Wednesday, December 17, 2014

ಮೌಢ್ಯದ ವಿರುದ್ಧ ಕಿಕ್ ಔಟ್ ಸಮರಡಾ. ಅಶೋಕ್ ಕೆ. ಆರ್


ಮೌಢ್ಯದ ವಿರುದ್ಧ ಕಿಕ್ ಔಟ್ ಸಮರ


ಭಾಗ-1

ನಂಬಿಕೆಗೂ, ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಢ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಢ್ಯತೆ ಎಂದು ತಿಳಿ ಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್‌ಐಆರ್, ಪ್ರತಿ - ಎಫ್‌ಐಆರ್‌ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

‘ಆಧುನೀಕರಣ’, ‘ಸಾಕ್ಷರತೆ’ಯ ಹೆಚ್ಚಳ, ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು, ವಿಜ್ಞಾನದ ನವೀನ ಹೊಳಹುಗಳೆಲ್ಲವೂ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಹೆಚ್ಚೆಚ್ಚು ಜಾಗೃತಗೊಳಿಸಬೇಕಿತ್ತು. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಹೊಂದುವ ಜೊತೆಯಲ್ಲೇ ಆಧುನೀಕರಣದ ಜಗತ್ತು ಮೌಢ್ಯವೆಂದೇ ಕರೆಯಬಹುದಾದ ನಂಬಿಕೆಗಳತ್ತ ವಾಲುತ್ತಿರುವುದು ದುರದೃಷ್ಟಕರ. ಆಧುನಿಕ ಜಗತ್ತಿನ ತಂತ್ರಜ್ಞಾನವೇ ಮೌಢ್ಯವನ್ನು ವೇಗವಾಗಿ ಪಸರಿಸಲು ನೆರವಾಗುತ್ತ ವಿಜ್ಞಾನವನ್ನು ಅಣಕಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳಾಡಿ (ಉರುಳಾಡುವವರಲ್ಲಿ ಬ್ರಾಹ್ಮಣ - ಅಬ್ರಾಹ್ಮಣರೀರ್ವರೂ ಇರುತ್ತಾರೆ) ತಮಗಿರುವ ಚರ್ಮ ಖಾಯಿಲೆಯನ್ನು ವಾಸಿ ಮಾಡಿಕೊಂಡು ಉತ್ತಮರಾಗಲು ನೆರವಾಗುತ್ತದೆಂಬ ನಂಬಿಕೆ ಸ್ಥಳೀಯರು ಹೇಳುವಂತೆ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಬ್ರಾಹ್ಮಣರು, ವೇದ ತಿಳಿದವರು ಶ್ರೇಷ್ಠರೆಂಬ ವರ್ಣಾಶ್ರಮ ನೀತಿಯಿಂದ ಪ್ರೇರಿತವಾದ ಆಚರಣೆಯಿದು. ಎಂಜಲೆಲೆ ಬಿಟ್ಟು ಮೇಲೇಳುವವರಿಗೂ, ಎಲೆಯ ಮೇಲೆ ಉರುಳಾಡುವವರಿಗೂ ಈ ಆಚರಣೆ ನಂಬಿಕೆಯಾಗಿ ಸತ್ಯವಾಗಿ ಕಾಣಿಸುತ್ತದೆಯೇ ಹೊರತು ಮೌಢ್ಯತೆಯಾಗಲ್ಲ. ಬಹಳಷ್ಟು ವಿರೋಧದ ನಂತರ ತಾತ್ಕಾಲಿಕವಾಗಿ ಮಡೆ ಸ್ನಾನಕ್ಕೆ ನಿಷೇಧವೇರ್ಪಟ್ಟು ಅದರ ಜಾಗದಲ್ಲಿ ಪ್ರಸಾದದ ಮೇಲೆ ಉರುಳಾಡುವ ಎಡೆ ಸ್ನಾನ ಕಳೆದ ಬಾರಿ ಕೋರ್ಟಿನ ಆದೇಶದಂತೆ ನಡೆದಿತ್ತು. ಈ ಬಾರಿ ನ್ಯಾಯಾಲಯ ಮತ್ತೆ ಮಡೆ ಮಡೆ ಸ್ನಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಒಂದೆಜ್ಜೆ ಮುಂದಿಟ್ಟು ಎರಡೆಜ್ಜೆ ಹಿಂದೆ ಇಟ್ಟಿದೆ. ಉರುಳಾಡುವವರು, ಉರುಳಾಡಿಸಿದವರು, ಉರುಳಾಟವನ್ನು ವಿರೋಧಿಸಿದವರ ಪ್ರತಿಭಟನೆಗಳೆಲ್ಲವೂ ನಡೆದು ಹೋದವು. ಇಲ್ಲಿ ಮಡೆ ಮಡೆ ಸ್ನಾನ ಕೇವಲ ಒಂದು ಧರ್ಮದ ಒಂದು ಆಚರಣೆಯ ಉದಾಹರಣೆಯಷ್ಟೇ. ಮೊಹರ್ರಂ ದಿನದಂದು ರಕ್ತ ಬರುವಂತೆ ಹೊಡೆದುಕೊಳ್ಳುವುದು, ಜೈನಮುನಿಗಳಲ್ಲಿರುವ ಅತಿ ಎನ್ನಿಸುವಂತಹ ಹಿಂಸಾತ್ಮಕ ಪ್ರಯೋಗಗಳೆಲ್ಲವೂ ಹೊರಗಿನಿಂದ ನಿಂತು ನೋಡುವವರಿಗೆ ಮೌಢ್ಯದಂತೆ, ಹಿಂಸೆಯಂತೆ ಕಂಡರೆ ಒಳಗಿರುವವರಿಗೆ ಅದು ಪ್ರಶ್ನಿಸಬಾರದ ನಂಬುಗೆ! ಜನರಲ್ಲೇ ಒಂದು ಎಚ್ಚರ ಮೂಡದ ಹೊರತು ಮೂಢನಂಬಿಕೆಗಳು ಕಡಿಮೆಯಾಗುವ ಸಾಧ್ಯತೆಗಳು ಕ್ಷೀಣ. ಎಚ್ಚರ ಮೂಡಿಸುವ ಕೆಲಸ ಮಾಡುವವರನ್ನು ಹೀಗಳೆಯುವವರು ಹಿಂದೆಯೂ ಇದ್ದರು ಮುಂದೂ ಇರುತ್ತಾರೆ. ಆಚರಣೆಗಳನ್ನು ಬೆಂಬಲಿಸುವವರಷ್ಟೇ ಹೀಗಳೆಯುತ್ತಾರೆಂದುಕೊಂಡರೆ ತಪ್ಪು, ಅದನ್ನು ಬೆಂಬಲಿಸದವರೂ ಕೂಡ ಎಚ್ಚರ ಮೂಡಿಸಲೆತ್ನಿಸುವವರ ಮನೋಸ್ಥೈರ್ಯವನ್ನು ಕಡಿಮೆಗೊಳಿಸುವಂತಹ ಹೇಳಿಕೆಗಳನ್ನು ನೀಡುವುದು, ಲೇಖನ ಬರೆಯುವುದು ಸಮಾಜದ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಲ್ಲವೇ? ಹೀಗಳೆಯುವುದಕ್ಕಷ್ಟೇ ಸೀಮಿತವಾಗಿಸದೆ ದ್ವೇಷಿಸುವ ಮಟ್ಟಕ್ಕೂ ಬೆಳೆಯುತ್ತಿರುವುದು ಅನಾರೋಗ್ಯದ ಮತ್ತೊಂದು ಸಂಕೇತ.

ಪ್ರತಿದಿನ ದಿನಭವಿಷ್ಯ, ವಾರಕ್ಕೊಮ್ಮೆ ಸಾಪ್ತಾಹಿಕದಲ್ಲಿ ವಾರಭವಿಷ್ಯವನ್ನು ಪತ್ರಿಕೆಗಳು ಪ್ರಕಟಿಸುತ್ತವಾದರೂ ಅವೈಚಾರಿಕ ಸಂಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದುದು ಕಡಿಮೆಯೇ. ದಿನಭವಿಷ್ಯ ಕಳುಹಿಸುವುದಕ್ಕೆ ಅಂಕಣಕಾರ ತಡ ಮಾಡಿದರೆ ಪತ್ರಿಕೆಯವರೇ ಹಳೆಯದೊಂದು ದಿನಭವಿಷ್ಯವನ್ನು ರಾಶಿ ಬದಲಿಸಿ ಪ್ರಕಟಿಸಿ ಬಿಡುವುದು ಸಾಮಾನ್ಯ. ಇಂತಹ ಭವಿಷ್ಯವನ್ನು ಕುತೂಹಲಕ್ಕೆ ಓದುವವರ ಜೊತೆಜೊತೆಗೆ ಓದಿ ಸೀರಿಯಸ್ಸಾಗುವವರ ಸಂಖ್ಯೆಯೂ ಇದೆಯಾದರೂ ಅದು ಕಡಿಮೆಯೇ. ಜ್ಯೋತಿಷಿಗಳಿಗೆ ಬಂಪರ್ ಬಂದಿದ್ದು ಖಾಸಗಿ ದೃಶ್ಯ ಮಾಧ್ಯಮದ ಹೆಚ್ಚಳದೊಂದಿಗೆ. ಮನೋರಂಜನೆಗೆಂದು ಪ್ರಾರಂಭವಾದ ವಾಹಿನಿಗಳಲ್ಲಿ ಮೊದಮೊದಲಿಗೆ ಈ ರೀತಿಯ ಜ್ಯೋತಿಷ್ಯಕಾರರಿಗೆ ಹೆಚ್ಚಿನ ಪ್ರಾಮುಖ್ಯತೆಯಿರಲಿಲ್ಲ. ಬೆಳಗಿನ ಹೊತ್ತು ಕನ್ನಡ ಸಿನಿಮಾದ ಹಾಡುಗಳನ್ನೋ, ಹಾಸ್ಯ ದೃಶ್ಯಗಳನ್ನೋ ಪ್ರಸಾರ ಮಾಡಿ ಸಮಯ ತುಂಬುತ್ತಿದ್ದವು. ಒಂದು ವಾಹಿನಿ ಪ್ರಾಯೋಗಿಕವಾಗಿ ದಿನಭವಿಷ್ಯವನ್ನು ಬೆಳಗಿನ ಸಮಯ ಹೇಳಲಾರಂಭಿಸಿದ ಮೇಲೆ, ಆ ಕಾರ್ಯಕ್ರಮಕ್ಕೆ ಸಿಕ್ಕ ಟಿ.ಆರ್.ಪಿ. ಉಳಿದ ವಾಹಿನಿಗಳಿಗೂ ಅಂತದ್ದೇ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡಿತು. ಬೆಳಗಿನ ಹೊತ್ತು ಸುಮ್ನೆ ಟಿವಿ ಓಡಲಿ ಎಂದು ಆನ್ ಮಾಡಿದವರಲ್ಲಿ ಒಂದಷ್ಟು ಜನ ಇಂತಹ ಜ್ಯೋತಿಷ್ಯ ಕಾರ್ಯಕ್ರಮದ ಮೋಡಿಗೆ ಒಳಗಾಗಲು ಶುರುವಾಯಿತು. ಫೋನ್ ಇನ್ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ಜ್ಯೋತಿಷಿಗಳು ಹೇಳುವ ಸಲಹೆಗಳನ್ನು ಕೇಳಿಕೊಂಡು ಜನತೆ ಕೃತಾರ್ಥವಾಯಿತು. ಸೆನ್ಸಿಬಲ್ ಆಗಿ ಸಲಹೆ ನೀಡುವ ಜ್ಯೋತಿಷಿಗಳೂ ಕೆಲವರಿದ್ದರು. ಬಹುತೇಕರು ರಾಶಿ ಗ್ರಹ ದೋಷ ಎಂದು ತಲೆತಿಂದು ಸಮಸ್ಯೆಗಳಿಗಿರುವ ಮೂಲ ಕಾರಣವನ್ನು ಅರಿಯಲು ಭಯಪಡುವ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿಬಿಟ್ಟರು! ಜ್ಯೋತಿಷ್ಯ ವಲಯಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು ಮನೋರಂಜನೆ ನೀಡುವ ವಾಹಿನಿಗಳಿಂದಲ್ಲ. ಈ ವಾಹಿನಿಗಳಲ್ಲಿ ಅಬ್ಬಬ್ಬಾ ಎಂದರೆ ಬೆಳಗಿನ ಹೊತ್ತು ಅರ್ಧದಿಂದ ಒಂದು ಘಂಟೆಯವರೆಗಿನ ಸಮಯವಷ್ಟೇ ಸಿಗುತ್ತಿತ್ತು. ದಿನದ ಉಳಿದ ಸಮಯ ಅವರಿಗೆ ವಾಹಿನಿಗಳಲ್ಲಿ ಅವಕಾಶವಿರಲಿಲ್ಲ. ಈ ಕೊರತೆಯನ್ನು ನೀಗಿಸಿದ್ದು ದಿನದ ಇಪ್ಪತ್ತನಾಲ್ಕು ಘಂಟೆಯೂ ‘ಸುದ್ದಿ’ ನೀಡುವ ವಾಹಿನಿಗಳು! ಒಂದು ರಾಜ್ಯದಲ್ಲಾಗಲೀ ದೇಶದಲ್ಲಾಗಲೀ ದಿನವಿಡೀ ನೀಡುವುದಕ್ಕೆ ಸುದ್ದಿಗಳೆಲ್ಲಿರುತ್ತದೆ? ಸುದ್ದಿಯ ಕೊರತೆಯಿದೆಯೆಂದು ವಾಹಿನಿಯನ್ನು ಅನಿಯಮಿತವಾಗಿ ಪ್ರಸಾರ ಮಾಡುವಂತಿಲ್ಲವಲ್ಲ? ಹಾಗಾಗಿ ಇಪ್ಪತ್ತನಾಲ್ಕು ಘಂಟೆಯನ್ನು ತುಂಬಲು ಜ್ಯೋತಿಷಿಗಳ ಜೊತೆಜೊತೆಗೆ ವಾಸ್ತು ‘ಪಂಡಿತರಿಗೆ’, ಸಂಖ್ಯಾಶಾಸ್ತ್ರಜ್ಞರಿಗೆ ಮನ್ನಣೆ ದೊರೆಯಿತು. ನೀವು ಗಮನಿಸಿದರೆ ಕನ್ನಡದಲ್ಲಿರುವ ಅಷ್ಟೂ ಸುದ್ದಿ ವಾಹಿನಿಗಳ ಕಾರ್ಯಕ್ರಮಗಳು ಮತ್ತೊಂದು ವಾಹಿನಿಯ ತದ್ರೂಪಿ ನಂತೆಯೇ ಕಾಣಿಸುತ್ತದೆ. ತದ್ರೂಪಿ ಕಾರ್ಯಕ್ರಮಗಳು ಪ್ರಸಾರವಾಗುವ ಸಮಯವೂ ಹೆಚ್ಚು ಕಮ್ಮಿ ಒಂದೇ! ಏನೋ ಸಮಯ ತುಂಬಲು ಒಂದು ಘಂಟೆಯ ಸ್ಲಾಟನ್ನು ಇಂತಹ ಪ್ರಕಾಂಡ ಪಂಡಿತರಿಗೆ ನೀಡಿದ್ದರೆ ನೋಡುವವರ ಕರ್ಮವೆಂದು ಸುಮ್ಮನಾಗಬಹುದಿತ್ತೇನೋ. ಬೇಕೆನ್ನಿಸಿದಾಗ ದಿನದ ಇಪ್ಪತ್ತನಾಲ್ಕು ಘಂಟೆಯೂ ಅವರನ್ನು ಕೂರಿಸಿ ರಾಶಿ ಫಲ, ಗ್ರಹದೋಷ, ಕುಜದೋಷ ಎಂದು ಬೊಬ್ಬೆ ಹೊಡೆಯುವುದನ್ನು ಸಹಿಸಲು ಸಾಧ್ಯವೇ? ವಾಹಿನಿಯಲ್ಲಿ ಕೆಲಸ ಮಾಡುವವರನ್ನು ಕೇಳಿ ಅವರದು ಸಿದ್ಧ ಉತ್ತರ ‘ಜನರು ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನೋಡ್ತಾರೆ, ಟಿ.ಆರ್.ಪಿ. ಬರುತ್ತೆ. ಅದಕ್ಕೆ ಪ್ರಸಾರ ಮಾಡ್ತೀವಿ. ತಪ್ಪೇನು? ಜನರು ಏನು ಕೇಳ್ತಾರೋ ಅದನ್ನೇ ಕೊಡೋದು ನಾವು’. ಜನರು ಇವರಿಗೆ ಯಾವಾಗ ಪತ್ರ ಬರೆದು, ಫೋನ್ ಮಾಡಿ ಇಂತಹ ಕಾರ್ಯಕ್ರಮ ಕೊಡಿ ಎಂದು ಕೇಳಿದ್ದರು? ಸಮಯ ತುಂಬಿಸಲು ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ, ಏನಾದರೊಂದು ಸಮಸ್ಯೆ ಇದ್ದೇ ಇರುವ ಜನರಿಗೆ ‘ನಿಮ್ಮ ಸಮಸ್ಯೆಗೆ ಇದು ಕಾರಣ’ ಎಂದು ಪೂರ್ಣ ಕಾನ್ಫಿಡೆನ್ಸಿನಿಂದ ತರತರದ ಮಣಿಮಾಲೆ ಧರಿಸಿದ ವ್ಯಕ್ತಿ ಹೇಳಿದಾಗ ಇದ್ದರೂ ಇರಬಹುದು ಎಂಬ ಭಾವ ಮೂಡಿಸಿ ಸಮಸ್ಯೆಗಿರುವ ಮೂಲವನ್ನು ಲೌಕಿಕ ಪ್ರಪಂಚದಲ್ಲಿ ಹುಡುಕದೆ ಗ್ರಹಗಳಲ್ಲಿ ಹುಡುಕುವಂತೆ ಮಾಡಿಬಿಟ್ಟಿದ್ದಾರೆ. ನಗರವಾಸಿ ‘ವಿದ್ಯಾವಂತರೇ’ ಇಂತಹ ಮೌಢ್ಯಕ್ಕೆ ಹೆಚ್ಚೆಚ್ಚು ಶರಣಾಗುತ್ತಿದ್ದಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...