Friday, December 19, 2014

ಕನ್ನಡ ಮಾಧ್ಯಮ ಕಡ್ಡಾಯ: ಹೋರಾಟವೊಂದೇ ದಾರಿವಾರ್ತಾಭಾರತಿ ಸಂಪಾದಕೀಯ

81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ಕಾರಣಗಳಿಂದ ಸುದ್ದಿ ಮಾಡುತ್ತಿದೆ. ಒಂದು ಕಾರಣ, ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ದೇವನೂರ ಮಹಾದೇವ ನಿರಾಕರಿಸಿರುವುದು. ಎರಡನೆಯದು, ಈ ಬಾರಿ ಸಮ್ಮೇಳನಾಧ್ಯಕ್ಷರಾಗಿ ಇನ್ನೊಬ್ಬ ದಲಿತ ಕವಿ ಸಿದ್ದಲಿಂಗಯ್ಯ ಆಯ್ಕೆಯಾಗಿರುವುದು. ಇಬ್ಬರೂ ತಳ ಸ್ತರದಿಂದ ಬಂದವರು. ಕನ್ನಡದ ಪದಗಳಿಗೆ ತಮ್ಮದೇ ಆದ ಸೃಜನಶೀಲ ಮಾರ್ಗಗಳಲ್ಲಿ ಶಕ್ತಿಯನ್ನು ತುಂಬಿದವರು. ವಿಶೇಷವೆಂದರೆ ದೇವನೂರರ ನಿರಾಕರಣೆಯೂ, ಸಿದ್ದಲಿಂಗಯ್ಯನವರ ಅನುಮೋದನೆಯೂ ಏಕ ಕಾಲಕ್ಕೆ ಕನ್ನಡ ಸಂವೇದನೆಗಳಿಗೆ ಜೀವ ಕೊಟ್ಟಿದೆ. ಅತ್ಯಂತ ಶೋಷಿತ ಸಮುದಾಯದಿಂದ ಬಂದ ಸಿದ್ದಲಿಂಗಯ್ಯ ಇಂದು ಕನ್ನಡದ ಅತ್ಯಂತ ಪ್ರತಿಷ್ಠೆಯ ಸಮ್ಮೇಳನವೊಂದಕ್ಕೆ ಅಧ್ಯಕ್ಷ ರಾಗುವುದು ಆಶಾದಾಯಕವಾದ ವಿಷಯ. ಇದೇ ಸಂದರ್ಭದಲ್ಲಿ ಕನ್ನಡದ ಕಾರಣ ಗಳಿಗಾಗಿಯೇ ದೇವನೂರರ ಪ್ರತಿಭಟನೆಯೂ ಮಹತ್ವದ್ದೆನಿಸಿಕೊಂಡಿದೆ. 

ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗದೆ ತಾನು ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಲು ಸಿದ್ಧನಿಲ್ಲ ಎಂದು ದೇವನೂರು ಮಹಾದೇವ ಹೇಳಿದಾಗ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಇದೊಂದು ರೀತಿಯಲ್ಲಿ ದೇಶದ ಎಲ್ಲರೂ ಹೊಟ್ಟೆ ತುಂಬ ಊಟ ಮಾಡುವವರೆಗೆ ನಾನು ಉಣ್ಣುವುದಿಲ್ಲ’ ಎಂದು ಹಟ ಹಿಡಿದಂತೆ ಎಂದೂ ಕೆಲವರು ಟೀಕಿಸಿದ್ದರು. ಸದ್ಯದ ಸಂದರ್ಭದಲ್ಲಿ ಇಂಗ್ಲಿಷ್ ಪ್ರವಾಹ ಎಷ್ಟು ತೀವ್ರವಾಗಿದೆಯೆಂದರೆ, ಕನ್ನಡ ಮಾಧ್ಯಮ ಕಡ್ಡಾಯ ಒಂದು ಹಗಲು ಗನಸು ಎಂಬಂತಾಗಿದೆ. ಎಲ್ಲರೂ ಆ ಪ್ರವಾಹದಲ್ಲಿ ಬೇಕೋ, ಬೇಡವೋ ಕೊಚ್ಚಿಕೊಂಡು ಹೋಗುತ್ತಿದ್ದಾರೆ. ಇಡೀ ದೇಶಕ್ಕೆ ಸಂಬಂಧಪಟ್ಟ ಈ ವಿಷಯವನ್ನು ಮುಂದಿಟ್ಟುಕೊಂಡು ದೇವನೂರು ಸಾಹಿತ್ಯಸಮ್ಮೇಳನಾಧ್ಯಕ್ಷತೆಯನ್ನು ನಿರಾಕರಿಸುವುದು ಎಷ್ಟು ಸರಿ? ಎಂಬ ಚರ್ಚೆಯೊಂದು ಹುಟ್ಟಿಕೊಂಡಿತ್ತು. ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೇ ಈ ಒತ್ತಡವನ್ನು ಸರಕಾರದ ಮುಂದಿಡಬಹುದಿತ್ತಲ್ಲ ಎಂದೂ ಕೆಲವರು ಕೇಳಿದ್ದರು. ನಿಜ. ಸದ್ಯದ ಸ್ಥಿತಿಯಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೆನ್ನುವುದು ಕನಸೇ ಸರಿ. ಆದರೆ, ಆ ಕಾರಣಕ್ಕಾಗಿ ಎಲ್ಲರೂ ಅದನ್ನು ವೌನವಾಗಿ ಒಪ್ಪಿಕೊಂಡು ಬಿಟ್ಟರೆ ಅಥವಾ ಸರಕಾರದ ಮೇಲೆ ಯಾವುದೇ ಒಂದು ರಾಜಕೀಯ ಒತ್ತಡಗಳನ್ನು ಹಾಕದೆ ಬರಿ ಬಾಯಿ ಮಾತಿನಲ್ಲಿ ಕನ್ನಡ ಮಾಧ್ಯಮ ಎಂದು ಅಲವತ್ತುಕೊಂಡರೆ ಇಡೀ ಕರ್ನಾಟಕವನ್ನೇ ಇಂಗ್ಲಿಷ್‌ಗೆ ಧಾರೆಯೆರೆದು ಕೊಟ್ಟಂತಾಗುತ್ತದೆ. ಸರಕಾರ ತಮ್ಮೆಡೆಗೆ ನೋಡುವಂತೆ ಮಾಡುವ ಯಾವುದಾದರೂ ಒಂದು ಘಟನೆ, ವ್ಯತಿರಿಕ್ತವಾದ ಒತ್ತಡ ಕನ್ನಡ ಪರ ಹೋರಾಟಗಾರರಿಂದ ನಡೆಯಲೇಬೇಕು. ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ಒಪ್ಪುವುದಕ್ಕಿಂತ ನಿರಾಕರಿಸುವ ಮೂಲಕ ದೇವನೂರು ಸರಕಾರದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾರೆ. 

ಈ ನಿಟ್ಟಿನಲ್ಲಿ ಅವರು ಕಸಾಪ ಅಧ್ಯಕ್ಷರಿಗೆ ಬರೆದಿರುವ ಪತ್ರ, ಯಾವುದೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಕ್ಕಿಂತ ಕಡಿಮೆಯೇನೂ ಇಲ್ಲ. ದೇವನೂರರ ಶಬ್ದ ಸ್ಫೋಟದಿಂದ ಈ ಬಾರಿಯ ಸಾಹಿತ್ಯ ಸಮ್ಮೇಳನ ತನ್ನ ಎಂದಿನ ಜಾಡ್ಯವನ್ನು ಕಳೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇವನೂರರ ಮನವಿಗೆ ಕಸಾಪ ಅಧ್ಯಕ್ಷರು ಓಗೊಟ್ಟಿದ್ದು ‘ಕನ್ನಡ ಮಾಧ್ಯಮ ಕಡ್ಡಾಯವಾಗುವವರೆಗೆ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲ’ ಎಂದು ಸರಕಾರಕ್ಕೆ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಖಂಡಿತವಾಗಿಯೂ ಇದು ಸರಕಾರದ ಮೇಲೆ, ರಾಜಕಾರಣಿಗಳ ಮೇಲೆ ಸಣ್ಣದೊಂದು ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಇಷ್ಟಕ್ಕೂ ದೇವನೂರು ಮಹಾದೇವ ಕನ್ನಡದ ಪರವಾಗಿ ಮಾತನಾಡಿರುವುದು ಒಬ್ಬ ಭಾಷಾಂಧರಾಗಿ ಅಲ್ಲ. ಇಲ್ಲಿ ಭಾಷೆ ಮತ್ತು ಬದುಕಿನ ಮಧ್ಯೆ ನೇರ ಸಂಬಂಧವಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಕನ್ನಡ-ಇಂಗ್ಲಿಷ್ ನಡುವಿನ ಅಂತರ ಇಲ್ಲದವರು-ಉಳ್ಳವರ ನಡುವಿನ ಅಂತರವಾಗಿ ಬೆಳೆಯುತ್ತಿದೆ. ಮತ್ತೆ ಅದು ಶಿಕ್ಷಣದ ಹಕ್ಕನ್ನು ಉಳ್ಳವರ ಕೈಗೆ ಒಪ್ಪಿಸುತ್ತಿದೆ. ಹಿಂದೆ ಉನ್ನತ ಜಾತಿಗಳಿಗೆ ಮಾತ್ರ ಶಿಕ್ಷಣ ಎಂದಿತ್ತು. ಸ್ವತಂತ್ರ ಭಾರತದಲ್ಲಿ ಅದು ಎಲ್ಲರ ಕೈಗೆ ಎಟಕುತ್ತದೆ ಎನ್ನುವಷ್ಟರಲ್ಲಿ ಅದು ಖಾಸಗಿಕರಣಗೊಂಡು ಬಡವರಿಗೆ ಎಟುಕದ ವಸ್ತುವಾಗಿ ಪರಿಣಮಿಸುತ್ತಿದೆ. 

ಬಡವರಲ್ಲಿ ಮತ್ತೆ ಕೆಳ ಜಾತಿ, ದುರ್ಬಲ ಸಮುದಾಯಗಳೇ ಹೆಚ್ಚಾಗಿ ಇರುವುದರಿಂದ ಇತಿಹಾಸ ಪುನರಾವರ್ತನೆಗೊಳ್ಳುತ್ತಿದೆ. ಸಂಸ್ಕೃತದ ಸ್ಥಾನದಲ್ಲಿ ಇಂಗ್ಲಿಷ್ ಬಂದು ಕೂತಿದೆ. ಶಾಲೆಗಳ ಮೂಲಕವೇ ಬಡವರ ಮತ್ತು ಉಳ್ಳವರ ನಡುವೆ ಬಹು ದೊಡ್ಡ ಅಂತರವೊಂದನ್ನು ಸೃಷ್ಟಿಸಲಾಗುತ್ತಿದೆ. ಇಂಗ್ಲಿಷ್ ಮನಸ್ಥಿತಿ ಸ್ಥಳೀಯತೆಗೆ ವಿರುದ್ಧವಾಗಿರುವುದರಿಂದ, ಹಳ್ಳಿ, ಗ್ರಾಮಗಳ ಜನರು ಈ ಶಿಕ್ಷಣ ವ್ಯವಸ್ಥೆಯ ಒಳಗೊಳ್ಳುವಿಕೆಯಿಂದ ದೂರ ತಳ್ಳಲ್ಪಡುತ್ತಿದ್ದಾರೆ. ಸರಕಾರಿಗಳು ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವವರು ಕೇವಲ ಬಡವರು. ದುರ್ಬಲ ವರ್ಗದ ಜನರು. ಈ ಮಕ್ಕಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಮುಂದೆ ಕೀಳರಿಮೆಯಿಂದ ನರಳುತ್ತಾ ಬೆಳೆಯಬೇಕು. ಬದುಕಬೇಕು. ಶಿಕ್ಷಣದಲ್ಲಿ ಸಮಾನತೆ ಬಾರದೆ, ಸಮಾಜದಲ್ಲಿ ಸಮಾನತೆ ರೂಪುಗೊಳ್ಳಲು ಸಾಧ್ಯವಿಲ್ಲ. ಇಂಗ್ಲಿಷ್‌ನ ತಳಹದಿಯಲ್ಲಿ ಕರ್ನಾಟಕವನ್ನು ಕಟ್ಟಲು ಸಾಧ್ಯವಿಲ್ಲ. ಆದುದರಿಂದ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಿ, ಸರಕಾರಿ ಶಾಲೆಗಳನ್ನು ಮೇಲೆತ್ತದೆ ಇದ್ದರೆ, ಈ ನಾಡಿನ ವೈವಿಧ್ಯ ಸಂಪೂರ್ಣ ಅಳಿದು ಹೋಗುತ್ತದೆ. 

ಎಲ್ಲ ಜಾತಿ, ಧರ್ಮ, ವರ್ಗಗಳ ಜನರು ಒಂದೇ ಶಾಲೆಯಲ್ಲಿ ಒಟ್ಟಾಗಿ ಕಲಿಯುತ್ತಾ ಬೆಳೆಯಬೇಕು.ಎಲ್ಲರೂ ಛಿದ್ರ ಛಿದ್ರವಾಗಿ ತಮ್ಮ ತಮ್ಮ ಪ್ರತ್ಯೇಕ ಶಾಲೆಗಳಲ್ಲಿ ಕಲಿಯುತ್ತಾ ಬೆಳೆದರೆ ಸಮಾಜವೂ ಛಿದ್ರವಾಗುತ್ತಾ ಹೋಗುತ್ತದೆ. ಇದಕ್ಕೆಲ್ಲ ಒಂದೇ ಪರಿಹಾರ, ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಬೇಕು. ಇಂಗ್ಲಿಷ್ ಮಾಧ್ಯಮ ಅಳಿಯಬೇಕು. ಹಾಗೆಂದು ಇಂಗ್ಲಿಷ್ ಅಳಿಯಬೇಕಾಗಿಲ್ಲ. ಇಂಗ್ಲಿಷನ್ನು ಒಂದನೆ ತರಗತಿಯಿಂದಲೇ ಪಠ್ಯವಾಗಿ ಬೋಧಿಸಿ, ಆ ಭಾಷೆಯನ್ನೂ ಕಲಿಯುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಸಮ್ಮೇಳನ ಸರಕಾರದ ಮೇಲೆ ಬಲವಾದ ಒತ್ತಡವೊಂದನ್ನು ಹೇರುವುದಕ್ಕೆ ಒಂದು ದಾರಿಯಾಗಬೇಕು. ದೇವನೂರರು ಪ್ರತಿಪಾದಿಸಿದ ಅಂಶವನ್ನು ಶೋಷಿತ ಸಮುದಾಯದಿಂದ ಬಂದ ಸಿದ್ದಲಿಂಗಯ್ಯ ಅವರು ತನ್ನ ಅಧ್ಯಕ್ಷ ಸ್ಥಾನದಿಂದ ಬಲವಾಗಿ ಪ್ರತಿಪಾದಿಸಬೇಕು. ಇಡೀ ಸಾಹಿತ್ಯ ಸಮ್ಮೇಳನ ಕನ್ನಡದ ಇಚ್ಛಾಶಕ್ತಿಯಾಗಿ ಹೊರ ಹೊಮ್ಮಬೇಕು. ರಾಜಕೀಯ ನಾಯಕರೆಲ್ಲರೂ ಕನ್ನಡದ ಈ ಒಕ್ಕೊರಲ ಧ್ವನಿಗೆ ಅಂಜುವಂತಾಗಬೇಕು. ಈ ಧ್ವನಿ ದಿಲ್ಲಿಯನ್ನು ತಲುಪಿ, ಅಂಬಾನಿಯ ಸೆರಗು ಹಿಡಿದು ಓಡಾಡುವ ನರೇಂದ್ರ ಮೋದಿಯವರನ್ನು ಒಂದು ಕ್ಷಣ ಅಲುಗಾಡಿಸಬೇಕು. ಆಯಾ ರಾಜ್ಯ ಭಾಷೆಗಳು ಶಿಕ್ಷಣದಲ್ಲಿ ಕಡ್ಡಾಯ ಮಾಧ್ಯಮವಾಗುವಂತೆ ಕಾನೂನನ್ನು ತಿದ್ದುಪಡಿಗೊಳಿಸಲು ಈ ಬಾರಿಯ ಸಾಹಿತ್ಯ ಸಮ್ಮೇಳನ ಒಂದು ನೆಪವಾಗಲಿ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...