Tuesday, January 27, 2015

೩೦ ನೇ ಜನವರಿ ಉಡುಪಿ : ಕೋಮು ಸೌಹಾರ್ದ ದಿನಾಚರಣೆ


ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗು ಸಹಭಾಗಿ ಸಂಘಟನೆಗಳು
ಗಾಂಧೀಜಿಯವರ ಹತ್ಯೆಯ ದಿನದ ನೆನಪಿಗೆ ಶುಕ್ರವಾರ ೩೦ ನೇ ಜನವರಿ, ೨೦೧೫ರಂದು
ಕೋಮು ಸೌಹಾರ್ದ ದಿನಾಚರಣೆ
ಉಡುಪಿ ಸರ್ವಿಸ್ ಬಸ್‌ನಿಲ್ದಾಣದ ಗಾಂಧಿ ಪ್ರತಿಮೆ ಎದಿರು ಬೆಳಗ್ಗೆ ೯.೩೦ರಿಂದ ಸಂಜೆ ೫ರವರೆಗೆ
ಧರಣಿ ಸತ್ಯಾಗ್ರಹ


_______________________________________________________________________________________________


ಈ ತಿಂಗಳ ೩೦ಕ್ಕೆ ಗಾಂಧೀಜಿ ತೀರಿಕೊಂಡು ೬೭ ವರ್ಷಗಳಾಗುತ್ತವೆ.೧೯೪೮ರ ಜನವರಿ ೩೦ರಂದು ಅವರ ಹತ್ಯೆಗೆ ಕೆಲವು ತಿಂಗಳ ಮೊದಲು, ದೇಶ ತನ್ನ ಮೊದಲ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಗಾಂಧೀಜಿ ಅದರಲ್ಲಿ ಭಾಗವಹಿಸಿರಲಿಲ್ಲ; ಅವರು ದೇಶದ ರಾಜಧಾನಿಯಲ್ಲೂ ಇರಲಿಲ್ಲ. ಕಲ್ಕತ್ತದ ಬೆಲಿಯಾಘಾಟ್ ಎಂಬಲ್ಲಿ ಅವರು ದೇಶಾದ್ಯಂತ ಹೆಚ್ಚುತ್ತಿರುವ ಹಿಂಸೆಯ ಬಗ್ಗೆ  ವಿಷಾದ ಸೂಚಿಸಲು ಆ ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅದಕ್ಕೂ ಮುನ್ನ ಗಾಂಧೀಜಿ ಬಂಗಾಳದಲ್ಲಿ ಉಲ್ಬಣಗೊಂಡಿದ್ದ ಕೋಮುಹಿಂಸೆಯನ್ನು ನಿಲ್ಲಿಸಲು ಆ ಪ್ರಾಂತ್ಯದ ನವಾಖಾಲಿಯಲ್ಲಿ ಪಾದಯಾತ್ರೆ ನಡೆಸಿದ್ದರು. ಬಂಗಾಳ ಮಾತ್ರವಲ್ಲ ಉತ್ತರ ಭಾರತದ ಅನೇಕ ಪ್ರಾಂತ್ಯಗಳಲ್ಲಿ ಮುಖ್ಯವಾಗಿ ಪಂಜಾಬ್, ಸಿಂಧ್ ಮತ್ತು  ರಾಜಧಾನಿ ದೆಹಲಿಯಲ್ಲಿ, ದೇಶ ವಿಭಜನೆಯ ಕಾರಣಕ್ಕೆ ಹಿಂದುಗಳು ಮುಸ್ಲಿಮರು ಮತ್ತು ಸಿಖ್ಖರು ಪರಸ್ಪರರ ಮೇಲೆ ಭಾರೀ ಪ್ರಮಾಣದ ಹಿಂಸಾಚಾರ ನಡೆಸಿದ್ದರು. ಅವು ಗಾಂಧೀಜಿ ಬದುಕಿನ ಅತ್ಯಂತ ದುಃಖದ ದಿನಗಳಾಗಿದ್ದವು. ಅಂತಹ ಒಂದು ದಿನ ೧೯೪೮ರ ಜನವರಿ ೩೦, ಶುಕ್ರವಾರ ಮಹರಾಷ್ಟ್ರದ ಒಬ್ಬ ಚಿತ್ಪಾವನ ಬ್ರಾಹ್ಮಣ ತರುಣ ನತ್ತೂರಾಮ ಗೋಡ್ಸೆ (ಇದೇ ಆತನ ಸರಿಯಾದ ಹೆಸರು, ನಾಥೂರಾಮ್ ಅಲ್ಲ) ದೆಹಲಿಯಲ್ಲಿ ತನ್ನ ನಿತ್ಯದ ಪ್ರಾರ್ಥನಾಸಭೆಗೆ ಹೋಗುತ್ತಿದ್ದ ಗಾಂಧೀಜಿಯವರನ್ನು ಗುಂಡಿಟ್ಟು ಕೊಂದ. ಗೋಡ್ಸೆ ಆರ್.ಎಸ್.ಎಸ್ ಕಾರ್ಯಕರ್ತನಾಗಿದ್ದು ಕೆಲವು ವರ್ಷ, ಆ ಸಂಘಟನೆಯ ತತ್ವ ಪ್ರಸಾರಕ್ಕೆ ಮೀಸಲಾದ ಒಂದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದ. ಕ್ರಮೇಣ, ಅವನಿಗೆ ಆರ್.ಎಸ್.ಎಸ್ ಧೋರಣೆ ತೀರ ಮೃದುವಾಯಿತು ಎನ್ನಿಸಿ, ಹಿಂದು ಮಹಾ ಸಭಾ ಎಂಬ ಉಗ್ರವಾದಿ ಸಂಘಟನೆಯನ್ನು ಸೇರಿಕೊಂಡ. ಗಾಂಧೀಜಿ ಕೊಲೆ ಹಠಾತ್ತನೆ ಸಂಭವಿಸಿದ ಒಂದು ಕ್ರಿಮಿನಲ್ ಅಪರಾಧವಲ್ಲ; ಅದು ಒಂದು ರಾಜಕೀಯ ಕೊಲೆಯಾಗಿದ್ದು ಅದರ ಸ್ಫೂರ್ತಿ ಮತ್ತು ತಾತ್ವಿಕ ತಳಹದಿ, ಆರ್.ಎಸ್.ಎಸ್.ನ ಹಿಂದುತ್ವವಾದ ಎಂಬುದು ಸ್ಪಷ್ಟವಾಗುತ್ತದೆ. ಅದೂ ಸಾಲದ್ದಕ್ಕೆ, ಗಾಂಧೀಜಿಯವರ ಬದುಕಿನ ಕೊನೆಯ ಕಾಲಘಟ್ಟದಲ್ಲಿ ಅವರನ್ನು ಕೊಲ್ಲಲು ೬ ಭಾರಿ ಯತ್ನಿಸಲಾಗಿತ್ತು. ಈ ೬ ಪ್ರಯತ್ನಗಳೂ ಹಿಂದುತ್ವ ಸಿದ್ಧಾಂತದ ಪೂರ್ವಯೋಜಿತ ಕಾರ್ಯಾಚರಣೆಗಳಾಗಿದ್ದು ೧೯೪೮ರ ಜನವರಿ ೩೦ರ ಕೊನೆಯ ಪ್ರಯತ್ನ ಯಶಸ್ವಿಯಾಯಿತು.


ಗಾಂಧೀಜಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಒಂದು ಮೌಲ್ಯವಿದ್ದರೆ ಅದು ಕೋಮು ಸೌಹಾರ್ದ. ಆ ಕಾರಣಕ್ಕಾಗಿಯೇ ಅವರನ್ನು ಕೊಲೆ ಮಾಡಲಾಯಿತು. ೧೯೪೮ರ ಜನವರಿ ತಿಂಗಳಲ್ಲಿ ತನ್ನ ಕೊಲೆಗೆ ಕೆಲವೇ ದಿನಗಳ ಮೊದಲು ಗಾಂಧೀಜಿ, ಕೈಕೊಂಡ ಒಂದು ನಿರ್ಧಾರ, ಅವರನ್ನು ಮುಗಿಸಿ ಬಿಡಲು, ಹಿಂದುತ್ವವಾದಿಗಳಿಗೆ ನೇರ ಕಾರಣ ಒದಗಿಸಿತು. ಆ ದಿನಗಳಲ್ಲೂ ದೇಶ ವಿಭಜನೆಯ ಹಿಂಸೆ ತಣ್ಣಗಾಗಿರಲಿಲ್ಲ. ದೆಹಲಿ, ನಿರಾಶ್ರಿತರಿಂದ ಕಿಕ್ಕಿರಿದು ತುಂಬಿತ್ತು, ಅವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಸಿಂಧ್‌ಗಳ ಮುಸ್ಲಿಮರಿಂದ ಹಿಂಸೆಗೊಳಗಾದ ಹಿಂದುಗಳಾಗಿದ್ದರು. ದೆಹಲಿಯ ಬಹುಸಂಖ್ಯಾತ ಹಿಂದುಗಳು ಸೇಡು ತೀರಿಸಿಕೊಳ್ಳಲು ಸಿಟ್ಟಿನಲ್ಲಿ ಕುದಿಯುತ್ತಿದ್ದರು. ಮತ್ತು ತಮ್ಮ ಸಿಟ್ಟಿನಲ್ಲಿ ಹಿಂದುಗಳಿಂದ, ಇದೇ ಬಗೆಯ ಹಿಂಸಾಚಾರವನ್ನು ಅನುಭವಿಸಿದ ಮುಸ್ಲಿಮ್ ಅಸಹಾಯಕರು ದೇಶದ ಇತರ ಎಡೆಗಳಲ್ಲಿ ಇದ್ದಾರೆ ಎಂಬ ವಾಸ್ತವವನ್ನು ಮರೆತು ವಿವೇಕ ಶೂನ್ಯ ಸಿಟ್ಟಿಗೆ ತುತ್ತಾಗಿದ್ದರು, ದೆಹಲಿಯ ಅಸಹಾಯಕ ಮುಸ್ಲಿಮರ ಮೇಲೆ ಹಗೆ ತೀರಿಸಿಕೊಳ್ಳಲು ಮುದಾಗಿದ್ದರು. ಇಂತಹ ಸನ್ನಿವೇಶದಲ್ಲಿ, ಪ್ರಾಯಶಃ ದೆಹಲಿಯಲ್ಲಿ ಯಾಕೆ, ಇಡೀ ದೇಶದಲ್ಲೇ ಸಮಚಿತ್ತ ಮತ್ತು ನ್ಯಾಯಪ್ರಜ್ನೆಗಳನ್ನು ಕಳೆದುಕೊಳ್ಳದ ಏಕೈಕ ವ್ಯಕ್ತಿ ಗಾಂಧೀಜಿ. ಹಿಂಸೆ ಅವರನ್ನು ಕಂಗಾಲುಗೊಳಿಸಿತ್ತು. ತನ್ನ ಕೊನೆಗಾಲದಲ್ಲಿ ರಾತ್ರಿಯೆಲ್ಲ ನಿದ್ದೆಗೆಟ್ಟು, ತನ್ನ ಸುತ್ತ ಹಬ್ಬಿರುವ ಹಿಂಸೆಯಲ್ಲಿ ತನ್ನ ಜವಾಬ್ದಾರಿಯೂ ಇದೆಯೆ ಎಂದು ಅವರು ಯೋಚಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ೧೯೪೮ರ ಜನವರಿ ೧೩ರಂದು ಗಾಂಧೀಜಿ, ದೆಹಲಿಯಲ್ಲೂ ದೇಶದಲ್ಲೂ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ತನ್ನ ಕಟ್ಟಕಡೆಯ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಅದು ಸ್ವತಂತ್ರ ಭಾರತದ ಪ್ರಥಮ ಪ್ರಜಾಸತ್ತಾತ್ಮಕ ಪ್ರತಿಭಟನೆಯೂ ಹೌದು. ಪ್ರಜೆಗಳನ್ನು ರಕ್ಷಿಸಲು ಮತ್ತು ರಾಜತಾಂತ್ರಿಕ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ಭಾರತ ಸರಕಾರ ವಿಫಲವಾದದ್ದರ ವಿರುದ್ಧ ಗಾಂಧೀಜಿ ಈ ಸತ್ಯಾಗ್ರಹ ಪ್ರಾರಂಭಿಸಿದ್ದರು. ದೆಹಲಿಯಲ್ಲಿ ಹಿಂಸೆಗೆ ಗುರಿಯಾದ ಪ್ರಜೆಗಳಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು ಎನ್ನುವ ಕಾರಣಕ್ಕೆ ಗಾಂಧೀಜಿಯವರ ಈ ಕ್ರಮ, ಮುಸ್ಲಿಮರ ಪರ ಪಕ್ಷಪಾತ ಧೋರಣೆಯದ್ದು ಎಂದು ಎಲ್ಲರೂ ಭಾವಿಸಿದರು. ಈ ಬಗ್ಗೆ ದೆಹಲಿಯ ಪತ್ರಕರ್ತರೇ ಗಾಂಧೀಜಿಯವರನ್ನು ಪ್ರಶ್ನಿಸಿದಾಗ ಅವರು ಹೌದು ನನ್ನ ಉಪವಾಸ ಸತ್ಯಾಗ್ರಹ ಹಿಂಸೆಗೊಳಗಾದ ಮುಸ್ಲಿಮರ ಪರ ಎಂದು ಚೂರೂ ಅಳುಕದೆ ಹೇಳಿದರು. ಯಾರನ್ನು ಉದ್ದೇಶಿಸಿ ನಿಮ್ಮ ಈ ಸತ್ಯಾಗ್ರಹ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ಗಾಂಧೀಜಿ ಭಾರತ ಮತ್ತು ಪಾಕಿಸ್ತಾನದ ಎಲ್ಲ ಪ್ರಜೆಗಳು ಎಂದು ಉತ್ತರಿಸಿದರು. ಕೋಮುಹಿಂಸೆಗೆ ತುತ್ತಾದ ಪ್ರಜೆಗಳಲ್ಲಿ ಅವರು ಹಿಂದು, ಮುಸ್ಲಿಂ ಮತ್ತು ಸಿಖ್ ಎಂದು ಬೇಧ ಕಲ್ಪಿಸಲಿಲ್ಲ. ತನ್ನ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಗಾಂಧೀಜಿ ಹಾಕಿದ ಶರತ್ತುಗಳು ಸಾಮಾನ್ಯರಿಗೆ ಮಾನವ ಧರ್ಮದ ಒಂದು ನೈತಿಕ ಪಾಠದಂತೆಯೂ, ಆಳುವವರಿಗೆ ರಾಜಧರ್ಮದ ಕಟ್ಟುಪಾಡುಗಳ ಹಾಗೆಯೂ ಇವೆ. ಆ ಶರತ್ತುಗಳು ಹೀಗಿವೆ: 

(೧) ದೆಹಲಿಯಿಂದ ಮುಸ್ಲಿಮರನ್ನು ಓಡಿಸಿಬಿಡಲು ಸಂಘಟಿತ ಪ್ರಯತ್ನಗಳನ್ನು ಕೆಲವರು ನಡೆಸಿದ್ದಾರೆ. ಅದು ತಕ್ಷಣ ನಿಲ್ಲಬೇಕು. (೨) ಅಶಾಂತಿಯ ಕಾರಣಕ್ಕೆ ಮುಂದೂಡಲಾಗಿರುವ ದೆಹಲಿಯ ಖ್ವಾಜಾ ಕುತುಬುದ್ದೀನ್ ದರ್ಗದ ಉರೂಸ್ ಕೂಡಲೆ ನಡೆಯಬೇಕು. (೩) ಗುರುದ್ವಾರ ಮತ್ತು ದೇವಸ್ಥಾನಗಳಾಗಿ ಬಲತ್ಕಾರದಲ್ಲಿ ಪರಿವರ್ತಿತವಾಗಿರುವ ಮಸೀದಿಗಳನ್ನು ಮುಸ್ಲಿಮ್ ಸಮುದಾಯಕ್ಕೆ ಮರಳಿಸಬೇಕು. (೪) ಮುಸ್ಲಿಮ್ ಪ್ರಜೆಗಳಿಗೆ, ಅವರ ಮನೆಗಳಲ್ಲಿ ರಕ್ಷಣೆ ಇರಬೇಕು. (೫) ಮುಸ್ಲಿಮರ ಮೇಲೆ ದೆಹಲಿಯಲ್ಲಿ ವಿಧಿಸಲಾಗಿರುವ ಅಘೋಷಿತ ಆರ್ಥಿಕ ಬಹಿಷ್ಕಾರ ತಕ್ಷಣ ನಿಲ್ಲಬೇಕು. (೬)  ದೇಶ ವಿಭಜನೆಯ ಒಪ್ಪಂದದ ಪ್ರಕಾರ ಭಾರತ ಸರಕಾರ, ಪಾಕಿಸ್ತಾನಕ್ಕೆ ೫೫ ಕೋಟಿ ರೂ. ಗಳನ್ನು ಪಾವತಿಸಬೇಕು. (ಕಾಶ್ಮೀರದ ಗಡಿಯೊಳಗೆ ಪಾಕಿಸ್ತಾನದ ಸೈನ್ಯ ನುಗ್ಗಿ ಆಕ್ರಮಣ ನಡೆಸಿದ ಕಾರಣಕ್ಕೆ ಭಾರತ ಸರಕಾರ ಈ ಪಾವತಿಯನ್ನು ತಡೆಹಿಡಿದಿತ್ತು. ಗಾಂಧೀಜಿ, ಪಾಕಿಸ್ತಾನದ ಆಕ್ರಮಣವನ್ನು ಖಂಡಿಸಿದರೂ, ಅದರ ಜೊತೆ ಮಾಡಿಕೊಂಡ ರಾಜತಾಂತ್ರಿಕ ಒಪ್ಪಂದವನ್ನು ಪಾಲಿಸಲೇಬೇಕು ಎಂದು ಶರತ್ತು ಹಾಕಿದರು)

ತನ್ನ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಗಾಂಧೀಜಿ ವಿಧಿಸಿದ ಶರತ್ತುಗಳಲ್ಲಿ, ಪಾಕಿಸ್ತಾನಕ್ಕೆ ೫೫ ಕೋಟಿ ರೂ ಗಳನ್ನು ಪಾವತಿಸುವ ಒಂದು ಶರತ್ತನ್ನು ಮಾತ್ರ ಮತ್ತೆ ಮತ್ತೆ ಒತ್ತಿ ಹೇಳುತ್ತ ಗಾಂಧೀಜಿ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ತಳೆದಿದ್ದರು ಎಂದು ಈಗಲೂ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಭಾರತ ಸರಕಾರ, ಹೆಚ್ಚು ತಡಮಾಡದೆ, ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ೫೫ ಕೋಟಿ ರೂಗಳನ್ನು ಸಲ್ಲಿಸುವ ತೀರ್ಮಾನವನ್ನು ತೆಗೆದುಕೊಂಡಿತು. ಆದರೆ ಗಾಂಧೀಜಿಯವರ ಉಪವಾಸ ದೇಶದಲ್ಲಿ ಹಬ್ಬಿರುವ ಹಿಂಸೆಯ ವಿರುದ್ಧವಾಗಿತ್ತು. ಹಾಗಾಗಿ ಬಡಪೆಟ್ಟಿಗೆ ತಮ್ಮ ಉಪವಾಸ ನಿಲ್ಲಿಸಲು ಅವರು ಸಮ್ಮತಿಸಲಿಲ್ಲ. ಎಲ್ಲ ರಾಜಕೀಯ ಪಕ್ಷ, ಸಂಘಟನೆಗಳ ನೇತಾರರು ಹಾಗು ಆರ್.ಎಸ್.ಎಸ್ ಮತ್ತು ಹಿಂದು ಮಹಾ ಸಭಾಗಳ ನಾಯಕರು, ಒಟ್ಟಾಗಿ, ತಾವು ಗಾಂಧೀಜಿಯವರ ಶರತ್ತುಗಳನ್ನು ಕಾರ್ಯಗತಗೊಳಿಸುವೆವು ಎಂದು ಮಾತು ಕೊಟ್ಟ ಮೇಲೆ, ಜನವರಿ ೧೮ರಂದು ಗಾಂಧೀಜಿ ತನ್ನ ಸತ್ಯಾಗ್ರಹವನ್ನು ನಿಲ್ಲಿಸಿದರು. ತಮ್ಮನ್ನು ಬೇಟಿಮಾಡಲು ಬಂದ ಆರ್.ಎಸ್.ಎಸ್.ನವರಿಗೆ ಅವರು, ದೆಹಲಿಯಲ್ಲಿ ಮಾತ್ರ ಹಿಂಸಾಚಾರ ನಿಲ್ಲುವುದೋ? ದೇಶದ ಉಳಿದ ಕಡೆಗಳಲ್ಲಿ ಅದು ಮುಂದುವರಿಯುವುದಿಲ್ಲ ಎಂದು ಏನು ಭರವಸೆ? ಈಗ, ಯಾರೂ ಹಿಂಸೆಯನ್ನು ನಿಲ್ಲಿಸುವುದರ ಬಗ್ಗೆ ತಾವು ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ ಎಂದು ಕುಟುಕಿದ್ದರು. ಆರ್.ಎಸ್.ಎಸ್ ಬಗ್ಗೆ ಅವರಿಗಿದ್ದ ಭಯ ಸಕಾರಣವಾಗಿತ್ತು. ಹಿಂದು ಮಹಾಸಭಾ ತಾನು ಗಾಂಧೀಜಿಯವರಿಗೆ ನೀಡಿದ್ದ ಆಶ್ವಾಸನೆಗೆ ಬದ್ಧವಲ್ಲ ಎಂದು ಅಧಿಕೃತವಾಗಿಯೇ ಘೋಷಿಸಿತು.

ಗಾಂಧೀಜಿಯವರ ಕೊನೆಯ ಉಪವಾಸ ಕೋಮುಹಿಂಸೆಯ ರಾಜಕೀಯವನ್ನೂ ಮತ್ತು ಅದನ್ನು ನಿಭಾಯಿಸಲು ಹಿಂಜರಿಯುವ ಆಳುವ ಸರಕಾರಗಳ ಸಂವಿಧಾನಿಕ ಇಚ್ಛಾಶಕ್ತಿಯ ಕೊರತೆಯನ್ನೂ ಎದುರಿಸಿ ನ್ಯಾಯಕ್ಕಾಗಿ ಪಟ್ಟು ಹಿಡಿಯುವ ಸತ್ಯಾಗ್ರಹಕ್ಕೆ ಶ್ರೇಷ್ಠ ರೂಪಕವಾಗಿದೆ. ೨೦೧೪ರ ನವೆಂಬರ್ ತಿಂಗಳಿಂದ ಕರ್ನಾಟಕದ ಕರಾವಳಿಯ ಗಂಗೊಳ್ಳಿ, ಕೋಡಿ, ಉಳಾಯಿಬೆಟ್ಟುವಿನಲ್ಲಿ ನಡೆಯುತ್ತಿರುವ ಹಿಂದುತ್ವ ಪ್ರಚೋದಿತ ಹಿಂಸೆ ಮತ್ತು ಪ್ರಭುತ್ವದ ಸಂಸ್ಥೆಗಳ ವರಸೆ ಗಾಂಧೀಜಿಯವರ ಕೊನೆಯ ಉಪವಾಸದ ಮಹತ್ವವನ್ನು ನಮಗೆ ಮನಗಾಣಿಸುತ್ತಿದೆ. ಕೋಮು ಸೌಹಾರ್ದ ಬಯಸುವವರು ತೋರಬೇಕಾದ ಸತ್ಯನಿಷ್ಠೂರತೆಯನ್ನು ಅರಿಸುತ್ತಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...