Wednesday, November 26, 2014

ಅಪಸ್ವರದ ಈಶ್ವರಪ್ಪ ಮತ್ತು ಜಾತಿ ಗಣತಿ ಅನಿವಾರ್ಯತೆ


ವಾರ್ತಾಭಾರತಿ ಸಂಪಾದಕೀಯ

ತನ್ನ ಹರಕು ಬಾಯಿಯ ಮೂಲಕ ಸದಾ ಸುದ್ದಿಯಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಇದೀಗ ಇನ್ನೊಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ, ಇಡೀ ಹಿಂದುಳಿದ, ದುರ್ಬಲ ಜಾತಿಗಳಿಗೆ ದ್ರೋಹ ಎಸಗಲು ಮುಂದಾಗಿದ್ದಾರೆ. ‘ಜಾತಿ ಗಣತಿಯಿಂದ ಹಿಂದೂ ಧರ್ಮಕ್ಕೆ ಧಕ್ಕೆಯಿದೆ. ಅದನ್ನು ಕೈಬಿಡಿ’ ಎಂಬ ಹೇಳಿಕೆಯನ್ನು ನೀಡಿ ಆರೆಸ್ಸೆಸ್ಸನ್ನು ಮೆಚ್ಚಿಸುವ ಭರದಲ್ಲಿ ತನ್ನದೇ ಕುರುಬ ಸಮುದಾಯದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಅಭಿವೃದ್ಧಿಯ ಸವಲತ್ತುಗಳು ಹಿಂದುಳಿದ ಜಾತಿಗಳ ಎಲ್ಲ ವರ್ಗಗಳಿಗೂ ಸಲ್ಲಬೇಕು. ಅವು ದುರುಪಯೋಗವಾಗಬಾರದು. ಈ ನಿಟ್ಟಿನಲ್ಲಿ ಜಾತಿ ಗಣತಿ ಅತ್ಯಗತ್ಯ ಎನ್ನುವುದನ್ನು ಮನಗಂಡು ಕೋಟ್ಯಂತರ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕವನ್ನು ಈ ಯೋಜನೆಗೆ ಮಾದರಿ ರಾಜ್ಯವಾಗಿ ಆಯ್ಕೆ ಮಾಡಲಾಗಿದೆ. ಎಂದೋ ನಡೆಯಬೇಕಾಗಿದ್ದ ಈ ಗಣತಿ ಇದೀಗ ಡಿಸೆಂಬರ್ ಅಂತ್ಯದ ಹೊತ್ತಿನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗಿರುವ ಸಂದರ್ಭದಲ್ಲಿ ಹಿಂದುಳಿದ, ಶೋಷಿತ ಸಮುದಾಯಕ್ಕೆ ಸೇರಿದ ನಾಯಕ ಈಶ್ವರಪ್ಪ, ಜಾತಿ ಗಣತಿಯ ಬಗ್ಗೆ ಅಪಸ್ವರ ಎತ್ತಿ, ಮೇಲ್ವರ್ಗದ ಜನರ ಕೃಪೆಗೆ ಪಾತ್ರರಾಗಲು ಹೊರಟಿದ್ದಾರೆ. ತನ್ನ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಇಡೀ ಸಮುದಾಯದ ಲಾಭವನ್ನು ಬಲಿ ಕೊಡಲು ಹೊರಟಿದ್ದಾರೆ ಈಶ್ವರಪ್ಪ. ಇದೊಂದು ರೀತಿಯಲ್ಲಿ, ಉಂಡ ಮನೆಗೆ ದ್ರೋಹವೆಸಗಿದಂತೆಯೇ ಸರಿ.


 ಮೀಸಲಾತಿ ತನ್ನ ಗುರಿಯನ್ನು ಸಾಧಿಸಿಕೊಳ್ಳುವಲ್ಲಿ ವಿಫಲವಾಗಲು ಬಹು ಮುಖ್ಯ ಕಾರಣ, ಜಾತಿಯ ಕುರಿತಂತೆ ಒಂದು ಸ್ಪಷ್ಟ ಗಣತಿ ಇನ್ನೂ ನಮ್ಮಲ್ಲಿ ಇಲ್ಲದೆ ಇರುವುದು. 1930ರಲ್ಲಿ ಬ್ರಿಟಿಷರ ಅವಧಿಯಲ್ಲಿ ಈ ದೇಶದ ವಿವಿಧ ಜಾತಿಗಳನ್ನು ಗುರುತಿಸಿ, ಪಟ್ಟಿಯಲ್ಲಿ ಸೇರಿಸಲಾಯಿತು. ಅಂದಿನಿಂದ ಇಂದಿನವರೆಗೆ ಇನ್ನೊಂದು ಗಣತಿ ಈ ದೇಶದಲ್ಲಿ ನಡೆದಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಇಂದಿಗೂ ನಾವು ಜಾತಿಗಳನ್ನು ಗುರುತಿಸಲು ಅಂದಿನ ಗಣತಿಯ ಸರಾಸರಿಯನ್ನು ಬಳಸುತ್ತೇವೆ. ಈ ಹಿಂದೆ, ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಪ್ರಸ್ತಾಪಿಸಿದಾಗ ಸುಪ್ರೀಂ ಕೋರ್ಟ್ ಇದನ್ನೇ ತೊಡಕಾಗಿ ಭಾವಿಸಿತ್ತು. ಮೊತ್ತ ಮೊದಲು ಫಲಾನುಭವಿಗಳನ್ನು ಸ್ಪಷ್ಟವಾಗಿ ಗುರುತಿಸುವ ಕೆಲಸವನ್ನು ಮಾಡಿ ಎಂದು ಸುಪ್ರೀಂ ಆದೇಶಿಸಿದಾಗ, ಮೀಸಲಾತಿ ವಿರೋಧಿಗಳು ಅದನ್ನು ತಮ್ಮ ವಿಜಯವೆಂದು ಆಚರಿಸಿದರು. ಸುಪ್ರೀಂಕೋರ್ಟ್ ಹೇಳಿದುದರಲ್ಲಿಯೂ ಅರ್ಥವಿತ್ತು. ಸ್ವಾತಂತ್ರ ಸಿಕ್ಕಿ ಈವರೆಗೆ ಒಮ್ಮೆಯೂ ಜಾತಿ ಜನಗಣತಿಯನ್ನು ಮಾಡಲು ನಮಗೆ ಸಾಧ್ಯವಾಗಿಲ್ಲ ಎನ್ನುವುದು ಆಡಳಿತದ ದೊಡ್ಡ ಸೋಲೇ ಸರಿ. ಜಾತಿ ಭಾರತದ ವಾಸ್ತವ. ಇಲ್ಲಿ ಓರ್ವನ ಪ್ರಗತಿಯ ಮೇಲೆ ಆತನ ಜಾತಿ ತನ್ನ ಪ್ರಭಾವವನ್ನು ಬೀರಿಯೇ ಬೀರಿರುತ್ತದೆ. ಈ ಹಿನ್ನೆಲೆಯಲ್ಲಿ, ಜಾತಿಯ ಗಣತಿಯೆಂದರೆ ಪರೋಕ್ಷವಾಗಿ ಅದು ಈ ದೇಶದ ಆರ್ಥಿಕ ಅಸಮಾನತೆಯ ಅಧ್ಯಯನವೆಂದೇ ಅರ್ಥ. ಜಾತಿಯನ್ನು ನಾವು ಸರಿಯಾಗಿ ಗುರುತಿಸಿ, ಅವರ ಪ್ರಗತಿಯ ಕುರಿತಂತೆ ಮರು ಸಮೀಕ್ಷೆ ನಡೆಸದೆ ಇದ್ದರೆ, ಯಾವ ಯೋಜನೆಯೂ ಅರ್ಹ ಫಲಾನುಭವಿಗಳನ್ನು ತಲುಪಲಾರದು. ಇಂದಿಗೂ ಹೆಚ್ಚಿನ ಯೋಜನೆಗಳನ್ನು ಜಾತಿಗಳ ಮೇಲ್ಪದರದಲ್ಲಿರುವ ಸಮುದಾಯಗಳೇ ಅನುಭವಿಸುತ್ತಿವೆ. ಮೀಸಲಾತಿಯಿಂದ ಅಭಿವೃದ್ಧಿಗೊಂಡವರೇ ಮತ್ತೆ ಮತ್ತೆ ಅದನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಎಷ್ಟೋ ಶೋಷಿತ ಜಾತಿಗಳು ಸ್ಪಷ್ಟ ಐಡೆಂಟಿಟಿಯನ್ನೇ ಹೊಂದಿಲ್ಲ. ಸರಕಾರದ ಯೋಜನೆಗಳು ಅರ್ಹರನ್ನು ತಲುಪಲು ಈ ಕಾರಣದಿಂದಲೇ ವಿಫಲವಾಗುತ್ತಿವೆ. ಜಾತಿ ಗಣತಿಯಿಂದ, ನಿರ್ಲಕ್ಷಕ್ಕೀಡಾಗಿರುವ ಅದೆಷ್ಟೋ ಜಾತಿಗಳು ಮತ್ತೆ ಗುರುತಿಸಲ್ಪಡುವಂತಹ ಸಾಧ್ಯತೆಯಿದೆ. 30ರ ದಶಕದ ಗಣತಿಯ ಬಳಿಕ ಈ ದೇಶದ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಭಾರೀ ಬದಲಾವಣೆಗಳು ನಡೆದಿವೆ. ಈ ನಿಟ್ಟಿನಲ್ಲಿ ಜಾತಿ ಗಣತಿ ಈ ದೇಶದ ವಾಸ್ತವವನ್ನು ನಮಗೆ ಸ್ಪಷ್ಟಪಡಿಸಲಿದೆ.


 

ಈ ದೇಶದಲ್ಲಿ ದೇವಸ್ಥಾನದಲ್ಲಿ ಊಟ ಮಾಡುವ ಸಂದರ್ಭದಲ್ಲಿ ಜಾತಿ ಪರಿಗಣಿತ ವಾಗುತ್ತದೆ. ಅರ್ಚಕ ಹುದ್ದೆಯ ಸಂದರ್ಭದಲ್ಲಿ ಜಾತಿ ಮುನ್ನೆಲೆಗೆ ಬರುತ್ತದೆ. ಮದುವೆ, ಮುಂಜಿಗಳ ಸಂದರ್ಭದಲ್ಲೂ ಜಾತಿ ಬೇಕಾ ಗುತ್ತದೆ. ಧರ್ಮ ಇಲ್ಲೆಲ್ಲೂ ಕೆಲಸ ಮಾಡುವುದಿಲ್ಲ. ಆದರೆ, ಅದನ್ನು ಅಧಿಕೃತವಾಗಿ ಗಣತಿ ಮಾಡುವುದು ಮಾತ್ರ ಬೇಡ ಅಂದರೆ ಏನು ಅರ್ಥ? ಇಷ್ಟಕ್ಕೂ ಜಾತಿ ಗಣತಿಯಿಂದ ಹಿಂದೂ ಧರ್ಮಕ್ಕೆ ಯಾವ ರೀತಿಯ ಧಕ್ಕೆಯಾಗುತ್ತದೆ ಎನ್ನುವುದನ್ನು ಈಶ್ವರಪ್ಪ ಸ್ಪಷ್ಟಪಡಿಸಬೇಕಾಗಿದೆ. ಹಿಂದೂ ಧರ್ಮ ಎಂದರೆ ಯಾರು? ಜಾತಿ ಗಣತಿಯ ಮೂಲಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದರೆ ಈ ದೇಶದ ಶೋಷಿತ ಸಮುದಾಯಗಳೆಲ್ಲ ಅಭಿವೃದ್ಧಿಯಾಗುತ್ತವೆ. ಆ ಮೂಲಕ ಹಿಂದೂ ಧರ್ಮ ಕೂಡ ಅಭಿವೃದ್ಧಿಯಾದಂತೆಯೇ ಅಲ್ಲವೇ? ಕುರುಬರು, ದಲಿತರೊಳಗಿನ ಒಳ ಜಾತಿಗಳು, ಹಿಂದುಳಿದವರ್ಗದ ಬೇರೆ ಬೇರೆ ಶೋಷಿತ ಜಾತಿಗಳು ಅಭಿವೃದ್ಧಿಯಾದರೆ ಅಂತಿಮವಾಗಿ ಈಶ್ವರಪ್ಪ ಹೇಳುವ ಧರ್ಮದ ಜನರೇ ಉದ್ಧಾರ ಆದಂತೆ ಅಲ್ಲವೇ? ಅಥವಾ ಈಶ್ವರಪ್ಪ ಹೇಳುವ ಧರ್ಮ ಬೇರೆಯದೇ ಆಗಿದೆಯೇ? ಜಾತಿ ಗಣತಿಯಿಂದ ನಷ್ಟ ಇರುವುದಿದ್ದರೆ, ಈ ದೇಶದ ಮೇಲ್ವರ್ಣೀಯ ಜನರಿಗೆ ಮಾತ್ರ. ಜೊತೆಗೆ ಮೇಲ್ಪದರಗಳಲ್ಲಿ ಕುಳಿತು ತಳ ಸ್ತರದ ಜನರ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಕೊಬ್ಬಿ ಬೆಳೆಯುತ್ತಿರುವ ಜನರಿಗೂ ಇದರಿಂದ ಸಮಸ್ಯೆಯಿದೆ. ಈಶ್ವರಪ್ಪ ಶೋಷಿತ ಸಮುದಾಯದ ಜನರ ಪರವಾಗಿ ಮಾತನಾಡುವ ಬದಲು, ಈ ಮೇರ್ಲ್ವಗದ ಜನರ ಧ್ವನಿಯಾಗಲು ಹೊರಟಿರುವುದು ಅವರ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುತ್ತದೆ. ತನ್ನ ತಕ್ಷಣದ ಲಾಭಕ್ಕಾಗಿ ಇಡೀ ಶೋಷಿತ ಸಮುದಾಯವನ್ನೇ ಬಲಿ ಕೊಡಲು ಹೊರಟಿರುವ ಈಶ್ವರಪ್ಪನವರಂತಹ ನಾಯಕರೇ ಇಂದು ಶೋಷಿತ ಸಮುದಾಯದ ಪ್ರಗತಿಗೆ ದೊಡ್ಡ ಅಡ್ಡಿಯಾಗಿದ್ದಾರೆ.


 ಜಾತಿಯೇ ಈ ದೇಶದ ವಾಸ್ತವ. ಇದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಿಂದೂ ಧರ್ಮ ಎನ್ನುವುದು ಬ್ರಾಹ್ಮಣ್ಯ ಧರ್ಮದ ಪರ್ಯಾಯ ಹೆಸರಾಗಿ ಬಳಕೆಯಾಗುತ್ತಿದೆ. ಬ್ರಾಹ್ಮಣ್ಯ ಧರ್ಮವೆಂದರೆ ಮತ್ತೆ ಅದೇ ಜಾತಿ ವ್ಯವಸ್ಥೆಯ ಕೂಪ. ಹಿಂದೂಧರ್ಮ ಎನ್ನುವುದು ಸಾವಿರಾರು ಜಾತಿಗಳ ಅಸಮಾನತೆಯ ತಳಹದಿಯ ಮೇಲೆ ನಿಂತಿರುವುದರಿಂದ, ಹಿಂದೂ ಧರ್ಮವನ್ನು ಉದ್ಧರಿಸಬೇಕಾದರೂ ಜಾತಿ ಗಣತಿ ಅತ್ಯಗತ್ಯ. ಈ ನಿಟ್ಟಿನಲ್ಲಿ, ಎಂದೋ ನಡೆಯಬೇಕಾಗಿದ್ದ ಜಾತಿ ಗಣತಿ, ಇನ್ನಾದರೂ ಆರಂಭವಾಗಬೇಕಾಗಿದೆ. ಆದರೆ, ಈ ಗಣತಿಗೆ ಕೇಂದ್ರ ಸರಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದರ ಆಧಾರದಲ್ಲಿ ಇದರ ಯಶಸ್ಸು ನಿಂತಿದೆ. 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...