Friday, December 25, 2015

ಮೂರು ಜನ ಕವಿಯತ್ರಿಯರು : ಮೂರು ಕವಿತೆಗಳು





ಪ್ರಿಯರೆ
ನಾಳೆ 27 ರಂದು ರವಿವಾರ  'ಯುವ ಕಾವ್ಯ : ಓದು-ಮಾತು -4' ರಲ್ಲಿ ವೀಣಾ ಬಡಿಗೇರ ಅವರು ಓದುವ ಕವಿತೆಗಳು..
ಬನ್ನಿ. ಕಾವ್ಯದ ಕುರಿತು ಮಾತಾಡೋಣ







1
ಮಸಿ ಅರಿವೇಯ ಸ್ವಗತ

ಹಾ, ಎಷ್ಟು ಚಂದ ಇದ್ದೆ ನಾನು
ಮನೆ ಒಡತಿ ತನ್ನ ಹೂಮೈಗೆ
ನನ್ನ ಸುತ್ತಿಕೊಂಡು ಕನ್ನಡಿಯೆದರು
ನಿಂತಾಗ ನಾನೆಷ್ಟು ಬೀಗುತ್ತಿದ್ದೆ
ಗತ್ತಿನಿಂದ ಸೆರಗಾಗಿ ಹಾರುತ್ತಿದ್ದೆ.

ಶುದ್ಧ ಹಾಲಿನ ಬಣ್ಣದೊಳಗೆ ಹೂಬಳ್ಳಿ
ಎಲೆಗಳ ಚಿತ್ತಾರ
ದಂಡೆಗೊಂದಿಷ್ಟು ನಾಜೂಲಿದ ಗರಿ ಅಂಚು
ಮುಟ್ಟಿದರೆ ಹಾಯ್ ಎನಿಸುವಷ್ಟು ನವಿರು(ಮೃದು)
ಶುದ್ಧ ಹತ್ತಿಯಿಂದ ಕೈಯಲ್ಲೇ ನೇಯ್ದದ್ದಂತೆ
ನೋಡಿ ಅಲ್ಲಿ ಆಕೆ ಉಟ್ಟ ಸೀರೆ
ಆಗಂತೂ ಹೀಗೆ ಹೆಮ್ಮೆಯಿಂದ ಉಟ್ಟಿ
ಹೆಜ್ಜೆ ಹೆಜ್ಜೆಗೂ ನೆರಿಗೆಯಾಗಿ ಪುಟಿದಿದ್ದೆ

ಭವ್ಯ ಬಂಗಲೆಗಳು ದೊಡ್ಡ ಮಹಲುಗಳು
ಜಾತಣಕೂಟ ಸಂಗೀತ ಕಛೇರಿ
ನಿನಿನೂ ನಾಟಕಗಳು
ಹೋದಲ್ಲೆಲ್ಲಾ ಮೆಚ್ಚುಗೆ ಗಳಿಸಿ, ಒಡತಿಯ
ಅಂದ ಇಮ್ಮಡಿಗೊಳಿಸಿ ಮಿಂಚುತ್ತಿದ್ದೆ
ಮತ್ತೆ ವಾಷಿಂಗ್ ಮಷೀನಿನ ಘಮಗುಡುವ
ಸಾಬೂನಿನ ಸ್ನಾನ ಗಂಜಿ ಹಾಕಿದ ಗರಗರಿ ಇಸ್ತ್ರಿ

ಈಗೀಗ ಕನ್ನಡಿ ಕಾಣುವುದೇ ಇಲ್ಲ
ಒಂದೊಂದು ಸಲ ಆಕಸ್ಮಾತಾಗಿ ಎದುರಾಗುವ
ಪಾತ್ರೆ, ತಟ್ಟೆಗಳಲ್ಲಿ ಹೀಗೊಂದಿಷ್ಟು ಮುಖದರ್ಶನ
ಅರೆ...?? ಇದು ನಿಣೇನಾ?|
ಹೀಗೇಕೆ ಕಪ್ಪು ಸುರುವಿದ್ದಾರೆ ನನ್ನ ಮೇಲೆ
ಮತ್ತೆ ಅಲ್ಲೊಂದು ಇಲ್ಲೊಂದು ತೂತು
ನಾನು ಶೂವಿನ ಚಿತ್ತಾರದ ಸೆರಗೋ
ಜರಿಯಂಚಿನ ದಂಡೆಯೋ !ಇಲ್ಲ
ಪುಟಿಯುತ್ತಿದ್ದ  ನೆರಿಗೆಯೋ..?
ಊಹುಂ! ನನ್ನ ಆಸ್ತಿಕತ್ವವೇ ಹೊಳೆಯುತ್ತಿಲ್ಲ

ನನ್ನಡೊತಿಗೆ, ನನ್ನ ಕಂಡರೆ ದಿವ್ಯ ನಿರ್ಲಕ್ಷ್ಯ
ಒಮ್ಮೊಮ್ಮೆ ನೆಲಗುಡಿಸುವ ಅರಿವೆಯಾದರೆ
ಇನ್ನೊಮ್ಮೆ, ಡಬ್ಬಿಗಳ ಪೇರಿಸಿಟ್ಟ ಮಾಡಿನ
ಧೂಳು ಕೊಡೆಯುವ ಕಾರ್ಯ
ಬಿಸಿ ಹಾಲಿನ ಪಾತ್ರೆ ಮುಟ್ಟುವಾಗಂತೂ
ಮೈಯೆಲ್ಲಾ ನಡುಕ
ಸೋಸಿನ ಬುರುಗೇಳುವ ನೀರಿನಲ್ಲಿ ಮಿಂದು
ಅದೆಷ್ಟು ದಿನವಾಯಿತೋ??
ಅಭ್ಯಾಸವಾಗಿದೆ ವಾರಕೊಮ್ಮೆ ಕೆಲಸದ ಕಲ್ಪನಾ
ಮೂಡಿಸುವ ಒಣ ಒಣ ಸ್ನಾನ

ಇನ್ನೇನಿದ್ದರೂ, ಇನ್ನೊಂದಿಷ್ಟು ಮಸಿ, ದೂಳು
ಹೇರಿಕೊಂಡಿರಬೇಕು
ಗತವೈಭವದ ಚಹರೆಗಳ ಮೇಲಿನ
ಚಿತ್ರಪಟದಲ್ಲಿ ಹುಡುಕಬೇಕು.
      
-ವೀಣಾ ಬಡಿಗೇರ 
                     
                                   
                                             

2
ಸುತ್ತು

ಕಚ್ಚುತ್ತದೆ ಎಂದು ತೆಗೆದಿಟ್ಟ
ಕಾಲುಂಗುರ ಬೆಳ್ಳಗೆ
ಗುರುತುಸಿದು ಬೆರಳಿನಲ್ಲಿ
ಹಳದಿ ಕೆನ್ನೆಯ ಕೆಂಪು ಪೀತಾಂಬರದ
ಗರತಿಯರು ಬಂದ ಕೆಲಸ
ಮುಗುಸಿ ಹೋಗದೇ
ಸುಮ್ಮನೆ ಗಮನಿಸುತ್ತಾರೆ ಅಲ್ಲಿ
ಮತ್ತೆ ಪ್ರಶ್ನಿಸುತ್ತಾರೆ ಅಧಿಕಾರ
ತುಸು ಅನುಮಾನದಲ್ಲಿ
ಅರೆ...!
ಕಾಲುಂಗುರವೆಲ್ಲಿ?

ಅದು ಬಿಗಿಯುತ್ತಿತ್ತು
ತುರಿಸಬೇಕು ಎಂಬ ತೆವಲು
ಹುಟ್ಟಿಸಿ ಆಗಾಗ ನನ್ನ ಬಗ್ಗಿಸುತ್ತಿತ್ತು
ಹೊಸದಾಗಿ ಕಲಿತ ಗಾಡಿ ಏರುವಾಗ
ನೆರಿಗೆಗೆ ಸಿಲುಕಿ ದಿನವೂ
ಮುಗ್ಗರಿಸಿ ಬೀಳಿಸುತ್ತಿತ್ತು
ಆಗುಂಟಿ ಮಡಿಸುವುದಂತೂ ಆಗಿ
ಹೋಗದ ಮಾತಾಗಿ ನೆಟಿಕೆ ಮುರಿಯುವ
ಆಸೆಗೆ ಕಡಿವಾಣ ಹಾಕಿಟ್ಟು
ವರ್ಷವೇ ಆಗಿತ್ತು
ಹಾಗಾಗಿ...

ತೆಗೆದಿಟ್ಟಿದ್ದೇನೆ ಒಳಗೆ ಪೆಟ್ಟಿಗೆಯಲ್ಲಿ
ಅಲ್ಲೇ ಇದೆ ಹೊಡೆಮರಳಿ
ಕಚ್ಚಲಾಗದ ಬೇಗುದಿಯಲ್ಲಿ
 ಹೇಳಿ ಹೇಳಿ
ನನಗಂತೂ ಬಾಯಿಪಾಠವಾಗಿತ್ತು
ಬೇಕಿದ್ದರೆ ನೋಡಿ
ಕೊಂಡು ಹೋಗಿರುವಿರಂತೆ ಬನ್ನಿ
ಎಂದೂ ಸಿಟ್ಟಿನಲಿ ಒಮ್ಮೆ
ಒದರಿಯಾಗಿತ್ತು.

ಬರಲಿಲ್ಲ ಅವರು
ಬದಲಾಗಿ ಮುಂದುವರಿಸಿದರು
ಹೊರಟಲ್ಲಿಗೇ ಹೊರಟು ನಿಂತ
ಹಳೇ ಬಸ್ಸಿನ ಸವೆದ ಟಾಯರಿನಂತೆ
ಮೆಟ್ಟಿಕೊಂಡ ದೆವ್ವವನ್ನು
ಬಿಟ್ಟೋಡಿಸಲು ಕಾದುನಿಂತ
ಕಹಿಬೇವಿನ ಗೊಂಚಲಿನಂತೆ

ಏಳು ಸುತ್ತಿನದು ಕಚ್ಚಿದರೆ
ಎರಡು ಸುತ್ತಿನದ್ದಾದರೂ ಧರಿಸಬೇಡವೇ
ಗಂಡುಳ್ಳ ಗರತಿ ಹೀಗೆ ಬೆತ್ತಲೆ
ಅನಾಮಿಕೆಯಾಗಿ ತಿರುಗಿದರೆ
ಏನೆಂದಾನು ಗಂಡ ಮತ್ತೆ
ಅತ್ತೆಮಾವಂದಿರು..?

ಅರೆ..! ಹೌದಲ್ಲ
ಇವರು ಹೇಳುವವರೆಗೆ
ನನಗಿದು ಗೊತ್ತೇ ಇರಲಿಲ್ಲ
ನನಗೆ ಕಾಲುಂಗರವಿಲ್ಲದ್ದು
ಮನೆಯವರಿನ್ನು ನೋಡಿಯೇ ಇಲ್ಲ..
 
-ರೇಣುಕಾ ರಮಾನಂದ
                                          


3

ಕಳಚಿ ಬಿದ್ದ ಮೊಗ್ಗು

ಪರದೆ ಸರಿಯುತ್ತದೆ
ಪುಟವೊಂದರಿಂದ ಅಲೈಸ್
ಇಣುಕುತ್ತಾಳೆ
ಎಂದಿನಂತೆ
ಕಡಲ ಆಳದ ಮೊರೆತಕ್ಕಾಗಿ
ಗವ್ವನೆಯ ಬಿಲದ
ಕತ್ತಲ ಉಮೆದಿಗಾಗಿ.

ಜಿಗಿಯುತ್ತಾಳೆ
ಒಳಕ್ಕೆ
ಆಳಕ್ಕೆ
ಇಳಿದಂತೆಲ್ಲಾ ಆವರಿಸುತ್ತದೆ
ಕಡಲ ಮೋಹಕತೆ
ಮೆಲ್ಲನೆ
ಪುಟಿಯುತ್ತಾಳೆ
ಅಮಲೇರುತ್ತಾಳೆ,

ಇನ್ನೆಲ್ಲೋ
ಬಾಲ್ಕನಿಯಲ್ಲಿ
ಏರು ಬಿಸಿಲಿಗೆ
ಕಳಚಿಬಿದ್ದ ಮೊಗ್ಗುಗಳು,
ಹಾಡಬಹುದಾಗಿದ್ದ ರಾಗಗಳ
ನೆನೆದು
ಪುಳಕಗೊಳಗಳ್ಳುವ
ಗಿಳಿಯ ಹಸಿರೊಳಗೊಂದಾದ
ಎಲೆಗಳು.

ತವಕಿಸುತ್ತಾಳೆ
ಕುಗ್ಗುತ್ತಾ
ಹಿಗ್ಗುತ್ತಾ
ಪಡೆವಂತೆ ರೂಪದ
ಥರಾವರಿ ಸೀಸೆಗಳ ನಡುವೆ
ಸ್ಪರ್ಶಿಸುತ್ತಾಳೆ ಎಲ್ಲದನೂ
ಬಾಚುವಂತೆ ಕೈಗತ್ತುವಷ್ಟು
ಕಪ್ಪೆ ಚಿಪ್ಪುಗಳ.

ಈ ತವಕಿಸುವ
ಆಟದಲ್ಲಿ
ಹೊಕ್ಕು ಬರುತ್ತಾಳೆ ಹೊಸ ಬಿಲಗಳ
ಕಳೆಯುತ್ತಾಳೆ ಹಗಲು ರಾತ್ರಿಗಳ
ನಡೆಯುತ್ತಾಳೆ ಸಲೀಸಾಗಿ
ಖಾಲೀತನಗಳ ಕೈ ಹಿಡಿದು
ನಡೆಯುತ್ತಾ ನಡೆಯುತ್ತಾ
ಮತ್ತೆ ಮತ್ತೆ
ಮೋಹಕ್ಕೆ ಬೀಳುತ್ತಾಳೆ.

ಕಡೆಗೆ
ಆಳದಲಿ ಬಲು ವಿಸ್ತಾರದ ಬಯಲು
ಆ ಬಯಲು ತುಂಬಾ ದತ್ತೂರಿ ಗಿಡಗಳು!
ಚಕ್ಕನೆ ತಿರುಗುತ್ತಾಳೆ
ಮೆಲ್ಲಗೆ ಮೇಲೇಳುತ್ತಾಳೆ
ಮತ್ತೆ
ಪುಟವ ಸೇರುವ ಇರಾದೆಯಲಿ...

ಪರದೆಯ ಹಿಂದೆ
ಕಾಫಿ ಹೀರುತ್ತಾ
ಇವಳೇಡೆಗೇ ನೋಡುತ್ತಿರುವ
ಅವನಿಗೊಂದು
ಹೂನಗೆ ಬೀರುತ್ತಾಳೆ.

-ಸ್ಮಿತಾ ಮಾಕಳ್ಳಿ


Tuesday, December 22, 2015

ಡಿಸೆಂಬರ್ 27, ಧಾರವಾಡ : 'ಯುವ ಕಾವ್ಯ: ಓದು-ಮಾತು -4'



ಪ್ರಿಯರೆ
ಡಿಸೆಂಬರ್ 27 ರಂದು ರವಿವಾರ ಧಾರವಾಡದ ಆಲೂರ ವೆಂಕಟರಾಯ್ ಭವನದಲ್ಲಿ 5.30 ಗಂಟೆಗೆ 'ಯುವ ಕಾವ್ಯ: ಓದು-ಮಾತು -4' ಕಾರ್ಯಕ್ರಮ. ಬನ್ನಿ

Thursday, December 17, 2015

ಕವಿತೆ: ಆತ್ಮಸಂಗಾತ...


ರೇಣುಕಾ ನಿಡಗುಂದಿ

 
 
ಈಗೀಗ ಅವನ ಮಾತುಗಳೇ
ಕವಿತೆಯಾಗಿ
ಜಗತ್ತಿನ ಯಾವ ದನಿಗಳೂ ಕೇಳುತ್ತಿಲ್ಲ
ಕವಿತೆ ಹಗಲಾಗಿ....ಮುಗಿಲಾಗಿ...ಮೋಡವಾಗಿ
ನನ್ನೊಳಗೀಗ ಮಲೆನಾಡು..!

ಭೂಮಿಯ ತುಂಬ ಗೀಚಬೇಕೆನಿಸಿದೆ 
ಸಾಕೆಸಿನುವ ತನಕ
ಮುಗಿಯದ  ಇರುಳು
ಹರಿಯದ ಬೆಳಕು ಬೇಕು.....ನಿನ್ನೊಲುಮೆಯಲ್ಲಿ..
ಆದರೆ ಬದುಕು ವಿಶ್ವಾಮಿತ್ರ..!

ಮರುಭೂಮಿಯಲ್ಲಿ ನಡೆಯುತ್ತಿದ್ದೇವೆ
ಕಿರುಚಬೇಕೆನಿಸುತ್ತಿದೆ ಪಾದದ ತುಂಬ ಬೊಕ್ಕೆಗಳು 
ಹಾಸಿಬಿದ್ದ ಮರಳು ರಾಶಿಯಡಿಯಲ್ಲಿ
ನದಿ ಸಣ್ಣಗೇ ಮುಲುಗುತ್ತದೆ
ಕಡಲು ಕಾತರಿಸುತ್ತಿದೆ ನದಿಗಾಗಿ

ಬುದ್ಧನಂತೆ  ಹೊತ್ತುಕೊಂಡಿದ್ದೀ ಬೆನ್ನಮೇಲೆ  
ನನ್ನವೇ ನೋವುಗಳ ಗಂಟನ್ನು
ಹೆಗಲ ಮೇಲೆ ಉಳಿದಿರಬೇಕು ಸಣ್ಣದೊಂದು ಬಿಸಿಯುಸಿರು 
ಮರೆತಿದ್ದೇನೆ ಊರು - ಹೆಸರು ಪರಿಚಯವೆಲ್ಲ
ನನ್ನ  ಬೆರಳಲ್ಲೀಗ ನಿನ್ನದೇ ಬೆವರು...!
 
ರೇಣುಕಾ ನಿಡಗುಂದಿ ಧಾರವಾಡದಲ್ಲಿ ಹುಟ್ಟಿದ್ದು ಕಳೆದ ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸವಾಗಿದ್ದಾರೆ. ಖಾಸಗೀ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿ ಉದ್ಯೋಗ ಮಾಡುತ್ತಿದ್ದಾರೆ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ  ಜಂಟಿಕಾರ್ಯದರ್ಶಿಯಾಗಿ, ಸಂಘದ ಮುಖವಾಣಿಅಭಿಮತ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ.  ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ.  ಮೊದಲ ಕವನ ಸಂಕಲನ " ಕಣ್ಣ ಕಣಿವೆಕೆಂಡಸಂಪಿಗೆ ವೆಬ್ಪೋರ್ಟಲ್ ನಲ್ಲಿ ಬರೆಯುತ್ತಿದ್ದ ಯಮುನಾತೀರೆ ಅಂಕಣ ಬರಹಗಳ  "ದಿಲ್ಲಿ ಡೈರಿಯ ಪುಟ", ಅಮೃತಾ ಪ್ರೀತ್ಂ ಸಂಗಾತಿ ಇಮರೋಜ್ ಕುರಿತು ಬರೆದ ಬರಹ, ಅನುವಾದಿಸಿದ ಕವಿತೆ ಅಮೃತಾ ನೆನಪುಗಳು” ಅವರ ಪ್ರಕಟಿತ ಕೃತಿಗಳಾಗಿವೆ. ಮನಸೇ" ದ್ವೈಮಾಸಿಕದಲ್ಲಿ ರಾಜಧಾನಿ ಮೇಲ್ ಅಂಕಣ ಬರೆಯುತ್ತಿದ್ದಾರೆ

raynuka@gmail.com


09717461669
 
 

27ರಿಂದ30 ಡಿಸೆಂಬರ್ ಹಂಪಿ : ಜನ ಸಾಂಸ್ಕೃತಿಕ ಮೇಳ





ಪಂಜು ಗಂಗೂಲಿ ಕಾರ್ಟೂನ್




ಪಿ ಮಹಮ್ಮದ್ ಕಾರ್ಟೂನ್



ಡಿ 19, 20 ಮಂಗಳೂರು : ಜನ ನುಡಿ 2015















ನಾಳೆ ಬೆಳಗಾವಿಯಲ್ಲಿ : ವಿಚಾರವಾದಿ ಹತ್ಯೆ ಮತ್ತು ವರ್ತಮಾನದ ಇಂಡಿಯಾ.. ಕುರಿತು ಮಾತು





Saturday, December 12, 2015

ಡಾ. ಬರಗೂರು ರಾಮಚಂದ್ರಪ್ಪರಿಗೆ ಬಹಿರಂಗ ಪತ್ರ – ಎಸ್.ಐ.ಒ. ಇಸ್ಲಾಂ ಬ್ರಾಹ್ಮಣ್ಯದ ನಿಜವಾದ ಗುರಿ ಸೂಫಿ ಸಂತರ ಪಠ್ಯ




ಇರ್ಷಾದ್ ಉಪ್ಪಿನಂಗಡಿ

ವರ್ತಮಾನ


Baraguru

ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ,
ಪಠ್ಯ ಕೇಸರಿಕರಣದ ವಿರುದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ ಬರಗೂರು ರಾಮಚಂದ್ರಪ್ಪಗೆ ಮನವಿ ಸಲ್ಲಿಸಿರುವ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆ ಮೂಲಕ ಪಠ್ಯದಲ್ಲಿ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರಲು ಒತ್ತಾಯ ಪಡಿಸಿದೆ.

ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೆಷನ್ (ಎಸ್.ಐ.ಓ) ಜಮಾತೇ-ಇಸ್ಲಾಮೀ-ಹಿಂದ್ ಮೂಲಭೂತವಾದಿ ಸಂಘಟನೆಯ ವಿದ್ಯಾರ್ಥಿ ಘಟಕ. ಕೇಸರೀಕರಣಗೊಂಡಿರುವ ಪಠ್ಯ ಪರಿಷ್ಕರಣೆಯಾಗಬೇಕು ಎಂಬುದು ನಿಜ. ಆದರೆ ಈ ಪರಿಷ್ಕರಣೆಗೆ ಆಗ್ರಹಿಸುವವರು ಯಾರು ? ಮತ್ತು ಅವರ ಹಿಡನ್ ಅಜೆಂಡಾಗಳು ಏನು ಎಂಬುದರ ಮೇಲೆ ಆಗ್ರಹದ ಸಾಧಕ ಭಾದಕಗಳು ಚರ್ಚೆಗೊಳಪಡಬೇಕು. ಪಠ್ಯದಲ್ಲಿ ಕೇಸರೀಕರಣದ ಕೆಲವೊಂದು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಎಸ್ ಐ ಒ ತಮ್ಮ ಮೂಲಭೂತವಾದಿ ಸಿದ್ಧಾಂತಕ್ಕೆ ಪಠ್ಯದಲ್ಲಿ ಸ್ಥಾನದೊರಕಿಸಿಕೊಡಲು ಯತ್ನ ನಡೆಸಿದೆ. ಅದಕ್ಕಾಗಿ ಕೆಲವೊಂದು ಪ್ರಗತಿಪರರು ಎತ್ತಬಹುದಾದ ವಿಷಯಗಳನ್ನು ಮೊದಲಿಗೆ ಎತ್ತಿ ತೋರಿಸಿ ನಂತರ ತನ್ನ ಸಿದ್ಧಾಂತವನ್ನು ಪಠ್ಯದಲ್ಲಿ ಸೇರಿಸಲು ಆಗ್ರಹಿಸುವ ಪ್ರಯತ್ನ ನಡೆಸಿದೆ.

ಐದನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಯಕ್ಷ ಪ್ರಶ್ನೆ ಎಂಬ ಪಾಠವಿದೆ. ಅದರಲ್ಲಿ ಯಕ್ಷ ಮತ್ತು ಧರ್ಮರಾಯನ ಸಂಭಾಷಣೆ ನೀಡಲಾಗಿದೆ. ಸಂಭಾಷಣೆಯಲ್ಲಿ ಮಾನವನಿಗೆ ತಾಯಿ ರೂಪಿ ಯಾರು ? ಎಂಬ ಪ್ರಶ್ನೆಗೆ ಗೋವು ಎಂಬ ಉತ್ತರವನ್ನು ಧರ್ಮರಾಯ ನೀಡುತ್ತಾನೆ. ಈ ಮೂಲಕ ಪರೋಕ್ಷವಾಗಿ ನಿಮ್ಮ ತಾಯಿಯ ಹತ್ಯೆ ಮಾಡುತ್ತಿದ್ದೀರಿ ಎಂದು ಮುಸ್ಲಿಮರಿಗೆ ಹೇಳುವಂತಿದೆ. ಎಂಟನೇ ತರಗತಿಯ ದ್ವಿತೀಯ ಭಾಷೆ ತಿಳಿಕನ್ನಡದ 10 ನೇ ಪಾಠ ಕರಾಳ ರಾತ್ರಿಯಲ್ಲಿ, ಜಿಹಾದಿಗಳು ಜನರನ್ನೇಕೆ ಕೊಲ್ಲುತ್ತಾರೆ ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಜಿಹಾದಿ ಎನ್ನುವುದು ಉಗ್ರಗಾಮಿ ಸಂಘಟನೆ. ಇವರದ್ದು ಮತೀಯ ಸಂಘಟನೆ. ಬೇರೆ ಧರ್ಮದವರನ್ನು ಕೊಂದರೆ ನಮ್ಮ ದೇವರಿಗೆ ಪ್ರೀತಿ ಎಂದು ನಂಬಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಇದು ಇಸ್ಲಾಂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಬರೆಯಲಾಗಿದೆ ಅನ್ನೋದು ಎಸ್.ಐ.ಓ ಆಕ್ಷೇಪವಾಗಿದೆ. ಆದರೆ ಎಸ್ ಐ ಒ ಮನವಿಯ ಉದ್ದೇಶ ಕೇಸರಿಕರಣವನ್ನು ವಿರೋಧಿಸುವುದಕ್ಕಿಂತಲೂ ತಮ್ಮ ಮೂಲಭೂತವಾದಿ ಅಜೆಂಡಾವನ್ನು ಪಠ್ಯದಲ್ಲಿ ತೂರಿಸುವುದಾಗಿದೆ.

ಶಾಲಾ ಪಠ್ಯ ಪುಸ್ತಕಗಳು ಕೇಸರಿಕರಣಗೊಳಿಸುವ ಸಂಘಪರಿವಾರದ ಪ್ರಯತ್ನದ ಭಾಗವಾಗಿ ಈಗಾಗಲೇ ಪಠ್ಯಗಳಲ್ಲಿ ಇಂಥ ಅನೇಕ ಬದಲಾವಣೆಗಳಾಗಿವೆ. ಪಾಠಗಳ ಮೂಲಕ ಮಕ್ಕಳ ಎಳೆಯ ಏನು ಅರಿಯದೆ ಅಗ ತಾನೆ ಕಲಿಯಲು ಬಂದಂಥ ಮುಗ್ಧ ಮನಸ್ಸಿನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯಗಳ ಕುರಿತಾಗಿ ವಿಷ ಬೀಜ ಬಿತ್ತುವ ಕಾರ್ಯವನ್ನು ಸಂಘಪರಿವಾರ ವ್ಯವಸ್ಥಿತವಾಗಿ ನಡೆಸುತ್ತಲೇ ಬಂದಿದೆ.

ಎಸ್.ಐ.ಓ ವ್ಯಕ್ತಪಡಿಸಿರುವ ಆಕ್ಷೇಪಗಳು ಹೊಸ ವಿಚಾರವೇನಲ್ಲ. ಈ ಹಿಂದಿನಿಂದಲೂ ಕೂಡ ಅನೇಕ ಪ್ರಗತಿಪರರು ಶಿಕ್ಷಣ ಕೇಸರೀಕರಣದ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಸಂಘಪರಿವಾರ ಕೇಸರಿಕರಣಗೊಳಿಸುತ್ತಿರುವುದು, ಪಠ್ಯ ಪುಸ್ತಕದಲ್ಲಿ ಏಕ ಸಂಸ್ಕೃತಿಯನ್ನು ಹೇರಲಾಗ್ತಿರೋದು ಹಾಗೂ ಹಿಂದೂ ಧರ್ಮದ ಸಂಸ್ಕೃತಿ ಆಚರಣೆಗಳಿಗೆ ಸಂಬಂಧಪಟ್ಟ ಪಾಠಗಳನ್ನೇ ಹೆಚ್ಚು ಅಳವಡಿಸಲಾಗುತ್ತಿರುವುದು ಆತಂಕಕಾರಿ ಹಾಗೂ ಖಂಡನೀಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಅದನ್ನು ಮುಸ್ಲಿಂ ಮೂಲಭೂತವಾದಿ, ಕೋಮುವಾದಿ ವಿದ್ಯಾರ್ಥಿ ಸಂಘಟನೆಗೆ ಆಗ್ರಹಿಸುವ ನೈತಿಕತೆ ಇಲ್ಲ.

ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಮನವಿಗಳಲ್ಲಿ ಪಠ್ಯ ಕೇಸರೀಕರಣದ ಆರೋಪಗಳ ಜೊತೆಗೆ ಇನ್ನೂ ಕೆಲವೊಂದು ಪ್ರಮುಖ ಅಂಶಗಳಿವೆ. 9 ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಪ್ರೊ.ಕರೀಮುದ್ದೀನ್ ಸಾಬ್ ಪಾಠದಲ್ಲಿ ರಾಜ್ಯ ಭತ್ಯೆ ನೀಡುವುದಕ್ಕಿಂತ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಮತ್ತು ಹೈದರಾಲಿ ಸಮಾಧಿಗಳಿಗೆ ಸೇವೆ ಸಲ್ಲಿಸೋದೇ ಮೇಲು ಎಂಬ ಸಾಲು ಬರುತ್ತದೆ. ಇದೇ ಪಠ್ಯದಲ್ಲಿ ಬುಡ್ಡು ಸಾಹೇಬರು, ಬೆಟ್ಟ ಹತ್ತಿದರು ಎಂಬ ಪಾಠದಲ್ಲಿ ದರ್ಗಾ ಎಂಬುವುದು ಮುಹಮ್ಮದೀಯರ, ಸಾಧು-ಸಂತರ ಸಮಾಧಿ ಸ್ಥಳ, ಅದು ಪವಿತ್ರ ಸ್ಥಳವಾಗಿದೆ ಎಂದಿದೆ. ಬಹುಸಂಸ್ಕೃತಿ ಪರವಾಗಿ ಪಠ್ಯ ಕೇಸರಿಕರ ಣವನ್ನು ವಿರೋಧಿಸುವ ಎಸ್.ಐ.ಓ, ಅದೇ ಮನವಿಯಲ್ಲಿ ಬಹುಸಂಸ್ಕೃತಿಯ ಪ್ರಬಲ ಪ್ರತಿಪಾದಕರಾಗಿರುವ ಸೂಫಿ ಸಂತರ ಕಲ್ಪನೆಯೇ ಇಸ್ಲಾಂನಲ್ಲಿ ಇಲ್ಲ. ದರ್ಗಾ ಸಂಸ್ಕೃತಿ ಅನ್ನೋದು ಇಸ್ಲಾಂ ಬಗ್ಗೆ ನೈಜ ತಿಳುವಳಿಕೆ ಇಲ್ಲದವರು ಮಾಡಿಕೊಂಡ ಆರಾಧನೆ ಎಂದು ಜರಿದಿದೆ. ದರ್ಗಾ ಹಾಗೂ ಸೂಫಿ ಚಿಂತನೆ ಇಸ್ಲಾಂ ಸಿದ್ಧಾಂತಕ್ಕೆ ವಿರುದ್ಧ. ಹಾಗಾಗಿ ಇದನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಒತ್ತಾಯಿಸಿದೆ.

ಪಠ್ಯ ಕೇಸರಿಕರಣ ಬಹುಸಂಸ್ಕೃತಿಗೆ ಹೇಗೆ ಮಾರಕವೋ ಅಷ್ಟೇ ಮಾರಕವಾಗಿರೋದು, ಸೂಫಿ ಸಂತರ ಬಗ್ಗೆ ಬೆಳಕು ಚೆಲ್ಲುವ ವಿಚಾರವನ್ನು ಪಠ್ಯದಿಂದ ಕೈ ಬಿಡಬೇಕೆಂಬ ಎಸ್.ಐ.ಓ ವಾದ. ಈ ನಾಡಿನ ಬಹುಸಂಸ್ಕೃತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಅಪಾರ ಕೊಡುಗೆ ಸಲ್ಲಿಸಿದವರು ಸೂಫಿಗಳು. ಸರ್ವಧರ್ಮ, ಸಮಭಾವ, ಜೀವಪರತೆ, ಸ್ನೇಹ-ಪ್ರೀತಿ-ಮಮತೆಯನ್ನು ಜನಸಮೂಹದಲ್ಲಿ ಬಿತ್ತುವ ಮೂಲಕ ಧರ್ಮ ಪರಿಪಾಲನೆ ಮಾಡುತ್ತಾ ಶಾಂತಿಯ ಸಂದೇಶವನ್ನು ಸಾರುತ್ತಾ ಬಂದವರು ಇವರು. ಈ ಸೂಫಿಗಳು ನಡೆದ ಹಾದಿಯ ಮೇಲೆ ಸಾಗುವ ಅಗತ್ಯತೆ ಪ್ರಸಕ್ತ ಮುಸ್ಲಿಮ್ ಸಮುದಾಯಕ್ಕಿದೆ. ಭ್ರಾತೃತ್ವ ಸಂದೇಶ ಸಾರಿದ, ಎಲ್ಲರನ್ನು ಸಮಾನವಾಗಿ ಕಂಡ, ಪ್ರತಿಯೊಬ್ಬರನ್ನು ಪ್ರೀತಿಸಿ, ಪೋಷಿಸಿದ , ಅಹಿಂಸಾತ್ಮಕವಾಗಿ ನಡೆದ ಸೂಫಿಗಳ ಚಿಂತನೆಯನ್ನು ನಾಶ ಮಾಡೋ ಪ್ರಯತ್ನ ಇಸ್ಲಾಂ ಮೂಲಭೂತವಾದಿಗಳಿಂದ ಇಂದು ನಡೆಯುತ್ತಿರೋದು ಆತಂಕಕಾರಿ. ಈ ವಿಷವರ್ತುಲ ಬೀಜವನ್ನು ಬಿತ್ತುವಂತಹ ಕೆಲಸ ವಹಾಬಿವಾದಿಗಳು ಹಾಗೂ ಜಮಾತೇ-ಇಸ್ಲಾಮೀ-ಹಿಂದ್ನಂಥ ಮೂಲಭೂತವಾದಿಗಳು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ.

ದರ್ಗಾ ಹಾಗೂ ಸೂಫಿ ಸಂಸ್ಕೃತಿಯನ್ನು ಮೂಢನಂಬಿಕೆ ಎಂದು ಬಿಂಬಿಸೋ ಈ ಮೂಲಭೂತವಾದಿಗಳು, ವಹಾಬಿ ಹಾಗೂ ಮೌದೂದಿಯ ಅಪಾಯಕಾರಿ-ಅಸಹಿಷ್ಣುತ ಸಿದ್ಧಾಂತವೇ ನೈಜ ಇಸ್ಲಾಮ್ ಎನ್ನೋದು ಇವರ ವಾದ ಹಾಗೂ ಈ ಮೂಲಕ ಭಾರತೀಯ ಮುಸ್ಲಿಮರನ್ನು ಸೂಫಿಸಂನಿಂದ ವಿಮುಖರನ್ನಾಗಿಸುವುದೇ ಇದರ ಹಿಂದಿರೋ ಉದ್ದೇಶ. ದರ್ಗಾ ಸೂಫಿಸಂನ್ನು ಮೌಢ್ಯ ಎಂದು ವಾದಿಸುವ ಜಮಾತೇ ಇಸ್ಲಾಮೀಗಳು ಈ ಮೂಲಕ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರುತ್ತಿದ್ದಾರೆ. ಈ ಪ್ರಯತ್ನದ ಮುಂದುವರಿದ ಭಾಗವಾಗಿ ಪಠ್ಯ ಪುಸ್ತಕಗಳಲ್ಲಿ ಸೂಫಿ ಸಂತರ ಹಾಗೂ ಅವರ ದರ್ಗಾಗಳ ಕುರಿತಾದ ಉಲ್ಲೇಖಗಳನ್ನು ನಾಶಪಡಿಸೋಕೆ ಮುಂದಾಗಿದ್ದಾರೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.

ಪ್ರಸಕ್ತ ಸಮಯದಲ್ಲಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಘ ಪರಿವಾರದ ಹಿಂದೂತ್ವವಾಗಲೀ, ವಹಾಬಿ-ಜಮಾತೇ-ಇಸ್ಲಾಮಿಯಾಗಲೀ ಅಥವಾ ತಬ್ಲೀಗಿಗಳ ಮೂಲಭೂತವಾದಿ ಇಸ್ಲಾಂ ಆಗಲೀ ಅಗತ್ಯವಿಲ್ಲ. ಆ ಮನಸ್ಸುಗಳಿಗೆ ಬೇಕಾಗಿರೋದು, ಎಲ್ಲರೊಂದಿಗೆ ಬೆರೆತು ಬಾಳುವ ಸಮಾನತೆ, ಮನುಷ್ಯ ಪ್ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಂದೇಶ, ಸಹಿಷ್ಣುತೆ ಸಾರುವ ಮನೋಭಾವ. ಇಂತಹ ಬುನಾದಿ ಕಟ್ಟಿಕೊಳ್ಳಲು ಸಮಾಜಕ್ಕೆ ಇವೆಲ್ಲವನ್ನು ತೋರಿಸಿಕೊಟ್ಟ, ಸಾಮರಸ್ಯದ ಇತಿಹಾಸ ಹೊಂದಿರುವ ಸೂಫಿ ಸಂತರು, ದಾಸರು, ವಚನಕಾರರು ಸೇರಿದಂತೆ ಸಮಾಜ ಸುಧಾರಣೆಗೆ ಮುಂದಾದ ಮಹಾನ್ ಆದರ್ಶಗಳ ಸಂದೇಶದ ಕುರಿತಾದ ಪಠ್ಯ ಅತ್ಯಗತ್ಯ.

ಈ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಸೂಫಿಸಂ-ದರ್ಗಾ ಸಂಸ್ಕೃತಿಯ ಕುರಿತಾದ ಪಾಠವನ್ನು ಕೈಬಿಡಬೇಕೆಂದ ಜಮಾತೇ ಇಸ್ಲಾಮಿ-ಹಿಂದ್ ಸಂಘಟನೆಯ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಮನವಿಯನ್ನು ಪರಿಗಣಿಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ ಬರಗೂರು ರಾಮಚಂದ್ರಪ್ಪ ಅವರಲ್ಲಿ ನಮ್ಮ ಕಳಕಳಿಯ ವಿನಂತಿ.

Thursday, December 10, 2015

ಡಿಸೆಂಬರ್ 13, ಧಾರವಾಡ : 'ಯುವ ಕಾವ್ಯ: ಓದು-ಮಾತು -3'



ಪ್ರಿಯರೆ
ಡಿಸೆಂಬರ್ 13 ರಂದು ರವಿವಾರ ಆಲೂರ ವೆಂಕಟರಾಯ್ ಭವನದಲ್ಲಿ 5.30 ಗಂಟೆಗೆ 'ಯುವ ಕಾವ್ಯ: ಓದು-ಮಾತು -3' ಕಾರ್ಯಕ್ರಮ. ಬನ್ನಿ


ಲಿಂಗಾಯತ; ಅದು ಹೇಗೆ ಹಿಂದೂ?


ರಂಜಾನ್ ದರ್ಗಾ
(ನಮ್ಮ ಪ್ರಕಾಶನದಿಂದ ಪ್ರಕಟವಾಗುವ ರಂಜಾನ್ ದರ್ಗಾ ಅವರ 'ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು' ಹೊಸ ಪುಸ್ತಕದ ಒಂದು ಲೇಖನ)


  ವೀರಶೈವ (ಲಿಂಗಾಯತ)ವು ಹಿಂದೂ ಧರ್ಮದ ಶಾಖೆ ಎಂದು ಸಂಶೋಧಕರಾದ ಡಾ. ಎಂ. ಚಿದಾನಂದ ಮೂರ್ತಿ ಅವರು ಕಳೆದ ಮಾರ್ಚ್ ೧೬ರಂದು ವಿಜಯವಾಣಿಯಲ್ಲಿ ಬರೆದದ್ದು ಹೊಸದೇನೂ ಅಲ್ಲ. ಅವರು ಈ ಸುಳ್ಳನ್ನು ಅನೇಕ ದಶಕಗಳಿಂದ ಪುನರಾವರ್ತನೆ ಮಾಡುತ್ತಲೇ ಇದ್ದಾರೆ. ಈ ಹಳೆರಾಗ ತೆಗೆಯುವುದು ಸಂಶೋಧನೆಯ ಲಕ್ಷಣವಲ್ಲ ಎಂಬುದು ಲಿಂಗಾಯತ ಧರ್ಮದ ಬಗ್ಗೆ ಕನಿಷ್ಠ ಅರಿವು ಇದ್ದವರಿಗೂ ಗೊತ್ತಾಗುತ್ತದೆ. ’ಹಿಂದು ಎಂದರೆ ವೀರಶೈವ. ವೀರಶೈವ ಎಂದರೆ ಲಿಂಗಾಯತ. ಆದ್ದರಿಂದ ಲಿಂಗಾಯತ ಎಂದರೆ ಹಿಂದು’ ಎಂಬ ಮೊಂಡು ವಾದವನ್ನು ಅವರು ಪ್ರತಿಪಾದಿಸುತ್ತಲೇ ಇದ್ದಾರೆ. ಸುಳ್ಳನ್ನು ಸಾವಿರ ಸಲ ಹೇಳಿದರೂ ಸುಳ್ಳೇ. ಆದರೆ ಸತ್ಯದ ಭ್ರಮೆಯನ್ನು ಹುಟ್ಟಿಸುವಲ್ಲಿ ಅದು ಅನೇಕ ಭಾರಿ ಯಶಸ್ವಿಯಾಗುತ್ತದೆ. ಈ ವಿಫಲ ಪಯತ್ನವನ್ನು ಚಿದಾನಂದಮೂರ್ತಿ ಅವರಂಥ ಹಿರಿಯ ಸಂಶೋಧಕರು ಮಾಡುವುದು ಸಂಶೋಧನಾ ಕ್ಷೇತ್ರಕ್ಕೇ ಮಾಡುವ ಅವಮಾನವಾಗಿದೆ.

 ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ ಎಂದು ಬಸವಣ್ಣನವರೇ ಇಷ್ಟಲಿಂಗವನ್ನು ಉದ್ದೇಶಿಸಿ ಹೇಳಿದ್ದಾರೆ. ಬಸವಣ್ಣನವರು ಇಷ್ಟಲಿಂಗದ ಜನಕರು ಎಂಬುದಕ್ಕೆ ೧೨ನೇ ಶತಮಾನದ ವಚನಕಾರರ ಅನೇಕ ವಚನಗಳೇ ಸಾಕ್ಷಿಯಾಗಿವೆ. ಆದರೆ ಚಿದಾನಂದಮೂರ್ತಿ ಅವರು ಚೆನ್ನಬಸವಣ್ಣನವರ ಹೆಚ್ಚಿನ ವಚನವೊಂದನ್ನು ಎತ್ತಿಕೊಂಡು ಸತ್ಯವನ್ನು ಜಾಲಾಡಿಸುವ ವಿಫಲ ಯತ್ನ ಮಾಡುತ್ತಲೇ ಇದ್ದಾರೆ.
 ಎನ್ನ ಬಂದ ಭವಂಗಳನ್ನು ಪರಿಹರಿಸಿ, ಎನಗೆ ಭಕ್ತಿ ಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ .. .. .. ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ .. .. .. ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು ಎಂಬ ಬಸವಣ್ಣನವರ ಹೆಚ್ಚಿನ ವಚನವನ್ನು ಉದ್ಧರಿಸುತ್ತ ಹಿಡಿಯುತ್ತ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ವಾದವನ್ನು ಮಂಡಿಸುತ್ತಲೇ ಇದ್ದಾರೆ. ಆದರೆ ನಿಜಾಂಶವೇನು?

 ಇಲ್ಲಿಯವರೆಗೆ ಬಸವಣ್ಣನವರ ೯೬೦ ಷಟ್‌ಸ್ಥಲದ ವಚನಗಳು ಮತ್ತು ೪೫೪ ಹೆಚ್ಚಿನ ವಚನಗಳು ಸಿಕ್ಕಿವೆ. ೧೨ನೇ ಶತಮಾನ ವಚನಯುಗವಾಗಿತ್ತು. ಆದರೆ ಆ ವಚನಕಾರರ ವಚನಕಟ್ಟುಗಳು ಯಾವುದೇ ಶಾಸ್ತ್ರಬದ್ಧವಾದ ವಚನ ಸಂಕಲನದ ಚೌಕಟ್ಟಿಗೆ ಸಿಲುಕಿರಲಿಲ್ಲ. ಇಂಥ ವಚನ ಸಂಕಲನದ ಕಾರ್ಯ ೧೫ನೇ ಶತಮಾನದಲ್ಲಿ ಆಯಿತು. ೧೨ನೇ ಶತಮಾನ ವಚನಯುಗವೆಂದು ಕರೆಯಿಸಿಕೊಂಡರೆ.  ೧೫ನೇ ಶತಮಾನವನ್ನು ವಚನಸಂಕಲನ ಯುಗ ಎಂದು ಕರೆಯಲಾಯಿತು. ೧೨ನೇ ಶತಮಾನದ ಯಾವುದೇ ವಚನಕಾರರ ಮೂಲ ಹಸ್ತಪ್ರತಿಗಳು ಸಿಕ್ಕಿಲ್ಲ. ಅವೆಲ್ಲ ಸಿಕ್ಕಿದ್ದು ೧೫ನೇ ಶತಮಾನದಿಂದಿಚೆಗೆ. ಬಸವಣ್ಣನವರ ವಚನ ಕಟ್ಟು ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ೫ ಶತಮಾನಗಳ ಅಂತರದಲ್ಲಿ!

 ವಚನಸಂಕಲನದ ಸಂದರ್ಭದಲ್ಲಿ ಸಿಕ್ಕ ವಚನಗಳನ್ನು ಷಟ್‌ಸ್ಥಲಗಳಿಗನುಗುಣವಾಗಿ ವಿಂಗಡಿಸಿ ಪ್ರಕಟಿಸಲಾಗಿದೆ. ಬಸವಣ್ಣನವರ ಷಟ್‌ಸ್ಥಲದ ವಚನಗಳಂತೆ ಪ್ರಭುದೇವರ ಮತ್ತು ಚೆನ್ನಬಸವಣ್ಣನವರ ಷಟ್‌ಸ್ಥಲದ ವಚನಗಳೂ ಸಿಕ್ಕಿವೆ. ಇತರ ಯಾವುದೇ ವಚನಕಾರರ ವಚನಗಳನ್ನು ಷಟ್‌ಸ್ಥಲದ ಹೆಸರಿನಲ್ಲಿ ವಿಂಗಡಿಸಿಲ್ಲ. ಬಸವಣ್ಣ, ಚೆನ್ನಬಸವಣ್ಣ ಮತ್ತು ಅಲ್ಲಮಪ್ರಭುಗಳ ಯಾವುದೇ ಷಟ್‌ಸ್ಥಲದ ವಚನಗಳಲ್ಲಿ ’ವೀರಶೈವ’ ಪದ ಬಳಕೆಯಾಗಿಲ್ಲ.

 ೧೩ನೇ ಶತಮಾನದ ಶರಣಪ್ರಿಯ ಸಾಹಿತಿಗಳಾದ ಹರಿಹರ, ರಾಘವಾಂಕ ಮತ್ತು ಕೆರೆಯಪದ್ಮರಸರ ಕೃತಿಗಳಲ್ಲಿ ’ವೀರಶೈವ’ ಪದ ಪ್ರಯೋಗವಾಗಿಲ್ಲ. ಬಸವಣ್ಣನವರ ಸಮಕಾಲೀನರಾದ ಪಂಡಿತಾರಾಧ್ಯರ ’ಶಿವತತ್ತ್ವಸಾರಮು’ ತೆಲಗು ಕೃತಿಯಲ್ಲಿ ಕೂಡ ಈ ಪದ ಬಳಕೆಯಾಗಿಲ್ಲ. ಪಾಲ್ಕುರಿಕೆ ಸೋಮನಾಥನ ತೆಲಗು ಬಸವಪುರಾಣದಲ್ಲಿಯೂ ವೀರಶೈವ ಪದ ಬಳಕೆಯಾಗಿಲ್ಲ.  ಈತನ ಕೃತಿಯ ಆಧಾರದ ಮೇಲೆ ಭೀಮಕವಿಯ ’ಬಸವಪುರಾಣ’ (೧೩೬೮) ರಚನೆಯಾಗಿದೆ. ಇಲ್ಲಿ ಮೊದಲಬಾರಿಗೆ ’ವೀರಮಾಹೇಶ್ವರ’ ಬದಲಿಗೆ ’ವೀರಶೈವ’ ಪದ ಬಳಕೆಯಾಗಿದೆ. ಅಂದರೆ ೧೪ನೇ ಶತಮಾನದ ವರೆಗೆ ಕನ್ನಡ ಭಾಷೆಯಲ್ಲಿ ’ವೀರಶೈವ’ ಪದ ಬಳಕೆಯಾಗಿರಲಿಲ್ಲ.

 ಇನ್ನು ಷಟ್‌ಸ್ಥಲ ವಚನಗಳಲ್ಲಿ ಸಿಗದ ’ವೀರಶೈವ’ ಹೆಚ್ಚಿನ ವಚನಗಳಲ್ಲಿ ಹೇಗೆ ಕಂಡುಬಂದಿತು ಎಂಬುದರ ಕುರಿತು ಚಿಂತಿಸುವುದು ಅವಶ್ಯವಾಗಿದೆ. ಷಟ್‌ಸ್ಥಲ ವಚನ ಕಟ್ಟುಗಳು ಸಿದ್ಧವಾಗುವ ಸಂದರ್ಭದಲ್ಲಿ ’ವೀರಶೈವ’ ಪದಕ್ಕೆ ವಚನಸಾಹಿತ್ಯದಲ್ಲಿ ಮಹತ್ವವಿರಲಿಲ್ಲ. ನಂತರದ ಶತಮಾನಗಳಲ್ಲಿ ಆಚಾರ್ಯ ಪರಂಪರೆ (ಮೊದಲು ಚತುರಾಚಾರ್ಯ ನಂತರ ೧೭ನೇ ಶತಮಾನದಲ್ಲಿ ಕಾಶಿ ವಿಶ್ವಾರಾಧ್ಯ ಸೇರಿ ಪಂಚಾಚಾರ್ಯ) ಬೆಳೆದಾಗ, ವಚನಗಳಲ್ಲಿ ವೀರಶೈವ ಪದ ಸೇರಿಸುವ ಹುನ್ನಾರ ಆರಂಭವಾಯಿತು. ಆದರೆ ಬಸವಣ್ಣ, ಅಲ್ಲಮಪ್ರಭುದೇವರು ಮತ್ತು ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಕಟ್ಟುಗಳು ಅದಾಗಲೇ ಭಕ್ತರ ಮನೆಗಳಲ್ಲಿ ರಾರಾಜಿಸುತ್ತಿದ್ದ ಕಾರಣ, ಆ ಹಸ್ತಪ್ರತಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಏನೂ ಮಾಡಲಿಕ್ಕಾಗಲಿಲ್ಲ. ನಂತರ ಸಿಕ್ಕ ಹೆಚ್ಚಿನ ವಚನಗಳ ಹಸ್ತಪ್ರತಿಗಳಲ್ಲಿ ’ವೀರಶೈವ’ ಪದ ಸೇರಿಸುವ ಮೂಲಕ ಹಸ್ತಕ್ಷೇಪ ಮಾಡಿದರು. ಅಂಥ ಹಸ್ತಕ್ಷೇಪದ ಹೆಚ್ಚಿನ ವಚನಗಳನ್ನು ತೆಗೆದುಕೊಂಡು ಚಿದಾನಂದಮೂರ್ತಿಗಳು ವಾದ ಮಾಡುತ್ತಿರುವುದು ಸಂಶೋಧನೆಗೆ ಮಾಡುವ ಅಪಚಾರವಾಗಿದೆ.

 ದೇವನಾಮ ಸೊಗಸದು ಲಿಂಗಾಯತಂU. ಮಾನವನಾಮ ಸೊಗಸದು ಜಂಗಮ ಭಕ್ತಂಗೆ ಎಂಬ ಚೆನ್ನಬಸವಣ್ಣನವರ ವಚನ ಪ್ರಸಾದಿ ಸ್ಥಲದಲ್ಲಿದೆ. ವಚನಗಳಲ್ಲಿ ಲಿಂಗಾಯತಕ್ಕಿಂತಲೂ ’ಲಿಂಗವಂತ’ ಪದದ ಬಳಕೆ ಹೆಚ್ಚಾಗಿದೆ. ಏಕೆಂದರೆ ಲಿಂಗವು ಅಂಗಕ್ಕೆ ಬರವಂಥದ್ದು ಲಿಂಗಾಯತ. ಇದು ಮೊದಲ ಘಟ್ಟ. ಎರಡನೇ ಘಟ್ಟ ಲಿಂಗಸ್ವಾಯತ. ಮೊರನೇ ಘಟ್ಟ ಲಿಂಗಸನ್ನಿಹಿತ.  ಈ ಮೂರೂ ಘಟ್ಟಗಳನ್ನು ತಲುಪಿದವನು ಲಿಂಗವಂತ. ಲಿಂಗಾಯತದಿಂದ ಆರಂಭವಾಗಿ ಲಿಂಗವಂತದಲ್ಲಿ ಕೊನೆಮುಟ್ಟುವುದರಿಂದ ವಚನಗಳಲ್ಲಿ ’ಲಿಂಗವಂತ’ ಪದ ಬಳಕೆಯಾಗಿದೆ. ಲಿಂಗವಂತದ ಮೂಲ ಲಿಂಗಾಯತದಲ್ಲಿದೆ. ಆದ್ದರಿಂದ ಲಿಂಗಾಯತರು ಎಂಬ ಪದವೇ ಜನಮನದಲ್ಲಿ ಅಚ್ಚೊತ್ತಿದೆ.

 ಚೆನ್ನಬಸವಣ್ಣನವರ ಪ್ರಸಾದಿ ಸ್ಥಲದ ವಚನಗಳಲ್ಲಿನ ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು. ವೇದಶಾಸ್ತ್ರ ಪುರಾಣಂಗಳನರಿದ ಸಂಬಂಧಿಗಲ್ಲದೆ ವೀರಶೈವ ಅಳವಡದು ಎಂಬ ವಚನದಲ್ಲಿ ’ವೀರಶೈವ’ ಪದ ಬಳಕೆಯಾದದ್ದು ನಿಜವೆ? ಎಂದು ಕೇಳಿದರೆ ’ಇಲ್ಲ’ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಆ ವೀರಶೈವ ಪದವನ್ನು ಚೆನ್ನಬಸವಣ್ಣನವರ ವಚನ ಸಂಪುಟದ ಸಂಪಾದಕರಾದ ಡಾ. ಬಿ.ವಿ. ಮಲ್ಲಾಪುರ ಅವರು ತಮಗೆ ಸಿಕ್ಕ ಹಸ್ತಕ್ಷೇಪ ಪ್ರತಿಯಿಂದ ಬಳಸಿದ್ದಾರೆ. (ಕನ್ನಡ ಪುಸ್ತಕ ಪ್ರಾಧಿಕಾರ, ಸಮಗ್ರ ವಚನ ಸಂಪುಟ ೩- ದ್ವಿತೀಯ ಮುದ್ರಣ ೨೦೦೧ರ ೨೩೮ನೇ ವಚನ). ಆದರೆ ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ, ಡಾ. ಆರ್.ಸಿ.  ಹಿರೇಮಠ ಅವರ ಸಂಪಾದನೆಯ ’ಚನ್ನಬಸವಣ್ಣನವರ ವಚನಗಳು’ ದ್ವಿತೀಯ ಮುದ್ರಣ ೧೯೭೧ರಲ್ಲಿನ ೫೩೦ನೇ ವಚನ ಇದಾಗಿದ್ದು. ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು; ವೇದಶಾಸ್ತ್ರಪುರಾಣಂಗಳನರಿದ ಸಂಬಂಧಿಗಳಿಗಲ್ಲದೆ ಆಚಾರವಳವಡದು ಎಂದಿದೆ. ಹೀಗೆ ಪಟ್ಟಭದ್ರರು ಹಸ್ತಕ್ಷೇಪ ಮಾಡಿ ’ಆಚಾರ’ ಶಬ್ದ ಜಾಗದಲ್ಲಿ ’ವೀರಶೈವ’ ಪದ ತಂದು ತುರುಕಿದ್ದಾರೆ. ಅದುವೇ ಪುಸ್ತಕ ಪ್ರಾಧಿಕಾರದ ಸಂಪುಟದಲ್ಲಿ ಮುಂದುವರಿದಿದೆ. ಇದಲ್ಲದೆ ಅನೇಕ ಪ್ರಕ್ಷಿಪ್ತ ವಚನಗಳನ್ನು ಕೂಡ ವಚನ ರಾಶಿಯಲ್ಲಿ ಸೇರಿಸಲಾಗಿದೆ.

 ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೇ ವೀರಶೈವ ನೋಡಾ ಎಂಬ ಸಿದ್ಧರಾಮರದೆಂದು ಹೇಳಲಾದ ವಚನದ ಸಾಲನ್ನು ಚಿದಾನಂದಮೂರ್ತಿ ಅವರು ಉದ್ಧರಿಸುತ್ತಾರೆ. ಈ ಸಾಲೇ ಗೊಂದಲದ ಗೂಡಾಗಿದೆ. ವೀರಶೈವ ಚತುರ್ವಣಿಯಾದರೂ ಚತುರ್ವರ್ಣಾತೀತ ಎಂದರೆ ಏನು? ಚಾತರ್ವರ್ಣ್ಯ ಪದ್ಧತಿಯ ಸಮಾಜದಿಂದ ಹೊರಬಂದವನೇ ಲಿಂಗವಂತ ಅಲ್ಲವೆ? ಆದ್ದರಿಂದ ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೇ ಲಿಂಗವಂತ ನೋಡಾ ಎಂಬುದು ಮಾತ್ರ ಸಮಂಜಸವಾಗುತ್ತದೆ. ಹೀಗೆ ಚಾತರ್ವಣ್ಯ ಪದ್ಧತಿಯಿಂದ ಹೊರಬಂದು ಲಿಂಗಾಯತನಾಗುವುದೇ ಶರಣರ ದೃಷ್ಟಿಯಲ್ಲಿ ಪುನರ್ಜನ್ಮ. ವಚನಗಳಲ್ಲಿ ಈ ರೀತಿಯ ಹಸ್ತಕ್ಷೇಪಗಳು ಬಹಳಷ್ಟಾಗಿವೆ.

  ವೀರಶೈವ ಪ್ರತಿಪಾದಿಸುವ ಗುರವರ್ಗದವರು ತಾವು ಬೇರೆಯವರಿಗಿಂತ ದೊಡ್ಡವರು ಎಂಬುದೇ ಬಸವಣ್ಣನವರ ಲಿಂಗತತ್ತ್ವಕ್ಕೆ ವಿರುದ್ಧವಾಗಿದೆ. ಲಿಂಗವಂತ ಶರಣರು ವರ್ಣಾರಹಿತ ಮತ್ತು ಜಾತಿರಹಿತ ಶರಣಸಂಕುಲವೆಂಬ ಸಮಾಜದ ನಿರ್ಮಾಪಕರಾಗಿದ್ದಾರೆ. ಆದ್ದರಿಂದ ಈ ಸಾಲಿನಲ್ಲಿ ಲಿಂಗವಂತ ತೆಗೆದು ವೀರಶೈವ ಪದ ಸೇರಿಸಿದ್ದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಸಿದ್ಧರಾಮನ ವಚನಗಳನ್ನು ಷಟ್‌ಸ್ಥಲದಲ್ಲಿ ವಿಭಾಗಿಸದೆ ಇರುವುದು ಕೂಡ ಈ ಹಸ್ತಕ್ಷೇಪಕ್ಕೆ ಅನುಕೂಲವಾಗಿದೆ.

 ಇನ್ನು ಚಿದಾನಂದಮೂರ್ತಿ ಅವರು ವಚನಪೂರ್ವ ಯುಗದ ಶೈವಮತದ ಕೊಂಡಗೂಳಿ ಕೇಶಿರಾಜನನ್ನು ಎಳೆದು ತರುತ್ತಾರೆ. ಆತನ ’ಶೀಲಮಹತ್ವ ಕಂದ’ದಲ್ಲಿ ಪಟ್ಟಭದ್ರರು ಲಿಂಗಾಯತ, ಲಿಂಗಾಯತವಂತ ಮತ್ತು ವೀರಶೈವ ಪದಗಳನ್ನು ಸೇರಿಸಿದ್ದಾರೆ. ಇವು ನಂತರದಲ್ಲಿ ಸೇರಿದವು ಎಂದು ಬೇರೆ ಹೇಳಬೇಕಿಲ್ಲ. ಇಲ್ಲಿಯ ಶೀಲಗಳು ಶರಣರಿಗೆ ಒಪ್ಪಿಗೆಯಾಗಿಲ್ಲ. ’ಹೂಭಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೆ?’ ಎಂದು ಬಸವಯುಗದ ವಚನಕಾರ ಸಕಲೇಶ ಮಾದರಸ ಈ ಕೃತಿಯನ್ನು ತಿರಸ್ಕರಿಸಿದ್ದಾನೆ. ಬಸವಾದಿ ಪ್ರಪಥರಾರೂ ಕೊಂಡಗೂಳಿ ಕೇಶಿರಾಜನನ್ನು ತಮ್ಮ ವಚನಗಳಲ್ಲಿ ಸ್ಮರಿಸಿಲ್ಲ.
ಯಾಜ್ಞವಲ್ಕ್ಯಸ್ಮೃತಿ ಕಲಿಸುವ ಬ್ರಾಹ್ಮಣರಿಗೆ ದಾನ ಕೊಡುವ ಕೊಂಡಗೂಳಿ ಕೇಶಿರಾಜ ಅದು ಹೇಗೆ ಲಿಂಗಾಯತನಾಗುತ್ತಾನೆ?
 ಹತ್ತನೇ ಶತಮಾನದ ಹೂಲಿ ಶಾಸನದಲ್ಲಿ ’ಅಷ್ಟಾವರಣ’ ಪದ ಬಂದಿದೆ ಎಂದು ಚಿಮೂ ಇನ್ನೂ ಹಿಂದೆ ಹೋಗುತ್ತಾರೆ. ಆದರೆ ಮೊದಲಿಗೆ ಆ ಶಾಸನದ ಅಧ್ಯಯನ ಮಾಡಿದ ಮಧುರಚೆನ್ನರು, ’ಆ ಶಾಸನದ ಲಿಪಿಯ ರೂಪ ಹತ್ತನೇ ಶತಮಾನದ್ದಲ್ಲ’ ಎಂದು ಕಳೆದ ಶತಮಾನದಲ್ಲೇ ಸಾಬೀತುಪಡಿಸಿದ್ದಾರೆ. ಆ ಶಾಸನದ ಲಿಪಿಯ ರೂಪ ೧೨ನೇ ಶತಮಾನದ ನಂತರದ್ದು ಎಂಬುದು ಲಿಪಿತಜ್ಞರಿಗೆ ಗೊತ್ತಿದೆ. ಹೀಗಾಗಿ ಚಿಮೂ ಅವರ ವಾದ ಇಲ್ಲಿಯೂ ಬಿದ್ದುಹೋಗುತ್ತದೆ.

 ಇನ್ನು ಲಿಂಗಾಯತ ಯಾವ ಕಾಲಕ್ಕೂ ಹಿಂದುಧರ್ಮದ ಶಾಖೆಯಾಗದು. ಏಕೆಂದರೆ ಬಸವಣ್ಣನವರ ಕಾಲದಲ್ಲಿ ’ಹಿಂದು’ ಶಬ್ದದ ಬಳಕೆಯೆ ಇರಲಿಲ್ಲ. ವೇದ, ಉಪನಿಷತ್, ಆಗಮ, ಪುರಾಣ, ಭಗವದ್ಗೀತೆ, ಮನುಸ್ಮೃತಿ ಮುಂತಾದ ಪುರಾತನ ವೈದಿಕ ಸಾಹಿತ್ಯದಲ್ಲೂ ’ಹಿಂದೂ’ ಶಬ್ದದ ಬಳಕೆಯಾಗಿಲ್ಲ. ಬಸವಣ್ಣನವರ ಕಾಲದಲ್ಲಿ ಕೂಡ ’ಹಿಂದೂ’ ಹೆಸರಿನ ಧರ್ಮವೇ ಇರಲಿಲ್ಲ. ಆಗ ಸನಾತನ ಧರ್ಮ ಎಂದು ಕರೆಯಿಸಿಕೊಳ್ಳುವ ವೈದಿಕಧರ್ಮ ಚಾಲ್ತಿಯಲ್ಲಿತ್ತು. ಶೈವಧರ್ಮ ಕೂಡ ಬೇರೆಯಾಗಿಯೇ ಇತ್ತು. ಅಜ್ಞೇಯವಾದಿ ಬೌದ್ಧಧರ್ಮ ಮತ್ತು ತೀರ್ಥಂಕರರನ್ನೇ ದೈವತ್ವಕ್ಕೇರಿಸುವ ಜೈನ ಮುಂತಾದ ಅವೈದಿಕ ಧರ್ಮಗಳೂ ಜೊತೆಯಲ್ಲಿ ಇದ್ದವು.

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ
ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ಎಂದು ಬಸವಣ್ಣನವರು ವೇದೋಕ್ತ ವೈದಿಕಧರ್ಮವನ್ನೂ ಆಗಮೋಕ್ತ ಶೈವಧರ್ಮವನ್ನೂ ಏಕಕಾಲಕ್ಕೆ ತಿರಸ್ಕರಿಸಿದ್ದಾರೆ. ಹೀಗಾಗಿ ವೇದಮೂಲದ ಇಂದಿನ ಹಿಂದುಧರ್ಮಕ್ಕೂ ಆಗಮಮೂಲದ ಇಂದಿನ ವೀರಶೈವಧರ್ಮಕ್ಕೂ ಲಿಂಗಾಯತ ಧರ್ಮದ ಜೊತೆ ಯಾವುದೇ ಸಂಬಂಧವಿಲ್ಲ ಎನ್ನುವುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿಯಾಗಿದೆ.

 ನಂತರ ಚಿಮೂ ಅವರು ಇಷ್ಟಲಿಂಗಕ್ಕೆ ಕೈ ಹಾಕಿದ್ದಾರೆ. ಅದು ಬಸವಣ್ಣನಿಗಿಂತ ಹಿಂದಿನದು ಎಂದು ಹೇಳುತ್ತಾರೆ. ಕೇಶಿರಾಜ ’ಉರಸಜ್ಜೆಯ ಲಿಂಗ’ ಎಂದು ಬಳಸಿದ್ದಾಗಿ ತಿಳಿಸಿದ್ದಾರೆ. ಆ ಉರಸಜ್ಜೆಯ ಲಿಂಗವು ಚರಲಿಂಗವಾಗಿದೆ. ಆ ಲಿಂಗವನ್ನು ಶಿವರಾತ್ರೀಶ್ವರ ಭಗವತ್ಪಾದರ ಚಿತ್ರದಲ್ಲಿ ಕಾಣಬಹುದು.

                                                                    ***









Wednesday, December 09, 2015

ಎರಡು ಅನುವಾದಿತ ಕವಿತೆಗಳು



ಕನ್ನಡಕ್ಕೆ : ಡಾ. ಎಚ್.ಎಸ್. ಅನುಪಮಾ


ಭರವಸೆ


Inline image 1


ಭರವಸೆಗೆ ರೆಕ್ಕೆಗಳಿವೆ
ಅದು ಆತ್ಮದಲಿಳಿದು ತಂಗುತ್ತದೆ
ಹಾಡುವುದು, ಪದಗಳೇ ಇರದ ಹಾಡು 
ಎಂದೆಂದೂ ಮುಗಿಯದ ಹಾಡು..

ಅತಿಮಧುರ ದನಿ ಕೇಳಿಸುವುದು, 
ಅಬ್ಬರದ ಬಿರುಗಾಳಿ ಸುಯ್ಯುವಾಗಲೂ..
ಎಷ್ಟೆಷ್ಟೋ ಜೀವಗಳ ಬೆಚ್ಚಗಿಟ್ಟ ಹಕ್ಕಿಯನು
ಬೀಸುವ ಗಾಳಿ ದಿಗಿಲುಗೊಳಿಸಬಹುದು

ಕೇಳಿರುವೆ ಆ ದನಿಯ, ಯಮಚಳಿಯ ತಾವುಗಳಲಿ
ತೇಲುತ್ತ ಅಪರಿಚಿತ ಕಡಲುಗಳಲಿ
ಆದರೂ, ಎಂದೂ, ಎಂಥ ಸಂಕಟದ ಚಣದಲೂ
ಬಯಸಲಿಲ್ಲ ಅದು, ನನ್ನಿಂದ ಒಂದೇಒಂದು ಅಗುಳನ್ನೂ.

-ಎಮಿಲಿ ಡಿಕಿನ್ಸನ್ (೧೮೩೦-೧೮೮೬)


ಕನಸಿನೊಳಗೊಂದು ಕನಸು

ತಗೋ, ನಿನ ಹಣೆ ಮೇಲೊಂದು ಮುತ್ತು 
ಅಗಲುತ್ತಿರುವ ಈ ಹೊತ್ತು
ಇಷ್ಟು ಮಾತ್ರ ಹೇಳಲೇಬೇಕು
ತಪ್ಪು ನಿನದಲ್ಲ, ನನ್ನ ದಿನಗಳ
ಕನಸಾಗಿಸಿದ್ದು ನೀನು;
ಆದರೂ ನಿನ್ನ ಭರವಸೆ 
ಕೇವಲ ಒಂದು ರಾತ್ರಿಯಲ್ಲಿ 
ಅಥವಾ ಒಂದೇ ಹಗಲಿನಲ್ಲಿ
ಒಂದು ನೋಟದಲ್ಲಿ ಅಥವಾ ಯಾವುದೂ ಇಲ್ಲದೇ
ಹೀಗೆ ಹಾರಿಯೇ ಹೋಯಿತೆಂದರೆ
ಕಳಕೊಂಡದ್ದು ಕಡಿಮೆಯೇ?
ಕಂಡದ್ದು, ಕಂಡಂತೆ ಭಾಸವಾಗಿದ್ದು
ಕನಸಿನೊಳಗಿನ ಕನಸೇ ಅಲ್ಲವೆ?

ನೊರೆನೊರೆಯ ತೆರೆ ಬಂದಪ್ಪಳಿಸಿ  
ಭೋರ್ಗರೆವ ತೀರದಲಿ 
ನಿಂತಿರುವೆ ಬೊಗಸೆಯಲಿ
ಹೊನ್ನಬಣ್ಣದ ಉಸುಕು ಹಿಡಿದು 
ಚಿಟಿಕೆಯಷ್ಟು! ಆದರೂ ಸೋರಿ 
ಬೆರಳ ಸಂದಿನಿಂದ ನುಸುಳಿ ನೆಲ ಸೇರುತಿದೆ.
ನಾ ಅಳುತಲಿದ್ದೆ, ಬಿಕ್ಕುತಲಿದ್ದೆ..
ದೇವರೇ! ಇನ್ನೆಷ್ಟು ಬಿಗಿಮುಷ್ಟಿಯಲಿ 
ಉಸುಕ ಭದ್ರವಾಗಿ ಹಿಡಿಯಬಲ್ಲೆ?
ದೇವರೇ, ನಿಷ್ಕರುಣಿ ಈ ಅಲೆಗಳಿಂದ
ಒಂದೇ ಒಂದು ಕಣ ಉಸುಕ ರಕ್ಷಿಸಲಾರೆನೆ?
ಕಂಡದ್ದು, ಕಂಡಂತೆ ಭಾವಿಸಿದ್ದು
ಕನಸಿನೊಳಗಿನ ಕನಸೇ ಅಲ್ಲವೆ?

-ಎಡ್ಗರ್ ಅಲನ್ ಪೋ

ಅಸ್ಪೃಶ್ಯತೆಯ ಕರಾಳ ದರ್ಶನ- ಒಂದು ಕವಿತೆಯ ವಿಮರ್ಶೆ





ಅಶ್ಫಾಕ್ ಪೀರಜಾದೆ


ಅಸ್ಪೃಶ್ಯತೆಯ ಕರಾಳ ದರ್ಶನ;
"ಇನ್ನು ದಾಹವಾಗುವದಿಲ್ಲ ಬಿಡು"

ಆನಂದ ಲಕ್ಕೂರ ಅವರ ವಿಭಾ ಸಾಹಿತ್ಯ ಪುರಸ್ಕೃತ ಕವನ ಸಂಕಲನ "ಉರಿವ ಏಕಾಂತ ದೀಪ" ಓದಿ ಮುಗಿಸಿದಾಗ ಅದರಲ್ಲಿ ನನಗೆ ಎರಡು ಕವನಗಳು ಪ್ರಮುಖ ಅನಿಸಿದವು. ಒಂದನೇಯದು 'ಅವ್ವ' ಮತ್ತು ಎರಡನೇಯದು 'ಇನ್ನು ದಾಹವಾಗುವದಿಲ್ಲ ಬಿಡು'. ಇವೆರಡರಲ್ಲಿ ಯಾವದನ್ನು ಅಭಿಪ್ರಾಯಕ್ಕಾಗಿ ಎತ್ಕೋಬೇಕು ಎಂದು ಯೋಚಿಸುವಾಗ 'ಅವ್ವ'ಕ್ಕಿಂತ ದಾಹವಾಗುದಿಲ್ಲ ಕವಿತೆ ಪ್ರಸ್ತುತ ಸಾಮಾಜಿಕ ಅರಾಜಕತೆ, ಅಸಹಿಷ್ಣತೆಯ ಹಿನ್ನಲೆಯಲ್ಲಿ ಮುಖ್ಯವೆನಿಸುದರಿಂದ ಇದನ್ನು ಮೊದಲು ಪರಿಚಯಿಸುವುದು ಅಗತ್ಯವೆನಿಸಿತು. ಇದರ ಜೊತೆಗೆ ಕವಿ ಇದನ್ನು ಒಂದು ಸತ್ಯ ಘಟನೆ ಆಧರಿಸಿ, ಮಾತಿನ ಧಾಟಿಯ ಸರಳ ಸುಂದರ ನಿರೂಪಣಾ ಶಕ್ತಿಯಿಂದ ಕಾವ್ಯಶಿಲ್ಪವನ್ನು ಓದುಗರ ಕಣ್ಮುಂದೆ ಜೀವಂತಗೊಳಿಸುತ್ತಾರೆ.

2008ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಗ್ರಾಮವೊಂದರಲ್ಲಿ ಸವರ್ಣೀಯ ಶಿಕ್ಷಕಿಯೊಬ್ಬಳು ದಲಿತ ಬಾಲಕಿ ನೀರಡಸಿ ನೀರಿನ ಮಡಿಕೆ ಮುಟ್ಟಿದಳು ಎಂಬ ಕಾರಣಕ್ಕೆ ಅವಳ ಕಣ್ಣನ್ನೆ ಕಿತ್ತು ಹಾಕಿದ ಅಮಾನವೀಯ ಘಟನೆ ಕವಿಯ ಹೂಮನಸ್ಸು ಮುದುಡುವಂತೆ ಮಾಡಿದೆ.

"ದಟ್ಟವಾಗಿ ಹಬ್ಬಿರುವ ಕಾರ್ಮೋಡಗಳ ಕಂಡು/ ಮಳೆ ಬರುತ್ತದೆಂದು ಬಯಸುತ್ತಿಲ್ಲ/ ವಿಶಾಲವಾದ ಸಮುದ್ರದಲ್ಲೂ ಕೂಡಾ/ಗಂಟಲು ತೇವಾಗುತ್ತದೆ ಎಂಬ ನಂಬಿಕೆಯಿಲ್ಲ"

ಎನ್ನುವ ಅವಿಶ್ವಾಸ, ಅಪನಂಬಿಕೆ, ಆತಂಕದಿಂದಲೇ ಆರಂಭವಾಗುವ ಕವಿತೆ ಅಸಮಾನತೆಯ ಸಮಾಜದಲ್ಲಿ ಸಮಾನತೆಯ ಮಾತುಗಳು, ಸಂಘಟನೆಗಳು, ಚಳವಳಿಗಳು, ಹೋರಾಟಗಳು ಕವಿಗೆ ಮಳೆ ಬರಿಸದ ಹುಸಿ ಮೋಡಗಳಾಗಿ ಕಾಣುತ್ತವೆ. ಸಮುದ್ರದಷ್ಟು ವಿಶಾಲವಾದ ಭರವಸೆಗಳಿದ್ದರೂ ಅವೆಲ್ಲ ದಾಹ ನೀಗಿಸದ ಉಪ್ಪು ನೀರು. ಶ್ರೇಣಿಕೃತ ಸಮಾಜದಲ್ಲಿ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ, ದಲಿತರ ಮೇಲೆ ಸವರ್ಣೀಯರ ದೌರ್ಜನ್ಯದ ಘಟನೆಗಳು ಪದೇ ಪದೇ ಘಟಿಸುತ್ತಲೇ ಇರುವುದು ಕವಿಗೆ ಪರಿಸ್ಥಿತಿ ಸುಧಾರಿಸುವ ಆಶಾಕಿರಣ ಗೋಚರಿಸುವ ಲಕ್ಷಣ ಕಾಣುತ್ತಿಲ್ಲ. ಸಮಾಜಿಕ ಸಮಾನತೆ ಬಯಸುವ ಪ್ರಗತಿಪರ ಚಿಂತಕ ಲೇಖಕನೊಬ್ಬನಿಗೆ ಸಮಾನತೆ ಎಂಬುದು ಮರೀಚಿಕೆಯಾಗಿ ಕಾಣ್ತಾಯಿದೆ.

ಉಚ್ಚ ಜಾತಿಯ ಜನ ಕೀಳ ಜಾತಿಯ ಗರ್ಭೀಣಿಯರಿಗೆ ಶಪಿಸಿದರೆ ಅಂಗವಿಕಲ ಮಕ್ಕಳು ಹುಟ್ಟುತ್ತಾರೆ ಎನ್ನುವ ಜನರ ಮೂಢನಂಬಿಕೆಗೆ ಕವಿ ದಿಗಿಲುಗೊಂಡಿದ್ದಾನೆ. ಅಷ್ಟೆಯಲ್ಲ ಹುಟ್ಟುವಾಗ ಸುಂದರವಾಗಿಯ ಹುಟ್ಟಿದ ಮಕ್ಕಳು ಸಹ ಸುವರ್ಣೀಯರ ಸಿಟ್ಟಿಗೆ ಬಲಿಯಾದರೆ ಅಂಗವಿಕಲರಾಗುತ್ತಾರೆ ಎನ್ನುವ ನಗ್ನಸತ್ಯವನ್ನು ಬಿಚ್ಚಿಡುತ್ತಾರೆ. ಅವರ ಈ ತರ್ಕಿಗೆ ಅವರ ಈ ಕಾವ್ಯನಾಯಕಿಯೇ ಸಾಕ್ಷಿಯಾಗುತ್ತಾಳೆ. ಹಾಗೇಯೇ ಅಸ್ಪೃಶ್ಯರ ಸ್ಪರ್ಶದಿಂದ ನದಿಗಳು ಸಹ ಬತ್ತಿಹೋಗಿ ಮರಭೂಮಿಯಾಗುತ್ತವೆ ಎನ್ನುವ ಜನರ ನಂಬಿಕೆಗಳು ಕವಿಯನ್ನು ವಿಚಲಿತಗೊಳಿಸಿವೆ. ಆದ್ದರಂದ ಕವಿಯ ದುಃಖಿ ಹೃದಯ -
"ಇಂಥ ನಂಬಿಕೆಗಳಿರುವ ಕಡೆ ನಿನ್ನ ಕಣ್ಣೀರು ವ್ಯರ್ಥ, ನಿನ್ನ ಕೋರಿಕೆಯೂ ವ್ಯರ್ಥ. ಹಿಟ್ಟನ ಮಡಿಕೆ ನಾಯಿ ಮುಟ್ಟಿದರು ನಡದೀತು, ಮನುಷ್ಯಳಾದ ನೀನು ಕುಡಿಯಲು ನೀರು ಕೇಳಿದರೆ ಮಾತ್ರ ನಡೆಯುವದಿಲ್ಲ" ಎಂದು ಮಲಿನ ಮನಸ್ಸುಗಳ ಮನಸ್ಥಿತಿಯನ್ನು ದಾಖಲಿಸುತ್ತಾರೆ. ಹಿಂದುಳಿದವರು ಶಾಲೆಗೆ ಹೋಗುವದೇ ಪಾಪ, ಅಂಥವರ ಪಾಲಿಗೆ ಪಾಠ ಶಾಲೆ ಅನ್ನುವದು ಜೈಲು ಸಮಾನ, ಗುರು ಬ್ರಹ್ಮ ಸ್ವರೂಪಿಯಲ್ಲ; ರಾಕ್ಷಸ ರೂಪಿ ಎನ್ನುವುದು ಮರೆತೆಯಾ ಸುರೇಖ ಎಂದು ಕವಿ ಗದ್ಗದಿತರಾಗಿ ಆ ದಲಿತ ಮಗುವನ್ನು ಪ್ರಶ್ನಿಸುತ್ತಿದ್ದರೆ ಸಹೃದಯ ಓದುಗನ ಮನಸ್ಸು ಈ ವ್ಯವಸ್ಥೆ ವಿರುದ್ಧ ಕುದಿಯುತ್ತದೆ.

"ನಾವು ಕುಡಿಯಲು ನೀರು ಕೇಳಿದರೆ ಅಪರಾಧವೆಂದು/ ನಮ್ಮನ್ನು ಗೊಬ್ಬರವಾಗಿಸಿಕೊಂಡು/
ತಮ್ಮ - ತಮ್ಮ ಹೊಲಗದ್ದೆಗಳಿಗೆ ಚೆಲ್ಲಿಕೊಳ್ಳವಂಥ/ ಇವರಿರುವ ಕಡೆ ಮಡಿಕೆಯನ್ನಾದರೂ/ ಯಾಕೆ ಮುಟ್ಟಲು ಹೋದೆ ಸುರೇಖ/ ಅದು ಕುಲಸ್ಥರ ಅಹಂಕಾರದ ಕಮಂಡಲವೆಂದು/ ತಿಳಿಯದೆ ಮಟ್ಟಿಬಿಟ್ಟಿಯಾ./
ಎಂದು ಪ್ರಶ್ನಿಸುತ್ತ ಹೋಗು ಕವಿ ಮನುಷ್ಯತ್ವ ಮರೆತವರ ಎದೆಗೆ ಇವೆ ಪ್ರಶ್ನೆಗಳಿಂದ ಇರಿಯುತ್ತಾರೆ.
" ಮೂರನೇ ಕಣ್ಣಿಗಾಗಿ/
ಇದ್ದ ಕಣ್ಣನ್ನೆ ಕಳೆದು ಕೊಂಡೆಯಲ್ಲ ಸುರೇಖ/ ಇಲ್ಲಿ ಗಂಗೆ ಅವರ ಹೇಲಿನ ಗುಂಡಿಯಲ್ಲಾದರೂ/ ಇಂಗುತ್ತದೆಯೆ ಹೊರತು/ ಬಾಯಾರಿ ನೀರಿಗಾಗಿ ಹಪತಪಿಸುತ್ತಿರುವ/ ನಿನ್ನ ಗಂಟಲೊಳಗೆ ಹೇಗೆತಾನೆ ಇಳಿಯುತ್ತದೆ"

ಇಲ್ಲಿ ಮೂರನೆ ಕಣ್ಣು ಅನ್ನುವದು ಜ್ಞಾನದ ಸಂಕೇತವಾಗುತ್ತದೆ. ಅಕ್ಷರ ಜ್ಞಾನದ ಕಣ್ಣು ಪಡೆಯಲು ಹೋಗಿ ಇದ್ದ ಕಣ್ಣಗಳನ್ನೆ ಕಳೆದುಕೊಂಡು ಜೀವನಪೂರ್ತಿ ಕಣ್ಣೀರಲ್ಲಿ ಕೈತೊಳೆಯಬೇಕಾದ ಪರಿಸ್ಥಿತಿ ಆ ಮಗುವಿಗೆ. ನೀರು (ಗಂಗೆ) ಅವರ ಸಂಡಾಸ ಗುಂಡಿಯಲ್ಲಾದರೂ ಇಳಿಯಬಹುದು ಆದರೆ ಗಂಟಲಾರಿ ಪ್ರಾಣ ಬಿಡುತ್ತಿರುವ ಸುರೇಖನಂಥವರ ಪ್ರಾಣ ಉಳಿಸಲು ಸಾಧ್ಯವೇ ಇಲ್ಲ ಎನ್ನುವಂಥ ಕಟುಸತ್ಯವನ್ನು ಬಹಿರಂಗಗೊಳಿಸುತ್ತಾರೆ. ಗಂಗಾ, ಜಮುನಾ, ಕಾವೇರಿಯಂಥ ಪವಿತ್ರ ನದಿಗಳು ಕೂಡ ನಿನ್ನ ಹೆಣವನ್ನು ಹೆತ್ತು ಸಾಗುವ ಚಟ್ಟುಗಳಾಗುತ್ತವೆ ವಿನಹ ನಿನ್ನ ದಾಹ ತಣಿಸುವದಿಲ್ಲ ಎನ್ನುವ ಕವಿ ಮಾತು ನಮಗೆ ಸ್ವಲ್ಪ ಅತಿರೇಕದ್ದು ಅನಿಸಿದರೂ ಕವಿಗೆ ಮಾತ್ರ ವರ್ಗೀಕೃತ ವ್ಯವಸ್ಥೆಯಲ್ಲಿ ಇದು ಅಸಾಧ್ಯವೆನಿಸುವದಿಲ್ಲ.

"ಇವರಿಗೆ ದಾಹವಾದರೆ/
ಹೊಲಗೇರಿಯ ನೆತ್ತರು ಕುಡಿಯುವಂಥ/ ಮೃಗಗಳಿರು ಈ ದ್ವೀಪದಲ್ಲಿ/ ಅವರು ನೀರು ಕುಡಿದು ಚೆಲ್ಲಿದ ನೀರನ್ನು ಕುಡಿದಿಯಾ?/ ಅಯ್ಯೋ ಅವರು ನಿನ್ನ ಕಣ್ಣನ್ನು ಕೀಳದೆ ಬಿಡುತ್ತಾರಾ?/
ಎಂದು ಕೇಳುವ ಕವಿ ಇದಕ್ಕೆ ಅತಿ ಕ್ರೂರ ವ್ಯಕ್ತಿಗಳು ಕೂಡ ಕೆಲವೊಂದು ಸಂದರ್ಭದಲ್ಲಿ ಸ್ವಲ್ಪ ಕಡಿಮೆ ಪ್ರಮಾಣದ ಅಮಾನವೀಯತೆ ತೋರಿದ ಪ್ರಸಂಗಗಳು ಇದಕ್ಕೆ ಪೂರಕವೆಂಬಂತೆ ದಾಖಲಿಸುತ್ತಾರೆ.
ಶಿಲುಬೆಗೇರುವಾಗ ಏಸು ನೀರಡಿಸಿ ನೀರು ಕೇಳಿದರೆ ವಿಷದ ಬಟ್ಟಲಾದರೂ ಕೊಟ್ಟರು, ಕೈದಿಗಳು ದಾಹವಾಗಿ ನೀರು ಕೇಳಿದರೆ ಪೋಲೀಸರು ಬಿಸಿನೀರಾದರು ಕುಡಿಯಲಿಕ್ಕೆ ಕೊಟ್ಟಾರು, ಆದರೆ ಸುರೇಖಳಂಥ ನತದೃಷ್ಟರು ಕುಡಿಯಲು ನೀರು ಕೇಳಿದರೆ ಅವರ ಕಣ್ಣುಗಳನ್ನೇ ಕಿತ್ತು ರಕ್ತದ ಕಣ್ಣೀರು ಕುಡಿಸುತ್ತಾರೆ ಎಂದು ಕೆಂಡಾಮಂಡವಾಗುತ್ತಾರೆ.
"ಒಂದು ಕಣ್ಣು ಕಣ್ಣಲ್ಲ ಸುರೇಖ/
ಒಂದು ಮಗು ಅದು ಮಗುವಲ್ಲ !/
ನೀನು ಈಗಿರುವ ಏಕೈಕ ಕಣ್ಣಿನಿಂದ/
ಮಹಾಯುದ್ಧದ ಕನಸು ಕಾಣು/
ನೀರು ಕೇಳಿದರೆ ನೆತ್ತರು ಕೊಡುವ ಕಡೆ/ ನೆತ್ತರು ಕಡಿಯುವುದು ತಪ್ಪಿಲ್ಲವೆಂದು/ ಹೇಳಲು ಸಿದ್ಧಳಾಗು ಸುರೇಖ ಸಿದ್ಧಳಾಗು"
ಎಂದು ಕವಿ ಆಕ್ರೋಷದಿಂದ ಅಮಾನವೀಯತೆ ಮೆರೆಯುವ ಅಗ್ರ ಜಾತೀಯ ಜನರಿಗೆ ಬುದ್ದಿ ಕಲಿಸಲು ಮುಂದಾಗುವಂತೆ ಕರೆ ನೀಡುತ್ತಾರೆ.

ಮೇಲ್ನೋಟಕ್ಕೆ ಕವಿತೆ ಅತಿಸರಳ ಅನ್ನಿಸಿದರು ತನ್ನ ಅಂತರಾಳದಲ್ಲಿ ಈಗಲೋ ಆಗಲೋ ಆಸ್ಪೋಟಿಸಬಹುದಾದಂಥ ಜ್ವಾಲಾಮುಖಿಯನ್ನೆ ಅಡಗಿಸಿಕೊಂಡಿದೆ. ಸಮಾಜದಲ್ಲಿ ನಡೆಯುತ್ತಿರುವಂಥ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧದ ಧ್ವನಿಯಾಗಿದೆ. ಅಮಾಯಕ ದಲಿತರನ್ನು ಬತ್ತಲೆ ಮಾಡಿ ಮಜಾ ಪಡುತ್ತಿರುವ, ಅವರನ್ನು ಹಾಡುಹಗಲೇ ಬೆಂಕಿ ಹಚ್ಚಿ ಸುಟ್ಟು ಅಮಾನವೀಯತೆ ತೋರುತ್ತಿರುವ ವಿಕೃತ ಮನಸ್ಸುಗಳು ಇರುವವರೆಗೂ ಈ ಕಾವ್ಯ ಪ್ರಸ್ತುತವೆನ್ನಿಸುತ್ತದೆ. ಕಾವ್ಯದ ಕೊನೆಯಲ್ಲಿ "ನೀರು ಕೇಳಿದರೆ ನೆತ್ತರ ಕೊಡುವ ಕಡೆ,ರಕ್ತ ಕುಡಿಯುವುದು ತಪ್ಪಲ್ಲ"ವೆಂದು ಸಾರುವ ಮೂಲಕ ದಮನಿತ ವರ್ಗದಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಸುವ ಕಾರ್ಯ ಕವಿ ಈ ಕವನದ ಮೂಲಕ ಮಾಡುವುದು ತುಂಬ ಅರ್ಥಪೂರ್ಣವಾಗಿ ಕಾಣುತ್ತದೆ.

- ಅಶ್ಫಾಕ್ ಪೀರಜಾದೆ
ಗೋಕಾಕ
ಮೊ; 9901180475

Tuesday, December 08, 2015

ಕಪ್ಪು ಪಟ್ಟಿಗೆ ವಂಚಕ ಸಂಸ್ಥೆಗಳು : ದಿಗಿಲುಗೊಂಡ ಸಾಂಸ್ಕೃತಿಕ ದಲ್ಲಾಳಿಗಳು



-ಶಶಿಕಾಂತ ಯಡಹಳ್ಳಿ

“ಸಂಸ್ಕೃತಿ ಇಲಾಖೆಯ ಹೆಗ್ಗಣಗಳಿಗೆ ಬೋನು”



ಸರಕಾರಿ ಇಲಾಖೆಗಳು ಎಂದರೆ ಮೇಯುವ ತಾಕತ್ತಿರುವವರಿಗೆ ಹುಲುಸಾದ ಹುಲ್ಲುಗಾವಲು ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಹೊರತಲ್ಲ. ಸುಮಾರು ಮುನ್ನೂರು ಕೋಟಿ ರೂಪಾಯಿ ವಾರ್ಷಿಕ ಬಜೆಟ್ ಇರುವ ಸಂಸ್ಕೃತಿ ಇಲಾಖೆಯು ಮೊದಲಿನಿಂದಲೂ ಸಾಂಸ್ಕೃತಿಕ ದಲ್ಲಾಳಿಗಳೆಂಬ ಹೆಗ್ಗಣಗಳ ಆಡಂಬೋಲವಾಗಿದೆ. ಹೊರಗಿನ ಹೆಗ್ಗಣಗಳ ಜೊತೆಗೆ ಒಳಗಿನ ಹೆಗ್ಗಣಗಳೂ ಸೇರಿ ಇಲಾಖೆಯ ಹಣ ಲೂಟಿಗೊಳ್ಳುತ್ತಲೇ ಬಂದಿದೆ. ಇಲಾಖೆಯ ಮೇಲೆ ಹಲವಾರು ಲೋಕಾಯುಕ್ತ ಕೇಸುಗಳಾಗಿವೆ, ಕಛೇರಿಗೆ ಲೆಕ್ಕ ಪರಿಶೀಲನಾಧಿಕಾರಿಗಳು ನುಗ್ಗಿಯಾಗಿದೆ... ಏನೇ ಆದರೂ ಲೂಟಿ ಮಾತ್ರ ನಿರಂತರವಾಗಿದೆ. ಬೇಲಿಯೇ ಎದ್ದು ಕಳ್ಳರನ್ನು ಒಳಗೆ ಬಿಟ್ಟುಕೊಂಡು ಹೊಲ ಮೇಯುವುದು ಇಲಾಖೆಯೊಳಗಿನ ಅಘೋಷಿತ ಚಟುವಟಿಕೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ದಯಾನಂದರವರು ಬರುವವರೆಗೂ ಲೂಟಿ ಸಾಮ್ರಾಜ್ಯ ಸರಕಾರಿ ಹಾಗೂ ಸಾಂಸ್ಕೃತಿಕ ದಲ್ಲಾಳಿಗಳಿಂದ  ನಿರಾತಂಕವಾಗಿ ನಡೆಯುತ್ತಲೇ ಬಂದಿತ್ತು. ಪರ್ಸೆಂಟೇಜ್ಗಳ ವ್ಯವಹಾರದಲ್ಲಿ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಚಪ್ರಾಸಿಯವರೆಗೂ ಯೋಗ್ಯತೆಗೆ ತಕ್ಕಂತೆ ಪಾಲುಗಾರಿಕೆ ದೊರೆಯುತ್ತಿತ್ತು.
ಆದರೆ... ಯಾವಾಗ ದಯಾನಂದ್ ಬಂದು ಇಲಾಖೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರೋ, ಕೊಬ್ಬಿ ಬಲಿತು ಹೋಗಿದ್ದ ದಲ್ಲಾಳಿ ಹೆಗ್ಗಣಗಳ ನಿಯಂತ್ರಣಕ್ಕೆ ಸಾವಕಾಶವಾಗಿ ಬಲೆಬೀಸತೊಡಗಿದರೋ ಆಗ ನಿಧಾನವಾಗಿ ಸಂಸ್ಕೃತಿ ಇಲಾಖೆಯಲ್ಲಿ ತಳಮಳ ಶುರುವಾಯಿತು. ಯಾವಾಗ ದಯಾನಂದರವರ ಹೆಗ್ಗಣ ನಿಯಂತ್ರಣ ಅಭಿಯಾನಕ್ಕೆ  ಕನ್ನಡ ಮುತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀಯವರ ಸಹಕಾರವೂ ದೊರೆಯಿತೋ ಆಗ ಸಂಸ್ಕೃತಿ ಇಲಾಖೆಯ ದಲ್ಲಾಳಿ ವರ್ಗದ ಬುಡಕ್ಕೆ ಬಿಸಿನೀರು ಕಾಯತೊಡಗಿತು. ಮೊಟ್ಟಮೊದಲು ಅತೀ ಹೆಚ್ಚು ಹಣ ಅಪಾತ್ರರಿಗೆ ದಕ್ಕುತ್ತಿರುವುದು ಹಾಗೂ ಅನಗತ್ಯವಾಗಿ ಸೋರಿಹೊಗುತ್ತಿರುವುದು ಇಲಾಖೆಯ ಕ್ರಿಯಾಯೋಜನೆ ಕಾರ್ಯಕ್ರಮದಲ್ಲಿ ಎನ್ನುವುದನ್ನು ಅರಿತ ದಯಾನಂದರವರು ಉಮಾಶ್ರೀಯವರಿಗೆ ವರದಿ ಸಲ್ಲಿಸಿದರು. ಹಲವಾರು ವರ್ಷಗಳಿಂದ ಪ್ರಸಾದ ತಿನ್ನಿಸಿದವರಿಗೆಲ್ಲಾ ಬೇಕಾದಷ್ಟು ವರಕೊಡುತ್ತಿದ್ದ ಇಲಾಖೆಯೊಳಗಿನ ಪೂಜಾರಿಗಳ ನಿಯಮಿತ ಪರ್ಸೆಂಟೇಜ್ ಆದಾಯವನ್ನು ನಿಯಂತ್ರಿಸಲು ಕ್ರಿಯಾಯೋಜನೆ ರದ್ದು ಪಡಿಸದೇ ಬೇರೆ ದಾರಿಯೇ ಇರಲಿಲ್ಲ. ಉಮಾಶ್ರೀಯವರ ಬೆಂಬಲದೊಂದಿಗೆ ಯಾವಾಗ ಕ್ರಿಯಾಯೋಜನೆ ಎನ್ನುವ ಹುಲುಸಾದ ಹುಲ್ಲುಗಾವಲಿನ ಯೋಜನೆಯನ್ನು ರದ್ದುಮಾಡಲಾಯಿತು. ಅದರ ಬದಲಾಗಿ ಪ್ರತಿ ವರ್ಷ ಆಯಾ ಕ್ರೇತ್ರದ ಕುರಿತು ಅನುಭವ ಇರುವವರ ಸಮೀತಿಯನ್ನು ರಚಿಸಿ ನಿಜವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳನ್ನು , ಬಿ, ಸಿ ವಿಭಾಗಗಳಾಗಿ ಗುರುತಿಸಿ ಅನುದಾನವನ್ನು ಕೊಡುವ ಯೋಜನೆಯನ್ನು ಜಾರಿಗೆ ತಂದು ಇಲಾಖೆಯ ಹೊರಗಿರುವ ಹೆಗ್ಗಣಗಳಿಗೆ ಒಳಬರುವ ದಾರಿಯನ್ನು ಬಂದ್ ಮಾಡಲಾಯಿತು. ತದನಂತರ ಇಡೀ ಇಲಾಖೆಯನ್ನು ಕಾಗದರಹಿತಗೊಳಿಸಿ ಗಣಕೀಕರಣ ಮಾಡುವುದರ ಮೂಲಕ ಇಲಾಖೆಯ ಒಳಗಡೆ ಇರುವ ಹೆಗ್ಗಣಗಳ ಕೈಬಾಯಿ ಕಟ್ಟುವ ಪ್ರಯತ್ನ ಮಾಡಲಾಯಿತು.

ಕ.ಸಂ ಮಂತ್ರಿ ಉಮಾರ್ಶೀಯವರು
ಆಸೆಬುರುಕ ಭ್ರಷ್ಟ ನೌಕರರಿಗೆ ಅಮೇದ್ಯ ತಿನ್ನಿಸಿ ಅನುದಾನವನ್ನು ಗಿಟ್ಟಿಸಿ, ಉದ್ದೇಶಿತ ಕಾರ್ಯಕ್ರಮಗಳನ್ನು ಮಾಡದೇ ನಕಲಿ ಪೊಟೋ ಹಾಗೂ ರಿಪೋರ್ಟ ನೀಡಿ ಲಕ್ಷಾಂತರ ಹಣವನ್ನು ಪಡೆಯುತ್ತಿದ್ದ ಕೆಲವಾರು ಸಾಂಸ್ಕೃತಿಕ ದಲ್ಲಾಳಿಗಳ ಬುಡಕ್ಕೆ ಬಾಂಬು ಸಿಡಿದಂತಾಯಿತು. ಅವರ ಅಕ್ರಮ ಆದಾಯದ ಮೂಲವೊಂದು ನಿಂತುಹೋಯಿತು ಎಂದು ಸಿಡಿದೆದ್ದರು. ಗುಂಪು ಕಟ್ಟಿಕೊಂಡು ಬಂದ ದಲ್ಲಾಳಿ ಪಡೆ ಉಮಾಶ್ರೀಯವರನ್ನು ಕಲಾಕ್ಷೇತ್ರದೊಳಗೇ ಘೇರಾವ್ ಹಾಕಿದರು. ಅನ್ಯಾಯ ಆಗಿದೆ ಎಂದು ಬೊಬ್ಬಿರಿದರು. ದಲ್ಲಾಳಿ ಗುಂಪಿನ ಆಟೋಟೋಪಕ್ಕೆ ಮಣಿದ ಉಮಾಶ್ರೀಯವರು ಎಲ್ಲವನ್ನೂ ಇನ್ನೊಮ್ಮೆ ಪರಿಷ್ಕರಿಸುವುದಾಗಿ ಮಾತುಕೊಟ್ಟರು. ಆದರೆ... ದಯಾನಂದರವರು ತಮ್ಮ ಹೆಗ್ಗಣ ನಿಯಂತ್ರಣ ಅಭಿಯಾನವನ್ನು ಮುಂದುವರೆಸಿದರು. ಇದರಿಂದಾಗಿ ಎಲ್ಲಾ ಕಲಾವಿಭಾಗದ ದಲ್ಲಾಳಿಗಳಿಂದ ವಿಪರೀತ ವಿರೋಧ ಎದುರಾಯಿತು. ರಾಜಕೀಯ ಒತ್ತಡಗಳೂ ಹೆಚ್ಚಾದವು. ಆದರು ಯಾವ ಒತ್ತಡಕ್ಕೂ ಮಣಿಯದ ದಯಾನಂದರವರು ಸಮಿತಿ ಆಯ್ಕೆ ಮಾಡಿದ ಸಂಸ್ಥೆಗಳಿಗೆ ಮಾತ್ರ ಅನುದಾನವನ್ನು ಮಂಜೂರು ಮಾಡಿತೊಡಗಿದರು. ದಲ್ಲಾಳಿ ವರ್ಗವನ್ನು ಇಲಾಖೆಯಿಂದ ದೂರವಿಡಲು ತಂತ್ರಗಾರಿಕೆಯನ್ನು ಹೆಣೆಯತೊಡಗಿದರುಅದರ ಭಾಗವಾಗಿಯೇ ಸಾಮ ಬೇಧ ಹಾಗೂ ದಂಡ ಪ್ರಯೋಗಕ್ಕೆ ಮುಂದಾದರು.... ದಲ್ಲಾಳಿ ಪಡೆ ಅನುದಾನ ಪಡೆಯಲು ಅನುಸರಿಸಿದ ವಾಮಮಾರ್ಗಗಳನ್ನು ಅರಿತುಕೊಂಡು ಅವರನ್ನು ಕಾನೂನಿನ ಬಲೆಯಲ್ಲಿ ಸಿಲುಕಿಸಿ ಹಣಿದು ಹಾಕಲು ಪ್ಲಾನ್ ಸಿದ್ದಗೊಂಡಿತು.
ಕರ್ನಾಟಕದ ಕಲೆ-ಸಂಸ್ಕೃತಿ ಉಳಿಸಿ ಬೆಳೆಸಲು ಸರಕಾರ ಕೊಟ್ಯಾಂತರ ಹಣವನ್ನು ಪ್ರತಿವರ್ಷ ಸಾಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡುತ್ತದೆ. ಕಲೆ ಮತ್ತು ಸಂಸ್ಕೃತಿಯ ಹೆಸರಲ್ಲಿ ಸುಲಭದಲ್ಲಿ ಹಣ ಹೊಡೆಯಬಹುದು ಎನ್ನುವುದನ್ನು ಅರಿತುಕೊಂಡಿದ್ದ ಕೆಲವು ಧನದಾಹಿಗಳ ಗುಂಪು ಹಲವಾರು ಸಂಘ ಸಂಸ್ಥೆಗಳನ್ನು ಬೇನಾಮಿಯಾಗಿ ಸಹಕಾರಿ ಸಂಘಗಳ ಕಾನೂನಿನಡಿಯಲ್ಲಿ ನೋಂದಣಿ ಮಾಡಿಸಿದ್ದವು. ನೋಂದಣಿ ಆಗಿ ಮೂರು ವರ್ಷ ಆಗುತ್ತಿದ್ದಂತೆ ಸಂಸ್ಕೃತಿ ಇಲಾಖೆಯಲ್ಲಿ ಈಗಾಗಲೆ ಪಳಗಿದ ಅನುಭವಿ ದಲ್ಲಾಳಿಗಳನ್ನು ಹಿಡಿದುಕೊಂಡು ಅವರ ಮೂಲಕ ಇಲಾಖೆಯ ಅಧಿಕಾರಿಗಳ ವಿಶ್ವಾಸ ಗಿಟ್ಟಿಸಿಕೊಂಡು ಸರಕಾರಿ ಅನುದಾನವನ್ನು ಗಿಟ್ಟಿಸಿಕೊಂಡು ಹಣ ಲೂಟಿಮಾಡುವುದನ್ನು ವರ್ಷಾನುಗಂಟಲೇ ಮುಂದುವರೆಸಿಕೊಂಡೇ ಬಂದಿದ್ದವು. ಕೆಲವರಂತೂ ಬೇನಾಮಿಯಾಗಿ ನಕಲಿ ವಿಳಾಸಗಳನ್ನು ಕೊಟ್ಟು ಎರಡು ಮೂರು ಸಂಸ್ಥೆಗಳನ್ನು ಹೆಂಡತಿ ಮಕ್ಕಳ ಹೆಸರಲ್ಲಿ ನೋಂದಣಿ ಮಾಡಿಸಿ ಇಲಾಖೆಯ ಅನುದಾನಕ್ಕೆ ಕನ್ನ ಹಾಕತೊಡಗಿದರು.
 
ಇಂತಹ ಕೆಲವಾರು ಸಂಸ್ಥೆಗಳಿಗೆ ಯಾವುದೇ ಅಸ್ತಿತ್ವ ಇಲ್ಲದೇ ಕೇವಲ ಲೆಟರ್ಹೆಡ್ಗಳ ಸಂಘಟನೆಗಳಾಗಿದ್ದವು. ಯಾವುದೇ ಕಾರ್ಯಕ್ರಮಗಳನ್ನು ಮಾಡದೇ ಇಲಾಖೆಯ ಅನುದಾನವನ್ನು ದುರ್ಬಳಿಕೆ ಮಾಡಿಕೊಡುವುದನ್ನೇ ಕಾಯಕವಾಗಿಸಿಕೊಂಡಿದ್ದವು. ಇನ್ನು ಕೆಲವು ಸಂಸ್ಥೆಗಳು ನಾಲ್ಕಾರು ಲಕ್ಷ ಹಣ ಪಡೆದು ನಾಮಕಾವಸ್ಥೆಯಾಗಿ ಸಾವಿರಾರು ರೂಪಾಯಿಗಳ ಖರ್ಚುಮಾಡಿ ನಕಲಿ ರಿಪೋರ್ಟ ತಯಾರಿಸಿಕೊಟ್ಟು ಇಲಾಖೆಯ ಅನುದಾನವನ್ನು ಪಡೆಯುವುದನ್ನೇ ರೂಢಿಮಾಡಿಕೊಂಡಿದ್ದವು. ಇದಕ್ಕಾಗಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ಸರಕಾರದಿಂದಲೇ ಅನುದಾನ ಮಂಜೂರು ಮಾಡುವಂತೆ ಆದೇಶವನ್ನೂ ಪಡೆದುಕೊಂಡವರಿದ್ದರು. ಯಾರು ಯಾವಾಗ ಎಲ್ಲಿ ಯಾವ ಕಾರ್ಯಕ್ರಮಗಳನ್ನು ಹೇಗೆ ಮಾಡಿದರು ಎನ್ನುವುದನ್ನು ಪರಿಶೀಲಿಸುವ ಗೋಜಿಗೆ ಹೋಗದ ಇಲಾಖೆಯ ಅಧಿಕಾರಿಗಳು ತಮ್ಮ ಕಮಿಶನ್ ಪಡೆದು ಹಣವನ್ನು ಪ್ರತಿ ವರ್ಷ ಮಾರ್ಚ ಒಳಗೆ ಬಿಡುಗಡೆ ಮಾಡುತ್ತಲೇ ಬಂದಿದ್ದರು. ರಾಜಕೀಯ ಪ್ರಭಾವ ಹಾಗೂ ಹಣದಾಸೆಗಾಗಿ ತಮ್ಮ ನಿಯತ್ತನ್ನೇ ಮಾರಿಕೊಂಡ ಇಲಾಖೆಯ ನೌಕರರು ಹಾಗೂ ಅಧಿಕಾರಿಗಳು ಉಂಡ ಮನೆಗೆ ಕನ್ನ ಹಾಕಲು ಕಳ್ಳರಿಗೆ ಸಹಕಾರಿಯಾದರುಹೀಗಾಗಿ ಇಡೀ ಕನ್ನಡ ಭವನ ಎನ್ನುವುದು ಬಹುತೇಕ ಸಾಂಸ್ಕೃತಿಕ ದಲ್ಲಾಳಿಗಳಿಂದಲೇ ತುಂಬಿ ಹೋಗಿರುತ್ತಿತ್ತು. ಇಲಾಖೆಯ ಬಹುತೇಕ ಹಣ ಅಯೋಗ್ಯರಿಗೆ ಹರಿದು ಹೋಗುತ್ತಿದ್ದುದರಿಂದ ನಿಜವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬಯಸುವವರು ಅನುದಾನ ಪಡೆಯಲು ಹರಸಾಹಸ ಪಡಬೇಕಾಗುತ್ತಿತ್ತು. ಎಷ್ಟೇ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ಮಾಡಿದವರಿದ್ದರೂ ಇಲಾಖೆಯ ಆಯಕಟ್ಟಿನ ಪೂಜಾರಿಗಳಿಗೆ ಪ್ರಸಾದ ಕೊಡದಿದ್ದರೆ ಪೈಲುಗಳು ಮುಂದೆ ಹೋಗುವುದು ಸಾಧ್ಯವೇ ಇಲ್ಲವೆನ್ನುವುದು ಎಲ್ಲರಿಗೂ ಖಚಿತವಾಗಿತ್ತು. ಹೀಗಾಗಿ ಸ್ವಂತ ದುಡ್ಡು ಹಾಕಿ ನಿಜವಾಗಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದವರೂ ಸಹ ಲಂಚ ಕೊಟ್ಟೇ ಅನುದಾನದ ಚೆಕ್ನ್ನು ಪಡೆಯುವಂತಹ ಒಂದು ಭ್ರಷ್ಟ ವ್ಯವಸ್ಥೆ ಸಂಸ್ಕೃತಿ ಇಲಾಖೆಯ ನರನಾಡಿಗಳಲ್ಲಿ ರೂಪಗೊಂಡಿದ್ದಂತೂ ಸುಳ್ಳಲ್ಲ.
ಸಂಸ್ಕೃತಿ ಇಲಾಖೆ ನಿರ್ದೇಶಕ ದಯಾನಂದರವರು
ಇಂತಹ ರಿಪೇರಿ ಮಾಡಲಾಗದಂತಹ ಭ್ರಷ್ಟಾತಿ ಭ್ರಷ್ಟ ವ್ಯವಸ್ಥೆಗೆ ಸರ್ಜರಿ ಮಾಡಲು ದಯಾನಂದರವರು ಮುಂದಾದರು. ಅವಸರಕ್ಕೆ ಬಿದ್ದು ಹುಂಬುತನದಿಂದ ದಲ್ಲಾಳಿ ಲಾಬಿಯನ್ನು ಮಟ್ಟ ಹಾಕಲು ಹೋಗಿ ಕೈಸುಟ್ಟುಕೊಳ್ಳುವ ಬದಲು ಹಂತಹಂತವಾಗಿ ಜಾಣತನದಿಂದ ಇಲಾಖೆಯ ಒಳ ಹಾಗೂ ಹೊರಗಿನ ಹೆಗ್ಗಣಗಳನ್ನು ನಿಯಂತ್ರಿಸುವ ಕೆಲಸವನ್ನು ದಯಾನಂದರವರು ಕಂತು ಕಂತಾಗಿ ಮಾಡತೊಡಗಿದರು. ರಾಜಕೀಯ ಬೆಂಬಲ ಇಲ್ಲದಿದ್ದರೆ ದಲ್ಲಾಳಿ ಪಡೆ ತಮ್ಮನ್ನು ಎತ್ತಂಗಡಿ ಮಾಡಿಸುವುದು ದಿಟ ಎನ್ನುವುದನ್ನು ಅರಿತ ನಿರ್ದೇಶಕ ದಯಾನಂದರವರು ತಾವು ಮಾಡುವ ಎಲ್ಲಾ ಸುಧಾರಣಾ ಕೆಲಸಗಳಿಗೆ ಮಂತ್ರಿಣಿ ಉಮಾಶ್ರೀಯವರ ಬೆಂಬಲವನ್ನು ಪಡೆಯುತ್ತಾ ಹುಷಾರಾಗಿ ಪ್ರತಿ ಹೆಜ್ಜೆಗಳನ್ನು ಲೆಕ್ಕಾಚಾರದಲ್ಲಿ ಇಡುತ್ತಾ ಸಾಗಿದ್ದು ಅಭಿನಂದನೀಯ. ಇಂತಹ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಇಚ್ಚಾಶಕ್ತಿ ಇರುವ ಅಧಿಕಾರಿಗಾಗಿ ಇಡೀ ಸಂಸ್ಕೃತಿ ಇಲಾಖೆ ಇಲ್ಲಿವರೆಗೂ ಕಾಯುತ್ತಿತ್ತು. ಇಷ್ಟು ದಿನ ಸಾಮ ಬೇಧಗಳಿಗೆ ಬಗ್ಗದ ಇಲಾಖೆಯಲ್ಲಿ ಬೇರು ಬಿಟ್ಟ ಸಾಂಸ್ಕೃತಿಕ ದಲ್ಲಾಳಿ ಪಡೆಗಳ ಮೇಲೆ ದಂಡ ಪ್ರಯೋಗಕ್ಕೆ ದಯಾನಂದರವರು ಆದೇಶಿಸಿದ್ದಾರೆಪಡೆದ ಅನುದಾನಕ್ಕೆ ಸರಿಯಾಗಿ ಲೆಕ್ಕ ಕೊಡದ ನಲವತ್ತಕ್ಕೂ ಹೆಚ್ಚು ಸಂಸ್ಥೆಗಳ ಮುಖ್ಯಸ್ತರುಗಳಿಗೆ ಲೆಕ್ಕ ಕೊಡದಿದ್ದರೆ ಬ್ಲಾಕ್ಲಿಸ್ಟ್ಗೆ ಸೇರಿಸಲಾಗುವುದೆಂದು ಆದೇಶಿಸಿದ್ದಾರೆ.    ಅನುದಾನ ದುರುಪಯೋಗ ಪಡಿಸಿಕೊಂಡ ಸಂಸ್ಥೆಗಳ ವಿವರವನ್ನು ಕೊಡಲು ತಮ್ಮ ಆಧೀನಾಧಿಕಾರಿಗಳಿಗೆ ಆಜ್ಞಾಪಿಸಿದ್ದಾರೆ. ಅವರ ಆದೇಶದನುಸಾರ ಕಳೆದ ಐದು ವರ್ಷದಲ್ಲಿ ನಕಲಿ ವಿಳಾಸ ಕೊಟ್ಟು ಸರಕಾರದ ಅನುದಾನ ದುರುಪಯೋಗಪಡಿಸಿಕೊಂಡ ಐವತ್ತರಷ್ಟು ಬೇನಾಮಿ ಸಂಸ್ಥೆಗಳ ಸಮಗ್ರ ಮಾಹಿತಿ ದಯಾನಂದರವರ ಟೇಬಲ್ ಮೇಲಿದೆ. ಅನುದಾನ ಬಳಕೆ ಮಾಡಿಕೊಂಡಿರುವ ಕಾರ್ಯಕ್ರಮಗಳ ಅಸಲಿ ವಿವರಗಳನ್ನು ನಿಗಧಿತ ಅವಧಿಯೊಳಗೆ ಸಲ್ಲಿಸಬೇಕೆಂದು ಇನ್ನೂ ಅನೇಕ ಸಂಸ್ಥೆಗಳಿಗೆ ಎಚ್ಚರಿಕೆ ನೊಟೀಸ್ ಕೊಡಲಾಗಿತ್ತು. ಸಮರ್ಪಕ ಉತ್ತರ ಬಾರದ.. ಲೆಕ್ಕಪತ್ರಗಳನ್ನು ಕೊಡಲಾಗದ ಎಲ್ಲಾ ಸಂಸ್ಥೆಗಳನ್ನು ಪರಿಶೀಲನೆ ತೀವ್ರಗೊಳಿಸಲಾಗಿದ್ದು ವಂಚನೆ ಪತ್ತೆಕಾರ್ಯ ಭರದಿಂದ ನಡೆಯುತ್ತಿದೆ. ನಕಲಿ ವಿವರ ಹಾಗೂ ಸುಳ್ಳು ಲೆಕ್ಕ ಕೊಟ್ಟಿದ್ದು ಸಾಬೀತಾದರೆ ಅಂತಹ ಸಂಸ್ಥೆಗಳ ಮುಖ್ಯಸ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದು ಖಚಿತವಾಗಿದೆ.
ಎಷ್ಟೇ ಸಲ ವಿವರ ಕೇಳಿದರೂ ಕೊಡದವರಿಗೆ ಬಿಸಿ ಮುಟ್ಟಿಸಲೆಂದೇ ಕಳೆದ ವಾರ ಎರಡು ನಕಲಿ ಸಂಸ್ಥೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಕಾಮಾಕ್ಷಿಪಾಳ್ಯದ ಶ್ರೀ ಅಣ್ಣಮ್ಮ ದೇವಿ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ರಾಜಾಜಿನಗರದ ರಂಗೋತ್ರಿ ಮಕ್ಕಳ ಕಲಾಶಾಲೆ ಸಂಸ್ಥೆಗಳ ಮೇಲೆ ಎಸ್.ಜೆ.ಪಾರ್ಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಇನ್ನೂ ಹಲವಾರು ಹಲಾಲುಕೋರ ಸಂಸ್ಥೆಗಳ ತಲೆಯ ಮೇಲೆ ಕಾನೂನು ಕ್ರಮದ ತೂಗುಗತ್ತಿ ತೂಗುತ್ತಲಿದೆ. ಕೃಷ್ಣ ಮೂರ್ತಿ ಎನ್ನುವವರು ಅಣ್ಣಮ್ಮ ದೇವಿ ಕಲಾ ವೇದಿಕೆ ಹೆಸರಲ್ಲಿ ಎರಡು ವರ್ಷಗಳಲ್ಲಿ ಪಡೆದ ಅನುದಾನ ಎಂಟು ಲಕ್ಷ ರೂಪಾಯಿಗಳು. ಇದಕ್ಕೆ ಸುಳ್ಳು ಲೆಕ್ಕಪತ್ರಗಳ ಆಡಿಟ್ ಮಾಡಿಸಿ ಕೊಟ್ಟು ಹಣ ಪಡೆಯಲಾಗಿದೆ. ಇನ್ಯಾರೋ ಮಾಡಿದ ಕಾರ್ಯಕ್ರಮಗಳ ಪೊಟೋಗಳನ್ನು ಲಗತ್ತಿಸಲಾಗಿದೆ. ನಕಲಿ ಸಂಸ್ಥೆ ಕೊಟ್ಟ ಲೆಕ್ಕವನ್ನೇ ಕಣ್ಣು ಮುಚ್ಚಿ ನಂಬಿ ತಮ್ಮ ಪಾಳು ಪಡೆದು ಹಣ ಮಂಜೂರು ಮಾಡಲಾಗಿದೆ. ಕೃಷ್ಣಮೂರ್ತಿ ಎನ್ನುವ ನುಂಗಣ್ಣ ತನ್ನ ಬೇನಾಮಿ ಸಂಸ್ಥೆಗೆ ಅನುದಾನ ನೀಡಬೇಕೆಂದು ೨೦೧೩ ಫೆ. ರಂದು ಸರಕಾರದಿಂದಲೇ ಆದೇಶವನ್ನು ತಂದಿದ್ದಾನೆದಯಾನಂದರವರ ಆದೇಶಕ್ಕೆ ಮಣಿದು ಇಲಾಖೆಯ ಅಧಿಕಾರಿಗಳು ಸಂಸ್ಥೆಗೆ ಪತ್ರ ಬರೆದರೆ ಉತ್ತರ ಬರಲಿಲ್ಲ. ಹೋಗಿ ನೋಡಿದರೆ ವಿಳಾಸದಲ್ಲಿ ಅಂತಹ ಸಂಸ್ಥೆಯೇ ಇರಲಿಲ್ಲ. ಇದು ಇಲಾಖೆಯ ಅಧಿಕಾರಿಗಳ ಜಾಣ ನಿರ್ಲಕ್ಷಕ್ಕೆ ಅತಿ ದೊಡ್ಡ ಸಾಕ್ಷಿಯಾಗಿದೆ.
ಇನ್ನೊಬ್ಬ ರಾಜಕೀಯದ ವ್ಯಕ್ತಿ ಕೆ.ಎಚ್.ಕುಮಾರ್ ಎನ್ನುವ ಮಹಾಶಯ ರಾಜಾಜಿನಗರದ ರಾಂಮಂದಿರ ಆಟದ ಮೈದಾನದ ವಿಳಾಸ ನೀಡಿ ರಂಗೋತ್ರಿ ಮಕ್ಕಳ ರಂಗಶಾಲೆ ಎಂಬ ಸಂಸ್ಥೆ ನೋಂದಣಿ ಮಾಡಿಸಿ ಲಕ್ಷಾಂತರ ಹಣ ಅನುದಾನ ಪಡೆದು ಗುಳುಂ ಮಾಡಿದ್ದು ಯಾವುದೇ ಕಾರ್ಯಕ್ರಮವನ್ನೂ ರೂಪಿಸಿಲ್ಲ ಎಂದು ಇಲಾಖೆ ಆರೋಪಿಸಿದೆ. ಅಸಲಿಗೆ ಆಟದ ಮೈದಾನದಲ್ಲಿ ಹುಡುಕಿದರೂ ಯಾವುದೇ ರಂಗಶಾಲೆಯೂ ಇಲ್ಲ. ಕುಮಾರ್ ಎನ್ನುವ ಕಿಲಾಡಿ ದಯಾನಂದರವರ ಮೇಲೆಯೇ ಕಾಲೇಜು ರಂಗಭೂಮಿ ಪ್ರಾಜೆಕ್ಟನಲ್ಲಿ ಅಧಿಕಾರ ದುರುಪಯೋಗ ಎಂದು ಲೋಕಾಯುಕ್ತಕ್ಕೆ ದೂರು ಕೊಟ್ಟು ಕೇಸ್ ಹಾಕಿದ್ದು, ತನ್ನೆಲ್ಲಾ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಇಲಾಖೆಯ ನಿರ್ದೇಶಕರಿಗೆ ಬೆದರಿಕೆಯನ್ನು ಹಾಕಿದ್ದಾನಂತೆ.... ಗುಂಪು ಕಟ್ಟಿಕೊಂಡು ಬಂದು ಉಮಾಶ್ರೀಯವರನ್ನು ಘೇರಾವ್ ಹಾಕಿದ್ದೂ ಸಹ ಇದೇ ಕುಮಾರ್ ಕಂಠೀರವನೇ. ಇದೆಲ್ಲವನ್ನು ಸಹಿಸುವಷ್ಟು ದಿನ ಸಹಿಸಿದ ದಯಾನಂದ ಸಾಹೇಬರು ಈಗ ಕುಮಾರ್ ಎನ್ನುವವರ ಬೇನಾಮಿ ಸಂಸ್ಥೆಯ ಮೂಲವನ್ನು ಕಂಡು ಹಿಡಿದು ಬುಡಕ್ಕೆ ಬತ್ತಿ ಇಟ್ಟು ಸೇಡು ತೀರಿಸಿಕೊಂಡಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸುವ ಸ್ಕೆಚ್ ಸಿದ್ದಗೊಳಿಸಿದ್ದಾರೆ.
   
 ಇಷ್ಟು ದಿನ ದಯನಾಂದರವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕುತ್ತಿದ್ದ ಹಾಗೂ ರಾಜಕೀಯ ಪ್ರಭಾವ ಬಳಸಿ ಇಲಾಖೆಯ ನಿರ್ದೇಶಕರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದ ಇಲಾಖೆಯ ಅನುದಾನ ನುಂಗಣ್ಣಗಳು ಈಗ ಹೌಹಾರಿ ಭೂಗತರಾಗತೊಡಗಿದ್ದಾರೆಇಲಾಖೆಯೊಳಗಿನ ಸರಕಾರಿ ದಲ್ಲಾಳಿಗಳನ್ನು ಸಂಪರ್ಕಿಸಿ ಹೇಗಾದರೂ ಮಾಡಿ ತಮ್ಮನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಗೋಗರೆಯತೊಡಗಿದ್ದಾರೆ. ಆದರೆ... ನಕಲಿಗಳಿಗೆ ಅನುದಾನವನ್ನು ಯಾವುದೇ ಪರಿಶೀಲನೆ ಇಲ್ಲದೇ ಮಂಜೂರು ಮಾಡಿದ ಅಧಿಕಾರಿಗಳೇ ದಯಾನಂದರವರ ಕ್ರಮಗಳಿಂದಾಗಿ ತಲ್ಲಣಗೊಂಡಿದ್ದಾರೆ. ಯಾವಾಗ ತಮ್ಮ ಬುಡಕ್ಕೆ ಮುಳುಗು ನೀರು ಬರುತ್ತದೋ ಎಂದು ದಿನಗಳನ್ನು ಆತಂಕದಿಂದ ಎದುರಿಸುತ್ತಿದ್ದಾರೆ. ಹೊರಗಿನ ಹೆಗ್ಗಣಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಈಗ ಒಳಗಿನ ಹೆಗ್ಗಣಗಳಿಲ್ಲದಂತಾಗಿ ತಮ್ಮ ನೌಕರಿ ಉಳಿಸಿಕೊಳ್ಳಲು ಹಾಗೂ ಯಾವುದೇ ವಂಚನೆಯಲ್ಲಿ ತಮ್ಮ ಪಾಲುದಾರಿಕೆ ಇಲ್ಲ ಎಂದು ಸಾಬೀತು ಪಡಿಸಲು ಕಲಿತ ವಿದ್ಯೆಯನ್ನೆಲ್ಲಾ ಬಳಸುತ್ತಿದ್ದಾರೆ. ಆದರೆ ದಯಾನಂದ ಸಾಹೇಬರು ದಿನಕ್ಕೊಂದು ಆದೇಶ ಹೊರಡಿಸುತ್ತಾ ಹೆಗ್ಗಣಗಳನ್ನು ಹಿಡಿಯಲು ಬೋನುಗಳನ್ನು ಸಿದ್ದಗೊಳಿಸುತ್ತಿದ್ದಾರೆ. ಕಾನೂನಿನ ಉರುಳಿನಲ್ಲಿ ನುಂಗಣ್ಣರನ್ನು ಸಿಲುಕಿಸಿ ಇಲಾಖೆಯನ್ನು ಹೆಗ್ಗಣಮುಕ್ತರನ್ನಾಗಿಸಲು ಹರಸಾಹಸ ಪಡುತ್ತಿದ್ದಾರೆ.
ಮನೆಯೊಳಗಿನ ಧನ ಧಾನ್ಯಗಳನ್ನು ಕಾಯಬೇಕಾದವರೇ ಕಳ್ಳರನ್ನು ಆಹ್ವಾನಿಸಿ ಲೂಟಿಗೆ ಅನುಕೂಲ ಮಾಡಿಕೊಟ್ಟಾಗ ಕಳ್ಳರನ್ನು ಹೇಗೆ ದೂರುವುದು. ಹಣದ ದುರಪಯೋಗ ತಡೆಯಬೇಕಾದರೆ ಮೊದಲು ಇಲಾಖೆಯೊಳಗಿನ ಹೆಗ್ಗಣಗಳನ್ನು ಮಟ್ಟಹಾಕಬೇಕಾಗಿದೆ. ಆದರೆ ಇದು ಅಷ್ಟೊಂದು ಸುಲಭದ ಕೆಲಸವಲ್ಲ. ಒಬ್ಬರಲ್ಲ ಹತ್ತಾರು ದಯಾನಂದಗಳು ಬಂದರೂ ಅಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲಾಗದಷ್ಟು ಹದಗೆಟ್ಟು ಹೋಗಿದೆ. ಅಲ್ಲಿರುವವರಿಗೆ ಪಾಲು ಕೊಡದೇ ಯಾವುದೇ ಚೆಕ್ಗಳು ಪಾಸ್ ಆದ ಉದಾಹರಣೆಗಳೇ ಇಲ್ಲಾ. ಅಕಸ್ಮಾತ್ ಕಾನೂನು ಪ್ರಕಾರ ಹೋರಾಡಿ ಒಂದು ಸಲ ಅನುದಾನ ಪಡೆದರೂ ಇನ್ನೊಂದು ಸಲಕ್ಕೆ ಅವರ ಯಾವುದೇ ಕಾರ್ಯಕ್ರಮಕ್ಕೆ ಅನುದಾನ ಮಂಜೂರಾಗದಂತೆ ನೋಡಿಕೊಳ್ಳುವ ತಂತ್ರಗಾರಿಕೆ ಸರಕಾರಿ ಅಧಿಕಾರಿ ವರ್ಗಕ್ಕೆ ಇದೆ. ದಯಾನಂದನಂತವರಿಗೆ ಹಾಗೂ ಉಮಾಶ್ರೀಯಂತವರಿಗೆ ನಿಜಕ್ಕೂ ಸಂಸ್ಕೃತಿ ಇಲಾಖೆಯ ಬಗ್ಗೆ ಕಾಳಜಿ ಇದ್ದರೆ... ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣೆಗೆ ಕುರಿತು ಕಳಕಳಿ ಇದ್ದರೆ ಸಂಸ್ಕೃತಿ ಇಲಾಖೆ ಹಾಗೂ ಅದರ ಆಧೀನದಲ್ಲಿರುವ ಎಲ್ಲಾ ಅಕಾಡೆಮಿ-ಪ್ರಾಧಿಕಾರಗಳಲ್ಲಿರುವ ಸರಕಾರಿ ನೌಕರರು ಹಾಗೂ ಅಧಿಕಾರಿಗಳ ಭ್ರಷ್ಟತೆಯನ್ನು ಮಟ್ಟಹಾಕಲೇಬೇಕಿದೆ. ಒಬ್ಬ ಖಡಕ್ ಅಧಿಕಾರಿ ಬಂದಾಗಿ ಮೆತ್ತಗಾದಂತೆ ತೋರುವ ನೌಕರಶಾಹಿ ಮತ್ತೆ ಇನ್ನೊಬ್ಬ ಬಂದಾಗ ತಮ್ಮ ಚಾಳಿಯನ್ನು ಮುಂದುವರೆಸುತ್ತಾರೆ.
ಆದರೆ.... ಇಲಾಖೆಯ ವಿಚಾರಣೆ ಹಾಗೂ ಮೊಕದ್ದಮೆಗಳಿಂದ ಇಲಾಖೆಯ ಹಣದ ದುರುಪಯೋಗ ನಿಂತು ಹೋಗುತ್ತದೆನ್ನುವುದು ಭ್ರಮೆಯಾಗಿದೆ. ಕಳೆದ ವರ್ಷ ಮೂರು ಸಂಸ್ಥೆಗಳ ಮೇಲೆ ವಂಚನೆ ಕೇಸ್ ದಾಖಲಿಸಿ ಎಪ್ಐಆರ್ ದಾಖಲಿಸಲಾಗಿತ್ತು. ತಮ್ಮ ಕಾರ್ಯಕ್ರಮಗಳಿಗಾಗಿ ಹಣ ಬಿಡುಗಡೆ ಮಾಡಲು ಒತ್ತಡ ತರಲು ಸಂಸ್ಥೆಯ ಮುಖ್ಯಸ್ತರುಗಳು ಶಾಸಕರ ಹಾಗೂ ಬಿಬಿಎಂಪಿ ಸದಸ್ಯರುಗಳ ಲೆಟರ್ಹೆಡ್ನ್ನು ನಕಲು ಮಾಡಿ ಅಕ್ರಮವಾಗಿ ಬಳಸಿಕೊಂಡಿದ್ದವು. ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿದ್ದು ಇಲ್ಲಿವರೆಗೂ ವಂಚಕರಿಗೆ ಶಿಕ್ಷೆಯೂ ಆಗಿಲ್ಲ.... ನುಂಗಿದ ಹಣವನ್ನು ಕಕ್ಕಿಸಲೂ ಸಾಧ್ಯವಾಗಿಲ್ಲ. ಒಂದು ಕಡೆ ಸಿಕ್ಕಿ ಬಿದ್ದರೆ ಇನ್ನೊಂದು ಕಡೆಗೆ ಮತ್ತೆ ಬೇರೆಯವರ ಹೆಸರಲ್ಲಿ ಸಂಸ್ಥೆಯೊಂದನ್ನು ನೋಂದಾಯಿಸಿ ನಕಲಿ ವಿಳಾಸ ನೀಡಿ ಮತ್ತೆ ಅನುದಾನವನ್ನು ಹೇಗೆ ಪಡೆಯಬೇಕು ಎನ್ನುವುದನ್ನು ಸಾಂಸ್ಕೃತಿಕ ದಲ್ಲಾಳಿ ವರ್ಗಕ್ಕೆ ಹೇಳಿಕೊಡಬೇಕಿಲ್ಲ.
ಸಂಸ್ಕೃತಿ ಇಲಾಖೆಯ  ವಾರ್ಷಿಕ ಧನಸಹಾಯ, ಪ್ರಾಯೋಜನೆ, ಚಿತ್ರಕಲಾ ಪ್ರದರ್ಶನ, ರಂಗಚಟುವಟಿಕೆಗಳು ಹಾಗೂ ವಾದ್ಯ ಪರಿಕರಗಳ ಖರೀದಿಗಾಗಿ ಪ್ರತಿ ವರ್ಷ ೧೫೦೦ ಕ್ಕೂ ಹೆಚ್ಚು ಸಂಸ್ಥೆಗಳು ಧನಸಹಾಯವನ್ನು ಪಡೆಯುತ್ತವೆ. ಇದರಲ್ಲಿ ಕಲೆಯ ಗಂಧ ಗಾಳಿ ಗೊತ್ತಿಲ್ಲದ ಅನೇಕ ಸಂಸ್ಥೆಗಳೂ ಸೇರಿವೆಯಾವುದೇ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಬೇಕೆಂದರೆ ಸಂಸ್ಥೆ ಹಿಂದಿನ ವರ್ಷ ಮಾಡಿದ ಕಾರ್ಯಕ್ರಮಗಳ ಆಧಾರದ ಮೇಲೆ ಎಷ್ಟು ಅನುದಾನ ಕೊಡಬೇಕು ಎನ್ನುವುದನ್ನು ಇಲಾಖೆಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಕನಿಷ್ಟ ಇಪ್ಪತ್ತೈದು ಸಾವಿರದಿಂದ ಹಿಡಿದು ಇಪ್ಪತ್ತೈದು ಲಕ್ಷದವರೆಗೂ ಪ್ರತಿ ಸಂಸ್ಥೆಗೆ ಅನುದಾನವನ್ನು ಬಿಡುಗಡೆ ಮಾಡಿಲಾಗುತ್ತದೆ. ಕಾರ್ಯಕ್ರಮದ ಪ್ರಾಮುಖ್ಯತೆಯ ಆಧಾರದಲ್ಲಿ ಕನಿಷ್ಟ ಇಪ್ಪತ್ತು ಸಾವಿರದಿಂದ ಹದಿನೈದು ಲಕ್ಷದವರೆಗೂ ಪ್ರಾಯೋಜನೆ ಹಣ ಒದಗಿಸಲಾಗುತ್ತದೆ. ಸರಕಾರಿ ಹಣವನ್ನು ಪಡೆದು ಬದುಕುವುದನ್ನೇ ಕೆಲವಾರು ದಲ್ಲಾಳಿಗಳು ಕಾಯಕ ಮಾಡಿಕೊಂಡಿದ್ದಾರೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡದಿದ್ದರೂ ನಕಲಿ ದಾಖಲೆಗಳನ್ನು ಕೊಟ್ಟು ಹಣವನ್ನು ಲಪಟಾಯಿಸುತ್ತಿದ್ದಾರೆ. ಹಿಂದುಳಿದ ಜಾತಿ ವರ್ಗಗಳಿಗಾಗಿ ಮೀಸಲಿಟ್ಟ ಹಣವನ್ನೂ ಸಹ ನಕಲಿ ಜಾತಿಪತ್ರ ನೀಡಿ ದುರ್ಬಳಕೆ ಮಾಡಿಕೊಂಡವರೂ ಬೇಕಾದಷ್ಟಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಇಲಾಖೆಯ ನೌಕರಶಾಹಿ ಇಂತಹ ಹಲಾಲುಕೋರರಿಗೆ ಸಹಾಯ ಮಾಡುತ್ತಾ ಪೋಷಿಸುತ್ತಿದೆ. ಸರಿಯಾಗಿ ಪ್ರತಿ ಸಂಸ್ಥೆಯ ವಿವರಗಳನ್ನು ಪರಿಶೀಲಿಸಿ ಕಾರ್ಯಕ್ರಮ ನಡೆದ ಬಗ್ಗೆ ವರದಿ ತರಿಸಿಕೊಂಡರೆ ಅರ್ಧಕ್ಕಿಂತಲೂ ಹೆಚ್ಚು ವಂಚಕ ಸಂಸ್ಥೆಗಳು ಬೆತ್ತಲಾಗುತ್ತವೆ. ಇವುಗಳನ್ನೆಲ್ಲಾ ಮೊದಲು ಬ್ಲಾಕ್ ಲಿಸ್ಟಿಗೆ ಸೇರಿಸಿ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖೆಗೆ ಆದ ನಷ್ಟವನ್ನು ಇವರುಗಳಿಂದ ವಸೂಲು ಮಾಡಲು ಸರಕಾರ ಹಾಗೂ ನ್ಯಾಯಾಂಗವನ್ನು ಕೇಳಿಕೊಳ್ಳುವುದರಿಂದ ಮುಂದಾಗಬಹುದಾದ ವಂಚನೆಯನ್ನು ತಪ್ಪಿಸಬಹುದಾಗಿದೆ.
  
ಇಡೀ ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಒಂದು ಇಲಾಖೆಯನ್ನು ನಿಂದಿಸಿ ಏನುಪಯೋಗ. ಆದರೂ... ಇದ್ದುದರಲ್ಲೇ ಹೆಗ್ಗಣಗಳ ಬಿಲಗಳನ್ನು ಬಂದ ಮಾಡುವಂತಹ....ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ಗಣಕೀಕರಣಗೊಳಿಸಿ ದಾಖಲಿಸುವಂತಹ ಹಾಗೂ ಎಲ್ಲಾ ಮಾಹಿತಿಗಳೂ ಸಾರ್ವಜನಿಕರಿಗೆ ಯಾವಾಗಲೂ ಇಲಾಖೆಯ ವೆಬ್ಸೈಟಿನಲ್ಲಿ ಲಭ್ಯವಾಗುವಂತಹ ಕ್ರಮಗಳನ್ನು ಕೈಗೊಂಡರೆ ಸರಕಾರಿ ಭ್ರಷ್ಟರ ಜೊತೆಗೆ ಸಾಂಸ್ಕೃತಿಕ ದಲ್ಲಾಳಿಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಬಹುದಾಗಿದೆ. ಹಣ ಸಿಗುತ್ತದೆಂದರೆ ಕಳ್ಳರು ಅದಕ್ಕಾಗಿ ನೂರು ದಾರಿ ಕಂಡುಕೊಳ್ಳುತ್ತಾರೆಆದರೆ ಕಾನೂನಿನ ಪ್ರಕಾರ ಸೂಕ್ತ ದಾಖಲೆಗಳಿಲ್ಲದೇ ಅನುದಾನವನ್ನು ಇಲಾಖೆ ಬಿಡುಗಡೆ ಮಾಡುವಂತೆಯೇ ಇಲ್ಲ. ಹಾಗೇನಾದರೂ ಪರಿಶೀಲನೆ ಮಾಡದೇ ಯಾರಾದರೂ ಇಲಾಖೆಯ ಅಧಿಕಾರಿಗಳು ಹಣ ಬಿಡುಗಡೆಗೆ ಆದೇಶಿಸಿದರೆ ಅಲ್ಲಿ ಆಗುವ ವಂಚನೆಗೆ ಅಂತಹ ಅಧಿಕಾರಿಯನ್ನೇ ಬೇಜವಾಬ್ದಾರಿ ಕಾರಣದ ಮೇಲೆ ಹೊಣೆಗಾರರನ್ನಾಗಿಸಿ ಅಮಾನತುಗೊಳಿಸುವುದನ್ನು ಮಾಡಿದರೆ ಇತರೆಲ್ಲಾ ನೌಕರರು ಹಾಗೂ ಅಧಿಕಾರಿಗಳು ಕಳ್ಳರ ಜೊತೆಗೆ ಶಾಮೀಲಾಗಿ ಇಲಾಖೆಯ ಹಣವನ್ನು ಬಿಂದಾಸಾಗಿ ಲೂಟಿಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಇದರ ಜೊತೆಗೆ ಯಾವುದೇ ಸಂಸ್ಥೆಗೆ ಹಣ ಬಿಡುಗಡೆ ಮಾಡಿದರೂ ಅದರ ಕುರಿತ ಸಂಪೂರ್ಣ ವಿವರವನ್ನು ಹಾಗೂ ಕಾರ್ಯಕ್ರಮದ ನಂತರ ಸಂಸ್ಥೆ ಕೊಡುವ ಎಲ್ಲಾ ಲೆಕ್ಕಪತ್ರ ದಾಖಲೆಗಳನ್ನೂ ಸಂಸ್ಕೃತಿ ಇಲಾಖೆಯ ವೆಬ್ಸೈಟ್ಗೆ ಆಕೂಡಲೇ ಅಪ್ ಲೋಡ್ ಮಾಡುವುದನ್ನು ಆದೇಶದ ಮೂಲಕ ಜಾರಿಗೆ ತಂದರೆ ಕನಿಷ್ಟ ಮುಕ್ಕಾಲು ಭಾಗ ಅನುದಾನದ ದುರ್ಬಳಕೆ ನಿಂತುಹೋಗುತ್ತದೆಕಳೆದ ಹತ್ತು ವರ್ಷದಿಂದ ಇಲಾಖೆಯಿಂದ ಹಣ ಪಡೆದ ಎಲ್ಲಾ ಸಂಸ್ಥೆಗಳ ಕಾರ್ಯಕ್ರಮಗಳು ಹಾಗೂ ಲೆಕ್ಕಪತ್ರಗಳನ್ನು ಸ್ಕ್ಯಾನ್ ಮಾಡಿ ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಿದರೆ ಅವುಗಳ ಅಸಲಿಯತ್ತು ಸಾರ್ವಜನಿಕರಿಗೆ ಗೊತ್ತಾಗದೇ ಇರದು. ಆಗ ಇನ್ನಷ್ಟು ವಂಚಕ ಪ್ರಕರಣಗಳನ್ನು ಸಾರ್ವಜನಿಕರೇ ಹುಡುಕಿ ಕೊಟ್ಟಾರು. ಮೊದಲು ಸಂಪೂರ್ಣ ಪಾರದರ್ಶಕತೆಯನ್ನು ಇಲಾಖೆಯ ಪ್ರಥಮ ಆದ್ಯತೆಯನ್ನಾಗಿಸಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ಪ್ರಾಮಾಣಿಕವಾಗಿ ನಡೆಯುತ್ತಾ ಸರಕಾರದ ಉದ್ದೇಶ ಇಡೇರುತ್ತದೆ ಹಾಗೂ ರಾಜ್ಯಾದ್ಯಂತ ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುತ್ತವೆ. ಕಲಾಸಕ್ತಿ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಲಾವಿದರುಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಗತ್ಯವಾದ ಹಣ ದೊರಕಿ ಸಾಂಸ್ಕೃತಿಕ ಆಂದೋಲನವೇ ರೂಪಗೊಳ್ಳಬಹುದಾಗಿದೆ. ನಿಟ್ಟಿನತ್ತ  ದಯಾನಂದನಂತಹ  ಅಧಿಕಾರಿಗಳು ಹಾಗೂ ಉಮಾಶ್ರೀಯವರಂತಹ ಮಂತ್ರಿಗಳು ಆಲೋಚಿಸುವುದುತ್ತಮ

                                -ಶಶಿಕಾಂತ ಯಡಹಳ್ಳಿ     

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...