Thursday, December 04, 2014

‘ಜಾತಿ’ ಕುರಿತ ಅಂಬೇಡ್ಕರರ ಸಮಾಜ ಶಾಸ್ತ್ರೀಯ ವಿವರಣೆ
ರಘೋತ್ತಮ ಹೊ.ಬ.‘ಜಾತಿ’ ಕುರಿತ ಅಂಬೇಡ್ಕರರ ಸಮಾಜ ಶಾಸಿ್ತ್ರೀಯ ವಿವರಣೆ

 

 

‘‘ಮೊಟ್ಟ ಮೊದಲು ಮತ್ತು ಅತಿಮುಖ್ಯವಾಗಿ ಗುರುತಿಸಬೇಕಾದ ಅಂಶವೆಂದರೆ ಹಿಂದೂ ಸಮಾಜ ಎಂಬುದು ಶುದ್ಧ ಕಾಲ್ಪನಿಕ ಎಂಬುದು. ಹಾಗೆಯೇ ‘ಹಿಂದೂ’ಎಂಬ ಆ ನಾಮಾಂಕಿತವೇ ಪರದೇಶದ್ದು. ಮಹಮ್ಮದೀಯರ ಆಕ್ರಮಣಕ್ಕಿಂತಲೂ ಮೊದಲು ಯಾವುದೇ ಸಂಸ್ಕೃತ ಸಾಹಿತ್ಯದಲ್ಲೂ ಕೂಡ ಅದು (ಹಿಂದೂ ಎಂಬ ಪದ) ಕಾಣಿಸುವುದಿಲ್ಲ. ಈ ಕಾರಣಕ್ಕಾಗಿ ಮೂಲವಾಸಿಗಳಿಂದ ತಮ್ಮನ್ನು ತಾವು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಅದನ್ನು ಕೊಟ್ಟವರು ಮಹಮ್ಮದೀಯರು’’.

""They did not feel the necessity of a common name because they had no conception of having constituted a community'' ‘ಹಿಂದೂ’ ಶಬ್ದದ ಉಗಮದ ಕುರಿತಂತೆ ಅಂಬೇಡ್ಕರರು ಹೇಳುವ ವಾಕ್ಯ ಗಳಿವು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ.1, ಪು.50).ಹಾಂ, ಬಾಬಾಸಾಹೇಬ್ ಅಂಬೇಡ್ಕರ್ ಬರೇ ಈ ಒಂದೆರಡು ವಾಕ್ಯ ಅಷ್ಟೆ ಹೇಳಿಲ್ಲ. ಸತ್ಯ ಹೇಳುವುದಾದರೆ ಇಂಚಿಂಚೂ ಹೇಳಿದ್ದಾರೆ. ಆ ಮೂಲಕ ಶೋಷಣೆಗೆ, ಮೇಲುಕೀಳಿಗೆ, ಅಸಮಾನತೆಗೆ ಉತ್ತರ ಹುಡುಕುವ ಯತ್ನ ಅವರು ಮಾಡಿದ್ದಾರೆ. ಅಂದಹಾಗೆ ಯಾಕೆ ಹಿಂದೂಗಳು ತಮಗೆ ತಾವೇ ತಮ್ಮ ಧರ್ಮಕ್ಕೆ ಒಂದು ಹೆಸರು ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. ಅದಕ್ಕೆ ಅಂಬೇಡ್ಕರರು ಅಂದರೆ ‘‘ತಾವು ಒಂದು ಸಮುದಾಯವಾಗಿ ಇದ್ದೇವೆ ಎಂಬ ಪ್ರಜ್ಞೆಯೇ ಅವರಿಗೆ ಇಲ್ಲದ್ದರಿಂದ ಒಂದು ಸಾಮಾನ್ಯ ಹೆಸರನ್ನು ಇಟ್ಟುಕೊಳ್ಳುವ ಅಗತ್ಯದ ಭಾವವೇ ಅವರಿಗೆ (ಹಿಂದೂಗಳಿಗೆ) ಕಂಡುಬರಲಿಲ್ಲ’’. ಮುಂದುವರಿದು ಅವರು “Hindu society as such doesn’t exist. It is a collection of caste (ಹಿಂದೂ ಸಮಾಜ ಎಂಬ ಅಂತಹದ್ದೊಂದು ಇಲ್ಲವೇ ಇಲ್ಲ. ಅದೊಂದು ಜಾತಿಗಳ ಸಂಗ್ರಹ)’’ ಎನ್ನುತ್ತಾರೆ. ಆ ಮೂಲಕ ಇಲ್ಲಿರುವುದು ಸಹಸ್ರಾರು ಜಾತಿಗಳು ಎಂಬ ವಾಸ್ತವವೇ ಹೊರತು ಧರ್ಮ ಎಂಬ ಕಟ್ಟುಕತೆಯಲ್ಲ ಎಂದು ಅಂಬೇಡ್ಕರರು ವಿಶ್ಲೇಷಿಸುತ್ತಾರೆ.“It(caste) is a social system which embodies the arrogance and selfishness of a perverse section of the Hindus who were superior enough in social status to set it in fashion and who had authority to force it on their inferiors” 

ಕಟ್ಟುಕತೆ, ಹೌದು. ಯಾಕೆಂದರೆ ಇತಿಹಾಸದಲ್ಲಿ ಎಲ್ಲ ಧರ್ಮಗಳಿಗೂ ಸ್ಥಾಪಕರಿದ್ದಾರೆ, ಧರ್ಮಗ್ರಂಥಗಳಿವೆ. ಹಿಂದೂ ಧರ್ಮಕ್ಕೆ ಯಾರಿದ್ದಾರೆ? ಅದಕ್ಕೆ ಹೇಳುವುದು ಅಂಬೇಡ್ಕರರು ಇಲ್ಲಿರುವುದು ‘ಜಾತಿಗಳ ಸಂಗ್ರಹ’ ಎಂದು. ಹಾಗೆಯೇ ಈ ‘ಜಾತಿ’ ಎಂಬುದೇನು ಸಾಮಾನ್ಯ ಎಂದುಕೊಳ್ಳಬೇಡಿ! ಅಂಬೇಡ್ಕರರು ಅದಕ್ಕೂ ಕೂಡ ವ್ಯಾಖ್ಯೆ ಹೇಳುತ್ತಾ ಅಂದರೆ ‘‘ಜಾತಿ ಎಂಬುದು ಒಂದು ಸಾಮಾಜಿಕ ಪದ್ಧತಿ. ಅದು ಸ್ವಾರ್ಥ ಮತ್ತು ಅಹಂಭಾವವನ್ನು ಹೊಂದಿರುವ, ತಪ್ಪನ್ನೇ ಸರಿ ಎಂದು ಸಾಧಿಸುವ ಹಿಂದೂಗಳ ಗುಂಪೊಂದನ್ನೊಳಗೊಂಡಿದೆ ಮತ್ತು ಆ ಗುಂಪು ರೀತಿ ನೀತಿಗಳನ್ನು ಸೃಷ್ಟಿಸುವ ಮತ್ತು ಅದನ್ನು ತಮ್ಮ ಕೆಳಗಿನವರ ಮೇಲೆ ಬಲವಂತವಾಗಿ ಹೇರುವಷ್ಟು ಸಾಮಾಜಿಕವಾಗಿ ಔನ್ನತ್ಯವಾಗಿದೆ’’ ಎನ್ನುತ್ತಾರೆ. ಆ ಮೂಲಕ ಜಾತಿ ಕುರಿತ ಶುದ್ಧ ವಾಸ್ತವದ, ಎನ್‌ಸೈಕ್ಲೋಪಿಡಿಯಾದಲ್ಲಿ ದಾಖಲಿಸಬಹುದಾದಂತಹ ಶ್ರೇಷ್ಠ ವ್ಯಾಖ್ಯೆಯನ್ನು ಅಂಬೇಡ್ಕರರು ನೀಡುತ್ತಾರೆ. ಹೌದು, ಜಾತಿ ಕುರಿತ ಅಂಬೇಡ್ಕರರ ಈ ವಾಖ್ಯೆ ಶ್ರೇಷ್ಠ, ಒಂದರ್ಥದಲ್ಲಿ ಅದೇ ಅಂತಿಮ ಮತ್ತು ಶುದ್ಧ ಅಧ್ಯಯನಭರಿತದ್ದು. ಯಾಕೆಂದರೆ ಜಾತಿ, ಅದರ ಸಾಮರ್ಥ್ಯ ಇರುವುದೇ ರೀತಿ ನೀತಿಗಳನ್ನು, ಕಟ್ಟುಪಾಡುಗಳನ್ನು ಸೃಷ್ಟಿಸುವ ಅದರ ಅಜನ್ಮ ಗುಣದಲ್ಲಿ ಮತ್ತು ಅದರ ಪ್ರಮುಖ ಲಕ್ಷಣ ತಪ್ಪನ್ನೇ ಸರಿ ಎಂದು ಸಾಧಿಸುವ ಅದರ ಕುತರ್ಕದ ವರ್ತನೆಯಲ್ಲಿ! (ಯಾವ ಪರಿ ಎಂದರೆ ಈಚೆಗೆ ಬಲಪಂಥೀಯ ಒಂದು ಗುಂಪು ನಮ್ಮ ಕರ್ನಾಟಕದಲ್ಲೇ ‘‘ಜಾತಿ ವಸಾಹತುಶಾಹಿಗಳ ಸೃಷ್ಟಿ, ಹಿಂದೂಗಳದ್ದಲ್ಲ’’ ಎಂದು ಬೂಸಿ ಬಿಟ್ಟಿದೆ! ತನ್ಮೂಲಕ ಅಂಬೇಡ್ಕರ್ ಅಂದು ಹೇಳಿದ ‘ತಪ್ಪನ್ನೇ ಸರಿ ಎಂದು ಸಾಧಿಸುವ ಗುಂಪು ತಾನು’ ಎಂದು ಅದು ತೋರಿಸಿಕೊಟ್ಟಿದೆ.) ಅಂದಹಾಗೆ ಇಂತಹ ಸಾಧಿಸುವ ಗುಣದ ಹಿಂದೆ ಇರುವುದು ಶುದ್ಧ ಸ್ವಾರ್ಥ ಮತ್ತು ತಾನೇ ಮೇಲು ಎಂದು ತೋರಿಸಿಕೊಳ್ಳುವ ಅಹಂ! ಈ ನಿಟ್ಟಿನಲ್ಲಿ ಜಾತಿ ಕುರಿತ ಅಂಬೇಡ್ಕರರ ಈ ವ್ಯಾಖ್ಯೆ ಬರೇ ಯಾವುದೋ ಒಂದು ಜಾತಿಗೆ ಅನ್ವಯಿಸುತ್ತದೆ ಎಂಬಂತಲ್ಲ! 

ಶ್ರೇಣೀಕೃತ 6000ಕ್ಕೂ ಮಿಕ್ಕಿ ಜಾತಿಗಳಿಗೂ ಅದು ಅನ್ವಯಿಸುತ್ತದೆ ಮತ್ತದರ ಗುಣಲಕ್ಷಣ ಎಂತಹದ್ದು ಎಂಬುದನ್ನು ಜಗಜ್ಜಾಹೀರುಗೊಳಿಸುತ್ತದೆ. ಮುಂದುವರಿದು ಅವರು ಹೇಳುತ್ತಾರೆ ‘‘ಪ್ರತಿಯೊಂದೂ ಜಾತಿಗೂ ತನ್ನ ಜಾತಿಯ ಅಸ್ತಿತ್ವದ ಪ್ರಜ್ಞೆ ಇದೆ ಮತ್ತು ಅಂತಹ ಅಸ್ತಿತ್ವ ಉಳಿಸಿಕೊಳ್ಳುವುದೇ ಅದರ ಸರ್ವತ್ರ ಗುರಿ ಆಗಿದೆ. ಹಾಗೆಯೇ ಜಾತಿ ಕಡೇ ಪಕ್ಷ ಒಕ್ಕೂಟ ವ್ಯವಸ್ಥೆಯನ್ನಾದರೂ ಹೊಂದಿಲ್ಲ, ಅಂತೆಯೇ ತಾನು ಇನ್ನೊಂದು ಜಾತಿಗೆ ಅಧೀನತೆಯನ್ನು ಹೊಂದಿದ್ದೇನೆ ಎಂಬ ಭಾವವನ್ನೂ ಕೂಡ ಅದು ಹೊಂದಿಲ್ಲ. ಆದರೆ ಒಂದು ಸಂದರ್ಭ ಹೊರತಾಗಿ, ಅದು ಹಿಂದೂ-ಮುಸ್ಲಿಂ ಜಗಳ ಹೊರತುಪಡಿಸಿ’’! ನಿಜ, ಅಂಬೇಡ್ಕರರು ಹೇಳುವುದನ್ನು ಕೇಳಿ. ಪ್ರತಿಯೊಂದೂ ಜಾತಿಗೂ ಅದು ಮೇಲಿರಲಿ ಕೀಳಿರಲಿ ಯಾವ ಯಾವುದೇ ರೂಪದಲ್ಲಾದರೂ ಸರಿ ಅದಕ್ಕೆ ತನ್ನ ಅಸ್ತಿತ್ವ ಇರಬೇಕು ಎಂಬ ಭಾವ. ಹಾಗೆ ಬೇರೆ ಜಾತಿಗೂ ತನಗೂ ಯಾವುದೇ ರೀತಿಯಲ್ಲೂ ಸಂಬಂಧ, ಅಧೀನತೆ, ಹಂಗು, ಇಂತಹದ್ದು ಇಲ್ಲ ಎಂಬ ಮನಸ್ಥಿತಿ ಮತ್ತು ಈಗಿನ ವಾಸ್ತವವನ್ನೇ ಹೇಳುವುದಾದರೆ ಹಿಂದೂ-ಮುಸ್ಲಿಂ ಗಲಭೆ ಸಂದರ್ಭದಲ್ಲಷ್ಟೆ ಅಂತಹ ಅಧೀನತೆ, ಸಾಮರಸ್ಯದ ‘ಆಕಸ್ಮಿಕ ಸ್ಥಿತಿ’! ಅಂಬೇಡ್ಕರರ ವಿವರಣೆ ಸತ್ಯಕ್ಕೆ ಎಷ್ಟು ಹತ್ತಿರ ಎಂಬುದನ್ನು ಇದು ತಿಳಿಸುತ್ತದೆ. ಯಾಕೆಂದರೆ ಹಿಂದೂ-ಮುಸ್ಲಿಂ ಗಲಭೆಯ ಅಂತಹ ಸಂದರ್ಭ ಹೊರತುಪಡಿಸಿ ಬೇರೆಲ್ಲ ಗಳಿಗೆಯಲ್ಲಿಯೂ ಪ್ರತಿಯೊಂದು ಜಾತಿಯೂ ತನಗೆ ತಾನೇ ಬೇರೆಯಾಗಿರಲು ಇತರೆ ಜಾತಿಗಳಿಗಿಂತ ತಾನು ಭಿನ್ನ ಎಂದು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಈ ನಿಟ್ಟಿನಲ್ಲಿ ‘ಪ್ರತಿಯೊಂದು ಜಾತಿಯೂ ತನ್ನೊಳಗೆ ಮಾತ್ರ ಭೋಜನ ಮಾಡುವುದಷ್ಟೇ ಅಲ್ಲ, ಮದುವೆಯನ್ನೂ ಕೂಡ ತನ್ನೊಳಗಷ್ಟೆ ಮಾಡಿಕೊಳ್ಳುತ್ತದೆ. ಹಾಗೇ ತನ್ನದೇ ಅದಂತಹ ವಿಭಿನ್ನ ಉಡುಗೆ ತೊಡುಗೆಯನ್ನು ಕೂಡ ಅದು ಹೊಂದಿದೆ’’ ಅಂಬೇಡ್ಕರರು ಹೇಳುತ್ತಾ ಹೋಗುತ್ತಾರೆ ಮತ್ತು ಹಾಗೆಯೇ ‘‘ಭಾರತೀಯ ಸ್ತ್ರೀ ಮತ್ತು ಪುರುಷರ ಇಂತಹ ಅಸಂಖ್ಯೆ ಶೈಲಿಯ ಉಡುಗೆಗಳನ್ನು ನೋಡಿ ವಿದೇಶಿ ಪ್ರವಾಸಿಗರು ಚಕಿತಗೊಳ್ಳುವುದಕ್ಕೆ ನಾವು ಇದಕ್ಕಿಂತ(ಜಾತಿ) ಬೇರೆ ಯಾವ ಕಾರಣ ಕೊಡಲು ಸಾಧ್ಯ?’’ ಎಂದೂ ಕೂಡ ಅವರು ಪ್ರಶ್ನಿಸುತ್ತಾರೆ! ಆಶ್ಚರ್ಯಕರವೆಂದರೆ ಪ್ರಸ್ತುತದಲ್ಲಿ ಈಗಲೂ ಕೆಲವು ಸಂಸ್ಕೃತಿ ಹೆಸರಿನ ಚಿಂತಕರು ಭಾರತೀಯ ಸಂಸ್ಕೃತಿಯನ್ನು ‘ವಿವಿಧತೆಯಲ್ಲಿ ಏಕತೆ’ ಎನ್ನುತ್ತಾರೆ. ಅಂದಹಾಗೆ ಅಂತಹ ವಿವಿಧತೆ ಎಂದರೆ ವಿವಿಧ ಜಾತಿಗಳು ಎಂದಲ್ಲವೆ? 

ಈ ನಡುವೆ ಇವುಗಳ ನಡುವೆ ಏಕತೆ? ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಹೇಳುವುದು ಅಕ್ಷರಶಃ ಸತ್ಯ. ದುರಂತವೆಂದರೆ ಕೆಲವರು ಈಗಲೂ ಅಲ್ಲಲ್ಲಿ ‘ಹಿಂದೂ’ ಎನ್ನುತ್ತಾರೆ ಅಥವಾ ‘ಹಿಂದೂ, ನಾವೆಲ್ಲಾ ಒಂದು’ ಎನ್ನುತ್ತಾರೆ ಮತ್ತು ಇದನ್ನು ನಾವು ಒಂದು ‘ಆದರ್ಶ’ ಎನ್ನಬಹುದು! ಆಶ್ಚರ್ಯಕರವೆಂದರೆ ಅಂಬೇಡ್ಕರ್ ಇಂತಹ ‘ಆದರ್ಶ’ಕ್ಕೂ ಪ್ರತಿಕ್ರಿಯಿಸುತ್ತಾ ‘‘ನಿಜ ಹೇಳಬೇಕೆಂದರೆ ಆದರ್ಶ ಹಿಂದೂವೊಬ್ಬ ಹೇಗಿರುತ್ತಾನೆಂದರೆ, ಇಲಿಯೊಂದು ಬೇರೆಯವರ ಜೊತೆ ಯಾವುದೇ ರೀತಿಯ ಸಂಪರ್ಕವನ್ನು ನಿರಾಕರಿಸುತ್ತಾ ತನ್ನ ಬಿಲದಲ್ಲಿ ತಾನಷ್ಟೆ ಬದುಕುವಂತೆ’’! ಖಂಡಿತ, ಅಂಬೇಡ್ಕರರ ಈ ಮಾತಿಗೆ ವಿವರಣೆ ಬೇಡ. ಮುಂದುವರಿದು ಅವರು ಹಿಂದೂಗಳಲ್ಲಿ ಒಂದರ ಕೊರತೆಯನ್ನು ಪ್ರಮುಖವಾಗಿ ಗುರುತಿಸುತ್ತಾರೆ. ಅದೆಂರೆ lack of consciousness of kind (ಕರುಣೆಯ ಪ್ರಜ್ಞೆಯ ಕೊರತೆ) ಮತ್ತು ಅದಕ್ಕೆ ಅವರು ‘‘ಕರುಣೆಯ ಪ್ರಜ್ಞೆ ಇರುವ ಒಬ್ಬ ಹಿಂದುವೂ ಕೂಡ ಇಲ್ಲ’’ ಎನ್ನುತ್ತಾ ‘‘ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪ್ರಜ್ಞೆ ಎಂದರೆ ಅದು ತನ್ನ ಜಾತಿಯ ಪ್ರಜ್ಞೆ. ಮತ್ತು ಇಂತಹ (ಜಾತಿಯ ಪ್ರಜ್ಞೆಯ) ಕಾರಣದಿಂದಾಗಿಯೇ, ಹಿಂದೂಗಳನ್ನು ಅವರು ಒಂದು ಸಮಾಜ ಅಥವಾ ರಾಷ್ಟ್ರವಾಗಿ ರೂಪುಗೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ’’ ಎನ್ನುತ್ತಾರೆ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ.1, ಪು.50). ಹೀಗಿದ್ದರೂ ಕೆಲವರು ಹಿಂದೂಗಳು ನಾವೆಲ್ಲ ಪರಸ್ಪರ ಹತ್ತಿರದಲ್ಲಿದ್ದೇವೆ, ಒಂದು ಸಮಾಜವಾಗಿದ್ದೇವೆ ಎಂದು ಹೇಳುವುದನ್ನು ಪ್ರಶ್ನಿಸುವ ಅಂಬೇಡ್ಕರರು ‘‘ಹತ್ತಿರದಲ್ಲಿ ವಾಸ ಇದ್ದಾಕ್ಷಣ ಮನುಷ್ಯರು ಒಂದು ಸಮಾಜವಾಗುವುದಿಲ್ಲ. 

ಹಾಗೆಯೇ ಮೈಲುಗಟ್ಟಲೆ ದೂರ ವಾಸ ಇದ್ದಾನೆ ಎಂಬ ಕಾರಣಕ್ಕೂ ಕೂಡ ವ್ಯಕ್ತಿಯೊಬ್ಬ ಅಂತಹ ಸಮಾಜದಿಂದ ಬೇರಾಗಲು ಸಾಧ್ಯವಿಲ್ಲ’’ ಎನ್ನುತ್ತಾ ‘‘ಆಚರಣೆಗಳು ಮತ್ತು ಸಂಪ್ರದಾ ಯಗಳು, ಹಾಗೆಯೇ ನಂಬಿಕೆಗಳು ಮತ್ತು ಆಲೋಚ ನೆಗಳು ಒಂದೇ ಆಗಿವೆ ಎಂಬ ಮಾತ್ರಕ್ಕೆ ಅಂತಹ ಮನುಷ್ಯರ ಗುಂಪು ಸಮಾಜವಾಗುವುದಿಲ್ಲ. ಇಟ್ಟಿಗೆಯನ್ನು ವರ್ಗಾಯಿಸುವ ಹಾಗೆ ಅವು (ಸಂಪ್ರದಾಯಗಳು) ಒಬ್ಬರಿಂದ ಇನ್ನೊಬ್ಬರಿಗೆ ಬರಬಹುದು. ಈ ನಿಟ್ಟಿನಲ್ಲಿ ಮನುಷ್ಯರು ಒಂದು ಸಮಾಜವಾಗುತ್ತಾರೆ ಯಾವಾಗ ಎಂದರೆ, ಎಲ್ಲರಲ್ಲೂ ಇರಬಹುದಾದ ಕೆಲವು ಸಾಮಾನ್ಯ ಅಂಶಗಳನ್ನು ಅವರೆಲ್ಲ ತಮ್ಮದಾಗಿಸಿಕೊಂಡಾಗ’’ ಎಂದು ಸಮಾಜ ಏನು ಎನ್ನುವುದರ ನೈಜ ವ್ಯಾಖ್ಯೆಯನ್ನು ನೀಡುತ್ತಾರೆ. ಅಂತೆಯೇ ಅಂಬೇಡ್ಕರರು ‘ತಮ್ಮದಾಗಿಸಿಕೊಳ್ಳುವುದು’ ಮತ್ತು ‘ಆಚರಿಸುವುದು’ ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ಬಿಡಿಸಿ ಹೇಳುತ್ತಾ, ‘‘ಮನುಷ್ಯರು ತಮ್ಮ ತಮ್ಮ ನಡುವೆ ಪರಸ್ಪರ ಸಂಪರ್ಕ ಸಾಧಿಸಿದಾಗಲಷ್ಟೆ ಅಂತಹ ಸಾಮಾನ್ಯ ಅಂಶಗಳನ್ನು ಅವರು ತಮ್ಮದಾಗಿ ಸಿಕೊಳ್ಳುವುದು ಸಾಧ್ಯ. ಸಂಪರ್ಕ ಮತ್ತು ಅಂತಹ ನಿರಂತರ ಸಂಪರ್ಕವಷ್ಟೇ ಒಂದು ಸಮಾಜ ನಿರ್ಮಿಸು ತ್ತದೆ’’ ಎಂದು ಸಮಾಜ ಎನ್ನುವುದಕ್ಕೆ ಅಂಬೇಡ್ಕರರು ತಮ್ಮ ಅರ್ಥಪೂರ್ಣ ಅರ್ಥ ವಿವರಣೆ ನೀಡುತ್ತಾರೆ. ಹಾಗೆಯೇ ಪರಸ್ಪರ ತಮ್ಮ ನಡುವೆ ಸಂಪರ್ಕವಿಲ್ಲದ ಹಿಂದೂಗಳು ಹೇಗೆ ಒಂದು ಸಮಾಜ ಅಲ್ಲ ಎಂಬು ದನ್ನು ಕೂಡ ಅವರು ಪ್ರಸ್ತುತಪಡಿಸುತ್ತಾರೆ.

mythಆಶ್ಚರ್ಯವೆಂದರೆ, ಅಂಬೇಡ್ಕರರ ಅಂತಹ ‘ಸಮಾಜ ಅರ್ಥ ಪ್ರಸ್ತುತಿಯನ್ನು’ ಪ್ರಸ್ತುತದ ಸಂದರ್ಭ ದಲ್ಲಿ ವಿವರಿಸಲು ತೀರಾ ಹೆಣಗಬೇಕಿಲ್ಲ! ಯಾಕೆಂದರೆ ನಗರ ಪ್ರದೇಶಗಳಲ್ಲಿ ಒಂದೇ ಬಡಾವಣೆಯಲ್ಲಿ ಬರೇ ‘ಹಿಂದೂಗಳೇ’ ಇದ್ದರೂ ಅವರು ಪರಸ್ಪರ ಸಂಪರ್ಕ ಸಾಧಿಸುವುದೇ ಇಲ್ಲ. ಬದಲಿಗೆ ಆ ಬಡಾ ವಣೆಯಲ್ಲಿ ತಮ್ಮ ಜಾತಿಯವರು ಯಾರಿದ್ದಾರೆ ಎಂದು ಹುಡುಕುತ್ತಾರೆ ಮತ್ತು ಸಹಜವಾಗಿ ಅವರ ಜೊತೆಯಲ್ಲಷ್ಟೇ ಅವರು ಸಂಪರ್ಕ ಸಾಧಿಸುತ್ತಾರೆ! ಹೀಗಿರುವಾಗ ‘ಹಿಂದೂ ಸಮಾಜ’ ಎನ್ನುವುದು? ಅಂಬೇಡ್ಕರರು ಹೇಳುವ ಹಾಗೆ ಅದೊಂದು . ಕನ್ನಡದಲ್ಲಿ ಹೇಳುವುದಾದರೆ ಕಲ್ಪನೆ ಅಥವಾ ಕಟ್ಟುಕತೆ!
""The Caste System prevents common activity and by preventing common activity it has prevented the Hindus from becoming a society with a unified life and a consciousness of its own being' ಅಂದಹಾಗೆ ಯಾಕೆ ಈ ದೇಶದ ಸಹಸ್ರಾರು ಜಾತಿಗಳ ನಡುವೆ ಇಂತಹ ಸಹಜ ಸಂಪರ್ಕ ಸಾಧ್ಯವಾಗಿಲ್ಲ? ಅಂಬೇಡ್ಕರರ ಪ್ರಕಾರ ’ ಅನುವಾದಿಸುವುದಾದರೆ ‘‘ಜಾತಿಪದ್ಧತಿ ಸಮುದಾಯಗಳ ನಡುವೆ ಸಾಮಾನ್ಯ ಚಟುವಟಿಕೆಗಳನ್ನು ನಿಷೇಧಿಸುತ್ತದೆ ಮತ್ತು ಹಾಗೆ ಸಾಮಾನ್ಯ ಚಟುವಟಿಕೆಗಳನ್ನು ನಿಷೇಧಿಸುವ ಮೂಲಕ ಅದು ಹಿಂದೂಗಳನ್ನು ತಾನು ತನ್ನವರೆಂಬ ಪ್ರಜ್ಞೆಯುಕ್ತ ಮತ್ತು ಐಕ್ಯಮತ್ಯದ ಜೀವನಯುಕ್ತ ಒಂದು ಸಮಾಜವಾಗುವ ನಿಟ್ಟಿನಲ್ಲಿ ತಡೆದಿದೆ’’. ಈ ದಿಸೆಯಲ್ಲಿ ಅಂಬೇಡ್ಕರರು ವಿವರಣೆಯಂತೆ ಮತ್ತು ಸದ್ಯದ ವಾಸ್ತವದಂತೆ ಜಾತಿಗಳ ನಡುವೆ ಸಾಮಾನ್ಯ ಚಟುವಟಿಕೆಗಳಿಲ್ಲ. ಅದು ಆರ್ಥಿಕ ಇರಬಹುದು, ಸಾಮಾಜಿಕ ಇರಬಹುದು ಅಥವಾ ಮತ್ತಾವುದೇ ಇರಬಹುದು ಒಟ್ಟಾರೆ ಸಾಮಾನ್ಯ ಚಟುವಟಿಕೆಗಳಂತೂ ವಿವಿಧ ಜಾತಿಗಳ ನಡುವೆ ಖಂಡಿತ ಇಲ್ಲ. ಯಾಕೆಂದರೆ ಆರ್ಥಿಕ ಎಂದರೆ ಒಂದು ಜಾತಿ ವ್ಯಾಪಾರ ಮಾಡಿದರೆ ಮತ್ತೊಂದು ಜಾತಿ ವ್ಯವಸಾಯ ಮಾಡುತ್ತದೆ. ಮಗದೊಂದು ಜಾತಿ ಸಮಾಜದ ಗಲೀಜು ಕೆಲಸಗಳನ್ನು ನಿರ್ವಹಿಸಿದರೆ ಮತ್ತೂ ಮಗದೊಂದು ಜಾತಿ ದೇವರ ಪೂಜೆಯಲ್ಲಿ ಏಕಾಧಿಪತ್ಯ ಸಾಧಿಸಿದೆ! ಒಟ್ಟಾರೆ ಆರ್ಥಿಕ ಚಟುವಟಿಕೆ ಈಗಲೂ ಜಾತಿಗೊಂಥರ! ಇನ್ನು ಸಾಮಾಜಿಕ? ಹೇಳುವುದೇ ಬೇಡ! ಒಂದೇ ಊರಿನಲ್ಲಿದ್ದರೂ ಒಂದು ಜಾತಿಯವರು ಒಂದು ರೀತಿಯ ಹಬ್ಬವನ್ನು ಯಾವುದೋ ಒಂದು ದಿನ ಮಾಡಿದರೆ ಮತ್ತೊಂದು ಜಾತಿಯವರು ಮಗದೊಂದು ಹಬ್ಬವನ್ನು ಇನ್ನಾವುದೋ ಬೇರೊಂದು ದಿನ ಮಾಡುತ್ತಾರೆ! ಅಕಸ್ಮಾತ್ ಒಂದೇ ಹಬ್ಬವನ್ನು ಎಲ್ಲ ಜಾತಿಯವರು ಸೇರಿ ಮಾಡಿದರೆ ಅಲ್ಲಿ ಜಗಳ, ನಾನಾ ಕಾರಣಕ್ಕೆ!! ಮತ್ತು ಇಂತಹ ಜಗಳದ ಕಾರಣಕ್ಕೆ ಎಷ್ಟೋ ಊರುಗಳಲ್ಲಿ ಹಬ್ಬಗಳೇ ನಿಂತುಹೋಗಿರುವ ಉದಾ ಹರಣೆಗಳೂ ಉಂಟು!

  ಈಗೀಗ ಇಲ್ಲದ ಸಾಮಾನ್ಯ ಚಟುವಟಿಕೆಗಳನ್ನು ಒತ್ತಾಯಪೂರ್ವಕವಾಗಿ ಹೇರುವ ‘ನಾವೆಲ್ಲ ಒಂದು’ ಎನ್ನುವ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಿವೆ ‘ಸವಾಜೋತ್ಸವ’ದ ಹೆಸರಲ್ಲಿ! ಆದರೆ ಅಂಬೇಡ್ಕರರ ‘ಸಮಾಜ’ದ ವಿವರಣೆ ಮುಂದೆ ಅವೆಲ್ಲ ಸಪ್ಪೆಎನಿಸುತ್ತವೆ, ಕೃತಕ ಎನಿಸುತ್ತವೆ. ಈ ದಿಸೆಯಲ್ಲಿ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶದ ವಾಸ್ತವದ ಸಮಾಜಶಾಸ್ತ್ರಜ್ಞರಾಗುತ್ತಾರೆ, ಸತ್ಯ ಬರೆದಿಟ್ಟು ಹೋದ ದಿಟ್ಟ ಇತಿಹಾಸಜ್ಞರಾಗುತ್ತಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...