Monday, December 29, 2014

ಭಾರತ ರತ್ನ - ಮಾನದಂಡಗಳೇನು ?ನಾ ದಿವಾಕರ


ಭಾರತರತ್ನ ಪ್ರಶಸ್ತಿಗೆ ಒಂದು ಹಿರಿಮೆ ಗರಿಮೆ ಇದೆ. ಸ್ವತಂತ್ರ ಭಾರತದ ಸಾರ್ವಭೌಮತೆಯ ಪ್ರತೀಕವಾದ ಈ ಪ್ರಶಸ್ತಿ ವಿಶ್ವದ ಜನಸಮುದಾಯಕ್ಕೆ ವಿಶಿಷ್ಟವಾದ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸಲ್ಲುವುದು ಸಮಂಜಸವಾದದ್ದು. ಈ ಪ್ರಶಸ್ತಿಯನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಶಸ್ತಿಯನ್ನು ನೀಡುವ ಪ್ರಕ್ರಿಯೆಯ ಹಿಂದೆ ಭಾರತದ ಸಾರ್ವಭೌಮ ನಾಗರಿಕರ ಅಭಿಪ್ರಾಯಕ್ಕೆ ಮನ್ನಣೆ ಇದೆಯೇ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಪ್ರಾತಿನಿಧಿ ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಭಾರತದ ಪ್ರಜೆಗಳು ತಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ಕೈಗೊಳ್ಳುವ ನಿರ್ಧಾರಗಳಿಗೆಲ್ಲಾ ತಾವು ಹೊಣೆಗಾರರು ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಲ್ಲಿ ಆಳ್ವಿಕರ ನಿರ್ಣಯಗಳನ್ನು ನಾಗರಿಕ ಸಮಾಜದ ಸಮ್ಮತದ ನೆಲೆಯಲ್ಲಿ ನೋಡಬಹುದು. ಆದರೆ ಈ ಭ್ರಮೆ ಕೇವಲ ಭ್ರಮೆಯಷ್ಟೆ. ಭಾರತರತ್ನ ಪ್ರಶಸ್ತಿ ಇತರ ಪ್ರಶಸ್ತಿಗಳಂತೆ ಅರ್ಜಿ ಸಲ್ಲಿಸುವ ಮೂಲಕ, ಲಾಬಿ ಮಾಡುವುದರ ಮೂಲಕ ಲಭ್ಯವಾಗುವುದಿಲ್ಲ ಎನ್ನುವುದಷ್ಟೇ ಸಮಾಧಾನಕರ ಅಂಶ.

ಆದಾಗ್ಯೂ ಈ ಪ್ರಶಸ್ತಿಯ ಹಿಂದೆ ವ್ಯಕ್ತಿಯ ಅರ್ಹತೆ ಒಂದು ಮಾನದಂಡವಾಗದೆ ಇರುವುದು ಮಾತ್ರ ವಾಸ್ತವ.  ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲ ವ್ಯಕ್ತಿಗಳ ಅರ್ಹತೆಯನ್ನು ಪ್ರಶ್ನಿಸುವ ಅಥವಾ ಅನುಮಾನಿಸುವ ಅಗತ್ಯವಿಲ್ಲ. ಆದರೆ ಕಾಲಕಾಲಕ್ಕೆ ತಮ್ಮ ರಾಜಕೀಯ ನಿಲುವುಗಳಿಗೆ ಅನುಸಾರವಾಗಿ ತಮ್ಮ ಟಿಆರ್‌ಪಿ ಹೆಚ್ಚಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುವ ಸರ್ಕಾರಗಳ ನಿಲುವು ಖಂಡಿತವಾಗಿಯೂ ಪ್ರಶ್ನಾರ್ಹವಾಗುತ್ತದೆ, ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಈ ಪ್ರಶಸ್ತಿಗೆ ರಾಜಕೀಯ ಲೇಪನ ನೀಡಿ ತಿಮ್ಮಣ್ಣ ಬೊಮ್ಮಣ್ಣಗಳಿಗೆಲ್ಲಾ ನೀಡುವುದರ ಮೂಲಕ ಭಾರತರತ್ನ ಪ್ರಶಸ್ತಿಯ ಮೌಲ್ಯ ಶಿಥಿಲವಾಗಿದ್ದರೂ, ಭಾರತೀಯ ಜನಸಮುದಾಯಗಳ ದೃಷ್ಟಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರು ವಿಶ್ವಮಾನ್ಯರಾಗಿರುತ್ತಾರೆ. ಯಾವುದೇ ಪ್ರಶಸ್ತಿ ಕೇಳಿಪಡೆಯುವುದು ಸಮಂಜಸವೂ ಅಲ್ಲ, ನೈತಿಕತೆಯೂ ಅಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದ ನಮ್ಮ ಪ್ರಜ್ಞಾವಂತ ಸಮಾಜ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಂಘಿಕ ಸಾಮರ್ಥ್ಯ-ಪ್ರಭಾವವನ್ನು ಬಳಸಿ ಪ್ರಶಸ್ತಿಗಾಗಿ ಆಗ್ರಹಿಸುವುದು ಪ್ರಶಸ್ತಿಯನ್ನೇ ಅಪಮೌಲ್ಯಗಳಿಸುವುದಂತೂ ಸತ್ಯ.

ಈಗ ನರೇಂದ್ರ ಮೋದಿ ಸರ್ಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ವ್ಯಕ್ತಿಗತವಾಗಿ ಪ್ರಾಮಾಣಿಕರಾದ, ಅಜಾತಶತ್ರು ಎನಿಸುವ, ಸರಳತೆಯ ಸಾಕಾರ ವ್ಯಕ್ತಿಯಾದ ವಾಜಪೇಯಿ ಜನiನ್ನಣೆಗೆ ಪಾತ್ರರಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುವುದು ಅಲ್ಲಗಳೆಯಲಾಗದ ಸತ್ಯ. ಆದರೆ ಈ ಗುಣಲಕ್ಷಣಗಳಷ್ಟೇ ಭಾರತರತ್ನ ಪ್ರಶಸ್ತಿಗೆ ಮಾನದಂಡ        ಆಗಬಾರದಲ್ಲವೇ ? ಭಾರತದ ರಾಜಕಾರಣದಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿಗಳು, ನಾಯಕರು ಆಗಿ ಹೋಗಿದ್ದಾರೆ. ಇಂದಿಗೂ ಇದ್ದಾರೆ. ಅವರೆಲ್ಲರೂ ಭಾರತರತ್ನ ಪ್ರಶಸ್ತಿಗೆ ಅರ್ಹರಾಗುತ್ತಾರೆಯೇ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿರುವ ವಾಜಪೇಯಿ ಭಾರತದ ಸಾಮಾಜಿಕ ಚಳುವಳಿಗೆ, ರಾಜಕೀಯ ಮುನ್ನಡೆಗೆ ನೀಡಿರುವ ಕೊಡುಗೆ ಏನು ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟದ ಕಣದಿಂದ ಹಿನ್ನಡೆದು, ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜೈಲುವಾಸದಿಂದ ಮುಕ್ತರಾದ ವಾಜಪೇಯಿ ಸಕ್ರಿಯವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲೇ ಇಲ್ಲ.
ಸ್ವಾತಂತ್ರ್ಯಾನಂತರದಲ್ಲಿ ದೇಶದ ಮುಖ್ಯವಾಹಿನಿಯಲ್ಲಿ ಸೇರಿ ಸಮಾಜದ ಅನಿಷ್ಠಗಳ ವಿರುದ್ಧ ಹೋರಾಡದೆ, ಗೋಲ್ವಾಲ್ಕರ್ ಪ್ರೇರಿತ ಹಿಂದೂ ರಾಷ್ಟ್ರದ ಫ್ಯಾಸಿಸ್ಟ್ ಧೋರಣೆ ಹೊತ್ತಿದ್ದ ಸಂಘಪರಿವಾರದ ನೇತಾರರಾಗಿದ್ದರು. ಅಜಾತಶತ್ರು ಎಂಬ ಬಿರುದು ಪಡೆಯಲೆಂದೇ ಬಹುಶಃ ವಾಜಪೇಯಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಗಂಭೀರ ಸಾಮಾಜಿಕ/ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಚಕಾರವೆತ್ತಿಲ್ಲ. ಅವರು ರಾಜಕೀಯ ಅಧಿಕಾರದಲ್ಲಿದ್ದುದು ಒಂದು ದಶಕಕ್ಕಿಂತಲೂ ಕಡಿಮೆ. ಆರು ವರ್ಷಗಳ ಅವಧಿಯಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡ ನಿರ್ಣಯಗಳು, ಅನುಸರಿಸಿದ ನೀತಿಗಳು ದೇಶದ ಜನಸಾಮಾನ್ಯರಿಗೆ ಎಷ್ಟು ಆಘಾತಕಾರಿಯಾಗಿದ್ದವೆಂದು ಹೇಳಬೇಕಿಲ್ಲ. ವಾಜಪೇಯಿ ಅಧಿಕಾರಾವಧಿಯಲ್ಲಿ ಭಾರತ ಹೇಗೆ ಪ್ರಕಾಶಿಸುತ್ತಿತ್ತು ಎಂದು ಸಮಸ್ತ ಜನತೆಗೆ ತಿಳಿದಿದೆ.

ಅಯೋಧ್ಯಾಕಾಂಡದ ಸಂದರ್ಭದಲ್ಲಿ ತಮ್ಮ ದಿವ್ಯ ಮೌನದ ಮೂಲಕವೇ ಸಂಘಪರಿವಾರದ ಫ್ಯಾಸಿಸ್ಟ್ ಧೋರಣೆಗೆ ಸಮ್ಮತಿಸಿದ ವಾಜಪೇಯಿ ನಿಜಕ್ಕೂ ಭಾರತೀಯ ಬಹುಮುಖೀ ಸಂಸ್ಕೃತಿಯನ್ನು ಅರಿತು ಜನಸಾಮಾನ್ಯರ ಸಂವೇದನೆಗೆ ಸ್ಪಂದಿಸಿದ್ದರೆ ,ಏಕ್ ಧಕ್ಕಾ ಔರ್ ದೋ ಬಾಬ್ರಿ ಮಸೀದ್ ಥೋಡ್ ದೋ ಎಂದು ಘೋಷಣೆ ಕೂಗಿದ, ದೇಶದಲ್ಲಿ ಕೋಮು ಭಾವನೆಯ ವಿಷಬೀಜವನ್ನು ಬಿತ್ತಿದ, ಸಾವಿರಾರು ಹಿಂದೂ ಯುವಕರನ್ನು ತಪ್ಪುದಾರಿಗೆಳೆದ, ಸಾವಿರಾರು ಅಮಾಯಕ ಕುಟುಂಬಗಳ ವಿನಾಶಕ್ಕೆ ಕಾರಣರಾದ ಮತೀಯವಾದಿ ಫ್ಯಾಸಿಸ್ಟರ ಸಂಗದಲ್ಲಿ ಇರುತ್ತಿರಲಿಲ್ಲ.   ನಾನು ಇಂತಹ ಅಮಾನವೀಯ ಕೃತ್ಯಗಳನ್ನು ಸಮ್ಮತಿಸುವುದಿಲ್ಲ, ಸಮರ್ಥಿಸುವುದಿಲ್ಲ  ಎಂಬ ಹೇಳಿಕೆ ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಒಂದು ಸಮಯಸಾಧಕ ನಿಲುವು ಎನಿಸುತ್ತದೆ. ಇದೇ ಧೋರಣೆಯನ್ನು ವಾಜಪೇಯಿ ತಾವು ಪ್ರಧಾನಿಯಾಗಿದ್ದಾಗಲೂ ತೋರಿದ್ದರು. ೨೦೦೨ರ ಗುಜರಾತ್ ನರಮೇಧವನ್ನು ಅಪಭ್ರಂಶ ಎಂದು ಕರೆದು , ಕ್ರಿಯೆ ಪ್ರತಿಕ್ರಿಯೆಯ ನ್ಯೂಟನ್ ಸಿದ್ಧಾಂತವನ್ನು ಪ್ರತಿಪಾದಿಸಿದ ವಾಜಪೇಯಿ, ಹತ್ಯಾಕಾಂಡವನ್ನು ಖಂಡಿಸಲೂ ಇಲ್ಲ, ಅಥವಾ ಇಂತಹ ಹೀನ ಕೃತ್ಯ ಎಸಗಿದವರಿಂದ ದೂರವಾಗಲೂ ಇಲ್ಲ. ವಾಜಪೇಯಿಯವರ ಸಂಘನಿಷ್ಠೆ ಸಂವಿಧಾನ ನಿಷ್ಠೆಯನ್ನೂ ಮೀರಿಸಿದ್ದನ್ನು ಈ ಸಂದರ್ಭದಲ್ಲಿ ಗುರುತಿಸಬಹುದಿತ್ತು.

೧೯೭೫ರ ತುರ್ತುಪರಿಸ್ಥಿತಿಯಲ್ಲಿ ಪ್ರಜಾತಂತ್ರದ ಪರಿವ್ರಾಜಕರಂತೆ ವರ್ತಿಸಿದರೂ ತಮ್ಮ ಆಳ್ವಿಕೆಯಲ್ಲಿ ಅತ್ಯಂತ ಕರಾಳ ಶಾಸನಗಳ ರೂವಾರಿಯಾಗಿದ್ದೂ ಸತ್ಯ. ಇತ್ತ ಗಾಂಧಿವಾದವೂ ಅಲ್ಲದ ಅತ್ತ ಸಮಾಜವಾದವೂ ಅಲ್ಲದ ನಿರರ್ಥಕ ಆರ್ಥಿಕ ನೀತಿಯನ್ನು ಪ್ರತಿಪಾದಿಸಿದ ವಾಜಪೇಯಿ ತಮ್ಮ ಅಧಿಕಾರಾವಧಿಯಲ್ಲಿ ಅನುಸರಿಸಿದ್ದು ನರಸಿಂಹರಾವ್, ಮನಮೋಹನ್ ಸಿಂಗ್ ಮತ್ತು ಇದೀಗ ನರೇಂದ್ರ ಮೋದಿ ಅನುಸರಿಸುವ ನವ ಉದಾರವಾದವನ್ನೇ ಅಲ್ಲವೇ ? ಭಾರತದ ಪ್ರಜೆಗಳ ನಾಡಿಮಿಡಿತವನ್ನೇ ಗ್ರಹಿಸಲಾಗದ ವ್ಯಕ್ತಿಗೆ ಭಾರತರತ್ನ ಪ್ರಶಸ್ತಿ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...
ಉರ್ದು ಮೂಲ: ಜೆಹರಾ ನಿಗಾಹ್

ಕನ್ನಡಕ್ಕೆ: ಸಂವರ್ತ 'ಸಾಹಿಲ್'ಹೊಟ್ಟೆ ತುಂಬಿದ ಹುಲಿ
ಬೇಟೆಯಾಡುವುದಿಲ್ಲ ಎಂದು ಕೇಳಿದ್ದೇನೆ.
ಅದು ಸುಮ್ಮನೆ ಮರದ ಕೆಳಗಡೆ ನೆರಳಿನಲ್ಲಿ 
ವಿಶ್ರಮಿಸುತ್ತದೆ ಎಂದು ಕೇಳಿ ಬಲ್ಲೆ.

ಬೀಸುವ ಗಾಳಿ ಹೆಮ್ಮರವನ್ನೇ ಅಲುಗಾಡಿಸಿದಾಗ
ಮೈನ ತನ್ನ ಮರಿಗಳ ಅರೆಕ್ಷಣ ತೊರೆದು
ಕಾಗೆಯ ಮರಿಗಳಿಗೆ ರಕ್ಷಣೆ ನೀಡುತ್ತದೆ.

ಮರದಿ ಇರುವ ಗೂಡಿನಿಂದ ಒಂದು ಮರಿಯೂ ಜಾರಿದರೆ
ಕಾಡಿಗೆ ಕಾಡೇ ಎಚ್ಚೆತ್ತುಕೊಳ್ಳುತ್ತದೆ.

ಗೀಜಗನ ಗೂಡು ನದಿಯ ನೀರಿಗೆ ಸಮೀಪ ಜೋತಾಡುತ್ತಿದ್ದರೆ
ನದಿಯ ಮೀನುಗಳೆಲ್ಲ ಅದನ್ನು
ತನ್ನ ನೆರೆಯವರು ಎಂದು ಭಾವಿಸುತ್ತದೆ.

ಬಿರುಗಾಳಿ ಬೀಸಿ ಸಂಕ ಮುರಿದಾಗ
ಒಂದೇ ಮರದ ದಿಮ್ಮಿಯ ಮೇಲೆ
ಅಳಿಲು, ಹಾವು, ಆಡು, ಚಿರತೆ ಒಟ್ಟಿಗಿರುತ್ತವೆ
ಕಾಡಿಗೂ ತನ್ನದೇ ಆದ ನಿಯಮವಿದೆಯೆಂದು ಕೇಳಿದ್ದೇನೆ.

ದೇವರೇ, ಪರಮ ಪೂಜ್ಯನೆ
ವಿವೇಕಿಯೇ, ಬಲಿಷ್ಟನೆ...
ನನ್ನೀ ಊರಿನಲ್ಲಿ
ಕಾಡಿನ ನಿಯಮವನ್ನಾದರೂ ಜಾರಿಗೆ ತಾ
ಬದುಕುವ ರೀತಿಯೊಂದನ್ನು ಕರುಣಿಸು.
ಕಾಡಿಗೂ ತನ್ನದೇ ಆದ ರೀತಿನೀತಿಗಳಿವೆ ಎಂದು ಕೇಳಿದ್ದೇನೆ.

ದೇವರ ರಾಜಕೀಯ ತತ್ವ : ಪುಸ್ತಕ ವಿಮರ್ಶೆ
ಶಿವಕುಮಾರ ಕಂಪ್ಲಿ

ಕೃಪೆ: ಹಿಮಾಗ್ನಿ 
   ’ದೇವರ ರಾಜಕೀಯ ತತ್ವ’(ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ) ಎಂಬ ಅಚ್ಚರಿಯ ಶೀರ್ಷಿಕೆಯನ್ನೊತ್ತ ಈ ಪುಸ್ತಕವು ಪ್ರಾಚೀನ ಮತ್ತು ಆಧುನಿಕ ಭಾರತದ ಸಾಮಾಜಿಕ ಚರಿತ್ರೆಗಳನ್ನ ನಮ್ಮೆದುರು ತೆರೆದಿಡುತ್ತಲೇ ಭಾರತದೊಳಗಿನ ಧರ್ಮಗಳನ್ನ, ಅವುಗಳು ನಡೆಸಿದ ತಾತ್ವಿಕ ಸಂಘರ್ಷಗಳನ್ನ ಚರ್ಚಿಸುತ್ತದೆ.

   ಭಾರತದ ವೇದಕಾಲ,ಸಾಮ್ರಾಜ್ಯ ವ್ಯವಸ್ಥೆಯ ಕಾಲ ಮತ್ತು ಪ್ರಜಾಪ್ರಭುತ್ವದ ಕಾಲಗಳಲ್ಲಾದ ಚಳುವಳಿಗಳನ್ನ ಕುರಿತು ಆಮೂಲಕ ಸಾಮನ್ಯ ವರ್ಗದ ಅದರಲ್ಲೂ ಶೋಷಿತರ ಮತ್ತು ಸ್ತ್ರೀಯರ ವಿಮೋಚನೆಯನ್ನ ಅದಕ್ಕೆ ಅಡ್ಡಿಯಾದ ತಾತ್ವಿಕ ಸಂಘರ್ಷವನ್ನ ಈ ಕೃತಿ ಬಿಡಿಸಿತೋರುತ್ತದೆ.

   ವೈದಿಕ ಹಿಂದೂಯಿಜಂ, ಬುದ್ಧಿಜಂಗಳ ನಡುವೆ ಜರುಗಿದ ಸಂಘರ್ಷಗಳು ಹೇಗೆ ಬೌದ್ಧದರ್ಮವನ್ನ ದೊಡ್ಡ ಧಾರ್ಮಿಕ, ರಾಜಕೀಯ ಶಕ್ತಿಯಾಗಿ ನೆಲೆಗೊಳಿಸಿದವೆಂಬ ಸಂಗತಿಯನ್ನ ಈ ಪುಸ್ತಕ ಅನಾವರಣಗೊಳಿಸುತ್ತದೆ.

   ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಖರ ಚಿಂತಕ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಕಂಚ ಐಲಯ್ಯ ಅವರ ದಲಿತತ್ವ, ಜಾತಿವಿನಾಶ, ನಾನೇಕೆ ಹಿಂದುವಲ್ಲ ಎಂಬ ತೆಲುಗಿನ ಪುಸ್ತಕಗಳು ಈಗಾಗಲೇ ಕನ್ನಡಿಗರಿಗೆ ಪರಿಚಿತವಾಗಿವೆ. ಇವುಗಳ ಸಾಲಿಗೆ ಮತ್ತೊಂದು ಮಹತ್ವದ ಸೇರ್ಪಡೆಯೆಂಬಂತೆ ಡಾ.ಜಾಜಿ ದೇವೇಂದ್ರಪ್ಪನವರು ಅತ್ಯಂತ ಆಪ್ತವಾಗಿ, ಶ್ರದ್ಧೆಯಿಂದ ಈ ಪುಸ್ತಕವನ್ನ ಕನ್ನಡಕ್ಕೆ ತಂದಿದ್ದಾರೆ.

  ಇಲ್ಲಿ ಆದಿ ದ್ರಾವಿಡರ ಸಾಮಾಜಿಕ ವ್ಯವಸ್ಥೆಗಳು ಏಕೆ ನಾಶವಾದವು? ಎಂಬ ಬಲವಾದ ಪ್ರಶ್ನೆಯನ್ನಿಟ್ಟುಕೊಂಡು ಹೊರಟ ಈ ಸಂಶೋಧನಾ ಪುಸ್ತಕವು ಪ್ರಾಚೀನ ಕಾಲದ ಬುದ್ಧನನ್ನ,ಮಧ್ಯಕಾಲೀನ ಬಸವನನ್ನ, ಆಧುನಿಕ ಕಾಲದ ಅಂಬೇಡ್ಕರರನ್ನ ಮುಖ್ಯ ಚಿಂತನೆಯ ಕವಲುಗಳನ್ನಾಗಿಸಿಕೊಂಡಿದೆ.

   ಶ್ರಮ ಶಕ್ತಿಯ ಭಾರತ ಚರಿತ್ರೆಯನ್ನ ಮಾರ್ಕ್ಸಿಜಂಗಿಂತಲೂ ಭಿನ್ನವಾಗಿ ಮುಖ್ಯವಾಗಿ ಕುಲಸಂಬಂಧಿಯಾಗಿಯೇ ನೋಡಬೇಕೆನ್ನುವ ಲೇಖಕರು ಇಲ್ಲಿ ಬೆಳೆದ ಚಳುವಳಿಗಳನ್ನ ಅದರಲ್ಲೂ ದಲಿತ ಮತ್ತು ಮಹಿಳಾ ಚಳುವಳಿಗಳನ್ನ ಗಮನಿಸುತ್ತ ಇವುಗಳ ಮೂಲ ಎಳೆಗಳನ್ನ ವಿಸ್ತರಿಸಲು ಅನುವಾದ ಕೊಸಾಂಬಿ, ರೋಮಿಲಾ ಥಾಪರ್, ಆರ್.ಎಸ್.ಶರ್ಮರ ಚಾರಿತ್ರಿಕ ವಿವರಗಳನ್ನ ನೆನೆದಿದ್ದಾರೆ. ಹಾಗೇ ಪೆರಿಯಾರ್, ಪುಲೆ, ಅಂಬೇಡ್ಕರ್ ರ ಹಾದಿಗಳನ್ನ ತಮ್ಮ ಚಿಂತನೆಗೆ ಕಸಿಮಾಡಿಕೊಂಡಿದ್ದಾರೆ.

   ಈ ಪುಸ್ತಕವು ಬುದ್ಧನನ್ನ ದೇವರೆಂದು ಕರೆದ ವೈದಿಕ ಹಿಂದೂ ರಾಜಕಾರಣದ ಹಿಂದಿರುವ ಸ್ವಾರ್ಥವನ್ನ ಬಯಲಿಗೆಳೆಯುತ್ತ ಬುದ್ಧನನ್ನ ಬಹುದೊಡ್ಡ ರಾಜಕೀಯ ತತ್ವಜ್ಞ ಅಂತ ಸಾಬೀತುಗೊಳಿಸಿದ್ದಾರೆ.ಬುದ್ಧ ಇಲ್ಲಿ ಹಿಂದೂ ಭಾರತೀಯ ಸನ್ಯಾಸಿಗಳಂತಿಲ್ಲ, ಆತ ತನ್ನ ಚಿಂತನೆಗಳನ್ನ ಪೌರಾಣಿಕ ನೆಲೆಯಲ್ಲಿ ಬೋಧಿಸಲಿಲ್ಲ, ದೇವರು ಎಂಬ ಭಾವನೆಯೇ ಬುದ್ಧನ ಚಿಂತನೆಗಳಲಿಲ್ಲ ಎನ್ನುತ್ತ ಯಾಕೆ ಬುದ್ಧನ ತತ್ವಗಳನ್ನ ವೈದಿಕವಾದಿಗಳು ಸಮಾಜಕ್ಕೆ ತಲುಪಗೊಡಲಿಲ್ಲ ಎಂಬುದನ್ನ ತೋರುತ್ತಾರೆ.

   ವೈದಿಕ ಹಿಂದೂವಾದವನ್ನ ಮುಖ್ಯವಾಗಿ ಮೂರು ಆಲೋಚನೆಗಳು ವಿರೋಧಿಸಿವೆ ೧.ಲೋಕಾಯಿತ(ಚಾರ್ವಾಕ) ೨.ಜೈನ ಆಲೋಚನಾ ಧೋರಣೆ ೩. ಬೌದ್ಧ ಆಲೋಚನಾ ಧೋರಣೆ. ಹಿಂದೂ ಧರ್ಮವನ್ನ ಬೌದ್ಧ ಧರ್ಮವನ್ನ ಪರಸ್ಪರ ವಿರುದ್ಧ ಆಲೋಚನಾ ಧೋರಣೆಗಳೆಂದು ಮೊಟ್ಟ ಮೊದಲು ಹೇಳಿದವರು ಡಾ.ಬಿ.ಆರ್. ಅಂಬೇಡ್ಕರ್.

   ಅಂಬೇಡ್ಕರ್ ಬೌದ್ಧ ಧರ್ಮವನ್ನ ಒಂದು ಮತತತ್ವ ಶಾಸ್ತ್ರವಾಗಿ ನೋಡಲಿಲ್ಲ, ಅಲ್ಲದೇ ಬೌದ್ಧ ಧರ್ಮವನ್ನ ಹಿಂದೂಯಿಜಂಗೆ ವ್ಯತಿರೇಕವಾಗಿ ನೋಡಿದರು. ಅಂಬೇಡ್ಕರ್ ರಚಿಸಿದ ಕುಲದ ಕುರಿತು, ಜಾತಿನಿರ್ಮೂಲನೆ, ಹಿಂದೂ ಮತ ತಾತ್ವಿಕ ಪಥ, ಹಿಂದೂ ಸಾಮಾಜಿಕ ಕ್ರಮ, ಪ್ರಾಚೀನ ಆಡಳಿತ ವಿಧಾನ, ಬೌದ್ಧ ಮತ ಕ್ಷೀಣತೆ, ನಾಶ, ಬ್ರಾಹ್ಮಣವಾದ ವಿಜಯ, ಮುಂತಾದ ಸೈದ್ಧಾಂತಿಕ ಬರಹಗಳು ಪ್ರಾಚೀನ ಭಾರತದ ರಾಜಕೀಯ ತಿಳುವಳಿಕೆಯನ್ನ ಮಾರ್ಪಡಿಸುತ್ತವೆ. ಈ ರಚನೆಗಳ ಮುಖೇನ ಅಂಬೇಡ್ಕರ್ ಅವರು ಪ್ರಾಚೀನ ಭಾರತದ ರಾಜಕೀಯ ಆಲೋಚನೆಗಳನ್ನ ವರ್ಗದ ನೆಲೆಯಲ್ಲಿ ನೋಡುವ ಹೊಸ ವಿಧಾನವನ್ನು ನಮ್ಮ ಮುಂದಿರಿಸಿದರು. ಭಾರತೀಯ ಸಮಾಜದಲ್ಲಿ ಅಂತರ್ಗತ ವ್ಶೆರುಧ್ಯಗಳ ಮೂಲಕ ಅರ್ಥಮಾಡಿಕೊಳ್ಳಲು ಅಂಬೇಡ್ಕರ್ ಕೆಲವು ಆಧಾರಗಳನ್ನು ನೀಡಿದರು. ಈ ದೃಷ್ಟಿ ಕೋನದಲ್ಲಿಯೇ ಅವರ ಮಹತ್ವದ ರಚನೆ ’ದಿ ಬುದ್ಧ ಅಂಡ್ ಹಿಜ್ ದಮ್ಮ’ ಬಂದಿತು.

ಬುದ್ಧನನ್ನ ಧಾರ್ಮಿಕ ನೆಲೆಯಲ್ಲಿ ಗ್ರಹಿಸಿದ,ನಿರೂಪಿಸಿದ ಸಾಂಪ್ರದಾಯಿಕ ಮಾರ್ಗವನ್ನ ಬಿಟ್ಟು ಈ ಲೇಖಕರು ಬುದ್ಧನನ್ನು ರಾಜಕೀಯ ನೆಲೆಯಲ್ಲಿ ಚಿಂತಿಸಿದ್ದಾರೆ.ಸಾಂಪ್ರದಾಯಿಕ ಇತಿಹಾಸಕಾರರು ಬುದ್ಧನ ಪರಿತ್ಯಾಗವನ್ನ ಒಂದು ಶವ, ಒಬ್ಬ ವೃದ್ಧ, ಒಬ್ಬ ಸಾಯುತ್ತಿರುವ ಮನುಷ್ಯನೊಂದಿಗೆ ನೋಡಿದರೆ ಇಲ್ಲಿ ಅದು ತಪ್ಪೆನ್ನತ್ತಾ ಅದಕ್ಕೆ ಕಾರಣ ಗಿರಿಜನರ ದಾರುಣ ಬದುಕು, ಹತ್ಯೆಗಳು, ಬಲಿತೆಗೆದುಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳು, ವಿಭಜಿಸಿ ಆಳುತ್ತಿದ್ದ ಬ್ರಾಹ್ಮಣ ಮಂತ್ರಿಗಳು, ತೀವ್ರ ಆಹಾರದ ಕೊರತೆ ಮತ್ತು ವ್ಯವಸಾಯದ ಹಿನ್ನೆಡೆಗಳು ಕಾರಣವೆನ್ನುತ್ತಾರೆ.

  ಬುದ್ಧ ತನ್ನೊಳಗೆ ಮೂಡಿದ ಗೊಂದಲಗಳಿಗೆ ಎಂದಿಗೂ ಆಧ್ಯಾತ್ಮಿಕ ನೆಲೆಯಲ್ಲಿ ಉತ್ತರ ಕಂಡುಕೊಳ್ಳಲಿಲ್ಲ ಬೌತಿಕವಾಗಿಯೇ ಆಲೋಚಿಸಿದ, ಬುದ್ಧನ ದೃಷ್ಟಿಯಲ್ಲಿ ಧರ್ಮ ಎಂದರೆ ಸ್ವಾತಂತ್ರ್ಯ. ಬುದ್ಧನ ಧರ್ಮ ಪ್ರಗತಿ ಪರವಾಗಿ ಯೋಚಿಸುತ್ತಿತ್ತು. ಸಂಘಗಳು, ಬಿಕ್ಷುಗಳು ಭೂಮಿಯ ಆಸ್ತಿ ಹೊಂದುವ ಹಕ್ಕಿರಲಿಲ್ಲ. ಬೆಳ್ಳಿ,ಚಿನ್ನ ತೆಗೆದುಕೊಳ್ಳುವುದನ್ನ ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ಸ್ತ್ರೀ,ಪುರುಷ, ಕುಲ, ಮತ ಜಾತಿಯಿಲ್ಲದೆ ಮಾನವರೆಲ್ಲಗೂ ಜೀವಿಸುವ ಹಕ್ಕನ್ನ ಸ್ವತಂತ್ರ್ಯವನ್ನ ಅನುಮೋದಿಸಿದವನು ಬುದ್ಧ.

 ಮಾನವರ ದುರಾಚಾರಕ್ಕೆ ಕಾರಣ ಬಡತನ ನಿರುದ್ಯೋಗಗಳು. ಶಿಕ್ಷೆಗಳಿಂದ ಈ ಸಮಸ್ಯೆ ಬಗೆಹರಿಯದು ಎಂದು ಹೇಳಿದವನು ಬುದ್ಧ.

  ಅಶ್ವಮೇಧ, ಪರುಷಮೇಧ, ವಾಜಪೇಯಗಳಂತಹ ಯಾಗಗಳಿಂದ ಬಲಿಗಳಿಂದ ಯಾವುದೇ ಒಳಿತು ನಡೆಯುವುದಿಲ್ಲ ಎಂದು ಸಾರಿದವ ಬುದ್ಧ. ವೈದಿಕ ಧರ್ಮ ಅವಜ್ಞೆಗೊಳಿಸಿದ ದಲಿತ ಶ್ರಮಿಕರ ಪರ ಚಿಂತನೆಯನ್ನು, ಸ್ತ್ರೀಯರಿಗೆ ವಿದ್ಯೆ ಮತ್ತು ರಾಜಕೀಯ ಹಕ್ಕನ್ನ ಕುರಿತು ಬುದ್ಧ ಒತ್ತಿ ಹೇಳಿದ. ಸಾಮಾಜಿಕ ಅಸಮಾನತೆಗಳನ್ನ ತೊಡೆದು ಹಾಕಲು ಸಮಾನ ಸಮಾಜ ಕಟ್ಟಲು ಬಯಸಿದ ಭಾರತದ ಮೊದಲ ದಾರ್ಶನಿಕ ಬುದ್ಧ.

  ಲೇಖಕರು ಬುದ್ಧನ ಆಲೋಚನೆಗಳನ್ನ ಆಧುನಿಕ ರಾಜಕೀಯ ಪ್ರಜ್ಞೆಯ ಮೂಲಕ ಚರ್ಚಿಸುತ್ತ ಅಂದಿನ ಮತ್ತು ಇಂದಿನ ರಾಜಕೀಯ ಸ್ವರೂಪವನ್ನ ಇಲ್ಲಿ ಬಿಡಿಸಿಟ್ಟಿದ್ದಾರೆ.

ಎಂಟು ಅಧ್ಯಾಯಗಳ ಈ ಪುಸ್ತಕವು ಕನ್ನಡಕ್ಕೆ ದಾರ್ಶನಿಕರ,  ರಾಜನೀತಿಜ್ಞರ, ಪ್ರಗತಿಪರ ಚಿಂತಕರ ಬೆಳಕನ್ನ ನೀಡುತ್ತದೆ. ಈ ಅನುವಾದವು ನಿಜಕ್ಕೂ ಹಲವರ ಕಣ್ಣು ತೆರಸುವಂತಿದೆ. ಇದಕ್ಕೆ ಕಣ್ಣು ಕಲಸಿದ ಡಾ.ಜಾಜಿ ದೇವೇಂದ್ರಪ್ಪ ನವರು ಮತ್ತು ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿಯವರು ನಿಜಕ್ಕೂ ಅಭಿನಂದನಾರ್ಹರು. 

ಕನ್ನಡ ಪ್ರಭ : 'ಒಳಮೀಸಲಾತಿ ಮುಟ್ಟಲಾರದವನ ಒಡಲಾಳ' ಪುಸ್ತಕ ಕುರಿತು28 . 12 . 2014


ಹೆಡೆ ಬಿಚ್ಚಿದ ವಿಷಸರ್ಪಸನತಕುಮಾರ ಬೆಳಗಲಿ


ಪ್ರಸಕ್ತ ವರ್ಷದ ಆರಂಭದಲ್ಲಿ ಫ್ಯಾಸಿಸ್ಟ್ ವಿಷಸರ್ಪ ಭಾರತದ ಬಾಗಿಲಿಗೆ ಬಂದು ನಿಂತಿತು. ಈಗ ಹೊಸ ವರ್ಷ ಪ್ರವೇಶಿಸುವಾಗ ಇಡೀ ದೇಶದ ಮೇಲೆ ವಿಷಸರ್ಪ ಹೆಡೆಯಾಡಿಸುತ್ತಿದೆ. ಈ ದೇಶ ಮುಂದೆಲ್ಲಿ ಹೋಗುತ್ತದೆ? ಮುಂದೇನು ಆಗುತ್ತದೆ ಎಂದು ಊಹಿಸಲಾಗದಷ್ಟು ವೇಗದಲ್ಲಿ ವಿದ್ಯಮಾನಗಳು ಜರಗುತ್ತಿವೆ. ಅನಿವಾಸಿ ಪ್ರಧಾನಿಮಂತ್ರಿಯವರ ಅನುಪಸ್ಥಿತಿಯಲ್ಲಿ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಇಡೀ ದೇಶವನ್ನು ಈಗ ನಿಯಂತ್ರಿಸುತ್ತಿದೆ. ಯಾರು ಏನನ್ನು ಮಾತಾಡಬೇಕು? ಏನನ್ನು ಬರೆಯಬೇಕು? ಯಾವ ಸಿನೆಮಾ ತೆಗೆಯಬೇಕು ಎಂಬುದೆಲ್ಲ ಈ ಅಧಿಕಾರ ಕೇಂದ್ರದ ಮರ್ಜಿಗೆ ಒಳಪಟ್ಟಿರುತ್ತದೆ. ಹೊಸ ವರ್ಷದಲ್ಲಿ ಸಂಘ ಪರಿವಾರ ತನ್ನದೇ ಆದ ಕಾರ್ಯಸೂಚಿಯನ್ನು ಈಗಾಗಲೇ ಸಿದ್ಧಪಡಿಸಿದೆ.

 ಜನಸಾಮಾನ್ಯರು ದೇಶದ ಆರ್ಥಿಕ, ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸದಂತೆ, ಸರಕಾರದ ವಿರುದ್ಧ ತಿರುಗಿ ಬೀಳದಂತೆ ಅವರಲ್ಲಿ ಕೋಮುವಾದದ ಮತ್ತೇರಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ. ಮೊದಲು ‘ಲವ್ ಜಿಹಾದ್’ ಆಯ್ತು, ಈಗ ಮರುಮತಾಂತರದ ವ್ಯಾಧಿ ಎಲ್ಲಾ ಕಡೆ ಹರಡುತ್ತಿದೆ. ಮುಸಲ್ಮಾನರನ್ನು ಮತ್ತು ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಮಾಡುವ ಕಾರ್ಯ ಆರಂಭವಾಗಿದೆ. ಇದನ್ನು ಯಾರೋ ಬಜರಂಗ ದಳದ ಕಾರ್ಯಕರ್ತರು ಮಾಡುತ್ತಿಲ್ಲ. ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಆಣತಿಯಂತೆ ಇದೆಲ್ಲ ನಡೆಯುತ್ತಿದೆ. ಹೊಸ ವರ್ಷದ ಜನವರಿ 30ರ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ ಗಾಂಧಿ ಹಂತಕ ನಾಥುರಾಮ ಗೋಡ್ಸೆ ಪ್ರತಿಮೆಗಳನ್ನು ಅನಾವರಣ ಮಾಡುವ ಸಿದ್ಧತೆ ನಡೆದಿದೆ. 

ಉತ್ತರಪ್ರದೇಶದಲ್ಲಿ ಈಗಾಗಲೇ ಗೋಡ್ಸೆ ಮಂದಿರ ನಿರ್ಮಿಸಿ, ಆತನ ಮೂರ್ತಿಗೆ ಪೂಜಿಸಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಮಹಾಸಭೆ ಚಿಗಿತುಕೊಂಡಿದೆ. ತಾಂತ್ರಿಕವಾಗಿ ಇದಕ್ಕೂ ತಮಗೂ ಸಂಬಂಧವಿಲ್ಲವೆಂದು ಆರೆಸ್ಸೆಸ್ ಹೇಳಿದರೂ ಪರಸ್ಪರ ತಿಳುವಳಿಕೆ ಮೇಲೆ ಭಿನ್ನಭಿನ್ನ ಕಾರ್ಯಸೂಚಿಗಳಡಿಯಲ್ಲಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಸಾಧ್ವಿ ನಿರಂಜನ ಜ್ಯೋತಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥ ಸೇರಿದಂತೆ ವಿಶ್ವ ಹಿಂದೂ ಪರಿಷತ್ತಿನ ಸನ್ಯಾಸಿ ಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಸ್ವಾಮಿ ವಿವೇಕಾನಂದ, ಗೌತಮ ಬುದ್ಧ, ಸ್ವಾಮಿ ರಾಮತೀರ್ಥ, ಸಿದ್ಧಾರೂಢರಂತಹ ಧಾರ್ಮಿಕ ವ್ಯಕ್ತಿಗಳನ್ನು ನೋಡಿದರೆ, ಗೌರವಭಾವನೆ ಮೂಡುತಿತ್ತು. ಅವರ ಮುಖದ ಮೇಲಿನ ಕಳೆ, ಆ ಸಾತ್ವಿಕ ತೇಜಸ್ಸು ಎಂತಹವರನ್ನೂ ಆಕರ್ಷಿಸುತ್ತಿತ್ತು. ಆದರೆ ಈಗಿನ ಸನ್ಯಾಸಿಗಳು ಭಯೋತ್ಪಾದಕರಂತೆ ಕಾಣುತ್ತಾರೆ. ಇವರಲ್ಲಿ ಅನೇಕರು ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಿಲುಕಿ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಇವರು ಬಾಯಿಬಿಟ್ಟರೆ, ನಂಜಿನ ಸಾಗರವೇ ಹರಿದು ಬರುತ್ತದೆ. ದೇಶದಲ್ಲಿ ಇಷ್ಟೆಲ್ಲ ನಡೆದಿರುವಾಗ ಪ್ರಧಾನಿ ನರೇಂದ್ರ ಮೋದಿ ಜಾಣಮೌನ ತಾಳಿದ್ದಾರೆ. ಇದು ದೇಶ ಒಡೆಯುವ ಶಕ್ತಿಗೆ ನೀಡುವ ವೌನ ಸಮ್ಮತಿಯಾಗಿದೆ. 

ಸಂಘ ಪರಿವಾರದ ಕಾರ್ಯಸೂಚಿ ಬರೀ ಗೋಹತ್ಯೆ ನಿಷೇಧ, ಲವ್ ಜಿಹಾದ್, ಮತಾಂತರ ನಿಷೇಧ, ಮಂದಿರ ನಿರ್ಮಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರ ಅಂತಿಮ ಗುರಿ ಹಿಂದೂ ರಾಷ್ಟ್ರ ನಿರ್ಮಾಣ. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕಾದರೆ ಈಗಿರುವ ಪ್ರಜಾಪ್ರಭುತ್ವ ಆಡಳಿತ ಪದ್ಧತಿ ನಾಶವಾಗಬೇಕು. ಸರ್ವಜನರಿಗೂ ಸಮಾನಾವಕಾಶ ನೀಡಿದ ಸಂವಿಧಾನವನ್ನು ಕಸದ ಬುಟ್ಟಿಗೆ ಹಾಕಬೇಕು. ಇವೆಲ್ಲ ಸಂಘ ಪರಿವಾರದ ಅಜೆಂಡಾದಲ್ಲಿವೆ. ಈ ನಿಟ್ಟಿನಲ್ಲಿ ಜನರನ್ನು ಧ್ರುವೀಕರಣಗೊಳಿಸಲು ನಿರಂತರವಾಗಿ ಅವರನ್ನು ಉನ್ಮಾದದಲ್ಲಿ ಇಡಲು ಆರೆಸ್ಸೆಸ್ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತದೆ. ಮುಸಲ್ಮಾನರು ಮತ್ತು ಕ್ರೈಸ್ತರ ಮತಾಂತರಕ್ಕೆ ಮಾತ್ರ ಆರೆಸ್ಸೆಸ್ ತೃಪ್ತವಾಗುವುದಿಲ್ಲ. ಭಾರತದಲ್ಲಿ ಹಿಂದೂ ಧರ್ಮವೊಂದೇ ಅಸ್ತಿತ್ವದಲ್ಲಿ ಇರಬೇಕು. ಉಳಿದವರು ಅದರ ಗುಲಾಮರಂತಿರಬೇಕು ಎಂದು ಗೋಳ್ವಲ್ಕರ್ ಆಗಲೇ ಹೇಳಿದ್ದಾರೆ. ಹಿಂದೂ ಧರ್ಮವೆಂದರೆ ವೈದಿಕ ಮನುವಾದಿ ಧರ್ಮ. ಅಂತಲೇ ಅವೈದಿಕ ಧರ್ಮಗಳಾದ ಜೈನ್, ಬೌದ್ಧ, ಸಿಖ್ ಧರ್ಮಗಳನ್ನು ಸಂಘ ಪರಿವಾರ ಈಗ ಸಹಿಸಿದರೂ ಮುಂದೆ ಸಹಿಸುವುದಿಲ್ಲ. ಈ ಧರ್ಮಗಳಿಂದ ವ್ಯಕ್ತಿಗಳನ್ನು ಮತಾಂತರ ಮಾಡದೇ ಇದೇ ಧರ್ಮವನ್ನು ಆಪೋಷನ ಮಾಡಿಕೊಳ್ಳಲು ಸಂಘ ಪರಿವಾರ ಯೋಜನೆ ರೂಪಿಸಿದೆ. ದೇಶದಲ್ಲಿ ಜೈನರ ಸಂಖ್ಯೆ ಕ್ಷೀಣಿಸು ತ್ತಿದೆಯೆಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಆತಂಕ ವ್ಯಕ್ತ ಪಡಿಸಿದ್ದರು. 

ಈ ರೀತಿಯ ಆತಂಕ ವ್ಯಕ್ತಪಡಿಸಿದ ಅವರೇ ವಿಶ್ವ ಹಿಂದೂ ಪರಿಷತ್ತಿನ ಉನ್ನತ ಸಮಿತಿಯೊಂದರ ನೇತೃತ್ವ ವಹಿಸಿದ್ದಾರೆ. ಇದು ಹಿಂದೂ ಧರ್ಮದಲ್ಲಿನ ಜೀರ್ಣವಾಗುವ ಮೊದಲ ಹೆಜ್ಜೆ. ಕ್ರಮೇಣ ಇಡೀ ಧರ್ಮವನ್ನೇ ಸಂಘಪರಿವಾರ ಪಚನ ಮಾಡಿಕೊಳ್ಳುತ್ತದೆ. ತಮ್ಮದು ವೈದಿಕೇತರ ಧರ್ಮ, ಚಾತುರ್‌ವರ್ಣಕ್ಕೆ ವಿರೋಧವಾಗಿರುವ ಧರ್ಮ ಎಂದು ಸಿದ್ಧಾಂತ ಪ್ರತಿಪಾದಿಸುವ ಜೈನರು ತಮಗೆ ಅರಿವಿಲ್ಲದೇ ಹಿಂದೂತ್ವದ ಬಲೆಗೆ ಬಿದ್ದಿದ್ದಾರೆ. ಬೌದ್ಧರು ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಆದರೂ ದಲೈಲಾಮಾ ಅವರು ಇತ್ತೀಚೆಗೆ ವಿಎಚ್‌ಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಿಖ್ಖರು ಮಾತ್ರ ತಮ್ಮ ಐಡೆಂಟಿಟಿ ಉಳಿಸಿಕೊಳ್ಳಲು ಹಿಂದೂತ್ವವಾದದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.

 ಇನ್ನು ದಲಿತರಲ್ಲಿ ಎಡ-ಬಲ ಎಂದು ಒಡೆಯಲಾಗಿದೆ. ದಲಿತರ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರ್ ಅವರ ಚಾರಿತ್ರವಧೆ ಮಾಡಲು ಕೂಡ ಸಂಘ ಪರಿವಾರ ಯತ್ನಿಸಿತು. ಆರೆಸ್ಸೆಸ್ ಸಿದ್ಧಾಂತವಾದಿ ಅರುಣ್ ಶೌರಿಯವರು ಅಂಬೇಡ್ಕರ್ ಅವರ ತೇಜೋವಧೆ ಮಾಡಿ ಒಂದು ಪುಸ್ತಕ ಬರೆದರು. ಇದರ ವಿರುದ್ಧ ದಲಿತರು ತಿರುಗಿಬಿದ್ದಾಗ, ಆರೆಸ್ಸೆಸ್ ತನ್ನ ಬಣ್ಣ ಬದಲಿಸಿ ತನ್ನ ಕಾರ್ಯಕ್ರಮಗಳಲ್ಲಿ ಭಗತ್‌ಸಿಂಗ್ ಫೋಟೊ ಅಕ್ರಮವಾಗಿ ಹಾಕಿದಂತೆ ಅಂಬೇಡ್ಕರ್ ಫೋಟೊ ಹಾಕುತ್ತಿದೆ. ಹಿಂದೂತ್ವದ ಈ ಉನ್ಮಾದದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿದ ವಿಶ್ವ ಮಾನವ ಸಂದೇಶವನ್ನು ಯಾರು ಕೇಳುತ್ತಾರೆ. 

ಬಸವಣ್ಣನ ಅನುಯಾಯಿಗಳೇ ಚಡ್ಡಿ ಹಾಕಿ ಪಥಸಂಚಲನ ನಡೆಸುತ್ತಿರುವಾಗ, ಅವರು ನೀಡಿದ ಸಕಲ ಜೀವಾತ್ಮರ ಕಲ್ಯಾಣದ ಸಂದೇಶ ಕೇವಲ ಸ್ವಾಮಿಗಳ ಪ್ರವಚನಕ್ಕೆ ಸೀಮಿತವಾಗುತ್ತದೆ. ಈ ದೇಶದ ಸ್ವಾತಂತ್ರ್ಯ ಚಳವಳಿಯ ಐಕಾನ್‌ಗಳಾದ ಗಾಂಧಿ ಮತ್ತು ನೆಹರೂ ಅವರ ಮೇಲೆ ಸಂಘ ಪರಿವಾರ ದಾಳಿ ಆರಂಭಿಸಿ ಅವರ ತೇಜೋವಧೆ ಮಾಡುತ್ತಿದೆ. ಸ್ವಾತಂತ್ರ ಹೋರಾಟದ ಅರಿವಿಲ್ಲದ ಹೊಸ ಪೀಳಿಗೆಯಲ್ಲಿ ಗೋಡ್ಸೆ ಆರಾಧಕರನ್ನು ಸೃಷ್ಟಿಸಲಾಗುತ್ತಿದೆ. ಈ ಎಲ್ಲ ಗೊಂದಲದಲ್ಲಿ ದೇಶವನ್ನು ಲೂಟಿ ಮಾಡಲು ಕಾರ್ಪೊರೇಟ್ ಕಂಪೆನಿಗಳು ಮುತ್ತಿಗೆ ಹಾಕಿವೆ. ಇದನ್ನು ಪ್ರತಿರೋಧಿಸಬೇಕಾದ ಜನ ಜಾತಿ-ಧರ್ಮದ ದ್ವೇಷದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದಾರೆ. ಜನರನ್ನು ಈ ರೀತಿ ಹೊಡೆದಾಟಕ್ಕೆ ಹಚ್ಚಿ ಅಡ್ಡದಾರಿ ಹಿಡಿಸಿದ್ದಕ್ಕೆ ಆರೆಸ್ಸೆಸ್‌ಗೆ ದೇಶ-ವಿದೇಶದ ಕಾರ್ಪೊರೇಟ್ ಕಂಪೆನಿಗಳಿಂದ ಹಣ ಹರಿದು ಬರುತ್ತಿದೆ. ಈ ಹಣದಲ್ಲಿ ವಿಮಾನದಲ್ಲಿ ಹಾರಾಡುವ ಸಿಂಘಾಲ್, ತೊಗಾಡಿಯಾ ಅಂಥವರು ಯುವಕರಿಗೆ ಸ್ಫೂರ್ತಿಯ ನಾಯಕರಾಗುತ್ತಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಮೋದಿ ಸರಕಾರ ಈಗಾಗಲೇ ದುರ್ಬಲಗೊಳಿಸಿದೆ. ಇದರಿಂದ ಜೈವಿಕ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗುತ್ತಿದೆ. ಗಣಿಗಾರಿಕೆಗೆ ಮುಕ್ತ ಅವಕಾಶ ನೀಡುತ್ತಿರುವುದರಿಂದ ನೀರು, ಗಾಳಿ ಕಲುಷಿತಗೊಳ್ಳುತ್ತಿದೆ. ಅರಣ್ಯ ನಾಶವಾಗುತ್ತಿದೆ. ಗಿರಿಜನರನ್ನು ಒಕ್ಕಲೆಬ್ಬಿಸ ಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಸೂಕ್ಷ್ಮ ಅರಣ್ಯಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ದೇಶದ ಬಗ್ಗೆ ಮಾತನಾಡುವ ಸಂಘಪರಿವಾರ ಈ ಕುರಿತು ತುಟಿ ಬಿಚ್ಚುವುದಿಲ್ಲ.

ಇದನ್ನು ಪ್ರತಿರೋಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಜಾತ್ಯತೀತ ಶಕ್ತಿಗಳು ದಿಕ್ಕಾಪಾಲಾಗಿವೆ. ಜಾತ್ಯತೀತತೆಯನ್ನು ತಾನೇ ಗುತ್ತಿಗೆ ಹಿಡಿದಂತೆ ಮಾತನಾಡುತ್ತಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆ ಸೋಲಿನ ನಂತರ ತುರ್ತು ಚಿಕಿತ್ಸಾ ಘಟಕ ಸೇರಿದೆ. ಈಗ ಸೋಲಿನ ಕಾರಣ ಹುಡುಕಲು ಹೊರಟಿದೆ. ಹಿಂದೂಗಳು ಕೋಪಗೊಂಡಿದ್ದರಿಂದ ಕಾಂಗ್ರೆಸ್ ಸೋಲಬೇಕಾಯಿತು ಎಂದು ತಾನೇ ಭ್ರಮಿಸಿ ಹಿಂದೂಗಳನ್ನು ಓಲೈಸುವ ದಿಕ್ಕಿನತ್ತ ಸಾಗಲು ಸಿದ್ಧತೆ ನಡೆಸಿದೆ. ಇದು ಇನ್ನೊಂದು ಆತ್ಮಹತ್ಯಾ ಪ್ರಯತ್ನ. ಇನ್ನು ಎಡಪಕ್ಷಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಎಷ್ಟೇ ದುರ್ಬಲಗೊಂಡಿದ್ದರೂ ವಿನಾಶಕಾರಿ ಆರ್ಥಿಕ ನೀತಿ, ಕೋಮುವಾದದ ವಿರುದ್ಧ ಈಗಲೂ ದನಿಯೆತ್ತಿ ಹೋರಾಡುತ್ತಿದೆ. ಈ ಹೋರಾಟ ಆರ್ಥಿಕ ಬೇಡಿಕೆಗಳನ್ನು ಮೀರಿ ದಲಿತ, ಹಿಂದುಳಿದ, ಆದಿವಾಸಿ ಜನಸಮುದಾಯಗಳನ್ನು ಒಳಗೊಂಡ ವಿಶಾಲ ಹೋರಾಟ ರೂಪಗೊಳ್ಳಬೇಕಿದೆ. ಇಂತಹ ಜನ ಹೋರಾಟವೊಂದೇ ಈ ದೇಶದ ಪ್ರಜಾಪ್ರಭುತ್ವ ರಕ್ಷಿಸಬಲ್ಲದು. ಹೊಸ ವರ್ಷದಲ್ಲಿ ಸಂಘ ಪರಿವಾರದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಪ್ರಗತಿಪರರ ಏಕೈಕ ಕಾರ್ಯಸೂಚಿಯಾಗಬೇಕಿದೆ.

ಇಚ್ಛಾಶಕ್ತಿ ಎಂಬುದು...
ಶೂದ್ರ ಶ್ರೀನಿವಾಸ


ಆಕರ್ಷಕವಾದ ದೊಡ್ಡ ಭಾವ ಚಿತ್ರ. ‘ಎದೆ ತುಂಬಿ ಹಾಡಿದ ಕವಿ’ ಭಾವಚಿತ್ರಗಳ ಲೋಕದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾ ಹೋಗಿದ್ದಕ್ಕೆ ಒಂದು ವರ್ಷ ತುಂಬಿದೆ. ಈ ಪುಣ್ಯ ಸ್ಮರಣೆಗೆ ಒಂದಷ್ಟು ಲೇಖಕರು ಮತ್ತು ಆತ್ಮೀಯ ಬಂಧು ಬಳಗ ಪುಷ್ಪ ನಮನ ಸಲ್ಲಿಸಲು ಸೇರಿದ್ದಾರೆ. ನಾನು ಹೊರಗೆ ಕಂಪೌಂಡಿನಲ್ಲಿ ಅವರಿಗೆ ಪ್ರಿಯವಾದ ಗರಿಕೆಯ ಹುಲ್ಲಿನ ಹಸಿರನ್ನು ಆಸ್ವಾದಿಸುತ್ತಾ ಕೂತಿದ್ದೆ. ಒಳಗಡೆಯಿಂದ ‘ಆನಂದಮಯ ಈ ಜಗ ಹೃದಯ’ ಕವಿತೆಯ ಭಾವಪೂರ್ಣ ಧ್ವನಿ ಹೊರಗೆ ಬರುತ್ತಿತ್ತು. ನಾನು ಶೂದ್ರದ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಶಿವಮೊಗ್ಗ ಸುಬ್ಬಣ್ಣನವರಿಂದ ಈ ಕವಿತೆಯನ್ನು ಹಾಕಿಸುತ್ತಿದ್ದೆ. ಆಗ ಪ್ರ್ರೊ. ಜಿ.ಎಸ್.ಎಸ್.ರವರು ‘‘ಏನಪ್ಪ ಶೂದ್ರ ಆ ಕವಿತೆಯನ್ನು ಅಷ್ಟೊಂದು ಇಷ್ಟ ಪಡುತ್ತೀಯಾ?’’ ಎಂದು ಆಪ್ತವಾಗಿ ಕೇಳುತ್ತಿದ್ದರು.ಆಗ ‘‘ಹೌದು’’ ಎಂದರೆ; ಕುವೆಂಪು ಅವರ ರೀತಿಯಲ್ಲಿ ಮಂದಸ್ಮಿತರಾಗುತ್ತಿದ್ದರು. ಇಂಥ ಮಂದಸ್ಮಿತ ದಿನಗಳ ಘಟನೆಗಳನ್ನು ಮೆಲುಕು ಹಾಕುತ್ತಾ ಕೂತಿದ್ದೆ.ಅದೇ ಜಾಗದಲ್ಲಿ ಬಹಳಷ್ಟು ಬಾರಿ ಕೂತು ಸಾಹಿತ್ಯಿಕ ಚರ್ಚೆ ಅಥವಾ ಹರಟೆಗಳಲ್ಲಿ ತೊಡಗಿದ್ದುಂಟು. ಒಂದು ದೃಷ್ಟಿಯಿಂದ ಅವರಿಗೆ ಹರಟೆಯೂ ಕೂಡ ಸಾಹಿತ್ಯದ ಚರ್ಚೆಯಾಗಿರುತ್ತಿತ್ತು. ಕಾವ್ಯ ಮತ್ತು ಸಾಹಿತ್ಯ ಎಂದರೆ; ಯಾವಾಗಲೂ ಎದೆ ತುಂಬಾ ಪ್ರತಿಕ್ರಿಯಿಸುತ್ತಿದ್ದರು. ಆಗ ಅವರ ಅಸ್ಮಿತೆಗಳು ಎಲ್ಲಿಲ್ಲದ ಜೀವ ಪಡೆದು ಬಿಡುತ್ತಿದ್ದವು. ಅವರು ನಿಧನರಾಗುವುದಕ್ಕೆ ಎರಡು ವರ್ಷಗಳ ಹಿಂದೆ ಗೆಳೆಯ ಕೃಷ್ಣಮೂರ್ತಿ ನಿರ್ದೇಶಿಸಿರುವ ಸಾಕ್ಷ ಚಿತ್ರದ ಶೂಟಿಂಗ್ ಸಮಯದ ಬಿಡುವಿನಲ್ಲಿ ಹೊರಗೆ ಕೂತು ಎಂತೆಂಥೆದೋ ಮಾತುಕತೆಗೆ ತೊಡಗಿದ್ದರು. ಅನಂತಮೂರ್ತಿಯವರ ಜೊತೆಯಲ್ಲಿ. ಇದಕ್ಕೆ ವೌನದ ಸಾಕ್ಷಿಗಳೆಂಬಂತೆ ಡಾ.ಎಚ್.ಎಸ್.ರಾಘವೇಂದ್ರ ರಾವ್, ಡಾ. ಕೆ.ಎಂ.ಎಸ್., ಕೃಷ್ಣಮಾಸಡಿ ಮತ್ತು ನಾನು ಇದ್ದೆವು. ಒಟ್ಟು ಅವರ ಮಾತಿನ ಹಿಂದಿದ್ದ ‘ಇಚ್ಛಾಶಕ್ತಿಯ’ ಚೈತನ್ಯ ಕುರಿತು ಈಗಲೂ ಒಮ್ಮಿಮ್ಮೆ ಅವಲೋಕಿಸಿಕೊಳ್ಳುವೆ. ಪ್ರೊ.ಜಿ.ಎಸ್.ಎಸ್, ಅನಂತ ಮೂರ್ತಿ ಹಾಗೂ ಲಂಕೇಶ್ ಅವರು ಯಾವಾಗಲೂ ಆ ಅಮೂರ್ತ ‘ಇಚ್ಛಾಶಕ್ತಿ’ ಎಂಬ ಪರಿಕಲ್ಪನೆಯ ಬಗ್ಗೆಯೇ ಒತ್ತುಕೊಟ್ಟು ಮಾತಾಡುತ್ತಿದ್ದರು. ಅದಕ್ಕೆ ಶಿಸ್ತು ಎಂಬುದು ಹೇಗೆ ಕವಚವಾಗಿ ಆವರಿಸಿಕೊಂಡು ಲವಲವಿಕೆಯನ್ನು ತುಂಬುತ್ತಿರುತ್ತದೆ ಎಂಬುದೂ ಕೂಡ ಬಹು ಮುಖ್ಯವಾದದ್ದು. ಹಾಗೆ ನೋಡಿದರೆ ತುಂಬ ದಿನ ಅವರ ಒಡನಾಡಿಯಾಗಿ ಓಡಾಡುವ ಸಮಯದಲ್ಲಿ ‘ಇಚ್ಛಾಶಕ್ತಿ’ಗೆ ಮತ್ತು ಕಾರ್ಯತತ್ಪರತೆ ಸ್ವಾಭಾವಿಕವಾಗಿಯೇ ಸ್ಥಾನವನ್ನು ಪಡೆದು ಬಿಡುತ್ತಿತ್ತು. ಇದಕ್ಕೆ ಉದಾಹರಣೆಯೆಂಬಂತೆ; ಮಾತಿನ ನಡುವೆ ‘ಅಸ್ಮಿತೆ’ಗಳು ರೂಪಕ ಶಕ್ತಿಗಳಾಗಿ ಬಿಡುತ್ತಿತ್ತು.

      ಪ್ರೊ.ಜಿ.ಎಸ್.ಎಸ್. ಅವರ ಸಂಪರ್ಕಕ್ಕೆ ಬಂದವರೆಲ್ಲ; ‘ಇಚ್ಛಾಶಕ್ತಿ’ಯನ್ನು ಅನು ಭವಿಸುತ್ತಲೇ ಹೋಗಿದ್ದಾರೆ. ಹೀಗೆ ಅನುಭವಿಸುವುದೆಂದರೆ; ಅದನ್ನು ಅಂತರಂಗದಲ್ಲಿ ಸವಿದಂತೆ. ಅದರ ಮುಂದುವರಿದ ಭಾಗವಾಗಿ ನಮ್ಮಾಳಗೂ ಚೈತನ್ಯ ತುಂಬುವುದಿದೆಯಲ್ಲ; ಅತ್ಯಂತ ಮಹತ್ವಪೂರ್ಣವಾದದ್ದು. ಈ ದೃಷ್ಟಿಯಿಂದ ಮೊದಲೇ ಪ್ರಸ್ತಾಪಿಸಿದಂತೆ ‘ಆನಂದಮಯ ಈ ಜಗ ಹೃದಯ’ ಮತ್ತು ‘ಎದೆ ತುಂಬಿ ಹಾಡುವೆ’ ಧ್ವನಿಯ ಭಾವತೀವ್ರತೆಯನ್ನು ಅನುಭವಿಸುತ್ತಾ ಡಾ. ಕೆ.ಎಂ.ಎಸ್. ಅವರಿಗೆ, ‘‘ನಿಮ್ಮ ಮೊಮ್ಮಗಳಿಗೆ ಹಿಂದೂಸ್ಥಾನಿ ಸಂಗೀತದ ವ್ಯವಸ್ಥೆ ಆಯಿತಾ?’’ ಎಂದು ಕೇಳಿದೆ. ಅದಕ್ಕೆ ಅವರು ‘‘ಖ್ಯಾತ ಸಿತಾರ್‌ವಾದಕರಾಗಿದ್ದ ಬಾಳೇಖಾನ್ ಅವರ ಮಗ ಹಫೀಝ್ ಅವರು ವಾರಕ್ಕೆ ಎರಡು ಬಾರಿ ಗಾಯನವನ್ನು ಕಲಿಸಿ ಹೋಗುತ್ತಾರೆ’’ ಎಂದರು. ತಕ್ಷಣ ನೆನಪಾದದ್ದು ಪ್ರೊ. ಜಿ.ಎಸ್.ಎಸ್. ಅವರು ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಶೂದ್ರದ ಹದಿನೈದನೆಯ ವರ್ಷದ ಕಾರ್ಯಕ್ರಮದಲ್ಲಿ ಬಾಳೇಖಾನ್ ಅವರ ಸಿತಾರ್ ವಾದನವನ್ನು ಇಬ್ಬರು ಸೂಕ್ಷ್ಮ ಸಂವೇದನೆಯ ಲೇಖಕರಾದ ಶಂಕರ ಮೊಕಾಶಿ ಪುಣೇಕರ್ ಹಾಗೂ ಪ್ರೊ. ಬಿಳಗಿರಿಯವರೊಡನೆ ಕೇಳುತ್ತಾ ಸಂಭ್ರಮ ಪಡುತ್ತಿದ್ದ ಕ್ಷಣಗಳು. ಈಗ ತಮ್ಮ ಮರಿಮಗಳು ಹಿಂದೂಸ್ಥಾನಿ ಸಂಗೀತವನ್ನು ಬಾಳೇಖಾನ್ ಅವರ ಮಗನಿಂದ ಕಲಿಯುತ್ತಿದ್ದಾರೆ ಎಂಬುದನ್ನು ಕಂಡಿದ್ದರೆ; ಎಷ್ಟು ಖುಷಿ ಪಡುತ್ತಿದ್ದರು.

     ಈ ಎಲ್ಲಾ ಹಿನ್ನೆಲೆಯಲ್ಲಿ ಎಂತೆಂಥದ್ದನ್ನೋ ಮೆಲುಕು ಹಾಕುತ್ತಾ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿಯವರೊಡನೆ ; ಪ್ರೊ. ಜಿ.ಎಸ್.ಎಸ್. ಪುಣ್ಯ ಸ್ಮರಣೆಯ ನೆನಪಿನ ಊಟ ಮಾಡಿ ಕೂತಿದ್ದೆವು. ಆಗ ಜಿ.ಎಸ್.ಎಸ್. ಅವರ ‘ಇಚ್ಛಾಶಕ್ತಿ’ಯ ಮೂಲಕವೇ ಬೆಳೆದ ಬಹುಮುಖಿ ವ್ಯಕ್ತಿತ್ವದ ಪುಂಡಲೀಕ ಹಾಲಂಬಿಯವರು ಬಂದರು. ಅವರು ‘‘ನೀವೆಲ್ಲ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನಕ್ಕೆ ಬರಲೇಬೇಕು’’ ಎಂದು ಒತ್ತಾಯದ ಆಹ್ವಾನವನ್ನು ನೀಡುತ್ತಲೇ ‘‘ಡಾ. ಸಿದ್ದಲಿಂಗಯ್ಯನವರನ್ನು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ನಾವು ಪರಿಷತ್ತಿನಿಂದ ಆಯ್ಕೆ ಮಾಡಿದ ಮೇಲೆ ಎಂಥ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಿಜವಾಗಿಯೂ ಇದು ಚಾರಿತ್ರಿಕವಾಗಿ ಅಭಿಮಾನ ಪಡುವ ಸಂಗತಿಯಲ್ಲವೇ?’’ ಎಂದು ನಮ್ಮ ಮುಂದೆ ಸಂಭ್ರಮದಿಂದ ಮಾತಾಡುತ್ತಿದ್ದರು. ಹಾಗೆಯೇ ತಮ್ಮ ಕಾಲಾವಧಿಯಲ್ಲಿ ಮತ್ತೊಬ್ಬ ಅಲ್ಪಸಂಖ್ಯಾತ ಲೇಖಕರಾದ ಡಾ. ನಾ. ಡಿ’ಸೋಜ ಅವರು ಅಧ್ಯಕ್ಷರಾದರು ಎಂದು ಆಗ ಅವರಿಗೆ ಹೇಳಬೇಕೆಂದಿದ್ದೆ: ನೀವು ಇಲ್ಲದಿದ್ದರೆ ವಿಜಾಪುರದ ಈಗಿನ ವಿಜಯಪುರದ ಸಾಹಿತ್ಯ ಸಮ್ಮೇಳನಕ್ಕೆ ಅತ್ಯಂತ ಹಿರಿಯ ಲೇಖಕರು ಮತ್ತು ಚಿಂತಕರಾದ ಕೋ. ಚೆನ್ನಬಸಪ್ಪನವರು ಆಗುತ್ತಿರಲಿಲ್ಲ ಎಂದು.ಮತ್ತೆ ನೃಪತುಂಗ ಪ್ರಶಸ್ತಿಯನ್ನು ಸಾರಾ ಅಬೂಬಕರ್ ಅವರಿಗೆ ಕೊಡುವ ಸಮಯದಲ್ಲಿ ಇದೇ ಇಚ್ಛಾಶಕ್ತಿಯನ್ನಿಟ್ಟುಕೊಂಡು ನನ್ನಲ್ಲಿ ಗುನುಗುನಿಸಿದ್ದರು. ಆಗ ಅರಳು ಪ್ರಶಸ್ತಿಗೆ ಆಯ್ಕೆ ಮಾಡಲು ನಾನು ಮತ್ತು ಡಾ. ವಸುಂಧರಾ ಭೂಪತಿಯವರು ತೀರ್ಪುಗಾರರಾಗಿದ್ದ ಸಮಯದಲ್ಲಿ; ಈ ವಿಷಯದ ಬಗ್ಗೆ ಕಳಕಳಿ ತೋರಿಸಿದಾಗ; ಅದರ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಡಾ. ಕೆ. ಮರುಳಸಿದ್ಧಪ್ಪ ಅವರ ಬಳಿ ಪ್ರಸ್ತಾಪಿಸಿ, ಖುಷಿಯಿಂದ ಚರ್ಚಿಸಿ ಒಪ್ಪಿಗೆ ನೀಡುವರು ಎಂದಿದ್ದೆ.

ಇಂಥ ಮನಸ್ಥಿತಿಯ ಹಿನ್ನೆಲೆ ಶ್ರೀಮಂತನಾಗಲು ಪ್ರೊ ಜಿ.ಎಸ್.ಎಸ್. ಮತ್ತು ಡಾ. ಕೆ. ಮರುಳಸಿದ್ದಪ್ಪ ಅವರು ಕಾರಣವೆಂಬುದು ನನ್ನ ಗ್ರಹಿಕೆ. ಅವರ ವಿದ್ಯಾರ್ಥಿಯಾಗಿ ಸಾಹಿತ್ಯದ ಬರವಣಿಗೆಯಲ್ಲಿ ತೊಡಗದಿದ್ದರೂ ಸಾಹಿತ್ಯಿಕ ಮನಸ್ಸನ್ನು ಬೆಳೆಸಿಕೊಳ್ಳುತ್ತಲೇ ಭ್ರಷ್ಟರಾಗದೆ ಉಳಿದವರು. ಹೋದ ಕಡೆಯಲ್ಲೆಲ್ಲಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ದವರು, ಬೆಂಗಳೂರು ಪ್ರಸಾರಾಂಗದ ಮುಖ್ಯಸ್ಥರಾಗಿ ಯಾರ್ಯಾರೋ ಭ್ರಷ್ಟತೆಯ ಆಪಾದನೆಯನ್ನು ಬೆನ್ನಿಗೆ ಅಂಟಿಸಿಕೊಂಡರೂ        ಶುದ್ಧ ಹಸ್ತದಿಂದ ಹೊರಗೆ ಬಂದವರು. ಅಷ್ಟೇ ಅಲ್ಲ ಬೋಧಕೇತರ ನೌಕರರ ಸಂಘಟನೆಯ ನಾಯಕರಾಗಿ ಎಂಥ ಅಪೂರ್ವ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಹೋಟೆಲ್ ಕಾರ್ಮಿಕರ ಸಹಕಾರ ಬ್ಯಾಂಕನ್ನು ಸ್ಥಾಪಿಸಿ, ಬೆಳೆಸಿರುವ ಕ್ರಮವೇ ಅದ್ಭುತವಾದದ್ದು. ಅತ್ಯಂತ ಸುಸ್ಥಿತಿಯಲ್ಲಿರುವ ಬ್ಯಾಂಕ್. ಸಾವಿರಾರು ಹೋಟೆಲ್ ಕಾರ್ಮಿಕರು ಪುಂಡಲೀಕ ಅವರನ್ನು ಸ್ಮರಿಸಿಕೊಳುತ್ತಾರೆ. ಹಾಗೆ ನೋಡಿದರೆ: ಪುಂಡಲೀಕ ಅವರು ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿನ ಒರಟು ವ್ಯಕ್ತಿತ್ವದವರು ಅನ್ನಿಸಿದರೂ; ನೈತಿಕ ಪ್ರಜ್ಞೆಯಿಂದ ಕೆಲಸ ಮಾಡುವಂತಹವರು. ಈ ನೈತಿಕ ಪ್ರಜ್ಞೆಯೇ ಒಂದು ರೀತಿಯ ಕ್ರಿಯಾಶಿಲತೆ ಮತ್ತು ಇಚ್ಛಾಶಕ್ತಿಯನ್ನು ಬೆಳೆಸಿದೆ, ಇಲ್ಲದಿದ್ದರೆ; ಸಮ್ಮೇಳನದ ಅದ್ಯಕ್ಷತೆಗೆ ಡಾ. ಡಿ’ಸೋಜಾ ಮತ್ತು ಡಾ. ಸಿದ್ದಲಿಂಗಯ್ಯ ಅಂಥವರನ್ನು ತರಲು ಆಗುತ್ತಿರಲಿಲ್ಲ. ಅವರಿಗೆ ದೇವನೂರು ಮಹಾದೇವ ಅವರನ್ನು ತರಬೇಕೆಂದು ಆಸೆ ಇದ್ದರೂ ; ಅದು ಕೈಗೂಡದಿದ್ದಾಗ; ತಮ್ಮ ಇಚ್ಛಾಶಕ್ತಿಯನ್ನು ಬದಲಿಸಿ ಕೊಳ್ಳಲಿಲ್ಲ.ಆ ಜಾಗವನ್ನು ಡಾ ಸಿದ್ದಲಿಂಗಯ್ಯನವರ ಮೂಲಕ ತುಂಬಿದರು. ‘ನೃಪತುಂಗ’ ಸಾಹಿತ್ಯ ಪ್ರಶಸ್ತಿಯನ್ನು ಪಡೆದವರ ಬಗ್ಗೆ ಅರ್ಥಪೂರ್ಣ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಈ ಸಮಯದಲ್ಲಿ ಸಮಾ ರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಕೆ. ಮರುಳಸಿದ್ದಪ್ಪನವರು ಸಮಾರೋಪ ಭಾಷಣವನ್ನು ಮಾಡುತ್ತಾ; ‘‘ಹೆಚ್ಚು ಹೆಚ್ಚು ಗಂಭೀರ ಲೇಖಕರನ್ನು ಒಳಗೆ ಬಿಟ್ಟುಕೊಳ್ಳುತ್ತಲೆ; ಅದರ ಕಾರ್ಯಸ್ವರೂಪಕ್ಕೆ ಒತ್ತುಕೊಡುತ್ತಲೇ ಬೆಳೆಯಬೇಕಾಗುತ್ತದೆ. ಹಾಗೆಯೇ ಪುಂಡಲೀಕರಂಥವರು ದಲಿತ ಲೇಖಕರೊಬ್ಬರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವುದು ಶ್ಲಾಘನೀಯವಾ ದುದು’’ ಎಂದು ಹೇಳಿದ ಮೇಲೆ; ತುಂಬಾ ಭಾವನಾತ್ಮಕವಾಗಿ ಸಮ್ಮೇಳನಾಧ್ಯಕ್ಷರ ಕುರಿತು ಹಾಗೂ ನಾಗರೀಕತೆ ಮತ್ತು ಭಾಷಾ ಮಾಧ್ಯಮ ಕುರಿತು ನುಡಿದರು. ಅತ್ಯಂತ ಮೇಲ್ವರ್ಗದಿಂದ ಬಂದು ಸಾಹಿತ್ಯ ಪರಿಷತ್ತಿನ ಎಲ್ಲ ರಾಜ್ಯಮಟ್ಟದ ಪದಾಧಿಕಾರಿಗಳನ್ನು ತಮ್ಮ ಅಭಿಪ್ರಾಯದ ತೆಕ್ಕೆಯೊಳಗೆ ತೆಗೆದುಕೊಂಡು ಡಾ. ಸಿದ್ದಲಿಂಗಯ್ಯನವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ಚಾರಿತ್ರಿವಾದದ್ದು.

 ಜಾತಿ, ಗುಂಪುಗಾರಿಕೆ, ಮತ್ತು ಪ್ರಾದೇಶಿಕತೆ ಎಂಬುದು ವಿಚಿತ್ರ ರೀತಿಯಲ್ಲಿ ಕೆಲಸ ಮಾಡುವ ಕಾಲಘಟ್ಟದಲ್ಲಿ ಡಾ. ಸಿದ್ದಲಿಂಗಯ್ಯನವರ ಆಯ್ಕೆ ಸಾರ್ಥಕವಾದದ್ದು. ಲೇಖಕರಾಗಿ, ಕವಿಯಾಗಿ ಸಂಸ್ಕೃತ ಚಿಂತಕರಾಗಿ ಅವರ ಕೊಡುಗೆ ಅಪಾರವಾದದ್ದು. ಇದನ್ನು ಒತ್ತಿ ಹೇಳುತ್ತಲೇ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಸಮರ್ಥಿಸಿಕೊಂಡದ್ದು ಕೂಡ ಮೆಚ್ಚುವಂಥದ್ದು. ಈ ಹಿನ್ನೆಲೆಯಲ್ಲಿ ಪುಳಕಿತರಾಗಿ ನನ್ನೊಡನೆ ಮಾತಾಡುವಾಗ ‘‘ಶೂದ್ರ ಅವರೇ, ಈ ಬಾರಿ ಪ್ರೊ. ಜಿ.ಎಸ್.ಎಸ್. ಅವರ ಹೆಸರಿನಲ್ಲಿ ಕೊಡುವ ವಿಮರ್ಶೆ ಕ್ಷೇತ್ರದ ಪ್ರಶಸ್ತಿಯ ಸಂದರ್ಭದಲ್ಲಿ ಡಾ. ಸಿದ್ದಲಿಂಗಯ್ಯನವರನ್ನು ಕರೆದು ಅಭಿನಂದಿಸಬೇಕು. ಯಾಕೆಂದರೆ: ಪ್ರೊ. ಜಿ.ಎಸ್.ಎಸ್. ಅವರ ಪ್ರೀತಿ ಪಾತ್ರ ಶಿಷ್ಯರಾಗಿದ್ದವರು.’’ ಎಂದು ಎದೆ ತುಂಬಿ ಮಾತಾಡಿದರು. ಇದರ ಜೊತೆಗೆ ಸಮ್ಮೇಳನವನ್ನು ಶ್ರವಣಬೆಳಗೊಳದಲ್ಲಿ ಮಾಡುತ್ತಿರುವಾಗ; ಅಲ್ಲಿಯ ಮುಖ್ಯಸ್ಥರಾದ ಜೈನ ಮುನಿಗಳು ಇಂಥವರೇ ಆಗಬೇಕೆಂದು ನಮ್ಮ ಮೇಲೆ ಒತ್ತಡ ತರಲಿಲ್ಲ. ಮತ್ತು ಡಾ. ಸಿದ್ದಲಿಂಗಯ್ಯ ಅವರ ಆಯ್ಕೆಯನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿದರು ಎಂಬುದನ್ನು ನಮ್ಮ ಮುಂದೆ ಹೇಳುವಾಗಲೂ ಉಲ್ಲಾಸವನ್ನು ತುಂಬಿಕೊಂಡಿದ್ದರು. ಒಟ್ಟಿನಲ್ಲಿ ‘ತಮ್ಮ ಕಾಲಘಟ್ಟದಲ್ಲಿ ಇಂತದ್ದೊಂದನ್ನು ಮಾಡಿದೆ’ ಎಂಬುದರ ಬಗ್ಗೆ ಆತ್ಮೀಯವಾದ ತಾದಾತ್ಮತೆಯನ್ನು ತುಂಬಿಕೊಂಡಿದ್ದವರು. ಕೊನೆಗೂ ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಇದೇ ಅನ್ನಿಸುತ್ತದೆ. ಯಾಕೆಂದರೆ ವಾಗ್ವಾದ, ಸಂವಾದ ಅಭಿರುಚಿಯ ನೆಲೆಗಳನ್ನು ವಿಸ್ತರಿಸಲು ಸಾಧ್ಯ. ಡಾ. ಸಿದ್ದಲಿಂಗಯ್ಯನವರು ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ವ್ಯಕ್ತಿತ್ವವನ್ನು ಹೊಂದಿರುವಂಥವರು. ಕೇವಲ ದಲಿತರಲ್ಲಿ ಮಾತ್ರವಲ್ಲ ಎಲ್ಲ ಜನಸಮುದಾಯಗಳ ಚಿಂತಕರ ಮಧ್ಯೆ ಜನಪ್ರಿಯರಾಗಿರುವಂಥವರು. ‘ಹೊಲೆಮಾದಿಗರ ಹಾಡು’ ಸಂಕಲನವು ಸಾಹಿತ್ಯಿಕವಾಗಿ ಮೂಡಿಸಿದ ಸಂಚಲನವು ಮಹತ್ವಪೂರ್ಣವಾದುದು. ಇದರಿಂದ ಎಂತೆಂಥ ದಲಿತ ಮತ್ತು ಕೆಳವರ್ಗದ ವಿಭಿನ್ನ ಮನಸ್ಸುಗಳು ತಮ್ಮ ರಚನಾ ವಿಧಾನವನ್ನು ಅವಲೋಕಿಸಿಕೊಳ್ಳಲು ಸಾಧ್ಯವಾಯಿತು ಎಂಬುದೇ ನಾವು ಚರ್ಚಿಸಬೇಕಾದ ವಿಷಯ. ದಲಿತ ಸಂವೇದನೆಯ ಚೌಕಟ್ಟಿನಲ್ಲಿ ಒಂದು ‘ಸ್ಕೂಲ್ ಆಫ್ ಥಾಟ್’ ಅತ್ಯಂತ ದಟ್ಟವಾಗಿ ಕಾಣಿಸಿಕೊಂಡಿತು ಎಂಬುದೇ ಮುಖ್ಯವಾದದ್ದು. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ; ಒಬ್ಬ ಅತ್ಯುತ್ತಮ ‘ಪಾರ್ಲಿಮೆಂಟೇರಿಯನ್’ ಎಂಬ ರೀತಿಯಲ್ಲಿ ತಮ್ಮ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಡಾ. ಸಿದ್ದಲಿಂಗಯ್ಯನವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಬೇಕೆಂದು ಗೆಳೆಯರಾದ ಡಿ. ಆರ್. ನಾಗರಾಜ್, ಟಿ.ಎನ್.ಸೀತಾರಾಮ್ ಮತ್ತು ರಮೇಶ್‌ಬಂದಗದ್ದೆೆಯವರ ಜೊತೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯವರ ಜೊತೆ ಸಮಾಲೋಚಿಸಲು ಸಾಂಸ್ಕೃತಿಕವಾಗಿ ಹಿರಿಯ ರಾಜಕಾರಣಿಯಾಗಿದ್ದ ಎಂ.ಪಿ. ಪ್ರಕಾಶ್‌ರವರು ವ್ಯವಸ್ಥೆ ಮಾಡಿದ್ದರು. ಇದರಲ್ಲಿ ಡಾ. ಕೆ. ಮರುಳಸಿದ್ದಪ್ಪನವರ ಪಾತ್ರವೂ ಮುಖ್ಯ. ಹೆಗ್ಗಡೆಯವರ ಜೊತೆಗಿನ ಅಂದಿನ ಸಮಾಲೋಚನೆ ಎಷ್ಟೊಂದು ಔಚಿತ್ಯಪೂರ್ಣವಾಗಿತ್ತು. ವಿಧಾನಪರಿಷತ್ತಿನ ಸದಸ್ಯರಾಗಿ ಎಂತೆಂಥ ಅಮೂಲ್ಯ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಇವರು ‘ಅಗ್ನಿ ಶಾಮಕ ಇಲಾಖೆ’ಯ ನೌಕರರಿಗೆ ಮಾಡಿರುವ ಕೆಲಸವನ್ನು ಈಗಲೂ ಆ ವರ್ಗದ ಜನರು ಆತ್ಮೀಯವಾಗಿ ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಮಾಡಿರುವ ಕೆಲಸ ಸ್ಮರಿಸಿಕೊಳ್ಳುವಂಥದ್ದು.

  ಕಳೆದ ನಾಲ್ಕು ದಶಕಗಳಿಂದ ಅದೇ ತುಂಟತನ, ಹಾಸ್ಯಮಯತೆ ಮತ್ತು ಗಂಭೀರತೆಯನ್ನು ತುಂಬಿಕೊಂಡಿರುವಂತಹವರು. ಎಂಥ ಜಡತ್ವ ತುಂಬಿದ ಸಭೆಗೂ ಜೀವ ತುಂಬಬಲ್ಲವರು. ವಿನಯವಂತ ವ್ಯಕ್ತಿತ್ವ. ತಮ್ಮ ಪರಿಚಯದ ತೆಕ್ಕೆಗೆ ಯಾರು ಬಂದರೂ; ಅವರ ಕಷ್ಟ ಸುಖಗಳಿಗೆ ಭಾಗಿಯಾಗುವಂಥವರು. ಇಂತ ನೂರಾರು ಉದಾಹರಣೆಗಳು ನನ್ನ ಗಮನಕ್ಕೆ ಬಂದಾಗ; ಖುಷಿ ಪಟ್ಟಿದ್ದೇನೆ. ಹಾಗೆಯೇ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಭ್ರಷ್ಟರಾಗದೆ ಪುಸ್ತಕ ಸಂಸ್ಕೃತಿಯ ಅಗಾಧತೆಯ ಕುರಿತಂತೆ ಕಳಕಳಿಯನ್ನು ಹೊಂದಿರುವಂಥವರು; ‘ಕನ್ನಡ ಸಾಹಿತ್ಯ ಪರಿಷತ್ತು’ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆ. ದೊಡ್ಡ ದೊಡ್ಡ ಘೋಷಣೆಗಳಿಗೆ ಹೋಗದೆ ಈ ರೀತಿಯಲ್ಲಿ ಆರೋಗ್ಯ ಪೂರ್ಣತೆಯನ್ನು ಕಾಪಾಡಿಕೊಂಡು ಹೋದರೂ ಸಾಕು. ಸಾಮಾಜಿಕವಾಗಿ ಜನಮಾನಸದಲ್ಲಿ ಉಳಿಯಲು ಸಾಧ್ಯ. ಘೋಷಣೆಗಳು ಮತ್ತು ನಿರ್ಣಯಗಳ ಮೊತ್ತ ಜಾಸ್ತಿಯಾದಷ್ಟು ಕ್ಲೀಷೆಗೆ ಒಳಗಾಗುತ್ತಾ ಹೋಗುತ್ತವೆ. ಕೊನೆಗೂ ಎಲ್ಲರೂ ‘ಎದೆ ತುಂಬಿ’ ಯೋಚಿಸಬೇಕು ಅಲ್ಲವೇ? ಎಂಬ ಪಿಸು ನುಡಿ ಅಂತರಾಳದಲ್ಲಿ ಧ್ವನಿಸುತ್ತಿತ್ತು.

Wednesday, December 24, 2014

ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆಕೃಪೆ : ಪ್ರಜಾವಾಣಿ 


ಕೇಂದ್ರ  ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಭಗವ­ದ್ಗೀತೆ’ ಭಾರತದ ರಾಷ್ಟ್ರೀಯ ಧರ್ಮಗ್ರಂಥ
­ವಾಗ­ಬೇಕು ಎಂದು ಹೇಳಿದ್ದರಿಂದ ಚರ್ಚೆ ಶುರು­ವಾಗಿದೆ. ಸಂಸತ್ತಿನಲ್ಲಿ ಆಡಳಿತೇತರ ಪಕ್ಷಗಳಿಗೆ ಸೇರಿದ ಕೆಲವು ಸಂಸದರು ಈ ಹೇಳಿಕೆ­ಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಗೀತೆಯಲ್ಲಿ ಏನಿದೆ? ಅದು ಇರುವುದು ಯಾರ ಪರ ಅಥವಾ ವಿರುದ್ಧ? ಎಂಬುದರ ಕಡೆ ಯಾರೂ ಗಮನ ಹರಿಸಿಲ್ಲ.


ಕ್ರಾಂತಿಕಾರಕ ಬುದ್ಧಧಮ್ಮ ಉಚ್ಛ್ರಾಯ ಸ್ಥಿತಿಗೇರಿ ಆ ಹೊತ್ತಿಗೆ ಇಳಿಮುಖವಾಗುತ್ತಿತ್ತು. ಬುದ್ಧ ಸೈದ್ಧಾಂತಿಕವಾಗಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ.  ಇದನ್ನು ಸಹಿಸದ ವೈದಿಕ ಮತಾಂಧತೆ ಸಂಘವನ್ನು ನಾಶ ಮಾಡಲು ಸನ್ನಾಹ ನಡೆಸುತ್ತಿತ್ತು. ಪ್ರತಿ ಕ್ರಾಂತಿಗೆ ಪ್ರಣಾ­ಳಿಕೆ­ಯಾಗಿ ಭಗವದ್ಗೀತೆ ಸೃಷ್ಟಿಯಾಯಿತು. ಇದಕ್ಕೆ ಪುರಾವೆಯಾಗಿ ನಿರ್ವಾಣ ಪದ ಗೀತೆಯಲ್ಲಿ ಪದೇ ಪದೇ (೨.೭೨ ಮತ್ತು ೫.೨೪–-೨೬.) ಬಳಕೆ­ಯಾ­ಗಿರುವುದನ್ನು ಕಾಣಬಹುದು. ಗೀತೆಗಿಂತ ಹಿಂದಿನ ಬ್ರಾಹ್ಮಣ ಮತ ಗ್ರಂಥಗಳಲ್ಲಿ ನಿರ್ವಾಣ ಶಬ್ದ ಪ್ರಯೋಗವಾಗಿರುವುದು ಕಾಣುವುದಿಲ್ಲ.  (ಈ ವಿಷಯವಾಗಿ ಬಲ್ಲವರು ತಿಳಿಸಿದರೆ ಕೃತಜ್ಞತೆ­ಯಿಂದ ಈ ಅಭಿಪ್ರಾಯ ತಿದ್ದಿಕೊಳ್ಳುತ್ತೇನೆ.) ಬುದ್ಧಧಮ್ಮದಲ್ಲಿ ‘ನಿರ್ವಾಣ’,  ಆಧ್ಯಾತ್ಮಿಕ ಅನು­ಭವದ ಅತ್ಯುನ್ನತ ಸ್ಥಿತಿ ಎಂಬುದು ಗೊತ್ತಿರುವ ವಿಚಾರ.

ಭಗವದ್ಗೀತೆ ಹೇಳುವವನು ಕೃಷ್ಣ, ಕೇಳುವವನು ಅರ್ಜುನ, ಬರೆಯುವವನು ವ್ಯಾಸ. - ಮೂವರೂ ಅಬ್ರಾಹ್ಮಣರು. ಕೃಷ್ಣ ಗೊಲ್ಲ (ಯಾದವ), ಅರ್ಜುನ ಕ್ಷತ್ರಿಯ, ವ್ಯಾಸ ಬೆಸ್ತ (ಮೀನು­ಗಾರ್ತಿಯ ಮಗ). ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಏಕೆ ಪ್ರಬಲವಾಗಿ ಪ್ರತಿಪಾದಿ­ಸುತ್ತದೆ ಎಂದರೆ ಅದಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಗ­ವ­ದ್ಗೀತೆ ಪ್ರಾರಂಭ­ವಾಗುವುದೇ ಕುಲಕ್ಷಯ (೧.೩೮–-೪೦ ಜಾತಿ ನಾಶ), ವರ್ಣಸಂಕರ (೧.೪೧–-೪೪ ಜಾತಿ ಬೆರಕೆ)ಗಳನ್ನು ತಡೆಗಟ್ಟುವುದ­ಕ್ಕಾಗಿ.  ಕುಲಕ್ಷಯ ಮತ್ತು ವರ್ಣ­ಸಂಕರಗಳನ್ನು ತಡೆಯಬೇಕೆಂದು ಅರ್ಜುನ ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಕೃಷ್ಣನಿಗೆ ಹೇಳಿ ಬಿಲ್ಲು­ಬಾಣಗಳನ್ನು ರಥದಲ್ಲಿ ಹಾಕಿ ಕುಳಿತು­ಕೊಳ್ಳುತ್ತಾನೆ.

ಗೀತೆ ಬಹಳ ಪ್ರಖ್ಯಾತವಾಗಲು ಮಹಾತ್ಮ ಗಾಂಧೀಜಿ ಅವರ ಪ್ರಚಾರ ಕಾರಣ ಎನ್ನಬೇಕು. ‘ಕರ್ಮ ಮಾಡುವುದಕ್ಕೆ ನಿನಗೆ ಅಧಿಕಾರ, ಫಲಾ­ಪೇಕ್ಷೆ ಇಲ್ಲದೆ ಕೆಲಸ ಮಾಡು ’ಎಂದು ಕೃಷ್ಣ ಹೇಳು­ತ್ತಾನೆ.   ಆಳು ಜೀತ ಮಾಡುತ್ತಾನೆ, ಲಾಭವೆಲ್ಲ ಯಜ­ಮಾನನಿಗೇ ಹೋಗುತ್ತದೆ. ದುಡಿಮೆ­ಗಾರ­ನಿಗೆ ದುಡಿದದ್ದೇ ಲಾಭ! ಹೀಗಾಗಿ ಕೃಷ್ಣನದು ಜೀತ­ಗಾರಿಕೆ ಮುಂದುವರಿಸುವ ಮಾತು.  ಗೀತೆ ಶ್ರಮ­ಜೀವಿಗಳನ್ನು ತುಳಿಯುವ ಸಂದೇಶ ಸಾರುತ್ತಿದೆ.

ಲೋಕದಲ್ಲಿರುವ ಅನ್ಯಾಯ, ಅಸಮಾನತೆ, ಸುಲಿಗೆ, ಶೋಷಣೆ, ದಾಸ್ಯ, ಪಾರತಂತ್ರ್ಯ, ದಬ್ಬಾ­ಳಿಕೆ, ಬಡತನ, ಮೋಸ, ಮೇಲು ಕೀಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದವುಗಳನ್ನೆಲ್ಲ ಹೋಗ­ಲಾಡಿಸುವುದು ಹೇಗೆ? ಇದಕ್ಕೆ ಗೀತೆಯಲ್ಲಿ ಉತ್ತರವಿಲ್ಲ.
‘ಮನುಸ್ಮೃತಿ’ಗಿಂತ (ಕ್ರಿ.ಪೂ.೧೮೫) ಭಗ­ವದ್ಗೀತೆ (ಕ್ರಿ.ಶ. ಮೂರನೆಯ ಶತಮಾನ) ಹೆಚ್ಚು ಭಯಂಕರವಾದ ಗ್ರಂಥ. ಮನುಸ್ಮೃತಿ ಒರಟಾ­ಯಿತು ಎಂದೇನೋ ಮೃದು ಮಧುರವಾದ ಸಂಗೀ­ತಮಯ ಕಾವ್ಯಭಾಷೆಯಲ್ಲಿ ಭಗವದ್ಗೀತೆ­ಯನ್ನು ಬರೆಯಲಾಗಿದೆ. ಓದುಗರನ್ನು ಆಕರ್ಷಿ­­ಸಲು ಮಾಡಿರುವ ಉಪಾಯ ಇದು. ಗೀತೆಯದು ಬಹಳ ಸುಂದರವಾದ ಭಾಷೆ. ಆದರೆ ಅದೆಲ್ಲ ಅಪಾ­ಯಕಾರಿಯಾಗಿರುವುದನ್ನು ಅರಿಯ­ಬೇಕಾ­ಗಿದೆ.

ಭಗವದ್ಗೀತೆಯಲ್ಲಿರುವ ‘ವಿಶ್ವರೂಪ ದರ್ಶನ’­­­ದಲ್ಲಿ ನೀಡಿರುವ ವಿವರಗಳು ಭಾರತಕ್ಕೆ ಸೀಮಿತ­ಗೊಂಡಿವೆ. ವಿದೇಶಗಳ ಹೆಸರುಗಳು ಇಲ್ಲಿ ಬಂದಿಲ್ಲ. ಆದ್ದರಿಂದ ಇದನ್ನು ವಿಶ್ವರೂಪ ದರ್ಶನ ಎನ್ನದೆ ‘ಸಂಕ್ಷಿಪ್ತ ಭಾರತ ದರ್ಶನ’ ಎಂದು ಕರೆ­ಯುವುದು ಸೂಕ್ತ. ಗೀತಕಾರನ ಭೌಗೋಳಿಕ ಜ್ಞಾನ­ವೆಲ್ಲ ಕೇವಲ ಭರತಖಂಡಕ್ಕೆ ಸೀಮಿತ­ವಾಗಿದೆ. ಗೀತೆ ರಚನೆಯಾಗುವುದಕ್ಕಿಂತ ಮುನ್ನವೇ ಚಾಲ್ತಿ­ಯಲ್ಲಿ ಇದ್ದ ಎಲ್ಲಾ ತತ್ವ­ಶಾಖೆಗಳ ಪುನರು­ಚ್ಚಾರ ಗೀತೆಯಲ್ಲಿ ಬಂದಿದೆ. ಗೀತೆಯ ಒಂದೊಂದು ಅಧ್ಯಾಯದಲ್ಲಿ ಒಂದೊಂದು ತತ್ವ­ವನ್ನು ಹೇಳಲಾಗಿದೆ. ಒಂದು ಅಧ್ಯಾಯಕ್ಕೂ ಇನ್ನೊಂದು ಅಧ್ಯಾಯಕ್ಕೂ ಸಂಬಂಧವಿಲ್ಲ. ಭಗವ­ದ್ಗೀತೆಯಲ್ಲಿ ಹೊಸ ಬೆಳಕಿಲ್ಲ. ಅದರಲ್ಲಿ ಜಾತಿ­ವ್ಯವಸ್ಥೆಯ ಸಮರ್ಥನೆ ತುಂಬಿದೆ. ಗೀತೆ ಹಿಂದೂ ದರ್ಶನಗಳ ಒಂದು ಕೋಷ್ಟಕ ಅಥವಾ ಅಡಕ ಅಷ್ಟೆ.

ಕೃಷ್ಣ ತಪಸ್ಸು ಮಾಡಿ ನಿಜವಾದ ಆಧ್ಯಾತ್ಮ ಜ್ಞಾನ ಗಳಿಸಿದ್ದ ಎಂಬುದಕ್ಕೆ ಗೀತೆಯಲ್ಲಿ ವಿವರ­ಗಳಿಲ್ಲ. ಬುದ್ಧ ತನ್ನ ‘ಸುತ್ತ’ಗಳಲ್ಲಿ, ಪರಮ­ಹಂಸರ ‘ಶ್ರೀರಾಮಕೃಷ್ಣ ವಚನವೇದ’ದಲ್ಲಿ, ವಿವೇಕಾ­ನಂದರು ತಮ್ಮ ಬರಹಗಳಲ್ಲಿ ಸಾಕ್ಷಾ­ತ್ಕಾರ ಪಡೆಯಲು ನಡೆಸಿದ ಶ್ರಮಗಳನ್ನು ವಿವರಿಸಿ­ದ್ದಾರೆ. ಕೃಷ್ಣನಿಗೆ ಇಂಥ ಅನುಭವ ಆಗಿಲ್ಲ. ಅವನು ಕಿರಿಯವನಾಗಿದ್ದಾಗ ಗೋಪಿಕೆಯರ ಸಂಗಡ­ದಲ್ಲಿದ್ದ. ತಾರುಣ್ಯದಲ್ಲಿ ಅಷ್ಟ ಮಹಿಷಿ­ಯರು ಮತ್ತು ಹದಿನಾರು ಸಾವಿರ ಹೆಂಡತಿಯರ ಜೊತೆಗಿದ್ದ. ಕೊನೆಗೆ ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ರಥ ನಡೆಸಿದ. ಇಂಥವನು ಹೇಗೆ ಅಧ್ಯಾತ್ಮ ಜೀವಿಯಾಗುತ್ತಾನೆ? ಅಧ್ಯಾತ್ಮ ಜೀವನಕ್ಕೆ ಪರಿ­ಶುದ್ಧತೆ, ಕಾಮನಿಗ್ರಹ ಅತ್ಯಂತ ಅವಶ್ಯಕ. ಇದಾವುದೂ ಇಲ್ಲದ ಕೃಷ್ಣ ಜ್ಞಾನಿ ಅಲ್ಲ. ದೇವ­ರಾಗಲು ಕೃಷ್ಣನಿಗೆ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ಕೃಷ್ಣನಿಗೆ ಪಾವಿತ್ರ್ಯವಿಲ್ಲ, ಇಂದ್ರಿಯ ನಿಗ್ರಹ ಇಲ್ಲ, ಪರಮ ಜ್ಞಾನವಿಲ್ಲ.

ಸ್ವಧರ್ಮವನ್ನು ವ್ಯಾಖ್ಯಾನಕಾರರು ಮನಸೋ ಇಚ್ಛೆ ವಿವರಿಸಿದ್ದಾರೆ. ಈ ಪದವನ್ನು ಗೀತೆಯ ಸಂದರ್ಭದಲ್ಲೇ ಅರ್ಥ ಮಾಡಿಕೊಳ್ಳುವುದು ಒಳ್ಳೆ­ಯದು. ಗೀತೆಯ ಚೌಕಟ್ಟಿನಲ್ಲಿ ಸ್ವಧರ್ಮ ಎಂದರೆ ಜಾತಿ ಎಂದೇ ಅರ್ಥ ನಿರ್ಣಯವಾಗುತ್ತದೆ.
‘ಯುದ್ಧವು ಕ್ಷತ್ರಿಯನಿಗೆ ಸ್ವಧರ್ಮ ಎಂದು ತಿಳಿದ ನಂತರವೂ ನೀನು ಯುದ್ಧ ಮಾಡದಿದ್ದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಹಾಳು ಮಾಡಿ­ಕೊಂಡು ಪಾಪವನ್ನು ಪಡೆಯುತ್ತೀಯೆ. ಆದ್ದ­ರಿಂದ ನೀನು ಯುದ್ಧ ಮಾಡು ’ಎಂದು ಅರ್ಜುನ­ನಿಗೆ ಕೃಷ್ಣ ಪುಸಲಾಯಿಸುತ್ತಾನೆ. ಹಾಗಾಗಿ ಸ್ವ­ಧರ್ಮ ಎಂದರೆ ಕ್ಷತ್ರಿಯ ಜಾತಿ, ಮತ್ತು ಪ್ರತಿ­ಯೊಬ್ಬನ ಜಾತಿ ಎಂದು ಅರ್ಥ ಬರುತ್ತದೆ. ಕ್ಷತ್ರಿಯ ಧರ್ಮದ ಪ್ರಕಾರ ಕೊಲ್ಲಲು ಪ್ರೇರೇಪಿ­ಸುವ ಕೃಷ್ಣನನ್ನು ದೇವರು ಮಾಡಲಾಗಿದೆ. ಅಪರಾಧ ಕಾನೂನು ಸಂಹಿತೆ ದೃಷ್ಟಿಯಲ್ಲಿ ದುಷ್ಟ ಕೃತ್ಯ ಪ್ರೇರಕ ಕೃಷ್ಣ  ತಪ್ಪಿತಸ್ಥ,  ಅಪರಾಧಿ. ಇಂಥ ‘ಭಗ­ವದ್ಗೀತೆ’ಯನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಕೇಂದ್ರ ಸರ್ಕಾರ ಘೋಷಿಸಿದರೆ ಹತ್ಯೆ ಮಾಡುವ ಮನಸ್ಸುಳ್ಳ ಪಕ್ಷ ಮತ್ತು ಸಂಘಟನೆ­ಗಳಿಗೆ ಹಾಗೂ ಜನರಿಗೆ ರಾಜ ರಹದಾರಿ ನೀಡಿ­ದಂತಾಗುತ್ತದೆ. ಯಾವ ದೃಷ್ಟಿಯಿಂದ ನೋಡಿ­ದರೂ ಭಗವ­ದ್ಗೀತೆ ರಾಷ್ಟ್ರೀಯ ಧರ್ಮ ಗ್ರಂಥ­ವಾಗಲು ಲಾಯ­ಕ್ಕಾಗಿಲ್ಲ.
ವಿಜ್ಞಾನ ಚಂದ್ರಲೋಕ, ಮಂಗಳ ಲೋಕಗಳಿಗೆ ಹೋಗಿ ಬಂದಿದೆ. ಧರ್ಮ ಗ್ರಂಥಗಳು ಹೇಳುವ ಸ್ವರ್ಗ, ಕೈಲಾಸ, ವೈಕುಂಠ ಅಲ್ಲಿ ಕಂಡು ಬಂದಿಲ್ಲ.  ಮುಕ್ತಿ, ಸದ್ಗತಿ ಮುಂತಾದ ಮಾತುಗಳನ್ನು ಎಲ್ಲಾ ಮತ­ಗ್ರಂಥಗಳು ಹೇಳುತ್ತವೆ. ಗೀತೆಯೂ ಅದನ್ನೇ ಉಚ್ಚರಿಸುತ್ತದೆ. ವಾಸ್ತವವಾಗಿ ಇರುವುದು ಇದೊಂದೇ ಲೋಕ; ಇಲ್ಲಿ ನಾವೆಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ಬದುಕುವುದನ್ನು ರೂಢಿ­ಸಿ­­ಕೊಳ್ಳಬೇಕು ಎಂದು ಭಾವಿಸುವುದು ವಿವೇಕ­ಯುತ.

ಕೃಷ್ಣ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ­ರಿಂದ ಅವನನ್ನು ದೇವರನ್ನಾಗಿ  ಮಾಡಲಾಗಿದೆ. ಇಲ್ಲದಿದ್ದರೆ ಅವನನ್ನೂ ಜಾತಿ­ಯನ್ನು ನಿರಾಕರಿಸಿದ ಬುದ್ಧನನ್ನು ತಿರಸ್ಕರಿಸಿದಂತೆ ತಿರಸ್ಕರಿಸುತ್ತಿದ್ದರು.   ಮನುಷ್ಯರೆಲ್ಲ ಒಂದೇ ಎಂದು ಬೋಧಿಸುವ ಧರ್ಮಗ್ರಂಥ ‘ಧಮ್ಮಪದ ’ ಒಂದೇ.

ಭಗವದ್ಗೀತೆ ಪರಿಪೂರ್ಣ ಗ್ರಂಥ ಅಲ್ಲ. ಭಗ­ವದ್ಗೀತೆ ಸಂಪ್ರದಾಯವನ್ನು ಸ್ಥಿರೀಕರಿಸುವ ಪ್ರಗತಿ ವಿರೋಧಿ ಗ್ರಂಥ. ಭಗವದ್ಗೀತೆ ಶೇ. ೯೮ ಮಂದಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಉಳಿದ ಶೇ. ೨ರಷ್ಟು ಜನರಿಗೆ ಮಾತ್ರ ಅನುಕೂಲ­ವಾಗಿ-­ರುವುದು. ಇವರು ಪುಣ್ಯಯೋನಿಜರಾದುದರಿಂದ ಏನು ಕೇಡು ಮಾಡಿದರೂ ಅದು ತಪ್ಪಲ್ಲ! ಪಾಪ­ಯೋನಿಜರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಏಳಿಗೆ ಇಲ್ಲ! ಎಂಥ ಭಯಂಕರ ತತ್ವಜ್ಞಾನ ಕೃಷ್ಣನದು! ಇಂಥ ಭಗವದ್ಗೀತೆ ಹೇಗೆ ಪವಿತ್ರ?

ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಕೆಲವು ಪ್ರಶ್ನೆಗಳು
ಅಂತೂ ಇಂತೂ ಕನ್ನಡ ಸಾಹಿತ್ಯ ಪರಿ­ಷತ್ತು ಮಡಿ–ಮೈಲಿಗೆಯಿಂದ ಹೊರ­ಬಂದಿದೆ. ಇದಕ್ಕೆ ಪೂರಕವೆಂಬಂತೆ ಕವಿ ಡಾ.ಸಿದ್ಧಲಿಂಗಯ್ಯ ಅವರನ್ನು ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ­ರನ್ನಾಗಿ ಮಾಡಿದೆ.  ನೂರು ವರ್ಷ ತುಂಬುತ್ತಿರು­ವಾಗಲಾದರೂ ಕಸಾಪ ಕಣ್ತೆರೆಯಿತಲ್ಲ ಎಂಬ ಸಮಾಧಾನ ಅನೇಕ ದಲಿತರಲ್ಲಿ ಮೂಡಿದೆ.
ಆದರೆ ಪರಿಷತ್ತಿಗೆ ಇಂತಹ ಮನಸ್ಥಿತಿ ಬರ­ಬೇಕಾದರೆ ೮೦ ವರ್ಷಗಳು ಬೇಕಾಯಿತೆ? ಹಾಗಾ­ದರೆ ಇಲ್ಲಿಯವರೆಗೆ ದಲಿತಪರ ನಿಲ್ಲುವ ಮನಸ್ಸು­ಗಳು ಇರಲಿಲ್ಲವೇ? ಅಥವಾ ಜನಸಾಮಾನ್ಯರು ದಲಿತ ಅಧ್ಯಕ್ಷೀಯತೆ ಪರ ಒಕ್ಕೊರಲಿನ ದನಿ ಎತ್ತುವ ಬದಲು ಸುಮ್ಮನಿದ್ದ ಕಾರಣಗಳಾದರೂ ಏನು? ಈ ಎಲ್ಲಾ ಪ್ರಶ್ನೆಗಳು ತಲೆಯಲ್ಲಿ ಸುತ್ತು­ತ್ತಿವೆ. ಇದರ ನಡುವೆಯೂ ದಲಿತರೊಬ್ಬರನ್ನು ಈ ಬಾರಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಪರಿಷತ್ತಿಗೆ ಅಭಿನಂದನೆಗಳನ್ನು ಸೂಚಿಸಲೇಬೇಕು.
ಸಿದ್ಧಲಿಂಗಯ್ಯ ಅವರು ‘ವ್ಯವಸ್ಥೆಯ ಒಳಗಿದ್ದೇ ಪ್ರತಿಭಟಿಸುತ್ತೇನೆ’ ಎನ್ನುವುದರ ಮೂಲಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತುಂಬು ಹೃದಯ­ದಿಂದಲೇ ಒಪ್ಪಿಕೊಂಡಿದ್ದಾರೆ. ತಮ್ಮ ಬರವಣಿ­ಗೆಯ ಮೂಲಕ ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದ, ‘ಇಕ್ರಲಾ ವದೀರ್ಲಾ’ ಎನ್ನುವುದರ ಮೂಲಕ ದಲಿತರ ದನಿಯಾಗಿ, ಕೇರಿಯೊಳಗಿನ ಭಾಷೆ, ತವಕ ತಲ್ಲಣಗಳು, ಆಶಯಗಳನ್ನು ಅಕ್ಷರದ ಮೂಲಕ ತೆರೆದಿಟ್ಟು ಪ್ರತಿಭಟಿಸಿದ ಈ ಕವಿ  ಸಮ್ಮೇಳನದ ಅಧ್ಯಕ್ಷತೆಗೆ ಅರ್ಹರು.


ಯಾವ ವಸ್ತು ಕಾವ್ಯವಾಗುವುದಿಲ್ಲ ಎಂದು ಅದುವರೆಗೆ ಸಾಹಿತ್ಯ ವಲಯ ನಂಬಿತ್ತೋ ಅದನ್ನು ಕಾವ್ಯವಾಗಿಸಿದ ಕೀರ್ತಿ ಸಿದ್ಧಲಿಂಗಯ್ಯ ಅವರದು. ಆ ಮೂಲಕ ನೂರಾರು ಕೊರಳುಗಳು ದನಿಯೆತ್ತಿ ಮಾತನಾಡಲು ಪ್ರೇರಕಶಕ್ತಿಯಾಗಿ ನಿಂತವರು ಅವರು. ಇಂತಹವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.

ಮಾತು, ಬರವಣಿಗೆ ಎರಡರ ಮೂಲಕವೂ  ಶೋಷಿತರ ಪರ ನಿಂತವರು ಸಿದ್ಧಲಿಂಗಯ್ಯ. ಸದನದ ಒಳಗೂ ಹೊರಗೂ ಇವರ ದನಿ ಶೋಷಿ­ತರ ಪರ. ಆದರೆ ಇತ್ತೀಚೆಗೆ ‘ಮೌನವೂ ಒಂದು ಪ್ರತಿಭಟನೆ’ ಎಂದು ನಂಬಿರುವ  ಸಂದರ್ಭದಲ್ಲಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಈ ಕೆಳಗಿನ ದನಿಗಳು ಅವರಿಂದ ಮೂಡಿಬರಲು ಸಾಧ್ಯವೇ.... ಈ ಹಿನ್ನೆಲೆಯಲ್ಲಿ ಅವರಿಗೆ ಈ ಹತ್ತು ಪ್ರಶ್ನೆಗಳು.

* ದೇವನೂರ ಮಹಾದೇವ ಅವರು ಕನ್ನಡ ಮಾಧ್ಯಮದ ಅನಿ­ವಾರ್ಯ ಕುರಿತು ಚಿಂತಿಸಿ ಅಧ್ಯಕ್ಷ ಪದವಿ ನಿರಾ­ಕರಿಸಿದ್ದಾರೆ. ಕಸಾಪ ಅಧ್ಯಕ್ಷರು ಇದನ್ನು ಗಂಭೀರ­ವಾಗಿ ಪರಿಗಣಿಸಿ ಇದರ ಪರವಾಗಿ ಜನಾಂದೋ­ಲನ ರೂಪಿಸು­ತ್ತೇವೆ ಎಂದಿದ್ದಾರೆ. ಕಸಾಪ ಈ ವಿಚಾರದಲ್ಲಿ ಜನಾಂದೋಲನ ರೂಪಿಸುತ್ತದೆಂಬ ನಂಬಿಕೆ ನಿಮಗೆ ಇದೆಯೇ?

* ಅಧ್ಯಕ್ಷರು ಈ ಬಾರಿ ದಲಿತರಿಗೆ ಒತ್ತು ಕೊಡುತ್ತೇವೆ ಎಂದು ಹೇಳಿ ದಲಿತರನ್ನು ಆಯ್ಕೆ ಮಾಡಿದ್ದಾರೆ. ಇದರ ಶ್ರೇಯ ಕಸಾಪ ಅಧ್ಯಕ್ಷ­ರಿಗೋ ಅಥವಾ ಪ್ರತಿಭೆ ಉಳ್ಳ ಕವಿಗೋ?

* ದಲಿತ ಸಾಹಿತ್ಯವು ವ್ಯಕ್ತಿ ಆರಾಧನೆ­ಯನ್ನು, ಪಲ್ಲಕ್ಕಿ, ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ವಿರೋಧಿ­ಸುತ್ತಲೇ ಬಂದಿದೆ. ಸಮ್ಮೇಳನದಲ್ಲಿ ನಡೆಯುವ ಈ ತರದ ಮೆರವಣಿಗೆಗೆ ನಿಮ್ಮ ಪ್ರತಿಕ್ರಿಯೆ­ಯೇನು?

* ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿ­ರ­ಬೇಕು, ಅದಕ್ಕಾಗಿ ಹೋರಾಟ ರೂಪಿಸಬೇಕು ಎನ್ನು­ವುದು ದೇವನೂರ ಅವರ ನಿಲುವು. ಇಂತಹ ಅಭಿಪ್ರಾಯಕ್ಕೆ ನಿಮ್ಮ ನಿಲುವೇನು?

* ದಲಿತರಿಗೆ ಸರಿಯಾದ ಸ್ಥಾನಮಾನವಿಲ್ಲ ಎಂಬ ಕಾರಣದಿಂದ ಕಸಾಪಗೆ ಪರ್ಯಾಯವೆಂಬಂತೆ ದಲಿತ ಸಾಹಿತ್ಯ ಪರಿಷತ್‌ (ದಸಾಪ) ಹುಟ್ಟಿತು. ಮೊದಲು ದಸಾಪ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ನೀವು, ಈಗ ಕಸಾಪ ಸಮ್ಮೇಳನದ ಅಧ್ಯಕ್ಷರಾಗಲು ಒಪ್ಪಿದ್ದೀರಿ. ಹಾಗಾದರೆ, ಈಗ ದಲಿತರಿಗೆ ಸೂಕ್ತ  ಸ್ಥಾನಮಾನ ಸಿಕ್ಕಂತಾಗಿದೆಯೇ?

* ಕನ್ನಡದ ಬಗ್ಗೆ ಮಾತನಾಡುವವರು ಕನ್ನಡ ನಾಡು, ನುಡಿ, ಜಲ, ನೆಲದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಇಲ್ಲಿ ಕನ್ನಡ ಜನರನ್ನು ಕಡೆಗಣಿಸಲಾಗುತ್ತದೆ. ಕನ್ನಡ ಉಳಿಸುವುದೆಂದರೆ ಬರೀ ಇವುಗಳಿಗಷ್ಟೇ ಸೀಮಿತವಲ್ಲ. ಕನ್ನಡಿಗರನ್ನು ಉಳಿಸುವುದು ಕೂಡ  ಮುಖ್ಯ. ದಲಿತರು ದಿನನಿತ್ಯ ಬಹಿಷ್ಕಾರದ ನೋವು ಅನುಭವಿಸುತ್ತಿದ್ದಾರೆ. ಇದು ಕನ್ನಡಿಗರಿಂದ ಕನ್ನಡಿಗರಿಗೆ ಆಗುತ್ತಿರುವ ಅವಮಾನ. ಇದರ ವಿರುದ್ಧ ಸಮ್ಮೇಳನದ ಮೂಲಕ ನಿಮಗೆ ಧ್ವನಿ ಎತ್ತಲು ಸಾಧ್ಯವೆ?
* ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದಲ್ಲಿ ಅಸಮಾನತೆ ತಂದರೆ ಇನ್ನೊಂದು ಕಡೆ ಸರ್ಕಾರವೂ ಈ ಕೆಲಸ ಮಾಡುತ್ತಿದೆ. ಇದು ಬಡಬಗ್ಗರಿಗೆ ಮಾರಕವಾಗುತ್ತಿದೆ.  ಇಂತಹ ಮಾರಕ ನಿಲುವಿನ ವಿರುದ್ಧ ಸಮ್ಮೇಳನದಲ್ಲಿ ಧ್ವನಿ ಎತ್ತಲು ಸಾಧ್ಯವೇ?

* ವ್ಯವಸ್ಥೆಯ ಒಳಗಿದ್ದೇ ಹೋರಾಟ. ಇದು ನಿಮ್ಮ ನಿಲುವು. ಕಸಾಪದಂತಹ ಸಂಸ್ಥೆ ಇಂದಿಗೂ ಬಲಾಢ್ಯ ಜಾತಿಗಳ ಕೈಯಲ್ಲೇ ಇದೆ. ಇದರ ವಿರುದ್ಧ ಅದರೊಳಗೇ ನಿಂತು ಪ್ರತಿಭಟಿಸಲಾಗುವುದೇ?

* ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಯಾವ ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ದಲಿತ ಹೆಣ್ಣುಮಕ್ಕಳ ಮೇಲೆ ಯಾವುದೇ ಭಯಭೀತಿಯಿಲ್ಲದೆ ಅತ್ಯಾಚಾರಗಳು ನಡೆಯುತ್ತಿವೆ. ಹೋರಾಟದ ಹಿನ್ನೆಲೆಯಿಂದ ಬಂದ  ತಾವು ಇವುಗಳ ವಿರುದ್ಧ ಕಸಾಪವನ್ನೂ ಸೇರಿಸಿಕೊಂಡು  ಹೋರಾಟ ಕಟ್ಟಲು ಆಗುವುದೇ?

* ಕಸಾಪ, ಕನ್ನಡ ಸಾಹಿತ್ಯಕ್ಕಿಂತ ಹೆಚ್ಚಾಗಿ ಕನ್ನಡ ಜಾತ್ರೆಗೆ ಹೆಚ್ಚು ಒತ್ತು ಕೊಡುತ್ತದೆ. ಇದು ಹಲವರ ದೂರು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬೇರೆ ಯಾವ ಅಧ್ಯಕ್ಷರಿಗೂ ಕೇಳದ ಪ್ರಶ್ನೆಗಳು ಇವರಿಗ್ಯಾಕೆ? ಎಂಬ ಶಂಕೆ  ಹಲವರಲ್ಲಿ ಮೂಡಬಹುದು. ಆದರೆ ಸಿದ್ಧಲಿಂಗಯ್ಯ ಅವರು ಹೋರಾ­ಟದ ಕಾವಿನಿಂದ ಮೂಡಿಬಂದವರು. ದನಿ ಇಲ್ಲದವರಿಗೆ ದನಿಯಾದವರು. ಇವರೇ ಇಂತಹ ವಸ್ತುಸ್ಥಿತಿಗಳ ಬಗ್ಗೆ ದನಿ ಎತ್ತದಿದ್ದರೆ ಬೇರೆ ಯಾರೂ ಎತ್ತಲಾರರು. ಈ ಆಶಯದ ಹಿನ್ನೆಲೆ­ಯಲ್ಲಿ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗಿದೆ.

‘ಪಿಕೆ’ ನೆಪದಲ್ಲಿ ಒಂದು ಅಭಿಪ್ರಾಯ
ಸೂರ್ಯಕಾಂತ ಬಳ್ಳಾರಿಕೀಳು ಅಭಿರುಚಿಯ ಸಿನಿಮಾ, ಸಾಹಿತ್ಯಗಳ ಪ್ರಭಾವ ದಟ್ಟವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸದಭಿರುಚಿ ವೇಗವಾಗಿ ಅಧಃಪತನ ಹೊಂದುತ್ತಿದೆ. ಕಲಾಪ್ರಕಾರಗಳಲ್ಲೇ ಅತ್ಯಂತ ಪ್ರಭಾವಶಾಲಿಯಾದ ಸಿನಮಾ ಮಾಧ್ಯಮ ಕೇವಲ ಮನರಂಜನೆ ನೀಡದೇ ಪ್ರೇಕ್ಷಕರಲ್ಲಿ ಹೊಸ ದೃಷ್ಟಿಕೋನ ಮತ್ತು ಚಿಂತನೆಯ ಹುಟ್ಟಿಗೆ ಕಾರಣವಾಗಬಲ್ಲುದು. ನೋಡುಗನ ಮನಸ್ಸನ್ನು ಕಲಕಿ ಭಾವನಾತ್ಮಕ ಸಂವೇದನೆಯನ್ನು ಬಡಿದೆಬ್ಬಿಸುವ ಶಕ್ತಿ ಈ ಮಾಧ್ಯಮಕ್ಕಿದೆ. 
ನಿರ್ಮಾಪಕ, ನಿರ್ದೇಶಕರಲ್ಲಿ ಸಮಾಜದ ಪ್ರಗತಿಯ ಬದ್ಧತೆ ಇಲ್ಲದೇ ಇದ್ದರೆ ಅದು ವ್ಯತಿರಿಕ್ತವಾದ ಪರಿಣಾಮಗಳನ್ನು, ಗೊಂದಲಗಳನ್ನೂ ಸೃಷ್ಟಿಸಬಲ್ಲುದು. ಪ್ರತಿಯೊಂದು ಕಲೆಯನ್ನು ಮಾರುಕಟ್ಟೆಯ ಲಾಭದ ದೃಷ್ಟಿಯಿಂದ ನೋಡುತ್ತಿರುವುದೇ ಕೀಳು ಅಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಕಾರಣವಾಗಿದೆ. ಅಲ್ಲಲ್ಲಿ ಕೆಲವು ಆಶಾದಾಯಕ ಪ್ರಯತ್ನಗಳು ನಡೆದಿವೆ. ಹಿಂದೂ, ಮುಸ್ಲಿಂ ಧರ್ಮಗಳ ಕಂದಾಚಾರಗಳ ಆಚೆಯೂ ಮನುಷ್ಯ ಸಂಬಂಧ ದೊಡ್ಡದು ಎಂದು ಸಾರುವ ಭಾವನಾ ತಳವಾರ ನಿರ್ದೇಶಿಸಿರುವ ‘ಧರ್ಮ್’ , ಅಸ್ಪೃಶ್ಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಪ್ರದಾಯವಾದಿ ಮನಸ್ಸುಗಳೂ ಸೋಲೊಪ್ಪುವ ಪ್ರಕ್ರಿಯೆಯನ್ನು ಮನಮುಟ್ಟುವಂತೆ ಕಟ್ಟಿಕೊಡುವ ಸುಬೋದ್ ಘೋಷ್ ಕತೆಯಾಧಾರಿತ ಬಿಮಲ್ ರಾಯ್ ನಿರ್ದೇಶಿಸುವ ‘ಸುಜಾತಾ’, ‘ಸಂಸ್ಕಾರ’ಗಳಂತಹ ಸಿನಿಮಾಗಳು ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವಂತಹವು. ರೂಢಿಗತ ಧಾರ್ಮಿಕ ಅಂಧಾಚರಣೆಗಳನ್ನು ಪ್ರಶ್ನಿಸುವ ಮತ್ತು ಮೂರ್ತಿಭಂಜನೆಯನ್ನು ಮಾಡುವ ಉಮೇಶ್ ಶುಕ್ಲಾ ನಿರ್ದೇಶನದ ‘ಓ ಮೈ ಗಾಡ್’’ಚಿತ್ರ ನೋಡುಗನ ಮೆಚ್ಚಿಗೆಗಳಿಸಿದ್ದು ಇತ್ತೀಚಿನ ಮತ್ತೊಂದು ಹೊಸ ಪ್ರಯತ್ನ.
 
ದೇವರು, ಧರ್ಮಗಳ ಹೆಸರಿನಲ್ಲಿ ಸಾಮಾನ್ಯ ಜನತೆಯ ಅಭದ್ರತೆಯ ಶ್ರದ್ಧೆಯನ್ನು ಸುಲಿಗೆ ಮಾಡಿ ನಗದೀಕರಣಮಾಡಿಕೊಳ್ಳುತ್ತಿರುವ ವ್ಯವಸ್ಥಿತ ಜಾಲವಿದೆ. ಈ ಸಮಸ್ಯೆಯನ್ನು ಎಲ್ಲ ಜಿಡ್ಡನ್ನು ಕಳಚಿಟ್ಟು ಪಕ್ಷಿನೋಟದಿಂದ ನೋಡಿದಾಗ ಮಾತ್ರ ಆಳವಾದ ಬೇರುಗಳನ್ನು ಬಿಟ್ಟಿರುವ ವಂಚಕ ಜಾಲದ ಅರಿವು ಮೂಡಲು ಸಾಧ್ಯ ಎಂಬುದನ್ನು ತೋರಿಸುವ ರಾಜಕುಮಾರ ಹಿರಾನಿ ನಿರ್ದೇಶನದ ‘ಪಿಕೆ’ ಒಂದು ಉತ್ತಮ ಚಿತ್ರ. ಅನ್ಯಗ್ರಹ ಜೀವಿಯ ದೃಷ್ಟಿಯಲ್ಲಿ ನಮ್ಮ ಆಚರಣೆಗಳು, ಧರ್ಮ ಕಾಣುವಂತಹ ರೀತಿ ಆಶ್ಚರ್ಯವನ್ನುಂಟುಮಾಡುತ್ತದೆ. ಪಿಕೆ ಎಂದರೆ ‘ಮೂರ್ಖ’ ಅಥವಾ ‘ಹುಚ್ಚ’ ಎಂಬಂತಹ ಅರ್ಥದಲ್ಲಿ ಕರೆಯಿಸಿಕೊಳ್ಳುವ ವ್ಯಕ್ತಿ ಜ್ಯೋತಿಷ್ಯ,ಧರ್ಮಾಧಾರಿತ ವೇಷಭೂಷಣಗಳು,ದೇಶಗಳ ಬಗ್ಗೆ ಇರುವ ಪೂರ್ವಾಗ್ರಹಗಳು, ಎಲ್ಲದಕ್ಕಿಂತ ಮೂಲಭೂತವಾಗಿ ಎಲ್ಲಾ ಧರ್ಮಗಳ ಪರ್ಸ್ತುತತೆಯನ್ನೇ ಪ್ರಶ್ನಿಸಿ ‘ಹೌದಲ್ವಾ’ ಎನ್ನುವ ಪ್ರಶ್ನೆಯನ್ನು ನಮ್ಮಲ್ಲೂ ಹುಟ್ಟು ಹಾಕುವ ಪ್ರಜ್ಞಾವಂತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಮಡೆಸ್ನಾನದಂತಹ ಗೊಡ್ಡು ಆಚರಣೆಗಳನ್ನು ಸಮರ್ಥಿಸಿಕೊಳ್ಳುವ  ಅಮಾನವೀಯ ಮನಸ್ಸುಗಳಿರುವ ಸ್ಥಿತಿಯಲ್ಲಿ ಇದು ಪ್ರಸ್ತುತ.

ಜನತೆಯನ್ನು ಕಾಡುತ್ತಿರುವ ಪ್ರಚಲಿತ ಸಮಸ್ಯೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಸಿನಿಮಾ ಪ್ರಯತ್ನಗಳು ಕನ್ನಡದಲ್ಲೂ ನಡೆದಿರುವುದು ಶ್ಲಾಘನೀಯ ಆದರೆ ಬಹುಸಂಖ್ಯಾತ ನೋಡುಗರನ್ನು ಆಕರ್ಷಿಸದೇ ಇರುವುದು ಒಂದು ವಿಪರ್ಯಾಸ.
ಸೂರ್ಯಕಾಂತ ಬಳ್ಳಾರಿ
ಶಿಕ್ಷಕರು
ಮುಗಳಿಹಾಳ, ಬೆಳಗಾವಿ

ಕನ್ನಡ ಸಾಹಿತ್ಯ ಸಮ್ಮೇಳನ: ‘ಮೂಕರ ಮಾತು’ಗಳಿಗೆ ಗೌರವ ಸಿಗಲಿ
-ರಘೋತ್ತಮ ಹೊ.ಬ.


   ಕನ್ನಡ ಸಾಹಿತ್ಯ ಸಮ್ಮೇಳನ: ‘ಮೂಕರ ಮಾತು’ಗಳಿಗೆ ಗೌರವ ಸಿಗಲಿ

80  ಕನ್ನಡ ಸಾಹಿತ್ಯ ಸಮ್ಮೇಳನಗಳು. ಅದರಲ್ಲಿ 81ನೆಯದು ಮುಂದಿನದು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಇಂತಹ ಸಾಹಿತ್ಯ ಚಟುವಟಿಕೆಗಳಿಗೆ ಸದ್ಯ ನೂರು ವರ್ಷಗಳ ಇತಿಹಾಸ! ಭಾರತದ ಸಂವಿಧಾನಕ್ಕೆ 64 ವರ್ಷಗಳು, ಭಾರತದ ಸ್ವಾತಂತ್ರ್ಯಕ್ಕೆ 67 ವರ್ಷಗಳು, ಹಾಗೆಯೇ ಸಾವಾಜಿಕ ನ್ಯಾಯದ ಅಧಿಕೃತ ಕಾಯಿದೆ ‘ಭಾರತ ಸರಕಾರ ಕಾಯಿದೆ-1935’ಕ್ಕೆ 80 ವರ್ಷಗಳ ಇತಿಹಾಸ. ಭಾರತದ ಅಂತಹ ಇತಿಹಾಸ ಈ ದೇಶದ ನೊಂದ ಶೋಷಿತ ಸಮುದಾಯಗಳಿಗೆ ತಕ್ಕಮಟ್ಟಿನ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಿದೆ. ಆದರೆ ಪ್ರಶ್ನೆಯೇನೆಂದರೆ ಈವರೆಗಿನ 80 ಕನ್ನಡದ ಸಮ್ಮೇಳನಗಳ ಇತಿಹಾಸದಲ್ಲಿ ಅಂತಹ ಪ್ರಾತಿನಿಧ್ಯ? ಅಕ್ಷರ ಕಲಿತ ತಳಕಂದಮ್ಮಗಳಿಗೆ ಕನ್ನಡಮ್ಮನ ತೇರೆಳೆಯುವ ಸಾರಥ್ಯ?

 

ಖಂಡಿತ, ಇಂತಹ ಐತಿಹಾಸಿಕ ಸಾಹಿತ್ಯಿಕ ಪ್ರಾತಿನಿಧ್ಯದ ಪ್ರಶ್ನೆಗೆ ಉತ್ತರವೀಯಲು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ನೊಂದವರ ಸಾಹಿತ್ಯದ ಅಂತಹ ಪ್ರಾತಿನಿಧಿಕ ರೂಪ ದೇವನೂರ ಮಹಾದೇವ ಅವರ ಮನೆಗೆ ಹೋದದ್ದು ಮಾನವೀಯತೆಯ ಅಗತ್ಯವಾಗಿತ್ತು. ದುರಂತವೆಂದರೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮೊನ್ನೆ ಕಸಾಪದ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ(ಚಂಪಾ)ರವರು ‘‘ಹಾಲಂಬಿಯವರೇ ದೇವನೂರರ ಮನೆಗೆ ಹೋಗಿ ಆಹ್ವಾನಿಸುವ ಅಗತ್ಯವಿರಲಿಲ್ಲ’’ ಎನ್ನುತ್ತಾರೆ! ಅಂದ ಹಾಗೆ ಹಾಲಂಬಿಯವರ ಇಂತಹ ಸಾಹಿತ್ಯಿಕ ವಲಯದ ಸಾಮಾಜಿಕ ನ್ಯಾಯದ ಆಹ್ವಾನಕ್ಕೆ ದೇವನೂರರು ತಮ್ಮ ವೈಯಕ್ತಿಕ ಧಾಟಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ಒತ್ತಾಯಿಸಿ ಅಂತಹ ಆಹ್ವಾನವನ್ನು ತಿರಸ್ಕರಿಸಿದರು. ಹಾಗೆಯೇ ‘‘ಯಥಾಸ್ಥಿತಿಯಲ್ಲಿ ಯಾಂತ್ರಿಕವಾಗಿ ಜರಗುತ್ತಿರುವ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸಲು ನನ್ನ ಮನಸ್ಸು ಹಿಂದೆಗೆಯುತ್ತದೆ’’ ಎಂದು ಅವರು ಕಸಾಪದ ಇಂತಹ ನಿರ್ದಿಷ್ಟ ಆವರ್ತಕ ಅವಧಿಗೊಮ್ಮೆ ನಡೆಯುವ ಸಮ್ಮೇಳನಗಳ ಅರ್ಹತೆಯನ್ನೇ ಪ್ರಶ್ನಿಸಿದರು. ಬದಲಿಗೆ ‘‘1 ರಿಂದ 10ನೆ ತರಗತಿವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ಬೀದಿಗಿಳಿಯಲಿ’’ ಎಂದು ದೇವನೂರರು ಕಸಾಪಕ್ಕೇ ಒಂದು ನಿರ್ದಿಷ್ಟ ಕಾರ್ಯಕ್ರಮ ಕೊಟ್ಟರು. ಆ ಮೂಲಕ ಸಮ್ಮೇಳನದ ಅಧ್ಯಕ್ಷಗಿರಿ ತಿರಸ್ಕರಿಸಿಯೂ ದೇವನೂರರು ಕಳಕಳಿಯ ಕನ್ನಡದ ತಮ್ಮ ಜೀವಪರ ನಿಲುವು ತಳೆದರು. ಆಶ್ಚರ್ಯವೆಂದರೆ ಇದನ್ನೂ ಕೂಡ ಚಂಪಾರವರು ದೇವನೂರರ ಅತಿರೇಕದ ನಿಲುವು ಎನ್ನುತ್ತಾರೆ! ಪ್ರಶ್ನೆಯೇನೆಂದರೆ ದೇವನೂರರ ಇಂತಹ ಕನ್ನಡದ ಕಳಕಳಿ ಅತಿರೇಕದ ನಿಲುವು ಹೇಗಾಗುತ್ತದೆ?

  ನಿಜ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಒಂದು ಗೌರವ. ಪ್ರತಿಯೊಬ್ಬ ಸಾಹಿತಿಯೂ ಅಂತಹ ಗೌರವ ತನಗೆ ಸಿಗಲಿ ಎಂದು ಬಯಸುತ್ತಾನೆ. ಹಾಗೆಯೇ ಸಿಕ್ಕಾಗ ಅದನ್ನು ತಿರಸ್ಕರಿಸುವ ವೈಯಕ್ತಿಕ ಸಹಜ ಸ್ವಾತಂತ್ರ್ಯವೂ ಆತನಿಗಿರುತ್ತದೆ. ಜೊತೆಗೆ ತನ್ನ ನಿರಾಕರಣೆಗೆ ಕಾರಣವೇನು ಎಂದು ಹೇಳುವ ಹಕ್ಕೂ ಕೂಡ ಆತನಿಗಿರುತ್ತದೆ. ದೇವನೂರರೇನು ತಮ್ಮ ವ್ಯಕ್ತಿಗತ ಅಥವಾ ಸಮುದಾಯಗತ ನೆಪಗಳನ್ನೇನು ಇಲ್ಲಿ ಬಿಡಿಸಿ ಇಟ್ಟಿಲ್ಲ. ಯಾಕೆಂದರೆ ದಲಿತ ಸಮುದಾಯದಲ್ಲಿ ಹುಟ್ಟಿದ ದೇವನೂರರ ಸಮುದಾಯ ಈಗಲೂ ಸಂಕಷ್ಟದಲ್ಲಿದೆ. ಮೀಸಲಾತಿ ದಕ್ಕದೆ, ಸಮಾನ ಶಿಕ್ಷಣ ಸಿಗದೆ, ಖಾಸಗಿ ವಲಯದ ಉದ್ಯಮಗಳ, ಉದ್ಯೋಗಗಳ ಅವಕಾಶವಿಲ್ಲದೆ ನರಳುತ್ತಿದೆ. ಅಂತಹ ನರಳುವಿಕೆಯ ಜೊತೆಗೆ ಅಸ್ಪಶ್ಯತೆಯ ನಿರಂತರ ಬೆಂಕಿ ಬೇರೆ! ಮೊನ್ನೆ ಮುಖ್ಯಮಂತ್ರಿಗಳು ಓದಿದ ಊರಿನ(ಕುಪ್ಪೇಗಾಲ) ಶಾಲೆಯಲ್ಲೇ ಬಿಸಿಯೂಟದಲ್ಲಿ ಅಂತಹ ಅಸ್ಪಶ್ಯತೆ ನಡೆದಿದೆ ಎಂದರೆ... ಬಿಳಿಗೆರೆ ಎಂಬ ಅದರ ಪಕ್ಕದ ಊರಿನಲ್ಲೇ ಸಾಮಾಜಿಕ ಬಹಿಷ್ಕಾರ ನಡೆದಿದೆ ಎಂದರೆ... ಮತ್ತೂ ಆತಂಕದ್ದೆಂದರೆ ದಶಕದ ಹಿಂದೆ ನಡೆದಿದ್ದ ರಾಜ್ಯದ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯ ದಲಿತರ ದಹನದ ಪ್ರಕರಣದ ಆರೋಪಿಗಳು ನಿರ್ಲಜ್ಜವಾಗಿ ಕಾನೂನಿನ ಕುಣಿಕೆಯಿಂದ ಮುಕ್ತರಾಗುತ್ತಾರೆಂದರೆ... ಸತ್ಯವೆಂದರೆ ದೇವನೂರರೇನು ತಮ್ಮ ಸಮುದಾಯದ ಇಂತಹ ನೋವುಗಳನ್ನು ಹೇಳಿಕೊಂಡು ಸ್ವಾರ್ಥಕ್ಕಾಗಿ ಕನ್ನಡಮ್ಮನ ತೇರನ್ನು ನಿರಾಕರಿಸಲಿಲ್ಲ. ಬದಲಿಗೆ ‘ಪಂಕ್ತಿ ಭೇದ ಶಿಕ್ಷಣ’, ಅಸಮಾನತೆ ಶಿಕ್ಷಣ ಅಂದರೆ ಉಳ್ಳವರು ಒಂದರಿಂದ ಸ್ನಾತಕ, ಸ್ನಾತಕೋತ್ತರ ಹೀಗೆ ಕಲಿಯುತ್ತಲೇ ಇರುವವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು... ಇಲ್ಲದವರು ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವುದು... ಮತ್ತು ಇದಕ್ಕೆ ಪೂರಕವಾಗಿ ಅಂದರೆ ಉಳ್ಳವರಿಗೆ ಪೂರಕವಾಗಿ ಆಳುವ ಸರಕಾರಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದು! ವ್ಯವಸ್ಥೆಯ ಇಂತಹ ವಂಚನೆಗಳನ್ನು ವಿರೋಧಿಸಿ ಮತ್ತು ಅಂತಹ ವಂಚನೆಗಳಿಗೆ ದಲಿತರನ್ನೂ ಒಳಗೊಂಡಂತೆ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಎದೆಯುಬ್ಬಿಸಿ ನಿಲ್ಲಬೇಕು, ಪರಿಣಾಮಕಾರಿ ಉತ್ತರ ಕೊಡಬೇಕು ಎಂಬ ನಿಸ್ವಾರ್ಥ ನಿಲುವಿಗಾಗಿ ನಿರಾಕರಿಸಿದರು. ಮತ್ತೂ ಪ್ರಶ್ನೆಯೇನೆಂದರೆ ಇದು ದೇವನೂರರ ಅತಿರೇಕದ ನಿಲುವು ಹೇಗಾಗುತ್ತದೆ?

 ನಿಜ ಹೇಳಬೇಕೆಂದರೆ ದೇವನೂರ ಮಹಾದೇವರ ಇಂತಹ ನಿಲುವನ್ನು ಅತಿರೇಕ ಎನ್ನುವ ಚಂಪಾರವರು ವೈಯಕ್ತಿಕವಾಗಿ ಅವರೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಿಲ್ಲ!

ಹಾಗೆಯೇ ‘ಪ್ರಗತಿಪರ’ ಅಡಿಹೆಸರಿನ ಅದೇ ಚಂಪಾರವರು ಪ್ರಗತಿಪರತೆಯ ಅಂತಹ ಪ್ರಮುಖ ಲಕ್ಷಣವಾದ ಸಾಮಾಜಿಕ ನ್ಯಾಯವನ್ನು ತಮ್ಮ ಅವಧಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎತ್ತಿಹಿಡಿಯಲಿಲ್ಲ! ಬದಲಿಗೆ ಚಂಪಾ ‘ಪರಿಷತ್ತಿನ ಕಾರ್ಯಕಲಾಪಗಳು ಪ್ರಜಾಸತ್ತಾತ್ಮಕವಾಗಿ ನಡೆಯಬೇಕು’ ಎನ್ನುತ್ತಾರೆ! ಅಂದಹಾಗೆ ಕನ್ನಡ ಸಾಹಿತ್ಯ ಪರಿಷತ್‌ನ ಅಂತಹ ‘ಪ್ರಜಾಸತ್ತಾತ್ಮಕ ಕಲಾಪ’ ಎಂದರೇನು? ಹೇಗಿದ್ದರೂ ಅಲ್ಲಿ ದಲಿತರಿಗೆ ತಕ್ಕ ಪ್ರಾತಿನಿಧ್ಯವಿಲ್ಲ ಮತ್ತು ಅಂತಹ ಪ್ರಾತಿನಿಧ್ಯದ ಕೊರತೆಯಲ್ಲಿ ‘ಪ್ರಜಾಸತ್ತಾತ್ಮಕವಾಗಿ’ ಕಲಾಪ ನಡೆದು ದಲಿತ ಸಾಹಿತಿಗಳ ಹೆಸರನ್ನು ಇತರ ಸಾಹಿತಿಗಳ ಜತೆ ಅಧ್ಯಕ್ಷಗಿರಿಗೆ ಚಲಾವಣೆಗೆ ಬಿಟ್ಟಿದ್ದರೆ ಹಾಗೆ ಮತದಾನ ಕೂಡ ನಡೆದಿದ್ದರೆ ದಲಿತರು ಈ ಬಾರಿಯಾದರೂ ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಿರುತ್ತಿತ್ತೆ? ಖಂಡಿತ ಇಲ್ಲ. ದೇವನೂರರನ್ನೂ ಒಳಗೊಂಡಂತೆ ಸಿದ್ದಲಿಂಗಯ್ಯ, ಡಾ.ಎಲ್.ಹನುಮಂತಯ್ಯ, ಎಚ್.ಗೋವಿಂದಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ವಿ.ಮುನಿವೆಂಕಟಪ್ಪ, ಡಾ.ಮ.ನ.ಜವರಯ್ಯ ಹೀಗೆ ಅನೇಕಾನೇಕ ಹಿರಿಯ ದಲಿತ ಸಾಹಿತಿಗಳು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ಮೂಕ ಪ್ರೇಕ್ಷಕರಾಗಿ ಉಳಿಯುತ್ತಿರಬೇಕಾಗುತ್ತದಷ್ಟೆ. ‘ಮೂಕನಿಗೆ ಬಾಯಿ ಬಂದಾಗ’ ಇದು ದಲಿತ ಸಾಹಿತಿ ಅರವಿಂದ ಮಾಲಗತ್ತಿಯವರ ಕವನ ಸಂಕಲನವೊಂದರ ಶೀರ್ಷಿಕೆ. ನಿಜ ಹೇಳಬೇಕೆಂದರೆ ಈ ಬಾರಿ ‘ಮೂಕನಿಗೆ ಬಾಯಿ ಬಂದಿದೆ’. ಈ ನಿಟ್ಟಿನಲ್ಲಿ ಅಂತಹ ‘ಮೂಕರ’ ಮಾತುಗಳನ್ನು ಪ್ರತಿಯೊಬ್ಬರೂ ಗೌರವಿಸಲಿ ಎಂಬುದೇ ಸದ್ಯದ ಕಳಕಳಿ.

Tuesday, December 23, 2014

ಸ್ವಚ್ಛ ಭಾರತ: ಕನಸು, ಕನವರಿಕೆ..


ಡಾ ಎಚ್ ಎಸ್ ಅನುಪಮಾಪ್ರತಿ ಬಾರಿ ರಾತ್ರಿ ಪ್ರಯಾಣ ಮಾಡುವಾಗ ಗಮನಿಸುತ್ತೇನೆ: ಘಟ್ಟ ಹತ್ತಿದ ಮೇಲೆ ಊಟಕ್ಕೆಂದೋ, ಚಹಾಗೆಂದೋ ಬಸ್ ನಿಲ್ಲುತ್ತದೆ. ಬಹುಪಾಲು ಪ್ರಯಾಣಿಕರು ಮೂತ್ರಶಂಕೆಗಾಗಿ ಇಳಿಯುತ್ತಾರೆ. ಹೆಂಗಸರು ಸುಲಭ್ ಶೌಚಾಲಯ ಹುಡುಕಿ ಹೊರಟರೆ ಗಂಡಸರು ರಸ್ತೆಯ ಆಚೀಚೆ ಬಯಲ ಶೌಚಾಲಯದತ್ತ ಧಾವಿಸುತ್ತಾರೆ. ‘ಸುಲಭ’ದ ಗಂಡಸರ ಖೋಲಿ ಖಾಲಿ. ಅದೇ ಹೆಂಗಸರ ಕೋಣೆಯೆದುರು ಸಾಲು ಸರದಿ.

ಒಮ್ಮೆ ಬಸ್ ನಿಂತದ್ದೇ ಯಾರೋ ಗಟ್ಟಿ ದನಿಯಲ್ಲಿ ಅರಚುವುದು ಕೇಳತೊಡಗಿತು. ಕೂಗಿದವನ ಹಾವಭಾವ ನೋಡಿದರೆ ಒಂದೋ ಕುಡಿದಿರಬೇಕು ಇಲ್ಲವೇ ಅರೆಹುಚ್ಚನಿರಬೇಕು. ಕುಡುಕರೂ, ಹುಚ್ಚರೂ ಕೆಲವೊಮ್ಮೆ ನಿಜ ನುಡಿಯುತ್ತಾರೆ. ಆತ ಕಿರುಚುತ್ತಿದ್ದ: ‘ಹ್ವಾಯ್, ರಸ್ತಿ ಬದಿ ಜಟಗ ದೇವ್ರ ಕಲ್ಲು ಇತ್ತ್ ಮಾರ್ರೆ. ನೀವು ಉಚ್ಚಿ ಹುಯ್ಯೂದಾರೆ ಅಲ್ಕಾಣಿ ಹೆಣಮಕ್ಳೆಲ್ಲ ಹ್ವಾತ್ರಲ, ಸುಲಭಕ್ ಹೋಯ್ನಿ. ಹೆಂಗಸ್ರಿಗಿಪ್ಪಷ್ಟ್ ಮಾನಮರ್ಯಾದಿನೂ ಇಲ್ವಾ ನಿಮ್ಗೆ? ಏಳೆಂಟು ನೂರ್ರುಪಾಯ್ ಕೊಟ್ ಬಸ್ ಹತತ್ರಿ, ಮೂರು ರೂಪಾಯ್ ಕೊಟ್ಟು ಉಚ್ಚಿ ಹುಯ್ಯೂಕಾತಿಲ್ವ?’

ಯಾರೇ ಕೂಗಾಡಲಿ, ಊರೇ ಹೋರಾಡಲಿ, ಬಸ್ಸಿಳಿದ ಬಹುಪಾಲು ಜನ ರಸ್ತೆ ಅರಸಿಕೊಂಡು ಮುಂದುಮುಂದೆ ಹಾಗೇ ಹೋದರು. ಅವನ ಕೂಗಿನ ಪರಿಣಾಮ ಇಷ್ಟೇ: ಅವನ ಕಣ್ಣಿಗೆ ಕಾಣದಷ್ಟು ದೂರದಲ್ಲಿ, ಅಕಾ ಆ ಕತ್ತಲಲ್ಲಿ ನಿಂತು ದಮ್ಮೆಳೆಯುತ್ತ ಬಾಧೆ ಮುಗಿಸಿ ಬಂದರು.

ಪ್ರತಿಬಾರಿ ನೋಡುತ್ತೇನೆ, ಸಾರ್ವಜನಿಕ ಶೌಚಾಲಯದೆದುರು ಒಬ್ಬ ಹುಡುಗನೇ ಕೂತಿರುತ್ತಾನೆ. ಒಳಗೆ ಪೊರಕೆ, ಬಕೆಟುಗಳ ನಡುವೆ ಹೆಂಗಸಿರುತ್ತಾಳೆ. ಸಾರ್ವಜನಿಕ ಶೌಚಾಲಯಗಳಲ್ಲಿ ಗಂಡಸರಿಗೆ ಸೇವೆ ಉಚಿತ, ಹೆಂಗಸರಿಗೆ ಕಡ್ಡಾಯ ಶುಲ್ಕ! ದರಪಟ್ಟಿ ಎಷ್ಟೆಂದು ಎಲ್ಲೂ ಹಾಕುವುದಿಲ್ಲ. ಕೆಲ ದೊಡ್ಡ ಬಸ್ಟ್ಯಾಂಡ್‌ಗಳ ಬಳಿ ಹಾಕಿದ್ದರೂ ಎಷ್ಟಾದರೂ ನಮೂದಿಸಿರಲಿ, ಅವ ಎಷ್ಟು ಕೇಳುತ್ತಾನೋ ಅಷ್ಟು ಕೊಡಬೇಕು. ಉಚ್ಚೆ ಹೊಯ್ಯಲು ಬರುವವರ ಕಾಯುತ್ತ ಅವನು ಕುಳಿತಿರುವುದೇ ನಮ್ಮ ಸೌಭಾಗ್ಯ! ಒಂದು ಬಸ್ ಜನ ಪೂರಾ ಒಂದೇ ಬಾರಿ ಇಳಿದರೂ ಸೀರೆ, ಲಂಗದ ಬಣ್ಣ ಹಿಡಿದು ಕರೆದು, ಮೊದಲು ದುಡ್ಡು ಕೊಟ್ಟೇ ಒಳಹೋಗಿ ಎನ್ನುತ್ತಾ ಕಾಸು ವಸೂಲಿ ಮಾಡುತ್ತಾನೆ. ‘ರಾತ್ರಿ ದುಡ್ಡು ಹೆಚ್ಚು, ಹೆಂಗಸರಿಗೆ ಹೆಚ್ಚು, ಯಾಕೆ? ಹಾಗಂತ ಎಲ್ಲಿ ಬರೆದಿದೆ ತೋರಿಸು’ ಎಂದು ತಕರಾರು ತೆಗೆದರೆ ತರಹೇವಾರಿ ಧ್ವನಿಯಲ್ಲಿ ದಬಾಯಿಸುತ್ತಾನೆ. ಬಸ್ ಹಾರ್ನ್ ಆಗುತ್ತಿದ್ದರೂ ದರ-ಅನ್ಯಾಯ ಅಂತೆಲ್ಲ ನಾನು ವಾದ ಮಾಡುತ್ತಿದ್ದರೆ, ಉಳಿದವರು ಎರಡು ರೂಪಾಯಿಗೇಕೆ ಈ ಹೆಂಗಸು ವಾದ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತ ವಾರೆಗಣ್ಣಲ್ಲಿ ನೋಡುತ್ತ ಮುನ್ನಡೆಯುತ್ತಾರೆ.

ನಮ್ಮ ಉತ್ತರ ಕರ್ನಾಟಕ ಕಡೆಯ ಅಕ್ಕಂದಿರು ಸುಲಭದವನಿಗೆ ಬೆನ್ನುಹಾಕಿ ಗೋಡೆಯೋ, ಮರವೋ, ಕಂಭವೋ ಎಂಥದೋ ಒಂದನ್ನು ಮರೆ ಎಂದುಕೊಂಡು ಕೂತು ಐದು ರೂಪಾಯಿ ಉಳಿಸೇಬಿಡುತ್ತಾರೆ!

ರೈಲೆಂಬ ಚಲಿಸುವ ಶೌಚಾಲಯ

‘ಅಮರಾವತಿ ಎಕ್ಸ್‌ಪ್ರೆಸ್ ನಲವತ್ತು ನಿಮಿಷ ತಡವಾಗಿ ಚಲಿಸುತ್ತಿದೆ..’ - ಈ ಪ್ರಕಟಣೆ ನಾಲ್ಕನೆಯ ಬಾರಿ ಹೊರಬಿತ್ತು. ಅದಾಗಲೇ ಎರಡು ತಾಸು ತಡವಾದ ರೈಲು ಇನ್ನೂ ಒಂದು ತಾಸು ತಡವಾಗಿ ಬರುತ್ತಲಿತ್ತು. ರೈಲಿನ ವಿಳಂಬ ಭೂಮಿ ಮೇಲಿನ ಅಮರಾವತಿಯನ್ನು ಪರಿಚಯಿಸಿತು..

ನಿಂತಲ್ಲೇ ಆಚೀಚೆ ಕಸ ರಾಶಿಯಾಗುತ್ತಿತ್ತು. ಪ್ರತಿ ರೈಲು ಬಂದು, ನಿಂತು, ಹೊರಟ ಮೇಲೂ ನೀರಿನ ಪೈಪು, ಪೊರಕೆ ಹಿಡಿದು ರೈಲ್ವೆ ಸಫಾಯಿ ಕರ್ಮಚಾರಿಗಳು ಹಳಿಯನ್ನು ತೊಳೆದು ಶುದ್ಧಗೊಳಿಸುತ್ತಿದ್ದರು. ಅವರು ತೊಳೆಯುತ್ತಿದ್ದಿದ್ದು ಮಲ ಮೂತ್ರವನ್ನಲ್ಲದೆ ಬೇರೇನಲ್ಲ. ಸಫಾಯಿ ಕರ್ಮಚಾರಿ ಕೆಲಸ ನಿಷೇಧಿಸಿರುವ ಸರ್ಕಾರವೇ ಸಾವಿರಾರು ಜನರನ್ನು ಕೈಯಿಂದ ಮಲಮೂತ್ರ ಬಳಿದು ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಿಸಿಕೊಂಡಿದೆ!

ಕೂತು, ಎದ್ದು, ಮಾತಾಡಿದರೂ ಕಾಲ ಸರಿಯುತ್ತಿಲ್ಲ. ಹಳಿಗುಂಟ ನಡೆದು ಹೊರಟೆವು. ಸ್ಟೇಷನ್ ದಾಟಿ, ಸೇತುವೆ ದಾಟಿದ್ದೇ ಊರ ಹೊರಭಾಗವೇ ಬಂದುಬಿಟ್ಟಿತು. ಹಳಿಯ ಎರಡೂ ಬದಿ ಒಂದಷ್ಟು ಮನೆಯೆನಿಸಿಕೊಂಡ ಗೂಡುಗಳು ಕಾಣುತ್ತಿದ್ದವು. ಮುಳುಗುತ್ತಿರುವ ಸೂರ್ಯನ ಬೆಳಕಲ್ಲಿ, ಅಕಾ ಅಷ್ಟು ದೂರದಲ್ಲಿ ಹಳಿಯ ಎರಡೂ ಕಡೆ ಕಂಬಿಗಳ ಮೇಲೆ ಕುಳಿತ ಜನ ಕಾಣಿಸುತ್ತಿದ್ದರು. ನಾವು ಹತ್ತಿರ ಹೋದಾಗ ಕುಕ್ಕುರುಗಾಲಲ್ಲಿ ಎದುರುಬದುರು ಕುಳಿತು ಹರಟೆ ಹೊಡೆಯುತ್ತಿದ್ದವರು ಎದ್ದುನಿಂತಾಗಲೇ ಗೊತ್ತಾಗಿದ್ದು, ಅವರು ಶೌಚಕ್ಕೆ ಕೂತಿದ್ದರೆಂದು!

ಭಾರತೀಯ ರೇಲ್ವೆ, ಪ್ರತಿನಿತ್ಯ ೩ ಕೋಟಿ ಜನರನ್ನು ಒಯ್ಯುತ್ತದೆ. ೬೪,೪೦೦ ಕಿಮೀ ಉದ್ದದ ಹಳಿಗಳ ಪ್ರಪಂಚದ ಅತಿ ದೊಡ್ಡ ಸಂಪರ್ಕ ಜಾಲ ಭಾರತೀಯ ರೈಲ್ವೆ. ಅಷ್ಟೇ ಅಲ್ಲ, ಅದು ವಿಶ್ವದ ಅತಿ ದೊಡ್ಡ ಚಲಿಸುವ ಬಯಲ ಶೌಚಾಲಯವೂ ಹೌದು. ರೇಲ್ವೆಯ ೫೦೦೦೦ ಪ್ಯಾಸೆಂಜರ್ ರೈಲುಗಳು, ಅವುಗಳ ಲಕ್ಷಾಂತರ ಬೋಗಿಗಳ ಟಾಯ್ಲೆಟ್ಟುಗಳಿಂದ ಟನ್ನುಗಟ್ಟಲೆ ಮಲ ನಿತ್ಯ ರೈಲು ಹಳಿಗಳ ನಡುವೆ ಕೆಳಗೆ ಬೀಳುತ್ತದೆ. ‘ರೈಲು ನಿಂತಾಗ, ಸ್ಟೇಷನ್ನುಗಳಲ್ಲಿ ಶೌಚಾಲಯ ಬಳಸಬೇಡಿ’ ಎಂಬ ಬೋರ್ಡು ಕಣ್ಣೆದುರೇ ಇದ್ದರೂ ಚಲಿಸುವಾಗ ಗಡಗಡ ಅಲುಗುವ ಕಂಪನಕ್ಕೆ ಹೆದರುವವರು ರೈಲು ನಿಂತಾಗಲೇ ಶೌಚಾಲಯ ಬಳಸುತ್ತಾರೆ. ರೈಲಿನ ಶೌಚಾಲಯ ಎಂದರೆ ನೆಲಕ್ಕೆ ಕೊರೆದ ಒಂದು ತೂತು ಅಷ್ಟೇ. ಜನರಲ್ ಬೋಗಿಗಳ ಟಾಯ್ಲೆಟ್ಟುಗಳಲ್ಲಿ ಕಾಲಿಡುವ ಪರಿಸ್ಥಿತಿ ಇರುವುದಿಲ್ಲ. ನೀರೂ ಇರುವುದಿಲ್ಲ. ಹೀಗೆ ಹಳಿಗಳ ಮೇಲೆ ಬೀಳುವ, ಬೋಗಿಯ ಅಡಿಭಾಗ ಹಾರುವ ಮಲಮೂತ್ರಗಳಿಂದ ಹಳಿ ತುಕ್ಕು ಹಿಡಿದು ಶಿಥಿಲವಾಗಿ ರೈಲ್ವೆಗೆ ವರ್ಷಕ್ಕೆ ೩೫೦ ಕೋಟಿ ರೂಪಾಯಿ ನಷ್ಟವಾಗುತ್ತದೆ. ಟ್ರ್ಯಾಕ್ ಶುದ್ಧವಾಗುಳಿಯಲು ಸಾವಿರಾರು ದಲಿತ ಸಫಾಯಿ ಕರ್ಮಚಾರಿಗಳು ಸೂಕ್ತ ಸೌಕರ್ಯ-ಸವಲತ್ತುಗಳಿಲ್ಲದೇ ಕೆಲಸ ಮಾಡುತ್ತಾರೆ.

ಇತ್ತೀಚೆಗೆ ಈ ಕುರಿತು ಚರ್ಚೆ ಶುರುವಾಗಿದ್ದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿಚಾರಣೆ ನಡೆಸಿತು. ೨೦೨೨ರ ಹೊತ್ತಿಗೆ ತನ್ನ ಎಲ್ಲ ಬೋಗಿಗಳಿಗೂ ಜೈವಿಕ ಶೌಚಾಲಯಗಳನ್ನು ಅಳವಡಿಸುವುದಾಗಿ ರೈಲ್ವೆಯು ಮಾನವ ಹಕ್ಕುಗಳ ಆಯೋಗಕ್ಕೆ ತಿಳಿಸಿತು. ಈಗ ಪ್ರಯೋಗಾರ್ಥ ಎಸಿ ಹಾಗೂ ಕಾದಿಟ್ಟ ೨೦೦೦ ಬೋಗಿಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ. ಕೆಳಗೆ ಬಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಬ್ಯಾಕ್ಟೀರಿಯಾದಿಂದ ಅಪಾಯರಹಿತ ತ್ಯಾಜ್ಯವಾಗಿ ಪರಿವರ್ತಿಸಿ, ಹೊರಬಿಡುವ ವ್ಯವಸ್ಥೆ ಜೈವಿಕ ಶೌಚಾಲಯದಲ್ಲಿರುತ್ತದೆ. ಎಲ್ಲ ಬೋಗಿಗಳೂ ಇದನ್ನು ಅಳವಡಿಸಿಕೊಂಡರೆ ಪರಿಸರ, ಮನುಷ್ಯ ಘನತೆ, ರೈಲು ಹಳಿ ಎಲ್ಲವೂ ಬಹುಕಾಲ ಬಾಳುವ ಸಾಧ್ಯತೆ ಇದೆ.

ತಲೆಯಲ್ಲಿ ಇಷ್ಟೆಲ್ಲ ಸುಳಿದಾಡುತ್ತಿರುವಾಗ ನೋಡಿದ್ದು ಸಾಕು ಎನ್ನುವಂತೆ ಅಮರಾವತಿ ಸಿಳ್ಳುಹಾಕುತ್ತ ಬಂದೇಬಿಟ್ಟಿತು.

‘ಸ್ವಚ್ಛ ಭಾರತ’

ಕೆಲ ತಿಂಗಳ ಕೆಳಗೆ ಪ್ರಧಾನಿಯಿಂದ ಹಿಡಿದು ಊರೂರ ಗ್ರಾಮ ಪಂಚಾಯ್ತಿ ಸದಸ್ಯರ ತನಕ ಎಲ್ಲರೂ ಭಾರತವನ್ನು ಗುಡಿಸಿ ‘ಸ್ವಚ್ಛ’ಗೊಳಿಸಿದರು. ಇನ್ನೇನು ಭಾರತವೆಂಬ ಬೃಹತ್ ತಿಪ್ಪೆಗುಂಡಿ ತ್ಯಾಜ್ಯ ಮುಕ್ತವಾಗಿ, ದುರ್ವಾಸನೆ ಮುಕ್ತವಾಗಿ ಲಕಲಕ ಹೊಳೆದುಬಿಟ್ಟಂತೆ ಹಲವರಿಗೆ ಕನಸಾಯಿತು. ದೇಶದ ನಾಯಕರೇ ಪೊರಕೆ ಹಿಡಿದ ಮೇಲೆ ಇನ್ನು ನಮ್ಮದೇನು ಎಂದು ಕಂಡಕಂಡವರೆಲ್ಲ ಕಸಬರಿಕೆಯನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ತಂದು, ಅಡ್ಡಾದಿಡ್ಡಿ ಹಿಡಿದು ಫೊಟೋ ತೆಗೆಸಿಕೊಂಡರು. ಕೆಲವೆಡೆ ಫೋಟೋ ಸೆಷನ್‌ಗಾಗಿ ಕಸ ಗುಪ್ಪೆಯಾಗಿ ಕಾಯತೊಡಗಿತು. ಹಿಡಿಯುವವರಿಗೆ ತಮ್ಮನ್ನು ಎಲ್ಲಿ ಹೇಗೆ ಹಿಡಿಯಬೇಕೆಂದಾದರೂ ಗೊತ್ತಿದೆಯೋ ಇಲ್ಲವೋ ಎಂದು ಪೊರಕೆಗಳು ನಡು ಬಳುಕಿಸಿ ಚೋದ್ಯಪಟ್ಟವು.
ಸ್ವಚ್ಛ ಭಾರತ: ಕನಸು, ಕನವರಿಕೆ...

ಕ್ಯಾಮೆರಾ ಮೈಕುಗಳೆದುರು ಭಾರೀ ಅಭಿಯಾನವೊಂದು ನಡೆದುಹೋಯಿತು. ನ್ಯೂಯಾರ್ಕ್ ಟೈಮ್ಸ್ ಹಾಗೂ ದಿ ಎಕಾನಮಿಸ್ಟ್‌ನಂತಹ ವಿದೇಶೀ ಪತ್ರಿಕೆಗಳು ಭಾರತದ ಶೌಚ ವ್ಯವಸ್ಥೆಯ ಬಗ್ಗೆ, ಅದರಲ್ಲೂ ಬಯಲ ಶೌಚ ಬಳಸುವ ಬಗ್ಗೆ ಮುಜುಗರಗೊಳ್ಳುವಂತಹ ಅಂಕಿಅಂಶಗಳನ್ನು ಪ್ರಕಟಿಸಿದವು. ಆಸ್ಟ್ರೇಲಿಯಾ, ಸಿಂಗಾಪುರದ ವಿಶ್ವವಿದ್ಯಾಲಯಗಳು ಭಾರತದ ಬಯಲ ಶೌಚ ಪದ್ಧತಿ ಬಗ್ಗೆ ಸಂಶೋಧನೆ ನಡೆಸಿದವು. ಗಾಂಧಿಜಯಂತಿಯಂದು ಪ್ರಧಾನಿ ‘ಸ್ವಚ್ಛ ಭಾರತ ಅಭಿಯಾನ’ವೆಂಬ ಯೋಜನೆ ಘೋಷಿಸಿ ಎರಡು ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ನೂರು ದಿನಗಳಲ್ಲಿ ಲಕ್ಷಾಂತರ ಗೃಹಬಳಕೆಯ ಶೌಚಾಲಯ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು. ಅದಾಗಿ ವಾರ ಒಪ್ಪತ್ತು ಕಳೆಯಿತು. ತಿಂಗಳೂ ಕಳೆಯಿತು. ಸರ್ಕಾರದ ಹಣ ಎಲ್ಲೆಲ್ಲಿ ಹೋಯಿತೋ, ೬೮% ಭಾರತೀಯರು ಬಯಲ ಆಶ್ರಯಿಸುವುದು ಹಾಗೇ ಮುಂದುವರೆದಿದೆ. ಇವತ್ತಿಗೂ ಗ್ರಾಮೀಣ ಭಾಗದ ಅತ್ಯಾಚಾರ ಪ್ರಕರಣಗಳಲ್ಲಿ ೪೦% ಶೌಚದ ವೇಳೆ ಸಂಭವಿಸುತ್ತಿವೆ.

ಶೌಚ ವ್ಯವಸ್ಥೆಯ ನೇರ್ಪಡಿಸಲು ಸ್ವಚ್ಛಗ್ರಾಮ, ನಿರ್ಮಲ ಗ್ರಾಮ ಇತ್ಯಾದಿ ಎಷ್ಟೋ ಕಾರ್ಯಕ್ರಮಗಳು ಬಂದುಹೋಗಿವೆ. ಆದರೆ ಎಲ್ಲವೂ ಸಂಪೂರ್ಣ ವಿಫಲವಾಗಿವೆ. ಉಚಿತ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಮಲ ಕಟ್ಟಿಕೊಂಡು ಗಬ್ಬು ನಾರುವ ಉಚಿತ ಶೌಚಾಲಯಗಳ ಪರಿಸ್ಥಿತಿ ಹೇಗಿದೆ ಎಂದರೆ ಅದರೊಳಗೆ ಕಾಲಿಡಲು ಸಾಧ್ಯವೇ ಇಲ್ಲ. ಇನ್ನು ಹಣ ಕೊಟ್ಟು ಬಳಬೇಕಾದ ಶೌಚಾಲಯಗಳಿಗೆ ಜನ ಹೋಗುವುದಿಲ್ಲ. ದುಡ್ಡು ಕೊಟ್ಟು ದೈನಂದಿನ ಬಾಧೆ ತೀರಿಸಿಕೊಳ್ಳಬೇಕೆಂದು ಜನರಿಗೆ ಅನಿಸುವುದಿಲ್ಲ. ಅದನ್ನು ಹೆಚ್ಚುವರಿ ಖರ್ಚು ಎಂದೇ ಭಾವಿಸುತ್ತಾರೆ. ಅದಕ್ಕಿಂತ ಪುಕ್ಕಟೆ ಇರುವ ಬಯಲು-ಹೊಲ-ಗದ್ದೆ-ತೋಟ-ಗುಡ್ಡಗಳತ್ತ ನಡೆಯುತ್ತಾರೆ. ಪ್ರತಿ ಮನೆಯೂ ಶೌಚಾಲಯ ಹೊಂದಲಿ ಎಂಬ ಉದ್ದೇಶದ ಯೋಜನೆಯೂ ಬಂತು. ‘ಸ್ವಚ್ಛಗ್ರಾಮ’ ಯೋಜನೆಯಡಿ ಒಳಚರಂಡಿ ವ್ಯವಸ್ಥೆಯಿರದ ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಸರ್ಕಾರ ಹಲವು ಆಮಿಷಗಳನ್ನು ತೋರಿತು. ಸಬ್ಸಿಡಿ ಹಣ, ಪಡಿತರ ಚೀಟಿ, ಚುನಾವಣೆಗೆ ಅನರ್ಹವಾಗುವಿಕೆ ಇತ್ಯಾದಿ ಚತುರೋಪಾಯಗಳನ ಬಳಸಿ ಸ್ವಂತ ಪಾಯಖಾನೆಗಳನ್ನು ಹೊಂದಲು ಪ್ರೇರೇಪಿಸಿತು. ಆದರೆ ಕೊಟ್ಟ ದುಡ್ಡು ಸುಳ್ಳು ದಾಖಲೆ ತೋರಿಸುವುದರಲ್ಲಿ; ಕಟ್ಟಿಕೊಂಡ ಶೌಚಾಲಯಕ್ಕೆ ಸೆಪ್ಟಿಕ್ ಟ್ಯಾಂಕ್ ಕಟ್ಟದೇ ಅದರ ಪೈಪನ್ನು ನದಿಗೆ ಬಿಟ್ಟು ಆರೋಗ್ಯ ಸಮಸ್ಯೆ ಉಲ್ಬಣಿಸುವುದರಲ್ಲಿ ಕೊನೆಯಾಯಿತು. ಸಾಲುಸಾಲಾಗಿ ಸರ್ಕಾರಿ ಯೋಜನೆಗಳು ಬಂದರೂ ಅವು ಕಾರ್ಯಗತವಾದವೇ ಇಲ್ಲವೇ ಎಂಬ ಸೂಕ್ತ ಮೇಲುಸ್ತುವಾರಿ ನಡೆಯದೇ, ಜನರಲ್ಲಿ ತಿಳುವಳಿಕೆ ಮೂಡಿಸದೇ ಎಲ್ಲವೂ ವಿಫಲವಾದವು.  

ಹೀಗೆ ೨೧ನೇ ಶತಮಾನವೆಂಬ ಆಧುನಿಕ-ವೈಜ್ಞಾನಿಕ-ಮೊಬೈಲ್ ಯುಗ ಬಂದರೂ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ನೀಡುವಲ್ಲಿ ಸರ್ಕಾರಗಳು ಸೋಲುತ್ತ ಬಂದಿವೆ. ೨೦೧೧ರ ಜನಗಣತಿ ಪ್ರಕಾರ ಭಾರತದ ೨೪ ಕೋಟಿ ಕುಟುಂಬಗಳಿಗೆ ಸ್ವಂತ ಶೌಚಾಲಯ ಇಲ್ಲ. ೨೦೧೪ರಲ್ಲಿಯೂ ಕೂಡಾ ಉತ್ತರ ಮತ್ತು ಪಶ್ಚಿಮ ಭಾರತಗಳಲ್ಲಿ ೯ ಲಕ್ಷ ಡ್ರೈ ಲ್ಯಾಟ್ರಿನ್‌ಗಳಿವೆ. ಆ ಗುಂಡಿಗಳಿಂದ ನಿತ್ಯವೂ ಬಾಚಿಯೇ ಮಲ ಖಾಲಿ ಮಾಡಬೇಕು. ಕಾನೂನು ನಿಷೇಧವಿದ್ದರೇನಂತೆ, ಇವತ್ತಿಗೂ ಐದು ಲಕ್ಷಕ್ಕೂ ಮೀರಿ ಸಫಾಯಿ ಕರ್ಮಚಾರಿಗಳು ಈ ದೇಶದ ಕಕ್ಕಸು ಗುಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಗುಂಡಿಗೆ ಅನಧಿಕೃತವಾಗಿ ಇಳಿದು, ಪ್ರಾಣ ಕಳೆದುಕೊಳ್ಳುವ ಹತಭಾಗ್ಯರ ಸಂಖ್ಯೆ ಬೆಳೆಯುತ್ತಲೇ ಇದೆ.

ಶೌಚಾಲಯ ಕಟ್ಟಿಕೊಳ್ಳಿ, ಪರಿಸರ ನೈರ್ಮಲ್ಯ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರ ಮನವೊಲಿಸುವುದು; ಸೂರೇ ಇಲ್ಲದ, ಅನ್ನವೇ ಗತಿಯಿಲ್ಲದ ಜನರಿಗೆ ಶೌಚದ ಬಗೆಗಿನ ತಿಳುವಳಿಕೆ, ಪ್ರಾಮುಖ್ಯತೆ ಮನದಟ್ಟು ಮಾಡುವುದು ಅಷ್ಟು ಸುಲಭವಲ್ಲ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮಲ ಹೊಲಸು, ಅದನ್ನು ಮನೆಯೊಳಗಿರುವ ಗುಂಡಿಯಲ್ಲಿ ತುಂಬಿಸುವುದಲ್ಲ ಎಂದೇ ಜನ ಭಾವಿಸಿದ್ದಾರೆ. ಭಾರತವಷ್ಟೇ ಅಲ್ಲ, ವಿಶ್ವಾದ್ಯಂತ ಹಳ್ಳಿಗರು ಉಚಿತ ಹಾಗೂ ಅನುಕೂಲಕರ ವಿಧಾನ ಯಾವುದೋ ಅದನ್ನಷ್ಟೇ ಶೌಚಕ್ಕೆ ಬಳಸುತ್ತಿದ್ದಾರೆ.

ತೊಗಲ ಮರೆಯ ಕೊಳೆ

ಶೌಚ ವ್ಯವಸ್ಥೆಯಲ್ಲಿ ಎರಡು ಮುಖ್ಯ ಅಂಶಗಳಿವೆ: ಒಂದು ತ್ಯಾಜ್ಯ, ಮತ್ತೊಂದು ಸಫಾಯಿ ಕರ್ಮಚಾರಿ ವೃತ್ತಿ. ದೇಹ ಬಳಸಿ ಬಿಟ್ಟ, ಬೇಡವೆಂದು ಹೊರದಬ್ಬುವ ಆಹಾರವೇ ಮಲ. ಅದು ನೆಲ ಸೇರಿದರೆ ಗೊಬ್ಬರ, ಹುದುಗು ಬಂದರೆ ಜೈವಿಕ ಅನಿಲ. ಆಹಾರ-ನೀರಿನ ಜೊತೆ ಮಿಶ್ರಣವಾದರೆ ರೋಗಕಾರಕ. ಬಯಲಲ್ಲಿ ಮಲ ಬಿದ್ದರೆ ಅದು ಗಾಳಿ-ಮಳೆ-ನೆಲ-ಕ್ರಿಮಿಕೀಟಗಳ ಮೂಲಕ ಕುಡಿಯುವ ನೀರು, ಆಹಾರ ಎಲ್ಲವನ್ನೂ ತಲುಪುತ್ತದೆ. ಮಲದಲ್ಲಿರುವ ಬ್ಯಾಕ್ಟೀರಿಯಾ-ವೈರಸ್-ಪರೋಪಜೀವಿಗಳು ಎಲ್ಲೆಡೆ ಹರಡಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಕಾಲರಾ, ಟೈಫಾಯ್ಡ್, ಜಾಂಡೀಸ್, ಪೋಲಿಯೋ, ವಾಂತಿಭೇದಿ, ಜಂತುಹುಳ ಬಾಧೆ ಇತ್ಯಾದಿ ಅನೇಕ ಕಾಯಿಲೆಗಳು ಹರಡುತ್ತವೆ. ಎಂದರೆ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ; ಬಯಲ ಶೌಚ ಹಾಗೂ ಸಮುದಾಯ ಆರೋಗ್ಯ ನೇರ ಸಂಬಂಧ ಹೊಂದಿವೆ. ಶೌಚ ವ್ಯವಸ್ಥೆಗೂ, ಅಪೌಷ್ಟಿಕತೆ-ನವಜಾತ ಶಿಶುಗಳ ಮರಣ-ತಾಯಿ ಮರಣ ದರಕ್ಕೂ ಸಂಬಂಧವಿದೆ. ೨೦೧೧ರ ಜನಗಣತಿ ಪ್ರಕಾರ ಕೇರಳದ ೫೦ ಲಕ್ಷ ಕುಟುಂಬಗಳಲ್ಲಿ ೭% ಮಾತ್ರ ಸ್ವಂತ ಶೌಚಾಲಯ ಹೊಂದಿಲ್ಲ. ಅಲ್ಲಿ ನವಜಾತ ಶಿಶುಮರಣ ದರ - ಎಂದರೆ ಪ್ರತಿ ಸಾವಿರ ಸಜೀವ ಜನನಕ್ಕೆ ಸಂಭವಿಸುವ ಶಿಶುಮರಣ ೧೫ ಇದೆ. ಅದೇ ೬೪% ಕುಟುಂಬಗಳು ಶೌಚಾಲಯ ಹೊಂದಿರದ ಉತ್ತರಪ್ರದೇಶ ರಾಜ್ಯದಲ್ಲಿ ಶಿಶುಮರಣ ದರ ೭೦ ಇದೆ.

ಬಯಲು ಶೌಚ ಕೇವಲ ಹಳ್ಳಿಗಳ ಸಮಸ್ಯೆಯಲ್ಲ. ಕೈಗಾರಿಕಾ ಕ್ರಾಂತಿಯ ನಂತರ ಶುರುವಾದ ನಗರೀಕರಣ ಒಡ್ಡಿದ ದೊಡ್ಡ ಸವಾಲು ಅದು. ಕೇವಲ ೧೦೦ ವರ್ಷಗಳ ಕೆಳಗೆ ಎಡಿನ್‌ಬರ್ಗಿನಲ್ಲಿ ಕಕ್ಕಸು ತುಂಬಿದ ಮಡಕೆಗಳನ್ನು ಒಯ್ದು ಊರಾಚೆ ಕಸದ ಜೊತೆ ಬಿಸಾಡುವ ವ್ಯವಸ್ಥೆಯಿತ್ತು. ನದಿ-ಕಾಲುವೆಗಳಿಗೆ ಅಡ್ಡವಾಗಿ ಕಟ್ಟೆ ಕಟ್ಟಿ ಮಲಬಾಧೆ ತೀರಿಸಿಕೊಳ್ಳುವ ವ್ಯವಸ್ಥೆಯಿತ್ತು. ಕ್ರಮೇಣ ನಗರವಾಸಿಗಳು ಹಾಗೂ ಆಡಳಿತಗಾರರು ಕಾರಾ, ಟೈಫಾಯ್ಡ್ ಮತ್ತಿತರ ಕಾಯಿಲೆಗಳು ಕುಡಿಯುವ ನೀರು ಮತ್ತು ಮಲ ಮಿಶ್ರಣಗೊಳ್ಳುವುದರಿಂದ ಬರುತ್ತಿವೆ ಎನ್ನುವುದನ್ನು ಅರಿತರು. ಕಾಯಿಲೆ-ತಡೆಗಟ್ಟುವಿಕೆ ಕುರಿತು ಆರೋಗ್ಯ ವಿಜ್ಞಾನ ಅರಿವು ಮೂಡಿಸುತ್ತ ಹೋದಹಾಗೆ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಶೌಚ ವ್ಯವಸ್ಥೆಯನ್ನು ನಿರ್ವಹಿಸುವ ಸೂಕ್ತ ವ್ಯವಸ್ಥೆ ಕಂಡುಕೊಂಡರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೮೯೦ರ ವೇಳೆಗೆ ಶಿಶುಮರಣ ದರ ೧೩೦ ಮುಟ್ಟಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ನಗರಾಡಳಿತ ಕುಡಿಯುವ ನೀರು ಹಾಗೂ ಶೌಚ ವ್ಯವಸ್ಥೆಯನ್ನು ಆಧುನಿಕಗೊಳಿಸಿ ೧೯೦೪ರಲ್ಲಿ ಅದು ೮೩ಕ್ಕೆ ಇಳಿಯಿತು. ೧೯೪೫ರ ಹೊತ್ತಿಗೆ ಶಿಶುಮರಣ ದರ ೨೯ ಆಯಿತು. ಆದರೆ ಭಾರತದಲ್ಲಿ ಈ ಬದಲಾವಣೆ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ಇಲ್ಲಿ ಇನ್ನೂ ಅರ್ಧಕ್ಕರ್ಧ ಜನಸಂಖ್ಯೆ ಬಯಲನ್ನೇ, ಗುಡ್ಡಬೆಟ್ಟನದಿಗಳನ್ನೇ ಶೌಚಕ್ಕೆ ಬಳಸುತ್ತಿದ್ದಾರೆ. ಗಂಗೆ ಮಲಿನಗೊಳ್ಳುತ್ತಲೇ ಇದ್ದಾಳೆ.

ಕೊನೆಗಂತೂ ನಗರಗಳಲ್ಲಿ ನೀರು ಬಳಸಿ ಫ್ಲಷ್ ಮಾಡುವ ಒಳಚರಂಡಿ ವ್ಯವಸ್ಥೆ ಬಂತು. ಆದರೆ ಅಲ್ಲಿನ ಸ್ಲಂವಾಸಿಗಳು, ನಗರದ ಹೊರ ಭಾಗಗಳಲ್ಲಿ ಅನಧಿಕೃತವಾಗಿ ವಾಸಿಸುವವರು, ಅಲೆಮಾರಿಗಳ ಶೌಚದ ಪಾಡು ದೇವರಿಗೂ ಗೊತ್ತಿಲ್ಲ. ಶೌಚಕ್ಕಾಗಿ ಅವರು ರೈಲ್ವೇ ಲೇನುಗಳನ್ನು, ಖಾಲಿ ಜಾಗಗಳನ್ನು, ಪಾಳು ಸ್ಥಳಗಳನ್ನು ಬಳಸಬೇಕು. ಅದಕ್ಕಾಗಿ ಅಂತಹ ಸ್ಥಳಗಳು ನಿರ್ಜನವಾಗುವವರೆಗೆ, ರಾತ್ರಿಯಾಗುವವರೆಗೆ ಕಾಯಬೇಕು. ಹೆಂಗಸರು, ಮುದುಕರು, ಮಕ್ಕಳಿಗೆ ಇದೆಲ್ಲ ಎಂಥ ಸಂಕಟವೋ, ಭಯವೋ ಅದು ನಮ್ಮ ಊಹೆಗೂ ನಿಲುಕುವುದಿಲ್ಲ.

ಹೊಟ್ಟೆಗೆ ತಿನ್ನುವವರೆಲ್ಲ ಮಲಮೂತ್ರ ವಿಸರ್ಜಿಸಲೇಬೇಕು. ಆದರೆ ಈ ನೈಸರ್ಗಿಕ, ಅನೈಚ್ಛಿಕ ಕ್ರಿಯೆಯ ಜೊತೆ ಹೊಂದಿಕೊಂಡ ನಮ್ಮದೇ ದೇಹದ ಅಂಗಾಂಗಗಳನ್ನು, ಅದನ್ನು ನಿಭಾಯಿಸುವ ವೃತ್ತಿಬಂಧುಗಳನ್ನು ಅನಾದಿಯಿಂದ ನಿಕೃಷ್ಟವಾಗಿ ಕಾಣಲಾಗಿದೆ. ಶೌಚದ ಸಮಸ್ಯೆ ಒಂದು ರೀತಿಯದಾದರೆ ಶುಚಿಗೊಳಿಸುವಿಕೆಗೆ ಹೊಂದಿಕೊಂಡವರನ್ನು ನಾವು ನಡೆಸಿಕೊಂಡ ರೀತಿ ಅಮಾನವೀಯವಾದದ್ದು. ಶುಚಿಗೊಳಿಸುವ ಕೆಲಸ ಮಾಡಲಿಕ್ಕೆಂದೇ ಒಂದು ಜಾತಿ ಸೃಷ್ಟಿಸಿ, ಆ ಕಾರಣಕ್ಕೇ ಅವರನ್ನು ದೂರವಿಟ್ಟು ಉಳಿದವರು ಪರಿಶುದ್ಧ, ಮಡಿ ಎಂದುಕೊಂಡೆವು. ನಮ್ಮ ಧರ್ಮ ಸಂಸ್ಕೃತಿಗಳು ಒಳಗಣ ಪಾಪದ ಕಸ ತೊಳೆದುಕೊಳಲು ಪ್ರಾಯಶ್ಚಿತ್ತ, ಹರಕೆಗಳಂತಹ ಸುಲಭ ವಿಧಾನವನ್ನು ಹೇಳಿಕೊಟ್ಟು ಅವನ್ನು ಶ್ರದ್ಧೆಯಿಂದ ಮಾಡಲು ತಿಳಿಸಿದವು. ಆದರೆ ಬಾಹ್ಯದ ಹೊಲಸ ತೆಗೆವವರ ಕುರಿತು ತಿರಸ್ಕಾರ, ಅಸಡ್ಡೆ ಬೆಳೆಸಿಕೊಂಡುಬಂದಿವೆ. ಮನುಷ್ಯರನ್ನು ನಡೆಸಿಕೊಳ್ಳುವಲ್ಲಿ ಇರುವ ತಾರತಮ್ಯ, ಇಬ್ಬಂದಿತನಗಳು ಭಾರತೀಯ ತತ್ವ, ವೇದವೇದಾಂತಗಳನ್ನೆಲ್ಲ ನಗಣ್ಯಗೊಳಿಸಿಬಿಡುವಷ್ಟು ಢಾಳಾಗಿವೆ. ಜಾತಿವ್ಯವಸ್ಥೆಯ ತಳಗಿನ ಈ ಸಮುದಾಯಗಳ ಕುರಿತು ಬುದ್ಧ, ಬಸವಣ್ಣನಂತಹ ಕೆಲವರನ್ನು ಹೊರತುಪಡಿಸಿ ಯಾರೂ ಯೋಚಿಸಲಿಲ್ಲ. ಜಾತಿ-ವೃತ್ತಿ ಸಂಬಂಧ ತೊಲಗಿಸುವ ಸಮಾಜ ಸುಧಾರಣಾ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಮುಲ್ಕ್ ರಾಜ್ ಆನಂದ್ ‘ಅಸ್ಪೃಶ್ಯ’ ಎಂಬ ಕಾದಂಬರಿ ಬರೆದರು. ಅದರಲ್ಲಿ ರಾಕ ಎಂಬ ಭಂಗಿ ಸಮುದಾಯದ ಹುಡುಗನೊಬ್ಬನ ಒಂದು ದಿನದ ದಿನಚರಿಯಿದೆ. ಆ ಸಮುದಾಯದೊಳಗಣ ಕಷ್ಟ, ಅವಮಾನ, ನೋವು, ಬಡತನ, ಅನಕ್ಷರತೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅದರ ಕೊನೆಯಲ್ಲಿ ಒಬ್ಬ ಕವಿ, ಹೋರಾಟಗಾರ ಈ ವೃತ್ತಿ ಮತ್ತು ಅದಕ್ಕಂಟಿದ ಮೈಲಿಗೆಯ ಕಳಂಕ ತೊಳೆಯಲು ಫ್ಲಷ್ ಕಕ್ಕಸು ಬರುವುದೊಂದೇ ದಾರಿ ಎಂದು ಸೂಚಿಸುತ್ತಾನೆ.

‘ಅಸ್ಪೃಶ್ಯ’ ಕಾದಂಬರಿ ಪ್ರತಿಪಾದಿಸಿರುವಂತೆ ಈಗ ಪ್ಲಷ್ ವ್ಯವಸ್ಥೆಯೇನೋ ಬಂದಿದೆ, ತಲೆ ಮೇಲೆ ಮಲ ಹೊರುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಭಂಗಿ ಕೆಲಸದ ಸ್ವರೂಪ ಬೇರೆಯಾಗಿ ಅದು ಒಂದೇ ಸಮುದಾಯಕ್ಕೆ ಸೀಮಿತವಾಗಿದೆ. ಶೌಚಾಲಯಗಳು ಒಳಚರಂಡಿಯೊಂದಿಗೆ ಸಂಪರ್ಕಜಾಲ ಹೊಂದಿರುತ್ತವೆ. ನಡುನಡುವೆ ಕಟ್ಟಿಕೊಳ್ಳುತ್ತವೆ. ಗುಂಡಿ ತುಂಬಿದರೆ ಇಳಿದು ಖಾಲಿ ಮಾಡಲು, ಅವನ್ನು ಸ್ವಚ್ಛಗೊಳಿಸಲು ಮತ್ತೆ ಸಫಾಯಿ ಕರ್ಮಚಾರಿಗಳೇ ಗುಂಡಿಗಿಳಿಯಬೇಕಾಗಿದೆ. ಈಗ ಸಫಾಯಿ ಕೆಲಸವನ್ನು ಮನುಷ್ಯರಿಂದ ಮಾಡಿಸಬಾರದೆಂಬ ಕಟ್ಟುನಿಟ್ಟಿನ ಕಾಯ್ದೆ ಬಂದಿದ್ದು ಅದರ ಬದಲು ವ್ಯಾಕ್ಯೂಂ ಮಶೀನುಗಳನ್ನು ಬಳಸಬೇಕೆಂದು ಹೇಳಲಾಗಿದೆ. ಆದರೂ ಜಾತಿ-ವೃತ್ತಿ ಸಂಬಂಧ ಎಂದಿನಂತೆ ಮುಂದುವರೆದಿದೆ.

ಇತ್ತೀಚೆಗೆ ನಾಗರಾಜ್ ಹೆತ್ತೂರು ಬರೆದ ‘ಜಾಡಮಾಲಿ ಜಗತ್ತು’ ಎಂಬ ಪುಸ್ತಕ ಕೊಂಡುಕೊಂಡೆ. ಅದರ ಮುಖಪುಟ, ಒಳಗಿನ ಬರಹಗಳು ಉಳಿದ ಸಮಾಜ ತಿಳಿಯಲೇಬೇಕಾದ ಜಾಡಮಾಲಿಗಳ ಬದುಕಿನ ಎಷ್ಟೋ ಸಂಕಟದ ಕತೆಗಳ ಹೇಳುತ್ತವೆ. ಮನೆ, ಮಲ, ಹಸಿವು, ಮಂದಿರದಂತಹ ಎದೆಯ ಕಾಡುವ ವಿಷಯಗಳ ನಡುವೆ ರಾಜಕೀಯ ನುಸುಳದಿದ್ದರೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ತಿಳಿದುಬರುತ್ತದೆ.

‘ಸುಲಭ್ ಶೌಚಾಲಯ’

ಸರಿಸುಮಾರು ಮುಲ್ಕ್ ರಾಜ್ ಆನಂದ್ ದಿಕ್ಕಿನಲ್ಲಿ ಯೋಚಿಸಿದ ವ್ಯಕ್ತಿಯೊಬ್ಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿ ಸಾರ್ವಜನಿಕ ಶೌಚ ವ್ಯವಸ್ಥೆಯಲ್ಲಿ ಹೊಸ ಮಾದರಿ ರೂಪಿಸಿದ. ಆತ ಬಿಹಾರದ ಬಿಂದೇಶ್ವರ ಪಾಠಕ್. ಸಮಾಜ ಶಾಸ್ತ್ರ ಪದವೀಧರರಾಗಿದ್ದ ಪಾಠಕ್ ೧೯೬೮ರಲ್ಲಿ ಬಿಹಾರದ ಗಾಂಧಿ ಜನ್ಮಶತಮಾನೋತ್ಸವ ಸಮಿತಿಯ ‘ಭಂಗಿ ಮುಕ್ತಿ’ ಯೋಜನೆಯಲ್ಲಿ ಭಾಗಿಯಾದರು. ತಮ್ಮ ಪಿಎಚ್‌ಡಿ ಸಂಶೋಧನೆ ಸಲುವಾಗಿ ಭಾರತದಾದ್ಯಂತ ಇರುವ ಸಫಾಯಿ ಕರ್ಮಚಾರಿಗಳ ಕುಟುಂಬದವರನ್ನು ಸಂದರ್ಶಿಸಿದರು. ಆಗ ಅವರಿಗೆ ಸಫಾಯಿ ಕರ್ಮಚಾರಿಗಳ ವೃತ್ತಿ ಬದುಕಿನ ಕಷ್ಟಗಳು ಅರ್ಥವಾದವು. ತಲೆ ಮೇಲೆ ಮಲ ಹೊರುವುದನ್ನು ಕೊನೆಗೊಳಿಸಬೇಕು ಹಾಗೂ ಆ ವೃತ್ತಿಗಿರುವ ಕಳಂಕವನ್ನು ತೆಗೆಯಬೇಕು ಎಂದು ಎರಡು ಗುಂಡಿಗಳಿರುವ ಶೌಚ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ೧೯೭೦ರಲ್ಲಿ ‘ಸುಲಭ ಅಂತರರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ’ಯಿಂದ ಸುಲಭ್ ಶೌಚಾಲಯಗಳನ್ನು ತೆರೆದರು. ಅದು ಭಾರತದ ಅತಿ ದೊಡ್ಡ ಲಾಭರಹಿತ ಸೇವಾ ಸಂಸ್ಥೆ ಎಂದು ಹೆಸರು ಗಳಿಸಿದೆ. ದಿನವೊಂದಕ್ಕೆ ಒಂದು ಕೋಟಿ ಜನ ಸುಲಭ್ ಶೌಚಾಲಯ ಬಳಸುತ್ತಾರೆ. ಕನಿಷ್ಟ ದರ ನಿಗದಿಪಡಿಸಲಾಗಿದ್ದು ದುಡ್ಡು ಕೊಟ್ಟರೆ ಶೌಚಾಲಯ, ಸ್ನಾನ ಗೃಹ ಬಳಸಿಕೊಳ್ಳಬಹುದು. ಈ ಸಂಸ್ಥೆ ೩೫೦೦೦ ಜನರಿಗೆ ಉದ್ಯೋಗ ಒದಗಿಸಿದೆ. ೨೪೦ ಪಟ್ಟಣಗಳು ಸಫಾಯಿ ಕರ್ಮಚಾರಿಗಳ ಅವಶ್ಯಕತೆಯಿಲ್ಲದೆ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ತ್ಯಾಜ್ಯದಿಂದ ಜೈವಿಕ ಇಂಧನ ಹಾಗೂ ಗೊಬ್ಬರ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲಾಗಿದೆ.

ಹೀಗೆ ವ್ಯಕ್ತಿಯೊಬ್ಬನಿಗೆ ಹೊಳೆದದ್ದು, ಸಂಸ್ಥೆಯೊಂದಕ್ಕೆ ಸಾಧ್ಯವಾದದ್ದು ಸರ್ಕಾರಕ್ಕೂ ಸಾಧ್ಯವಾಗಬೇಕು. ಹಿಂದಿನ ಆರೋಗ್ಯ ಸಚಿವರು ಶೌಚಾಲಯಗಳನ್ನು ದೇವಾಲಯಕ್ಕೆ ಹೋಲಿಸಿದರು. ಈಗ ದೇವಾಲಯದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಶೌಚಾಲಯ ಕುರಿತು ಮಾತನಾಡುತ್ತಿದ್ದಾರೆ. ಏನೇ ಆಗಲಿ, ದೇಶವಿಡೀ ಅನ್ವಯಿಸುವಂತೆ ಸ್ವಚ್ಛತೆಯ ಅಭಿಯಾನ ಕೈಗೊಳ್ಳುವುದೆಂದರೆ ಅದು ಒಂದೆರೆಡು ಕ್ಷಣಗಳಲ್ಲಿ ಸಂಭವಿಸಿಬಿಡಬಹುದಾದ ಜಾದೂ ಅಲ್ಲ. ಒಂದು ವಿಸ್ತೃತ, ದೀರ್ಘಾವಧಿ ಯೋಜನೆ ಬೇಕು; ಅದರ ರೂಪುರೇಷೆ ನಿರ್ಧರಿಸಿ, ತಕ್ಕ ಮಾನವ ಸಂಪನ್ಮೂಲ ಸಿದ್ಧಪಡಿಸಿಕೊಳ್ಳಬೇಕು; ಪೂರ್ವಭಾವಿಯಾಗಿ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಂತರ ಲಕ್ಷ ಕೋಟಿ ರೂಪಾಯಿ ಹಣ ಬಿಡುಗಡೆ ಆಗಬೇಕು.

‘ಭಂಗಿ ಕೆಲಸವೂ ಒಂದು ಆಧ್ಯಾತ್ಮಿಕ ಅನುಭವ’ ಎನ್ನುವವರಿಗೆ ಇದು ಹೊಳೆಯಬಹುದೇ?

***

ತಕ್ಕಡಿಯ ಒಂದು ತಟ್ಟೆ ಎಲ್ಲವನ್ನು ತಾನೇ ತುಂಬಿಕೊಳ್ಳುತ್ತ, ಭಾರವಾಗಿ ಕೆಳ ಜಗ್ಗುತ್ತ ಹೋಗುತ್ತಿದೆ. ಇನ್ನೊಂದು ತಟ್ಟೆ ತನ್ನದನ್ನೆಲ್ಲ ತನಗರಿವಿಲ್ಲದಂತೆ ಕಳೆದುಕೊಳ್ಳುತ್ತ ಖಾಲಿಯಾಗುತ್ತಿದೆ. ಉಳ್ಳವರು, ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿರುವಾಗ, ನಾನಾ ತೆರನ ಗೋಡೆಗಳು ಜನಸಮುದಾಯವನ್ನು ಒಡೆಯುತ್ತಿರುವಾಗ ಎಲ್ಲರಿಗೂ ಘನತೆಯ ಬದುಕು ಎನ್ನುವ ಸಮಾನತೆಯ ಕನಸು ಕನವರಿಕೆಯಾಗಿಯೇ ಉಳಿದೀತೇ ಎಂಬ ಆತಂಕವಾಗುತ್ತದೆ. ಬಡವರೆಂದರೆ ಹೇಗೆ ಬೇಕಾದರೂ ಹಾಗೆ ಬದುಕಬಲ್ಲವರು ಎಂಬ ಅಭಿಪ್ರಾಯ ಬಂದು ಹೋಗಿದೆ. ಎಂಥ ಪರಿಸ್ಥಿತಿಯಲ್ಲೂ, ಎಷ್ಟು ಸಣ್ಣ ಮನೆಯಲ್ಲೂ, ಮನೆಯಿಲ್ಲದಿದ್ದರೆ ರಸ್ತೆ-ಮೋರಿಗಳ ಮೇಲಾದರೂ, ಎಷ್ಟು ಕಡಿಮೆ ಆಹಾರದಲ್ಲೂ, ಎಂಥ ಅನಾರೋಗ್ಯದಲ್ಲೂ ಬದುಕಬಲ್ಲವರು ಅವರು ಎಂಬ ನಿರ್ಲಕ್ಷವಿದೆ. ಆದರೆ ಬಡವರ ಆತ್ಮಗೌರವವನ್ನು ಜಾಗೃತಗೊಳಿಸುವ ಕೆಲಸ ವೈಯಕ್ತಿಕ ಸ್ವಚ್ಛತೆಯಿಂದಲೇ ಶುರುವಾಗಬೇಕು. ಕನಿಷ್ಠ ಸೂರು, ನೀರು, ಶೌಚಾಲಯ ಪ್ರತಿ ಕುಟುಂಬಕ್ಕೂ ಸಿಗಬೇಕು.

ಭಾರತ ಬಡದೇಶ, ಇಲ್ಲಿ ತಿನ್ನಲಿಕ್ಕೇ ಗತಿ ಇಲ್ಲ; ಇನ್ನು ಸ್ವಚ್ಛತೆ, ಶೌಚ ವ್ಯವಸ್ಥೆಗೆ ಹಣ ಹೊಂದಿಸುವುದು ಹೇಗೆ ಸಾಧ್ಯ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಭಾರತ ಅತ್ಯಂತ ಸಂಪದ್ಭರಿತ ದೇಶ. ಕೊಳೆತು ಹೋಗುವಷ್ಟು ದುಡ್ಡು, ಚಿನ್ನ ಇರುವ ದೇಶ. ಸಂದುಮೂಲೆ ತುಂಬಿದರೂ ಮಿಗುವಷ್ಟು ಮಾನವ ಸಂಪನ್ಮೂಲ ಇಲ್ಲಿದೆ. ನಮ್ಮ ಸರ್ಕಾರವೂ ಬಡ ಸರ್ಕಾರವಲ್ಲ. ಲಕ್ಷಾಂತರ ಕೋಟಿ ಕಪ್ಪುಹಣ ಎಲ್ಲೆಲ್ಲೋ ಕೊಳೆಯುತ್ತಿರುವ, ಹೇಗೆಹೇಗೋ ಚಲಾವಣೆಯಾಗುತ್ತಿರುವ ಎಕಾನಮಿ ಇದು. ಇವತ್ತು ಕೊರತೆ ಇರುವುದು ಒಂದು ಉದಾತ್ತ ಯೋಚನೆ, ಜಾರಿಗೊಳಿಸುವ ಧೀಶಕ್ತಿ ಇವೆರೆಡರದ್ದೇ ಹೊರತು ಹಣದ್ದಲ್ಲ.

ದೇವಸ್ಥಾನ ಕಟ್ಟಿಟ್ಟರೆ ಸಾಕು, ಜನ ಓಡೋಡಿ ಬರುತ್ತಾರೆ. ಬಳಸುತ್ತಾರೆ. ಆದರೆ ಈ ಮಾತನ್ನು ಶೌಚಾಲಯ ಕುರಿತು ಹೇಳಬರುವುದಿಲ್ಲ. ಶೌಚಾಲಯ ಕಟ್ಟಿದ ಕೂಡಲೇ ಜನ ಅದನ್ನು ಬಳಸುವುದಿಲ್ಲ. ಹೀಗಾಗಿ ಉತ್ತಮ ಶೌಚ ವ್ಯವಸ್ಥೆ ಎಂದರೆ ಅದನ್ನು ಸ್ವಚ್ಛಗೊಳಿಸಲು ಮತ್ತೊಬ್ಬರ ಅಗತ್ಯವಿಲ್ಲದಂತಿರಬೇಕು. ಅದರ ಬಳಕೆ, ತುರ್ತು ಏನೆಂದು ಜನರಿಗೆ ತಿಳಿಯಬೇಕು. ೧೯೯೪ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡು ೮೦ ಜನ ಸತ್ತಾಗ ಕೇವಲ ಸೂರತ್‌ನಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಆತಂಕ ವ್ಯಕ್ತವಾಯಿತು. ಬಡವಬಲ್ಲಿದರೆನ್ನದೆ ಸೂರತ್ತಿನ ಮೂರನೇ ಒಂದು ಭಾಗ ಜನ ಊರುಬಿಟ್ಟು ಹೋದರು. ನಂತರ ಸ್ವಚ್ಛತೆಯ ಕುರಿತು ಎಂತಹ ಅರಿವು ಮೂಡಿತೆಂದರೆ ಒಂದಾನೊಂದು ಕಾಲದಲ್ಲಿ ಗಲೀಜು ನಗರವಾಗಿದ್ದ ಸೂರತ್ ಈಗ ಭಾರತದಲ್ಲೇ ಮೂರನೇ ಅತಿ ಸ್ವಚ್ಛ ನಗರ! (ಮೊದಲ ಸ್ಥಾನ ೧೦ ಲಕ್ಷ ಜನಸಂಖ್ಯೆಯ ಚಂಢೀಘರಕ್ಕೆ. ಎರಡನೆಯದು ೯ ಲಕ್ಷ ಜನಸಂಖ್ಯೆಯ ಮೈಸೂರು, ಮೂರನೆಯದು ೪೬ ಲಕ್ಷ ಜನಸಂಖ್ಯೆಯ ಸೂರತ್.)

ಜನ ಯಾವಾಗಲೂ ತಮಗೆ ಅಗತ್ಯ, ಅನಿವಾರ್ಯ ಎನಿಸಿದ ಆಧುನಿಕ ವಿಧಾನಗಳನ್ನು ಯಾವ ಪ್ರಚಾರ, ಅಭಿಯಾನವಿಲ್ಲದೆ ಒಪ್ಪಿಕೊಂಡಿದ್ದಾರೆ. ಸುಲಭದ, ಕಡಿಮೆ ದರದ, ಬಳಕೆಗೆ ಸೂಕ್ತವಾದಂತಹ, ಮನೆಬಳಕೆಯ ಅನಿಲ ತಯಾರಿಸಬಲ್ಲ ಶೌಚ ವ್ಯವಸ್ಥೆ ಬರಬೇಕು. ಅದು ಭಾರತದ ವಿಭಿನ್ನ ಭೌಗೋಳಿಕ ಪ್ರದೇಶಗಳಿಗೆ, ಅಲ್ಲಿನ ಜನಸಮುದಾಯಗಳಿಗೆ ಹೊಂದುವಂತಿರಬೇಕು. ನೀರಿರುವಲ್ಲಿ-ಇಲ್ಲದಿರುವಲ್ಲಿ; ತಗ್ಗುಪ್ರದೇಶಗಳಲ್ಲಿ-ಬೆಟ್ಟಬಯಲುಗಳಲ್ಲಿ ಅಲ್ಲಲ್ಲಿಗೆ ಹೊಂದಿಕೆಯಾಗುವ ವ್ಯವಸ್ಥೆಯೇ ಬರಬೇಕು. ಆಗ ಜನ ಮುಗಿಬಿದ್ದು ನಾನು, ತಾನೆಂದು ಅದನ್ನು ಅಳವಡಿಸಿಕೊಳ್ಳಬಹುದು. ಮನೆಬಳಕೆಯ ವಸ್ತುಗಳು, ಮೊಬೈಲು, ಕಂಪ್ಯೂಟರುಗಳನ್ನೆಲ್ಲ ಹೇಗೆ ಮುಗಿಬಿದ್ದು ಕೊಳ್ಳುತ್ತಾರೋ ಹಾಗೆ ಶೌಚ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಬಹುದು.

ಆಗ ಜನಸಾಮಾನ್ಯನೂ ಘನತೆಯ ಬದುಕು-ಆರೋಗ್ಯ ಹೊಂದಲು ಸಾಧ್ಯವಾಗಬಹುದು. ಪಾಪ ತೊಳೆತೊಳೆದು ಮಲಿನವಾದ ಗಂಗೆ ಶುದ್ಧಳಾಗಿ ಹರಿಯಬಹುದು.
ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...