Monday, December 01, 2014

ಎಂ ಎಸ್ ರುದ್ರೇಶ್ವರಸ್ವಾಮಿ : ಮೂರು ಕವಿತೆಗಳು




1



ಅವಳನ್ನು ಪ್ರೀತಿಸಿದೆ....

ಕೆಲವು ಅಡಿಗಳಷ್ಟೇ
ದೂರದಲ್ಲಿರುವ
ಗೋಡೆಯತ್ತ ದಿಟ್ಟಿಸುತ್ತಾನೆ ಅವನು
ಖಾಲಿಕಣ್ಣು...

ಅವಳು ಅವನ ಕಣ್ಣಲ್ಲಿ-
ಕಣ್ಣಿಟ್ಟು ಅವನನ್ನು
ಓದುತ್ತಿದ್ದಾಳೆ ಒಂದೊಂದು ಪುಟ-
ತಿರುವುತ್ತ, ಯಾರೂ
ನೋಡದ ಯಾರಿಗೂ
ಹೇಳದ ಅವನ
ದಿನಚರಿ ಪುಸ್ತಕವದು. ಇದೆ ಅವಳಿಗೆ
ಅದನ್ನು ಓದುವ ಎಲ್ಲ
ಹಕ್ಕು. ಅವಳಿಗೆ ಬೆನ್ನು-
ಮಾಡಿ ಈಗವನು
ಬಟಾಬಯಲು. ಮೆಲ್ಲಗೆ ತನಗೇ
ಕೇಳಿಸಿಕೊಳ್ಳುವಂತೆ
ಹೇಳುತ್ತಾನೆ, ಯಾಕೆ ಬರೆದೆ
ಅಲ್ಲಿ ಅವಳ ಹೆಸರು...?

2



ಮೌನದ ಮುಸುಕಿನಲ್ಲಿ...

ಇರಬೇಕು ಅಂದುಕೊಂಡಿದ್ದೆವು
ಇಬ್ಬರು ಸಹ-
ಯಾತ್ರಿಗಳು ಇದ್ದ ಹಾಗೆ, ಒಂದೇ ರಸ್ತೆಯಲ್ಲಿ
ಜೊತೆಗೆ ನಡೆಯುತ್ತಿದ್ದರೂ
ಕಟ್ಟು ಪಾಡಿಲ್ಲದ,ಬಂಧನ-
ದ ಭೀತಿ
ಇಲ್ಲದ, ಮಾತು ಕೊಡಬೇಕಿಲ್ಲದ, ನಿರೀಕ್ಷೆ-
ಗಳಿಲ್ಲದ ಬದುಕು
ಬಾಳಬೇಕು ಎಂದು-
ಕೊಂಡಿದ್ದೆವು.
ಅಪರಿಚಿತ ರಸ್ತೆ, ರಸ್ತೆಯುದ್ದಕ್ಕೂ ಇದ್ದ
ಹಲವು ಕವಲು
ರಸ್ತೆಗಳು ದಿಕ್ಕು-
ತಪ್ಪಿಸಿದವು...
ಬಾಗಿಲು ತೆರೆದಿಟ್ಟು ಒಳಗೆ ಬಂದಿದ್ದೇನೆ
ಹಠಮಾರಿ ನಾನು,
ಅವಳಿಗೆ ಬೆನ್ನುಹಾಕಿ
ಕುಳಿತು ತಿರುಗಿ-
ಅವಳತ್ತ ನೋಡಿದರೆ ಅವಳು ಕವಿತೆ-
ಬರೆವ ಪುಟ್ಟ ಹಾಳೆಯಂತಿದ್ದಾಳೆ...


3



ಅವಳು

ನಿನ್ನೆ ರಾತ್ರಿ ಬೆನ್ನು-
ತಿರುಗಿಸಿ
ಮಲಗಿದವಳ ತುಟಿಗಳಲ್ಲಿ ಮುಂಜಾನೆ
ಕೆಂಡಸಂಪಿಗೆ ಹೂ-
ಮುಗುಳ್ನಗುತ್ತಿದೆ. ಇರುಳ
ಕನಸು, ಹಗಲಲ್ಲೂ
ಮುಂದುವರಿದಿದೆ, ಚಳಿಯಲ್ಲೂ ಮೈ-
ಕಾಯುತ್ತಿದೆ, ಸಣ್ಣಗೆ-
ಜ್ವರ ಬಂದ ಹಾಗೆ.
ಈ ಹೃದಯ
ಎಲ್ಲಿಗೋ ಹತ್ತಿರವಾಗುತ್ತಿರುವಂತೆ
ಮಿಡಿಯುತ್ತಿದೆ.

ಅಲೆಗಳೂ ಕಡಲೂ
ಒಂದಾಗಿ ಮೊರೆಯುತ್ತಿವೆ...
 





No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...