Monday, January 26, 2015

ರೇಗನ್‌, ಒಬಾಮ ಮತ್ತು ಅಸಮಾನತೆ

1970ರ ದಶಕದ ನಂತರ ಅಮೆರಿಕದ ಒಟ್ಟು ವ್ಯವಸ್ಥೆಯಲ್ಲಿ ಸಾಕಷ್ಟು ಗಂಭೀರವಾದ ತಪ್ಪುಗಳಾಗಿವೆ. ಅಸಮಾನತೆ ಹೆಚ್ಚಿದೆ. ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಬಂಧನ ಪ್ರಕರಣ­ಗಳು ಐದು ಪಟ್ಟು ಹೆಚ್ಚಾಗಿವೆ. ಕೌಟುಂಬಿಕ ಬಿರುಕುಗಳು ಅಧಿಕಗೊಂಡಿವೆ. ಕುಟುಂಬಗಳ ಸರಾಸರಿ ಆದಾಯ ನಿಂತ ನೀರಾಗಿದೆ.

‘ಅಮೆರಿಕದಲ್ಲಿ ಮತ್ತೆ ಅರುಣೋದಯವಾಗಿದೆ’-  – ೧೯೮೪ರಲ್ಲಿ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಅವರ ಚುನಾವಣಾ ಪ್ರಚಾರದ ಘೋಷವಾಕ್ಯ ಇದು. ಆದರೆ, ನಡೆದದ್ದೇ ಬೇರೆ. ದೇಶದ ಸಾಮಾಜಿಕ ವ್ಯವಸ್ಥೆಯ ದಾರಿ ತಪ್ಪಿಸು­ವಂಥ ಅಸಮಾನತೆ, ಜಡತ್ವ ರೇಗನ್‌ ಅವರ ಆಡಳಿತಾವಧಿಯ ಆರಂಭದ ದಿನಗಳಲ್ಲೇ ಹುಟ್ಟಿಕೊಂಡವು. ಆಳವಾಗಿ ಬೇರೂರಿದ ಇವುಗಳನ್ನು ಅಲುಗಾಡಿಸಲು ಇನ್ನೂ ಸಾಧ್ಯವಾಗಿಲ್ಲ. ೨೦೦೦ನೇ ಇಸವಿಯಿಂದೀಚೆಗಂತೂ ಅಧ್ಯಕ್ಷ ಬರಾಕ್‌ ಒಬಾಮ ಅವರ ಆಡಳಿತದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಿದೆ.

ಜಾರಿಯಾಗದ ಪ್ರಸ್ತಾವ: ಒಬಾಮ ಅವರು ಅಧಿಕಾರ ವಹಿಸಿ­ಕೊಂಡ ನಂತರ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಪ್ರಸ್ತಾಪಿಸಿದ ಬಹುಪಾಲು ಯೋಜನೆ ಗಳು ಕಾರ್ಯ­ರೂಪಕ್ಕೆ ಬಂದಿಲ್ಲ. ಅವು ಜಾರಿ ಆಗುವುದಿರಲಿ, ಕಾಂಗ್ರೆಸ್‌­ನಲ್ಲಿ ಮಂಡನೆ­ಯಾಗು­ವುದಕ್ಕೂ ಮೊದಲೇ ಪ್ರಾಮುಖ್ಯ ಕಳೆದುಕೊಂಡಿವೆ.

ಕಾಂಗ್ರೆಸ್‌ ಜಂಟಿ ಅಧಿವೇಶನ ಉದ್ದೇಶಿಸಿ 2014ರಲ್ಲಿ ಒಬಾಮ ಮಾಡಿದ ಭಾಷಣ ಯಾರಿಗಾದರೂ ನೆನಪಿದೆಯೇ? ಖಂಡಿತವಾಗಿಯೂ ಇರಲಿಕ್ಕಿಲ್ಲ! ಆ ಭಾಷಣದಲ್ಲಿ ಅವರು ೧೮ ಯೋಜನೆ ಗಳನ್ನು ಪ್ರಸ್ತಾಪಿಸಿದ್ದರು. ಪಿಬಿಎಸ್‌ (ಸಾರ್ವಜನಿಕ ಪ್ರಸಾರ ಸೇವೆ) ಪ್ರಕಾರ, ಈ ಪೈಕಿ ಅನುಷ್ಠಾನ­ಗೊಂಡಿದ್ದು ಕೇವಲ ಎರಡು. ೨೦೧೩ರಲ್ಲಿ ‘ಬಂದೂಕು ಹಿಂಸಾಚಾರ’ವನ್ನು ತಡೆಗಟ್ಟಲು ಕೈಗೊಳ್ಳ­ಬೇಕಾದ ಕ್ರಮಗಳ ಬಗ್ಗೆ ಅವರು ಆವೇಶಭರಿತರಾಗಿ ಮಾತನಾಡಿದ್ದರು. ಹಿಂಸಾಚಾರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಪ್ರಸ್ತಾಪಿಸಿದ್ದರು. ಇದರಿಂದ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಫಲಿತಾಂಶ ಶೂನ್ಯ. ಈ ಬಾರಿಯಂತೂ ಅವರ ಬಾಯಲ್ಲಿ ‘ಬಂದೂಕು’ ಎಂಬ ಪದವೇ ಕೇಳಿಬರಲಿಲ್ಲ.

ರಾಷ್ಟ್ರೀಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ಒಬಾಮ ಅವರ ನಿಲುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ, ಅಸಮಾನತೆಯ ವಿಷಯದಲ್ಲಿ ಅವರು ಕೇಳಿರುವ, ‘ಕೇವಲ ಬೆರಳೆಣಿಕೆಯಷ್ಟು ಮಂದಿ ಅತ್ಯಂತ ಧನಿಕರಾಗಿರುವ ಆರ್ಥಿಕ ವ್ಯವಸ್ಥೆಯನ್ನು ನಾವು ಒಪ್ಪಿಕೊಳ್ಳಬೇಕೆ?’ ಎಂಬ ಪ್ರಶ್ನೆ ಸಮಂಜಸವಾಗಿದೆ.

೨೦ನೇ ಶತಮಾನದ ಮೊದಲ ಏಳೂವರೆ ದಶಕಗಳ ಅವಧಿಯಲ್ಲಿ ಅಮೆರಿಕದ ಸಾಮಾಜಿಕ ಸ್ಥಿತಿಗತಿ ಅತ್ಯುತ್ತಮವಾಗಿಯೇ ಇತ್ತು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಇದ್ದುದರ ನಡುವೆಯೂ ಅಮೆರಿಕನ್ನರ ಆದಾಯ ಏರುಗತಿಯಲ್ಲೇ ಸಾಗಿತ್ತು. ಶಿಕ್ಷಣ ವ್ಯವಸ್ಥೆ ಪ್ರಗತಿಯ ಹಾದಿಯಲ್ಲಿತ್ತು. ಅಸಮಾನತೆ ಪ್ರಮಾಣ ಕಡಿಮೆಯಾಗುತ್ತಾ ಬಂದಿತ್ತು. ಲಾಭಾಂಶವನ್ನು ಬಡವರು, ಸಿರಿವಂತರು ಸಮನಾಗಿ ಹಂಚಿಕೊಳ್ಳುತ್ತಿದ್ದರು. ಪ್ರೌಢಶಿಕ್ಷಣದ ಪ್ರಮಾಣವೂ ಹೆಚ್ಚಿತ್ತು. ಶೈಕ್ಷಣಿಕ ಸಾಧನೆಯಲ್ಲಿ ಅಮೆರಿಕ ಜಗತ್ತಿಗೇ ನಾಯಕನಾಗಿತ್ತು. ಗಮನಾರ್ಹವಾದ ಈ ಅವಧಿಯಲ್ಲಿ ಆದಾಯ ತೆರಿಗೆ ಪ್ರಮಾಣ ಕೂಡ
ಶೇ ೯೦ ದಾಟಿತ್ತು. ಆದರೆ, ೧೯೭೦ರ ಅಂತ್ಯದ ವೇಳೆಗೆ ಪರಿಸ್ಥಿತಿ ಸಂಪೂರ್ಣವಾಗಿ ಬದ­ಲಾಯಿತು.

ಆರ್ಥಿಕ ತಜ್ಞ ಜೇಮ್ಸ್‌ ಕೆ.ಗಾಲ್‌ಬ್ರೆತ್ ಅವರು ‘ಸಹಜ ಸ್ಥಿತಿಯ ಅಂತ್ಯ’ ಎಂಬ ತಮ್ಮ ಕೃತಿಯಲ್ಲಿ ಈ ವಿಷಯವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ನಂತರ ದೇಶದ ಅರ್ಥ ವ್ಯವಸ್ಥೆ ಪ್ರಗತಿ ಕಾಣಲು ಆರಂಭಿಸಿತಾ­ದರೂ, ಸಮಾಜ ದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಯಿತು. ಸಂಪತ್ತು ಉಳ್ಳವರಲ್ಲೇ ಶೇಖರಗೊಂಡಿತೇ ವಿನಾ ಶೇ ೯೦ರಷ್ಟು ಪ್ರಮಾಣದಲ್ಲಿರುವ ಆರ್ಥಿಕ ದುರ್ಬಲರಿಗೆ ಸಿಗಲಿಲ್ಲ. ಇಂದು ಅಮೆರಿಕದ ಕುಟುಂಬಗಳ ಸರಾಸರಿ ಆದಾಯ ೧೯೭೯ರಲ್ಲಿ ಇದ್ದುದಕ್ಕಿಂತ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಹೋಲಿಸಿ ನೋಡಿದರೆ, ಅಮೆರಿಕದ ಕುಟುಂಬಕ್ಕಿಂತ ಕೆನಡಾ ಕುಟುಂಬದ ಜೀವನ ಮಟ್ಟ ಉತ್ತಮವಾಗಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ಇದಕ್ಕೆ ಮುಖ್ಯ ಕಾರಣ. ಅಮೆರಿಕದ ಇಂದಿನ ಯುವಕರಲ್ಲಿ ಶೇ ೨೯ರಷ್ಟು ಮಂದಿ ತಮ್ಮ ಪೋಷಕರಿಗಿಂತಲೂ ಕಡಿಮೆ ಶಿಕ್ಷಣ ಪಡೆದಿದ್ದರೆ, ಶೇ 20ರಷ್ಟು ಯುವಕರು ಮಾತ್ರ ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಜಗತ್ತಿನ ಪ್ರಮುಖ ಕೈಗಾರಿಕಾ ರಾಷ್ಟ್ರಗಳಲ್ಲಿ ಮೂರು ವರ್ಷದ ಶೇ ೭೦ರಷ್ಟು ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋಗುತ್ತಾರೆ. ಆದರೆ, ಅಮೆರಿಕದಲ್ಲಿ ಈ ಪ್ರಮಾಣ ಶೇ ೩೮ರಷ್ಟು ಮಾತ್ರ. ದುಡಿಮೆಯನ್ನು ಉತ್ತೇಜಿಸಲು ಸಾಕಷ್ಟು ಆಕರ್ಷಕವಾದ ಪ್ರಸ್ತಾವಗಳನ್ನು ಒಬಾಮ ಇಟ್ಟಿದ್ದರು. ಆದರೆ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ’ಗೆ ಸೇರಿದ
34 ರಾಷ್ಟ್ರಗಳ ಪೈಕಿ ವೇತನ ರಹಿತ ಹೆರಿಗೆ ರಜೆ ನೀಡುತ್ತಿರುವ ಏಕೈಕ ದೇಶ ಅಮೆರಿಕ.

ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಮೆರಿಕದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ, ಕನಿಷ್ಠ ರಾಜ್ಯ ಮಟ್ಟದಲ್ಲಾದರೂ ಪೂರ್ವ ಪ್ರಾಥಮಿಕ ಶಾಲೆ­ಗಳಿಗೆ ಉತ್ತೇಜನ ನೀಡುವ ಕೆಲಸ ಆಗಬೇಕಾಗಿದೆ.

ಹದಿಹರೆಯದ ಬಾಲಕಿಯರು ಗರ್ಭಿಣಿ­ಯರಾಗುವ ಪ್ರಮಾಣ ಕುಂಠಿತ­ವಾಗಿರುವುದು ಸಂತಸದ ವಿಚಾರ. ಇದು ಸರ್ಕಾರದ ನೀತಿಗಳಿಂದ ಸಾಧ್ಯವಾಯಿತು ಎಂದು ಒಬಾಮ ಹೇಳಿ ಕೊಳ್ಳುತ್ತಿದ್ದಾರೆ. ಆದರೆ, ಇದರಲ್ಲಿ ಅವರ ಪಾತ್ರ ಕಡಿಮೆ. (ಎಂಟಿವಿಯ ‘೧೬ ಮತ್ತು ಗರ್ಭಧಾರಣೆ’ ಕಾರ್ಯಕ್ರಮ ಇದರ ಹಿಂದೆ ಪ್ರಮುಖ ಪಾತ್ರ ವಹಿಸಿದೆ!) ಆದರೂ, ೧೯ ವರ್ಷ ವಯಸ್ಸಿನ ಶೇ ೩೦ರಷ್ಟು ಬಾಲಕಿಯರು ಈಗಲೂ ಗರ್ಭವತಿ ಯರಾಗುತ್ತಿದ್ದಾರೆ.

ಇದನ್ನು ತಡೆಯುವ  ನಿಟ್ಟಿನಲ್ಲಿ ವಿಶ್ವಾಸಾರ್ಹ ಜನನ ನಿಯಂತ್ರಣ ಕ್ರಮಗಳು ಜಾರಿಯಾಗ­ಬೇಕಾಗಿದೆ. ಅಮೆರಿಕದಲ್ಲಿ ಸಬ್ಸಿಡಿ ಪಡೆಯುವ ಖಾಸಗಿ ವಿಮಾನಗಳಿವೆ, ದೊಡ್ಡ ಬ್ಯಾಂಕ್‌ ಗಳಿವೆ, ಹಣಕಾಸು ವ್ಯವಸ್ಥಾಪಕರಿದ್ದಾರೆ. ಒಂದು ವೇಳೆ, ಇವರಿಂದ ಹೆಚ್ಚು ತೆರಿಗೆ ಸಂಗ್ರಹಿಸಿದರೆ, ಆ ಮೊತ್ತವನ್ನು ಉತ್ತಮ ಶಿಕ್ಷಣ, ಮೂಲ­ಸೌಕರ್ಯ­, ಉದ್ಯೋಗ ಸೃಷ್ಟಿಗಾಗಿ ಬಳಸಿಕೊಳ್ಳಬಹುದು.

ಕಾಂಗ್ರೆಸ್‌ನ ರಿಪಬ್ಲಿಕನ್‌ ಪಕ್ಷದ ಸದಸ್ಯರು, ಇಂದಿನ ತೈಲ ಬೆಲೆ­ಯಲ್ಲಿ ಆರ್ಥಿಕವಾಗಿ ಹೊರೆಯಾಗಿರುವ ಪೈಪ್‌ಲೈನ್‌ ನಿರ್ಮಾಣ ಯೋಜನೆಗೇ ಹೆಚ್ಚು ಗಮನ ನೀಡುತ್ತಿರುವಂತೆ ಕಾಣುತ್ತದೆ. ಇದೆಲ್ಲ ಏನೇ ಇದ್ದರೂ,  ಒಬಾಮ ಅವರು ಹೇಳುವಂತೆ ರಾಷ್ಟ್ರೀಯ ಕಾರ್ಯಸೂಚಿ ಇನ್ನಷ್ಟು ವಿಸ್ತಾರಗೊಂಡು, ಈ ೩೫ ವರ್ಷಗಳಲ್ಲಿ ಆಗಿರುವ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂಬುದೇ ಎಲ್ಲರ ಆಶಯ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...