Friday, January 30, 2015

ಮಣಿಯದ ಚೇತನ, ನಮ್ಮ ನಡುವಿನ ‘ಗಾಂಧಿ’

ಸಿ.ಜಿ. ಮಂಜುಳಾ

ಸೌಜನ್ಯ :ಪ್ರಜಾವಾಣಿ

 ಮಣಿಪುರದ ಇರೊಮ್ ಶರ್ಮಿಳಾ ಚಾನು ಕಳೆದ ವಾರ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾರೆ. ಅನಿರ್ದಿಷ್ಟ ಉಪ­ವಾಸ ಸತ್ಯಾಗ್ರಹದ ಮೂಲಕ ಆತ್ಮಹತ್ಯೆಗೆ ಯತ್ನಿಸಿದ ಆರೋಪವನ್ನು ಶರ್ಮಿಳಾ ವಿರುದ್ಧ ಹೊರಿಸಲಾಗಿದೆ.

ಮಣಿಪುರ ಹಾಗೂ ಭಾರತದ ಈಶಾನ್ಯ ಪ್ರದೇಶದ ಬಹುತೇಕ ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (1958) ಜಾರಿಯಲ್ಲಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಾರಂಟ್ ಇಲ್ಲದೆ ಬಂಧಿಸಲು ಅಥವಾ  ಹತ್ಯೆ ಮಾಡು­ವಂತಹ ಅಪಾರ ಹಾಗೂ ಅನಿಯಂತ್ರಿತ ಅಧಿಕಾರ ಈ ಕಾಯಿದೆ­ಯಡಿ ಭದ್ರತಾ ಪಡೆಗಳಿಗೆ  ಪ್ರಾಪ್ತವಾಗುತ್ತದೆ. ಹೀಗಾಗಿ ಈ ಕರಾಳ ಕಾಯಿದೆ­ಯನ್ನು ಹಿಂತೆಗೆದು­ಕೊಳ್ಳಬೇಕು ಎಂದು ಸರ್ಕಾರ­ವನ್ನು ಒತ್ತಾಯಿಸಿ  ಕಳೆದ 14 ವರ್ಷಗಳಿಂದ ಶರ್ಮಿಳಾ ಉಪವಾಸ ಸತ್ಯಾಗ್ರಹ ಮಾಡುತ್ತಿ­ದ್ದಾರೆ. ಈ ಕಠಿಣ ಉಪ­ವಾಸ ಸತ್ಯಾಗ್ರಹವನ್ನು ಶರ್ಮಿಳಾ ಆರಂಭಿಸಿದ್ದು 2000ದ ನವೆಂಬರ್ 4ರಂದು. ಹೀಗಾಗಿ ಕಳೆದ ನವೆಂಬರ್ ತಿಂಗಳಿಗೇ 14 ವರ್ಷಗಳು ಪೂರ್ಣ­ಗೊಂಡಿದೆ.  ಈಗ ಈ ಉಪವಾಸ ಸತ್ಯಾಗ್ರಹ 15ನೇ  ವರ್ಷಕ್ಕೆ ಕಾಲಿಟ್ಟಿದೆ.

ಅಂದು 2000ದ ನವೆಂಬರ್ 2ನೇ ದಿನ.  ಇಂಫಾಲ ಬಳಿಯ ಪುಟ್ಟ ಗ್ರಾಮ ಮಲೋಮ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಜನ­ಸಾಮಾನ್ಯರ ಮೇಲೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 10 ಮುಗ್ಧ ಜೀವಗಳು ಬಲಿ­ಯಾಗಿದ್ದವು. ಇದಕ್ಕೆ ಕಾರಣ, ಅಸ್ಸಾಂ ರೈಫಲ್ಸ್ ಕ್ಯಾಂಪ್‌ನಲ್ಲಿ, ಬಾಂಬೊಂದು ಸ್ಫೋಟ­ಗೊಂಡಿತ್ತು.  ಈ ಸ್ಫೋಟಕ್ಕೆ ಕಾರಣರಾಗಿದ್ದವರು ಅಪರಿಚಿತ ಬಂಡುಕೋರರು. ಆದರೆ  ತನ್ನ ಆಕ್ರೋಶವನ್ನು ಅಸ್ಸಾಂ ರೈಫಲ್ಸ್ ಹರಿಯ­ಬಿಟ್ಟಿದ್ದು ಮುಗ್ಧ ಜನರ ಮೇಲೆ. ಈ ಹತ್ಯಾಕಾಂಡ ನಡೆಸಿದವರಿಗೆ ಶಿಕ್ಷೆಯಾಗುವುದು ಸಾಧ್ಯವಿರ­ಲಿಲ್ಲ. ಏಕೆಂದರೆ ಅವರಿಗೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ  ಬಲ ಇದ್ದದ್ದು ಗೊತ್ತಿದ್ದ ಸಂಗತಿ.

ಈ ದುರಂತಕ್ಕಷ್ಟೇ ಅಲ್ಲ ಭದ್ರತಾಪಡೆಗಳ ಇಂತಹ ಇನ್ನೂ ಅನೇಕ ದೌರ್ಜನ್ಯಗಳಿಗೆ ಪ್ರತಿ­ರೋಧ ತೋರಲು ಉಪವಾಸ ಸತ್ಯಾಗ್ರಹವನ್ನು ಇರೊಮ್ ಶರ್ಮಿಳಾ ಆರಂಭಿಸಿದ್ದು ಆಗಲೇ.  ಆದರೆ ಇದನ್ನು ಆತ್ಮಹತ್ಯೆ ಯತ್ನ ಎಂದು ಬಿಂಬಿಸಿ ಶರ್ಮಿಳಾರನ್ನು ಬಂಧಿಸಲಾಗುತ್ತದೆ. ಐಪಿಸಿ  309ನೇ ಸೆಕ್ಷನ್ ಅನ್ವಯ ಆತ್ಮಹತ್ಯೆ ಯತ್ನಕ್ಕೆ ಗರಿಷ್ಠ  ಒಂದು ವರ್ಷ ಜೈಲು ಶಿಕ್ಷೆ ಇದೆ. ಹೀಗಾಗಿ ಪ್ರತಿ 12 ತಿಂಗಳಿಗೊಮ್ಮೆ  ಶರ್ಮಿಳಾ ಬಿಡುಗಡೆ­ಯಾಗುತ್ತಾರೆ. ಆದರೆ ಮತ್ತೆ ಅವರನ್ನು ಬಂಧಿಸಿ ಬಲವಂತವಾಗಿ ಮೂಗಿಗೆ ನಳಿಕೆ ಹಾಕಿ ಅದರ  ಮೂಲಕ ದ್ರವಾಹಾರ ನೀಡುತ್ತಾ ಅವರ ಜೀವವುಳಿಸಿಕೊಂಡು ಬರಲಾಗುತ್ತಿದೆ. ಇಂಫಾ­ಲದ ಜವಾಹರಲಾಲ್ ನೆಹರೂ ಆಸ್ಪತ್ರೆಯ ಭದ್ರತಾ ವಾರ್ಡ್ ಶರ್ಮಿಳಾರ ಕಾಯಂ ಸೆರೆಮನೆಯಾಗಿದೆ.

ಕಳೆದ ವರ್ಷ 2014ರ ಆಗಸ್ಟ್ 19ರಂದು  ಶರ್ಮಿಳಾರನ್ನು ಬಿಡುಗಡೆ ಮಾಡಬೇಕೆಂದು ಮಣಿಪುರ ನ್ಯಾಯಾಲಯ ಹೇಳಿತು.  ಶರ್ಮಿಳಾರ ಉಪವಾಸ ಸತ್ಯಾಗ್ರಹ ‘ಕಾನೂನಿನ ವ್ಯಾಪ್ತಿಯಲ್ಲಿ ಅವಕಾಶವಿರುವ ರಾಜಕೀಯ ಬೇಡಿಕೆ’ ಎಂದೂ ಅದು ವ್ಯಾಖ್ಯಾನಿಸಿತು. ಹೀಗಿದ್ದೂ ಆತ್ಮಹತ್ಯೆ ಯತ್ನದ ಆರೋಪ ಹೊರಿಸಿ ಮೂರು ದಿನಗಳ ನಂತರ ಮತ್ತೆ ಆಗಲೂ ಶರ್ಮಿಳಾ­ರನ್ನು ಬಂಧಿಸಲಾಯಿತು. ಆದರೆ ಈ ಮಧ್ಯೆ  ಮತ್ತೊಂದು ವಿಪರ್ಯಾಸ ಎದುರಾಗ­ಲಿದೆ. ಆತ್ಮಹತ್ಯೆ ಯತ್ನವನ್ನು ಅಪರಾಧಮುಕ್ತ­ಗೊಳಿಸುವುದಕ್ಕಾಗಿ ಐಪಿಸಿ ಸೆಕ್ಷನ್ 309 ರದ್ದುಪಡಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೇಳಿದೆ.

ಈಗ ಈ ವಾದಗಳೇನೇ ಇರಲಿ, ಶಾಂತಿಯುತ ಪ್ರತಿರೋಧ ತೋರಿದ್ದಕ್ಕಾಗಿ ಇರೊಮ್ ಶರ್ಮಿಳಾ ಬಂಧನದಲ್ಲಿರಬೇಕು  ಎಂಬುದು ಸರಿ­ಯಲ್ಲ.  ಅವರು ಎತ್ತಿರುವ ವಿಚಾರಗಳು ಹಾಗೂ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದುದು ಮುಖ್ಯ. ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆ­ಯಲ್ಲಿ ರಾಜಕೀಯ ನೇತಾರರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ಈಗ  ಒತ್ತಾಯಿಸಿದೆ.

ಈಗಾಗಲೇ ಹೇಳಿದಂತೆ, ಶರ್ಮಿಳಾ ಅವರ ಶಾಂತಿಯುತ ಹೋರಾಟಕ್ಕೆ 14 ವರ್ಷಗಳಾ­ಗಿವೆ. ಇದೇನೂ ಕಡಿಮೆ ಅವಧಿಯಲ್ಲ. ಹೀಗಾಗಿ ಇದು 43 ವರ್ಷ ವಯಸ್ಸಿನ  ಈ ಯುವ ಸಾಮಾಜಿಕ ಕಾರ್ಯಕರ್ತೆಯ ದೊಡ್ಡ  ಗೆಲುವು ಎಂದೇ ವ್ಯಾಖ್ಯಾ­ನಿಸಬೇಕಾಗುತ್ತದೆ. ಪ್ರತಿ ಬಾರಿಯೂ ಶರ್ಮಿಳಾರ ಸತ್ಯಾಗ್ರಹದ ಎದುರು ಸರ್ಕಾರ ಸೋಲಬೇಕಾಗುತ್ತದೆ. ಶರ್ಮಿಳಾರನ್ನು ಬಂಧಿ­ಸುವ ಒತ್ತಡಕ್ಕೆ ಸಿಲುಕುತ್ತದೆ ಸರ್ಕಾರ. ಇದರ ಉದ್ದೇಶ ಶರ್ಮಿಳಾರ ಜೀವರಕ್ಷಣೆ.  ಆದರೆ ಬಂಧ­­ನದ ಔಚಿತ್ಯ ಪ್ರಶ್ನಾರ್ಹ. ಏಕೆಂದರೆ ಆಕೆ ಯಾವ ಅಪರಾಧವನ್ನೂ ಮಾಡಿಲ್ಲ ಎಂದೇ ನ್ಯಾಯಾ­ಲಯ ಹೇಳುತ್ತದೆ. ಅಲ್ಲದೆ  ಶರ್ಮಿಳಾ­ರಂತಹ ರಾಜಕೀಯ ಪ್ರತಿಭಟನಾಕಾರರಿಗೆ ‘ಆತ್ಮಹತ್ಯೆ ಯತ್ನ’ ಎಂಬಂಥ ಅಪರಾಧ ಹೊರಿ­­­ಸು­ವುದು ಎಷ್ಟು ಸರಿ?

ಇನ್ನುಮುಂದೆಯಂತೂ  ಆತ್ಮಹತ್ಯೆ ಯತ್ನವೂ ಅಪರಾಧವಲ್ಲ. ಆದರೆ ಸರ್ಕಾರಕ್ಕೆ ಆಯ್ಕೆ ಇಲ್ಲ.  ಶರ್ಮಿಳಾ ತನ್ನ ವಶ­ದಲ್ಲಿದ್ದಾಗ ಮಾತ್ರವೇ ಮೂಗಿನ ನಳಿಕೆಯಿಂದ ಬಲವಂತ­ವಾಗಿ ದ್ರವಾಹಾರ ಹಾಕಲು ಅದಕ್ಕೆ ಸಾಧ್ಯ.

ನಿಜ ಹೇಳಬೇಕೆಂದರೆ ಮಣಿಪುರದ ಈ ಉಕ್ಕಿನ ಮಹಿಳೆ ರಾಷ್ಟ್ರದ ಸಾಕ್ಷಿಪ್ರಜ್ಞೆಯ ಪ್ರತೀಕ. ಆದರೆ ರಾಷ್ಟ್ರಮಟ್ಟದಲ್ಲಿ ಈ ಮಹಿಳೆಯ ಹೋರಾಟಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ ಎಂಬುದು ನಿಜ. ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿಸಿ, ಲೋಕಪಾಲ್ ಮಸೂದೆಗೆ ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ­ದಾಗ ಸಾವಿರಾರು ಜನ ಅವರನ್ನು ಬೆಂಬಲಿಸಿ­ದ್ದರು. ಕಡೆಗೆ ಸರ್ಕಾರವೂ ಮಣಿದು ಲೋಕ­ಪಾಲ ಮಸೂದೆ ಜಾರಿಗೊಳಿಸಿದ್ದು ಈಗ ಇತಿ­ಹಾಸ.  ಅಣ್ಣಾ ಹಜಾರೆಯವರ ಆ ತಂಡದಲ್ಲಿದ್ದ ಮುಖಂಡರು ಈಗ ಮುಖ್ಯವಾಹಿನಿಯ ರಾಜ­ಕೀಯ ಪಕ್ಷಗಳ ನೇತಾರರಾಗಿಯೂ ಪರಿವರ್ತಿತ­ರಾಗಿದ್ದಾರೆ.

ಆದರೆ ಇರೊಮ್ ಶರ್ಮಿಳಾರದ್ದು ಏಕಾಂಗಿ ಹೋರಾಟ.  ಉಪವಾಸದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರು ಯಾವುದೇ ಗುಂಪು ಅಥವಾ ತಂಡದ ಸದಸ್ಯರಾಗಿರಲಿಲ್ಲ. ಅಥವಾ ಯಾವುದೇ ಸಂಘಟನೆಯ ಭಾಗವಾಗಿಯೂ ಈ ಉಪವಾಸ ಸತ್ಯಾಗ್ರಹ ಆರಂಭಿಸಲಿಲ್ಲ. ಬದಲಿಗೆ ಉಪವಾಸದ ಕುರಿತಾಗಿ ಅವರ ಈ ವ್ಯಕ್ತಿಗತ ನಿರ್ಧಾರ ಸಮುದಾಯದ ಸಂಕಲ್ಪದ ಜೊತೆಗೆ ಬೆಸೆದುಕೊಂಡಿದೆ. ಈ ದೃಢ ನಿಶ್ಚಯದ, ಛಲ ಬಿಡದ ಉಪವಾಸದ ಮೂಲಕ  ಶರ್ಮಿಳಾ ಅವರು ಅಸಂಖ್ಯ ಪ್ರಶ್ನೆಗಳಿಗೆ ಧ್ವನಿ­ಯಾಗಿದ್ದಾರೆ ಎಂಬುದು ನಿಜ.

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಹಿಂತೆಗೆದುಕೊಳ್ಳಬೇಕೆಂಬುದು ಅವರ ಉಪವಾಸ ಸತ್ಯಾಗ್ರಹದ ಮುಖ್ಯ ಆಗ್ರಹ. ಆದರೆ ಆಳದಲ್ಲಿ ಸರ್ಕಾರ ಹಾಗೂ ನೀತಿ ನಿರೂಪಕರು ಸೇರಿದಂತೆ ಜನರನ್ನು ಸೂಕ್ಷ್ಮಗೊಳಿಸುವ ಪ್ರಯತ್ನವೂ ಈ ಸತ್ಯಾಗ್ರಹದಲ್ಲಿದೆ.

2004ರಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಪರಾಮರ್ಶೆಯ ಅಗತ್ಯ ಮನಗಂಡು  ಈ ಬಗ್ಗೆ ಅಧ್ಯಯನಕ್ಕಾಗಿ ಸುಪ್ರೀಂ­ಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ಬಿ.ಪಿ. ಜೀವನ್ ರೆಡ್ಡಿ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ರದ್ದುಪಡಿಸಬೇಕೆಂಬ ಶಿಫಾರಸನ್ನು ಈ ಸಮಿತಿ ನೀಡಿತ್ತು. ಅಕ್ರಮ ಚಟುವಟಿಕೆಗಳ (ತಡೆ) ಕಾಯಿದೆಗೆ ತಿದ್ದುಪಡಿ ತಂದು   ಅದನ್ನೇ ವಿಧ್ವಂಸಕ ಕೃತ್ಯಗಳು ಹಾಗೂ ಸಂಘರ್ಷಗಳ ತಡೆಗೆ  ಪರಿಣಾಮಕಾರಿಯಾಗಿ ಬಳಸಬಹುದು ಎಂದೂ ಈ ಸಮಿತಿ ಅಭಿಪ್ರಾಯ­ಪಟ್ಟಿತ್ತು. ಹೀಗಿದ್ದೂ ಸರ್ಕಾರ ಈವರೆಗೆ ಏನೂ ಕ್ರಮ ಕೈಗೊಂಡಿಲ್ಲ. ಆದರೆ, ಶರ್ಮಿಳಾರ ಉಪ­ವಾಸ ಸತ್ಯಾಗ್ರಹ, ಈ ವಿಶೇಷ ಕಾಯಿದೆಯ ಕುರಿತಾದ ಚರ್ಚೆಯನ್ನು ಜೀವಂತವಾಗಿಯೇ ಇರಿಸಿಕೊಂಡು ಬಂದಿದೆ.

ಮಾನವ ಹಿಂಸಾಚಾರಗಳು ಅಂತ್ಯವಾಗ­ಬೇಕೆಂಬ ಆಗ್ರಹ ಶರ್ಮಿಳಾ ಅವರ ಉಪ­ವಾಸದ ಹಿಂದಿರುವ ಆಶಯ. ಈ ಬದಲಾವಣೆಗೆ ಮುಖ್ಯ­ವಾಗಿ ಬೇಕಾದುದು ಹೃದಯ ಪರಿವರ್ತನೆ.  ಇಂತಹದೊಂದು ವಿಚಾರ ಈ ರಾಜಕೀಯ ಬೇಡಿಕೆಗೆ ಅಧ್ಯಾತ್ಮದ ಆಯಾಮವನ್ನು ಒದಗಿಸಿ­ಕೊಡುತ್ತದೆ. ಹೀಗಾಗಿ ದೇಹವನ್ನೇ ಆಯುಧ­ವಾಗಿ ಬಳಸಿಕೊಂಡು ಸತ್ಯದ ಪರವಾಗಿ ಮಾತ­ನಾಡುವ ಇರೊಮ್ ಶರ್ಮಿಳಾರ ಹೋರಾಟದ ಆಯಾಮಗಳು ಹೆಚ್ಚಿನದಾಗುತ್ತವೆ.

ಎಂದರೆ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡಿರುವ ಕಾನೂನು ಹಿಂತೆಗೆದುಕೊಳ್ಳ­ಬೇಕಾ­ದುದು ಆದ್ಯತೆಯ ಸಂಗತಿ. ಈ ಪ್ರಕ್ರಿಯೆಯಲ್ಲಿ ಆಗಬೇಕಾಗಿರುವುದು ಹೃದಯ ಪರಿವರ್ತನೆ. ರಾಷ್ಟ್ರವನ್ನಾಳುವವರ ಚಿಂತನೆ, ಪ್ರಜ್ಞೆಯಲ್ಲಿ ಈ ಪರಿವರ್ತನೆಯಾಗಬೇಕು.  ಹಾಗಾದಾಗಷ್ಟೇ  ರಾಜಕೀಯ ನೀತಿಗಳಲ್ಲಿ ಗಣನೀಯ ಬದ­ಲಾ­ವಣೆ­ಗಳನ್ನು ಕಾಣುವುದು ಸಾಧ್ಯ. ಶರ್ಮಿಳಾರ  ಈ ಬೇಡಿಕೆಗೆ ಸಂಕೀರ್ಣ ಸ್ವರೂಪವಿದೆ. ಅವರ ಬೇಡಿಕೆಗೆ ಬಗ್ಗಲು ಸರ್ಕಾರ ತಯಾರಿಲ್ಲ. ಹೀಗಾಗಿ ಉಪವಾಸ ಅನಿರ್ದಿಷ್ಟವಾಗಿ ಮುಂದು­ವರಿಯುತ್ತದೆ.

‘ನನ್ನದೇ ಕೈಗಳಿಂದ ತಿನ್ನಬೇಕು, ಕುಡಿಯಬೇಕು ಎಂಬ ಆಸೆ ನನಗೂ ಇದೆ.  ಆದರೆ ಈವರೆಗೆ ನನ್ನ ಮೂಗಿನಲ್ಲಿರುವ ಈ ನಳಿಕೆಯ ಮೂಲಕ ನಾನು ಬದುಕಿದ್ದೇನೆ.ನಿಮ್ಮದೇ ಕೈಗಳಲ್ಲಿ ತಿನ್ನಿ ಅಥವಾ ಮೂಗಿನಲ್ಲಿ ನಳಿಕೆಯ ಮೂಲಕ ಬಲಾತ್ಕಾರ­ದಿಂದ ತಿನ್ನಿಸಿಕೊಳ್ಳಿ ನೀವು ಬದುಕಲೇ­ಬೇಕೆಂದಿದ್ದರೆ ಅದರಿಂದೇನೂ ವ್ಯತ್ಯಾಸವಾಗದು.  ಬದುಕಿನ ಈ ಘಟ್ಟದಲ್ಲಿ  ನನಗೆ ಬೇಕಾದದ್ದು ನಾನು ಮಾಡ­ಲಾರೆ. ನನ್ನದೇ ಕೈಗಳಿಂದ ತಿನ್ನಲಾರೆ. ಮೊಲೆ ಹಾಲು ಕುಡಿಯುವ ಶಿಶುವಿನಂತಾಗಿದ್ದೇನೆ ನಾನು. ನನಗೆ ಏನನ್ನು ತಿನ್ನಬೇಕು ಅಥವಾ ಯಾವಾಗ ತಿನ್ನಬೇಕು ಎನ್ನುವುದನ್ನು ನಾನು ನಿಯಂತ್ರಿಸಲಾರೆ.  ಹೀಗಾಗಿ ನನ್ನ ದೇಹದೊಳಗೆ ಹಾದು ಹೋಗಿರುವ ನಳಿಕೆಗಳಿಗೆ ನಾನು ಪ್ರತಿ­ರೋಧ ತೋರುವುದಿಲ್ಲ. ಜೈಲು ವಾರ್ಡನ್‌ಗಳು ನನ್ನ ಮೂಗಿನೊಳಗೆ ಈ ನಳಿಕೆಗಳನ್ನು ಬಲವಂತ­ವಾಗಿ ಇಳಿಬಿಡುತ್ತಾರೆ. ಆ ಬಗ್ಗೆ ಅಥವಾ ಯಾವು­ದರ ಬಗೆಗೂ ಈಗ ನಾನೇನೂ ಮಾಡಲಾರೆ.  ....ನಾನು ನನ್ನ ಹಲ್ಲುಗಳನ್ನೂ ಅನೇಕ ವರ್ಷ ಉಜ್ಜಿರಲಿಲ್ಲ.  ಆದರೆ ವ್ಯತ್ಯಾಸವೆಂದರೆ ನಾನು ಮಾಡುತ್ತಿರುವ ಕ್ರಿಯೆ ಬಗ್ಗೆ ನನಗೆ ಒಳ್ಳೆಯ­ದೆನಿಸುತ್ತದೆ. ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೇ ನಾನಾಗಿ ತಿನ್ನಲಾರೆ, ಕುಡಿಯ­­ಲಾರೆ– ನನಗೆ ಬೇಕಾದ್ದನ್ನು ನನ್ನ ಕಣ್ಣುಗಳು ನೋಡುವಂತೆ ಮಾಡಲಾರೆ, ನನಗೆ ಖುಷಿ ಕೊಡುವುದನ್ನು ಮಾಡಲಾಗುವುದಿಲ್ಲ– ಇವೆಲ್ಲಾ  ಈಗ ನನಗೆ ಏನೇನೂ ಅಲ್ಲ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಒಳ್ಳೆಯ­ದೆನಿಸುವುದಷ್ಟೇ ಮುಖ್ಯ’ ಎಂದು ಶರ್ಮಿಳಾ  ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಪರಿತ್ಯಾಗವನ್ನು ಶರ್ಮಿಳಾ ದೊಡ್ಡ­ದೆಂದೂ ಪರಿಗಣಿಸುವುದಿಲ್ಲ. ಅಹಿಂಸಾತ್ಮಕ ಸಾಮಾಜಿಕ ವ್ಯವಸ್ಥೆಗಾಗಿ  ಗಾಂಧಿಯವರು ಕೆಲವೊಂದು ವ್ರತಗಳನ್ನು   ಗುರುತಿಸುತ್ತಾರೆ.  ಇವುಗಳಲ್ಲಿ ಬಹು ಮುಖ್ಯ­ವಾದದ್ದು ಅಹಿಂಸೆ, ಸತ್ಯ, ಆಸ್ತೇಯ  (ಕಳ್ಳತನ­ದಿಂದ ದೂರವಿರುವುದು), ಬ್ರಹ್ಮಚರ್ಯ, ಅಸಂಗ್ರಹ, ಶರೀರಾಶ್ರಮ (ದೈಹಿಕ ಶ್ರಮ), ಆಸ್ವಾದ್, ಅಭಯ, ಸರ್ವ ಧರ್ಮ ಸಮ ಭಾವ,  ಸ್ವದೇಶಿ ಹಾಗೂ  ಸ್ಪರ್ಶಭಾವನ  (ಅಸ್ಪೃಶ್ಯತೆ ತೊಲಗಿಸಿ).

ಬಹುತೇಕ ಈ ಎಲ್ಲಾ ಆದರ್ಶಗಳನ್ನು ಶರ್ಮಿಳಾ ತಮ್ಮದಾಗಿಸಿಕೊಂಡಿದ್ದಾರೆ. ಗಾಂಧಿ ತತ್ವಗಳನ್ನು ಇಷ್ಟೊಂದು ನಿಷ್ಠೆಯಿಂದ ಪಾಲಿಸುವ ಮತ್ತೊಬ್ಬರನ್ನು ಕಾಣುವುದು ಕಷ್ಟ. ಸತ್ಯವೇ ಬದುಕಿನ ಆಧಾರ ಎಂಬುದನ್ನು ಗಾಂಧಿ ಕಂಡುಕೊಂಡಿದ್ದರು.

ಸತ್ಯ ಹಾಗೂ ಅಹಿಂಸೆ ಅವರು ಅನುಸರಿಸಿದ ಆದರ್ಶ.  ಅಹಿಂಸೆಯ ಮಾರ್ಗದಲ್ಲಿ ಸತ್ಯದ ಸಾಕ್ಷಾತ್ಕಾರ­ಕ್ಕಾಗಿ ನಡೆಸುತ್ತಿರುವ ಶರ್ಮಿಳಾರ ಈ ಹೋರಾಟಕ್ಕೆ ಅಂತ್ಯವೆಲ್ಲಿ? ಈಗಾಗಲೇ ಮಾನವ ಇತಿಹಾಸದಲ್ಲಿ ಅತಿ ದೀರ್ಘವಾದ ಉಪವಾಸ ಸತ್ಯಾಗ್ರಹ ಇದಾಗಿದೆ.

ನಾಗರಿಕ ಅಸಹಕಾರ ಸಿದ್ಧಾಂತದ ಪ್ರತಿಪಾದಕ ಥೋರೊ, ‘ಅಸಮರ್ಪಕ ಕಾನೂನುಗಳನ್ನು ಪಾಲಿಸಬೇಡಿ’ ಎಂದೇ ಜನರಿಗೆ ಸಲಹೆ ನೀಡು­ತ್ತಿದ್ದ.  ತತ್ವನಿಷ್ಠವಾದ ಪ್ರತಿರೋಧ ನ್ಯಾಯಯುತ­ವಾಗಿ ಚಿಂತಿಸುವ ನಾಗರಿಕನ ಕರ್ತವ್ಯ ಎಂಬು­ದನ್ನು ಮರೆಯಲಾಗದು.

ಬಂಡುಕೋರರು ಹಾಗೆಯೇ ಭದ್ರತಾಪಡೆಗಳ ಹಿಂಸಾಚಾರಗಳನ್ನು ವಿರೋಧಿಸುತ್ತಾ ಮಣಿ­ಪುರದ ನೆಲದಲ್ಲಿ ಶಾಂತಿಗಾಗಿ ಹೋರಾಡುತ್ತಾ ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಶರ್ಮಿಳಾ. 

        ನನ್ನ ಹುಟ್ಟೂರಿನಿಂದ
    ವಿಶ್ವದ ಮೂಲೆಮೂಲೆಗೆ
    ಪಸರಿಸುವೆ ಶಾಂತಿಯ ಕಂಪು


ಎಂದು ಶರ್ಮಿಳಾ ತಾವು ಬರೆದ ಪದ್ಯ­ವೊಂದ­ರಲ್ಲಿ ಹೇಳಿಕೊಂಡಿದ್ದಾರೆ.  ಅವರ ಈ  ಆಶಯ ಎಲ್ಲರದೂ ಆಗಿರಬೇಕಾದ ಹೊತ್ತು ಇದು.

Thursday, January 29, 2015

ಸುಂದರ ಜಿಲ್ಲೆಯನ್ನು ಸುತ್ತುವರಿದ ವಿಷಾದ ಗೀತೆ
ಜಿ.ಪಿ.ಬಸವರಾಜು


ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುತ್ತು ಹೋಗಿಬಂದರೆ ಜೀವ ಉಲ್ಲಾಸಗೊಳ್ಳುತ್ತದೆ. ದಟ್ಟ ಮತ್ತು ಭಯಾನಕವಾದ ಕಾಡು ಬೆಚ್ಚಿಬೀಳಿಸುತ್ತದೆಂಬುದೂ ನಿಜ. ಚಿರತೆ ಹುಲಿಗಳೂ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಎದುರಾಗುವುದೂ ಉಂಟು. ಈ ಕಾಡುಗಳಲ್ಲಿನ ನದಿಗಳು, ಝರಿಗಳು, ಜಲಪಾತಗಳು, ತೀರ ಅಪರೂಪದ ಜೀವ ವೈವಿಧ್ಯ ಮತ್ತು ಸಸ್ಯ ವೈವಿಧ್ಯ ನಮ್ಮ ನಿರಂತರ ಬೆರಗಿಗೆ ಕಾರಣವಾಗುತ್ತವೆ. ಒಂದು ಕಡೆ ಸಹ್ಯಾದ್ರಿಯ ಸಾಲು, ಮತ್ತೊಂದು ಕಡೆ ಉದ್ದಕ್ಕೆ ಚಾಚಿಕೊಂಡ (ಅರಬ್ಬೀ ಸಮುದ್ರದ) ಕಡಲ ತೀರ. ಎಲ್ಲಿಂದ ಹೊರಟರೂ ಉಲ್ಲಾಸವೇ ಎದುರಾದಂತೆ ಭಾಸವಾಗುತ್ತದೆ. ಉರಿಯುವ ಸೂರ್ಯ ಬೇಡವೆಂದರೆ, ದಟ್ಟಕಾಡಿನ ಪ್ರದೇಶಗಳನ್ನು ಹೊಕ್ಕು ತಣ್ಣಗೆ ತಿರುಗಾಡಬಹುದು.

ಈ ಚೆಲುವನ್ನು, ಉಲ್ಲಾಸದ ಘಟ್ಟಗಳನ್ನು ದಾಟಿ ನೋಡಿದರೆ ಇಲ್ಲಿಯೂ ಒಂದು ವಿಷಾದ ಗೀತೆ ಕೇಳುವುದುಂಟು. ಆ ಎಳೆಯನ್ನೇ ಹಿಡಿದು ಹೋದರೆ ತೀವ್ರ ನೋವಿನ, ಯಾತನೆಯ, ಸಂಕಟದ ಕೊನೆಯಿಲ್ಲದ ನದಿಯೊಂದು ಹರಿದು ಹೋಗುತ್ತಿರುವುದೂ ಕಂಡುಬರುತ್ತದೆ. ವಿಸ್ತಾರವಾದ, ಕರ್ನಾಟಕದಲ್ಲಿಯೇ ದೊಡ್ಡದಾದ ಈ ಜಿಲ್ಲೆಯಲ್ಲಿ ಜನಸಂಖ್ಯೆ ತೀರ ವಿರಳ; ಅದೂ ದಟ್ಟ ಕಾಡುಗಳಿರುವ ಭಾಗದಲ್ಲಂತೂ ಜನ ತೀರ ಅಪರೂಪ. ನಿಸರ್ಗ ಸಂಪತ್ತು ತುಂಬಿ ತುಳುಕುತ್ತಿರುವಂತೆ ಕಂಡರೂ, ಆಧುನಿಕ ಮನುಷ್ಯನ ತೀರದ ಆಸೆ ಗರಿಗೆದರಿ, ಈ ಸಂಪತ್ತಿನ ಕೊಳ್ಳೆಯೂ ಆರಂಭವಾಗಿರುವುದನ್ನು ಗುರುತಿಸಬಹುದು.

ಒಂದು ಕಾಲಕ್ಕೆ ಅಂಕೋಲೆಯಿಂದ ಹೊರಟು ಕಾರವಾರದತ್ತ ಪಯಣಿಸಿದರೆ ಅದ್ಭುತ ನೋಟಗಳು ಎದುರಾಗುತ್ತಿದ್ದವು. ಅಲ್ಲಲ್ಲಿ ತಿರುವುಗಳಲ್ಲಿ, ಎತ್ತರದ ಜಾಗಗಳಲ್ಲಿ ನಿಂತು ನೋಡಿದರೆ ಕಡಲು ತನ್ನ ಮೋಹಕತೆಯ ಬಲೆಯನ್ನು ಬೀಸುತ್ತಿತ್ತು. ಮೈಮರೆತು ನೋಡಿದಷ್ಟೂ ಸೊಬಗು ಮೆರೆಯುತ್ತಿತ್ತು. ಈಗ ಅಂಥ ನೋಟಕ್ಕೆ ಎಡೆಯೇ ಇಲ್ಲ. ನೀವು ಹಟತೊಟ್ಟು ನಿಂತರೆ ’ಸೀಬರ್ಡ್’ ರೆಕ್ಕೆಗಳು ನಿಮ್ಮ ನೋಟವನ್ನು ತಡೆಯುತ್ತವೆ. ಭಾರತದ ನೌಕಾನೆಲೆಗಾಗಿ ನಿರ್ಮಾಣವಾಗಿರುವ ಈ ಜಾಗದ ಗೌಪ್ಯವನ್ನು ಕಾಪಾಡಲು ಎತ್ತರದ ಗೋಡೆಯನ್ನು ಉದ್ದಕ್ಕೂ ಕಟ್ಟಲಾಗಿದೆ. ಎಲ್ಲಿಗೇ ಹೋದರೂ ಈ ಗೋಡೆ ಚೀನಾಗೋಡೆಯಂತೆಯೇ ನಮ್ಮ ನೋಟವನ್ನು ತಡೆಯುತ್ತದೆ.

ನೌಕಾನೆಲೆ ಒಂದು ಬೃಹತ್ ಯೋಜನೆ. ೧೯೯೯ರಲ್ಲಿ ಆರಂಭವಾಗಿ ೨೦೦೫ರಲ್ಲಿ ಮುಕ್ತಾಯವಾದ ಈ ಯೋಜನೆಯ ಮೊದಲ ಹಂತ; ೨೦೧೧ರಲ್ಲಿ ಆರಂಭವಾಗಿರುವ ಎರಡನೇ ಹಂತದ ಕಾರ್ಯ; ಮುಂದೆ ಆರಂಭವಾಗಲಿರುವ ಮೂರನೇ ಹಂತದ ಕಾರ್ಯ ಮುಗಿದಾಗ ಇಡೀ ಭಾರತದಲ್ಲಿಯೇ ಇದೊಂದು ಬೃಹತ್ ನೌಕಾನೆಲೆಯಾಗುತ್ತದೆ. ಇಡೀ ಯೋಜನೆಗೆ ಮೂರು ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದೆಲ್ಲ ಪೂರ್ಣವಾದರೆ (ಸುಮಾರು ೨೦೨೦ರ ಹೊತ್ತಿಗೆ ಸಂಪೂರ್ಣಗೊಳ್ಳುವ ನಿರೀಕ್ಷೆ) ಇಲ್ಲಿ ೬೦ ಪ್ರಮುಖ ಯುದ್ಧ ನೌಕೆಗಳು ನಿಲ್ಲಬಹುದು. ಹೆಲಿಕಾಪ್ಟರ್‌ಗಳು ಬಂದಿಳಿಯುವ ನಿಲ್ದಾಣಕ್ಕೂ ಇಲ್ಲಿ ಅವಕಾಶವಿದೆ. ಇನ್ನು ಸೈನಿಕರು? ಸುಮಾರು ೩೦೦ ಅಧಿಕಾರಿಗಳು, ೨೫೦೦ ಸಿಬ್ಬಂದಿ ಇತ್ಯಾದಿ ಅಂಕಿಅಂಶಗಳು ಬೆಳೆಯುತ್ತಲೇ ಹೋಗುತ್ತವೆ. ಅವರಿಗೆಲ್ಲ ನಿವಾಸ, ಆಸ್ಪತ್ರೆ, ಶಾಲೆ, ಕಾಲೇಜು, ಕಚೇರಿ ಇತ್ಯಾದಿ ಇತ್ಯಾದಿ ಬೇಕೇಬೇಕಲ್ಲವೇ? ಈ ಪ್ರಪಂಚವೇ ಕಡಲತೀರವನ್ನು ಆವರಿಸಿಬಿಡುತ್ತದೆ.

ಭಾರತದ ರಕ್ಷಣೆಯ ದೃಷ್ಟಿಯಿಂದ ಇದೆಲ್ಲ ಇರಬೇಕಾದದ್ದೇ. ಆದರೆ ಈ ಕಾರಣಕ್ಕಾಗಿ ಒಕ್ಕಲೆದ್ದ ಕುಟುಂಬಗಳು ಎಷ್ಟು? ಅವರ ಸ್ಥಿತಿಗತಿ? ನಮ್ಮ ವಿಷಾದ ಗೀತೆ ಆರಂಭವಾಗುವುದೇ ಇಲ್ಲಿಂದ:  ೨೩ ಕಿ.ಮೀ.ಉದ್ದದ ತೀರ, ಸುಮಾರು ಹನ್ನೊಂದು ಸಾವಿರ ಎಕರೆಯಷ್ಟು ಭೂಮಿ, ಸುಮಾರು ಐದು ಸಾವಿರ ಕುಟುಂಬಗಳು-ಇದೆಲ್ಲವನ್ನು ಈ ಸೀಬರ್ಡ್ ಯೋಜನೆ ನುಂಗಿಹಾಕಿದೆ. ವಸತಿ ಕಳೆದುಕೊಂಡವರಲ್ಲಿ ಕೃಷಿಕರು ಮತ್ತು ಮೀನುಗಾರರೂ ಇದ್ದಾರೆ. ಇವರಿಗೆಲ್ಲ ಪುನರ್ವಸತಿ ಕಲ್ಪಿಸುವ ಹೊಣೆಯೂ ಸರ್ಕಾರದ ಮೇಲಿದೆ. ಈ ಕೆಲಸ ಈಗಾಗಲೇ ನಡೆದಿದ್ದರೂ ಅದು ಅಷ್ಟು ಸಮರ್ಪಕವಾಗಿಲ್ಲ. ಈ ಕಾರಣಕ್ಕಾಗಿ ಹೊಸ ನೆಲೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದ ಕೆಲ ಕುಟುಂಬಗಳು ಗೋವಾದತ್ತ ವಲಸೆ ಹೋಗಿವೆ. ಸುಮಾರು ಹದಿಮೂರು ಹಳ್ಳಿಗಳನ್ನೂ ಈ ಯೋಜನೆ ನಿರ್ನಾಮ ಮಾಡಿದೆ.

ಇದರ ಜೊತೆಗೆ ಕೊಂಕಣ್ ರೈಲ್ವೆಯ  ಹಳಿಗಳೂ ಈ ಕಡಲತೀರದುದ್ದಕ್ಕೂ ಚಾಚಿಕೊಂಡು ಇನ್ನಷ್ಟು ಕುಟುಂಬಗಳ ಎತ್ತಂಗಡಿಗೆ ಕಾರಣವಾಗಿದೆ. ಈ ಎರಡೂ ಕಾರಣಗಳಿಂದ ಒಟ್ಟು ಎಂಟು ಸಾವಿರ ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ ಎಂಬುದನ್ನು ವಿವಿಧ ಅಂಕಿ ಅಂಶಗಳು ಹೇಳುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ದುರಂತದ ಪುಟಗಳು ಇಲ್ಲಿಗೇ ಕೊನೆಯಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ದಟ್ಟ ಕಾಡಿನಲ್ಲಿ ನುಸುಳಿ, ಆಳ ಕಣಿವೆಗಳಲ್ಲಿ ಹರಿದು, ಅರಬ್ಬೀ ಸಮುದ್ರವನ್ನು ಸೇರುವ ಕಾಳಿ ನದಿ ಒಂದು ಅದ್ಭುತ ಜೀವ ಚೈತನ್ಯ. ಈ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ (ಸೂಪಾ, ನಾಗ್‌ಝರಿ-೧,೨, ಕದ್ರಾ ಮತ್ತು ಕೊಡಸಳ್ಳಿ) ಜಲವಿದ್ಯುತ್‌ಗೆ ದಾರಿಮಾಡಿಕೊಡಲಾಗಿದೆ. ಇದಲ್ಲದೆ ಶರಾವತಿ ನದಿಗೆ ಗೇರುಸೊಪ್ಪಾ ಬಳಿ ಅಣೆಕಟ್ಟು ಕಟ್ಟಿ ಅಲ್ಲಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಎಲ್ಲ ಜಲ ವಿದ್ಯುತ್ ಯೋಜನೆಗಳಿಂದ ರಾಜ್ಯಕ್ಕೆ ಸಿಕ್ಕುತ್ತಿರುವ ವಿದ್ಯುತ್ತಿನ ಪ್ರಮಾಣ ೧೪೮೦ ಮೆಗಾವಾಟ್. ಸುಮಾರು ಎರಡು ದಶಕಗಳ ಹಿಂದೆ ವಿವಾದವನ್ನು ಹುಟ್ಟುಹಾಕಿದ, ಶಿವರಾಮ ಕಾರಂತರ ಮುಂದಾಳುತನದಲ್ಲಿ ವಿರೋಧೀ ಹೋರಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟ ಕೈಗಾ ಅಣುವಿದ್ಯುತ್ ಸ್ಥಾವರವೂ ಈ ಜಿಲ್ಲೆಯ ಮಡಿಲಲ್ಲೇ ಮಲಗಿರುವ ಕೂಸು. ಕೈಗಾದಿಂದ ೪೪೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ದುರಂತದ ತೂಗುಕತ್ತಿಯೊಂದು ನಿರಂತರವಾಗಿ ನೆತ್ತಿಯ ಮೇಲೆ ತೂಗುವಂತೆ ಮಾಡಿರುವ ಈ ಅಣುವಿದ್ಯುತ್ ಸ್ಥಾವರ ಜಿಲ್ಲೆಗೆ ವರವಂತೂ ಅಲ್ಲ.

ಇದು ಸಾಲದೋ ಎನ್ನುವಂತೆ ಏಳನೆಯ ಜಲ ವಿದ್ಯುತ್ ಯೋಜನೆಯೊಂದು ತಲೆ ಎತ್ತುವ ಹುನ್ನಾರದಲ್ಲಿತ್ತು. ಆದರೆ ಸ್ಥಳೀಯರ ಪ್ರತಿರೋಧ ತೀವ್ರವಾಗಿ ಆ ಯೋಜನೆಯನ್ನು ಕೈಬಿಡಲಾಯಿತು.

ಹತ್ತಾರು ಹಳ್ಳಿಗಳು ಈ ಅಣೆಕಟ್ಟುಗಳ ಕಾರಣದಿಂದ ಮುಳುಗಿರುವುದು ನಿಜ. ಈ ಹಳ್ಳಿಗಳನ್ನು ಮತ್ತೆ ರೂಪಿಸುವ, ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತೆ ನೆಲೆ ಒದಗಿಸುವ ಕಾರ್ಯಗಳೂ ನಡೆದಿವೆ. ಈ ವಿಷಾದದ ನಡುವೆಯೂ ಸಮಾಧಾನದ ಸಂಗತಿ ಎಂದರೆ ಕೆಪಿಸಿಯ ಮುಖ್ಯ  ಇಂಜಿನಿಯರ್ ಆಗಿ ಸೂಪಾದಲ್ಲಿ ಕೆಲಸ ಮಾಡುತ್ತಿದ್ದ (ಈಗ ಮುಖ್ಯ ಇಂಜಿನಿಯರ್-’ಅನ್ವೇಷಣೆ’) ಶಂಕರ್ ದೇವನೂರ್ ಅವರಂಥ ಮಾನವೀಯ ಕಾಳಜಿಯ ಅಧಿಕಾರಿಗಳು. ಈ ಶಂಕರ್ ದೇವನೂರ ಎಂಥ ಅದ್ಭುತ ವ್ಯಕ್ತಿ ಎಂದರೆ ಎಲ್ಲ ದುರಂತಗಳನ್ನೂ ಮರೆಸುವ, ನಿಜವಾದ ಮನುಷ್ಯ ಪ್ರೀತಿಯನ್ನು ಬಿತ್ತುವ, ನೊಂದವರ ಹೊಸ ನೆಲೆಗಳನ್ನು ಕಟ್ಟುವ ಚೈತನ್ಯವಿರುವ ಅಧಿಕಾರಿ. ಇಂಥವರಿದ್ದರೆ ಜನ ನೆಮ್ಮದಿಯಿಂದ ಉಸಿರಾಡುತ್ತಾರೆ; ಸರ್ಕಾರದ ಬಗೆಗಿನ ಅವರ ರೋಷ ತಣ್ಣಗಾಗುತ್ತದೆ.

ಬಹಳ ಹಿಂದೆಯೇ ಈ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಗುರುತಿಸಿದ್ದರೂ, ಸ್ಥಳೀಯರಿಗೆ ಕೈತುಂಬ ಉದ್ಯೋಗವನ್ನು ದೊರಕಿಸುವ ಸಣ್ಣ ಸಣ್ಣ ಕೈಗಾರಿಕೆಗಳು, ಮೀನುಗಾರಿಕೆಯನ್ನು ಉತ್ತೇಜಿಸುವ ಯೋಜನೆಗಳು, ಕೃಷಿ ಮತ್ತು ಹಯನುಗಾರಿಕೆಗೆ ಬೆಂಬಲವಾಗಿ ನಿಲ್ಲಬಲ್ಲ ಚಟುವಟಿಕೆಗಳು ಇಲ್ಲಿಗೆ ಬಂದೇ ಇಲ್ಲ. ಇಷ್ಟೆಲ್ಲ ವಿದ್ಯುತ್ತನ್ನು ಇಲ್ಲಿ ಉತ್ಪಾದಿಸಿದರೂ ಈ ಜಿಲ್ಲೆಯಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ತಿನ ಪ್ರಮಾಣ ಕೇವಲ ೨೦ ಮೆಗಾವಾಟ್ ಎಂದರೆ ಇಲ್ಲಿರಬಹುದಾದ ಕೈಗಾರಿಕೆಗಳ ಅಂದಾಜು ಯಾರಿಗಾದರೂ ಸಿಕ್ಕೀತು.

ದಾಂಡೇಲಿಯಲ್ಲಿರುವ ಕಾಗದದ ಕಾರ್ಖಾನೆಯಿಂದ ಈ ಜಿಲ್ಲೆಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿದೆ. ಈ ಕಾರ್ಖಾನೆ ತನ್ನ ಕಶ್ಮಲವನ್ನೆಲ್ಲ ಕಾಳಿ ನದಿಗೆ ತುಂಬುತ್ತ, ನದಿನೀರನ್ನು ಹೊಲಸು ಮಾಡುತ್ತಿದೆ ಎಂಬ ದೂರು ಬಹಳ ಹಳೆಯದು. ಇದನ್ನು ತಡೆಯುವ ಹೋರಾಟವನ್ನೂ ಈ ಜಿಲ್ಲೆಯ ಜನ ಮಾಡಿದರು. ಆದರೆ ಪ್ರಯೋಜನ ಮಾತ್ರ ಆಗಿಲ್ಲ ಎನ್ನುವಂಥ ಸ್ಥಿತಿ ಮುಂದುವರಿದಿದೆ.

ಇಲ್ಲಿ ಸಿದ್ದಿ, ಕುಣಬಿ, ಹಾಲಕ್ಕಿ, ಗೊಂಡ, ಗೌಳಿ ಬುಡಕಟ್ಟುಗಳಿವೆ. ೪೦೦ ವರ್ಷಗಳ ಹಿಂದೆ ಪೋರ್ತುಗೀಸರು ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಗುಲಾಮರನ್ನಾಗಿ ತಂದ ಸಿದ್ದಿಗಳು ಈಗ ಈ ನೆಲದ ಮಕ್ಕಳೇ ಆಗಿದ್ದಾರೆ. ಹಾಲಕ್ಕಿ, ಗೊಂಡ, ಗೌಳಿ, ಕುಣಬಿಗಳು ಇಲ್ಲಿರುವ ಇತರೆ ಬುಡಕಟ್ಟು ಸಮುದಾಯಗಳು. ಇವರ ಸ್ಥಿತಿಗತಿಗಳನ್ನು ಸುಧಾರಿಸುವ ದಿಕ್ಕಿನಲ್ಲಿಯೂ ನಮ್ಮ ಸರ್ಕಾರಗಳು ಮಹತ್ವದ ಯೋಜನೆಗಳನ್ನು ರೂಪಿಸಿಲ್ಲ. ಇದೆಲ್ಲ ಈ ಜಿಲ್ಲೆಯ ದುರಂತ ಕತೆಯೇ.

ಇನ್ನು ಈ ಜಿಲ್ಲೆಯಲ್ಲಿರುವ ಸಾಂಸ್ಕೃತಿ ಸಂಪತ್ತಂತೂ ಬಹಳ ದೊಡ್ಡದು. ಯಕ್ಷಗಾನ, ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ, ಜಾನಪದ, ಬುಡಕಟ್ಟು ಔಷಧ, ಬುಡಕಟ್ಟು ಜ್ಞಾನ, ಸಾಹಿತ್ಯ ಇತ್ಯಾದಿ. ಈ ಸಂಪತ್ತಿಗೆ ಎಷ್ಟೊಂದು ಮುಖ; ಎಂಥ ಆಯಾಮ. ಇದನ್ನೆಲ್ಲ ಉಳಿಸಿ, ಬೆಳಸುವ ದಿಕ್ಕಿನಲ್ಲಿಯೂ ಮಹತ್ವದ ಕೆಲಸಗಳು ಆಗಿಲ್ಲ.

ಈ ಜಿಲ್ಲೆಯಲ್ಲಿಯೇ ಸಮಾಜವಾದಿ ಚಳವಳಿಯ ದಿನಕರ ದೇಸಾಯಿ ಆಗಿ ಹೋದರು. ಅಂಕೋಲೆಯ ಸ್ವಾತಂತ್ರ್ಯ ಹೋರಾಟ ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ದೊಡ್ಡ ಅಧ್ಯಾಯ. ಇದನ್ನೆಲ್ಲ ಹೆಮ್ಮೆಯಿಂದ ನೋಡುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಲಾಗಿಲ್ಲ.

ಈ ಜಿಲ್ಲೆಯ ಘೋರ ದುರಂತದ ಮೇಲೆ ಮುಸುಕು ಎಳೆಯುವುದಕ್ಕಾದರೂ ಸರ್ಕಾರ ಇಂಥ ಕಾರ್ಯಗಳನ್ನು ಕೈಗೊಳ್ಳಬೇಕು.

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

30 ಜನೇವರಿ ಬೆಂಗಳೂರು : ಸೌಹಾರ್ದತೆಗಾಗಿ ಪ್ರಗತಿಪರ ಸಂಘಟನೆಗಳ ನಡಿಗೆ ಕಾರ್ಯಕ್ರಮದ ಕರಪತ್ರ

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಜಾರಿ : ಕಸಾಪ ಸಮ್ಮೇಳನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯದ ಬಗ್ಗೆ ಚರ್ಚೆಆತ್ಮೀಯರೇ,

ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತೃಭಾಷಾ ಮಾಧ್ಯಮವನ್ನು ಒಳಗೊಂಡತೆ ಸಮಾನ ಶಿಕ್ಷಣ ನೀತಿ ಜಾರಿಗಾಗಿ ಒತ್ತಾಯಿಸಿ ಈ ನಾಡಿನ ಎಲ್ಲಾ ಪ್ರಜ್ಞಾವಂತರ, ಸಾಹಿತಿಗಳ, ಪೋಷಕರ, ವಿದ್ಯಾರ್ಥಿಗಳ ಸಹಿ ಸಂಗ್ರಹಿಸಿ 3ನೇ ದಿನ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಲ್ಲಿಸುವ ಮೂಲಕ  ಈ ವಿಚಾರಕ್ಕೆ ಅಂದು ಸರಿಯಾದ ನಿರ್ಣಯ ಕೈಗೊಳ್ಳುವುದರ ಜೊತೆಗೆ ನಿರ್ಣಯಗಳು ಜಾರಿಯಾಗುವಂತೆ ಮಾಡುವುದಕ್ಕಾಗಿ ಕ.ಸಾ.ಪ ಮತ್ತು ಸರ್ಕಾರದ ಮೇಲೆ ಒತ್ತಡ ತರುವುದು ಸೂಕ್ತವಲ್ಲವೇ? ಅದಕ್ಕಾಗಿ ತಯಾರಿಸಿದ ಕರಡು ಮನವಿ ಪತ್ರ ಇಲ್ಲಿದೆ. ಬೇಡಿಕೆಗಳನ್ನು ಓದಿ ಸೇರ್ಪಡೆ ಮತ್ತು ತಿದ್ದುಪಡಿಗಳಿದ್ದರೆ 31-01-2014ರ ಶನಿವಾರ ಮಧ್ಯಾಹ್ನ 1 ಗಂಟೆಯೊಳಗೆ ತಿಳಿಸಿದ್ದಲ್ಲಿ ಅದನ್ನು ಒಳಗೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಈ ವಿಚಾರದ ಪ್ರಚಾರಾಂದೋಲನಕ್ಕಾಗಿ  ಮಳಿಗೆಯೊಂದನ್ನು ತೆರೆದಿದ್ದು (ಪುಸ್ತಕ ಮಳಿಗೆ ಸಂಖ್ಯೆ 415)  ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.  ಬಂದು ಈ ಹಕ್ಕೊತ್ತಾಯ ಪತ್ರಕ್ಕೆ ಸಹಿ ಮಾಡಿ. ಈ ಹೋರಾಟದಲ್ಲಿ  ಕೈಜೋಡಿಸಬೇಕಾಗಿ ಮನವಿ.


--

mutturaju
mandya
7353770202
mutturaj1988@gmail.com
ಇವರಿಗೆ,
ಶ್ರೀ ಪುಂಡಲೀಕ ಹಾಲಂಬಿ,
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು

ಮಾನ್ಯರೇ,

ವಿಷಯ: ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಜಾರಿ ಮಾಡಿಸುವ ಕುರಿತಾಗಿ ನಡೆಸಬೇಕಾದ
ಜನಾಂದೋಲನಕ್ಕೆ ಪೂರ್ವ ತಯಾರಿಯಾಗಿ ಈ ಸಮ್ಮೇಳನದಲ್ಲಿ ತೆಗೆದುಕೊಳ್ಳಬೇಕಾದ  
ನಿರ್ಣಯದ ಬಗ್ಗೆ,

ಇವತ್ತಿನ ಸಂದರ್ಭವು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೂ, ನಮ್ಮೆಲ್ಲರ ಮೇಲೂ ಒಂದು ಚಾರಿತ್ರಿಕವಾದ ಜವಾಬ್ದಾರಿಯನ್ನು ಹೊರಿಸಿದೆ. ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ಕುರಿತಾಗಿ ನಮ್ಮ ಸರ್ಕಾರಗಳು ಇಚ್ಛಾಶಕ್ತಿಯನ್ನು ಪ್ರಕಟಿಸದೇ ಇರುವುದು ಕನ್ನಡ ಮತ್ತು ಕನ್ನಡದಂತಹ ದೇಶೀಭಾಷೆಗಳನ್ನು ಅವನತಿಗೆ ತಳ್ಳುತ್ತಿವೆ ಮಾತ್ರವಲ್ಲಾ, ಈ ಭಾಷೆಗಳನ್ನಾಡುವ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರನ್ನಾಗುವಂತೆ ಮಾಡುತ್ತಿವೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ನೀಡಿದ ತೀರ್ಪು ಈ ವಿಚಾರವನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಆದರೆ ಮಾತೃಭಾಷಾ ಮಾಧ್ಯಮವನ್ನು ಜಾರಿ ಮಾಡುವುದು ಅಸಾಧ್ಯವಾದ ಸಂಗತಿಯೇನಲ್ಲ. ಆದರೆ, ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಸಂಗತಿಯನ್ನು ಮುಂದಿಟ್ಟುಕೊಂಡು, ಮಾಡಬಹುದಾದ್ದನ್ನೂ ಮಾಡದೇ ಹೋಗುವ ಮತ್ತು ಆ ಮೂಲಕ ಇನ್ನೂ ದಶಕಗಳ ಕಾಲ ಇದನ್ನು ನೆನೆಗುದಿಗೆ ಬೀಳಿಸುವ ಸಾಧ್ಯತೆ ಇದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿ ಸಮ್ಮೇಳನಾಧ್ಯಕ್ಷತೆಯನ್ನು ನಿರಾಕರಿಸಿದ ದೇವನೂರ ಮಹಾದೇವರ ನಿಲುವೂ ಇದೇ ಆಗಿದೆ. ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರಾದ ದೇವನೂರರ ನಿಲುವು ಈ ಸಮ್ಮೇಳನದಲ್ಲೇ ನಿರ್ಣಾಯಕವಾದ ಹೆಜ್ಜೆಗಳನ್ನಿಡಲು ಪ್ರೇರೇಪಿಸಬೇಕಿದೆ. ಈ ಬಗೆಗಿನ ಚರ್ಚೆಯ ಚೌಕಟ್ಟು ಈಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗುಳಿಯದೆ, ರಾಜ್ಯಗಳ ಗಡಿ ದಾಟಿ ಇಡೀ ದೇಶಕ್ಕೆ ವ್ಯಾಪಿಸಿದೆ. ತಮ್ಮದೇ ಆದ ಪ್ರಾದೇಶಿಕ ಭಾಷೆಗಳನ್ನುಳ್ಳ ಎಲ್ಲಾ ರಾಜ್ಯಗಳಲ್ಲೂ ಈ ತೀರ್ಪಿನ ನಂತರ ಭಾಷೆಗಳ ಉಳಿವಿನ ಸವಾಲು ಎದುರಾಗಿದೆ.

ಇದು ಭಾಷಾಭಿಮಾನದ ಪ್ರಶ್ನೆಯೂ ಹೌದು; ಪ್ರಧಾನವಾಗಿ ಈ ನಾಡಿನ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ವೈಜ್ಞಾನಿಕವಾದ ಕಲಿಕಾ ಕ್ರಮದ ಸಂಗತಿಯೂ ಹೌದು. ಕಲಿಕೆಯ ಮಾಧ್ಯಮದ ಕುರಿತಂತೆ ಪ್ರಪಂಚದ ಶಿಕ್ಷಣ ತಜ್ಞರ ಹಾಗೂ ಭಾಷಾ ತಜ್ಞರೆಲ್ಲರ ಅಭಿಪ್ರಾಯ ಇದೇ ಆಗಿದೆ. ನಮ್ಮ ದೇಶದಲ್ಲಿಯೂ ಈ ಬಗ್ಗೆ ವಿಸ್ತಾರವಾದ ಚರ್ಚೆಗಳು ನಡೆದಿವೆ. ಎನ್‌ಸಿಇಆರ್‌ಟಿಯು (ಶಿಕ್ಷಣದಲ್ಲಿನ ಸಂಶೋಧನೆ ಮತ್ತು ತರಬೇತಿಗಾಗಿನ ರಾಷ್ಟ್ರೀಯ ಪರಿಷತ್ತು) ವಿಜ್ಞಾನ, ಗಣಿತ ಮತ್ತು ಇಂಗ್ಲಿಷನ್ನು ಕಲಿಯುವ ಅತ್ಯುತ್ತಮ ವಿಧಾನ ಯಾವುದೆಂದು ಪರಿಶೀಲಿಸಲು ನೇಮಿಸಿದ ತಜ್ಞ ಸಮಿತಿಗಳು ಒಂದು ಅಂಶವನ್ನು ಸ್ಪಷ್ಟಪಡಿಸಿವೆ. ವಿಜ್ಞಾನವನ್ನು, ಗಣಿತವನ್ನು ಮತ್ತು ಇಂಗ್ಲಿಷನ್ನೂ ಅತ್ಯುತ್ತಮವಾಗಿ ಕಲಿಯಲು ಇರುವ ವಿಧಾನ, ಮಗುವಿನ ಮಾತೃಭಾಷೆಯಲ್ಲಿ ಕಲಿಸುವುದೇ ಆಗಿದೆ ಎಂದು ಆ ಸಮಿತಿಗಳು ಖಚಿತವಾಗಿ ಹೇಳಿವೆ. ಇಂದು ಮಾತೃಭಾಷಾ ಮಾಧ್ಯಮವು ಜಾರಿಗೆ ಬರಲು ನಾವು ತೆಗೆದುಕೊಳ್ಳಬೇಕಾದ ಸರಿಯಾದ ನಿಲುವು ಹಾಗೂ ಹೊಂದಬೇಕಾದ ಧೋರಣೆ ಇದೇ ಆಗಿರಬೇಕಿದೆ.
ಸುಪ್ರೀಂಕೋರ್ಟಿನ ಸಂವಿಧಾನ ಪೀಠದ ತೀರ್ಪಿಗೆ ಪ್ರತಿಯಾಗಿ ಮಾಡಬಹುದೇನು ಎಂಬುದನ್ನು ಚರ್ಚಿಸಬೇಕಿದೆ. ಆದರೆ ಈ ತೀರ್ಪನ್ನು ದಾಟಿ, ಸರ್ಕಾರಗಳು ತೆಗೆದುಕೊಳ್ಳಬಹುದಾದ ತಕ್ಷಣದ ಕ್ರಮಗಳ ಕುರಿತೂ ನಮ್ಮ ಒತ್ತಾಯ ಇರಬೇಕಾದ್ದೂ ಅತ್ಯಂತ ಮಹತ್ವದ ಅಂಶವಾಗಿದೆ. ಸಂವಿಧಾನ ತಿದ್ದುಪಡಿಗೆ ರಾಜಕೀಯ ಒತ್ತಡವನ್ನು ನಿರಂತರವಾಗಿ ಉಂಟು ಮಾಡುವುದರ ಜೊತೆಗೆ ಅನುಸರಿಸಬೇಕಾದ ದಾರಿಯ ಕುರಿತು ಸರ್ಕಾರಗಳ ಮೇಲೆ ನಾವು ಒತ್ತಡವನ್ನು ಹೇರಬೇಕಿದೆ. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿರುವ ’ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆ’ಯೊಂದಿಗೆ ಮತ್ತು ಈ ನಾಡಿನ ಪ್ರಜ್ಞಾವಂತರೊಂದಿಗೆ ನಡೆಸಿದ ಸಮಾಲೋಚನೆಯ ನಂತರ ರಾಜ್ಯ ಸರ್ಕಾರ ಇಡಬಹುದಾದ ಹೆಜ್ಜೆಗಳ ಸಾಧ್ಯತೆಗಳನ್ನು ಮುಂದಿಡುತ್ತಿದ್ದೇವೆ.

೧.    ಇದಕ್ಕೆ ಕಾನೂನಾತ್ಮಕವಾಗಿ ಕಾಣುವ ಮೊದಲನೇ ಪರಿಹಾರ, ಸುಪ್ರೀಂಕೋರ್ಟಿನ ತೀರ್ಪನ್ನು ಅಲ್ಲೇ ಪುನರ್‌ವಿಮರ್ಶೆ ಮಾಡಲು (ನಂತರದ ಕ್ರಮವಾಗಿ ’ಕ್ಯುರೇಟಿವ್ ಪಿಟಿಷನ್’) ಕೋರುವುದು.

೨.    ಕರ್ನಾಟಕ ಸರ್ಕಾರ ಇಡೀ ದೇಶಕ್ಕೆ ಮಾದರಿಯಾದ ಒಂದು ಕ್ರಮದ ಮೂಲಕ ನಿರ್ಣಾಯಕ ಹೆಜ್ಜೆಯಿಡಬಹುದಾಗಿದೆ. ಇದೇ ತೀರ್ಪಿನಲ್ಲಿ ಸರ್ಕಾರೀ ಶಾಲೆಗಳಲ್ಲಿ ಸರ್ಕಾರವು ಬಯಸಿದ ಮಾಧ್ಯಮವನ್ನು ಜಾರಿ ಮಾಡುವ ಅವಕಾಶ ನೀಡಲಾಗಿದೆ. ಹಾಗಾಗಿ, ಸಂವಿಧಾನದ ಕಲಂ ೧೯ (೬)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಶುಲ್ಕ ಸಂಗ್ರಹಿಸುವ ಎಲ್ಲಾ ಖಾಸಗೀ ಶಾಲೆಗಳನ್ನೂ ರಾಷ್ಟ್ರೀಕರಣ ಮಾಡಬೇಕು. ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಇದೇ ಅಧಿಕಾರವನ್ನು ಬಳಸಿಯೇ ಬ್ಯಾಂಕ್ ರಾಷ್ಟ್ರೀಕರಣವನ್ನು ಮಾಡಿದ್ದರು. ಒಂದು ವಾಣಿಜ್ಯ ಉದ್ದೇಶದ ಕ್ಷೇತ್ರದಲ್ಲಿ ರಾಷ್ಟ್ರೀಕರಣ ಸಾಧ್ಯವಾಗಬಹುದಾದರೆ, ರಾಷ್ಟ್ರ ನಿರ್ಮಾಣದ ಉದ್ದೇಶದ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಕರಣ ಮಾಡಲು ಹಿಂಜರಿಯಬೇಕಿಲ್ಲ.

೩.    ಇಂಗ್ಲಿಷ್ ಕಲಿಯಲು ಇರುವ ಅತ್ಯುತ್ತಮ ವಿಧಾನ ಅದನ್ನು ಮಾತೃಭಾಷೆಯ ಮೂಲಕ ಕಲಿಯುವುದೇ ಆಗಿದೆ ಎಂಬುದನ್ನು ಭಾಷಾತಜ್ಞರು ಹೇಳುತ್ತಿರುವಾಗ, ಅದನ್ನು ಸಾಬೀತು ಪಡಿಸುವ ಹೊಣೆಗಾರಿಕೆಯೂ ಇದೆ. ಅಂದರೆ ನಮ್ಮ ಎಲ್ಲಾ ಸರ್ಕಾರೀ ಶಾಲೆಗಳಲ್ಲೂ ಮಾತೃಭಾಷಾ ಮಾಧ್ಯಮವನ್ನು ಜಾರಿ ಮಾಡಿ, ಆ ಶಾಲೆಗಳ ಗುಣಮಟ್ಟವು ಅತ್ಯುತ್ತಮವಾಗಿರುವಂತೆ ನೋಡಿಕೊಂಡು, ಅಲ್ಲಿ ಇಂಗ್ಲಿಷನ್ನೂ ಒಂದು ಭಾಷೆಯನ್ನಾಗಿ ನಿಜವಾದ ಅರ್ಥದಲ್ಲಿ ಅತ್ಯುತ್ತಮವಾಗಿ ಕಲಿಯುವ ಏರ್ಪಾಡನ್ನು ಸರ್ಕಾರವು ಮಾಡಬೇಕು. ಅಂದರೆ ಕೇಂದ್ರೀಯ ವಿದ್ಯಾಲಯಗಳಿಗೆ ನಿಗದಿಯಾಗಿರುವ ಮಾನದಂಡದ ಮಟ್ಟಕ್ಕೆ (ಅಗತ್ಯ ಬಿದ್ದರೆ ಇನ್ನೂ ಮೇಲ್ಮಟ್ಟಕ್ಕೆ) ನಮ್ಮ ಎಲ್ಲಾ ಸರ್ಕಾರೀ ಶಾಲೆಗಳನ್ನೂ ತೆಗೆದುಕೊಂಡು ಹೋಗಬೇಕು.

ಮೊದಲು, ತರಗತಿಗೊಬ್ಬರು ಶಿಕ್ಷಕರು ಇರುವಂತೆ ಮತ್ತು ೬ ನೇ ತರಗತಿಯಿಂದ ಮುಂದಕ್ಕೆ ವಿಷಯಕ್ಕೊಬ್ಬರು ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು. ಶಿಕ್ಷಕರಿಗೆ ಶೈಕ್ಷಣಿಕೇತರ ಕೆಲಸಗಳ ಹೊರೆಯಿಂದ ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು. ಇಂಗ್ಲಿಷ್, ವಿಜ್ಞಾನ ಹಾಗೂ ಗಣಿತ ಬೋಧನೆಯನ್ನೂ, ಸಮಾಜ ವಿಜ್ಞಾನದ ಬೋಧನೆಯನ್ನೂ ಅತ್ಯುತ್ತಮವಾಗಿ ಮಾಡಲು ಬೇಕಾದ ತರಬೇತಿ ಹಾಗೂ ಅನುಕೂಲಗಳನ್ನು ಕಲ್ಪಿಸಬೇಕು. ಈ ಶಾಲೆಗಳಿಂದ ಹೊರಬರುವ ಮಕ್ಕಳು ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ವ್ಯಕ್ತಿತ್ವವನ್ನೂ, ತರಬೇತಿಯನ್ನೂ ಹೊಂದಿರುವಂತೆ ಸಿದ್ಧರಾಗುತ್ತಾರೆ ಮತ್ತು ಯಾವ ಖಾಸಗಿ ಶಾಲೆಗಳಿಗೂ ಈ ಶಾಲೆಗಳೊಂದಿಗೆ ಸ್ಪರ್ಧಿಸುವುದು ಕಷ್ಟವಾಗುತ್ತದೆ.

೪.    ಭಾರತವನ್ನು ಐಕ್ಯಗೊಳಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ಉನ್ನತಗೊಳಿಸಲು ಪೂರಕವಾದ ನೆರೆಹೊರೆ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಸರ್ಕಾರಿ, ಖಾಸಗಿ (ಅನುದಾನ ಸಹಿತ-ರಹಿತ) ಶಾಲೆಗಳಲ್ಲಿ ಪಾಲಿಸುವಂತಾಗಬೇಕು.

೫.    ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ ೭೫ರ? ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಇರುವಂತೆ ತಿದ್ದುಪಡಿಯಾಗಬೇಕು. ಖಾಸಗಿ (ಅನುದಾನ ಸಹಿತ-ರಹಿತ) ಶಿಕ್ಷಣ ಸಂಸ್ಥೆಗಳು ಸರ್ಕಾರದ ಏಜೆನ್ಸಿಯಂತೆ ಕಾರ‍್ಯನಿರ್ವಹಿಸುವಂತಹ ಕಾನೂನು ರೂಪಿಸಲು ಒತ್ತಾಯಿಸಬೇಕು.

೬.    ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ -ಕಲಂ ೨೯ (ಎಫ್)ನಲ್ಲಿ medium of instructions shall, as for as practicable, be in child`s mother tongue; -ಎಂದಿದೆ. ಇಚ್ಛಾಶಕ್ತಿ ಇರುವ ಸರ್ಕಾರಕ್ಕೆ ಮಾತೃಭಾಷಾ ಮಾಧ್ಯಮವನ್ನು ಜಾರಿಗೆ ತರುವುದು practical ಆಗಬೇಕು. ಜೊತೆಗೆ as for as practicable ಅನ್ನುವುದನ್ನು ಕಿತ್ತು ಹಾಕಿ ’ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾ?ಯನ್ನು ಕಡ್ಡಾಯ ಮಾಡುವ’ ಕಾನೂನು ರೂಪಿಸಲು ನಮ್ಮ ಶಾಸಕಾಂಗವನ್ನು ಒತ್ತಾಯಿಸಬೇಕಾಗಿದೆ.

೭.    ಮಕ್ಕಳ ಮನಸ್ಸು ಆಕಾರ ಪಡೆಯುವ ಅಂಗನವಾಡಿಯಿಂದ ಐದನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾ?ಗಳಲ್ಲಿ ಅಂದರೆ ಮಗುವಿನೊಳಗೆ ಪರಿಸರದಿಂದ ಒಡಮೂಡಿ ಉಂಟಾದ ಸಹಜ ಭಾಷೆಗಳಲ್ಲಿ (ಉದಾ : ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಗಳಾದ ತುಳು, ಕೊಂಕಣಿ, ಮರಾಠೀ, ಉರ್ದು, ತಮಿಳು, ಇತ್ಯಾದಿಗಳೊಡನೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆ ಕನ್ನಡವೂ ಸೇರಿದಂತೆ) ಶಿಕ್ಷಣ ಮಾಧ್ಯಮ; ಮುಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಅಪೇಕ್ಷೆ ಪಟ್ಟವರಿಗೆ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಶಿಕ್ಷಣ ಮಾಧ್ಯಮ ಜಾರಿಯಾಗಲು ಒತ್ತಾಯಿಸಬೇಕು.

೮.    ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಹಿಸಿಕೊಡುವುದು ಅಥವಾ ಪರಭಾರೆ ಮಾಡಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡದೇ ಸಾರ್ವಜನಿಕ ಶಾಲೆಗಳನ್ನೇ ಹೆಚ್ಚು ಮಾಡಬೇಕು.

೯.    ಭಾರತಕ್ಕೆ ಎಲ್ಲಾ ಜಾತಿ, ವರ್ಗ, ಧರ್ಮಗಳ ಮಕ್ಕಳು ಒಡನಾಡುವಂತಾಗುವುದೇ ಬಲುದೊಡ್ಡ ಶಿಕ್ಷಣವಾಗುವುದರಿಂದ, ಭಾರತದ ಐಕ್ಯತೆಯ ದೃಷ್ಟಿಯಿಂದ ಹಾಗೂ ಸಂವಿಧಾನದ ಆಶಯದಂತೆ ನಾಳಿನ ಭಾರತವನ್ನು ಕಟ್ಟಲೋಸುಗ ಸಮಾನ ಶಾಲಾ ವ್ಯವಸ್ಥೆ ಜಾರಿಗೆ ತರಲು ಕಾನೂನನ್ನು ತರಬೇಕು.

೧೦.    ನಮ್ಮ ಒಟ್ಟಾರೆ ಅಭಿವೃದ್ಧಿ ಮಾದರಿಯಲ್ಲೇ ಇರುವ ಸಮಸ್ಯೆಯು ಕನ್ನಡವನ್ನು ದುರ್ಬಲಗೊಳಿಸುತ್ತದೆ ಎಂಬುದನ್ನೂ ಮನಗಾಣಬೇಕು. ಇವೆಲ್ಲವೂ ಒಂದಕ್ಕೊಂದು ಸಂಬಂಧವಿರುವ ಅಂಶಗಳಾಗಿದ್ದು, ಆ ನಿಟ್ಟಿನಲ್ಲಿ ನಡೆಯುವ ಚಳವಳಿಗಳು ಸರ್ಕಾರವನ್ನೂ, ಸಮಾಜವನ್ನೂ ಎಚ್ಚರಿಸಬಲ್ಲವು. ಅಂದರೆ, ಸಮಾನ ಶಿಕ್ಷಣ ನೀತಿಗಾಗಿ, ಸಮಾನ ಶಾಲಾ ನೀತಿಗಾಗಿ ನಡೆಯುವ ಚಳವಳಿಗಳು ಸಮಾಜದಲ್ಲಿ ಸಮಾನತೆಯನ್ನು ತರುವ ಚಳವಳಿಗಳೊಂದಿಗೆ ಬೆಸೆದುಕೊಳ್ಳಬೇಕು; ಪರಸ್ಪರ ಬಲವರ್ಧನೆಗೆ ಕೆಲಸ ಮಾಡಬೇಕು.

ಇದಲ್ಲದೇ, ಇನ್ನಾವ ಅಡ್ಡ ಮಾರ್ಗಗಳೂ ಶಿಕ್ಷಣವನ್ನೂ ಉಳಿಸುವುದಿಲ್ಲ; ಮಾತೃಭಾಷೆಯನ್ನೂ ಉಳಿಸುವುದಿಲ್ಲ; ಕನ್ನಡವನ್ನೂ ಉಳಿಸುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗುವುದು ಈ ಸಾಹಿತ್ಯ ಸಮ್ಮೇಳನದಿಂದಲೇ ಆರಂಭವಾಗಬೇಕು. ಇಲ್ಲದಿದ್ದರೆ ದೇವನೂರ ಮಹಾದೇವರು ಎತ್ತಿರುವ ಪ್ರಶ್ನೆಗಳಿಗೆ ಸಾಹಿತ್ಯ ಪರಿಷತ್ತು, ಸಮ್ಮೇಳನ ಮತ್ತು ಕನ್ನಡದ ಪ್ರಜ್ಞಾವಂತರು ಸ್ಪಂದಿಸಿದಂತಾಗುವುದಿಲ್ಲ.

ಈ ಮೇಲ್ಕಂಡ ಅಂಶಗಳನ್ನು ಸಮ್ಮೇಳನದ ನಿರ್ಣಯಗಳಾಗಿ ಸ್ವೀಕರಿಸಿ, ಸರ್ಕಾರದ ಮುಂದೆ ಇಟ್ಟು ಹೋರಾಟವನ್ನು ರೂಪಿಸುವ ಕಡೆಯ ನಿರ್ಣಯವನ್ನೂ ತೆಗೆದುಕೊಳ್ಳಬೇಕೆಂದು ನಾವೆಲ್ಲರೂ ಒತ್ತಾಯಿಸುತ್ತೇವೆ.

ಸಮಾನ ಶಿಕ್ಷಣದ ಹೋರಾಟವನ್ನೂ ಕನ್ನಡದ ಹಾಗೂ ದೇಶೀಭಾಷೆಗಳ ಉಳಿವಿನ ಹೋರಾಟವನ್ನೂ ಬೆಸೆಯೋಣ! ಅದು ಮಾತ್ರವೇ ನಮ್ಮೆಲ್ಲರನ್ನೂ ಗುರಿ ಮುಟ್ಟಿಸುತ್ತದೆ.

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ


ವೈ ಆರ್

ವಾರ್ತಾಭಾರತಿ
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
  

ಕೋಟಿ ಮಂದಿಗೆ ಆಹಾರ ಒದಗಿಸುವುದೇ ಸವಾಲು

ವಿಶ್ವದ ಜನಸಂಖ್ಯೆ 2050ರ ವೇಳೆಗೆ 960 ಕೋಟಿ ತಲುಪುವ ನಿರೀಕ್ಷೆ ಇದೆ. ಎಲ್ಲರಿಗೆ ಆಹಾರ ಸಿಗಬೇಕಾದರೆ ವಿಶ್ವದ ಆಹಾರ ಉತ್ಪಾದನೆ ಕನಿಷ್ಠ ಶೇಕಡ 60ರಷ್ಟು ಹೆಚ್ಚಬೇಕು. ಆಹಾರ ಉತ್ಪಾದನೆಯ ಸುಸ್ಥಿರ ಪ್ರಗತಿಯಾಗದಿದ್ದರೆ, ಹಸಿವಿನ ಸಮಸ್ಯೆ ವಿಶ್ವವನ್ನು ಬೃಹದಾಕಾರವಾಗಿ ಕಾಡಲಿದೆ.

ಇನ್ನಷ್ಟೇ ಬಿಡುಗಡೆಯಾಗಬೇಕಿರುವ 2013-14ನೇ ಸಾಲಿನ ವಿಶ್ವ ಸಂಪನ್ಮೂಲ ವರದಿಯಲ್ಲಿ ಈ ವಿವರವಿದೆ. ವಿಶ್ವ ಸಂಪನ್ಮೂಲ ಸಂಸ್ಥೆಯು ವಿಶ್ವಬ್ಯಾಂಕ್, ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ಮತ್ತು ವಿಶ್ವಸಂಸ್ಥೆಯ ಪರಿಸರ ಯೋಜನೆ ಘಟಕಗಳ ಸಹಕಾರದೊಂದಿಗೆ ಈ ವರದಿಯನ್ನು ತಯಾರಿಸುತ್ತಿದೆ. ಈ ಸಮಸ್ಯೆಯ ಆಳವನ್ನು ವಿಶ್ವದ ಜನತೆಗೆ ತಿಳಿಸುವುದು ಈ ವರದಿಯ ಉದ್ದೇಶ.

ಇದು ಮನುಕುಲದ ಮುಂದಿರುವ ಅತಿದೊಡ್ಡ ಸವಾಲು ಎಂದು ಪ್ರಿನ್ಸ್‌ಟನ್ ವಿವಿ ಸಂಶೋಧಕ ಮತ್ತು ವರದಿಯ ತಾಂತ್ರಿಕ ನಿರ್ದೇಶಕ ಟಿಮ್ ಸರ್ಚಿಂಜರ್ ಅಭಿಪ್ರಾಯಪಡುತ್ತಾರೆ.

ಎರಡನೇ ಮಹಾ ಯುದ್ಧದ ಬಳಿಕ ವಿಶ್ವದಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿದೆ. ಆದರೆ ಇದಕ್ಕೆ ಸಮ ಪ್ರಮಾಣದಲ್ಲಿ ವಿಶ್ವದ ಆಹಾರ ಉತ್ಪಾದನೆಯೂ ಹೆಚ್ಚುತ್ತಾ ಬಂತು. ಆದರೆ ಆಹಾರ ಉತ್ಪಾದನೆ ಹೆಚ್ಚಳಕ್ಕಾಗಿ ಅರಣ್ಯನಾಶ, ಕೃತಕ ಸಾರಜನಕ ಹೊಂದಿದ ಗೊಬ್ಬರಗಳ ಬಳಕೆ, ವ್ಯಾಪಕ ನೀರಾವರಿಯಿಂದ ಇದು ಸಾಧ್ಯವಾಗಿದೆ. ಆದರೆ ಈ ತಂತ್ರದ ಬಳಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿ ಎಷ್ಟರಮಟ್ಟಿಗೆ ಭೀಕರ ಎನ್ನುವ ವಾಸ್ತವದ ಅರಿವು ನಮಗಿದೆ.

   ‘‘ಮುಂದಿನ 35 ವರ್ಷಗಳಲ್ಲಿ ಹೆಚ್ಚುವ ಜನಸಂಖ್ಯೆಗೆ ಅನುಗುಣವಾಗಿ ಅಂದರೆ ಶೇಕಡ 60ರಷ್ಟು ಹೆಚ್ಚು ಆಹಾರಧಾನ್ಯ ಬೆಳೆಯುವುದು ಹೇಗೆ ಮತ್ತು ಪರಿಸರದ ಮೇಲೆ ಇದರಿಂದ ಆಗುವ ದುಷ್ಪರಿಣಾಮ ಏನು ಎನ್ನುವುದು ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಪ್ರಶ್ನೆ ಎಂದು ಸರ್ಚಿಂಜರ್ ಅಭಿಪ್ರಾಯಪಡುತ್ತಾರೆ.

ಇದನ್ನು ಸಾಧಿಸಬೇಕಾದರೆ, ಕೃಷಿ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಳ್ಳುವುದು ಮತ್ತು ಪಶುಸಂಪತ್ತನ್ನು ಹೆಚ್ಚು ಮಾಡುವುದು ಅನಿವಾರ್ಯ. ಆಹಾರ ಉತ್ಪಾದನೆಯ ಹೆಚ್ಚಳಕ್ಕೆ ಮತ್ತು ಪಶುಸಂಪತ್ತು ಬೆಳೆಸಲು ನಾವು ಇನ್ನು ಅರಣ್ಯವನ್ನು ನಾಶ ಮಾಡುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಬದಲಾಗಿ ನಾವು ಹೆಚ್ಚು ಉತ್ಪಾದಕತೆ ಮತ್ತು ಸುಸ್ಥಿರತೆ ಕಾಪಾಡಿಕೊಂಡು ಹೋಗುವ ಬಗ್ಗೆ ಗಮನ ಹರಿಸಬೇಕಿದೆ. ಜನಸಂರಕ್ಷಣೆ, ಭೂಸಾರ ಸಂರಕ್ಷಣೆ ಮತ್ತು ಹಸಿರುಮನೆಯ ಪರಿಣಾಮದಿಂದ ಪರಿಸರಕ್ಕೆ ಸೇರುವ ವಿನಾಶಕಾರಿ ಅನಿಲದ ನಿಯಂತ್ರಣವೊಂದೇ ನಮಗಿರುವ ಮಾರ್ಗ, ಆಹಾರಧಾನ್ಯ ನಾಶ ಮತ್ತು ಆಹಾರ ಉತ್ಪನ್ನಗಳನ್ನು ವ್ಯರ್ಥ ಮಾಡುವುದನ್ನು ಖಂಡಿತವಾಗಿ ನಿಲ್ಲಿಸಲೇಬೇಕು ಎಂದು ವರದಿ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವದಲ್ಲಿ ನಾವು ಉತ್ಪಾದಿಸುವ ಒಟ್ಟು ಆಹಾರ ಉತ್ಪನ್ನಗಳ ಪೈಕಿ ಮೂರನೇ ಒಂದು ಭಾಗ ವ್ಯರ್ಥವಾಗುತ್ತಿದೆ. ಅಂದರೆ ವ್ಯರ್ಥವಾಗುತ್ತಿರುವ ಆಹಾರ ಪ್ರಮಾಣವನ್ನು ನಾವು ಸ್ಥಗಿತಗೊಳಿಸಿದರೆ 200 ಕೋಟಿ ಮಂದಿಗೆ ಹೆಚ್ಚುವರಿಯಾಗಿ ಆಹಾರ ನೀಡಬಹುದು!

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರಧಾನ್ಯ ನಾಶವಾಗುತ್ತಿರುವುದು ಅವೈಜ್ಞಾನಿಕ ಬೆಳೆ ಪದ್ಧತಿಯಿಂದ. ಜೊತೆಗೆ ಆಹಾರಧಾನ್ಯ ನಿರ್ವಹಣೆ ಮತ್ತು ದಾಸ್ತಾನು ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇರುವ ಕಾರಣದಿಂದಾಗಿ ಬಹಳಷ್ಟು ಆಹಾರಧಾನ್ಯ ವ್ಯರ್ಥವಾಗುತ್ತಿದೆ. ಈ ಅಂತರವನ್ನು ನಾವು ಕಡಿಮೆ ಮಾಡಬೇಕಿದ್ದರೆ, ಲಿಂಗಾನುಪಾತವನ್ನೂ ಕಡಿಮೆ ಮಾಡಲೇಬೇಕಾಗಿದೆ. ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಪೈಕಿ ಶೇಕಡ 60ರಿಂದ 80ರಷ್ಟು ಮಂದಿ ಮಹಿಳೆಯರು. ಇವರಿಗೆ ಪುರುಷ ಕೃಷಿಕರಂತೆ ಅಗತ್ಯ ಸಂಪನ್ಮೂಲ ಮತ್ತು ತರಬೇತಿ ನೀಡುವುದು ಅತಿ ಆವಶ್ಯಕ.

ಅಮೆರಿಕ ಮತ್ತಿತರ ಶ್ರೀಮಂತ ರಾಷ್ಟ್ರಗಳಲ್ಲಿ ಆಹಾರಧಾನ್ಯ ಹಾಳಾಗುವುದು ಗ್ರಾಹಕರ ಕೊಳ್ಳುಬಾಕ ಸಂಸ್ಕೃತಿಯಿಂದ. ಇಂಥ ದೇಶಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಆಹಾರಧಾನ್ಯ ಇರುವುದು ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವಸ್ತುಗಳನ್ನು ಖರೀದಿಸುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ.

ಮಿತ ಆಹಾರಸೇವನೆಯ ಮಹತ್ವವನ್ನೂ ವರದಿ ಪ್ರತಿಪಾದಿಸಿದೆ. ನಾವು ತಿನ್ನುವುದರಲ್ಲೂ ಹೆಚ್ಚಿನ ಕ್ಷಮತೆ ಸಾಧಿಸಬೇಕು ಎಂದು ಸರ್ಚಿಂಜರ್ ಅಭಿಪ್ರಾಯಪಡುತ್ತಾರೆ. ಆಹಾರಧಾನ್ಯ ಉತ್ಪಾದನೆಯಲ್ಲಿ ಸುಸ್ಥಿರತೆ ತರಲು ಶ್ರಮಿಸುತ್ತಿರುವ ಕಂಪೆನಿಗಳಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ಮೂಲದ ಸೋಲಝೈಮ್ ಕಂಪೆನಿ ಒಂದು. ನೈಸರ್ಗಿಕವಾಗಿ ಹೇರಳವಾಗಿ ಬೆಳೆಯುವ ಪಾಚಿಯನ್ನು ಪೌಷ್ಟಿಕ ಆಹಾರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸೋಲಝೈಮ್ ಕಂಪೆನಿ ಶ್ರಮಿಸುತ್ತಿದೆ. ಕಂಪನಿಯ ಆಹಾರ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ಮಾರ್ಕ್ ಬ್ರೂಕ್ಸ್ ಅವರ ಪ್ರಕಾರ, ಪಾಚಿಯನ್ನು ಪೌಷ್ಟಿಕ ಆಹಾರ ವಾಗಿ ಪರಿವರ್ತಿಸುವುದರಿಂದ ಮಾತ್ರ 21ನೇ ಶತಮಾನದ ಪೌಷ್ಟಿಕ ಮತ್ತು ಪ್ರಾಕೃತಿಕ ಸವಾಲನ್ನು ಎದುರಿಸಲು ಸಾಧ್ಯ.

‘‘ಜನತೆಗೆ ಆಹಾರ ಒದಗಿಸುವುದು ಎಂದರೆ, ಆರೋಗ್ಯವಂತ ಮತ್ತು ಉತ್ಪಾದಕ ಜೀವನಕ್ಕೆ ಸಾಕಷ್ಟು ಪೌಷ್ಟಿಕ ಆಹಾರವನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಒದಗಿಸುವುದು ನಿಜಕ್ಕೂ ಸವಾಲು. ಜನಸಂಖ್ಯಾ ಬೆಳವಣಿಗೆ ಮತ್ತು ಇರುವ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಣದ ಕ್ಯಾಲೊರಿಗಳನ್ನು ಒದಗಿಸುವುದು ಜಾಗತಿಕ ಸವಾಲು. ಆಹಾರ ಅಭಾವವಿರುವ ಪ್ರದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸುವುದು ನಮ್ಮ ಮುಂದಿರುವ ನಿಜವಾದ ಸವಾಲು.

ಸೋಲಝೈಮ್ ಕಂಪೆನಿಯ ಪೌಷ್ಟಿಕ ತಹಳದಿಯಲ್ಲಿ, ಸಸ್ಯಜನ್ಯ ಪ್ರೊಟೀನ್, ದೇಹದ ಅನಗತ್ಯ ಕೊಬ್ಬನ್ನು ಶೇಕಡ 50ರಷ್ಟು ಕಡಿಮೆ ಮಾಡುವ ಲಿಪಿಡ್ ಪೌಡರ್ ಒಳಗೊಂಡಿದೆ. ಇದರ ಜೊತೆಗೆ ಕಡಿಮೆ ಪ್ರಮಾಣದ ಕೊಬ್ಬು ಒಳಗೊಂಡ ಆರೋಗ್ಯಕಾರಿ ಎಣ್ಣೆಯೂ ಸೇರಿದೆ. ಸೋಲಝೈಮ್ ಕಂಪೆನಿಯಲ್ಲಿ ಪಾಚಿಯನ್ನು ಸಕ್ಕರೆ ಮತ್ತು ಕಬ್ಬಿಣದ ಅಂಶದಂತೆ ಅತ್ಯದ್ಭುತ ಆಹಾರವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಇದು ಪೌಷ್ಟಿಕ ಆಹಾರದ ಮೂಲವಾಗುವ ದಿನ ದೂರವಿಲ್ಲ. ವಿಶ್ವದ ಆಹಾರ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ’’ಎಂದು ಬ್ರೂಕ್ ವಿವರಿಸುತ್ತಾರೆ.

ಪಾಚಿಯಿಂದ ತಯಾರಿಸುವ ಆಹಾರ ಉತ್ಪನ್ನಗಳು ಎಲ್ಲ ಮಟ್ಟದಲ್ಲೂ ಮಹತ್ವದ್ದು. ಹೆಚ್ಚಿನ ಪೌಷ್ಟಿಕತೆ, ಪರಿಸರದ ಮೇಲೆ ಕನಿಷ್ಠ ದುಷ್ಟರಿಣಾಮ ಮತ್ತು ಕಡಿಮೆ ಭೂಮಿ ಬಳಸಿಕೊಂಡು ಹೆಚ್ಚನ್ನು ಉತ್ಪಾದಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎನಿಸಿಕೊಳ್ಳಲಿದೆ. ವಾತಾವರಣ ಬದಲಾಗುವ ವೇಳೆ ಹಲವಾರು ಬೆಳೆಗಳಿಗೆ ಹಾನಿಯಾಗುತ್ತದೆ. ಆದರೆ ಪಾಚಿ ತಂತ್ರಜ್ಞಾನ ಯಾವುದೇ ಹವಾಗುಣದಲ್ಲೂ ಪ್ರಯೋಜನಕಾರಿಯಾಗಲಿದೆ ಮತ್ತು ವಿಶ್ವದ ಯಾವುದೇ ಭಾಗದಲ್ಲಾದರೂ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳುತ್ತಾರೆ.

ಸುಸ್ಥಿರ ಮತ್ತು ಆಹಾರ ಭದ್ರತೆ ಹೊಂದಿರುವ ವಿಶ್ವ ನಿರ್ಮಾಣದಲ್ಲಿ ಸೊಲಝೈಮ್ ಕಂಪೆನಿಯ ಪಾತ್ರ ಮಹತ್ವದ್ದು. ಆದರೆ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಎಲ್ಲಮಟ್ಟದಲ್ಲೂ ಸಮರ ಸಾರುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ತಳಹಂತದ ಅನುಶೋಧನೆಗೆ ಒತ್ತು ನೀಡಬೇಕು. ವೈಯಕ್ತಿಕ ಹಂತದಿಂದ ಜಾಗತಿಕ ಮಟ್ಟದವರೆಗೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಾಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷೆ ಸಾಧ್ಯ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

ಬಿಡುಗಡೆ
ಎಂ. ಆರ್. ಕಮಲಾಹಳದಿ ಬಣ್ಣದ 
ಸೊಗಸಿನಗಸೆ ಹೂ ಮೇಲೆ 
ನಿಂತ ನೀರ ಹನಿಯ 
ಫಳ ಫಳ ಕನ್ನಡಿ. 
ತನ್ನದೇ ಬಿಂಬ ನೋಡುತ್ತ 
ಮೈಮರೆತ ಚಿಟ್ಟೆ!
ಹನಿ ಜಾರಿ 
ಬಿಂಬ ಕರಗಿ, ಬಣ್ಣ ಅಳಿದು
ಅಹ! ಎಂಥ ಸಾವ ಸುಖ
ಹಾಡಿ ಕುಣಿಯಿತಲ್ಲ, ಜೀವ ಸಖ 

*
ಹರಿದ ಹಾಳೆಯಲ್ಲು 
ಹೊಳೆವ ಅಕ್ಷರದ 
ನಕ್ಷತ್ರ ಬೆಳಕು.
ಎದೆಗಿಳಿಸಿಕೊಂಡ ಹಕ್ಕಿ 
ಹಾರಿ, ಆಗಸದಲ್ಲೊಂದು 
ಅಕ್ಕರೆಯ ಚುಕ್ಕಿ 
ಸುರಿದ ಹೊಳಪಿಗೆ
ಹೊಳವಾದ ಮೈ-ಮನ 
ತೂಗಿ, ತೊನೆದ ರಾಗಿತೆನೆ,
ಅಹ! ಎಂಥ ವಿಮೋಚನೆ!

-- ಎಂ. ಆರ್. ಕಮಲಾ


ಹಳದಿ ಬಣ್ಣದ
ಸೊಗಸಿನಗಸೆ ಹೂ ಮೇಲೆ
ನಿಂತ ನೀರ ಹನಿಯ
ಫಳ ಫಳ ಕನ್ನಡಿ.
ತನ್ನದೇ ಬಿಂಬ ನೋಡುತ್ತ
ಮೈಮರೆತ ಚಿಟ್ಟೆ!
ಹನಿ ಜಾರಿ
ಬಿಂಬ ಕರಗಿ, ಬಣ್ಣ ಅಳಿದು
ಅಹ! ಎಂಥ ಸಾವ ಸುಖ
ಹಾಡಿ ಕುಣಿಯಿತಲ್ಲ, ಜೀವ ಸಖ

*
ಹರಿದ ಹಾಳೆಯಲ್ಲು
ಹೊಳೆವ ಅಕ್ಷರದ
ನಕ್ಷತ್ರ ಬೆಳಕು.
ಎದೆಗಿಳಿಸಿಕೊಂಡ ಹಕ್ಕಿ
ಹಾರಿ, ಆಗಸದಲ್ಲೊಂದು
ಅಕ್ಕರೆಯ ಚುಕ್ಕಿ
ಸುರಿದ ಹೊಳಪಿಗೆ
ಹೊಳವಾದ ಮೈ-ಮನ
ತೂಗಿ, ತೊನೆದ ರಾಗಿತೆನೆ,
ಅಹ! ಎಂಥ ವಿಮೋಚನೆ!


Wednesday, January 28, 2015

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ ಭಾಗ-2ಬಿ. ಶ್ರೀಪಾದ ಭಟ್

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬಭಕ್ತಿಪಂಥ ಮತ್ತು ರಾಮಕೃಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗರ್ಭಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್‌ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾರ್ಮಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್‌ರವರು ಅನೈತಿಕವಾದ, ವಿಕಾರವಾದ ಮೃಗ ಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು.

ಇಂದು 21ನೆ ಶತಮಾನದಲ್ಲಿ ಈ ಅಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶನಕ್ಕೆ ಆಡೊಂಬೊಲವಾಗಿ, ಮಾನವ ವಿರೋ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ.

ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರ ಮೂಲಭೂತ ವಾದವನ್ನು ವಿರೋಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. ತೀರಾ ಇತ್ತೀಚಿಗೆ ಪೆರುಮಾಳ್ ಮುರುಗನ್ ಅವರ ಕಾದಂಬರಿಯ ವಿರುದ್ಧ ಪ್ರತಿಭಟನೆ, ದೌರ್ಜನ್ಯವನ್ನು ನಡೆಸಿದ ಸಂಘ ಪರಿವಾರದ ೆನಟಿಸಂ ಮತ್ತು ಅವರ ಮತಾಂಧ ಪಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮತ್ತು ಪ್ರಮುಖ ಚಿಂತಕ ದಿನೇಶ್ ಅಮೀನ್ ಮಟ್ಟು ಅವರ ಮೇಲೆ ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಮೂರು ವರ್ಷಗಳ ಹಿಂದೆ ದಿನೇಶ್ ಅವರು ವಿವೇಕಾನಂದರ ಕುರಿತಾಗಿ ಬರೆದ ವಿಶಿಷ್ಟವಾದ, ಆಕರ ಗ್ರಂಥಗಳನ್ನು ಆಧರಿಸಿ ಬರೆದ ಲೇಖನವನ್ನು ಇಂದು ಹಿಂದೂ ಮತಾಂಧರು ವಿನಾಕಾರಣವಾಗಿ, ಅಮಾನವೀಯವಾಗಿ ಉಲ್ಲೇಖಿಸಿ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸುತ್ತಿದ್ದಾರೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು, ಶತ್ರುತ್ವವನ್ನು ನಾನು ವಿರೋಸುತ್ತೇನೆ ಎಂದು ದೃಢವಾಗಿ ಪ್ರತಿಪಾದಿಸಿದ ವಿವೇಕಾನಂದರ ಮಾನವೀಯತೆಯ ತತ್ವಗಳನ್ನು ಇಂದು ತಮ್ಮ ಮತಾಂಧತೆಗೆ ತಕ್ಕಂತೆ ತಿರುಚಿ appropriation ಮಾಡಿಕೊಂಡ ವಿದ್ಯಾವಂತ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅವರ ಮೇಲೆ ಶತ್ರುತ್ವವನ್ನು ಸಾಸುತ್ತಿದ್ದಾರೆ, ದಿನೇಶ್ ಅವರ ಚಿಂತನೆಗಳನ್ನು ಗೌರವಿಸುವ, ಪ್ರಜಾತಾಂತ್ರಿಕವಾಗಿ ಚರ್ಚಿಸುವ ಕನಿಷ್ಠ ನಾಗರಿಕತೆಯನ್ನು ಸಹ ಬೆಳೆಸಿಕೊಂಡಿಲ್ಲ. ಈ ಧಾರ್ಮಿಕ ಮತಾಂಧರನ್ನು ವಿವೇಕಾನಂದರ ಅನುಯಾಯಿಗಳು ಎಂದು ಮಾನ್ಯ ಮಾಡಲು ಸಾಧ್ಯವೇ ಇಲ್ಲ.

ಇನ್ನು ಕರ್ನಾಟಕದಲ್ಲಿ ವಿವೇಕಾನಂದರು ತನ್ನ ಆಸ್ತಿಯೆಂಬಂತೆ ವರ್ತಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಮತ್ತೊಬ್ಬ ಹಿಂದುತ್ವವಾದಿ ಪ್ರತಿಪಾದಕ ಮೂರು ವರ್ಷಗಳ ಹಿಂದೆ ದಿನೇಶ್ ರವರ ವಿವೇಕಾನಂದರ ಕುರಿತ ಲೇಖನಕ್ಕೆ ಪ್ರಜಾಪ್ರಭುತ್ವವಿರೋ ಮಾದರಿಯಲ್ಲಿ ವಿರೋಸಲು ಹೋಗಿ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದ್ದರು. ಭಾಷಣಕ್ಕೆ ನಿಂತರೆ ಹಿಂದೂಯಿಸಂ ಪರವಾಗಿ ಉನ್ಮಾದಕಾರಿಯಾಗಿ ಮಾತನಾಡುವ, ಹಿಂದುತ್ವದ ನಿರ್ದಿಷ್ಟ ವೈದಿಕಶಾಹಿಯನ್ನು ಪ್ರತಿಪಾದಿಸುವ ಈ ಸೂಲಿಬೆಲೆಯ ಮತೀಯವಾದಿ ಹಿಂದೂಯಿಸಂ ಚಿಂತನೆಗಳು ಸಂವಿಧಾನ ವಿರೋಯಾಗಿವೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಕ್ಕರಿಸುತ್ತವೆ. ಚಲನಶೀಲವಾಗಬಯಸುವ ಮಾನವೀಯ ಧಾರ್ಮಿಕತೆಯನ್ನು ಸಮಾನತೆ, ಜೀವಪರತೆ ಯನ್ನು ವಿರೋಸುತ್ತ, ಧಾರ್ಮಿಕತೆಯನ್ನು ಕ್ಷುದ್ರತೆಯ ಮಟ್ಟಕ್ಕೆ ಇಳಿಸುವಲ್ಲಿ ಈ ಸೂಲಿಬೆಲೆ ಯಂತಹ ಪ್ರತಿಗಾಮಿ ಭಾಷಣಕಾರರು ಯಶಸ್ವಿಯಾಗಿದ್ದಾರೆ.

ಲಂಕೇಶ್ ಹೇಳಿದಂತೆ ಸುಳ್ಳು ನನಗೆ ಲಾಭದಾಯಕವಾಗಿದ್ದರೆ ನಾನು ಸತ್ಯವನ್ನೇಕೆ ಹೇಳಬೇಕು ಎನ್ನುವ ಮಾತಿಗೆ ಅಕ್ಷರಶಃ ಸಾಕ್ಷಿಯಂತಿರುವ ಈ ಸೂಲಿಬೆಲೆಯನ್ನು ಹಂಪಿ ಕನ್ನಡ ವಿ.ವಿ.ಯ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ ಮನಸ್ಸಾದರೂ ಎಂತಹ ಕೆಡುಕಿನದು ಎಂದು ನೆನೆಸಿಕೊಂಡರೆ ಗಾಬರಿಯಾಗುತ್ತದೆ. ಇಂತಹವರೊಂದಿಗೆ ಕೈ ಜೋಡಿಸಿರುವ ಕನ್ನಡದ ದಿನಪತ್ರಿಕೆಯೊಂದು ತನ್ನ ಪತ್ರಿಕೋದ್ಯಮದ ಎಲ್ಲಾ ಮೌಲ್ಯಗಳನ್ನು ಕ್ಕರಿಸಿ ವಿನಾಕಾರಣ ದಿನೇಶ್ ಅಮೀನ್ ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಸಾಸುತ್ತಿದೆ. ಹೀಗೆ ಕೀಳು ಮಟ್ಟದಲ್ಲಿ ಹಂಗಿಸುವ ದಿನಪತ್ರಿಕೆಯ ಈ ಅನೈತಿಕ ಮನಸ್ಥಿತಿಯ ಹಿಂದಿನ ಶಕ್ತಿಗಳಾವುವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಪತ್ರಿಕೋದ್ಯಮವನ್ನು ರೋಗ್ರಗ್ರಸ್ಥ ತಾಣವಾಗಿ, ಕೊಳೆತು ನಾರುವ ಕೊಚ್ಚೆ ಗುಂಡಿಯಾಗಿ ಪರಿವರ್ತಿಸಿದ ಪತ್ರಕರ್ತರು ಈ ದಿನಪತ್ರಿಕೆಯನ್ನು ದುರುಪಯೋಗಪಡಿಸಿ ಕೊಂಡು ಇಂದು ದಿನೇಶ್‌ರಂತಹ ಚಿಂತಕರ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ.

ಆರೋಗ್ಯಪೂರ್ಣ, ಸೌಹಾರ್ದಯುತವಾದ ಸಂವಾದ ವನ್ನು ತಿರಸ್ಕರಿಸುವ ಇಂತಹ ಅಪಾಯಕಾರಿ ಮಾಧ್ಯಮಗಳು, ಪುಢಾರಿ ಪತ್ರಕರ್ತರು, ವಿದ್ಯಾವಂತ ಮತಾಂಧರು ಅಂಬೇಡ್ಕರ್ ಅವರು ವಿವರಿಸಿದಂತೆ ಅನೈತಿಕ ವಾದ, ವಿಕಾರವಾದ ಮೃಗಸದೃಶ್ಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ವಿಚಾರಹೀನತೆಯ ಕುಮ್ಮುಕ್ಕಿನಿಂದಾಗಿ ಇಂದು ವ್ಯವಸ್ಥೆಯಲ್ಲಿ ದ್ವೇಷದ, ಸೇಡಿನ, ಕ್ರೌರ್ಯದ ವಾತಾವರಣ ನಿರ್ಮಾಣಗೊಂಡಿದೆ ಮತ್ತು ನಮ್ಮೆಲ್ಲರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ ಧೋರಣೆಗಳು, ಸಿನಿಕತನ, ವಿತಂಡವಾದದ ಲವಾಗಿಯೇ ಕರ್ನಾಟಕದ ಮತಾಂಧರ ಲುಂಪೆನ್ ಗುಂಪು ಆಳದಲ್ಲಿ ಭಂಡತನವನ್ನು ಬೆಳೆಸಿಕೊಳ್ಳುತ್ತ ಹಿಂಸಾತ್ಮಕ ವಾತಾವರಣವನ್ನು ನಿರ್ಮಿಸಿದೆ.

ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿ ಕೊಂಡ ಸಂಘ ಪರಿವಾರ ಇಂದು ಅಕ್ಟೋಬರ್ 2 ಗಾಂ ಹುಟ್ಟಿದ ದಿನವನ್ನು appropriation ಮಾಡಿಕೊಂಡು ಗೋಡ್ಸೆ ಗಾಂಯನ್ನು ಕೊಂದ ಜನವರಿ 30ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿದೆ. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್ 6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation
ಮಾಡಿಕೊಂಡಿದೆ.

ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು, ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸಗಳಾದವು ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ. ಇನ್ನಾದರು ನಾವು ಮರಳಿ ಸಂಸ್ಕೃತಿಯನ್ನು ಕೈಗೆತ್ತಿಕೊಳ್ಳಬೇಕು. ವೈಚಾರಿಕವಾಗಿ, ಬಹುತ್ವದ ಪ್ರತಿಸಂಸ್ಕೃತಿಯನ್ನು ಕಟ್ಟಬೇಕು. ಧರ್ಮವನ್ನು ಈಗಿನ ಗುಲಾಮಿ ಸಂಸ್ಕೃತಿಯಿಂದ ಕಾಪಾಡಬೇಕು. ಅದಕ್ಕೆ ಬೇಕಾದ ಸೆಕ್ಯುಲರ್ ಎನ್ನುವ ಮಾಂತ್ರಿಕ ತತ್ವವನ್ನು ಕಟ್ಟಲು ತೊಡಗಬೇಕು.

ಜನಗಣತಿಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಂಬ್ ಗೆ ಪುರಾವೆಯಿಲ್ಲ
ಹಸನ್ ಸುರೂರ್


ಜನಗಣತಿಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಂಬ್ ಗೆ ಪುರಾವೆಯಿಲ್ಲ


ಬಹುನಿರೀಕ್ಷಿತ ಧರ್ಮಾಧಾರಿತ ಜನಗಣತಿಯ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಒಂದು ಒಳ್ಳೆಯ ಸುದ್ದಿ ಎಂದರೆ, ಈ ಅಂಕಿ-ಅಂಶಗಳು ಕೆಲವು ಶಂಕಿತ ವಲಯಗಳಲ್ಲಿ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ. ಮುಸ್ಲಿಂ ಜನಸಂಖ್ಯಾ ಬಾಂಬ್ ಸ್ಫೋಟಗೊಳ್ಳಲು ಕಾಯುತ್ತಿದೆ ಹಾಗೂ ಇದನ್ನು ಎದುರಿಸಲು ಹಿಂದೂಗಳು ಹೆಚ್ಚು ಮಕ್ಕಳನ್ನು ಸೃಷ್ಟಿಸಬೇಕು ಎಂಬ ‘ಪ್ರಳಯಕಾರಿ’ ಸಿದ್ಧಾಂತಗಳಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ.

2001-2011ರ ದಶಕದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ 24 ಶೇ. ವೃದ್ಧಿ ಆಗಿದೆ ಎಂಬ ತಲೆಬರಹದಲ್ಲಿ ಅಡಗಿರುವ ವಾಸ್ತವವೊಂದನ್ನು ನಾವು ಮರೆಯಬಾರದು. ಅಂದರೆ ಈ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಗಮನಾರ್ಹ ಕಡಿತ ಉಂಟಾಗಿದೆ. ಅಂದರೆ, ಬೆಳವಣಿಗೆ ದರ 5 ಶೇ.ದಷ್ಟು ಕಡಿಮೆಯಾಗಿದೆ. ವಿಶೇಷವೆಂದರೆ ಉತ್ತರ ಭಾರತದ ಮುಸ್ಲಿಂ ಕೊಳೆಗೇರಿಗಳಲ್ಲೂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇಳಿಕೆಯಾಗಿದೆ.

 ಹಾಗಾಗಿ, ಪಿತೂರಿ ಸಿದ್ಧಾಂತಗಳ ಪ್ರತಿಪಾದಕರು ನಿರಾಳಗೊಳ್ಳ ಬಹುದು. ಇಲ್ಲಿ ಮುಸ್ಲಿಂ ಟೈಂ ಬಾಂಬ್ ಇಲ್ಲ. ಹಿಂದೂಗಳು ತಮ್ಮದೇ ದೇಶದಲ್ಲಿ ಅಲ್ಪಸಂಖ್ಯಾತರಾಗುವ ಅಪಾಯವೂ ಇಲ್ಲ. ಹಾಗಾಗಿ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತು ಅವರ ಸಂಗಡಿಗರು ಸಲಹೆ ಮಾಡಿರುವಂತೆ ಹಿಂದೂಗಳು ಕಾರ್ಖಾನೆಗಳೋಪಾದಿಯಲ್ಲಿ ಮಕ್ಕಳನ್ನು ಸೃಷ್ಟಿಸುವ ಧಾವಂತಕ್ಕೊಳಗಾಗುವ ಅಗತ್ಯವಿಲ್ಲ.

ಮಹಾರಾಜ ಮತ್ತು ಅವರ ಸಂಗಡಿಗರ ವಿಷಯಕ್ಕೆ ಮತ್ತೆ ಬರುತ್ತೇನೆ. ಮೊದಲು, ಅಧಿಕೃತವಾಗಿ ಪ್ರಕಟಗೊಳ್ಳುವ ಮೊದಲೇ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟಗೊಂಡ ಜನಗಣತಿಯ ಅಂಕಿ-ಅಂಶಗಳತ್ತ ಒಮ್ಮೆ ಗಮನಹರಿಸೋಣ. 1991-2001ರ ದಶಕದ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರ 29 ಶೇ. ಆಗಿತ್ತು. ಅದು 2001-2011ರ ಅವಧಿಯಲ್ಲಿ 24 ಶೇ.ಕ್ಕೆ ಇಳಿದಿದೆ. ಸರಾಸರಿ ರಾಷ್ಟ್ರೀಯ ಜನಸಂಖ್ಯಾ ಬೆಳವಣಿಗೆ ದರವಾಗಿರುವ 18 ಶೇ.ಕ್ಕೆ ಹೋಲಿಸಿದರೆ ಇದು ಹೆಚ್ಚೇ ಆದರೂ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಪಾಲು ಕಳೆದ ದಶಕಗಳಿಗೆ ಹೋಲಿಸಿದರೆ ಅತಿ ಕಡಿಮೆ ಅಂದರೆ 0.8 ಶೇ.ದಷ್ಟು ಹೆಚ್ಚಿದೆ.

ಪಶ್ಚಿಮಬಂಗಾಳ ಮತ್ತು ಅಸ್ಸಾಂಗಳಲ್ಲಿ ಮುಸ್ಲಿಂ ಜನಸಂಖ್ಯೆ ಯಲ್ಲಿ ತೀವ್ರ ಏರಿಕೆ ದಾಖಲಾಗಿರದಿದ್ದರೆ ಪರಿಸ್ಥಿತಿ ಇನ್ನಷ್ಟು ಸುಧಾರಿಸುತ್ತಿತ್ತು. ಈ ರಾಜ್ಯಗಳಲ್ಲಿನ ಮುಸ್ಲಿಂ ಜನಸಂಖ್ಯೆ ಏರಿಕೆಗೆ ಬಾಂಗ್ಲಾದೇಶಿಗರ ಅಕ್ರಮ ವಲಸೆ ಕಾರಣ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶೀಯರ ವಲಸೆ ಅಸ್ಸಾಂನಲ್ಲಿ ವಿವಾದಾಸ್ಪದ ವಿಷಯವಾಗಿದೆ ಹಾಗೂ ಆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಆದಾಗ್ಯೂ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅಸ್ಸಾಂ ಮತ್ತು ಪಶ್ಚಿಮಬಂಗಾಳಗಳು ಅಪವಾದಗಳು ಹಾಗೂ ದೇಶದ ಉಳಿದ ಭಾಗದಲ್ಲಿ ಕಂಡುಬರುತ್ತಿರುವ ಇಳಿಮುಖ ಪ್ರವೃತ್ತಿ ಅಲ್ಲಿ ಕಂಡುಬರುತ್ತಿಲ್ಲ. ಅತ್ಯಂತ ಗಮನಾರ್ಹ ಸಂಗತಿಯೆಂದರೆ ಉತ್ತರಪ್ರದೇಶ, ಬಿಹಾರ ಮುಂತಾದ ಉತ್ತರದ ಹಲವಾರು ರಾಜ್ಯಗಳಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇಳಿಕೆ ದಾಖಲಾಗಿದೆ. ಹಿಂದೆ ಈ ರಾಜ್ಯಗಳು ಅತ್ಯಧಿಕ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರಕ್ಕೆ ಕುಖ್ಯಾತವಾಗಿದ್ದವು. ಮೇಘಾಲಯ, ಒಡಿಶಾ ಮತ್ತು ಅರುಣಾಚಲಪ್ರದೇಶಗಳಲ್ಲಿ ಕನಿಷ್ಠ ಹೆಚ್ಚಳವಾಗಿದೆ. ಮಣಿಪುರದಲ್ಲಿ, ವಾಸ್ತವಿಕವಾಗಿ ಮುಸ್ಲಿಂ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಂದು ಶೇ.ದಷ್ಟು ಇಳಿದಿದೆ.

ಈ ಅಂಕಿ-ಅಂಶಗಳು ಭಯ-ನಿರ್ಮಾಪಕ ಹಿಂದುತ್ವವಾದಿಗಳ ಉತ್ಸಾಹಕ್ಕೆ ತಣ್ಣೀರೆರಚುವುದಂತೂ ಸತ್ಯ. ಇತ್ತೀಚಿನ ವಾರಗಳಲ್ಲಿ ಅವರ ಹಿಂದೂ ಧರ್ಮ ರಕ್ಷಣೆಯ ಅಭಿಯಾನ ವಿಜೃಂಭಿಸಿತ್ತು. ಮೊದಲಿಗೆ, ‘‘ಕ್ಷಿಪ್ರವಾಗಿ ಬೆಳೆಯುತ್ತಿರುವ’’ ಮುಸ್ಲಿಂ ‘‘ದೇಶದ್ರೋಹಿ’’ಗಳಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸುವಂತೆ ಸಾಕ್ಷಿ ಮಹಾರಾಜ್ ಹಿಂದೂ ಮಹಿಳೆಯರಿಗೆ ನೀಡಿದ ಕರೆ ನೀಡಿದರು.

‘‘ನಾವು ‘ಹಮ್ ದೋ, ಹಮಾರಾ ಏಕ್’ ಎಂಬ ಘೋಷವಾಕ್ಯವನ್ನು ಸ್ವೀಕರಿಸಿದ್ದೇವೆ ಆದರೆ ಈ ದೇಶದ್ರೋಹಿಗಳು ಸಂತೃಪ್ತರಾಗಿಲ್ಲ. ಈಗ ಅವರು ಇನ್ನೊಂದು ಘೋಷವಾಕ್ಯ ಕೊಡುತ್ತಿದ್ದಾರೆ- ‘ಹಮ್ ದೋ ಔರ್ ಹಮಾರಾ....’.... ಹುಡುಗಿಯನ್ನು ಇನ್ನೊಂದು ಹುಡುಗಿಗೆ ಮತ್ತು ಹುಡುಗನನ್ನು ಮತ್ತೊಂದು ಹುಡುಗನಿಗೆ ಮದುವೆ ಮಾಡಿಕೊಡುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಹಿಂದಿನ ಸರಕಾರ ಮಾಡಿದ್ದು ಇದನ್ನೇ. ಹಾಗಾಗಿ... ಕನಿಷ್ಠ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಎಂದು ನಾನು ಮಹಿಳೆಯರಿಗೆ ಮನವಿ ಮಾಡುತ್ತೇನೆ. ಒಂದನ್ನು ಸಾಧುಗಳು ಮತ್ತು ಸಂತರಿಗೆ ಕೊಡಿ. ಯುದ್ಧವಿರಾಮ ಉಲ್ಲಂಘನೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳು ಹೇಳುತ್ತಿವೆ. ಹಾಗಾಗಿ ಒಂದನ್ನು ಗಡಿಗೆ ಕಳುಹಿಸಿ’’ ಎಂದು ಅವರು ಮೀರತ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶವೊಂದರಲ್ಲಿ ಹೇಳಿದರು.

 ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂಬುದಾಗಿ ಬಿಜೆಪಿ ಹೇಳಿದ ಬೆನ್ನಿಗೇ, ಪಕ್ಷದ ಪಶ್ಚಿಮಬಂಗಾಳದ ನಾಯಕ ಶ್ಯಾಮಲಾಲ್ ಗೋಸ್ವಾಮಿ ಇನ್ನೊಂದು ಹೆಜ್ಜೆ ಮುಂದೆ ಹೋದರು. ಸ್ಫೋಟಗೊಳ್ಳುತ್ತಿರುವ ಮುಸ್ಲಿಂ ಜನಸಂಖ್ಯೆ ಭಾರತದ ಜನಸಂಖ್ಯಾ ‘ಸಮತೋಲನ’ಕ್ಕೆ ಬೆದರಿಕೆಯೊಡ್ಡಿದೆ ಎಂದು ಅವರು ಎಚ್ಚರಿಸಿದರು ಹಾಗೂ ‘‘ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರು’’ ತಲಾ ಐದು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದರು.

‘‘ಹಿಂದೂ ಮಹಿಳೆಯರು ಐವರು ಮಕ್ಕಳನ್ನು ಹೆರಬೇಕು. ನೀವು ಐದು ಮಕ್ಕಳನ್ನು ಹೊಂದದಿದ್ದರೆ ಭಾರತದಲ್ಲಿ ಇನ್ನು ಮುಂದೆ ಸಮತೋಲನ ಇರುವುದಿಲ್ಲ ಎಂದು ನಾನು ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರಿಗೆ ಹೇಳಲಿಚ್ಛಿಸುತ್ತೇನೆ. ನನ್ನನ್ನು ತಪ್ಪು ತಿಳಿಯಬೇಡಿ. ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರು ಐವರು ಮಕ್ಕಳನ್ನು ಹೊಂದದಿದ್ದರೆ, ಭಾರತದಲ್ಲಿ ಹಿಂದೂಗಳು ಉಳಿಯುವುದು ಕಷ್ಟ. ಹಿಂದೂ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಎಲ್ಲ ಹಿಂದೂಗಳು ಐವರು ಮಕ್ಕಳನ್ನು ಹುಟ್ಟಿಸುವುದು ಅಗತ್ಯವಾಗಿದೆ’’ ಎಂದು ಅವರು ಹೇಳಿದರು.

ಇಂಥದೇ ಮಾದರಿಯ ಇನ್ನೊಂದು ಹೇಳಿಕೆಯೂ ಇಲ್ಲಿದೆ. ಇದನ್ನು ನೀಡಿದ್ದು ವಿಎಚ್‌ಪಿಯ ಸಾಧ್ವಿ ಪ್ರಾಚಿ. ‘‘ಹಿಂದೂ ರಾಷ್ಟ್ರದ ಕನಸ’’ನ್ನು ನನಸಾಗಿಸಲು ‘‘ಹಮ್ ದೋ, ಹಮಾರೆ ಚಾರ್’’ (ನಾವಿಬ್ಬರು, ನಮಗೆ ನಾಲ್ವರು) ಎಂಬ ಕಾನೂನನ್ನು ಜಾರಿಗೆ ತರಬೇಕು ಎಂಬುದು ಅವರ ಬೇಡಿಕೆ.

‘‘ಹಿಂದೆ ನಾವು ‘ಹಮ್ ದೋ ಹಮಾರಾ ದೋ’ ಎಂದು ಹೇಳುತ್ತಿದ್ದೆವು. ಆದರೆ, ಈಗ ನಾವು ‘ಶೇರ್ ಕಾ ಬಚ್ಚಾ, ಎಕ್ ಹೀ ಅಚ್ಚಾ (ಒಂದು ಸಿಂಹಕ್ಕೆ ಒಂದೇ ಸಂತತಿ ಸಾಕು). ಇದು ತಪ್ಪು... ಅವರ (ಮುಸ್ಲಿಂ) ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ನಮ್ಮ ಜನಸಂಖ್ಯೆ ಕುಸಿಯುತ್ತಿದೆ... (ಹಿಂದೂ ಮಹಿಳೆಯರು) ನಾಲ್ಕು ಮಕ್ಕಳನ್ನು ಪಡೆದರೆ, ಒಂದು ಎಂಜಿನಿಯರ್ ಆಗಬಹುದು, ಒಂದು ಡಾಕ್ಟರ್ ಆಗಬಹುದು, ಒಂದು ಗಡಿಯನ್ನು ಕಾಯಬಹುದು ಹಾಗೂ ಒಂದನ್ನು ಸಾಮಾಜಿಕ ಸೇವೆಗಾಗಿ ಮೀಸಲಿಡಬಹುದು’’ ಎಂದು ರಾಜಸ್ತಾನದ ಭಿಲ್ವಾರದಲ್ಲಿ ನಡೆದ ವಿಎಚ್‌ಪಿಯ ‘ವಿರಾಟ್ ಹಿಂದೂ’ ಸಮಾವೇಶದಲ್ಲಿ ನೆರೆದ ಜನರನ್ನುದ್ದೇಶಿಸಿ ಪ್ರಾಚಿ ಹೇಳಿದರು.

‘ಲವ್ ಜಿಹಾದ್’ ವಿರುದ್ಧದ ತನ್ನ ಸಂಘಟನೆಯ ಅಭಿಯಾನವನ್ನು ಬಜರಂಗದಳದ ರಾಜೇಶ್ ಪಾಂಡೆ ಸಮರ್ಥಿಸಿಕೊಂಡರು. ‘ಲವ್ ಜಿಹಾದ್’ನ ಗುರಿ ‘‘ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವುದು’’ ಎಂದು ಅವರು ಹೇಳಿಕೊಂಡರು.

ಈ ವಿಷಯದಲ್ಲಿ ಬಲಪಂಥೀಯ ಹಿಂದುತ್ವ 100 ವರ್ಷಗಳ ಹಿಂದಿನಿಂದಲೂ ಒಂದು ಮಾದರಿಯನ್ನು ಅನುಸರಿಸಿಕೊಂಡು ಬರುತ್ತಿದೆ. 1909ರಲ್ಲೇ ತೀವ್ರ ಬಲಪಂಥೀಯ ಹಿಂದುತ್ವ ಚಿಂತಕ ಯು.ಎನ್.ಮುಖರ್ಜಿ ಕರಪತ್ರವೊಂದನ್ನು ಸಿದ್ಧಪಡಿಸಿದ್ದರು. 1881-1901ರ ಜನಗಣತಿಯ ಅಂಕಿ-ಸಂಖ್ಯೆಗಳನ್ನು ಆಧರಿಸಿದ ‘ಹಿಂದೂಗಳು: ಅಳಿಯುತ್ತಿರುವ ಜನಾಂಗ’ ಎಂಬ ಹೆಸರಿನ ಕರಪತ್ರವು ‘‘ಮುಸ್ಲಿಮರ ಜನಸಂಖ್ಯಾ ಹೆಚ್ಚಳ ಈಗಿನ ದರದಲ್ಲೇ ಮುಂದುವರಿದರೆ ಭಾರತದ ನೆಲದಿಂದ ಹಿಂದೂ ಜನಾಂಗ ನಾಶಗೊಳ್ಳುವುದು’’ ಎಂದು ಭವಿಷ್ಯ ನುಡಿದಿತ್ತು. ಈ ‘ಭವಿಷ್ಯ’ದ ಆಧಾರದಲ್ಲಿ ಅಂದು ಸ್ವಾಮಿ ಶ್ರದ್ಧಾನಂದ, ಇಂದಿನ ‘ಘರ್ ವಾಪಸಿ’ ಮಾದರಿಯಲ್ಲಿ ಮತಾಂತರಗೊಂಡ ಹಿಂದೂಗಳನ್ನು ಮರಳಿ ಮಾತೃ ಧರ್ಮಕ್ಕೆ ತರಲು ಶುದ್ಧಿ ಮತ್ತು ಸಂಘಟನೆಯನ್ನು ಕೈಗೊಂಡಿದ್ದರು.

ಮುಸ್ಲಿಂ ಬೆದರಿಕೆಯ ಕುರಿತ ಸಂಘ ಪರಿವಾರದ ಗೀಳಿನ ಬಗ್ಗೆ ಹಿಂದುತ್ವದ ಬೆಂಬಲಿಗರೂ ಕಿಡಿ ಕಾರಲು ಆರಂಭಿಸಿದ್ದಾರೆ. ಬೆಲ್ಜಿಯಂನ ಭಾರತೀಯ ಅಧ್ಯಯನಕಾರ ಕೋಯನ್‌ರಾಡ್ ಎಲ್ಸ್‌ಟ್‌ರನ್ನು ಆರ್‌ಎಸ್‌ಎಸ್ ಮತ್ತು ಅದರ ಬೆಂಬಲಿಗ ಸಂಘಟನೆಗಳು ಪದೇ ಪದೇ ತಮ್ಮ ಅನುಕೂಲಕ್ಕಾಗಿ ಉಲ್ಲೇಖಿಸುತ್ತಿವೆ. ಅವರು ಹೀಗೆ ಬರೆದಿದ್ದಾರೆ: ‘‘ ‘ಅವರು ಅವರ ಲಾಭಗಳನ್ನು ಎಣಿಸುತ್ತಿದ್ದಾರೆ, ನಾವು ನಮ್ಮ ನಷ್ಟಗಳನ್ನು ಲೆಕ್ಕಹಾಕುತ್ತಿದ್ದೇವೆ’ ಎಂಬ ಮುಖರ್ಜಿ ಕರಪತ್ರದ ವಾಕ್ಯವನ್ನು ಹಿಂದೂ ಮಹಾಸಭಾ 1979ರಷ್ಟು ಈಚೆಗೆ ತನ್ನ ಕರಪತ್ರವೊಂದರ ಹೆಸರನ್ನಾಗಿಸಿತು. ಏನಿದ್ದರೂ, ಹಿಂದೂ ಜನಸಂಖ್ಯೆ ಕುರಿತ ಭೀತಿಯ ಜ್ವರ ಮಾತ್ರ ಏರುತ್ತಿದೆ.’’

 ‘‘ತನ್ನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಹಿಂದೂ ಧರ್ಮದಿಂದ ಭೂಭಾಗಗಳನ್ನು ವಶಪಡಿಸಿಕೊಳ್ಳಲು ಇಸ್ಲಾಂ ತನ್ನ ಜನಸಂಖ್ಯೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಹಿಂದೂ ಅನುಮಾನ ನಿರಂತರವಾಗಿ ಕನಿಷ್ಠ 1909ರಿಂದ ಇಂದಿನವರೆಗಿನ ಹಿಂದೂ ಪುನರುತ್ಥಾನ ಬರಹಗಳಲ್ಲಿನ ವಿಷಯವಾಗಿದೆ. ಈ ಆವೇಶಭರಿತ ಮಾತುಗಳು ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಬೊಬ್ಬೆಯಾಗಿರುತ್ತದೆ ಮತ್ತು ಅತಿರಂಜಿತವಾಗಿರುತ್ತದೆ. ತಮ್ಮ ಆರೋಪಗಳಿಗೆ ಪೂರಕವಾಗಿ ಅವರು ಮಂಡಿಸುವ ವಾದ ತಪ್ಪಾಗಿರುತ್ತದೆ. ‘ಮುಸ್ಲಿಮರಿಗೆ ತುಂಬಾ ಮಕ್ಕಳಿದ್ದಾರೆ, ಯಾಕೆಂದರೆ ಅವರಿಗೆ ನಾಲ್ವರು ಹೆಂಡತಿಯರಿದ್ದಾರೆ’ : ಎಂಬುದು ಇದಕ್ಕೊಂದು ಉದಾಹರಣೆ’’ ಎಂಬುದಾಗಿ ತನ್ನ ವೆಬ್‌ಸೈಟ್‌ನಲ್ಲಿ ಅವರು ಬರೆದಿದ್ದಾರೆ.

 ದೊಡ್ಡ ಕುಟುಂಬಗಳನ್ನು ಹೊಂದುವ ಪ್ರವೃತ್ತಿಯನ್ನು ಮುಸ್ಲಿಮರು ಹೊಂದಿದ್ದಾರೆ ಎನ್ನುವುದು ಸರಿಯೇ. ಆದರೆ, ಅದು ಭಾರತವನ್ನು ‘‘ವಶಪಡಿಸಿಕೊಳ್ಳುವ’’ ಇಸ್ಲಾಮಿಕ್ ಪಿತೂರಿಯ ಭಾಗವಾಗಿ ಅಲ್ಲ. ಇದರ ಹಿಂದೆ ಸಾಮಾಜಿಕ-ಆರ್ಥಿಕ ಕಾರಣಗಳಿವೆ, ವಿಶೇಷವಾಗಿ ಶೈಕ್ಷಣಿಕ ಹಿಂದುಳಿದಿರುವಿಕೆ ಇದಕ್ಕೆ ಕಾರಣ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಮುಸ್ಲಿಮರು ಆರ್ಥಿಕವಾಗಿ ಹೆಚ್ಚು ಸಮೃದ್ಧಿ ಹೊಂದಿದ್ದಾಗ ಅವರ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಜನಸಂಖ್ಯೆ ಬೆಳವಣಿಗೆ ದರ ಹೆಚ್ಚಿತು.

ಈಗ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಿರುವುದಕ್ಕೂ ಇದೇ ಕಾರಣ. ಮುಸ್ಲಿಮರ ಯುವ ತಲೆಮಾರು ಹೆಚ್ಚು ಸುಶಿಕ್ಷಿತವಾಗಿದೆ ಹಾಗೂ ಹೆಚ್ಚಿನ ಆಶೋತ್ತರಗಳನ್ನು ಹೊಂದಿದೆ. ವಿಶೇಷವಾಗಿ, ವಿದ್ಯಾವಂತ ಹಾಗೂ ಮಹತ್ವಾಕಾಂಕ್ಷೆಯ ಮುಸ್ಲಿಂ ಮಹಿಳೆಯರು ಕುಟುಂಬ ಯೋಜನೆ ಬಗ್ಗೆ ಹಿಂದೂ ಮಹಿಳೆಯರಷ್ಟೇ ಕಾಳಜಿ ಹೊಂದಿದ್ದಾರೆ. 30 ದಾಟಿದರೂ ಮಕ್ಕಳನ್ನು ಹೊಂದಿರದ ಅಸಂಖ್ಯ ಮುಸ್ಲಿಂ ದಂಪತಿಗಳ ಬಗ್ಗೆ ನನಗೆ ಗೊತ್ತು. ಕುಟುಂಬಗಳ ಒತ್ತಡವಿದ್ದರೂ ಅವರು ಮಕ್ಕಳನ್ನು ಹೊಂದಿಲ್ಲ. ಮಕ್ಕಳಿಗೆ ಶ್ರೇಷ್ಠ ಆರೈಕೆ ನೀಡಲು ಸಾಧ್ಯವಾಗದಿದ್ದರೆ ತಮಗೆ ಮಕ್ಕಳೇ ಬೇಡ ಎನ್ನುವ ನಿಲುವು ಅವರದು.

  ಮುಸ್ಲಿಂ ಜನಸಂಖ್ಯೆ ಬೆಳವಣಿಗೆ ಪ್ರವೃತ್ತಿ ಈಗಲೂ ರಾಷ್ಟ್ರೀಯ ಪ್ರವೃತ್ತಿಗಿಂತ ತುಂಬಾ ಭಿನ್ನವೇ ಆಗಿದೆ. ಆದರೆ, ಇತ್ತೀಚಿನ ಅಂಕಿ-ಅಂಶಗಳು ಹೇಳುವಂತೆ, ಒಂದು ದಿನ ಈ ಎರಡು ಪ್ರವೃತ್ತಿಗಳು ಒಂದಾಗಲೇಬೇಕು. ಆದಾಗ್ಯೂ, ಇನ್ಶಾ ಅಲ್ಲಾ, ಕಾಲ್ಪನಿಕ ಮುಸ್ಲಿಂ ‘ವಶೀಕರಣ’ದ ಕುರಿತ ತನ್ನ ಗೀಳನ್ನು ಪರಿವಾರ ತ್ಯಜಿಸುತ್ತದೆ ಎನ್ನುವ ಖಾತರಿಯೇನೂ ಇಲ್ಲ.

ಕಣ್ಮರೆಯಾದ ಕಾಮನ್ ಮ್ಯಾನ್ ಆರ್.ಕೆ.ಲಕ್ಷ್ಮಣ್

ಕೆ.ಶಿವು ಲಕ್ಕಣ್ಣವರ


  ಕಣ್ಮರೆಯಾದ ಕಾಮನ್ ಮ್ಯಾನ್ ಆರ್.ಕೆ.ಲಕ್ಷ್ಮಣ್

 

 

ಕೆಲ ವರ್ಷದ ಹಿಂದೆ CNN IBN ಅಂತಾರಾಷ್ಟ್ರೀಯ ವಾರ್ತಾ ಸಂಸ್ಥೆಯು, ಆರ್.ಕೆ.ಲಕ್ಷ್ಮಣರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಶ್ರೇಷ್ಠ ಸೇವೆಯನ್ನು ಗೌರವಿಸುವುದಕ್ಕಾಗಿಯೇ ಒಂದು ವಿಶಿಷ್ಟ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಿತ್ತು. ಅಂದು ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಆಝಾದ್ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಗಾಲಿಕುರ್ಚಿಯಿಂದ ಪ್ರಶಸ್ತಿ ಸ್ವೀಕರಿಸಿದ ಆರ್.ಕೆ. ಲಕ್ಷ್ಮಣ್ ಅವರು ಭಾರತದ ಜನತೆ ಅವರಿಗೆ ತೋರಿದ ಪ್ರೀತಿಗಾಗಿ ಭಾವುಕರಾಗಿ ಕಣ್ಣೀರು ಹರಿಸಿದ್ದರು. ಅದ್ಭುತ ವ್ಯಂಗ್ಯಚಿತ್ರಕಾರರೂ, ಉಪನ್ಯಾಸಕಾರರೂ ಆದ ಲಕ್ಷ್ಮಣರಿಗೆ ಅಂದು ರೇಖೆಗಳು ಮೂಡಿದ್ದುದು ಕಣ್ಣೀರ ಧಾರೆಯಾಗಿ. ಅದು ಈ ದೇಶದ ಜನತೆಗೆ ಲಕ್ಷ್ಮಣರು ಅರ್ಪಿಸಿದ ಭಾಷಾತೀತ ಕೃತಜ್ಞತೆಯೂ ಆಗಿತ್ತು.
ವ್ಯಂಗ್ಯಚಿತ್ರ ಕಲೆಯನ್ನು ಭಾರತೀಯ ಪತ್ರಿಕೋದ್ಯಮದಲ್ಲಿ ಒಂದು ಸಮರ್ಥ ಮಾಧ್ಯಮವನ್ನಾಗಿಸಿದವರು ಡಾ.ಆರ್.ಕೆ.ಲಕ್ಷ್ಮಣ್ ಅವರು. ಇಂಥ ಲಕ್ಷ್ಮಣ್ ಸೋಮವಾರ ಸಂಜೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ತೊಂದರೆಗೆ ಒಳಗಾಗಿ ಆಸ್ಪತ್ರೆಸೇರಿದ್ದರು.

ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್ ಅವರು ಅಕ್ಟೋಬರ್ 23, 1924ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಕೃಷ್ಣಸ್ವಾಮಿ ಅಯ್ಯರ್ ಅವರು ತಮಿಳುನಾಡಿನ ಸೇಲಂನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಸುಪ್ರಸಿದ್ಧ ಕಾದಂಬರಿಕಾರರಾದ ಆರ್.ಕೆ.ನಾರಾಯಣ್ ಲಕ್ಷ್ಮಣರ ಅಣ್ಣ. ಆ ಕಾಲದಲ್ಲಿ ಕನ್ನಡದ ಪ್ರಸಿದ್ಧ ಬರಹಗಾರ ರಾದ ಎ.ಎನ್. ಮೂರ್ತಿರಾಯರು ಸ್ವಲ್ಪ ಕಾಲ ಕೃಷ್ಣಸ್ವಾಮಿ ಅಯ್ಯರ್ ಅವರ ಕೈಕೆಳಗೆ ಕೆಲಸ ಮಾಡಿದ್ದರೆಂದು ಸ್ವಯಂ ಮೂರ್ತಿರಾಯರೇ ತಮ್ಮ ಲೇಖನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಜನಿಸಿದ್ದ ಆರ್.ಕೆ.ಲಕ್ಷ್ಮಣರಿಗೆ ಮೈಸೂರೆಂದರೆ ಬಹು ಅಕ್ಕರೆ. ಈ ವಿಷಯವನ್ನು ಒಮ್ಮೆ ದೂರದರ್ಶನದ ಸಂದರ್ಶನದಲ್ಲಿ ಲಕ್ಷ್ಮಣರೇ ಹೇಳಿಕೊಂಡಿದ್ದರು. ಮೈಸೂರು ಸೃಜನಶೀಲತೆಗೆ ಹೇಳಿಮಾಡಿಸಿದಂತಹ ಸ್ಥಳ. ಮೈಸೂರು ನನ್ನ ಸೃಜನಶೀಲ ಚಿಂತನೆಗೆ ಸಾಕಷ್ಟು ಪುಷ್ಟಿ ನೀಡಿದೆ ಎಂದು ಹೇಳಿದ್ದರು... ಕನ್ನಡದಲ್ಲಿ ಹೆಚ್ಚು ಮಾತನಾಡದಿದ್ದರೂ ಆರ್.ಕೆ.ಲಕ್ಷ್ಮಣ್ ಮತ್ತು ಅವರ ಸಹೋದರ ಆರ್.ಕೆ.ನಾರಾಯಣರು ಆಕಾಶವಾಣಿಯಲ್ಲಿ ಪ್ರೊ.ಯು.ಆರ್. ಅನಂತಮೂರ್ತಿ ಅವರೊಂದಿಗೆ ನಡೆಸಿದ ಮಾತುಕತೆ ಮರೆಯುವುದು ಸಾಧ್ಯವಾಗುವುದಿಲ್ಲ. ಈ ಮಾತುಕತೆ ಇತ್ತೀಚೆಗೆ ಪ್ರೊ. ಯು.ಆರ್. ಅನಂತಮೂರ್ತಿ ಅವರ ಹಲವು ಮಹನೀಯರ ಮಾತುಕತೆಗಳನ್ನು ಒಳಗೊಂಡ ‘ಹತ್ತು ಸಮಸ್ತರು’ ಪುಸ್ತಕದಲ್ಲಿ ಸಹ ಪ್ರಕಟಗೊಂಡಿದೆ.

ಶಾಲೆಯಲ್ಲಿ ಅವರು ಓದುತ್ತಿದ್ದ ದಿನಗಳಲ್ಲಿ ಒಮ್ಮೆ ಪಾಠ ಮಾಡುತ್ತಿದ್ದ ಮೇಷ್ಟರ ವ್ಯಂಗ್ಯಚಿತ್ರ ಬರೆಯತೊಡಗಿದ್ದರು. ಅದನ್ನು ಸದ್ದಿಲ್ಲದೆ ಹಿಂದಿನಿಂದ ಬಂದು ಗಮನಿಸಿದ ಮೇಷ್ಟರು ನುಡಿದರಂತೆ, ನೋಡು, ನೀನು ಚೆನ್ನಾಗೇ ಬರೆದಿದ್ದೀಯಾ, ಆದರೆ ಬೆನ್ನು ಇನ್ನಷ್ಟು ಡೊಂಕಾಗಿರಬೇಕು, ಕನ್ನಡಕ ಮತ್ತಷ್ಟು ಮೂಗಿನ ಕೆಳಕ್ಕೆ ಬರಬೇಕು, ಪೇಟ ಒಂದು ಚೂರು ಮೇಲಿರಬೇಕು. ಈಗ ಟೈಂ ಆಗ್ಹೋಯ್ತು. ಮುಂದಿನ ಕ್ಲಾಸ್ನಲ್ಲಿ ಪ್ರಾಕ್ಟೀಸ್ ಮಾಡು! ಎಂದು. ಹೀಗೆ ತಮ್ಮ ವ್ಯಂಗ್ಯಚಿತ್ರಕಲೆಯನ್ನು ಬೆಂಬಲಿಸಿದ ಅಂಥ ಅಧ್ಯಾಪಕ ವೃಂದದ ಕುರಿತೂ ಅವರಿಗೆ ಬಹಳ ಅಭಿಮಾನವಿತ್ತು.

ಕೋಟ್ಯಾನುಕೋಟಿ ಓದುಗರನ್ನು ತಮ್ಮ ವ್ಯಂಗ್ಯಚಿತ್ರಗಳಿಂದ ಆಕರ್ಷಿಸಿ, ನಗಿಸಿ, ತಮ್ಮ ಕಾಲದ ವಿವಿಧ ಘಟನಾವಳಿಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಷ್ಕರ್ಷಿಸಿದ ಲಕ್ಷ್ಮಣರು ವೃದ್ಧಾಪ್ಯದ ಅನಾರೋಗ್ಯಗಳಿಂದ ಕಳೆದ ವರ್ಷ ಆಸ್ಪತ್ರೆ ವಾಸ ಅನುಭವಿಸಿ ಒಂದಷ್ಟು ಚೇತರಿಸಿಕೊಂಡಿದ್ದರು.

ಲಕ್ಷ್ಮಣ್ ನಿವೃತ್ತರಾಗಿ ಹಲವು ವರ್ಷಗಳೇ ಆದರೂ ಟೈಮ್ಸ್ ಆ್ ಇಂಡಿಯಾ ಪತ್ರಿಕೆಯ ಪ್ರತಿ ರವಿವಾರದ ಪತ್ರಿಕೆಯಲ್ಲಿನ ಪಾಸಿಂಗ್ ಥಾಟ್ ಅಂಕಣದಲ್ಲಿ ಅವರು ಹಿಂದೆ ಬರೆದ ಅದ್ಭುತ ಚಿತ್ರಗಳನ್ನು ಇಂದೂ ನಾವು ಕಾಣಬಹುದು. ಅದು ರಾಜೀವ್ ಗಾಂ ಅವರು ಪ್ರಧಾನಿ ಆಗಿದ್ದ, ಕೇವಲ ರಾಷ್ಟ್ರೀಯ ಚಾನೆಲ್ ಮಾತ್ರ ದೂರದರ್ಶನದಲ್ಲಿ ಲಭ್ಯವಿದ್ದ ಕಾಲ. ಆಗೊಂದು ವ್ಯಂಗ್ಯಚಿತ್ರದಲ್ಲಿ ಒಬ್ಬ ವ್ಯಕ್ತಿ ಎಡಬಿಡದೆ ರಾಜೀವ್ ಗಾಂ ೆಟೊ ನೋಡುತ್ತಾ ಕುಳಿತಿದ್ದಾನೆ. ಆ ಚಿತ್ರದ ಪಕ್ಕದಲ್ಲಿದ್ದ ಕಾಮನ್ ಮ್ಯಾನ್‌ಗೆ ಮನೆಯೊಡತಿ ಹೇಳುತ್ತಿದ್ದಳು. ಏನ್ಮಾಡೋದು ಟಿ.ವಿ. ಕೆಟ್ಟುಹೋಗಿದೆ!. ಮತ್ತೊಮ್ಮೆ ಚಂದ್ರಲೋಕಕ್ಕೆ ಕಳುಹಿಸಲು ಆಯ್ಕೆಯಾದವ ಲಕ್ಷ್ಮಣರ ಕಾಮನ್ ಮ್ಯಾನ್. ಅದರಲ್ಲಿನ ಒಕ್ಕಣೆ ಈತ ನೀರು, ಆಹಾರ, ಆಮ್ಲಜನಕದ ಸೇವನೆಯಿಲ್ಲದೆ, ಸೂರಿಲ್ಲದೆ ವಾರಗಟ್ಟಲೆ ಬದುಕಬಲ್ಲ ಭಾರತೀಯ ಸಾಮಾನ್ಯ ಈತನಿಗಿಂತ ಚಂದ್ರಲೋಕದಲ್ಲಿರಲು ಶಕ್ಯಜೀವಿ ಮತ್ತೊಂದಿಲ್ಲ!.
ಮತ್ತೊಂದರಲ್ಲಿ ಭೀಕರ ಹವಾಮಾನ ಪೀಡಿತ ಪ್ರದೇಶಕ್ಕೆ ದೇಶದ ಮಂತ್ರಿಗಳು ಭೇಟಿ ಕೊಟ್ಟಾಗ ಜನ ಹೇಳುತ್ತಾರೆ, ಸಾರ್ ನಾವು ಕೆಟ್ಟ ಹವಾಮಾನ, ಕೆಟ್ಟ ಪ್ರವಾಹಗಳಿಂದ ಪೀಡಿತರಾಗಿಲ್ಲ, ಕೆಟ್ಟ ಸರಕಾರದಿಂದ ಪೀಡಿತರಾಗಿದ್ದೇವೆ ಹೀಗೆ ಲಕ್ಷ್ಮಣರು ಚಿತ್ರಿಸಿದ ಕಾರ್ಟೂನುಗಳು ಅದೆಷ್ಟೋ...

ಲಕ್ಷ್ಮಣ್ ಅವರು 56 ವರ್ಷಗಳಷ್ಟು ಕಾಲ ‘ಟೈಮ್ಸ್ ಆ್ ಇಂಡಿಯ’ ದಿನ ಪತ್ರಿಕೆಯಲ್ಲಿ ಬರೆದ ಕಾಮನ್ ಮ್ಯಾನ್ ವ್ಯಂಗ್ಯ ಚಿತ್ರಾಂಕಣವನ್ನು ಓದಿ ಸವಿಯದವರಿಲ್ಲ. ಬೆಳಗ್ಗೆ ಎದ್ದು, ಕಾಫಿ ಕುಡಿಯುತ್ತಾ ಅದನ್ನು ಓದಿ ಸವಿಯುವುದು ಬಹುತೇಕ ಭಾರತೀಯರ ದಿನಚರಿ. ಬಹಳಷ್ಟು ಜನ ಟೈಮ್ಸ್ ಆ್ ಇಂಡಿಯ, ಬಿಟ್ಟು ಬೇರೆ ದಿನಪತ್ರಿಕೆ ಕೊಳ್ಳದೆ ಇರುವುದಕ್ಕೆ ಕಾರಣ, ಅವರಿಗೆ ಲಕ್ಷ್ಮಣ್ ವ್ಯಂಗ್ಯಚಿತ್ರವನ್ನು ಬಿಡಲಿಕ್ಕೆ ಮನಸ್ಸು ಬಾರದಿರುವುದು ಪ್ರಮುಖ ಕಾರಣವಾಗಿತ್ತು.

ಕಾಮನ್ ಮ್ಯಾನ್‌ನ ಕಲ್ಪನೆ ಅವರ ಮನಸ್ಸಿನಲ್ಲಿ ಸುಪ್ತವಾಗಿತ್ತು. ನಮ್ಮ ಮುಂದೆ ನಡೆಯುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದ್ದೂ ಅವನ್ನೆಲ್ಲ ಮನೋ ಸ್ಥೆರ್ಯದಿಂದ ಎದುರಿಸಲು ಪ್ರಯತ್ನಿಸುತ್ತಿರುವ ಒಬ್ಬ ಭಾರತೀಯನ ಪಾತ್ರವೇ ಆ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಕಾರವಾದರೋ ಕಚ್ಚೆಪಂಚೆ, ಚೌಕಳಿ ಅಂಗಿ, ಪೊದೆ ಹುಬ್ಬು, ಚಪ್ಪಟೆ ಮೂಗು, ಪೊರಕೆ ಮೀಸೆ, ಹಳೆ ಕನ್ನಡಕ, ಚಪ್ಪಲಿ, ಆಗಾಗ ಕಾಲಮಾನಕ್ಕೆ ತಕ್ಕಂತೆ ಛತ್ರಿ, ಇತ್ಯಾದಿಗಳ ಬಳಕೆ... ಇವು ಅವನ ವೇಷ ಭೂಷಣಗಳು. ಬೆರಗು ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನಗಳನ್ನು ದಿಟ್ಟಿಸಿ ನೋಡಿ, ಎಲ್ಲಾ ಅರ್ಥವಾದರೂ ತುಟಿ-ಪಿಟಿಕ್ಕೆನ್ನದೆ ಮುಖದ ಪ್ರತಿಕ್ರಿಯೆಯಿಂದಲೇ ಸಾವಿರಾರು ಸಾಲುಗಳನ್ನು ಹೇಳಿ ಹೊಟ್ಟೆತುಂಬ ನಗಿಸಲು, ಅನುವು ಮಾಡಿ ಕೊಟ್ಟ ಅವನ ರೀತಿ ಅನನ್ಯವಾದುದು.

ಎಂದೂ ಕೈಗಡಿಯಾರ ಕಟ್ಟದ, ಎಂದೂ ದಿನಚರಿ ಬರೆಯುವ ಅಭ್ಯಾಸವಿಲ್ಲದ ಆರ್.ಕೆ.ಲಕ್ಷ್ಮಣರು ಒಬ್ಬ ಮೇಧಾವಿ, ಚಿಂತಕ, ಮತ್ತು ಸಮರ್ಥ ಲೇಖಕ. ಇವೆಲ್ಲವೂ ಒಂದೇ ಆಗಿ ಮೇಳೈಸಿರುವುದನ್ನು ನಾವು ಕಾಣುತ್ತೇವೆ. ಟೈಮ್ಸ್ ಆ್ ಇಂಡಿಯ ಪತ್ರಿಕೆ ತನ್ನ 150 ವರ್ಷಗಳ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ಲಕ್ಷ್ಮಣರ ಅಭಿಮಾನಿ ಹಾಗೂ ಆ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಬಿ.ಮುಜುಮ್‌ದಾರ್ ಅವರು 8 ಅಡಿ ಎತ್ತರದ ಕಂಚಿನ ಕಾಮನ್ ಮ್ಯಾನ್ ಪ್ರತಿಮೆಯನ್ನು ಮಾಡಿಸಿ ತಮ್ಮ ಕಾಲೇಜಿನ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಿದ್ದರು.

ಕನ್ನಡದ ‘ಕೊರವಂಜಿ’ ಪತ್ರಿಕೆಗೆ ಪ್ರಾರಂಭದ ದಿನಗಳಲ್ಲಿ ಮುಖಪುಟ ಹಾಗೂ ವ್ಯಂಗ್ಯ ಚಿತ್ರಗಳನ್ನು ಬರೆದ ಆರ್.ಕೆ.ಲಕ್ಷ್ಮಣರು ಮುಂದೆ ತಮ್ಮ ನಿರಂತರ ಶ್ರದ್ಧಾಪೂರ್ಣ ದುಡಿಮೆಯಿಂದ ಈ ಕ್ಷೇತ್ರದಲ್ಲಿ ಸಂಸಿದ್ಧಿಯನ್ನು ಸಾಸಿದರು. ಆರ್.ಕೆ.ಲಕ್ಷ್ಮಣ್ ಅವರ ಆರಾಧ್ಯದೈವರಾಗಿದ್ದ ಡೇವಿಡ್ ಲೋ ಅವರು ಇಂಗ್ಲೆಂಡಿನಲ್ಲಿ ತೀರಿಕೊಂಡಾಗ 1963ರಲ್ಲಿ ಲಕ್ಷ್ಮಣರನ್ನು ಆ ಜಾಗಕ್ಕೆ ತರಬೇಕೆಂದು ಬಹಳ ಬೇಡಿಕೆಗಳು ಬಂದಿದ್ದವಂತೆ. ಆದರೆ ಲಕ್ಷ್ಮಣ್ ಅದಕ್ಕೆ ಮಣಿಯಲಿಲ್ಲವಂತೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳೊಡನೆ ಬೆಳೆಯುವ ನಿರ್ಧಾರವನ್ನು ಕೈಗೊಂಡರು. ಅವರು ತಮ್ಮ ಸ್ವಸಾಮರ್ಥ್ಯದಿಂದ ವಿಶ್ವದ ಒಬ್ಬ ಜನಪ್ರಿಯ ವ್ಯಕ್ತಿಯಾಗಿ ಬೆಳೆದು ವಿಜೃಂಭಿಸಿದರು.

ಲಕ್ಷ್ಮಣ್ ಒಬ್ಬ ಪ್ರಭಾವಿ ಬರಹಗಾರರೂ ಹೌದು. ದ ಟನಲ್ ಆ್ ಟೈಮ್, ಸರ್ವೆಂಟ್ಸ್ ಆ್ ಇಂಡಿಯ, ದ ಮೆಸೆಂಜರ್, ಹೊಟೇಲ್ ರೆವ್ಯೇರಾ, ದ ಬೆಸ್ಟ್ ಆ್ ಲಕ್ಷ್ಮಣ್ ಸೀರಿಸ್’, 50 ಇಯರ್ಸ್ ಆ್ ಇಂಡಿಯ ಥ್ರೂ ದಿ ಐಸ್ ಆ್ ಆರ್.ಕೆ.ಲಕ್ಷ್ಮಣ್, ದ ಎಲಾಕ್ವೆಂಟ್ ಬ್ರಷ್, ಡಿಸ್ಟಾರ್ಟೆಡ್ ಮಿರರ್, ಬ್ರಷಿಂಗ್ ಆ್ ದ ಇಯರ್ಸ್ ಮುಂತಾದವು ಅವರ ಹಲವು ಪ್ರಕಟಿತ ಕೃತಿಗಳು...

ಲಕ್ಷ್ಮಣ್ ಅವರ ಕುಂಚದಿಂದ ಹೊರ ಮೂಡಿದ ಕಪ್ಪು ಬಿಳುಪು, ಮತ್ತು ವರ್ಣರಂಜಿತ ಚಿತ್ರಗಳು, ಮುಂಬೈನ ಪ್ರತಿಷ್ಟಿತ ಜಹಾಂಗೀರ್ ಆರ್ಟ್ಸ್ ಗ್ಯಾಲರಿಯಲ್ಲಿ ಹಲವು ಬಾರಿ ಪ್ರದರ್ಶಿಸಲ್ಪಟ್ಟಿವೆ. ಲಕ್ಷ್ಮಣರಿಗೆ ಕಾಗೆ ಬಹಳ ಅಚ್ಚು ಮೆಚ್ಚಿನ ಪಕ್ಷಿ! ಯಾವಾಗಲೂ ಅದು ಅವರ ಪ್ರದರ್ಶನದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು. ಆರ್.ಕೆ. ಲಕ್ಷ್ಮಣರನ್ನು ಅರಸಿ ಬಂದ ಪ್ರಶಸ್ತಿಗಳು ನೂರಾರು. ಬಿ.ಡಿ.ಗೊಯೆಂಕ ಪ್ರಶಸ್ತಿ, ದುರ್ಗಾರತನ್ ಸ್ವರ್ಣ ಪಾರಿತೋಷಕ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು, ರೇಮನ್, ಮ್ಯಾಗ್ಸೇಸೆ ಪ್ರಶಸ್ತಿ, ಕರ್ಣಾಟಕ ವಿಶ್ವವಿದ್ಯಾಲಯ, ಮರಾಠವಾಡ ವಿಶ್ವವಿದ್ಯಾಲಯ ಮತ್ತು ದಿಲ್ಲಿ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳು, ಸಿ.ಎನ್.ಎನ್, ಐ.ಬಿ.ಎನ್ ಜೀವಮಾನದ ಸಾಧನಾ ಪ್ರಶಸ್ತಿ ಇವು ಪ್ರಮುಖವಾದದ್ದಾಗಿವೆ...

Tuesday, January 27, 2015

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ
ಬಿ. ಶ್ರೀಪಾದ ಭಟ್


ಭಾಗ-1
ವಾರ್ತಾಭಾರತಿಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ

‘‘ಅಸಮಾನತೆಯು ಹಿಂದೂಯಿಸಂನ ಆತ್ಮ. ಸಾಮಾಜಿಕ ಉಪಯುಕ್ತತೆಯ ಲಾಲವನ್ನು ಪರಾಮರ್ಶಿಸಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯಕ್ತಿಕ ನ್ಯಾಯಪರತೆಯ ಲಾಲವನ್ನು ಪರಾಮರ್ಶಿಸಲು ಸಹ ಸೋತಿದೆ.’’ -ಡಾ.ಬಿ.ಆರ್.ಅಂಬೇಡ್ಕರ್

ಹತ್ತೊಂಬತ್ತನೆ ಶತಮಾನದ ಪ್ರಮುಖ ಅಧ್ಯಾತ್ಮದ ಗುರುವಾಗಿದ್ದ ರಾಮಕೃಷ್ಣ ಪರಮಹಂಸರು ಧರ್ಮದ ಕುರಿತಾಗಿ ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿ ಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ. ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ.

ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಕೃಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಸೋಲು ಗೆಲುವುಗಳ ನೆಲೆ ಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲುವು ಸಾಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ ಎಂದು ಹೇಳುತ್ತಾರೆ. ಚಿಂತಕ ಜ್ಯೋತಿರ್ಮಯ ಶರ್ಮ ಅವರು ಸಂಶೋಧನ ಪುಸ್ತಕ
Cosmic love and human apathy: Swami vivekananda's Re-statement of Religion ದಲ್ಲಿ ರಾಮಕೃಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ-1896ರಲ್ಲಿ ಅಮೆರಿಕ ಮತ್ತು ಲಂಡನ್‌ಗೆ ಪ್ರವಾಸ ಮಾಡುವ ವಿವೇಕಾನಂದರು ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕೃಷ್ಣರ ಕುರಿತಾಗಿ ಮಾತನಾಡುತ್ತ ರಾಮಕೃಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ಅವರು ಯಾವುದೇ ವ್ಯಕ್ತಿಯ ವೈಯಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ಎಂದು ಭಾಷಣ ಮಾಡಿದ್ದರು. ರಾಜಕೀಯ ವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು.

ಎಲ್ಲ ಧರ್ಮಗಳ ನಂಬಿಕೆಗಳು ವಿಭಿನ್ನವಾ ಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾರ್ಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು. ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತ್ರುತ್ವವನ್ನು ನಾನು ವಿರೋಸುತ್ತೇನೆ ಎಂದು ಹೇಳಿದ್ದಾರೆ. ಸ್ವತಃ ಹಿಂದೂ ಧರ್ಮದ ಕುರಿತಾಗಿ ನಂಬಿಕೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು. ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಸುವುದಿಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.

ಒಂದು ಕಡೆ ಧರ್ಮದ ವಿವಿಧ ಮಜಲು ಗಳನ್ನು ಅರಿತುಕೊಳ್ಳಲು ಅಧ್ಯಾತ್ಮವನ್ನು ಬಳಸಿಕೊಂಡ ರಾಮಕೃಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಅಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಅಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.

ಹೆಗೆಲ್‌ನ
Absolute idealism ಮತ್ತು phenemenology of spirit ನ ಫಿಲಾಸಫಿ ಚಿಂತನೆಗಳ ನಂತರ 19ನೆ ಶತಮಾದ ಎರಡು ಮತ್ತು ಮೂರನೆ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕೃತಿಗಳ ವಿಸ್ಮತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂರ್ಝ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೆ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಅಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು. ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮರ್ಥಿಕ ಚಿಂತನೆಗಳ ಜೊತೆ ಜೊತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕೃಷ್ಣ ಪರಮಹಂಸರಂತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ, ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ ಸಮ್ಮೋ ಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು.

ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೆ ಶತಮಾನ ದಲ್ಲಿ ಭಕ್ತಿಪಂಥದ ಚಳವಳಿಯಿಂದ ಪ್ರೇರೇಪಿತ ಗೊಂಡಿದ್ದ ರಾಮಕೃಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ, ರಹಸ್ಯವೆನಿಸುವ ಅಧ್ಯಾತ್ಮದ ಯೋಗದ ಮೂಲಕ ಬೋಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು. ಆದರೆ ರಾಮಕೃಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಅಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮರ್ಥ್ಯಗಳು ಎಂದೂ ಚಿಂತಿಸಿದರು. ಇದರ ಲವಾಗಿ ಭಕ್ತಿ ಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವರ್ಣಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮರ್ಥ್ಯತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಯವರ ‘ಹಿಂದ್ ಸ್ವರಾಜ್’ ಆಗಿ ಹೊರ ಹೊಮ್ಮಿತು ಮತ್ತು ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.

ಮಾರ್ಚ್ 7,8 ರಂದು ಬೆಂಗಳೂರಿನಲ್ಲಿ ನಡೆವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕರಪತ್ರ
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ
 
ಮಾರ್ಚ್ ೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ೨೦೧೫
ಅಂಗವಾಗಿ
ವಿಚಾರ ಸಂಕಿರಣ, ಬೃಹತ್ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ
 
ಬನ್ನಿ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ 
ಮೆರವಣಿಗೆ ಹೊರಡುತ್ತೇವೆ - ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಸಹೃದಯರೇ,
ಮೆರವಣಿಗೆ ಹೊರಟಿದ್ದೇವೆ, ಈ ನೆಲದ ಸೋದರಿಯರ ಒಗ್ಗೂಡಿಸಲು..

ಆರೋಗ್ಯಕರ ಹಾಗೂ ಸiಸಮಾಜವನ್ನು ಕಟ್ಟುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ"ವನ್ನು ರಚಿಸಿವೆ. ಸೋದರಿತ್ವದ ಶಕ್ತಿಯೊಂದಿಗೆ ಮಹಿಳೆಯರ ಮೇಲಾಗುವ ಹಿಂಸೆ, ದೌರ್ಜನ್ಯಗಳಿಗೆ ಬಲವಾದ ಪ್ರತಿರೋಧ ಒಡ್ಡಲು ಒಕ್ಕೂಟವು ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಸಾವಿರಾರು ಮಹಿಳೆಯರನ್ನು ಸೇರಿಸಿ ರಾಜ್ಯಮಟ್ಟದಲ್ಲಿ ಮಾರ್ಚ್ ೮ರಂದು ಮಹಿಳಾ ದಿನಾಚರಣೆಯನ್ನು ಒಗ್ಗೂಡಿ ಆಚರಿಸುತ್ತಿದ್ದೇವೆ. ಒಕ್ಕೂಟದ ಭಾಗವಾದ ಬೆಂಗಳೂರಿನ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸೇರಿ ಈ ಬಾರಿಯ ಮಾರ್ಚ್ ೮ರ ಮಹಿಳಾ ದಿನಾಚರಣೆಯನ್ನು ೭ ಮತ್ತು ೮ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಆಚರಿಸುತ್ತಿದ್ದೇವೆ.

ಮೆರವಣಿಗೆ ಹೊರಟಿದ್ದೇವೆ, ಹೋರಾಟದ ಚೈತನ್ಯವನ್ನು ಸ್ಮರಿಸಲು..
ಮಹಿಳೆಯರ ಮೇಲಿನ ದೌರ್ಜನ್ಯವು ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಹಾಗೆಯೇ ಪ್ರತಿರೋಧ ಮತ್ತು ಹೋರಾಟಗಳನ್ನೂ ಮಹಿಳೆಯರು ಮಾಡಿಕೊಂಡೇ ಬಂದಿದ್ದಾರೆ. ಪ್ರತಿಯೊಂದು ಕಾಲಘಟ್ಟದಲ್ಲೂ ಆತ್ಮವಿಶ್ವಾಸದಿಂದ ಹಿಂಸೆ, ಅನ್ಯಾಯ ಮತ್ತು ಅಸಮಾನತೆಗಳನ್ನು ಎದುರಿಸಿರುವ ಮಹಿಳೆಯರ ಹೋರಾಟದ ಬದುಕು ನಮಗೆ ಚೈತನ್ಯವಾಗಬೇಕಿದೆ. ನೂರಾಎಂಭತ್ತನಾಲ್ಕು ವರುಷಗಳ ಹಿಂದೆಯೇ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಟದ ಪರಂಪರೆಯನ್ನೇ ಕಟ್ಟಿದ ಅನನ್ಯ ಹೋರಾಟಗಾರ್ತಿ, ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ನೆನಪಿನಲ್ಲಿ ಈ ಸಲದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.

ಮೆರವಣಿಗೆ ಹೊರಟಿದ್ದೇವೆ ಅನ್ಯಾಯಗಳ ಪ್ರಶ್ನಿಸಲು, ಹಕ್ಕುಗಳಿಗಾಗಿ ಒತ್ತಾಯಿಸಲು..
ಒಂದೆಡೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸುತ್ತಲೇ ಮತ್ತೊಂದು ಕಡೆಯಿಂದ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ಮಾತನಾಡುತ್ತಲೇ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಂತಹ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೆ  ಉದಾರೀಕರಣದ ಹೆಸರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರನ್ನು ಅಸಂಘಟಿತ ವಲಯಕ್ಕೆ ದೂಡಲಾಗುತ್ತಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಹಾಗೂ ಇನ್ನಿತರ ಅಸಂಘಟಿತ ವಲಯದಲ್ಲಿ ದುಡಿಯುವವರ ಸಂಖ್ಯೆ ಶೇ. ೯೨.೩ರಷ್ಟಿದೆ. ದೇಶದ ಆಂತರಿಕ ಉತ್ಪನ್ನಕ್ಕೆ ಅವರು ನೀಡುತ್ತಿರುವ ಕೊಡುಗೆ ಶೇ. ೬೦ರಷ್ಟು. ಆದರೆ ವಿರಾಮ, ರಜೆಗಳಿಲ್ಲದೆ ನೀರು, ಶೌಚದಂತಹ ಮೂಲಸೌಕರ್ಯಗಳಿಲ್ಲದೆ ಅತಿಯಾದ ದುಡಿತಕ್ಕೆ ಒಳಗಾಗಿರುವ ಇವರು, ಬೇಕಾಬಿಟ್ಟಿಯಾಗಿ ಕೆಲಸದಿಂದ ತೆಗೆದುಹಾಕುವ ಮಾಲೀಕರ ಪ್ರವೃತ್ತಿಯಿಂದಾಗಿ ಸದಾ ಆತಂಕದಲ್ಲೇ ಬದುಕುತ್ತಾರೆ. ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಬದುಕುವ ವೇತನ/ಅವಕಾಶ/ಸೌಕರ್ಯಗಳಿಲ್ಲದೆ ಊಟಬಟ್ಟೆಗೆ ಹೋರಾಡುವ ಪರಿಸ್ಥಿತಿ ಇವರದಾಗಿದೆ. ಉದ್ಯೋಗ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ, ಅತ್ಯಾಚಾರ ತಡೆಗೆ ಅತಿ ಕಠಿಣ ಕಾನೂನುಗಳನ್ನು ತಂದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲದೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದರೆ ದೂರು ದಾಖಲಿಸಿದ ಮಹಿಳೆಯರಿಗೇ ಶಿಕ್ಷೆ ನೀಡುವ ಅಪಾಯಕಾರಿ ತಿದ್ದುಪಡಿಗಳನ್ನು ಕಾನೂನಿನಲ್ಲಿ ತರಲಾಗುತ್ತಿದೆ. ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕೆಂದು ಮೀಸಲಿಡುವ ಸಹಾಯಧನವನ್ನು ಸೂಕ್ತವಾಗಿ ಬಳಸದೆ ಹಿಂತಿರುಗಿಸಲಾಗುತ್ತಿದೆ. ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಹಣ ಕಡಿತಗೊಳ್ಳುತ್ತಿದೆ. ಹೈಟೆಕ್ ಯುಗದಲ್ಲಿ ಪೌರಕಾರ್ಮಿಕರು ಬರಿಗೈಲಿ ಕಸ-ಮಲಬಾಚುತ್ತ ಅಮಾನವೀಯ ಅಸ್ಪೃಶ್ಯತೆಯಲ್ಲಿ ಬದುಕುತ್ತಿದ್ದರೆ, ಕೋಟ್ಯಾಧೀಶರ ಹೈಟೆಕ್ ಕಂಪನಿಗಳಿಗೆ ಅತಿ ಹೆಚ್ಚು ರಿಯಾಯ್ತಿ, ಸಬ್ಸಿಡಿ ಮತ್ತು ಸಂಪನ್ಮೂಲಗಳು ದೊರೆಯುತ್ತಿವೆ.

ಮೆರವಣಿಗೆ ಹೊರಟಿದ್ದೇವೆ, ಅಧಿಕಾರದಲ್ಲಿ ಪಾಲು ಕೇಳಲು..
ಪ್ರಸ್ತುತ ಸಂದರ್ಭದಲ್ಲಿ ಅಧಿಕಾರವೆಂಬುದು ಸರ್ವರ ಹಿತಕ್ಕಾಗಿ ಎಂಬುದಕ್ಕಿಂತ ಜನರನ್ನು ನಿರಂಕುಶವಾಗಿ ಆಳುವ, ಸಂಪತ್ತನ್ನು ಲೂಟಿಮಾಡುವ ಸರ್ವಾಧಿಕಾರವಾಗಿದೆ. ಹಾಗಾಗಿ ಅಧಿಕಾರ ರಾಜಕಾರಣದಲ್ಲಿ ತೊಡಗಿರುವ ಪಕ್ಷ/ಸಿದ್ಧಾಂತಗಳೂ ಮಹಿಳಾ ವಿಷಯಕ್ಕೆ ಮಾತಿನಲ್ಲಷ್ಟೇ ಮನ್ನಣೆ ನೀಡಿ ಎಲ್ಲ ಸ್ತರದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕಾದ ಸಂದರ್ಭದಲ್ಲಿ ತೊಡರುಗಾಲು ಹಾಕುತ್ತವೆ. ಅಧಿಕಾರ ರಾಜಕೀಯವೆಂಬುದು ಅಧಿಕಾರದ ಕೇಂದ್ರೀಕರಣವಲ್ಲ. ಸರ್ವಜನರ ಕಾಳಜಿಗಾಗಿ ಸದ್ವಿನಿಯೋಗವಾಗಬೇಕಾದ ಶಕ್ತಿ. ಅಂತಹ ಶಕ್ತಿಯ ರಚನೆಯಲ್ಲಿ, ಹಂಚಿಕೆಯಲ್ಲಿ ಮಹಿಳೆಯರ ಪಾಲಿದೆ.

ಮೆರವಣಿಗೆ ಹೊರಟಿದ್ದೇವೆ, ಹಿಂಸೆಯನ್ನು ಎದುರಿಸಲು..
 • ಎಳ್ಳಷ್ಟ್ಟೂ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ ಪ್ರಭುತ್ವದ ದಮನಕಾರಿ ಅಧಿಕಾರ ಸಂಸ್ಕೃತಿ; 
 • ಮಹಿಳೆಯರನ್ನು  ಸರಕಾಗಿಸುವ, ದುಡಿಯುವ ಯಂತ್ರಗಳಾಗಿಸುವ, ಲಾಭಕೋರ ಅಭಿವೃದ್ಧಿ ಮಾದರಿಗಳ ಮೂಲಕ ನಾಡಿನ ಜನ, ಜಲ, ನೆಲವನ್ನು ಹತ್ತಿಕ್ಕಿ ಲೂಟಿ ಮಾಡುತ್ತಿರುವ ಕೊಳ್ಳುಬಾಕ  ಮಾರುಕಟ್ಟೆ ಆರ್ಥಿಕತೆ; 
 • ಮಹಿಳೆಯರನ್ನು ಸಹಜೀವಿಯಾಗಿ ನೋಡದೆ ಗುಲಾಮರನ್ನಾಗಿಸುವ ಪುರುಷ ಪ್ರಧಾನ ವ್ಯವಸ್ಥೆ; 
 • ಮಹಿಳೆಯರನ್ನು ಹತ್ತಿಕ್ಕುವುದೇ ಧರ್ಮವೆಂದು ಭಾವಿಸುವ ಮತಾಂಧತೆ 
ಇವೆಲ್ಲ ಪರಸ್ಪರ ಕೈಜೋಡಿಸಿ, ಒಗ್ಗೂಡಿರುವುದರ ಪರಿಣಾಮವಾಗಿ ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ ಹೆಚ್ಚುತ್ತಿದೆ. ಹಿಂಸೆಯ ಸ್ವರೂಪಗಳು ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವುದಷ್ಟೇ ಅಲ್ಲದೆ ಮಾಮೂಲಿ ವಿಷಯವಾಗಿರುವುದು ಆತಂಕಕಾರೀ ಬೆಳವಣಿಗೆಯಾಗಿದೆ. ಅನೈತಿಕ ಪೊಲೀಸ್‌ಗಿರಿ, ಮರ್ಯಾದಾಹೀನ ಹತ್ಯೆ, ಜಾತಿ ಪಂಚಾಯ್ತಿಗಳ ಮೂಲಕ ಮಹಿಳೆ ಧರ್ಮ/ಕೋಮು/ಜಾತಿ ವೈಷಮ್ಯದ ದಾಳವಾಗಿ ಬಳಕೆಯಾಗುತ್ತಿದ್ದಾಳೆ. ಲಿಂಗತ್ವ ಮತ್ತು ಲೈಂಗಿಕತೆ ಕುರಿತು ವೈಜ್ಞಾನಿಕ ಮನೋಭಾವ ಬೆಳೆಸುವ ಆರೋಗ್ಯಕರ ಶಿಕ್ಷಣದ ಕೊರತೆಯೂ ಸಹ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ ಮತ್ತು ದೌರ್ಜನ್ಯಕ್ಕೆ ಕಾರಣವಾಗಿದೆ.

ಲಾಭಕೋರತನ, ಜಾತೀಯತೆ, ಪುರುಷ ಪ್ರಧಾನತೆ, ಮತಾಂಧತೆಗಳು ಒಂದಾಗಿ ಜಪಿಸುತ್ತಿರುವ ದ್ವೇಷ ರಾಜಕಾರಣವು ಹುಟ್ಟುಹಾಕುತ್ತಿರುವ ಹಿಂಸೆಯನ್ನು ಎದುರಿಸಲು ಸಂಘಟಿತರಾಗುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧಿಸುವ ಶಕ್ತಿ ಕಳೆದುಕೊಳ್ಳದೇ ಒಗ್ಗಟ್ಟಾಗಿರುವುದು ಅತಿಅವಶ್ಯವಾಗಿದೆ. ಜೀವ ವಿರೋಧಿ ದ್ವೇಷ ರಾಜಕಾರಣವನ್ನು ಮಣಿಸಲು ಸಾಧ್ಯವಾಗುವುದು ಜೀವಪರ ರಾಜಕಾರಣದ ಮೂಲಕವಷ್ಟೇ. ಹೆಣ್ಣು ಭ್ರೂಣಹತ್ಯೆ ವಿರೋಧಿಸಿ ಲಕ್ಷಾಂತರ ಹೆಣ್ಣುಗಳು ಜೀವತಳೆಯುವುದನ್ನು ಬರಮಾಡಿಕೊಳ್ಳಲು; ಹೆಣ್ಣು ಮಕ್ಕಳನ್ನು ಕಾಪಾಡಲು, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯಗಳು ಅಳಿಯದೆ ಸ್ವಸ್ಥ ಸಮಾಜ ಸಾಧ್ಯವಿಲ್ಲವೆಂಬ ಅರಿವು ಮೂಡಿಸಲು, ಸಹಜೀವಿಯಾಗಿ ಸಮಾನತೆ-ಸಹಬಾಳ್ವೆಯ ಬದುಕನ್ನು ಕಟ್ಟಲು ಈ ನೆಲದ ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ -
ಹಿಂಸೆಯ ಕಗ್ಗತ್ತಲಲಿ ಶಾಂತಿಯ ಕಂದೀಲು ಹಿಡಿದು 
ದ್ವೇಷದ ಬೇರು ಕಿತ್ತು ಪ್ರೀತಿಯ ಬೀಜ ಬಿತ್ತುತ್ತ
ಕ್ರೌರ್ಯದ ಬೆಂಗಾಡಲಿ ಕರುಣೆಯ ಮಳೆಹಾಡ ಹಾಡುತ್ತ
ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ
ಘನತೆ ಉಳಿಸಲು, ದೌರ್ಜನ್ಯ ಅಳಿಸಲು..
ಬನ್ನಿ ಸಹೃದಯರೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಿ.

ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳ ವಿವರ
೧. ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ: ನೆಲೆಗಳು ಮತ್ತು ಕಾನೂನು ಕುರಿತ ವಿಚಾರ ಸಂಕಿರಣ, ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ, ತಾ. ೦೭-೦೩-೨೦೧೫ರಂದು ಬೆಳಿಗ್ಗೆ ೧೦ ಗಂಟೆಯಿಂದ. ಸ್ಥಳ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಭಾಗವಹಿಸಬಯಸುವವರು ಮೊದಲೇ ಸಂಪರ್ಕಿಸಬೇಕು.

೨. ಮಾರ್ಚ್ ಮೊದಲ ವಾರವಿಡೀ ಬೆಂಗಳೂರು ಸುತ್ತಮುತ್ತ ಶಾಲಾಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚಿಕೆ ಹಾಗೂ ನಿಧಿ ಸಂಗ್ರಹ ಕಾರ್ಯಕ್ರಮ. ಆ ಇಡೀ ವಾರ ಪ್ರತಿದಿನ ಸಂಜೆ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಬೆಂಗಳೂರಿನ ವಿವಿಧೆಡೆ Women in black - ಮೌನ ಪ್ರತಿಭಟನೆಯ ಕಾರ್ಯಕ್ರಮ. ಮಾರ್ಚ್ ೭ನೇ ತಾರೀಕು ಸಂಜೆ ೫.೩೦ಕ್ಕೆ ಬೃಹತ್ Women in black - ನಡೆಸಲಾಗುವುದು. ಅನುಮತಿ ಪಡೆದ ನಂತರ ಸ್ಥಳ ನಿಗದಿಗೊಳಿಸಲಾಗುವುದು. 
 
೩. ಮಾರ್ಚ್ ೮ ರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಮೈದಾನದವರೆಗೂ ಮಹಿಳಾ ಹಕ್ಕೊತ್ತಾಯ ಜಾಥಾ  ಮತ್ತು ನಂತರ ಸಾರ್ವಜನಿಕ ಸಭೆ. ಜಾಥಾ ಹಾಗೂ ಸಾರ್ವಜನಿಕ ಸಭೆಯಲ್ಲಿ ಭೂಪಾಲ್ ಅನಿಲ ದುರಂತದ ಸಂತ್ರಸ್ತರ ಹಕ್ಕುಗಳ ಪರವಾಗಿ ಹೋರಾಡುತ್ತಿರುವ  ’ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಕರಮ್‌ಚಾರಿ ಸಂಘ’ ದ ಅಧ್ಯಕ್ಷರಾದ ರಷೀದಾ ಬಿ ಮತ್ತು ಕಾರ್ಯದರ್ಶಿಗಳಾದ ಚಂಪಾದೇವಿ ಶುಕ್ಲಾ ಪಾಲ್ಗೊಳ್ಳುತ್ತಾರೆ.

ನಮ್ಮ ಹಕ್ಕೊತ್ತಾಯಗಳು:
 • ಸರ್ಕಾರ ರಚನೆಯಲ್ಲಿ ಮತ್ತು ರಾಜಕೀಯ ರಂಗವೂ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಎಲ್ಲ ವರ್ಗದ ಮಹಿಳೆಯರನ್ನು ಒಳಗೊಳ್ಳುವಂಥ ಮೀಸಲಾತಿ ಜಾರಿಯಾಗಬೇಕು. ರಾಜಕೀಯ ಪಕ್ಷಗಳಲ್ಲಿ ಮತ್ತು ಜನಪರ ಸಂಘಟನೆಗಳಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸಲು ಕಾರ್ಯಕ್ರಮ ರೂಪಿಸಬೇಕು. 
 • ಆಹಾರ, ಶಿಕ್ಷಣದಂತೆಯೇ ಉದ್ಯೋಗವೂ ಸಹಾ ಪ್ರತಿ ಪ್ರಜೆಯ ಹಕ್ಕು. ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಹಾಗೂ ಸೂಕ್ತ ವೇತನ ಮಹಿಳೆಯರಿಗೆ ದೊರೆಯಬೇಕು. 
 • ಜಾತಿ, ವರ್ಗ, ಮತ, ಧರ್ಮ, ಜನಾಂಗ, ಯುದ್ಧ, ಭಯೋತ್ಪಾದನೆ, ಸಿದ್ಧಾಂತಗಳ ಹೆಸರಿನಲ್ಲಿ ನಡೆಯುವ ಭೀಕರ ಹಿಂಸೆ, ಅತ್ಯಾಚಾರಗಳು ನಿಲ್ಲಬೇಕು. ಮಹಿಳೆಯನ್ನು ಹಿಂಸೆ-ಪ್ರತಿಹಿಂಸೆಯ ದಾಳವಾಗಿ ಬಳಸಿಕೊಳ್ಳುವುದು ನಿಲ್ಲಬೇಕು.
 • ವಿಶೇಷ ಅನುದಾನ ಯೋಜನೆ ಹಣವೂ ಸೇರಿದಂತೆ ಎಲ್ಲ ಕಡೆ ೧೯೮೪ರಲ್ಲಿ ಆದೇಶವಾಗಿರುವ ಶೇ. ೩೩ ಜೆಂಡರ್ ಬಜೆಟ್ ಕಡ್ಡಾಯವಾಗಿ ಜಾರಿಯಾಗಬೇಕು. ಯೋಜನೆಯ ಹಣ ವಾಪಸಾಗುವುದನ್ನು, ದುರ್ಬಳಕೆಯಾಗುವುದನ್ನು ತಡೆಯಲು ಕಾವಲು ಸಮಿತಿಯನ್ನು ರಚಿಸಬೇಕು.
 • ಹೆಣ್ಣು ಭ್ರೂಣಹತ್ಯೆ, ಆಸಿಡ್ ದಾಳಿಗಳು, ಬಾಲ್ಯ ವಿವಾಹ, ಮಕ್ಕಳ ಮಾರಾಟ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಕೊನೆಯಾಗಬೇಕು. ಆರೋಗ್ಯಕರ ಲೈಂಗಿಕ ಶಿಕ್ಷಣದ ಜೊತೆಗೆ ಸಾರ್ವಜನಿಕ ಸ್ಥಳ/ಸಂಸ್ಥೆಗಳಲ್ಲಿ, ವಿವಾಹ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಹಜೀವಿಯಾಗಿ, ಸಮಾನವಾಗಿ ಕಾಣುವ ಪರಿಣಾಮಕಾರಿ ಪಠ್ಯಕ್ರಮಗಳು ಶಿಕ್ಷಣದಲ್ಲಿ ಜಾರಿಯಾಗಬೇಕು.
 • ವಿದೇಶಕ್ಕೆ ಹೋಗಲು ಮಹಿಳೆ ಪತಿ ಅಥವಾ ತಂದೆಯ ಅನುಮತಿ ಪಡೆಯಬೇಕೆಂಬಂತಹ ಪುರುಷ ಪ್ರಧಾನ ನೀತಿಗಳು ರದ್ದಾಗಬೇಕು. ಸಂಗಾತಿ/ಪೋಷಕನ ಒಪ್ಪಿಗೆ ಅನಿವಾರ್ಯವಾದಲ್ಲಿ ಅದು ಪುರುಷರಿಗೂ ಅನ್ವಯವಾಗಬೇಕು. 
 • ಗಂಡ/ಸಂಗಾತಿಯ ಆಸ್ತಿ, ಅಧಿಕಾರದಲ್ಲಿ ಮಹಿಳೆಗೆ ಸಮಪಾಲು ನೀಡಬೇಕು. ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗೆ ಮನೆಯೊಡತಿಗೆ ನಿಗದಿಪಡಿಸಿರುವ ಅತ್ಯಲ್ಪ ಹಣವನ್ನು ಹೆಚ್ಚುಮಾಡಬೇಕು.
 • ಕಾರ್ಮಿಕ, ಮಹಿಳಾ, ದಲಿತ, ಆದಿವಾಸಿ ವಿರೋಧಿ ಕಾನೂನು ತಿದ್ದುಪಡಿಗಳು ರದ್ದಾಗಬೇಕು. ಅಲೆಮಾರಿ ಬುಡಕಟ್ಟು ಜನರಿಗೆ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಬೇಕು.
 • ಸಾರ್ವಜನಿಕ ಸಾರಿಗೆಯ ತರ್ಕಹೀನ ದರ ಏರಿಕೆ ನಿಲ್ಲಿಸಬೇಕು, ಜನಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಯಾಗಬೇಕು. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕು.
 • ಪೌರಕಾರ್ಮಿಕರಿಗೆ ಬದುಕುವ ವೇತನ, ಉತ್ತಮ ಕೆಲಸದ ವಾತಾವರಣ, ಸುರಕ್ಷಾ ಸೌಲಭ್ಯಗಳು ಸಿಗಲೇಬೇಕು. ಕೆಲಸ ಖಾಯಮ್ಮಾಗಬೇಕು. ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ಯಾಂತ್ರೀಕೃತಗೊಳಿಸಬೇಕು. ಅಸ್ಪೃಶ್ಯತೆ ಕೊನೆಯಾಗಬೇಕು.
 • ಗಾರ್ಮೆಂಟ್ಸ್ ನೌಕರರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರು ಹಾಗೂ ಇನ್ನಿತರ ಅಸಂಘಟಿತ ವಲಯದ ದುಡಿಮೆಗಾರರಿಗೆ ಬದುಕುವ ವೇತನ, ಆರೋಗ್ಯಕರ ಕೆಲಸದ ವಾತಾವರಣ ಸಿಗಲೇಬೇಕು.
 • ಲೈಂಗಿಕ ವೃತ್ತಿಯ ಅಪರಾಧೀಕರಣ ನಿಂತು ಆ ವೃತ್ತಿಯಲ್ಲಿರುವವರಿಗೆ, ಅವರ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಮತ್ತು ಉದ್ಯೋಗ ಮತ್ತು ಇತರೆ ನಾಗರಿಕ ಸೌಲಭ್ಯ ಸಿಗಬೇಕು. ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗೆ ಗಂಭೀರ ಪ್ರಯತ್ನಗಳಾಗಬೇಕು.
 • ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲಬೇಕು.
 • ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ತಡೆಯಬೇಕು. ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಉದ್ಯೋಗ ಭದ್ರತೆ, ಸೌಲಭ್ಯ ಹಾಗೂ ಯೋಗ್ಯ ವೇತನ ನೀಡಬೇಕು.
 • ಕೃಷಿಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಂಡು ಅವರ ಬದುಕನ್ನು ದಿಕ್ಕಾಪಾಲಾಗಿಸುವ ಭೂಸ್ವಾಧೀನ ಸುಗ್ರೀವಾಜ್ಞೆ ತಡೆಯಾಗಬೇಕು.
 • ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ಮಾಡುವುದನ್ನು ನಿಲ್ಲಿಸಬೇಕು. ಹಾಗೂ ಅವರ ವ್ಯಾಪಾರ ಅಧಿಕೃತಗೊಳಿಸಬೇಕು.
 • ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ/ಕಾರ್ಪೊರೇಟೀಕರಣ ನಿಲ್ಲಬೇಕು. ಸರ್ಕಾರ/ಸಾರ್ವಜನಿಕರ/ಸಹಕಾರಿ ತತ್ವಗಳ ಸ್ವಾಮ್ಯತೆ ಜಾರಿಯಾಗಬೇಕು.
 • ಕಾರ್ಪೊರೇಟ್ ವಲಯದಲ್ಲಿ ಹಗಲು-ರಾತ್ರಿ ವ್ಯತ್ಯಾಸವಿಲ್ಲದ ದುಡಿಮೆ ನಿಲ್ಲಬೇಕು.
 •  
 
ಸಹಭಾಗಿ ಸಂಸ್ಥೆಗಳು : 
ಮಾನಸ ಬಳಗ, ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ, ವಿಮೆನ್ಸ್ ವಾಯ್ಸ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ-ಮಂಗಳೂರು, ಮೈಸೂರು ಜಿಲ್ಲಾ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಪಂದನ ಮಂಡ್ಯ, ಮಹಿಳಾ ಮುನ್ನಡೆ, ಗಾರ್ಮೆಂಟ್ ಆಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ, ಸಾಧನಾ ಮಹಿಳಾ ಸಂಘ, ವಿಮೋಚನ ಸಂಘ-ಅಥಣಿ, ಜನವಾದಿ ಮಹಿಳಾ ಸಂಘಟನೆ, ಎ.ಐ.ಎಂ.ಎಸ್.ಎಸ್., ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ, ಆಲ್ ಇಂಡಿಯಾ ಪ್ರೋಗ್ರೆಸಿವ್ ವಿಮೆನ್ಸ್ ಅಸೋಸಿಯೇಷನ್, ನ್ಯಾಷನಲ್ ಫೆಡರೇಷನ್ ಇಂಡಿಯನ್ ವಿಮೆನ್, ಭಾರತೀಯ ಮಹಿಳಾ ಒಕ್ಕೂಟ, ಕರ್ನಾಟಕ ದಲಿತ ಮಹಿಳಾ ವೇದಿಕೆ, ಅತ್ಯಾಚಾರ ವಿರೋಧಿ ಪ್ರಚಾರಾಂದೋಲನ, ಮಾನಿನಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್, ಮುನ್ನಡೆ ಸಾಮಾಜಿಕ ಸಂಘಟನೆ, ಸ್ತ್ರೀ ಜಾಗೃತಿ ಸಮಿತಿ, ಚರಕ ಮಹಿಳಾ ವಿವಿಧೋದ್ದೇಶ ಸಂಘ ಭೀಮನಕೋಣೆ, ಹೆಗ್ಗೋಡು, sಸಬಲ ಸಂಸ್ಥೆ-ಬಿಜಾಪುರ, ಸಖಿ ಸಂಸ್ಥೆ ಹೊಸಪೇಟೆ, ಕವಲಕ್ಕಿ ಮಹಿಳಾ ಸಂಘಟನೆ,  ಪಿ.ಯು.ಸಿ.ಎಲ್. ಕರ್ನಾಟಕ, ಎಸ್‌ಎಫ್‌ಐ, ಡಿವೈಎಫ್‌ಐ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಮತಾ ಸೈನಿಕ ದಳ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್), ದಲಿತ ಬಹುಜನ ಚಳವಳಿ, ಎಐಎಸ್‌ಎಫ್, ಎಐವೈಎಫ್, ಅಭಿಮತ, ಅನೇಕ, ಜೀವ, ಒಂದೆಡೆ, ಸ್ವರಾಜ್ ಸಮುದಾಯ ಸಂಘಟನೆ, ಯೂತ್ ಎಂಪವರ‍್ಡ್ ಇನ್ ಆಕ್ಷನ್ ಫಾರ್ ಹ್ಯುಮ್ಯಾನಿಟಿ, ರೇಡಿಯೋ ಆಕ್ಟೀವ್, ಪ್ರಜಾ ರಾಜಕೀಯ ವೇದಿಕೆ, ಸಂಚಯ ನೆಲೆ, ವಿಸ್ತಾರ್, ಜನಸಹಯೋಗ, ತರಿಕಿಟ ಕಲಾಕಮ್ಮಟ, ಸಂವಾದ, ಭಾರತೀಯ ಜ್ಞಾನ-ವಿಜ್ಞಾನ ಸಮಿತಿ, ನಾರ್ಥ್ ಈಸ್ಟ್ ಸಾಲಿಡಾರಿಟಿ, ಅಲೆಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಬೀದಿ ವ್ಯಾಪಾರಿಗಳ ಸಂಘಟನೆ, ಸ್ಲಂ ಜನಾಂದೋಲನ ಸಮಿತಿ, ಪೌರಕಾರ್ಮಿಕರ ಸಂಘಟನೆ, ಐಎಸ್‌ಐ, ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್-ಮಹಿಳಾ ಘಟಕ, ಬಹುಳ ಜನವೇದಿಕೆ, ಮಂಥನ್ ಕಾನೂನು, ಪಯಣ, ಸಮಾಜವಾದಿ ಜನ ಪರಿಷದ್, ಕರ್ನಾಟಕ ಜನಶಕ್ತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಫೆಡಿನಾ, ಫೋರಂ ಫಾರ್ ವರ್ಕರ‍್ಸ್ ರೈಟ್ಸ್, ಭೂಮ್ತಾಯಿ ಬಳಗ ದೊಡ್ಡಬಳ್ಳಾಪುರ, ಬಯಲು ಬಳಗ, ಪೆಡೆಸ್ಟ್ರಿಯನ್ ಪಿಕ್ಚರ್ಸ್, ಎಐಸಿಸಿಟಿಯು, ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ‘ಸ್ವಾಕ್ - ಎ ಫೇಸ್‌ಬುಕ್ ಗ್ರೂಪ್’, ಸಮರ, ಕರ್ನಾಟಕ ಗಾರ್ಮೆಂಟ್ ವರ್ಕರ‍್ಸ್ ಯೂನಿಯನ್, ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಯೂನಿಯನ್, ರಿಟೈರ‍್ಡ್ ಅನ್ ಆರ‍್ಗನೈಸ್ಡ್ ಸೆಕ್ಟರ್ ಯೂನಿಯನ್, ಮನೆಗೆಲಸ ಕಾರ್ಮಿಕರ ಯೂನಿಯನ್, ಐಕ್ಯತ ಹಾಗೂ ಸಮಾನ ಮನಸ್ಕರು.
  
 
ಸಂಪರ್ಕ ಸಂಖ್ಯೆಗಳು :- 
ದು. ಸರಸ್ವತಿ  ೯೪೮೨೬೪೨೧೪೭
ವಾಣಿ ಪೆರಿಯೋಡಿ ೯೪೪೮೪೮೧೩೪೦
ವಿಮೋಚನಾ ೦೮೦-೨೫೪೯೨೭೮೧ ಮತ್ತು ೮೨.
ಸವಿತಾ. ಎ. ೯೪೪೮೩೬೭೩೩೩
ಅಖಿಲಾ ವಿದ್ಯಾಸಂದ್ರ ೯೪೪೮೭೫೮೬೧೭
ಪ್ರಭಾ ಬೆಳವಂಗಲ ೯೯೮೦೭೮೭೪೨೬
ಪುಷ್ಪಾ ೯೪೪೮೧೦೫೬೭೮
ಗೌರಿ ೮೯೭೧೨೩೨೩೨೯
ಗಾಟು ೦೮೦ ೨೬೭೪೫೨೪೨
ಸುಮನಾ, ಮೈಸೂರು ೯೪೪೮೧೭೭೧೧೭
ಸಬಿಹಾ ಭೂಮಿಗೌಡ ೯೪೪೮೬೯೬೮೯೮
ಎಚ್. ಎಸ್. ಪುಷ್ಪ ೯೯೮೦೯೧೩೮೪೪
ವೀಣಾ ಹೆಗಡೆ ೯೪೮೦೫೬೫೬೪೭
ಎಚ್. ಎಸ್. ಅನುಪಮಾ ೯೪೮೦೨೧೧೩೨೦

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...