Friday, November 21, 2014

ಪ್ರಶಸ್ತಿಯ ನೆಪದಲ್ಲಿ ಒಂದಷ್ಟು ಖಾಸಗಿ ಮಾತುಶೂದ್ರ ಶ್ರಿನಿವಾಸ

ದೊಡ್ಡವರು ಯಾವಾಗಲೂ ದೊಡ್ಡವರಾಗಿಯೇ ಇರಲು ಪ್ರಯತ್ನಿಸುವರು. ಅದಕ್ಕೆ ಯಾವುದೇ ರೀತಿಯ ಧಕ್ಕೆ ಬರದಂತೆ ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಹೋಗುವರು, ಹೀಗೆ ಹೇಳುವಾಗ ಅಥವಾ ಯೋಚಿಸುವಾಗ; ಧುತ್ತನೆ ಎಷ್ಟೋ ಮಂದಿ ಮನಸ್ಸಿನ ಪರದೆಯ ಮೇಲೆ ಚಲಿಸುತ್ತಾ ಹೋಗುವರು. ಒಬ್ಬ ಲೇಖಕನಾದವನಿಗೆ, ಚಿಂತಕನಾದವನಿಗೆ ಒಟ್ಟು ಗ್ರಹಿಕೆಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಅನನ್ಯತೆ ಆಪ್ತವಾಗಿ ಬಿಡುವುದು. ಇತ್ತೀಚೆಗೆ ನಾವೆಲ್ಲಾ ಸದಾ ಗೌರವಿಸಬಹುದಾದ; ನ್ಯಾಯ ಮೂರ್ತಿ ಕೃಷ್ಣಯ್ಯರ್ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಹುಟ್ಟು ಹಬ್ಬವನ್ನು ಕೇರಳದ ಕೊಚ್ಚಿನ್‌ನಲ್ಲಿ ಸರಳ ರೀತಿಯಲ್ಲಿ ಆಚ ರಿಸುವ ಭಾವಚಿತ್ರವನ್ನು ನೋಡಿದೆ. ಖುಷಿಯಾಯಿತು. ಹಾಗೆಯೇ ಅಯ್ಯೋ ಮೊದಲೇ ಗೊತ್ತಿದ್ದರೆ ಒಂದಷ್ಟು ಗೆಳೆಯರು ಹೋಗಿ ಶುಭವನ್ನು ಕೋರಿ ಬರಬಹುದಾಗಿತ್ತು ಎಂಬ ಭಾವನೆ ದಟ್ಟವಾಗ ತೊಡಗಿತ್ತು. ಹಾಗೆ ನೋಡಿದರೆ ಅವರು ಪರಿಚಯವಾದದ್ದು; ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ. ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಅದನ್ನು ಕುರಿತು ಚರ್ಚಿಸಬೇಕಾಗಿತ್ತು. ಆಗ ಇಡೀ ದಿವಸ ಅವರ ಜೊತೆಯಲ್ಲಿ ಕಾಲ ಕಳೆಯುವ ಸುಸಂದರ್ಭ ಒದಗಿ ಬಂದಿತ್ತು. ಇದೇ ಸಮಯದಲ್ಲಿ ಅವರ ಒಂದಷ್ಟು ಅಮೂಲ್ಯ ಮಾತುಗಳನ್ನು ಒಳಗೆ ಬಿಟ್ಟುಕೊಳ್ಳಲು ಸಾಧ್ಯವಾಯಿತು. ಅಂದಿನಿಂದ ಇಂದಿನವರೆಗೂ ಕೆಲವು ಮಾತುಗಳು ಮನಸ್ಸಿನಲ್ಲಿ ರೂಪಕಗಳಾಗಿ ಗುನುಗುನಿಸುತ್ತಲೇ ಇವೆ. ಅದರಲ್ಲಿ ಎರಡು ಮುಖ್ಯವಾದ ಸಂಗತಿಗಳನ್ನು ಮತ್ತೊಮ್ಮೆ ಇಲ್ಲಿ ದಾಖಲಿಸಲು ಬಯಸುವೆ. ಈಗಾಗಲೇ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಮತ್ತು ‘ವಾರ್ತಾಭಾರತಿ’ಯಲ್ಲಿಯೇ ಪ್ರಸ್ತಾಪಿಸಿರುವೆ. ಅದೇನೆಂದರೆ: ಬಾಬರಿ ಮಸೀದಿಗೆ ಸಂಬಂಧಿಸಿ ದಂತೆ; ಇಂಥ ಘಟನೆಗಳು ಚರಿತ್ರೆಯಲ್ಲಿ ಮತ್ತೆ ಮತ್ತೆ ಘಟಿಸುತ್ತಲೇ ಇರುತ್ತವೆ.ಆದರೆ ನಮ್ಮಂಥವರು ಯಾವಾಗಲೂ ಸಾಮಾಜಿಕವಾಗಿ ಕ್ರಿಯಾಶೀಲರಾಗಿಯೇ ಇರಬೇಕಾಗುತ್ತದೆ. ಯಾಕೆಂದರೆ ಪ್ರತಿದಿವಸ ಬೆಳಗ್ಗೆ ಎದ್ದಾಕ್ಷಣ ಹೇಗೆ ಕನ್ನಡಿಯ ಮೇಲಿನ ದೂಳನ್ನು ಕೊಡವಿ ನಮ್ಮ ಮುಖ ನೋಡಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ‘ಸಮಾಜ’ ಎಂಬ ದೊಡ್ಡ ಕನ್ನಡಿ ಶುದ್ಧವಾಗಿರಬೇಕಾದರೆ ನಾವು ಕ್ರಿಯಾಶೀಲರಾಗಿ ಇರಬೇಕಾಗುತ್ತದೆ. ನಂತರ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ; ಇಂದು ಕೇರಳದಲ್ಲಿ ಹಣಬೆಗಳ ರೀತಿಯಲ್ಲಿ ನೂರಾರು ಸಂಸ್ಥೆಗಳು ಪ್ರಶಸ್ತಿಕೊಡುವುದಕ್ಕಾಗಿಯೇ ಹುಟ್ಟಿಕೊಂಡಿವೆ ಎಂದಿದ್ದರು. ಈಗ ಅದರ ಪ್ರಮಾಣ ಕೇರಳದಲ್ಲಿ ಮಾತ್ರವಲ್ಲ. ಭಾರತದ ಉದ್ದಗಲಕ್ಕೂ ವ್ಯಾಪಿಸಿಕೊಡಿವೆ.

    ಒಂದು ದೃಷ್ಟಿಯಿಂದ ಕಳೆದ ಎಷ್ಟೋ ವರ್ಷಗಳಿಂದ ಪ್ರಶಸ್ತಿಗಳ ವಿಷಯ ಬಂದಾಗ ನ್ಯಾಯಮೂರ್ತಿ ಕೃಷ್ಣಯ್ಯರ್ ಅವರನ್ನು ಸ್ಮರಿಸಿಕೊಳ್ಳುತ್ತಾ ಬಂದಿದ್ದೇನೆೆ. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಪ್ರತಿಷ್ಠೆಯಿಂದ ಕೂಡಿರುವಂಥದ್ದು. ಆ ಪ್ರಶಸ್ತಿ ಕೊಡುವ ಸಂದರ್ಭದ ಎಲ್ಲಾ ದುರ್ಬಲ ಕ್ಷಣಗಳನ್ನು ಗಣನೆಗೆ ತೆಗೆದುಕೊಂಡರೂ ಕೂಡ. ಎಷ್ಟೋ ಬಾರಿ ಪ್ರಶಸ್ತಿ ಕೊಡುವ ಸಂದರ್ಭದವರೆವಿಗೂ ಹೆಸರುಗಳು ಸೇರುತ್ತಾ ಹೋಗಿವೆ. ಎಷ್ಟೋ ಬಾರಿ ಪ್ರಶಸ್ತಿ ಪಡೆದವರಿಗೆ ಬಿಡಿಎ ನಿವೇಶನ ದೊರಕುವುದೆಂದು ಎಂತೆಂಥದೋ ಚಿಲ್ಲರೆ ಪ್ರಭಾವಗಳಿಗೆ ಮೊರೆ ಹೋಗಿದ್ದುಂಟು.ಹಾಗೆಯೇ ನ್ಯಾಯಮೂರ್ತಿ ಕೃಷ್ಣಯ್ಯರ್ ಅವರು ಹೇಳಿದ ಅರ್ಥದಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡುವ ಪ್ರಶಸ್ತಿಗಳಲ್ಲಿ ಇನ್ನು ಎಂತೆೆಂಥ ಗೋಲ್‌ಮಾಲ್‌ಗಳು ನಡೆಯುತ್ತವೆ ಎಂಬುದು ಜಿಗುಪ್ಸೆದಾಯಕವಾದದ್ದು. ಎಷ್ಟೊ ಕಡೆ ‘ನೀವು ನನಗೆ ಕೊಡಿಸಿ ನಾನು ನಿಮಗೆ ಕೊಡಿಸುವೆ’ ಎಂದು ಹಾಗೆಯೇ ಹೀಗೆ ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವುದಕ್ಕೆ ಪ್ರಶಸ್ತಿ ಸಂಸ್ಥೆಗಳು ಹುಟ್ಟಿಕೊಂಡಿವೆ. ನನಗೆ ಪರಿಚಯದ ಕೆಲವರು ನೆನಪಿನ ಕಾಣಿಕೆಗಳಿಗೆ ದುಡ್ಡು ಕೊಟ್ಟು ತಮಗೆ ಪಡೆಯುವ ಮತ್ತು ಆಹ್ವಾನ ಪತ್ರಿಕೆಯಲ್ಲಿ ಪ್ರಧಾನವಾಗಿ ತಮ್ಮ ಹೆಸರಿರುವಂತೆ ವ್ಯವಹರಿಸುವವರೂ ಇದ್ದಾರೆ. ಅಂತಹವರ ಮನೆಗೆ ಹೋದಾಗ; ಮನೆ ತುಂಬಾ ನೆನಪಿನ ಕಾಣಿಕೆಗಳನ್ನು ಜೋಡಿಸುವುದರ ಜೊತೆಗೆ ಆಹ್ವಾನ ಪತ್ರಿಕೆ ಗಳನ್ನು ಷೋಕೇಸ್‌ನಲ್ಲಿ ಎದ್ದು ಕಾಣುವಂತೆ ಬದುಕುವವರಿಗೆ ಕೊರತೆ ಇಲ್ಲ. ಇಂತದ್ದನ್ನೆಲ್ಲಾ ನೋಡಿದಾಗ ಯಾವ ಸಂತೋಷಕ್ಕೆ ಪ್ರಶಸ್ತಿಗಳು ಬೇಕು ಅನ್ನಿಸಿ ಬಿಡುತ್ತದೆ. ಇಲ್ಲಿ ಮತ್ತೊಂದು ಸ್ವಾರಸ್ಯಕರವಾದ ಅಥವಾ ವಿಷಾದದ ಸಂಗತಿಯೆಂದರೆ ‘‘ನೀವು ಟಿವಿ ಮಾಧ್ಯಮಗಳಲ್ಲಿ ಮಾತಾಡುವಾಗ ಅಥವಾ ಭಾಗವಹಿಸುವಾಗ; ಅವರಿಗೆ ಎಷ್ಟು ದುಡ್ಡು ಕೊಡಬೇಕಾಗುತ್ತದೆ?’’ ಎಂದು ಮುಗ್ಧತೆಯಿಂದ ಕೇಳಿದವರಿದ್ದಾರೆ.

    ಈ ಎಲ್ಲಾ ವೈಪರೀತ್ಯಗಳು ಕಾಡುತ್ತಿದ್ದುದ ರಿಂದಲೇ; ಇತ್ತೀಚೆಗೆ ನಾನು ರಾಜ್ಯೋತ್ಸವ ಪ್ರಶಸ್ತಿ ಪಡೆಯುವಾಗ; ಉತ್ತಮರ ಜೊತೆ ಪಡೆಯುತ್ತಿದ್ದೇನೆಯೇ ಎಂದು ತೂಕ ಮಾಡುತ್ತಾ ಹೋಗಿದ್ದೆ. ಹಾಗೆಯೇ ಹಿರಿಯ ವಿಜ್ಞಾನಿಗಳಾದ ಡಾ. ಕಸ್ತೂರಿ ರಂಗನ್, ನ್ಯಾಯ ಮೂರ್ತಿ ವೆಂಕಟಾಚಲಯ್ಯ, ಖ್ಯಾತಗಾಯಕಿ ಎಸ್. ಜಾನಕಿಯಂಥವರ ನಡುವೆ ಪಡೆಯುತ್ತಿದ್ದೇನೆ ಎಂಬುದರ ಬಗ್ಗೆ ಖುಷಿಯಾಗಿತ್ತು.ಅವರ ಮುಂದೆ ಈ ಭಾವನೆಯನ್ನು ವ್ಯಕ್ತಪಡಿಸಿದಾಗ; ಎಷ್ಟು ಪ್ರಾಮಾಣಿಕೆಯಿಂದ ಯಾವುದೇ ರೀತಿಯ ‘ಹಮ್ಮು, ಬಿಮ್ಮು’ ಇಲ್ಲದೆ; ‘‘ನಾವು ಅಷ್ಟೇ ನಿಮ್ಮಂಥವರು ನಡುವೆ ಪಡೆಯುತ್ತಿದ್ದೇವೆ ಅನ್ನುವುದೇ ನೆನಪು ಮಾಡಿಕೊಳ್ಳುವಂಥದ್ದು’’ ಎಂದು ಹೇಳಿದಾಗ ನಾನು ನಾಚಿಕೆಯಿಂದ ಕುಗ್ಗಿಹೋಗಿದ್ದೆ. ಇದನ್ನು ಅವರು ವಿಧಾನ ಸೌಧದ ಸಮ್ಮೇಳನದ ಭವನದಲ್ಲಿ ಪ್ರಶಸ್ತಿ ವಿಜೇತರಿಗೆ ಮುಖ್ಯ ಮಂತ್ರಿಗಳು ತಿಂಡಿಯ ವ್ಯವಸ್ಥೆ ಮಾಡಿದ್ದ ಸಮಯದಲ್ಲಿ ಹೇಳಿದ್ದು. ಇಂತಹವರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಸಂಕೋಚದಿಂದಲೇ ಕೂತಿದ್ದರು.ಇಂತಹ ಮನಸ್ಥಿತಿ ಇದ್ದ್ದುದರಿಂದಲೆ ‘‘ನಾನು ಮುಖ್ಯಮಂತ್ರಿಯಾಗಿ ಒಂದೇ ಒಂದು ಹೆಸರನ್ನು ಆಯ್ಕೆ ಸಮಿತಿಯವರಿಗೆ ನೀಡಿಲ್ಲ’’ ಎಂಬುದು ನಿಜವಾಗಿಯೂ ಚಾರಿತ್ರಿಕವಾದದ್ದು. ಈ ಹಿನ್ನೆಲೆಯಲ್ಲಿ ಕೆಲವು ಟಿವಿ ಸಂಸ್ಥೆಗಳ ಗೆಳೆಯರು ‘‘ಪ್ರಶಸ್ತಿಯ ಬಗ್ಗೆ ನಿಮಗೇನನ್ನಿಸುತ್ತದೆ?’’ ಎಂದು ಕೇಳಿದಾಗ; ಮುಖ್ಯ ಮಂತ್ರಿಗಳ ಮಾತಿಗೆ ಮೆಚ್ಚುಗೆಯನ್ನು ಸೂಚಿಸಿಯೇ ಪ್ರತಿಕ್ರಿಯಿಸಿದ್ದೆ. ಹಾಗೆಯೇ ‘‘ಇಂಥದ್ದು ಯಾವಾಗಲೂ ಚಾರಿತ್ರಿಕವಾಗಿ ಉಳಿಯುವಂಥದ್ದು.ಉನ್ನತ ಸ್ಥಾನದಲ್ಲಿರುವ ಎಲ್ಲ ನಮ್ಮ ಪ್ರಜಾಪ್ರತಿನಿಧಿಗಳು ಹೀಗೆ ಯೋಚಿಸುವಂತಾಗಬೇಕು ಮತ್ತು ಈ ಕಾರ್ಯ ನಿರ್ವಹಿಸುವಂತಾಗಬೇಕು. ಯಾಕೆಂದರೆ ಯಾವುದಕ್ಕೆ ಆಗಲಿ ಒಂದು ಪ್ರಜ್ಞಾವಂತರ ಸಮಿತಿಯನ್ನು ನೇಮಿಸಿದಾಗ; ಅದಕ್ಕೆ ಗೌರವ ಕೊಟ್ಟು; ಆ ಸಮಿತಿಯ ಮಾರ್ಗದರ್ಶಕ ಸೂತ್ರಗಳನ್ನು ಆಡಳಿತದಲ್ಲಿ ನೆರವೇರಿಸುವಂತಾಗಬೇಕು. ಈ ರೀತಿಯದ್ದು ಎಲ್ಲಾ ಇಲಾಖೆಗಳಿಗೂ ಅನ್ವಯಿಸುವಂತಿರಬೇಕು. ಯಾಕೆಂದರೆ ನಮ್ಮಲ್ಲಿ ಚಿಂತಕರಿಗೆ ಮತ್ತು ವಿಷಯವಾರು ಪ್ರಜ್ಞಾವಂತರಿಗೆ ಕೊರತೆ ಇಲ್ಲ. ಅವರ ಆಲೋಚನ ಕ್ರಮವನ್ನು ಪ್ರಜಾಪ್ರತಿನಿಧಿಗಳು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಆಗ ನಮ್ಮ ಆಡಳಿತ ವ್ಯವಸ್ಥೆ ರಚನಾತ್ಮಕವಾಗಿರು ವುದರ ಜೊತೆಗೆ; ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತಾ ಹೋಗುತ್ತದೆ’’ ಎಂದು ಹೇಳಿದಾಗ; ಬಹುಪಾಲು ಮಂದಿ ಪ್ರೀತಿಯಿಂದ ಸ್ವೀಕರಿಸಿದರು. ಹಿಂದೆ ನಮ್ಮ ಆಡಳಿತ ವ್ಯವಸ್ಥೆ ಹೀಗೆ ಹೋಗಲೆಂದೇ ರಾಮಕೃಷ್ಣ ಹೆಗ್ಗಡೆಯವರು ತಾವು ಮುಖ್ಯಮಂತ್ರಿಗಳು ಆಗಿದ್ದ ಸಮಯದಲ್ಲಿ ‘ಥಿಂಕ್ ಬ್ಯಾಂಕ್’ ಪರಿಕಲ್ಪನೆಯಲ್ಲಿ ವಿವಿಧ ಕ್ಷೇತ್ರಗಳ ಶ್ರೀಮಂತ ಮನಸ್ಸುಗಳನ್ನು ಒಂದೆಡೆ ಸೇರಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಲು ಬಯಸಿದ್ದು. ಆದರೆ ದುರಂತವೆಂದರೆ: ಒಂದಷ್ಟು ಮನಸ್ಸುಗಳು ಇದು ಕಾರ್ಯನಿರ್ವಹಿಸದಂತೆ ಒಂದೇ ಸಮನೆ ಗೂಬೆ ಕೂರಿಸುತ್ತಾ ಹೋದರು.

     ಒಮ್ಮೆ ಗೆಳೆಯ ರಮಝಾನ್ ದರ್ಗಾ ಮತ್ತು ನಾನು ಯಾವುದೋ ಒಂದು ಮಹತ್ವ ಪೂರ್ಣ ವಿಷಯ ಚರ್ಚಿಸಲು ರಾಮಕೃಷ್ಣ ಹೆಗ್ಗಡೆಯವರನ್ನು ಭೇಟಿಯಾಗಿದ್ದೆವು, ಅಂದು ನಮ್ಮ ಜೊತೆಯಲ್ಲಿ ಪ್ರೊ.ಜಿ.ಕೆ. ಗೋವಿಂದರಾವ್ ಅವರೂ ಬರಬೇಕಾಗಿತ್ತು. ಆಕಸ್ಮಿಕವಾಗಿ ಅವರು ಬರಲಾಗಲಿಲ್ಲ. ಆದರೆ ಹೆಗ್ಗಡೆಯವರು ಅತ್ಯಂತ ತೀವ್ರವಾಗಿ ಬೆನ್ನು ನೋವಿನಿಂದ ನರಳುತ್ತಿದ್ದರೂ; ಸುಮಾರು ಒಂದುವರೆ ಗಂಟೆಗೂ ಮೇಲ್ಪಟ್ಟು ಮನೆಯ ಕಂಬದ ಆಶ್ರಯ ಪಡೆದು ನಿಂತೇ ನಮ್ಮಲ್ಲಿ ನಾನಾ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದರಲ್ಲಿ ‘ಥಿಂಕ್‌ಬ್ಯಾಂಕ್’’ ಪರಿಕಲ್ಪನೆಯ ವಿಸ್ತಾರದ ಬಗ್ಗೆ ಆತ್ಮೀಯವಾಗಿ ಮಾತಾಡಿದ್ದರು. ಅದರ ಪ್ರಯೋಗವನ್ನು ಮುರಿದಿದ್ದರ ಬಗ್ಗೆ ವಿಷಾದಪೂರ್ಣವಾಗಿ ವಿವರಿಸಿದ್ದರು. ಹಾಗೆಯೇ ನನ್ನ ಬಗ್ಗೆ ಯಾರ್ಯಾರೋ ಹಗುರವಾಗಿ ಮಾತಾಡುವರು; ‘‘ನಾನು ಇಲ್ಲಿಯವರೆವಿಗೂ ಯಾವುದೇ ಸಚಿವರ ಕಡತಕ್ಕೆ ಸಂಬಂಧಿಸಿದಂತೆ ಮಧ್ಯೆ ಪ್ರವೇಶಿಸಿಲ್ಲ. ಅಂಥ ಒಂದೇ ಒಂದು ಉದಾಹರಣೆ ಇದ್ದರೂ ರಾಜೀನಾಮೆ ಕೊಟ್ಟು ಹೊರಗೆ ಬರುವೆ.’’ ಎಂದು ಹೇಳಿದಾಗ ನಾವು ವಿನೀತ ಭಾವದಿಂದ ಕೇಳಿಸಿಕೊಂಡಿದ್ದೆವು. ಯಾವುದೇ ರೀತಿಯ ಸಿನಿಕತನದಿಂದ ನೋಡಲು ಹೋಗಲಿಲ್ಲ. ಇದೇ ಕಡತಗಳಿಗೆ ಸಂಬಂಧಿಸಿದಂತೆ ಖಾಸಗಿ ಮಾತುಕತೆಯಲ್ಲಿ ಲಂಕೇಶ್ ಅವರು ಹೆಗ್ಗಡೆಯವರ ಬಗ್ಗೆ ಹಗುರವಾಗಿ ಮಾತಾಡಿದಾಗ; ಆಗ ಸಚಿವರಾಗಿದ್ದ ಎಂ. ಪಿ. ಪ್ರಕಾಶ್, ವೈ. ಕೆ. ರಾಮಯ್ಯ ಮತ್ತು ಅಬ್ದುಲ್ ನಝೀರ್ ಸಾಬ್ ಅವರು ಆಕ್ಷೇಪಣೆಯನ್ನೆತ್ತಿದ್ದರು;ಲಂಕೇಶ್ ಅವರ ಮಾತನ್ನು ಕುರಿತು.

   ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನನಗೆ 1986ರ ಪ್ರಶಸ್ತಿಯೊಂದರ ಕಾರ್ಯಕ್ರಮ ನೆನಪಿಗೆ ಬಂತು. ಅಂದು ನನ್ನ ‘ಕನಸಿಗೊಂದು ಕಣ್ಣು’ ಕೃತಿಗೆ ಪ್ರಶಸ್ತಿ ಕೊಡುವ ಅಕಾಡಮಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದವರು: ಶಿವರಾಮ ಕಾರಂತರು ಮತ್ತು ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು. ನಮಗೆಲ್ಲ ಪ್ರಶಸ್ತಿ ಕೊಟ್ಟ ಮೇಲೆ ಶಿವರಾಮ ಕಾರಂತರ ದೀರ್ಘ ಉಪನ್ಯಾಸ ಒಂದು ಚಾರಿತ್ರಿಕ ನೆನಪು ಎಂದು ಈಗಲೂ ಗಂಭೀರವಾಗಿ ಭಾವಿಸುವೆ. ಒಂದು ದೃಷ್ಟಿಯಿಂದ ಮುಂದಿನ ದಿನಗಳಿಗೆ ಕಾರಂತರು ನನಗೆ ಪರಿಚಯವಾಗಿದ್ದು ಈ ಸಂದರ್ಭದಿಂದ. ಈಗಲೂ ಅವರು ಪ್ರಶಸ್ತಿ ಕೊಡುತ್ತಿರುವ ಭಾವಚಿತ್ರ ನಾನು ದಿನನಿತ್ಯ ಕೂರುವ ಮೇಜಿನ ಮೇಲಿದೆ. ಆಗ ಅದನ್ನು ನೋಡಿದಾಗ; ಅಂದು ಅವರು ಹೇಳಿದ ಸ್ಮರಣೀಯ ಮಾತುಗಳು ಮನಸ್ಸಿನಲ್ಲಿ ಧುತ್ತನೆ ಗುನುಗುನಿಸಲು ಪ್ರಯತ್ನಿಸುತ್ತದೆ. ಆ ಕಾರ್ಯಕ್ರಮದಲ್ಲಿ ಹೆಗ್ಗಡೆಯವರು ಅತ್ಯಂತ ಅರ್ಥಪೂರ್ಣವಾಗಿ ಮಾತಾಡಿದ್ದರು. ರಾಮಕೃಷ್ಣ ಹೆಗ್ಗಡೆ ಮತ್ತು ದೇವರಾಜು ಅರಸು ಅವರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯನವರು ಕೆಲವು ಮಾರ್ಮಿಕ ನುಡಿಗಳನ್ನು ಪ್ರಶಸ್ತಿ ವಿತರಣೆಯ ನಂತರ ಮಾಡಿದರು. ಮುಖ್ಯವಾಗಿ ಮುಂದಿನ ವರ್ಷ ಅರವತ್ತನೆಯ ರಾಜ್ಯೋತ್ಸವ ಆಗಿರುವುದರಿಂದ ಅರವತ್ತು ಮಂದಿ ಅರ್ಹರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುವುದು. ಈ ಬಾರಿ ಕೊಡಲಾಗದೆ ಇರುವ ಹಿರಿಯರನ್ನು ಸಮಿತಿಯು ಪರಿಗಣಿಸುವುದು. ನಾನು ಯಾವುದಕ್ಕೆ ಆಗಲಿ ಸಮಿತಿಯ ಮಧ್ಯೆ ಪ್ರವೇಶಿಸುವುದಿಲ್ಲ. ಇದು ಮುಂದೆಯೂ ಮುಂದುವರಿಯಬೇಕು. ಆಗ ನಮ್ಮ ಪ್ರಶಸ್ತಿಗಳಿಗೆ ಗೌರವವಿರುತ್ತದೆಯೆಂದು ಸೂಚ್ಯವಾಗಿ ಹೇಳಿದರು. ಇಲ್ಲಿ ಮತ್ತೊಂದು ಮುಖ್ಯ ವಿಷಯವೆಂದರೆ; ನ್ಯಾಯಮೂರ್ತಿ ವೆಂಕಟಾಚಲಯ್ಯನವರು ಪ್ರಶಸ್ತಿ ಸ್ವೀಕರಿಸಿದವರ ಪರವಾಗಿ ಮಾತಾಡುತ್ತಾ ‘‘ನಾನು ನನ್ನ ಬದುಕಿನ ಸಂಧ್ಯಾಕಾಲದಲ್ಲಿ ಅತ್ಯಂತ ಹಿರಿಯರ ನಡುವೆ ಸ್ವೀಕರಿಸುತ್ತ್ತಿದ್ದೇನೆ. ಇದು ಅತ್ಯಂತ ಗೌರವದ ವಿಷಯ’’ ಎಂದು ವಿನಯಪೂರ್ವಕವಾಗಿ ಹೇಳಿದಾಗ ಎಷ್ಟು ದೊಡ್ಡ ವ್ಯಕ್ತಿ ಅನ್ನಿಸಿತ್ತು. ಎರಡು ವರ್ಷಗಳ ಹಿಂದೆ ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಗ್ರಂಥಾಲಯ ಇಲಾಖೆಗೆ ಆಹ್ವಾನಿಸಿದ್ದಾಗ; ಒಂದಷ್ಟು ಸಮಯ ಆಪ್ತವಾಗಿ ಕಳೆಯುವ ಅವಕಾಶ ಸಿಕ್ಕಿತ್ತು. ಒಂದು ಸ್ವಾರಸ್ಯಕರ ಸಂಗತಿಯೆಂದರೆ; ಇವರ ಶ್ರೀಮತಿಯವರು ನನಗೆ ‘ಪ್ರಶಾಂತಯೋಗಾಶ್ರಯ’ ಸಂಸ್ಥೆಯ ತರಗತಿಯಲ್ಲಿ ಪರಿಚಯವಾದವರು. ಮಹಾನ್ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿಯವರು ರೀತಿಯಲ್ಲಿ ಮುದ್ದು ಮುದ್ದಾಗಿ ನಗುತ್ತಿದ್ದರು, ನಾನು ಅವರನ್ನು ಅಂದು ಸದಾ ಸುದ್ಧಿಯಲ್ಲಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲನವರ ಪತ್ನಿ ಎಂದು ಗ್ರಹಿಸಿದ್ದೆ. ಆ ಗ್ರಹಿಕೆಯ ಮೇಲೆ ಪರಿಚಯಮಾಡಿಕೊಂಡೆ. ಆದರೆ ಅವರು ನಗುತ್ತ ‘‘ನಾನು ವೆಂಕಟಚಾಲಯ್ಯನವರ ಪತ್ನಿ. ನಮ್ಮ ಮನಗೆ ತುಂಬ ಮಂದಿ ಅವರ ಮನೆ ಎಂದು ಬರುವರು’’ ಎಂದರು. ನಾನು ಕ್ಷಮಾಪಣೆ ಕೇಳಿದಾಗ ‘‘ಅದಕ್ಯಾಕೆ ಕ್ಷಮಾಪಣೆ. ದಯವಿಟ್ಟು ಮನೆಗೆ ಬನ್ನಿ. ಮನೆಯಲ್ಲಿ ತಿಳಿಸಿರುತ್ತೇನೆ’’ ಎಂದಿದ್ದರು.

  ಆದರೆ ಲೋಕಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರು ಎಷ್ಟೊಂದು ಪೇಪರ್‌ಟೈಗರ್ ಆಗಿಬಿಟ್ಟಿದ್ದರು. ಒಮ್ಮೆ ಕುತೂಹಲದಿಂದ ನೋಡಲು ಹೋದೆ. ಬಿಳಿಗಿರಿರಂಗಿನ ಬೆಟ್ಟದ ಸಮಾಜ ಸುಧಾರಕ ಡಾ. ಸುದರ್ಶನ್ ಅವರು ಆಗ ಅಲ್ಲಿದ್ದರು. ನನ್ನನ್ನು ಪರಿಚಯಿಸಲು ಕರೆದುಕೊಂಡು ಹೋದರು. ಲೋಕಾಯುಕ್ತ ನ್ಯಾಯಾಧೀಶರ ಚೇಂಬರ್‌ಗೆ ಹೋದೆ. ಯಾರೋ ಮಹಿಳೆಯ ಸಮಸ್ಯೆ ಬಗ್ಗೆ ವಿಚಾರಿಸುತ್ತಿದ್ದರು, ಮಧ್ಯೆ ‘‘ನೀವೇನಾ ಶೂದ್ರ ಶ್ರೀನಿವಾಸ್’’ ಎಂದು ಕೂರಲು ಹೇಳಿದರು. ಆಕೆಯ ಸಮಸ್ಯೆಯ ವಿಚಾರಣೆಯ ನಂತರ ನನ್ನೊಡನೆ ಮಾತುಕತೆಗೆ ತೊಡಗಿದರು. ಡಾ. ಸುದರ್ಶನ್ ಅವರಂಥ ದೊಡ್ಡ ವ್ಯಕ್ತಿಯನ್ನು ಕೂರಲು ಹೇಳಲಿಲ್ಲ. ಅವರು ನಿಂತೇ ಇದ್ದರು, ನಾನು ಸಂಕೋಚದಿಂದಲೇ ‘‘ ಸರ್, ನೀವು ಅತ್ಯಂತ ಸಾರ್ಥಕ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಕಾಲಘಟ್ಟದಲ್ಲಿ ಕೊನೆಯ ಪಕ್ಷ ಐದು ಪರ್ಸೆಂಟಾದರೂ ಭ್ರಷ್ಟಾಚಾರ ಕಡಿಮೆಯಾದರೆ; ಅದು ಮಹತ್ವಪೂರ್ಣವಾದದ್ದು’’ ಎಂದೆ. ಅವರು ಸಿಟ್ಟಿನಿಂದ ‘‘ಶೂದ್ರ ಅವರೆ ಐದು ಪರ್ಸೆಂಟ್ ಅಲ್ಲ ಸೆಂಟ್ ಪರ್ಸೆಂಟ್ ಭ್ರಷ್ಟಾಚಾರವನ್ನು ತೊಲಗಿಸುವೆ’ ಎಂದು ಟೇಬಲ್ ಗುದ್ದಿ ಹೇಳಿದರು. ನನಗೆ ಗಾಬರಿಯಾಯಿತು. ಇವರೆಲ್ಲ ಕಾಗದದ ಹುಲಿಗಳು ಎಂದು ಕೊಂಡೆ. ಅವರು ಹೊರಗೆ ಹೋದರು. ಈಗ ಯಾರು ನೆನಪು ಮಾಡಿಕೊಳ್ತಾರೆ? ಕೊನೆಗೂ ಈ ಲೇಖನವನ್ನು ನ್ಯಾಯಮೂರ್ತಿ ಕೃಷ್ಣಯ್ಯರ್ ಅವರಿಗೆ ಅರ್ಪಿಸುತ್ತಿರುವೆ; ಅವರು ಬರೆಯುತ್ತಾ, ಓದುತ್ತಾ, ಹೋರಾಡುತ್ತಾ ಚಾರಿತ್ರಿಕ ನೂರು ವರ್ಷಗಳನ್ನು ಕಂಡಿದ್ದಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...