Thursday, January 22, 2015

ವಿಶ್ವೇಶ್ವರ ಭಟ್ಟರ - ಅಥವಾ ಅವರ ವಿಚಾರಧಾರೆಯ - ಅಭಿಮಾನಿಗಳಿಗೊಂದು ಬಹಿರಂಗ ಪತ್ರವರುಣ ನಾಯ್ಕರನಮಸ್ಕಾರಗಳು,

ಎಲ್ಲರೂ ಚೆನ್ನಾಗಿದ್ದೀರೆಂದು ಭಾವಿಸುವೆ. ‘ನಿಮ್ಮ’ ಅಭಿಮಾನದ ಕಡಲಲ್ಲಿ ತೇಲುತ್ತ ಸಾಕಷ್ಟು ‘ಸುಖ’ವಾಗಿರುವ ‘ನೀವೇ’ ಹೇಳಿಕೊಳ್ಳುವ ನಿಮ್ಮ ಗುರುಗಳು, role model, ‘ಶ್ರೇಷ್ಠ’ ಪತ್ರಕರ್ತ, ಅತ್ತ್ಯುತ್ತಮ ಅಂಕಣಕಾರ, ಪ್ರಭಾವಿ ಲೇಖಕ, ಕನ್ನಡ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ, ತಮ್ಮ ಶಿಷ್ಯನನ್ನು M.P(ಸಂಸದ) ಯಾಗಿ ಮಾಡಲು ಸಾಕಷ್ಟು ಸಹಕರಿಸಿದ ‘ಉದ್ದಾಮ’ ಪತ್ರಕರ್ತರಾದ ವಿಶ್ವೇಶ್ವರ್ ಭಟ್ಟರು ಎಂದಿನಂತೆ ತಮ್ಮ ‘ಕೆಲಸ ಕೈಂಕರ್ಯಗಳಲ್ಲಿ’ ತೊಡಗಿಕೊಂಡು ಆರೋಗ್ಯವಾಗಿದ್ದಾರೆಂದು ಭಾವಿಸುವೆ.

‘ನಿಮ್ಮ’ ಮತ್ತು ಅವರ ನಡುವಿನ ಮಾನಸಿಕ ಹಾಗೂ ಬೌದ್ದಿಕ ಸಂಬಂದಗಳು ಹಿಂದೆಂದಿಗಿಂತಲೂ ಗಟ್ಟಿಯಾಗಿ ಸಾಕಷ್ಟು ದಷ್ಟ-ಪುಷ್ಟ ವಾಗಿದೆಯೆಂಬುದನ್ನು ನಾನು ಗ್ರಹಿಸಬಲ್ಲೆ. ಎಷ್ಟಿದ್ದರೂ ‘ನಿಮ್ಮ’ ಚಿಂತನಾ ಮಾದರಿಯ ಸರ್ಕಾರ ಈಗ ಅಧಿಕಾರದಲ್ಲಿದೆ. ಅದು ‘ನಿಮಗೆ’ ಸಾಕಷ್ಟು ಮಾನಸಿಕ ಧೈರ್ಯ ಕೊಡುತ್ತಿದೆ ಎಂಬುದು ‘ನೀವುಗಳು’ ನಂಬುವ ‘ದೇವರು’ಗಳಷ್ಟೇ ಸತ್ಯ! ಸಾಕಷ್ಟು ಚೆನ್ನಾಗಿಯೇ ಅದರ ಉಪಯೋಗವನ್ನು ‘ನೀವುಗಳು’ ಬಳಸಿಕೊಳ್ಳುತ್ತಿದ್ದೀರಿ, ಎಂದಿನಂತೆ. ಯಾವುದೇ ಒಂದು ವಿಷಯಕ್ಕೆ ನೀವು ಪ್ರತಿಕ್ರಿಯಿಸುತ್ತಿರುವ ಧಾಟಿ/ಪ್ರತಿಕ್ರಿಯಿಸಿದ ‘ನಿಮ್ಮ’ ವಿಚಾರದ ಗೆಳೆಯರಿಗೆ ಕೊಡುತ್ತಿರುವ ಬೆಂಬಲ ‘ನಿಮ್ಮ’ ಕುಬ್ಜವಾಗಿರುವ ‘ಎತ್ತರದ’ ಪ್ರತಿಫಲನ. ಬಹಳ ಸೂಕ್ಷ್ಮತೆ ಮತ್ತು ಅತ್ಯಂತ ಸಂವೇದನಾಶೀಲತೆಯಿಂದ ಕಟ್ಟಬೇಕಾದ ವಿಮರ್ಶೆಯ ಮಡಕೆಯನ್ನು ವ್ಯಕ್ತಿ ನಿಂದನೆ ಎಂಬ ಕೊಳಕಿನಿಂದ ಒಡೆದು ಹಾಕುವುದು ‘ನಿಮ್ಮ’ ಕೆಲವರ ಲಾಗಾಯ್ತಿನ ಚಾಳಿ; ‘ಅದನ್ನು’ ಸಾರ್ವಜನಿಕವಾಗಿ ಮಾಡದೆ ‘ನಿಮ್ಮ’ ಬೆಂಬಲಕ್ಕೆ ನಿಲ್ಲುವ ಅಥವಾ ಏನು ಮಾತನಾಡದೇ ‘ಮೌನ ವೃತ’ ವಹಿಸುವ ಇನ್ನೂ ಕೆಲವರು ಒಂದು ರೀತಿ ಜಾಣ ಪೆದ್ದರು ಇಲ್ಲವೇ ಅವಕಾಶವಾದಿಗಳು ಅಷ್ಟೇ!

ಮಿದುಳ ಮಾರ್ಜನದಲ್ಲಿ ಸಾಕಷ್ಟು ‘ಮಾನವೀಯ ದ್ರವ್ಯ’ಗಳನ್ನು ಕಳೆದುಕೊಂಡಿರುವ ‘ನೀವು’ಗಳು ನನ್ನ ತಿಳಿವಳಿಕೆಯ ಮಟ್ಟಿಗೆ ಕನ್ನಡದ ಒಬ್ಬ ಉತ್ತಮ ಪತ್ರಕರ್ತ ಮತ್ತು ಮಾನವೀಯ ಸಂವೇದನೆ ಇರುವ ವ್ಯಕ್ತಿಯಾದ ದಿನೇಶ ಅಮೀನಮಟ್ಟು ಅವರ ಬಗ್ಗೆ ಮೊದಲಿಂದಲೂ ಏನೇನು ಕಾರಿಕೊಳ್ಳಬೇಕೋ ಅದನ್ನೆಲ್ಲಾ ಯಶಸ್ವಿಯಾಗಿ ಕಾರಿಕೊಂಡಿದ್ದೀರಿ. ನರಮಂಡಲದ ಸೂಕ್ಷ್ಮ ತಂತುಗಳನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ಸ್ವಸ್ಥ ಮನಸ್ಸುಗಳು ‘ನಿಮ್ಮ’ ಚೀರಾಟ-ಹಾರಾಟ ವನ್ನು ನೋಡಿ ಯಾವುದೇ ರೀತಿಯ mass response ಬಗ್ಗೆ ತಲೆ ಕೆಡಿಸಿಕೊಳ್ಳದೇ ಇಷ್ಟು ದಿನ ಸುಮ್ಮನಿದ್ದರು. ಆದರೆ ನಿಮ್ಮ ‘ಸೊಂಟದ’ ಕೆಳಗಿನ ಭಾಷಾ ಬಳಕೆ, ಕೀಳುಮಟ್ಟದ ನಿಂದನೆಗಳು ತಡೆಯಿಲ್ಲದ ‘ಭೇಧಿ’ಯಾಗಿರುವುದು ನನ್ನ ಮತ್ತು ನನ್ನ ಸುತ್ತಲಿನವರನ್ನು ಒಂದು ಚಣ ಯೋಚಿಸುವಂತೆ ಮಾಡಿದೆ. ದಿನೇಶ ಅಮೀನಮಟ್ಟುರವರು ಕೊಟ್ಟಿರುವ ಪೊಲೀಸ್ ದೂರಿನ ಹಿನ್ನೆಲೆಯಲ್ಲಿ ‘ನಿಮ್ಮ’ ವಿಚಾರ ಧಾರೆಗೆ ಹೇಳಿ ಮಾಡಿಸಿದಂತಿರುವ ‘ಕನ್ನಡ ಪ್ರಭ’ದಲ್ಲಿ ಅವರ ಬಗ್ಗೆ ‘ಅಕ್ಷರ ಭೇಧಿ’ ಹಿಂದಿಗಿಂತಲೂ ಹೆಚ್ಚಾಗಿದೆ, ಅದು ಅಭಿವ್ಯಕ್ತಿ ಸ್ವಾತ್ಯಂತ್ರದ ಸೂರಿನಡಿಯಲ್ಲಿ! ಪ್ರಾಯಃ ‘ನಿಲುಮೆಯ’ ನಾವಿಕರು ಮತ್ತದರ ‘ಭಜನಾ ಮಂಡಳಿ ಸದಸ್ಯರು’ ತುಂಬಾ charge ಆಗಿರಬಹುದು!

ವಿಷದ ಅಮಲು ಹೆಚ್ಚಾದರೆ ಒಂದಿಡೀ ಸಮಾಜ ‘ರೋಗಗ್ರಸ್ತ’ವಾಗುವುದನ್ನು ಇತಿಹಾಸ ಮತ್ತು ವರ್ತಮಾನವನ್ನು ತೆರೆದ ಮನಸ್ಸಿಂದ ಓದುವವರಿಗೆ ಗೊತ್ತಾಗುತ್ತದೆ. ನಿಂದಿಸುವಾಗ ಮಾತ್ರ ‘ಮನಸ್ಸನ್ನು’ ವಿಶಾಲವಾಗಿ ತೆರೆಯುವ ಮನಸ್ಥಿತಿಗಳು ಹೀಗೆ ಮಾನವೀಯ ವ್ಯಕ್ತಿಗಳು ಮತ್ತು ಮಾನವೀಯ ವೈಚಾರಿಕತೆಯನ್ನು ಅತೀವ ಪ್ರಯತ್ನದಿಂದ ‘ಮಣ್ಣಿಗೆ’ ಸೇರಿಸಿದ್ದಾರೆ. ಸ್ಥೂಲವಾಗಿ ಹೇಳಬೇಕೆಂದರೆ ಇತಿಹಾಸದ ಅಂತಹ ಅನ್ಯಾಯಗಳು ಮತ್ತೆ ಜರುಗಬಾರದೆಂದೇ ಕಾನೂನಿನ ಮೊರೆಹೋಗುವುದು ಸೂಕ್ತ ಮತ್ತು ಅವಶ್ಯ ಕೂಡ. ದೂರು ಕೊಟ್ಟ ಅಮೀನಮಟ್ಟುರವರನ್ನು ಶ್ರೀಮಾನ ವಿಶ್ವೇಶ್ವರ್ ಭಟ್ಟರು ‘ಕನ್ನಡ ಪ್ರಭ’ವನ್ನು ಗುರಾಣಿಯಾಗಿಸಿಕೊಂಡು ವಯಕ್ತಿಕವಾಗಿ ಹಣಿಯಲು ‘ಏಕ’ ಮುಖಿಯಾದ ಯಾವ ಅರ್ಥವೂ ಇಲ್ಲದ ವರದಿಗಳು ಮತ್ತು ಬರಹಗಳನ್ನು ಪ್ರಕಟಿಸುವುದಲ್ಲದೆ ಅದಕ್ಕೊಂದು ‘ಬೌದ್ದಿಕ’ ಚೌಕಟ್ಟು ಕೊಡುತ್ತಿರುವುದು ಸ್ಪಷ್ಟವಾಗಿ ಕಾಣಿಸುವಂತಹದ್ದು. ಹಿಂದೆ ಅನೇಕ ಬಾರಿ ಈ ರೀತಿಯ ‘ಚೌಕಟ್ಟಿನ’ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಯಾಗಿರುವ ಉದಾಹರಣೆಗಳು ಕಣ್ಣ ಮುಂದೆ ಇದ್ದರೂ ಒಪ್ಪಿಕೊಂಡು ಮರು ಆಲೋಚಿಸುವುದಕ್ಕೆ ‘ನೀವುಗಳು’ ತೆರೆದುಕೊಳ್ಳಲೇ ಇಲ್ಲ. ಅಷ್ಟರಮಟ್ಟಿಗೆ ‘ನಿಮ್ಮ’ ವಿಚಾರಧಾರೆ ಮತ್ತದನ್ನು ಪಾಲಿಸುವ ‘ನಿಮ್ಮ’ ಗುರುಗಳು ಪ್ರಭಾವಶಾಲಿಗಳೇ!

ಇಷ್ಟೆಲ್ಲ ಹೇಳಿದ್ದೇಕೆಂದರೆ ಮನುಷ್ಯನಿಗೆ ಮೂಲತಃ ಒಳ್ಳೆಯ ಗುಣಗಳಿರುತ್ತವೆ. ಅಂತಹ ಒಳ್ಳೆಯ ಗುಣಗಳು ನಮ್ಮೆಲ್ಲರಲ್ಲಿಯೂ ಇವೆ. ಆದರೆ ತಲೆ ತೊಳೆಯುವ ವಿಚಾರಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಮೂಲಕ ಇರುವ ಒಳ್ಳೆಯ ಗುಣಗಳನ್ನು ನಿಧಾನವಾಗಿ ಮಾಯವಾಗಿಸಿ ‘ಸುಳ್ಳನ್ನು’ ವಿಜ್ರಂಭಿಸುವ, ಅಮಾನವೀಯತೆಯನ್ನು ‘ನ್ಯಾಯದ’ ಭಾಷೆಯಲ್ಲಿ ಹೇಳುವ ಅಶ್ಲೀಲತೆಯನ್ನು ಬೆಳೆಸುತ್ತವೆ. ‘ನಿಮ್ಮನ್ನು’ ಅಂತಹ ‘ಅಶ್ಲೀಲತೆಯಿಂದ’ ಹೊರ ತೆಗೆಯುವ ‘ದಿವ್ಯ’ ಉದ್ದೇಶ ನನಗಿಲ್ಲದಿದ್ದರೂ ‘ನೀವುಗಳು’ ಕನಿಷ್ಠ ‘ನಿಮ್ಮ’ ವಿಚಾರಧಾರೆಯ ಬಗ್ಗೆ ಮರು ಆಲೋಚಿಸುವಂತಾಗಲಿ ಎಂಬ ಸಣ್ಣ ಭರವಸೆಯನ್ನು ಅಷ್ಟಿಷ್ಟೂ ಉಳಿಸಿಕೊಂಡಿದ್ದೇನೆ. ಆ ಮೂಲಕವಾದರೂ ವಿಷಯ ಬಾಹುಳ್ಯ ನಿಮಗೆ ಅರ್ಥವಾಗಬಹುದೇನೋ? ಲಂಕೇಶರು ಒಂದು ಕಡೆ ಹೇಳುವ “ಮಾನವೀಯ ಸಂವೇದನೆಗಳು ಅನೀರೀಕ್ಷಿತ ಸಂದರ್ಭದಲ್ಲಿ ಚಿಮ್ಮತೊಡಗುತ್ತವೆ” ಎಂಬುದರಲ್ಲಿ ನನಗೆ ನಂಬಿಕೆಯಿದೆ.
ಹಾಗಾಗಬಹುದೆಂಬ ನಿರೀಕ್ಷೆಯಲ್ಲಿ........

(ಸೂಚನೆ: ಅತಾರ್ಕಿಕ, ಮಾನವೀಯ ಹೀನ, ದೇಶದ ಸಂವಿಧಾನಕ್ಕೆ ವಿರುದ್ದವಾದ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಸ್ನೇಹಿತರ ಪಟ್ಟಿಯಲ್ಲಿರುವ ‘ಕೆಲವರು’ ನನ್ನ ಮಾತುಗಳಿಂದ ಸಿಟ್ಟಿಗೆದ್ದು ಕಸಿವಿಸಿಗೊಂಡರೆ ಅವರೆಲ್ಲರಿಗೊಂದು ನಮಸ್ಕಾರ! ನನ್ನ ನಮ್ರ ವಿನಂತಿ ಏನೆಂದರೆ ಅಂತವರು ಸ್ನೇಹಿತರ ಪಟ್ಟಿಯಿಂದ ಹೊರಹೋಗಬಹುದು. ಅದು ನನ್ನ ಆಗೋಗ್ಯಕ್ಕಂತೂ ತುಂಬ ಮುಖ್ಯ. ಎಂದಾದರೂ ಭೇಟಿಯಾದಾಗ ನನ್ನಿಂದ ನಗುಮುಖದ ನಮಸ್ಕಾರಗಳು ಇದ್ದೇ ಇರುತ್ತದೆ!)
ಇತಿ,
ವರುಣ ನಾಯ್ಕರ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...