Wednesday, November 05, 2014

ಅತ್ಯಾಚಾರ, ಜಾತಿ ಪಿಡುಗು ನಿಲ್ಲದೆ ಭಾರತ ಏಳ್ಗೆ ಸಾಧ್ಯವೇ?

ಸುರೇಂದ್ರ ಕುಮಾರ್

ಬೆಂಗಳೂರು

ವಾರ್ತಾಭಾರತಿಅತ್ಯಾಚಾರ, ಜಾತಿ ಪಿಡುಗು ನಿಲ್ಲದೆ ಭಾರತ ಏಳ್ಗೆ ಸಾಧ್ಯವೇ?

ಇತ್ತೀಚಿನ ದಿಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚುತ್ತಿವೆ. ಅದರಲ್ಲೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳ ಕುರಿತು ಮಾಧ್ಯಮಗಳಲ್ಲಿ ದಿನನಿತ್ಯ ಸುದ್ದಿಯಾಗುತ್ತಿದೆ. ಅದು ಅತ್ಯಂತ ವಿಕೃತ ಮತ್ತು ಅನಾಗರಿಕ ಸ್ವರೂಪಗಳಿಂದ ಕೂಡಿದೆ. ಆರು ವರ್ಷದ ಮಗುವಿನಿಂದ ಹಿಡಿದು ಅರವತ್ತು ವಯಸ್ಸಿನ ವೃದ್ಧ ಮಹಿಳೆಯರವರೆಗೂ ನಡೆಯುತ್ತಿದೆ. ಜನ್ಮ ನೀಡಿದ ತಂದೆ ತನ್ನ ಮಗಳ ಮೇಲೆ ನಡೆಸುವ ಅತ್ಯಾಚಾರಗಳು,50,60 ವರ್ಷ ವಯಸ್ಸಿನ ಪುರುಷ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಆಮಿಷ ತೋರಿಸಿ ಪುಸಲಾಯಿಸಿ ನಡೆಸುವ ಅತ್ಯಾಚಾರಗಳು, ಶಾಲೆ, ಕಾಲೇಜು, ಕಂಪೆನಿಗೆ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು ಮಹಿಳೆಯರಿಗೆ ಡ್ರಾಪ್ ಕೊಡುವ ನೆಪದಲ್ಲಿ ಅಪಹರಿಸಿ ಮಾಡುವ ಬಲಾತ್ಕಾರಗಳು, ಶಾಲೆಯಲ್ಲಿ ವಿದ್ಯೆ ಕಲಿಸುವ ಉಪಾಧ್ಯಾಯರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು, ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿಯಿಂದ ಹಿಡಿದು ಮಠಾಧಿಪತಿಯವರೆಗೆ, ಮನೆಯಿಂದ ಹಿಡಿದು ಶಾಲೆ ಕಾಲೇಜುಗಳವರೆಗೂ, ಆಸ್ಪತ್ರೆಗಳಲ್ಲಿ, ರೈಲು ಬಸ್ಸುಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಕಂಪೆನಿ- ಫ್ಯಾಕ್ಟರಿ ಕಚೆೇರಿ ಹೀಗೆ ಎಲ್ಲೆಂದರಲ್ಲಿ ಮಹಿಳೆಯರ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ಲೈಂಗಿಕ ಕಿರುಕುಳಗಳು, ಕೊಲೆಗಳು ದಿನೇ ದಿನೇ ಹೆಚ್ಚುತ್ತಲೆ ಹೋಗುತ್ತಿವೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದಕ್ಕೆಲ್ಲಾ ಏನು ಕಾರಣ? ಯಾರು ಹೊಣೆ? ಸಮಸ್ಯೆಯ ಮೂಲ ಎಲ್ಲಿದೆ? ಪರಿಹಾರವೇನು? ಎಂಬುದನ್ನು ಕಂಡುಕೊಳ್ಳುವ ಅಗತ್ಯವಿದೆ.

ಈ ಘಟನೆಗಳು ಮಾನವ ಸಮಾಜವನ್ನೇ ತಲ್ಲಣಗೊಳಿಸುವ ವಿಷಯವಾಗಿದೆ. ಅಮಾನವೀಯ ಅಕ್ರಮ ಸಮಾಜದೆಡೆಗೆ ಕೊಂಡು ಹೋಗುತ್ತಿರುವ ಲಕ್ಷಣಗಳಾಗಿವೆ.ಇದು ಕೊಳಕು ನಾರುತ್ತಿರುವ ಈ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿ ಯಾಗಿದೆ. ಇದಕ್ಕೆ ಆಳುವ ಕೇಂದ್ರ, ರಾಜ್ಯ ಸರಕಾರಗಳೇ ಮುಖ್ಯ ಕಾರಣ ಮತ್ತು ಹೊಣೆ. ಅಧಿಕಾರಕ್ಕೆ ಬರುವ ಯಾವುದೇ ರಾಜಕೀಯ ಪಕ್ಷಗಳಿದ್ದರೂ ವಿದೇಶಿ ಹಣ ಗಳಿಕೆಯ ಉದ್ದೆೇಶದಿಂದ ಜನ ಸಂಸ್ಕೃತಿಯನ್ನು ನಾಶಗೊಳಿಸುವಂತಹ ವಿದೇಶಿ ಅಥವಾ ಸಾಮ್ರಾಜ್ಯಶಾಹಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ.

   ‘ಪ್ರವಾಸೋದ್ಯಮ’ ಅಂದರೆ ಪ್ರವಾಸವನ್ನು ಲಾಭದ ಉದ್ದೇಶದೊಂದಿಗೆ ಮಾಡಿದ ನಂತರದ ದಿನಗಳಲ್ಲಿ ಅದು ಆ ದೇಶದ ಜನ ಸಂಸ್ಕೃತಿಯನ್ನು ನಾಶ ಮಾಡಿ ಅದರ ಜಾಗಗಳಲ್ಲಿ ಪ್ರತಿಗಾಮಿ ಸಾಮ್ರಾಜ್ಯ ಶಾಹಿ ಸಂಸ್ಕೃತಿಯನ್ನು ನೆಲೆ ಗೊಳಿಸಿದೆ. ಸಿಂಗಾಪುರ, ಮಲೇಶಿಯಾ, ಥಾಯ್ಲೆಂಡ್‌ನಂತಹ ದೇಶಗಳು ಇಂದು ಸೆಕ್ಸ್ ಟೂರಿಸಂನ ಪರಿಣಾಮದಿಂದಾಗಿ ಆ ದೇಶಗಳು ವೇಶ್ಯಾವಾಟಿಕೆಯ ಕೇಂದ್ರಗಳಾಗಿ ಮಾರ್ಪ ಟ್ಟಿವೆ. ನಮ್ಮ ದೇಶದ ಆಳುವವರೂ ಇಂದು ಪ್ರವಾಸೋದ್ಯಮಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಆ ಮೂಲಕ ಭಾರತವನ್ನು ಮತ್ತೊಂದು ಸಿಂಗಾಪುರ, ಮಲೇಶಿಯಾ ಮಾಡಲು ಹೊರಟಿದ್ದಾರೆ. ಎರಡನೆಯದಾಗಿ ವಿದೇಶಿ ಮತ್ತು ದೇಶಿ ಬಂಡವಾಳಿಗರ ಸರಕುಗಳ ಮಾರಾಟಕ್ಕೆ ಅಥವಾ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಜಾಹೀರಾತುಗಳಲ್ಲಿ ಹರೆಯದ ಹೆಣ್ಣು ಮಕ್ಕಳನ್ನು ಅರೆನಗ್ನ -ಅಶ್ಲೀಲವಾಗಿ ಚಿತ್ರಿಸಿ ಅವರ ಸೌಂದರ್ಯವನ್ನು ಸರಕಾಗಿಸಿ ಮಾಧ್ಯಮಗಳ ಮೂಲಕ ಹಾಗೂ ಭಿತ್ತಿ ಫಲಕ, ಭಿತ್ತಿ ಪತ್ರಿಕೆಗಳ ಮೂಲಕ ಹಳ್ಳಿಯಿಂದ ನಗರಗಳವರೆಗೆ ಪ್ರಚಾರ ಮಾಡಲಾಗುತ್ತಿದೆ. ಚಲನಚಿತ್ರಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಚಿತ್ರದ ನಾಯಕಿಯರನ್ನೇ ಎಷ್ಟು ಸಾಧ್ಯವೋ ಅಷ್ಟು ಅರೆ ನಗ್ನಗೊಳಿಸಿ, ಕುಣಿಸಲಾಗುತ್ತದೆ. ಇದು ಪುಂಡ ಯವಕರನ್ನು ಆಕರ್ಷಿಸಿ ಪ್ರಚೋದಿಸುವ ದೃಶ್ಯಗಳಾಗಿವೆ ಇತ್ತೀಚೆಗೆ ಕಿರುತೆರೆಗಳ ರಿಯಾಲಿಟಿ ಶೊಗಳಲ್ಲಿ ಹುಡುಗಿಯರನ್ನು, ಮಕ್ಕಳನ್ನು ಅತ್ಯಂತ ಕೆಟ್ಟದಾಗಿ ಕುಣಿಸುತ್ತಿರುವ ದೃಶ್ಯಗಳು ಹಾಗೂ ಫ್ಯಾಶನ್ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆಯೆಂದರೆ ಕಿರುತೆರೆಯ ನಿರೂಪಕಿಯರು ಕೂಡ ಗರಿಷ್ಠ ಪ್ರಮಾಣದ ದೇಹ ಪ್ರದರ್ಶಿಸುವ ಉಡುಗೆಗಳನ್ನು ಧರಿಸಿ ಪ್ರದರ್ಶನ ನೀಡುವುದು, ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಯುವಜನರು ಸಾಮ್ರಾಜ್ಯಶಾಹಿ ಸಂಸ್ಕೃತಿಗೆ ಮಾರು ಹೋಗಿ ದೇಹ ಪ್ರದರ್ಶಿಸುವಂತಹ ಉಡುಗೆ ಧರಿಸುತ್ತಿರುವುದು ಇವೆಲ್ಲ ಪುಂಡ ಮತ್ತು ದುರ್ಬಲ ಪುರುಷರನ್ನು ಪ್ರಚೋದಿಸುತ್ತದೆ. ಮತ್ತೊಂದಡೆ ಬಡ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವುದಾಗಿ ಮತ್ತು ಮದುವೆ ಮಾಡಿಸುವುದಾಗಿ ನಂಬಿಸಿ ನಗರಗಳಿಗೆ ಕರೆತಂದು ಮಾರಾಟ ಮಾಡುವ ದಂಧೆ ಜಾಲ ದಿನೇ ದಿನೇ ಹೆಚ್ಚುತ್ತಿದೆ.; ಇವುಗಳನ್ನೆಲ್ಲ ಪತ್ತೆ ಹಚ್ಚಿ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಧಾನಿ ನರೇಂದ್ರಮೋದಿಯವರು ‘‘ಸ್ವಚ್ಛಭಾರತ’’ ಘೋಷಣೆಯೊಂದಿಗೆ ಮಂತ್ರಿಗಳು, ಎಂಪಿಗಳು ಎಂಎಲ್‌ಎಗಳ ನ್ನೊಳಗೊಂಡು ದೇಶಕ್ಕೆ ಕರೆಕೊಡುತ್ತಾರೆ.ಅದರಂತೆ ಗಾಂಧಿ ಜಯಂತಿಯ ದಿನ ಮೋದಿಯವರನ್ನೊಳಗೊಂಡು ದೇಶದಾದ್ಯಂತ ಜನಪ್ರತಿನಿಧಿಗಳು ಪೊರಕೆ ಹಿಡಿದು ಮಾಧ್ಯಮ ಗಳಿಗೆ ಪೋಸ್ ಕೊಡುತ್ತಾರೆ. ಆದರೆ ಈ ಸಮಾಜಕ್ಕೆ ಅಂಟಿಕೊಂಡಿರುವ ಅದೆಷ್ಟೊ ಅನಿಷ್ಟ ಗಳಾದ ಮಹಿಳಾ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೊಲೆಗಳು, ಆಸಿಡ್ ದಾಳಿಗಳು, ದೇವದಾಸಿ ಪದ್ಧತಿ, ಅಸ್ಪಶ್ಯತೆ, ಜಾತಿ ಶೋಷಣೆ, ಮಲಹೊರುವ ಪದ್ಧತಿ ಇತ್ಯಾದಿ ಕೊಳಕುಗಳನ್ನು ಸ್ವಚ್ಛಗೊಳಿಸದೆ ಕೊಳೆತು ನಾರುತ್ತಿರುವ ವೌಲ್ಯಗಳನ್ನು ತಲೆಗೆ ತುಂಬಿಕೊಂಡು ಸ್ವಚ್ಛಭಾರತ ನಿರ್ಮಾಣ ಅಸಾಧ್ಯ.

 ವರ್ಗವಿಭಜಿತ ಸಮಾಜದ ಉಗಮದಿಂದಲೂ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಾರ ತಮ್ಯ ಶೋಷಣೆಗೊಳಗಾಗುತ್ತಾ ಬಂದಿದ್ದಾರೆ. ಮತ್ತು ಎಲ್ಲ ರೀತಿಯ ಹಕ್ಕ್ಕುಗಳಿಂದ ವಂಚಿತರಾಗುತ್ತಾ ಬಂದಿದ್ದಾರೆ. ಹೇಯ ರೀತಿಯ ಸಂಪ್ರದಾಯಗಳು ಇಂದಿಗೂ ಮುಂದುವರಿಯುತ್ತಾ ಬಂದಿದೆ. ನಮ್ಮ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಊಳಿಗಮಾನ್ಯ -ಸಾಮ್ರಾಜ್ಯ ಶಾಹಿ ಶೋಷಣೆ ಮತ್ತು ದಮನಗಳಿಗೆ ಗುರಿಯಾಗುವುದರ ಜೊತೆಗೆ ಕುಟುಂಬ, ಜಾತಿ ವ್ಯವಸ್ಥೆ, ಆಸ್ತಿ ಸಂಬಂಧಗಳು ಮತ್ತು ಸಂಸ್ಕೃತಿಯಂತಹ ಪುರುಷಾಧಿಪತ್ಯ ಸಂಸ್ಥೆಗಳ ಮೂಲಕ ಪುರುಷ ಮೇಲಾಧಿಪತ್ಯ ಮತ್ತು ದಮನಗಳಿಗೆ ಗುರಿಯಾಗಿದ್ದಾರೆ. ಕಾನೂನು ರೀತ್ಯಾ ಮಹಿಳೆಯರಿಗೆ ಕೆಲ ಹಕ್ಕುಗಳು ಇದ್ದಾಗಲೂ ಆಚರಣೆಯಲ್ಲಿ ಇದು ಪೊಳ್ಳು ಎಂದು ರುಜುವಾತಾಗಿರುವ ಸತ್ಯ.

ಇಂದು ಮಹಿಳೆಯರು ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರಾದರೂ ಕೆಲಸದ ಸ್ಥಳಗಳಲ್ಲಿ ಅವರಿಗೆ ಎಲ್ಲಾ ರೀತಿಯ ಕಿರುಕುಳಗಳನ್ನು ನೀಡ ಲಾಗುತ್ತದೆ ಮತ್ತು ಮಹಿಳೆಯರನ್ನು ಲಿಂಗಾಧಾರಿತ ಕೆಲಸಗಳಿಗೆ ಪರಿಮಿತ ಗೊಳಿಸುತ್ತಾ ಅತಿ ಕಡಿಮೆ ಸಂಬಳ ಕೊಡಲಾಗುತ್ತದೆ. ಮುಖ್ಯವಾಗಿ ಇತ್ತೀಚಿನ ಸಾಮ್ರಾಜ್ಯಶಾಹಿ -ಜಾಗತೀಕರಣ, ಉದಾರೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮಹಿಳೆಯರ ಮೇಲೆ ಅತ್ಯಾಚಾರಗಳು, ಲೈಂಗಿಕ ಕಿರುಕುಳಗಳು ಮತ್ತು ವರದಕ್ಷಣೆ ಹಿಂಸೆ, ಕೊಲೆಗಳು ದಿನ ದಿನಕ್ಕೂ ಹೆಚ್ಚುತ್ತಾ ಹೋಗುತ್ತಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ ಹೋರಾಡುವುದರ ವಿರುದ್ಧ ಕೂಡ ಲೈಂಗಿಕ ಅತ್ಯಾಚಾರವನ್ನು ಒಂದು ಅಸ್ತ್ರವನ್ನಾಗಿ ಬಳಸಲಾಗುತ್ತದೆ.

  ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಆಳುವ ವರ್ಗಗಳು, ರಾಜಕೀಯ ಪಕ್ಷಗಳು ಸರಕಾರಗಳು ಮಹಿಳಾ ವಿರೋಧಿಯಾಗಿದೆ. ಇವುಗಳು ಮಹಿಳೆಯರಿಗೆ ನ್ಯಾಯ ಒದಗಿಸಲಾರವು. ಈ ದೇಶದಲ್ಲಿ ಮಹಿಳೆ ಯರನ್ನು ಎರಡನೆ ದರ್ಜೆ ಪ್ರಜೆಯಾಗಿ ನೋಡಲಾಗುತ್ತಿದೆ. ಕಾನೂನು ಸಹ ಶೋಷಿತರ, ಮಹಿಳೆಯರ ಪರವೂ ನಿಲ್ಲದು ಎಂಬುದನ್ನು ‘ಸ್ವತಂತ್ರ’ ಭಾರತದ 67 ವರ್ಷಗಳು ಸಾಬೀತು ಪಡಿಸಿವೆ. ಈ ದೇಶದ ಕಾನೂನು ಸಹ ಊಳಿಗಮಾನ್ಯ -ಪುರುಷಾಧಿಪತ್ಯ ಶೋಷಕ ವ್ಯವಸ್ಥೆಯನ್ನೇ ಪ್ರತಿನಿಧಿಸುತ್ತದೆ. ಅದೆಷ್ಟೋ ಸಾಮೂಹಿಕ ಅತ್ಯಾಚಾರ ನಡೆಸಿದ ಘೋರ ಅಪರಾಧಿಗಳು ಕೆಲವೇ ದಿನಗಳಲ್ಲಿ ಇಲ್ಲವೇ ತಿಂಗಳಲ್ಲಿ ಜಾಮೀನು ಪಡೆದು ಇಲ್ಲವೇ ಖುಲಾಸೆಯಾಗಿ ಹೊರಬರುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ ಕಾನೂನು ಬಲಾಢ್ಯರ ಪರವಿರುವುದಕ್ಕೆ ಒಂದೆರಡು ಉದಾಹರಣೆಗಳನ್ನು ನೋಡೋಣ. ಕಳೆದ 15-20 ವರ್ಷಗಳಲ್ಲಿ ಕರ್ನಾಟಕದ ವಿವಿಧೆಡೆ ಸಾಮಾನ್ಯ ಹಾಗೂ ಪ್ರತಿಭಾನ್ವಿತ ಮಹಿಳೆಯರ ಮೇಲೆ ಆಸಿಡ್ ದಾಳಿ ನಡೆಯಿತು. ಅತ್ಯಂತ ಕಾನೂನು ವಿರೋಧಿ, ಮಾನವವಿರೋಧಿಯಾದ ಕೃತ್ಯ ವೆಸಗಿದ ಅಪರಾಧಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಯಿತು? ಎಷ್ಟು ಅಪರಾಧಿಗಳನ್ನು ಪತ್ತೆ ಹಚ್ಚಲಾಯಿತು? ಮೊನ್ನೆ ಮೊನ್ನೆ ಕಂಬಾಲಪಲ್ಲಿ ದಲಿತ ಕುಟುಂಬಗಳ ಮಾರಣಹೋಮದ ಕುರಿತ ತೀರ್ಪು ಹೊರ ಬಂತು. ಇಡೀ ದೇಶದ ಗಮನ ಸೆಳೆದ ಅತ್ಯಂತ ಮಾನವ ವಿರೋಧಿ, ಕಾನೂನು ವಿರೋಧಿ ಕೃತ್ಯ. ದಾರುಣವಾಗಿ ಸಾಮೂಹಿಕ ಕೊಲೆ ಮಾಡಿದ ಮೇಲ್ಜಾತಿ ಬಲಾಢ್ಯ ಅಪರಾಧಿಗಳು, ನಿರಪರಾಧಿಗಳು ಎಂದು ಖುಲಾಸೆಗೊಂಡು ಕೇಸಿನಿಂದ ಹೊರಬಂದರು. ದಿನನಿತ್ಯ ನಡೆಯುತ್ತಿರುವ ವರದಕ್ಷಿಣೆ ಕೊಲೆಗಳಲ್ಲಿ ಎಷ್ಟನ್ನು ನ್ಯಾಯ ಸಮ್ಮತವಾಗಿ ನೋಡಿ ತೀರ್ಪು ನೀಡಲು ಸಾಧ್ಯವಾಗಿದೆ? ಎಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳನ್ನು ಗುರುತಿಸಿ, ಪತ್ತೆ ಹಚ್ಚಿ ಶಿಕ್ಷಿಸಲಾಗಿದೆ.? ಅದರಲ್ಲೂ ಮೇಲ್ಜಾತಿ, ಆರ್ಥಿಕವಾಗಿ ಬಲಾಢ್ಯ ಅಪರಾಧಿಗಳು ಬಹುಪಾಲು ಪ್ರಕರಣಗಳಲ್ಲಿ ಶಿಕ್ಷೆಯಿಂದ ಹೊರ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ರೀತಿಯ ಘಟನೆೆಗಳು ಕಾನೂನಿನ ಮೇಲೆ ಶೋಷಿತ, ದಲಿತ, ಮಹಿಳೆ, ಆದಿವಾಸಿಗಳು ಮತ್ತು ದುಡಿವ ಜನರಿಗೆ ಸಂಪೂರ್ಣ ವಿಶ್ವಾಸ ಕುಂದುವಂತೆ ಮಾಡಿದೆ.

ಮೊದಲನೆಯದಾಗಿ ಹೆಣ್ಣನ್ನು ಭೋಗದ ವಸ್ತುವೆಂದು ನೋಡುವ ಪುರುಷ ಪ್ರಧಾನ ವ್ಯವಸ್ಥೆ ಅಸ್ತಿತ್ವದಲ್ಲಿರುವಾಗ ಯಾರು ಎಷ್ಟು ಭಾಷಣ ಬಿಗಿದರೂ, ಪೊಲೀಸ್, ಕೋರ್ಟು, ಕಾನೂನಿನ ಮೊರೆ ಹೋದರೂ ಮಹಿಳಾ ಸಮಸ್ಯೆಗೆ, ಮಹಿಳಾ ಪ್ರಶ್ನೆಗೆ ಪರಿಹಾರ ಸಿಗಲಾರದು. ಯಾಕೆಂದರೆ ಅಡಿಪಾಯದಲ್ಲಿಯೇ ಸಮಸ್ಯೆಯಿದೆ. ಇದನ್ನು ಬುಡಸಮೇತ ಬದಲಿಸಬೇಕು. ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಅತ್ಯಾಚಾರಿ ಒಬ್ಬ ಪುರುಷನಷ್ಟೇ ಕಾರಣನಲ್ಲ. ಬದಲಿಗೆ ಈ ವ್ಯವಸ್ಥೆಯೇ ಕಾರಣವಾಗಿದೆ. ಹೆಣ್ಣನ್ನು ನೋಡುವ ದೃಷ್ಟಿಕೋನವೇ ಪುರುಷಾಧಿಪತ್ಯ ವೌಲ್ಯದಿಂದ ಕೂಡಿದೆ. ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ, ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಹೆಣ್ಣು ಮಕ್ಕಳನ್ನು ಗರಿಷ್ಠ ಪ್ರಮಾಣದಲ್ಲಿ ದೇಹ ಪ್ರದರ್ಶಿಸುವಂತೆ ಮಾಡುತ್ತಿರುವುದು ಯಾರು? ಹಣಗಳಿಕೆಯ ಉದ್ದೇಶದಿಂದ ಮಹಿಳೆಯ ದೇಹವನ್ನು ಸರಕಾಗಿಸುತ್ತಿರುವುದು ಯಾರು? ಇದೇ ಪುರುಷಪ್ರಧಾನ ವ್ಯವಸ್ಥೆಯ ಪ್ರತಿನಿಧಿಗಳು. ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಮೂಲಕ ಮಹಿಳೆಯರನ್ನು ಮೈ ಮಾರುವ ದಂಧೆಗೆ ತಳ್ಳುತ್ತಿರುವುದು ಮಹಿಳಾ ಕುಲದ ಸ್ವಾಭಿಮಾನಕ್ಕೆ ಧಕ್ಕೆ ತರುವ ಸೌಂದರ್ಯ ಸ್ಪರ್ಧೆ ನಡೆಸುತ್ತಿರುವುದು, ಒಟ್ಟಾರೆಯಾಗಿಎಲ್ಲಾ ರೀತಿಯ ಮಹಿಳಾ ವಿರೋಧಿ ಕೃತ್ಯ ನಡೆಸುತ್ತಿರುವ ಈ ವ್ಯವಸ್ಥೆಯ ಸೂತ್ರಧಾರಿಗಳು ಶೋಷಕ ಆಳುವ ವರ್ಗವೇ ಆಗಿದೆ.

ಪುರುಷ ಮೇಲಾಧಿಪತ್ಯ ವ್ಯವಸ್ಥೆಯನ್ನು ಕಿತ್ತೊಗೆಯುವ ಗುರಿಯೊಂದಿಗೆ ಬಲಿಷ್ಠ ಮಹಿಳಾ ಚಳವಳಿ ಅತ್ಯಂತ ಅಗತ್ಯವಾಗಿದೆ. ಅದಕ್ಕಾಗಿ ಎಲ್ಲಾ ಬಗೆಯ ಶೋಷಿತ ಮಹಿಳೆಯರು ಜಾತಿ ಭೇದಗಳನ್ನು ಮರೆತು ಸಂಘಟಿತರಾಗಬೇಕಿದೆ..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...