Thursday, January 22, 2015

ಬುಡಕಟ್ಟು ಜನಾಂಗದ ಬವಣೆಗಳು ಮತ್ತು ಅಭಿವೃದ್ಧಿಯ ತೊಡಕುಗಳು-ಭಾಗ-3

ಡಾ. ಎನ್. ಜಗದೀಶ ಕೊಪ್ಪ

ವಾರ್ತಾಭಾರತಿ
ಬುಡಕಟ್ಟು ಜನಾಂಗದ ಬವಣೆಗಳು ಮತ್ತು ಅಭಿವೃದ್ಧಿಯ ತೊಡಕುಗಳು


ಸ್ವಾತಂತ್ರ್ಯ ಲಭಿಸಿ ಆರೂವರೆ ದಶಕಗಳ ನಂತರವೂ ಯಾವ ಪಕ್ಷಗಳಾಗಲಿ, ಸರಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಅಥವಾ ಯೋಜನೆಗಳನ್ನು ರೂಪಿಸಿದ್ದನ್ನು ನಾವು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದೆ ಹೋಗಿದ್ದರೆ, ಈ ನತದೃಷ್ಟರು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದರು ಎಂಬುದು ನಾವು ಅರಗಿಸಿಕೊಳ್ಳಲೇ ಬೇಕಾಗಿರುವ ಸತ್ಯ.ಸಮಾಧಾನದ ಸಂಗತಿಯೆಂದರೆ, ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

  2003ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರಕಾರ, ನಕ್ಸಲರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲ್ಲಿನ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರಕಾರ ಗ್ರಹಿಸಿದೆ. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ 2012ರ ವೇಳೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕು ಮಾತ್ರ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವ ಸಂಭವ ತೀರಾ ಕಡಿಮೆ. ನಕ್ಸಲ್ ಚಳವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳದಂತೆ ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರವೆಂದರೆ, ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ ‘‘ಜಲ್, ಜಂಗಲ್, ಜಮೀನ್’’ ಎಂಬ ಬೇಡಿಕೆಗಳನ್ನು ಈಡೇರಿಸುವುದು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿ ಜನಾಂಗಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರಕಾರಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನುತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು, ಮಸಾಲೆ ಪದಾರ್ಥಗಳು ಇವುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು

ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತವಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಲ್ಲಿ ಕುಡಿಯುವ ಶುದ್ಧ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಅರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪೆನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸರಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಹೊಣೆಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುಧ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್‌ಸಿಂಗ್, ಸುಂದರಯ್ಯ, ಜ್ಯೋತಿಬಸು, ಸೋಮನಾಥಚಟರ್ಜಿ ಇಂತಹ ನಾಯಕರು ಮತ್ತು ಅವರ ಚಿಂತನೆಯ ಮಾದರಿಗಳು ಬೇಕಾಗಿವೆ. ಕಮ್ಯೂನಿಷ್ಟ್ ಪಕ್ಷದ ವೈಫಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಏಳಿಗೆಯ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯೂನಿಷ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸೀತಾರಾಮ್ ಯಚೂರಿ, ಬೃಂದಾಕಾರಟ್, ರಾಜಾ, ದಾಸ್‌ಗುಪ್ತಾ ಮುಂತಾದ ಬದ್ಧತೆಯುಳ್ಳ ಪ್ರಜ್ಞಾವಂತ ನಾಯಕರಿದ್ದರೂ ಸಹ ಕಮ್ಯೂನಿಷ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿರುವುದು ವರ್ತಮಾನದ ದುರಂತ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಇವರು ಮನಗಾಣಬೇಕಿದೆ.

  ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ಧಗೊಳ್ಳುವ ಉದಾರ ಮನಸ್ಸುಗಳು ಬೇಕಾಗಿವೆ. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡೂ ಕಡೆಯಿಂದ ಶಾಂತಿ ಮತ್ತು ನೆಮ್ಮದಿಗಾಗಿ ತುಡಿಯುವ ಮುಕ್ತ ಮನಸ್ಸುಗಳು ಮಾತ್ರ. ಹಿಂಸಾತ್ಮಕ ನಕ್ಸಲ್ ಹೋರಾಟದ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ಧವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಇಂತಹ ನೋವಿನ ಗಳಿಗೆಯಲ್ಲಿ ನಾವು ಮೌನ ಸಾಕ್ಷಿಯಾಗಬೇಕಾಗುತ್ತದೆ. ಮಾನವೀಯತೆಗಾಗಿ ಹಂಬಲಿಸುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯವಾದ ಅಂತಹ ಜಗತ್ತು ಎಂದೂ ಬಾರದಿರಲಿ. ಈ ನೆಲದ ಮೇಲೆ ಪ್ರತಿ ಜೀವಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂಬುದನ್ನು ಸಾಬೀತು ಪಡಿಸುವ ದೃಷ್ಟಿಯಲ್ಲಾದರೂ ಈ ಯುದ್ಧ ಕೊನೆಗಾಣಬೇಕಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...