Thursday, November 20, 2014

ಕೆಸರು ಕೈ























ತೆಲುಗು ಮೂಲ: ಸ್ವರೂಪಾ ರಾಣಿ

ಇಂಗ್ಲಿಷ್‌ಗೆ: ಕೆ. ಪುರುಷೋತ್ತಮ್


ಕನ್ನಡಕ್ಕೆ: ಡಾ ಎಚ್. ಎಸ್. ಅನುಪಮಾ


ಪಾತ್ರೆಪಗಡೆಗಳ ಟಣಟಣ ಸದ್ದಿನೊಂದಿಗೆ
ಕೋಳಿ ಕೂಗುವ ಹೊತ್ತಿಗೆ
ಅವಳು ಗುಡಿಸಲ ಎಬ್ಬಿಸುತ್ತಾಳೆ
ಗವ್ಗತ್ತಲ ಸೀಳಿ ಹಟ್ಟಿ ಬೆಳಗುತ್ತಾಳೆ
ಕುಡಿಗಳಿಗೆ ನಾಲ್ಕಗುಳು ತಿನಿಸುತ್ತಾಳೆ

ಬುತ್ತಿ ಹೊತ್ತು ಹೊಲಕೆ ಬಂದರೆ
ಒಡೆಯ ಬೈಗುಳದೊಂದಿಗೆ ಸ್ವಾಗತಿಸುತ್ತಾನೆ
ಭತ್ತದ ಎಳೆಸಸಿಯ ಮಿದುವಾಗಿ ಊರಿ ನೆಟ್ಟಿ ಮಾಡುವಾಗ
ಹೊಟ್ಟೆ ಕಳ್ಳು ಗುಡುಗುಡೆಂದು ಭೋರಿಟ್ಟು ಕುಣಿಯುತ್ತದೆ
ಹಿಡಿ ಅನ್ನ, ಚಟಾಕು ಮೆಣಸಿಗಾಗಿ ದಿನವಿಡೀ ಗೇಯುತ್ತಾಳೆ

ಹೆಮ್ಮರದ ಕೊಂಬೆಗೆ ನೇತಾಡುವ ಜೋಳಿಗೆಯಲಿ
ಕೈಗೂಸು ಕಿರುಚುವುದು ಕೇಳುತ್ತಿದ್ದರೂ;
ಆಡಿಸುವವರಿಲ್ಲದೆ ತನ್ನ ಚಂದುಳ್ಳಿ ಮಗಳು
ಕೆರೆಯ ಕೆಸರಲ್ಲಿ ಆಡುತ್ತಿದ್ದರೂ
ಗೊತ್ತೇ ಇಲ್ಲದವರಂತೆ
ಗದ್ದೆಗೆ ರಸಗೊಬ್ಬರ ಎರಚುತ್ತಾಳೆ
ಕೆಸರು ಕೈಗಳು ಮಗ್ನ ಕಳೆಕೀಳುವುದರಲ್ಲಿ..
ಬೇಯಿಸಲು ತಟಾಕು ಕಾಳಿಲ್ಲ ಹಟ್ಟಿಯಲಿ
ಒಡೆಯನ ಕಣದಲ್ಲಿ ಭತ್ತ ರಾಶಿ 
ಕೈ ಕೆಸರಾಗಿಸಿ ಚಿನ್ನದ ಹೂವರಳಿಸಿ 
ತೂತು ಕಾಸಿನ ಕೂಲಿ ಪಡೆದಾಗ
ಅವಳ ಹೆಣ್ತನ ಅಣಕಿಸುತ್ತದೆ

ಕರುಳಕುಡಿಗಳ ಹೊಟ್ಟೆ ತುಂಬಿಸಲು
ಬಲೆ ಹಾಕಿ ಕಾಯುವಾಗ
ಅತ್ತ ಗಂಡನೂ ಕಾದಿದ್ದಾನೆ ಮನೆಯಲ್ಲಿ
ಅವಳ ಬೆವರ ಹೆಂಡವಾಗಿಸಿ ಕುಡಿಯಲು

ಬಿಸಿಲಲ್ಲಿ ಒಣಗಿ ಮಳೆಗೆ ನೆಂದು
ಗಂಡನಿಂದ ವದೆ ತಿಂದು
ವರುಷಗಟ್ಟಲೆ ಕೂಲಿಯಲಿ ಜೀವ ತೇದು
ಚೆಂಡು ಹುವ್ವಂತೆ ಫಳಫಳವೆನುತಿದ್ದ ಮೈಯಿ
ಒಣಗಿ ಮಾಸಲಾಗುತ್ತಿದೆ
ಉದುರಲಿರುವ ಎಲೆಯ ಕಡ್ಡಿಯಂತೆ.

ಮುಗ್ಧೆ ಅವ್ವ, ಜೀವಕಳೆ ಮಾಸಿಹೋದವಳು
ಕಣ್ಣೀರ ಹಳ್ಳದಲಿ ಮುಳುಗಿದವಳು
ಮುಳುಗುವ ಸೂರ್ಯನಂತೆ 
ಒಲೆಯ ಕಟ್ಟಿಗೆಯಂತೆ
ಸುಟ್ಟು ಕರಕಲಾದವಳು 
ಹಸಿವಿನ ಶಿಲುಬೆ ಹೊತ್ತು 
ಬದುಕಿನ ಕಲ್ಲುಮುಳ್ಳಿನ ಹಾದಿಯಲಿ ನಡೆದಿದ್ದಾಳೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...