Tuesday, March 31, 2015

ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ


  
 
 
 
 
 
 
 
 
 
 
ರಾಮಲಿಂಗಪ್ಪ ಬೇಗೂರು
ಸೌಜನ್ಯ: ವಿಜಯ ಕರ್ನಾಟಕ
 
 
 
 
 
 
3003-2-2-AKSHARA_PRESCHOOL_062_GRID7


ಕನ್ನಡವು ಕಲಿಕೆಯ ಮಾಧ್ಯಮ ಆಗಬೇಕು ಎಂಬ ನಮ್ಮ ಕನಸು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಮುಕ್ತಾಯ ಕಂಡಿದೆ. ಏಕೆಂದರೆ, ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯು ವಜಾ ಆಗಿದೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲಿ ಸೋತಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ನಮ್ಮಲ್ಲಿ ಅಭಿಮಾನ ಇದೆ, ಆದರೆ ಆ ಅಭಿಮಾನವನ್ನು ಕಾರ್ಯರೂಪಕ್ಕೆ ಇಳಿಸುವ ಯೋಜನೆಗಳಿಲ್ಲ. ಸರ್ಕಾರಕ್ಕೆ ಸರಿಯಾದ ಭಾಷಾನೀತಿಯಿಲ್ಲ. ಅದನ್ನು ಜಾರಿಗೊಳಿಸುವ ಭಾಷಾ ಯೋಜನೆಯೂ ಇಲ್ಲ. ಜನರಿಗಾದರೂ ಈ ಬಗ್ಗೆ ಒಂದು ಯೋಜನೆ, ಜಾರಿ ಚಳವಳಿ ಇದೆಯಾ? ಅದೂ ಇಲ್ಲ.

ನಮ್ಮ ಬದುಕನ್ನು ಖಾಸಗೀಕರಣ, ಐಷಾರಾಮೀಕರಣ, ದುಬಾರೀಕರಣ ಮತ್ತು ಆ ಮೂಲಕ ಜಾಗತೀಕರಣ ಮಾಡಿಕೊಳ್ಳುತ್ತ ಕನ್ನಡಿಗರಾಗಿ ಇರಲು ಹೇಗೆ ಸಾಧ್ಯ? ಬದುಕೇ ಅನ್ಯವಾಗುತ್ತ ಇರುವಾಗ ಭಾಷೆ ಅನನ್ಯವಾಗಲು ಹೇಗೆ ಸಾಧ್ಯ? ಕರ್ನಾಟಕದಲ್ಲೇ ಕನ್ನಡಿಗರಿಗೆ ಅನ್ನ ಹುಟ್ಟುವುದಿಲ್ಲ ಎಂದರೆ, ಕನ್ನಡ ಮಾಧ್ಯಮವನ್ನು ಸುಪ್ರೀಂ ಕೋರ್ಟ್ ರದ್ದು ಮಾಡುತ್ತದೆ ಎಂದರೆ ಏನು? ಇಂತಹ ಸ್ಥಿತಿಗೆ ಯಾರು ಕಾರಣ? ಇದನ್ನಿಂದು ನಾವೆಲ್ಲ ತೀವ್ರವಾಗಿ ಯೋಚಿಸಬೇಕಿದೆ.

ಬೆಲ್ಜಿಯಂನ ಭಾಷಾಶಾಸ್ತ್ರಜ್ಞೆ ತೊವ್ ಸ್ಕೂಟ್‌ನಬ್ ಕಾಂಗಾಸ್ ಮಾನವ ಹಕ್ಕುಗಳ ಪಟ್ಟಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಹಕ್ಕು ಇರಬೇಕೆಂದು ಹೋರಾಟ ಮಾಡಿದಾಕೆ. ಹಾಗೆಯೇ ನಾವೂ ಕೂಡ ನಮ್ಮನಮ್ಮ ಭಾಷೆಯನ್ನು ಶಿಕ್ಷಣದಲ್ಲಿ ಕಲಿಯುವ ಮತ್ತು ವ್ಯವಹಾರದಲ್ಲಿ ಬಳಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡುವ ಹಕ್ಕೊತ್ತಾಯ ಮಾಡಬೇಕಿದೆ. ಇದನ್ನು ಶಿಕ್ಷಣ ಹಕ್ಕು ಕಾಯಿದೆಯ ಅಂಗವಾಗಿಯೂ ಮೂಲಭೂತ ಹಕ್ಕುಗಳಲ್ಲಿ ಒಂದನ್ನಾಗಿಯೂ ಮಾಡಬೇಕಾದ ತುರ್ತು ಕೂಡ ಇದೆ. ಸಂವಿಧಾನ ತಿದ್ದುಪಡಿ ಒಂದರಿಂದಲೇ ಎಲ್ಲವೂ ಆಗುವುದಿಲ್ಲ. ಭಾಷೆಯನ್ನು ಜನ ಪ್ರೀತಿಸುವಂತೆ ಮೊದಲು ಆಗಬೇಕು. ಅದಕ್ಕೆಲ್ಲ ದೂರಗಾಮಿ ಭಾಷಾ ಯೋಜನೆಗಳು ಬೇಕು.

ಸಂಸ್ಕೃತದ ಗುಮ್ಮನಿಂದ ಬಿಡಿಸಿಕೊಳ್ಳಬಹುದು, ಆದರೆ ಇಂಗ್ಲಿಷ್ ದೈವದಿಂದ ಬಿಡುಗಡೆ ಇಲ್ಲ. ದೆವ್ವವಾದರೆ ಗುದ್ದಾಡಬಹುದು, ಉಚ್ಚಾಟಿಸಬಹುದು. ಆದರೆ ಇಂಗ್ಲಿಷ್ ದೆವ್ವವಲ್ಲ, ದೈವ. ಹಾಗಾಗಿಯೇ ಅದು ಆರಾಧನೀಯ. ಇಂಗ್ಲಿಷನ್ನು ಕೆಲವರಿಗೆ ಮಾತ್ರ ಇಂದು ಗಗಕುಸುಮ ಮಾಡಲಾಗಿದೆ! ಆಧುನಿಕೋತ್ತರ ಸಮಾಜದ ಅಸಮಾನತೆಯ ಹೊಸ ಅಸ್ತ್ರವಾಗಿ ಇಂಗ್ಲಿಷನ್ನು ಬಳಸಲಾಗುತ್ತಿದೆ.

ಇದನ್ನೆಲ್ಲ ನಿಜಕ್ಕೂ ನಮ್ಮದೇ ಭಾಷಾ ಯೋಜನೆಗಳು ಮತ್ತು ಅನುಷ್ಠಾನ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುವ ಮೂಲಕ ಮೀರಲು ಸಾಧ್ಯವಿದೆ. ನಮ್ಮಲ್ಲಿ ಎಲ್ಲಕ್ಕೂ ಯೋಜನೆಗಳಿವೆ. ವಾರ್ಷಿಕವಾಗಿ ಹಣಕಾಸು ಸಂಗ್ರಹಿಸಲು ಯೋಜನೆಗಳಿವೆ, ಹಣಕಾಸು ಖರ್ಚು ಮಾಡಲು ಯೋಜನೆಗಳಿವೆ, ನಗರ ನಿರ್ಮಾಣಕ್ಕೂ ಯೋಜನೆಗಳಿವೆ, ಪಂಚವಾರ್ಷಿಕ ಯೋಜನೆಗಳಂತೂ ದಶಕಗಳಿಂದ ನಮ್ಮಲ್ಲಿ ಇವೆ. ಆದರೆ ಸರಿಯಾದ ಭಾಷಾನೀತಿ ಇಲ್ಲ ಮತ್ತು ಅದನ್ನು ಕಾಲಮಿತಿಯಲ್ಲಿ ಜಾರಿ ಮಾಡಬಹುದಾದ ಭಾಷಾ ಯೋಜನೆಗಳಿಲ್ಲ. ನಮಗೆ ಭಾಷಾಯೋಜನೆಗಳೇನೋ ಬೇಕು. ಆದರೆ ಅವನ್ನು ಯಾರು ತಯಾರು ಮಾಡಬೇಕು? ನಾಡಿನ ಭಾಷಾತಜ್ಞರ ಒಂದು ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು. ಚಿಂತನ-ಮಂಥನ ನಡೆಸಿ ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಆ ಸಮಿತಿ ಅವನ್ನು ತಯಾರು ಮಾಡಬೇಕು. ಅವನ್ನು ಸರ್ಕಾರ ಹಂತಹಂತವಾಗಿ ಜಾರಿ ಮಾಡಬೇಕು.

ನಮ್ಮ ಭಾಷಾಯೋಜನೆಗಳಲ್ಲಿ ಏನಿರಬೇಕು ಎಂದು ಸ್ವಲ್ಪ ಯೋಚಿಸಬೇಕಲ್ಲವೆ? ಎಂಥ ಯೋಜನೆಗಳು ಬೇಕು ಎಂಬ ಬಗ್ಗೆ ಮುಂದೆ ನೋಡೋಣ:

1. ಒಂದು ಪ್ರದೇಶದಲ್ಲಿ ಹಲವು ಭಾಷೆಗಳು ಬಳಕೆ ಆಗುತ್ತಿದ್ದರೆ ಅಲ್ಲಿ ನೆಲನುಡಿಗೆ ಪ್ರಾಶಸ್ತ್ಯ ಬೇಡವೇ? ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಎರಡನೇ ದರ್ಜೆ ಸ್ಥಾನಮಾನ ಇದ್ದರೆ ಏನರ್ಥ? ಭಾಷೆಗಳ ಸ್ಥಾನ ನಿರ್ಧಾರದ ಯೋಜನೆಗಳು ಖಂಡಿತ ನಮಗಿಂದು ಅವಶ್ಯವಾಗಿ ಬೇಕು. ಕರ್ನಾಟಕದಲ್ಲಿ ಇಂಗ್ಲಿಷ್, ತೆಲುಗು, ಹಿಂದಿ ಇತ್ಯಾದಿಗಳ ಸ್ಥಾನಮಾನಗಳು ಹೇಗಿರಬೇಕು? ಈ ಬಗ್ಗೆ ಸರ್ಕಾರದ ನೀತಿ ಏನು? ಭಾಷಾ ಯೋಜನೆ ಎಂಬುದು (ಅಭಿವೃದ್ಧಿ ಯೋಜನೆ ಎಂಬಂತೆ) ಭಾಷಾನೀತಿಯ ಭಾಗವೇ ಆಗಿರುವಾಗ ಈ ಬಗ್ಗೆ ಕ್ರಿಯಾಯೋಜನೆಗಳನ್ನು ಮತ್ತು ವಿಧಾನಗಳನ್ನು ಸರ್ಕಾರ ರೂಪಿಸಿಕೊಳ್ಳಬೇಕಾಗಿದೆ.

2. ವರ್ಣಮಾಲೆ, ಲಿಪಿ, ವ್ಯಾಕರಣ, ಪದಕೋಶಗಳು ಇವೆಲ್ಲವೂ ಭಾಷೆಯ ಪರಿಕರಗಳೇ. ಇವೆಲ್ಲವನ್ನೂ ಮತ್ತೆ ಮತ್ತೆ ಪರಿಶೀಲಿಸಿ ಮರು ರೂಪಿಸಿಕೊಳ್ಳಬೇಕಾಗುತ್ತದೆ. ಭಾಷೆ ನಿರಂತರ ಬದಲಾಗುವುದರಿಂದ ಇವೆಲ್ಲವೂ ಮರುರೂಪಣೆಗೆ ಗುರಿ ಆಗುತ್ತಿರಬೇಕಾಗುತ್ತದೆ. ಇಂತಹ ಹೊಣೆಯನ್ನು ಸಂಸ್ಥೆ, ಸರ್ಕಾರ ಹೊರಬೇಕಾಗುತ್ತದೆ. ಈ ಬಗ್ಗೆ ನೀತಿ, ಯೋಜನೆ ನಿರಂತರವಾಗಿ ಇರಬೇಕಾಗುತ್ತದೆ. ಈಗೀಗ ಋ, ಙ, ಞ, ಅಃ, ಷ, ಮಹಾಪ್ರಾಣ ಇವುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವರ್ಣಮಾಲೆಯ ಪರಿಷ್ಕಾರ, ಕನ್ನಡದ್ದೇ ವ್ಯಾಕರಣ, ಪದಕೋಶಗಳ ರಚನೆ ಮತ್ತು ಬಳಕೆ ಈ ಕುರಿತ ಭಾಷಾಯೋಜನೆಗಳು ನಮ್ಮಲ್ಲಿಲ್ಲ. ಪರಿಕರಗಳ ನಿರಂತರ ನಿರ್ಮಾಣಕ್ಕೆ ನಿರಂತರ ಭಾಷಾಯೋಜನೆಗಳು ಆಗುತ್ತ ಇರಬೇಕಾಗುತ್ತದೆ.

3. ಕನ್ನಡದಲ್ಲಿ ಹಲವಾರು ಸಾಮಾಜಿಕ ಮತ್ತು ಚಾರಿತ್ರಿಕ ಒಳನುಡಿಗಳಿವೆ. ಅವುಗಳನ್ನೆಲ್ಲ ರಕ್ಶಿಸಬೇಕಾದ, ಅವುಗಳೊಂದಿಗೆ ಭಿನ್ನವಾಗಿ ಒಡನಾಡಬೇಕಾದ ಮತ್ತು ಅವುಗಳಲ್ಲಿ ಅಡಗಿರಬಹುದಾದ ಜ್ಞಾನಸಂಪತ್ತನ್ನು ವರ್ತಮಾನಕ್ಕೆ ತಂದುಕೊಳ್ಳಬೇಕಾದ ಅಗತ್ಯವಿದೆ. ಜೀವವೈವಿಧ್ಯವನ್ನು ಹೇಗೆ ಕಾಪಾಡಬೇಕೋ ಹಾಗೆಯೇ ಭಾಷಾವೈವಿಧ್ಯವನ್ನೂ ಕಾಪಾಡಿಕೊಳ್ಳಬೇಕಿದೆ. ಕನ್ನಡ ಜಾರಿ ಎಂದರೆ ಒಳನುಡಿಗಳ ಮತ್ತು ಒಡನುಡಿಗಳ ಮೇಲಿನ ದಬ್ಬಾಳಿಕೆ ಎಂದಾಗಬಾರದು. ಲಂಬಾಣಿ, ಕೊಡವ, ತುಳು, ಅರವ, ಸೋಲಿಗ ಹೀಗೆ ಇರುವ ಹಲವು ಒಳನುಡಿಗಳನ್ನೂ ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ.

4. ಇನ್ನು ಕಲಿಕೆಯಲ್ಲಿ ಮತ್ತು ಆಡಳಿತದಲ್ಲಿ ಕನ್ನಡವನ್ನು ಬಳಸುವ ಕಾನೂನು ಇದ್ದರೆ ಸಾಲದು. ಕೇವಲ ಸಂಕಲ್ಪ ಮಾತ್ರದಿಂದ ಜಾರಿ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇದಕ್ಕೆಲ್ಲ ನಿರಂತರ ಭಾಷಾಯೋಜನೆಗಳು ಬೇಕು. 1963ರಿಂದ ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ ಕಾನೂನು ಇದ್ದರೂ ಅದು ಸರಿಯಾಗಿ ಜಾರಿಯಾಗಿಲ್ಲ. ಆಡಳಿತ ಮತ್ತು ಕಲಿಕೆ ಎರಡೂ ಕಡೆ ಇಂಗ್ಲಿಷ್‌ನ ಬದಲು ಕನ್ನಡ ಎನ್ನುವ ಸ್ಥಿತಿಗಿಂತ ಇಂಗ್ಲಿಷ್‌ನ ಮೂಲಕ ಕನ್ನಡ ಮತ್ತು ಇಂಗ್ಲಿಷ್‌ನ ಜೊತೆಗೆ ಕನ್ನಡ ಎನ್ನುವಂತಹ ವಾತಾವರಣ ಮಾತ್ರ ಇದೆ. ಆಡಳಿತದಲ್ಲಿ ಕನ್ನಡವನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಬಗೆಗಳನ್ನು ಕುರಿತ ಯೋಜನೆಗಳನ್ನು ತಜ್ಞರೊಂದಿಗೆ ಚರ್ಚಿಸಿ ಸಿದ್ಧಪಡಿಸಿಕೊಂಡು ಜಾರಿಗೊಳಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕಲಿಕೆಯಲ್ಲಿ ಇಂಗ್ಲಿಷನ್ನು ಪೋಷಕರ ಆಯ್ಕೆಗೆ ಬಿಟ್ಟಾಯಿತು. ಇನ್ನು ಮುಂದೆ ಇಂಗ್ಲಿಷ್ ಮಾರುವ ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳಲಿವೆ. ಜನಸಮೂಹದ ಬ್ರೆ ನ್ ವಾಶ್ ಮಾಡಲು ಈಗ ಇನ್ನಷ್ಟು ಅವಕಾಶ ಆಗಿದೆ. ಸರಕಾರ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಕಾನೂನು ಮಾಡಲಿದೆ. 5ನೇ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲು ಕೂಡ ಹೊರಟಿದೆ. ಇದೆಲ್ಲ ಯಾರಿಗಾಗಿ? ಒಂದು ಕಡೆ ಇಂಗ್ಲಿಷ್ ಶಾಲೆಗೆ ಪರವಾನಗಿ ಕೊಡುತ್ತ ಇನ್ನೊಂದು ಕಡೆ ಹೀಗೆ ಕಾನೂನು ಮಾಡಿದರೆ ಏನು ಪ್ರಯೋಜನ? ಶಾಲಾ ಶಿಕ್ಷಣದಲ್ಲಿ ತಾರತಮ್ಯ ಇರುವವರೆಗೆ ಸಾಮಾಜಿಕ ತಾರತಮ್ಯ ತೊಲಗುವುದಿಲ್ಲ.

5. ಅನುವಾದದ ಸರಿಯಾದ ಯೋಜನೆಗಳು ಇಲ್ಲದೇ ಇರುವುದರಿಂದಲೇ ದೇಶದ ಯಾವ ರಾಜ್ಯದಲ್ಲೂ ಹಲವಾರು ವರ್ಷಗಳಿಂದ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಸಂಪೂರ್ಣವಾಗಿ ಜಾರಿ ಮಾಡಲು ಆಗಿಲ್ಲ. ಗಣರಾಜ್ಯ ವ್ಯವಸ್ಥೆಯನ್ನು ನಾವು ಒಪ್ಪಿರುವುದರಿಂದ ರಾಜ್ಯ- ರಾಜ್ಯಗಳ ನಡುವೆ ಮತ್ತು ಕೇಂದ್ರದ ನಡುವೆ ನಿತ್ಯ ವ್ಯವಹಾರ ಮಾಡಬೇಕಾದ ಅಗತ್ಯ ಇರುವುದರಿಂದ, ಕೇಂದ್ರ ನೇಮಿಸುವ ಅಖಿಲ ಭಾರತೀಯ ಸೇವೆ ಇರುವುದರಿಂದ ನಮ್ಮಲ್ಲಿ ಬಹುಭಾಷೆಗಳ ನಡುವೆ ಸಂವಹನ ಭಾಷೆಯಾಗಿ (ದಲ್ಲಾಳಿಯಾಗಿ) ಇಂಗ್ಲಿಷ್ ಸ್ಥಾಪಿತವಾಗಿದೆ. ಇದೆಲ್ಲದರಿಂದ ಬಿಡುಗಡೆ ಸಿಗಬೇಕೆಂದರೆ ಸ್ಥಳೀಯ ರಾಜ್ಯಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಮಾಡುವ ಮತ್ತು ಆಯಾ ರಾಜ್ಯಭಾಷೆಗಳನ್ನೇ ಆಡಳಿತ ಭಾಷೆಗಳಾಗಿ ಜಾರಿ ಮಾಡುವ ಭಾರತೀಯ ಭಾಷಾನೀತಿ ಮತ್ತು ಯೋಜನೆಗಳು ಕೂಡ ಬೇಕು.

ಅಂತಾರಾಜ್ಯ ಮತ್ತು ರಾಜ್ಯ-ಕೇಂದ್ರಗಳ ನಡುವಣ ಸಂವಹನವನ್ನು ಸದಾ ರಾಜ್ಯಭಾಷೆಗಳಿಂದ ಹಿಂದಿಗೆ ಅನುವಾದ ಮಾಡಿ ನಡೆಸುವ ಒಂದು ದೊಡ್ಡ ಜಾಲ ಸ್ಥಾಪನೆ ಆಗಬೇಕು. ಆಗ ಮಾತ್ರ ಭಾರತದಲ್ಲಿ ನಾವು ಇಂಗ್ಲಿಷ್‌ನ ಯಜಮಾನಿಕೆಯನ್ನು ಕೊಲ್ಲಲು ಸಾಧ್ಯ. ಇದಕ್ಕಾಗಿ ಅಖಿಲ ಭಾರತೀಯ ಮಟ್ಟದಲ್ಲಿ ಅನುವಾದದ ಮಿಷನ್ ಮತ್ತು ಆಯಾ ರಾಜ್ಯ ಮಟ್ಟಗಳಲ್ಲು ಅನುವಾದ ಮಿಷನ್‌ಗಳು ಸ್ಥಾಪನೆ ಆಗಬೇಕು. ಒಂದು ಕಾಲದ ಯಜಮಾನರ ಭಾಷೆಯಾದ ಇಂಗ್ಲಿಷ್ ಇಂದೂ ಯಜಮಾನಿಕೆ ಭಾಷೆಯಾಗಿ ಆಳುತ್ತಿದೆ. ಅದನ್ನು ಕುಲಗೆಡಿಸುವ ಯೋಜನೆಗಳ ಮೂಲಕ ಅದರ ಯಜಮಾನಿಕೆಯನ್ನು ಮುರಿಯಬೇಕಿದೆ.

ಈಗ ತುರ್ತು ಕಾಲ ಬಂದಿದೆ. ಅಪಾಯ ಬಂದಾಗ ಕೈಕಟ್ಟಿ ಕೂತರೆ ಬಂಡವಾಳಶಾಹಿಗಳು ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಭಾಷೆಯ ಮೂಲಕವೇ ಸಂಸ್ಕೃತಿ ಮತ್ತು ಸ್ಥಳೀಯತೆ ಹಾಗೂ ಸಮಾನತೆಯ ಪ್ರಶ್ನೆಗಳನ್ನು ಇನ್ನಷ್ಟು ವಿಸ್ತಾರವಾಗಿ ಕನ್ನಡಿಗರೆಲ್ಲರೂ ಒಟ್ಟಿಗೆ ಚಿಂತಿಸಬೇಕಿದೆ. ಆ ಚಿಂತನೆ ಇತರ ಭಾರತೀಯ ಭಾಷೆಗಳ ಉಳಿವಿಗೆ ಮಾರ್ಗಸೂಚಿಯೂ ಆಗುವಂತೆ ಮಾಡಬೇಕಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...