Friday, February 13, 2015

ಆರು ಕವಿತೆಗಳು
ಡಾ ಎಚ್ ಎಸ್ ಅನುಪಮಾ


1


ಸ್ವರ್ಗ


ಅಲ್ಲಿಯ ನಿನ್ನ ನಗೆಗೆ
ಇಲ್ಲಿ ಹೂವರಳುತ್ತದೆ
ನಿನ್ನ ಮೆಲುನುಡಿಯ ಖುಷಿಗೆ
ತಂಗಾಳಿ ಸುಳಿಯುತ್ತದೆ
ನನ್ನ ಸೂರ್ಯನೇ ನಿನ್ನನ್ನೂ ಬೆಳಗಿ
ಕಾಡಿಸುವ ಚಂದ್ರನೇ ನಿನ್ನ ಮೊಗದಲ್ಲರಳಿ
ನನ್ನ ಇರುಳೇ ನಿನ್ನನ್ನೂ ಆವರಿಸಿ
ನಾನು ನೀನೆಂಬ ತೆರೆಯೂ ಅಳಿಸಿ...

ಬರುತ್ತಿರಬಹುದಾದ ನೀನು
ತವಕದಲಿ ಕಾದಿರುವ ನಾನು
ಸುರಿದೇನೆಂಬಂತಿರುವ ಮಳೆ..

ಸ್ವರ್ಗವೆಂದರೆ ಇಲ್ಲೇ ಇರಬೇಕು..

ಕಬ್ಬಿಣಕೆ ಸೂಜಿಗಲ್ಲ ಸೆಳೆತವೋ
ಸೂಜಿಗಲ್ಲಿಗೆ ಕಬ್ಬಿಣದ ಮೋಹವೋ
ಯಾವುದು ಲೋಹ?
ಯಾವುದು ಸೂಜಿಗಲ್ಲು?

ತರ್ಕ ನಿನಗೇ ಇರಲಿ ಲೋಕವೇ
ನನ್ನ ಬೆರಳಿಗಂಟಿದ ನಿಜ ಇಷ್ಟೇ..
ಸೆಳೆತವೆಂಬ ಪದ
ಇಂದು ಅನುಭವವಾಗಿದೆ..2

ಏನಾಯಿತು!?


ಒಂದಾನೊಂದು ಕಾಲದಲ್ಲಿ...

ನನ್ನೊಳಗೊಂದು
ಬುಸುಗುಡುವ ಹಾವಿತ್ತು
ಗುಡುಗುಡನೆ ಭೋರಿಡುವ
ಅಗ್ನಿಪರ್ವತವಿತ್ತು

ನಡೆದಷ್ಟೂ ಮುಗಿಯದ
ಕೆಂಪು ಹಾದಿ ಮಲಗಿತ್ತು
ಗರಿಕೆಯೂ ಚಿಗುರದ
ಬೆಂಗಾಡು ಹರಡಿತ್ತು

ಜಡಿಮಳೆಗು ಮೊದಲಿನ
ನಿಶ್ಶಬ್ದವಿತ್ತು
ಬೆಳಕು ಬಣ್ಣಗಳಿರದ
ಕಡುಕತ್ತಲು ತುಂಬಿತ್ತು

ನಾನೇ ಬಚ್ಚಿಟ್ಟ ನನ್ನ
ಸಿಂಗರಿಸದ ಮುಖವಿತ್ತು
ಸವಿಯೊಂದೂ ಬೇಡದ
ವಿಷಾದವೇ ತುಂಬಿತ್ತು..

ಅದೇನಾಯಿತು?!

ಪರುಷಮಣಿ ಆ ಸ್ಪರ್ಶ
ಈಗ
ಪ್ರೀತಿ ಮಾತ್ರ ಗೊತ್ತು...


3
ಬರುವುದೆಂದರೆ..ನಿನ್ನ ಬಳಿ ಬರುವುದೆಂದರೆ
ಮಂಜು ಹೊದ್ದ ಬೆಟ್ಟಗಳನ್ನು
ಮೋಡವಿಳಿದು ಕವಿದ ಮಬ್ಬನ್ನು
ಮೊರೆತ ಕೇಳಿದರೂ ಕಾಣಿಸದ ಅಬ್ಬಿಗಳನ್ನು
ದಾಟಿ ಬರುವುದು..

ನಿನ್ನ ಬಳಿ ಬರುವುದೆಂದರೆ
ಅಂಗಾಲು ಸುಡುವ ಕೆಂಡದ ಹಾದಿಯನ್ನು
ಕಾಲಿಟ್ಟಲ್ಲಿ ಬಾಯ್ತೆರೆವ ಮುಳ್ಳುಕಂಟಿಗಳನು
ಒಡಲೊಳಗೆ ಹರಿವ ಅಂತರಗಂಗೆಯನು
ನಿರಂತರ ಹಾದು ಬರುವುದು

ನಿನ್ನ ಬಳಿ ಬರುವುದೆಂದರೆ
ಮಳೆ ಋತುವ ನೆಚ್ಚಿ ಬಂಜೆ ಹೊಲ ಉಳುವುದು 
ಬೀಜಕ್ಕೆ ನೆಲವಾಗಿ ದಾಹಕ್ಕೆ ಜಲವಾಗಿ
ಅಂಡದೊಳಗಿನ ಬ್ರಹ್ಮಾಂಡ ಅರಸುವುದು

ನಿನ್ನ ಬಳಿ ಬರುವುದೆಂದರೆ
ಸುಮ್ಮನಲ್ಲ
ಹಾವಿನಂತೆ
ನಿಧಾ..ನ
ಪೊರೆ ಕಳಚುತ್ತ
ನನ್ನ ಹುಡುಕುತ್ತ ನನಗಾಗಿ ಬರುವುದು
ಹಿಂದುಮುಂದಿನೊಳಗಿಂದೊಂದು ಬಿಂದುವಾಗಿ
ಕ್ಷಣಕ್ಷಣವೂ ನೀನೇ ಆಗುವುದು..


4

 
ಗೊತ್ತಿರುವುದೊಂದೇ...

ಎಡವೋ ಬಲವೋ
ಮೇಲೋ ಕೆಳಗೋ
ಅಂಚಿನವನೋ ನಡು ಒಡಲಿನವನೋ
ನನ್ನ ಬಳಿ ಅಳತೆಗೋಲಿಲ್ಲ
ಮಾನದಂಡಗಳೂ ಇಲ್ಲ
ಗೊತ್ತಿರುವುದೊಂದೇ
ನೀನು ಬೇಕು..

ಅನುಬಂಧ ಸಂಬಂಧ
ಜನ್ಮ ಋಣ
ಹಳಸಿಹೋಗಿವೆ ಎಲ್ಲ ಪದಗಳು
ಹೊಸ ನುಡಿಕಟ್ಟು
ಪದಕೋಶದಲ್ಲಿದೆಯೋ ಇಲ್ಲವೋ
ನನಗೀಗ ಗೊತ್ತಿರುವುದೊಂದೇ
ನೀನು ಬೇಕು..

ನಶೆಯೋ ನೆನಕೆಯೋ
ಬಯಕೆಯೋ ವಿರಹವೋ
ಕಾಮವೋ ಪ್ರೇಮವೋ 
ಹುಡುಕಿ ಹೆಸರಿಡುವ ಇರಾದೆಯಿಲ್ಲ
ನನಗೆ ಗೊತ್ತಿರುವುದೊಂದೇ
ನೀನು ಬೇಕು..

ಎಲ್ಲೆ ರೇಖೆ
ಚೌಕಟ್ಟು ಮಿತಿಗಳ
ಎಲ್ಲೆಲ್ಲಿ ಎಳೆಯಬೇಕೋ
ಮತ್ತೆಲ್ಲಿ ಬಳಸಬೇಕೋ
ನೀತಿನಿಯಮಗಳ ಗೊಡವೆ ನನಗಿಲ್ಲ
ಗೊತ್ತಿರುವುದೊಂದೇ
ನೀನು ಬೇಕು..

ಇರುಳಿಗೆ ಚಂದ್ರ
ಬೆಳಕಿಗೆ ಸೂರ‍್ಯ
ಉಸಿರಿಗೆ ಗಾಳಿ
ಇಳೆಗೆ ಮಳೆ
ಏಕೆ ಬೇಕು?
ಉದ್ದೇಶವಿರದ ಕ್ರಿಯೆಗೂ
ಗುರಿಯಿದೆ, ಗಮ್ಯವಿದೆ
ಅದಕ್ಕೇ ನನಗೆ
ನೀನು ಬೇಕು..

ಕಾಲದೇಶಗಳ ಪರಿವೆಯಿಲ್ಲದೇ
ಎಲ್ಲ ಮರೆತು ಅನಂತದೊಳಗೊಂದು
ಬಿಂದುವಾಗಲು
ಕಾರಣ ನೀನಾಗಬೇಕು..

ಪುಟ್ಟ ಪಾದಗಳಿಗೆ
ದೊಡ್ಡದಾಯಿತೆ ಆಸೆ?
ಸಹಗಮನದ ಬಯಕೆ
ಬಾಹುಬಲಿಯ ಜೊತೆಗೆ..


5


ಉಸಿರಿನಂತೆ


ಹೋಗದಿರು ಎನ್ನಲಾರೆ
ಅದು
ಬರಬೇಡ ಎಂದೂ ಅರ್ಥ ನೀಡುತ್ತದೆ

ನೀನು ಉಸಿರಿನಂತೆ..
   
ದಣಿದು ನಿಂತರೆ ನೀನು
ಮೆಲುಗಾಳಿಯಾಗಿಯೋ
ನಡೆದ ದಾರಿಯ ಹೆಜ್ಜೆ
ಗುರುತಾಗಿಯಾದರೋ
ಜೊತೆಜೊತೆಯೆ ನಡೆಯುವ
ಹಿರಿ ಹಂಬಲ ನನಗೆ

ಅಲೆಯುತ್ತ ಮುದುಡುವ
ಮುನಿಯುತ್ತ ಚದುರುವ
ನಿನ್ನ ಅಶಾಂತ ಮನವ
ಒತ್ತಿ ಕುಳಿತು ಬೆಚ್ಚಗಿಡುವ ಬಯಕೆ..
ಇದು ಯಾವ ಬಂಧ?
ಇದೆಂಥ ಮೋಹ!

ಕೆರೆದಡ ಆಡಾಡುತ್ತ 
ದಣಿದವರು ನಾವು
ಕೆರೆಯ ನೀರಿಗೆ ಬಿದ್ದು
ಕೆರೆಯೇ ಆದೆವು
ಗೆದ್ದೆವೋ ಸೋತೆವೋ
ನಿಂತೆವೋ ನಡೆದೆವೋ
ಬೆಳಗಿದ್ದು ಚೆಲುವ ಬದುಕು
ಉಳಿದದ್ದು ಕೆಳೆಯ ಸೊಗಸು


6


 

ಪ್ರೇಮ ವೃಕ್ಷ


ಬಿಸಿಲುಮಳೆಗಳೆಂಬ ಅತಿಗೆ
ಕಾಯ ಕಳವಳಗೊಂಡ ಹೊತ್ತು..

ಸುಡುಬಿಸಿಲ ಬೆಂಕಿಯನೂ
ಬರದ ನೆಲದ ಧಗೆಯನೂ
ಹಸಿರು ಎಲೆಯಾಗಿಸಿ ಹೊದ್ದ ಒಂಟಿ ಮರ
ಬಯಲಲ್ಲಿ ಬಯಲಾಗಿ ಕಂಡಿತು
.. ತಲೆಯಾನಿಸಿ ಕುಳಿತೆ

ಅತಳವಿತಳಸುತಳಪಾತಾಳದವರೆಗೂ
ಸುಖವನರಸುತ್ತ ಬೇರನಿಳಿಬಿಡುವ ಮರವದೆಂದು
ಮೊದಲು ಕುಳಿತೆದ್ದು ಹೋದವರು
ನೂರು ಕತೆ ಕಟ್ಟುವ ನಾಲಿಗೆಯಾದರು

ಮಾಯದ ನೆರಳಿಗೆ ಮೋಹಗೊಳದಿರು
ಅದು ರಣಬಿಸಿಲ ಮುಖವಾಡವೆಂದರು

ಹಸಿಹಸಿ ಕೊಂಬೆಗೆ ಬೆಂಕಿಯಿಟ್ಟು
ಕಂಡೆಯಾ ಇದು ಕೊಳ್ಳಿದೆವ್ವ ಎಂದರು

ಬಾಯಿಗಿಟ್ಟಮೇಲೆ ತಿಳಿಯುವುದು
ವಿಷವೃಕ್ಷ, ವಿಷಫಲದ ಬಳಿಸಾರಬೇಡವೆಂದರು

ಅದು ಬಯಲೊಳಗಿರುವ ಪ್ರೇಮವೃಕ್ಷ
ಕೂರಲು ಕಟ್ಟೆಯಿಲ್ಲ ಹಕ್ಕುಚೌಕಟ್ಟಿನ ಬೇಲಿಯಿಲ್ಲ
ಹಿಂದಿರುಗು ಮರುಳೇ ಎಂದೆಚ್ಚರಿಸಿದರು

ಫಲ ಕಹಿಯೋ ಸಿಹಿಯೋ
ವಿಷವೋ ಅಮೃತವೋ
ಅಂತರಂಗ ಅರಿವ ಮೊದಲು
ತನುವೇ ಮರ ತಾನಾಗಿ ಚಿಗುರೊಡೆಯಿತು
ಬೇರಿಳಿಸಿ ಅಂಗಾಲು ಮುಗಿಲಿಗೆ ಚಿಮ್ಮಿತು 
ಫಲವನುಂಡ ಹಕ್ಕಿ ಹಾರಿ
ಬೀಜ ಬಯಲಲಿ ಚಲ್ಲಾಪಿಲ್ಲಿ..

ಗೋಡೆಗೊಂದು ಕಣ್ಣು ಬೇಲಿಗೊಂದು ಕಣ್ಣು
ಆಕಾಶದಲ್ಲಿ ಮಿನುಗುತ್ತಿವೆ ಸಾವಿರದ ನಕ್ಷತ್ರಗಳು
ನಿದ್ರೆ ಕಸಿಯುತ್ತಿದೆ ಗಲ್ಲ ನೋಯಿಸದ ಇರುಳು..

ಜೀವ ನವ್ವಾಲೆ ಮನಸು ಜೋಕಾಲೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...