಕ್ತಿಗಳೇ? ಇಂತಹ ವ್ಯಕ್ತಿಗಳನ್ನು ಮಾತಾಡಿಸಿ ‘ನೀವು ಸರಕಾರಿ ಭೂಮಿಯನ್ನು ಅಕ್ರಮವಾಗಿ ಹೊಂದಿದ್ದೀರಿ’ ಎಂದು ಅಧಿಕಾರ ಚಲಾಯಿ ಸುವ ದಿಟ್ಟತನವನ್ನು ರಾಜ್ಯ ಸರಕಾರ ಹೊಂದಿದೆಯೇ? ಬದಲಿಗೆ ಹಲವಾರು ವರ್ಷಗಳಿಂದ ಜೀವನಾಧಾರಕ್ಕಾಗಿ ಬಗರ್ ಹುಕುಂ ಸಾಗುವಳಿದಾರರಾಗಿ ವ್ಯವಸಾಯ ಮಾಡುವ ಬಡ ರೈತರನ್ನು ಕೂಡ ಭೂಗಳ್ಳರೇ ಎಂಬಂತೆ, ಈ ಹಿಂದೆ ಇದ್ದ ಬಿಜೆಪಿಯ ರಾಜ್ಯ ಸರಕಾರ 2006ರಲ್ಲಿ ಭೂಗಳ್ಳರು ಮತ್ತು ಬಗರ್‌ಹುಕುಂ ಸಾಗುವಳಿದಾರರು ಒಂದೇ ಎಂಬ ಕಾನೂನನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತು. ಈಗ ಈ ಕಾನೂನಿಗೆ ರಾಷ್ಟ್ರಪತಿಗಳ ಅಂಗೀಕಾರವೂ ಸಿಕ್ಕಿದೆ. ಈ ಕಾನೂನು ರಾಜ್ಯದಲ್ಲಿ ಜಾರಿಯಾದರೆ ಡಾ. ಬಾಲಸುಬ್ರಮಣ್ಯಂ ವರದಿ ಪ್ರಕಾರ 12 ಲಕ್ಷದಲ್ಲಿ ಬಹುತೇಕ ಅಂದರೆ ಶೇ. 90ರಷ್ಟಿರುವ ಬಗರ್‌ಹುಕುಂ ಸಾಗುವಳಿದಾರರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಜೈಲಿಗೂ ಹಾಕಬಹುದು. ಇಂತಹ ಬಡ ರೈತ ವಿರೋಧಿ ಕಾನೂನನ್ನು ಮರು ಪರಿಶೀಲಿಸಲು ಈಗಿನ ಕಾಂಗ್ರೆಸ್ ರಾಜ್ಯ ಸರಕಾರ ಮುಂದಾಗದೇ ಇಂತಹ ಕಾನೂನು ಜಾರಿಯಾಗಲಿ ಎಂದು ಕಾಯುತ್ತಿದೆ. ಇಂತಹ ಸಂದರ್ಭದಲ್ಲೂ ಬಡ ಬಗರ್‌ಹುಕುಂ ಸಾಗುವಳಿದಾರರು ನಮೂನೆ 50 ಮತ್ತು 53ರಡಿಯಲ್ಲಿ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿದ್ದಾರೆ. ಇವರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ ಭೂ ಮಂಜೂರಾತಿ ಚೀಟಿ ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ಈ ಹಿಂದಿನ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರಕಾರಗಳು ನೆಪಮಾತ್ರಕ್ಕೆ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿ ನಾಟಕವಾಡಿದವು. ಈ ನಾಟಕ ಕಂಪೆನಿಗಳು (ಸಮಿತಿಗಳು) ಒಂದಾದರೂ ಸಮರ್ಪಕವಾಗಿ ಸಭೆ ಸೇರಲಿಲ್ಲ. ಜೊತೆಗೆ ಭೂಮಿ ಹಂಚುವ ಬದಲಿಗೆ ರಾಸುಗಳಿಗೆ ಭೂಮಿಯನ್ನು ಮೀಸಲಿಡಬೇಕೆಂಬುದನ್ನು ಮುಂದುಮಾಡಿ ಕರ್ನಾಟಕ ಕಾನೂನು ಕಲಂ95(7) ಕಾನೂನಿನ ಅಡಿಯಲ್ಲಿ ಎಲ್ಲ ಅರ್ಜಿಗಳನ್ನು ತಿರಸ್ಕಾರ ಮಾಡಿವೆ. ಹೀಗಾಗಿ ಬಗರ್ ಹುಕುಂ ಸಾಗುವಳಿದಾರರು ಅನ್ಯಮಾರ್ಗವಿಲ್ಲದೆ ಹೋರಾಟಕ್ಕಿಳಿಯಲಾರಂಭಿಸಿದ್ದಾರೆ. ಇದರ ಗಂಭೀರತೆಯನ್ನು ಅರಿತ ಸಿದ್ದರಾಮಯ್ಯ ನವರು ಬಾಯಿ ಮಾತಿನಲ್ಲಿ ಮಾತ್ರ ಬಡ ಬಗರ್‌ಹುಕುಂ ಸಾಗುವಳಿದಾರರ ಪರ ವಿದ್ದೇವೆಂದು ಹೇಳುತ್ತಿದ್ದಾರೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ ಕೊಳ್ಳುತ್ತಿವೆ. ಉದಾ: ಯಡಿ ಯೂರಪ್ಪ ವಿರೋಧ ಪಕ್ಷದಲ್ಲಿದ್ದಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಬಗರ್ ಹುಕುಂ ರೈತರನ್ನು ಬೆಂಗಳೂರಿಗೆ ಕರೆತಂದಿದ್ದರು. ಮುಖ್ಯ ಮಂತ್ರಿಯಾದ ಮೇಲೆ ಬಗರ್ ಹುಕುಂ ರೈತರ ವಿರೋಧಿ ನೀತಿಗಳ ನಿಲುವನ್ನು ತಾಳಿದರು. ಈಗಿನ ಕಾಂಗ್ರೆಸ್ ಸರಕಾರವೂ ಕೂಡ ಬಿಜೆಪಿಯ ಹಾದಿಯನ್ನೇ ತುಳಿಯುತ್ತಿದೆ.

  ಇನ್ನು ರಾಜಧಾನಿ ಬೆಂಗಳೂರು, ನಗರ ಪಾಲಿಕೆಗಳು ಮತ್ತು ನಗರಸಭೆ ಮುಂತಾದೆಡೆ 5ರಿಂದ 18 ಕಿ.ಮೀ. ಒಳಗಿನ ವ್ಯಾಪ್ತಿಯ ಸಾಗುವಳಿದಾರರು ಹಾಗೂ ವಸತಿದಾರರಿಗೆ ಹಕ್ಕುಪತ್ರಗಳು ಸಿಗದಂತೆ ಕಾನೂನುಗಳನ್ನು ರೂಪಿಸಲಾಗಿದೆ. ಇದು ಜಾರಿಯಾದಲ್ಲಿ ರಾಜ್ಯ ಎಲ್ಲ ಜಿಲ್ಲೆಗಳ ಮತ್ತು ನಗರ ಪಟ್ಟಣ ಗಳಲ್ಲಿರುವ ಹಲವಾರು ವರ್ಷಗಳಿಂದ ವಾಸವಾಗಿರುವ ಜನರನ್ನು ಹಕ್ಕುಪತ್ರ ಇಲ್ಲವೆಂಬತೆ ಒಕ್ಕಲೆಬ್ಬಿಸಲಾಗುತ್ತಿದೆ. ಈಗಗಾಲೇ ಎಲ್ಲ ಜಿಲ್ಲೆಗಳಲ್ಲಿ ತಹಶೀಲ್ದಾರ್ ಕಚೇರಿಗಳಿಂದ ಬಡ ಜನರ ಮೇಲೆ ಜಾಗ ಬಿಟ್ಟು ಹೊರಹೋಗಬೇಕೆಂದು ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಇಲ್ಲವೇ ಲಕ್ಷಾಂತರ ಹಣವನ್ನು ತೆರಬೇಕಾಗುವಂತಹ ಪರಿಸ್ಥಿತಿಯನ್ನು ಉಂಟು ಮಾಡಲಾಗುತ್ತಿದೆ. ಇನ್ನೊಂದು ಅತ್ಯಂತ ಗಂಭೀರ ಸಮಸ್ಯೆ ಎಂದರೆ ಹೆಚ್ಚುತ್ತಿರುವ ನಿವೇಶನ ಮತ್ತು ವಸತಿ ಸಮಸ್ಯೆ. ಇದು ಇಡೀ ರಾಜ್ಯದ ಸಮಸ್ಯೆ ಆಗಿದ್ದು ಈ ಬಗ್ಗೆ ಆಳುವ ಸರಕಾರಗಳಿಗೆ ಪರಿಜ್ಞಾನವೇ ಇಲ್ಲವಾಗಿದೆ. ವಸತಿ ಸಮಸ್ಯೆಯ ಪರಿಹಾರಕ್ಕೆ ವೈಜ್ಞಾನಿಕ ಯೋಜನೆಗಳಿಲ್ಲ. ಮೊದಲಿಗೆ ಕಾಳಜಿಯೇ ಇಲ್ಲ. ಬೆಳೆಯುತ್ತಿರುವ ಬಡ ಕುಟುಂಬಗಳಿಗೆ ಹೊಸ ನಿವೇಶನ ಮತ್ತು ವಸತಿಯ ಸಮಸ್ಯೆ ತಲೆದೋರಿದೆ. ರಾಜ್ಯದ ಯಾವ ಜಿಲ್ಲೆ, ತಾಲೂಕು ಅಥವಾ ಹೋಬಳಿ ಪಟ್ಟಣ ಪಂಚಾಯತ್‌ಗಳಿಗೆ ಹೋದರೂ ನಿವೇಶನ ಮತ್ತು ವಸತಿ ಸಮಸ್ಯೆಗಳಿಂದ ಜನತೆ ಬಳಲುತ್ತಿದೆ. ದುಬಾರಿ ಬೆಲೆಯಾಗುತ್ತಿರುವ ಭೂಮಿಯನ್ನು ಖರೀದಿಸಿ ನಿವೇಶನ ರಹಿತರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ನಿವೇಶನ ನೀಡುವ ಬದಲಿಗೆ ವಾಣಿಜ್ಯ ಸಂಸ್ಥೆಗಳಂತೆ ಅಭಿವೃದ್ಧಿ ಪ್ರಾಧಿಕಾರಗಳು, ಗೃಹ ಮಂಡಳಿ ಮತ್ತು ಸರಕಾರಿ ಇಲಾಖೆಗಳು ವರ್ತಿಸುತ್ತಿವೆ.

ಈ ರೀತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಭೂ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಬಗೆಹರಿಸುವ ಬದಲಿಗೆ ಸಮಸ್ಯೆ ಯನ್ನು ಇನ್ನಷ್ಟು ಜಟಿಲಗೊಳಿಸಲು ಮುಂದಾಗಿದೆ. ಸಿದ್ದರಾಮಯ್ಯನವರು ನ್ಯಾಯಕೊಡುತ್ತಾರೆಂದು ನಂಬಿದ್ದ ಬಡ ರೈತರಿಗೆ ಕಾಂಗ್ರೆಸ್ ಸರಕಾರ ‘ಉಳುವವನೇ ಹೊಲ ಬಿಟ್ಟು ಓಡಯ್ಯೆ...’ ಎಂಬಂತೆ ಒಕ್ಕಲೆಬ್ಬಿಸುತ್ತಿದೆ. ಲಕ್ಷಾಂತರ ಬಡ ಕುಟುಂಬ ಗಳಿಗೆ ಆಸರೆಯಾಗಿರುವ ಬಗರ್‌ಹುಕುಂ ಸಾಗುವಳಿದಾರರು, ಮನೆ, ನಿವೇಶನರಹಿತರು ಒಂದಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಟ ಕ್ಕಿಳಿಯುವ ಸಂದರ್ಭ ಅನಿವಾರ್ಯವಾಗಿ ಒದಗಿ ಬರುತ್ತಿದೆ. ಹೀಗಾಗಿ ಗಂಭೀರ ಗೊಳ್ಳುತ್ತಿರುವ ಭೂಸಮಸ್ಯೆಯನ್ನು ರಾಜ್ಯ ಸರಕಾರ ಅರಿತು ಬಗೆಹರಿಸಲು ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಯನ್ನೆದುರಿಸಬೇಕಾಗುತ್ತದೆ.

1 comment:

  1. ಭೂ ಸಮಸ್ಯೆ ಕೊಳ್ಳುವವನ ಹತ್ತಿರ ಇರುವ ಆ 'ಹಣ' ಮಾರುವವನ ಹತ್ತಿರ ಇಲ್ಲದಿರುವ 'ಹಣ', ಮಧ್ಯೆ ದಲ್ಲಾಳಿ ಗಳಾಗುವವರಿಗೆ ಬೇಕಾದ ಅದೇ 'ಹಣ' ಪ್ರಮುಖ ಅಸ್ತ್ರ ಇಲ್ಲ್ಲಿ ಅಂತ ನನ್ನ ಭಾವನೆ. ಅಸ್ತ್ರವನ್ನು ಸರಿಯಾಗಿ ಬಳಸುವವರೂ ಇದ್ದಾರೆ ಬಳಸದೆ ಇರುವವರು ಇದ್ದಾರೆ.

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...