Sunday, November 30, 2014

ಚಿನಮಿರಿ ಮದುವೆಡಿಸೆಂಬರ್ 5 ರಂದು ಹಾವೇರಿಯಲ್ಲಿ ಬಿಡುಗಡೆಯಾಗುವ ಡಾ ಅನಸೂಯ ಕಾಂಬಳೆ ಅವರ ಹರಿದ ಪತ್ರ ಕಥಾ ಸಂಕಲನದ ಒಂದು ಕಥೆ

ನವೆಂಬರ್ 30 ರವಿವಾರದ ವಾರ್ತಾಭಾರತಿ ಪತ್ರಿಕೆಯಲ್ಲಿಮುಖವಾಡದ ಮರೆಯಲ್ಲಿ..


ಬಾಲಕೃಷ್ಣ ನಾಯಕ

ವಾರ್ತಾಭಾರತಿ

ಪ್ರಧಾನಿ ಪತ್ನಿ ಯಶೋದಕ್ಕನಿಗೆ ಪ್ರಾಣಭಯವಂತೆ...


 
ಡಿ ಉಮಾಪತಿ


ಸೌಜನ್ಯ: ವಿಜಯ ಕರ್ನಾಟಕ
3011-2-2-BEN

ತಾಯಿಯ ನೆರಳು ಎಳೆನೆತ್ತಿಯಿಂದ ಸರಿದುಹೋದಾಗ ಆಕೆ ಎರಡು ವರ್ಷದ ಹಸುಳೆ. ಹತ್ತನೆಯ ತರಗತಿಯಲ್ಲಿದ್ದಾಗ ತಂದೆ ಕಾಲವಾದರು. ವಯಸ್ಸಿಗೆ ಬರುವ ಮುನ್ನವೇ ಮದುವೆ ನಿಶ್ಚಿತಾರ್ಥ. 1968ರಲ್ಲಿ ಒಂದು ದಿನ ಮದುವೆಯೂ ನಡೆದುಹೋಯಿತು. ಆಗ ಆಕೆಗೆ ಹದಿಮೂರು, ಆತನಿಗೆ ಹದಿನೇಳರ ಆಸುಪಾಸು. ಅಲ್ಲಿಯ ತನಕ ಓದಿದ್ದು ಏಳನೆಯ ಇಯತ್ತೆ. ವಡನಗರದಲ್ಲಿನ ಅತ್ತೆ-ಮಾವನ ಮನೆಗೆ ಹೋದಾಗ ಅವರು ಹೇಳಿದ್ದು, ''ನೀನಿನ್ನೂ ಚಿಕ್ಕ ಪ್ರಾಯದವಳು. ಓದಿನ ಮೇಲೆ ಗಮನಹರಿಸು,'' ಎಂದು. ಕೆಲವೇ ದಿನಗಳಲ್ಲಿ ತಂದೆ ಚಿಮಣ್ ಲಾಲ್ ಮನೆಗೆ ಮರಳಿದ್ದಳು, ಓದು ಮುಂದುವರಿಸಲೆಂದು ಹಾಗೂ ಪತಿಯ ಮೆಚ್ಚುಗೆ ಗಳಿಸಲೆಂದು.

ಎಸ್.ಎಸ್.ಸಿ ಓದಿದಳು ಬಾಲೆ. ಶಿಕ್ಷಕ ತರಬೇತಿ ಮುಗಿಸಿ ಪ್ರಾಥಮಿಕ ಶಾಲಾ ಶಿಕ್ಷಕಿಯೂ ಆದಳು. ಆಗಾಗ ಅಹಮದಾಬಾದಿಗೆ ಗಂಡನ ಮನೆಗೆ ಹೋಗುತ್ತಿದ್ದುದೂ ಉಂಟು. ಆದರೆ ಜೊತೆಗಿರು ಎಂದು ಆತ ಒಮ್ಮೆಯೂ ಹೇಳಲಿಲ್ಲವಂತೆ. ''ನಾನು ದೇಶ ಸುತ್ತಾಡ್ತೀನಿ. ಮನಸೇಚ್ಛೆ ತಿರುಗಾಡ್ತೀನಿ. ನನ್ನ ಹಿಂದೆ ಬಂದು ಏನು ಮಾಡ್ತೀಯಾ,'' ಎಂದು ಪ್ರಶ್ನಿಸಿದ್ದ. ಓದು ಮುಂದುವರಿಸಿದ ಆಕೆ, ಆತನನ್ನು ಕಾಣಲೆಂದೇ ಅತ್ತೆ-ಮಾವನ ಮನೆಗೆ ಹಲವು ಸಲ ಹೋಗಿದ್ದಳು. ಆದರೆ ಆತ ಒಮ್ಮೆಯೂ ಕಣ್ಣಿಗೆ ಬೀಳಲಿಲ್ಲ. ಕಡೆಗೆ ಹೋಗೋದು ನಿಲ್ಲಿಸಿದ್ದಳು.

ಆರೆಸ್ಸೆಸ್ ಪೂರ್ಣಾವಧಿ ಪ್ರಚಾರಕನಾದ ಆತ. ಕಡೆಗೆ ಗುಜರಾತಿನ ಮುಖ್ಯಮಂತ್ರಿ ಕೂಡ. ಆಗಲೂ ಹಳ್ಳಿಗಾಡಿನ ಶಾಲೆಯಲ್ಲಿ ಅಕ್ಷರ ಕಲಿಸುತ್ತಾ ಅಜ್ಞಾತವಾಗಿಯೇ ವರ್ಷಗಳ ಕಳೆದಳು ಆಕೆ. ಬನಸ್ಕಾಂತ ಜಿಲ್ಲೆಯ ರಾಜೋಸಾಣ ಎಂಬ ಆ ಕುಗ್ರಾಮಕ್ಕೆ ಮಾತ್ರ ಗೊತ್ತಿತ್ತು ಆಕೆ ಯಾರೆಂಬ ಗುಟ್ಟು. ಆಕೆಯ ಚಲನವಲನಗಳ ಮೇಲೆ ಅಜ್ಞಾತ ಕಣ್ಣುಗಳು ಸದಾ ನಿಗಾ ಮಡಗಿದ್ದವು. ಆಕೆಯ ಭೆಟ್ಟಿಗೆ ಹೊರಗಿನವರು ಯಾರಾದರೂ ಬಂದರೆ ಮತ್ಯಾರಿಗೋ ತಕ್ಷಣ ತಿಳಿಸುತ್ತಿದ್ದರು ಹೆಡ್ ಮಾಸ್ತರ್. ಶಾಲೆಗೆ ಧಾವಿಸುತ್ತಿದ್ದವು ಅಜ್ಞಾತರನ್ನು ಹೊತ್ತ ಎಸ್.ಯು.ವಿ.ಗಳು. ಕ್ಷಣಗಳ ಹಿಂದೆ ತನ್ನ ಗುರುತು ಪತ್ತೆ ಒಪ್ಪಿಕೊಂಡು ನವಿಲಿನಂತೆ ನಲಿಯುತ್ತಿದ್ದ ಆಕೆ, ಹಠಾತ್ತನೆ ಬೆದರಿ ತರಗೆಲೆಯಾಗುತ್ತಿದ್ದಳು. ಮಾತಾಡಲಾರೆನೆಂದು ಭೆಟ್ಟಿ ಆದವರಿಗೆ ಬೆನ್ನು ತಿರುಗಿಸಿ ಓಡಿಬಿಡುತ್ತಿದ್ದಳು.

ಆತ ಈಗ ದೇಶದ ಪ್ರಧಾನಮಂತ್ರಿ. ಛಪ್ಪನ್ ಇಂಚ್ ಕೀ ಛಾತೀವಾಲಾ (ಐವತ್ತಾರು ಅಂಗುಲದ ಹರವಾದ ಎದೆಯ ಪುರುಷ) ಎಂಬ ಬಿರುದಾಂಕಿತರು. ಅಂತಹ ವಿಶಾಲ ಎದೆಯಲ್ಲಿ ತುಸುವೇ ತಲೆ ಒರಗಿಸಲು ಈಕೆ ಕಾಯುತ್ತಿದ್ದಾಳೆ ಈಗಲೂ. ಒಂದು ದೂರವಾಣಿ ಕರೆ ಆತನಿಂದ ಬಂದರೆ ಸಾಕು ಎಂಬ ಈಕೆಯ ಹಂಬಲಕ್ಕೆ ನಲವತ್ತೈದು ವರ್ಷಗಳೇ ಉರುಳಿವೆ. ಹಿಂದೆ ರಜಪೂತ ಹೆಣ್ಣುಮಕ್ಕಳು ವರನ ಖಡ್ಗದೊಂದಿಗೆ ಮದುವೆ ಆಗುತ್ತಿದ್ದರಂತೆ. ಈಕೆಯೋ ನಾಲ್ಕು ದಶಕಗಳಿಂದ ಬಾಳುವೆ ನಡೆಸಿರುವುದು ಕೇವಲ ಪತಿಯ ಹೆಸರಿನೊಂದಿಗೆ. ದೇಶದ ಒಂದು ಜನವರ್ಗಕ್ಕೆ ಸಮೂಹಸನ್ನಿ ಹಿಡಿಸಿರುವ, ಅವರನ್ನು ಆರಾಧನೆಗೆ ಹಚ್ಚಿರುವ ಆ ಹೆಸರು ನರೇಂದ್ರ ದಾಮೋದರದಾಸ ಮೋದಿ.

ಜಶೋದಾ ಬೆನ್ ಎಂಬ ಅರವತ್ತೆರಡರ ಪ್ರಾಯದ ಆಕೆಗೆ ಪತಿಯೊಡನೆ ಬಾಳುವ ಆಸೆ ಇನ್ನೂ ಸತ್ತಿಲ್ಲ. ದೇವರು-ದಿಂಡರನ್ನು ಪೂಜಿಸಿ ಉಪವಾಸ, ವ್ರತಗಳನ್ನು ಮಾಡುವ ಜಶೋದಾ ಬೆನ್, ಜ್ಯೋತಿಷ್ಯವನ್ನು ನಂಬುತ್ತಾರೆ. ಒಂದಲ್ಲ ಒಂದು ದಿನ ಪತಿಯ ಕೂಡಿಕೊಳ್ಳುವೆ ಎಂಬ ಜ್ಯೋತಿಷಿಗಳ ಭರವಸೆಯೇ ಆಕೆಯ ಅಳಿದುಳಿದ ಬದುಕಿನ ಆಶಾಕಿರಣ.

ನಾಲ್ಕು ವರ್ಷಗಳ ಹಿಂದೆ ರಾಜೋಸಾಣದಲ್ಲಿ ಆಕೆಯನ್ನು ಕಂಡು ಮಾತಾಡಿಸಿ, ಇಂಗ್ಲಿಷ್ ನಿಯತಕಾಲಿಕಕ್ಕೆ ಬರೆದಿದ್ದವರು ಹೈಮಾ ದೇಶಪಾಂಡೆ. ಹೈಮಾ ಅಂದು ಆಕೆಯನ್ನು ಬಣ್ಣಿಸಿದ್ದು ಹೀಗೆ: ''ಪುಷ್ಟಿಯಿಲ್ಲದೆ ಸೊರಗಿದ ಸೊಣಕಲು ಮೈಕಟ್ಟು, ಸುಕ್ಕುಬಿದ್ದ ಮುಖ, ಅಡ್ಡಾದಿಡ್ಡಿ ಅಳತೆಯ ದೊಗಳೆ ಕುಪ್ಪಸ, ಅತಿ ಸಾಧಾರಣ ಸೀರೆ, ಒಡೆದ ಪಾದಗಳ ಹಿಮ್ಮಡಿಗಳ ಬಿರುಕಿನಲ್ಲಿ ವರ್ಷಗಳಿಂದ ಕುಳಿತ ಕೊಳೆ. ಪುಷ್ಕಳವಾಗಿ ಉಂಡು, ಆಸ್ಥೆಯಿಟ್ಟು ಉಡುವ ಗರಿಗರಿ ವಸ್ತ್ರಗಳನ್ನು ದಿನಕ್ಕೆ ಹಲವು ಸಲ ಬದಲಿಸುತ್ತಾ, ಕಂಗೊಳಿಸುವ ತನ್ನ ಒಂದು ಕಾಲದ ಪತಿರಾಯನ ಪಕ್ಕ ನಿಲ್ಲುವುದನ್ನು ಕಲ್ಪಿಸಿಕೊಳ್ಳುವುದೂ ಆಗದ ಬಡಪಾಯಿ. ಅಕ್ಕಿಯಲ್ಲಿ ಮಾಡಿದ ಅನ್ನ ತಿನ್ನುವುದನ್ನು, ಚಪ್ಪಲಿ ತೊಡುವುದನ್ನು ಪತಿಯ ಒಳಿತಿಗಾಗಿ ಎಂದೋ ಬಿಟ್ಟಿದ್ದ ಆಕೆ ಇದೀಗ ಪುನಃ ಚಪ್ಪಲಿಯನ್ನೇನೋ ಮೆಟ್ಟುತ್ತಿದ್ದಾರೆ, ಅನ್ನ ಇನ್ನೂ ತಿನ್ನುತ್ತಿಲ್ಲ.''

ಮೋದಿಯವರ ವೈವಾಹಿಕ ಸ್ಥಿತಿಗತಿ ಮೊನ್ನೆ ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ತನಕ ಕೇವಲ ಊಹಾಪೋಹದ ವಿಚಾರವಾಗಿ ಉಳಿದಿತ್ತು. ಅವರು ಈವರೆಗೆ ದಾಖಲೆಗಳಲ್ಲಿನ ವಿವಾಹಿತರೇ ಎಂಬ ಕಾಲಮ್ಮನ್ನು ಅವರು ತುಂಬದೆ ಖಾಲಿ ಬಿಡುತ್ತಿದ್ದರು. ಕಡೆಗೆ ಸುಪ್ರೀಂ ಕೋರ್ಟಿನ ತೀರ್ಪಿನ ಮೇರೆಗೆ ಚುನಾವಣಾ ನಾಮಪತ್ರದಲ್ಲಿ ಈ ಆವರಣವನ್ನು ಖಾಲಿ ಉಳಿಸುವಂತಿರಲಿಲ್ಲ. ವಿವಾಹಿತರೆಂದೂ, ಪತ್ನಿಯ ಹೆಸರು ಜಶೋದಾ ಬೆನ್ ಎಂದೂ ಬರೆಯಲೇಬೇಕಾಯಿತು. 'ಬೇಟೀ ಬಚಾವೊ, ಬೇಟೀ ಪಢಾವೋ' ಎನ್ನುವ ಮೋದಿ, ತಾವು ತ್ಯಜಿಸಿರುವ ತಮ್ಮ ಪತ್ನಿ ಕುರಿತು ಚಕಾರ ಎತ್ತಿಲ್ಲ.

''ಸೋನಿಯಾ ಗಾಂಧಿ ಅವರಿಗೆ ಅಡುಗೆ ಮನೇಲಿ ಕೆಲಸ ಮಾಡಿಯೇ ಗೊತ್ತಿಲ್ಲ...'' ಎಂದೂ, ಶಶಿ ತರೂರರ ಪತ್ನಿ ಸುನಂದಾ ಪುಷ್ಕರ್ ಬದುಕಿದ್ದಾಗ, ಆಕೆಯನ್ನು ಐವತ್ತು ಕೋಟಿ ರುಪಾಯಿಯ ಗರ್ಲ್‌ಫ್ರೆಂಡು ಎಂದೂ ಮೂದಲಿಸಿದ್ದ ಹಾಲಿ ಪ್ರಧಾನಿ, ಮನುಸ್ಮೃತಿಯನ್ನು ಅನುಮೋದಿಸುವ ಧಾಟಿಯಲ್ಲಿ ಮಾತಾಡಿದ್ದುಂಟು. ವಿವಾಹಿತ ಮಹಿಳೆಯೊಬ್ಬಳ ಚಲನವಲನಗಳ ಮೇಲೆ, ಅಂದಿನ ಗುಜರಾತಿನ ಗೃಹಮಂತ್ರಿ ಅಮಿತ್ ಷಾ, ಹಗಲಿರುಳು ನಿಗಾ ಇರಿಸಿದ್ದು ತಮ್ಮ ಸಾಹೇಬರಿಗಾಗಿ. ಆದರೆ ಆಕೆಯ ಸುರಕ್ಷತೆಗಾಗಿಯೇ ಈ ವ್ಯವಸ್ಥೆ ಮಾಡಿದ್ದು ಎಂಬ ಸಮರ್ಥನೆಯನ್ನು ಗುಜರಾತಿನ ಸರಕಾರ ತಮಟೆ ಹೊಡೆದು ಸಾರಿತು. ಹೆತ್ತ ತಾಯಿಯನ್ನು ಕೂಡ ಅರೆ ಗಳಿಗೆ ಮಾತಾಡಿಸಿ ಕೈಬಿಡಿಸಿಕೊಂಡು ಬರುವ ಪ್ರಧಾನಿಯವರನ್ನು ಅವರ ಅಭಿಮಾನಿಗಳು ರಾಜರ್ಷಿ ಎಂದು ಕರೆಯುತ್ತಾರೆ.

ಅಂದಹಾಗೆ ಮನು ಸಾಹೇಬರು ಅಪ್ಪಣೆ ಕೊಡಿಸಿರುವಂತೆ ಈ ಜಗದಲ್ಲಿ ಪುರುಷರನ್ನು ದುರ್ಮಾರ್ಗಕ್ಕೆ ಎಳೆಯುವುದು ಸ್ತ್ರೀ ಸ್ವಭಾವವಂತೆ. ವಿವೇಕಿಗಳು ಹೆಣ್ಣುಮಕ್ಕಳ ಸಂಗದಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕಂತೆ. ತಮ್ಮ ತಾಯಿ, ಸೋದರಿ ಇಲ್ಲವೇ ಪುತ್ರಿಯೊಂದಿಗೆ ಏಕಾಂತದಲ್ಲಿ ಕುಳಿತುಕೊಳ್ಳುವ ಸನ್ನಿವೇಶಗಳನ್ನು ತಡೆಯಬೇಕಂತೆ. ಇರಲಿ, ಜಶೋದಾ ಅವರ ಕತೆಗೆ ಮರಳುವುದೇ ಆದರೆ... ''ಸುಳ್ಯಾಕೆ ಹೇಳಲಿ? ನಮ್ಮಿಬ್ಬರ ನಡುವೆ ಒಮ್ಮೆಯೂ ಜಗಳ ಆಗಿದ್ದೇ ಇಲ್ಲ. ಬೇರೆಯಾಗುವ ಮುನ್ನಿನ ಮೂರು ವರ್ಷಗಳಲ್ಲಿ ಜೊತೆಗಿದ್ದದ್ದು ಮೂರೇ ತಿಂಗಳು. ಅವರ ಕುರಿತ ಸುದ್ದಿ ಓದೋದು. ಟೀವೀಲಿ ಅವರನ್ನು ನೋಡೋದು ನನಗೆ ಇಷ್ಟ. ಭೇಟಿ ಪ್ರಯತ್ನ ಮಾಡಿಲ್ಲ. ಅವರ ಬಗೆಗೆ ನನಗೇನೂ ಬೇಜಾರಿಲ್ಲ. ಅವರ ನಡವಳಿಕೆಯೆಲ್ಲ ವಿಧಿನಿರ್ದೇಶಿತ ಮತ್ತು ಕೆಟ್ಟ ಕಾಲದ ಫಲ. ಅಂತಹ ಪರಿಸ್ಥಿತಿಗಳಲ್ಲಿ ಅವರು ಅಂತಹುದನ್ನೆಲ್ಲ ಹೇಳಲೇಬೇಕು, ಸುಳ್ಳನ್ನೂ ಹೇಳಬೇಕಾದೀತು. ನನ್ನ ಪರಿಸ್ಥಿತಿ ಅಷ್ಟೇನೂ ಕೆಟ್ಟದ್ದೆಂದು ನನಗೆ ಅನಿಸಲ್ಲ. ಒಂದು ರೀತೀಲಿ ನನ್ನ ಅದೃಷ್ಟ ಸುಧಾರಿಸಿದೆ,'' ಎಂದು ಆರು ತಿಂಗಳ ಹಿಂದೆ ಅಂದಿದ್ದವರು ಜಶೋದಾ ಬೆನ್.

ಮೊನ್ನೆ ಹಠಾತ್ತನೆ ಮಾಹಿತಿ ಹಕ್ಕು ಕಾಯಿದೆಯ ಮೊರೆಹೋಗಿದ್ದಾರೆ. ''ಹಸೆಮಣೆ ಏರಿದ ಗಳಿಗೆಯಿಂದಲೂ ಪತಿಯ ಸಹವಾಸದಿಂದ ವಂಚಿತಳಾದ ಈ ಬದುಕಿನಲ್ಲಿ ತನಗೇನು ಸಿಕ್ಕಿದೆ ಇಲ್ಲಿಯವರೆಗೆ...,'' ಎಂದು ಗೊಣಗಿದ್ದಾರೆ. ಇಷ್ಟು ವರ್ಷ ಬಿಸಿಲುಗುದುರೆಯಾಗಿ ಕಾಡಿದ ಹಕ್ಕುಗಳ ಹಿಂದೆ ಬಿದ್ದಿದ್ದಾರೆ. ಪ್ರಧಾನಿ ಪತ್ನಿಯಾಗಿ ಶಿಷ್ಟಾಚಾರದ ಪ್ರಕಾರ ಯಾವ್ಯಾವ ಸೌಲಭ್ಯಗಳಿಗೆ ತಾನು ಅರ್ಹಳೆಂದು ತಿಳಿಸುವಂತೆ ಅರ್ಜಿ ಹಾಕಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪತಿ ಪ್ರಧಾನಿ ಆದ ನಂತರ ತಮ್ಮನ್ನು ನೆರಳಿನಂತೆ ಹಿಂಬಾಲಿಸತೊಡಗಿರುವ ಮೈಗಾವಲಿನವರನ್ನು ಅನುಮಾನಿಸಿದ್ದಾರೆ.ತಮ್ಮ ಮೈಗಾವಲಿಗೆಂದು ನೇಮಕ ಮಾಡಿರುವ ಕಮಾಂಡೋಗಳ ಬಳಿ ಅಂತಹ ಸರಕಾರಿ ಆದೇಶ ಯಾವುದೂ ಇಲ್ಲ, ಇಂದಿರಾ ಗಾಂಧಿ ಅವರನ್ನು ಅವರ ಬಾಡಿಗಾರ್ಡುಗಳೇ ಹತ್ಯೆ ಮಾಡಿದಂತೆ ತಮ್ಮನ್ನೂ ಕೊಂದಾರೆಂದು ಭಯಪಟ್ಟಿದ್ದಾರೆ.

ಉತ್ತರ ಗುಜರಾತಿನ ಬ್ರಾಹ್ಮಣವಾಡಾದ ಸಣ್ಣಾತಿಸಣ್ಣ ಸಾಧಾರಣ ಮನೆಯಲ್ಲಿ ಸೋದರನ ಕುಟುಂಬವೇ ಈಕೆಯ ಕುಟುಂಬ. ಹದಿನಾಲ್ಕೂವರೆ ಸಾವಿರ ರುಪಾಯಿಯ ಪಿಂಚಣಿ. ಸೋದರನ ಸ್ಕೂಟರಿನ ಪಿಲಿಯನ್ನಿನಲ್ಲಿ ಕುಳಿತೋ, ಬಸ್ಸಿನಲ್ಲೋ, ಆಟೊದಲ್ಲೋ ಅಥವಾ ನಡೆದೋ ಹೊರಹೋಗುವ ಜಶೋದಾ ಬೆನ್ ಅವರನ್ನು ಮೈಗಾವಲಿನವರು ಹಿಂಬಾಲಿಸುವುದು ಹವಾನಿಯಂತ್ರಿತ ಸರಕಾರಿ ವಾಹನದಲ್ಲಿ. ''ನಾನು ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತೇನೆ. ಆದರೆ ನನ್ನ ಬಾಡಿಗಾರ್ಡುಗಳು ಹವಾನಿಯಂತ್ರಿತ ಸರಕಾರಿ ವಾಹನಗಳಲ್ಲಿ ಸಂಚರಿಸುತ್ತಾರೆ,'' ಎಂಬುದು ಆಕೆಯ ಅಮಾಯಕ ಅಳಲು.

ಪ್ರಧಾನಿಗಿರುವ ವಿಶೇಷ ಹಕ್ಕು, ಸೌಲಭ್ಯಗಳ ಕುರಿತ ಕಾನೂನು-ಕಾಯಿದೆಗಳು, ಅವರ ಪತಿ ಅಥವಾ ಪತ್ನಿಯ ವಿಶೇಷಾಧಿಕಾರಗಳ ಕುರಿತು ಮೌನವಾಗಿವೆ. ಆದರೆ ಪತಿ ಅಥವಾ ಪತ್ನಿ ಸೇರಿದಂತೆ ಪ್ರಧಾನಿಯ ತಕ್ಷಣ ಕುಟುಂಬದ ಸದಸ್ಯರಿಗೆ ಅವರದೇ ಸಹಾಯಕರು ಮತ್ತು ವಾಹನದ ಅನುಕೂಲ ಹಾಗೂ ಭದ್ರತೆ ನೀಡಿರುವ ಪೂರ್ವನಿದರ್ಶನಗಳು ಹೇರಳ.

ಕೌಟುಂಬಿಕ ಮೋಹಪಾಶಗಳಿಂದ ಮುಕ್ತರಾಗಿರುವ ಪ್ರಧಾನ ಸಮಾಜ ಸೇವಕರು ಅವರು ಎಂದು ಮೋದಿಯವರ ಅಭಿಮಾನಿ ಬಳಗ ಅವರನ್ನು ಬಣ್ಣಿಸಬಹುದು. ಮರ್ಯಾದಾ ಪುರುಷ ಶ್ರೀರಾಮನಿಗೇ ಹೋಲಿಸಬಹುದು. ಆದರೆ ಪತ್ನಿಯಾಗಿ ಪುನಃ ಸ್ವೀಕರಿಸದೆ ಹೋದರೂ, ಬದುಕಿಡೀ ಪತಿಯ ಹೆಸರಿನ ಜೊತೆಗೆ ಬಾಳುವೆ ನಡೆಸಿ ನೊಂದಿರುವ ಆಕೆಗೆ ಘನತೆಯ ಬದುಕನ್ನು ನೀಡುವುದು ಪ್ರಧಾನಿಯವರ ಕರ್ತವ್ಯ.

ನಾಮಪತ್ರದಲ್ಲಿ ನರೇಂದ್ರ ಮೋದಿಯವರು ಪತ್ನಿಯಾಗಿ ತಮ್ಮ ಹೆಸರು ನಮೂದಿಸಿದ ದಿನ ಆಕೆ ಉಬ್ಬಿಹೋಗಿದ್ದರಂತೆ. ಆನಂದಬಾಷ್ಪ ಸುರಿಸಿದ್ದರಂತೆ. ''ನನಗೆ ಗೊತ್ತು, ಅವರಿಗೆ ನನ್ನ ಮೇಲೆ ಇಷ್ಟವಿದೆ. ತೆಮ್ನಾ ಮನ್ಮಾ ಮಾತೇ ಎಕ್ ಸೋ ಎಕ್ ಲಗ್ನಿ ಛೇ,'' (ಅವರ ಹೃದಯದಲ್ಲಿ ನನಗಾಗಿ ಖಂಡಿತ ಮಧುರ ಭಾವನೆಗಳಿವೆ) ಎನ್ನುತ್ತಾರೆ ಜಶೋದಾ ಬೆನ್.

ಸ್ವಾಮಿಗಳು ಬಯಸದ ಸಮಾನ ಸಂಹಿತೆ
ಸನತಕುಮಾರ ಬೆಳಗಲಿ


ಸ್ವಾಮಿಗಳು ಬಯಸದ ಸಮಾನ ಸಂಹಿತೆ


ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಆರೋಪ ಸಾಬೀತಾಗುವವರೆಗೆ ಬಂಧಿಸಬಾರದೆಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಒತ್ತಾಯಿಸಿದ್ದನ್ನು ಓದಿ, ಕೇಳಿ ಅಚ್ಚರಿಯಾಯಿತು. ಸಮಾನ ನಾಗರಿಕ ಸಂಹಿತೆಗಾಗಿ ನಿರಂತರವಾಗಿ ಆಗ್ರಹಿಸುತ್ತ ಬಂದ ಪೇಜಾವರರು ಒಮ್ಮಿಂದೊಮ್ಮೆಲೆ ತಮ್ಮ ನಿಲುವನ್ನು ಬದಲಿಸಿದ್ದು ಅನುಕೂಲ ಸಿಂಧು ಧೋರಣೆಯಲ್ಲವೇ ಎಂದು ಒಂದು ಕ್ಷಣ ಅನ್ನಿಸಿತು.

‘‘ಈ ದೇಶದಲ್ಲಿ ಅಲ್ಪಸಂಖ್ಯಾತರನ್ನು ಸರಕಾರ ತುಷ್ಟೀಕರಣ ಮಾಡುತ್ತಿದೆ. ಅವರಿಗೆ ಪ್ರತ್ಯೇಕ ಕಾನೂನು ಇದೆ’’ ಎಂದೆಲ್ಲ ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ವಿಚಾರಗಳನ್ನೇ ಪುನರುಚ್ಚರಿಸುತ್ತ ಬಂದ ಪೇಜಾವರ ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕ ಮಂಡಲದ ಮುಖ್ಯಸ್ಥರು. ಇಂಥವರು ಒಮ್ಮಿಂದೊಮ್ಮೆಲೇ ತಮ್ಮ ನಿಲುವನ್ನು ಬದಲಿಸಿ ‘‘ಪೀಠಾಧಿಪತಿಯೊಬ್ಬರನ್ನು ಕೇವಲ ಸಂದೇಹದ ಕಾರಣಕ್ಕೆ ಬಂಧಿಸುವುದು ಸರಿಯಲ್ಲ’’ ಎಂದಿರುವುದು ಸಹಜವಾಗಿ ಅವರ ಪ್ರಾಮಾಣಿಕತೆ ಬಗ್ಗೆ ಸಂದೇಹ ಮೂಡುವಂತೆ ಮಾಡಿತು. ಈ ದೇಶದ ಕಾನೂನು ಜಾತಿ, ಧರ್ಮ, ಸ್ಥಾನಮಾನದ ಆಧಾರದಲ್ಲಿ ಯಾರನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಯಾವುದೇ ಆರೋಪಕ್ಕೊಳಗಾದ ವ್ಯಕ್ತಿ ಬಟ್ಟೆ ಹೊಲಿಯುವ ದರ್ಜಿಯಾಗಿರಲಿ, ರಾಜ್ಯವನ್ನಾಳುವ ಮುಖ್ಯಮಂತ್ರಿ ಯಾಗಿರಲಿ ಎಲ್ಲರೂ ಕಾನೂನಿನ ಎದುರು ಸಮಾನರು. ಭಾರತೀಯ ಅಪರಾಧ ಸಂಹಿತೆಯಲ್ಲಿ ಪೀಠಾಧಿಪತಿಗಳಿಗೆಂದು ಪ್ರತ್ಯೇಕ ಕಾನೂನು ವಿಧಿಗಳಿಲ್ಲ. ಅತ್ಯಾಚಾರದಂಥ ಆರೋಪ ಯಾರ ಮೇಲೆಯೇ ಬರಲಿ ಅವರು ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಬೇಕು. ಯಡಿಯೂರಪ್ಪ ಸರಕಾರದಲ್ಲಿ ಮಂತ್ರಿಯಾಗಿದ್ದ ಹಾಲಪ್ಪ ಕೂಡ ಬಂಧನಕ್ಕೊಳಗಾಗಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಯಡಿಯೂರಪ್ಪ ಕೂಡ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದರು. 

ಇದೇ ಕಾನೂನು ಪೀಠಾಧಿಪತಿಗಳಿಗೂ ಅನ್ವಯಿಸುತ್ತದೆ. ಇದಕ್ಕೆ ವಿನಾಯಿತಿ ನೀಡಬೇಕೆಂದರೆ ಭಾರತೀಯ ಅಪರಾಧ ಸಂಹಿತೆಗೆ ತಿದ್ದುಪಡಿ ತರಬೇಕು. ಪ್ರಜಾಪ್ರಭುತ್ವದಲ್ಲಿ ಅಂಥ ತಿದ್ದುಪಡಿಗೆ ಅವಕಾಶವಿಲ್ಲ. ಆದರೆ ಪ್ರಜಾಪ್ರಭುತ್ವಕ್ಕಿಂತ ಮಠಪ್ರಭುತ್ವ ಶ್ರೇಷ್ಠ. ಸಂವಿಧಾನಕ್ಕಿಂತ ಸನಾತನ ಧರ್ಮವೇ ಪರಮೋಚ್ಚ ಎಂದು ನೇರವಾಗಿ ಹೇಳದಿದ್ದರೂ ಅಂತರಂಗದಲ್ಲಿ ಅದೇ ಭ್ರಮೆಯಲ್ಲಿರುವ ಪೇಜಾವರ ಸ್ವಾಮಿಗಳು ಹೇಳಿದಂತೆ ‘ಆರೋಪ ಸಾಬೀತಾ ಗುವವರೆಗೆ ರಾಘವೇಶ್ವರ ಭಾರತಿಯರನ್ನು ಬಂಧಿಸಬಾರದು’ ಎಂದು ಹೇಳಿದ್ದಾರೆ. ಆದರೆ ಇದರಿಂದ ಉದ್ಭವವಾಗುವ ಇತರ ಪ್ರಶ್ನೆಗಳಿಗೂ ಅವರು ಉತ್ತರಿಸಬೇಕಾಗುತ್ತದೆ. ಈ ದೇಶದಲ್ಲಿ ಯಾವುದೇ ವ್ಯಕ್ತಿಯ ಮೇಲೆ ದೂರು ಬಂದು ಎಫ್‌ಐಆರ್ ಸಿದ್ಧವಾದ ನಂತರ ಬಂಧನ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಬಂಧಿಸಿ ಜೈಲಿಗೆ ಕಳಿಸುವುದು ಒತ್ತಟ್ಟಿಗಿರಲಿ, ನಕ್ಸಲಿಯರೆಂದು ಯಾರ್ಯಾರನ್ನೊ ಗುಂಡಿಕ್ಕಿ ಕೊಲ್ಲುತ್ತಾರಲ್ಲ ಅಂಥ ಬಡಪಾಯಿಗಳ ಮೇಲಿನ ಆರೋಪ ಸಾಬೀತಾಗಿರುತ್ತದೆಯೆ? ಅಕಸ್ಮಾತ್ ಅವರು ನಿರಪರಾಧಿಯಾಗಿದ್ದರೆ ಹಾರಿಹೋದ ಪ್ರಾಣವನ್ನು ಯಾರು ತಂದು ಕೊಡುತ್ತಾರೆ? ನಕ್ಸಲರೆಂದು ಬಂಧಿಸಲ್ಪಟ್ಟಿರುವ ಅನೇಕರು ನಿರ್ದೋಷಿಗಳಾಗಿ ಬಿಡುಗಡೆಯಾಗಿ ಬಂದಿಲ್ಲವೇ? ಹಾಗಿದ್ದರೆ ಕೊಲ್ಲಲ್ಪಟ್ಟವರು ನಿರಪರಾಧಿಗಳೆಂದು ವಾದಿಸಿದರೆ ತಪ್ಪೇನು?
ನಕ್ಸಲರು ಒತ್ತಟ್ಟಿಗಿರಲಿ, ಭಯೋತ್ಪಾದಕ ರೆಂದು ಸಾವಿರಾರು ಯುವಕರನ್ನು ಈ ದೇಶದ ಕಾರಾಗೃಹಕ್ಕೆ ತಳ್ಳಲಾಗಿಲ್ಲವೆ? ಅಲ್ಪಸಂಖ್ಯಾತ ಸಮುದಾಯದ ಈ ತರುಣರ ಮೇಲಿನ ಆರೋಪ ಸಾಬೀತಾಗಿದೆಯೆ? ವಿಚಾರಣೆ ಇಲ್ಲದೆ ಈ ಸಾವಿರಾರು ಯುವಕರನ್ನು ಕತ್ತಲು ಕೋಣೆಗೆ ತಳ್ಳಿದ್ದೇಕೆ? ‘‘ಆರೋಪ ಸಾಬೀತಾಗುವವರೆಗೆ ಅವರನ್ನೇಕೆ ಬಂಧಿಸಿದ್ದೀರಿ?’’ ಎಂದು ಪೇಜಾವರರು ಯಾಕೆ ಕೇಳುವುದಿಲ್ಲ?

‘ಕೇವಲ ಸಂದೇಹದ ಕಾರಣಕ್ಕೆ ಪೀಠಾಧಿಪತಿಯೊಬ್ಬನನ್ನು ಬಂಧಿಸುವುದು ಸರಿಯಲ್ಲ’ ಎಂಬ ಪೇಜಾವರ ಅವರ ವಾದವನ್ನು ಉಳಿದವರಿಗೂ ಏಕೆ ಅನ್ವಯಿಸಬಾರದು? ಜೈಲಿನಲ್ಲಿ ಕೊಳೆ ಹಾಕಿದ ಅಲ್ಪಸಂಖ್ಯಾತ ಯುವಕರನ್ನು ಕೇವಲ ಸಂದೇಹದ ಮೇಲೆ ಬಂಧಿಸಿಲ್ಲವೇ? ಹೀಗೆ ಬಂಧಿಸಲ್ಪಟ್ಟು ಚಿತ್ರಹಿಂಸೆ ಅನುಭವಿಸಿದ ಗಿಲಾನಿ ನಿರ್ದೋಷಿಯಾಗಿ ಬಿಡುಗಡೆಯಾಗಿ ಬರಲಿಲ್ಲವೇ? ಹಾಗಿದ್ದರೆ ‘ಸರ್ವೆಜನಃ ಸುಖಿನೊಭವಂತು’ ಎನ್ನುವ ಪೇಜಾವರರು ಸಂದೇಹಕ್ಕೊಳಗಾದ ಎಲ್ಲರ ಪರವಾಗಿ ಮಾತಾಡುವರೇ?

ಆದರೆ ತಾರತಮ್ಯ ಸಿದ್ಧಾಂತದಲ್ಲಿ ನಂಬಿಕೆ ಇರುವ ಪೇಜಾವರ ಅವರಿಗೆ ಸಮಾನತೆಯಲ್ಲಿ ವಿಶ್ವಾಸವಿಲ್ಲ. ಅತ್ಯಾಚಾರ ಆರೋಪಕ್ಕೊಳಗಾದ ರಾಘವೇಶ್ವರ ಭಾರತಿ ಪರವಾಗಿ ವಕಾಲತ್ತು ವಹಿಸುವ ಪೇಜಾವರರು ನಿಡುಮಾಮಿಡಿ ಸ್ವಾಮಿಗಳೊಂದಿಗೆ ಮಡೆಸ್ನಾನದ ವಿರುದ್ಧ ಧರಣಿ ಕುಳಿತ ಶೂದ್ರ ಸಮುದಾಯದ ಸ್ವಾಮಿಗಳನ್ನು ಡೊಂಗಿಗಳೆಂದು ಕಾವಿ ವೇಷಧಾರಿಗಳೆಂದು ಹಿಯಾಳಿಸುತ್ತಾರೆ. ಇದಕ್ಕೆ ಪ್ರತಿರೋಧ ಬಂದ ತಕ್ಷಣ ತಾನು ಹಾಗೆ ಹೇಳಿಲ್ಲ ಎಂದು ಜಾರಿಕೊಳ್ಳುತ್ತಾರೆ.

 ಅತ್ಯಾಚಾರ, ವ್ಯಭಿಚಾರದಂಥ ಆರೋಪ ಗಳಿಗೆ ರಾಘವೇಶ್ವರ ಸ್ವಾಮಿಯೊಬ್ಬರೇ ಗುರಿಯಾಗಿಲ್ಲ. ನಾಡಿನ ಕೆಲ ಮಠಾಧೀಶರು ಇಂಥ ಆರೋಪ ಕ್ಕೊಳಗಾಗಿ ಜೈಲಿಗೆ ಹೋಗಿದ್ದಾರೆ. ಈ ಸ್ವಾಮಿಗಳು ಸಾಂಸಾರಿಕರಿಗಿಂತ ರಸಿಕ ಜೀವನ ನಡೆಸುತ್ತಾರೆಂದು ಇಂಥವರನ್ನು ಹತ್ತಿರದಿಂದ ನೋಡಿದ ಭಕ್ತರೊಬ್ಬರು ಇತ್ತೀಚೆಗೆ ನನಗೆ ಹೇಳಿದರು. ಈ ಸ್ವಾಮಿಗಳು ಬೆಡ್‌ರೂಮ್‌ನಲ್ಲಿ ಬ್ಲೂಫಿಲಂ ನೋಡುತ್ತಾರೆಂದು ಕಣ್ಣಾರೆ ಕಂಡ ಸತ್ಯ ಹೇಳಿದರು. ಸನ್ಯಾಸಿಗಳಿಗೆ ನಿಸರ್ಗ ಸಹಜ ವಾಂಛೆ, ಮೋಹ, ವ್ಯಸನಗಳು ಇರಬಾರದೆಂದಿಲ್ಲ. ಆದರೆ, ಸಕಲೇಂದ್ರಿಗಳಯನ್ನು ಗೆದ್ದವರು ವಿರಾಗಿಗಳು ತಾವೆಂದು ಪೋಸ್ ಕೊಡುವವರನ್ನು ಅವರು ನಿಲ್ಲಿಸಬೇಕು. ಅತ್ಯಾಚಾರದಂಥ ಆರೋಪಕ್ಕೆ ಗುರಿಯಾಗುವ ಬದಲು ಮದುವೆಯಾಗಿ ಎಲ್ಲರಂತೆ ಸಹಜವಾಗಿ ಜೀವಿಸಬೇಕು. ಗುರುತರ ಆರೋಪಗಳು ಬಂದಾಗ ಕಾನೂನಿನಿಂದ ವಿನಾಯಿತಿ ಪಡೆಯುವ ಯತ್ನಕ್ಕೆ ಕೈ ಹಾಕಬಾರದು. ಇವರು ಪರಿಶುದ್ಧರಾಗಿದ್ದರೆ ಯಾವುದಕ್ಕೂ ಹೆದರದೇ ವಿಚಾರ ಎದುರಿಸಲಿ. ರಾಮಕಥಾ ಕಾರ್ಯಕ್ರಮ ನಡೆಸುವ ರಾಘವೇಶ್ವರರು ನಿಜವಾದ ರಾಮ ಭಕ್ತರಾಗಿದ್ದರೆ, ಯಾವ ತನಿಖೆಗೂ ಹೆದರಬಾರದು. ಪಾತಿವ್ರತ್ಯದ ಸಾಬೀತಿಗಾಗಿ ಸೀತೆಯನ್ನು ಅಗ್ನಿಪರೀಕ್ಷೆಗೆ ತಳ್ಳಿದ ದೇಶ ನಮ್ಮದು. ಸೀತೆಗೆ ಅನ್ವಯವಾಗುವುದು ಸ್ವಾಮಿಗಳಿಗೂ ಅನ್ವಯವಾಗಲಿ ಎಂದು ಪೇಜಾವರರು ಹೇಳಿದ್ದರೆ ಅವರ ಬಗ್ಗೆ ಗೌರವ ಉಂಟಾಗುತ್ತಿತ್ತು. ಆದರೆ ಪೇಜಾವರರು ಉಳಿದ ಸ್ವಾಮಿಗಳಂಥಲ್ಲ. ಅವರಿಗೆ ಅಧ್ಯಾತ್ಮಕ್ಕಿಂತ ಸಂಘ ಪರಿವಾರದ ರಾಜಕೀಯದಲ್ಲಿ ವಿಶೇಷ ಆಸಕ್ತಿ. ರಾಜಕೀಯ ಉದ್ದೇಶ ಇರುವವರಿಗೆ ಅವರದೇ ಆದ ಅಜೆಂಡಾಗಳಿರುತ್ತವೆ. ಹೀಗೆ ರಾಜಕೀಯ ಅಜೆಂಡಾಗಳನ್ನು ರಹಸ್ಯವಾಗಿ ಇಟ್ಟುಕೊಂಡಿರುವ ಮಠಾಧೀಶ ರಿಂದಾಗಿ ಭಾರತದ ಪ್ರಜಾಪ್ರಭುತ್ವ ಪ್ರಾಣ ಸಂಕಟದ ಅನುಭವಿಸುತ್ತಿದೆ. ಈ ಜನತಂತ್ರವನ್ನು ಕಾಪಾಡಲು ಜನರೇ ಪ್ರಜ್ಞಾವಂತರಾಗಿ ಮುಂದೆ ಬರಬೇಕಾಗಿದೆ. ಹಾಗೆ ಬಂದೆ ಬರುತ್ತಾರೆ.

Friday, November 28, 2014

ಶಿಕ್ಷಣ ಮಾಧ್ಯಮ ಕನ್ನಡ ಆಗುವವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಾರೆ- ದೇವನೂರ ಮಹಾದೇವಸೌಜನ್ಯ : ವಿಜಯ ಕರ್ನಾಟಕ


ಮೈಸೂರು: ಶ್ರವಣ ಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವಂತೆ ಹಾಸನ ಜಿಲ್ಲಾ ಕಸಾಪ ನಿಯೋಗ ಮುಂದಿಟ್ಟ ಆಹ್ವಾನವನ್ನು ಸಾಹಿತಿ ದೇವನೂರ ಮಹಾದೇವ ನಯವಾಗಿ ತಿರಸ್ಕರಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ವಿಶೇಷ ಸಂದರ್ಭದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ದೇವನೂರು ಅವರೇ ಅಧ್ಯಕ್ಷರಾಗುವಂತೆ ಕೋರಲೆಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ನೇತೃತ್ವದ ನಿಯೋಗ, ಶುಕ್ರವಾರ ಮಹಾದೇವ ಅವರನ್ನು ಕುವೆಂಪುನಗರದ ನಿವಾಸದಲ್ಲಿ ಭೇಟಿಯಾಯಿತು. ಹಲವು ರೀತಿಯಲ್ಲಿ ಅವರನ್ನು ಒಪ್ಪಿಸುವ ಜಾಣ್ಮೆಯನ್ನು ನಿಯೋಗದ ಸದಸ್ಯರು ತೋರಿದರಾದರೂ, ಪ್ರಯೋಜನವಾಗಲಿಲ್ಲ. ಅರ್ಧ ಗಂಟೆಗಳ ಕಾಲ, ಕನ್ನಡ ಭಾಷೆಯ ಕುರಿತ ತಮ್ಮ ನಿಲುವು, ಒಲವುಗಳನ್ನು ತಿಳಿಸಿದ ಮಹಾದೇವ ''ಹತ್ತನೇ ತರಗತಿವರೆಗೆ ಮಾತೃಭಾಷೆ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗುವವರೆಗೆ ಸಮ್ಮೇಳನದ ಅಧ್ಯಕ್ಷತೆ ವಹಿಸುವುದಿರಲಿ, ಭಾಗವಹಿಸುವುದೇ ಇಲ್ಲ ಎಂಬ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಬದಲಿಗೆ, ಇದೇ ಕಾರಣ ಮುಂದಿಟ್ಟು ಸಮ್ಮೇಳನವನ್ನೇ ಮಾಡುವುದಿಲ್ಲ ಎಂಬ ನಿರ್ಧಾರವನ್ನು ಕಸಾಪ ಕೈಗೊಳ್ಳಲಿ. ನಂತರ ಸರಕಾರದ ವಿರುದ್ಧದ ಹೋರಾಟಕ್ಕೆ ನಾನೇ ನೇತೃತ್ವ ವಹಿಸುತ್ತೇನೆ,'' ಎಂದು ಸ್ಪಷ್ಟಪಡಿಸಿದರು.

ಹಾಸನ ಜಿಲ್ಲಾ ಕಸಾಪದ ಡಾ.ತಿಮ್ಮಯ್ಯ, ಡಾ.ವಿಜೇಂದ್ರ, ಡಾ.ವಿಜಯ್, ಅರಕಲಗೂಡು ಜಯಕುಮಾರ್ ಹಾಜರಿದ್ದರು.

ನಿರಾಕರಣೆಗೆ ಸಮರ್ಥನೆಗಳೇನು?

1. ರಾಜ್ಯದಲ್ಲಿ 10ನೇ ತರಗತಿವರೆಗೂ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗುವವರೆಗೂ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನಿಲುವು ತೆಗೆದುಕೊಂಡಿದ್ದೇನೆ. 1980ರಲ್ಲಿಯೇ ಸಮ್ಮೇಳನ ಅಧ್ಯಕ್ಷನಾಗಬೇಕು ಎನ್ನುವ ಕೋರಿಕೆ ಬಂದಿತ್ತು, ನಿರಾಕರಿಸಿದ್ದೆ. ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನೂ ಸ್ವೀಕರಿಸಲಿಲ್ಲ. ನೃಪತುಂಗ ಪ್ರಶಸ್ತಿಯನ್ನೂ ಪಡೆದಿಲ್ಲ. ಕನ್ನಡ ಮಾಧ್ಯಮ ಜಾರಿಗೆ ಆಗ್ರಹಿಸುವ ನಿಟ್ಟಿನಲ್ಲಿ ನಾನು ತೆಗೆದುಕೊಂಡಿರುವ ಕಠಿಣ ನಿಲುವು ಇದು; ನನ್ನದೊಂದು ದನಿ ಇರಲಿ. ತುಮಕೂರಿನಲ್ಲಿ ನಡೆದ ಸಮ್ಮೇಳದಲ್ಲೂ ಅಧ್ಯಕ್ಷನಾಗು ಎಂದರು. ಆಗಲೂ ಇದನ್ನೇ ಹೇಳಿದ್ದೆ.

2. ಮಾತೃಭಾಷಾ ಮಾಧ್ಯಮ ಜಾರಿಯಾಗುವವರೆಗೂ ಕನ್ನಡ ಭಾಷೆ ಕೋಮಾ ಸ್ಥಿತಿಯಲ್ಲಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸಮ್ಮೇಳನ ಎನ್ನುವ ಮೈದಾನಕ್ಕೆ ನಾನು ಬಂದರೆ, ನನ್ನ ನಿಲುವು ಅರ್ಧ ಸತ್ತಂತಾಗಿ ಬಿಡುತ್ತದೆ. ನಾನು ಭಾಗವಹಿಸಿದರೆ ಮೇಲಕ್ಕೆ ಉಗಿದು ಮುಖದ ಮೇಲೆ ಬೀಳಿಸಿಕೊಂಡಂತಾಗುತ್ತದೆ. ಅರ್ಧ ಜೀವ ಹೊರಟು ಹೋಗುತ್ತದೆ. ನಾನು ಆ ದೃಷ್ಟಿಯಿಂದ ನೋಡುತ್ತಿದ್ದೇನೆ. ಒತ್ತಡ ಹಾಕಬೇಡಿ; ಮುಜುಗರ ಮಾಡಬೇಡಿ.

3. ಸರಕಾರದ ಹಿತಾಸಕ್ತಿ ಖಾಸಗಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಪರವಿದೆ. ಎಲ್ಲರೂ ಹೇಳ್ತಿದ್ದಾರೆ ಅಷ್ಟೆ. ಕನ್ನಡದ ವಿಷಯದಲ್ಲಿ ಯಾರೂ ಏನೂ ಮಾಡುತ್ತಿಲ್ಲ.

4. ಇನ್ನು ಮುಂದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲ ಎಂದು ಘೋಷಿಸಿದರೆ ಖಂಡಿತವಾಗಿಯೂ ಸರಕಾರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ದೊಡ್ಡ ಆಘಾತವೇ ಆಗುತ್ತದೆ. ಆಗ ಒಂದು ಆಂದೋಲನವೇ ಸೃಷ್ಟಿಯಾಗುತ್ತದೆ. ಅಸಾಧಾರಣ ಕ್ರಮವಾಗುತ್ತದೆ. ಇಲ್ಲವಾದಲ್ಲಿ ಪ್ರತಿ ವರ್ಷ ಇನ್ನೂ ಹೆಚ್ಚಿನ ಅನುದಾನ ದೊರೆಯುತ್ತದೆ; ಜೋರಾಗಿ ಸಮ್ಮೇಳನ ನಡೆಯುತ್ತಾ ಹೋಗುತ್ತಿರುತ್ತದೆ ಅಷ್ಟೆ. ಒಂದು ಮನೆಯಲ್ಲಿ ಉಪವಾಸ ಮಾಡ್ತೀನಿ ಅಂತ ಕುಂತ್ಕೊಂಡ ಮೇಲೆ ಊಟ ಮಾಡೊಕ್ಕಾಗುತ್ತೇನ್ರೀ? ಮಾತೃಭಾಷೆ ಶಿಕ್ಷಣ ಕನಿಷ್ಠ 10ನೇ ತರಗತಿವರೆಗೆ ಇಲ್ಲದಿದ್ದರೆ ಕನ್ನಡ ಎಂದು ಹೇಗೆ ಹೇಳುತ್ತೀರಿ? ನನಗೆ ಅರ್ಥವೇ ಆಗುತ್ತಿಲ್ಲ.

5. ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡರೆ ನಂತರದ ನೇತೃತ್ವ ನಾನೇ ತಗೋತೀನಿ. ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವುದನ್ನು ಮಾಡದಿದ್ದರೆ ಸರಕಾರ ಉರುಳಿ ಹೋಗುತ್ತದೆ ಎನ್ನುವ ವಾತಾವರಣ ಇದ್ದಿದ್ದರೆ ಇಲ್ಲಿವರೆಗಾಗಲೇ ಸರಕಾರವೇ ಮಾಡುತ್ತಿತ್ತು. ಆ ಸ್ಥಿತಿ ಇಲ್ಲವಲ್ಲಾ? ರಾಜ್ಯ ಭಾಷೆಯನ್ನು ಕತ್ತು ಹಿಸುಕಿ ಸಾಯಿಸಲಾಗುತ್ತಿದೆ. ಯಾವುದೇ ಸ್ವತಂತ್ರ ದೇಶವಿರಲಿ ಅಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕು. ಎಲ್ಲಿ ಗುಲಾಮಗಿರಿಗೆ ಒಳಪಟ್ಟಿದ್ದೆವೋ ಅಂಥ ಕಡೆ ಆಗ ಆಡಳಿತ ಮಾಡಿದವರ ಭಾಷೆ ಮಾಧ್ಯಮವಾಗಿದೆ. ಮಾತೃಭಾಷೆಗೆ ಮಾನ್ಯತೆ ದೊರೆತರೆ ಮಾತ್ರ ನಾವು ಸ್ವತಂತ್ರರಾದಂತೆ. ಇದು ನಮ್ಮ ಮೂಲ ಅಳತೆಗೋಲಾಗಬೇಕು. ಅಲ್ಲಿವರೆಗೂ ಗುಲಾಮಗಿರಿಯಿಂದ ಕನ್ನಡಿಗರು, ರಾಜಕಾರಣಿಗಳು ಇನ್ನೂ ಇದರಿಂದ ಹೊರಗೆ ಬಂದಿಲ್ಲವೆಂದೇ ಅರ್ಥ.

6. ಕನ್ನಡ ಭಾಷಾ ಮಾಧ್ಯಮ ಜಾರಿ ಸಾಹಿತ್ಯ ಸಮ್ಮೇಳನ ಬಿಟ್ರೆ ಆಗುತ್ತೆ; ಇಟ್ಕೊಂಡ್ರೆ ಆಗುವುದಿಲ್ಲ. ಕುವೆಂಪು ಕಾಲದಿಂದಲೂ ನೋಡಿಕೊಂಡು ಬನ್ನಿ. ಹಾ.ಮಾ.ನಾಯಕರು ಒಂದು ಮಾತು ಹೇಳಿದ್ದರು- 'ಕನ್ನಡ ಮಾಧ್ಯಮ ಆಗಬೇಕು ಎಂದು ನಾನು ಚಿಕ್ಕ ಹುಡುಗನಾಗಿದ್ದಾಗ ಫ್ಲೇಕಾರ್ಡ್ ಹಿಡ್ಕೊಂಡು ಹೇಳ್ತಿದ್ದೆ. ಈಗ ವಯಸ್ಸಾಗಿದೆ, ಕೋಲಿಡ್ಕೊಂಡು ಅದನ್ನೇ ಹೇಳುತ್ತಿದ್ದೇನೆ' ಎಂದಿದ್ದರು. ಹೀಗೆ ಯಾವುದೇ ವ್ಯತ್ಯಾಸವೂ ಇರುವುದಿಲ್ಲ. ಸಮ್ಮೇಳನ ಬಿಟ್ಟರೆ ಆಂತರಿಕ ಶಕ್ತಿ ಬರುತ್ತದೆ. ಹೊಸ ರೂಪ ಬರುತ್ತದೆ. ಕನ್ನಡ ಮಾಧ್ಯಮ ಘೋಷಣೆಯಾದರೆ ಸರಕಾರದಿಂದ ಅನುದಾನ ತಗೊಂಡು ಪರ್ಯಾಯ ಸಮ್ಮೇಳನ ನಡೆಸೋಣ. ಆಗ ಸಾಹಿತ್ಯ ಪರಿಷತ್ತಿಗೆ ನಾನೂ ಬರುತ್ತೇನೆ. ಸಮ್ಮೇಳನ ನಡೆಸಿಕೊಂಡು ಹೋಗುತ್ತಾ, ಈ ಕೆಲಸ ಮಾಡುವುದಕ್ಕೆ ಆಗುವುದಿಲ್ಲ.

7. 'ಹತ್ತನೇ ತರಗತಿವರೆಗೆ ರಾಜ್ಯ ಭಾಷೆಯಲ್ಲಿ ಶಿಕ್ಷಣ ಇರಬೇಕು; ಅಲ್ಲಿವರೆಗೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲ' ಎನ್ನುವ ಒಂದೇ ನಿರ್ಣಯವನ್ನು ಈ ಸಮ್ಮೇಳನದಲ್ಲಾದರೂ ತೆಗೆದುಕೊಂಡು ಬನ್ನಿ, ನಂತರದ ಕಾರ್ಯಕ್ರಮಗಳಲ್ಲಿ ಎಷ್ಟೇ ಕಷ್ಟವಾದರೂ ಭಾಗವಹಿಸುತ್ತೇನೆ. ನಾಯಕನಾಗಬೇಕು ಎನ್ನುವ ಪರಿಕಲ್ಪನೆ ಬೇಡ. ಕನ್ನಡದ ಅಭಿಮಾನ ಎಲ್ಲರಲ್ಲಿಯೂ ಬರಬೇಕು.

8. ನೃಪತುಂಗ ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿ ನೌಕರರು ಕೊಟ್ಟಿದ್ರೆ ಪಡೆಯುತ್ತಿದ್ದೆ. ಪ್ರಶಸ್ತಿ ಹಣವನ್ನು ಪೂರ್ತಿ ತಗೊಂಡರೂ ಸರಿಯಲ್ಲ; ತೆಗೆದುಕೊಳ್ಳದಿದ್ದರೂ ಸರಿ ಇಲ್ಲ. ಅರ್ಧ ಭಾಗ ಅವರಿಗೇ ಕೊಡುತ್ತಿದ್ದೆ. ಕೆಎಸ್‌ಆರ್‌ಟಿಸಿ ನೌಕರರ ಬರೆಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಧಿಗೆ ಬಳಸಿಕೊಳ್ಳಿ ಎನ್ನುತ್ತಿದ್ದೆ. ಆದರೆ, ಕಸಾಪದವರೂ ಅಲ್ಲಿ ಸೇರಿರುವುದರಿಂದ ಆ ಪ್ರಶಸ್ತಿ ಸ್ವೀಕರಿಸಲಿಲ್ಲ.

9. ಸಾಹಿತ್ಯ ಪರಿಷತ್ತು ಇಂಥದೊಂದು ನಿಲುವನ್ನು ತೆಗೆದುಕೊಳ್ಳಬೇಕು. ಮುಜುಗರ ಮಾಡಬೇಡಿ. 31 ವರ್ಷ ಇದೇ ನಿಲುವು ಇಟ್ಟುಕೊಂಡು ಬರುತ್ತಿದ್ದೇನೆ. ಇನ್ನೊಂದು 10 ವರ್ಷ ಬದುಕಬಹುದಾ! ಅಲ್ಲಿವರೆಗೂ ನಿಲುವು ಬದಲಾಯಿಸುವುದಿಲ್ಲ.

10. ಪ್ರಸ್ತುತ ಕನ್ನಡ ಭಾಷೆಯ ಪರಿಸ್ಥಿತಿ ಬಹಳ ಕಷ್ಟದಲ್ಲಿದೆ. ಕನ್ನಡಕ್ಕೆ ಸಂಬಂಧಿಸಿ ಕಟುವಾದ ನಿಲುವು ತಗೊಂಡಿದ್ದೇನೆ. ಆ ಥರದ ಒಂದು ನಿಲುವು ಕನ್ನಡಕ್ಕೆ ಬೇಕು. ನನ್ನದೂ ಒಂದು ದನಿ ಎಂದುಕೊಳ್ಳಿ. ವ್ಯಕ್ತಿತ್ವ, ಘನತೆ ಸಿಗಬೇಕು ಎಂದರೆ, ಸಮ್ಮೇಳನ ನಡೆಸುವುದನ್ನು ನಿಲ್ಲಿಸಬೇಕು. ಕನ್ನಡಿಗರಿಗೇ ಕನ್ನಡ ಬೇಕಾಗಿಲ್ಲ. ಹಿತಾಸಕ್ತಿಗಳು ಬದಲಾಗಿವೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಿಟ್ಟವಾದ, ಘನತೆಯ, ಸ್ವಾಭಿಮಾನದ ನಿಲುವು ತಗೋಬೇಕು. ಎಷ್ಟು ಸಮ್ಮೇಳನ ಆಗಿದೆ. ನನ್ನ ಭಾಷಣವೂ ಒಂದಾಗಿ ಸೇರುತ್ತದೆ ಅಷ್ಟೆ. ಏನೂ ಆಗುವುದಿಲ್ಲ. ನಮಗೆ ಸಾಲ ಕೊಡ್ತಾರಲ್ಲಾ ಆ ಡಬ್ಲ್ಯುಟಿಒದವರು, ಅವರ ಒಕ್ಕಣೆಗೆ ಇಲ್ಲಿನವರು ಹೆಬ್ಬೆಟ್ಟು ಒತ್ತುತ್ತಾರೆ ಅಷ್ಟೆ. ಸಮ್ಮೇಳನ ಮಾಡುವುದನ್ನು ನಿಲ್ಲಿಸಿದ ನಂತರವೂ ಸರಕಾರ ಏನೂ ಕ್ರಮ ಕೈಗೊಳ್ಳದಿದ್ದರೂ ನಮ್ಮ (ಕನ್ನಡಿಗರ) ಮಾನ ಮರ್ಯಾದೆಯಾದರೂ ಉಳಿಯುತ್ತದೆ.

ನಾವು ಸಹ ಈ ನಿರ್ಧಾರದಲ್ಲಿ ಪಾಳುಗೊಳ್ಳೋಣ.....


11 ಡಿಸೆಂಬರ್ ಸಾಗರ : ಅಖಿಲೇಶ್ ಚಿಪ್ಪಳ್ಳಿ ಪುಸ್ತಕ ಬಿಡುಗಡೆ


ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿಶೂದ್ರ ಶ್ರೀನಿವಾಸ್‌

  ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿ

  ‘‘ಹೀಗೆ ಕನಸೊಂದು ಆಕಾರ ತಳೆಯಿತು. ಕೇವಲ ಸಣ್ಣ ಲಾಭಕ್ಕಾಗಿ ಸ್ಥಳೀಯ ಗೂಂಡಾಗಳ ಸಂಗಡ ಸೆಣಸದೆ ಹೊಸ ಸಾಮಾಜಿಕ ವ್ಯವಸ್ಥೆಯೊಂದನ್ನು ಸೃಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. 1982ರ ಫೆಬ್ರವರಿ 22ರಂದು ಆಗಲೇ ಅಸ್ತಿತ್ವದಲ್ಲಿದ್ದ ‘ನಿಷಾದ ಜಲ ಶ್ರಮಿಕ ಸಂಘ’ ಕೆಹೇಲ್ ಗಾಂವ್‌ನಲ್ಲಿ ಸಭೆಯೊಂದನ್ನು ಕರೆಯಿತು. ಈ ಸಭೆ ಜಲ್‌ಕರ್ ಜಮೀನ್ದಾರರ ವಿರುದ್ಧ ಚಳವಳಿಯನ್ನು ರೂಪಿಸಲು ತೀರ್ಮಾನಿಸಿತು. ಇದು ಗಂಗಾ ಮುಕ್ತಿ ಆಂದೋಲನದ ಆರಂಭ. ಅದೇ ವರ್ಷ ಎಪ್ರಿಲ್ 4ರಂದು ಸುತ್ತಲಿನ 19 ಗ್ರಾಮಗಳ 120 ಮಂದಿ ಕೆಹೇಲ್‌ಗಾಂವ್‌ನಲ್ಲಿ ಸಭೆ ಸೇರಿ ಅಹಿಂಸಾತ್ಮಕ ಮಾರ್ಗಗಳಿಂದ ಈ ಚಳವಳಿಯನ್ನು ನಡೆಸಲು ತೀರ್ಮಾನಿಸಿದರು. ಈ ವಿಷಯ ಹರಡುತ್ತಿದ್ದಂತೆಯೇ ಜಮೀನ್ದಾರರು ಮತ್ತು ಅವರ ಬಾಡಿಗೆಯ ಗೂಂಡಾಗಳು ಅಪಹಾಸ್ಯ ಮಾಡಿದರು. ಆದರೆ ಗಂಗಾ ಮುಕ್ತಿ ಆಂದೋಲನದ ಹೆಸರಿನಲ್ಲಿ ಇವರೆಲ್ಲ ಒಗ್ಗಟ್ಟಾದ ನಂತರ ಅವರು ಹಿಂದಿನಂತಿಲ್ಲ ಎಂಬುದು ಅರಿವಿಗೆ ಬಂದಿತ್ತು. ಅನಿಲ್ ಪ್ರಕಾಶ ಈ ಎಲ್ಲ ಕ್ರಿಯೆಗೆ ಚುರುಕಾದ ಪ್ರೇರಣೆಗಾಗಿ ಒಂದು ಬಲವತ್ತರವಾದ ನಿದರ್ಶನವನ್ನು ನೀಡಿದರು:
‘‘ವಾಲ್ಮೆಕಿ ಒಬ್ಬ ಅಪರಾಧಿ. ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡ ನಂತರ ಆತ ರಾಮಾಯಣ ರಚಿಸಿದ. ಆದ ಕಾರಣ ವಿನಾಶದ ಶಕ್ತಿಗಳನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳಬಹುದು ಮತ್ತು ಅದು ಶ್ರೇಷ್ಠ ಫಲ ನೀಡುತ್ತದೆ. ಈಗ ನಮ್ಮಲ್ಲಿ ಹಲವಾರು ವಾಲ್ಮೀಕಿಗಳು ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಸಲ್ಲುವ ಗೌರವ ನೀಡಬೇಕು ಮತ್ತು ಅವರನ್ನು ಸರಿದಾರಿಗೆ ಕೊಂಡೊಯ್ಯಬೇಕು.’’

1983 ಮಾರ್ಚ್ 23ರಂದು ಜಿ.ಎಂ.ಎ ವತಿಯಿಂದ ಕೆಹೇಲ್‌ಗಾಂವ್‌ನಿಂದ ಬಾಗಲ್ಪುರದವರೆಗೆ ದೋಣಿ ಜಾಥಾ ನಡೆಸಲಾಯಿತು. ‘‘ಜಲ್, ಬನ್ಸ್ ಔಜಾರ್ ಹಮಾರ, ಗಂಗಾ ಪರ್ ಅಧಿಕಾರ್ ಹಮಾರಾ’’ (ನೀರು, ಹುಟ್ಟು ಮತ್ತು ಮೀನುಗಾರಿಕೆಯ ಉಪಕರಣಗಳು ನಮ್ಮವು, ಗಂಗೆಯ ಮೇಲಿನ ಅಧಿಕಾರ ಕೂಡ ನಮ್ಮದು) ರಜನಿ ಭಕ್ಷಿ(ಬಾಪು ಕುಬಿಯಲ್ಲಿ)
         
       ಕಳೆದ ವಾರ ಕಾರವಾರಕ್ಕೆ ಸಮೀಪದ ಗೋವಾದ ‘ಕಾನ್‌ಕೂನ್’ ಸಮುದ್ರ ದಂಡೆಯಲ್ಲಿ ಮರಳಿನ ಸಮೃದ್ಧತೆಯ ಸ್ಪರ್ಶ ಸುಖವನ್ನು ನನ್ನ ಪಾದಗಳು ಅನುಭವಿಸುತ್ತಿದ್ದವು. ನನ್ನ ಜೊತೆಯಲ್ಲಿದ್ದ ಗ್ರಂಥಾಲಯದ ಅಧಿಕಾರಿಗಳೂ ಸಮುದ್ರದ ಅಲೆಗಳ ಜೊತೆಗೆ ತರಾವರಿ ವಿದೇಶಿಯರ ಪ್ರವಾಸದ ಸಂಭ್ರಮವನ್ನು ಕಂಡು ತಲ್ಲೀನರಾಗಿದ್ದರು. ಅದೇ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ ಮೂರ್ತಿ ಮರಕಿಣಿಯ ಉದ್ದನೆಯ ಮೇಸೇಜ್ ಮೊಬೈಲ್‌ಗೆ ಬಂದಿತ್ತು. ಅದನ್ನು ಓದುತ್ತಾ ಸೂರ್ಯ ಸಮುದ್ರದ ಆಳಕ್ಕೆ ಮುಳುಗುವ ರೀತಿಯಲ್ಲಿ; ಆ ವೈಭವದ ಮೂರ್ತಿ ಬೆಳಗಿನಿಂದ ಸಾಕಷ್ಟು ಬೆಳಕನ್ನು ಚೆಲ್ಲಿ ಆಯಾಸಗೊಂಡವನಂತೆ ವಿರಾಮಕ್ಕೆ ಹೊರಟಿದ್ದ. ಕತ್ತಲು ನಿಧಾನವಾಗಿ ಬೆಳಕಿನ ಜಾಗವನ್ನು ತುಂಬಲು ಆವರಿಸಿಕೊಳ್ಳುತ್ತಿತ್ತು. ಮರಕಿಣಿಯ ಮೇಸೇಜ್‌ನ್ನು ಓದುತ್ತಲೇ ಖುಷಿಪಟ್ಟೆ. ಕಳೆದ ಮುವತ್ತೈದು ವರ್ಷಗಳಿಂದ ಪರಿಚಯವಿರುವ ಪುಸ್ತಕ ಪ್ರೇಮಿ.ಸದಾ ತುಂಟತನದಿಂದ ನಗುತ್ತ ಮಾತಿನ ಮೊನಚನ್ನು ಉಳಿಸಿಕೊಂಡಿರುವಂಥವನು. ಅಡಿಕೆ, ತೆಂಗು ಮತ್ತು ಭತ್ತದ ಕೃಷಿಯಲ್ಲಿ ಅನನ್ಯತೆಯಿಂದ ತೊಡಗಿಸಿಕೊಂಡೇ ಉತ್ತಮ ಗ್ರಂಥಗಳನ್ನು ಹಾಗೂ ನಿಯತಕಾಲಿಕೆಗಳನ್ನು ಸಂಗ್ರಹಿಕೊಂಡಿರುವಂಥವನು. ಎಷ್ಟೋ ವರ್ಷಗಳಿಂದ ‘‘ಬಾರಯ್ಯ ಶೂದ್ರ ಒಂದೆ ರಡು ದಿವಸ ಈ ಬ್ರಾಹ್ಮಣನ ಮನೆಯಲ್ಲಿದ್ದು ಹೋಗು. ಅದೇನು ಆ ಬೆಂಗಳೂರು ಎಂಬ ನರಕದಲ್ಲಿ ಸಾಯ್ತೀಯ’’ ಎಂದು ಆಹ್ವಾನಿಸುತ್ತಲೇ ಇದ್ದಾನೆ. ಆದರೆ ಹೋಗಲು ಮನಸ್ಸಿದ್ದರೂ ನನ್ನ ನಾನಾ ರೀತಿಯ ‘420’ ಕೆಲಸಗಳಲ್ಲಿ ಹೋಗಲಾಗುತ್ತಿಲ್ಲ. ಹಾಗೆ ನೋಡಿದರೆ; ದಕ್ಷಿಣ ಕನ್ನಡದ ಮತ್ತು ಉತ್ತರ ಕನ್ನಡದ ಗೆಳೆಯ ಗೆಳತಿಯರನ್ನು ನೋಡಿದಾಗ; ನಿಜವಾಗಿಯೂ ಹೊಟ್ಟೆಕಿಚ್ಚು. ಸದಾ ಹಸಿರು ತುಂಬಿಕೊಂಡಿರುವ ಪ್ರದೇಶದ ಜೊತೆಗೆ ಸಮುದ್ರವನ್ನ್ನೂ ಇಟ್ಟುಕೊಂಡಿದ್ದಾರೆ. ನಾನಾ ರೀತಿಯ ಜಲಪಾತಗಳನ್ನು ಇಟ್ಟು ಕೊಂಡಿದ್ದಾರೆ. ಇರಲಿ, ಮರಕಿಣಿಯು ಈ ಬಾರಿಯ ‘ಕಸ್ತೂರಿ’ಯಲ್ಲಿ ‘ಕನಸಿಗೊಂದು ಕಣ್ಣು’ ವಿನಲ್ಲಿ ಕುವೆಂಪು ಮತ್ತು ಕಾಳಿಂಗರಾವ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದರು. ಮೆಸೇಜ್ ಓದಿ ಮರಕಣಿ ಜೊತೆ ಮಾತಾಡುತ್ತಲೇ ಅಲೆಗಳನ್ನು ಸಂಭ್ರಮಿಸಿದ್ದೆ. 

ಸುಮಾರು ಅರ್ಧ ಗಂಟೆಗೂ ಮೇಲ್ಪಟ್ಟು ಕುರ್ಚಿಯ ಮೇಲೆ ಕೂತು ಮುಂದೆ ಮೇಜಿನ ಮೇಲೆ ಮಿಣಮಿಣ ಬೆಳಕನ್ನು ಚೆಲ್ಲುತ್ತಿದ್ದ ದೀಪದ ಬುಡ್ಡಿಯನ್ನು ನೋಡಿ ಏನೇನೋ ನೆನಪುಗಳು ಬಂದು ಹೋದವು. ಮೇಲೆ ಬಾಲ್ಯದಲ್ಲಿ ನನ್ನೂರಿಗೆ ವಿದ್ಯುತ್ ಬರುವ ಮುನ್ನ ಇಂಥ ದೀಪದ ಬೆಳಕಿನಲ್ಲಿ ಅಲ್ಲವೇ ಬೆಳೆದದ್ದು ಅನ್ನಿಸಿತು. ಹಾಗೆಯೇ ಹೊಂಗೆ ಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಲೇ ತೂಕಡಿಸಿ ತಲೆಯ ಮುಂಭಾಗದ ಕೂದಲು ಸುಟ್ಟುಹೋಗಿದ್ದು; ಎಲ್ಲವೂ ಶ್ರೀಮಂತವಾಗಿ ಕಾಡತೊಡಗಿದ್ದವು.ಹಾಗೆಯೇ ನಾಲ್ಕೈದು ವರ್ಷಗಳ ಹಿಂದೆ ಅಂಡಮಾನ್‌ಗೆ ಹೋಗಿದ್ದಾಗ ಸಮುದ್ರದ ದಂಡೆಯಲ್ಲಿ ಸುನಾಮಿಯಲ್ಲಿ ಜೀವ ಕಳೆದುಕೊಂಡವರಿಗಾಗಿ; ಸಾಕಷ್ಟು ಮಂದಿ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದ ವಿಷಾದಮಯತೆಯ ಕ್ಷಣವನ್ನು ಕಂಡು ಮನಸ್ಸಿಗೆ ಪಿಚ್ಚೆನ್ನಿಸಿತ್ತು. ಹಾಗೆಯೇ ಅದೇ ಒಂದು ಲೋಕವೆನ್ನುವ ಹಡಗಿನಲ್ಲಿ ಪ್ರಯಾಣ ಮಾಡುವಾಗ ರಾತ್ರಿ ಮತ್ತು ಹಗಲು ಕೊಡುವ ನಾನಾ ರೀತಿಯ ಅನುಭವವನ್ನು ಮೆಲುಕು ಹಾಕುತ್ತಾ ಅಲೆಗಳ ಶಬ್ದದಲ್ಲಿ ‘ಹಾಯ್’ತನದ ಸಂತೋಷದಲ್ಲಿ ತಲ್ಲೀನನಾಗಿದ್ದೆ. ಅಷ್ಟೇ ಅಲ್ಲ; ಕಾನ್‌ಕೂನ್ ಬೀಚ್ ಸಾವಿರಾರು ಮಂದಿ ಬದುಕಲು ಜಾಗ ಕೊಟ್ಟಿದೆ. ಎಷ್ಟು ಚೆನ್ನಾಗಿ ಪ್ರವಾಸ ಕೇಂದ್ರವಾಗಿ ಪರಿವರ್ತಿಸಿದ್ದಾರೆ ಅನ್ನಿಸುತ್ತದೆ. ಎಂತೆಂಥ ವರ್ಣಮಯ ಕಾಟೇಜ್‌ಗಳು. ಮನುಷ್ಯ ತನ್ನ ಬದುಕಿನಲ್ಲಿ ಸುಖವನ್ನು ಹುಡುಕಿಕೊಂಡು ಎಲ್ಲೆಲ್ಲೋ ತಿರುಗುತ್ತಾನೆ. ‘ಕೊನೆಗೂ ಏನು?’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವೌನಿಯಾಗಿ ಮರೆಯಾಗಿ ಬಿಡುತ್ತಾನೆ. ಇಂಥ ಪ್ರಶ್ನೆಗಳು ದ್ವಿಗುಣವಾಗುತ್ತಲೇ ಹೋಗುತ್ತಿರುತ್ತವೆ. ಬದುಕಲು ಹೊಟ್ಟೆಪಾಡಿಗಾಗಿ ಬಹುದೂರ ಸಾಗುವ ದೋಣಿಗಳು. ಬೃಹದಾಕಾರದ ಅಲೆಗಳು. ಇಂಥವರ ಮಧ್ಯೆ ಬದುಕುವ ಸಾವಿರಾರು ಮಿನುಗಾರರನ್ನು ಸಂಘಟಿಸಿದ ಕೇರಳದ ಬಹುದೊಡ್ಡ ಮೀನುಗಾರರ ನಾಯಕ ಟಾಮ್‌ಕೊಚೇರಿ ನೆನಪಾದರು. ಅವರ ಜೊತೆಯಲ್ಲಿ ಮೀನುಗಾರರಿಗೆ ಜಯಕಾರ ಹಾಕುತ್ತಾ ಸಾವಿರಾರು ಮಂದಿಯ ಜೊತೆಯಲ್ಲಿ ನಾನೂ ಒಬ್ಬನಾಗಿ ಬಿಟ್ಟಿದ್ದೆ. ಎಂಥ ವೈಭವ ಪೂರಿತ ಸಮುದ್ರ ದಂಡೆ. ಅಂಥ ಟಾಮ್‌ಕೊಚೇರಿಯವರಿಂದ ಮರ್ಸಿ ಎಂಬ ಹುಡುಗಿಯನ್ನು ಅರಿಯಲು ಸಾಧ್ಯವಾಯಿತು. 

ಆ ಹುಡುಗಿ ಮೀನುಗಾರರ ಗುಡಿಸಲುಗಳಲ್ಲಿ ಸುತ್ತಾಡಿ, ಆತ್ಮೀಯಳಾಗಿ ಗಂಡಸರಿಗೆ ಕುಡಿತವನ್ನು ಬಿಡಿಸುತ್ತಾ ಹೋದವಳು. ಅಂಥ ಸಮೂಹದ ಮಧ್ಯೆ ಪೀಟರ್ ಎಂಬ ಮೀನುಗಾರ ತನ್ನ ಐವತ್ತೈದನೆಯ ವಯಸ್ಸಿನಲ್ಲಿ ಕುಡಿತ ಬಿಟ್ಟು ಕವಿಯಾದವನು. ಲೇಖಕನಾದವನು. ಆತನ ಬಗ್ಗೆ ನಾನು ‘ಪೀಟರ್ ದಿ ಗ್ರೇಟ್’ ಎಂದು ಲೇಖನ ಬರೆದಾಗ; ಅದನ್ನು ಓದಿಸಿಕೊಂಡು ಎರ್ನಾಕುಲಂನ ಮೀನುಗಾರರ ಗುಡಿಸಲುಗಳ ಮುಂದೆ ನನ್ನನ್ನ್ನು ಅಪ್ಪಿಕೊಂಡು ಸಂಭ್ರಮಿಸಿದ್ದ. ನಮ್ಮೆಲ್ಲರ ಬದುಕಿಗೆ ಇಂಥ ಆಕಸ್ಮಿಕಗಳೆಂಬ ‘ಆಸ್ಮಿತೆ’ಗಳು ಆಪ್ತವಾಗಿ ಬಿಟ್ಟಿರುತ್ತವೆ. ಆದರೆ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿಯನ್ನು ತೆಗೆದುಕೊಳ್ಳುವಾಗ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಮುಖ್ಯಮಂತ್ರಿಗಳು ವ್ಯವಸ್ಥೆ ಮಾಡಿದ್ದ ‘ಟೀ ಸಂಭ್ರಮ’ದಲ್ಲಿ ಕಲ್ಗಟಗಿಯ ‘ವಿಮೋಚನೆ ಅಭಿವೃದ್ದಿ ಸಂಸ್ಥೆ’ಯ ಫಾದರ್‌ಡಾ. ಜಾಕೋಬ್ ಅವರು ಪರಿಚಯವಾದರು. ಅವರು ಕೇರಳ ಮೂಲದವರು. ಇಲ್ಲಿ ಬಂದು ಕನ್ನಡವನ್ನು ಕಲಿತು ಜನರ ಮಧ್ಯೆ ಕೆಲಸ ಮಾಡುತ್ತಿರುವಂಥವರು. ಒಮ್ಮೆ ವಿಧಾನಸಭೆಯ ಸದಸ್ಯರಾಗಿದ್ದವರು. ಅವರ ಬಳಿ ಕೇರಳದ ಅನುಭವಗಳನ್ನು ಹೇಳುವಾಗ ಟಾಮ್ ಕೊಚೇರಿಯವರನ್ನು ಪ್ರಸ್ತಾಪಿಸಿದೆ. ಆಗ ಫಾದರ್ ಜಾಕೋಬ್ ಅವರು ಅತ್ಯಂತ ನಮ್ರತೆಯಿಂದ ಆ ಗ್ರೇಟ್ ಮೀನುಗಾರರ ಸಂಘಟಕ ಟಾಮ್ ಅವರನ್ನು ನೆನಪಿಸಿಕೊಂಡು ಎರಡು ವರ್ಷಗಳ ಹಿಂದೆ ನಿಧನರಾದರು ಎಂದಾಗ; ಮನಸ್ಸಿಗೆ ಒಂದು ರೀತಿಯಲ್ಲಿ ಪಿಚ್ಚೆನ್ನಿಸಿತ್ತು. ಎಂಥ ಅದ್ಭುತ ಗಾಂಧಿವಾದಿ ಅತ್ಯಂತ ಅಹಿಂಸಾತ್ಮಕವಾಗಿಯೇ ಭಾರತದ ಉದ್ದಗಲಕ್ಕೂ ಮೀನುಗಾರ ಶ್ರಮಿಕರಲ್ಲಿ ರೋಮಾಂಚನವನ್ನು ಮೂಡಿಸಿದವರು. ಒಂದು ದೃಷ್ಟಿಯಿಂದ ರಜನಿಭಕ್ಷಿ ಅವರ ಕೃತಿಯಿಂದ ಪ್ರಸ್ತಾಪಿಸಿರುವ ಅನಿಲ್‌ಪ್ರಕಾಶ್ ರೀತಿಯ ವ್ಯಕ್ತಿತ್ವವನ್ನು ಕೊಚೇರಿಯವರು ಹೊಂದಿದ್ದರು.ಎಂಥ ಎತ್ತರದ ವ್ಯಕ್ತಿತ್ವ. ಭೌತಿಕವಾಗಿಯೂ ಅಷ್ಟೇ.

 ಈ ರೀತಿಯಲ್ಲಿ ಗಾಂಧೀಜಿಯವರ ಚಿಂತನೆಗಳಿಂದ ಪ್ರಣೀತಗೊಂಡ ನೂರಾರು ಮಂದಿ ಅತ್ಯಂತ ವಿನಯದಿಂದ ಎಂತೆಂಥೆದೋ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಜನ ಸಾಮಾನ್ಯರ ದುಃಖ ದುಮ್ಮಾನಗಳಲ್ಲಿ ಭಾಗಿಯಾಗಿರುವಂಥವರು. ಬಹುಪಾಲು ಮಂದಿ ಉನ್ನತಾಧಿಕಾರಿಗಳಾಗಿದ್ದವರು. ಜಗತ್ತಿನ ಉದ್ದಗಲಕ್ಕೂ ಇಂಥ ವಿಸ್ಮಯಗಳಿಗೆ ಕೊರತೆ ಇಲ್ಲ. ಒಂದು ದೃಷ್ಟಿಯಿಂದ ರಜನಿ ಭಕ್ಷಿಯವರ ‘ಬಾಪುಕುಬಿ’ ಕೃತಿಯು ಹೀಗೆ ಶ್ರೀಮಂತವಾಗಿ ಜನ ಸಾಮಾನ್ಯರ ನಡುವೆ ಬದುಕುತ್ತಿರುವ ಸಾಧಕರ ಪರಿಚಯ ಕೋಶವಾಗಿದೆ. ಈ ಎಲ್ಲಾ ನೆನಪುಗಳ ಮಧ್ಯೆ ಆ ‘ಕಾನ್ ಕೂನ್’ ಸಮುದ್ರ ದಂಡೆಯನ್ನು ಒಲ್ಲದ ಮನಸ್ಸಿನಿಂದ ಬಿಡುವಾಗ; ಇದ್ದಕ್ಕಿದ್ದಂತೆ ಜೊಯಲ್ ರೊಹಮನ್ ಎಂಬ ಯುವಕ ಪರಿಚಯವಾದ. ಆತನಿಗೆ ಮುವತ್ತೈದು ವರ್ಷವಾಗಿರಬಹುದು. ವೃತ್ತಿಯಲ್ಲಿ ಭೂಮಾಪಕ. ಗಾಂಧೀಜಿಯವರನ್ನು ಓದಿಕೊಂಡು ಬೆಳೆದವನು. ಆತನ ಮಾತುಕತೆಯಿಂದ ಗಾಂಧೀಜಿಯವರನ್ನು ಅರಿಯಲು ಎಷ್ಟೊಂದು ದಾಹವನ್ನು ತುಂಬಿಕೊಂಡಿದ್ದಾನೆ ಅನ್ನಿಸಿತು. ಇಂಥ ಮಾತಿನ ಮಧ್ಯೆ ಆತ ತನ್ನ ವೃತ್ತಿಯ ಒಬ್ಬ ಸರ್ವೇಯರನನ್ನು ಭಾರತದಲ್ಲಿ ಕಂಡೆ ಎಂದು ಪುಳಕಿತನಾಗಿ ಹೇಳಿದಾಗ; ಮನುಷ್ಯ ಸಂಬಂಧಗಳು ಎಂತೆಂಥ ವಿಚಿತ್ರ ಪದರುಗಳಿಂದ ಆವರಿಸಿಕೊಂಡಿರುತ್ತದೆ ಅನ್ನಿಸಿತು. ಹೀಗೆಯೇ ಮಾತುಕತೆಯ ನಡುವೆ ನನಗೆ ಪ್ರಿಯನಾದ ಲೇಖಕ ಫ್ರಾಂಜ್ ಕಾಪ್ಕ ಬಗ್ಗೆ ಪ್ರಸ್ತಾಪಿಸಿದಾಗ; ಅವನ ಬರವಣಿಗೆಯನ್ನು ಕುರಿತು ಆತ್ಮೀಯವಾಗಿ ವ್ಯಾಖ್ಯಾನಿಸಿದ್ದರು. ಆಗ ನನ್ನ ಪಾಡಿಗೆ ಸುಮ್ಮನೆ ಗುನುಗುನಿಸಿಕೊಂಡೆ: ಗಾಂಧೀಜಿಯವರು ಹೇಗೆ ಅರಿವಿನ ಬಾಗಿಲುಗಳನ್ನು ವಿಸ್ತರಿಸುತ್ತಾರೆ ಎಂದು. ಆ ಜರ್ಮನಿಯ ರೊಹಮನ್ ಅವರ ಪರಿಚಯದಿಂದ ಗ್ರಂಥಾಲಯದ ಹಿರಿಯ ನಿರ್ದೇಶಕರಾದ ಕೆ.ಜಿ.ವೆಂಕಟೇಶ್ ಮತ್ತು ಡಾ. ಹೊಸಮನಿಯವರು ಸಂಭ್ರಮವನ್ನು ಅನುಭವಿಸಿದ್ದರು. ಕೊನೆಗೆ ಆತನ ‘ಇ’ಮೇಲ್‌ನ್ನು ಪಡೆದು ಬೀಳ್ಕೊಡುವಾಗ; ಎಷ್ಟೋ ವರ್ಷಗಳ ಆಪ್ತ ಬಂಧುವನ್ನು ಬಿಟ್ಟು ಹೊರಡುತ್ತಿದ್ದೇವೆ ಅನ್ನಿಸಿತ್ತು.

           ಕಾರವಾರದಲ್ಲಿ ಈ ಬಾರಿಯ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪ್ರಭಾಕರ ರಾಣೆ, ಪುರಸಭೆಯ ಅಧ್ಯಕ್ಷರಾದ ಲೀಲಾವತಿಬಾಯಿ ಹಾಗೂ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾದ ಸರಸ್ವತಿಗೌಡ ಅವರು ತುಂಬಾ ಆಪ್ತರೆನ್ನಿಸಿಬಿಟ್ಟರು. ಹಾಗೆ ನೋಡಿದರೆ ಪ್ರಭಾಕರ ರಾಣೆಯವರು ಕೇವಲ ಆರೇ ತಿಂಗಳು ಗ್ರಂಥಾಲಯದ ಸಚಿವರಾಗಿದ್ದರು. ಅದ್ಭುತ ಕನಸುಗ ಳನ್ನು ತುಂಬಿಕೊಂಡಿದ್ದವರು. ಗ್ರಂಥಾ ಲಯ ಚಳವಳಿಯ ಮೂಲಕ ಪುಸ್ತಕ ಸಂಸ್ಕೃತಿಯನ್ನು ನಮ್ಮ ಜನರ ಬಳಿಗೆ ಹೇಗೆ ಕರೆದೊಯ್ಯಬೇಕು ಎಂಬುದರ ಬಗ್ಗೆ ಒಂದು ದೀರ್ಘ ಟಿಪ್ಪಣಿಯನ್ನು ಸಿದ್ಧ ಪಡಿಸಲು ನಮಗೆ ಸೂಚಿಸಿದರು. ಬೆಂಗಳೂರಿನ ಅವರ ಮನೆಯಲ್ಲಿ ಎರಡು ದಿವಸ ಬರಗೂರು ರಾಮ ಚಂದ್ರಪ್ಪ, ಎಚ್.ಎಸ್.ಶಿವಪ್ರಕಾಶ್, ರಮಜಾನ್‌ದರ್ಗಾ ಮತ್ತು ನಾನು ಕೂತು ಸಾಕಷ್ಟು ಚರ್ಚೆ ಮಾಡಿ ಸಿದ್ಧಪಡಿಸಿಕೊಟ್ಟೆವು. ತುಂಬ ಮೆಚ್ಚ್ಚುಗೆಯಿಂದ ಸ್ವೀಕರಿಸಿದರು. ಆದರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಆಗ ಬಹಳಷ್ಟು ಪತ್ರಿಕೆಗಳು ಅವರ ಪರವಾಗಿ ಸಂಪಾದಕೀಯಗಳನ್ನು ಬರೆಯಲಾಯಿತು. ಲಂಕೇಶ್ ಅವರೂ ತೀವ್ರರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಅಬ್ದುಲ್ ನಝೀರ್ ಸಾಬ್ ಅವರ ಕನಸಿನ ಕೂಸುಗಳು ಎನ್ನುವ ರೀತಿಯಲ್ಲಿ ಇಂದು ನೂರಾರು ಮಂದಿ ಹೆಣ್ಣುಮಕ್ಕಳು ಪಂಚಾಯತ್ ರಾಜ್ ವ್ಯವಸ್ಥೆಯ ತೆಕ್ಕೆಯೊಳಗೆ ಬಂದಿದ್ದಾರೆ. ಅವರೆಲ್ಲ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಥವರ ಕೊಡುಗೆಯಾಗಿ ಕಂಡವರು ಲೀಲಾವತಿಬಾಯಿಯವರು ಮತ್ತು ಸರಸ್ವತಿಗೌಡ ಅವರು. ಪುಸ್ತಕ ಸಂಸ್ಕೃತಿಯ ಬಗ್ಗೆ ಎಷ್ಟು ಚೆನ್ನಾಗಿ ಮಾತಾಡಿದರು. ನಮ್ಮ ಪ್ರಜಾಪ್ರತಿನಿಧಿಗಳು ಹೀಗಿರಬೇಕು ಎಂದು ಮುಕ್ತವಾಗಿ ನನ್ನ ಮಾತಿನಲ್ಲಿ ಕೊಂಡಾಡಿದೆ. 

 ಗ್ರಂಥಾಲಯ ಸಪ್ತಾಹದ ನೆಪದಲ್ಲಿ ಉತ್ತರಕನ್ನಡದ ನೂರಾರು ಕಿ.ಮೀಟರ್ ಉದ್ದಗಲದ ಶ್ರೀಮಂತ ಕಾಡನ್ನು ನಿಜವಾಗಿಯೂ ಸಮೃದ್ಧವಾಗಿ ಅನುಭವಿಸಿದೆ. ಅದರ ಮಧ್ಯೆ ಮಾರಿಕಣಿವೆ ಜಲಪಾತ, ವಿಭೂತಿ ಜಲಪಾತ, ಯಾಣ ಒಂದು ರೀತಿಯ ಸೊಬಗನ್ನು ತುಂಬಿಕೊಟ್ಟಿದೆ. ಈ ಎಲ್ಲಾ ಸೊಬಗಿನ ಹಿನ್ನೆಲೆೆಯಲ್ಲಿ ಹಿರಿಯ ಕವಿಗಳಾದ ವಿಷ್ಣು ನಾಯಕ್ ಅವರು ಗ್ರಂಥಾ ಲಯಕ್ಕೆ ಸಂಪಾದಿಸಿ ಕೊಟ್ಟ ‘ಕರಾವಳಿ ದೀಪ್ತಿ’ ಕೃತಿಯೂ ಏನೇನೋ ಹೇಳಲು ಹೊರಟಿರುವಂಥದ್ದು. ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ರವೀಂದ್ರನಾಥ ಟಾಗೂರು ಅವರು ಹೇಗೆ ಮುವತ್ತೇಳು ವರ್ಷ ರೈತರ ನಡುವೆ ಕೆಲಸ ಮಾಡಿದರು, ‘ಶ್ರೀನಿಕೇತನ’ ಸಂಸ್ಥೆಯ ಮೂಲಕ ಸಹಕಾರಿ ಸಂಘಗಳ ಚೌಕಟ್ಟಿನಲ್ಲಿ ರೈತರ ಬೆಳವಣಿಗೆಗೆ ಕಾರಣಕರ್ತರಾದರು ಎಂಬ ಲೇಖನವನ್ನು ‘ದೀಪಿ’್ತಯಲ್ಲಿ ಮರು ಮುದ್ರಿಸಿದಾಗ; ಅಲ್ಲಿಯ ಬಹಳಷ್ಟು ಮಂದಿ ಟಾಗೂರರು ಹೀಗೆಲ್ಲಾ ಕೆಲಸ ಮಾಡಿದ್ದಾರಾ? ಎನ್ನುವ ಧ್ವನಿಯನ್ನು ತುಂಬಿಕೊಂಡೇ ಹತ್ತೊಂಬತ್ತರಂದು ರಾತ್ರಿ ಕಾರವಾರದ ಸಮುದ್ರದ ದಂಡೆಗೆ ಹೋದೆ. ನಮ್ಮ ವಸತಿಗೃಹದಿಂದ ಒಂದು ಕಿ.ಮೀಟರ್ ದೂರವಿದ್ದದ್ದು. ನನ್ನ ಜೊತೆ ಹಿರಿಯರಾದ ಉಲ್ಲಾಸ್ ನಾಯಕ್ ಬಂದರು. ತುಂಬುಗತ್ತಲು. ಸಮುದ್ರ ಎಷ್ಟು ಸುಂದರವಾಗಿ ಕಾಣತೊಡಗಿತ್ತು. ಸುಮಾರು ಅರ್ಧಗಂಟೆಗೂ ಮೇಲ್ಪಟ್ಟು ಅಲೆಗಳ ವೈಭವವನ್ನು ನೋಡುತ್ತಾ ನಡೆಯುವಾಗ ಎಷ್ಟು ಖುಷಿ ಅನ್ನಿಸುತ್ತಿತ್ತು. ಅಲೆಗಳು ಮರಳಿನ ದಡಕ್ಕೆ ಅಪ್ಪಳಿಸಿದಾಗ ಮಿಣಮಿಣ ಮಿಂಚುವ ಬೆಳ್ಳಿಯ ರೀತಿಯ ಪಟ್ಟಿ ಉದ್ದಕ್ಕೂ ಚಾಚಿಕೊಂಡಂತೆ. ಬಹುದೂರದ ರಸ್ತೆಯ ಬದಿಯಿಂದ ಬೀಳುತ್ತಿದ್ದ ವಿದ್ಯುತ್ ಅರೆಬರೆ ಬೆಳಕಿನಲ್ಲಿ ಸಾವಿರಾರು ಏಡಿಗಳು ಮನಮೋಹಕವಾಗಿ ಜಿಗಿಯುತ್ತಿದ್ದವು. ರವೀಂದ್ರನಾಥ್ ಟಾಗೂರರು ಒಂದಷ್ಟು ಕಾಲ ಅಣ್ಣನ ಆಶ್ರಯದಲ್ಲಿ ಇರುವಾಗ ಇಲ್ಲಿಯ ಕಾಡನ್ನು ಮತ್ತು ಸಮುದ್ರದ ದಂಡೆಯನ್ನು ಕವಿಯಾಗಿ, ದಾರ್ಶನಿಕರಾಗಿ ಅನುಭವಿಸಿದವರು. ಸುಮ್ಮನೆ ಭಾವನಾತ್ಮಕವಾಗಿ ಯೋಚಿಸುತ್ತಾ ಹೋದೆ: ಟಾಗೂರರ ನಡಿಗೆಯ ಹೆಜ್ಜೆಗುರುತು ಕಾಣಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು. ಹಾಗೆಯೇ ಗೋವಾದ ಕಾನ್‌ಕೂನ್ ಬೀಚ್‌ಗಿಂತ ಚೆನ್ನಾಗಿ ಇದನ್ನು ಪ್ರವಾಸ ತಾಣವಾಗಿ ಬೆಳಸಬಹುದಾಗಿತ್ತು. ಸಾವಿರಾರು ಜನರ ಬದುಕಿಗೆ ದಾರಿ ಮಾಡಿಕೊಡಬಹುದಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಆಗಿಲ್ಲ.

ಮಡೆಸ್ನಾನ-ಕಂಬಳ: ಮೊದಲು ತಡೆಯಬೇಕಾದ ಹಿಂಸೆ ಯಾವುದು?ವಾರ್ತಾಭಾರತಿ ಸಂಪಾದಕೀಯ

ಸದ್ಯಕ್ಕೆ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಗಳಲ್ಲೊಂದಾಗಿರುವ ಕಂಬಳ ಸುದ್ದಿ ಮಾಡುತ್ತಿದೆ. ಪ್ರಾಣಿ ಕಲ್ಯಾಣ ಮಂಡಳಿಯು ಈ ಕಂಬಳಗಳ ಕುರಿತಂತೆ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ, ಕಂಬಳವನ್ನು ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಕಂಬಳದ ಜೊತೆಗೆ ಕರಾವಳಿಯ ಜನರು ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಹೊಂದಿರುವುದರಿಂದ, ಈ ಭಾಗದ ಜನಪ್ರತಿನಿಧಿಗಳಿಗೆ ಇದು ಮುಜುಗರವನ್ನು ತಂದಿದೆ. ಕಂಬಳ ನಿಷೇಧ ಜನರ ಭಾವನೆಗಳಿಗೆ ಧಕ್ಕೆ ತರಬಹುದು ಎನ್ನುವ ಆತಂಕ ಅವರದು. ಎಲ್ಲಕ್ಕಿಂತ ಮುಖ್ಯವಾಗಿ ಈ ಕಂಬಳ ಕ್ರೀಡೆಯ ಜೊತೆಗೆ ರಾಜಕೀಯ ನಾಯಕರು ನೇರ ಸಂಬಂಧವನ್ನೂ ಹೊಂದಿದ್ದಾರೆ. ಅವರ ಪ್ರಾಯೋಜಕತ್ವದಲ್ಲೇ ಈ ಕಂಬಳ ಜಾತ್ರೆಗಳು ನಡೆಯುತ್ತವೆ. ಆದುದರಿಂದಲೇ ಕಂಬಳ ನಿಷೇಧದ ಕುರಿತಂತೆ ಸರಕಾರ ಭಿನ್ನ ಅಭಿಪ್ರಾಯವನ್ನು ಹೊಂದಿದೆ. ಅಧಿಕಾರಿಗಳು ಒಂದು ಬಗೆಯ ಹೇಳಿಕೆ ನೀಡುತ್ತಿದ್ದರೆ, ರಾಜಕಾರಣಿಗಳು ಇನ್ನೊಂದು ಬಗೆಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ಕಂಬಳವನ್ನು ನಿಷೇಧಿಸುವ ಕುರಿತಂತೆ ರಾಜ್ಯ ಸರಕಾರ ತನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸಬೇಕು ಎಂದು ಹೈಕೋರ್ಟ್ ಹೇಳಿದೆ. ತಮಿಳುನಾಡಿನ ಜಲ್ಲಿಕಟ್ಟು ಎನ್ನುವಂತಹ ಕ್ರೀಡೆಯ ವಿವಾದದ ಬಳಿಕ, ಇದೀಗ ಪ್ರಾಣಿ ಹಿಂಸಾ ವಿರೋಧಿಗಳ ಕಣ್ಣು ಕಂಬಳದ ಮೇಲೆ ಬಿದ್ದಿದೆ. ಜಲ್ಲಿಕಟ್ಟುವಿನಲ್ಲಿ ಪ್ರಾಣಿಗಳಿಗೂ, ಮನುಷ್ಯರಿಗೂ ಏಕ ಕಾಲದಲ್ಲಿ ಅಪಾಯವಿರುವ ಸಾಧ್ಯತೆಯಿತ್ತು. ಈ ಅಪಾಯಕಾರಿ ಕ್ರೀಡೆಯನ್ನು ನಿಲ್ಲಿಸಬೇಕು ಎಂದು ಪ್ರಾಣಿಗಳ ಪರವಾಗಿರುವ ಸಂಘಟನೆಗಳು ಹೋರಾಟ ನಡೆಸಿದ್ದವು.

 ಕಂಬಳ ಎನ್ನುವುದು ಜಲ್ಲಿಕಟ್ಟು ಕ್ರೀಡೆಯಷ್ಟು ಅಪಾಯಕಾರಿಯಾದುದಲ್ಲ. ಹಾಗೆಯೇ ಅಲ್ಲಿ ನಡೆಯುವ ಹಿಂಸೆಯಷ್ಟು ತೀವ್ರವಾದುದೂ ಅಲ್ಲ. ಆದರೂ ಇಲ್ಲಿ ಕೋಣಗಳ ಮೇಲೆ ನಡೆಯುವ ಹಿಂಸೆಯನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಜಮೀನ್ದಾರಿಕೆಯ ಪಳೆಯುಳಿಕೆಯ ರೂಪದಲ್ಲಿ ಈ ಕಂಬಳ ಉಳಿದುಕೊಂಡು ಬಂದಿದೆ. ಊಳಿಗಮಾನ್ಯ ಪದ್ಧತಿಯ ನೆರಳು ಈ ಕಂಬಳವನ್ನು ಹಿಂಬಾಲಿಸಿಕೊಂಡು ಬಂದಿರುವುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಇಂದು ಕರಾವಳಿಯಲ್ಲಿ ಕೃಷಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆ ಇಲ್ಲಿ ಎಮ್ಮೆ, ಕೋಣಗಳು ಬೇರೆ ಬೇರೆ ಕೃಷಿ ಕೆಲಸಗಳಿಗೆ ಬಳಕೆಯಾಗುತ್ತಿದ್ದವು. ಇಂದು ಕೋಣಗಳನ್ನು ಕೃಷಿ ಕಾರ್ಯಕ್ಕಾಗಿ ಯಾರೂ ಸಾಕುವುದಿಲ್ಲ. ಎಮ್ಮೆ ಮತ್ತು ಕೋಣಗಳ ಸಾಕಣೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೈನುಗಾರಿಕೆಗೆ ಈ ಭಾಗದಲ್ಲಿ ಎಮ್ಮೆಯನ್ನು ಬಳಸುವುದೂ ಕಡಿಮೆಯಾಗಿದೆ. ಕೋಣಗಳನ್ನು ಇಂದು ಕೆಲವು ಜಮೀನ್ದಾರರ ಪಳೆಯುಳಿಕೆಗಳು ಕಂಬಳ ಕ್ರೀಡೆಗಾಗಿಯೇ ಸಾಕುತ್ತಾರೆ. ಈ ಕೋಣಗಳನ್ನು ಸಾಕುವುದಕ್ಕಾಗಿ, ಅದನ್ನು ಓಡಿಸುವುದಕ್ಕಾಗಿ ತರಬೇತು ಪಡೆದ ಕೆಲಸದಾಳುಗಳೂ ಜೊತೆಗೇ ಇರುತ್ತಾರೆ. ಕರಾವಳಿ ಇತ್ತೀಚೆಗೆ ಕೋಮು ಗಲಭೆಗಳಿಗೆ ಹೆಸರಾಗಿವೆ. ಕೋಮು ಗಲಭೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಗೆ ಹೋಲಿಸಿದರೆ, ಕಂಬಳ ಚರ್ಚೆಯ ವಿಷಯವಾಗುತ್ತಿರುವುದೇ ಅಸಂಗತವಾಗಿದೆ. ಆದರೂ ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದೇ ಒಪ್ಪಿಕೊಳ್ಳೋಣ. ಅದಕ್ಕಾಗಿ ಕಂಬಳ ನಿಷೇಧವಾಗಬೇಕು ಎನ್ನುವುದಕ್ಕೂ ಜೈ ಎನ್ನೋಣ. ಆದರೆ, ಇದೇ ಸಂದರ್ಭದಲ್ಲಿ ಹಿಂಸೆಯೆನ್ನುವುದು ಬರೇ ಕಂಬಳ ಕ್ರೀಡೆಯನ್ನು ಮಾತ್ರ ನೆಚ್ಚಿಕೊಂಡಿದೆಯೇ? ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ. ಅವ್ಯವಹಾರಗಳು, ಬೆಟ್ಟಿಂಗು, ಜೂಜು, ಇವೆಲ್ಲ ಹಿಂಸೆಯ ಪ್ರಕಾರದಲ್ಲಿ ಬರುವುದಿಲ್ಲವೇ? ಈ ಬೆಟ್ಟಿಂಗ್‌ನಿಂದಾಗಿ ಮನೆಮಾರು ಕಳೆದುಕೊಂಡ ಅದೆಷ್ಟೋ ಜನರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೂರಾರು ಯುವಕರಿದ್ದಾರೆ. ಈ ಕಾರಣದಿಂದ ಕ್ರಿಕೆಟನ್ನು ಯಾಕೆ ನಿಷೇಧಿಸಬಾರದು? ಶ್ರೀಮಂತ ಕುಳಗಳ ಕುದುರೆ ರೇಸ್‌ಗಳನ್ನು ಯಾಕೆ ನಿಷೇಧಿಸಬಾರದು? ಬಾಕ್ಸಿಂಗ್ ಎನ್ನುವುದು ಮನುಷ್ಯ ಮನುಷ್ಯರ ನಡುವೆ ನಡೆಯುವ ಸ್ಪರ್ಧೆ. ಈ ಬಾಕ್ಸಿಂಗ್‌ನಿಂದಾಗಿ ಹಲವು ಕ್ರೀಡಾಳುಗಳು ಪ್ರಾಣ ಕಳೆದುಕೊಂಡಿದ್ದಾರೆ. ಮನುಷ್ಯ ಮನುಷ್ಯನನ್ನು ರಕ್ತ ಸುರಿಯುವಂತೆ ಹೊಡೆದಾಡಿಸುವ ಬಾಕ್ಸಿಂಗ್ ಹಿಂಸೆಯಲ್ಲ ಎಂದಾದರೆ ಕಂಬಳದಂತಹ ಸಾಂಸ್ಕೃತಿಕ ಹಿನ್ನೆಲೆಯಿರುವ ಕ್ರೀಡೆ ಹೇಗೆ ಹಿಂಸೆಯಾಗುತ್ತದೆ?

ವಿಪರ್ಯಾಸವೆಂದರೆ, ಇದೇ ಕರಾವಳಿಯಲ್ಲಿ ಕಳೆದ ಒಂದು ದಶಕದಿಂದ ಮಡೆಸ್ನಾನ ಸುದ್ದಿಯಾಗುತ್ತಿದೆ. ಬ್ರಾಹ್ಮಣರು ಉಂಡ ಎಂಜಲೆಲೆಯಲ್ಲಿ ಮಲೆಕುಡಿಯರು ಉರುಳಾಡುವುದನ್ನು ನಿಲ್ಲಿಸಬೇಕು ಎಂದು ಮಾನವೀಯ ನೆಲೆಯಲ್ಲಿ ಹೋರಾಟ ನಡೆಯುತ್ತಿದೆ. ಮಡೆಸ್ನಾನ ಮಾನವ ಘನತೆಗೆ ಕಳಂಕ ಎಂದು ಎಲ್ಲ ಪ್ರಗತಿಪರರೂ ಹೇಳಿಕೆ ನೀಡಿದ್ದಾರೆ. ಆದರೆ, ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನ್ಯಾಯಾಲಯವೂ ಕೂಡ ಸೂಕ್ತವಾಗಿ ಸ್ಪಂದಿಸಿಲ್ಲ. ಕಳೆದ ಹಲವು ದಶಕಗಳಿಂದ ಯಾವುದೇ ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವೆಡೆ ಮನುಷ್ಯರನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಾಣಿ ಹಿಂಸೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮೊದಲು ನಾವು ಮನುಷ್ಯ ಹಿಂಸೆಯ ಕುರಿತಂತೆ ಮಾತನಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರ ಎಂಜಲು ಕೊಳಕು, ನಿಕೃಷ್ಟವಾದುದು ಎನ್ನುವುದು ಗೊತ್ತಿದ್ದೂ, ಎಂಜಲಿನಿಂದ ರೋಗಗಳು ಹರಡುತ್ತವೆ ಎಂಬುದು ಸ್ಪಷ್ಟವಿದ್ದೂ ಕೆಳ ವರ್ಗದ ಜನರನ್ನು ಮೇಲ್ವರ್ಗದ ಜನರ ಎಂಜಲಲ್ಲಿ ಹೊರಳಾಡಲು ಅವಕಾಶ ನೀಡುವುದು ಹಿಂಸೆಯ ಪರಮಾವಧಿಯಾಗಿದೆ. ಕಂಬಳ ಕರಾವಳಿಯಲ್ಲಿ ಒಂದು ಸಮಸ್ಯೆಯಾಗಿ ಎಂದೂ ಕಾಣಿಸಿಕೊಂಡಿಲ್ಲ.

 ಅಪರೂಪಕ್ಕೆ ಎಲ್ಲೋ ಒಂದೋ ಎರಡೋ ಎಂಬಂತೆ ಕಂಬಳ ಕ್ರೀಡೆಗಳು ನಡೆಯುತ್ತವೆ. ಆದರೆ, ಈ ಮಡೆಸ್ನಾನ ಕರಾವಳಿ ಮಾತ್ರವಲ್ಲ, ಇಡೀ ರಾಜ್ಯಕ್ಕೇ ಒಂದು ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ವಿಜ್ಞಾನ ಮತ್ತು ವಿಚಾರಗಳಿಗೆ ಸವಾಲನ್ನು ಹಾಕಿದೆ. ಮೇಲು, ಕೀಳು ಎನ್ನುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಮಡೆಸ್ನಾನ ಎನ್ನುವ ಹಿಂಸೆ ಮೊದಲು ನಿಲ್ಲಬೇಕು. ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಮನೋಭಾವಕ್ಕೆ ನಿಷೇಧ ಹೇರಬೇಕು. ಆ ಬಳಿಕವಷ್ಟೇ ನಾವು ಕಂಬಳದಂತಹ ಕ್ರೀಡೆಯಲ್ಲಿ ಪ್ರಾಣಿ ಹಿಂಸೆ ನಡೆಯುತ್ತದೆಯೋ ಇಲ್ಲವೋ ಎನ್ನುವುದನ್ನು ಚರ್ಚಿಸುವ ನೈತಿಕ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ. ಇಲ್ಲದೆ ಇದ್ದರೆ, ನಮ್ಮ ಪ್ರಾಣಿ ದಯೆ ಕೇವಲ ಬೂಟಾಟಿಕೆಯಾಗುತ್ತದೆ. ಆದುದರಿಂದ ಮೊತ್ತ ಮೊದಲು ಮಡೆಸ್ನಾನ ಎನ್ನುವ ಮನುಷ್ಯ ಹಿಂಸೆಗೆ ನಿಷೇಧ ಹೇರಿ ಮನುಷ್ಯ ಘನತೆಯನ್ನು ಎತ್ತಿಹಿಡಿಯೋಣ. ಬಳಿಕ ಕಂಬಳದಲ್ಲಿ ಕೋಣಗಳ ಮೇಲೆ ನಡೆಯುವ ಹಿಂಸೆಯ ಬಗ್ಗೆ ಚರ್ಚಿಸೋಣ. ಅಲ್ಲವೇ?

ನಾಗರಾಜ ಹರಪನಹಳ್ಳಿ : ಐದು ಕವಿತೆಗಳು

1
ಭೂಮಿ ಮೇಲೆ
ಜಂಗಮನ ಹೆಜ್ಜೆ
ತುಳಿಸಿಕೊಂಡರೂ
ಪಾದಕ್ಕೆ ನೋವಾಯಿತೇ
ಎನ್ನುತ್ತಾಳೆ ಅವ್ವ


2
ದಡದಲ್ಲಿ ನಿಂತು
ಮಾತಾಡಿದೆ
ಕನಸುಗಳ ಕಳುಹಿಸಿದೆ
ಆಕೆ
ದೂರದಿಂದಲೇ
ಹೂವಾದಳು


3
ನಿನ್ನ ಶಬ್ದಕ್ಕೆ
ಬದುಕು ಕಟ್ಟುವ ಕಸುವು
ಇದೆ ಎಂದು ತಿಳಿದಾಗ
ನಿಶಬ್ದದ ತಂಗಾಳಿ
ತಾಗಿ ಹೋಯಿತು

4
ನೀನು ಮರೆಯಾದ
ಮೇಲೆ
ಕತ್ತಲು ಬೆಳಕಿನ
ವ್ಯಾಖ್ಯಾನಕೆ
ತಡವರಿಸಿದೆ

5
ಸುತ್ತಾಡಿದ ಕುಳಿತ ನೆಲ
ಮತ್ತೆ ಕಾಡುತಿವೆ
ಅಲ್ಲೇ ಅದೇ ಜಾಗದಲ್ಲಿ
ಮತ್ತೆ ಕನಸುಗಳು
ಜೀವತಾಳುತ್ತಿವೆ....

1 ಡಿಸೆಂಬರ್ ಗದಗ : ನನ್ನ ಮೆಚ್ಚಿನ ಪುಸ್ತಕ - ಸಂವಾದ ಗೋಷ್ಠಿ


5 ಡಿಸೆಂಬರ್ ಬೆಂಗಳೂರು : ಎರಡು ಕವನ ಸಂಕಲನಗಳ ಬಿಡುಗಡೆ


ಸಾವಿನ ಸಮ್ಮುಖದಲ್ಲಿ ಸಾವರ್ಕರ್ ಎದುರಿಸಿಜಿ.ಪಿ.ಬಸವರಾಜುಡಾ.ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿ 'ಹಿಂದುತ್ವ ಅಥವಾ ಹಿಂದ್ ಸ್ವರಾಜ್?'. ಸಾವನ್ನು ಹೆಗಲಮೇಲೆ ಹೊತ್ತುಕೊಂಡೇ ಕೃತಿರಚನೆಯಲ್ಲಿ ತೊಡಗಿದ್ದ ಅನಂತಮೂರ್ತಿ, ಈ ಕೃತಿಗೆ ಮೊದಲ ನಾಲ್ಕು ಮಾತುಗಳನ್ನು ಬರೆಯಲೂ ಸಾಧ್ಯವಾಗದ ರೀತಿಯಲ್ಲಿ ತಮ್ಮನ್ನು ಸಾವಿನ ವಶಕ್ಕೆ ಒಪ್ಪಿಸಿಕೊಂಡರು. ಸಾವು ಎದುರಿಗೆ ಕಾಯುತ್ತಿದ್ದರೂ, ಒಂದಿಷ್ಟೂ ಅಂಜದೆ ಬದುಕಿನ ಸತ್ಯ ಯಾವುದು, ನೆಮ್ಮದಿಯ ಬದುಕಿಗೆ ನಿಜ ದಾರಿ ಯಾವುದು ಎನ್ನುವುದನ್ನು ತಮ್ಮ ಅನುಭವದ ಬೆಳಕಲ್ಲಿ ನೊಡಲು ಅನಂತಮೂರ್ತಿ ಅವರು ಯತ್ನಿಸಿರುವುದನ್ನು ಇಲ್ಲಿ ಕಾಣುತ್ತದೆ.

ಸಾವು ಎನ್ನುವುದೊಂದು ವಿಚಿತ್ರ ಸತ್ಯ. ಯಾರ ಸಾವು ಯಾವ ಹೊತ್ತಿಗೆ ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ. ಪ್ರತಿಯೊಂದು ಜೀವಿಯೂ ಸದಾ ತನ್ನ ಹೆಗಲಮೇಲೆ ಸಾವನ್ನು ಹೊತ್ತೇ ಪಯಣಿಸುತ್ತಿರುತ್ತದೆ. ಹೀಗಿದ್ದೂ ನಾವು ನಮ್ಮ ಬದುಕಿನ ಕಾಲ Wಟ್ಟದಲ್ಲಿ ಸಾವನ್ನು ಗಂಭೀರವಾಗಿ ತೆಗೆದುಕೊಂಡೇ ಇರುವುದಿಲ್ಲ. ಇನ್ನು ಅನೇಕ ವರ್ಷಗಳ ಬದುಕು ನಮ್ಮ ಮುಂದಿದೆ ಎಂಬ ನಂಬಿಕೆಯಿಂದಲೇ ನಮ್ಮ ನಿತ್ಯದ ವ್ಯವಹಾರ ನಡೆಯುತ್ತ ಇರುತ್ತದೆ. ಆದರೆ ಅನಂತಮೂರ್ತಿ ಅವರ ಎದುರಿಗಿದ್ದ ಸಂಗತಿಗಳೇ ಭಿನ್ನ. ಅವರ ಆರೋಗ್ಯ ಎಂಥ ಸ್ಥಿತಿಯಲ್ಲಿತ್ತೆಂದರೆ ನಿತ್ಯವೂ ಅವರಿಗೆ ಸಾವಿನ ದರ್ಶನ ಆಗುತ್ತಲೇ ಇತ್ತು. ಇಂಥ ಸಂದರ್ಭದಲ್ಲಿಯೂ ಅವರು ಸಾವಿನ ಭಯವನ್ನು ಬದಿಗೆ ಸರಿಸಿ ಬದುಕಿನ ಪ್ರಶ್ನೆಗಳನ್ನು ತೀವ್ರವಾಗಿ ಎದುರಿಸಿ ಉತ್ತರ ಹುಡುಕಲು ನೋಡಿದರು. ಹೇಡಿಯ ಶರಣಾಗತ ಭಾವ ಅಲ್ಲಿ ನುಸುಳಿರಲಿಲ್ಲ ಎಂಬುದನ್ನು ಈ ಕೃತಿಯ ಓದು ನಮಗೆ ತಿಳಿಸುತ್ತದೆ.

ಉತ್ಕಟವಾದ ಚಿಂತನೆ, ತೀವ್ರ ಭಾವನೆಗಳು, ಹರಿತವಾದ ವಿಶ್ಲೇಷಣೆ, ದಿಟ್ಟವಾದ ನಿಲುವು ಈ ಕೃತಿಯ ಉದ್ದಕ್ಕೂ ಕಾಣಿಸುತ್ತವೆ. ಹರಳುಗಟ್ಟಿದ ಚಿಂತನೆ, ಕಾವ್ಯದ ಸಂವೇದನೆಗಳೂ ಈ ಕೃತಿಯ ಪ್ರಭೆಯನ್ನು ಹೆಚ್ಚಿಸಿವೆ. ಅನಂತಮೂರ್ತಿ ಅವರ ಈ ಚಿಂತನೆಯಲ್ಲಿ ಸಾವಧಾನವಿದೆ; ಸಂಯಮವಿದೆ; ತನ್ನ ಎದುರಾಳಿಯನ್ನೂ ಗೌರವಿಸುವ, ಅವನ ಗುಣಾವಗುಣಗಳನ್ನು ವಿಶ್ಲೇಷಣೆಗೆ ಒಡ್ಡುವ ಉದಾರತೆಯೂ ಇಲ್ಲಿದೆ. ಸಮತೋಲನವನ್ನು ಕಳೆದುಕೊಳ್ಳದ ಸಮಚಿತ್ತವೂ ಇಲ್ಲಿರುವುದರಿಂದ ಪೂರ್ವಗ್ರಹಗಳಿಲ್ಲದೆ ನೋಡುವ, ಗ್ರಹಿಸುವ, ವಿಶ್ಲೇಷಿಸುವ ಮನೋಧರ್ಮ ಇಲ್ಲಿ ಕ್ರಿಯಾಶೀಲವಾಗಿದೆ.

ಸಾವಿಗೆ ಎದುರಾಗಿ ನಿಂತ ಹೊತ್ತಿನಲ್ಲಿಯೇ ಅನಂತಮೂರ್ತಿ ಅವರು ಎರಡು ಮುಖ್ಯ ವ್ಯಕ್ತಿತ್ವಗಳಿಗೆ ಎದುರಾಗುತ್ತಾರೆ. ಒಬ್ಬರು ಸಾವರ್ಕರ್, ಇನ್ನೊಬ್ಬರು ಮಹಾತ್ಮಾ ಗಾಂಧಿ. ಇವರು ವ್ಯಕ್ತಿಗಳು ಮಾತ್ರವಲ್ಲ, ಎರಡು ಚಿಂತನೆಯ ಮಾರ್ಗಗಳೂ ಹೌದು. ಒಂದು ಮಾರ್ಗ ಅನಂತಮೂರ್ತಿಯವರು ಒಪ್ಪುವ, ಮೆಚ್ಚುವ ಮಾರ್ಗ; ಇನ್ನೊಂದು ಅವರು ತೀವ್ರವಾಗಿ ವಿರೋಧಿಸುವ, ಕಟುವಾಗಿ ಟೀಕಿಸುವ ಮಾರ್ಗ. ಒಂದರ ತಳಹದಿ ವಿಶಾಲ ವಿಶ್ವವನ್ನು, ಮನುಕುಲವನ್ನು ವ್ಯಾಪಿಸುವಂಥದ್ದು; ಪ್ರೀತಿ ಮತ್ತು ಶಾಂತಿಗಳ ಆಧಾರದ ಮೇಲೆ ಮನುಕುಲದ ಪ್ರಗತಿಯನ್ನು (ಡೆವಲಪ್ಮೆಂಟ್) ಬಯಸುವಂಥದ್ದು. ಇನ್ನೊಂದು ಮಾರ್ಗ ಸಂಕುಚಿತ ದೃಷ್ಟಿಯದು; ದ್ವೇಷವನ್ನು ಬಿತ್ತುವಂಥದ್ದು; ಅಷ್ಟೇ ಅಲ್ಲ, ಮನುಷ್ಯ ಮನುಷ್ಯನನ್ನು ಕೊಲ್ಲಲ್ಲು ಪ್ರೇರೇಪಿಸುವಂಥದ್ದು.

ಗಾಂಧೀ ಸತ್ಯವನ್ನೇ ದೇವರೆಂದು ಭಾವಿಸಿದವರು. ಸತ್ಯದ ಪ್ರತಿಪಾದನೆಗಾಗಿ ತಮ್ಮ ಇಡೀ ಜೀವನವನ್ನೇ ಒಂದು ಪ್ರಯೋಗವಾಗಿ ಮಾಡಿದವರು. ವಿಶ್ವದಲ್ಲಿಯೇ ದೊಡ್ಡ ಚೈತನ್ಯವಾಗಿ ಶಾಂತಿ ಮತ್ತು ಅಹಿಂಸೆಯ ಮಾರ್ಗವಾಗಿ ಇವತ್ತಿಗೂ ಉಳಿದುಕೊಂಡವರು. ಗಾಂಧೀಜಿಯವರ ಚಿಂತನೆಯಿಂದ ಅನಂತಮೂರ್ತಿ ಗಾಢವಾಗಿ ಪ್ರಭಾವಿತರಾದವರು. ಲೋಹಿಯಾ ಮತ್ತು ಗಾಂಧೀ, ಅನಂತಮೂರ್ತಿಯರನ್ನು ಇಡಿಯಾಗಿ ಆವರಿಸಿದ ವ್ಯಕ್ತಿಗಳು. ಸಾವರ್ಕರ್ ತಮ್ಮ ಮಾರ್ಗಕ್ಕೆ ಧರ್ಮದ ಹೆಸರನ್ನು ಅಂಟಿಸಿದರೂ, ಧಾರ್ಮಿಕ ಶ್ರದ್ಧೆಯೇ ಇಲ್ಲದ, ಧರ್ಮದ ಮೂಲವಾದ ದಯೆಯನ್ನು ನಿರಾಕರಿಸಿದ, ಪ್ರೀತಿಯನ್ನು ತ್ಯಜಿಸಿ ದ್ವೇಷವನ್ನು ಬಿತ್ತುವ, ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಮಾರ್ಗ. ತಾನು ನಂಬುವ ಮೌಲ್ಯಗಳಿಗೆ ತೀರ ವಿರುದ್ಧ ಎನ್ನಿಸುವ ಮೌಲ್ಯಗಳನ್ನು, ಮಾರ್ಗವನ್ನು ನಿರ್ದೇಶಿಸುವ ಸಾವರ್ಕರ್ ಅವರನ್ನು, ಅವರ ವಿಚಾರಧಾರೆಯನ್ನು ಅತ್ಯಂತ ತಾಳ್ಮೆಯಿಂದ, ನೋಡುತ್ತಲೇ ಅದರ ಸ್ವರೂಪವನ್ನು ಬಯಲುಮಾಡುವ ದಿಟ್ಟ ಪ್ರಯತ್ನವನ್ನು ಈ ಕೃತಿಯಲ್ಲಿ ಅನಂತಮೂರ್ತಿ ಮಾಡಿದ್ದಾರೆ; ಯಶಸ್ವಿಯಾಗಿಯೇ ಮಾಡಿದ್ದಾರೆ.

ಧಾರ್ಮಿಕ ಶ್ರದ್ಧೆಯೇ ಇಲ್ಲದ, ಆದರೆ ಹಿಂದೂರಾಷ್ಟ್ರದ ಪರಿಕಲ್ಪನೆಯನ್ನೇ ಧಾರ್ಮಿಕ ಶ್ರದ್ಧೆ ಎನ್ನುವಂತೆ ನಂಬಿಸಲು ಯತ್ನಿಸುವ ಸಾವರ್ಕರ್ ವಿಚಾರಧಾರೆ ಹೇಗೆ ಇವತ್ತಿನ ಪ್ರಧಾನಿ ನರೇಂದ್ರ ಮೋದಿ ಅವರ ಕಡೆವಲಪ್ಮೆಂಟ್ಕಿ ಸಿದ್ಧಾಂತಕ್ಕೆ ಭಿತ್ತಿಯನ್ನು ಒದಗಿಸುತ್ತದೆ ಎಂಬುದನ್ನು ಅನಂತಮೂರ್ತಿ ಅನೇಕ ವಾಸ್ತವ ಸಂಗತಿಗಳ ಮೂಲಕ ತೋರಿಸಿಕೊಡುತ್ತಾರೆ. ತೀವ್ರಗಾಮಿತ್ವದ ಸಾವರ್ಕರ್ ಭಾರತವನ್ನು ಒಂದು ರಾಷ್ಟ್ರವಾಗಿ, 'ಪುಣ್ಯಭೂಮಿಕ'ಯಾಗಿ ನೋಡುವ ಕ್ರಮವೇ ಅತ್ಯಂತ ಸಂಕುಚಿತ ಮನೋಭಾವದ್ದು, ಅಷ್ಟೇ ಅಲ್ಲ ಮನುಕುಲಕ್ಕೆ ಮಾರಕವಾದದ್ದು. ”ಪುಣ್ಯಭೂಮಿ' ಎನ್ನುವುದು ಭಾರತ ಮಾತ್ರವೇ ಆಗಬೇಕಾಗಿಲ್ಲ, ದೇವರ ದೃಷ್ಟಿಯಿಂದ ಜಗತ್ತಿನ ಯಾವ 'ಭೂಮಿ'ಯೂ 'ಪುಣ್ಯಭೂಮಿ'ಯಾಗಬಹುದು. ಅತ್ಯಂತ ಸುಂದರವಾದ ಕಾಶ್ಮೀರವೂ ಕೊಳಕು ಭೂಮಿಯಾಗಿರುವ ವಾಸ್ತವವನ್ನು ಗ್ರಹಿಸಬಲ್ಲ ಸೂಕ್ಷ್ಮತೆ ಮತ್ತು ವೈಚಾರಿಕ ಸ್ಪಷ್ಟತೆ ಇದ್ದ ಗಾಂಧೀಜಿ ಹೇಗೆ ಸಾವರ್ಕರ್ಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂಬುದನ್ನು ಅನಂತಮೂರ್ತಿ ಅವರು ತಮ್ಮ ಗ್ರಹಿಕೆಯ ಸೂಕ್ಷ್ಮ ಮತ್ತು ವಿಶ್ಲೇಷಣೆಯ ಬೆಳಕಿನಲ್ಲಿ ಕಾಣಿಸುತ್ತಾರೆ.

ಮಂದಗಾಮಿಯಂತೆ ಕಾಣಿಸುವ ಗಾಂಧಿ, ಭಾರತವನ್ನು ಬ್ರಿಟಿಷರ ಹಿಡಿತದಿಂದ ಬಿಡಿಸುವ ಚೌಕಟ್ಟಿನ ಆಚೆಗೂ ನೋಡಬಲ್ಲವರಾಗಿದ್ದರು; ಆಧುನಿಕ ನಾಗರಿಕತೆಯ ಮೋಹಕ್ಕೆ ಸಿಕ್ಕು ವಿನಾಶದತ್ತ  ಹೊರಟಿದ್ದ ಐರೋಪ್ಯ ರಾಷ್ಟ್ರಗಳ ದುಃಸ್ಥಿತಿಗೂ ಮರುಗಬಲ್ಲ ಮಾನವೀಯ ಮಿಡಿತ ಉಳಿಸಿಕೊಂಡವರಾಗಿದ್ದ ಗಾಂಧಿ, ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ, ಮನುಕುಲಕ್ಕೆ ಸಲ್ಲಬಲ್ಲ ಮಹಾನ್ ಚೇತನವಾಗಿದ್ದರು. ಹೀಗೆ ಒಬ್ಬರ ಪಕ್ಕ ಮತ್ತೊಬ್ಬರನ್ನು ನಿಲ್ಲಿಸಿ ಯಾರು ಹೆಚ್ಚು ಎತ್ತರ ಎಂದು ಹೇಳದೆ, ಅದನ್ನು ತೋರಿಸುವ, ಮನಗಾಣಿಸುವ ಸಂಯಮ ಈ ಕೃತಿಯ ಉದ್ದಕ್ಕೂ ಕಂಡುಬರುತ್ತದೆ.

ಇಡೀ ಕೃತಿಯಲ್ಲಿ ಸಾವರ್ಕರ್ ಬಿಚ್ಚಿಕೊಳ್ಳುತ್ತಾ ಹೋದಂತೆ ಗಾಂಧೀ ಬೆಳೆಯುತ್ತಾ ಹೋಗುತ್ತಾರೆ. ಇಕ್ಕಟ್ಟು ಗಲ್ಲಿಗಳಲ್ಲಿ ಸಾವರ್ಕರ್ ನಡೆಯುತ್ತಿದ್ದಾರೆಂದು ನಮಗೆ ತಿಳಿಯುತ್ತಿರುವಂತೆಯೇ, ಗಾಂಧೀ ಮಾರ್ಗ ಎನ್ನುವುದು ಎಷ್ಟು ವಿಸ್ತಾರವಾದದ್ದು, ವಿಶಾಲವಾದದ್ದು, ಎಷ್ಟು ತೆರೆದದ್ದು, ಎಷ್ಟು ಮುಕ್ತವಾದದ್ದು, ಮನುಕುಲದ ಮುನ್ನಡೆಗೆ ಎಷ್ಟು ಹಿತವಾದದ್ದು ಮತ್ತು ಸುರಕ್ಷಿತವಾದದ್ದು ಎಂಬ ಸತ್ಯ ಹೊಳೆಯುತ್ತಾ ಹೋಗುತ್ತದೆ. ಅನಂತಮೂರ್ತಿ ಅವರು ಇಲ್ಲಿ ವಕೀಲನಂತೆ ವಾದಿಸುವುದಿಲ್ಲ. ವಾದ-ಪ್ರತಿವಾದಗಳ ಮಂಡನೆ ಇದ್ದರೂ ಇಲ್ಲಿ ಅನಂತಮೂರ್ತಿ ಅವರು ತಮ್ಮ ವಾದಕ್ಕೆ ಅಂಟಿಕೊಂಡ ವಕೀಲನಂತೆ ಕಾಣಿಸುವುದಿಲ್ಲ. ಸತ್ಯ ಯಾವುದು, ಧರ್ಮ ಯಾವುದು, ಧರ್ಮಶ್ರದ್ಧೆ ಎಂದರೆ ಏನು, ಮಾತೃಭೂಮಿ ಯಾವುದು, ಪುಣ್ಯಭೂಮಿ ಯಾವುದು ಎಂಬುದನ್ನು ತೋರಿಸುತ್ತಾ ಆಯ್ಕೆಯನ್ನು ನಮಗೇ ಬಿಡುತ್ತಾರೆ.

ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇಲ್ಲಿ ನಮಗೆ ಮುಖ್ಯ ಎನ್ನಿಸುವುದಿಲ್ಲ. ಅವನು ಕಾಣಿಸಿದರೂ ಅವನ ಮುಖ ಮರೆಯಾಗಿಯೇ ಇರುತ್ತದೆ. ಗೋಡ್ಸೆಯ ಹಿಂದಿದ್ದ ಸಾವರ್ಕರ್ ಅವರೇ ಎದ್ದು ಕಾಣಿಸುತ್ತಾರೆ; ಸಾವರ್ಕರ್ ವಿಚಾರಗಳು ಕಣ್ಣು ಕುಕ್ಕುತ್ತವೆ. ಗೋಡ್ಸೆ ಗಾಂಧಿಗೆ ಹೊಡೆದದ್ದು ಮೂರೇ ಮೂರು ಗುಂಡುಗಳು. ಸಾವರ್ಕರ್ ಹೊಡೆದ ಗುಂಡುಗಳೆಷ್ಟು, ಅವರು ಬಲಿಗೊಂಡವರ ಸಂಖ್ಯೆ ಎಷ್ಟು, ಈಗಲೂ ಬಲಿಗೊಳ್ಳುತ್ತಿರುವವರ ಸಂಖ್ಯ ಎಷ್ಟು ಎಂಬ ಭಯಾನಕ ಚಿತ್ರ ಈ ಕೃತಿಯಲ್ಲಿ ಢಾಳಾಗಿ ಕಾಣಿಸುತ್ತದೆ. ಒಬ್ಬ ಸಮಾಜವಾದಿ ಚಿಂತಕ ಹೀಗಲ್ಲದೆ ಬೇರೆ ದಿಕ್ಕಿನಿಂದ ಸಾವರ್ಕರ್ ಅವರನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸುವಂತೆ ಈ ಕೃತಿ ರೂಪಗೊಂಡಿದೆ.

ಪುಣ್ಯಭೂಮಿ ಎಂದು ಭಾವುಕ ಶ್ರದ್ಧೆಯಿಂದ ಕರೆಯುವ ಹುನ್ನಾರದಲ್ಲಿಯೇ ಹಲವು ಧರ್ಮಗಳನ್ನು, ಹಲವು ಭಾಷೆಗಳನ್ನು, ಹಲವು ಸಂಸ್ಕೃತಿಗಳನ್ನು ನಿರಾಕರಿಸುವ, ಮನಾಪಲಿಯನ್ನು ಹೇರುವ ಫ್ಯಾಸಿಸ್ಟ್ ಚಿಂತನೆಯೇ ಸಾವರ್ಕರ್ ಚಿಂತನೆ. ಈ ಚಿಂತನೆ ಹಿಟ್ಲರ್, ನೆಪೋಲಿಯನ್, ಸ್ಟಾಲಿನ್ ಚಿಂತನೆಗೆ ಹತ್ತಿರವಾದದ್ದು. ಅಥವಾ ಅಂಥ ಚಿಂತನೆಯ ಒಡಲಲ್ಲೇ ಹುಟ್ಟಿಕೊಂಡದ್ದು. ಇವತ್ತು ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳು ಜಗತ್ತಿನ ಮೇಲೆ ಹೇರಲು ನೋಡುತ್ತಿರುವ ಮನಾಪಲಿಯ ಸ್ವರೂಪವೂ ಇದೇ. ಇದೆಷ್ಟು ಅಪಾಯಕರವಾದದ್ದು ಎಂಬುದು ನಮಗೆಲ್ಲ ಗೊತ್ತು. ಸಾವರ್ಕರ್ ಈ ವಿಷವೃಕ್ಷದ ಒಂದು ಕೊಂಬೆಯಾಗಿದ್ದರು; ಇದು ವಿಷವೃಕ್ಷ, ಮನುಕುಲದ ಸರ್ವನಾಶಕ್ಕೆ ಕಾರಣವಾಗಬಲ್ಲದು ಎಂಬ ಸತ್ಯವನ್ನು ತಿಳಿಯಬಲ್ಲ ಸೂಕ್ಷ್ಮಜ್ಞರಾಗಿದ್ದ ಗಾಂಧೀಜಿ, ಇದನ್ನು ವಿರೋಧಿಸುವ ದಿಟ್ಟತನ್ನವನ್ನು ತೋರಬಲ್ಲ ಧೀರರೂ ಆಗಿದ್ದರು.

ಈ ಕೃತಿಯಲ್ಲಿ ಒಂದು ಮುಖ್ಯ ಅಧ್ಯಾಯವಿದೆ. ಅದು ನಾಥೂರಾಮ್ ಗೋಡ್ಸೆಯ ಅಂತರಂಗವನ್ನು ತೆರೆದಿಡುವ ಅಧ್ಯಾಯ. ತಾನು ಗಾಂಧಿಯನ್ನು ಏಕೆ ಕೊಂದೆ ಎಂದು ಹೇಳುವ ಅಧ್ಯಾಯ. ನ್ಯಾಯಾಲಯದಲ್ಲಿ ನಿಂತು ಸತತವಾಗಿ ಐದು ಗಂಟೆಗಳ ಕಾಲ ತನ್ನ ನಿಲುವನ್ನು ಸಮyðಸಿಕೊಂಡ ಹೇಳಿಕೆ ಇದು. 90 ಪುಟಗಳ ಈ ಹೇಳಿಕೆಯನ್ನು ಗೋಡ್ಸೆ ಬರೆದು ತಂದು ಓದಿದ. ಫ್ಯಾಸಿಸ್ಟ್ ಮನಸ್ಸನ್ನು, ಗೋಡ್ಸೆ ಅಥವಾ ಸಾವರ್ಕರ್ ಚಿಂತನೆಯ ಎಳೆಗಳನ್ನು ಸ್ಪಷ್ಟವಾಗಿ ಕಂಡುಕೊಳ್ಳುವಲ್ಲಿ ಈ ಹೇಳಿಕೆ ಬಹಳ ಮಹತ್ವದ್ದು. ಗೋಡ್ಸೆಯ ಕೌಟುಂಬಿಕ ಹಿನ್ನೆಲೆ, ಧಾರ್ಮಿಕ ಶ್ರದ್ಧೆ, ಅವನನ್ನು ಪ್ರಭಾವಿಸಿದ ವ್ಯಕ್ತಿಗಳು, ಅವನು ಕಟ್ಟಿಕೊಂಡ ಚಿಂತನೆಯ ಸ್ವರೂಪ ಎಲ್ಲವೂ ಇಲ್ಲಿ ಬಯಲಾಗುತ್ತದೆ. ಅವನು 'ಹಿಂದೂಧರ್ಮ', 'ಅಧ್ಯಾತ್ಮ' ಮತ್ತು 'ದೇಶಪ್ರೇಮ' ಹೇಗೆ ಹಿಟ್ಲರ್ ಚಿಂತನೆಗೆ ಹತ್ತಿರವಾಗಿದ್ದವು ಎಂಬುದು ಇಲ್ಲಿ ಕಾಣುತ್ತದೆ. ಹಿಟ್ಲರ್ನ ಜನಾಂಗ ದ್ವೇಷ ಹಿಂಸೆಯನ್ನು, ಕ್ರೌರ್ಯವನ್ನು, ಅಮಾನವೀಯ ನಡವಳಿಕೆಯನ್ನು ಮಾನ್ಯಮಾಡಿದಂತೆ ಸಾವರ್ಕರ್ ಹಿಂದುತ್ವ ಕೂಡಾ ಇದೇ ದಾರಿಯ ನಡೆಯಾಗಿತ್ತು ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಮನುಕುಲವನ್ನು, ಸತ್ಯ-ಅಹಿಂಸೆಗಳನ್ನು ಪ್ರೀತಿಸಿದ ಗಾಂಧಿಯನ್ನು ದ್ವೇಷಿಸುವುದು ಗೋಡ್ಸೆಗೆ ಅನಿವಾರ್ಯವಾಗಿತ್ತು; ಅಷ್ಟೇ ಅಲ್ಲ, ಗಾಂಧಿ ಗೆಲ್ಲುತ್ತ ಹೋಗುವುದನ್ನು ಸಹಿಸಲಾಗದೆ ಅವರಿಗೆ ಗುಂಡಿಕ್ಕುವುದೂ ಅಷ್ಟೇ ಅನಿವಾರ್ಯವಾಗಿತ್ತು.

ಸಾವರ್ಕರ್ ಚಿಂತನೆಯನ್ನು, ಗೋಡ್ಸೆಯ ಮನೋಧರ್ಮವನ್ನು 'ಹಿಂದುತ್ವವನ್ನು' ಆರಾಧಿಸುವವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆಯೇ? ಹಾಗೆ ಕಾಣುವುದಿಲ್ಲ. 'ಹಿಂದುತ್ವ' ಎನ್ನುವುದು ಒಂದು ಮೌಢ್ಯದಂತೆಯೇ ಇವರನ್ನೆಲ್ಲ ಆವರಿಸುತ್ತಾ ಹೋಗಿರಬಹುದು ಎಂದೂ ಅನ್ನಿಸುತ್ತದೆ. ಗಾಂಧಿಯ ಒಳಸತ್ವವನ್ನು ಅರಿಯುವ ಪ್ರಯತ್ನದಲ್ಲಿ ಅನಂತಮೂರ್ತಿ ಅವರು ಸಾವರ್ಕರ್, ಗೋಡ್ಸೆ, ಫ್ಯಾಸಿಸ್ಟ್ ಚರಿತ್ರೆ ಎಲ್ಲವನ್ನೂ ವಿವರಗಳಲ್ಲಿ ಹಿಡಿದಿದ್ದಾರೆ; ಸರಿಯಾಗಿ ವಿಶ್ಲೇಷಿಸಿದ್ದಾರೆ. ಅನಂತಮೂರ್ತಿಯವರ ಚಿಂತನೆಯಲ್ಲಿ ಈ ಕೃತಿ ಬಹಳ ಮುಖ್ಯವಾದದ್ದು. ಬಿರುಗಾಳಿಯನ್ನೇ ಎಬ್ಬಿಸುವಂಥದ್ದು.

ಜಿ.ಪಿ.ಬಸವರಾಜು

94800 57580

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...