Tuesday, November 18, 2014

ಕ್ಷಮಿಸಿಬಿಡಿ ಹಿರಿಯರೇ...



ಮೋಹನ ವಿ ಕೊಳ್ಳೇಗಾಲ

 
ಮಗಳನ್ನು ಅಟ್ಟಾಡಿಸಿಕೊಂಡು ಹೋಗಿ
ಸಂಭೋಗಿಸಿ
ಸುಖ ಜೀವನ ನಡೆಸಿದ
ಬ್ರಹ್ಮನ ಪೂಜಿಸುವ ದೊಡ್ಡವರೇ
ಒಮ್ಮೆ
ಈ ಲೋಕವನ್ನು ಒಪ್ಪಿಕೊಳ್ಳಿ
ಇಲ್ಲವೇ, ನಿಮ್ಮನ್ನೇ ನೀವು ಕ್ಷಮಿಸಿಕೊಳ್ಳಿ


ಎದೆ ತೆರೆದು ಅರಳಿದ ಹೂಗಳಿಗೆ
ಅನೈತಿಕ ಬೇಲಿಯೆಳೆದು
ನೈತಿಕತೆಯೆಂಬ ಬೆಂಕಿಯ ಹಚ್ಚಿದವರೇ
ಗಂಡು ಗಂಡಿಗೆ ಹುಟ್ಟಿದ ಪಿಂಡ
ಬಹುಬೇಡಿಕೆಯ ಶಬರಿಮಲೈ ಪ್ರಚಂಡ-
ನಿಗೆ ವ್ರತ ಕಟ್ಟಿ ಮೈ ದಂಡಿಸುವವರೇ
ಉಳಿದದ್ದದ್ದರೆಲ್ಲಿ ಅಸಹ್ಯವೇಕೆ?
ಒಪ್ಪಿಕೊಂಡು ಅಪ್ಪಿಕೊಳ್ಳಿ

ತಲೆ ಮೇಲೆ ಗಂಗೆ ಕೂರಿಸಿದ್ದು ಪರಮ ಪವಿತ್ರ
ತೋಳ ಪಾರ್ವತಿಯ ಮೊಗಕ್ಕೆ
ಬಣ್ಣ ಬಳಿದು
ರಾಡಿ ನೀರಿಗೆ ಶುದ್ಧ ಪರದೆ ಎಳೆದವರೇ
ಹೂವಿಂದ ಹೂವಿಗೆ ಹಾರುವ ದುಂಬಿಯ
ಕಂಡು ಆನಂದಿಸಿ
ಇಲ್ಲವೇ ನಿಮ್ಮನ್ನೇ ನೀವು ಶಪಿಸಿಕೊಳ್ಳಿ

ಹರಿಯೆಂದರೆ ಭಕ್ತಿ, ಹರನೆಂದರೆ ಮುಕ್ತಿ
ಹಂದಿಯೆಂದರೆ ಅಸಹ್ಯ
ಹಸುವೆಂದರೆ ಪೂಜ್ಯ
ನೀವು ಪೂಜಿಸುವ
ಹರಿಯೂ ಹಂದಿಯಾಗಿದ್ದ
ಹಚ್ಚಿ ಅದಕ್ಕೂ ಗಂಧ ಲೇಪ
ಇಲ್ಲವೇ ಉಪ್ಪು ಖಾರ ಸವರಿ ನೆಕ್ಕಿ
ತಿನ್ನಿ ಮುಕ್ಕಿ ಮುಕ್ಕಿ
ನನಗೆ ಕೋಳಿ ಕಾಲು ತಿನ್ನುವಾಗ
ಮೂಲಂಗಿಯ ನೆನಪು
ಮುಚ್ಚಿಟ್ಟಷ್ಟು ಕುತೂಹಲ, ಬಿಚ್ಚಿಟ್ಟಷ್ಟು ತವಕ
ಮುಚ್ಚಿಟ್ಟು ಮುಚ್ಚಿಟ್ಟು
ನೀವು ಚೆಲ್ಲಿದ ನೈತಿಕತೆಯ ವೀರ್ಯ ಹರಡಿದ
ಪಾಪಗಳು ಅಳಿಸಿ ಹೋಗಲಿ

ಉಬ್ಬಿದೆದೆ ಉಬ್ಬಿಸಿದ
ಶಿಲಾಬಾಲಕಿಯ ಕಂಡು ನರನಾಡಿ ರಕ್ತದೊಳಗೆ
ಆಸೆ ಪುಟಿಸಿಕೊಂಡು
ಅದಕ್ಕೂ ಸಂಸ್ಕೃತಿಯ
ಬಣ್ಣ ಬಳಿದವರೇ
ಹುಟ್ಟುವ ಮಗು
ಬಟ್ಟೆ ತೊಟ್ಟು ಹುಟ್ಟುವುದಿಲ್ಲವೆಂಬುದರಿಯಿರಿ
ಇಲ್ಲದಿದ್ದರೆ ವಿಷದ ಗಾಳಿ ಚೆಲ್ಲಬೇಡಿ
ಬೇಗ ಈ ಭೂಮಿಯೊಳಗೆ ತೂರಿಕೊಳ್ಳಿ

ಧರ್ಮವೆಂದರೆ ಜಗತೂಗುವ ಕರ್ಮ
ಗೆರೆಯೆಳೆದ ನಿಮ್ಮ ಮರ್ಮ-
ದಿಂದ
ಭೂಮಿಯೇ ಚೂರು
ದೇಶದ ಪಟ ಬಿಡಿಸಿದ
ಮಗುವಿನ ಕಣ್ಣಿನಲ್ಲಿ ನೀರು
ಬಿಡಿಸಿದಷ್ಟು ಬೆಂಕಿ
ಕೊನೆಯದಾಗಿ, ಎದೆ ತೆರೆದು ನಿಂತ ಹೂವಿನ
ಮಧು ಹೀರಿದ ದುಂಬಿ
ಕಟ್ಟಿದ ಜೇನು ಸಿಹಿ
ಯಾವುದೇ ಗೆರೆಯಿಲ್ಲ, ಲೋಕವೇ ಹಾಕಿದೆ ಸಹಿ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...